ಪ್ರಳಯಕಾಲದ ಚಂಡ ಮಾರುತ
ಇಳೆಯ ಮೇಲೇ ಭರದಿ ಬೀಸುತ
ಎಳೆಯ ದೀಪವ ಭಯದಿ ತುಂಬಿದೆ
ಪ್ರಳಯರ್ಕತನೆ ಕಾಯಲೈ! ||೧೫೧||

ಬಾಲನಾಹಿಹ ನಾನು ನಿನ್ನನು
ಬಾಲ ಮನದಿಂ ಬೇಡಿಕೊಂಬೆನು;
ಕಾಲನಾಟವ ತಾಳನಾರೆನು
ಲೋಲ ರೂಪನೆ ಕಾಯಲೈ! ||೧೫೨||

ಎನ್ನ ಜೀವವು ಕುಂದಿ ಪೋಗುವ
ಮುನ್ನ ದೇವನೆ ಬಂದು ನಿನ್ನಯ
ಚಿನ್ನದಂಥ ರೂಪ ತೋರೈ
ಎನ್ನ ಜೀವದ ಜೀವನೆ! ||೧೫೩||

ಸರ್ವಜೀವಗಳಾದಿ ಕಾರಣ
ಸರ್ವಲೋಕದ ಮೂಲಕಾರಣ
ಪರ್ವತದ ತೆರ ಅಚಲ ನಾಗಿಹ
ಸರ್ವ ಮೂಲನೆ ರಕ್ಷಿಸೈ! ||೧೫೪||

ಬಾಲನೀಪರಿ ಪಾಡಿ ನುತಿಸಲು,
ಕಾಲಭೈರವನಂದದಲೆಗಳು
ಲಾಲಿಸುತಲೀ ದೇವ ನಾಮವ
ಪಾಲಿಸಿದುವೂ ಮಧುರನ. ||೧೫೫||

ಹರುಷದಿಂದಲಿ ತರುಣ ಮಧುರನು
ಪರಮ ಪುರುಷನ ಹೃದಯ ಕಮಲದಿ
ಕರುಣ ಸಾಗರ ಶಿಷ್ಟ ರಕ್ಷಕ
ಪೊರೆಯೊ ಸಕಲರ ಎಂದನು. ||೧೫೬||

ಆಗ ದೂರದಿ ಅಂಧಕಾರದಿ
ವೇಗದಿಂದಲಿ ಒಂದು ಜೋತಿಯು
ಭಾಗ ಮಾಡುತಲಿರುಳ ಬಾಗಿಲ
ಸಾಗಿ ಬರುವುದ ಕಂಡನು! ||೧೫೭||

ಮಾತನಾಡದೆ ಮೆಲ್ಲನೈದುವ
ಜೋತಿ ರೂಪವು ಆತನಲ್ಲದೆ
ಭೂತ ಪ್ರೇತಗಳಲ್ಲವೆನ್ನುತ
ಕಾತರಾದನು ಮಧುರನು. ||೧೫೮||

ಎವೆಯ ಮುಚ್ಚದೆ ನೋಡುತಿರಲೂ
ರವಿಯ ತೇಜವ ಮೀರಿ ಬೆಳಗುವ
ನಲ್ವಿಲ ಬಣ್ಣದ ಮುಕುಟ ಧರಿಸಿಹ
ರವಿಯ ಕರ್ತನ ಕಂಡನು. ||೧೫೯||

ಪರಮ ಪುರುಷನು ಬರಲು ಬೇಗದಿ
ಹರುಷದಿಂದಲಿ ಮಧುರನಾತನ
ಚರಣ ಕಮಲಕೆ ಮಣಿಸಿ ಶಿರವನು
ಹರಿಯೆ ಕಾಯೈ ಎಂದನು. ||೧೬೦||

ಹರುಷದಿಂದಲಿ ದೇವ ದೇವನು
ತರುಣ ಮಧುರನು ಕರದಿ ಪಿಡಿಯುತ
ಪರಮ ಭಕ್ತನು ನೀನು ಎನುತಲಿ
ಶಿರವ ಮುಟ್ಟುತ ಹರಸಿದ. ||೧೬೧||

ಆಗ ದೇವರ ದೇವ ದೇವನು
ಅಗಸದ ಕಡೆ ನೋಡಿ ನಗುತಲಿ
ರಾಗದಿಂದಲಿ ಮಧುರಕಂಠದಿ
ಬೇಗದಿಂ ತಾ ನುಡಿದನು. ||೧೬೧||

ಯಾರು ನನ್ನನು ಭಕಿಯಿಂದಲಿ
ಪಾರು ಮಾಡೈ ಎನುತ ಕರೆವರೊ
ದೂರದಿಂದಲಿ ಬರುತಲವರನು
ಪಾರು ಮಾಡುವೆನೆಂದಿಗು. ||೧೬೩||

ಚಂಡ ಮಾರುತ ಬಂದು ಬಡಿಯಲು
ತಂಡ ತಂಡದಿ ಮೋಡ ಕವಿಯಲು
ಚಂಡ ಮನದಲಿ ಕೂಡ ನೆನೆದರು
ಕಂಡು ಕಾಯವೆನೆಂದಿಗೂ! ||೧೬೭||

ಕಲ್ಲು ದೇವರು ಎಂದು ದೂರದೆ
ಪೊಳ್ಳು ವಿಗ್ರಹವೆಂದು ಜರೆಯದೆ
ಕಲ್ಲು ಮುಳ್ಳುಲ್ಲಿರುವ ನನ್ನನು
ಎಲ್ಲಿಯಂ ನೀ ಪೂಜಿಸು! ||೧೬೫||

ಕಾಡಿನಲ್ಲಿಹ ದೈವಯೋಗಿಯು
ನೀಡಿ ಕರಗಳನೆನ್ನ ಬೇಡಲು,
ಓಡಿ ಬೇಗದಿ ಬರುತಲವನನು
ರೂಢಿಯೊಳಗಿಂದೆತ್ತುವೆ. ||೧೬೬||

ನಾಡಿನೊಳಗಿಹ ಬಾಲರಾದರು
ಪಾಡಲೆನ್ನನು ಹರುಷದಿಂದಲಿ,
ಕಾಡಿನೊಳಗಿಹ ಯೋಗಿಘೀಯುವ
ಗಾಢ ಸುಖವನು ಕೊಡುವೆನು! ||೧೬೭||

ಹರಿಯು ಹರನೂ ಬೇರೆ ಎನ್ನುತ
ಬರಿದೆ ಭೇದವ ಮಾಡಲೊಲ್ಲದ
ನರನು ಯಾವಜ್ಜನ್ಮದಲ್ಲಿಯು
ಹರಿಯ ಬಲದಿಂದಿರುವನು! ||೧೬೮||

ಅರಸು ಗೃಹದಲ್ಲಿರೆನು ನಾನು,
ಸಿರಿಯ ಇದ್ದಡೆ ನನ್ನನೆಂದಿಗು
ನರನು ಬಿಂಕದಿ ಹೋಗಗೊಡಿಸದೆ
ನರಕ ಭಾಜನನಾಗುವಂ! ||೧೬೯||

ಎಲ್ಲಿ ಧರ್ಮ ಧ್ವಜವು ಇರುವುದೊ,
ಎಲ್ಲಿ ಸತ್ಯವು ಆಳುತಿರುವುದೊ,
ಎಲ್ಲಿ ಕರುಣೆಯು ಪಾಡುತಿರುವುದೊ,
ಅಲ್ಲಿ ನೆಲೆಸುವೆ ನಿತ್ಯದಿ. ||೧೭೦||

ವಾರಿಧಿ ಶಯನ ಪೇಳುತೀ ಪರಿ
ಹಾರಿ ನೀಲಾಕಾಶ ಸರಿಸಕೆ
ತೂರಿ ತೇಲುವ ಮುಗಿಲ ಮಧ್ಯದಿ
ಜಾರಿ ಹೋದನು ಬೇಗದಿ! ||೧೭೧||

ನಗರದೊಡೆಯನ ರೂಪ ಪೋದರು,
ನಿಗಮ ಗೋಚರ ಮಾಯವಾದರು,
ಭಗವದಂಶವು ಎಲ್ಲ ಎಡೆಯಲಿ
ಧಗಿಸುತಿದ್ದಿತು ಮಧುರನ. ||೧೭೨||

ಮಧುರನಾಗಲೆ ಮನೆಯ ಕಡೆಗೆ
ಪದುಮನಾಭನ ನಾಮ ಪಾಡುತ
ಹೃದಯ ವ್ಯಸನವೆಲ್ಲ ತೊರೆಯುತ
ಮಧುರ ಮನದಿಂ ನಡೆದನು. ||೧೭೩||

ತನ್ನ ಗುಡಿಸಲು ಇದ್ದಜಾಗವ
ರನ್ನ ಮಧುರನು ಸೇರಿ ನೋಡಲು
ಹೊನ್ನ ನಿರ್ಮಿತವಾದ ಸೌಧವು
ಉನ್ನತದಿ ತಾ ಬೆಳಗಿತು. ||೧೭೪||

ಕದಗಳಿಲ್ಲದ ಮನೆಯು ತಾನದು!
ಹೊದಿಕೆಯಿಲ್ಲದ ಮನೆಯು ತಾನದು!
ಚದುರ ಶಿಲ್ಪಿಯ ಕೆಲಸ ತಾನದೊ?
ಪದುಮನಾಭನ ಮಾಯೆಯೊ? ||೧೭೫||