ಕತ್ತಲಿಲ್ಲವು ಬೆಳಕು ಇಲ್ಲವು!
ಹೊತ್ತಿ ಉರಿಯವ ದೀಪವಿಲ್ಲವು!
ಕತ್ತಿ ಈಟಿಯು ಕದನದಾಯುಧ
ಎತ್ತ ನೋಡಿದರಿಲ್ಲವು! ||೧೭೬||

ಅಲ್ಲಿ ದುಃಖದ ಕೂಗು ಇಲ್ಲವು,
ಅಲ್ಲಿ ಹಣದಾ ಜಗಳವಿಲ್ಲವು,
ಅಲ್ಲಿ ಜನನವು ಮರಣವಿಲ್ಲವು;
ಅಲ್ಲಿ ಢಂಭವು ಸೇರದು! ||೧೭೭||

ಅಲ್ಲಿ ಇಲ್ಲವು ಇಲ್ಲವೆಂಬುದೆ!
ಅಲ್ಲಿ ಹಳ್ಳವು ದಿಣ್ಣೆ ಇಲ್ಲವು,
ಕಲ್ಲು ಹಾದಿಯ ಕಂಟಕಿಲ್ಲವು,
ಮುಳ್ಳು ಬೇಲಿಯು ಇಲ್ಲವು! ||೧೭೮||

ಪದವಿ ಎಂಬುವ ಭೇದವಿಲ್ಲವು,
ಚದುರನೆಂಬುವ ಕೀರ್ತಿಯಿಲ್ಲವು.
ಪದವಿಯೆಂಬುದು ಇರುವುದೊಂದೇ
ಪದುಮನಾಭನ ಚರಣವು! ||೧೭೯||

ಮೋದವಿಲ್ಲವು ಚಿಂತೆಯಿಲ್ಲವು
ಆದಿ ಅಂತ್ಯಗಳೆರಡು ಇಲ್ಲವು;
ವೇದ ತತ್ವದ ನೆಲೆಯು ತಾನದು
ಓದಿ ತಿಳಿಯಲಸಾಧ್ಯವು. ||೧೮೦||

ಜಾತಿ ಬೇದಗಳಲ್ಲಿ ಇಲ್ಲವು!
ನೀತಿ ನಡತೆಗಳಲ್ಲಿ ಪರಮವು.
ಖ್ಯಾತಿ ಎಂಬುದನಲ್ಲಿ ಬಯಸರು
ಪ್ರೀತಿ ಎಂಬುದು ಶ್ರೇಷ್ಠವು. ||೧೮೧||

ನೇಮ ನಿಯಮಗಳಲ್ಲಿ ಇಲ್ಲವು,
ಕಾಮ ಲೋಭಗಳಲ್ಲಿ ಸೇರವು,
ಭೀಮ ಭುಜಬಲವಲ್ಲಿ ವಿಫಲವು,
ಪ್ರೇಮವೆಂಬುದೆ ಶ್ರೇಷ್ಠವು. ||೧೮೨||

ಆಗಲಾ ಮನೆಯಿಂದ ಬಂದುದು
ಬೇಗದಿಂದಲಿ ಒಂದು ಶಕ್ತಿಯು,
ಬಾಗಿಲೆಡೆಯನು ಸೇರಿ ವಿನಯದಿ
ಬಾಗಿ ನಮಿಸಿತು ಮಧುರಗೆ! ||೧೮೩||

ಅಲ್ಲೆ ಕಂಡನು ತಂದೆ ತಾಯಿಯ!
ಅಲ್ಲೆ ನೋಡಿದ ಬಂಧು ಬಳಗಳವ!
ಅಲ್ಲೆ ರೂಢಿಯ ಮೆರೆವ ಸೌಖ್ಯವ!
ಎಲ್ಲೆ ಇಲ್ಲದ ರಾಜ್ಯವ! ||೧೮೪||

ಅಮಲನಲ್ಲಿಯೆ ಸಿಂಹ ಪೀಠದಿ
ಕಮಲನಾಭನ ರೂಪ ಧರಿಸಿ
ಕಮಲಮಿತ್ರನ ಜೋತಿಯಿಂದಲಿ
ವಿಮಲ ದೊರೆಯಾಗೆಸೆದನು! ||೧೮೯||

ನಿಗಮಗೋಚರನಾದ ತಂದೆಯು
ಮಗುವೆ ಬಾರೈ ಎನುತ ಮುದದಿಂ
ನಿಗಮ ಕರಗಳ ನೀಡಿ ಮುಂದಕೆ
ನಿಗಮತತ್ವವನುಸುರಿದ. ||೧೮೬||

ಪಾಪವಿಲ್ಲವು ಪುಣ್ಯವಿಲ್ಲವು
ಕೂಪವೆಂಬುದನಿತ್ಯ ತಾನದು;
ರೂಪದಲ್ಲಿಹ ಎನ್ನ ಸತ್ವಕೆ
ಪಾಪವೆಂಬುದನಿತ್ಯವು. ||೧೮೭||

ಎನ್ನ ಶಕ್ತಿಯ ಸಕಲ ರೂಪದಿ
ಭಿನ್ನವಿಲ್ಲದೆ ತುಂಬಿ ಇರುವುದು.
ಎನ್ನ ಮಾಯೆಯ ಸತ್ವ ತಾನಿದು
ಎನ್ನ ಶಕ್ತಿಯ ಲೀಲೆಯು. ||೧೮೮||

ಸಾವು ಎಂಬುದು ಸುಳ್ಳು ತಾನದು,
ದೇವನಾಗಿಹ ಎನ್ನ ಅಂಶಕೆ
ಹಾವು ಕಡಿದರು ಚೇಳು ಕಡಿದರು
ಸಾವು ಎಂದಿಗು ಬಾರದು. ||೧೮೯||

ಎಲ್ಲಿಯಂ ಸುಖ ಸೌಖ್ಯವಿರುವುದು!
ಎಲ್ಲಿಯಂ ಸುಜ್ಞಾನವಿರುವುದು!
ಎಲ್ಲಿಯಂ ಚೈತನ್ಯನಿರುವನು!
ಎಲ್ಲಿಯಂ ಜಗದೀಶನು! ||೧೯೦||