ಉದಯವಾಗುವ ರವಿಯ ಚಂದವ
ಮುದದಿ ನೋಡುತ ಮೀರೆ ಸಂತಸ
ಹೃದಯ ಹರುಷದಿ ಹಾರಿ ಕುಣಿಯಿತು;
ವದನ ಸಂತಸ ತೋರಿತು ||೨೬||
ಮೂಡಣೆಲ್ಲವು ಹೊನ್ನ ಬಣ್ಣದಿ
ನಾಡನೆಲ್ಲಿಯು ಬೆಳಗಿ ನಲಿಯುತ,
ಬಾಡಿ ಬಳಲದ ಅಲರನೆಲ್ಲವ
ನೋಡಿ ಸಂತಸ ಗೊಂಡಿತು! ||೨೭||
ಮಿಸುನಿ ಕಾಂತಿಯ ಮೀರಿ ಥಳಿಸುವ
ಬಿಸಜ ಬಾಧವನುದಯವಾಗಲು,
ಬಿಸಜ ಸಂಭವ ಸೃಷ್ಟಿ ಸಕಲವು
ಅಸಮ ಘೋಷದಿ ನಲಿಯಿತು! ||೨೮||
ಜೀವ ಪರಮನ ಸೇರುವಂದದಿ,
ಪೂವು ಕವಿಯನು ಅಪ್ಪುವಂದದಿ,
ಬೇವು ಅರಳಿಯ ತುಡುಕುವಂದದಿ,
ಆವಿ ಮೇಘವನಪ್ಪಿತು! ||೨೯||
ಮಂದ ಹಾಸಿತ ಪಸರು ಪಸುರಲಿ
ವಿಂದು ಬಿಂಬಿತ ರವಿಯ ರಶ್ಮಿಯು
ಇಂದು ಸಸಿರವೆಂಬ ತೆರದಲಿ
ಅಂದದಿಂ ತಾ ಕುಣಿಯಿತು! ||೩೦||
ಹಸುರು ಹುಲ್ಲಿನ ಅಂಚಿನಿಂದಲಿ
ಬಿಸಜ ಕೋಟಿಯ ಪೆರ್ಮೆಯಿಂದಲಿ
ಹಸಿದು ಮೊರೆಯುವ ಅಳಿಗಳಿಂದಲಿ
ಮಿಸುನಿ ಸರಸವು ಮೆರೆಯಿತು! ||೩೧||
ಪುಷ್ಪಮಿಸುನಿಗಳಿಂದ ಶೋಭಿತ
ಪುಷ್ಪಗಂಧದ ಪುಷ್ಪವತಿಯರು
ಪುಷ್ಪತರುಣರಂ ನೋಳ್ಪ ತೆರದಿಂ
ಪುಷ್ಪಗಳು ತಾವ್ ಮೆರೆದವು! ||೩೨||
ಬಣ್ಣ ಬಣ್ಣದ ಹಣ್ಣು ಹೂಗಳು,
ಬಣ್ಣ ಬಣ್ಣದ ಪಕ್ಕಿ ಪಶುಗಳು,
ಬಣ್ಣ ಬಣ್ಣದ ಕೀಟ ಕ್ರಿಮಿಗಳು,
ಬಣ್ಣ ಬಣ್ಣದಿ ಮೆರೆದುವು! ||೩೩||
ಹರಿಯು ಚಿರತೆಯು ಇರುವ ಗುಹೆಯಿಂ,
ಹರಿಯ ವೇಗದಿ ಕರಿಯ ವೇಗದಿ,
ಹರಿದು ನಿರುತದಿ ಬರುವ ತೊರೆಗಳು
ಮೊರೆವ ಗೀತದಿ ಮೆರೆದವು ||೩೪||
ಕೆಂಪು ದುಂಬಿಯು ನಂಜಬಟ್ಟಲು,
ಗುಂಪು ಗುಂಪಿನ ಚಂಡುಹೂಗಳು,
ಕಂಪು ಗೊರಟೆಯು ಚಂಪ ಪುಷ್ಪವು
ಸೊಂಪಿನಿಂದಲಿ ಮೆರೆದುವು. ||೩೫||
ಮೃಗಗಳೆಲ್ಲವು ಗವಿಯ ಬಿಡುತಲಿ
ಅಗಲಿ ತಮ್ಮಯ ಜೊತೆಯ ಜೀವಿಯ
ನಗರದೊಡೆಯನ ನುತಿಸಿ ಮನದಲಿ
ಹಗಲ ಪಯಣಕೆ ಹೊರಟವು. ||೩೬||
ಗಿರಿಯ ಮೇಲಿನ ತರುಗಳೆಡೆಯಲಿ
ಮರಿಯ ಸಂಗಡ ಸರಸವಾಡುತ
ಅರಿಯ ಹುಯಿಲನು ತಿರುಗಿ ನೋಡುತ
ಹರಿಣ ನಲಿಯುತ ನಿಂತಿತು. ||೩೭||
ಹಸುರು ಹುಲ್ಲಿನ ಮೇಲೆ ನೆಗೆಯುತ
ಬಿಸಿಲ ಜಳದಲಿ ಮೈಯನೊಟ್ಟಿದ
ಶಶವು ಬೇಗದಿ ಅರಿಯನಾಲಿಸಿ
ನುಸುಳಿ ಓಡಿತು ಪೊದರಿಗೆ. ||೩೮||
ಹುಲ್ಲು ಮೇಲಿಹ ಹನಿಯನೊರಸುತ
ನಲ್ಲನಗಲುತ ಹೊರಟು ಮೇಯಲು
ಹುಲ್ಲೆ ತಾ ಸಡಗರದ ಮನದಿಂ
ಅಲ್ಲಿ ಚಿಮ್ಮಿತು ಹರುಷದಿ. ||೩೯||
ಇನಿತು ಮೃಗಗಳು ನಲಿಯುತಲ್ಲಿರೆ,
ವನದ ಮೇಲಿಹ ಖಗಗಳೆಲ್ಲವು
ಇನನು ಮೂಡಿದನೆಂದು ಪಾಡುತ
ಬನದಲೆಲ್ಲಿಯು ಮೆರೆದುವು! ||೪೦||
ಫಲಿತ ಫಲಗಳ ಆಸೆಗೋಸುಗ
ನಲಿವ ಬಣ್ಣದ ಶುಕಗಳೆಲ್ಲವು
ಬಲಿದ ಹಸಿವೆಯ ತಾಪದಿಂದಲಿ
ಮಲೆಗೆ ಭರದಲಿ ಬಂದುವು. ||೪೧||
ಮಧುರ ಮಾವನು ಸವಿದು ಹರುಷದಿ
ಬಿದಿರ ಮೆಳೆಗಳ ತುದಿಯನೇರುತ
ಉದಯ ಬಿಸಿಲಲಿ ಗರಿಯ ಸವರುತ
ಮುದದಿ ಶುಕಗಳು ಎಸೆದುವು. ||೪೨||
ಶುಕನು ಪಾಡಿದ ಲಲಿತ ರಾಗವ
ಪಿಕನು ಕೇಳಲು ಪೆರ್ಮೆಯಿಂದಲಿ
ಮುಖವ ತೋರದೆ ತಳಿರ ಮರೆಯಲಿ
ಶುಕನ ಮೀರಲು ಪಾಡಿತು. ||೪೩||
ಅಡವಿಯೆಲ್ಲಿಯು ತುಂಬಿ ರವದಲಿ
ಬಿಡದೆ ಅಮಲನ ಅಮಲ ಮನದಲಿ
ಬಡವರಾಗಿಹ ನರರಿಗೆಲ್ಲವು
ಅಡವಿ ಅರಮನೆ ಎಂದನು. ||೪೪||
ಇನಿತು ತರುಗಳ ಚೆಲುವ ನೋಡುತ
ಬನದ ಖಗಗಳ ದನಿಯ ಕೇಳುತ
ಮನದಿ ಸಂತಸ ತುಂಬಿ ನಲಿಯುತ
ವನದಿ ನಡೆದನು ಅಮಲನು. ||೪೫||
ಒಣಗಿ ಬಾಡಿದ ಮರವನರಸುತ
ಗಣಿಸಲೊಲ್ಲದೆ ಮುಳ್ಳು ಸಿಲೆಗಳ
ಮಣಿಸಿ ಶಿರವನು ಕಠಿಣ ಪೊದರಲಿ
ದಣಿವು ಕಾಣದೆ ನೆಡೆದನು. ||೪೬||
ಬೆಟ್ಟವೆಲ್ಲವ ಬಿಡದೆ ಹುಡುಕುತ
ದಿಟ್ಟತನದಲಿ ಏರಿ ಇಳಿಯುತ
ನೆಟ್ಟ ಮನದಲಿ ತಿರುಗಿ ತಿರುಗೀ
ಕಟ್ಟ ಕಡೆಯಲಿ ಕಂಡನು. ||೪೭||
ತರುವ ನೋಡಲು ಹರುಷದಿಂದಲಿ
ಭರದಿ ಸೇರುತ ಅದರ ಬುಡವನು
ಕರದ ಕೊಡಲಿಯ ಸರಿಯ ಮಾಡುತ
ಮರವ ಕಡಿಯಲು ನಿಂತನು. ||೪೮||
ಕಡಿತವೆಲ್ಲವು ಕಠಿಣವಾಗಲು
ಅಡವಿಯೆಲ್ಲೆಡೆ ಧ್ವನಿಯ ಬೀರಿತು;
ಬಿಡದೆ ಅಮಲನು ಕಡಿದು ಕಡಿದೂ
ಎಡರನೆಲ್ಲವ ನೀಗಿದ. ||೪೯||
ಬಸವಳಿದು ಬೆಂಡಾಗಿ ನೆರಳಲಿ
ತೃಷೆಯ ಹೆಚ್ಚಲು ಬಿಸಿಲ ಝಳದಿಂ,
ಪಸರಿಸಿದ ಬಲು ಬನವ ನೋಡುತ
ಉಸಿರು ಬಿಡುತಲಿ ಮಲಗಿದ. ||೫೦||
Leave A Comment