ಎಳೆಯ ಗರುಕೆಯ ಮೇಲೆ ಮಲಗಿ
ತಳಿರ ಜೊತೆಯಲಿ ಆಟವಾಡುತ
ಇಳೆಯ ಅಂದವ ನೆನೆದು ಪೊಗಳಿದ
ಗೆಳೆಯನಾಗಿಹ ದೇವನ. ||೫೧||

ದೇವ ನಿನ್ನಯ ನಾಮ ಕೀರ್ತನೆ
ಸಾವು ಎಂಬುದರ ದೂರ ಮಾಡಿತು;
ಆವ ಜನ್ಮದ ಪಾಪವಾದರು
ದೇವ ಎಂದೊಡೆ ಓಡಿತು. ||೫೨||

ತಿಮಿರ ತೇಜಗಳೆರಡರಲ್ಲಿಯು,
ಅಮರರಲ್ಲಿಯು ಅಸುರರಲ್ಲಿಯು,
ಕಮಲ ದುಂಬಿಗಳೆರಡರಲ್ಲಿಯು
ಅಮಲರೂಪದಿ ನೆಲೆಸಿಹೆ. ||೫೩||

ಕಷ್ಟ ನಷ್ಟಗಳಲ್ಲಿ ನೆಲೆಸಿಹೆ;
ದಿಟ್ಟ ಮನುಜರ ಜೀವವಾಗಿಹೆ;
ಸೃಷ್ಟಿ ಲಯಗಳ ಹೇತುವಾಗಿಹೆ;
ಶಿಷ್ಟ ರಕ್ಷಕನಾಗಿಹೆ. ||೫೪||

ಮೋಡದಲ್ಲಿಯು ನೀನೆ ಅಡಗಿಹೆ;
ಕಾಡಿನಲ್ಲಿಯು ನೀನೆ ತುಂಬಿಹೆ;
ನಾಡಲೆಲ್ಲಿಯು ನೀನೆ ಕಾಣುವೆ;
ಮೋಡಿಗಾರನು ನೀನಹೆ! ||೫೫||

ಪಾಡಿ ಮಲಗಿಹ ಅಮಲ ಬೇಗದಿ
ಓಡಿ ಬರುತಿಹ ಭರವನಾಲಿಸಿ
ಹಾಡನಲ್ಲಿಯೆ ನಿಲಿಸಿ ಭಯದಲಿ
ನೋಡಿ ಸುತ್ತಲು ಎದ್ದನು. ||೫೬||

ಏಳುತೇಳುತ ಸುತ್ತ ನೋಡಲು
ಕೀಳುತಲ್ಲಿಯ ನೆಲವ ಭರದಲಿ
ಕಾಲ ವೇಗದಿ ಬರುವ ಹರಿಣನ
ಹಾಲ ಕಾಯುವ ನೋಡಿದಾ. ||೫೭||

ಜೀವದಾಶೆಗೆ ಬರುತ ಹರಿಣನು
ಮಾವಿನಡಿಯಲಿ ನಿಂತ ಅಮಲನ
ಭಾವ ಬುದ್ಧಿಯನರಿದು ಹರುಷದಿ
ಕಾವುದೆನ್ನನು ಎಂದಿತು! ||೫೮||

ಯಾರು ನಿನ್ನನು ಕೊಲಲು ಬರುವರು?
ಯಾರಿಗೇನನು ನೀನು ಮಾಡಿದೆ?
ಮಾರಮಾಚದೆ ಬೆಸಗು ಬೇಗದಿ
ಮಾರಿ ಬಂದರು ನೂಕುವೆ! ||೫೯||

ದುರಳನೊಬ್ಬನು ಅಟ್ಟಿ ಬರುವನು
ಭರದಿ, ನನ್ನನು ಪೊರೆಯೊ ತಂದೆಯೆ;
ಬೆರಸಿ ಬರುವನು ಬರಿದೆ ನನ್ನನು
ಹರಿಯ ಆಣೆಯು ಎಂದಿತು. ||೬೦||

ನಿರಪರಾಧಿಯ ಕೊಲುವ ಅಧಮನ
ಇರದೆ ಅಮಲನು ವಿಗಡತನದಲಿ
ಶಿರವನರಿಯದೆ ಬಿಡುವುದಿಲ್ಲವು
ಹರಿಣ ಆಲಿಸು ಎಂದನು. ||೬೧||

ಎಳೆಯ ಮರಿಯನು ವನದೊಳಿರಿಸುತ
ಹೊಳೆಯ ನೀರನು ಕುಡಿಯಲೋಸುಗ
ಬಳಿಗೆ ಭರದಿಂ ಬಂದೆನೆನ್ನುತ
ಅಳುತೆ ಹರಿಣವು ಹೇಳಿತು. ||೬೨||

ಅಮಲನಾಗಿಹ ನಾನು ನಿನ್ನನು
ಕಮಲನಾಭನ ಆಣೆಯಾಗಿಯು
ವಿಮಲತನವನು ಉಳಿಸಿಕೊಳ್ಳಲು
ಅಮಲ ಜೀವವನುಳುಹುವೆ. ||೬೩||

ಅಳುವ ಹರಿಣನ ಸುಮ್ಮನಿರಿಸುತ,
ಮಲಿದ ಕೋಪವ ಹೊರಗೆ ತೋರದೆ,
ಹಳುವ ಮರೆಯಲಿ ಇರಿಸಿ ಹರಿಣನ
ಫಲವ ನೋಡಲು ನಿಂತನು. ||೬೪||

ಉಭಯರೀಪರಿ ನೋಡುತಲ್ಲಿರೆ
ನಭದ ವರೆವಿಗು ಧೂಳನೇಳಿಸಿ
ರಭಸದಿಂದಲಿ ಓಡಿ ಬರುತಿಹ
ಶಬರ ದೈತ್ಯನ ಕಂಡರು. ||೬೫||

ಕರದಲೊಂದನು ಬಿಲ್ಲ ಪಿಡಿದೂ,
ಶರವನೆಳೆಯುತ ಕಿವಿಯುವರೆಗೂ
ಹರಿಣ ಓಡಿದ ಹುಯಿಲನರಸುತ
ತುರಗವೇಗದಿ ಬಂದನು. ||೬೬||

ಗರಿಯ ವೇಗದಿ ಬರುತ ಬೇಡನು
ನೆರಳ ಮರೆಯಲಿ ನಿಂತ ಅಮಲನ
ತಿರುಗಿ ನೋಡುತ ಹರುಷ ಮನದಿಂ
ಹರಿಣ ಹುಯಿಲನು ಕೇಳಿದ. ||೬೭||

ಹರಿಣನಿಲ್ಲಿಗೆ ಬರಲೆ ಇಲ್ಲವು;
ಅರಿಯದವನನು ಕೇಳ ಬೇಡಲೊ!
ಹರಿಯ ಹೊಡೆಯಲು ಸಾಗಲಾರದೆ
ಹರಿಣನೇತಕೆ ಹೊಡೆಯುವೆ? ||೬೮||

ಧರಣಿಯೊಳಗಿಹ ಜೀವರೊಳಗೆ,
ಇರಳು ಚಲಿಸುಚ ಅಸುರರೊಳಗೆ,
ನರನು ಪರಮನು ಎಂದು ಉಸುರಲು
ಕರುಣೆ ಎಂಬುದೆ ಸಾಕ್ಷಿಯು! ||೬೯||

ಕರುಣೆ ಎಂಬುದು ದೇವ ದೇವನ
ಪರಮ ಸನ್ನಿಧಿಯಿಂದ ಬರುವುದು!
ಕರುಣೆ ಎಂಬುದೆ ನರರು ಸುರರೊಳು
ಹರಿಯ ನಾಮದಿ ಚರಿಪುದು! ||೭೦||

ಕರುಣೆಯೆಂಬುವ ಮುಕುಟಕಿಂತಲು
ದೊರೆಗೆ ಬೇರೆಯ ಮುಕುಟವಿರುವುದೆ?
ಕರುಣೆ ಎಂಬಾ ಖಡ್ಗಕಿಂತಲು
ಪರಮ ಖಡ್ಗವು ಇರುವುದೆ? ||೭೧||

ಅರಸರೊಳಗದು ಮುಕುಟ ರೂಪದಿ,
ಪುರುಷರೊಳಗದು ವೀರ ರೂಪದಿ,
ತರುಣಿಯೊಳಗದು ಪುಷ್ಪ ರೂಪದಿ,
ಕರುಣೆಯೆಂಬುದು ಮೆರೆವುದು. ||೭೨||

ಕರುಣೆ ಎಂಬುವ ಪುಷ್ಪವೊಂದನು
ಪುರುಷನಾವನು ಧರಿಸಿ ಇರುವನೊ,
ಅರಿಗಳಾತನ ಗೆಳೆಯರಾಪರು
ಉರಿಯು ಶೀತಳಮಾಪುದು ||೭೩||

ಕರುಣ ಸಾಗರದಲ್ಲಿ ತೇಲುವ
ನರನ ಹಡಗವು ಅಚಲಮಾದುದು;
ಕರುಣ ಸಾಗರನಾದ ದೇವನೆ
ಭರದಿ ಬರುತಲಿ ಕಾಯ್ವನು! ||೭೪||

ಮರಣ ಕಾಲದಿ ಸುತ್ತ ನೋಡಲು
ಹಿರಿಯ ಸೋದರ ಕಿರಿಯ ಸೋದರಿ
ಬರಿದೆ ಅಳುತಲಿ ಇರುವ ಕಾಲದಿ
ಕರುಣೆ ಅಭಯವನೀವುದು! ||೭೫||