ಬಲ್ಲೆ ನಿನ್ನಯ ಒಳ್ಳೆ ಮತಗಳ;
ಇಲ್ಲೆ ಹರಿಣನು ಓಡಿ ಹೋದುದ
ಬಲ್ಲೆನಾ ಚೆನ್ನಾಗಿ ಎನುತಲಿ
ಹಲ್ಲುಕಡಿದನು ರೋಷದಿ ||೭೬||

ರೋಷ ಮಾಡಿದ ಮನುಜನೆಂದುಂ
ಮೋಸ ಹೋಗದೆ ಇರನು ನಿಜವಿದು:
ಪಾಶವಾಗಿದು ಯಮನ ಕೈಯಲಿ
ಘಾಸಿ ಮಾಡಲು ಬರುವುದು. ||೭೭||

ಏಕೆ ಸುಮ್ಮನೆ ಕೋಪ ಮಾಡುವೆ?
ಲೋಕವೆಲ್ಲವು ನೋಡಿ ನಗುವುದು
ಪಾಕ ಮಾಡುತ ಹರಿಣ ಮಾಂಸವ
ನಾಕಕೆಂತುಟು ಹೋಗುವೆ? ||೭೮||

ಯಮನ ಪಾಶವ ನಾನು ಬಲ್ಲೆನು;
ವಿಮಲ ನಾಕವು ನನ್ನದಾಗಿದೆ;
ಕಮಲನಾಭನು ಎನ್ನ ಸೇವಕ;
ಅಮಲರೆಲ್ಲರು ನನ್ನರು! ||೭೯||

ದುರುಳನಾಗಿಹ ಎನಗೆ ಲಕ್ಷ್ಮಿಯು
ಹೆರಳು ಹಾಕುತ ನಗುತಲಿರುವಳು;
ಕರುಳ ಬಗೆಯುತ ಸರವ ಮಾಡಿದ
ಹರಿಯು ಎನ್ನಯ ಗೆಳೆಯನು! ||೮೦||

ದೂರ ಬೇಡಲೊ ಮಾರಪಿತನನು;
ಶೂರನಲ್ಲವು ದೇವನಿದಿರಲಿ.
ಯಾರ ದಯದಿಂ ನೀನು ಬದುಕುವೆ?
ಸಾರಿ ಹೇಳುವೆನೆಂದನು. ||೮೧||

ಸುತರು ತನ್ನರು ಮಾರರೆಲ್ಲರು!
ಇತರರೆಲ್ಲರ ಪಿತನು ನಾನಹೆ!
ಮತಿಗಳಾಗಿಹ ನರರುಮೆಂದಿಗು
ಖತಿಯ ಬಯಸರು ಎನ್ನೊಳು! ||೮೨||

ಬರಿದೆ ಹರತೆಯನಾಡಬೇಡಲೆ,
ಹರಿಣ ಓಡಿದ ಹುಯಿಲ ತೋರಿಸು;
ಹರಣದಾಸೆಯು ನಿನಗೆ ಇರುವುದೆ?
ಭರದಿ ಪೇಳೆಲೊ ಎಂದನು. ||೮೩||

ಹರನು ಬಂದರು ಕೊಲಲು ಎನ್ನನು
ಅರಿಯಲಾರನು ಕೊಲಲು ಜೀವವ!
ಹರಣವೆಂದೂ ನಶಿಸಲಾರದು,
ಬರಿದೆ ಚರಿಪುದು ಜೀವವು! ||೮೪||

ಕಾಯಮೆಂದಿಗು ಜೀವನಲ್ಲವು!
ಮಾಯವೆಂಬುದ ನರರುಮರಿಯದೆ,
ಕಾಯ ಜೀವರು ಅಗಲಿ ಪೋದೊಡೆ
ಬಾಯ ಬಿಡುವರು ಸುಮ್ಮನೆ! ||೮೫||

ದುರುಳ ವ್ಯಾಧನೆ ಮಾತನಾಲಿಸು:
ಹರಣ ಹೋದರು ಹುಯಿಲ ಹೇಳೆನು!
ಅರಿಯೆನೆನುವೆನು ಹರಿಣ ಬಂದರು;
ಧುರಕೆ ಕರೆದರು ಬರುವೆನು. ||೮೬||

ಬಡವನಾಗಿಹ ಅಮಲ ಪೇಳಲು,
ಕಡುಗಿ ಶಬರನು ಶರವನೆಸೆಯಲು,
ಸಿಡಿಲ ಗರ್ಜನೆಯಂತೆ ಕೂಗುತ
ಒಡಲ ಸುತ್ತಲು ತಿರುಗಿತು. ||೮೭||

ದೇವ ಪೂಜಕನಾದ ಅಮಲನು
ಕಾವ ಹರಿಯನು ಮನದಿ ಭಜಿಸುತೆ,
ಹಾವ ರೋಷದಿ ಕೊಡಲಿಯಿಂದಲಿ
ನೋವಗೈಯಲು ಬೀಸಿದ. ||೮೮||

ಪರಶುರಾಮನು ಕೊಡಲಿಯಿಂದಲಿ
ಅರಸು ತಲೆಗಳ ಹೊಯ್ಯವಂದದಿ,
ಕರದ ಕೊಡಲಿಯು ಗರನೆ ತಿರುಗುತ
ಅರಿಯ ರಕುತವ ಹೀರಿಯು! ||೮೯||

ಗಣನೆ ಮಾಡದೆ ಹೊಡೆತವೆಲ್ಲವ
ಫಣಿಯ ಕೋಪದ ಉರಿಯ ತೋರುತ,
ರಣವು ಎಲ್ಲಿಯು ನಡಗುವಂದದಿ
ಕ್ಷಣದಿ ಕೂಗಿದ ರೋಷದಿ! ||೯೦||

ಕೂಗಲಾಕ್ಷಣ ನಭದಲೆಲ್ಲಿಯು
ಭಾಗವಾಗುತ ಮುಗಿಲ ಸಾಲ್ಗಳು
ಬೇಗ ಗಿರಿಯನು ದಾಂಟಿ ಪೋದುವು
ತಾಗುತಲ್ಲಿಯ ಶಿಖರವ. ||೯೧ ||

ಸಿಡಿಲ ಗರ್ಜನೆಯಂತೆ ನಾದವು
ಬಡಿದು, ಪರ್ವತ ಶಿಲೆಗಳೆಲ್ಲವು
ಬುಡದವರೆವಿಗು ಧೂಳನೇಳಿಸಿ
ಕಿಡಿಯ ಸೂಸುತ ಬಂದುವು. ||೯೨||

ದೆಶೆಗಳೆಲ್ಲವ ತಗುಲಿ ಕೇಕೆಯು
ಪೊಸ ತರದ ರವಗಳನು ಬೀರುತ,
ಅಸಮ ಬಲನಂ ಕಿವುಡು ಮಾಡುತ
ಅಸುವ ನೀಗಿತು ಕಷ್ಟದಿ. ||೯೩||

ಬಲವು ಕುಂದುತ ಬರಲು ಅಮಲನು,
ಖಳನ ಮೀರಿದ ಬಲವನರಿಯುತ,
ತಳಿರ ಮರೆಯಲಿ ನಿಂತ ಹರಿಣನ
ಅಳುವ ಮೋರೆಯ ನೋಡಿದ. ||೯೪||

ಖೂಳ ಬೇಡನೆ ಕೇಳು ನುಡಿವೆನು
ಕಾಲ ಸದನಕೆ ನಾನು ಪೋದರು,
ಗೋಳ ಹೊಯ್ಯಲು ಬೇಡ ಹರಿಣನ
ಹಾಳು ಒಡಲಿನ ಅಶೆಗೆ. ||೯೫||

ಹೇಡಿಯಾಗಿಹ ನೀಚ ಮನುಜನೆ
ಓಡಿಯಾದರು ಹೋಗು ಬೇಗದಿ;
ಕಾಡ ಎರಳೆಯ ಬಿಡಲು ಒಲ್ಲೆನು
ರೂಢಿಯೆಲ್ಲವ ಹುಡುಕುವೆ. ||೯೬||

ರೇಗಿ ಬೇಡನು ನುಡಿಯಲೀಪರಿ
ಬಾಗಿ ಶಿರವನು ಅಮಲ ದುಃಖದಿ
ರಾಗದಿಂದಲಿ ಹರಿಯನಾಗಲೆ
ಕೂಗಿ ಬೇಡಿದ ಬಲವನು. ||೯೭||

ನಿನ್ನ ನಂಬುತ ಭಾಷೆ ಕೊಟ್ಟೆನು ;
ನಿನ್ನ ಮೇಲೆಯೆ ಆಣೆ ಇಟ್ಟೆನು:
ನಿನ್ನ ಕರುಣೆಯ ಬೇಡಿಕೊಂಬೆನು;
ಚೆನ್ನ ಹರಿಣನ ಕಾಯಲೈ! ||೯೮||

ಬಂದ ಬೇಡನ ಬಲವ ಜೈಸಲು
ಇಂದು ನನಗೆ ಬಲವನೀಯೋ!
ಮುಂದೆ ನಿನ್ನನು ಹೇಗೆ ಸೇರಲಿ
ಸಂದ ಭಾಷೆಯ ಕಳೆಯುತ? ||೯೯||

ಎನಗೆ ಜೀವದ ಆಶೆ ಇಲ್ಲವು;
ಮನೆಯ ಸುತರನು ನೀನೆ ಕಾಯುವೆ;
ವನದ ಎರಳೆಗೆ ಭಾಷೆ ಇತ್ತೆನು,
ಮನದ ಚಿಂತೆಯ ಹರಿವುದೈ, ||೧೦೦||