ಕೊಳದೆದೆಯ ತಾವರೆಯ ಹೃದಯಮಕರಂದಕ್ಕೆ
ಬಂಡುಣಿಯು ಬಾಯಾರಿ ಬಳಸುವಂತೆ
ಭ್ರಮಿಸುತಿದೆ ಈ ಮನವು ನೂರಾರು ಹಾದಿಯಲಿ,
ಎಂದು ಬಗೆಹರಿಯುವುದೊ ಇದರಮಲ ಚಿಂತೆ.

ದಿನದ ಮಂಗಳಕಾಗಿ ಇರುಳು ಬಲಿಯಾಗುತಿರೆ
ಇಂದ್ರದಿಕ್ಕಿನ ಹೋಮಕುಂಡದಲ್ಲಿ
ಋತ್ವಿಜರ ಘೋಷದೊಲು ಖಗಗೀತ ತುಂಬಿಬರೆ,
ಯಜ್ಞಫಲದಂತಿನನು ಮೂಡಿಬರುವಲ್ಲಿ
ನಿಂತು ನೋಡಿದೆ ನಾನು, ಮರುಗಳಿಗೆಯಲ್ಲಿ
ಬುವಿಯ ಬಾಳೆಚ್ಚರಿಸಿ ಪಿಸುಗುಟ್ಟಿತಲ್ಲಿ.

ದಿವ್ಯ ಸಂಧ್ಯೋದಯದ ಮಂಗಳ ಮುಹೂರ್ತದಲಿ
ಯಕ್ಷಲೋಕದ ನಾಕದಲ್ಲಿ ಸುತ್ತಿ,
ಬಾನೆದೆಯ ಕಬ್ಬಗಳ ನಾನೋದುತಿರುವಲ್ಲಿ
ಎಲ್ಲಿಂದಲೋ ತಿಮಿರ ಮುಸುಕಿ ಮುತ್ತಿ
ಕಂಗಳನು ತುಂಬುವುದು ನನಗರಿಯದಂತೆ
ತಾರೆಗಳು ತೊಳಗುವುವು ಬಯಕೆಯಂತೆ !

ಮುಗಿಲ ತೋಟದ ಲಕ್ಷ ರಜತಸುಮನಂದನದಿ
ಚರಿಸುವಪ್ಸರೆಯಾಗಿ ನಲಿದು ನಡೆದು,
ಚಂದ್ರನಾವೆಯನೇರಿ ಮುಗಿಲ ಕಾಸಾರದಲಿ
ತೇಲಿ ನಡೆದರು ಬಯಕೆ ದಿನದಿನಕೆ ಬಲಿದು
ಹೃದಯ ತೃಷೆಯಾರದಂತೆ
ವರ್ಧಿಸುವುದಮಲಚಿಂತೆ.

ಕಾವ್ಯನಾಕಾಮೃತದ ಪ್ರತಿಭಾಪ್ರವಾಹದಲಿ
ತೇಲಿದೆನು ನಾನೊಂದು ಹಣತೆಯಾಗಿ,
ಶಾಸ್ತ್ರಗಳ ಜಟಿಲತೆಯ ಕಾನನದ ಹೊದರಿನಲಿ
ನುಗ್ಗಿದೆನು ಉನ್ಮತ್ತವೀರನಾಗಿ-
ಅಲ್ಲಿಯೂ ಇರಲಿಲ್ಲ ನನ್ನೆದೆಯ ಜೇನು,
ಎಲ್ಲೆಲ್ಲಿಯೂ ಬರಿ ಅತೃಪ್ತಿಯೇನು ?

ಎಲ್ಲಿಯೋ ಇರುವುದದು ; ಕಂಡವರು ಉಂಟಂತೆ,
ನಂಬಿ ನಡೆ ದೊರಕುವುದು ಎಂಬ ವಾಣಿ
ಕೇಳುತಿದೆ ; ಕಾಯುತಿರು ಕಾಯುತಿರು ಕಾದು ನೋಡು
ಎಂದು ಮೊಳಗಿದೆ ಗುರುವಿನಾಶ್ವಾಸವಾಣಿ.

ಕಾಯುವೆನು, ಕೂಗುವೆನು ಕೃಪೆದೋರುವಂತೆ
ತಾಯ ಸ್ತನ್ಯಕೆ ಹಸುಳೆ ಹಾತೊರೆಯುವಂತೆ.