ಬಾನೆತ್ತರದ ಬೆಂಕಿಮೈಯನು ಬಳಸಿ
ಜಾರಿರಲು ಧೂಮವೇಣಿ,
ಚಿಕ್ಕೆ ಹಾದಿಯೊಳಿಲ್ಲಿ ನೀನೆತ್ತ ಹೊರಟಿರುವೆ
ಚಿಂತಾಮಣಿ ?
ಫಾಲನೇತ್ರನ ದೀಪ್ತಿ ಜ್ವಲಿಸುತಿಹ ಕಣ್-ಕುಂಡ,
ಮನವೊ ದಿವವನು ತಿವಿವ ಬ್ರಹ್ಮದಂಡ !

ಅದಿಗೊ ಕರೆಯುತ್ತಲಿದೆ ಕನಕಸರ್ಪದ ಬಳಸು
ಅನುರಾಗ ದೀಪಗಳ ಹೆಡೆಯಾಡಿಸಿ
ಅರಮನೆಯ ವೈಭವದ ಮೋಹಮಂದಿರದಲ್ಲಿ
ಕರೆಯುತಿದೆ ಪುಂಗಿದನಿ ಬಲೆಯ ಬೀಸಿ :
‘ಬಾ ಬಾರೆ ಬಾ ಚೆಲುವೆ
ಬಾ ಇಲ್ಲಿ ನಿನಗೊಲಿವೆ
ಪಟ್ಟಮಹಿಷಿಯ ಪದವಿ ಇಗೊ ಮೀಸಲು.’

ಬೂದಿರಾಶಿಯ ನಡುವೆ ಎದ್ದು ಬಂದನು ಕಾಮ
ಮತ್ತೊಮ್ಮೆ ಹೂಡಿದನು ಕುಸುಮ ಶರವ ;
ಬೋಧಿವೃಕ್ಷದ ಸುತ್ತ ಬಂದು ನಿಂತನು ಮಾರ ;
ರಂಭೆ ಅಪ್ಸರೆಯರಿದೊ, ಹಾವಭಾವ ;
ಬಂಗಾರ ಬಯಕೆಗಳ ಸೈತಾನ ಮಾಟವಿದೊ
ತೆರೆಯುತಿದೆ ಕಣ್ಣೆದುರು ಹೊಸ ಲೋಕವ !

“ಬೇಡ ಬೇಡವೊ ಬೇಡ ನಾಲ್ಕು ದಿನಗಳ ಬದುಕು,
ಸಾವ ಕೆಡುವರನೊಯ್ದು ಒಲೆಯೊಳಗೆ ಇಕ್ಕು !
ಊರ ಸೀರೆಗೆ ಅಗಸ ಸಡಗರವಗೊಂಬಂತೆ
ತೆರಣಿಯಾ ಹುಳು ತನ್ನ ನೂಲೊಳಗೆ ಸಿಕ್ಕಂತೆ
ಅದು ನನದು, ಇದು ನನದು, ಎಂದು ನೊಂದೆ ;
ಕಿಚ್ಚಲ್ಲದುರಿಯಲ್ಲಿ ನಾನು ಬೆಂದೆ.
ಸಾಕು ಸಾಕೋ ಸಾಕು,
ಅದನಾಚೆ ನೂಕು…..”

ಶೂನ್ಯಮಂದಿರದಲ್ಲಿ ಸುಯ್ಯುತಿದೆ ನರುಗಂಪು,
ಸಾಲು ಸುಪ್ಪತ್ತಿಗೆಯ ರನ್ನಗಂಬಳಿ ನೆಲದಿ
ಪವಡಿಸಿದೆ ಅರಮನೆಯ ನೆಳಲ ತಂಪು.
ಮೂಕವಾಗಿದೆ ವೀಣೆ, ಭಗ್ನವಾಗಿದೆ ಮುರಳಿ
ನಿನಗಾಗಿ ಕಾಯುತ್ತ ಕೊರಗಿ ನರಳಿ.

ತುಂಬಿದುದ್ಯಾನದಲಿ ಕುಸುಮ ಹೃದಯವು ಕಾದು
ಭ್ರಮರ ಗೀತದ ಕನಸ ಕಾಣುತಿರಲು
ತುಂಬಿದ್ದ ಮಕರಂದ ಪಾತ್ರ ಬರಿದಾಗುತಿದೆ
ವಿರಹದುರಿ ಜೀವವನು ಬೇಯಿಸಿರಲು.

ಯಾವ ಮಂದಾರಗಳ ಕಂಪು ಸೆಳೆಯಿತೊ ನಿನ್ನ ?
ಯಾವ ತಿಂಗಳ ತೋಳು ಅಪ್ಪಿಕೊಂಡಿತೊ ನಿನ್ನ ?
ಯಾವ ಬೆಂಕಿಯ ಬಳಸು ನುಂಗಿ ನಿಂತಿತೊ ನಿನ್ನ ?’
ಇದೆ ನಿನ್ನ ನಿರ್ಧಾರವೇನು ?
ಹೊನ್ನ ತಿಳಿಗೊಳದಲ್ಲಿ ಕೇಳಿಯಾಡಿರೆ ಮೀನು
ಅವನ ಗಾಳವು ಇಲ್ಲು ಬಂದಿತೇನು !

ಧವಳ ಹೈಮಾಚಲದ ಮೌನ ಶಿಖರದ ಸುತ್ತ
ಕರಗಿದುದು ಕಾಮಧನು ತುಹಿನ ರಾಶಿ
ಮಾನಸ ಸರೋವರದ ಹಾಲ್ದಿಂಗಳಲೆಗಳಲಿ
ಬಿಂಬಿಸಿತು ತೇಜಸ್ವಿ ರವಿಯ ರಶ್ಮಿ !

ನಿರ್ನಾಮನಾದನು ಕಾಮ ; ಜಾರಿಬಿದ್ದಿತು ಬಿಲ್ಲು
ಬೂದಿಯೊಳಗೆ-
ರಂಭೆ ಮೇನಕೆಯೊಡನೆ ಜಾರಿಹೋದನು ಮಾರ
ಸೈತಾನನೊಡನೆ !
ಹರಸಿದಳು ಮಹಾಶ್ವೇತೆ,
ಒಲಿದು ನಕ್ಕಳು ಸೀತೆ ;
ಹರನ ಗೆಲ್ದಾ ಗೌರಿ
ಆಗಿರಲು ಸಂಪ್ರೀತೆ
ಶುಭ್ರವಾಯಿತು ಬಾನು, ಜಿನುಗಿತಿನಿದನಿ ಜೇನು ;
ವ್ಯೋಮಕೇಶನ ಮುಡಿಯ ಗುಡಿಯ ಕಲಶದ ಕಾಂತಿ
ತುಳುಕಿ ಬಂದಿತು ಪರಮ ಹರಕೆಯೋಲೆ
ಶ್ರೀಶೈಲ ಶಿವಜೂಟದಿಂದ ಬಂದಿತು ಬೀಸಿ
ದಿವ್ಯ ಮಂದಾರಗಳ ಕಂಪಿನೋಲೆ !
ಬಾನು ನುಡಿಯಿತು ಇಂತು,
ಋಷಿಯಂತೆ ನಿಂತು :
“ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆಲುವಂಗೊಲಿದವಳು,
ಎಡೆಯಿಲ್ಲದ ಕಡೆಯಿಲ್ಲದ ಭವವಿಲ್ಲದ ಭಯವಿಲ್ಲದ
ನಿರ್ಭಯ ಚೆಲುವಂಗೊಲಿದವಳು,
ಕಡಲಾಳದ ಕೆಚ್ಚೆದೆಯಲಿ ಕಾಮಾರಿಯ ಗೆದ್ದವಳು !”
ಬೆಳಕು ಮೈ ನಡೆದಿತ್ತು ಕತ್ತಲೆಯ ಮುಡಿಗೆದರಿ
ಚಿಕ್ಕೆ ಹೆಜ್ಜೆಯನಿಟ್ಟು ಬಾನ ತುಂಬ !
ಬೆಳಗು ಬೆಳಗೊಳು ಬೆರೆದು ಒಲವಿನಲಿ ಮೂಡಿತ್ತು
ಶ್ರೀಶೈಲ ಜೂಟದಲಿ ಚಂದ್ರಬಿಂಬ !