ಪ್ರಸ್ತುತ ಲೇಖನದಲ್ಲಿ ಮುಖ್ಯವಾಗಿ ಐದು ವಿಚಾರಗಳನ್ನು ಕುರಿತು ಚರ್ಚಿಸಲಾಗಿದೆ. ಅವುಗಳೆಂದರೆ, ಗುಲಾಮಗಿರಿ ಹುಟ್ಟು, ಬೆಳವಣಿಗೆ ಮತ್ತು ಸ್ವರೂಪ, ಪ್ಲಾಂಟೇಷನ್ ಆರ್ಥಿಕತೆ, ಗುಲಾಮಗಿರಿ ಮತ್ತು ಹೊಸ ಜಗತ್ತು, ಗುಲಾಮ ವ್ಯಾಪಾರ, ವರ್ಣಬೇಧ ನೀತಿ ಮತ್ತು ಗುಲಾಮಗಿರಿ ವಿರೋಧಿ ಚಳವಳಿಗಳು. ಈ ಎಲ್ಲಾ ವಿಚಾರಗಳ ಮೂಲಕ ಅಮೆರಿಕಾ ಗುಲಾಮಗಿರಿಯ ಸ್ವರೂಪವನ್ನು ಪರಿಚಯಿಸುವ ಪ್ರಯತ್ನವನ್ನು ಮಾಡಲಾಗಿದೆ. ಇಲ್ಲಿ ಕೇವಲ ಸಮಾಜದ ಉನ್ನತ ವರ್ಗಕ್ಕೆ ಸಂಬಂಧಿಸಿದ ಇತಿಹಾಸ ಬರೆಯದೇ ಸಮಾಜದ ಅತ್ಯಂತ ಕೊನೆಯ ಹಂತದಲ್ಲಿದ್ದ ಗುಲಾಮರ ಜೀವನ, ಅವರ ಬವಣೆ, ಪ್ರಯತ್ನಗಳು ಮತ್ತು ಸೆಣಸಾಟಗಳು ಇತ್ಯಾದಿಗಳನ್ನು ಚಿತ್ರಿಸುವುದಕ್ಕೆ ಪ್ರಯತ್ನಿಸಲಾಗಿದೆ.

ಗುಲಾಮಗಿರಿ: ಹುಟ್ಟು ಮತ್ತು ಸ್ವರೂಪ

ಗುಲಾಮಗಿರಿಯ ಆಚರಣೆಯು ಪೂರ್ವೇತಿಹಾಸ ಕಾಲದಿಂದಲೂ ಇದ್ದುದನ್ನು ಹಾಗೂ ಇತಿಹಾಸದ ಆರಂಭದ ಕಾಲದಲ್ಲಿ ಕೃಷಿಯು ಅಭಿವೃದ್ದಿ ಹೊಂದಿದಂತೆ ಸಮಾಜವು ಸಂಘಟಿತರಾಗುವುದರೊಂದಿಗೆ ಅದು ಒಂದು ಸಂಸ್ಥೆಯಾಗಿ ಬೆಳದುದನ್ನು ನೋಡಬಹುದು. ಗುಲಾಮಗಿರಿಯು ಹಲವು ರೀತಿಯಲ್ಲಿ ಮತ್ತು ಹಲವು ಪ್ರದೇಶಗಳಲ್ಲಿ ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿತ್ತು. ಇದು ವೇಶ್ಯೆಯರಿಂದ ಹಿಡಿದು ಯೋಧರು, ಸೇವಕರು, ಕರಕುಶಲಕರ್ಮಿಗಳು ಮತ್ತಿತರರನ್ನು ಒಳಗೊಂಡಿತ್ತು. ಅಭಿವೃದ್ದಿ ಹೊಂದಿದ ಸಮಾಜಗಳಲ್ಲಿ ವೈವಿಧ್ಯಮಯವಾದ ವೃತ್ತಿಗಳು ಮತ್ತು ಕೆಲಸಗಳು ಬೆಳೆದುದರಿಂದ ಅವುಗಳನ್ನು ಪೂರ್ಣಗೊಳಿಸಲು ಸೇವಕರ ಅವಶ್ಯಕತೆ ಹುಟ್ಟಿಕೊಂಡಿತು. ಗುಲಾಮರನ್ನು ತಮ್ಮ ಕೆಲಸ ಕಾರ್ಯಗಳಿಗಾಗಿ, ಬೇರೆ ದೇಶ, ಪ್ರಾಂತ್ಯಗಳ ಮೇಲೆ ಯುದ್ಧ ಮತ್ತು ದಾಳಿಗಳನ್ನು ಮಾಡಿಯೋ ಅಥವಾ ಅವರ ಸಮಾಜದಲ್ಲಿಯೇ ಆರ್ಥಿಕವಾಗಿ ದುರ್ಬಲರಾದವರನ್ನು ಹಾಗೂ ಅಪರಾಧಗಳನ್ನು ಎಸಗಿದ ವ್ಯಕ್ತಿಗಳನ್ನು ಶಿಕ್ಷೆಯ ರೂಪದಲ್ಲಿ ಗುಲಾಮರನ್ನಾಗಿ ಹುಟ್ಟುಹಾಕಲಾಯಿತು.

ಗುಲಾಮಗಿರಿಯು ಕಾನೂನು ಮತ್ತು ಸಂಪ್ರದಾಯಗಳಿಂದ ಮಾನ್ಯತೆ ಪಡೆದ ಹಾಗೂ ಸಂಪೂರ್ಣವಾಗಿ ಬಲಾತ್ಕಾರದ ದಾಸತ್ವದ ಸಂಸ್ಥೆಯಾಗಿತ್ತು. ದಾಸತ್ವದ ಪ್ರಮುಖ ಲಕ್ಷಣಗಳೆಂದರೆ,

೧. ಅವರ ಸೇವೆಯನ್ನು ಬಲಾತ್ಕಾರವಾಗಿ ಪಡೆದುಕೊಳ್ಳುವುದು,

೨. ಅವರನ್ನು ಜೀವನದುದ್ದಕ್ಕೂ ಯಜಮಾನರ ಬೇರೊಬ್ಬರ ಆಸ್ತಿಯೆಂದು ಪರಿಗಣಿಸುವುದು ಮತ್ತು

೩. ಗುಲಾಮರು ಯಜಮಾನರ ಇಷ್ಟಕ್ಕೆ ವಿರುದ್ಧವಾಗಿ ನಡೆಯುವಂತಿಲ್ಲ. ಪುರಾತನ ಕಾಲದಿಂದಲೂ ಗುಲಾಮರನ್ನು ಕಾನೂನುಬದ್ಧವಾಗಿ ವಸ್ತುವೆಂದು ಪರಿಗಣಿಸಲಾಗಿತ್ತು. ಆದ್ದರಿಂದ ಬೇರೆ ವಸ್ತುಗಳಂತೆ ಗುಲಾಮರನ್ನು ಸಹ ಶ್ರೀಮಂತರು ಕೊಳ್ಳುವುದು, ಮಾರುವುದು, ಸಾಲಕ್ಕೆ ಒತ್ತೆಯಿಡುವುದು ಕೊಡುಗೆಯಾಗಿ ಕೊಡುವುದು ಸಾಮಾನ್ಯವಾಗಿತ್ತು. ಇದಾವುದೇ ಹಂತದಲ್ಲಿ ಗುಲಾಮರು ತಮ್ಮ ಯಜಮಾನರಿಗೆ ಯಾವುದೇ ರೀತಿಯ ಪ್ರತಿರೋಧ ತೋರಿಸುವಂತಿರಲಿಲ್ಲ.

ಪ್ರಾಚೀನ ಕಾಲದ ಗುಲಾಮಗಿರಿ

ಪ್ರಾಚೀನ ಕಾಲದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅವಶ್ಯಕತೆಯನ್ನು ಪೂರೈಸಿಕೊಳ್ಳಲು ಗುಲಾಮಗಿರಿಯು ಸಾರ್ವತ್ರಿಕವಾಗಿ ಒಪ್ಪಿಕೊಂಡಂತಹ ಒಂದು ಸಾಮಾಜಿಕ ಸಂಸ್ಥೆಯಾಗಿತ್ತು. ಪ್ರಪಂಚದ ಪ್ರಮುಖ ಪ್ರಾಚೀನ ನಾಗರಿಕತೆಗಳಾದ ಮೆಸಪಟೋಮಿಯಾ, ಭಾರತ ಮತ್ತು ಚೀನಾಗಳಲ್ಲಿ ಗುಲಾಮರನ್ನು ಮನೆ ಕೆಲಸಗಳಿಗೆ, ಅಂಗಡಿಗಳಿಗೆ, ಕಾಮಗಾರಿಗಳಿಗೆ ಮತ್ತು ಕೃಷಿ ಚಟುವಟಿಕೆಗಳಿಗೆ ನಿಯೋಜಿಸಿಕೊಂಡಿದ್ದನ್ನು ಕಾಣಬಹುದು. ಈಜಿಪ್ಟಿಯನ್ನರು ರಾಜರ ಅರಮನೆಗಳನ್ನು ಮತ್ತು ಪಿರಮಿಡ್ಡುಗಳನ್ನು ಕಟ್ಟಲು ಗುಲಾಮರನ್ನು ಬಳಸಿ ಕೊಂಡಿ ದ್ದರು. ಪ್ರಾಚೀನ ಹೀಬ್ರೂಗಳು ಸಹ ಗುಲಾಮರನ್ನು ಬಳಸಿಕೊಂಡಿದ್ದರು. ಮಾಯನ್ ನಾಗರಿಕತೆಯಲ್ಲಿಯೂ ಸಹ ಗುಲಾಮರನ್ನು ಬಹುಸಂಖ್ಯೆಯಲ್ಲಿ ಕೃಷಿ ಚಟುವಟಿಕೆಗಳಿಗಾಗಿ ಮತ್ತು ಯುದ್ಧಕ್ಕಾಗಿ ಬಳಸಿದ್ದರು.

ಹೋಮರನ ಕಾವ್ಯಗಳಲ್ಲಿ ಯುದ್ಧ ಕೈದಿಗಳಿಗೆ ಗುಲಾಮಗಿರಿಯು ಕಟ್ಟಿಟ್ಟ ಬುತ್ತಿಯಾಗಿತ್ತು. ನಂತರದ ಗ್ರೀಕ್ ತತ್ವಜ್ಞಾನಿಗಳು ಗುಲಾಮಗಿರಿಯನ್ನು ಅನೈತಿಕವೆಂದು ಪರಿಗಣಿಸಲಿಲ್ಲ. ಆದರೆ ಅರಿಸ್ಟಾಟಲ್ ಪ್ರಕಾರ ನಿಷ್ಠಾವಂತ ಗುಲಾಮರನ್ನು ಕಾಲಕ್ರಮೇಣ ಮುಕ್ತಗೊಳಿಸ ಬಹುದಿತ್ತು. ಪ್ರಾಚೀನ ಗ್ರೀಸ್‌ನಲ್ಲಿ ಗುಲಾಮರನ್ನು ಹೆಚ್ಚು ಕಡಿಮೆ ಮಾನವೀಯತೆಯಿಂದ ನೋಡಿಕೊಳ್ಳಲಾಗುತ್ತಿತ್ತು. ಸ್ಪಾರ್ಟಾದ ಗುಲಾಮರನ್ನು ಬಲಾತ್ಕಾರವಾಗಿ ದೊಡ್ಡ ಎಸ್ಟೇಟುಗಳಲ್ಲಿ ದುಡಿಯುವುದಕ್ಕೂ ಮತ್ತು ಅವರ ಸೈನ್ಯದಲ್ಲಿ ಹೋರಾಡುವುದಕ್ಕೂ ನಿಯೋಜಿಸಿಕೊಂಡಾಗ ಅವರನ್ನು ಬಹುಸಂಖ್ಯಾತರು ತುಂಬಾ ಕಠಿಣವಾಗಿ ನೋಡಿಕೊಳ್ಳುತ್ತಿದ್ದರು.

ರೋಮಿನ ಗುಲಾಮಗಿರಿಯು ಗ್ರೀಸಿನ ಗುಲಾಮಗಿರಿಗಿಂತ ಹಲವಾರು ರೀತಿಗಳಿಂದ ಭಿನ್ನವಾಗಿತ್ತು. ರೋಮಿನ ಯಜಮಾನರು ತಮ್ಮ ಗುಲಾಮರ ಪ್ರಾಣ ಮತ್ತು ಸಾವಿನ ಮೇಲೆ ಹೆಚ್ಚು ಹಿಡಿತ ಹೊಂದಿದ್ದರು. ರೋಮನ್ ಸಾಮ್ರಾಜ್ಯದ ಅವಧಿಯಲ್ಲಿ ಅದರ ಸಾಮಾಜಿಕ ಮತ್ತು ಆರ್ಥಿಕ ಅಂಶಗಳಿಂದಾಗಿ ಅಲ್ಲಿ ಗುಲಾಮಗಿರಿಯ ಅವಶ್ಯಕತೆ ಹೆಚ್ಚಾಗಿತ್ತು. ಶ್ರೀಮಂತ ರೋಮನ್ನರು ದೊಡ್ಡ ಪಟ್ಟಣ ಮತ್ತು ನಗರಗಳನ್ನು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿದ್ದ ಮನೆಗಳನ್ನು ಕಾಯಲು ಹೆಚ್ಚೆಚ್ಚು ಗುಲಾಮರನ್ನೇ ಅವಲಂಬಿಸಬೇಕಾಯಿತು. ಸಾಮ್ರಾಜ್ಯದ ದಂಡೆಯಾತ್ರೆಗಳು ಮತ್ತು ವಿಸ್ತರಣೆಯಿಂದಾಗಿ ಸ್ಥಳೀಯ ಸೇವಕ-ಗುಲಾಮರ ಪೂರೈಕೆ ಸಾಲದಾಗಿ ವಿದೇಶಗಳಿಂದ ಗುಲಾಮರನ್ನು ಕೃಷಿ ಚಟುವಟಿಕೆಗಳಿಗಾಗಿ ಆಮದು ಮಾಡಿಕೊಳ್ಳಬೇಕಾಯಿತು. ಗುಲಾಮರನ್ನು ಪಡೆಯಲು ಬಳಸುತ್ತಿದ್ದ ಪ್ರಮುಖ ಮಾರ್ಗವೆಂದರೆ ಯುದ್ಧಗಳು. ಯುದ್ಧಗಳಲ್ಲಿ ಸೋತವರನ್ನು ಯುದ್ಧ ಕೈದಿಗಳಾಗಿ ಮಾಡಿ ಅರವನ್ನು ರೋಮಿಗೆ ಕರೆತಂದು ಗುಲಾಮರನ್ನಾಗಿ ಮಾಡಲಾಗುತ್ತಿತ್ತು. ಇದರ ಮಾರ್ಗಗಳೆಂದರೆ, ಸಾಲಗಾರರು ತಾವು ಸಾಲವನ್ನು ತೀರಿಸದಿದ್ದಾಗ ತಮ್ಮನ್ನೇ ತಾವು ಸಾಲದ ಮೊತ್ತಕ್ಕೆ ಮಾರಿಕೊಳ್ಳುತ್ತಿದ್ದರು. ಅಪರಾಧಗಳನ್ನು ಎಸಗಿದಾಗ ಶಿಕ್ಷೆಯನ್ನು ಪೂರೈಸಲು ಹಲವರು ಗುಲಾಮರಾಗಿ ಪರಿವರ್ತನೆಗೊಂಡರು.

ಮಧ್ಯಯುಗದಲ್ಲಿ ಗುಲಾಮಗಿರಿ

ಕ್ರಿ.ಶ.೫ನೆಯ ಶತಮಾನದಲ್ಲಿ ಕ್ರೈಸ್ತಧರ್ಮವನ್ನು ರೋಮನ್ ಸಾಮ್ರಾಜ್ಯಕ್ಕೆ ಪರಿಚಯಿಸಲಾಗಿ ಅಲ್ಲಿ ಅದನ್ನು ಸಾಮ್ರಾಜ್ಯದ ಧರ್ಮವಾಗಿ ಅಳವಡಿಸಿಕೊಳ್ಳಲಾಯಿತು. ಅಲ್ಲಿಂದ ಅದು ಯುರೋಪಿನಾದ್ಯಂತ ಹಾಗೂ ಮಧ್ಯಪ್ರಾಚ್ಯ ದೇಶಗಳಲ್ಲಿ ಹರಡಿತು. ಇಂದರಿಂದಾಗಿ ಗುಲಾಮರ ಸ್ಥಾನಮಾನಗಳು ಉತ್ತಮಗೊಳ್ಳುವ ಅವಕಾಶಗಳು ಹೆಚ್ಚಾಗಿದ್ದರೂ ಗುಲಾಮಗಿರಿಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಲಿಲ್ಲ. ಇದೇ ಸಮಯದಲ್ಲಿ ರೋಮನ್ ಸಾಮ್ರಾಜ್ಯವು ಜರ್ಮನಿಯ ಗೋಥಿಕ್ ಬುಡಕಟ್ಟಿನವರ ದಾಳಿಗೆ ತುತ್ತಾಗಿ ನಾಶವಾಗತೊಡಗಿದಾಗ ಪ್ರಾಚೀನ ಕಾಲದ ಗುಲಾಮಗಿರಿ ಸಂಸ್ಥೆಯು ಹೆಚ್ಚು ನಿಯಂತ್ರಣವಿಲ್ಲದ ಜೀತದ ಸಂಸ್ಥೆಯಾಗಿ ಮಾರ್ಪಟ್ಟಿತು. ಏಳನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದ ಇಸ್ಲಾಂ ಧರ್ಮವು ಸಹ ಗುಲಾಮಗಿರಿ ಸಂಸ್ಥೆಯನ್ನು ಪ್ರಾರಂಭದಲ್ಲಿ ಮಾನ್ಯತೆ ಮಾಡಿತು. ಮಹಮದ್ ಪೈಗಂಬರ್ ತನ್ನ ಅನುಯಾಯಿಗಳಿಗೆ ಗುಲಾಮರನ್ನು ಕರುಣೆಯಿಂದ ನೋಡಿಕೊಳ್ಳುವುದಕ್ಕೆ ಆದೇಶಿಸಿದ್ದ. ಅದರಿಂದಾಗಿ ಮುಸ್ಲಿಂ ಯಜಮಾನರ ಬಳಿಯಲ್ಲಿದ್ದ ಗುಲಾಮರು ಬೇರೆ ಗುಲಾಮರಿಗಿಂತ ಚೆನ್ನಾಗಿದ್ದರು. ಹೆಚ್ಚಿನ ಗುಲಾಮರನ್ನು ಮನೆ ಕೆಲಸಗಳಿಗಾಗಿ ನಿಯೋಜಿಸಿಕೊಳ್ಳಲಾಗಿತ್ತು.

ಆಧುನಿಕ ಕಾಲದಲ್ಲಿ ಗುಲಾಮಗಿರಿ

ಕ್ರಿ.ಶ.೧೫ ಮತ್ತು ೧೬ನೆಯ ಶತಮಾನದಲ್ಲಿ ಯುರೋಪಿಯನ್ನರು ಭೌಗೋಳಿಕ ಅನ್ವೇಷಣೆ ಕೈಗೊಂಡ ಪರಿಣಾಮವಾಗಿ ಆಫ್ರಿಕಾದ ಪಶ್ಚಿಮ ಮತ್ತು ಪೂರ್ವ ತೀರ ಪ್ರದೇಶಗಳನ್ನು ಹಾಗೂ ಉತ್ತರ ಮತ್ತು ದಕ್ಷಿಣ ಅಮೆರಿಕಾವನ್ನು ಕಂಡುಹಿಡಿದರು. ನಂತರ ಅಲ್ಲಿ ತಮ್ಮ ವಸಾಹತುಗಳನ್ನು ೩೦೦ ವರ್ಷಗಳ ಕಾಲ ಸ್ಥಾಪಿಸುವುದರೊಂದಿಗೆ ಗುಲಾಮರ ವ್ಯಾಪಾರಕ್ಕೆ ಹೆಚ್ಚು ಒತ್ತು ನೀಡಲಾಯಿತು. ಪೋರ್ಚುಗಲ್ ಕೃಷಿ ಕಾರ್ಮಿಕರ ಕೊರತೆಯಿಂದಾಗಿ ಯುರೋಪ್ ದೇಶಗಳಲ್ಲಿಯೇ ಪ್ರಥಮ ಬಾರಿಗೆ ತನ್ನ ಕೃಷಿ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ೧೪೪೪ರಲ್ಲಿ ವಿದೇಶಗಳಿಂದ ಗುಲಾಮರನ್ನು ಆಮದು ಮಾಡಿಕೊಂಡಿತು. ೧೪೬೦ರಲ್ಲಿ ಆಫ್ರಿಕಾದ ವ್ಯಾಪಾರ ಕೇಂದ್ರಗಳಿಂದ ವರ್ಷಕ್ಕೆ ಸರಾಸರಿ ೭೦೦ರಿಂದ ೮೦೦ ಗುಲಾಮರನ್ನು ಆಮದು ಮಾಡಿಕೊಂಡರು. ಈ ಗುಲಾಮರು ಆಫ್ರಿಕಾದವರಾಗಿದ್ದು ಇತರ ಆಫ್ರಿಕನ್ನರಿಂದ ಸೆರೆ ಹಿಡಿದು ಪಶ್ಚಿಮ ಆಫ್ರಿಕಾದ ಬಂದರುಗಳಿಗೆ ಕಳಿಸುತ್ತಿದ್ದರು. ಪೋರ್ಚುಗಲ್ ನಂತರ ಈ ಪದ್ಧತಿಯನ್ನು ಸ್ಪೈನ್ ಅಳವಡಿಸಿಕೊಂಡಿತು. ಆದರೆ ಗುಲಾಮರ ವ್ಯಾಪಾರದಲ್ಲಿ ಅಂತಿಮವಾಗಿ ಪೋರ್ಚುಗಲ್ ಏಕಸ್ವಾಮ್ಯತೆಯನ್ನು ಸಾಧಿಸಿತು. ಹದಿನೈದನೇ ಶತಮಾನದುದ್ದಕ್ಕೂ ಉತ್ತರ ಆಫ್ರಿಕಾದ ಆರಬ್ ವರ್ತಕರು ಮಧ್ಯ ಆಫ್ರಿಕಾದಿಂದ ಸೆರೆ ಹಿಡಿದು ತಂದವರನ್ನು ಅರೆಬಿಯಾ, ಇರಾನ್ ಮತ್ತು ಭಾರತಕ್ಕೆ ಹಡಗಿನಲ್ಲಿ ರಪ್ಪು ಮಾಡುತ್ತಿದ್ದರು. ಹದಿನಾರನೇ ಶತಮಾನದಲ್ಲಿ ಲ್ಯಾಟಿನ್ ಅಮೆರಿಕಾದಲ್ಲಿ ಸ್ಪೈನ್ ವಸಾಹತುಗಾರರು ಸ್ಥಳೀಯ ಜನರನ್ನು ಕೃಷಿ ಕೆಲಸಗಳಿಗೆ ಒತ್ತಾಯಪೂರ್ವಕವಾಗಿ ಬಳಸಿಕೊಂಡರು. ಸ್ಥಳೀಯ ಜನರು ಗುಲಾಮಗಿರಿ ಪದ್ಧತಿಗೆ ಹೊಂದಿಕೊಳ್ಳದಿದ್ದರಿಂದಲೂ ಹಾಗೂ ಯುರೋಪಿನ ಕಾಯಿಲೆಗಳಿಗೆ ತುತ್ತಾಗಿ ಅವರ ಜನಸಂಖ್ಯೆ ಕಡಿಮೆಯಾಗತೊಡಗಿದ್ದರಿಂದ ಅವರ ಜಾಗದಲ್ಲಿ  ಆಫ್ರಿಕಾದ ನೀಗ್ರೋ ಗಳನ್ನು ಆಮದು ಮಾಡಿಕೊಳ್ಳಲಾರಂಭಿಸಿದರು.

ಹದಿನಾರನೆಯ ಶತಮಾನದ ಕೊನೆಯ ಭಾಗದಲ್ಲಿ ಇಂಗ್ಲೆಂಡ್ ಕೂಡಾ ಗುಲಾಮರ ವ್ಯಾಪಾರದಲ್ಲಿ ತೊಡಗಿಸಿಕೊಂಡಿತು. ಇದರ ನಂತರ ಫ್ರಾನ್ಸ್, ಹಾಲೆಂಡ್, ಡೆನ್ಮಾರ್ಕ್ ಮತ್ತು ಅಮೆರಿಕಾದ ವಸಾಹತುಗಳು ಈ ವ್ಯಾಪಾರದಲ್ಲಿ ಸ್ಪರ್ಧಾಳುಗಳಾಗಿ ಸ್ಪರ್ಧಿಸಲಾರಂಭಿಸಿ ದವು. ಕ್ರಿ.ಶ.೧೭೧೩ರಲ್ಲಿ ಇಂಗ್ಲೆಂಡಿನ ಸೌಥ್ ಸಿ ಕಂಪನಿಯು ಸ್ಪೈನಿನ ವಸಾಹತುಗಳಿಗೆ ಗುಲಾಮರನ್ನು ಪೂರೈಸುವ ಹಕ್ಕನ್ನು ಪಡೆಯಿತು. ಅಮೆರಿಕಾದಲ್ಲಿ ನೀಗ್ರೋಗಳನ್ನು ಗುಲಾಮರನ್ನಾಗಿ ಬಳಸಿರುವುದಕ್ಕೆ ಅಷ್ಟೇನೂ ಪ್ರಾಚೀನತೆಯಿಲ್ಲ. ಉತ್ತರ ಅಮೆರಿಕಾದ ವರ್ಜೀನಿಯಾದ ಜೇಮ್ಸ್ ಟೌನ್‌ನಲ್ಲಿ ೧೬೧೯ರಲ್ಲಿ ಮೊದಲ ಬಾರಿಗೆ ಆಫ್ರಿಕಾದ ೨೦ ಗುಲಾಮರು ಪಾದಾರ್ಪಣೆ ಮಾಡಿದರು. ಪ್ರಾರಂಭದಲ್ಲಿ ಅವರ ಸಂಖ್ಯೆ ಕಡಿಮೆಯಿದ್ದುದರಿಂದ ಅವರ ಹಕ್ಕು ಬಾಧ್ಯತೆಗಳ ಬಗ್ಗೆ ನಿರ್ಧರಿಸುವ ಅವಶ್ಯಕತೆ ಇರಲಿಲ್ಲ. ವರ್ಜೀನಿಯಾದಲ್ಲಿ ಗುಲಾಮರ ಹಕ್ಕು ಬಾಧ್ಯತೆಗಳನ್ನು ಗುರುತಿಸುವ ಕೆಲಸ ಪ್ರಾರಂಭವಾಯಿತು. ಹದಿನೇಳನೇ ಶತಮಾನದುದ್ದಕ್ಕೂ ಆಫ್ರಿಕಾದ ನೀಗ್ರೋಗಳನ್ನು ಅಮೆರಿಕಾದಲ್ಲಿ ನಿಧಾನಗತಿಯಲ್ಲಿ ನಿಯೋಜಿಸಿಕೊಳ್ಳಲಾಗಿತ್ತು.

ಹದಿನೇಳನೆಯ ಶತಮಾನದ ಕೊನೆಯ ಭಾಗದಲ್ಲಿ ಅಮೆರಿಕಾದ ದಕ್ಷಿಣ ವಸಾಹತುಗಳಲ್ಲಿ ಪ್ಲಾಂಟೇಷನ್ ವ್ಯವಸ್ಥೆಯ ಬೆಳವಣಿಗೆಯೊಂದಿಗೆ ಕೃಷಿ ಚಟುವಟಿಕೆಗಳಿಗಾಗಿ ಆಫ್ರಿಕಾದ ಗುಲಾಮರ ಸಂಖ್ಯೆಯು ಬೆಳೆಯತೊಡಗಿತು. ಇದರಿಂದಾಗಿ ಹಲವಾರು ಉತ್ತರ ಅಮೆರಿಕಾದ ವಸಾಹತುಗಳ ತೀರ ಪ್ರದೇಶವು ಗುಲಾಮರ ವ್ಯಾಪಾರ ಕೇಂದ್ರಗಳಾಗಿ ಬೆಳೆಯಲಾರಂಭಿಸಿದವು. ಸಾಮಾನ್ಯವಾಗಿ ಉತ್ತರದ ವಸಾಹತುಗಳಲ್ಲಿ ಗುಲಾಮರನ್ನು ಮನೆಯ ಕೆಲಸಗಳಿಗೂ ಮತ್ತು ದಕ್ಷಿಣದ ವಸಾಹತುಗಳಲ್ಲಿ ಪ್ಲಾಂಟೇಷನುಗಳಲ್ಲಿ ಕೃಷಿ ಕೆಲಸಗಾರರನ್ನಾಗಿ ನೇಮಿಸಿಕೊಳ್ಳಲಾಗಿತ್ತು. ಅಮೆರಿಕಾದ ಬ್ರಿಟಿಷ್ ವಸಾಹತುಗಳಲ್ಲಿ ಅದರಲ್ಲೂ ದಕ್ಷಿಣದ ವಸಾಹತುಗಳಲ್ಲಿ ಕೃಷಿಯು ಅಲ್ಲಿಯ ಆರ್ಥಿಕತೆಯ ಬೆನ್ನೆಲು ಬಾಗಿದ್ದರಿಂದ ಹೆಚ್ಚೆಚ್ಚು ಗುಲಾಮರನ್ನು ಅಲ್ಲಿ ನಿಯೋಜಿಸಿಕೊಂಡಿದ್ದರು. ಇದರಿಂದಾಗಿ ಅವರಿಗೆ ಸಂಬಂಧಿಸಿದಂತೆ ಕೆಲವು ಕಾನೂನು ಕಾಯಿದೆಗಳನ್ನು ಮಾರ್ಪಡಿಸಲಾಯಿತು. ಅಮೆರಿಕಾ ಕ್ರಾಂತಿಯ ಸಮಯದಲ್ಲಿ ಅವರು ಪೂರ್ಣ ಪ್ರಮಾಣದ ಗುಲಾಮರಾಗಿ ಮಾರ್ಪಟ್ಟಿದ್ದರು.

ಗುಲಾಮಗಿರಿಯು ಕ್ರಿ.ಶ.೧೭ನೆಯ ಶತಮಾನದ ಆದಿ ಭಾಗದಿಂದ ಕ್ರಿ.ಶ.೧೮೬೫ರವರೆಗೆ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಕೃಷಿ ಉತ್ಪಾದನೆಯಲ್ಲಿ ಪ್ರಮುಖ ಪಾತ್ರವಹಿಸಿತ್ತು. ಆದರೆ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಒತ್ತಾಯದ ಕಾರ್ಮಿಕರನ್ನು ಕೃಷಿ ಬೆಳೆಗಳನ್ನು ಉತ್ಪಾದಿಸಲು ಬಳಸಲಾಗುತ್ತಿತ್ತು. ಪ್ರಾದೇಶಿಕ ಹವಾಮಾನಕ್ಕೆ ಅನುಗುಣವಾಗಿ ಸಕ್ಕರೆ, ತಂಬಾಕು, ಕಾಫಿ ಮತ್ತು ಹತ್ತಿ ಬೆಳೆಗಳನ್ನು ಬೆಳೆಯಲು ಇವರನ್ನು ಹೆಚ್ಚಾಗಿ ಬಳಸಲಾಗು ತ್ತಿತ್ತು. ದಕ್ಷಿಣದ ರಾಜ್ಯಗಳಲ್ಲಿ ಹತ್ತಿ ಮತ್ತು ತಂಬಾಕು ಪ್ರಮುಖ ಬೆಳೆಗಳಾಗಿದ್ದು, ಅವುಗಳನ್ನು ಬೆಳೆಯಲು ಅಲ್ಲಿಯ ಮಣ್ಣು ಉತ್ತಮವಾಗಿದ್ದರಿಂದ ಹೆಚ್ಚು ಕೃಷಿ ಕೆಲಸಕ್ಕೆ ಗುಲಾಮರನ್ನು ನಿಯೋಜಿಸಲಾಗಿತ್ತು. ಇಲ್ಲಿಯ ಗುಲಾಮರೆಲ್ಲರೂ ಆಫ್ರಿಕಾದ ನೀಗ್ರೋಗಳಾಗಿದ್ದರೆ ಭೂಮಾಲೀಕರು ಯುರೋಪಿನ ಬಿಳಿಯರಾಗಿದ್ದರು.

ಈ ಸಮಯದಲ್ಲಿ ಇಂಗ್ಲಿಷ್ ವಸಾಹತುಗಾರರು ಎರಡು ರೀತಿಯ ಗುಲಾಮರನ್ನು ತಮ್ಮ ಕೃಷಿ ಚಟುವಟಿಕೆಗಳಿಗೋಸ್ಕರ ನಿಯೋಜಿಸಿಕೊಂಡಿದ್ದರು. ಅವರೆಂದರೆ ಸ್ಥಳೀಯ ಗುಲಾಮರು ಮತ್ತು ಯುರೋಪಿನಿಂದ ಒಪ್ಪಂದದ ಮೇಲೆ ಕರೆತಂದ ಸೇವಕರು. ಸ್ಥಳೀಯ ಗುಲಾಮರು ಸಾಮಾನ್ಯವಾಗಿ ಎಲ್ಲಾ ವಸಾಹತುಗಳಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದರು. ಯುದ್ಧದಲ್ಲಿ ಸೋತ ಸೈನಿಕರನ್ನು ಮತ್ತು ಜನರನ್ನು ಕೆರಿಬಿಯನ್ನರಿಗೆ ಮಾರಲಾಗುತ್ತಿತ್ತು. ಒಪ್ಪಂದದ ಮೇಲೆ ಕರೆತಂದ ಸೇವಕರು ಅಮೆರಿಕಾದಲ್ಲಿ ಗುಲಾಮಗಿರಿಯು ಬೆಳೆಯುವಲ್ಲಿ ಪ್ರಮುಖವಾದ ಪಾತ್ರ ವಹಿಸಿದ್ದರು. ಇವರು ಯುರೋಪ್ ದೇಶದ ಬಡ ಕುಟುಂಬಗಳಿಗೆ ಸೇರಿದವರಾಗಿದ್ದು ಅಲ್ಲಿಯ ಕಠಿಣ ಪರಿಸ್ಥಿತಿಗಳಿಂದ ತಪ್ಪಿಸಿಕೊಳ್ಳುವುದಕ್ಕೋಸ್ಕರ ಅಮೆರಿಕಾಕ್ಕೆ ನಾಲ್ಕೈದು ವರ್ಷಗಳ ಅವಧಿಯ ಸೇವೆಯಲ್ಲಿ ಹೋಗುತ್ತಿದ್ದರು. ಅವರಲ್ಲಿ ಪ್ರಮುಖರೆಂದರೆ ಇಂಗ್ಲೆಂಡ್, ಐರ್ಲೆಂಡ್, ವೇಲ್ಸ್ ಮತ್ತು ಜರ್ಮನಿಗೆ ಸೇರಿದವರು. ಇವರು ೧೭ನೆಯ ಶತಮಾನದ ಮೊದಲ ಭಾಗದಲ್ಲಿ ದಕ್ಷಿಣದ ಕಾಲೋನಿಗಳಲ್ಲಿ ಹೆಚ್ಚಾಗಿ ಕೃಷಿ ಕಾರ್ಮಿಕರಾಗಿ ತಾತ್ಕಾಲಿಕ ಸೇವೆಯಲ್ಲಿದ್ದು, ನಂತರ ವಲಸೆಗಾರರಾಗಿ ಮಾರ್ಪಟ್ಟರು.

೧೮ನೆಯ ಶತಮಾನದ ಮಧ್ಯಭಾಗದ ಸಮಯದಲ್ಲಿ ಅಮೆರಿಕಾದ ಗುಲಾಮಗಿರಿಯ ಕೆಲವು ಲಕ್ಷಣಗಳನ್ನು ಹೊಂದಲಾರಂಭಿಸಿತು. ಅವುಗಳೆಂದರೆ:

೧. ದಕ್ಷಿಣದ ವಸಾಹತುಗಳಲ್ಲಿ ಶೇಕಡ ೯೦ರಷ್ಟು ಕರಿಯ ಗುಲಾಮರು ಇದ್ದರು. ಆದರೆ ಉತ್ತರದ ವಸಾಹತುಗಳಲ್ಲಿ ಕರಿಯರು ಕಡಿಮೆಯಿದ್ದರು. ದಕ್ಷಿಣದ ವಸಾಹತುಗಳಲ್ಲಿ ಕರಿಯ ಗುಲಾಮರು ದೊಡ್ಡ ಪ್ರಮಾಣದ ಅಲ್ಪಸಂಖ್ಯಾತರಾಗಿದ್ದರು.

೨. ಅಮೆರಿಕಾದ ವಸಾಹತುಗಳಲ್ಲಿ ಗುಲಾಮರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಬೆಳೆಯತೊಡಗಿದರೆ ಇತರ ರಾಷ್ಟ್ರಗಳಲ್ಲಿ ಅವರ ಸಾವಿನ ಪ್ರಮಾಣ ಜನನ ಪ್ರಮಾಣಕ್ಕಿಂತ ಹೆಚ್ಚಾಗಿತ್ತು. ಗುಲಾಮರ ಆಯಾತವನ್ನು ನಿರ್ಬಂಧಿಸಿದ ಮೇಲೆ ಗುಲಾಮರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಬೆಳೆಯತೊಡಗಿತು. ಮುಂದಿನ ೫೦ ವರ್ಷಗಳಲ್ಲಿ ಅವರ ಸಂಖ್ಯೆಯು ಮೂರು ಪಟ್ಟು ಬೆಳೆಯಿತು. ಇದರಿಂದಾಗಿ ಆಫ್ರಿಕಾದ ಗುಲಾಮರಿಂದ ಆಫ್ರಿಕಾ-ಅಮೆರಿಕಾ ಗುಲಾಮರಿಗೆ ಮಾರ್ಪಾಟಾಗಲು ಸಹಾಯಕವಾಯಿತು. ಅಮೆರಿಕಾದಲ್ಲಿ ಹುಟ್ಟಿದ ಗುಲಾಮರ ಸಂಖ್ಯೆ ಅಧಿಕವಾಗ ತೊಡಗಿತು. ಇದರಿಂದಾಗಿ ಕೆಲವು ಪರಿಣಾಮಗಳಾದವು. ಉದಾಹರಣೆಗೆ ಆಫ್ರಿಕಾದಿಂದ ಕರೆತಂದ ಯುವ ಗುಲಾಮರು ಅವರ ದೈಹಿಕ ಅರ್ಹತೆಯ ಮೇಲೆ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಅಮೆರಿಕಾದಲ್ಲಿಯೇ ಹುಟ್ಟಿದ ಗುಲಾಮರು ಚಿಕ್ಕಂದಿನಿಂದಲೇ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಂಡು ಭೂಮಿಯಲ್ಲಿ ಕೆಲಸ ನಿರ್ವಹಿಸಲಾರಂಭಿಸಿದರು.

ಅಮೆರಿಕಾದ ವಸಾಹತುಗಳಲ್ಲಿ ಗುಲಾಮಗಿರಿಯು ಬಹಳ ಬೇಗ ಹರಡಿತು. ಪ್ರಾರಂಭ ದಲ್ಲಿ ಆಫ್ರಿಕನ್ನರಿಗೆ ಅಮೆರಿಕಾದ ವಸಾಹತುಗಳಲ್ಲಿ ಅಷ್ಟಾಗಿ ರಕ್ಷಣೆ ಇರಲಿಲ್ಲ. ಆದರೆ ೧೬೬೦ರ ನಂತರ ವಸಾಹತುಗಳಲ್ಲಿ ಗುಲಾಮಗಿರಿಗೆ ಸಂಬಂಧಿಸಿದಂತೆ ಕೆಲವು ಕಾನೂನುಗಳನ್ನು ರೂಪಿಸಲಾರಂಭಿಸಿದವು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಕಪ್ಪು ಗುಲಾಮರು ಮತ್ತು ಗುಲಾಮರ ಹೆಂಗಸರಿಗೆ ಹುಟ್ಟಿದ ಮಕ್ಕಳು ಜೀವನಪರ್ಯಂತ ವಸಾಹತುಗಳಲ್ಲಿ ಸೇವೆ ಮಾಡುವುದು. ಕ್ರಿ.ಶ.೧೭೭೦ರ ವೇಳೆಗೆ ಇವರ ಸಂಖ್ಯೆ ಶೇಕಡ ೪೦ರಷ್ಟು ದಕ್ಷಿಣದ ವಸಾಹತುಗಳಲ್ಲಿತ್ತು. ದಕ್ಷಿಣ ಕೆರೊಲಿನಾದಲ್ಲಿ ಇವರ ಸಂಖ್ಯೆಯು ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟು ಇತ್ತು. ಇವರು ವಿವಿಧ ರೀತಿಯ ಕೆಲಸಗಳನ್ನು ಅಂದರೆ ಕಾಡನ್ನು ಕಡಿದು ಕೃಷಿಗೆ ಭೂಮಿಯನ್ನು ಸಿದ್ಧಪಡಿಸುವುದು, ಮಾರ್ಗದರ್ಶಕರಾಗಿ, ಕರಕುಶಲರಾಗಿ, ದಾದಿಯರಾಗಿ ಮತ್ತು ಮನೆ ಕೆಲಸದವರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರಲ್ಲಿ ಹೆಚ್ಚಾಗಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುವವರಿದ್ದರು. ವಾಣಿಜ್ಯ ಬೆಳೆಗಳಾದ ತಂಬಾಕು, ಹತ್ತಿ ಮತ್ತು ಆಹಾರ ಧಾನ್ಯಗಳನ್ನು ಬೆಳೆಯುವ ಭತ್ತ, ಗೋಧಿ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದರು. ಉತ್ತರದ ವಸಾಹತುಗಳಲ್ಲಿ ಕೃಷಿಯು ಹವಾಮಾನ ಮತ್ತು ಮಣ್ಣಿನ ವೈಪರೀತ್ಯಗಳಿಂದಾಗಿ ಹೆಚ್ಚಾಗಿ ಅಭಿವೃದ್ದಿ ಹೊಂದಲಿಲ್ಲ. ಆದರೆ ದಕ್ಷಿಣದ ವಸಾಹತುಗಳಲ್ಲಿ ಕೃಷಿ ಚಟುವಟಿಕೆಗಳು ಹೆಚ್ಚಾಗಿ ಬೆಳೆಯಲಾರಂಭಿಸಿ ಗುಲಾಮರು ಹೆಚ್ಚು ಬೇಡಿಕೆಯಲ್ಲಿದ್ದರು.

ಪ್ಲಾಂಟೇಷನ್ ಆರ್ಥಿಕತೆ, ಗುಲಾಮಗಿರಿ ಮತ್ತು ಹೊಸ ಜಗತ್ತು

ಗುಲಾಮಗಿರಿಯು ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಬೆಳವಣಿಗೆಯ ಜೊತೆಗೆ ಬೆಳೆಯತೊಡಗಿತು. ೧೭೯೩ರ ಮುಂಚೆ ಸಂಯುಕ್ತ ಸಂಸ್ಥಾನಗಳಲ್ಲಿ ಹತ್ತಿಯನ್ನು ಕಡಿಮೆ ಪ್ರಮಾಣದಲ್ಲಿ ಬೆಳೆಯಲಾಗುತ್ತಿತ್ತು. ಇದಕ್ಕೆ ಮುಖ್ಯ ಕಾರಣ ಹತ್ತಿಯಿಂದ ಬೀಜವನ್ನು ಕೈಯಿಂದ ಬೇರ್ಪಡಿಸಿ ಸ್ವಚ್ಛ ಮಾಡುವುದು ತುಂಬಾ ವಿಳಂಬವಾಗುತ್ತಿದ್ದರಿಂದ ಹೆಚ್ಚಿರಲಿಲ್ಲ. ಆದಾಯ ಕಡಿಮೆಯಿದ್ದರಿಂದ ರೈತರು ಹತ್ತಿಯನ್ನು ಹೆಚ್ಚಾಗಿ ಬೆಳೆಯುತ್ತಿರಲಿಲ್ಲ. ಆದರೆ ಕೆಲವು ರೈತರು(ಪ್ಲಾಂಟರುಗಳು) ಸೀ-ಐಲ್ಯಾಂಡ್ ಎಂಬ ಹೊಸ ತಳಿಯ ಹತ್ತಿಯನ್ನು ಬೆಳೆಯಲಾರಂಭಿಸಿದರು. ಇದು ಸ್ವಚ್ಛ ಮಾಡುವುದಕ್ಕೆ ಸುಲಭವಾಗಿದ್ದರಿಂದ ಅದನ್ನು ಹೆಚ್ಚಾಗಿ ಬೆಳೆಯಲಾರಂಭಿಸಿದರು. ಇದನ್ನು ಬೆಳೆಯಲು ವಿಶೇಷ ವಾತಾವರಣದ ಮಣ್ಣು ಬೇಕಾಗಿತ್ತು. ಇಂತಹ ಮಣ್ಣು ಸಮುದ್ರದ ಹತ್ತಿರದಲ್ಲಿ ಸಾಕಷ್ಟು ಪ್ರಮಾಣದಲ್ಲಿತ್ತು. ೧೭೯೩ರಲ್ಲಿ ಕನೆಕ್ಟಿಕಟ್‌ನ ಎಲಿ ವ್ಹಿಟ್ನಿ ಎಂಬುವವನು ಕಾಟನ್(ಹತ್ತಿ) ಜಿನ್ ಎಂಬ ಯಂತ್ರವನ್ನು ಕಂಡುಹಿಡಿದನು. ಈ ಹತ್ತಿ ಜಿನ್ ಯಂತ್ರವನ್ನು ಬಳಸಿ ಹತ್ತಿಯಿಂದ ಅದರ ಬೀಜವನ್ನು ಬಹಳ ಸುಲಭವಾಗಿ ಅತ್ಯಲ್ಪ ಸಮಯದಲ್ಲಿ ಬೇರ್ಪಡಿಸುವಲ್ಲಿ ಯಶಸ್ವಿ ಯಾದರು. ಈ ಯಂತ್ರವನ್ನು ಕಂಡುಹಿಡಿಯದಿದ್ದರೆ ಹತ್ತಿ ಬೆಳೆಯುವುದನ್ನು ಅಷ್ಟಾಗಿ ಕಾಣಲಾಗುತ್ತಿರಲಿಲ್ಲ. ಇದಕ್ಕೆ ಬದಲಾಗಿ ಬಹುಶಃ ತಂಬಾಕನ್ನು ಹೆಚ್ಚಾಗಿ ಬೆಳೆಯು ತ್ತಿದ್ದರೇನೋ. ಆದರೆ ಜಿನ್ ಯಂತ್ರವನ್ನು ಕಂಡುಹಿಡಿದ ಮೇಲೆ ತಂಬಾಕು ಲಾಭದಾಯಕ ಬೆಳೆಯಾಗದೇ ಕೆಲವೇ ಪ್ರದೇಶಗಳಿಗೆ ಸೀಮಿತಗೊಂಡಿತು. ತಂಬಾಕು ಬೆಳೆಯುವುದರಿಂದ ಮಣ್ಣಿನ ಫಲವತ್ತತೆಯು ಹಾಳಾಗಿ ರೈತರು ದಿವಾಳಿಯಾಗತೊಡಗಿದರು. ಕಬ್ಬು ಮತ್ತು ಭತ್ತದ ಬೆಳೆಗಳು ಲಾಭದಾಯಕವಾಗಿದ್ದರೂ ಅವುಗಳನ್ನು ಸಮತಟ್ಟಾದ  ಪ್ರದೇಶಗಳಲ್ಲಿ ಮತ್ತು ನೀರಾವರಿ ಸೌಲಭ್ಯಗಳಿರುವ ಕಡೆ ಮಾತ್ರ ಬೆಳೆಯಲಾಗುತ್ತಿತ್ತು. ಇಂತಹ ಪ್ರದೇಶಗಳಲ್ಲಿ ಮತ್ತು ನೀರಾವರಿ ಸೌಲಭ್ಯಗಳಿರುವ ಕಡೆ ಮಾತ್ರ ಬೆಳೆಯಲಾಗುತ್ತಿತ್ತು. ಇಂತಹ ಪರಿಸ್ಥಿತಿಗಳಲ್ಲಿ ಗುಲಾಮಗಿರಿಯನ್ನು ನಿಧಾನಗತಿಯಲ್ಲಿ ಸ್ವಾಭಾವಿಕವಾಗಿಯೇ ತೊಡೆದುಹಾಕಬಹುದಿತ್ತು. ಈ ಸಂದರ್ಭದಲ್ಲಿ ದಕ್ಷಿಣದ ಹೆಚ್ಚಿನ ಭೂಮಾಲೀಕರು ಗುಲಾಮಗಿರಿಯು ಒಂದು ಅನಿಷ್ಟ ಹಾಗೂ ಅನೈತಿಕ ಸಾಮಾಜಿಕ ಸಂಸ್ಥೆಯೆಂದು ಭಾವಿಸಿದ್ದರು.

ಇಂತಹ ವಾತಾವರಣ ೧೭೯೩ರ ನಂತರ ಬದಲಾಗತೊಡಗಿತು. ಈ ಸಮಯದಲ್ಲಿ ಹೊಸಯಂತ್ರ ಮತ್ತು ಹೊಸ ತಳಿಯ ಹತ್ತಿಯನ್ನು ಬೆಳೆಯಲು ದಕ್ಷಿಣದ ರಾಜ್ಯಗಳಾದ ಜಾರ್ಜಿಯಾ, ದಕ್ಷಿಣ ಕೆರೊಲಿನಾದಿಂದ ಪಶ್ಚಿಮದಲ್ಲಿ ಟೆಕ್ಸಾಸ್‌ವರೆಗೆ ಮಣ್ಣು ಬಹಳ ಸೂಕ್ತವಾಗಿತ್ತು. ಇದಲ್ಲದೇ ಇಂಗ್ಲೆಂಡಿನಲ್ಲಿ ಹತ್ತಿ ಗಿರಣಿಗಳ ಬೆಳವಣಿಗೆಯಿಂದಾಗಿ ಹತ್ತಿಗೆ ಎಲ್ಲಿಲ್ಲದ ಬೇಡಿಕೆಯುಂಟಾಯಿತು. ಇದರಿಂದಾಗಿ ಹತ್ತಿ ಬೆಳೆಗಾರರಿಗೆ ನಿರ್ದಿಷ್ಟವಾದ ಮಾರುಕಟ್ಟೆಯನ್ನು ಒದಗಿಸಿತು. ಹತ್ತಿಯನ್ನು ಬೆಳೆಯು ಗುಲಾಮಗಿರಿಗೆ ಹೆಚ್ಚಿನ ಕೌಶಲ್ಯ, ನೈಪುಣ್ಯತೆ ಬೇಕಾಗಿರಲಿಲ್ಲ. ನೂರಾರು ಕರಿಯರನ್ನು ಓರ್ವ ಬಿಳಿಯ ಮಧ್ಯವರ್ತಿ ನಿರ್ವಹಿಸಬಹುದಿತ್ತು. ಭತ್ತ ಮತ್ತು ಕಬ್ಬಿನ ಬೆಳೆಗಳಿಗೆ ಹೋಲಿಸಿದರೆ ಹತ್ತಿ ಬೆಳೆಯನ್ನು ದೊಡ್ಡ ಮತ್ತು ಚಿಕ್ಕ ಭೂ ಹಿಡುವಳಿದಾರರು ಹೆಚ್ಚು ಖರ್ಚಿಲ್ಲದೆ ಬೆಳೆಯ ಬಹುದಾಗಿತ್ತು. ಅಮೆರಿಕಾದ ಅಂತರ್ಯುದ್ಧದ ಸಮಯದವರೆಗೂ ಅರ್ಧಕ್ಕಿಂತ ಹೆಚ್ಚಿನ ಬೆಳೆಯು ಹತ್ತಿಗೆ ಮೀಸಲಾಗಿದ್ದಿತು. ಹತ್ತಿಯ ಜಿನ್‌ನಿಂದಾಗಿ ದಕ್ಷಿಣದ ರಾಜ್ಯಗಳಲ್ಲಿ ಹೆಚ್ಚಾಗಿ ಕೃಷಿಕರು ಹೆಚ್ಚು ಲಾಭ ಪಡೆಯಲಾಗಿ ಗುಲಾಮಗಿರಿಯು ಸಮಾಜದ ಅನೈತಿಕ ಸಂಸ್ಥೆಯಾಗದೇ ಒಂದು ಲಾಭದಾಯಕ ಆರ್ಥಿಕ ಸಂಸ್ಥೆಯಾಗಿ ಬೆಳೆಯತೊಡಗಿತು. ಪೂರ್ವದಿಂದ ಪಶ್ಚಿಮಕ್ಕೆ ಸುಮಾರು ೧೦೦೦ ಮೈಲಿಗಳ ಉದ್ದ ಹಾಗೂ ೨೦೦ರಿಂದ ೭೦೦ ಮೈಲಿಗಳ ಅಗಲದ ಪ್ರದೇಶದಲ್ಲಿ ಹತ್ತಿ ಬೆಳೆಯನ್ನು ಬೆಳಯಲಾಗುತ್ತಿತ್ತು. ಹತ್ತಿ ಬೆಳೆಯುವ ಪ್ರಮುಖ ರಾಜ್ಯಗಳೆಂದರೆ ದಕ್ಷಿಣ ಕೆರೋಲಿನಾ, ಜಾರ್ಜಿಯಾ, ಟೆನೆಸ್ಸಿ, ಅಲಭಾಮ, ಮಿಸ್ಸಿಸಿಪ್ಪಿ, ಲೌಸಿಯಾನ, ಅರ್ಕಾನ್ಸಾಸ್, ಫ್ಲೋರಿಡಾ, ಟೆಕ್ಸಾಸ್ ಮತ್ತಿತರ ರಾಜ್ಯಗಳು. ಈ ಎಲ್ಲ ರಾಜ್ಯಗಳಲ್ಲಿ ಹತ್ತಿ ಬೆಳೆಯುವವರು ಪ್ರಮುಖವಾಗಿ ಗುಲಾಮರಾಗಿದ್ದರು. ಕ್ರಿ.ಶ.೧೭೯೦ ರಿಂದ ೧೮೬೦ರ ಸಮಯದಲ್ಲಿ ಸುಮಾರು ಒಂದು ಮಿಲಿಯನ್ ಗುಲಾಮರು ಪಶ್ಚಿಮದ ರಾಜ್ಯಗಳಿಗೆ ವಲಸೆ ಹೋದರಲ್ಲದೇ ಅದಕ್ಕಿಂತ ಎರಡು ಪಟ್ಟು ಆಫ್ರಿಕನ್ನರನ್ನು ಅಮೆರಿಕಾಕ್ಕೆ ಆಮದು ಮಾಡಿಕೊಳ್ಳಲಾಯಿತು. ಹೀಗಾಗಿ ಗುಲಾಮರ ಸಂಖ್ಯೆ ಅಧಿಕಗೊಂಡಂತೆ ಅವರಲ್ಲಿ ವೈವಿಧ್ಯತೆಗಳು ಸಹ ಹುಟ್ಟಿಕೊಂಡವು. ಈ ವೈವಿಧ್ಯತೆಗಳು ಪ್ರಾಂತ್ಯ, ಬೆಳೆ ಮತ್ತು ಭೂಹಿಡುವಳಿಯ ಪ್ರಮಾಣದ ಮೇಲೆ ಆಧರಿಸಿದ್ದವು. ಚಿಕ್ಕ ಭೂಹಿಡುವಳಿಗಳಲ್ಲಿ ಗುಲಾಮರು ಅವರ ಮಾಲೀಕರೊಡನೆ ಹೆಚ್ಚು ಸಂಪರ್ಕವಿಟ್ಟುಕೊಂಡಿದ್ದರು. ಆದರೆ ದೊಡ್ಡ ಭೂಹಿಡುವಳಿಗಳಲ್ಲಿ ಗುಲಾಮರಿಗೆ ಅವರ ಮಾಲೀಕರ ಸಂಪರ್ಕವಿರದೇ ಕೇವಲ ಮಾಲೀಕರ ಮಧ್ಯವರ್ತಿಗಳ ಮುಖಾಂತರ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಿದ್ದರು.

ಗುಲಾಮಗಿರಿಯಲ್ಲಿ ಹಲವಾರು ವೈವಿಧ್ಯತೆಗಳಿದ್ದರೂ ಕೆಲವು ಪ್ರಮುಖ ಬೆಳವಣಿಗೆಗಳು ಈ ಅವಧಿಯಲ್ಲಿ ಕಂಡುಬಂದವು. ಅವುಗಳೆಂದರೆ:

೧. ಗುಲಾಮಗಿರಿಯು ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಪ್ರಚಲಿತ ದಲ್ಲಿತ್ತು. ೧೮೬೦ರಲ್ಲಿ ಕೇವಲ ಶೇಕಡ ೫ರಷ್ಟು ಗುಲಾಮರು ಪಟ್ಟಣಗಳಲ್ಲಿದ್ದರೆ, ಉಳಿದ ಶೇಕಡ ೯೫ರಷ್ಟು ಗುಲಾಮರು ಗ್ರಾಮೀಣ ಪ್ರದೇಶಗಳಲ್ಲಿದ್ದರು.

೨. ದೊಡ್ಡ ಪ್ರಮಾಣದ ಭೂಹಿಡುವಳಿಗಳು ಹೆಚ್ಚಾಗಿ ದಕ್ಷಿಣದ ರಾಜ್ಯಗಳಲ್ಲಿ ಭೂಮಾಲೀಕರು ಎಸ್ಟೇಟುಗಳಲ್ಲಿ ವಾಸಿಸುತ್ತಿರಲಿಲ್ಲ. ಬದಲಾಗಿ ಅವರ ಮಧ್ಯವರ್ತಿಗಳು ಇರುತ್ತಿದ್ದರು. ೪. ಆರೋಗ್ಯವಂತ ಯುವ ಗುಲಾಮರು ಹೆಚ್ಚಾಗಿ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದರು. ಇಂತಹ ಪ್ರದೇಶಗಳಲ್ಲಿ ಅವರು ಹೆಚ್ಚಾಗಿ ಹತ್ತಿ, ತಂಬಾಕು, ಭತ್ತ, ಕಾಳು, ಗೋಧಿ ಮತ್ತು ಕಬ್ಬು ಬೆಳೆಗಳನ್ನು ಬೆಳೆಯುತ್ತಿದ್ದರು.

ಭೂಮಾಲೀಕರು ತಮ್ಮ ಸಂಪತ್ತನ್ನು(ಭೂಮಿಯನ್ನು) ಹೆಚ್ಚಿಸಿಕೊಳ್ಳುವುದಕ್ಕೋಸ್ಕರ ಮತ್ತು ಅದನ್ನು ಸಂರಕ್ಷಿಸಿಕೊಳ್ಳುವುದಕ್ಕೋಸ್ಕರ ಗುಲಾಮರಿಗೆ ಆಹಾರ, ಬಟ್ಟೆ, ಮನೆ ಮತ್ತು ಔಷಧಿಗಳನ್ನು ನೀಡಿ ಉಪಚರಿಸುತ್ತಿದ್ದರು. ಇಂತಹ ಉಪಚಾರವು ಆಂತರಿಕ ಯುದ್ಧಕ್ಕಿಂತ ಮೊದಲು ಚೆನ್ನಾಗಿತ್ತು. ಗುಲಾಮರ ದಿನನಿತ್ಯದ ಜೀವನದಲ್ಲಿ ಮಾಲೀಕರು ಮೂಗು ತೂರಿಸುತ್ತಿದ್ದರು. ಅವರ ವೈವಾಹಿಕ ಜೀವನಕ್ಕೂ ಸಹ ಅವರ ಒಪ್ಪಿಗೆ ಬೇಕಾಗಿತ್ತು. ಕೆಲವು ಮಾಲೀಕರು ಲಿಖಿತ ಕಾನೂನು ಕಟ್ಟಲೆಗಳನ್ನು ಮಾಡಿಕೊಂಡು ಅವರನ್ನು ಹೆದರಿಸುವುದಲ್ಲದೆ ಶಿಕ್ಷಿಸುತ್ತಿದ್ದರು. ಅವರ ಹೆಂಗಸರನ್ನು ಸಹ ತಮ್ಮ ಸ್ವಂತ ಆಸ್ತಿಯೆಂದು ಪರಿಗಣಿಸಿ ಲೈಂಗಿಕವಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದರು. ಇದರಿಂದಾಗಿ ಗುಲಾಮರು ತಮ್ಮ ಮಾಲೀಕರು ಹೇಳಿದ ಮತ್ತು ಕೊಟ್ಟ ಕೆಲಸ ಮಾಡುವುದಕ್ಕೆ ಹಿಂಜರಿಯುತ್ತಿರಲಿಲ್ಲ. ಆದರೆ ಅವರು ಹೆದರುತ್ತಿದ್ದುದು ಅವರಿಗೆ ಸ್ವಾತಂತ್ರ್ಯ ಇಲ್ಲದಿ ದ್ದುದು ಹಾಗೂ ಅವರ ವೈಯಕ್ತಿಕ ಜೀವನದ ಮೇಲೆ ಆದರ ಇರಲಿಲ್ಲ. ಇದನ್ನು ಅವರು ವಿರೋಧಿಸಲಾರಂಭಿಸಿ ಅವರಿಗೆ ಸ್ವಾಯತ್ತತೆಯನ್ನು ಹೊಂದಲು ಹವಣಿಸುತ್ತಿದ್ದರು. ಅದೇ ಸಮಯದಲ್ಲಿ ಅವರ ಮಾಲೀಕರು ಅದನ್ನು ತಡೆಯಲು ಪ್ರಯತ್ನಿಸುತ್ತಿದ್ದರು. ಇಂತಹ ಪ್ರಯತ್ನಗಳು, ವಿರೋಧಗಳು ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಬೇರೆಯಾಗಿದ್ದವು.

ಉತ್ತರ ಅಮೆರಿಕಾದ ರಾಜ್ಯಗಳಲ್ಲಿ ಹಾಗೂ ಯುರೋಪ್ ಖಂಡದಲ್ಲಿ ಬಟ್ಟೆ ಉತ್ಪಾದನೆಯಲ್ಲಿ ಉಂಟಾದ ಅಧಿಕ ಹೆಚ್ಚಳದಿಂದಾಗಿ ಅಮೆರಿಕಾದ ದಕ್ಷಿಣ ರಾಜ್ಯಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಹತ್ತಿಯನ್ನು ಬೆಳೆಯಲಾರಂಭಿಸಿದರು. ದಕ್ಷಿಣದ ರಾಜ್ಯಗಳಲ್ಲಿ ಕೈಗಾರಿಕೆಗಳು ಇಲ್ಲದಿದ್ದ ಕಾರಣ ಅಲ್ಲಿಯ ಆರ್ಥಿಕತೆಯು ಹೆಚ್ಚಾಗಿ ಭೂಮಿಯ ಮೇಲೆ ಆಧಾರವಾಗಿತ್ತು. ಇದರಿಂದಾಗಿ ದಕ್ಷಿಣದ ಭೂಮಾಲೀಕರು ತಮ್ಮ ಆರ್ಥಿಕತೆಯನ್ನು ಬಲಪಡಿಸಿಕೊಳ್ಳಲು ಅಧಿಕ ಪ್ರಮಾಣದಲ್ಲಿ ಗುಲಾಮರನ್ನು ನಿಯೋಜಿಸಿಕೊಂಡು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲಾರಂಭಿಸಿದರು. ದಕ್ಷಿಣದ ರಾಜ್ಯಗಳಲ್ಲಿ ಕೇವಲ ಶೇ.೧೦ ಜನಸಂಖ್ಯೆ ಪಟ್ಟಣಗಳಲ್ಲಿತ್ತು. ಉಳಿದ ಶೇ.೯೦ ಜನಸಂಖ್ಯೆ ಗ್ರಾಮೀಣ ಪ್ರದೇಶಗಳಲ್ಲಿದ್ದು ಹೆಚ್ಚಾಗಿ ಕೃಷಿಯನ್ನು ಅವಲಂಬಿಸಿದ್ದರು. ಇದಕ್ಕೆ ಹೋಲಿಸಿದರೆ ಉತ್ತರದ ರಾಜ್ಯಗಳಲ್ಲಿ ಕೈಗಾರಿಕರಣ ಪ್ರಾರಂಭವಾಗಿ ಅಲ್ಲಿಯ ಆರ್ಥಿಕತೆಯು ಮಾರುಕಟ್ಟೆಯ ಆರ್ಥಿಕ ಲಕ್ಷಣಗಳನ್ನು ಹೊಂದಿತ್ತು. ಇದಲ್ಲದೇ ಇಲ್ಲಿ ಶೇ.೨೫ರಷ್ಟು ಜನಸಂಖ್ಯೆ ಪಟ್ಟಣಗಳಲ್ಲಿ ವಾಸವಿದ್ದು, ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿದ್ದರು. ಇದರಿಂದಾಗಿ ಉತ್ತರದ ರಾಜ್ಯಗಳಲ್ಲಿ ಆರ್ಥಿಕತೆಯು ಗುಲಾಮಗಿರಿಯನ್ನು ಆಧರಿಸಿರಲಿಲ್ಲ. ಇವುಗಳಲ್ಲದೇ ದಕ್ಷಿಣದ ರಾಜ್ಯಗಳಲ್ಲಿ ರಸ್ತೆ, ರೈಲು ಸಂಪರ್ಕ, ಸಾರ್ವಜನಿಕ ವಿದ್ಯಾಭ್ಯಾಸ ಮತ್ತು ಸಾಕ್ಷರತೆಯ ಕೊರತೆಯಿಂದಾಗಿ ಆಧುನಿಕತೆಯ ಲಕ್ಷಣಗಳಿಂದ ದೂರವಾ