ಒಳಿತಿನ ಅಕ್ಷ

ಬೊಲಿವಿಯಾದಲ್ಲಿ ಇವೋ ಮೊರೇಲೆಸ್ ಅವರ ವಿಜಯದಿಂದ ಒಂದು ‘ಒಳಿತಿನ ಅಕ್ಷ’ (ಆಕ್ಸಿಸ್ ಆಫ್ ಗೂಡ್) ಲ್ಯಾಟಿನ್ ಅಮೆರಿಕಾದಲ್ಲಿ ಏರ್ಪಟ್ಟಿದೆ ಎಂದು ಅಧ್ಯಕ್ಷ ಚವೇಝ್ ವರ್ಣಿಸಿದರು. ಇದಕ್ಕೆ ಮೊದಲು ಚವೇಝ್ ೧೯೯೮ರಲ್ಲಿ ಗೆದ್ದಾಗ ನಲ್ವತ್ತು ವರ್ಷಗಳು ಆದ (ಕ್ಯೂಬಾ ಕ್ರಾಂತಿಯ) ನಂತರ ಮೊದಲ ಮುನ್ನಡೆ ಸಂಭವಿಸಿದೆ ಎಂದು ಫಿಡೆಲ್ ಕಾಸ್ಟ್ರೋ ಟಿಪ್ಪಣಿ ಮಾಡಿದ್ದರಂತೆ. ವಿಜಯದ ಸುದ್ದಿ ಕೇಳಿದಾಗ

ನಾನು ಚವೇಝ್ ಅನುಯಾಯಿಯಷ್ಟೇ ಅಲ್ಲ. ಕಾಸ್ಟ್ರೋ ಅವರ ಮತ್ತು ಚೆ ಅವರ ಅನುಯಾಯಿ ಕೂಡ

ಎಂದ ಮೊರೇಲೆಸ್

ಲ್ಯಾಟಿನ್ ಅಮೆರಿಕಾದಲ್ಲಿ ಈಗಾಗಲೆ ಹಲವು ಪ್ರಗತಿಪರ ಅಧ್ಯಕ್ಷರು ಗಳಿದ್ದಾರೆ. ಫಿಡೆಲ್ ಮತ್ತು ಚವೇಝ್‌ರಂತಹ ಅಧ್ಯಕ್ಷರಷ್ಟೇ ಅಲ್ಲ. ಕಿರ್ಚ್‌ನರ್(ಅರ್ಜೆಂಟಿನಾದಲ್ಲಿ) ಲೂಲಾ (ಬ್ರೆಜಿಲ್) ಮತ್ತು ಟಬರೇಝ್ ವಾಸ್ಕ್ವೆಝ್ (ಉರುಗ್ವೆ)…. ನನಗೊಂದು ಸಮಗ್ರೀಕರಣದ ಕಣ್ಣೋಟವಿದೆ. ಯುರೋಪಿಯನ್ ಒಕ್ಕೂಟದಂತೆ, ಒಂದೇ ಮಾರುಕಟ್ಟೆ, ಒಂದೇ ಕರೆನ್ಸಿ, ದೊಡ್ಡ ಕಂಪೆನಿಗಳೆಲ್ಲ ಪ್ರಭುತ್ವಕ್ಕೆ ಒಳಪಟ್ಟಿರುವ ಕಣ್ಣೋಟ

ಎಂದು ಸಂದರ್ಶನವೊಂದರಲ್ಲಿ ತಿಳಿಸಿದರು. ಬೊಲಿವಿಯಾ ದೇಶದ ಸ್ಥಾಪಕ ಸಿಮೊನ್ ಬೊಲಿವೇರ್ ಮೂಲತಃ ವೆನಿಜುಲಾದವರು. ಈಗ ವೆನಿಜುಲಾ ‘ಬೊಲಿವೇರಿಯನ್’ ಗಣತಂತ್ರ ಎಂದು ಮರುನಾಮಕರಣಗೊಂಡಿದೆ. ಚವೇಝ್ ಅಷ್ಟಕ್ಕೆ ನಿಂತಿಲ್ಲ. ಅಮೆರಿಕಾ ಸಂಯುಕ್ತ ಸಂಸ್ಥಾನಗಳ ನೇತೃತ್ವದ ಎಫ್.ಟಿ.ಎ.ಎ(ಅಮೆರಿಕಾಗಳ ಮುಕ್ತ ವ್ಯಾಪಾರ ಪ್ರದೇಶ)ದ ಬದಲು ಅಲ್ಬಾ(ಅಮೆರಿಕಾಗಳ ಬೊಲಿವೇರಿಯನ್ ಪರ್ಯಾಯ) ರಚಿಸಿದ್ದಾರೆ. ಲ್ಯಾಟಿನ್ ಅಮೆರಿಕಾದ ದೇಶಗಳು ಒಂದೊಂದಾಗಿ ಅದನ್ನು ಸೇರುತ್ತಿವೆ. ಪಾಶ್ಚಿಮಾತ್ಯ ಮಾಧ್ಯಮಗಳ ಅಪಪ್ರಚಾರವನ್ನು ಎದುರಿಸಲು ಲ್ಯಾಟಿನ್ ಅಮೆರಿಕನ್ ದೇಶಗಳ ‘ಟೆಲಿಸೂರ್’ ಎಂಬ ಉಪಗ್ರಹ ಟೀವಿ ಚಾನೆಲ್ ಆರಂಭಗೊಂಡಿದೆ. ಐಎಂಎಫ್ /ವಿಶ್ವಬ್ಯಾಂಕ್‌ಗೆ ಬದಲಿಯಾಗಿ ತಮ್ಮದೇ ಬ್ಯಾಂಕ್ ರಚಿಸಬೇಕು ಎಂದೂ ಅವರು ಸೂಚಿಸಿದ್ದಾರೆ.

ಈಗಾಗಲೇ ಕ್ಯೂಬಾದೊಂದಿಗೆ ಮಾಡಿಕೊಂಡ ಒಪ್ಪಂದದಂತೆ ೪೦,೦೦೦ ಕ್ಯೂಬನ್ ವೈದ್ಯರು, ಆರೋಗ್ಯ ಕಾರ್ಯಕರ್ತರು ಮತ್ತು ಶಿಕ್ಷಕರು ವೆನಿಜುಲಾದ ಬಡಜನರಿಗೆ ಆರೋಗ್ಯ ಸೇವೆ, ಶಿಕ್ಷಣ ಒದಗಿಸುತ್ತಿದ್ದಾರೆ. ಮೊರೇಲೆಸ್ ಅಧ್ಯಕ್ಷರಾದ ಕೂಡಲೇ ನಡೆದ ಕ್ಯೂಬಾ-ಬೊಲಿವಿಯಾ ಒಪ್ಪಂದದ ಪ್ರಕಾರ ಬೊಲಿವಿಯಾದಲ್ಲಿ ಜುಲೈನಲ್ಲಿ ಆರಂಭವಾದ ಸಾಕ್ಷರತಾ ಆಂದೋಲನಕ್ಕೆ ಕ್ಯೂಬಾ ತಾಂತ್ರಿಕ ಮತ್ತು ಮಾನವ ಸಂಪನ್ಮೂಲಗಳನ್ನು ಒದಗಿಸಿದೆ. ‘ಒಂದೂವರೆ ವರ್ಷದೊಳಗೆ ಪ್ರತಿಯೊಬ್ಬ ಬೊಲಿವಿಯನ್ ಓದಲು ಕಲಿತಿರು ತ್ತಾನೆ’ ಎಂದು ಮೊರೆಲೆಸ್ ಈ ಆಂದೋಲನದ ಬಗ್ಗೆ ಹೇಳಿದ್ದಾರೆ. ೫೦೦೦ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪೂರ್ಣ ವಿದ್ಯಾರ್ಥಿವೇತನ ನೀಡುವುದಾಗಿಯೂ ಕ್ಯೂಬಾ ಭರವಸೆ ನೀಡಿದೆ.

ಈ ಬಲವಾದ ‘ಒಳಿತನ ಅಕ್ಷ’ದ ಸುತ್ತ ಇತರ ಎಡ ಒಲವಿನ ಅಧ್ಯಕ್ಷರುಗಳು ಸೈದ್ಧಾಂತಿಕ ಕಾರಣಗಳಿಗೆ ಅಥವಾ ಸ್ವಂತ ಹಿತಾಸಕ್ತಿಗಳಿಂದಾದರೂ ಈ ಅಕ್ಷರ ಭಾಗವಾಗುವ ಸಾಧ್ಯತೆಯಿದೆ. ಹೀಗಾದರೆ ಲ್ಯಾಟಿನ್ ಅಮೆರಿಕಾದ ಚಿತ್ರವೇ ಬದಲಾಗಬಹುದು ಎಂಬುದು ರಾಜಕೀಯ ವೀಕ್ಷಕರ ಅಭಿಪ್ರಾಯ. ಪೆರುವಿನಲ್ಲಿ ಎಡ ಒಲವಿನ ಅಭ್ಯರ್ಥಿಯನ್ನು ಸೋಲಿಸಿ ಗೆದ್ದ ಅಲನ್ ಗಾರ್ಸಿಯಾ ಕೂಡಾ ಚವೇಝ್‌ರನ್ನು ಹೊಗಳುತ್ತಿರುವುದು ಇಂತಹ ನಿರೀಕ್ಷೆಯನ್ನು ಮೂಡಿಸಿದೆ.

ಇನ್ನೊಂದೆಡೆ ಹಿಂದಿನ ಅನುಭವಗಳು ಹಾಗೂ ಈಗಿನ ವಿಶ್ವದ ಕಠೋರ ವಾಸ್ತವತೆಗಳು ಈ ನಿರೀಕ್ಷೆಗಳಿಗೆ ಲಗಾಮನ್ನೂ ಹಾಕುತ್ತಿವೆ. ಚವೇಝ್ ಆಗಲಿ, ಮೊರೇಲೆಸ್ ಆಗಲಿ ಕ್ಯೂಬಾದಂತೆ ಮುಂದೊತ್ತಲು ಈಗಿನ ವಾತಾವರಣದಲ್ಲಿ ಸಾಧ್ಯವೇ ಎಂಬ ಪ್ರಶ್ನೆಯೂ ಎದ್ದಿದೆ.

ಇಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನಗಳ(ಯು.ಎಸ್.ಎ) ಪ್ರಶ್ನೆಯೂ ಬರುತ್ತದೆ. ಲ್ಯಾಟಿನ್ ಅಮೆರಿಕಾದ ಆರ್ಥಿಕದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ೨೦ ದೊಡ್ಡ ಕಂಪನಿಗಳಲ್ಲಿ ೧೦ ಅಮೆರಿಕಾ ಸಂಯುಕ್ತ ಸಂಸ್ಥಾನದ್ದು. ನೋಮ್ ಚೋಮ್‌ಸ್ಕಿಯವರು ಹೇಳುವಂತೆ ಲ್ಯಾಟಿನ್ ಅಮೆರಿಕಾದ ಈ ಬೆಳವಣಿಗೆಗಳಿಗೆ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಸ್ವಾಗತವಿಲ್ಲ. ವಾಸ್ತವವಾಗಿ ಅದು ಭಯಭೀತಗೊಂಡಿದೆ ಎನ್ನುತ್ತಾರೆ ಅವರು. ಏಕೆಂದರೆ ಸಂಪನ್ಮೂಲಗಳಿಗೆ, ಮಾರುಕಟ್ಟೆಗಳಿಗೆ ಹಾಗೂ ಹೂಡಿಕೆಯ ಅವಕಾಶಗಳಿಗೆ ಲ್ಯಾಟಿನ್ ಅಮೆರಿಕಾವೇ ಅದಕ್ಕೆ ಭದ್ರ ನೆಲೆ. ಇದರ ಮೇಲೆ ಹತೋಟಿಯಿಟ್ಟುಕೊಳ್ಳಬೇಕು ಎಂಬುದಕ್ಕೆ ಅಲ್ಲಿಯ ಆಡಳಿತಗಾರರು ದೀರ್ಘಕಾಲದಿಂದ ಒತ್ತು ನೀಡುತ್ತಾ ಬಂದಿದ್ದಾರೆ. ಈ ಗೋಳಾರ್ಧವೇ ನಮ್ಮ ಹತೋಟಿಯಲ್ಲಿರದಿದ್ದರೆ ಬೇರೆಡೆಯೂ ಜನ ಧಿಕ್ಕರಿಸಿ ನಿಲ್ಲುತ್ತಾರಲ್ಲ ಎಂಬ ಭಯವೂ ಇದೆ ಎಂದು ಅವರು ಟಿಪ್ಪಣಿ ಮಾಡಿದ್ದಾರೆ.

ಲ್ಯಾಟಿನ್ ಅಮೆರಿಕಾವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಅಮೆರಿಕಾ ಸಂಯುಕ್ತ ಸಂಸ್ಥಾನ ಎರಡು ವಿಧಗಳನ್ನು ಅನುಸರಿಸುತ್ತಾ ಬಂದಿದೆ. ಒಂದು ಹಿಂಸಾಚಾರ, ಇನ್ನೊಂದು ಆರ್ಥಿಕ ಅಸ್ತ್ರ. ಇವೆರಡೂ ಈಗ ದುರ್ಬಲಗೊಳ್ಳುತ್ತಿವೆ ಎನ್ನುತ್ತಾರೆ ಚೋಮ್‌ಸ್ಕಿ. ಹಿಂಸಾಚಾರದ ಅಸ್ತ್ರ ದುರ್ಬಲಗೊಂಡಿರುವುದಕ್ಕೆ ೨೦೦೨ರಲ್ಲಿ ಚವೇಝ್‌ರನ್ನು ಮಿಲಿಟರಿ ಕ್ಷಿಪ್ರಕ್ರಾಂತಿಯ ಮೂಲಕ ಪದಚ್ಯುತಗೊಳಿಸುವ ಪ್ರಯತ್ನದ ವಿಫಲತೆಯೇ ಉದಾಹರಣೆ ಎನ್ನುತ್ತಾರೆ ಅವರು. ಇನ್ನು ಆರ್ಥಿಕ ಅಸ್ತ್ರವೂ ದುರ್ಬಲವಾಗಿರುವುದಕ್ಕೆ ಅರ್ಜೆಂಟೈನಾ ಉಜ್ವಲ ಉದಾಹರಣೆ. ಅದು ಐ.ಎಂ.ಎಫ್‌ನ ‘ಪೋಸ್ಟರ್ ಶಿಶು’ವಾಗಿತ್ತು. ಅಂದರೆ ಮಾದರಿ ದೇಶವಾಗಿತ್ತು. ಆದರೆ ಐ.ಎಂ.ಎಫ್ ನೀತಿಗಳನ್ನು ಅನುಸರಿಸಿದ ಫಲವಾಗಿ ಅವರ ಆರ್ಥಿಕ ಪೂರ್ಣವಾಗಿ ಕುಸಿಯಿತು. ಈಗ ಅವರು ಐ.ಎಂ.ಎಫ್ ನಿಯಮಗಳನ್ನು ತೀವ್ರವಾಗಿ ಮುರಿದು ಅದರಿಂದ ಹೊರಬಂದರು. ಅಂತಾರಾಷ್ಟ್ರೀಯ ಹೂಡಿಕೆದಾರರು, ಐ.ಎಂ.ಎಫ್ ಕೂಡಾ ಏನೂ ಮಾಡಲಾಗಲಿಲ್ಲ, ಸಾಲ ತೀರಿಸಲು ನಿರಾಕರಿಸಿದರೂ ಏನೂ ಮಾಡಲಾಗಲಿಲ್ಲ. ಅರ್ಜೆಂಟೈನಾ, ವಾಸ್ತವವಾಗಿ ಅರ್ಜೆಂಟೈನಾದ ಅಧ್ಯಕ್ಷ ‘ನಾವು ಐ.ಎಂ.ಎಫ್ ಸಹವಾಸದಿಂದ ದೂರ ಹೋಗುತ್ತೇವೆ’ ಎಂದರು. ಅಂದರೆ ಅಮೆರಿಕ ಸಂಯುಕ್ತ ಸಂಸ್ಥಾನದ ಆರ್ಥಿಕ ಕತ್ತು ಹಿಸುವಿಕೆಯಿಂದ ಅಷ್ಟೇ ಸಾಲದೆಂಬಂತೆ ವೆನಿಜುಲಾ ಅವರ ಸಾಲದ ಬಹುಪಾಲನ್ನು ಖರೀದಿಸಿತು. ಬಹುಶ ಬೊಲಿವಿಯಾ ಅದನ್ನೇ ಮಾಡಬಹುದು. ಐ.ಎಂ.ಎಫ್.ನ್ನು ದೂರ ಮಾಡುವುದು ಎಂದರೆ ಯು.ಎಸ್.ಎ.ದ ಆರ್ಥಿಕ ಅಸ್ತ್ರದಿಂದ ಪಾರಾಗುವುದು ಎನ್ನುತ್ತಾರೆ ಚೋಮ್‌ಸ್ಕಿ.ಆದರೆ ನೇರ ಹಸ್ತಕ್ಷೇಪ ವಿಫಲವಾದ ನಂತರ ಯು.ಎಸ್.ಎ. ಬುಡಮೇಲು ಪ್ರಯತ್ನಗಳತ್ತ ಗಮನ ನೀಡಬಹುದು ಎಂದೂ ಚೋಮ್‌ಸ್ಕಿ ಎಚ್ಚರಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಲ್ಯಾಟಿನ್ ಅಮೆರಿಕಾದಲ್ಲಿ ಮಿಲಿಟರಿ ಸಿಬ್ಬಂದಿಗಳು, ನೆಲೆಗಳು ಮತ್ತು ಸೇನಾಧಿಕಾರಿಗಳ ತರಬೇತಿ ಪ್ರಮಾಣ ತೀವ್ರವಾಗಿ ಹೆಚ್ಚುತ್ತಿದೆ. ಈಗ ಲ್ಯಾಟಿನ್ ಅಮೆರಿಕಾದಲ್ಲಿ ಅವರ ನೆರವು ಕಾರ್ಯಕ್ರಮಗಳಲ್ಲಿ ಇರುವ ಇಬ್ಬಂದಿಗಿಂತ ಈ ಮಿಲಿಟರಿ ವಲಯದಲ್ಲಿಯೇ ಹೆಚ್ಚು ಸಿಬ್ಬಂದಿಯಿದ್ದಾರೆ ಎನ್ನುತ್ತಾರೆ ಅವರು.

ಕೊಲಂಬಿಯಾದಲ್ಲಿ ಇದು ಎದ್ದು ಕಾಣುತ್ತದೆ. ಕೊಲಂಬಿಯಾ ಅತಿ ಹೆಚ್ಚು ಕೊಕೇನ್ ಬೆಳೆಯುವ ಪ್ರದೇಶ. ಆದ್ದರಿಂದ ಅಲ್ಲಿ ಕೊಕೇನ್ ಮಾದಕ ದ್ರವ್ಯ ಸಾಗಣಿಕೆ ವಿರುದ್ಧ ಸಮರದ ಹೆಸರಿನಲ್ಲಿ ಯು.ಎಸ್.ಎ. ಮತ್ತು ಐ.ಎಂ.ಎಫ್.ಗಳ ಮೂಲಕ ೭೦೦ ರಿಂದ ೧೦೦೦ ಕೋಟಿ ಡಾಲರುಗಳಷ್ಟು ನೆರವನ್ನು ‘ಪ್ಲಾನ್ ಕೊಲೊಂಬಿಯಾ’ ಹೆಸರಿನಲ್ಲಿ ನೀಡಲಾಗಿದೆ. ಇದರಲ್ಲಿ ಮಿಲಿಟರಿ ನೆರವಿನದೇ ಸಿಂಹಪಾಲು. ವಾಸ್ತವವಾಗಿ ಇದು ಮಾದಕ ದ್ರವ್ಯಗಳ ವಿರುದ್ಧ ಸಮರಕ್ಕಾಗಿ ಅಲ್ಲ. ಏಕೆಂದರೆ ಮಾದಕ ದ್ರವ್ಯಗಳ ಚಟುವಟಿಕೆ ದೇಶದ ಉತ್ತರ ಭಾಗದಲ್ಲೇ ಹೆಚ್ಚು. ಆದರೆ ಈ ‘ಸಮರ’ಕ್ಕೆ ಗುರಿಮಾಡಿರುವುದು ದಕ್ಷಿಣ ಭಾಗವನ್ನು. ಇದು ವೆನಿಜುಲಾಕ್ಕೆ ಹೊಂದಿಕೊಂಡಂತಿರುವ ಭಾಗ. ಇಲ್ಲಿ ಹಿಂದೆ ಹೇಳಿದ ಎಫ್.ಎ.ಆರ್.ಸಿ ಮತ್ತು ಇ.ಪಿ.ಎಲ್.ನೆಲೆಗಳಿವೆ. ಇದೇ ರೀತಿ ಪೆರು ಮತ್ತು ಬೊಲಿವಿಯಾದ ಬಲಪಂಥೀಯರಿಗೆ ಮಿಲಿಟರಿ ನೆರವು ನೀಡಲಾಗುತ್ತಿದೆ. ಇದೇ ಹೆಸರಿನಲ್ಲಿ ಬುಡಮೇಲು ಕೃತ್ಯಗಳಿಗಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಬೊಲಿವಿಯಾಕ್ಕೆ ಯು.ಎಸ್.ಎ.ನಿಂದ ೧೫ ಕೋಟಿ ಡಾಲರುಗಳಷ್ಟು ಮಿಲಿಟರಿ ಮತ್ತು ‘ಸಾಮಾಜಿಕ ನೆರವು’ ಹರಿದು ಬಂದಿದೆಯಂತೆ. ಬೊಲಿವಿಯಾದ ಉನ್ನತ ಸೇನಾಧಿಕಾರಗಳೆಲ್ಲಾ ಅಮೆರಿಕಾದಲ್ಲಿ ತರಬೇತಿ ಪಡೆದವರು ಎಂಬುದು ಗಮನಾರ್ಹ.

ಒಟ್ಟಿನಲ್ಲಿ ಸ್ವತಂತ್ರ ಸರಕಾರಗಳನ್ನು ಅಸ್ಥಿರಗೊಳಿಸುವುದು, ತಮ್ಮ ಗಿರಾಕಿ ಸರಕಾರ ಗಳಿಗೆ ಊರುಗೋಲಾಗುವುದು ಹಾಗೂ ಎಡಕ್ಕೆ ವಾಲುತ್ತಿರುವ ರಾಜಕೀಯ ಪಕ್ಷಗಳು ಬಲಕ್ಕೆ ತಿರುಗುವಂತೆ ಒತ್ತಡ ಹಾಕುವುದು ಮತ್ತು ಬೆಳೆಯುತ್ತಿರುವ ಜನಪರ ಆಂದೋಲನಗಳನ್ನು ನಾಶ ಮಾಡುವುದು ಅಥವಾ ಏಕಾಂಗಿಯಾಗಿಸುವುದು- ಈ ತಂತ್ರ ವನ್ನು ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಆಳರಸರು ಇದುವರೆಗೆ ಅನುಸರಿಸಿಕೊಂಡು ಬಂದಿದ್ದಾರೆ ಎಂಬುದು ಸ್ಪಷ್ಟ.

ಇಪ್ಪತ್ತೊಂದನೆಯ ಶತಮಾನ ಸಮಾಜವಾದದತ್ತ?

ವೆನಿಜುಲಾ ಚವೇಝ್ ನಾಯಕತ್ವದಲ್ಲಿ ಲ್ಯಾಟಿನ್ ಅಮೆರಿಕದ ಪ್ರತಿಭಟನೆ, ಪ್ರತಿರೋಧ ಮತ್ತು ಜನ-ಪರ ಬದಲಾವಣೆಯ ಅಲೆಯ ಕ್ರೋಢೀಕರಣ ಮತ್ತು ನಾಯಕತ್ವದ ಜವಾಬ್ದಾರಿ ಮಾತ್ರ ವಹಿಸುತ್ತಿಲ್ಲ. ‘ಒಳಿತಿನ ಪಕ್ಷ’ ಕಟ್ಟುವುದರಲ್ಲಿ ಮಾತ್ರ ಮಗ್ನವಾಗಿಲ್ಲ. ಇನ್ನೂ ಮುಂದುವರಿದು ಸಾಮಾಜಿಕ ವ್ಯವಸ್ಥೆಯಲ್ಲಿ ಹೊಸ ಮೂಲಭೂತ ಪ್ರಯೋಗಗಳನ್ನು ಮಾಡಲಾರಂಭಿಸಿದೆ.

ಜಗತ್ತಿನಲ್ಲೆಲ್ಲಾ ಖಾಸಗೀಕರಣದ ಭರಾಟೆ ನಡೆಯುತ್ತಾ ಇದೆ. ಆದರೆ ವೆನಿಜುಲಾದಲ್ಲಿ ರಾಷ್ಟ್ರೀಕರಣದ ಭರಾಟೆ. ಹೆಚ್ಚಿನ ದೇಶಗಳಲ್ಲಿ ಇದ್ದಬದ್ದ ಭೂ ಸುಧಾರಣೆಗಳನ್ನು ಗಾಳಿಗೆ ತೂರಲಾಗುತ್ತಿದೆ. ಇಲ್ಲಿಯ ದೊಡ್ಡ ಖಾಸಗಿ ಎಸ್ಟೇಟ್‌ಗಳನ್ನು ಭೂಹೀನ ಬಡವರಿಗೆ ಹಂಚಲಾಗುತ್ತಿದೆ. ಕಾರ್ಮಿಕರು ದಶಕಗಳ ಕಾಲ ಹೋರಾಟದಲ್ಲಿ ಪಡೆದ ಟ್ರೇಡ್ ಯೂನಿಯನ್ ಹಕ್ಕುಗಳು ನಶಿಸಿ ಹೋಗದಿರುವ ದೇಶ ಇಲ್ಲ. ಆದರೆ ವೆನಿಜುಲಾದಲ್ಲಿ ಕಾರ್ಮಿಕರ ಕೌನ್ಸಿಲ್‌ಗಳು ಮುಚ್ಚಿರುವ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳ ನಿರ್ವಹಣೆ ವಹಿಸಲು ಮುಂದಾಗಿವೆ. ಅತ್ಯಂತ ದೀರ್ಘ, ‘ಪ್ರಬುದ್ಧ’ ಪ್ರಜಾಸತ್ತಾತ್ಮಕ ವ್ಯವಸ್ಥೆ ಇರುವ ದೇಶಗಳಲ್ಲೂ ಜನರ ನಿಜವಾದ ಪಾಲ್ಗೊಳ್ಳುವಿಕೆ, ದೇಶದ ಆಗುಹೋಗುಗಳ ಮೇಲೆ ನಿಜವಾದ ನಿಯಂತ್ರಣ ಹೆಸರಿಗೆ ಮಾತ್ರ ಇದೆ. ಈ ದೇಶದಲ್ಲಿ ಸರ್ಕಾರದ ಪೂರ್ಣ ಕುಮ್ಮಕ್ಕಿನ ಜತೆಗೆ, ಹಳೆಯ ಬೂರ್ಜ್ವಾ, ಅಧಿಕಾರಶಾಹಿ ಪ್ರಭುತ್ವವನ್ನು ನಾಶಗೊಳಿಸುತ್ತಿವೆ. ‘ಸಮುದಾಯ ಕೌನ್ಸಿಲ್’ಗಳಿಗೆ ಅಧಿಕಾರ ವಿಕೇಂದ್ರೀಕರಣ, ಆಯಾ ಪ್ರದೇಶಗಳಲ್ಲಿ ಎಲ್ಲಾ ಆಗುಹೋಗುಗಳ ಮೇಲೆ ಕೌನ್ಸಿಲ್ ನಿಯಂತ್ರಣ ಹೊಂದುವ ಬದಲಾವಣೆಯನ್ನು ಸರ್ಕಾರದ ನಾಯಕತ್ವದಲ್ಲಿ ನಡೆಸಲಾಗುತ್ತದೆ. ಹೊಸ ಮಾದರಿಯ ‘ಜನತಾ ಪ್ರಭುತ್ವ’ವನ್ನು ಕಟ್ಟಲಾಗುತ್ತಿದೆ.

ಸಮಾಜವಾದಿ ಎಡಪಕ್ಷಗಳು ಒಂದೋ ಬಲಗುಂದುತ್ತಿವೆ ಅಥವಾ ಸಿದ್ಧಾಂತ ಬಿಟ್ಟು ಬೂರ್ಜ್ವಾ ಪಕ್ಷಗಳಂತೆ ಆಗುತ್ತಿವೆ. ಆದರೆ ‘ಬೊಲಿವಿವೇರಿಯನ್ ಕ್ರಾಂತಿ’ಗೆ ಬದ್ಧ ವಾಗಿರುವ ಎಲ್ಲಾ ಪಕ್ಷಗಳು ಸೇರಿ ಸಂಯುಕ್ತ ಸಮಾಜವಾದಿ ಪಕ್ಷವೊಂದನ್ನು ಕಟ್ಟಲು ರಭಸದ ಕೆಲಸ ಸಾಗಿದೆ. ಸಮಾಜವಾದಿ ದೇಶಗಳು ಸೇರಿದಂತೆ ಹೆಚ್ಚಿನ ದೇಶಗಳು ‘ಸಮಾಜವಾದ’ದ ಸೊಲ್ಲು ಎತ್ತದೆ ಇರುವ ಸಂದರ್ಭದಲ್ಲಿ ಈ ದೇಶದ ಸರ್ಕಾರ ಮತ್ತು ಬಹುಸಂಖ್ಯಾತ ಜನತೆ ‘ನಾವು ಸಮಾಜವಾದದ ಕಡೆಗೆ ಹೆಜ್ಜೆ ಇಡುತ್ತೇವೆಂದು’ ಪಣ ತೊಟ್ಟಿದ್ದಾರೆ.

ಅಂತಾರಾಷ್ಟ್ರೀಯ ಸಂಬಂಧಗಳು ಸರ್ಕಾರಗಳ ನಡುವೆ, ಹೆಚ್ಚೆಚ್ಚು ಆರ್ಥಿಕ ಮಿಲಿಟರಿ ರಾಜಕೀಯ ಪೈಪೋಟಿಯದ್ದು ಆಗುತ್ತಿವೆ. ಎರಡು ದೇಶಗಳ ಜನತೆ ಅಥವಾ ಸರ್ಕಾರದ ಜನತೆಗಳ ನಡುವೆ ಸಂಬಂಧವೇ ಇಲ್ಲ. ಎಂಬ ಪರಿಸ್ಥಿತಿಯಲ್ಲಿ, ವೆನಿಜುಲಾ ಅಭಿವೃದ್ದಿ ಹೊಂದಿದ ಶ್ರೀಮಂತ ದೇಶಗಳ (ಅಮೆರಿಕಾ, ಬ್ರಿಟನ್ ಮುಂತಾದ) ಬಡವರ ಇಂಧನಕ್ಕೆ ಸಬ್ಸಿಡಿ ಕೊಡಲು ಮುಂದಾಗಿದೆ.

ವೆನಿಜುಲಾದಲ್ಲಿ ೨೦೦೭ನೆಯ ಏಪ್ರಿಲ್‌ನಲ್ಲಿ ಸಂಭ್ರಮದ ಐದನೇ ವಾರ್ಷಿಕೋತ್ಸವ ಆಚರಿಸಲಾಯಿತು. ಇದು ಚುನಾಯಿತ ಸರ್ಕಾರವನ್ನು ಪದಚ್ಯುತಗಳಿಸಿ ಅಧಿಕಾರಕ್ಕೆ ಬಂದ ಮಿಲಿಟರಿ ಸರ್ಕಾರವನ್ನು ಎರಡು ದಿನಗಳಲ್ಲಿ ದೇಶದ ಜನತೆ ಓಡಿಸಿದ ಅದ್ಭುತ ವಿಜಯದ ಐದನೇ ವಾರ್ಷಿಕೊತ್ಸವ. ಏಪ್ರಿಲ್ ೧೩ರಂದು ಅಧ್ಯಕ್ಷೀಯ ನಿವಾಸದ ಎದುರು ನಡೆದ ೧೦ ಲಕ್ಷ ಜನರ ರ್ಯಾಲಿಯಲ್ಲಿ,

ಮಿಲಿಟರಿ ಕ್ಷಿಪ್ರ ಕ್ರಾಂತಿ ಸಾಮ್ರಾಜ್ಯಶಾಹಿ ವಿರೋಧಿ ಬೊಲಿವಿವೇರಿಯನ್ ಕ್ರಾಂತಿಗೆ ನಾಂದಿ ಹಾಡಿತು. ಅದನ್ನು ನಾವು ಸಮಾಜವಾದದತ್ತ ಒಯ್ಯುತ್ತಿದ್ದೇವೆ

ಎಂದರು ಚವೇಝ್. ಅದಕ್ಕೆ ಅವರು ಕೊಟ್ಟ ಹೆಸರು ‘೨೧ನೇ ಶತಮಾನದ ಸಮಾಜವಾದ’.

೨೦೦೬ರಲ್ಲಿ ಚವೇಝ್ ಅಧ್ಯಕ್ಷರಾಗಿ ಪುನರಾಯ್ಕೆಯಾದ ನಂತರ ವೆನಿಜುಲಾದಲ್ಲಿ ಆರ್ಥಿಕ-ಸಾಮಾಜಿಕ-ರಾಜಕೀಯ ಬದಲಾವಣೆಗಳು ಇನ್ನಷ್ಟು ತೀವ್ರಗೊಂಡಿವೆ. ಸಾಮಾಜಿಕ ವ್ಯವಸ್ಥೆಯ ಆಮೂಲಾಗ್ರ ಬದಲಾವಣೆಯ ಹಲವು ಕ್ರಮಗಳ ಮೊತ್ತಕ್ಕೆ ‘೨೧ನೆಯ ಶತಮಾನದ ಸಮಾಜವಾದ’. ೨೦ನೆಯ ಶತಮಾನದಲ್ಲಿ ಪ್ರಚಲಿತವಿದ್ದ ಸಮಾಜವಾದಿ ವ್ಯವಸ್ಥೆಯ ಸೋಲು-ಗೆಲುವುಗಳ ಕಲಿಕೆಗಳ ಮೇಲೆ ಆಧರಿಸಿದ, ೨೧ನೇ ಶತಮಾನದ ಸನ್ನಿವೇಶಕ್ಕೆ ಅಳವಡಿಸಿದ ಸಾಮಾಜಿಕ ವ್ಯವಸ್ಥೆ. ‘೨೧ನೆಯ ಶತಮಾನದ ಸಮಾಜವಾದ’ ಸ್ಪಷ್ಟ ನಿರ್ವಚನೆ-ವಿವರಣೆ ಇನ್ನೂ ನಿಧಾನವಾಗಿ ಮೂಡಿ ಬರುತ್ತಿದ್ದರೂ, ವೆನೆಜುವೆಲಾದಲ್ಲಿ ಜಾರಿಯಾಗುತ್ತಿರುವ ಐದು ಪ್ರಮುಖ ಕ್ರಮಗಳು ಅದರ ಸ್ವರೂಪದ ಪರಿಚಯ ನೀಡುತ್ತವೆ. ವ್ಯಾಪಕ ಭೂಸೂಧಾರಣೆಗಳು, ಪುನರ್-ರಾಷ್ಟ್ರೀಕರಣ, ಸಮುದಾಯ ಕೌನ್ಸಿಲ್‌ಗಳು, ಹೊಸ ಸೋಷಲಿಸ್ಟ್ ಪಾರ್ಟಿ ರಚನೆ, ಕಾರ್ಮಿಕರ ಕೌನ್ಸಿಲ್‌ಗಳು – ಆ ಐದು ಕ್ರಮಗಳು.

ವ್ಯಾಪಕ ಭೂಸುಧಾರಣೆಗಳು

೨೦೦೭ನೆಯ ಏಪ್ರಿಲ್‌ನಲ್ಲಿ ವೆನಿಜುಲಾ ಎರಡನೇ ಹಂತದ ಭೂ ಸುಧಾರಣೆ ಆರಂಭಿಸಿ ಜಗತ್ತಿನಲ್ಲೆಲ್ಲಾ ಸುದ್ದಿ ಮಾಡಿತು. ಕೃಷಿ ಅಥವಾ ಇತರ ಉತ್ಪಾದಕ ಬಳಕೆಯಲ್ಲಿ ಇರದ ೧೬ ಬಾರಿ ಖಾಸಗಿ ಎಸ್ಟೇಟ್‌ಗಳನ್ನು ಸರ್ಕಾರ ವಹಿಸಿಕೊಂಡು ಬಡ ಭೂ ಹೀನರಿಗೆ ಮತ್ತು ಅವರ ಕೃಷಿ ಸಹಕಾರಿಗಳಿಗೆ ಹಂಚಲು ಕಾರ್ಯಕ್ರಮ ಹಾಕಿಕೊಂಡಿದೆ. ಈ ಕ್ರಮದ ಮೂಲಕ ೩೩ ಲಕ್ಷ ಹೆಕ್ಟೇರ್‌ಗಳ ಅಧಿಕ ಜಮೀನು ಹಂಚಿಕೆಗೆ ದೊರಕುವಂತಾಗಿದೆ. ಚವೇಝ್ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಸುಮಾರು ೨೦ ಲಕ್ಷ ಹೆಕ್ಟೇರ್ ಜಮೀನನ್ನು ಒಂದೂ ವರೆ ಲಕ್ಷ ಕುಟುಂಬಗಳಿಗೆ ಹಂಚಿದೆ. ಲ್ಯಾಟಿನ್ ಅಮೆರಿಕಾದಲ್ಲೇ ಅತ್ಯಂತ ಹೆಚ್ಚಿನ ಭೂ ಒಡೆತನದ ಕೇಂದ್ರೀಕರಣ ಹೊಂದಿರುವ ವೆನಿಜುಲಾ ಕೃಷಿ ಉತ್ಪಾದನೆಯಲ್ಲಿ ತೀರಾ ಹಿಂದುಳಿದಿದೆ, ಅದರಲ್ಲೂ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ದೇಶದ ಆಹಾರ ಧಾನ್ಯಗಳ ಬೇಡಿಕೆಯ ಶೇ.೭೦ ಆಮದಿನ ಮೇಲೆ ಅವಲಂಬಿಸಿದೆ. ಎರಡು ವರ್ಷಗಳಲ್ಲಿ ‘ಆಹಾರ ಭದ್ರತೆ’ ಮತ್ತು ‘ಆಹಾರ ಸ್ವಾವಲಂಬನೆ’ ಸಾಧಿಸಬೇಕು. ಇದರ ಭಾಗವಾಗಿಯೇ ಈ ಎರಡನೇ ಹಂತದ ಭೂ ಸುಧಾರಣೆ. ಕೃಷಿ ಮತ್ತು ಉತ್ಪಾದಕ ಚಟುವಟಿಕೆಯಲ್ಲಿ ತೊಡಗಿರುವ ಖಾಸಗಿ ಎಸ್ಟೇಟ್‌ಗಳನ್ನು ಸರ್ಕಾರ ಕಿತ್ತುಕೊಳ್ಳುವುದಿಲ್ಲ ಎಂದು ಸರ್ಕಾರ ಘೋಷಿಸಿದೆ. ಇತ್ತೀಚಿನ ದಶಕಗಳಲ್ಲಿ ಜಗತ್ತಿನಲ್ಲೇ ಅತ್ಯಂತ ದೊಡ್ಡ ಭೂ ಸುಧಾರಣೆಯ ಪ್ರಯತ್ನ ಇದು.

ಪುನರ್ರಾಷ್ಟ್ರೀಕರಣ

೨೦೦೭ರಲ್ಲಿ ಅಧ್ಯಕ್ಷ ಚವೇಝ್ ಘೋಷಿಸಿದ ರಾಷ್ಟ್ರೀಕರಣದ ಯೋಜನೆಯನ್ನು ೭೦ರ ದಶಕದ ನಂತರ ಯಾವುದೇ ದೇಶದಲ್ಲಿ ಅತ್ಯಂತ ವ್ಯಾಪಕ ರಾಷ್ಟ್ರೀಕರಣದ ಅಲೆ ಎಂದು ‘ವಾಶಿಂಗ್‌ಟನ್ ಪೋಸ್ಟ್’ ಹೇಳಿದೆ. ಈ ರಾಷ್ಟ್ರೀಕರಣದ ಭರಾಟೆ ಜಗತ್ತಿನ ಷೇರು ಮಾರುಕಟ್ಟೆಯಲ್ಲಿ ನಡುಕ ತಂದಿತ್ತು. ಖಾಸಗಿ ಸೆಂಟ್ರಲ್ ಬ್ಯಾಂಕ್, (೧೯೯೧ರಲ್ಲಿ ಖಾಸಗೀಕರಿಸಲ್ಪಟ್ಟ) ಟೆಲಿಕಾಂ ದೈತ್ಯ ಸಿ.ಎ.ಎನ್ ಟಿವಿ, ರಾಜಧಾನಿಯ ವಿದ್ಯುತ್ ಕಂಪನಿ ಎ.ಇ.ಎಸ್, ನಾಲ್ಕು ಖಾಸಗಿ ತೈಲ ಪ್ರಾಜೆಕ್ಟ್‌ಗಳು – ಸರ್ಕಾರದ ಪುನರ್ ರಾಷ್ಟ್ರೀಕರಣದ ಯೋಜನೆಯಲ್ಲಿ ಸೇರಿವೆ. ಇವೆಲ್ಲವೂ ೮೦ರ ದಶಕದವರೆಗೆ ರಾಷ್ಟ್ರೀಕೃತವಾಗಿದ್ದು, ೯೦ರ ದಶಕದಲ್ಲಿ ಅವನ್ನು ಖಾಸಗೀಕರಿಸಲಾಗಿತ್ತು. ಖಾಸಗೀಕರಣದ ಅಂಗವಾಗಿ ಅಮೆರಿಕನ್ ಬಹುರಾಷ್ಟ್ರೀಯ ಕಂಪನಿಗಳು ಅವನ್ನು ಮೂರು ಕಾಸಿಗೆ ನುಂಗಿ ಹಾಕಿದ್ದವು ಎಂದು ಇಲ್ಲಿ ನೆನಪಿಸಿಕೊಳ್ಳಬಹುದು. ಸಮಾಜದ ಮೂಲಭೂತ ಅಗತ್ಯಗಳನ್ನು ಪೂರೈಸುವ ಸಂಪನ್ಮೂಲ ಗಳು ಸಾಮಾಜಿಕ ನಿಯಂತ್ರಣದಲ್ಲಿ ಇರಬೇಕು ಎಂಬುದು ಇವರ ಹಿಂದಿನ ಆಶಯ.

ಸಮುದಾಯ ಕೌನ್ಸಿಲ್‌ಗಳು

ಇನ್ನೂರರಿಂದ, ನಾಲ್ಕು ನೂರು ಕುಟುಂಬಗಳ ಸಮುದಾಯಕ್ಕೆ ಸಮುದಾಯ ಕೌನ್ಸಿಲ್ ಗಳು ಇರುತ್ತವೆ. ಕೌನ್ಸಿಲ್ ಸದಸ್ಯರನ್ನು ವಾಪಸ್ಸು ಕರೆಸುವ ಸಾಧ್ಯತೆ ಇರುತ್ತದೆ. ಇಂತಹ ೧೩ ಸಾವಿರ ಕೌನ್ಸಿಲ್‌ಗಳನ್ನು ಈಗಾಗಲೇ ರಚಿಸಲಾಗಿದೆ. ಆ ಪ್ರದೇಶದ ಸಾಮಾಜಿಕ ಕಾರ್ಯಕ್ರಮ, ಅಭಿವೃದ್ದಿ ಕಾರ್ಯಕ್ರಮಗಳ ಬಗ್ಗೆ ಕೌನ್ಸಿಲ್ ನಿರ್ಧರಿಸುತ್ತದೆ. ಕೌನ್ಸಿಲ್ ಗಳು ಇಡೀ ಸಮುದಾಯಕ್ಕೆ ಬದ್ಧವಾಗಿರುತ್ತವೆ.

೧೫ ವರ್ಷ ಮೇಲ್ಪಟ್ಟ ಎಲ್ಲರೂ ಭಾಗವಹಿಸಬಹುದಾದ ಸಭೆ ಕೌನ್ಸಿಲ್ಲನ್ನು ನಿಯಂತ್ರಿಸುತ್ತದೆ. ಈ ಕೌನ್ಸಿಲ್‌ಗಳು ಕೇರಳದಲ್ಲಿ ‘ಜನತಾ ಯೋಜನೆ’ಯ ಅಡಿಯಲ್ಲಿ ರಚಿಸಲಾದ ಸ್ಥಳೀಯ ಮಂಡಳಿಗಳಂತೆ ಕೆಲಸ ಮಾಡುತ್ತವೆ. ಇವು ಹೊಸ ವಿಕಾಸವಾಗುತ್ತಿರುವ ಜನತಾ ಪ್ರಭುತ್ವದ ಮೂಲ ರಚನೆಗಳಾಗಿದ್ದು, ಹಳೆಯ ಪ್ರಭುತ್ವದ ಅಧಿಕಾರಶಾಹಿ ಜತೆ ಸಂಘರ್ಷಕ್ಕೆ ಇಳಿದಿವೆ. ಕೇಂದ್ರದಲ್ಲಿ ಮಾತ್ರವಲ್ಲ. ಎಲ್ಲಾ ಹಂತಗಳಲ್ಲಿ ಶ್ರೀಮಂತ ಆಳುವ ವರ್ಗದ ಅಧಿಕಾರಶಾಹಿ ಪ್ರಭುತ್ವವನ್ನು ಕಿತ್ತು ಹಾಕುವ, ಅದಕ್ಕೆ ಬದಲಿ ನಿರ್ಮಿಸುವ ಬದಲಾವಣೆಯ ಪ್ರಕ್ರಿಯೆ ಇದು ದೇಶವ್ಯಾಪಿಯಾಗಿ ಇಂತಹ ಕಾರ್ಯಕ್ರಮ ಹಾಕಿಕೊಂಡಿರುವುದು ಬಹುಶಃ ಜಗತ್ತಿನಲ್ಲೇ ಇದೇ ಮೊದಲು.

ಹೊಸ ಸೋಷಿಯಲಿಸ್ಟ್ ಪಾರ್ಟಿ

ಚವೇಝ್ ಸರ್ಕಾರದ ಜೊತೆಗಿರುವ ಆಳುವ ಪಕ್ಷಗಳು ಮತ್ತು ಕ್ರಾಂತಿಯನ್ನು ಬೆಂಬಲಿಸುವ ಪಕ್ಷಗಳು ಹತ್ತಿರ ಬರುತ್ತಿದ್ದು ಹೊಸ ಸಂಯುಕ್ತ ಸೋಶಲಿಸ್ಟ್ ಪಾರ್ಟಿಯೊಂದನ್ನು ರಚಿಸಲು ನಿರ್ಧರಿಸಿವೆ. ಚವೇಝ್‌ರ ವೈಯಕ್ತಿಕ ವರ್ಚಸ್ಸಿನ ಬದಲು ಒಂದು ಸುಸಂಘಟಿತ ಪಕ್ಷ ಕ್ರಾಂತಿಯ ಮುಂದಿನ ಹಂತದಲ್ಲಿ ನಿರ್ದೇಶಕ, ನಾಯಕ ಆಗಬೇಕು ಎಂಬುದು ಆಶಯ. ಈ ಪಕ್ಷವನ್ನು ಕೆಳಗಿನಿಂದ ಮೇಲಕ್ಕೆ ಕಟ್ಟಲಾಗುತ್ತಿದೆ. ಪಕ್ಷದ ಪ್ರಾಥಮಿಕ ಸದಸ್ಯತ್ವ ರಿಜಿಸ್ಟರ್ ಮಾಡಲು ಏಪ್ರಿಲ್ ಕೊನೆಯಿಂದ ದೇಶದಾದ್ಯಂತ ಆರು ಸಾವಿರ ‘ಬೂತ್‌ಗ’ ಅನ್ನು ರಚಿಸಲಾಗಿದೆ. ರಿಜಿಸ್ಟರ್ ಮಾಡುವ ಪ್ರತಿ ಸದಸ್ಯರನ್ನು ಸೇರಿಸಿ ಪ್ರದೇಶ, ಫ್ಯಾಕ್ಟರಿ, ಸಂಸ್ಥೆ (ವಿಶ್ವವಿದ್ಯಾಲಯ ಇತ್ಯಾದಿ)ಗಳ ಅನುಸಾರವಾಗಿ ೨೦೦ ಸದಸ್ಯರನ್ನು ಸೇರಿಸಿ ಪ್ರದೇಶ, ಫ್ಯಾಕ್ಟರಿ, ಸಂಸ್ಥೆ(ವಿಶ್ವವಿದ್ಯಾಲಯ ಇತ್ಯಾದಿ)ಗಳ ಅನುಸಾರವಾಗಿ ೨೦೦ ಸದಸ್ಯರಿರುವ ಪ್ರಾಥಮಿಕ ಶಾಖೆಗಳನ್ನು ರಚಿಸಲಾಗುತ್ತದೆ. ಇಂತಹ ಶಾಖೆಗಳು ಹೊಸ ಪಕ್ಷದ ‘ಸ್ಥಾಪನಾ ಮಹಾಧಿವೇಶನ’ಕ್ಕೆ ಪ್ರತಿನಿಧಿಯನ್ನು ಆಯ್ಕೆ ಮಾಡುತ್ತವೆ. ಈಗ ಇರುವ ಪಕ್ಷಗಳ ನಾಯಕರಿಗೆ ಯಾವುದೇ ರೀತಿಯ ‘ಮೀಸಲಾತಿ’ ಇರುವುದಿಲ್ಲ. ಮಹಾಧಿವೇಶನದಲ್ಲಿ ಭಾಗವಹಿಸಲು ಪ್ರಾಥಮಿಕ ಶಾಖೆ ಒಂದರ ಸದಸ್ಯರಾಗಿರುವುದು ಮತ್ತು ಆ ಶಾಖೆಯಿಂದ ಆಯ್ಕೆಯಾಗುವುದು ಅಗತ್ಯ, ಚವೇಝ್ ಸಹ ಇಂತಹ ಶಾಖೆ ಒಂದರಿಂದ ಆಯ್ಕೆಯಾಗಬೇಕು. ಸಂಸ್ಥಾಪನಾ ಮಹಾಧಿವೇಶನ ಮೂರು ತಿಂಗಳವರೆಗೆ ನಡೆಯುತ್ತದೆ! ಮಹಾಧಿವೇಶನ ಪಕ್ಷದ ಕಾರ್ಯಕ್ರಮದ ಕರಡನ್ನು ಚರ್ಚಿಸುತ್ತದೆ. ಮಹಾಧಿವೇಶನದಿಂದ ಶಾಖೆಗೆ, ಶಾಖೆಯಲ್ಲಿ ಚರ್ಚೆ, ಶಾಖೆಯಿಂದ ಸ್ಥಳೀಯ ಸಮುದಾಯಕ್ಕೆ ಚರ್ಚೆ ನಡೆದು, ಪುನಃ ಮಹಾಧಿವೇಶನಕ್ಕೆ- ಹೀಗೆ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಯುತ್ತದೆ. ೧೬ ಸಾವರಿ ಪಕ್ಷದ ಸಂಘಟಕರು ರಿಜಿಸ್ಟ್ರೇಷನ್ ಪ್ರಕ್ರಿಯೆಗೆ ಪ್ರಚಾರ ಮಾಡುತ್ತಿದ್ದಾರೆ. ಪಕ್ಷವನ್ನು ಕೆಳಗಿನಿಂದ ಕಟ್ಟುವ ಈ ಕೆಲಸ ರಭಸವಾಗಿ ಸಾಗಿದೆ. ಸುಮಾರು ೪೦-೫೦ ಲಕ್ಷ ಸದಸ್ಯರನ್ನು ಹೊಂದುವ ಉದ್ದೇಶ ಹೊಸ ಪಕ್ಷಕ್ಕಿದೆ. ಕೆಳಗಿನಿಂದ ಮೇಲಕ್ಕೆ ಸಾಮೂಹಿಕ ಕ್ರಾಂತಿಕಾರಕ ಪ್ರಜಾಸತ್ತಾತ್ಮಕ ಪಕ್ಷ ಕಟ್ಟುವ ಇದು ಜಗತ್ತಿನಲ್ಲೇ ಅತ್ಯಂತ ವಿಶಿಷ್ಟ ಪ್ರಯತ್ನ.

ಕಾರ್ಮಿಕರ ಕೌನ್ಸಿಲ್‌ಗಳು

ವೆನಿಜುಲಾದಲ್ಲಿ ಹೊಸ ರೀತಿಯ ಟ್ರೇಡ್ ಯೂನಿಯನ್‌ಗಳು ಅಸ್ತಿತ್ವಕ್ಕೆ ಬರುತ್ತಿವೆ. ಚವೇಝ್ ಸರ್ಕಾರದ ಪೂರ್ಣ ಬೆಂಬಲದಿಂದ ಇವುಗಳನ್ನು ಕಾರ್ಮಿಕರ ಕೌನ್ಸಿಲ್‌ಗಳು ಎಂದು ಕರೆಯಲಾಗುತ್ತದೆ. ಈಗ ಇರುವ ಟ್ರೇಡ್ ಯೂನಿಯನ್‌ಗಳು ಹೊಸ ರೀತಿಯ ಪಾತ್ರಕ್ಕೆ ಬದ್ಧವಾಗುತ್ತಿವೆ. ವರ್ಕ್‌ರ್ಸ್ ಕೌನ್ಸಿಲ್‌ಗಳು ಟ್ರೇಡ್ ಯೂನಿಯನ್‌ಗಳಂತೆ  ತಮ್ಮ ಚಟುವಟಿಕೆಗಳಾದ ಕಾರ್ಮಿಕರ ವೇತನ, ಕೆಲಸದ ಪರಿಸ್ಥಿತಿ ಉತ್ತಮಗೊಳಿಸಲು ಹಕ್ಕುಗಳನ್ನು ಕಾಪಾಡುವುದಕ್ಕೆ ಸೀಮಿತವಾಗಿರುವುದಿಲ್ಲ. ಕಾರ್ಖಾನೆಯ ಉತ್ಪಾದನೆಯ ನೇರ ನಿಯಂತ್ರಣ, ನಿರ್ವಹಣೆಯಲ್ಲಿ ಭಾಗವಹಿಸುವುದು ಕೌನ್ಸಿಲ್‌ಗಳ ವಿಶಿಷ್ಟತೆ. ಇಂತಹ ಕೌನ್ಸಿಲ್‌ಗಳು ಮುಚ್ಚಿದ ಫ್ಯಾಕ್ಟರಿಗಳನ್ನು ಪುನಃ ಆರಂಭಿಸಿ ಸ್ವತಃ ಕಾರ್ಮಿಕರೇ ನಡೆಸುವ ಚಳವಳಿಯ ಭಾಗವಾಗಿ ಆರಂಭವಾಗಿತ್ತು. ಈಗ ಅವನ್ನು ಸರ್ಕಾರಿ ಸ್ವಾಮ್ಯದಲ್ಲಿರುವ ಪುನಃ ರಾಷ್ಟ್ರೀಕರಣಗೊಳ್ಳುತ್ತಿರುವ, ಖಾಸಗಿ ಫ್ಯಾಕ್ಟರಿಗಳಿಗೂ ವಿಸ್ತರಿಸಲಾಗುತ್ತಿದೆ. ಕಾರ್ಮಿಕರಿಗೆ ಬದ್ಧವಾದ ಈ ಕೌನ್ಸಿಲ್‌ಗಳು ಕಾರ್ಮಿಕರ ರಾಜಕೀಯ ಶಿಕ್ಷಣ, ಪ್ರಜ್ಞೆ ಹೆಚ್ಚಿಸುವ ಮೂಲಕ ರಾಜಕೀಯವಾಗಿ ವೆನಿಜುಲಾಕ್ಕೆ ನಾಯಕತ್ವ ಕೊಡುವ ಪ್ರಕ್ರಿಯೆ ಆರಂಭವಾಗಿದೆ. ಇಂತಹ ಕಾರ್ಮಿಕರ ಕೌನ್ಸಿಲ್‌ಗಳೇ, ಎರಡು ಫ್ಯಾಕ್ಟರಿಗಳ ನಡುವಿನ ವ್ಯಾಪಾರ ವಹಿವಾಟನ್ನು ನಿರ್ಧರಿಸಲಿದ್ದು, ಲಾಭಕ್ಕಿಂತ ಹೆಚ್ಚಾಗಿ ಸಮುದಾಯದ ದೇಶದ ಒಳಿತನ್ನು ಗುರಿಯಾಗಿ ಇಟ್ಟುಕೊಳ್ಳಲಿವೆ. ಇದು ಕಾರ್ಮಿಕರು ಆಧುನಿಕ ಸಮಾಜದ ಪ್ರಮುಖ ನೆಲೆಯಾದ ಕೈಗಾರಿಕಾ ಕ್ಷೇತ್ರದಲ್ಲಿ ನಾಯಕತ್ವ ವಹಿಸುವ ಮೂಲಕ ಸಮಾಜ, ದೇಶದ ನಾಯಕತ್ವ ವಹಿಸುವ ವಿಶಿಷ್ಟ ಪ್ರಯೋಗ ಸಹ.

ಲ್ಯಾಟಿನ್ ಅಮೆರಿಕ ೨೧ನೆಯ ಶತಮಾನದಲ್ಲಿ

ಐದು ಶತಮಾನಗಳ ಕಾಲ ಯುರೋಪಿಯನ್ನರ ಅಡಿಯಾಳಾಗಿ, ೧೯ನೆಯ ಶತಮಾನ ದಲ್ಲಿ ಸ್ವತಂತ್ರವಾಗಿ ಬೆಳವಣಿಗೆ ಸಾಧಿಸುವ ಪ್ರಯತ್ನ ಮಾಡಿತು. ಆದರೆ ಅದಕ್ಕೆ ಉತ್ತರ ಅಮೆರಿಕದ ‘ಹಿರಿಯಣ್ಣ’ ಯು.ಎಸ್.ಎ.ತೀವ್ರ ಅಡೆತಡೆಗಳನ್ನು ಹಾಕಿತು. ಸತತ ಮಿಲಿಟರಿ ಮಧ್ಯ ಪ್ರವೇಶಗಳಿಂದ ೭೦ರ ದಶಕದ ಹೊತ್ತಿಗೆ ಇಡೀ ಲ್ಯಾಟಿನ್ ಅಮೆರಿಕ ಖಂಡವನ್ನು ‘ಅಮೆರಿಕದ ಹಿತ್ತಲು’ ಆಗಿಸಿತು. ಇದರ ಫಲವಾಗಿ ೧೯೮೦ರ ದಶಕ, ಬೆಳವಣಿಗೆ ಮಟ್ಟಿಗೆ ಲ್ಯಾಟಿನ್ ಅಮೆರಿಕದ ಜನತೆಗೆ ‘ಕಳಕೊಂಡ ದಶಕ’ವಾಯಿತು. ೧೯೯೦ರ ದಶಕದಲ್ಲಿ ಇದಕ್ಕೆ ತೀವ್ರ ಪ್ರತಿರೋಧ ಹುಟ್ಟಿ ೨೦ನೇ ಶತಮಾನದಲ್ಲಿ ತೀವ್ರ ಬದಲಾವಣೆಯ ‘ಎಳೆಗೆಂಪು ಅಲೆ’ ಎದ್ದಿದೆ. ವೆನಿಜುಲಾ ಈ ಹೊಸ ಅಲೆಯ ಹರಿಕಾರ ನಾಗಿದ್ದು, ಖಂಡದ ವ್ಯಾಪ್ತಿ ‘ಒಳಿತಿನ ಅಕ್ಷ’ ರೂಪಿಸುತ್ತಿದೆ. ಈ ಅಕ್ಷವನ್ನು ಸೋಲಿಸಲು ‘ಹಿರಿಯಣ್ಣ’ ಅ.ಸಂ.ಸಂ.ದ ಹಳೆಯ ತಂತ್ರಗಳು ಅಷ್ಟಾಗಿ ಕೆಲಸ ಮಾಡುತ್ತಿಲ್ಲ. ವೆನಿಜುಲಾದಲ್ಲಿ ‘೨೧ನೆಯ ಶತಮಾನದ ಸಮಾಜವಾದ’ ಎಂಬ ಹೊಸ ಸಾಮಾಜಿಕ ವ್ಯವಸ್ಥೆ ರೂಪಿಸುವ ಮಹಾನ್ ಪ್ರಯೋಗ ನಡೆಯುತ್ತಿದೆ. ಈ ಪ್ರಯೋಗಗಳನ್ನು ಲ್ಯಾಟಿನ್ ಅಮೆರಿಕಾ ಮಾತ್ರವಲ್ಲ, ಇಡೀ ಜಗತ್ತಿನ ಜನತೆ ಆಸಕ್ತಿ ಮತ್ತು ಆಶಾಭಾವನೆಯಿಂದ ನೋಡುತ್ತಿದ್ದಾರೆ. ವೆನಿಜುಲಾ ಇಂದು ಮಾಡಿದ್ದು ನಾಳೆ ಇಡೀ ಲ್ಯಾಟಿನ್ ಅಮೆರಿಕಾ ಮಾಡುತ್ತದೆ ಎಂಬ ಪರಿಸ್ಥಿತಿ ಇದೆ. ಲ್ಯಾಟಿನ್ ಅಮೆರಿಕಾದ ಆಗು ಹೋಗುಗಳು ೨೧ನೆಯ ಶತಮಾನದ ಜಾಗತಿಕ ಬೆಳವಣಿಗೆಗಳ ಮೇಲೆ ಗಮನಾರ್ಹ ಪ್ರಭಾವ ಬೀರಲಿವೆ.

 

ಪರಾಮರ್ಶನ ಗ್ರಂಥಗಳು

೧. ಅಜೀಜ್ ಅಹಮದ್, ‘‘ಫೈರ್ ಇನ್ ದ ಪ್ಲಾನ್ಸ್, ಫೈರ್ ಇನ್ ದ ಮೌನ್‌ಟೈನ್ಸ್’’, ಫ್ರಂಟ್‌ಲೈನ್, ವಾಲ್ಯೂಂ ೨-೨೩.

೨. ಜೇಮ್ಸ್ ಪೆಟ್ರಾಸ್, ‘‘ಯುಎಸ್ ಆಪೆನ್ಸಿವ್ ಇನ್ ಲ್ಯಾಟಿನ್ ಅಮೆರಿಕಾ’’, ಮಂತ್ಲಿ ರಿವ್ಯೆ, ವಾಲ್ಯೂಂ ೫-೧

೩. ಜೇಮ್ಸ್ ಪೆಟ್ರಾಸ್, ‘‘ಲ್ಯಾಟಿನ್ ಅಮೆರಿಕಾ ಆಟ್ ದ ಎಂಡ್ ಆಫ್ ದಿ ಮಿಲ್ಲೇನಿಯಂ’’, ಮಂತ್ಲಿ ರಿವ್ಯೆ, ಜುಲೈ-ಆಗಸ್ಟ್ ೧೯೯೯

೪. ರಿಚರ್ಡ್ ಒವರಿ, ಕಾಲಿನ್ಸ್ ಆಟ್ಲಾಸ್ ಆಫ್ ೨೦ಸೆಂಚುರಿ ಹಿಸ್ಟರಿ

೫. ಪಿಲಾರ್ ಅಗುಲೆರ ದಿ ರೆಕಾರ್ಡೊ ಫ್ರೇಡ್ಸ್, ಚಿಲಿ: ದ ಆದರ್, ಸೆಪ್ಟೆಂಬರ್ ೧೧

೬. ಸುಂದರಮ್ ಎನ್.ಎಂ., ಗ್ಲೋಬಲ್ ಫೈನಾನ್ಸ್ ಕ್ಯಾಪಿಟಲ್ ಆನ್ ದಿ ರ‌್ಯಾಂಪೇಜ್

೭. ನೋಮ್ ಚೊಮ್‌ಸ್ಕಿ, ‘‘ಡೆಮಾಕ್ರಸಿ ನೌ’’, ಪ್ರೆಸ್ ಕಾನ್ಫ್‌ರೆನ್ಸ್ ಆಟ್ ಯುಎನ್ ಆನ್ ೫ ಜೂನ್ ೨೦೦೬

೮. ನೋಮ್ ಚೊಮ್‌ಸ್ಕಿ, ‘‘ಲ್ಯಾಟಿನ್ ಅಮೆರಿಕಾ ಡಿಕ್ಲೈರ್ಸ್‌ಇಂಡಿಪೆಂಡೆನ್ಸ್’’, ೧೦.೦೪.೦೬ ಇಂಟರ್ ನ್ಯಾಷನಲ್ ಹೆರಾಲ್ಡ್ ಟ್ರಿಬುನ್