ಎಳೆಗೆಂಪು ಅಲೆ

ಸಹಜವಾಗಿ ಇಂತಹ ಪರಿಸ್ಥಿತಿಗೆ ಪ್ರತಿಕ್ರಿಯೆಗಳು, ಸ್ಪಂದನಗಳು ವ್ಯಕ್ತವಾಗಿವೆ. ಆರ್ಥಿಕ ರಂಗದಲ್ಲೂ ರಾಜಕೀಯ ರಂಗದಲ್ಲೂ, ವಿಶ್ವದಲ್ಲೇ ಮೊದಲ ನವ-ಉದಾರವಾದಿ ನೀತಿಗಳನ್ನು ಅನುಸರಿಸಿದ. ಅದರಲ್ಲೂ ಮಿಲಿಟರಿ ಸರ್ವಾಧಿಕಾರಗಳ ಮೂಲಕ ಅತ್ಯಂತ ನಗ್ನ ಸ್ವರೂಪಗಳಲ್ಲಿ ಜಾರಿಗೆ ಬಂದ ಲ್ಯಾಟಿನ್ ಅಮೆರಿಕಾ ಪ್ರದೇಶದಲ್ಲೇ ಅದರ ವಿರುದ್ಧ ಸಾಮಾಜಿಕ ಪ್ರತಿಭಟನೆಗಳು ಮೊದಲು ಎದ್ದು ಬಂದುದರಲ್ಲಿ ಆಶ್ಚರ್ಯವಿಲ್ಲ ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯ ಪಡುತ್ತಾರೆ. ಹಲವು ಆರ್ಥಿಕತಜ್ಞರು ‘ಮುಕ್ತ ಮಾರುಕಟ್ಟೆ,’ ಉದಾರೀಕರಣ-ಖಾಸಗೀಕರಣ- ಜಾಗತೀಕರಣದ ನವ-ಉದಾರವಾದಿ ನೀತಿಗಳನ್ನೇ ಪ್ರಶ್ನಿಸಿದ್ದಾರೆ. ಇವರಲ್ಲಿ ಕೆಲವರು ಈ ಮಾದರಿ ಕೆಲಸ ಮಾಡದು ಎಂದರೆ, ಇನ್ನು ಕೆಲವರು ಇವುಗಳನ್ನು ಸುಧಾರಿಸಬೇಕು ಎಂದಿದ್ದಾರೆ. ಪ್ರಭುತ್ವಕ್ಕೆ, ಸರಕಾರಗಳಿಗೆ ಜನಸಾಮಾನ್ಯರ ಪರವಾಗಿ ಮಧ್ಯಪ್ರವೇಶಿಸುವ ಅವಕಾಶವಿರಬೇಕು ಎಂದು ಅವರು ವಾದಿಸಲಾರಂಭಿಸಿದ್ದಾರೆ. ಇನ್ನೊಂದೆಡೆ ಸಾಮಾಜಿಕ, ರಾಜಕೀಯ ಮಟ್ಟಗಳಲ್ಲಿ ಜನಸಾಮಾನ್ಯರ ತೀವ್ರ ಭಾವನೆಗಳು, ಆತಂಕಗಳು, ಕ್ರೋಧ ವ್ಯಕ್ತವಾಗಿದೆ.

೧೯೯೪ರಲ್ಲಿ ಮೆಕ್ಸಿಕೋದ ಚಿಯಾಪಾನ್‌ನಲ್ಲಿ ಮೂಲನಿವಾಸಿಗಳ ಬಂಡಾಯ ಇದಕ್ಕೊಂದು ಜ್ವಲಂತ ಉದಾಹರಣೆ. ಅಲ್ಲಿನ ಝಪಾಟಿಸ್ಟಾ ರಾಷ್ಟ್ರೀಯ ವಿಮೋಚನಾ ಸೇನೆ(ಇಝಡ್‌ಎಲ್‌ಎನ್),  ಬ್ರೆಜಿಲ್‌ನ ಭೂಹೀನ ಕೂಲಿಕಾರರ ಆಂದೋಲನ (ಎಂಎಸ್‌ಟಿ), ಕೊಲೊಂಬಿಯದ ಕ್ರಾಂತಿಕಾರಿ ಸಶಸ್ತ್ರ ಪಡೆ(ಎಫ್‌ಎಆರ್‌ಸಿ) ಹಾಗೂ ಬೊಲಿವಿಯಾ, ಪರಾಗ್ವೆ ಮತ್ತು ಇಕ್ವೆಡೋರ್‌ಗಳಲ್ಲಿನ ಮೂಲನಿವಾಸಿ ರೈತರ ಆಂದೋಲನಗಳು ನವ-ಉದಾರವಾದಿ ಆರ್ಥಿಕ ನೀತಿಗಳು, ಅದನ್ನಾಧರಿಸಿದ ರಾಜಕೀಯಕ್ಕೆ ನೇರವಾಗಿ ಸವಾಲು ಹಾಕಿವೆ ಎನ್ನುತ್ತಾರೆ ತಜ್ಞರು. ಆರ್ಥಿಕ ವ್ಯವಸ್ಥೆಯ ಆಯಕಟ್ಟಿನ ವಲಯಗಳ ಸಮಾಜೀಕರಣವಾಗ ಬೇಕು. ದೊಡ್ಡ ರೀತಿಯಲ್ಲಿ ಭೂಹೀನರಿಗೆ ಭೂಮಿ ಹಂಚಿಕೆ ನಡೆಯಬೇಕು, ವಿದೇಶಿ ಸಾಲ ಇಳಿಯಬೇಕು. ವಿದೇಶಗಳಿಗೆ ಸಂಪತ್ತಿನ ವರ್ಗಾವಣೆ ನಿಲ್ಲಬೇಕು ಎಂದು ಇವು ಆಗ್ರಹ ಪಡಿಸುತ್ತಿವೆ. ಎಂ.ಎಸ್.ಟಿ. ಬ್ರೆಜಿಲ್‌ನ ೨೭ ರಾಜ್ಯಗಳಲ್ಲಿ ೨೩ರಲ್ಲಿ ನೂರಾರು ಭೂಸ್ವಾಧೀನಗಳನ್ನು ನಡೆಸಿದ್ದು ೫ ಲಕ್ಷ ಕುಟುಂಬಗಳನ್ನು ಈ ಜಮೀನುಗಳಲ್ಲಿ ನೆಲೆಗೊಳಿಸಿದೆ. ನಗರಗಳ ಮತ್ತು ಗ್ರಾಮಾಂತರದ ದುಡಿಮೆಗಾರರನ್ನು ಒಟ್ಟು ಗೂಡಿಸುವಲ್ಲಿಯೂ ಇದು ಯಶಸ್ವಿಯಾಗಿದೆ ಎಂದು ಹೇಳಲಾಗಿದೆ. ಕೊಲೊಂಬಿಯಾದ ಎಫ್‌ಎಆರ್‌ಸಿ ಅರ್ಧದಷ್ಟು ಗ್ರಾಮೀಣ ಮುನಿಸಿಪಾಲಿಟಿಗಳ ಮೇಲೆ ಹತೋಟಿ ಹೊಂದಿದೆ. ಅದು ೧೫ ಸಾವಿರ ಕಾರ್ಯಕರ್ತರನ್ನು ಹೊಂದಿದ್ದು ೧೦ ಲಕ್ಷ ಜನರ ಬೆಂಬಲ ಪಡೆದಿದೆ ಎನ್ನಲಾಗಿದೆ. ಇತರೆಡೆ ಕಾರ್ಮಿಕ ಸಂಘಗಳು ಇಂತಹ ಆಂದೋಲನಗಳನ್ನು ನಡೆಸುತ್ತಿವೆ. ಇದರ ಪರಿಣಾಮ ೧೯೯೮ ರಿಂದೀಚೆಗೆ ವಿಭಿನ್ನ ಲ್ಯಾಟಿನ್ ಅಮೆರಿಕಾ ದೇಶಗಳಲ್ಲಿ ನಡೆದ ಚುನಾವಣೆಗಳಲ್ಲಿಯೂ ಪ್ರತಿಫಲನಗೊಂಡಿವೆ. ಪರಿಣಾಮಕಾರೀ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವ ಹೊರಗಡೆಯಿಂದ ಆದೇಶಿತ ಆರ್ಥಿಕ ‘ಸುಧಾರಣೆ’ಗಳೊಂದಿಗೆ ಪ್ರಜಾಪ್ರಭುತ್ವೀಕರಣದ ಹೊಸದೊಂದು ಅಲೆಯೆದ್ದಿದೆ ಎಂದು ಅರ್ಜೆಂಟೈನಾದ ರಾಜಕೀಯ ಶಾಸ್ತ್ರಜ್ಞ ಅತಿಲಿಯೊ ಬೊರೊನ್ ಇದನ್ನು ವಿಶ್ಲೇಷಿಸಿದ್ದಾರೆ. ಒಂದು ‘ಎಳೆಗೆಂಪು ಅಲೆ’ (ಪಿಂಕ್ ಟೈಡ್), ‘ಎಡಪಂಥದತ್ತ ತಿರುವು’ ಎಂದೂ ರಾಜಕೀಯ ವೀಕ್ಷಕರು ಇದನ್ನು ವರ್ಣಿಸಿದ್ದಾರೆ.

ಲ್ಯಾಟಿನ್ ಅಮೆರಿಕಾದ ಸೌದಿ ಅರೇಬಿಯಾ(ತೈಲ ಸಂಪತ್ತಿನ ದೃಷ್ಟಿಯಿಂದ) ಎನಿಸಿಕೊಂಡ ವೆನೆಜುದಲ್ಲಿ ೧೯೯೮ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಹ್ಯೂಗೋ ಚವೇಝ್ ಶೇ.೫೬ ಮತ ಪಡೆದು ಚುನಾಯಿತರಾದ ಈ ಅಲೆ ಆರಂಭವಾಯಿತು ಎನ್ನಬಹುದು. ೧೯೮೯ರಲ್ಲಿ ವೆನೆಜುವೆಲಾದ ರಾಜಧಾನಿ ಕಾರಾಕಾಸ್‌ವಲ್ಲಿ ಐ.ಎಂ.ಎಫ್. ಆಗ್ರಹಿಸಿದಂತೆ ನಡೆಸಿದ ತೈಲ ಬೆಲೆ ಏರಿಕೆಗಳನ್ನು ವಿರೋಧಿಸಿ ಭಾರೀ ಪ್ರತಿಭಟನೆ ನಡೆಯಿತು. ಕ್ರಾಂತಿಕಾರಿ ರಾಜಕೀಯದಲ್ಲಿ ಚವೇಝ್ ರ ವಿಕಾಸ ಇಲ್ಲಿಂದ ಆರಂಭವಾಯಿತು ಎನ್ನಲಾಗುತ್ತಿದೆ. ಮಿಲಿಟರಿ ಪ್ರಯತ್ನ ನಡೆಸಿದ ವಿಫಲರಾದರೂ ಜನಪ್ರಿಯರಾದರು. ೧೯೯೮ರಲ್ಲಿ ಭ್ರಷ್ಟಾಚಾರವನ್ನು ತೊಡೆದು, ವಿದೇಶೀಯರಿಗೆ ತಲೆಬಾಗಿಸುವುದನ್ನು ನಿಲ್ಲಿಸಿ ಒಂದು ಸಾಮಾಜಿಕ ಕ್ರಾಂತಿ ಆರಂಭಿಸುವ ವಚನದೊಂದಿಗೆ ಈತ ಅಧ್ಯಕ್ಷೀಯ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರೂ ಅಧಿಕಾರಕ್ಕೆ ಬಂದ ಮೇಲೆ ತನ್ನ ವಚನಗಳನ್ನು ಪಾಲಿಸುತ್ತಾರೆ ಎಂಬ ನಿರೀಕ್ಷೆ ಅಷ್ಟಾಗಿ ಇರಲಿಲ್ಲ. ಆದರೆ ಮುಂದಿನ ಬೆಳವಣಿಗೆಗಳು ನಿರೀಕ್ಷೆಗಳನ್ನು ಸೃಷ್ಟಿಸಿದವು. ಕ್ಯೂಬಾ ಕ್ರಾಂತಿಯ ೪೦ ವರ್ಷಗಳ ನಂತರ ಲ್ಯಾಟಿನ್ ಅಮೆರಿಕಾದಲ್ಲಿ ಆ ದಿಕ್ಕಿನಲ್ಲಿ ಒಂದು ಬೆಳವಣಿಗೆ ನಡೆದಿದೆ ಎಂದು ಲ್ಯಾಟಿನ್ ಅಮೆರಿಕಾದ ಹಿರಿಯ ಕ್ರಾಂತಿಕಾರಿ ಫಿಡೆಲ್ ಕಾಸ್ಟ್ರೋ ಉದ್ಗರಿಸಿದರು.

ವೆನಿಜುಲಾಕ್ಕೆ ಒಂದು ಹೊಸ ಸಂವಿಧಾನವನ್ನು ಸಿದ್ಧಪಡಿಸಿ, ಅದರ ಮೇಲೆ ದೇಶವ್ಯಾಪಿ ಚರ್ಚೆ ಹಾಗೂ ಜನಮತಗಣನೆ ನಡೆಸಿ ಅದಕ್ಕೆ ಅಂಗೀಕಾರ ಪಡೆಯಲಾಯಿತು. ಲ್ಯಾಟಿನ್ ಅಮೆರಿಕಾದ ಸ್ವಾತಂತ್ರ್ಯ ಆಂದೋಲನದ ಪಥಪ್ರದರ್ಶಕ ಸಿಮೊನ್ ಬೊಲಿವೆರ್ ಕನಸನ್ನು ನನಸಾಗಿಸುವುದರ ಸಂಕೇತವಾಗಿ ವೆನಿಜುಲ ಬೊಲಿವೆರಿಯನ್ ಗಣತಂತ್ರ ಎಂದು ಹೆಸರಿಸಲಾಯಿತು. ನಂತರ ನಡೆದ ರಾಷ್ಟ್ರೀಯ ಅಸೆಂಬ್ಲಿ ಚುನಾವಣೆಗಳಲ್ಲಿ ಚವೇಝ್ ನೇತೃತ್ವದ ರಾಜಕೀಯ ಮೈತ್ರಿಕೂಟ ಬಹುಮತ ಗಳಿಸಿತು. ಈ ಹೊಸ ರಾಷ್ಟ್ರೀಯ ಅಸೆಂಬ್ಲಿ ಆಕರ್ಷಕ ಸುಧಾರಣೆ ಸಣ್ಣ ಮೀನುಗಾರರ ರಕ್ಷಣೆ ಮುಂತಾದ ಜನಪರ ಶಾಸನಗಳನ್ನು ಅಂಗೀಕರಿಸಿತು. ಇದು ೪೯ ಶಾಸನಗಳ ಪ್ಯಾಕೇಜ್ ಎಂದೇ ಪ್ರಖ್ಯಾತವಾಯಿತು. ವೆನಿಜುಲಾದ ತೈಲದ ಪ್ರಯೋಜನವನ್ನು ಪಡೆಯುವಲ್ಲಿ ಖಾಸಗಿ ಕಂಪನಿಗಳ ಪಾತ್ರವನ್ನು ಸೀಮಿತಗೊಳಿಸುವ ಒಂದು ಕಾನೂನು ಕೂಡಾ ಇದರಲ್ಲಿ ಸೇರಿದೆ. ವಿದೇಶಾಂಗ ವಲಯದಲ್ಲೂ ಅಷ್ಟೇ ಧೀರ ನಿಲುವುಗಳನ್ನು ಚವೇಝ್ ಸರಕಾರ ತಳೆಯಿತು. ಫಿಲಿಪೈನ್ಸ್ ವಿಶ್ವವಿದ್ಯಾಲಯದ ವಿದ್ವಾಂಸ ವಾಲ್ಡನ್ ಬೆಲ್ಲೋ ಹೇಳಿದಂತೆ ‘ಕ್ರಾಂತಿ ವಾಸ್ತವವಾಗಿತ್ತು. ಅದೇ ರೀತಿ ಪ್ರತಿಕ್ರಾಂತಿಯೂ(ಫ್ರಂಟ್ ಲೈನ್, ೨೦೦೨ನೆಯ ಅಗಸ್ಟ್ ೧೬).

ಚವೇಝರ ಈ ಜನಪ್ರಿಯ ಕ್ರಮಗಳಿಂದ ಕುಪಿತರಾದ ವಿರೋಧಿಗಳು ಬುಡಮೇಲು ಕೃತ್ಯಗಳಿಗಿಳಿದರು. ಇದರ ಭಾಗವಾಗಿ ೨೦೦೨ನೆಯ ಏಪ್ರಿಲ್ ೧೧ರಂದು ಒಂದು ಚವೇಝ್ -ವಿರೋಧಿ ಪ್ರತಿಭಟನೆ ಯೋಜಿಸಿದರು. ಇದಕ್ಕೆ ಪ್ರತಿಯಾಗಿ ಸರಕಾರ-ಪರ ಮತ ಪ್ರದರ್ಶನವೂ ನಡೆಯಿತು. ಪ್ರದರ್ಶನಗಳ ವೇಳೆ ಉಂಟಾದ ಘರ್ಷಣೆಯಲ್ಲಿ ಯಾರೋ ಗುಂಡು ಹಾರಿಸಿದರು. ೧೮ ಜನ ಸತ್ತರು. ಇವರಲ್ಲಿ ಹೆಚ್ಚಿನವರು ಚವೇಝ್ ಬೆಂಬಲಿಗರು. ಕೆಲವು ಗಂಟೆಗಳ ನಂತರ ಸೇನಾಧಿಪತಿ ಜನರಲ್ ಎಫ್ರೆನ್ ವಾಸ್ಕ್ವೆಝ್ ಅಧ್ಯಕ್ಷರ ಭವನಕ್ಕೆ ಹೋಗಿ ಚವೇಝರ ರಾಜೀನಾಮೆ ಕೇಳಿದ. ಕೆಲವು ಬಂಡುಕೋರ ಸೇನಾಧಿಕಾರಿಗಳು ಚವೇಝರನ್ನು ಸೇನಾ ಮುಖ್ಯಾಲಯಕ್ಕೆ ಒಯ್ದರು. ಅಲ್ಲಿಂದ ಒಂದು ದ್ವೀಪಕ್ಕೆ ಒಯ್ದರು. ಇತ್ತ ವೆನಿಜುಲಾ ವಾಣಿಜ್ಯ ಮಂಡಳಿಯ ಮುಖ್ಯಸ್ಥನ ನೇತೃತ್ವ ದಲ್ಲಿ ಕೆಲವು ಜನರಲ್‌ಗಳು ಮತ್ತು ಅಡ್ಮಿರಲ್‌ಗಳ ಬೆಂಬಲದಿಂದ ತಾನೇ ಅಧಿಕಾರ ವಹಿಸಿ ಕೊಂಡಿತು. ರಾಷ್ಟ್ರೀಯ ಅಸೆಂಬ್ಲಿ ಸುಪ್ರಿಂ ಕೋರ್ಟ್, ಚುನಾವಣಾ ಮಂಡಳಿ, ಎಲ್ಲ ರಾಜ್ಯ ಸರಕಾರಗಳು, ಮುನಿಸಿಪಾಲಿಟಿಗಳನ್ನು ಈ ಕೂಡಲೇ ವಿಸರ್ಜಿಸಿತು. ರಾಷ್ಟ್ರೀಯ ಅಸೆಂಬ್ಲಿ ಅಂಗೀಕರಿಸಿದ ಕಾನೂನುಗಳ ಪ್ಯಾಕೇಜನ್ನು ರದ್ದು ಮಾಡಲಾಯಿತು. ಆದರೆ ಜನ ಚವೇಝ್ ರಾಜೀನಾಮೆ ನೀಡಿದ್ದಾರೆ ಎಂಬುದನ್ನು ನಂಬಲು, ಇವನ್ನೆಲ್ಲ ಸಹಿಸಲು ಸಿದ್ಧರಿರಲಿಲ್ಲ. ರಾಜಧಾನಿಯ ಸುತ್ತಮುತ್ತಲ ಪ್ರದೇಶಗಳಿಂದ ಭಾರೀ ಸಂಖ್ಯೆಯಲ್ಲಿ ಬಂದು ಪ್ರತಿಭಟಿಸಿದರು. ಕ್ಷಿಪ್ರಕ್ರಾಂತಿ ನಡೆಸಿದವರು ಭಯಭೀತರಾದರು. ಜನರೇ ಅದನ್ನು ವಿಫಲಗೊಳಿಸಿದರು. ೪೮ ಗಂಟೆಗಳೊಳಗೆ ಚವೇಝ್ ಮತ್ತೆ ಅಧ್ಯಕ್ಷರ ಭವನ ಪ್ರವೇಶಿಸಿದರು. ಇದರಲ್ಲಿ ಬುಶ್ ಆಡಳಿತದ ಕೈವಾಡ ಇತ್ತು. ಇಬ್ಬರು ಅಮೆರಿಕನ್ ನೌಕಾಧಿಕಾರಿಗಳು ಕ್ಷಿಪ್ರಕ್ರಾಂತಿ ಮುಖಂಡರ ಜತೆಗಿದ್ದರು ಎಂದು ಹೇಳಲಾಗುತ್ತಿದೆ. ಇದರಿಂದ ಚವೇಝ್ ತಾವಾಗಿಯೇ ನುಣುಚಿಕೊಳ್ಳಲು ಯತ್ನಿಸಿದರು.

ಈ ಅವಮಾನಕಾರೀ ವಿಫಲತೆಯ ನಂತರವೂ ಚವೇಝ್ -ವಿರೋಧಿ ಬಲಪಂಥೀಯರು ಸುಮ್ಮನಾಗಲಿಲ್ಲ. ೧೯೭೦-೭೩ರಲ್ಲಿ ಚಿಲಿಯಲ್ಲಿ ಪ್ರಯೋಗಿಸಿದ ಇನ್ನೊಂದು ತಂತ್ರವನ್ನು ಬಳಸಲು ಮುಂದಾದರು. ಸರಕಾರವನ್ನು ಆರ್ಥಿಕವಾಗಿ ಅಸ್ಥಿರಗೊಳಿಸುವ, ಬಿಕ್ಕಟ್ಟನ್ನು ಸೃಷ್ಟಿಸಿ ಪದಚ್ಯುತಗೊಳಿಸುವ ಪ್ರಯತ್ನಕ್ಕಿಳಿದರು. ೨೦೦೨ನೆಯ ಡಿಸೆಂಬರ್‌ನಲ್ಲಿ ಸರಕಾರೀ ಒಡೆತನದ ತೈಲ ಕಂಪನಿ ‘ಪೆಟ್ರೊಲಿಯೆಸ್ ಡೆ ವೆನಿಜುಲಾ’ದಲ್ಲಿ ಅಧಿಕಾರಿಗಳು ಮತ್ತು ಇತರರು ಮುಷ್ಕರ ನಡೆಸುವಂತೆ ಮಾಡಿದರು. ಎರಡು ತಿಂಗಳು ಮುಷ್ಕರ ನಡೆಯಿತು. ೧೮೦೦೦ ಉದ್ಯೋಗಿಗಳನ್ನು ವಜಾ ಮಾಡಲಾಯಿತು. ಇಲ್ಲಿಗೆ ವೆನಿಜುಲಾದ ಆರ್ಥಿಕದ ಜೀವಾಳವಾದ ತೈಲ ಉದ್ದಿಮೆ ನಿಂತೇ ಬಿಡುತ್ತದೆ ಎಂಬ ಪಾಶ್ಚಿಮಾತ್ಯ ವಿಶ್ಲೇಷಕರ ಭವಿಷ್ಯ ಸುಳ್ಳಾಯಿತು. ಈ ತಂತ್ರವೂ ವಿಫಲವಾಯಿತು.

ಚವೇಜ್ ವಿರೋಧಿಗಳು ಮರಳಿ ಯತ್ನಕ್ಕಿಳಿದರು. ಈ ಬಾರಿ ಅವರು ಸಂವಿಧಾನದಲ್ಲಿನ ಒಂದು ಅಂಶವನ್ನು ಬಳಸಿ ಅವರನ್ನು ಪದಚ್ಯುತಗೊಳಿಸಲು ಮುಂದಾದರು. ಅಧ್ಯಕ್ಷರನ್ನು ಹಿಂದಕ್ಕೆ ಕರೆಸುವ ಅವಕಾಶವಿದೆ. ಅವರ ಒತ್ತಾಯದ ಮೇರೆಗೆ ಅಗಸ್ಟ್ ೧೫, ೨೦೦೪ರಂದು ಜನಮತಗಣನೆ ನಡೆಯಿತು. ಚವೇಝ್ ಪರವಾಗಿ ೫೮ ಶೇ.ಕ್ಕಿಂತಲೂ ಹೆಚ್ಚು ಮತ ಬಂತು. ಇದರಲ್ಲಿಯೂ ಚವೇಝ್ ವಿರೋಧಿಗಳ ಪ್ರಚಾರಕ್ಕೆ ಅಮೆರಿಕಾದ ನ್ಯಾಶನಲ್ ಎಂಟೋ ಮೆಂಟ್ ಫಾರ್ ಡೆಮಾಕ್ರಸಿ ಎಂಬ ಸಂಸ್ಥೆಯ ಮೂಲಕ ೨೦ ಲಕ್ಷ ಡಾಲರ್ ಒದಗಿಸ ಲಾಯಿತಂತೆ.

ಈ ಹಿನ್ನೆಲೆಯಲ್ಲಿ ಹೊಸ ಸಂವಿಧಾನದ ಅಡಿಯಲ್ಲಿ ೨೦೦೬ನೆಯ ಡಿಸೆಂಬರ್ ೩ ರಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿನ ಚವೇಝ್ ಗೆಲುವು ನಿರೀಕ್ಷಿತವಾಗಿತ್ತು. ಆದರೆ ಅವರ ಗೆಲುವಿನ ಪ್ರಮಾಣ ಮತ್ತು ಈ ಚುನಾವಣೆ ಸುಲಲಿತವಾಗಿ ನಡೆದ ರೀತಿ ಎಲ್ಲ ವಿರೋಧಿಗಳ ಬಾಯಿ ಮುಚ್ಚಿಸಿತು ಶೇ.೭೫ ಮತದಾರರು ಭಾಗವಹಿಸಿದ ಈ ಚುನಾವಣೆ ಯಲ್ಲಿ ಚವೇಝ್ ಮೂರನೇ ಎರಡು ಬಹುಮತ ಪಡೆದರು. ಅಮೆರಿಕಾವೂ ಸೇರಿದಂತೆ ವಿಶ್ವದ ಎಲ್ಲೆಡೆಯಿಂದ ಬಂದ ೧೪೦೦ ವೀಕ್ಷಕರು ಮತದಾನ ಬೃಹತ್ ಪ್ರಮಾಣದಲ್ಲಿ, ಶಾಂತಿಯುತವಾಗಿ ಪಾರದರ್ಶಕವಾಗಿ ನಡೆಯಿತು ಎಂದು ಒಪ್ಪಿಕೊಂಡರು. ಕಳೆದ ಏಳು ವರ್ಷಗಳಿಂದ ಎಲ್ಲಾ ಚುನಾವಣೆ, ಜನಮತಗಣನೆಗಳ ಬಗ್ಗೆ ತಕರಾರು ಎತ್ತುತ್ತ ಬಂದಿದ್ದವರೂ ಈ ಬಾರಿ ಚಕಾರವೆತ್ತಲಿಲ್ಲ.

ಲ್ಯಾಟಿನ್ ಅಮೆರಿಕಾದ ಅತಿ ದೊಡ್ಡ ದೇಶ ಹಾಗೂ ಅತಿ ಹೆಚ್ಚು ಕೈಗಾರಿಕೀರಣಗೊಂಡ ದೇಶವಾದ ಬ್ರೆಜಿಲ್‌ನಲ್ಲಿ ೨೦೦೨ನೆಯ ಡಿಸೆಂಬರ್‌ನಲ್ಲಿ ‘ಕಾರ್ಮಿಕರ ಪಕ್ಷ’(ಪಿಟಿ)ದ ಲೂಯಿಝ್ ಇನೇಸಿಯೋ ‘‘ಲೂಲಾ’’ದ ಸಿಲ್ಟರವರು ೬೧ ಶೇ. ಮತದಿಂದ ಅಧ್ಯಕ್ಷರಾಗಿ ಆಯ್ಕೆಯಾದರು. ಇದನ್ನು ಈ ಪ್ರದೇಶದಲ್ಲಿ ಎಡಪಂಥದತ್ತ ತಿರುವಿನ ಇನ್ನೊಂದು ಮಹತ್ವದ ಘಟನೆ ಎಂದು ಪರಿಗಣಿಸಲಾಗಿದೆ.

೧೯೬೪ರಲ್ಲಿ ಎಡ ಒಲವಿನ ಗೌಲಾಟ್ ರ ಸರಕಾರವನ್ನು ಉರುಳಿಸಿ ಬಂದ ಮಿಲಿಟರಿ ಸರ್ವಾಧಿಕಾರ ೧೯೮೫ರವರೆಗೂ ಮುಂದುವರೆಯಿತು. ಈ ಮಿಲಿಟರಿ ಸರ್ವಾಧಿಕಾರದ ದಮನಕಾರೀ ಆಡಳಿತ ಮತ್ತು ವಿಫಲತೆಯ ಹಿನ್ನೆಲೆಯಲ್ಲಿ ಗ್ರಾಮಾಂತರದಲ್ಲಿ ‘ಭೂಹೀನ ಕೂಲಿಕಾರರ ಆಂದೋಲನ’ (ಎಂಎಸ್‌ಟಿ) ಹಾಗೂ ನಗರಗಳಲ್ಲಿ ಕಾರ್ಮಿಕ ಕೇಂದ್ರೀಯ ಸಂಘಟನೆ (ಸಿಯುಟಿ) ಹುಟ್ಟಿ ಬಂದಿತ್ತು. ಈ ಪರಿಸರದಲ್ಲಿ ೧೯೮೦ರಲ್ಲಿ ಸ್ಥಾಪನೆಗೊಂಡ ಲೂಲಾರವರ ‘ಕಾರ್ಮಿಕರ ಪಕ್ಷ’ (ಪಿಟಿ)ದ ಲೂಯಿಝ್ ಇನೇಸಿಯೋ ‘‘ಲೂಲಾ’’ದ ಸಿಲ್ವರವರು ೬೧ ಶೇ. ಮತದಿಂದ ಅಧ್ಯಕ್ಷರಾಗಿ ಆಯ್ಕೆಯಾದದ್ದು ಈ ಪ್ರದೇಶದಲ್ಲಿ ಎಡಪಂಥದತ್ತ ತಿರುವಿನ ಇನ್ನೊಂದು ಮಹತ್ವದ ಘಟನೆ ಎಂದು ಪರಿಗಣಿಸಲಾಗಿದೆ.

೧೯೬೪ರಲ್ಲಿ ಎಡ ಒಲವಿನ ಗೌಲಾಟ್ ರ್ ಸರಕಾರವನ್ನು ಉರುಳಿಸಿ ಬಂದ ಮಿಲಿಟರಿ ಸರ್ವಾಧಿಕಾರ ೧೯೮೫ರವರೆಗೂ ಮುಂದುವರೆಯಿತು. ಈ ಮಿಲಿಟರಿ ಸರ್ವಾಧಿಕಾರದ ದಮನಕಾರೀ ಆಡಳಿತ ಮತ್ತು ವಿಫಲತೆಯ ಹಿನ್ನೆಲೆಯಲ್ಲಿ ಗ್ರಾಮಾಂತರದಲ್ಲಿ ‘ಭೂಹೀನ ಕೂಲಿಕಾರರ ಆಂದೊಲನ’ (ಎಂ.ಎಸ್.ಟಿ) ಹಾಗೂ ನಗರಗಳಲ್ಲಿ ಕಾರ್ಮಿಕರ ಕೇಂದ್ರೀಯ ಸಂಘಟನೆ (ಸಿ.ಯು.ಟಿ) ಹುಟ್ಟಿ ಬಂದಿತ್ತು. ಈ ಪರಿಸರದಲ್ಲಿ ೧೯೮೦ರಲ್ಲಿ ಸ್ಥಾಪನೆಗೊಂಡ ಲೂಲಾರವರ ‘ಕಾರ್ಮಿಕರ ಪಕ್ಷ’ (ಪಿ.ಟಿ) ಮಿಲಿಟರಿ ಸರ್ವಾಧಿಕಾರೀ ಅಡಳಿತದ ಜನ-ವಿರೋಧಿ ಧೋರಣೆಗಳು ಹಾಗೂ ನಂತರ ಅಧಿಕಾರಕ್ಕೆ ಬಂದವರ ನವ-ಉದಾರವಾದಿ ನೀತಿಗಳ ವಿರುದ್ಧ ಸಂಚಯಗೊಂಡ ಜನತೆಯ ಅಸಂತೃಪ್ತಿಗೆ ದನಿ ನೀಡಲಾರಂಭಿಸಿ ಜನಪ್ರಿಯಗೊಂಡಿತ್ತು. ೧೯೮೯ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಗಳಲ್ಲಿ ‘ಕಾರ್ಮಿಕರ ಪಕ್ಷ’ದ ಪರವಾಗಿ ಸ್ಪರ್ಧಿಸಿದ ಲೂಲಾ ಶೇ.೪೪ ಮತಗಳಿಸಿದರೂ ಕೇವಲ ಶೇ.೨  ಮತಗಳಿಂದ ಸೋತರು. ೧೯೯೮ರಲ್ಲಿ ಲೂಲಾ ಮತ್ತೆ ಸ್ಪರ್ಧಿಸಿದರು. ಆದರೆ ಅವರು ಗಳಿಸಿದ ಮತಗಳ ಪ್ರಮಾಣ ಶೇ.೩೨ಕ್ಕಿಳಿಯಿತು. ಈ ಹಿನ್ನೆಲೆಯಲ್ಲಿ ೨೦೦೨ರಲ್ಲಿ ಲೂಲಾ ಶೇ.೬೧ ರಷ್ಟು ಮತಗಳಿಂದ ಅಧ್ಯಕ್ಷರಾದದ್ದು ಗಮನಾರ್ಹವಾಗಿತ್ತು.

ಲೂಲಾ ೧೯೮೯ ಹಾಗೂ ೧೯೯೮ರ ಸೋಲುಗಳ ನಂತರ ದೇಶದ ಶ್ರೀಮಂತ ಮತ್ತು ಮಧ್ಯಮ ವರ್ಗಗಳ ಜನಗಳು ಬಯಸಿದಂತೆ ‘ಜವಾಬ್ದಾರಿ’ಯಿಂದ ವರ್ತಿಸಿದರು. ಅಂದರೆ ಅದುವರೆಗಿನ ನವ-ಉದಾರವಾದಿ ನಿಲುವುಗಳೊಂದಿಗೆ ರಾಜಿ ಮಾಡಿಕೊಂಡರು ಎಂದೂ ಅವರ ಬಗ್ಗೆ ಟೀಕೆಗಳು ಬಂದಿವೆ. ಚುನಾವಣಾ ಪ್ರಚಾರದ ವೇಳೆಯಲ್ಲಿ ಪಾಶ್ಚಿಮಾತ್ಯ ಸರಕಾರಗಳು ಅವರು ‘ಬೇಜವಾಬ್ದಾರಿ ಎಡಪಂಥೀಯ’, ಬ್ರೆಜಿಲ್‌ನ ಹಿಂದಿನ ಸರಕಾರಗಳು ಮಾಡಿದ ಸಾಲಗಳನ್ನು ಧಿಕ್ಕರಿಸಬಹುದು ಎಂದೆಲ್ಲಾ ಪ್ರಚಾರ ಮಾಡಿದ್ದರು. ಇದಕ್ಕೆ ಉತ್ತರವಾಗಿ ಲೂಲಾ ‘‘ಬ್ರೆಜಿಲ್ ಜನತೆಗೆ ಪತ್ರ’’ ಪ್ರಕಟಿಸಿ ತಾನು ಹೀಗೇನೂ ಮಾಡುವುದಿಲ್ಲ. ಅಂತಾರಾಷ್ಟ್ರೀಯ ಬಂಡವಾಳದ ಚಲನೆಗೆ ಹೊಸ ಮಿತಿಗಳನ್ನೇನೂ ಹಾಕುವುದಿಲ್ಲ’’ ಎಂದಿದ್ದರಂತೆ.

ಅಧಿಕಾರಕ್ಕೆ ಬಂದ ನಂತರ ಲೂಲರವರ ವರ್ತನೆ ಇದಕ್ಕೆ ಅನುಗುಣವಾಗಿಯೇ ಇತ್ತು. ಬ್ರೆಜಿಲ್‌ನ ಪೋರ್ಟೊ ಅಲೆಗ್ರೆಯಲ್ಲಿ ನಡೆದ ಜಾಗತೀಕರಣ-ವಿರೋಧಿಗಳ ವಿಶ್ವ ಸಾಮಾಜಿಕ ವೇದಿಕೆ(ಡಬ್ಲ್ಯು.ಎಸ್.ಎಫ್)ಯ ಸಮ್ಮೇಳನದಲ್ಲೂ ಭಾಗವಹಿಸಿದರು. ನಂತರ ದಾವೋಸ್‌ನಲ್ಲಿ ನಡೆದ ವಿಶ್ವದ ಬಂಡವಾಳಿಗರ ಸಭೆಯಲ್ಲೂ ಭಾಗವಹಿಸಿದರು. ಆದರೆ ಅವರ ನೀತಿಗಳು ಅವರನ್ನು ಅಧಿಕಾರಕ್ಕೆ ತಂದ ಕಾರ್ಮಿಕರ, ರೈತರ, ಇತರ ಜನಸಾಮಾನ್ಯರ ನಿರೀಕ್ಷೆಯಂತೆ ಇರಲಿಲ್ಲ. ಆದರೂ ಅವರ ಆಳ್ವಿಕೆಯಲ್ಲಿ ದುಡಿಯುವ ಜನಗಳ ಆದಾಯದಲ್ಲಿ ಸ್ವಲ್ಪ ಹೆಚ್ಚಳವಂತೂ ಕಂಡುಬಂತು.

ಇತ್ತೀಚೆಗೆ ನಡೆದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಲೂಲಾ ಮತ್ತೆ ಆಯ್ಕೆಗೊಂಡಿದ್ದಾರೆ. ಆದರೆ ಎರಡನೇ ಸುತ್ತಿನ ಚುನಾವಣೆಗಳ ನಂತರ. ಮೊದಲ ಸುತ್ತಿದಲ್ಲಿ ಅವರಿಗೆ ಈ ಬಾರಿ ೫೦ ಶೇ. ಮತ ಸಿಗಲಿಲ್ಲ. ಈಗ ಬದಲಾಗಿರುವ ಸನ್ನಿವೇಶದಲ್ಲಿ ಲೂಲಾ ಮತ್ತು ಅವರ ‘ಕಾರ್ಮಿಕ ಪಕ್ಷ’ ಹಿಂದಿನ ದಾರಿ ಹಿಡಿಯುವ ಆಗತ್ಯವಿಲ್ಲ. ಚವೇಝ್ ಜತೆಗೂಡಬಹುದು ಎಂಬುದು ಎಡಪಂಥೀಯರ ನಿರಿಕ್ಷೆ.

೨೦೦೩ರ ಮೇನಲ್ಲಿ ಅರ್ಜೆಂಟೈನಾದಲ್ಲಿ ನಡೆದ ಚುನಾವಣೆಗಳ ಫಲಿತಾಂಶವನ್ನೂ ಈ ಅಲೆಯ ಭಾಗವೆಂದೇ ಕಾಣಬಹುದು ಎಂದು ಕೆಲವು ರಾಜಕೀಯ ವೀಕ್ಷಕರು ಅಭಿಪ್ರಾಯ ಪಟ್ಟಿದೆ. ಇದು ಲ್ಯಾಟಿನ್ ಅಮೆರಿಕಾದ ಎರಡನೇ ದೊಡ್ಡ ಆರ್ಥಿಕವಾಗಿದ್ದ ನವ ಉದಾರವಾದಿ ನೀತಿಗಳಿಂದ ತೀವ್ರ ಬಿಕ್ಕಟ್ಟನ್ನು ಎದುರಿಸಿದ ಇನ್ನೊಂದು ದೇಶ; ಜನಗಳ ಭಾರೀ ಪ್ರತಿಭಟನೆಗಳ ನಡುವೆ ಮೂರು ಅಧ್ಯಕ್ಷರುಗಳು ಬಂದು ಹೋದರು, ಆದರೆ ಬಿಕ್ಕಟ್ಟು ಬಗೆಹರಿಯಲಿಲ್ಲ, ಪೆಸೋವನ್ನು ೩೦ ಅಪಮೌಲ್ಯ ಮಾಡಿದರೂ ಬಗೆಹರಿಯಲಿಲ್ಲ. ಈ ಹಿನ್ನೆಲೆಯಲ್ಲಿ ನಡೆದ ಚುನಾವಣೆಗಳಲ್ಲಿ ಗೆದ್ದ ನೆಸ್ಟರ್ ಕಿರ್ಚನರ್ ವಿದೇಶೀ ಸಂಸ್ಥೆಗಳ ಸಾಲಗಳ ಒಂದು ಭಾಗವನ್ನು ಮರುಪಾವತಿ ಮಾಡುವುದಿಲ್ಲ ಎಂದರು. ಉಳಿದ ಸಾಲವನ್ನು ಚವೇಝ್‌ರ ವೆನಿಜುಲಾ ಖರೀದಿಸಿ ಈ ದೇಶವನ್ನು ಉಳಿಸಿತು. ಈ ಮೂಲಕ ಅರ್ಜೆಂಟೈನಾವೂ ಈ ‘ಅಲೆ’ಯ ಭಾಗವಾಯಿತು.

ನಂತರ ಈ ಅಲೆ ತಟ್ಟಿದ್ದು ಉರುಗ್ವೇಯನ್ನು. ಅಲ್ಲಿ ಅಕ್ಟೋಬರ್ ೨೦೦೪ರಲ್ಲಿ ತಬಾರೆ ವಾಸ್ಕ್ವೆಝ್ ಅಧ್ಯಕ್ಷರಾಗಿ ಆಯ್ಕೆಗೊಂಡರು. ಈ ದೇಶದ ಮೊದಲ ‘ಸಮಾಜ ವಾದಿ’ ಅಧ್ಯಕ್ಷ ಎಂಬುದು ಅವರ ಹೆಗ್ಗಳಿಕೆ.

ಇದರ ನಂತರದ ಘಟನೆ ಈ ಅಲೆಯ ಬಣ್ಣವನ್ನು ಗಾಢಗೊಳಿಸಿದ ಒಂದು ಐತಿಹಾಸಿಕ ಘಟನೆ. ಅದೆಂದರೆ ಡಿಸೆಂಬರ್ ೨೦೦೫ರಲ್ಲಿ ಬೊಲಿವಿಯಾದ ಅಧ್ಯಕ್ಷೀಯ ಚುನಾವಣೆಗಳಲ್ಲಿ ‘ಸಮಾಜವಾದದತ್ತ ಆಂದೋಲನ’(ಎಂ.ಎ.ಎಸ್)ದ ಸಂಸ್ಥಾಪಕ ಮುಖಂಡ ಇವೋ ಮೊರೇಲಸ್ ಅವರ ಭಾರೀ ವಿಜಯ. ಇಡೀ ಲ್ಯಾಟಿನ್ ಅಮೆರಿಕಾದಲ್ಲೇ ಅಧ್ಯಕ್ಷ ಪದವಿಗೇರಿದ ಪ್ರಪ್ರಥಮ ಮೂಲನಿವಾಸಿ ಎಂಬುದು ಇವರ ಹೆಗ್ಗಳಿಕೆ. ದೇಶದ ನೈಸರ್ಗಿಕ ಸಂಪನ್ಮೂಲಗಳು ಮುಖ್ಯವಾಗಿ ನೀರು, ತೈಲ ಮತ್ತು ಅನಿಲ ದೇಶದ ಜನಗಳ ಕೈಯಲ್ಲೇ ಇರಬೇಕು ಎಂದು ೨೦೦೦ದ ಆರಂಭದಿಂದಲೂ ಇಲ್ಲಿ ನಡೆದಿರುವ ಬೃಹತ್ ಚಳುವಳಿಗಳ ಹಿನ್ನೆಲೆಯಲ್ಲಿ ಬೊಲಿವಿಯಾದ ಜನತೆ ಅದರಲ್ಲೂ ಅಲ್ಲಿನ ಮೂಲ ನಿವಾಸಿಗಳು ಈ ವಿಜಯ ಸಾಧಿಸಿದರು. ೨೦೦೨ರ ಅಧ್ಯಕ್ಷೀಯ ಚುನಾವಣೆಗಳಲ್ಲೂ ಮೊರೇಲಸ್ ಇನ್ನೇನು ಗೆದ್ದು ಬಿಡುತ್ತಾರೆ ಎಂದು ನಿರೀಕ್ಷೆಯಿತ್ತು. ಆತ ಗೆದ್ದರೆ ಅಮೆರಿಕಾ ತನ್ನ ನೆರವು ಕಡಿತ ಮಾಡಬಹುದೆಂದು ಬೊಲಿವಿಯಾದಲ್ಲಿ ಅಮೆರಿಕಾದ ರಾಯಭಾರಿಯಾಗಿದ್ದು ಮ್ಯಾನುವೆಲ್ ರೋಜಾ ಸಾರ್ವಜನಿಕವಾಗಿಯೇ ಹೇಳಿದರು. ಅಂತಿಮವಾಗಿ ಮೊರೇಲಸ್ ೨ ಶೇ. ಮತಗಳಿಂದಷ್ಟೇ ಸೋತರು. ಆದರೆ ಈ ಬಾರಿ ಆ ಬೆದರಿಕೆಯೂ ಸಾಗಲಿಲ್ಲ. ಬೊಲಿವಿಯಾ ಅಧ್ಯಕ್ಷೀಯ ಚುನಾವಣೆಗಳಲ್ಲಿ ಯಾವುದೇ ಅಭ್ಯರ್ಥಿ ಶೇ.೫೦ ಮತ ಗಳಿಸದಿದ್ದರೆ ಬೊಲಿವಿಯನ್ ಸಂಪತ್ತು ಅಧ್ಯಕ್ಷನನ್ನು ಆರಿಸುತ್ತದೆ ಬಹಿರಂಗ ಮತದಾನದಿಂದಲ್ಲ, ಒಂದು ರೀತಿಯ ಕುದುರೆ ವ್ಯಾಪಾರದ ಮೂಲಕ. ಆದರೆ ಮೊರೇಲಸ್ ಶೇ.೫೪  ಮತಗಳನ್ನು ಪಡೆದು ನೇರವಾಗಿ ಗೆದ್ದರು. ಹಿಂದೆ ೧೮೦ ವರ್ಷಗಳಲ್ಲಿ ಯಾರೂ ಈ ರೀತಿ ನೇರವಾಗಿ ಗೆದ್ದಿರಲಿಲ್ಲ. ಅಮೆರಿಕಾ ಬೆಂಬಲಿತ ಅಭ್ಯರ್ಥಿ ಜೋರ್ಜ್ ಕ್ವಿರೋಗಗೆ ಸಿಕ್ಕಿದ್ದು ಮೊರೆಲೆಸರ ಅರ್ಧದಷ್ಟು ಮತಗಳು ಮಾತ್ರ. ಸಂಪತ್ತಿನ ಕೆಳ ಸದನವಾದ ಪ್ರತಿನಿಧಿ ಸಭೆಯಲ್ಲೂ ಮೊರೇಲೆಸ್‌ರ ಪಕ್ಷಕ್ಕೆ ಬಹುಮತ ದೊರೆತಿದೆ.

ಬೊಲಿವಿಯಾದ ಕೊಕೋ ಬೆಳೆಯುವ ಚಪಾರೆ ಪ್ರದೇಶದಲ್ಲಿ ಒಂದು ಬಡ ರೈತ ಕುಟುಂಬದಲ್ಲಿ ಹುಟ್ಟಿದ ಮೊರೇಲಸ್ ಆ ಪ್ರದೇಶದಲ್ಲಿ ಮೂಡಿ ಬಂದ ಕೋಕೊ ಬೆಳೆಗಾರರ ಸಂಘದ ಮುಖಂಡನಾಗಿ ಬೆಳೆಕಿಗೆ ಬಂದರು. ೧೯೫೦ರ ದಶಕದವರೆಗೂ ಮೂಲನಿವಾಸಿಗಳಿಗೆ ಮತದಾನದ ಹಕ್ಕು ಇರದಿದ್ದ, ಅವರನ್ನು ಸಾರ್ವಜನಿಕ ಸ್ಥಳಗಳಿಂದ ಹೊರಗಿಡಲ್ಪಟ್ಟಿದ್ದ ಬೊಲಿವಿಯಾದಲ್ಲಿ ಮೊದಲ ಬಾರಿಗೆ ಆರಿಸಿ ಬಂದ ಮೊರೇಲಸ್ ‘ನಮ್ಮ ಆಂದೋಲನ ಯಾರನ್ನೂ ಹೊರಗಿಡುವುದಿಲ್ಲ. ನಮ್ಮ ಆಡಳಿತ ದ್ವೇಷವನ್ನು, ತಿರಸ್ಕಾರವನ್ನು ಕೊನೆಗೊಳಿಸುತ್ತದೆ. ನವ=ಉದಾರವಾದಿ ಪ್ರಭುತ್ವ ವಸಾಹತುಶಾಹೀ ಪ್ರಭುತ್ವ ಅಂತ್ಯಗೊಳ್ಳುತ್ತದೆ’ ಎಂದು ಉದ್ಗಾರವೆತ್ತಿದರು.

೨೦೦೭ನೆಯ ಮೇ ದಿನದಂದು ದೇಶದ ಹೈಡ್ರೋಕಾರ್ಬನ್(ಇಂದನ ಮೂಲ) ವಲಯವನ್ನು ರಾಷ್ಟ್ರೀಕರಿಸಲಾಗಿದೆ ಎಂದು ಪ್ರಕಟಿಸುತ್ತಾ ‘ಈ ಚಾರಿತ್ರಿಕ ದಿನದಂದು ಬೊಲಿವಿಯಾ ತನ್ನ ನೈಸಗಿಕ ಸಂಪನ್ಮೂಲಗಳನ್ನು ಮತ್ತೆ ತನ್ನ ಹತೋಟಿಗೆ ತೆಗೆದುಕೊಳ್ಳುತ್ತಿದೆ. ವಿದೇಶಿ ಕಂಪನಿಗಳ ಲೂಟಿ ಮುಗಿದಿದೆ’ ಎಂದು ಸಾರಿದರು.

ಚಿಲಿಯಲ್ಲೂ ಸಮಾಜವಾದಿ ಪಕ್ಷ ಅಭ್ಯರ್ಥಿ ಮಿಶೆಲೆ ಬೆಚೆಲೆಟ್ ೫೩ ಶೇ.ಮತಗಳಿಸಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಈಕೆ ಲ್ಯಾಟಿನ್ ಅಮೆರಿಕಾದ ಪ್ರಥಮ ಮಹಿಳಾ ಅಧ್ಯಕ್ಷರು. ಪಿನೊಚೆ ಸರ್ವಾಧಿಕಾರದ ವಿರುದ್ಧ ಹೋರಾಟ ನಡೆಸಿದವರು. ಈಕೆಯ ತಂದೆ ವೈಮಾನಿಕ ದಳದಲ್ಲಿ ಅಧಿಕಾರಿಯಾಗಿದ್ದು ಪಿನೊಚೆಯ ಜೈಲಿನಲ್ಲಿ ಸಾವನ್ನಪ್ಪಿದರು. ಆದರೆ ಆಕೆಯ ಸಮಾಜವಾದಿ ಪಕ್ಷ ಈಗ ಅಲೆಂದೆಯವರ ಸಮಾಜವಾದಿ ಪಕ್ಷವಾಗಿ ಉಳಿದಿಲ್ಲ. ಈಕೆಯ ಮೊದಲು ಅಧ್ಯಕ್ಷರಾಗಿದ್ದ ರಿಕಾರ್ಡೊ ಲಾಗೊಸ್ ಕೂಡಾ ಸಮಾಜವಾದಿ ಪಕ್ಷದವರು. ಆದರೆ ನವ ಉದಾರವಾದಿ ಆರ್ಥಿಕ ನೀತಿಗಳನ್ನೇ ಅನುಸರಿಸಿದವರು. ಈಕೆ ಆತನ ಸಂಪುಟದಲ್ಲಿ ಪಕ್ಷದವರು, ಆದರೆ ನವ ಉದಾರವಾದಿ ಆರ್ಥಿಕ ನೀತಿಗಳನ್ನೇ ಅನುಸರಿಸಿದವರು. ಈಕೆ ಆತನ ಸಂಪುಟದಲ್ಲಿ ರಕ್ಷಣಾಮಂತ್ರಿಯಾಗಿದ್ದರು. ಎಡಪಂಥವನ್ನು ನಿರ್ನಾಮ ಮಾಡಿದ ಪಿನೊಚೆ ಸರ್ವಾಧಿಕಾರ ಕೊನೆಯಾದಾಗ ಅಲ್ಲಿನ ಕ್ರಿಶ್ಚಿಯನ್ ಡೆಮಾಕ್ರಟರು ಮತ್ತು ಸೋಶಲಿಸ್ಟರು ನವ ಉದಾರವಾದಿ ಮಾದರಿಯನ್ನು ತ್ಯಜಿಸುವುದಿಲ್ಲ ಎಂದು ಅಲ್ಲಿಯ ಆಳುವವರಿಗೆ ಮತ್ತು ವಿಶ್ವಬ್ಯಾಂಕಿಗೆ ಭರವಸೆ ನೀಡಿದರಂತೆ. ಹೀಗಿರುವಾಗ ಆಕೆ ಅಧ್ಯಕ್ಷೆಯಾಗಿ ‘ಎಳೆಗೆಂಪು ಅಲೆ’ಯ ಭಾಗವಾಗುವ ಬಗ್ಗೆ ಸಂದೇಹ ಇದ್ದೇ ಇದೆ. ಎಡಪಂಥೀಯರು ಬಹಳ ಮಂದಿ ಆಕೆಯಿಂದ ದೂರವಿದ್ದರು. ಆಕೆಯ ಪ್ರತಿಸ್ಪರ್ಧಿ ಒಬ್ಬ ಕೋಟ್ಯಧಿಪತಿ. ಆದ್ದರಿಂದ ಚಿಲಿ ಕಮ್ಯುನಿಸ್ಟ್ ಪಕ್ಷ ಕಾರ್ಮಿಕರ, ಮೂಲನಿವಾಸಿಗಳ ಮತ್ತು ಮಹಿಳೆಯರ ಕೆಲವು ಹಕ್ಕುಗಳನ್ನು ಮುಂದಿಟ್ಟು ಅರೆಮನಸ್ಸಿ ನಿಂದಲೇ ಆಕೆಗೆ ಬೆಂಬಲ ನೀಡಿತು. ಇದಕ್ಕೆ ಪ್ರತಿಯಾಗಿ ಆಕೆ ಕ್ಯೂಬಾ ಮತ್ತು ವೆನೆಜುಲಾದ ಬಗ್ಗೆ ಟೀಕೆ ಮಾಡುತ್ತಿಲ್ಲ. ಮೊರೇಲೆಸ್ ಸರಕಾರದೊಂದಿಗೆ ಉತ್ತಮ ಸಂಬಂಧಗಳನ್ನು ಇಟ್ಟುಕೊಳ್ಳುವುದಾಗಿ ಆಕೆ ಹೇಳಿಕೊಂಡಿದ್ದಾರೆ.

ಹೈತಿಯಲ್ಲಿಯೂ ಇತ್ತೀಚೆಗೆ ೨೦೦೬ನೆಯ ಫೆಬ್ರವರಿಯಲ್ಲಿ ಅಧ್ಯಕ್ಷೀಯ ಚುನಾವಣೆಗಳು ನಡೆದವು. ಈ ಖಂಡದಲ್ಲಿಯೇ ಅತೀ ಬಡದೇಶವಾದ ಈ ಪುಟ್ಟದೇಶದ್ದು ಸ್ವಲ್ಪ ಬೇರೆಯದೇ ಕಥೆ. ೨೦೦೪ರಲ್ಲಿ ಅಮೆರಿಕಾ ಬೆಂಬಲಿತ ಕ್ಷಿಪ್ರ ಕ್ರಾಂತಿಯ ನಂತರ ನಡೆದ ಚುನಾವಣೆಯದು. ಆ ಪದಚ್ಯುತಗೊಳಿಸ್ಪಟ್ಟ ಜೀನ್ ಬರ್ಟ್ರೆಡ್ ಅರಿಸ್ಟೈಡ್ ನ ಶಿಷ್ಯ ರೇಗೆ ಪ್ರೆವಲ್ ಗೆಲ್ಲುವ ನಿರೀಕ್ಷೆಯಿತ್ತು. ಆದರೆ ಚುನಾವಣೆ ನಡೆದು ಹತ್ತು ದಿನಗಳಾದರೂ ಫಲಿತಾಂಶ ಪ್ರಕಟಿಸಲಿಲ್ಲ. ಕಾರಣ ಆತ ೫೦ ಶೇ. ಮತ ಗಳಿಸಲಿಲ್ಲ ಎಂದು ಹೇಳಲಾಯಿತು. ಚುನಾವಣಾ ಮೋಸ ನಡೆದಿರಬೇಕು ಎಂದು ಜನ ಬೀದಿಗಿಳಿದರು. ಕೊನೆಗೂ ಚುನಾವಣಾ ಮಂಡಳಿ ಪ್ರೆವಲ್ ಮೊದಲ ಸುತ್ತಿನಲ್ಲೇ ಗೆದ್ದಿದ್ದಾರೆ ಎಂದು ಪ್ರಕಟಿಸಿತು.

ಈ ಹಿಂದೆ ೨೦೦೦ರಲ್ಲಿ ಅರಿಸ್ಟೆಡ್‌ರನ್ನು ಹೈತಿಯ ಬಡಜನ ಭಾರೀ ಬಹುಮತದಿಂದ ಗೆಲ್ಲಿಸಿದ್ದರು. ೧೯೯೦ರಲ್ಲಿ, ನಂತರ ಮತ್ತೆ ೧೯೯೪ರಲ್ಲಿಯೂ ಅವರನ್ನು ಆರಿಸಿದ್ದರು. ಈತ ಲ್ಯಾಟಿನ್ ಅಮೆರಿಕಾದಲ್ಲಿ ಅಧ್ಯಕ್ಷ ಸ್ಥಾನಕ್ಕೇರಿದ ಪ್ರಥಮ ಕ್ಯಾಥೊಲಿಕ್ ಪಾದ್ರಿ- ‘‘ಎಡ ಒಲವಿನ ರಾಷ್ಟ್ರೀಯವಾದಿ’ ಎಂದು ನ್ಯೂಯಾರ್ಕ್ ಟೈಮ್ಸ್ ವರ್ಣಿಸಿದ ಪಾದ್ರಿ. ಆದ್ದರಿಂದಲೇ ಹೈತಿಯ ಶ್ರೀಮಂತರ, ಅವರ ರಕ್ಷಣೆಗೆ ನಿಂತಿದ್ದ ಅಮೆರಿಕನ್ ಬಂಡವಾಳಿಗರ ಕೆಂಗಣ್ಣಿಗೆ ಗುರಿಯಾದರು.

೨೦೦೬ರ ಉತ್ತರಾರ್ಧದಲ್ಲಿ ಇನ್ನೂ ಆರು ದೇಶಗಳಲ್ಲಿ ಅಧ್ಯಕ್ಷೀಯ ಚುನಾವಣೆಗಳು ನಡೆದವು. ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಆಳರಸರ ‘ಮಾದಕದ್ರವ್ಯಗಳ ಮೇಲೆ ಸಮರ’ದ ಹೆಸರಿನಲ್ಲಿ ಶಸ್ತ್ರಾಸ್ತ್ರಗಳನ್ನು ಪಡೆಯುವ ಕೊಲೊಂಬಿಯಾದಲ್ಲಿ ಮತ್ತೆ ಅವರ ಮಿತ್ರ ಉರಿಬೆ ಗೆದ್ದಿದ್ದಾರೆ. ಆದರೆ ದೇಶದ ಅರ್ಧದಷ್ಟು ಭಾಗದ ಮೇಲೆ ನಿಯಂತ್ರಣ ಹೊಂದಿರುವ ಗೆರಿಲ್ಲಾಗಳಿಂದ ಸವಾಲು ಈಗಲೂ ಮುಂದುವರೆದಿದೆ. ಪೆರುವಿನಲ್ಲಿ ಎಡ ಒಲವಿನ ಅಭ್ಯರ್ಥಿ ಒಲ್ಲಾಂಟ ಹುಮಾಲಾ ಗೆಲ್ಲುವ ನಿರೀಕ್ಷೆಯಿತ್ತು. ಆದರೆ ಎರಡನೇ ಸುತ್ತಿನಲ್ಲಿ ಬಲಪಂಥೀಯ ಅಭ್ಯರ್ಥಿಗಳ ಮತ ಪಡೆದ ಅಲನ್ ಗಾರ್ಸಿಯಾ ಮತ್ತೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆತನಿಗೆ ೫೩ ಶೇ. ಹಾಗೂ ಹುಮಾಲಾಗೆ ೪೬.೫ ಶೇ.ಮತ ದೊರೆಯಿತು.

ಲ್ಯಾಟಿನ್ ಅಮೆರಿಕಾದಲ್ಲಿ ಹರಡುತ್ತಿರುವ ‘ಅಲೆ’ಯ ಸಂದರ್ಭದಲ್ಲಿ ಮೆಕ್ಸಿಕೋದ ಚುನಾವಣೆ ಬಹಳ ಗಮನ ಸೆಳದಿತ್ತು. ಅಲ್ಲಿ ಎಡಪಂಥೀಯ ಆಂದೋಲನ ಆಡಳಿತಕ್ಕೆ ದೊಡ್ಡ ಸವಾಲಾಗಿತ್ತು. ಅಲ್ಲಿಯೂ ಆಂಡ್ರೆ ಲೋಪೆಝಾ ಒಬ್ರೆಡೋರ್ ಅವರ ಗೆಲುವು ದೇಶವನ್ನು ಎಡಪಂಥದತ್ತ ತಿರುಗಿಸುವ ನಿರೀಕ್ಷೆಯಿತ್ತು. ಇಲ್ಲಿ ಚುನಾವಣೆಗಳಲ್ಲಿ ಬಹಳ ಮೋಸ ನಡೆದಿದೆ ಎಂದು ಚುನಾವಣಾ ಟ್ರಿಬ್ಯುನಲ್ ಒಪ್ಪಿಕೊಂಡರೂ ಅದು ಅಧ್ಯಕ್ಷ ಹುದ್ದೆಯನ್ನು ಬಲಪಂಥೀಯ ಅಭ್ಯರ್ಥಿ ಫೆಲಪೆ ಕಾಲ್ಡೆರೋನ್ ಗೆ ದಯಪಾಲಿಸಿತು. ಇದಕ್ಕೆ ಜನಗಳಿಂದ ಭಾರೀ ಪ್ರತಿರೋಧವೂ ಬಂತು. ಆದರೆ ಈ ಪ್ರತಿರೋಧ ಹೈತಿಯಂತೆ ಜನಾದೇಶವನ್ನು ಸುಳ್ಳಾಗಿಸುವುದನ್ನು ತಡೆಯುವಲ್ಲಿ ಯಶಸ್ವಿಯಾಗಲಿಲ್ಲ.

೨೦೦೬ನೆಯ ನವೆಂಬರ್‌ನಲ್ಲಿ ನಿಕರಾಗುವಾದಲ್ಲಿ ನಡೆದ ಚುನಾವಣೆಗಳಲ್ಲಿ ಸ್ಯಾಂದಿನಿಸ್ತಾ ಪಕ್ಷದ ಮುಖಂಡ ಡೆನಿಯಲ್ ಒರ್ಟೆಗಾ ಭಾರೀ ಗೆಲುವು ಸಾಧಿಸಿ ಎಡಪಂಥದತ್ತ ‘ಅಲೆ’ಯ ಭಾಗವಾದರು. ಆದರೆ ೯೦ರ ದಶಕದಲ್ಲಿ ಅಧಿಕಾರಕ್ಕೆ ಬಂದು ಅಮೆರಿಕಾ ಬೆಂಬಲಿತ ‘ಕಾಂಟ್ರಾ’ಗಳನ್ನು (ಕ್ರಾಂತಿ ವಿರೋಧಿಗಳನ್ನು) ಎದುರಿಸಿದ ಒರ್ಟೆಗಾ ಈಗ ಬದಲಾಗಿದ್ದಾರೆ ಎನ್ನಲಾಗುತ್ತಿದೆ. ಆದರೂ ಅಲ್ಲಿ ಮತ್ತೆ ಬಲಪಂಥೀಯರು ಅಧಿಕಾರಕ್ಕೆ ಬರುವುದನ್ನು ತಡೆದಿದ್ದಾರೆ ಎಂಬುದು ಈಗ ಮುಖ್ಯವಾಗಿದೆ. ಕೊನೆಯದಾಗಿ, ಈಕ್ವೆಡಾರ್‌ನಲ್ಲಿ ನಡೆದ ಚುನಾವಣೆಯಲ್ಲೂ ಲ್ಯಾಟಿನ್ ಅಮೆರಿಕಾದ ಎಡಪಂಥೀಯರ ಜೊತೆಗೆ ನಿಲ್ಲಬಹುದಾದ ರಫೆಲ್ ಕೊರಿಯಾ ಗೆದ್ದಿದ್ದಾರೆ. ಇಲ್ಲಿಯೂ ಮೂಲ ನಿವಾಸಿಗಳ ಆಂದೋಲನ ಬಲಿಷ್ಠ ವಾಗಿದೆ.

ಒಟ್ಟಿನಲ್ಲಿ ಲ್ಯಾಟಿನ್ ಅಮೆರಿಕಾದ ೩೬.೫ ಕೋಟಿ ಜನಗಳಲ್ಲಿ ೩೦ ಕೋಟಿ ಜನ ಈಗ ಎಡ ಒಲವಿನ ಸರಕಾರಗಳ ಆಳ್ವಿಕೆಗಳಿಗೆ ಒಳಪಟ್ಟಿದ್ದಾರೆ ಎಂಬುದು ಗಮನಾರ್ಹ.