. ಕೊಲಂಬಿಯಾ : ಕೊಲಂಬಿಯಾದ ಭೂ ವಿಸ್ತೀರ್ಣ. ೧,೧೪೧,೭೪೮ ಚ.ಕಿ.ಮೀ. ಅಥವಾ ೪೪೦, ೮೩೧. ಚ.ಮೈಲಿಗಳು. ೧೯೯೨ರಲ್ಲಿ ಇದರ ಜನಸಂಖ್ಯೆ ೩೩,೩೯,೫೩೬. ರೋಮನ್ ಕ್ಯಾಥೋಲಿಕ್ ಧರ್ಮವು ಇಲ್ಲಿ ಪ್ರಬಲವಾಗಿದೆ. ಇಲ್ಲಿ ಸ್ಪೇನ್ ಭಾಷೆ ಮಾತನಾಡುತ್ತಾರೆ. ಸ್ವತಂತ್ರ ದಿನ : ಜುಲೈ ೨೦.

ಕೊಲಂಬಿಯಾ ರಾಷ್ಟ್ರವು ದಕ್ಷಿಣ ಅಮೆರಿಕಾದ ಉತ್ತರ ಪಶ್ಚಿಮ ರಾಷ್ಟ್ರವಾಗಿದೆ. ಉತ್ತರಕ್ಕೆ ಕೆರೆಬಿಯನ್ ಸಮುದ್ರವನ್ನು, ಪಶ್ಚಿಮಕ್ಕೆ ಫೆಸಿಫಿಕ್ ಮಹಾಸಾಗರವನ್ನು ಹೊಂದಿರುತ್ತದೆ. ಈ ಗಣರಾಷ್ಟ್ರವು ದಕ್ಷಿಣ ಅಮೆರಿಕಾದಲ್ಲಿಯೇ ಪೆಸಿಫಿಕ್ ಮಹಾಸಾಗರ ಮತ್ತು ಕೆರೆಬಿಯನ್ ಸಾಗರದ ಜೊತೆಗೆ ಕರಾವಳಿ ರೇಖೆಯನ್ನು ಹೊಂದಿರುವ ಏಕೈಕ ರಾಷ್ಟ್ರವಾಗಿದೆ. ಇದರ ನೆರೆಹೊರೆಯ ರಾಷ್ಟ್ರಗಳು ಪೂರ್ವಕ್ಕೆ ವೆನಿಜೋಲಿಯಾ, ಮತ್ತು ಬ್ರೆಜಿಲ್ ರಾಷ್ಟ್ರಗಳು. ದಕ್ಷಿಣಕ್ಕೆ ಪೆರು ಮತ್ತು ಇಕ್ವಿಡರ್ ರಾಷ್ಟ್ರಗಳನ್ನು ಹೊಂದಿದೆ.

ಈ ರಾಷ್ಟ್ರವು ೧೬ನೆಯ ಶತಮಾನದಿಂದ ೧೮೧೯ರವರೆಗೆ ಸ್ಪೈನ್ ಆಳ್ವಿಕೆಯನ್ನು ಕಂಡಿತ್ತು. ೧೮೧೯ರಲ್ಲಿ ಈ ರಾಷ್ಟ್ರವು ಗ್ರಾನ್ ಕೊಲಂಬಿಯಾ ಹೆಸರಿನ ಮೂಲಕ ಸ್ವಾತಂತ್ರ್ಯವನ್ನು ಪಡೆಯಿತು. ಇದು ಇಕ್ವಿಡರ್, ಪನಾಮಾ, ವೆನಿಜೋಲಿಯಾ ರಾಷ್ಟ್ರಗಳನ್ನು ಒಳಗೊಂಡಿತ್ತು. ಇಕ್ವಿಡರ್ ಮತ್ತು ವೆನಿಜೋಲಿಯಾವು ೧೮೮೦ರಲ್ಲಿ ಮತ್ತು ೧೯೦೩ರಲ್ಲಿ ಪನಾಮವು ಸ್ವತಂತ್ರಗೊಂಡಿತ್ತು. ೧೯೯೧ರ ಸಂವಿಧಾನದ ಅಡಿಯಲ್ಲಿ ಕಾರ್ಯಾಂಗದ ಅಧಿಕಾರವನ್ನು ರಾಷ್ಟ್ರಾಧ್ಯಕ್ಷರು ಹೊಂದಿರುತ್ತಾರೆ. ಅವರು ೪ ವರ್ಷಗಳ ಅವಧಿಗೆ ಜನರಿಂದ ನೇರವಾಗಿ ಸಾರ್ವತ್ರಿಕ ವಯಸ್ಕ ಮತದಾನದ ವ್ಯವಸ್ಥೆಯ ಮೂಲಕ ಆಯ್ಕೆಯಾಗುತ್ತಾರೆ. ಶಾಸಕಾಂಗದ ಅಧಿಕಾರ ದ್ವಿಸದನದ ಸಂಸತ್‌ನಲ್ಲಿರುತ್ತದೆ. ಸೆನೆಟ್ ಸದನವು ೧೦೨ ಸದಸ್ಯರುಗಳನ್ನು ಹೊಂದಿರುತ್ತದೆ. ಇವರೆಲ್ಲರೂ ೪ ವರ್ಷಗಳ ಅವಧಿಗೆ ಜನರಿಂದ ಆಯ್ಕೆಯಾಗಿರುತ್ತಾರೆ. ಛೇಂಬರ್ಸ್ ಆಫ್ ರೆಪ್ರಸೆಂಟಿಟ್ಯೂಟುಸ್ ೧೬೫ ಸದಸ್ಯರನ್ನು ಒಳಗೊಂಡಿರುತ್ತದೆ. ಇವರುಗಳು ೪ ವರ್ಷದ ಅವಧಿಗೆ ಜನರಿಂದ ನೇರವಾಗಿ ಆಯ್ಕೆಗೊಂಡಿರುತ್ತಾರೆ. ರಾಷ್ಟ್ರವನ್ನು ೩೨ ವಿಭಾಗಗಳಾಗಿ ಮತ್ತು ಒಂದು ರಾಜಧಾನಿ ಜಿಲ್ಲೆಯಾಗಿ ವಿಂಗಡಿಸಲಾಗಿದೆ. ಇಲ್ಲಿನ ಪ್ರಮುಖ ಬೆಳೆಗಳು ಕಬ್ಬು, ಗೋಧಿ, ಭತ್ತ, ಬಾರ್ಲಿ, ಮುಸುಕಿನ ಜೋಳ, ಕಾಫಿ, ಕಬ್ಬಿಣ, ಕಲ್ಲಿದ್ದಲು, ಡೀಸೆಲ್, ಸಿಮೆಂಟ್ ಪ್ರಮುಖ ಕೈಗಾರಿಕೆಗಳಾಗಿವೆ.

೧೯೯೩ರ ವಿಶ್ವಬ್ಯಾಂಕಿನ ಅಂದಾಜಿನ ಪ್ರಕಾರ ಕೊಲಂಬಿಯಾದ ನಿವ್ವಳ ರಾಷ್ಟ್ರೀಯ ಆದಾಯ ೧೯೯೧-೯೩ರ ಸರಾಸರಿಯ ಬೆಳೆಗಳಲ್ಲಿ ಯು.ಎಸ್. ಡಾಲರ್ ೫೦.೧೧೯ ಮಿಲಿಯನ್.

. ಇಕ್ವಿಡರ್ : ಇಕ್ವಿಡರ್‌ನ ಭೂ ವಿಸ್ತೀರ್ಣ ೨೭೨, ೦೪೫ ಚ.ಕಿ.ಮೀ. ಅಥವಾ ೧೦೫, ೦೩೭ ಚ.ಮೈಲಿಗಳು. ೧೯೯೨ರ ಜನಸಂಖ್ಯೆ ೧೦,೭೪೦.೭೯೯. ಇಲ್ಲಿ ಸ್ಪೇನ್ ಭಾಷೆ ಮಾತನ್ನಾಡುತ್ತಾರೆ.

ಇಕ್ವಿಡರ್ ರಾಷ್ಟ್ರವು ದಕ್ಷಿಣ ಅಮೆರಿಕಾದ ಪಶ್ಚಿಮ ಕರಾವಳಿಯ ರಾಷ್ಟ್ರವಾಗಿದೆ. ಉತ್ತರಕ್ಕೆ ಕೊಲಂಬಿಯಾ ರಾಷ್ಟ್ರ, ಪೂರ್ವಕ್ಕೆ ಮತ್ತು ದಕ್ಷಿಣಕ್ಕೆ ಪೆರು ರಾಷ್ಟ್ರ ಮತ್ತು ಪಶ್ಚಿಮಕ್ಕೆ ಪೆಸಿಫಿಕ್ ಮಹಾಸಾಗರವನ್ನು ಒಳಗೊಂಡಿರುತ್ತದೆ. ಗ್ಯಾಲೋಫಾಗಸ್ ದ್ವೀಪವು ಇಕ್ವಿಡರ್‌ನ ಒಂದು ಭಾಗವಾಗಿದೆ. ಇದು ೧,೦೦೦ ಕಿ.ಮೀ. ಅಥವಾ ೬೦೦ ಮೈಲಿಗಳ ವಿಸ್ತ್ರೀರ್ಣ ಹೊಂದಿದೆ. ೧೫ನೇ ಶತಮಾನದಲ್ಲಿ ಈ ರಾಷ್ಟ್ರವು ಇಂಕಾ ಆಳ್ವಿಕೆಗೆ ಒಳಪಟ್ಟಿತು. ೧೫೩೪ರಲ್ಲಿ ಸ್ಪೇನಿಯರು ಈ ರಾಷ್ಟ್ರವನ್ನಾಳಲು ಪ್ರಾರಂಭಿಸಿದರು. ೧೮೨೨ರ ವೇಳೆಗೆ ಇಕ್ವಿಡರ್ ಒಂದು ಸ್ವತಂತ್ರ ರಾಷ್ಟ್ರವಾಯಿತು. ೧೯೪೮ರವರೆಗೆ ರಾಜಕೀಯ ಅಭದ್ರತೆಯನ್ನು ರಾಷ್ಟ್ರವು ಕಂಡಿತು. ೧೯೪೫ರ ಸಂವಿಧಾನವನ್ನು ೧೯೭೦ರ ಜೂನ್ ನಲ್ಲಿ ಅಮಾನತುಗೊಳಿಸಿ ೧೯೭೯ರ ಸಂವಿಧಾನವನ್ನು ರಾಷ್ಟ್ರದಲ್ಲಿ ಜಾರಿಗೊಳಿಸಲಾಗಿದೆ. ಇದರ ಪ್ರಕಾರ ರಾಷ್ಟ್ರಾಧ್ಯಕ್ಷರು ೪ ವರ್ಷಗಳ ಅವಧಿಗೆ ಜನರಿಂದ ನೇರವಾಗಿ ಆಯ್ಕೆಯಾಗಿ ಕಾರ್ಯಾಂಗದ ಅಧಿಕಾರವನ್ನು ಚಲಾಯಿಸುತ್ತಾರೆ. ಶಾಸಕಾಂಗದ ಅಧಿಕಾರವು ಏಕಸದನ ಸಂಸತ್ ಸದನವಾದ ಛೇಂಬರ್ ಆಫ್ ರೆಪ್ರಸೆನ್‌ಟಿಟ್ಯೂಟುಸ್‌ನಲ್ಲಿದೆ. ಇದು ೭೭ ಸದಸ್ಯರನ್ನು ಹೊಂದಿರುತ್ತದೆ. ಇವರೆಲ್ಲರೂ ಜನರಿಂದ ನೇರವಾಗಿ ಆಯ್ಕೆಯಾಗಲ್ಪಡುತ್ತಾರೆ. ಇದರಲ್ಲಿ ೧೨ ಸದಸ್ಯರು ರಾಷ್ಟ್ರವನ್ನು ಪ್ರತಿನಿಧಿಸಿದರೆ, ೬೫ ಸದಸ್ಯರು ಪ್ರಾಂತ್ಯಗಳನ್ನು ಪ್ರತಿನಿಧಿಸುತ್ತಾರೆ. ರಾಷ್ಟ್ರವನ್ನು ಪ್ರತಿನಿಧಿಸುವ ಸದಸ್ಯರ ಅಧಿಕಾರವಧಿ ೪ ವರ್ಷಗಳಾಗಿದ್ದು, ಪ್ರಾಂತ್ಯವನ್ನು ಪ್ರತಿನಿಧಿಸುವ ಸದಸ್ಯರ ಅಧಿಕಾರವಧಿ ೨ ವರ್ಷಗಳಾಗಿರುತ್ತದೆ. ಆಡಳಿತಕ್ಕೆ ಅನುಕೂಲವಾಗಲು ರಾಷ್ಟ್ರವನ್ನು ಗ್ಯಾಲೋಫಾಗಸ್ ದ್ವೀಪಗಳನ್ನೊಳಗೊಂಡಂತೆ, ೨೦ ಪ್ರಾಂತ್ಯಗಳಾಗಿ ವಿಂಗಡಿಸಲಾಗಿದೆ. ಪ್ರತಿ ಪ್ರಾಂತ್ಯಗಳ ಆಡಳಿತವನ್ನು ರಾಷ್ಟ್ರಾಧ್ಯಕ್ಷರಿಂದ ನೇಮಿಸಲ್ಪಟ್ಟ ರಾಜ್ಯಪಾಲರು ನಡೆಸುತ್ತಾರೆ.

ಇಲ್ಲಿನ ಪ್ರಮುಖ ಬೆಳೆಗಳು ಭತ್ತ, ಕಬ್ಬು, ಬಾಳೆಹಣ್ಣು ಮುಂತಾದವು. ಸಿಮೆಂಟ್, ವಿದ್ಯುಚ್ಛಕ್ತಿ, ಪೆಟ್ರೋಲಿಯಂ ಪದಾರ್ಥಗಳು ಇಲ್ಲಿನ ಪ್ರಮುಖ ಕೈಗಾರಿಕೆಗಳಾಗಿವೆ.

೧೯೯೩ರ ವಿಶ್ವಬ್ಯಾಂಕಿನ ಅಂದಾಜಿನ ಪ್ರಕಾರ ರಾಷ್ಟ್ರೀಯ ನಿವ್ವಳ ಆದಾಯವು ೧೯೯೧-೯೩ರ ಸರಾಸರಿ ಬೆಲೆಗಳಲ್ಲಿ ಯು.ಎಸ್. ಡಾಲರ್ ೧೩,೨೧೭ ಮಿಲಿಯನ್ ನಷ್ಟಿತ್ತು.

. ಫ್ರೆಂಚ್ ಗಯಾನಾ : ಫ್ರೆಂಚ್ ಗಯಾನಾದ ಕ್ಷೇತ್ರ ವಿಸ್ತೀರ್ಣ ೮೩, ೫೩೩ ಚ.ಕಿ.ಮೀ (೩೩,೨೫೨ ಚ.ಮೈಲಿ) ೧೯೯೦ರ ಜನಸಂಖ್ಯೆ ೧೧೪, ೮೦೮.

ಈ ರಾಷ್ಟ್ರವು ೧೯೪೬ರವರೆಗೆ ಫ್ರಾನ್ಸಿನ ವಸಾಹತುಶಾಹಿಯಾಗಿತ್ತು. ಇದು ಅತ್ಯಂತ ಚಿಕ್ಕ ಗುಹೇನ ರಾಷ್ಟ್ರವಾಗಿದ್ದು ೧೭ನೇ ಶತಮಾನದಿಂದ ಫ್ರಾನ್ಸಿನ ಆಳ್ವಿಕೆಗೆ ಒಳಪಟ್ಟಿತ್ತು. ಶೇಕಡ ೯೦ ಭೂ ಪ್ರದೇಶವು ಉಷ್ಣ ವಲಯದ ಕಾಡಿನಿಂದ ಕೂಡಿರುತ್ತದೆ. ಈ ರಾಷ್ಟ್ರದಲ್ಲಿ ಫ್ರಾನ್ಸಿನ ಬಾಹ್ಯಾಕಾಶ ಕೇಂದ್ರವಿದೆ. ಈ ರಾಷ್ಟ್ರವು ಕೆಲವು ಖನಿಜ ಸಂಪನ್ಮೂಲಗಳಿಗೆ ಹೆಸರುವಾಸಿಯಾಗಿದೆ. ಫ್ರೆಂಚ್ ಗಯಾನವು ೧೯೭೪ರಲ್ಲಿ ಫ್ರಾನ್ಸಿನಿಂದ ಪ್ರಾಂತೀಯ ಸ್ಥಾನಮಾನವನ್ನು ಪಡೆಯಿತು. ೧೯೮೬ರಲ್ಲಿ ಫ್ರಾನ್ಸಿನಿಂದ ಪ್ರಾಂತೀಯ ಸ್ಥಾನಮಾನವನ್ನು ಒಂದರಿಂದ ಎರಡಕ್ಕೆ ಹೆಚ್ಚಿಸಲಾಯಿತು. ಈ ರಾಷ್ಟ್ರದಲ್ಲಿ ಫ್ರಾನ್ಸ್‌ನಿಂದ ನೇಮಿಸಲ್ಪಟ್ಟ ಒಬ್ಬ ಪರ್‌ಫೆಕ್ಟ್  ಫ್ರಾನ್ಸ್ ರಾಷ್ಟ್ರವನ್ನು ಪ್ರತಿನಿಧಿಸುತ್ತಾನೆ. ಫ್ರೆಂಚ್ ಗಯಾನಾದಲ್ಲಿ ಎರಡು ಸ್ಥಳೀಯ ಮಂಡಳಿಗಳು ಆಡಳಿತ ನಡೆಸುತ್ತವೆ. ಅವುಗಳೆಂದರೆ ಸಾಮಾನ್ಯ ಮಂಡಳಿ ಮತ್ತು ಪ್ರಾಂತೀಯ ಮಂಡಳಿ. ಸಾಮಾನ್ಯ ಮಂಡಳಿಯಲ್ಲಿ ೧೯ ಸದಸ್ಯರು ಮತ್ತು ಪ್ರಾಂತೀಯ ಮಂಡಳಿಯಲ್ಲಿ ೩೧ ಸದಸ್ಯರು ೬ ವರ್ಷ ಅವಧಿಗೆ ಜನರಿಂದ ಆಯ್ಕೆಯಾಗಿರುತ್ತಾರೆ.

ಇಲ್ಲಿನ ಪ್ರಮುಖ ಬೆಳೆಗಳೆಂದರೆ ಕಬ್ಬು, ಭತ್ತ, ಮರಗೆಣಸು. ಮದ್ಯ ತಯಾರಿಕೆ, ವಿದ್ಯುಚ್ಛಕ್ತಿ ಉತ್ಪಾದನೆ ಇಲ್ಲಿನ ಪ್ರಮುಖ ಕೈಗಾರಿಕೆಗಳಾಗಿವೆ. ಈ ರಾಷ್ಟ್ರವು ಚಿನ್ನಕ್ಕೆ ಮತ್ತು ‘ಪಿಶಾಚಿ ದ್ವೀಪಕ್ಕೆ’ ಹೆಸರುವಾಸಿಯಾಗಿದೆ.

೧೯೮೯ರ ವಿಶ್ವಸಂಸ್ಥೆ ಅಂದಾಜಿನ ಪ್ರಕಾರ ಸರಾಸರಿ ರಾಷ್ಟ್ರೀಯ ನಿವ್ವಳ ಆದಾಯವು ಯು.ಎಸ್. ಡಾಲರ್ ೨೬೬ ಮಿಲಿಯನ್ ನಷ್ಟಿತ್ತು.

. ಗುಹೇನಾ : ಗುಹೇನಾದ ಕ್ಷೇತ್ರದ ವಿಸ್ತೀರ್ಣ : ೮೩,೦೦೦ ಕಿ.ಮೀ ಅಥವಾ ೨೧೪, ೯೬೯ ಚ.ಮೈಲಿ. ಇದರ ಜನಸಂಖ್ಯೆ ೧೯೮೧ರಲ್ಲಿ ೯೦೩,೦೦೦ ಇಲ್ಲಿಯ ಮುಖ್ಯ ಧರ್ಮ ಕ್ರೈಸ್ತ ಧರ್ಮವಾಗಿದೆ. ಭಾಷೆ ಇಂಗ್ಲಿಷಾಗಿದೆ.

ಈ ರಾಷ್ಟ್ರವು ದಕ್ಷಿಣ ಅಮೆರಿಕಾದ ಉತ್ತರ ಪೂರ್ವ ರಾಷ್ಟ್ರವಾಗಿದೆ. ಇದರ ಮೂಲನಿವಾಸಿಗಳು ಕ್ಯಾರಿಬ್, ಹರವಾಕ್ ಮತ್ತು ವರವೋ ಭಾರತೀಯರು ಆಗಿದ್ದರು. ನಂತರ ಡಚ್ಚರು ಅಲ್ಲಿ ಬಂದು ನೆಲೆಸಿದರು. ಈ ರಾಷ್ಟ್ರದಲ್ಲಿ ಬ್ರಿಟಿಷರ ಆಳ್ವಿಕೆಯು ಅಸ್ತಿತ್ವದಲ್ಲಿತ್ತು. ೧೯೬೬ರಲ್ಲಿ ಈ ರಾಷ್ಟ್ರವು ಸ್ವತಂತ್ರ ಹೊಂದಿತು. ಇಂದು ಆ ರಾಷ್ಟ್ರದಲ್ಲಿ ೧೯೮೦ರ ಸಂವಿಧಾನ ಜಾರಿಯಲ್ಲಿದೆ. ಇದರಂತೆ, ಶಾಸಕಾಂಗದ ಅಧಿಕಾರವು ಏಕಸದನ ಸಂಸತ್ತಿನಲ್ಲಿರುತ್ತದೆ. ಇದರ ಸಂಖ್ಯೆ ೬೫. ಇದರಲ್ಲಿ ೫೩ ಸದಸ್ಯರು ಜನರಿಂದ ನೇರವಾಗಿ ೫ ವರ್ಷ ಅವಧಿಗೆ ಆಯ್ಕೆಯಾಗುತ್ತಾರೆ ಮತ್ತು ಉಳಿದ ೧೨ ಜನ ಸದಸ್ಯರುಗಳು ೧೦ ವಲಯಗಳನ್ನು ಪ್ರತಿನಿಧಿಸುತ್ತಾರೆ.

೧೯೯೩ರ ವಿಶ್ವಬ್ಯಾಂಕಿನ ಅಂದಾಜಿನ ಪ್ರಕಾರ ಗುಹೇನಾದ ರಾಷ್ಟ್ರದ ಸರಾಸರಿ ರಾಷ್ಟ್ರೀಯ ನಿವ್ವಳ ಆದಾಯವು, ೧೯೯೧-೯೩ರ ಸರಾಸರಿ ಬೆಲೆಗಳಲ್ಲಿ ಯು.ಎಸ್.ಡಾಲರ್ ೨೮೫ ಮಿಲಿಯನ್‌ನಷ್ಟಿತ್ತು.

ಇಲ್ಲಿನ ಪ್ರಮುಖ ಬೆಳೆಗಳೆಂದರೆ ಭತ್ತ, ಕಬ್ಬು, ಮುಸುಕಿನ ಜೋಳ. ಸಕ್ಕರೆ, ಮದ್ಯ ತಯಾರಿಕೆ, ವಿದ್ಯುಚ್ಛಕ್ತಿಗಳು ಇಲ್ಲಿನ ಪ್ರಮುಖ ಕೈಗಾರಿಕೆಗಳಾಗಿವೆ.

. ಪರಾಗ್ವೆ : ಪರಾಗ್ವೆಯ ಕ್ಷೇತ್ರದ ವಿಸ್ತೀರ್ಣ : ೪೦೬, ೭೫೨ ಚ.ಕಿ.ಮೀ ಅಥವಾ ೧೫೭, ೦೪೮ ಚ.ಮೈಲಿಗಳು. ಇಲ್ಲಿನ ಜನಸಂಖ್ಯೆ ೧೯೯೩ರಲ್ಲಿ ೪,೬೪೨, ೬೨೪ ರಷ್ಟಿದೆ. ರೋಮನ್ ಕ್ಯಾಥೊಲಿಕ್ ಪ್ರಮುಖ ಧರ್ಮವಾಗಿದೆ. ಇಲ್ಲಿ ಸ್ಪ್ಯಾನಿಶ್ ಭಾಷೆ ಮಾತಾಡುತ್ತಾರೆ.

ಪರಾಗ್ವೆ ರಾಷ್ಟ್ರವು ದಕ್ಷಿಣ ಅಮೆರಿಕಾದ ಒಂದು ಕೇಂದ್ರ ಭಾಗದಲ್ಲಿದೆ. ಇದು ಸುತ್ತಲೂ ಭೂ ಪ್ರದೇಶದಿಂದ ಕೂಡಿದೆ. ಉತ್ತರಕ್ಕೆ ಬೊಲಿವಿಯ ರಾಷ್ಟ್ರ, ಪೂರ್ವಕ್ಕೆ ಬ್ರೆಜಿಲ್ ರಾಷ್ಟ್ರ, ದಕ್ಷಿಣಕ್ಕೆ ಮತ್ತು ಪಶ್ಚಿಮದಲ್ಲಿ ಅರ್ಜೆಂಟೈನಾ ರಾಷ್ಟ್ರವನ್ನು ಹೊಂದಿರುತ್ತದೆ. ಈ ರಾಷ್ಟ್ರದಲ್ಲಿ ಭಾರತೀಯ ಭಾಷೆಯಾದ ಗೌರಾಲಿಯಾ ಪ್ರಚಲಿತದಲ್ಲಿದೆ.

ಈ ರಾಷ್ಟ್ರವು ೧೬ನೇ ಶತಮಾನದಿಂದ ೧೮೧೧ರವರೆಗೆ ಸ್ಪೇನ್ ಆಳ್ವಿಕೆಯಲ್ಲಿತ್ತು. ೧೮೬೫ರಲ್ಲಿ ಈ ರಾಷ್ಟ್ರವು ಬ್ರೆಜಿಲ್, ಅರ್ಜೆಂಟೈನ ಮತ್ತು ಉರುಗ್ವೆ ಪ್ರದೇಶಗಳ ಮೇಲೆ ಭಯಂಕರ ಯುದ್ಧವನ್ನು ಮಾಡಿತ್ತು. ಈ ಯುದ್ದದಿಂದ ತತ್ತರಿಸಿದ ರಾಷ್ಟ್ರವು ೧೯೨೮-೩೦ರಲ್ಲಿ ಚಕೋ ಯುದ್ಧದಲ್ಲಿಯೂ ಅಪಾರ ನಷ್ಟವನ್ನು ಅನುಭವಿಸಿತ್ತು. ಆದರೆ ೧೯೩೨-೩೫ರ ಯುದ್ಧದಲ್ಲಿ ವಿವಾದಿತ ಭೂ ಪ್ರದೇಶವನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಜನರಲ್ ಇಸೀನಿಯೋ ಮರಿಂಗೋ ತನ್ನ ಆಳ್ವಿಕೆಯನ್ನು ೧೯೪೭ರಲ್ಲಿ ಪ್ರಾರಂಭಿಸಿದನು. ಆದರೆ ೧೯೪೭ರಲ್ಲಿ ರಾಜಕೀಯ ಆಶ್ರಿತರ ಪುನರಾಗಮನವು ರಾಷ್ಟ್ರದಲ್ಲಿ ನಾಗರಿಕ ಯುದ್ಧಕ್ಕೆ ಕಾರಣವಾಯಿತು. ಇದು ೧೯೪೮ರಲ್ಲಿ ಇಸಾನಿಯಾ ಜನರಲ್ ನನ್ನು ಅಧಿಕಾರದಿಂದ ಕಿತ್ತೊಗೆಯಲು ಸಾಧ್ಯವಾಯಿತು.

೧೯೯೨ರ ಸಂವಿಧಾನವು ರಾಷ್ಟ್ರದಲ್ಲಿ ಜಾರಿಯಲ್ಲಿರುತ್ತದೆ. ಇದರ ಪ್ರಕಾರ ಶಾಸಕಾಂಗದ ಅಧಿಕಾರವು ಸಂಸತ್ತಿನ ದ್ವಿಸದನದಲ್ಲಿರುತ್ತದೆ. ಇದರ ಅಧಿಕಾರಾವಧಿ ೫ ವರ್ಷಗಳು, ಸೆನೆಟ್‌ನ ಸದಸ್ಯರ ಸಂಖ್ಯೆ ೪೫ ಮತ್ತು ಛೇಂಬರ್ ಆಫ್ ಡೆಪ್ಯೂಟಿ ಸದಸ್ಯರ ಸಂಖ್ಯೆ ೮೦, ಕಾರ್ಯಾಂಗದ ಅಧಿಕಾರವು ಜನರಿಂದ ೫ ವರ್ಷದ ಅವಧಿಗೆ ನೇರವಾಗಿ ಆಯ್ಕೆಯಾದ ರಾಷ್ಟ್ರಾಧ್ಯಕ್ಷರ ಕೈಯಲ್ಲಿರುತ್ತದೆ. ಈ ರಾಷ್ಟ್ರವು ೧೭ ವಿಭಾಗಗಳನ್ನು ಹೊಂದಿರುತ್ತದೆ. ಎಲ್ಲಾ ವಿಭಾಗಗಳಲ್ಲಿ ಚುನಾಯಿತ ರಾಜ್ಯಪಾಲರು ಅಧಿಕಾರದಲ್ಲಿರುತ್ತಾರೆ. ಇಲ್ಲಿನ ಪ್ರಮುಖ ಬೆಳೆಗಳೆಂದರೆ ಗೋಧಿ, ಕಬ್ಬು, ಸೋಯಾಬೀನ್ಸ್, ಸೋಯಾಬೀನ್ಸ್ ಆಯಿಲ್, ಮದ್ಯಪಾನ ತಯಾರಿಕಾ ಕೇಂದ್ರ, ಸಿಮೆಂಟ್, ಸಕ್ಕರೆ ಇಲ್ಲಿನ ಪ್ರಮುಖ ಕೈಗಾರಿಕೆಗಳಾಗಿವೆ.

೧೯೯೩ರ ವಿಶ್ವಬ್ಯಾಂಕಿನ ಅಂದಾಜಿನ ಪ್ರಕಾರ ಪರಾಗ್ವೆ ರಾಷ್ಟ್ರದ ರಾಷ್ಟ್ರೀಯ ನಿವ್ವಳ ಆದಾಯ ೧೯೯೧-೯೨ರ ಸರಾಸರಿ ಬೆಲೆಗಳಲ್ಲಿ ಯು.ಎಸ್.ಡಾಲರ್ ೬೯೯೫ ಮಿಲಿಯನ್ ನಷ್ಟಿತ್ತು.

೧೦. ಪೆರು : ವಿಸ್ತೀರ್ಣ : ೧,೨೮೦,೦೦೦ ಚ.ಕಿ.ಮೀ ಮತ್ತು ಜಲಾವೃತ ಪ್ರದೇಶ ೫, ೨೧೬ ಚ.ಕಿ.ಮೀ ಒಟ್ಟು ೧,೨೮೫,೨೧೬ ಚ.ಕಿ.ಮೀ. ಅಥವಾ ೪೯೬, ೨೨೫ ಚ.ಮೈಲಿ ಗಳು. ೧೯೯೨ರಲ್ಲಿ ಜನಸಂಖ್ಯೆ ೨೨, ೪೫೩, ೮೬೧ರಷ್ಟಿತ್ತು ಇಲ್ಲಿನ ಭಾಷೆ ಸ್ಪ್ಯಾನಿಷ್. ರೋಮನ್ ಕ್ಯಾಥೊಲಿಕ್ ಧರ್ಮವು ಇಲ್ಲಿ ಪ್ರಬಲವಾಗಿದೆ.

ಪೆರು ಗಣರಾಜ್ಯವು ದಕ್ಷಿಣ ಅಮೆರಿಕಾದ ಮೂರನೇ ಅತಿ ದೊಡ್ಡ ರಾಷ್ಟ್ರ ಮತ್ತು ಪಶ್ಚಿಮ ರಾಷ್ಟ್ರವಾಗಿದೆ. ಈ ರಾಷ್ಟ್ರವು ಇಕ್ವಿಡರ್ ಮತ್ತು ಕೊಲಂಬಿಯಾ ರಾಷ್ಟ್ರವನ್ನು ಉತ್ತರದಲ್ಲಿ ಹೊಂದಿರುತ್ತದೆ. ಬ್ರಿಜಿಲ್ ಮತ್ತು ಬೊಲಿವಿಯಾ ರಾಷ್ಟ್ರಗಳನ್ನು ಪೂರ್ವದಲ್ಲಿ ಹಾಗೂ ದಕ್ಷಿಣಕ್ಕೆ ಚಿಲಿ ರಾಷ್ಟ್ರವನ್ನೊಂದಿರುತ್ತದೆ. ಪೆರು ರಾಷ್ಟ್ರವು ೨೩೦೦ ಕಿ.ಮೀ (೧,೪೦೦ ಮೈಲಿ) ಕರಾವಳಿ ರೇಖೆಯನ್ನು ಫೆಸಿಫಿಕ್ ಮಹಾಸಾಗರದಲ್ಲಿ ಹೊಂದಿರುತ್ತದೆ.

ಅಮೀರ್ ಇಂಡಿಯನ್ಸ್ ಜನಾಂಗವು ೧೨ ಸಾವಿರ ವರ್ಷಗಳ ಹಿಂದೆ, ಪೆರುವಿನಲ್ಲಿ ಬಂದು ನೆಲೆಸಿತ್ತು. ಈ ಜನಾಂಗವು ಕ್ರಿಸ್ತಪೂರ್ವ ೯೦೦ರ ವೇಳೆಯಲ್ಲಿ ತಮ್ಮದೇ ಆದ ನಾಗರಿಕತೆಗಳನ್ನು ಸ್ಥಾಪಿಸಿತ್ತು. ಈ ಜನಾಂಗದ ಕೊನೆಯ ಇಂಕಾ ಸಾಮ್ರಾಜ್ಯವು ಕ್ರಿಸ್ತಶಕ ೧,೨೦೦ರಿಂದ ೧,೫೦೦ರವರೆಗೆ ರಾಷ್ಟ್ರವನ್ನಾಳಿತು. ಸ್ಪೇನಿಯರು ೧೫೩೨-೩೩ರಲ್ಲಿ ಇಂಕಾ ಸಾಮ್ರಾಜ್ಯವನ್ನು ಆಕ್ರಮಿಸುವ ಮೂಲಕ ತಮ್ಮ ಆಳ್ವಿಕೆಯನ್ನು ಪ್ರಾರಂಭಿಸಿದರು. ಇವರು ೧೮೨೧ರವರೆಗೆ ಪೆರುವಿನ ಸಂಪನ್ಮೂಲಗಳನ್ನು ಅನುಭವಿಸಿದರು. ೧೮೨೧ರ ವೇಳೆಗೆ ಸ್ಪೇನಿಯರು ಪೆರುವನ್ನು ಸ್ವತಂತ್ರಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದರು. ಇದು ೧೮೨೪ರ ವೇಳೆಗೆ ಫಲವನ್ನು ನೀಡಿತು. ಆದರೂ ಪೆರುವಿನ ರಾಜಕೀಯ ವ್ಯವಸ್ಥೆಯು ಅನೇಕ ಏರಿಳಿತಗಳಿಂದ ಕೂಡಿತ್ತು. ನಾಗರಿಕ ಆಡಳಿತ ಮತ್ತು ಸೇನೆಯ ನಡುವೆ ಅನೇಕ ಘರ್ಷಣೆ ನಡೆಯುತ್ತಿತ್ತು.

ಇಂದು ೧೯೯೩ರ ಸಂವಿಧಾನವು ರಾಷ್ಟ್ರಾಧ್ಯಕ್ಷರ ಮೂಲಕ ಕಾರ್ಯಾಂಗದ ಅಧಿಕಾರವನ್ನು ಚಲಾಯಿಸುವಂತೆ ಮಾಡಿದೆ. ಇವರು ೫ ವರ್ಷಗಳ ಅವಧಿಗೆ ಜನರಿಂದ ಸಾರ್ವತ್ರಿಕ ಮತದಾನ ಪದ್ಧತಿಯ ಮೂಲಕ ಆಯ್ಕೆಯಾಗಿರುತ್ತಾರೆ. ಇವರಿಗೆ ಸಹಾಯಕವಾಗಲು ಇಬ್ಬರು ಉಪಾಧ್ಯಕ್ಷರು ಇರುತ್ತಾರೆ. ಶಾಸಕಾಂಗದ ಅಧಿಕಾರವು ಏಕ ಸದನದ ಸಂಸತ್ತಿನಲ್ಲಿರುತ್ತದೆ. ಇದರ ಸಂಖ್ಯೆ ೧೨೦, ಅಧಿಕಾರಾವಧಿ ೫ ವರ್ಷಗಳು. ಇದರ ಸದಸ್ಯರನ್ನು ರಾಷ್ಟ್ರೀಯ ಪಟ್ಟಿಯ ವ್ಯವಸ್ಥೆಯಲ್ಲಿ ಜನರು ಆಯ್ಕೆ ಮಾಡುತ್ತಾರೆ. ಪೆರುವಿನ ಆಡಳಿತದ ಅನುಕೂಲಕ್ಕಾಗಿ ರಾಷ್ಟ್ರವನ್ನು ೨೫ ವಿಭಾಗಗಳಾಗಿ, ೧೫೫ ಪ್ರಾಂತೀಯ ಮಂಡಲಿಯಾಗಿ ಮತ್ತು ೧೫೫೬ ಜಿಲ್ಲಾ ಮಂಡಲಿಗಳಾಗಿ ಮಾಡಲಾಗಿದೆ.

ಇಲ್ಲಿನ ಪ್ರಮುಖ ಬೆಳೆಗಳೆಂದರೆ ಭತ್ತ, ಕಬ್ಬು, ಆಲೂಗೆಡ್ಡೆ. ಬಿಯರ್, ಸಿಗರೇಟ್, ಪೆಟ್ರೋಲ್, ಸಿಮೆಂಟ್, ವಿದ್ಯುಚ್ಛಕ್ತಿ ಇಲ್ಲಿನ ಪ್ರಮುಖ ಕೈಗಾರಿಕೆಗಳಾಗಿವೆ.

೧೯೯೩ರ ವಿಶ್ವಬ್ಯಾಂಕಿನ ಅಂದಾಜಿನ ಪ್ರಕಾರ ಪೆರುವಿನ ನಿವ್ವಳ ರಾಷ್ಟ್ರೀಯ ಆದಾಯ ೧೯೯೧-೯೩ರ ಬೆಲೆಗಳ ಸರಾಸರಿಯಲ್ಲಿ ಯು.ಎಸ್. ಡಾಲರ್ ೩೪೦೩೦ರ ಮಿಲಿಯನ್ ನಷ್ಟು.

೧೧. ಉರುಗ್ವೆ : ಉರುಗ್ವೆಯ ವಿಸ್ತೀರ್ಣ ೧೭೬, ೨೧೫ ಚ.ಕಿ.ಮೀ ಅಥವಾ ೬೮.೦೩೭ ಚ.ಮೈಲಿಗಳು. ೧೯೯೨ರಲ್ಲಿ ಇದರ ಜನಸಂಖ್ಯೆ ೩,೧೩೧,೦೦೦. ಇಲ್ಲಿಯ ಭಾಷೆ ಸ್ಪೇನ್. ರೋಮನ್ ಕ್ಯಾಥೊಲಿಕ್. ಇಲ್ಲಿನ ಪ್ರಮುಖ ಧರ್ಮವಾಗಿದೆ.

ಈ ರಾಷ್ಟ್ರವು ದಕ್ಷಿಣ ಅಮೆರಿಕಾದ ದಕ್ಷಿಣ ಪೂರ್ವ ಕರಾವಳಿ ರಾಷ್ಟ್ರವಾಗಿದೆ. ಇದರ ಉತ್ತರಕ್ಕೆ ಬ್ರೆಜಿಲ್ ರಾಷ್ಟ್ರವೂ, ಪಶ್ಚಿಮಕ್ಕೆ ಅರ್ಜೆಂಟೈನ ರಾಷ್ಟ್ರವಿರುತ್ತದೆ. ಈ ರಾಷ್ಟ್ರದ ಮೂಲನಿವಾಸಿಗಳು ಅಮೀರ್ ಇಂಡಿಯನ್ ಮತ್ತು ಚೌಕಾಸ್ ಜನಾಂಗದವರಾಗಿದ್ದರು. ಸ್ಪೇನಿಯರು ನಂತರ ರಾಷ್ಟ್ರವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದರು. ೧೮ನೇ ಶತಮಾನ ದಲ್ಲಿ ಪೋರ್ಚುಗೀಸರು ಮತ್ತು ಸ್ಪೇನಿಯರು ಉರುಗ್ವೆ ರಾಷ್ಟ್ರದ ಹಕ್ಕಿಗಾಗಿ ಪರಸ್ಪರ ಕಾದಾಡಿದರು. ಈ ರಾಷ್ಟ್ರವು ೧೮೨೫ರ ವೇಳೆಗೆ ಸ್ಪೇನಿನಿಂದ ವಿಮುಕ್ತಿ ಪಡೆಯಿತು. ಆದರೆ ಸಂಪ್ರದಾಯವಾದಿಗಳು ಮತ್ತು ಔದಾರ್ಯಗಳ ನಡುವೆ ಆಗಿಂದಾಗ್ಗೆ ಘರ್ಷಣೆಗಳು ನಡೆಯುತ್ತಿದ್ದವು.

ಇಂದು ೧೯೬೫ರ ಸಂವಿಧಾನವು ಜಾರಿಯಲ್ಲಿರುತ್ತದೆ. ಇದರ ಪ್ರಕಾರ ಅಧ್ಯಕ್ಷ ಮಾದರಿಯ ಸರ್ಕಾರ ವ್ಯವಸ್ಥೆಯನ್ನು ರಾಷ್ಟ್ರವು ಹೊಂದಿರುತ್ತದೆ. ರಾಷ್ಟ್ರಾಧ್ಯಕ್ಷರು ೫ ವರ್ಷಗಳ ಅಧಿಕಾರಾವಧಿಗೆ ಜನರಿಂದ ನೇರವಾಗಿ ಆಯ್ಕೆಯಾಗಿರುತ್ತಾರೆ. ಶಾಸಕಾಂಗದ ಅಧಿಕಾರಾವಧಿಯು ದ್ವಿಸದನ ಸಂಸತ್ತಿನಲ್ಲಿರುತ್ತಾರೆ. ಶಾಸಕಾಂಗದ ಅಧಿಕಾರಾವಧಿಯು ದ್ವಿಸದನ ಸಂಸತ್ತಿನಲ್ಲಿರುತ್ತದೆ. ಅವುಗಳೆಂದರೆ ಸೆನೆಟ್ ೩೧ ಸದಸ್ಯರನ್ನೂ, ಮತ್ತು ಛೆಂಬರ್ ಆಫ್ ರೆಪ್ರಸೆನ್‌ಟಿಟ್ಯೂಟ್ಸ್ ೯೯ ಸದಸ್ಯರನ್ನು ಹೊಂದಿರುತ್ತದೆ. ಇವರು ಜನರಿಂದ ೫ ವರ್ಷಗಳ ಅವಧಿಗೆ ನೇರವಾಗಿ ಆಯ್ಕೆಯಾಗಿರುತ್ತಾರೆ. ಉರುಗ್ವೆ ರಾಷ್ಟ್ರವನ್ನು ಆಡಳಿತದ ಅನೂಕೂಲಕ್ಕಾಗಿ ೧೯ ವಿಭಾಗಗಳಾಗಿ ಮಾಡಲಾಗಿದೆ.

ಇಲ್ಲಿನ ಪ್ರಮುಖ ಬೆಳೆಗಳೆಂದರೆ ಗೋಧಿ, ಮುಸುಕಿನ ಜೋಳ, ಬಾರ್ಲಿ, ಭತ್ತ, ಕಬ್ಬು. ಮದ್ಯ ತಯಾರಿಕೆ, ಸಿಗರೇಟ್, ವಿದ್ಯುಚ್ಛಕ್ತಿಗಳು ಇಲ್ಲಿನ ಪ್ರಮುಖ ಕೈಗಾರಿಕೆಗಳಾಗಿವೆ.

೧೯೯೩ರ ವಿಶ್ವಬ್ಯಾಂಕಿನ ಅಂದಾಜಿನ ಪ್ರಕಾರ ಉರುಗ್ವೆ ನಿವ್ವಳ ರಾಷ್ಟ್ರೀಯ ಆದಾಯ ೧೯೯೧-೯೩ರ ಸರಾಸರಿ ಬೆಲೆಗಳಲ್ಲಿ ಯು.ಎಸ್.ಡಾಲರ್. ೧೨,೩೧೪ ಮಿಲಿಯನ್ ನಷ್ಟಿತ್ತು.

೧೨. ವೆನಿಜೋಲಿಯಾ : ವೆನಿಜೋಲಿಯಾದ ಭೂ ವಿಸ್ತೀರ್ಣ ೮೮೨.೦೫೦. ಚ.ಕಿ.ಮೀ. ಮತ್ತು ಜಲಾವೃತ ಪ್ರದೇಶ ೩೦,೦೦೦ ಚ.ಕಿ.ಮೀ. ಒಟ್ಟು ೯೧೨,೦೫೦ ಚ.ಕಿ.ಮೀ ಅಥವಾ ೩೫೨,೧೪೪ ಚ.ಮೈಲಿ. ೧೯೯೨ರಲ್ಲಿ ಇದರ ಜನಸಂಖ್ಯೆ ೨೦,೨೪೮,೮೨೬. ಇಲ್ಲಿಯ ಭಾಷೆ ಸ್ಪೇನ್. ರೋಮನ್ ಕ್ಯಾಥೊಲಿಕ್ ಧರ್ಮವು ಇಲ್ಲಿನ ಪ್ರಮುಖವಾಗಿದೆ.

ವೆನಿಜೋಲಿಯಾ ಗಣರಾಜ್ಯವು ದಕ್ಷಿಣ ಅಮೆರಿಕಾದ ಉತ್ತರ ಕರಾವಳಿಯ ರಾಷ್ಟ್ರವಾಗಿದೆ. ಪಶ್ಚಿಮಕ್ಕೆ ಕೊಲಂಬಿಯಾ ರಾಷ್ಟ್ರವನ್ನೂ ಪೂರ್ವಕ್ಕೆ ಗಯಾನಾ ರಾಷ್ಟ್ರವನ್ನೂ ಮತ್ತು ದಕ್ಷಿಣಕ್ಕೆ ಬ್ರೆಜಿಲ್ ರಾಷ್ಟ್ರವನ್ನೂ ಹೊಂದಿರುತ್ತದೆ. ಇದರ ಈ ರಾಷ್ಟ್ರದ ಮೂಲನಿವಾಸಿಗಳಾದ ಅಮೀರ್ ಇಂಡಿಯನ್ ಜನರು ತಮ್ಮ ಮನೆಗಳನ್ನು ಮುರಾಕ್ವೆಬಾ ಸರೋವರದ ಊಳುವಿನ ಸಹಾಯದಿಂದ ನಿರ್ಮಿಸುತ್ತಿದ್ದರು. ಈ ರಾಷ್ಟ್ರವು ಸ್ಪೇನಿನ ವಸಾಹತುಶಾಹಿಯಾಗಿ ೧೪೯೯ರಿಂದ ೧೮೨೧ರವರೆಗಿತ್ತು. ಸೇಮನ್ ಬೊಲಿವೀಯರ್ ನಾಯಕತ್ವದಲ್ಲಿ ೧೮೩೦ರಲ್ಲಿ ಸ್ವತಂತ್ರ ಪಡೆಯಿತು. ಆದರೆ ರಾಷ್ಟ್ರ ಬಹು ಬೇಗನೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬರಲಿಲ್ಲ. ಈ ರಾಷ್ಟ್ರವು ಮಿಲಿಟರಿ ಆಡಳಿತಕ್ಕೆ ಒಳಪಟ್ಟು ಅನೇಕ ಸೇನಾಧಿಕಾರಿಗಳನ್ನು ಕಂಡಿತ್ತು.

ಇಂದು ೧೯೬೧ರ ಸಂವಿಧಾನವು ಜಾರಿಯಲ್ಲಿದೆ. ಇದರ ಪ್ರಕಾರ ವೆನಿಜೋಲಿಯಾವು ಒಕ್ಕೂಟ ಗಣರಾಜ್ಯ ವ್ಯವಸ್ಥೆಯನ್ನು ಹೊಂದಿರುತ್ತದೆ. ಇದು ೨೨ ರಾಜ್ಯಗಳನ್ನು, ಒಂದು ಸಂಯುಕ್ತ ಜಿಲ್ಲೆಯನ್ನು ಮತ್ತು ೭೨ ಸಂಯುಕ್ತ ಅವಲಂಬನೀಯ ಪ್ರದೇಶಗಳನ್ನು ಹೊಂದಿರುತ್ತದೆ. ಇದು ದ್ವಿಸದನ, ವ್ಯವಸ್ಥೆಯನ್ನು ಹೊಂದಿರುತ್ತದೆ. ಅವುಗಳೆಂದರೆ ಸೆನೆಟ್ ಮತ್ತು ಛೇಂಬರ್ ಆಫ್ ಡೆಪ್ಯೂಟಿ. ಎರಡೂ ಸದನಕ್ಕೆ ೫ ವರ್ಷಗಳಿಗೊಮ್ಮೆ ಸಾರ್ವತ್ರಿಕ ಚುನಾವಣೆಗಳು ನಡೆಯುತ್ತವೆ. ಸೆನೆಟ್ ಪ್ರತಿ ರಾಜ್ಯಗಳಿಂದ ಮತ್ತು ಒಂದು ಒಕ್ಕೂಟ ಜಿಲ್ಲೆಯಿಂದ ಇಬ್ಬರು ಪ್ರತಿನಿಧಿಗಳನ್ನು ಹೊಂದಿರುತ್ತದೆ. ಇದರ ಜೊತೆಗೆ ಅಲ್ಪಸಂಖ್ಯಾತರ ಪ್ರತಿನಿಧಿತ್ವವನ್ನು ಕಾಣಬಹುದು ಮತ್ತು ಮಾಜಿ ರಾಷ್ಟಾಧ್ಯಕ್ಷರೆಲ್ಲರೂ ಅಜೀವ ಸದಸ್ಯರಾಗಿರುತ್ತಾರೆ. ಛೇಂಬರ್ಸ್ ಆಫ್ ಡೆಪ್ಯೂಟೀನಲ್ಲಿ ಪ್ರತಿ ರಾಜ್ಯದಿಂದ ಇಬ್ಬರು ಸದಸ್ಯರನ್ನು ಕಾಣಬಹುದು. ಕಾರ್ಯಾಂಗದ ಅಧಿಕಾರವು ರಾಷ್ಟ್ರಾಧ್ಯಕ್ಷರ ಕೈಯಲ್ಲಿರುತ್ತದೆ. ಇವರು ೫ ವರ್ಷಗಳ ಅಧಿಕಾರಾವಧಿಗೆ ಜನತೆಯಿಂದ ಆಯ್ಕೆಯಾಗಿರುತ್ತಾರೆ. ಎಲ್ಲಾ ೨೨ ರಾಜ್ಯಗಳು ಚುನಾಯಿತ ರಾಜ್ಯಪಾಲರುಗಳನ್ನು ಮತ್ತು ಚುನಾಯಿತ ಶಾಸಕಾಂಗವನ್ನು ಹೊಂದಿರುತ್ತದೆ.

ಪ್ರಮುಖ ಬೆಳೆಗಳೆಂದರೆ ಮುಸುಕಿನ ಜೋಳ, ಭತ್ತ, ಕಬ್ಬು, ಕಿತ್ತಳೆ, ಬಾಳೆಹಣ್ಣು, ಪೆಟ್ರೋಲ್ ಮತ್ತು ಅದರ ಉತ್ಪನ್ನಗಳು ಇಲ್ಲಿನ ಪ್ರಮುಖ ಕೈಗಾರಿಕೆಗಳು.

೧೯೯೩ರ ವಿಶ್ವಬ್ಯಾಂಕಿನ ಅಂದಾಜಿನ ಪ್ರಕಾರ ವೆನಿಜೋಲಿಯಾದ ರಾಷ್ಟ್ರದ ನಿವ್ವಳ ರಾಷ್ಟ್ರೀಯ ಆದಾಯ ೧೯೯೧-೯೩ರ ಸರಾಸರಿ ಬೆಲೆಗಳಲ್ಲಿ ಯು.ಎಸ್.ಡಾಲರ್. ೫೮.೯೧೬ ಮಿಲಿಯನ್‌ನಷ್ಟಿತ್ತು.

೧೩. ಸೂರಿನಾಂ : ಸೂರಿನಾಂನ ವಿಸ್ತೀರ್ಣ ೧೬೩,೨೬೫ ಚ.ಕಿ.ಮೀ ಅಥವಾ ೬೩,೦೩೭ ಚ.ಮೈಲಿ. ಇದರ ಜನಸಂಖ್ಯೆ ೧೯೯೧ರ ಅಂದಾಜಿನ ಪ್ರಕಾರ ೪೦೪,೩೧೦. ಇಲ್ಲಿನ ಭಾಷೆ ಸ್ಪೇನ್. ರೋಮನ್ ಕ್ಯಾಥೊಲಿಕ್ ಧರ್ಮವು ಇಲ್ಲಿ ಪ್ರಮುಖ ಧರ್ಮವಾಗಿದೆ.

ಸೂರಿನಾಂ ಗಣರಾಜ್ಯವು ದಕ್ಷಿಣ ಅಮೆರಿಕಾದ ಉತ್ತರ ಭಾಗದಲ್ಲಿದೆ. ಇದು ಮೊದಲು ಡಚ್ಚರ ವಸಾಹತುಶಾಹಿಯಾಗಿತ್ತು. ೧೬೬೭ರಲ್ಲಿ ಡಚ್ಚರು ಬ್ರಿಟಿಷರಿಗೆ ಈ ಪ್ರದೇಶವನ್ನು ಬಿಟ್ಟುಕೊಟ್ಟರು. ಈ ರಾಷ್ಟ್ರದಲ್ಲಿ ೧:೩ ಭಾಗದಷ್ಟು ಏಷ್ಯಾ ಮೂಲದ ಭಾರತೀಯರಿದ್ದಾರೆ. ಈ ರಾಷ್ಟ್ರದ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬು ಖನಿಜ ಸಂಪನ್ಮೂಲಗಳು. ಈ ರಾಷ್ಟ್ರವು ಪ್ರಪಂಚದ ೬ನೇ ಅತಿ ಹೆಚ್ಚು ಬಾಕ್ಸೈಟ್ ಉತ್ಪಾದಿಸುವ ರಾಷ್ಟ್ರವಾಗಿದೆ. ಸೂರಿನಾಂ ರಾಷ್ಟ್ರವನ್ನು ೧೮೧೫ರ ವಿಯನ್ನಾ ಒಪ್ಪಂದದ ಮೂಲಕ ನೆದರ್ ಲ್ಯಾಂಡ್ ರಾಷ್ಟ್ರಕ್ಕೆ ಒಪ್ಪಿಸಲಾಯಿತು. ೧೯೫೪ರ ಒಪ್ಪಂದದ ಪ್ರಕಾರ ಸೂರಿನಾಂ ರಾಷ್ಟ್ರವು ನೆದರ್‌ಲ್ಯಾಂಡ್ಸ್ ರಾಷ್ಟ್ರದಷ್ಟೆ ಸ್ಥಾನಮಾನ ಪಡೆಯಿತು. ಮೇ ೧೯೭೫ರಲ್ಲಿ ರಾಷ್ಟ್ರಕ್ಕೆ ಸ್ವತಂತ್ರ ಕೊಡುವ ತೀರ್ಮಾನಕ್ಕೆ ಬರಲಾಯಿತು. ಈ ಒಪ್ಪಂದದ ಪ್ರಕಾರ ಡಚ್ ಸರ್ಕಾರವು ೧೫ ವರ್ಷಗಳವರೆಗೆ ಆರ್ಥಿಕ ಸಹಾಯವನ್ನು ಮಾಡುವಂತಾಯಿತು. ಡಾ.ಜಾನ್ ಫೇರಿಯರ್ ಸ್ವಾತಂತ್ರ ರಾಷ್ಟ್ರದ ಮೊದಲ ರಾಷ್ಟ್ರಾಧ್ಯಕ್ಷರಾದರು. ಇಂದು ೧೯೮೭ರ ಸಂವಿಧಾನವು ಶಾಸಕಾಂಗದ ಅಧಿಕಾರವನ್ನು ಏಕಸದನದ ಸಂಸತ್ತಿಗೆ ಕೊಟ್ಟಿರುತ್ತಾರೆ. ಇದು ೫೧ ಸದಸ್ಯರುಗಳನ್ನು ಒಳಗೊಂಡಿರುತ್ತದೆ. ಇವರೆಲ್ಲರೂ ಸಾರ್ವತ್ರಿಕ ಚುನಾವಣೆಯಲ್ಲಿ ೫ ವರ್ಷಗಳ ಅವಧಿಗೆ ಆಯ್ಕೆಯಾಗುತ್ತಾರೆ. ಈ ಸದನವು ರಾಷ್ಟ್ರಾಧ್ಯಕ್ಷನನ್ನು ಮತ್ತು ಉಪರಾಷ್ಟ್ರಾಧ್ಯಕ್ಷನನ್ನು ಆಯ್ಕೆ ಮಾಡುತ್ತದೆ. ರಾಷ್ಟ್ರಾಧ್ಯಕ್ಷನನ್ನು ಪ್ರಧಾನ ಮಂತ್ರಿ ಎಂದು ಕರೆಯಲಾಗುತ್ತದೆ. ರಾಷ್ಟ್ರಾಧ್ಯಕ್ಷನ ಅಧಿಕಾರಾವಧಿ ೫ ವರ್ಷಗಳಾಗಿರುತ್ತದೆ. ಇವನಿಗೆ ಸಹಾಯಕವಾಗಲು ಮಂತ್ರಿಮಂಡಲದ ಜೊತೆಗೆ ‘ಕೌನ್ಸಿಲ್ ಆಫ್ ಸ್ಟೇಟ್’ ಇರುತ್ತದೆ. ರಾಷ್ಟ್ರಾಧ್ಯಕ್ಷರೇ ಇದರ ಮುಖ್ಯಸ್ಥರಾಗಿರುತ್ತಾರೆ. ಇವರ ಜೊತೆ ೧೪ ಸದಸ್ಯರು ಕಾರ್ಯ ನಿರ್ವಹಿಸುತ್ತಾರೆ. ಅವರುಗಳಲ್ಲಿ ೧೦ ಸದಸ್ಯರುಗಳು ರಾಜಕೀಯ ಪಕ್ಷ ಪ್ರತಿನಿಧಿಸಿದರೆ, ಒಬ್ಬರು ಸೈನ್ಯವನ್ನು, ಇಬ್ಬರು ವ್ಯಾಪಾರ ಒಕ್ಕೂಟವನ್ನು ಪ್ರತಿನಿಧಿಸುತ್ತಾರೆ ಮತ್ತು ಒಬ್ಬರು ಸಾರ್ವಜನಿಕ ಆಡಳಿತವನ್ನು ಪ್ರತಿನಿಧಿಸುತ್ತಾರೆ.

ಸೂರಿನಾಂ ರಾಷ್ಟ್ರವು ೯ ಆಡಳಿತ ಜಿಲ್ಲೆಗಳನ್ನು ಒಳಗೊಂಡಿದೆ. ಇದರ ಪ್ರಮುಖ ಬೆಳೆಗಳೆಂದರೆ ಭತ್ತ, ಕಬ್ಬು, ಬಾಳೆಹಣ್ಣು, ತೆಂಗಿನಕಾಯಿ ಇತ್ಯಾದಿ. ಇಲ್ಲಿನ ಪ್ರಮುಖ ಕೈಗಾರಿಕೆಗಳೆಂದರೆ ತಂಪು ಪಾನೀಯ ಘಟಕಗಳು, ಮದ್ಯಪಾನೀಯಗಳು, ಅಲ್ಯುಮಿನಿಯಂ, ಸಿಮೆಂಟ್, ಬೂಟುಗಳು, ಸಕ್ಕರೆ ಮತ್ತು ವಿದ್ಯುಚ್ಛಕ್ತಿ.

೧೯೯೩ರ ವಿಶ್ವಬ್ಯಾಂಕಿನ ಅಂದಾಜಿನ ಪ್ರಕಾರ ಸೂರಿನಾಂ ರಾಷ್ಟ್ರದ ರಾಷ್ಟ್ರೀಯ ನಿವ್ವಳ ಆದಾಯವು ೧೯೯೧-೯೩ರ ಬೆಲೆಗಳ ಸರಾಸರಿಯಲ್ಲಿ ಯು.ಎಸ್. ಡಾಲರ್ ೪೮೮ ಮಿಲಿಯನ್‌ನಷ್ಟಿತ್ತು.

 

ಪರಾಮರ್ಶನ ಗ್ರಂಥಗಳು

೧. ಬ್ರಿಯಾನ್ ಹಂಟರ್ (ಸಂ), ೧೯೯೪. ದಿ ಸ್ಟೇಟ್‌ಮನ್ಸ್ ಇಯರ್ ಬುಕ್, ಲಂಡನ್.

೨. ಯುರೋಪ್ ಇಯರ್ ವರ್ಲ್ಡ್‌ಬುಕ್, ೧೯೯೫. ವಾಲ್ಯೂಂ I, II ಲಂಡನ್.

೩. ಇಂಟರ್‌ನ್ಯಾಷನಲ್ ಎನ್‌ಸೈಕ್ಲೋಪಿಡಿಯಾ ಆಫ್ ದಿ ಸೋಷಿಯಲ್ ಸೈನ್ಸಸ್, ನ್ಯೂಯಾರ್ಕ್.

೪. ದಿ ನ್ಯೂ ಎನ್ ಸೈಕ್ಲೋಪಿಡಿಯಾ ಬ್ರಿಟಾನಿಕಾ, ೧೯೭೪. ಲಂಡನ್.