ಐವತ್ತು ಸಂಸ್ಥಾನಗಳ ಅರ್ಥಾತ್ ರಾಜ್ಯಗಳ ಅಖಂಡ ಒಕ್ಕೂಟವಾಗಿರುವ ಅಮೆರಿಕಾ ಸಂಯುಕ್ತ ಸಂಸ್ಥಾನವನ್ನು ಇಂಗ್ಲಿಷ್ ಭಾಷೆಯಲ್ಲಿ ‘ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ’ ಎಂದೂ ಸಂಕ್ಷಿಪ್ತವಾಗಿ ಯು.ಎಸ್.ಎ ಎಂದೂ ಕರೆಯಲಾಗುತ್ತದೆ. ಬ್ರಿಟನ್ನ ವಸಾಹತು ಆಗಿದ್ದ ಅಮೆರಿಕಾ ೧೭೭೬ರ ಜುಲೈ ೪ರಲ್ಲಿ ಸ್ವಾತಂತ್ರ್ಯವನ್ನು ಗಳಿಸಿಕೊಂಡಿತ್ತಾದರೂ ಈ ಸ್ವಾತಂತ್ರ್ಯ ವಿಶ್ವಮಾನ್ಯತೆ ಪಡೆದದ್ದು ೧೭೮೩ರ ಸೆಪ್ಟೆಂಬರ್ ೩ರಲ್ಲಿ, ೯,೬೩೧,೪೨೦ ಚದ ಕಿ.ಮೀ.ಭೂ ವಿಸ್ತೀರ್ಣ ಹೊಂದಿರುವ ಅಮೆರಿಕಾ ೨೦೦೬ರ ಜನಗಣತಿಯ ಪ್ರಕಾರ ೨೯ ಕೋಟಿ ೯೩ ಲಕ್ಷದ ೬೦,೮೭೯ ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಈ ಒಟ್ಟು ಜನಸಂಖ್ಯೆಯ ೧೩೫ರಷ್ಟು ಮಾತ್ರ ಆಫ್ರಿಕಾ ಮೂಲಕ ಕರಿಯರು ಇಲ್ಲಿ ವಾಸ ಮಾಡುತ್ತಿದ್ದಾರೆ. ಈ ದೇಶದ ಅಧಿಕೃತ ಭಾಷೆ ಎಂದು ಯಾವುದೂ ಇಲ್ಲದಿದ್ದರೂ ವಾಸ್ತವಿಕವಾಗಿ ಇಂಗ್ಲಿಷ್ ಇಲ್ಲಿಯ ಆಡಳಿತಾತ್ಮಕ ಭಾಷೆಯಾಗಿದೆ.

ಅಮೆರಿಕಾದ ‘ಶೋಧ’ ಮತ್ತು ‘ಸ್ವಾತಂತ್ರ್ಯ’

ಹೊಸ ಹೊಸ ಭೂಭಾಗಗಳನ್ನು ಅನ್ವೇಷಿಸಬೇಕು ಮತ್ತು ಅವುಗಳನ್ನು ತಮ್ಮ ಲಾಭಕ್ಕಾಗಿ ಬಳಸಬೇಕೆಂದು ಐರೋಪ್ಯ ಸಾಮ್ರಾಜ್ಯಶಾಹಿಯ ಮಹತ್ವಾಕಾಂಕ್ಷೀ ಮನಸ್ಸಿನ ಫಲಸ್ವರೂಪಿಯಾದ ಅಮೆರಿಕಾ ಎಂಬ ದೇಶ ಬ್ರಿಟನ್ನ ವಸಾಹತು ದೇಶವಾಗಿ ರೂಪುಗೊಂಡದ್ದೇ ಬೀದಿಯಲ್ಲಿ ಚೆಲ್ಲಿದ ರಕ್ತದಿಂದ. ಇಲ್ಲಿಯ ಸಾವಿರಾರು ಮೂಲ ನಿವಾಸಿಗಳನ್ನು ಕೊಲೆ ಮಾಡಿ ತಮ್ಮ ಆಧಿಪತ್ಯವನ್ನು ಸ್ಥಾಪಿಸಿಕೊಂಡ ಐರೋಪ್ಯ ದೊರೆಗಳು ಅಮೆರಿಕಾದ ಕೃಷಿ ಮತ್ತು ಖನಿಜ ಸಂಪನ್ಮೂಲವನ್ನು ಬ್ರಿಟನ್ ಮತ್ತು ಫ್ರಾನ್ಸ್ಗೆ ಸಾಗಿಸುವುದರಲ್ಲಿ ಪೈಪೋಟಿಗೆ ಬಿದ್ದಿದ್ದರು. ಈ ಸಾಗಾಟದ ಕೂಲಿ ಕೆಲಸವನ್ನು ನಿರ್ವಹಿಸುವುದಕ್ಕೆ ಮತ್ತು ಅಪಾರ ಲಾಭ ತರುವ ಇಲ್ಲಿಯ ತೋಟಗಳಲ್ಲಿ ಮಾಲಿಗಳಾಗಿ ದುಡಿಯುವುದಕ್ಕೆ ಈ ಐರೋಪ್ಯ ದೊರೆಗಳಿಗೆ ಕೆಲಸಗಾರರು ಬೇಕಾಗಿದ್ದರು. ಈ ಕೆಲಸಗಳನ್ನು ಮಾಡಬಹುದಾಗಿದ್ದ ಇಲ್ಲಿಯ ಮೂಲನಿವಾಸಿಗಳನ್ನು ಅವರು ಯಾವತ್ತೋ ಸರ್ವನಾಶ ಮಾಡಿಯಾಗಿತ್ತು.
ಇಂಥ ಒಂದು ಸಂದರ್ಭದಲ್ಲಿ ಅಮೆರಿಕಾದ ಇಂಗ್ಲೆಂಡ್ನ ಕಾಲನಿ ವರ್ಜೀನಿಯಾಗೆ ಆಫ್ರಿಕಾದಿಂದ ಸೆರೆ ಹಿಡಿದು ತಂದ ಕರಿಯರನ್ನು ಐರೋಪ್ಯ ವ್ಯಾಪಾರಿ-ನಾವಿಕನೊಬ್ಬ ಮಾರುತ್ತಾನೆ. ತಾವು ಅಳ್ವಿಕೆ ಮಾಡುವ ವಸಾಹತು ದೇಶ-ಪ್ರದೇಶಗಳಲ್ಲಿ ಎಲ್ಲವನ್ನೂ, ಎಲ್ಲರದನ್ನೂ ತನ್ನದಾಗಿಸಿಕೊಂಡು ಮಾರುವುದಕ್ಕೆ ತೊಡಗಿದ ಬಿಳಿಯರು ಕೊನೆಗೆ ಮನುಷ್ಯರನ್ನೇ ಮಾರುವಲ್ಲಿಂದ ಅಮೆರಿಕಾದಲ್ಲಿ ಕರಿಯರ ಅಧ್ಯಾಯ ಆರಂಭಗೊಳ್ಳುತ್ತದೆ. ಕೂಲಿ ಜನರ ಅಪಾರ ಬೇಡಿಕೆ ಇರುವ ಅಮೆರಿಕಾಕ್ಕೆ ಆಫ್ರಿಕಾದ ಮುಗ್ಧ ಕರಿಯರನ್ನು ಬಲವಂತದಿಂದ ಹಿಡಿದು ತರುವಲ್ಲಿ ಈ ಐರೋಪ್ಯ ವ್ಯಾಪಾರಿ ನಾವಿಕರ ತಂಡಗಳ ನಡುವೆ ತುರುಸಿನ ಸ್ಪರ್ಧೆ ಇತ್ತು. ಅನಂತರ ಸರಿಸುಮಾರು ಒಂದೂವರೆ ಶತಮಾನದ ಕಾಲ ಅಂದಾಜು ೬೬ ಲಕ್ಷ ಕರಿಯರನ್ನು ಬಂಧಿಸಿ, ಕೈಕಾಲುಗಳಿಗೆ ಕಬ್ಬಿಣದ ಗುಂಡು ಸಹಿತದ ಬೇಡಿ ಬಿಗಿದು ಅಮಾನುಷ ರೀತಿಯಲ್ಲಿ ಹಡಗಿನ ಮೂಲಕ ಅಮೆರಿಕಾಕ್ಕೆ ಸಾಗಿಸಿ, ಅಲ್ಲಿಯ ಮಾರುಕಟ್ಟೆಗಳಲ್ಲಿ ಹರಾಜು ಕೂಗಿತ್ತು ಐರೋಪ್ಯ ‘ನಾಗರಿಕ ಜಗತ್ತು’.

ಹೀಗೆ ಹರಾಜು ಕೂಗಿದ ಮೇಲೆ ಈ ಕರಿಯರಿಗೆ ಹೊಸ ನಾಮಕರಣವನ್ನು ಮಾಡಲಾಗುತ್ತಿತ್ತು. ಈ ನಾಮಕರಣ ಮಾತ್ರದಿಂದಲೇ ಈ ಕರಿಯರು ‘ಕ್ರಿಶ್ಚಿಯನ್’ ಎಂದಾಗುತ್ತಿದ್ದರೇ ಹೊರತು ಬೇರೆ ಯಾವುದೇ ಧಾರ್ಮಿಕ ವಿಧಿ-ವಿಧಾನಗಳು ಅವರನ್ನು ಕ್ರಿಶ್ಚಿಯನ್ನರನ್ನಾಗಿ ಮಾಡುತ್ತಿರಲಿಲ್ಲ. ಇವತ್ತು ನಮ್ಮ ಕಾಲ್ ಸೆಂಟರ್ಗಳಲ್ಲಿ ಹಗಲು-ರಾತ್ರಿಗಳಲ್ಲಿ ಐರೋಪ್ಯ ಜನರೊಂದಿಗೆ ಸಂಭಾಷಿಸುವ ಯವಕ-ಯುವತಿಯರು ಹೇಗೆ ತಮ್ಮ ನಿಜನಾಮಧೇಯವನ್ನು ಮರೆಯಾಗಿಸಿ ಜಾನ್/ಮೇರಿ ಎಂದು ಕರೆಯಿಸಿಕೊಂಡು ವ್ಯವಹರಿಸುತ್ತಾರೋ ಅದೇ ರೀತಿಯಲ್ಲಿ ಅಂದು ಆಫ್ರಿಕಾದಿಂದ ಬಲವಂತದಿಂದ ಸೆಳೆತರಲ್ಪಟ್ಟ ಈ ಶ್ಯಾಮಲ ವರ್ಣೀಯ ಜನರು ತಮ್ಮ ಊರು-ಕೇರಿ, ತಮ್ಮ ಹೆಸರು-ತಮ್ಮ ನೆನಪು ಎಲ್ಲವನ್ನೂ ಶಾಶ್ವತವಾಗಿ ಮರೆತು ಹೊಸದಾದ, ಆದರೆ ಪರಕೀಯವಾದ ಸ್ಥಳದಲ್ಲಿ ಹೊಸ ಗುರುತುಗಳೊಂದಿಗೆ ಬದುಕಬೇಕಾಗಿತ್ತು. ಆದರೆ ಇವರಿಗೆ ನಾಗರಿಕವಾದ ಗುರುತುಗಳು ಸಿಗಬೇಕಿದ್ದರೆ ಮತ್ತೆ ಶತಮಾನಗಳ ಹೋರಾಟವನ್ನೇ ನಡೆಸಬೇಕಾಗಿ ಬಂತು. ಕಪ್ಪು ಬಣ್ಣದ ಅಮೆರಿಕನ್ನರ ಚರಿತ್ರೆ ಆರಂಭವಾಗುವುದು ಹೀಗೆ. ಈ ನಡುವೆ ಅಮೆರಿಕಾದ ಸ್ವಾತಂತ್ರ್ಯ ಹೋರಾಟದ ಕಥನವೂ ಬರುವುದರಿಂದ ಅದನ್ನು ಇಲ್ಲಿ ಪ್ರಸ್ತಾಪಿಸುವುದು ಉಚಿತ.

ಐರೋಪ್ಯರೇ ಅಮೆರಿಕಾದಲ್ಲಿ ಬಂದು ನೆಲೆಸಿದರೂ, ಮೂಲ ಐರೋಪ್ಯರು ಹೀಗೆ ವಲಸೆ ಹೋಗಿ ಅಮೇರಿಕದಲ್ಲಿ ನೆಲೆಯಾದ ಐರೋಪ್ಯರನ್ನು, ಅಲ್ಲೇ ಮದುವೆ, ಮಕ್ಕಳು-ಮರಿ ಎಂದು ಸಂಸಾರ ಮಾಡಿಕೊಂಡ, ಉದ್ಯೋಗ ಮಾಡಿಕೊಂಡ ಅಮೆರಿಕನ್ನರನ್ನು ದ್ವಿತೀಯ ದರ್ಜೆಯ ಪ್ರಜೆಗಳಾಗಿ ನೋಡಿಕೊಳ್ಳುತ್ತಿದ್ದರು. ಆಗ ಅಮೆರಿಕಾ, ಈಗ ಇರುವ ಹಾಗೆ ಅಖಂಡವಾದ ಒಂದು ಒಕ್ಕೂಟವನ್ನೇನೂ ರೂಪಿಸಿಕೊಂಡಿರಲಿಲ್ಲ. ಇದನ್ನೇ ಬಂಡವಾಳವನ್ನಾಗಿಸಿಕೊಂಡ ಬ್ರಿಟನ್ ಮತ್ತು ಫ್ರಾನ್ಸ್ ಸರಕಾರಗಳು ಮತ್ತು ಅವುಗಳ ಮಿಲಿಟರಿಗಳು ಆಗಿಂದಾಗ್ಗೆ ಅಮೆರಿಕಾದ ಈ ಬೇರೆ ಬೇರೆ ಸಂಸ್ಥಾನಗಳನ್ನು ಬೇರೆ ಬೇರೆ ಬಗೆಯ ತೆರಿಗೆಗಳ ಮೂಲಕ, ಕಂದಾಯ ಸುಂಕ-ಆದಾಯ ಸುಂಕಗಳ ಮೂಲಕ ಆಮದು ಸುಂಕ-ರಫ್ತು ಸುಂಕಗಳ ಮೂಲಕ ಕಾಡುವುದು, ಪೀಡಿಸುವುದು ನಡೆದಿತ್ತು.

ಇಂಥಹುದೇ ಒಂದು ಸಂದರ್ಭದಲ್ಲಿ ೧೭೫೩ರಲ್ಲಿ ಫ್ರಾನ್ಸ್ನ ಸೇನೆ ಅಮೆರಿಕಾದ ಒಂದು ಬಹುಮುಖ್ಯ ಭೂಭಾಗವಾದ ವರ್ಜೀನಿಯಾದ ಸುಪರ್ದಿಗೊಳಪಟ್ಟ ಒಹಾಯೋ ಪ್ರದೇಶದಲ್ಲಿ ಕೋಟೆಗಳನ್ನು ಕಟ್ಟುವುದಕ್ಕೆ ತೊಡಗಿತ್ತು. ಇದನ್ನು ವರ್ಜೀನಿಯಾದ ರಾಜ್ಯಪಾಲ ‘ದಿನ್ವಿಡ್ಡಿ’ ಎಂಬಾತ ವಿರೋಧಿಸಿದನು. ಮಾತ್ರವಲ್ಲದೆ ಈ ಕುರಿತಾಗಿ ಫ್ರೆಂಚರ ಮನದಿಂಗಿತ ಮತ್ತು ಅವರ ಸೇನಾಬಲವನ್ನು ಅಳೆಯಲು ಜಾರ್ಜ್ ವಾಷಿಂಗ್ಟನ್ ಎಂಬಾತನನ್ನು ಕಳುಹಿಸಿದನು. ಈ ಜಾರ್ಜ್ ವಾಷಿಂಗ್ಟನ್ನೇ ಮುಂದೆ ಅಮೆರಿಕಾದ ಪ್ರಪ್ರಥಮ ಅಧ್ಯಕ್ಷನಾದವನು.

ಜಾರ್ಜ್ ವಾಷಿಂಗ್ಟನ್-ಅಮೆರಿಕಾದ ಪ್ರಥಮ ಸರ್ವಅಧ್ಯಕ್ಷ
ಜಾರ್ಜ್ ವಾರ್ಷಿಂಗ್ಟನ್ ೧೭೩೨ನೆಯ ಫೆಬ್ರವರಿ ೨೨ರಂದು ವರ್ಜೀನಿಯಾದ ರೇತಾಪಿ ಕುಟುಂಬದಲ್ಲಿ ಹುಟ್ಟಿ ಬಂದವನು. ಈತ ತನ್ನ ೨೦ರ ಹರೆಯದಲ್ಲೇ ಸೈನ್ಯ ಸೇರಿ ಮೇಜರ್ ಹುದ್ದೆಗೇರಿದ್ದನು. ಇದೇ ಮೇಜರ್ ವಾಷಿಂಗ್ಟನ್ನನ್ನು ದಿನ್ವಿಡ್ಡಿ ಫ್ರೆಂಚರ ಸೇನಾಬಲವನ್ನು ಅಳೆಯಲು ಕಳುಹಿಸಿದ್ದು. ಒಹಾಯೋ ಪ್ರದೇಶದಲ್ಲಿ ಬೀಡು ಬಿಟ್ಟಿದ್ದ ಫ್ರೆಂಚ್ ಸೇನಾ ಪಡೆಯ ಕುರಿತು ವಾಷಿಂಗ್ಟನ್ ಕಳುಹಿಸಿದ ವರದಿಯಿಂದ ಸಂತೃಪ್ತನಾದ ‘ದಿನ್ವಿಡ್ಡಿ’ ಅವನ ನೇತೃತ್ವದಲ್ಲೇ ಸೇನೆಯನ್ನು ಕಳುಹಿಸಿ ಫ್ರೆಂಚರ ವಿರುದ್ಧ ಹೋರಾಟ ನಡೆಸುವಂತೆ ಸೂಚಿಸುತ್ತಾನೆ. ವಾಷಿಂಗ್ಟನ್ ಈ ಯುದ್ಧದಲ್ಲಿ ಗೆಲ್ಲುತ್ತಾನೆ. ಗೆದ್ದ ವಾಷಿಂಗ್ಟನ್ಗೆ ಬ್ರಿಟಿಷ್ ಸೇನೆ ಸೇರಬೇಕೆಂಬ ಮಹದಾಸೆ ಇತ್ತು. ಆದರೆ ಬ್ರಿಟಿಷ್ ಮೇಲಧಿಕಾರಿಗಳು ಅಮೆರಿಕಾದ ಈ ವಸಾಹತು ಪ್ರಜೆಗಳನ್ನು ಬಹಳ ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದರು. ಇದರಿಂದ ನಿರಾಶೆಗೊಂಡ ವಾಷಿಂಗ್ಟನ್ ೧೭೫೮ರಲ್ಲಿ ಸೇನೆಯಿಂದ ನಿವೃತ್ತಿ ಹೊಂದಿ ವರ್ಜೀನೀಯವಾದ ಶಾಸನಸಭೆಗೆ ಆಯ್ಕೆಯಾಗುತ್ತಾನೆ.

ವಸಾಹತು ಅಮೆರಿಕಾದ ವಿರುದ್ಧ ಬ್ರಿಟನ್ನ ಆಡಳಿತಾತ್ಮಕ ದೌರ್ಜನ್ಯಗಳು ಹೆಚ್ಚುತ್ತಿದ್ದಂತೆಯೇ ಅಮೆರಿಕಾದಲ್ಲಿ ಸ್ವತಂತ್ರ ಅಮೆರಿಕಾದ ಕನಸು ಕಾಣುತ್ತಿದ್ದವರು ಒಂದಾಗತೊಡಗಿದರು. ಈ ಆಂದೋಲನದ ನೇತೃತ್ವವನ್ನು ಸ್ವತಃ ವಾಷಿಂಗ್ಟನ್ ವಹಿಸಿಕೊಂಡ. ೧೭೬೯ರಲ್ಲಿ ಅಮೆರಿಕಾಕ್ಕೆ ಆಮದಾದ ಪದಾರ್ಥಗಳ ಮೇಲೆ ಬ್ರಿಟನ್ ಹೇರಿದ್ದ ತೆರಿಗೆಯ ಕಾಯ್ದೆ(ಟೌನ್ಶೆಂಡ್ ಕಾಯ್ದೆ)ಯನ್ನು ಹಿಂತೆಗೆದುಕೊಳ್ಳುವವರೆಗೂ ಐರೋಪ್ಯ ಪದಾರ್ಥಗಳ ಮೇಲೆ ಬಹಿಷ್ಕಾರ ವಿಧಿಸುವ ಮಸೂದೆಯೊಂದನ್ನು ವಾಷಿಂಗ್ಟನ್ ಮಂಡಿಸಿದ. ಇದೇ ಸಮಯದಲ್ಲಿ ಅಂದರೆ ೧೭೭೪ರಲ್ಲಿ ಅಮೆರಿಕಾ ವಸಾಹತಿನ ವಿವಿಧ ರಾಜ್ಯಗಳು ಒಟ್ಟಾಗಿ ‘ಖಂಡೀಯ ಕಾಂಗ್ರೆಸ್’(ಕಾಂಟಿನೆಂಟಲ್ ಕಾಂಗ್ರೆಸ್) ಅನ್ನು ಸ್ಥಾಪಿಸಿದವು. ಇದಕ್ಕೆ ವರ್ಜೀನೀಯಾದ ಪ್ರತಿನಿಧಿಯಾಗಿ ವಾಷಿಂಗ್ಟನ್ ಆಯ್ಕೆಯಾದ. ೧೭೭೫ರಲ್ಲಿ ಈ ಖಂಡೀಯ ಕಾಂಗ್ರೆಸ್ಸು ಖಂಡೀಯ ಸೇನೆಯನ್ನು ಆರಂಭಿಸಿಯೇ ಬಿಟ್ಟಿತು ಮಾತ್ರವಲ್ಲ ಇದಕ್ಕೆ ಮಾಜಿ ಮೇಜರ್ ವಾಷಿಂಗ್ಟನ್ನನ್ನು ದಂಡನಾಯಕನನ್ನಾಗಿಯೂ ಘೋಷಿಸಿತು.

ಅದೇ ಆಗ ನಡೆಯುತ್ತಿದ್ದ ಬೋಸ್ಟನ್ ನಗರದ ಮುತ್ತಿಗೆಯ ಕಾಳಗದಲ್ಲಿ ವಾಷಿಂಗ್ಟನ್ ಭಾಗವಹಿಸಿ ಅಲ್ಲಿಂದ ಬ್ರಿಟಿಷರನ್ನು ಓಡಿಸಿ ಅನಂತರ ನ್ಯೂಯಾರ್ಕ್ ನಗರವನ್ನೂ ಆಕ್ರಮಿಸಿದನು. ಇದೇ ಸಮಯದಲ್ಲಿ ಫ್ರೆಂಚ್ ಸೇನೆಯ ನೆರವು ಪಡೆದು ೧೭೮೧ನೆಯ ಅಕ್ಟೋಬರ್ ೧೭ರಂದು ಯಾರ್ಕ್ಟನ್ ಮುತ್ತಿಗೆಯಲ್ಲೂ ವಿಜಯಿಯಾದನು. ಅನಂತರ ೧೭೮೩ರ ಪ್ಯಾರಿಸ್ ಒಪ್ಪಂದದಂತೆ ಅಮೆರಿಕಾ ಸಂಯುಕ್ತ ಸಂಸ್ಥಾನ ಸ್ವಾತಂತ್ರ್ಯ ಪಡೆಯಿತು. ಸಹಜವಾಗಿಯೇ ವಾಷಿಂಗ್ಟನ್ ಅಮೆರಿಕಾದ ಅಧ್ಯಕ್ಷನಾದ. ಸತತ ಎರಡು ಬಾರಿ ಅಧ್ಯಕ್ಷನಾದ ವಾಷಿಂಗ್ಟನ್ನನ್ನು ಮೂರನೇ ಬಾರಿಯೂ ಅಧ್ಯಕ್ಷನಾಗುವಂತೆ ಒತ್ತಾಯಿಸಿದಾಗ ಆತ ಅದನ್ನು ನಯವಾಗಿಯೇ ನಿರಾಕರಿಸಿದ. ಅಲ್ಲಿಂದ ಮುಂದಕ್ಕೆ ಯಾರೇ ಅಮೆರಿಕಾದ ಅಧ್ಯಕ್ಷರಾದರೂ ಗರಿಷ್ಟ ಎರಡು ಅವಧಿಗಳಲ್ಲಿ ಮಾತ್ರ ಕಾರ್ಯ ನಿರ್ವಹಿಸುವುದು ಒಂದು ಪರಂಪರೆಯಾಗಿ ಬೆಳೆದುಕೊಂಡು ಬಂತು.

ಅಮೆರಿಕಾದ ರಾಷ್ಟ್ರೀಯವಾದ ರೂಪುಗೊಂಡದ್ದೇ ಐರೋಪ್ಯ ಸಾಮ್ರಾಜ್ಯಶಾಹಿಯ ನೀತಿ-ನಿಲುವುಗಳನ್ನು ವಿರೋಧಿಸುವ ಮೂಲಕ. ಆದರೆ ಅದು ಮೂಲತಃ ಪಾಶ್ಚಾತ್ಯ ರಾಷ್ಟ್ರೀಯವಾದದ ಒಂದು ಹೊಸ ಕವಲು ಅಷ್ಟೇ. ಹಾಗಾಗಿ ಅದು ಬಹಳ ರ್ಯಾಡಿಕಲ್ ಆದ ತತ್ತ್ವಗಳನ್ನು ಹೊಂದಿದಂತೆ ಕಾಣುವುದಿಲ್ಲ. ಯಾಕೆಂದರೆ ಅದು ತನ್ನಲ್ಲಿದ್ದ ಕಪ್ಪು ಜನರನ್ನು ಪರಿಗಣಿಸಿದ ರೀತಿಯೇ ಇದಕ್ಕೆ ಸಾಕ್ಷಿಯಾಗಿದೆ. ಪಾಶ್ಚಾತ್ಯ ರಾಷ್ಟ್ರೀಯವಾದ ಮೂಲಭೂತವಾಗಿ ಒಂದು ಸಾಂಸ್ಕೃತಿಕ ವಿದ್ಯಮಾನವಾಗಿದೆ. ಹಾಗೆಯೇ ಬೇಕು ಬೇಕು ಎಂದಾಗಲೆಲ್ಲಾ ಇದು ರಾಜಕೀಯ ಸ್ವರೂಪವನ್ನೂ ಪಡೆದುಕೊಂಡಿದೆ. ತನ್ನ ಹೊರ ರೂಪದಲ್ಲಿ ಬಹಳ ಪ್ರಗತಿಪರ ಮತ್ತು ಪ್ರಜಾಪ್ರಭುತ್ವಾತ್ಮಕ ಎಂದು ಫೋಸು ಕೊಡುವ ಈ ರಾಷ್ಟ್ರೀಯವಾದಗಳು ತಮ್ಮ ಒಳರಚನೆಯಲ್ಲಿ ಬಹಳ ಸರ್ವಾಧಿಕಾರೀ ಗುಣಗಳುಳ್ಳದ್ದೂ ಆಗಿದೆ. ಸಂಸ್ಕೃತಿಯನ್ನು ನಿರ್ಧರಿಸುವ, ಹಾಗೆಯೇ ಅಳೆಯುವ ಮತ್ತು ಮೌಲ್ಯಮಾಪನ ಮಾಡುವ ಮಾನದಂಡಗಳನ್ನೊಂದು ತತ್ತ್ವವನ್ನಾಗಿ ನಿಗದಿಪಡಿಸಿ ರೂಪಿಸಿತು ಮತ್ತು ಅಭಿವೃದ್ದಿಪಡಿಸಿತು. ಹಾಗೆ ಅಭಿವೃದ್ದಿಗೊಂಡ ಒಂದು ಸಾಮಾನ್ಯ ತಿಳುವಳಿಕೆಯ ಮೇಲೆ ಇವತ್ತು ಇವು ಅವಲಂಬಿತವಾಗಿವೆ. ಅಧಿಕಾರವೊಂದು ತನಗೆ ಬೇಕಾದ ‘ಜ್ಞಾನ’ವನ್ನು ಅಥವಾ ತನ್ನ ಉಳಿಯುವಿಕೆಗೆ ಬೇಕಾದ ‘ಸತ್ಯ’ವನ್ನು ‘ಉತ್ಪಾದಿಸಿ’ಕೊಳ್ಳುವುದೆಂದರೆ ಹೀಗೆ.

ಇದು ಇವುಗಳ ಮೂಲ ಮತ್ತು ಪ್ರಧಾನ ಗುಣವಾದುದರಿಂದಲೇ ಯುರೋಪ್ನ ಬಹುತೇಕ ರಾಷ್ಟ್ರಗಳಿಗೆ ತಾವು ಪ್ರಜಾಪ್ರಭುತ್ವಾತ್ಮಕವಾಗಿದ್ದೂ ಏಷ್ಯಾದ ಮತ್ತು ಆಫ್ರಿಕಾದ ನೂರಾರು ದೇಶಗಳನ್ನು ತಮ್ಮ ವಸಾಹತನ್ನಾಗಿ ಮಾಡಲು ಸಾಧ್ಯವಾಯಿತು. ಅಮೆರಿಕಾ ಈ ಜಾಗತಿಕ ಶಕ್ತಿಗಳ ಕೈಗೂಸು ಆಗಿದ್ದರಿಂದಲೇ ಅದು ತನ್ನ ಬಿಡುಗಡೆಯನ್ನು ಬಯಸಿತು. ಆದರೆ ತನ್ನ ಜೊತೆಗಿರುವ ಹಾಗೆಂದು ತನಗೆ ಅನ್ಯವಾಗಿರುವ ಆ ಇನ್ನೊಂದು ಸಮುದಾಯಕ್ಕೆ(ಕರಿಯ) ಬಿಡುಗಡೆಯನ್ನು ಕೊಡಮಾಡುವುದಕ್ಕೆ ಸಂಬಂಧಿಸಿದಂತೆ ನಾಗರಿಕ ಸಮಾಜಕ್ಕೆ ಅಸಹ್ಯ ಹುಟ್ಟಿಸುವಂಥ ತೀವ್ರ ಜಿಗುಟುತನವನ್ನು ಪ್ರದರ್ಶಿಸಿತು.

ಅಮೆರಿಕಾದಲ್ಲಿಯ ಗುಲಾಮಗಿರಿ ಮತ್ತು ಅಬ್ರಹಾಂ ಲಿಂಕನ್

ರಿಪಬ್ಲಿಕನ್ ಪಕ್ಷದ ಉಮೇದುವಾರನಾಗಿ ಅಮೆರಿಕಾ ಸಂಯುಕ್ತ ಸಂಸ್ಥಾನದ ೧೬ನೆಯ ಅಧ್ಯಕ್ಷನಾಗಿ ಆಯ್ಕೆಯಾದ ಅಬ್ರಹಾಂ ಲಿಂಕನ್ಗೆ ಅಮೆರಿಕಾದಲ್ಲಿ ಬಿಳಿಯರು ಕರಿಯರನ್ನು ಗುಲಾಮರನ್ನಾಗಿ ನಡೆಸಿಕೊಳ್ಳುತ್ತಿರುವ ಬಗ್ಗೆ ತೀವ್ರ ವಿರೋಧ ಇತ್ತು. ೧೮೬೧ನೆಯ ಫೆಬ್ರವರಿ ೩ರಂದು ಅಧಿಕಾರ ಸ್ವೀಕರಿಸಿದ ಲಿಂಕನ್ ಅಧ್ಯಕ್ಷನಾದ ಕೇವಲ ನಾಲ್ಕೇ ತಿಂಗಳುಗಳಲ್ಲಿ ದಾಸ್ಯತ್ವವನ್ನು ನಿರ್ಮೂಲ ಮಾಡುವ ಘೋಷಣೆಯನ್ನು ಹೊರಡಿಸಿದನು. ಇದರಿಂದ ಉತ್ತರ ಮತ್ತು ದಕ್ಷಿಣ ಅಮೆರಿಕಾದ ರಾಜ್ಯಗಳ ನಡುವೆ ಸಿವಿಲ್ ವಾರ್ ಆರಂಭಗೊಂಡಿತು. ಭೂಮಾಲೀಕ ಬಿಳಿಯರು ಅಧ್ಯಕ್ಷ ಲಿಂಕನ್ನ ಘೋಷಣೆಯನ್ನು ಧಿಕ್ಕರಿಸಿ, ದೇಶವನ್ನೇ ಇಬ್ಭಾಗ ಮಾಡಲು ಹೊರಟಿದ್ದರು. ಲಿಂಕನ್ ತನ್ನದೇ ದೇಶದ ಪ್ರಜೆಗಳ ವಿರುದ್ಧ ಒಂದು ಉದಾತ್ತ ಉದ್ದೇಶಕ್ಕಾಗಿ ಮತ್ತು ನಾಗರಿಕ ಬದುಕಿನ ಸಭ್ಯತೆಗಾಗಿ ಯುದ್ಧ ಘೋಷಿಸಿದನು. ಅಮೆರಿಕನ್ ಸೈನಿಕರು ಅಮೆರಿಕನ್ನರ ವಿರುದ್ಧವೇ ಗುಂಡು ಹಾರಿಸಿದರು. ಈ ಯುದ್ಧ ನಾಲ್ಕು ವರ್ಷಗಳ ಕಾಲ ನಡೆಯಿತು. ಈ ಆಂತರಿಕ ಯುದ್ಧದಲ್ಲಿ ಸುಮಾರು ಎರಡು ಲಕ್ಷ ಅಮೇರಿಕನ್ನರು ಹತರಾದರು. ಎರಡು ಜಾಗತಿಕ ಮಹಾಯುದ್ಧಗಳಲ್ಲೂ ಇಷ್ಟೊಂದು ಸಂಖ್ಯೆಯಲ್ಲಿ ಅಮೆರಿಕನ್ನರು ಸತ್ತದ್ದಿಲ್ಲ. ಕೊನೆಯಲ್ಲಿ ದಂಗೆಕೋರರು ಸೋತು ಶರಣಾದರು. ೧೮೬೫ರಲ್ಲಿ ನಡೆದ ಅಮೆರಿಕನ್ ಕಾಂಗ್ರೆಸ್ ನ ಸಭೆ ೧೩ನೆಯ ಸಾಂವಿಧಾನಿಕ ತಿದ್ದುಪಡಿಯ ಮೂಲಕ ಗುಲಾಮಗಿರಿಯನ್ನು ರದ್ದುಪಡಿಸಿತು. ಇದೇ ಸಮಯದಲ್ಲಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಇತಿಹಾಸ ಪ್ರಸಿದ್ಧವಾದ ‘‘ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿ ಗೋಸ್ಕರ’’ ಎಂಬ ಪ್ರಜಾಪ್ರಭುತ್ವದ ಬೀಜಮಂತ್ರವನ್ನು ಹೊರಡಿಸಿದನು. ಸಂವಿಧಾನದ ತಿದ್ದುಪಡಿಯಾದ ಆರನೇ ದಿನಕ್ಕೆ ಲಿಂಕನ್ನನ್ನು ಹತ್ಯೆ ಮಾಡಲಾಯಿತು. ಕಾಲಕ್ರಮೇಣ ಅಂದರೆ ಆತ ಸತ್ತ ನೂರು ವರುಷಗಳ ನಂತರ ಲಿಂಕನ್ ನನ್ನು ತ್ರಿಕರಣಪೂರ್ವಕವಾಗಿ ವಿರೋಧಿಸುತ್ತಿದ್ದ ಡೆಮಾಕ್ರಾಟಿಕ್ ಪಕ್ಷದವರು ಅಮೆರಿಕಾದ ಆಗಿನ ಅಧ್ಯಕ್ಷ ಜಾನ್ ಎಫ್.ಕೆನಡಿಯ ನೇತೃತ್ವದಲ್ಲಿ ಲಿಂಕನ್ನ ರಿಪಬ್ಲಿಕನ್ ಪಕ್ಷದವರಿಗಿಂತ ಸುಧಾರಣಾ ವಾದಿಗಳೂ, ನಾಗರಿಕ ಹಕ್ಕುಗಳ ಪರವಾದ ಹೋರಾಟಗಾರರಾಗಿಯೂ ಪರಿವರ್ತಿತರಾಗಿ ಆತ ನಂಬಿಕೊಂಡಿದ್ದ ತತ್ವಗಳನ್ನು ಹೊಸ ಶತಮಾನದಲ್ಲಿ ವಾಸ್ತವದ ನಿಜಗಳನ್ನಾಗಿ ಪರಿವರ್ತಿಸಿದರು. ಉದಾತ್ತ ಸಾಮಾಜಿಕ ಚಿಂತನೆಗಳ ಮೂಲಕ ತನ್ನ ರಾಜಕೀಯ ವಿರೋಧಿಗಳನ್ನು ಗಾಢವಾಗಿ ಪ್ರಭಾವಿಸಿದ ಮಹಾನ್ ನಾಯಕನಾದ ಅಬ್ರಹಾಂ ಲಿಂಕನ್ ಅಮೆರಿಕಾದ ಚರಿತ್ರೆಯ ಪುಟಗಳಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಂಡ.

ಅಮೆರಿಕಾದ ಬ್ಲ್ಯಾಕ್ ಮೂವ್ಮೆಂಟ್ ಮತ್ತು ನಾಗರಿಕ ಹಕ್ಕುಗಳ ಹೋರಾಟ
ಅಬ್ರಹಾಂ ಲಿಂಕನ್ನ ದೃಢ ಧೋರಣೆಯಿಂದ ಅಮೆರಿಕಾದಲ್ಲಿ ಗುಲಾಮಗಿರಿ ರದ್ದಾಯಿತು. ಆದರೆ ವರ್ಣೀಯ ಅಸಮಾನತೆ ಮಾತ್ರ ಹಾಗೆಯೇ ಮುಂದುವರಿಯಿತು. ಕರಿಯ ಜನಾಂಗಕ್ಕೆ ಸಮಾನ ಹಕ್ಕುಗಳಿನ್ನೂ ದಕ್ಕಿರಲಿಲ್ಲ. ಸಮಾಜದಲ್ಲಿ ಅಸಮಾನತೆ ಮುಂದುವರಿದೇ ಇತ್ತು. ಕಪ್ಪು ವರ್ಣೀಯರಿಗೆ ಪ್ರತ್ಯೇಕ ಶಾಲೆಗಳು, ಚರ್ಚುಗಳು, ಹೋಟೆಲುಗಳಲ್ಲಿ, ಬಸ್ಸುಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲೂ ಅವರಿಗೆ ಪ್ರತ್ಯೇಕ ಜಾಗಗಳು ನಿಗದಿಯಾಗಿದ್ದವು. ಕರಿಯರಿಗೆ ಮತದಾನದ ಹಕ್ಕುಗಳೇ ಇರಲಿಲ್ಲ. ಬಿಳಿಯರು ಕರಿಯರನ್ನು ವಿವಾಹವಾಗುವುದು ಕಾನೂನು ಬಾಹಿರವೇ ಆಗಿತ್ತು.
ಮೈಬಣ್ಣದ ತಾರತಮ್ಯ ಅಲ್ಲಿ ಎಂಥವರನ್ನೂ ಬಿಡಲಿಲ್ಲ. ೧೯೩೮ರ ಒಲಿಂಪಿಕ್ಸ್ನಲ್ಲಿ ಹಿಟ್ಲರ್ನ ಮುಂದೆ ಅಮೋಘ ಪ್ರದರ್ಶನ ನೀಡಿದ ದಾಖಲೆಯ ಸ್ವರ್ಣ ಪದಕಗಳನ್ನು ಬಾಚಿಕೊಂಡ ಅಮೆರಿಕನ್ ಕರಿಯ ಕ್ರೀಡಾಳು ಜೆಸ್ಸಿ ಓವೆನ್ಸ್ಗೆ ಅಂತಾರಾಷ್ಟ್ರೀಯ ಗೌರವ, ಮನ್ನಣೆ ಸಿಕ್ಕಿತ್ತು. ಆದರೆ ಆಕೆ ತನ್ನ ಊರಿಗೆ ಮರಳಿದಾಗ ಸ್ವಗತದ ಜಾಗದಲ್ಲಿ ಅವಮಾನ ಮತ್ತು ತಾತ್ಸಾರಗಳನ್ನೇ ಅನುಭವಿಸಿದಳು. ೧೯೬೦ರ ರೋಮ್ ಒಲಿಂಪಿಕ್ಸ್ನಲ್ಲಿ ಬಾಕ್ಸಿಂಗ್ ಸ್ವರ್ಣ ಗೆದ್ದ ಕ್ಯಾಶಿಯನ್ ಕ್ಲೇ, ಓಹಿಯೋದ ರೆಸ್ಟಾರೆಂಟ್ನಲ್ಲಿ ಕರಿಯರಿಗಾಗಿ ಮೀಸಲಾದ ಜಾಗದಲ್ಲೇ ಕುಳಿತುಕೊಳ್ಳಬೇಕಾದ ಅವಮಾನದ ಕೋಪದಲ್ಲಿ ತನ್ನ ಚಿನ್ನದ ಪದಕವನ್ನು ಓಹಿಯೋ ನದಿಗೆ ಎಸೆದಿದ್ದ. ಈ ವಿಷಯವಾಗಿಯೇ ಕ್ಲೇ, ಇಸ್ಲಾಮ್ ಧರ್ಮವನ್ನು ಸ್ವೀಕರಿಸಿ ಮಹಮದ್ ಅಲಿ ಆದ ಮತ್ತು ಕಡ್ಡಾಯ ನೈನ್ಯವೃತ್ತಿಯನ್ನು ಧಿಕ್ಕರಿಸಿ ಜೈಲಿಗೂ ಹೋಗಿದ್ದ.

೧೯೨೦ರಲ್ಲೇ ಕರಿಯರು ಈ ವರ್ಣವೈಷಮ್ಯದ ವಿರುದ್ಧ ಹೋರಾಟ ಆರಂಭಿಸಿದ್ದರು. ಭಾರತದಲ್ಲಿ ಹಲವಾರು ದಲಿತರು ಬೌದ್ಧ ಧರ್ಮಕ್ಕೆ ಮತಾಂತರಗೊಂಡಂತೆ ಅಲ್ಲಿ ಸಾವಿರಾರು ಜನರು ಇಸ್ಲಾಂಗೆ ಮತಾಂತರಗೊಂಡರು. ಇದೇ ಹಿನ್ನೆಲೆಯಿಂದ ಬ್ಲ್ಯಾಕ್ ಪ್ಯಾಂಥರ್ಸ್ ಸಂಘಟನೆ ಹುಟ್ಟಿಕೊಂಡಿತು. ಈ ಸಂಘಟನೆಯನ್ನು ಎಡಪಂಥೀಯರು ಬೆಂಬಲಿಸಿದರು. ಇವರೆಲ್ಲರನ್ನು ಅಮೇರಿಕನ್ ಪ್ರಭುತ್ವ ನಿರ್ದಯೆಯಿಂದ ದಮನಿಸಿತು. ಅಮೆರಿಕಾದಲ್ಲಿ ವರ್ಣ ಸಮಾನತೆಗೆ ಬೆಂಬಲ ಘೋಷಿಸಿದವರನ್ನು ಹಿಡಿದು ಕೊಲೆ ಮಾಡಲಾಗುತ್ತಿತ್ತು. ಅಬ್ರಹಾಂ ಲಿಂಕನ್ ಮತ್ತು ಬ್ಲ್ಯಾಕ್ ಫ್ಯಾಂಥರ್ಸ್ ಸಂಘಟನೆಯ ಸಂಸ್ಥಾಪಕ ಮಾಲ್ಕಮ್ ಎಕ್ಸ್ ಮತ್ತು ಗಾಂಧಿ ಮಾದರಿಯ ಚಳುವಳಿ ಹೂಡಿದ್ದ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಅವರನ್ನೂ ಇಲ್ಲಿ ಈ ಕಾರಣಕ್ಕಾಗಿಯೇ ಕೊಲೆ ಮಾಡಲಾಯಿತು.

ಅಮೆರಿಕನ್ ಸಿವಿಲ್ ರೈಟ್ಸ್ ಮೂವ್ಮೆಂಟ್ ೧೯೫೫ರಿಂದ ೧೯೬೮ರವರೆಗೆ ನಡೆಯಿತು. ಈ ಆಂದೋಲನದಲ್ಲಿ ಪ್ರಮುಖ ಪಾತ್ರವಹಿಸಿದವರಲ್ಲಿ ಡಬ್ಲ್ಯೂ.ಇ.ಬಿ.ದು ಬೊಯ್ಸ, ಮಾಲ್ಕಮ್ ಎಕ್ಸ್, ರೆವರೆಂಡ್ ಮಾರ್ಟಿನ್ ಲೂಥರ್ ಕಿಂಗ್, ಜ್ಯೂನಿಯರ್ ಮತ್ತು ರೋಸಾ ಪಾರ್ಕ್ ಅವರದ್ದು ಮುಂಚೂಣಿಯ ಹೆಸರುಗಳು. ಆಫ್ರೊ-ಅಮೇರಿಕನ್ನರನ್ನು ಉದ್ದೇಶಿಸಿ ನಡೆಸಲಾಗುವ ಜನಾಂಗೀಯ ತಾರತಮ್ಯದ ವಿರುದ್ಧ ಈ ನಾಗರಿಕ ಆಂದೋಲನವನ್ನು ಇವರು ಲಕ್ಷಾಂತರ ಕರಿಯರ ಸಹಕಾರದಿಂದ ಮುನ್ನಡೆಸಿದರು. ಇದು ಕೇವಲ ನಾಗರಿಕ ಹಕ್ಕುಗಳ ಬಗ್ಗೆ ಮಾತ್ರ ಆಂದೋಲನವಾಗದೆ ಸ್ವಾತಂತ್ರ್ಯ, ಗೌರವ, ಘನತೆ ಅಲ್ಲದೆ, ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯನ್ನು ಅಪೇಕ್ಷಿಸುವ ಆಂದೋಲನವೂ ಆಗಿತ್ತು.

ಜನಾಂಗೀಯ ತಾರತಮ್ಯ ಕೇವಲ ಆಫ್ರಿಕಾದ ಕರಿಯರ ವಿರುದ್ಧ ಮಾತ್ರ ನಡೆಯುತ್ತಿರಲಿಲ್ಲ. ಅಮೆರಿಕಾದ ನೈಋತ್ಯ ಭಾಗದಲ್ಲಿರುವ ಲ್ಯಾಟಿನೋಗಳ ಮತ್ತು ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿದ್ದ ಏಷ್ಯನ್ನರ ವಿರುದ್ಧವೂ ನಡೆಯುತ್ತಿತ್ತು. ಈ ತಾರತಮ್ಯ ರಾಜಕೀಯ ಪ್ರಾತಿನಿಧ್ಯದಲ್ಲಿ, ಕಾನೂನು ಸೌಲಭ್ಯಗಳನ್ನು ಬಳಸಿಕೊಳ್ಳುವಲ್ಲಿ, ಸಾರ್ವಜನಿಕ ಸೌಲಭ್ಯಗಳನ್ನು ಅನುಭವಿಸುವಲ್ಲಿ ಸೂರ್ಯಸ್ಪಷ್ಟವಾಗಿತ್ತು. ಬಿಳಿಯರಿಗೆ ಮತ್ತು ಕರಿಯರಿಗೆ ಕೆಲವೊಮ್ಮೆ ಪ್ರತ್ಯೇಕವಾದ ಶಿಕ್ಷಣ ಸಂಸ್ಥೆಗಳೂ ಸೇರಿದಂತೆ ಸರಕಾರಿ ಸೇವೆಗಳನ್ನು ಅಷ್ಟು ಖಚಿತವಾಗಿ ಭಾಗ ಮಾಡಲಾಗಿತ್ತು. ಹೀಗೆ ಭಾಗ ಮಾಡಿಯೂ ವೈಯಕ್ತಿಕವಾಗಿ, ಪೊಲೀಸ್ ಬಲದ ಮೂಲಕವಾಗಿ ಮತ್ತು ಕೆಲವೊಮ್ಮೆ ಬಹಳ ವ್ಯವಸ್ಥಿತವಾದ ಸಾಂಸ್ಥಿಕ ಚಟವಟಿಕೆಗಳ ಭಾಗವಾಗಿ ಮತ್ತು ಸಾಮುದಾಯಿಕವಾಗಿಯೂ ಈ ಜನಾಂಗೀಯ ದ್ವೇಷವನ್ನು ಅವ್ಯಾಹತವಾಗಿ ಹಾಗೂ ಪೂರ್ವಯೋಜಿತವಾಗಿ ನಡೆಸಿಕೊಂಡು ಬರಲಾಗುತ್ತಿತ್ತು.

ಈ ಸಂಸ್ಥೆ ಜನಾಂಗೀಯ ತಾರತಮ್ಯವನ್ನು ನಿಲ್ಲಿಸುವ ಕೆಲಸವನ್ನು ಕಾನೂನು ಹಾಗೂ ಶಿಕ್ಷಣಗಳಂತಹ ಆಧುನಿಕ ಜ್ಞಾನಮೆಷಿನರಿಗಳನ್ನು ಬಳಸಿಕೊಳ್ಳುವ ಮೂಲಕ ಮಾಡುತ್ತಾ ಬಂತು. ಇದರ ಫಲಿತವಾಗಿ ೧೯೫೪ರಲ್ಲಿ ಅಮೆರಿಕಾದ ಸುಪ್ರೀಂ ಕೋರ್ಟ್ ‘ಬ್ರೌನ್ ವರ್ಸಸ್ ಬೋರ್ಡ್ ಎಜುಕೇಷನ್ ಪ್ರಕರಣ’ದಲ್ಲಿ ಬಿಳಿಯರಿಗೆ ಮತ್ತ ಕರಿಯರಿಗೆ ನಡೆಸಲಾಗುವ ಪ್ರತ್ಯೇಕ ಶಿಕ್ಷಣಸಂಸ್ಥೆಗಳ ವ್ಯವಸ್ಥೆಯನ್ನೇ ವಿರೋಧಿಸಿತು. ಇದು ಕರಿಯರ ಹೋರಾಟದಲ್ಲಿಯ ಒಂದು ಮಹತ್ವದ ಜಯ ಎಂದೇ ಬಣ್ಣಿಸಲ್ಪಟ್ಟಿದೆ. ಹಾಗೆಯೇ ಅಂತಹುದೇ ಇನ್ನೊಂದು ಜಯ ನಾಗರಿಕ ಹಕ್ಕುಗಳ ಹೋರಾಟಗಾರ್ತಿ ರೋಸಾ ಪಾರ್ಕ್ ಅವರಿಗೆ ಸಂಬಂಧಪಟ್ಟದ್ದು.

ಇದನ್ನು ‘ ಓಂಅಕ’ ಎಂದೇ ಕರೆಯಲಾಗುತ್ತದೆ. ಇದು ೧೯೫೫ ರಿಂದ ೧೯೫೬ರವರೆಗೆ ನಡೆದ ಬಸ್ಸು ಬಹಿಷ್ಕಾರದ ಘಟನೆ. ಇದು ನಡೆದದ್ದು ಹೀಗೆ: ಸಾರ್ವಜನಿಕ ಸಂಚಾರದ ನಗರ ಸಾರಿಗೆ ಬಸ್ಸೊಂದರಲ್ಲಿ ರೋಸಾ ಪಾರ್ಕ್ ಬಿಳಿಯ ಪ್ರಯಾಣಿಕನೊಬ್ಬನಿಗೆ ತಾನು ಎದ್ದು ತನ್ನ ಸೀಟು ಬಿಟ್ಟುಕೊಡುವುದಕ್ಕೆ ನಿರಾಕರಿಸಿದಳು. ಈ ಕಾರಣಕ್ಕೆ ಪಾರ್ಕ್ಳನ್ನು ದಸ್ತಗಿರಿ ಮಾಡಲಾಯಿತು. ಈ ಸುದ್ದಿ ಹರಡಿದ ಕೂಡಲೇ ಸುಮಾರು ಐವತ್ತು ಮಂದಿ ಆಫ್ರೋ-ಅಮೇರಿಕನ್ ನಾಯಕರು ತಕ್ಷಣವೇ ಸಭೆ ಸೇರಿ ಈ ಮಾಂಟ್ ಗೊಮೆರಿ ಬಸ್ಸ್ ಬಹಿಷ್ಕಾರಕ್ಕೆ ಕರೆ ನೀಡಿದರು. ಸುಮಾರು ಐವತ್ತು ಸಾವಿರ ಕರಿಯರ ಪಾಲ್ಗೊಳ್ಳುವಿಕೆಯಿಂದ ಆರಂಭವಾದ ಈ ಬಹಿಷ್ಕಾರ ೩೮೧ ದಿನಗಳವರೆಗೆ ನಡೆಯಿತು. ಇದರಿಂದ ಸಾರಿಗೆ ವಹಿವಾಟಿನ ೮೦ರಷ್ಟು ಆದಾಯಕ್ಕೆ ಕತ್ತರಿ ಬಿತ್ತು. ಪ್ರಾಂತೀಯ ಆಡಳಿತ ಎಚ್ಚೆತ್ತುಕೊಂಡಿತು. ಅಂತಿಮವಾಗಿ ಈ ಕುರಿತು ನಡೆದ ವಿಚಾರಣೆಯಲ್ಲಿ ಫೆಡರಲ್ ಕೋರ್ಟ್ ಬಸ್ಸುಗಳಲ್ಲಿ ನಡೆಯುವ ಈ ಬಗೆಯ ಜನಾಂಗೀಯ ತಾರತಮ್ಯವನ್ನು ನಿಷೇಧಿಸಿತು. ಈ ಐತಿಹಾಸಿಕ ಬಹಿಷ್ಕಾರದ ನೇತೃತ್ವ ವಹಿಸಿದನೇ ಗಾಂಧೀವಾದಿಯಾದ ಮಾರ್ಟಿನ್ ಲೂಥರ್ ಕಿಂಗ್. ಈ ಘಟನೆಯಿಂದ ರಾಷ್ಟ್ರೀಯ ನಾಯಕನಾಗಿ ಹೊರಹೊಮ್ಮಿದ ‘ಕಿಂಗ್’ ಕ್ರಿಶ್ಚಿಯನ್ ಧರ್ಮದ ಸಾಹೋದರ್ಯ ಭಾವದ ಪ್ರತಿಪಾದನೆಯನ್ನು ಮತ್ತು ಅಮೆರಿಕನ್ ಆದರ್ಶ ವಾದವನ್ನು(ಐಡಿಯಲಿಸಂ) ಮಿಳಿತಗೊಳಿಸಿ ಸಾರ್ವಜನಿಕ ಸಭೆಗಳಲ್ಲಿ ಜನರೊಂದಿಗೆ ಸಂವಾದಕ್ಕೆ ತೊಡಗಿದನು. ಆತನ ಈ ಮನಂಬುಗುವ ಮಾತುಗಳು ಅಮೆರಿಕಾದ ದಕ್ಷಿಣ ಭಾಗದ ಒಳ-ಹೊರಗಿನ ಪ್ರದೇಶದಲ್ಲಿ ವ್ಯಾಪಕ ಸಂಚಲನವನ್ನುಂಟು ಮಾಡಿತು. ಇವಿಷ್ಟು ಮಾತ್ರವಲ್ಲದೆ ೧೯೫೭ರಲ್ಲಿ ನಡೆದ ‘ಲಿಟ್ಲ್ ರಾಕ್ ಸೆಂಟ್ರರ್ ಸ್ಕೂಲ್ ಪ್ರಕರಣ’, ಮತದಾರರ ನೋಂದಣಿ ಸಂಸ್ಥೆ ನಡೆಸಿದ ಚಳುವಳಿಯಿಂದ ೧೯೬೫ರಲ್ಲಿ ಪಾಸಾದ ‘ವೋಟಿಂಗ್ ರೈಟ್ ಆಕ್ಟ್’, ೧೯೬೩ರಲ್ಲಿ ನಡೆದ ‘ಮಾರ್ಚ್ ಆನ್ ವಾಷಿಂಗ್ಟನ್’ ೧೯೬೪ರಲ್ಲಿ ಮಾರ್ಟಿನ್ ಲೂಥರ್ ಕಿಂಗ್ಗೆ ಬಂದ ಶಾಂತಿಗಾಗಿ ನೊಬೆಲ್ ಪ್ರಶಸ್ತಿ (ಈ ಪ್ರಶಸ್ತಿಯನ್ನು ಪಡೆದವರಲ್ಲಿ ಅತ್ಯಂತ ಕಿರಿಯನೆಂದರೆ ಕಿಂಗ್, ಅವನಿಗೆ ಆಗ ೩೫ ವರ್ಷ). ೧೯೬೮ರಲ್ಲಿ ನಡೆದ ಮಾರ್ಟಿನ್ ಲೂಥರ್ ಹತ್ಯೆ ಮತ್ತು ಇತಿಹಾಸ ಪ್ರಸಿದ್ಧ ‘ಬಡಜನರ ರ್ಯಾಲಿ’(ಪೂವರ್ ಪೀಪಲ್ಸ್ ಮಾರ್ಚ್) ಹಾಗೂ ಜಾನ್ ಎಫ್. ಕೆನಡಿಯ ಆಡಳಿತ (೧೯೬೦-೧೯೬೩) ಇವೆಲ್ಲವೂ ಅಮೆರಿಕಾದಲ್ಲಿ ಜನಾಂಗೀಯ ತಾರತಮ್ಯಕ್ಕೆ ಅಂತ್ಯ ಹಾಡುವುದಕ್ಕೆ ಮತ್ತು ಸಮಾನ ನಾಗರಿಕ ಹಕ್ಕುಗಳ ಕುರಿತ ಹೋರಾಟಕ್ಕೆ ಒಂದು ತಾರ್ಕಿಕ ಅಂತ್ಯ ಕೊಡುವುದಕ್ಕೆ ಸಹಕಾರಿಯಾದವು. ಇವೆಲ್ಲದರ ಫಲವಾಗಿ ೧೯೬೪ರಲ್ಲಿ ಕರಿಯರಿಗೆ ಸಾಮಾಜಿಕ ಸಮಾನ ಹಕ್ಕುಗಳನ್ನು ಕೊಡುವ ಕಾನೂನು ಬಂತು. ೧೯೬೭ರಲ್ಲಿ ಕರಿಯರು – ಬಿಳಿಯರ ನಡುವೆ ಇದ್ದ ವಿವಾಹ ತಡೆಯ ಕಾನೂನನ್ನು ರದ್ದುಗೊಳಿಸಲಾಯಿತು. ಗತಕಾಲದ ಹಿಂಸೆಯನ್ನು ಮರೆತು, ಹೊಸಕಾಲದಲ್ಲಿ ಮನುಷ್ಯ ಸಮುದಾಯ ಹೇಗೆ ಬದುಕಬೇಕೆಂಬುದನ್ನು ಈ ಆಂದೋಲನ ಕಲಿಸಿಕೊಟ್ಟಿತು. ಹಿಂಸೆಗೊಳಗಾದವರಿಗೆ ಹೆಚ್ಚು ಹಕ್ಕು ಬೇಕು ಅಂತ ಈ ಆಂದೋಲನ ಯಾವತ್ತೂ ಕೇಳಲಿಲ್ಲ. ಬದಲಿಗೆ ಹಿಂಸೆ ನಡೆಸಿದವರ ನಾಳೆಯ ಜನಾಂಗ ಮತ್ತು ಹಿಂಸೆಗೊಳಗಾದವರ ನಾಳೆಯ ಜನಾಂಗ ಸಮಾನ ಪಾತಳಿಯಲ್ಲಿ ಘನತೆಯುಕ್ತ ಬದುಕನ್ನು ಬಾಳುವಂತಹ ಅವಕಾಶವೊಂದನ್ನು ನಾಗರಿಕ ಸರಕಾರಗಳು ನಿರ್ಮಿಸಿಕೊಡಬೇಕು ಎಂದು ಇದು ಅಪೇಕ್ಷಿಸಿತು. ಅಮೆರಿಕಾ ತಾನು ಸ್ವಾತಂತ್ರ್ಯ ಪಡೆದುಕೊಂಡ ಸುಮಾರು ಇನ್ನೂರು ವರ್ಷಗಳ ನಂತರ ಈ ಸಮಾನ ನಾಗರಿಕ ಸಂಹಿತೆಯನ್ನು ಆಚರಣೆಗೆ ತಂದರೆ, ವಿರೋಧಾಭಾಸವೆಂಬಂತೆ ಜಗತ್ತಿನ ಬಹುತೇಕ ದೇಶಗಳನ್ನು ತನ್ನ ಆಳ್ವಿಕೆಯಲ್ಲಿ ಇಟ್ಟಕೊಂಡ ಬ್ರಿಟನ್ ಇದನ್ನು ಮುನ್ನೂರು ವರ್ಷಗಳ ನಂತರ ಜಾರಿಗೆ ತಂದಿತು. ಆದರೆ ಭಾರತದಲ್ಲಿ, ಬ್ರಿಟಿಷ್ ಭಾರತವು ಸ್ವತಂತ್ರ ಭಾರತವಾಗಿ ರೂಪಾಂತರಗೊಳ್ಳುತ್ತಿರುವಾಗಲೇ ಅಂದರೆ ತನ್ನ ಹೊಸ ಹುಟ್ಟಿನಲ್ಲೇ ಕಾನೂನಿನ ಮೂಲಕ ಈ ಸಮಾನತೆ ಮತ್ತು ನಾಗರಿಕ ಸಮಾನ ಹಕ್ಕುಗಳನ್ನು ಸಂವಿಧಾನಬದ್ಧವಾಗಿ ಅಂಗೀಕರಿಸಿಕೊಂಡೇ ಹೊಸ ಭಾರತ ಹುಟ್ಟಿಕೊಂಡಿತು.

ಕರಿಯರನ್ನು ಉದ್ದೇಶಿಸಿ ನಡೆದ ಸಾಮಾಜಿಕ ಚಳುವಳಿಗಳು ಮತ್ತು ಕರಿ-ಬಿಳಿಯರ ನಡುವೆ ನಡೆದ ನಾಗರಿಕ ಹಕ್ಕುಗಳ ಹೋರಾಟ ಹಾಗೂ ರಾಜಕೀಯವಾದ ಕೆಲ ದಿಟ್ಟ ನಿರ್ಧಾರಗಳಿಂದ ಅಮೆರಿಕಾ ಹಂತ-ಹಂತವಾಗಿ ಬದಲಾಯಿತು. ಕರಿಯರು ಆಡಳಿತದ ಅನ್ಯಾನ್ಯ ಕ್ಷೇತ್ರಗಳಲ್ಲಿ ಕಾಣಿಸಿಕೊಂಡರು. ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ, ಸೆನೆಟರ್ಗಳಾಗಿ, ಸೈನ್ಯಾಧಿಕಾರಿಗಳಾಗಿ, ಸೆಕ್ರೆಟರಿ ಆಫ್ ಸ್ಟೇಟ್ ಆಗಿ ಕರಿಯರು ಕಾಣಿಸಿಕೊಂಡರು. ಅಮೆರಿಕಾದ ಅಧ್ಯಕ್ಷ ಹುದ್ದೆಗೂ ಒಬಾಮಗಿಂತ ಮೊದಲೇ ವರ್ಚಸ್ಸೀ ಕರಿಯ ನಾಯಕರಾದ ರೆವರೆಂಡ್ ಜೆಸ್ಸಿ ಜ್ಯಾಕ್ಸನ್ ಎರಡು ಬಾರಿ ಡೆಮಾಕ್ರಾಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಲು ಪ್ರಯತ್ನಿಸಿ ವಿಫಲರಾಗಿದ್ದರು. ಅಮೆರಿಕಾದ ಒಟ್ಟು ಜನಸಂಖ್ಯೆಯಲ್ಲಿ ಕೇವಲ ಶೇಕಡಾ ೧೩ರಷ್ಟು ಮಾತ್ರ ಇವರು ಕರಿಯರು ಈ ದೇಶದ ಆಡಳಿತ ಚುಕ್ಕಾಣಿ ಹಿಡಿಯುವುದು ಅಸಾಧ್ಯ ಎಂಬಂಥ ಸ್ಥಿತಿಯಲ್ಲಿ ಕಾಣಿಸಿಕೊಂಡದ್ದು ಬರಾಕ್ ಒಬಾಮ ಎಂಬ ಅಫ್ರೋ-ಅಮೇರಿಕನ್. ಕರಿಯ ತಂದೆಯ ಮತ್ತು ಬಿಳಿಯ ತಾಯಿಯ ಮಗ. ಡೆಮಾಕ್ರಾಟಿಕ್ ಪಕ್ಷದ ಅಭ್ಯರ್ಥಿ.

ಅಮೆರಿಕಾದ ಪಕ್ಷ ರಾಜಕಾರಣ-ಡೆಮಾಕ್ರಾಟಿಕ್ಸ್ ಮತ್ತು ರಿಪಬ್ಲಿಕನ್ಸ್

ಅಮೆರಿಕಾದ ಅತ್ಯಂತ ಹಳೆಯ ಮತ್ತು ಪ್ರಮುಖ ಎರಡು ಪಕ್ಷಗಳಲ್ಲಿ ಡೆಮಾಕ್ರಾಟಿಕ್ ಪಕ್ಷ ಒಂದು. ಥಾಮಸ್ ಜೆಫರ್ಸನ್ ಮತ್ತು ಜೇಮ್ಸ್ ಮ್ಯಾಡಿಸನ್ ಹಾಗೂ ಫೆಡರಲಿಸ್ಟ್ಗಳು ಇತರೆ ಕೆಲ ರಾಜಕೀಯ ವಿರೋಧಿಗಳು ಒಟ್ಟಾಗಿ ೧೭೯೨ರಲ್ಲಿ ಡೆಮಾಕ್ರಾಟಿಕ್ ಎಂಬ ಪಕ್ಷವೊಂದನ್ನು ಹುಟ್ಟು ಹಾಕಿದರು.
ಆದರೆ ಈಗ ಇರುವ ಆಧುನಿಕ ಡೆಮಾಕ್ರಾಟಿಕ್ ಪಕ್ಷ ೧೮೩೦ರಲ್ಲಿ ಉದಯವಾಯಿತು. ಡೆಮಾಕ್ರಾಟಿಕಗಳ ಭಾಗವಾಗಿದ್ದ ರಿಪಬ್ಲಿಕನ್ನರು ೧೯೧೨ರಲ್ಲಿ ನಡೆದ ಚುನಾವಣೆಯ ಸಂದರ್ಭದಲ್ಲಿ ಪ್ರತ್ಯೇಕಗೊಂಡು ಸ್ವತಂತ್ರ ಪಕ್ಷವನ್ನು ಸ್ಥಾಪಿಸಿದರು. ಅಂದಿನಿಂದ ಇಂದಿನವರೆಗೂ ಡೆಮಾಕ್ರಾಟಿಕರು, ರಿಪಬ್ಲಿಕನ್ರ ನಿಲುವಿಗಿಂತ ಸಂಪೂರ್ಣ ಭಿನ್ನವಾದ ಆರ್ಥಿಕ ರಾಜಕೀಯ ನಿಲುವುಗಳನ್ನು ಪ್ರತಿಪಾದಿಸುತ್ತಲೇ ಬಂದಿದ್ದಾರೆ.

ಜಗತ್ತಿನ ಪ್ರಸಿದ್ಧ ತತ್ತ್ವಚಿಂತಕನೂ ಮತ್ತು ಇಕನಾಮಿಕ್ ಆ್ಯಕ್ಟಿವಿಸ್ಟ್ನೂ ಆಗಿರುವ ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್ ಅಮೆರಿಕನ್ ಲಿಬರಲಿಸವ‰ ನ ತತ್ತ್ವಚಿಂತನೆಗಳ ಮೇಲೆ ಬಹಳ ಗಾಢವಾದ ಪ್ರಭಾವವನ್ನು ಬೀರಿದವನು. ೧೯೩೨ರ ತರುವಾಯ ಈತನಿಂದ ಡೆಮಾಕ್ರಾಟಿಕ್ರ ತಾತ್ತ್ವಿಕ ಪ್ರಣಾಳಿಕೆ ರೂಪುಗೊಂಡಿದೆ. ೧೭೯೨ರ ಡೆಮಾಕ್ರಾಟಿಕ್ ಪಕ್ಷ ಕ್ಲಾಸಿಕಲ್ ಲಿಬರಲಿಸವ‰ನ ತತ್ತ್ವಗಳ ಮೇಲೆ ಆಧರಿಸಲ್ಪಟ್ಟಿದ್ದರೆ ಆಧುನಿಕ ಡೆಮಾಕ್ರಾಟಿಕ್ ಪಕ್ಷ ಅಮೇರಿಕನ್ ಲಿಬರಲಿಸವ‰ ಅರ್ಥಾತ್ ಸೋಷಿಯಲ್ ಲಿಬರಲಿಸವ‰ ಅನ್ನು ತನ್ನ ಮುಖ್ಯ ತಾತ್ತ್ವಿಕ ಭಿತ್ತಿಯಾಗಿರಿಸಿಕೊಂಡಿದೆ. ಅಮೆರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಕೂಡ ಸೇರಿದಂತೆ ಆಧುನಿಕ ಡೆಮಾಕ್ರಾಟಿಕ್ರು ಆರಿಸಿಕೊಂಡ ಆರ್ಥಿಕ ನೀತಿಯನ್ನು ‘ಮೂರನೇ ಮಾರ್ಗ’ ಎಂದೇ ಅಲ್ಲಿ ಕರೆಯಲಾಗುತ್ತಿದೆ. ಅಮೆರಿಕಾದ ೭೨ ಮಿಲಿಯನ್(೪೨) ಜನರು ಈಗ ಅಧಿಕೃತವಾಗಿ ಡೆಮಾಕ್ರಾಟಿಕ್ ಪಕ್ಷದ ಸದಸ್ಯರಾಗಿ ನೋಂದಾಯಿತರಾಗಿದ್ದಾರೆ. ಇದೇ ವೇಳೆ ರಿಪಬ್ಲಿಕನ್ನರು ೫೫ ಮಿಲಿಯನ್ ಮತ್ತು ಪಕ್ಷೇತರರು ಅಥವಾ ಸ್ವತಂತ್ರರು ೪೨ ಮಿಲಿಯನ್ ಜನರ ಬೆಂಬಲವನ್ನು ಪಡೆದಿದ್ದಾರೆ. ಚಾರಿತ್ರಿಕವಾಗಿಯೂ ಡೆಮಾ ಕ್ರಾಟಿಕರು ರೈತರ, ಕೂಲಿಕಾರರ, ಕಾರ್ಮಿಕರ ಮತ್ತು ಕಾರ್ಮಿಕ ಸಂಘಟನೆಗಳ, ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತರ-ಹೀಗೆ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಬದಿಗೆ ತಳ್ಳಲ್ಪಟ್ಟವರನ್ನು ಬೆಂಬಲಿಸುತ್ತಾ ಬಂದಿದೆ. ಇತ್ತೀಚಿಗಿನ ಕೆಲ ದಶಕಗಳಿಂದ ಈ ಪಕ್ಷ ಸಮ್ರಿಶ್ರ ಆರ್ಥಿಕ ವ್ಯವಸ್ಥೆಯನ್ನು ನೆಚ್ಚಿಕೊಂಡಿದೆ.

ಡೆಮಾಕ್ರಾಟಿಕ್ರು ನೇರ ಮಿಲಿಟರಿ ಕಾರ್ಯಾಚರಣೆಗಿಂತ ರಾಜಕೀಯ ವ್ಯೆಹಗಾರಿಕೆಗೆ ಪೊಲಿಟಿಕಲ್ ಡಿಫ್ಲೋಮಸಿಗೆ ಹೆಚ್ಚು ಒತ್ತು ಕೊಟ್ಟವರು. ಹಾಗೆಯೇ ಜೀವ ಕೋಶಗಳ ಮತ್ತು ಅಂಗಾಂಶ ಕೃಷಿಯ(ಸ್ಟೆಮ್ ಸೆಲ್)ಸಂಶೋಧನೆಯ ಬಗೆಗೆ, ಜಾಗತಿಕ ತಾಪಮಾನವೂ ಸೇರಿದಂತೆ ಪರಿಸರ ಸಂರಕ್ಷಣೆಯ ಬಗ್ಗೆ(ಡೆಮಾಕ್ರಾಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಯಾಗಿದ್ದು ಜಾರ್ಜ್ ಬುಷ್ನ ಎದುರು ಸೋತ ಡೆಮಾಕ್ರಾಟಿಕ್ ಪಕ್ಷದ ಆಲ್ ಗೋರೆ ಇದೇ ಉದ್ದೇಶಕ್ಕಾಗಿ ಇವತ್ತಿಗೂ ದುಡಿಯುತ್ತಿರುವುದನ್ನು ಮತ್ತು ಇದೇ ಕಾರಣಕ್ಕಾಗಿ ನೊಬೆಲ್ ಪ್ರಶಸ್ತಿಯನ್ನು ಪಡೆದಿರುವುದನ್ನು ಈ ಪಕ್ಷದ ಪರಿಸರದ ಕುರಿತಾದ ಬದ್ಧತೆಯನ್ನು ಸೂಚಿಸುತ್ತಿದೆ) ಗರ್ಭಪಾತ ಮಾಡಿಸಿಕೊಳ್ಳಬೇಕೋ ಬೇಡವೋ ಎನ್ನುವುದು ಆಯಾ ಮಹಿಳೆಯರ ಪರಮಾಧಿಕಾರದ ಪ್ರಶ್ನೆ ಎನ್ನುವುದರ ಬಗ್ಗೆ, ಸಾಂಸ್ಕೃತಿಕ ಬಹುರೂಪತೆಯನ್ನು ಉಳಿಸಿಕೊಳ್ಳುವುದರ ಬಗ್ಗೆ, ಸಲಿಂಗ ವಿವಾಹವನ್ನು ಬೆಂಬಲಿಸುವ ಬಗ್ಗೆ ಹಾಗೂ ಜಾತ್ಯಾತೀತ ಸರಕಾರವನ್ನು ಹೊಂದುವ ಬಗ್ಗೆ ಡೆಮಾಕ್ರಾಟ್ರು ಒಲವು ಹೊಂದಿದ್ದಾರೆ. ಹಾಗಿದ್ದು ಈ ಪಕ್ಷದೊಳಗೆ ಹಲವು ತಾತ್ತ್ವಿಕ ಭಿನ್ನಾಭಿಪ್ರಾಯಗಳನ್ನು ಹೊಂದಿರುವವರೂ ಇದ್ದಾರೆ. ಅವರ ಅಭಿಪ್ರಾಯಗಳ ಮುಕ್ತ ಪ್ರತಿಪಾದನೆಗೆ ಮತ್ತು ಪಕ್ಷದ ನೀತಿ-ನಿಲುವುಗಳ ಬಗೆಗಿನ ವಿರೋಧಕ್ಕೂ ಅವರಿಗೆ ಸಮಾನ ಅವಕಾಶ ಇದೆ. ಇರಾಕ್ ಮೇಲಿನ ಆಕ್ರಮಣದ ಕುರಿತಂತೆ ಡೆಮಾಕ್ರಾಟಿಕ್ರ ಒಳಗಡೇನೇ ಬಹಳ ತೀವ್ರವಾದ ಭಿನ್ನಾಭಿಪ್ರಾಯಗಳಿದ್ದವು ಎನ್ನವುದನ್ನು ಇಲ್ಲಿ ನೆನಪಿಸಿಕೊಳ್ಳುವುದು ಸೂಕ್ತ.

ಡೆಮಾಕ್ರಾಟಿಕ್ರನ್ನು ಬೆಂಬಲಿಸುವವರಲ್ಲಿ ಬುದ್ದಿಜೀವಿಗಳು, ಶಿಕ್ಷಣತಜ್ಞರು, ಉನ್ನತ ವ್ಯಾಸಂಗ ಮಾಡಿದವರು ಹಾಗೂ ಮಾಡುತ್ತಿರುವವರೂ ಸೇರಿದ್ದಾರೆ. ೨೦೦೫ರ ಸರ್ವೇ ಪ್ರಕಾರ ೭೨ ಅಧ್ಯಾಪಕರು ಮತ್ತು ಉನ್ನತ ಶಿಕ್ಷಣ ಪಡೆದವರು ಡೆಮಾಕ್ರಾಟಿಕ್ರ ಬೆಂಬಲಿಗರಾಗಿದ್ದಾರೆ. ಹಾಗೆಯೇ ಯುವಜನತೆಯಲ್ಲೂ ಸುಮಾರು ೫೦ ರಿಂದ ೫೪ ರಷ್ಟು ಜನರು ಡೆಮಾಕ್ರಾಟಿಕ್ರ ಬೆಂಬಲಿಗರು. ೨೦೦೪ರಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಾಟಿಕ್ರ ಅಭ್ಯರ್ಥಿ ಜಾನ್ ಕೆರ್ರಿ ೫೪ ಯುವಜನರ ಬೆಂಬಲವನ್ನು ಪಡೆದರೆ, ಬುಷ್ ೪೫ ಬೆಂಬಲವನ್ನು ತೆಗೆದುಕೊಂಡ. ಹಾಗೆಯೇ ಆಫ್ರಿಕನ್-ಅಮೆರಿಕನ್ನರು ಸಿವಿಲ್ ವಾರ್ ಮುಕ್ತಾಯದ ದಿನಗಳಲ್ಲಿ ರಿಪಬ್ಲಿಕನ್ ಪಾರ್ಟಿಯ ಬೆಂಬಲಿಗರಾಗಿದ್ದರು. ಆದರೆ ೧೯೩೦ರಲ್ಲಿ ರೂಸ್ ವೆಲ್ಟ್ನ ಹೊಸ ಆರ್ಥಿಕ ನೀತಿಯಿಂದಾಗಿ ಅವರೆಲ್ಲರು ಗಣನೀಯವಾಗಿ ಡೆಮಾಕ್ರಾಟಿಕ್ರ ಬೆಂಗಲಿಗರಾಗಿದ್ದಾರೆ. ಒಬಾಮ ಅಧ್ಯಕ್ಷೀಯ ಅಭ್ಯರ್ಥಿಯಾದ ಮೇಲಂತೂ ಡೆಮಾಕ್ರಾಟಿಕ್ರ ಕಡೆಗಿನ ಅವರ ಬೆಂಬಲ ಅಚಲವಾಗಿದೆ.