೨೦ನೆಯ ಶತಮಾನದಲ್ಲಿ ಅಮೆರಿಕಾ ಬಹುದೊಡ್ಡ ಶಕ್ತಿಯಾಗಿ ಬೆಳೆದು ನಿಂತಿದೆ. ತನ್ನ ಸಾರ್ವಭೌಮತ್ವಕ್ಕೆ ಧಕ್ಕೆ ಬಂದಾಗ ಯಾರನ್ನೂ ಬಿಟ್ಟಿಲ್ಲ. ವಿವಿಧ ಜನಾಂಗ ಬಹು ಸಂಸ್ಕೃತಿಗಳ ಸಂಗಮವಾಗಿರುವ ಅಮೆರಿಕಾ ತಾನು ಪ್ರಜಾಪ್ರಭುತ್ವ ಹಾಗೂ ವ್ಯಕ್ತಿ ಸ್ವಾತಂತ್ರ್ಯಗಳನ್ನು ಯಾವ ಬೆಲೆಯನ್ನಾದರೂ ಸಂದಾಯಿಸಿ ಉಳಿಸಿಕೊಳ್ಳುವೆ ಎಂದು ಪ್ರತಿಪಾದಿಸಿದೆ. ಐಕ್ಯತೆ, ಅಭಿವೃದ್ದಿ, ಸ್ವಾತಂತ್ರ್ಯ ಹಾಗೂ ಬಲಿಷ್ಠತೆಯನ್ನು ಕಾಪಾಡಿಕೊಳ್ಳಲು ಎಂತಹುದೇ ಬಿಕ್ಕಟ್ಟುಗಳನ್ನು ನಿವಾರಿಸಿಕೊಂಡು ಮುನ್ನುಗುತ್ತಿದೆ. ಈ ಹಿಂದೆ ನೂರ ಮೂವತ್ತು ವರ್ಷಗಳ ಕಾಲ ಅನೇಕ ಕಾರಣಗಳಿಗಾಗಿ ತನ್ನೊಳಗಿನ ಸಮಸ್ಯೆಗಳ ಸಂಬಂಧವಾಗಿ ಹೋರಾಟ ಮಾಡಿಕೊಂಡು ಸ್ಥಿರತೆ ಪಡೆದಿರುವ ಅಮೆರಿಕಾ ೨೦ನೆಯ ಶತಮಾನದಲ್ಲಿ ಜಗತ್ತೇ ಬೆರಗಾಗುವಂತೆ ಬೆಳೆದು ನಿಂತಿದೆ. ಈ ಕಾಲಾವಧಿಯಲ್ಲಿ ಹಲವು ಏಳುಬೀಳುಗಳನ್ನು ಕಂಡ ಆಂತರಿಕ ರಾಜಕಾರಣ ಹಾಗೂ ಅದೇ ಸಂದರ್ಭದಲ್ಲಿ ಜಾಗತಿಕವಾಗಿ ಅಮೆರಿಕಾ ನಿರ್ವಹಿಸಿದ ರಾಜಕಾರಣದ ಬಗೆಗೆ ಸ್ಥೂಲವಾಗಿ ಈ ಲೇಖನದಲ್ಲಿ ಚರ್ಚಿಸಲಾಗಿದೆ. ಅಭಿವೃದ್ದಿ ರಾಜಕಾರಣವನ್ನು ಬೆಳೆಸಿಕೊಂಡರೂ ತನ್ನದೇ ದೇಶದಲ್ಲಿರುವ ಕರಿಯರ ಬಗೆಗೆ ಅಮೆರಿಕಾ ತಾಳಿರುವ ದ್ವಂದ್ವ ನಿಲುವುಗಳು ಜಾಗತಿಕ ನಾಗರಿಕ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿರುವುದು ದುರಂತವೇ ಸರಿ. ಆದರೆ ಅದೇ ಕಾಲಕ್ಕೆ ವರ್ಣದ್ವೇಷವನ್ನು ಪ್ರತಿಭಟಿಸುವ ಪ್ರಜ್ಞಾವಂತರನ್ನು ಸಹ ಅಮೆರಿಕಾ ತುಂಬಿಕೊಂಡಿರುವುದು ಸಮಾಧಾನದ ಸಂಗತಿ. ಈ ಹಿನ್ನೆಲೆಯಲ್ಲಿ ಅತ್ಯಂತ ರೋಚಕವಾದ ನಾಟಕೀಯ ಘಟನೆಗಳಂತೆ ಅಮೆರಿಕಾದ ರಾಜಕಾರಣ ಈ ಶತಮಾನದ ಜಾಗತಿಕ ಇತಿಹಾಸದಲ್ಲಿ ದಾಖಲಾಗಿದೆ.

ಎರಡು ಬಹುದೊಡ್ಡ ಮಹಾಯುದ್ಧಗಳಲ್ಲಿ ಅನಿವಾರ್ಯ ಕಾರಣಗಳಿಂದ ಅಮೆರಿಕಾ ಭಾಗವಹಿಸಿ ಅನೇಕ ದುಷ್ಪರಿಣಾಮಗಳನ್ನು ಅನುಭವಿಸುವಂತಾಗಿದೆ. ಶೀತಲಸಮರದ ಮೂಲಕ ಸಮತಾವಾದ ಸಿದ್ಧಾಂತಿಗಳ ನೆಲೆಗಳನ್ನು ಛಿದ್ರ ಮಾಡುವಲ್ಲಿ ಯಶಸ್ವಿಯಾಗಿದೆ. ಕುತಂತ್ರದ ರಾಜಕಾರಣ ಮಾಡುವಲ್ಲಿ ವಿಶೇಷ ಪರಿಣತಿ ಪಡೆದಿರುವ ಅಮೆರಿಕಾದ ಆಡಳಿತ ತಾನೇ ಸೃಷ್ಟಿಸಿಕೊಂಡಿರುವ ಸರ್ವಾಧಿಕಾರಿಗಳಿಂದ ಮರ್ಮಘಾತವಾದ ಒಡೆತಗಳನ್ನು ತಿನ್ನುತ್ತಿದೆ. ಆದರೂ ಯಾವುದಕ್ಕೂ ಜಗ್ಗದೆ ಅಮೆರಿಕಾ ತನ್ನನ್ನು ನುಂಗಿ ಹಾಕಲು ಯತ್ನಿಸುತ್ತಿರುವ ಜಾಗತಿಕ ಮಟ್ಟದ ಭಯೋತ್ಪಾದನೆಯನ್ನು ಮಟ್ಟ ಹಾಕಲು ಕಾವಲು ನಾಯಿಯಾಗಿ ಕಾಯುತ್ತಿದೆ. ಆಂತರಿಕ ರಾಜಕಾರಣದ ಅನೇಕ ಸಮಸ್ಯೆಗಳ ಮಧ್ಯೆಯೂ ಎಲ್ಲ ರಂಗಗಳಲ್ಲಿ ಅಭಿವೃದ್ದಿ ಹೊಂದಿತ್ತಿರುವ ಅಮೆರಿಕಾ ವಿಶ್ವವನ್ನು ತನ್ನ ತಾಳಕ್ಕೆ ತಕ್ಕ ಹಾಗೆ ಕುಣಿಯುವಂತೆ ಮಾಡಿದೆ. ಅಮೆರಿಕಾದ ರಾಜಕಾರಣಿಗಳು ನಿರ್ದೇಶಿಸುತ್ತಿರುವ ಆಂತರಿಕ ಹಾಗೂ ಜಾಗತಿಕ ರಾಜಕಾರಣದ ಘಟನೆಗಳನ್ನು ಪ್ರಸ್ತುತ ಲೇಖನದಲ್ಲಿ ಚರ್ಚಿಸಲಾಗಿದೆ.

ಅಮೆರಿಕಾದ ಪ್ರಗತಿಪರ ಯುಗಾರಂಭ

ಅಮೆರಿಕಾದ ಇತಿಹಾಸದಲ್ಲಿ ಆಗಿಹೋದ ಪ್ರಗತಿಪರ ಕಾಲಘಟ್ಟವು ವಿಶ್ವದ ರಾಜಕೀಯ ಪರಿರ್ವತನೆಯ ಘಟ್ಟವಾಗಿ ಮಾರ್ಪಡಾಯಿತು. ಅನೇಕ ದುರಂತ ಘಟನೆಗಳ ಹಾಗೂ ಇಕ್ಕಟ್ಟು ಬಿಕ್ಕಟ್ಟುಗಳ ನಡುವೆ ಅಮೆರಿಕಾನ್ನರು ಫಿನಿಕ್ಸ್ ಹಕ್ಕಿಯಂತೆ ಮತ್ತೆ ಮತ್ತೆ ರೂಪ ತಾಳಿದರು. ಅಗಾಧವಾದ ಇಚ್ಛಾಶಕ್ತಿಯನ್ನು ಹೊಂದಿದ ಅಧ್ಯಕ್ಷರು ಸಂದಿಗ್ಧ ಕಾಲಗಳಲ್ಲಿ ಅಧಿಕಾರ ವಹಿಸಿಕೊಂಡು ಧೈರ್ಯವಾಗಿ ಯಾವ ಮುಲಾಜಿಲ್ಲದೆ ತಮ್ಮ ಸುಧಾರಣೆಗಳನ್ನು ಜಾರಿಗೊಳಿಸಿ ಯುರೋಪನ್ನು ತಮ್ಮ ಕಾಲಿನಡಿಯಲ್ಲಿ ಅದುಮಿಟ್ಟುಕೊಂಡರು.  ೧೯ನೇ ಶತಮಾನದಲ್ಲಿ ಅಮೆರಿಕಾ ಸಾಧಿಸಿದ ತೀವ್ರ ಪ್ರಗತಿ ಎಲ್ಲ ರಂಗಗಳಲ್ಲಿ ಸೆಟೆದು ನಿಲ್ಲುವಂತೆ ಮಾಡಿತು. ಇಂಥ ಅಭಿವೃದ್ದಿ ೨೦ನೆಯ ಶತಮಾನದ  ರಾಜಕೀಯ ಚದುರಂಗದಲ್ಲಿ ಸೋಲಿಲ್ಲದ ಸರದಾರನ ಸ್ಥಾನಕ್ಕೆ ತಂದು ನಿಲ್ಲಿಸಿತು. ಶಕ್ತಿ ರಾಜಕಾರಣದಲ್ಲಿ ಅಗಾಧ ಪ್ರಗತಿ ಸಾಧಿಸಿದ ಅಮೆರಿಕಾ ತನ್ನದೇ ದೇಶದಲ್ಲಿದ್ದ ನಾಗರಿಕ ಮಾನವೀಯ ಮೌಲ್ಯಗಳ ಸಂಬಂಧಗಳನ್ನು ಉಳಿಸಿಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲವಾಗಿತ್ತು. ಭ್ರಷ್ಟಾಚಾರ ವ್ಯವಸ್ಥೆಯು ಅಮೆರಿಕಾನ್ ಆಡಳಿತದ ನರನಾಡಿಗಳಲ್ಲಿ ಹರಿದು ದೇಶವೇ ಕಲುಷಿತಗೊಂಡಿತ್ತು. ಇಂಥ ಅರ್ಬುದ ಕಾಯಿಲೆಯನ್ನು ಬುಡಸಹಿತ ಕಿತ್ತೊಗೆಯಲು ನುರಿತ ರಾಜಕೀಯ ವೈದ್ಯರು ಬೇಕಾಗಿದ್ದರು. ಕ್ಷಿಪ್ರವಾಗಿ ಜರುಗುತ್ತಿದ್ದ ರಾಜಕೀಯ ಪತನಗಳ ಮಧ್ಯೆಯೂ ತಾಳ್ಮೆಯಿಂದ ಕೊಳೆ ತೊಳೆಯುವ ಕಾರ್ಯಗಳನ್ನು ಥಿಯೋಡೊರ್ ರೂಸ್‌ವೆಲ್ಟ್ ಹಾಗೂ ವುಡ್ರೋವಿಲ್ಸನ್ ನಂತಹ ಮೇಧಾವಿಗಳು ತಮ್ಮ ಆಡಳಿತಾವಧಿಯಲ್ಲಿ ಮಾಡಿದರು.

ಬಂಡವಾಳಶಾಹಿ ವ್ಯವಸ್ಥೆಯನ್ನು ಬೆಂಬಲಿಸುತ್ತ ಬಂದಂಥ ಅಮೆರಿಕಾವು ಮಿತಿಮೀರಿದ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಅಲ್ಲದೇ ಸರಕಾರವೇ ವಿಶೇಷವಾಗಿ  ಪ್ರೋ ಏಕಸ್ವಾಮ್ಯ ನೀತಿಯಿಂದ ಕೆಳಸ್ತರದ ಕೃಷಿ ಹಾಗೂ ಕಾರ್ಮಿಕ ವರ್ಗಗಳು ಸಿರಿವಂತರ ಮೋಜಿನ ಆಟಿಕೆಯ ವಸ್ತುಗಳಾಗಿ ಪರಿಗಣಿಸಲ್ಪಟ್ಟರು. ಆದರೆ ತೀವ್ರವಾಗಿ ಪ್ರತಿಭಟಿಸಿದ ಸಮಾಜ ಸುಧಾರಕರು ಅಥವಾ ಪ್ರಗತಿಪರ ವರ್ಗಗಳು ಇಂಥ ಅನಿಷ್ಟಗಳ ವಿರುದ್ಧ ಆಗಾಗ ಸೆಟೆದು ನಿಂತವು. ಅಂತಃಕಲಹದ ನಂತರ ಪ್ರಗತಿಪರರು ದೇಶದ ಆಡಳಿತವನ್ನು ಸಿರಿವಂತರ ಕಪಿಮುಷ್ಟಿಯಿಂದ ಬಿಡಿಸಿ ಜನರ ಕೈಗೆ ಮರಳಿಸುವ ಹೋರಾಟದಲ್ಲಿ ನಿರತರಾದರು. ರಾಜಕೀಯ ಕ್ಷೇತ್ರದಲ್ಲಿ ಬಲಿಷ್ಠವಾಗಿದ್ದ ಡೆಮಾಕ್ರೆಟಿಕ್ ಹಾಗೂ ರಿಪಬ್ಲಿಕನ್ ಪಕ್ಷಗಳ ಒಳಗೆಯೇ ಇದ್ದಂತಹ ಪ್ರಗತಿಪರರು ವ್ಯವಸ್ಥೆಯ ವಿರುದ್ಧ ಪ್ರತಿಭಟಿಸಿ ನಿಂತರು. ಹಣಕಾಸಿನ ಸಂಸ್ಥೆಗಳಾದ ಕಾರ್ಪೊರೇಟ್ ವ್ಯವಸ್ಥೆ ದೇಶಕ್ಕೆ ಅನಿವಾರ್ಯವಾಗಿದ್ದರೂ, ಅವು ಮಾಡುವ ಶೋಷಣೆಯನ್ನು ಆದಷ್ಟು ಬೇಗ ನಿಯಂತ್ರಿಸುವುದು ಸರಕಾರದ ಆದ್ಯ ಕರ್ತವ್ಯವಾಗಿತ್ತೆಂದು ರೂಸ್‌ವೆಲ್ಟ್‌ನು ಭಾವಿಸಿದ್ದನು. ಆದರೆ ವುಡ್ರೋವಿಲ್ಸನ್‌ನಂತಹ ಪ್ರಗತಿವಾದಿಗಳು ಇಡೀ ಏಕಸಾಮ್ಯ ವ್ಯವಸ್ಥೆಯನ್ನು ಕಿತ್ತೊಗೆಯಬೇಕೆಂದು ಪ್ರತಿಪಾದಿಸಿದರು. ಅಮೆರಿಕಾದ ಪ್ರಗತಿಪರ ಚಳವಳಿಗೆ, ಮುಖ್ಯ ಪ್ರೇರಣಾಶಕ್ತಿಗಳೆಂದರೆ ಪತ್ರಿಕೋದ್ಯಮಿಗಳು ಹಾಗೂ ಸಾಹಿತಿಗಳು. ಸ್ಟೀಫನ್ಸ್, ಟಾರ್‌ಬೆಲ್, ಸಾಮ್ಯುಯೆಲ್, ಹಾಪ್‌ಕಿನ್ಸ್, ರಸೆಲ್ ನಾರ್ಮನ್ ಮುಂತಾದ ಸಮಾಜ ಚಿಂತಕರು ತಮ್ಮ ಗಟ್ಟಿಯಾದ ಅಭಿಪ್ರಾಯಗಳಿಂದ ಜನಜಾಗೃತಿ ಕಾರ್ಯ ಮಾಡಿದರು. ೧೯೦೬ರಲ್ಲಿ ಪ್ರಕಟವಾದ ಸಿನಿಕ್ಲೆರ್‌ನ ‘ದಿ ಜಂಗಲ್’ ಎಂಬ ಕಾದಂಬರಿ ಇಡೀ ಬಂಡವಾಳಶಾಹಿ ವ್ಯವಸ್ಥೆಯನ್ನು ಪ್ರಶ್ನಿಸಿ ಸಮತಾ ಸಮಾಜವಾದವನ್ನು ಸಮರ್ಥಿಸಿತು. ಬಲಿಷ್ಠವಾದ ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ನಿಯಂತ್ರಣದಲ್ಲಿರಿಸಿ ಸ್ಥಾನಿಕ ಸರಕಾರಗಳಿಗೆ ಹೆಚ್ಚಿನ ಅಧಿಕಾರ ಕೊಡಬೇಕೆಂಬುದು ಸುಧಾರಣಾವಾದಿಗಳ ಅಭಿಪ್ರಾಯ ವಾಗಿತ್ತು. ಖಾಸಗಿ ಒಡೆತನದಲ್ಲಿದ್ದ ನಗರ ಸಭೆಗಳನ್ನು ಸಾರ್ವಜನಿಕ ಒಡೆತನಕ್ಕೆ ತರುವ ನೀತಿಯನ್ನು ಬೆಂಬಲಿಸಿದರು. ರಾಜ್ಯಮಟ್ಟದಲ್ಲಿಯೂ ಸಹ ಕೆಲವು ಸುಧಾರಣೆಗಳನ್ನು ಜನ ಬೆಂಬಲಿಸಿದರು. ವಿಸ್ಕಾನ್ಸಿನ್‌ನ ನ್ಯಾಯಾಲಯದ ನ್ಯಾಯಾಧೀಶನಾದ ರಾಬರ್ಟ್‌ಮೆರಿಯಾನ್ ಲಾ ಫಾಲಟೆ ಎಂಬ ಪ್ರಗತಿವಾದಿಯು ತನ್ನ ವಿಚಾರಣೆಯಿಂದ ದಿಢೀರನೆ ಜನಪ್ರಿಯತೆ ಗಳಿಸಿ ರಾಜ್ಯಪಾಲನಾದನು. ಹೊಸ ಕಾಯ್ದೆಗಳನ್ನು ಜಾರಿಗೆ ತರುವುದರ ಮೂಲಕ ರೈಲ್ವೆ ರಸ್ತೆಗಳ ಪ್ರಯಾಣದ ಮೇಲಿದ್ದ ಕರ ನಿರಾಕರಣೆ, ಕಾರ್ಮಿಕರ ಕೆಲಸದ ಅವಧಿಯ ಮಿತಿಗೊಳಿಸುವಿಕೆ ಹಾಗೂ ದುಡಿಯುವ ವರ್ಗಕ್ಕೆ ಪರಿಹಾರ ನಿಧಿಗಳನ್ನು ಲಾ ಫಾಲಟೆ ಜಾರಿಗೊಳಿಸಿದನು. ಪ್ರಜಾಸತ್ತಾತ್ಮಕ ರಾಷ್ಟ್ರದಲ್ಲಿ ಜನರ ನಂಬಿಕೆಗಳು ಬಹಳ ಮುಖ್ಯವಾದವುಗಳೆಂದು ತಿಳಿದಿದ್ದ ಫಾಲಟೆಯು ರಾಜಕೀಯ, ಆರ್ಥಿಕ ಹಾಗೂ ಸಾಮಾಜತಜ್ಞರನ್ನು ಆಡಳಿತದಲ್ಲಿ ಸಮರ್ಥವಾಗಿ ಬಳಸಿಕೊಂಡನು. ಈತನು ಮಾಡಿದ ಸುಧಾರಣೆಗಳು ಅಮೆರಿಕಾದ ಸಮಾಜೋ ರಾಜಕೀಯ ರಂಗದಲ್ಲಿ ಹೊಸ ಕ್ರಾಂತಿಯನ್ನೇ ಹುಟ್ಟುಹಾಕಿದವು.

ಅಮೆರಿಕಾವು ಮೂಲತಃ ಬಂಡವಾಳಶಾಹಿ ಮುಕ್ತ ವ್ಯವಸ್ಥೆಯನ್ನು ಹೊಂದಿದ್ದರೂ ಇದನ್ನು ಮೀರಿ ಅಲ್ಲಿರುವ ಆಡಳಿತ ಕೇವಲ ಕೆಲವೇ ಸಿರಿವಂತರ ಕೈಗೊಂಬೆಯಂತೆ ಕುಣಿಯಲಾರಂಭಿಸಿತು. ಇದು ಪ್ರಗತಿಪರರಿಗೆ ಬೇಕಾಗಿರಲಿಲ್ಲ. ಹೀಗಾಗಿ ಅಮೆರಿಕಾದ ಕಾಂಗ್ರೆಸ್ ಮತ್ತು ಸುಪ್ರೀಂಕೋರ್ಟನ್ನು ನಿಯಂತ್ರಿಸಲು ಜನರು ತಮ್ಮ ಪರಮಾಧಿಕಾರವನ್ನು ಪಡೆಯಬೇಕು ಎಂದು ಹೋರಾಟಕ್ಕಿಳಿದು ಸ್ವಲ್ಪ ಮಟ್ಟಿಗೆ ಯಶಸ್ವಿಯಾಯಿತು. ಅಮೆರಿಕಾದಲ್ಲಿದ್ದ ಗುಲಾಮಗಿರಿಯ ಸಮಸ್ಯೆಯಷ್ಟೇ ಪ್ರಾಮುಖ್ಯತೆ ಪಡೆದಿದ್ದು ಇನ್ನೊಂದು ಸಂಗತಿ ಎಂದರೆ  ‘ಪಾನ ನಿರೋಧ’ ಸಮಸ್ಯೆ.  ಹೋರಾಟಗಾರರು ಮಾಡಿದ  ತೀವ್ರ ಪ್ರತಿಭಟನೆಯ ಪರಿಣಾಮ ಸಂವಿಧಾನದ ೧೮ನೆಯ ತಿದ್ದುಪಡಿಯನ್ನು ಮಾಡುವುದರ ಮೂಲಕ ೧೯೧೯ರಲ್ಲಿ ‘ಪಾನ ನಿರೋಧ’ ಕಾಯ್ದೆಯನ್ನು ಜಾರಿಗೆ ತರಲಾಯಿತು. ಪ್ರಗತಿಪರರಿಗೆ ಸಿಕ್ಕ ಇನ್ನೊಂದು ಯಶಸ್ಸು ಎಂದರೆ ಮಹಿಳಾ ಮತದಾನದ ಹಕ್ಕನ್ನು ಜಾರಿಗೊಳಿಸಿದ್ದು. ನೂರಾರು ವರ್ಷಗಳಿಂದ ಸ್ತ್ರೀಯನ್ನು ರಾಜಕೀಯದಿಂದ ದೂರವಿಡ ಲಾಗಿತ್ತು. ಇದನ್ನು ಪ್ರತಿಭಟಿಸಿ ಅಮೆರಿಕಾದ ನಾಗರಿಕ ಸಮಾಜ ತೀವ್ರವಾಗಿ ಚಳವಳಿಯನ್ನು ವ್ಯಾಪಕಗೊಳಿಸಿದ ಪ್ರಯುಕ್ತ ಸ್ತ್ರೀಯರಿಗೆ ಮತದಾನದ ಹಕ್ಕನ್ನು ಕೊಡಮಾಡಲಾಯಿತು.

ಥಿಯೋಡರ್ ರೂಸ್‌ವೆಲ್ಟ್ ಆಡಳಿತ

ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಥಿಯೋಡರ್ ರೂಸ್‌ವೆಲ್ಟ್‌ನು ಅಧ್ಯಕ್ಷನ ಜವಾಬ್ದಾರಿಯನ್ನು ನಿರ್ವಹಿಸುವುದಕ್ಕಿಂತ ಮೊದಲು ಶಾಸಕನಾಗಿ, ನ್ಯೂಯಾರ್ಕ್ ನಗರದ ಪೊಲೀಸ್ ದಳದ ಮುಖ್ಯಸ್ಥನಾಗಿ ಹಾಗೂ ಅಮೆರಿಕಾದ ಸೈನಿಕನಾಗಿ ಸೇವೆ ಸಲ್ಲಿಸಿದ್ದನು. ನ್ಯೂಯಾರ್ಕ್ ರಾಜ್ಯದ ರಾಜ್ಯಪಾಲನಾದ ರೂಸ್‌ವೆಲ್ಟ್‌ನು, ರಾಜಕೀಯ ಚದುರಂಗದಾಟ ದಲ್ಲಿ ನೇರವಾಗಿ ಜನರಿಂದಲೇ ಗೆದ್ದು ಅಮೆರಿಕಾದ ಉಪಾಧ್ಯಕ್ಷನಾಗಿದ್ದರೂ ಅಧ್ಯಕ್ಷ ಪದವಿಗೆ ಏರಿದ್ದು ಮಾತ್ರ ಕಾಲಕೋಶದ ಅಭಯಹಸ್ತದಿಂದಲೇ ಎಂದು ಅಭಿಪ್ರಾಯಿಸ ಬಹುದು.  ಮೊದಲು ಮತಿಗೇಡಿ ಮೆಕಿನ್ಲೆನಿಂದ ಕೊಲೆಗೈಯಲ್ಪಟ್ಟನು(೧೯೦೧). ಇಂಥ ಆಕಸ್ಮಿಕ ಸಂದರ್ಭವು ರೂಸ್‌ವೆಲ್ಟ್‌ನನ್ನು ಅಧ್ಯಕ್ಷಸ್ಥಾನಕ್ಕೆ ತಂದು ಕೂರಿಸಿತು. ಚಾಣಾಕ್ಷನಾದ ಈತನು ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಂಡನು. ತನ್ನ ಆಡಳಿತಾವಧಿಯಲ್ಲಿ ತೀವ್ರವಾಗಿ ಕೈಗೊಂಡ ಕ್ರಮಗಳು ಈತನನ್ನು ಲಿಂಕನ್‌ನಷ್ಟೇ ಪ್ರಭಾವಿತ ಅಧ್ಯಕ್ಷನಾಗಿ ಮೆರೆಯುವಂತೆ ಮಾಡಿದವು.  ತೀವ್ರವಾಗಿ ತಲೆದೋರಬಹುದಾದ ಸಮಸ್ಯೆಗಳನ್ನು ಮಾತಿನ ಮೋಡಿಯಿಂದಲೇ ಉಪಶಮನಗೊಳಿಸುತ್ತಿದ್ದನು. ಪೆಡಂಭೂತದಂತೆ ಉದ್ಭವವಾಗಿದ್ದ ಉದ್ದಿಮೆದಾರರ ಅನೈತಿಕ ಆಡಳಿತವನ್ನು ನಿಯಂತ್ರಿಸಿ ಅದರ ಮೇಲೆ ಜನಮತ ಸರಕಾರದ ಅಂಕಿತವಿದೆ ಎಂದು ಸಾಬೀತುಪಡಿಸುವ ಮುಖ್ಯ ಉದ್ದೇಶ ಈತನದ್ದಾಗಿತ್ತು. ವ್ಯಾಪಾರ ವಹಿವಾಟು, ಕೃಷಿ, ಕೈಗಾರಿಕೆ ಹಾಗೂ ಇನ್ನಿತರ ಯಾವುದೇ ವಾಣಿಜ್ಯ ವ್ಯವಹಾರಗಳು ಸರಕಾರ ಹಾಕಿಕೊಟ್ಟ ಕಾನೂನು ಪರಿಧಿಯಲ್ಲಿ  ಕಡ್ಡಾಯವಾಗಿ ಕೆಲಸ ನಿರ್ವಹಿಸಬೇಕು ಎಂಬುದು ಈತನ ಮನೋಭೂಮಿಕೆಯಾಗಿತ್ತು. ಅಮೆರಿಕಾದ ಬಲಿಷ್ಠ ಆರ್ಥಿಕ ವ್ಯವಸ್ಥೆಯ ಬುಡ ಗಳನ್ನೇ ಅಲುಗಾಡಿಸುತ್ತಿದ್ದ ಟ್ರಸ್ಟ್‌ಗಳನ್ನು ನಿಯಂತ್ರಿಸಲು ಷರ್ಮನ್ ಶಾಸನಗಳನ್ನು ಜಾರಿ ಗೊಳಿಸುವುದರ ಮೂಲಕ ಅವು ಹೊಂದಿದ್ದ ಹಿಡಿತವನ್ನು ಛಿದ್ರಮಾಡಿದನು. ಅಮೆರಿಕಾದ ಪ್ರತಿಷ್ಠಿತ ಕಂಪನಿಗಳನ್ನು ಮುಟ್ಟುಗೋಲು ಹಾಕಿ ವಶಪಡಿಸಿಕೊಂಡಿದ್ದಕ್ಕೆ ರೂಸ್‌ವೆಲ್ಟ್‌ನನ್ನು ‘ಟ್ರಸ್ಟ್ ಭಂಜಕ’ ಎಂದು ಕರೆಯುತ್ತಾರೆ. ಪ್ರಜಾ ವಿರೋಧಿಯಾಗಿದ್ದ ಇಂಥ ಟ್ರಸ್ಟ್ ಹಾಗೂ ಉದ್ದಿಮೆಗಳ ಹಿಡಿತದಿಂದ ಕಾರ್ಮಿಕರನ್ನು ಮುಕ್ತಗೊಳಿಸಿದ ರೂಸ್‌ವೆಲ್ಟ್ ಅಮೆರಿಕಾದಲ್ಲಿ ಅಪಾರ ಜನಮನ್ನಣೆ ಗಳಿಸಿದನು. ಈತನ ಆಡಳಿತದ ಬೆಂಬಲವಾಗಿ ಪ್ರಗತಿಪರ ಉದ್ದಿಮೆದಾರರು ಹಾಗೂ ಸುಪ್ರೀಂಕೋರ್ಟ್ ಹೆಚ್ಚಿನ ಸಹಕಾರ ನೀಡಿದ್ದವು. ರೈಲ್ವೆ ಕಂಪನಿಗಳು, ವ್ಯಾಪಾರಿ ಕಂಪನಿಗಳಿಗೆ ಇದುವರೆಗೂ ವಿಶೇಷವಾಗಿ ನೀಡುತ್ತಿದ್ದ ಪ್ರಯಾಣದ ರಿಯಾಯಿತಿಗಳನ್ನು ರದ್ದುಪಡಿಸಿ, ಪ್ರಯಾಣದ ದರಗಳನ್ನು ನಿಗದಿಪಡಿಸಿದನು. ‘ರಾಷ್ಟ್ರೀಯ ರಕ್ಷಣಾ ಪರಿಷತ್ತು’ (ಸಂಪನ್ಮೂಲಗಳ ರಕ್ಷಣೆ ಇದರ ಮುಖ್ಯ ಉದ್ದೇಶ) ಎಂಬ ಯೋಜನೆ ಹಾಗೂ ‘ರಿಕ್ಲೆಮೇಷನ್ ಶಾಸನ’ (ಕೃಷಿಯ ಪ್ರಗತಿಗಾಗಿ ಹೇರಳವಾದ ನೀರಾವರಿ ಸೌಲಭ್ಯ ಒದಗಿಸುವುದು) ಜಾರಿಗೊಳಿಸಿ ಅಮೆರಿಕಾವನ್ನು ಒಂದು ಬಲಾಢ್ಯ ಶಕ್ತಿಯನ್ನಾಗಿ ರೂಪಿಸುವಲ್ಲಿ ಯಶಸ್ವಿಯಾದನು. ಥಿಯೋಡರ್ ರೂಸ್‌ವೆಲ್ಟ್‌ನು ಅಮೆರಿಕಾ ದೇಶವನ್ನು ಆಂತರಿಕವಾಗಿ ಸುಭದ್ರಗೊಳಿಸುವುದರ ಜೊತೆಗೆ, ವಿಶ್ವದ ರಾಜಕೀಯದಲ್ಲಿ ಮಹತ್ವವನ್ನು ಹೆಚ್ಚಿಸಿ ಅದಕ್ಕೊಂದು ಶಾಶ್ವತ ಮತ್ತು ಗಟ್ಟಿಯಾದ ವೇದಿಕೆಯನ್ನು ಒದಗಿಸಿಕೊಟ್ಟನು. ಕೆರಿಬಿಯನ್ ಉಪಸಾಗರವನ್ನು ಅಮೆರಿಕಾದ ಸೈನಿಕ ಚಟುವಟಿಕೆಗಳಿಗೆ ತಾಲೀಮು ಮಾಡುವ ಮೈದಾನವನ್ನಾಗಿ ಪರಿವರ್ತಿಸಿದನು. ಅಲ್ಲದೇ ಲಕ್ಷಾಂತರ ಡಾಲರ್ ಹಣ ಸುರುವಿ ಪನಾಮಾ ಕಾಲುವೆಯ ಮೇಲಿನ ಹಕ್ಕನ್ನು ಬ್ರಿಟಿಷರಿಂದ ಪಡೆದುಕೊಳ್ಳಲಾಯಿತು. ಒಟ್ಟಿನಲ್ಲಿ ಅಮೆರಿಕಾ ಸಂಸ್ಥಾನವು ಮೆಕ್ಸಿಕೊ ದೇಶವನ್ನೊಳಗೊಂಡಂತೆ ಇಡೀ ಲ್ಯಾಟಿನ್ ಅಮೆರಿಕಾವನ್ನು ತನ್ನ ತೋಳತೆಕ್ಕೆಗೆ ತೆಗೆದುಕೊಂಡಿತು. ಹೊಸ ಜಗತ್ತಿನ (ಪಶ್ಚಿಮ ಗೋಳಾರ್ಧ) ರಾಜಕೀಯ ಚದುರಂಗಾಟದ ಪ್ರತಿಕಾಯಿಗಳನ್ನು ಅಮೆರಿಕಾ ತನ್ನ ಗೆಲುವಿಗೆ ತಕ್ಕಂತೆ ಮುನ್ನಡೆಸಲಾರಂಭಿಸಿತು. ಆಂತರಿಕ ಪ್ರಜಾಪ್ರಭುತ್ವಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತ ಬೇರೆ ದೇಶಗಳಲ್ಲಿನ ಪ್ರಜಾಹಿತ ಆಡಳಿತ ಗಾರರ ಕತ್ತನ್ನು ಸಹ ಹಿಸುಕಲಾರಂಭಿಸಿದ್ದು, ಅಮೆರಿಕಾದ ದ್ವಂದ್ವ ನಿಲುವುಗಳನ್ನು ಪ್ರಚುರಪಡಿಸಿತು.

ಪ್ರಜಾಪ್ರಭುತ್ವದ ಪ್ರಬಲ ಪ್ರತಿಪಾದಕ ರಾಷ್ಟ್ರವಾಗಿದ್ದ ಅಮೆರಿಕಾವು ರೂಸ್‌ವೆಲ್ಟ್‌ನ್‌ನ ವಿದೇಶನೀತಿಯಿಂದ ಒಂದು ಆಕ್ರಮಣಕಾರಿ ಸಾಮ್ರಾಜ್ಯಶಾಹಿ ಪ್ರಭುತ್ವವಾಗಿ ಹೊರ ಹೊಮ್ಮಿತು. ಒಂದೊಂದು ಭೂಭಾಗಗಳನ್ನು ವಶಪಡಿಸಿಕೊಳ್ಳುತ್ತ ಅಥವಾ ಕೊಂಡುಕೊಳ್ಳುತ್ತ ಸಾಗಿದ ಅಮೆರಿಕಾ, ರಷ್ಯಾ, ಫ್ರಾನ್ಸ್, ಇಂಗ್ಲೆಂಡ್ ಹಾಗೂ ಸ್ಪೇನ್ ದೇಶಗಳನ್ನು ಪೆಸಿಫಿಕ್ ವಲಯದಿಂದ ಶಾಶ್ವತವಾಗಿ ಹೊರಹಾಕಿತು. ಫಿಲಿಫೈನ್ಸನ್ನು ಸಹ ವಶಪಡಿಸಿಕೊಂಡಿತು. ಇದೇ ಸಮಯಕ್ಕೆ ಏಷ್ಯಾದ ಆಕ್ರಮಣಕಾರಿ ಸಾಮ್ರಾಜ್ಯವಾದಿ ಜಪಾನ್ ದೇಶವು, ಅಮೆರಿಕಾಕ್ಕೆ ಪ್ರತಿಯಾಗಿ ಸವಾಲೆಸೆದು, ಚೀನಾ ಹಾಗೂ ರಷ್ಯಾವನ್ನು ಪೂರ್ವಫೆಸಿಫಿಕ್ ಸಾಗರದ ದ್ವೀಪಗಳಿಂದ ಕಿತ್ತೊಗೆದು ಫಾರ್ಮೊಸಾ, ಮಂಚೂರಿಯ ಹಾಗೂ ಕೊರಿಯಾಗಳನ್ನು ಆಕ್ರಮಿಸಿತು. ಇದರ ವಿಸ್ತರಣಾ ನೀತಿಯನ್ನು ವಿರೋಧಿಸಿದ ಅಮೆರಿಕಾ ಪರೋಕ್ಷ ಕದನಕ್ಕೆ ಇಳಿಯಿತು. ಅಮೆರಿಕಾ ತನ್ನ ‘ಮುಕ್ತ ದ್ವಾರದ’ ತತ್ವಕ್ಕನುಗುಣವಾಗಿ ತಾನೂ ಸಹ ವಸಾಹತುಶಾಹಿ ರಾಷ್ಟ್ರಗಳ ಸಾಲಿಗೆ ಸೇರಿತು. ಐರೋಪ್ಯರಂತೆ ಅಮೆರಿಕಾನ್ನರು ಸಹ ಚೀನಾ ದೇಶಕ್ಕೆ ತಮ್ಮ ಪ್ರೊಟೆಸ್ಟಂಟ್ ಮತಾವಲಂಬಿಗಳನ್ನು ಹರಿಬಿಟ್ಟರು. ಇವರು ಕೈಗೊಂಡ ತೀವ್ರ ಕಾರ್ಯಚಟುವಟಿಕೆಗಳಿಂದ ಕ್ರೈಸ್ತ ಮತಾವಲಂಬಿ ರಾಷ್ಟ್ರಗಳಾದ ಅಮೆರಿಕಾ, ಇಂಗ್ಲೆಂಡ್, ಫ್ರಾನ್ಸ್ ಮತ್ತು ಸ್ಪೇನ್ ದೇಶಗಳಿಗೆ ಹೆಚ್ಚಿನ ಅನುಕೂಲವಾಯಿತು. ಏಷ್ಯಾ ಖಂಡದಲ್ಲಿ ಉತ್ತಮವಾಗಿ ಹಾಲು ಕರೆಯುವ ಹಸುಗಳಂತಿದ್ದ ಆಡಳಿತಗಾರರನ್ನೊಳಗೊಂಡ ಹಲವಾರು ದೇಶಗಳು ಸಿಕ್ಕಂತಾಯಿತು. ಪನಾಮಾ ಕಾಲುವೆಯ ಹಕ್ಕಿನ ಪ್ರಶ್ನೆ ಬಂದಾಗ ಜಿದ್ದಿಗೆ ಬಿದ್ದ ಅಮೆರಿಕಾ ‘ಕೊಲಂಬಿಯಾ’ ರಾಷ್ಟ್ರವನ್ನೇ ಛಿದ್ರ ಮಾಡುವಲ್ಲಿ ಪ್ರಯತ್ನಿಸಿ ಸಫಲವಾಯಿತು. ಪ್ರತ್ಯೇಕ ಪನಾಮ ದೇಶಕ್ಕೆ ಬೆಂಬಲಿಸಿ ಕಾಲುವೆ ಹಕ್ಕನ್ನು ಡಾಲರುಗಳಲ್ಲಿ ಖರೀದಿಸಿ ಇಡೀ ಲ್ಯಾಟಿನ್ ಅಮೆರಿಕಾದಲ್ಲಿರುವ ದೇಶಗಳನ್ನು ಭಯಭೀತಗೊಳಿಸಿತು. ಅಲ್ಲದೇ ಕೊಲಂಬಿಯಾ ದೇಶಕ್ಕೂ ಪರಿಹಾರ ನಿಧಿ ಕೊಟ್ಟು ಅದರ ಬಾಯಿ ಮುಚ್ಚಿಸಿತು. ಪೆಸಿಫಿಕ್ ಹಾಗೂ ಅಟ್ಲಾಂಟಿಕ್ ವಲಯದಲ್ಲಿ ಈ ಹಿಂದೆ ಅಮೆರಿಕಾ ಅನುಸರಿಸಿಕೊಂಡ ಬಂದಿದ್ದ ಮನ್ರೊ ತತ್ವಕ್ಕೆ ಇನ್ನೊಂದು ಉಪತತ್ವವನ್ನು ರೂಸ್‌ವೆಲ್ಟ್‌ನು ಜೋಡಿಸಿದನು. ಹಲವು ತಂತ್ರ ಹಾಗೂ ಯುದ್ಧಗಳನ್ನು ಹೂಡಿ ಅನೇಕ ಗೊಂದಲಗಳನ್ನು ಜಾಗತಿಕ ವಲಯದಲ್ಲಿ ಸೃಷ್ಟಿಸುತ್ತಾ ಅವುಗಳನ್ನು ತಾನೇ ಜಯಸಿದ ಅಮೆರಿಕಾ ತನ್ನ ಮುಸುಕಿನ ಪರದೆಯನ್ನು ಜಾಡಿಸಿ ಒಗೆದು ವಿಶ್ವದ ಯಜಮಾನಿಕೆಯನ್ನು ಯಾವ ಸಂಕೋಚವಿಲ್ಲದೆ ವಹಿಸಿಕೊಂಡಿತು. ಕೊರಿಯಾ ಹಾಗೂ ಮಂಚೂರಿಯಾ ಪ್ರಾಂತಗಳ ಪ್ರಜಾಪ್ರಭುತ್ವದ ಜಾರಿಯ ವಿಷಯದಲ್ಲಿ ಜಪಾನ್ ಹಾಗೂ ರಷ್ಯಾ ನೇರ ಸಂಘರ್ಷಕ್ಕಿಳಿದವು. ಐರೋಪ್ಯ ಖಂಡದಲ್ಲಿ ಬಲಾಢ್ಯವಾಗಿದ್ದ ರಷ್ಯಾದ ಅಪಾಯವನ್ನು ಅರಿತ ಅಮೆರಿಕಾ ಜಪಾನ್ ಪರವಾಗಿ ನಿಂತು ವಾದಿಸಿ ಗೆದ್ದಿತು. ಆದರೆ ಕೆಲವೇ ದಿನಗಳಲ್ಲಿ ಜಪಾನ್ ಅಮೆರಿಕಾದ ಮುಕ್ತದ್ವಾರ ನೀತಿಯನ್ನು ಪ್ರಬಲವಾಗಿ ಖಂಡಿಸಿ ಅಮೆರಿಕಾದಲ್ಲಿದ್ದ ಜಪಾನಿನ ವಲಸೆಗಾರರನ್ನು ಅಮೆರಿಕಾ ಕನಿಷ್ಠ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದ ಪ್ರಮುಖ ಕಾರಣಗಳನ್ನು ಮುಂದೊಡ್ಡಿ ಅಮೆರಿಕಾದ ಜೊತೆಗೆ ಜಪಾನ್ ಸಂಘರ್ಷಕ್ಕಿಳಿಯಿತು. ಆದರೆ ಇಂಥ ಸಂದಿಗ್ಧತೆಯನ್ನು ಚಾಕಚಕ್ಯತೆಯಿಂದ ರೂಸ್‌ವೆಲ್ಟ್‌ನು ಪರಿಹರಿಸಿ ಜಪಾನಿನ ಜೊತೆಗಿನ ಬಾಂಧವ್ಯವನ್ನು ಸ್ಥಿರಗೊಳಿಸಿದನು. ತನ್ನ ‘‘ದೊಡ್ಡ ದೊಣ್ಣೆ ನೀತಿ’’ಯಿಂದ ಪ್ರಸಿದ್ಧನಾದ ಥಿಯೋಡರ್ ರೂಸ್‌ವೆಲ್ಟ್‌ನು ಅಮೆರಿಕಾವನ್ನು ಜಗತ್ತಿನ ಪೊಲೀಸ್ ರಾಷ್ಟ್ರವನ್ನಾಗಿ ನಿರ್ಮಾಣ ಮಾಡುವ ಮೊದಲ ಪ್ರಯತ್ನದಲ್ಲಿ ಯಶಸ್ವಿಯಾದನು.

೧೯೦೮ರಲ್ಲಿ ರೂಸ್‌ವೆಲ್ಟ್‌ನ ನಂತರ ವಿಲಿಯಂ ಹಾರ್ವರ್ಡ್ ಟ್ಯಾಪ್ಟ್ ಅಧ್ಯಕ್ಷನಾಗಿ ಆಯ್ಕೆಯಾದ. ಹಿಂದಿನ ಅಧ್ಯಕ್ಷರೆಲ್ಲ ಅನುಸರಿಸಿಕೊಂಡು ಬಂದ ಆಡಳಿತಾತ್ಮಕ ಕಾರ್ಯ ಚಟುವಟಿಕೆಗಳನ್ನು ಜಾಗರೂಕತೆಯಿಂದ ಮುಂದುವರೆಸಿದನು. ಆಂತರಿಕ ಆಡಳಿತವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಸೋತನು. ಆಡಳಿತ ರಂಗದಲ್ಲಾಗುತ್ತಿದ್ದ ಸೋಲುಗಳಿಂದ ಅಸಮಾಧಾನಗೊಂಡ ಸದಸ್ಯರು ಬಂಡಾಯವೆದ್ದರು.  ಈ ಪರಿಣಾಮದಿಂದ ಆಡಳಿತ ರಿಪಬ್ಲಿಕನ್ ಪಕ್ಷ ಒಡೆದು ಅದರಲ್ಲಿರುವ ಪ್ರತಿಗಾಮಿಗಳು ಈತನಿಗೆ ಅಡ್ಡಗಾಲು ಹಾಕಿ ಮುಜುಗರ ಉಂಟುಮಾಡಿದರು. ಆಡಳಿತದಲ್ಲಿ ಜಾರಿಗೆ ತಂದ ಅಸಮರ್ಪಕ ತೆರಿಗೆ ನೀತಿಗಳು ಈವರೆಗೂ ಟ್ಯಾಪ್ಟ್ ಮಾಡಿದ ಒಳ್ಳೆಯ ಸಾಧನೆಗಳು ಕೊಚ್ಚಿಹೋಗುವಂತೆ ಮಾಡಿದವು. ವ್ಯಾಪಾರ ಮನೋಭಾವನೆ (ಡಾಲರ ನೀತಿ)ಯನ್ನು ಬೆಂಬಲಿಸಿ ಮುಂದುವರೆಸಿದರೂ ಅವುಗಳನ್ನು ಜಾರಿಗೆ ತರುವಲ್ಲಿ ಕೆಲವು ಗೊಂದಲಗಳು ಸೃಷ್ಟಿಯಾದವು. ಹೀಗಾಗಿ ಈತನು ಸರ್ಮಪಕ ಆಡಳಿತದ ನೀತಿ ನಿಯಮಗಳನ್ನು ಗೆಲ್ಲಿಸಿ ದಡ ಸೇರಿಸುವಲ್ಲಿ ವಿಫಲನಾದನು. ಪೆಸಿಫಿಕ್ ಸಾಗರದಲ್ಲಿ ಅಮೆರಿಕಾವು ಹಾಗೂ ಏಷ್ಯ ಭೂಪ್ರದೇಶದಲ್ಲಿ ಜಪಾನ್ ದೇಶವು ಸಾರ್ವ ಭೌಮತ್ವ ಹೊಂದಬೇಕೆಂದು ಈ ಹಿಂದೆ ಮಾಡಿಕೊಂಡ ಗುಪ್ತ ಒಪ್ಪಂದಕ್ಕೆ ಟ್ಯಾಪ್ಟ್‌ನು ತಿಲಾಂಜಲಿಯಿತ್ತನು. ಇದರಿಂದ ಜಪಾನ್ ದಿಢೀರನೇ ಪಕ್ಷ ಬದಲಾಯಿಸಿ ರಷ್ಯಾದ ಜೊತೆಗೆ ತಾತ್ಕಾಲಿಕ ಒಪ್ಪಂದ ಮಾಡಿಕೊಂಡು ಏಷ್ಯದಲ್ಲಿ ಅಮೆರಿಕಾದ ವಿಸ್ತರಣಾ ನೀತಿಗೆ ತಡೆ ಒಡ್ಡಿದವು. ಎಲ್ಲತರಹದ ಆಡಳಿತದಲ್ಲಿ ಮತ್ತೆ ಮತ್ತೆ ವಿಫಲತೆಯನ್ನು ಹೊಂದುತ್ತ ಹೋದ ಟ್ಯಾಪ್ಟ್‌ನ ಆಂತರಿಕ ಹಾಗೂ ಬಾಹ್ಯ ಆಡಳಿತದ ಕ್ರಮಗಳಿಂದ ತನ್ನ ಪಕ್ಷದ ಸದಸ್ಯರೇ ಅಸಮಾಧಾನಗೊಳ್ಳುವಂತಾಯಿತು. ಹೀಗಾಗಿ ೧೯೧೨ರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷ ಒಡೆಯಿತು. ಇದರ ಸಂಪೂರ್ಣ ಲಾಭ ಪಡೆದ ಡೆಮಾಕ್ರೆಟಿಕ್ ಪಕ್ಷದ ವುಡ್ರೊ ವಿಲ್ಸನ್ ಅಮೆರಿಕಾದ ಹೊಸ ಅಧ್ಯಕ್ಷನಾಗಿ ಆಯ್ಕೆ ಆದನು.

ವುಡ್ರೊ ವಿಲ್ಸನ್ ಆಡಳಿತ

ದೃಢ ಸಂಕಲ್ಪದಿಂದ ರಾಜಕೀಯವನ್ನು ಪ್ರವೇಶಿಸಿದ ವುಡ್ರೊ ವಿಲ್ಸನ್ ಅನೇಕ ಸುಧಾರಣೆಗಳನ್ನು ಜಾರಿಗೊಳಿಸಿದನು. ತನ್ನ ಯೋಜನೆಗಳನ್ನು ‘‘ಹೊಸ ಸ್ವಾತಂತ್ರ್ಯ’’  ಎಂದು ಘೋಷಿಸಿದನು. ಅಂಡರ್ ವುಡ್ ಶಾಸನದನ್ವಯ ೯೫೮ಕ್ಕಿಂತಲೂ ಹೆಚ್ಚಿನ ಸರಕುಗಳ ಮೇಲಿನ ಆಮದು ಸುಂಕಗಳನ್ನು ರದ್ದು ಮಾಡಿದನು. ಇದರ ಕೊರತೆ ನೀಗಿಸಿಕೊಳ್ಳುವಲ್ಲಿ ಶ್ರೀಮಂತರ ಮೇಲೆ ಹೆಚ್ಚಿನ ತೆರಿಗೆ ವಿಧಿಸಿದನು. ಹೀಗಾಗಿ ನಿತ್ಯೋಪಯೋಗಿ ವಸ್ತುಗಳು ಬಡವರಿಗೆ ನಿರಾಳವಾಗಿ ಸಿಗಲಾರಂಭಿಸಿದವು. ಖಾಸಗಿ ಬ್ಯಾಂಕುಗಳನ್ನು ನಿಯಂತ್ರಿಸಲು ‘‘ಫೆಡರಲ್ ರಿಜರ್ವ್ ಶಾಸನ’’ವನ್ನು ಜಾರಿಗೆ ತಂದನು. ಹೊಸದಾಗಿ ಸ್ಥಾಪಿತವಾದ ಹೊಸ ಬೋರ್ಡುಗಳ ಹಣಕಾಸಿನ ವ್ಯವಸ್ಥೆಯ ಸುಧಾರಣೆಗಳಿಗೆ ಕ್ರಮ ಕೈಗೊಂಡನು. ಟ್ರಸ್ಟ್‌ಗಳನ್ನು ನಿಯಂತ್ರಿಸಿದನಲ್ಲದೇ ಇವುಗಳ ಮೂಲಕ ಆರ್ಥಿಕ ವ್ಯವಸ್ಥೆಯನ್ನು ನಿಯಂತ್ರಿಸುತ್ತಿದ್ದ ಕಂಪನಿಗಳ ಅಪಾಯಕಾರಿ ಚಟುವಟಿಕೆಗಳನ್ನು ತಡೆ ಹಿಡಿದನು. ಒಂದೇ ಟ್ರಸ್ಟ್, ಅನೇಕರ ಹೆಸರಿನಲ್ಲಿ ಕಂಪನಿಗಳನ್ನು ಸ್ಥಾಪಿಸಿ ಲಾಭವನ್ನು ತನ್ನ ಹಿಡಿತದಲ್ಲಿಯೇ ಇಟ್ಟುಕೊಳ್ಳುತ್ತಿತ್ತು. ಇವನು ಇಂತಹ ಕಾರ್ಯಚಟುವಟಿಕೆಗಳನ್ನು ನಿಷೇಧಿಸಿದನು. ರೈತರಿಗೆ ದೀರ್ಘಾವಧಿ ಸಾಲಗಳನ್ನು ಹಾಗೂ ಹೆಚ್ಚಿನ ಕಾಲ ಆಹಾರ ಧಾನ್ಯಗಳನ್ನು ಸಂಗ್ರಹಿಸಿಡಲು ಉಗ್ರಾಣಗಳನ್ನು ವ್ಯವಸ್ಥೆಗೊಳಿಸಿದನು. ಎಲ್ಲಕ್ಕಿಂತ ಮುಖ್ಯ ವಾಗಿ ಕಾರ್ಮಿಕರು ದುಡಿಯುವ ಅವಧಿಯನ್ನು ೮ ಗಂಟೆಗಳಿಗೆ ಮಾತ್ರ ಕಡ್ಡಾಯವಾಗಿ ನಿಗದಿಗೊಳಿಸಿದನು.

ಆಂತರಿಕ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದರಿಂದ ಮೊದಮೊದಲು ವಿಸ್ತರಣಾ ನೀತಿಯನ್ನು ಪ್ರಬಲವಾಗಿ ವಿರೋಧಿಸಿದನು. ಆದರೆ ಜಾಗತಿಕ ರಾಜಕೀಯ ರಂಗದಲ್ಲಾಗುತ್ತಿದ್ದ ತೀವ್ರ ಬದಲಾವಣೆಗಳಿಂದಾಗಿ ವುಡ್ರೊ ವಿಲ್ಸನ್‌ನು ಅನಿವಾರ್ಯವಾಗಿ ಅಮೆರಿಕಾವನ್ನು ಪ್ರಥಮ ಜಾಗತಿಕ ಯುದ್ಧಕ್ಕೆ ತಂದು ನಿಲ್ಲಿಸಿದನು. ಹೈಟಿಯಲ್ಲಿ ನಡೆದ ದಂಗೆಯನ್ನು ಫ್ರಾಂಕ್ಲಿನ್-ಡಿ-ರೂಸ್‌ವೆಲ್ಟ್‌ನ ಸಹಾಯದಿಂದ ಹತ್ತಿಕ್ಕಿದನು. ಅಮೆರಿಕಾ ಕೈಗೊಂಡ ತಂತ್ರಭೇದಗಳಿಂದ ಒಟ್ಟಾರೆ ೧೯೨೨ರ ಹೊತ್ತಿಗೆ ಇಡೀ ಕೆರಿಬಿಯನ್ ಪ್ರವೇಶ ಅಮೆರಿಕಾದ ಹಿಡಿತಕ್ಕೆ ಸಿಲುಕಿತು. ಕೆರಿಬಿಯನ್ ರಾಷ್ಟ್ರಗಳಾದ ನಿಕರಾಗುವಾ, ಹೈತಿ, ಡಾಮಿನಿಕಾ ಹಾಗೂ ಕ್ಯೂಬಾ ಪ್ರದೇಶಗಳು ಯಾವೊಂದು ಸಣ್ಣ ಪ್ರತಿಭಟನೆಯನ್ನು ವ್ಯಕ್ತಪಡಿಸದೇ ಅಮೆರಿಕಾದ ಅಂಕಿತಕ್ಕೊಳಪಟ್ಟವು. ಮೆಕ್ಸಿಕೋದಲ್ಲಿನ ಅಮೆರಿಕಾದ ಬಂಡವಾಳ ಗಾರರು ಸಂಕಷ್ಟದಲ್ಲಿದ್ದರೂ ಪ್ರಜಾಪ್ರಭುತ್ವವಾದಿ ವಿಲ್ಸನ್ ತನ್ನದೇ ಜನರನ್ನು ಪರಿಗಣಿಸದೆ ಮೆಕ್ಸಿಕೋದ ಸ್ವಾತಂತ್ರ್ಯಯೋಧರಿಗೆ ಬೆಂಬಲ ನೀಡಿದನು. ಇದು ಪ್ರಜಾಪ್ರಭುತ್ವ ಪ್ರತಿಪಾದಕನೆಂಬ ದೂರದೃಷ್ಟಿಗೆ ಹಿಡಿದ ಕೈಗನ್ನಡಿಯಂತಿದೆ. ಇದೇ ವೇಳೆಗೆ ಬಂಡವಾಳ ಗಾರರನ್ನು ಬೆಂಬಲಿಸಿದ ಅಧ್ಯಕ್ಷ ಹುಅರ್ಟಾ ದೇಶಭ್ರಷ್ಟನಾದನು. ವುಡ್ರೊ ವಿಲ್ಸನ್ ಒಬ್ಬ ಸಮರ್ಥ ಆಡಳಿತಗಾರನಾಗಿದ್ದರೂ ಎಲ್ಲರನ್ನು ನಿಭಾಯಿಸುವಲ್ಲಿ ಅಸಮರ್ಥ ನಾಗಿದ್ದನು. ಅನೇಕ ಸುಧಾರಣೆಗಳನ್ನು ತಂದು ಪ್ರಜಾಹಕ್ಕುಗಳನ್ನು ಗಟ್ಟಿಗೊಳಿಸಿದನು. ಅಲ್ಲದೇ ವಿಲ್ಸನ್‌ನು ವಿಸ್ತರಣಾ ನೀತಿಯ ಕಡುವಿರೋಧಿಯಾಗಿದ್ದರೂ ಜಪಾನ್ ದೇಶವು ಅನುಸರಿಸಿದ ಆಕ್ರಮಣ ನೀತಿಯಿಂದ ಅನಿವಾರ್ಯವಾಗಿ ಅಮೆರಿಕಾವನ್ನು ಪ್ರಥಮ ಜಾಗತಿಕ ಯುದ್ಧರಂಗಕ್ಕೆ ತಂದು ನಿಲ್ಲಿಸಬೇಕಾಯಿತು.

ಪ್ರಥಮ ಜಾಗತಿಕ ಯುದ್ಧರಂಗದಲ್ಲಿ ಅಮೆರಿಕಾ ಪ್ರವೇಶ

ಐರೋಪ್ಯ ರಾಷ್ಟ್ರಗಳು ಸೃಷ್ಟಿಸಿದ ರಹಸ್ಯ ಒಪ್ಪಂದಗಳಿಂದ ಹಾಗೂ ಆಕ್ರಮಣ ನೀತಿಯಿಂದಾಗಿ ಪ್ರಥಮ ಜಾಗತಿಕ ಯುದ್ಧ ನಡೆದುಹೋಯಿತು. ಜಾಗತಿಕ ಮಟ್ಟದಲ್ಲಿದ್ದ ವಸಾಹತುಶಾಹಿಗಳು ತಮ್ಮ ಪ್ರಾಬಲ್ಯವನ್ನು ಪ್ರದರ್ಶಿಸಲು ಕುಸ್ತಿ ಕಣಕ್ಕೆ ಇಳಿದಂತೆ ಭಾಸವಾಗುತ್ತಿತ್ತು. ನೂರಾರು ವರ್ಷಗಳಿಂದಲೂ ಬ್ರಿಟನ್ ಮತ್ತು ಫ್ರಾನ್ಸ್ ದೇಶಗಳು ಹಳೆಯ ಹಾಗೂ ಹೊಸ ಜಗತ್ತಿನ ಯಜಮಾನರಾಗಿ ಮೆರೆಯುತ್ತಿದ್ದವು. ಅಲ್ಲದೇ ಬತ್ತಿಹೋಗದ ಸೆಲೆಯಂತೆ ಬ್ರಿಟನ್ ಹಾಗೂ ಫ್ರಾನ್ಸ್‌ಗಳಿಗೆ ವಸಾಹತುಗಳು ನೀರುಣಿಸುತ್ತಿದ್ದವು. ಯಾವುದೇ ರೀತಿಯ ತೊಂದರೆಗಳಿಲ್ಲದೇ ಬರುತ್ತಿದ್ದ ಇಂಥ ಲಾಭದಾಯಕ ಆದಾಯವು ಸಾಮ್ರಾಜ್ಯಶಾಹಿ ಜರ್ಮನಿ ಹಾಗೂ ಆಸ್ಟ್ರಿಯಾವನ್ನು ಸಹಜವಾಗಿ ಕೆರಳಿಸಿದವು. ಇಷ್ಟಲ್ಲದೇ ಯುರೋಪ್‌ನ ಚಿಕ್ಕ ಭೂ ಭಾಗಗಳು ಇವುಗಳಿಗೆ ಕಡಿಮೆಯೆನಿಸಿದವು. ಮೇಲೆ ವಿವರಿಸಿದ ಮುಖ್ಯವೆನಿಸುವ ಈ ಸಂಗತಿಗಳು ಮೊದಲ ಜಾಗತಿಕ ಯುದ್ಧಕ್ಕೆ ಕಾರಣದ ಅಂಶಗಳಾದವು. ಜರ್ಮನಿ, ಆಸ್ಟ್ರಿಯಾ ಹಾಗೂ ಇಟಲಿಗಳು ‘‘ಟ್ರಿಪಲ್ ಅಲೈನ್ಸ್’’ ಎಂಬ ಕೂಟ ಕಟ್ಟಿಕೊಂಡು ಬ್ರಿಟನ್, ಫ್ರಾನ್ಸ್ ಹಾಗೂ ರಷ್ಯಾಗಳ ವಿರುದ್ಧ ಕದನಕ್ಕಿಳಿದವು. ಆದರೆ ಹೊಸಜಗತ್ತಿನ ಬಲಾಢ್ಯ ಶಕ್ತಿಯಾಗಿದ್ದ  ಅಮೆರಿಕಾವು ವಿಲ್ಸನ್‌ನ ತಾಟಸ್ಥ್ಯ ನೀತಿಯಿಂದ ಮೊದಮೊದಲು ಹೊರಗುಳಿದಿತ್ತು. ಯುರೋಪ್ ರಾಷ್ಟ್ರಗಳು ಅನುಸರಿಸುತ್ತಿದ್ದ ಎಲ್ಲ ತಂತ್ರಗಳನ್ನು ಈಗಾಗಲೇ ಹಲವಾರು ಸಂದರ್ಭಗಳಲ್ಲಿ ಅಮೆರಿಕಾ ಸಹ ಕರತಲಾಮಲಕ ಮಾಡಿಕೊಂಡಿತು. ಅಲ್ಲದೇ ಈ ವೇಳೆಗಾಗಲೇ ಐರೋಪ್ಯ ವ್ಯಾಪಾರಿ ಮನೋಭಾವನೆಯನ್ನು ಬೆಳೆಸಿಕೊಂಡು ಬೆಳೆಯುತ್ತಿದ್ದ ಅಮೆರಿಕಾವು ಸಂದರ್ಭಗಳ ತಿರುವು ಮುರುವಿನ ಲಾಭ ಪಡೆದು ಪಶ್ಚಿಮ ರಾಷ್ಟ್ರಗಳಿಗೆ ಮದ್ದುಗುಂಡುಗಳನ್ನು ನಿರ್ಯಾತಗೊಳಿಸುವುದರಲ್ಲಿ ನಿರತವಾಗಿತ್ತು. ತನ್ನನ್ನು ಆಳಿದ ಬ್ರಿಟನ್ ಮತ್ತು ಫ್ರಾನ್ಸ್‌ಗಳಿಗೆ ಮುಜುಗರವಾಗುವಂತೆ ಅಮೆರಿಕಾವು ಕೆಲವೇ ದಶಕಗಳಲ್ಲಿ ಬೆಳೆದು ನಿಂತಿತು. ಕೃಷಿಯಲ್ಲಾದ ಆಗಾಧ ಪ್ರಗತಿಯಿಂದ ಐರೋಪ್ಯ ದೇಶಗಳಿಗೆ ಹೆಚ್ಚಿನ ಧಾನ್ಯವನ್ನು ರಪ್ತು ಮಾಡುತ್ತಿತ್ತು. ಇದೆಲ್ಲವೂ ಅಮೆರಿಕಾದಲ್ಲಾದ ಕೃಷಿ, ಕೈಗಾರಿಕೆ ಹಾಗೂ ವ್ಯಾಪಾರದಲ್ಲಾದ ಪ್ರಗತಿಯಿಂದ ಸಾಧ್ಯವಾಗಿತ್ತು. ಅಮೆರಿಕಾದಲ್ಲಾದ ಈ ಯಾವ ಬದಲಾವಣೆಗಳು ಯುರೋಪಿನ ರಾಷ್ಟ್ರಗಳಿಗೆ ಮಾದರಿಯಾಗಲಿಲ್ಲ. ಅವು ವಿಸ್ತರಣೆಯ ಹಗ್ಗಜಗ್ಗಾಟದಲ್ಲಿ ನಿರತವಾದವು. ಬಲಾತ್ಕಾರ ಮನೋಭಾವನೆಯನ್ನು ಹೊಂದಿದ ಜರ್ಮನಿಯು ತನ್ನ ಜಲಾಂತರ್ಗಾಮಿ ನೌಕೆಗಳಿಂದ ಬ್ರಿಟನ್‌ಗೆ ಬರುವ ಎಲ್ಲ ಹಡಗುಗಳನ್ನು ನಿರ್ಬಂಧಿಸಿತು ಅಥವಾ ಭಾಗಶಃ ನಾಶಪಡಿಸುತ್ತಿತ್ತು. ಇಂಥ ಭಯಭೀತವಾದ ಕೃತ್ಯದಿಂದ ಬ್ರಿಟನ್ ಅಸಹಾಯಕವಾಗಿ ಶರಣಾಗಬಹುದೆಂಬುದು ಜರ್ಮನಿಯ ತರ್ಕವಾಗಿತ್ತು. ‘ಲುಸಿಟಾನಿಯಾ’ ಎಂಬ ಬ್ರಿಟಿಷ್ ಹಡಗನ್ನು ಜರ್ಮನಿಯು ತಾನಂದು ಕೊಂಡಂತೆ ಆಟ್ಲಾಂಟಿಕ್ ಸಾಗರದಲ್ಲಿ ಮುಳುಗಿಸಿತು. ದುರ್ದೈವವಶಾತ್ ಇದರಲ್ಲಿ ಅಮೆರಿಕಾದ ನಾಗರಿಕರು ಪ್ರಯಾಣಿಸುತ್ತಿದ್ದರು. ಹೀಗಾಗಿ ಅವರು ಜೀವ ಕಳೆದುಕೊಂಡರು. ತನ್ನ ಪ್ರಜೆಗಳ ಜೀವಹಾನಿಗೆ ಕಾರಣವಾದ ಜರ್ಮನಿಯ ಇಂಥ ಆಕ್ರಮಣಕಾರಿ ಪ್ರವೃತ್ತಿಯು ಅಮೆರಿಕಾವನ್ನು ಕಂಗೆಡಿಸಿತು. ಆದರೆ ತನ್ನ ತಾಟಸ್ಥ್ಯ ನೀತಿಗೆ ಬದ್ಧನಾದ ವಿಲ್ಸನ್ ಏಕಾಏಕಿ ಯುದ್ಧಕ್ಕಿಳಿಯದೆ ಉಪಾಯವಾಗಿ ದಾಳಗಳನ್ನು ಉರುಳಿಸಿ ಜರ್ಮನಿಯ ಜೊತೆಗೆ ಒಪ್ಪಂದ ಮಾಡಿಕೊಂಡು ಯುದ್ಧಭೀತಿಯಿಂದ ಅಮೆರಿಕಾವನ್ನು ದೂರಿಟ್ಟನು. ಕಾರಣ ಅಮೆರಿಕಾ ಆಡಳಿತ ಮಹಾಚುನಾವಣೆಯಲ್ಲಿ ತೊಡಗಿಸಿಕೊಂಡಿತು. ವಿನಾಕಾರಣ ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ಳುವುದು ಅಮೆರಿಕಾಕ್ಕೆ ಬೇಕಾಗಿರಲಿಲ್ಲ. ೧೯೧೬ರಲ್ಲಿ ನಡೆದ ಚುನಾವಣೆಯಲ್ಲಿ ಎರಡನೆಯ ಅವಧಿಗೆ ವಿಲ್ಸನ್ ಮತ್ತೆ ಆಯ್ಕೆಯಾದನು. ತನ್ನ ಬಲ ಪ್ರದರ್ಶನದಲ್ಲಿ ಅಪಾರ ನಂಬಿಕೆಯಿಟ್ಟಿದ್ದ ಜರ್ಮನಿ ಅಮೆರಿಕಾದ ಜೊತೆಗಿನ ಒಪ್ಪಂದವನ್ನು ಏಕಾಏಕಿ ಧಿಕ್ಕರಿಸಿ ಯಾವುದೇ ಶತ್ರು ಅಥವಾ ತಟಸ್ಥ ದೇಶದ ಹಡಗುಗಳು ಬ್ರಿಟನ್ ಹಾಗೂ ಫ್ರಾನ್ಸ್‌ಗೆ ಬಂದರೆ, ಯಾವುದೇ ಮುನ್ಸೂಚನೆ ನೀಡದೆ ಜರ್ಮನಿಯು ಅಂಥ ಹಡಗುಗಳನ್ನು ನಾಶಪಡಿಸುತ್ತದೆ ಎಂದು ಘರ್ಜಿಸಿತು. ಇಂಥ ದಬ್ಬಾಳಿಕೆಯನ್ನು ಪ್ರತಿಭಟಿಸಿದ ಅಮೆರಿಕಾನ್ನರು ಜರ್ಮನಿಯ ಜೊತೆಗೆ ಮಾಡಿಕೊಂಡಿದ್ದ ಸಂಬಂಧವನ್ನು ಕಡಿದುಕೊಂಡರು. ಅಮೆರಿಕಾವನ್ನು ಬೆದರಿಸಲು ಇದೇ ವೇಳೆಗೆ ಜರ್ಮನಿ  ಮೆಕ್ಸಿಕೋವನ್ನು ಅಮೆರಿಕಾದ ವಿರುದ್ಧ ಹುರಿದುಂಬಿಸಿತು. ಮೆಕ್ಸಿಕನ್ನರು ಕಳೆದುಕೊಂಡ ನೆಲೆಗಳನ್ನು ಬಲ ಪ್ರಯೋಗಗಳಿಂದಾದರೂ ಸರಿ ಮತ್ತೆ ಮರಳಿ ಕೊಡಿಸುವುದಾಗಿ ಜರ್ಮನಿ ವಾಗ್ದಾನ ಮಾಡಿದೆ ಎಂದು ಪ್ರಚುರಪಡಿಸಿ ಇದರ ಲಾಭವನ್ನು ಪಡೆಯಲು ಇಂಗ್ಲೆಂಡ್ ಹವಣಿಸಿತು. ಅಲ್ಲದೇ ಈ ವಿಷಯವಾಗಿ ಜರ್ಮನಿಯು ಬರೆದ ರಹಸ್ಯ ಪತ್ರವನ್ನು ಬ್ರಿಟನ್ ಬಯಲು ಮಾಡಿ ಅಮೆರಿಕಾಕ್ಕೆ ಮೊದಲೇ ಕಳುಹಿಸಿಕೊಟ್ಟಿತು. ಇದರಿಂದ ತೀವ್ರ ಅಸಮಾಧಾನಗೊಂಡು ಅಮೆರಿಕಾ ಇದು ತಮ್ಮ ಸಾರ್ವಭೌಮತ್ವಕ್ಕೆ ಬೆದರಿಕೆ ಒಡ್ಡಿರುವ ಜರ್ಮನಿಯ ಗರ್ವಭಂಗ ಮಾಡಲು ಸರಿಯಾದ ಸಮಯಕ್ಕೆ ಕಾಯಲಾರಂಭಿಸಿತು. ಇದೊಂದು ಜಿದ್ದಿನ ಪ್ರಶ್ನೆಯಾದಂತೆ ಅಮೆರಿಕಾನ್‌ರಿಗೆ ಭಾಸವಾಯಿತು. ಅಲ್ಲದೇ ಬ್ರಿಟನ್ ಜೊತೆಗಿದ್ದ ಮಿತ್ರರಾಷ್ಟ್ರಗಳ ಬಗೆಗೆ ಅಮೆರಿಕಾಕ್ಕೆ ಮೊದಲಿನಿಂದಲೂ ಮೃದುಧೋರಣೆ ಇತ್ತು.  ಅವು ಸಹ ಅಮೆರಿಕಾಕ್ಕೆ ತಿಳಿ ಹೇಳುವಲ್ಲಿ ಸಫಲವಾದವು. ಈ ಘಟನೆಗಳನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದ ವಿಲ್ಸನ್ ಕಾಂಗ್ರೆಸ್‌ನ ಪರವಾನಗಿ ಪಡೆದು ೧೯೧೭ರ ಏಪ್ರಿಲ್ ೬ರಂದು ಅಮೆರಿಕಾವು ಯುದ್ಧದಲ್ಲಿ ಭಾಗವಹಿಸುವ ನಿರ್ಣಯ ಕೈಗೊಂಡನು. ತಮ್ಮ ದೇಶಕ್ಕೆ ಬಂದೊದಗಿದ ಗಂಡಾಂತರವನ್ನು ಎದುರಿಸಲು ಸ್ವಯಂಪ್ರೇರಣೆಯಿಂದ ಅಮೆರಿಕಾನ್ನರು ಸೈನ್ಯಕ್ಕೆ ಸೇರಿದರು. ದೇಶದ ಭದ್ರತೆಯ ಹಿತದೃಷ್ಟಿಯಿಂದ ನಾಗರಿಕ ಹಕ್ಕುಗಳನ್ನು ಮೊಟಕುಗೊಳಿಸಲಾಯಿತು. ಸರಕಾರ ಪ್ರತಿಯೊಂದರ ಮೇಲೂ ನಿಗಾ ವಹಿಸಿ ಪ್ರಭುತ್ವ ಪಡೆಯಿತು. ಯುದ್ಧ ವೆಚ್ಚಕ್ಕಾಗಿ ಸಾರ್ವಜನಿಕರಿಂದ ವಂತಿಗೆ ಹಣವನ್ನು ಸಂಗ್ರಹಿಸಲಾಯಿತು. ಅಮೆರಿಕಾ ಪೂರ್ಣಪ್ರಮಾಣದ ಯುದ್ಧದಲ್ಲಿ ದುಮುಕಿದ್ದರಿಂದ ಮಿತ್ರರಾಷ್ಟ್ರಗಳಿಗೆ ಹೆಚ್ಚಿನ ಬಲ ಬಂದಂತಾಯಿತು. ಆಸ್ಟ್ರಿಯಾದ ಯುವರಾಜ ಫರ್ಡಿನಾಂಡ್‌ನ ಆಕಸ್ಮಿಕ ಕೊಲೆ, ಜರ್ಮನಿಯ ರಾಜಕುಮಾರ ವಿಲಿಯಂ ಕೈಸರ್‌ನು ಪ್ರತಿಪಾದಿಸಿದ ಮಹಾನ್ ಜರ್ಮನ್ ಸಾಮ್ರಾಜ್ಯ ನಿರ್ಮಿಸುವ ಕನಸು ಹಾಗೂ ಅದನ್ನು ಸಾಕಾರಗೊಳಿಸುವಲ್ಲಿ ಜರ್ಮನಿ ಅನುಸರಿಸಿದ ಆಕ್ರಮಣದ ಧೋರಣೆಗಳು ಪ್ರಥಮ ಜಾಗತಿಕ ಯುದ್ಧಕ್ಕೆ ತತ್‌ಕ್ಷಣದ ಕಾರಣೀಭೂತ ಅಂಶಗಳಾದವು. ಅಲ್ಲದೇ ಆಸ್ಟ್ರಿಯಾ ಹಾಗೂ ಜರ್ಮನಿ ಸಾಮ್ರಾಜ್ಯಗಳು  ಬೆಲ್ಜಿಯಂ ಪ್ರದೇಶದ ದಿಢೀರ್ ಆಕ್ರಮಣ  ಇಡೀ ಯುರೋಪನ್ನು ಗೊಂದಲಗೊಳಿಸಿತು. ತನ್ನ ವ್ಯಾಪಾರಿ ಹಡಗುಗಳ ಸಂಬಂಧವಾಗಿ ಈ ಹಿಂದೆ ಜರ್ಮನಿಯು ಮಾಡಿಕೊಂಡ ಒಪ್ಪಂದವನ್ನು ಮುರಿದು ಮುಳುಗಿಸಿದ್ದರಿಂದ ಅಮೆರಿಕಾಕ್ಕೆ ಅನಿವಾರ್ಯವಾಗಿ ಯುದ್ಧವನ್ನು ಪ್ರವೇಶಿಸುವಂತಾಯಿತು.

ಯುದ್ಧಾರಂಭದಲ್ಲಿ ಜರ್ಮನಿಯ ಹೊಡೆತಕ್ಕೆ ಬ್ರಿಟನ್ ಹಾಗೂ ಫ್ರಾನ್ಸ್‌ಗಳು ತತ್ತರಿಸಿ ಹೋಗಿದ್ದವು. ಆದರೆ ಅಮೆರಿಕಾದ ಪ್ರವೇಶವು ತಿರುವು ಮುರುವಾಗಿ ಜರ್ಮನಿಯ ಜಂಘಾ ಬಲವನ್ನು ಅಡಗಿಸಿತು. ಎಲ್ಲ ಕಡೆಯಿಂದ ಜರ್ಮನಿ ಹಾಗೂ ಅದರ ಮಿತ್ರರಾಷ್ಟ್ರಗಳನ್ನು ಸುತ್ತುವರೆದ ಅಮೆರಿಕಾದ ಸೈನ್ಯವು ಜರ್ಮನಿಯನ್ನು ನಿಯಂತ್ರಿಸಿತು. ದಿಕ್ಕೆಟ್ಟ ಜರ್ಮನಿಯು ಮಿತ್ರ ರಾಷ್ಟ್ರಗಳ ಎದುರು ಮಂಡಿಯೂರಿ ಶಾಂತಿ ಸಂಧಾನಕ್ಕೆ ಒಪ್ಪಿತು. ಅಮೆರಿಕಾದ ಅಧ್ಯಕ್ಷ ವುಡ್ರೋ ವಿಲ್ಸನ್‌ನು ೧೪ ಅಂಶಗಳ ಮಹತ್ವದ ಯೋಜನೆಯನ್ನು ಪ್ರಕಟಿಸಿದ. ಗೆದ್ದ ಎಲ್ಲ ರಾಷ್ಟ್ರಗಳು ಪ್ಯಾರಿಸ್ ಸಮೀಪದಲ್ಲಿರುವ ವರ್ಸೈಲ್ಸ್ ನಗರದಲ್ಲಿ ಸಭೆ ಸೇರಿ ಜರ್ಮನಿಯ ಮೇಲೆ ಪ್ರಹಾರ ಮಾಡಿ ಎಲ್ಲ ನಷ್ಟಕ್ಕೆ ಅದನ್ನು ಹೊಣೆಗಾರ ದೇಶವನ್ನಾಗಿ ಮಾಡಲಾಯಿತು. ಇದರಿಂದ ಹೆದರಿ ಜರ್ಮನಿಯ ರಾಜ ವಿಲಿಯಂ ಕೈಸರ್ ಯಾರಿಗೂ ಕಾಣದಂತೆ ಓಡಿ ಹೋದನು.

ಅಮೆರಿಕಾ ೨೨ ಬಿಲಿಯನ್ ಡಾಲರ್‌ನಷ್ಟು ಹಣವನ್ನು ಯುದ್ಧಕ್ಕಾಗಿ ವೆಚ್ಚ ಮಾಡಿತು. ಸೋತು ಅಸಹಾಯಕವಾದ ಜರ್ಮನಿಯು ವಿಲ್ಸನ್‌ನ ೧೪ ಸೂತ್ರಗಳನ್ನು ಒಪ್ಪಿತು. ಯುದ್ಧಪರಿಣಾಮದಿಂದ ಮುಖ್ಯವಾಗಿ ಯುರೋಪ್‌ನಲ್ಲಿ ಸಾಮ್ರಾಜ್ಯಶಾಹಿಗಳು ನಾಶವಾಗಿ ಸ್ವತಂತ್ರ ರಾಷ್ಟ್ರಗಳು ನಿರ್ಮಾಣವಾದವು. ಜಾಗತಿಕ ಮಟ್ಟದಲ್ಲಿ ಶಾಶ್ವತವಾದ ಶಾಂತಿ ನೆಲಸುವಂತೆ ಮಾಡುವ ಮುಖ್ಯ ಉದ್ದೇಶದೊಂದಿಗೆ ‘ರಾಷ್ಟ್ರಸಂಘದ’ ಸ್ಥಾಪನೆಯನ್ನು ೧೯೨೦ರಲ್ಲಿ ಪ್ರಾರಂಭಿಸಲಾಯಿತು. ಹೊಸದಾಗಿ ಅಸ್ತಿತ್ವಕ್ಕೆ ಬಂದ ರಾಷ್ಟ್ರಸಂಘದ ಸದಸ್ಯತ್ವಕ್ಕೆ ಸೇರುವ ಕುರಿತು ಅಮೆರಿಕಾದಲ್ಲಿ ಬಿಸಿಬಿಸಿಯಾದ ಚರ್ಚೆಗಳು ನಡೆದವು. ಕೊನೆಗೆ ಜನಾಭಿಪ್ರಾಯ ರೂಪುಗೊಂಡು ಐರೋಪ್ಯದ ಅಂತಃಕಲಹದಲ್ಲಿ ಅಮೆರಿಕಾ ಭಾಗವಹಿಸಬಾರದೆಂಬ ಅಭಿಪ್ರಾಯದಿಂದ ರಾಷ್ಟ್ರಸಂಘದಿಂದ ಅಮೆರಿಕಾ ದೂರವೇ ಉಳಿಯಿತು. ವಿಲ್ಸನ್‌ನು ಅಮೆರಿಕಾವನ್ನು ಯುದ್ಧದಲ್ಲಿ ಗೆಲ್ಲಿಸಿದ್ದರೂ ಸ್ಥಳೀಯ ಪ್ರಜೆಗಳ ಜನಾಭಿಪ್ರಾಯ ಗಳಿಸುವಲ್ಲಿ ಸೋತನು. ೧೯೨೦ರಲ್ಲಿ ನಡೆದ ಚುನಾವಣೆಯಲ್ಲಿ ಸ್ತ್ರೀಯರು ಮೊಟ್ಟ ಮೊದಲಿಗೆ ಮತದಾನ ಮಾಡಿದರು. ಈ ಚುನಾವಣೆಯಲ್ಲಿ ಡೆಮಾಕ್ರೆಟಿಕರು ಸೋತರು. ರಿಪಬ್ಲಿಕನ್ ಪಕ್ಷದ ವಾರೆನ್ ಹಾರ್ಪಿಂಗ್ ಪ್ರಚಂಡ ಬಹುಮತದಿಂದ ಗೆದ್ದು ಅಧಿಕಾರ ಗದ್ದುಗೆಯೇರಿದನು.

ಹುಮ್ಮಸ್ಸಿನಿಂದ ಯುದ್ಧದಲ್ಲಿ ಭಾಗವಹಿಸಿದ್ದ ಅಮೆರಿಕಾನ್ನರು ಭವಿಷ್ಯದಲ್ಲಿ ಜಗತ್ತಿನ ಮುಖಂಡತ್ವವನ್ನು ಹೊಂದಬೇಕೋ ಅಥವಾ ಬೇಡವೋ ಎಂಬ ಗೊಂದಲದಲ್ಲಿ ಮುಳುಗಿ ದ್ದರು. ಅಧ್ಯಕ್ಷ ವಾರೆನ್ ಹಾರ್ಪಿಂಗ್ ಅಮೆರಿಕಾವನ್ನು ಯುದ್ಧದ ಪೂರ್ವಸ್ಥಿತಿಗೆ ಕೊಂಡೊಯ್ಯುವ ಅಭಿಪ್ರಾಯ ವ್ಯಕ್ತಪಡಿಸಿದನು. ತಾನು ಪ್ರಾಮಾಣಿಕನಾದರೂ, ಅಪ್ರಾಮಾಣಿಕ ವ್ಯಕ್ತಿಗಳಿಂದ ಸುತ್ತುವರೆಯಲ್ಪಟ್ಟಿದ್ದನು. ಇಚ್ಛಾಶಕ್ತಿಯ ಕೊರತೆಯಿಂದಾಗಿ ಇವನು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ವಿಫಲನಾದನು. ಯುದ್ಧದಿಂದ ಅಮೆರಿಕಾದಲ್ಲಿನ ಆಡಳಿತವು ಅಧಿಕಾರಿಗಳ ಕೈಗೊಂಬೆಯಾಗಿತ್ತು. ಭ್ರಷ್ಟಾಚಾರ ಮತ್ತೆ ತಲೆದೋರಿತು. ಅಲ್ಲದೇ ನ್ಯಾಯಾಂಗವು ಲಂಚಗುಳಿತನಕ್ಕೆ ಸೋತಿತು. ಜನಪ್ರತಿನಿಧಿಗಳೇ ಭ್ರಷ್ಟಾಚಾರದಲ್ಲಿ ನೇರವಾಗಿ ಭಾಗಿಯಾಗಿದ್ದರು. ಆಯ್ಕೆಯಾದ ಕೆಲವೇ ದಿನಗಳಲ್ಲಿ ವಾರೆನ್ ಹಾರ್ಪಿಂಗ್‌ನು ಅಕಾಲಿಕ ಮರಣ ಹೊಂದಿದ್ದರಿಂದ ಉಪಾಧ್ಯಕ್ಷ ಕಾಲ್ವಿನ್ ಅಧಿಕಾರ ವಹಿಸಿಕೊಂಡನು. ಶಾಂತ ಸ್ವಭಾವದ ಕಾಲ್ವಿನ್ ಕೂಲಿಡ್ಜ್ ಗಂಭೀರ ರಾಜಕೀಯ ಆಡಳಿತಗಾರನಾಗಿದ್ದ. ಆಡಳಿತದಲ್ಲಿ ಅಪ್ರಾಮಾಣಿಕರನ್ನು ಕಡಿಮೆಗೊಳಿಸಿ ಶ್ವೇತಭವನವನ್ನು ಶುದ್ಧಗೊಳಿಸುವ ಪ್ರಯತ್ನದಲ್ಲಿ ತೊಡಗಿದನು. ಸ್ವಲ್ಪಮಟ್ಟಿಗೆ ಯಶಸ್ಸು ಸಾಧಿಸಿದ ಪರಿಣಾಮ ಎರಡನೆಯ ಅವಧಿಗೆ ಕೂಲಿಡ್ಜ್ ಮತ್ತೆ ಆಯ್ಕೆ ಆದನು. ಆದರೆ  ಎರಡನೆಯ ಅವಧಿಯಲ್ಲಿ ಸಂಪೂರ್ಣ ವಿಫಲವಾದ್ದರಿಂದ ೧೯೨೮ರ ಚುನಾವಣೆಯಲ್ಲಿ ಮತ್ತೆ ರಿಪಬ್ಲಿಕನ್ ಪಕ್ಷದ ಹೂವರ್ ಅಧ್ಯಕ್ಷನಾದನು. ಇದೇ ವೇಳೆಗೆ  ಅಂದರೆ ೧೯೨೦-೧೯೩೨ರವರೆಗೆ ಅಮೆರಿಕಾದ ಆರ್ಥಿಕ ರಂಗಗಳಲ್ಲಾದಂತ ಬದಲಾವಣೆಗಳು ಮುಂದೆ ಸಂಭವಿಸಬಹುದಾದ ಮಹಾಮುಗ್ಗಟ್ಟಿಗೆ ಬಹುಮುಖ್ಯ ಕಾರಣಗಳಾದವು. ಮೊದಲ ಜಾಗತಿಕ ಯುದ್ಧದ ತರುವಾಯ ತಾನು ಉತ್ಪಾದಿಸುವ ವಸ್ತುಗಳ ಮೇಲಿಂದಲೇ ಸ್ವಾವಲಂಬನೆಯನ್ನು ತರುವ ಉದ್ದೇಶ ದಿಂದಾಗಿ ಆಮದು ವಸ್ತುಗಳ ಮೇಲಿನ ಸುಂಕವನ್ನು ಹೆಚ್ಚಿಸಿದ್ದರಿಂದ ಐರೋಪ್ಯರ ಜೊತೆಗಿನ ವ್ಯಾಪಾರ ಕುಸಿಯಿತು. ಯುದ್ಧಕ್ಕಾಗಿ ಹೇರಳವಾದ ಸಾಲ ಪಡೆದಿದ್ದ ಯುರೋಪಿನ ರಾಷ್ಟ್ರಗಳು ನಿಗದಿತ ಸಮಯದಲ್ಲಿ ತಿರುಗಿ ನೀಡಲಿಲ್ಲ. ಮರುಪಾವತಿಯ ನೆಪದಲ್ಲಿ ಅವು ಉತ್ಪಾದಿಸಿದ ವಸ್ತುಗಳನ್ನಾದರೂ ಖರೀದಿಸಿ ತಾನು ನೀಡಿದ್ದ ಮಿಲಿಯನ್ ಡಾಲರ್ ಸಾಲವನ್ನು ಮರಳಿ ಪಡೆಯುವ ಸಮಾಧಾನದ ಸಂಗತಿಗಳು ಕೈಗೂಡಲಿಲ್ಲ. ಹೀಗಾಗಿ ತಾನು ಅಂದುಕೊಂಡಂತೆ ಕಾರ್ಯರೂಪಕ್ಕೆ ಬರದೇ ಅಮೆರಿಕಾದ ಎಲ್ಲ ಯೋಜನೆಗಳು ಬುಡಮೇಲಾದವು. ಅಲ್ಲದೇ ಐರೋಪ್ಯರ ಕೊಳ್ಳುವ ಶಕ್ತಿ ಕುಂದಿದ್ದರಿಂದ ಅಮೆರಿಕಾದ ರಫ್ತು ವ್ಯಾಪಾರ ನಿಂತು ಹೋಗಿ ಹೆಚ್ಚಿನ ಪ್ರಮಾಣದಲ್ಲಿ ದವಸ-ಧಾನ್ಯಗಳು ಅಮೆರಿಕಾವನ್ನು ಬಿಟ್ಟುಹೋಗಲೇ ಇಲ್ಲ. ಲಾಭದ ಮೇಲಿನ ತೆರಿಗೆಯನ್ನು ರದ್ದುಗೊಳಿಸಿದ್ದರಿಂದ ಆಡಳಿತವೇ ವ್ಯವಹಾರ ಆದಂತಾಯಿತು. ಇಂಥ ತೆರಿಗೆಗಳ ವಾಪಸಾತಿಯಿಂದ ಇಡೀ ಅಮೆರಿಕಾ ದೇಶವೇ ಉದ್ದಿಮೆಯ ರಂಗವಾಗಿ ಪರಿವರ್ತಿತವಾಯಿತು. ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದ್ದರಿಂದ ಹಾಗೂ ಯಂತ್ರಗಳನ್ನು ಬಳಸಿದ್ದರಿಂದ ಕೃಷಿ ಉತ್ಪನ್ನದಲ್ಲಿ ಗಣನೀಯವಾದ ಹೆಚ್ಚಳ ಕಂಡುಬಂತು. ಈ ಸಂದರ್ಭವನ್ನು ನಿಭಾಯಿಸಲು ಹೆಚ್ಚಿನ  ಪ್ರಮಾಣದ ಆಹಾರ ಧಾನ್ಯಗಳನ್ನು ಸರಕಾರವೇ ಖರೀದಿಸಿತು. ಆದರೆ ಕಾಲಕಳೆದಂತೆ ಆಹಾರೋತ್ಪನ್ನವು ಸರಕಾರ ಇಟ್ಟುಕೊಂಡಿದ್ದ ಗುರಿಯನ್ನು ಮೀರಿ ಬೆಳೆದದ್ದರಿಂದ ರೈತರ ಉತ್ಪನ್ನಗಳನ್ನು ಖರೀದಿಸುವ ಮುಂಚಿನ ಕ್ರಮ ಕೈಬಿಟ್ಟು ಸರಕಾರವು ಸಹ ಸುಮ್ಮನಾಯಿತು. ವಲಸೆಗಾರರನ್ನು ತಡೆಗಟ್ಟಿದ್ದು, ಪಾನನಿರೋಧ ಶಾಸನ ಜಾರಿಗೆ ತಂದದ್ದು ಸಹ ಮಹಾಮುಗ್ಗಟ್ಟಿಗೆ ಇಂಬುಕೊಟ್ಟಿತು. ಇಂಥ ಪರಿಣಾಮಗಳಿಂದ ಅಮೆರಿಕಾದ ರಾಜಕೀಯದಲ್ಲಿ ಅಸ್ಥಿರತೆ ತಲೆದೋರಿ ಬಂಡವಾಳಶಾಹಿ ವಿರುದ್ಧದ ಸಮತಾವಾದ ಚಳವಳಿ ಗಂಭೀರ ಸ್ವರೂಪ ಪಡೆದುಕೊಂಡಿತು.

ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಕೆಲವು ಪಟ್ಟಭದ್ರ ಸಂಸ್ಥೆಗಳು, ನೀಗ್ರೋ ಮತ್ತು ಯಹೂದಿಗಳ(ಜ್ಯೂಗಳ) ಹತ್ಯೆಯ ಹೇಯ ಕಾರ್ಯಕ್ಕೆ ಇಳಿದವು. ಇದು ಅಮೆರಿಕಾದ  ವೈಯಕ್ತಿಕ ಹಾಗೂ ಬೌದ್ದಿಕ ಸ್ವಾತಂತ್ರ್ಯಕ್ಕೆ ಬಹುದೊಡ್ಡ ಕೊಡಲಿಪೆಟ್ಟನ್ನು ಹಾಕಿದಂತಾಯಿತು. ಇದೇ ವೇಳೆಗೆ ಮೋಟಾರು ತಂತ್ರಜ್ಞಾನದಿಂದ ಹೆನ್ರಿಫೋರ್ಡ್ ಇಡೀ ಅಮೆರಿಕಾದ ಗತಿಯನ್ನೆ ಬದಲಾಯಿಸಿದನು. ಈತನು ಆವಿಷ್ಕರಿಸಿದ ಕಾರಿನ ತಂತ್ರಜ್ಞಾನದಿಂದ ಅಮೆರಿಕಾ ಭೌಗೋಳಿಕವಾಗಿ ಸಂಕುಚಿತಗೊಂಡಿತು. ಆಂತರಿಕವಾಗಿ ಘಟಿಸಿದ ತಲ್ಲಣಗಳು ಅಮೆರಿಕಾದ ವಿದೇಶಾಂಗ ನೀತಿಯಲ್ಲಿ ಪರಿಣಾಮಕಾರಿಯಾದ ಬದಲಾವಣೆಗಳಿಗೆ ಎಡೆಮಾಡಿದವು. ರಾಜಕೀಯವಲ್ಲದ ವಿಷಯಗಳಿಗೆ ಹೆಚ್ಚಿನ ಬೆಂಬಲ ದೊರಕಿತು. ಯುದ್ಧೋತ್ಸಾಹದಿಂದ ಹಿಂದೆ ಸರಿದ ಅಮೆರಿಕಾದ ಆಡಳಿತ ನಿಶ್ಶಸ್ತ್ರೀಕರಣಕ್ಕೆ ಆದ್ಯತೆ ನೀಡಿತು. ಆದರೆ ಜಾಗತಿಕ ರಂಗನಾಟಕದಲ್ಲಿ ತಾನು ಅನುಭವಿಸುತ್ತಿರುವ ಸಮಸ್ಯೆಗಳ ನಡುವೆಯೂ ಅಮೆರಿಕಾ ಹೆಚ್ಚಿನ ವಿಷಯಗಳಲ್ಲಿ ತನ್ನ ವಿಚಾರ ಕ್ರಮವನ್ನೇ ಗೆಲ್ಲಿಸುತ್ತಿತ್ತು. ಇದು ಯುರೋಪ್ ರಾಷ್ಟ್ರಗಳಿಗೆ ಸಹನೀಯವಾಗಿರಲಿಲ್ಲ. ಜಾಗತಿಕ ಮಟ್ಟದ ರಾಜಕೀಯ ಅಸ್ಥಿರತೆಗೆ ಎಲ್ಲ ದೇಶಗಳು ಕಾಯುತ್ತಿದ್ದವು. ಹೀಗಾಗಿ ಜಪಾನ್ ಹಾಗೂ ಜರ್ಮನಿಯು ಮತ್ತೆ ಯುದ್ಧ ಸಿದ್ಧತೆಗಳನ್ನು ಮಾಡಲಾರಂಭಿಸಿದವು. ೧೯೩೨ರಲ್ಲಿ ಜಿನೀವಾದಲ್ಲಿ ಸೇರಿದ ಪರಿಷತ್ತು ಜಾಗತಿಕ ಮಟ್ಟದಲ್ಲಿ ಸಂಪೂರ್ಣ ನಿಶ್ಶಸ್ತ್ರೀಕರಣ ತರುವಲ್ಲಿ ಸೋತಿತು. ಒಟ್ಟಾರೆ ಮೊದಲ ಜಾಗತಿಕ ಯುದ್ಧದಲ್ಲಿ ಸೋತಿರುವ ಯುರೋಪಿನ ರಾಷ್ಟ್ರಗಳ ಸೇಡಿನಿಂದ, ಜಪಾನಿನ ಹಟದಿಂದ ಹಾಗೂ ಅಮೆರಿಕಾವು ಸೃಜಿಸುತ್ತಿದ್ದ ಕುಟಿಲನೀತಿಯಿಂದ ವಿಶ್ವ ಮತ್ತೆ ಗೊಂದಲಕ್ಕೀಡಾಯಿತು. ಹರ್ಬರ್ಟ್ ಹೂವರ್‌ನ ಕಾಲದಲ್ಲಿ ಎಲ್ಲ ರಂಗದಲ್ಲಿ ಅಮೆರಿಕಾ ಸಾಧಿಸಿದ ಕ್ಷಿಪ್ರಪ್ರಗತಿಯಿಂದ ಆರ್ಥಿಕ ಮುಗ್ಗಟ್ಟು ತಲೆದೋರಿತು. ದುಡಿಮೆಗಾರರು ತಾವು ತಯಾರಿಸಿದ ವಸ್ತುಗಳಿಗೆ ತಾವೇ ಗಿರಾಕಿಗಳಾದರು. ಇದರ ತೀವ್ರತೆಯನ್ನು ತಗ್ಗಿಸಲು ಉತ್ಪಾದನೆಯ ಹೆಚ್ಚಳವನ್ನು ಕಡಿಮೆ ಗೊಳಿಸಿದಾಗ ಮತ್ತೆ ನಿರುದ್ಯೋಗ ತಲೆ ಎತ್ತಿತು. ಉತ್ಪಾದಿಸಿದ ವಸ್ತುಗಳಿಗೆ ಮಾರುಕಟ್ಟೆಗಳ ಕೊರತೆ ಕಂಡುಬಂದು ಕೊಳೆಯಲಾರಂಭಿಸಿದವು. ಷೇರುಗಳನ್ನು ಕೊಳ್ಳುವ ತಪ್ಪು ಲೆಕ್ಕಾಚಾರದಲ್ಲಿ ಧನಿಕರು ಷೇರು ಮಾರುಕಟ್ಟೆಯನ್ನು ಗಬ್ಬೆಬ್ಬಿಸಿದ್ದರು. ಇದರ ಪರಿಣಾಮ ಗಳಿಂದ ಜನರ ಉಳಿತಾಯಗಳು ನೀರು ಪಾಲಾದವು.

ಬೆಲೆಗಳು ಒಂದೇ ಸಮನೆ ಕುಸಿದಿದ್ದರಿಂದ ಜನರು ಕೇವಲ ನಿತ್ಯೋಪಯೋಗಿ ವಸ್ತು ಗಳಿಗೆ ಮಾತ್ರ ಸೀಮಿತರಾದರು. ಜನರಿಗೆ ಅವಶ್ಯಕವಾದ ಇನ್ನಿತರ ಗೃಹಪಯೋಗಿ ವಸ್ತು ಗಳ ಉತ್ಪಾದನೆ ಸಂಪೂರ್ಣವಾಗಿ ನಿಂತುಹೋದಂತಾಯಿತು. ಪರಿಣಾಮ ಉಳಿದ ಉದ್ದಿಮೆ ಗಳು ಮುಚ್ಚಿದವು. ಕೈಗಾರಿಕೋದ್ಯಮಿಗಳು ಕಾರ್ಮಿಕರಿಗೆ ವೇತನ ಕೊಡದೆ ಬಾಗಿಲು ಮುಚ್ಚಿಕೊಂಡವು. ಆರ್ಥಿಕ ಏರುಪೇರಿನ ಪಲ್ಲಟಗಳು ೧೯೨೦ರಿಂದಲೇ ಪ್ರಾರಂಭವಾಗಿದ್ದರೂ ಅಮೆರಿಕಾ ಆಡಳಿತವು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ೧೯೨೮ರ ನಂತರ ತಕ್ಷಣ ತೆರೆದುಕೊಂಡ ಈ ಅನಾಹುತಗಳಿಗೆ ಹರ್ಬರ್ಟ್ ಹೂವರ್ ತನ್ನ ಆಡಳಿತ ನೀತಿ ಇದಕ್ಕೆ ಕಾರಣವಲ್ಲ ಎಂದು ಜನರಿಗೆ ಸಮಜಾಯಿಷಿ ನೀಡಿದರೂ ಅಮೆರಿಕಾನ್‌ರು ಅದನ್ನು ಸ್ವೀಕರಿಸಲು ಸಿದ್ಧರಿರಲಿಲ್ಲ. ಆರ್ಥಿಕ ಸ್ಥಿತಿಯಲ್ಲಾದ ಏರುಪೇರಿನ ಘಟನೆಗಳಿಂದ ಆದ ಪರಿಣಾಮಗಳು ಡೆಮಾಕ್ರೆಟಿಕ್ ಪಕ್ಷದ ಫ್ರಾಂಕ್ಲಿನ್ ರೂಸ್‌ವೆಲ್ಟ್‌ನ ಮುಂದೆ ರಿಪಬ್ಲಿಕನ್ ಹುರಿಯಾಳು ಸೋಲುವಂತಾಯಿತು. ಚುನಾವಣೆಯಲ್ಲಿ ಜಯಿಸಿದ ರೂಸ್‌ವೆಲ್ಟ್ ತನ್ನ ಸುಧಾರಣೆಗಳಿಂದ ಅಮೆರಿಕಾವನ್ನು ಮತ್ತೆ ಮೊದಲ ಸ್ಥಿತಿಗೆ ಕೊಂಡೊಯ್ಯುವ ಬಹುದೊಡ್ಡ ಜವಾಬ್ದಾರಿ ಕೊರಳಿಗೆ ಬಿತ್ತು.