‘‘ಏಷಿಯಾದ ಹುಲಿ’’ಗಳು

ಏಷಿಯಾದ ದೇಶಗಳಾದ ಥೈಲ್ಯಾಂಡ್, ದಕ್ಷಿಣ ಕೊರಿಯಾ, ಮಲೇಷಿಯಾ, ಸಿಂಗಾಪುರ ಹಾಗೂ ಹಾಂಗ್ ಕಾಂಗ್‌ಗಳನ್ನು ಸುಮಾರು ೧೯೭೦ರ ದಶಕದ ನಂತರದಲ್ಲಿ ಅಮೆರಿಕಾವು ‘ಏಷಿಯಾದ ಹುಲಿ’ಗಳೆಂದು ಪ್ರಚುರಪಡಿಸಿತು. ಅಮೆರಿಕಾ ಮತ್ತು ಜಪಾನ್ ಗಳು ಏಷಿಯಾದಲ್ಲಿ ಕಮ್ಯುನಿಸಂನ ಪ್ರಭಾವವನ್ನು ತಡೆಗಟ್ಟಲು ಈ ದೇಶಗಳ ಆರ್ಥಿಕತೆಗಳನ್ನು ವಿಪರೀತ ಹಣ ಸಹಾಯದಿಂದ ಉಬ್ಬಿಸಿ ಪ್ರಪಂಚದೆದುರು ಷೋಕೇಸಿನ ಬೊಂಬೆಗಳಂತೆ ತೋರಿಸಿದವು. ಈ ದೇಶಗಳು ಕ್ಷಿಪ್ರಗತಿಯಲ್ಲೇ ಅಪೂರ್ವ ಅಭಿವೃದ್ದಿ ಸಾಧಿಸಿದವೆಂದೂ, ಅಮೆರಿಕಾ ಪ್ರಣೀತ ನೀತಿಯನ್ನು ಸಂಪೂರ್ಣ ಜಾರಿಗೊಳಿಸಿದ್ದರಿಂದ ಹಾಗಾಗಿದೆಯೆಂದೂ ಬೀಗತೊಡಗಿದವು. ಈ ಅಭಿವೃದ್ದಿಯ ಮಾದರಿಗಳನ್ನೇ ಇನ್ನುಳಿದ ಹಿಂದುಳಿದ ದೇಶಗಳೂ ಪಾಲಿಸಬೇಕೆಂದೂ ಜಾಹೀರಾತು ನೀಡಲಾಯ್ತು. ಅಮೆರಿಕಾದ ಹಣಕಾಸು ಕಾರ್ಯದರ್ಶಿ ಇ.ರುಬಿನ್ ಘೋಷಿಸಿದ್ದಂತೆ

ಈ ಆರ್ಥಿಕತೆಗಳು ಅಮೆರಿಕಾದ ರಫ್ತುದಾರರಿಗೆ ಕೀಲಕ ಮಾರುಕಟ್ಟೆಗಳಷ್ಟೇ ಅಲ್ಲ ಇಡೀ ಜಗತ್ತಿನಾದ್ಯಂತ ಅಭಿವೃದ್ದಿ, ಶಾಂತಿ ಹಾಗೂ ಸಮೃದ್ದಿಯನ್ನು ಉಂಟುಮಾಡುವ ನಮ್ಮ ಪ್ರಯತ್ನಗಳ ದೃಷ್ಟಿಯಿಂದಲೂ ಬಹು ಪ್ರಾಮುಖ್ಯತೆ ಪಡೆದಿವೆ.

ಆದರೆ ಈ ‘‘ಏಷಿಯಾದ ಹುಲಿಗಳು’’ ೧೯೯೭ರ ಹೊತ್ತಿಗೆ ಇಲಿಗಳಾಗಿಬಿಟ್ಟವು. ಈ ದೇಶಗಳ ಆರ್ಥಿಕತೆಗಳು ದಿಡೀರನೇ ಬೃಹತ್ ಕುಸಿತವನ್ನೆದುರಿಸಿದವು. ಈ ಕುಸಿತವು ಥೈಲ್ಯಾಂಡ್‌ನಲ್ಲಿ ಮೊದಲಿಗೆ ಆರಂಭವಾಯಿತು. ಅಮೆರಿಕಾ ಹೇಳಿದ ಅರ್ಥನೀತಿಯನ್ನು ಚಾಚೂತಪ್ಪದೇ ಪಾಲಿಸಿದ ಈ ದೇಶಗಳಲ್ಲಿ ವಿದೇಶಿ ಹೂಡಿಕೆಯು ಬೃಹತ್ ಪ್ರಮಾಣದಲ್ಲಿ ಹೆಚ್ಚಿತು. ಅಭಿವೃದ್ದಿ ಶೇ.೮ರಷ್ಟಾಯಿತು. ಆದರೆ ೧೯೯೬ರಲ್ಲಿ ಥೈವಾನ್‌ನಲ್ಲಿ ರಫ್ತು ಪ್ರಮಾಣದಲ್ಲಿ ಕುಸಿತ ಕಾಣಿಸಿಕೊಂಡದ್ದೇ ಸಾಲದ ಪ್ರಮಾಣ ಏರತೊಡಗಿತು. ಸಾಲ ನೀಡುವವರು ನೀಡದಾದರು. ಹಣಕಾಸು ಮಾರುಕಟ್ಟೆಯ ಅಂತರಾಷ್ಟ್ರೀಯ ಹೂಡಿಕೆದಾರರು ಥೈಲೆಂಡ್ ಸರ್ಕಾರವು ತನ್ನ ‘ಭಾಥ್’ ಕರೆನ್ಸಿಯನ್ನು ಅಪಮೌಲ್ಯಗೊಳಿಸುವಂತೆ ಮಾಡಿ ಅದನ್ನು ಕೊಂಡು ಡಾಲರ್ ಗೆ ಮಾರತೊಡಗಿದರು. ಇದರಿಂದ ರಫ್ತುಗಳು ಅಗ್ಗವಾದವು. ಇದರಿಂದ ತಮ್ಮ ರಫ್ತು ಹೆಚ್ಚಾಗಬಹುದೆಂಬ ಲೆಕ್ಕಾಚಾರ ಅವರದ್ದು. ಆದರೆ ಪೂರ್ವ ಏಷಿಯಾದ ಇನ್ನಿತರ ದೇಶಗಳು ತಾವೂ ತಂತಮ್ಮ ಕರೆನ್ಸಿಯನ್ನು ಅಪಮೌಲ್ಯಗೊಳಿಸಿದ್ದರಿಂದ ಹೂಡಿಕೆದಾರರು ಹೂಡಿಕೆಯನ್ನು ವಾಪಸ್ಸು ಪಡೆಯಲಾರಂಭಿಸಿದರು. ಪರಿಣಾಮವಾಗಿ ಏಷಿಯಾದ ಮಾರುಕಟ್ಟೆಯು ದೊಡ್ಡ ಬಿಕ್ಕಟ್ಟಿನಲ್ಲಿ ಸಿಲುಕಿತು. ಇದು ಜಾಗತಿಕ ಮಾರುಕಟ್ಟೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿತು.

ಅಮೆರಿಕಾವು ಜಪಾನಿನೊಂದಿಗೆ ಸೇರಿಕೊಂಡು ಪೂರ್ವ ಏಷ್ಯಾದಲ್ಲಿ ತನ್ನ ರಾಜಕೀಯ, ಸೇವಾ ಸಾಮರ್ಥ್ಯವನ್ನು ಖಾತ್ರಿಗೊಳಿಸಿಕೊಳ್ಳಲು ಹಾಗೂ ಬೃಹತ್ ಪ್ರಮಾಣದಲ್ಲಿ ಲಾಭ ಸೂರೆಗೈಯಲು ಈ ‘ಹುಲಿ’ಗಳನ್ನು ಬೆಳೆಸಿ ಸ್ವತಂತ್ರ, ಸ್ವಾವಲಂಬಿ ದೇಶಗಳೆಂಬಂತೆ ಬಿಂಬಿಸಿತ್ತು. ಆದರೆ ಅಮೆರಿಕಾ ಪ್ರಣೀತ ಆರ್ಥಿಕ ನೀತಿಯ ಅರಾಜಕತೆ ಹಾಗೂ ಅದರೊಳಗಿನ ಬೃಹತ್ ಪ್ರಮಾಣದ ಸಟ್ಟಾವ್ಯಾಪಾರ (ಸ್ಪೆಕುಲೇಟಿವ್ ಟ್ರೇಡಿಂಗ್), ಸಾಲದ ಮೇಲಿನ ಅವಲಂಬನೆ, ಇವುಗಳೇ ಈ ದೇಶಗಳನ್ನು ತೀವ್ರ ಬಿಕ್ಕಟ್ಟಿಗೆ ತಳ್ಳಿ ಲಕ್ಷಾಂತರ ಜನರು ನಿರುದ್ಯೋಗ, ಹಣದುಬ್ಬರ ಹೆಚ್ಚಳ, ಬಡತನ ಮುಂತಾದ ಕಷ್ಟನಷ್ಟಗಳಿಗೆ ಒಳಗಾದರು.

ಅಮೆರಿಕಾದ ಆಫ್ರಿಕಾ ನೀತಿ

ವಿಶ್ವಬ್ಯಾಂಕ್ ಗುರುತಿಸಿರುವಂತೆ, ಆಫ್ರಿಕಾದ ೪೧ ದೇಶಗಳಲ್ಲಿ ೩೧ ದೇಶಗಳು ಭಾರೀ ಸಾಲಬಾಧಿತ ದೇಶಗಳಾಗಿವೆ. ೨೦೦೨ರಲ್ಲಿ ಐಎಂಎಫ್ ಹಾಗೂ ವಿಶ್ವಬ್ಯಾಂಕುಗಳಿಗೆ ಆಫ್ರಿಕಾದ ದೇಶಗಳು ಪಾವತಿಸಬೇಕಿದ್ದ ಸಾಲ ೩೫೦ ಮಿಲಿಯನ್ ಡಾಲರುಗಳು(೧ ಮಿಲಿಯನ್= ೧೦ ಲಕ್ಷ). ಆಫ್ರಿಕಾದ ರಫ್ತು ಗಳಿಕೆಯ ೧/೪ರಷ್ಟು ಈ ಸಾಲ ತೀರಿಕೆಗೇ ವ್ಯಯವಾಗುತ್ತಿದೆ. ಅಪಾರ ಪ್ರಮಾಣ ತೈಲ ಸಂಪತ್ತು, ಖನಿಜ ಸಂಪತ್ತು, ಅರಣ್ಯ ಸಂಪತ್ತುಗಳನ್ನು ಹೊಂದಿಯೂ ಇಲ್ಲಿನ ಸೂಡಾನ್, ಸೋಮಾಲಿಯಾ, ಇಥಿಯೋಪಿ ಯಾದಂತಹ ದೇಶಗಳ ಕೋಟ್ಯಾಂತರ ಜನರು ಹಸುವಿನಿಂದ ನರಳುತ್ತಿರುವುದನ್ನು ನೋಡು ತ್ತಿದ್ದೇವೆ. ನೈಜಿರಿಯಾ ದೇಶದ ಕಡೆ ಇದಕ್ಕೆ ಕಾರಣಗಳನ್ನು ತಿಳಿಸಬಲ್ಲರು. ನೈಜೀರಿಯಾವು ಪ್ರಪಂಚದ ತೈಲ ಉತ್ಪಾದನೆಯಲ್ಲಿ ೬ನೆಯ ಸ್ಥಾನವನ್ನು ಹೊಂದಿದೆ. ಅಮೆರಿಕಾಕ್ಕೆ ರಫ್ತು ಮಾಡುವ ದೇಶಗಳಲ್ಲಿ ಐದನೆ ಸ್ಥಾನದಲ್ಲಿದೆ. ಆಫ್ರಿಕದಲ್ಲಿ ‘ಬಾಲ್ಕನೀಕರಣ’ದ(ಬಾಲ್ಕನೈಸೇಷನ್) ಮೂಲಕ ಅಮೆರಿಕಾವು ದೊಡ್ಡ ದೇಶಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಚಿಕ್ಕದಾಗಿ ಒಡೆದು ಹಾಕಿ ತನ್ನ ಕೈಗೊಂಬೆ ಸರ್ಕಾರಗಳನ್ನು ಸ್ಥಾಪಿಸಿದೆ.

ಜಾರ್ಜ್‌ಬುಷ್ ಒಡೆತನದ ಚೆರಾನ್/ಟೆಕ್ಸಾಕೋ ತೈಲ ಕಂಪನಿಯೇ ನೈಜೀರಿಯಾ ದಲ್ಲಿರುವ ದೊಡ್ಡ ಕಂಪನಿಯಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಇದೊಂದೇ ಕಂಪನಿಯು ಏನಿಲ್ಲೆಂದರೂ ೨೫ ಬಿಲಿಯನ್ ಡಾಲರು(೧ ಬಿಲಿಯನ್=೧೦೦ ಕೋಟಿ)ಗಳನ್ನು ವ್ಯಯಿಸಿದೆ ಎಂದರೆ ಅದು ಮಾಡಿರಬಹುದಾದ ಲಾಭವನ್ನು ಊಹಿಸಬಹುದಾಗಿದೆ. ನೈಜೀರಿಯಾದಲ್ಲಿ ಅಮೆರಿಕಾ ಒಂದೇ ದಿನಕ್ಕೆ ಇನ್ನೂರು ಕೋಟಿ ಬ್ಯಾರಲ್‌ಗಳಷ್ಟು ಕಚ್ಚಾ ತೈಲವನ್ನು ಉತ್ಪಾದಿಸುತ್ತಿದೆ.

ತನ್ನ ಕಂಪನಿಗಳ ಬೃಹತ್ ಪ್ರಮಾಣದ ಲಾಭವನ್ನು ಕಾಯ್ದುಕೊಳ್ಳಲು ಇಲ್ಲಿ ಸಹ ಅಮೆರಿಕಾ ತನ್ನ ಕೈಗೊಂಬೆ ಸರ್ಕಾರಗಳನ್ನೇ ಸ್ಥಾಪಿಸಿದೆ. ೨೦೦೩ರ ಏಪ್ರಿಲ್ ಚುನಾವಣೆಯಲ್ಲಿ ಬಹುಮತ ಹೊಂದಿರದಿದ್ದರೂ ಅಮೆರಿಕಾದ ಬೆಂಗಾವಲಿನಿಂದ ಒಬ್ಸಾಂಗೋ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದ್ದನ್ನು ನೋಡಬಹುದು. ನೈಜೀರಿಯಾದ ಸೈನ್ಯವನ್ನು ಬಲಗೊಳಿಸಲು ಅಮೆರಿಕಾವು ನೂರಾರು ಕೋಟಿ ಡಾಲರುಗಳನ್ನು ನೀಡಿದೆ. ನೈಜೀರಿಯಾದ ಸೇನೆಯು ಇಂದು ಅಮೆರಿಕಾ ಬೆಂಬಲದಿಂದ ಪಶ್ಚಿಮ ಆಫ್ರಿಕಾದಲ್ಲಿ ನಡೆಸುತ್ತಿರುವ ದುರಾಚಾರಗಳಿಗೆ ಮಿತಿಯೇ ಇಲ್ಲವಾಗಿದೆ. ಆದರೆ ಅಮೆರಿಕಾವು ತನ್ನ ತೈಲ ಸಾಮ್ರಾಜ್ಯವನ್ನು ರಕ್ಷಿಸಿಕೊಳ್ಳಲು ಇದು ಅನಿವಾರ್ಯವಾಗಿದೆ.

ಇದೇ ರೀತಿಯಲ್ಲಿ ಅಮೆರಿಕಾವು ‘ಶಾಂತಿ ಪಾಲನೆ’ಯ ಹೆಸರಿನಲ್ಲಿ ಲೈಬೀರಿಯಾ ಹಾಗೂ ಸಿಯೆರಾ ಲಿಯೋನ್‌ಗಳಲ್ಲಿ ಸು. ೩೫೦ ಮಿಲಿಯನ್ ಡಾಲರುಗಳನ್ನು ವ್ಯಯಿಸಿದೆ. ಅಂತೆಯೇ ರಾಸಾಯನಿಕ ಯುದ್ಧಾಸ್ತ್ರಗಳನ್ನು ಉತ್ಪಾದಿಸಲಾಗುತ್ತಿದೆ ಎಂಬ ನೆಪವೊಡ್ಡಿ ಸುಡಾನ್ ಮೇಲೆ ಅವ್ಯಾಹತವಾಗಿ ಬಾಂಬ್ ದಾಳಿ ನಡೆಸಿತ್ತು.

೨೦೧೫ರ ವೇಳೆಗೆ ಮದ್ಯ ಆಫ್ರಿಕಾದಿಂದ ಅಮೆರಿಕಾವು ಆಮದು ಮಾಡುವ ತೈಲದ ಪ್ರಮಾಣವು ಶೇ.೧೬ ನಿಂದ ಶೇ.೨೫ ಹೆಚ್ಚಾಗಲಿದೆ ಎಂದು ನ್ಯಾಷನಲ್ ಇಂಟೆಲಿಜೆನ್ಸಿ ಕೌನ್ಸಿಲ್ ಅಂದಾಜಿಸಿದೆ.

ರಷ್ಯಾವನ್ನು ಏಕಾಂಗಿಗೊಳಿಸುತ್ತಿರುವ ಅಮೆರಿಕಾ

ಮಹಾಯುದ್ಧದ ನಂತರದಲ್ಲಿ ಅಮೆರಿಕಾ ಅಗ್ರರಾಷ್ಟ್ರವು ಹಾಗೂ ಸೋವಿಯತ್ ಒಕ್ಕೂಟ ಅಗ್ರರಾಷ್ಟ್ರಗಳ ನಡುವೆ ತೀವ್ರತರವಾದ ಮಾರುಕಟ್ಟೆ ಪೈಪೋಟಿಯು ‘ಶೀತಲ ಸಮರ’ ರೂಪದಲ್ಲಿ ವ್ಯಕ್ತಗೊಂಡಿತು. ಉಭಯ ರಾಷ್ಟ್ರಗಳೂ ತಂತಮ್ಮ ಆರ್ಥಿಕ, ರಾಜಕೀಯ, ಸೈನಿಕ ಬ್ಲಾಕ್‌ಗಳನ್ನು ನಿರ್ಮಿಸಿಕೊಳ್ಳತೊಡಗಿದವು. ಇದು ೧೯೯೦ರಲ್ಲಿ ಸೋವಿಯತ್ ಒಕ್ಕೂಟವು ವಿಭಜನೆಯಾಗುವುದರಲ್ಲಿ ಪರಿಸಮಾಪ್ತಿಯಾಯಿತು. ನಂತರದ ದಿನಗಳಲ್ಲಿ ದುರ್ಬಲಗೊಂಡ ರಷ್ಯವನ್ನು ಇನ್ನಷ್ಟು ದುರ್ಬಲಗೊಳಿಸುವ ಎಲ್ಲಾ ಯತ್ನ ಗಳನ್ನು ಅಮೆರಿಕಾ ಮಾಡುತ್ತಲೇ ಬಂದಿದೆ. ಸೋವಿಯತ್ ಒಕ್ಕೂಟದ ಸುಪರ್ದಿಯಲ್ಲಿದ್ದ ಹಲವು ದೇಶಗಳನ್ನು ಅಮೆರಿಕಾ ತನ್ನೆಡೆಗೆ ಸೆಳೆದುಕೊಂಡಿದೆ. ರಷ್ಯಾವು ರಚಿಸಿಕೊಂಡಿದ್ದ ವಾರ್ಸಾ ಒಪ್ಪಂದಕ್ಕೆ ಪ್ರತಿಯಾಗಿ ಅಮೆರಿಕಾವು ನ್ಯಾಟೋವನ್ನು(ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್)ರಚಿಸಿತ್ತಲ್ಲದೆ. ಈಗ ವಾರ್ಸಾ ಒಪ್ಪಂದ ಮುರಿದು ಬಿದ್ದ ಬಳಿಕ ಅದರಲ್ಲಿದ್ದ ಉಸ್ಮೇನಿಯಾ, ಲಾತ್ವಿಯ, ಲಿರೇವಿಯಾ, ಸ್ನೋವೇನಿಯಾ, ಸೋವೇಕಿಯಾ, ಬಲ್ಗೇರಿಯಾ ಹಾಗೂ ರೊಮೇನಿಯಗಳನ್ನು ನಾಟೋಗೆ ಸೇರ್ಪಡಿಸಲಾಗಿದೆ. ಸದ್ಯದಲ್ಲಿ ಕ್ರೋಶಿಯಾ, ಅಲ್ಬೇನಿಯಾಗಳನ್ನು ಸೇರಿಸಿಕೊಳ್ಳಲಿದೆ.

೨೦೦೮ರ ಆಗಸ್ಟ್‌ನಲ್ಲಿ ಅಮೆರಿಕಾವು ರಷ್ಯಾ ವಿರೋಧಿ ನಿಲುವಿನ ಭಾಗವಾಗಿಯೇ ತನ್ನ ಕೈಗೊಂಬೆಯಾಗಿರುವ ಜಾರ್ಜಿಯಾದ ಸಾಕಸ್ವಿಲ್ಲಿ ಸರ್ಕಾರದ ಮೂಲಕ ಬಹುಪಾಲು ರಷ್ಯನ್ನರನ್ನೇ ಹೊಂದಿರುವ ಪುಟ್ಟ ದೇಶ ದಕ್ಷಿಣ ಒಸ್ಸೆಟಿಯಾದ ಮೇಲೆ ದಾಳಿ ನಡೆಸಿತು. ಇದರಲ್ಲಿ ೨೦೦೦ ಜನರು ಹತರಾದರು. ಈ ಪ್ರದೇಶದಲ್ಲಿರುವ ಕಕಾಸಸ್ ಪರ್ವತ ಶ್ರೇಣಿಯು ಅಪಾರ ತೈಲ ಸಂಪತ್ತನ್ನು ಹೊಂದಿರುವುದರಿಂದ, ಒಸ್ಸೆಟಿಯಾವನ್ನು ವಶಪಡಿಸಿಕೊಂಡರೆ ಅದನ್ನು ದೋಚುವುದು ಸುಲಭ ಎಂಬುದು ಅಮೆರಿಕಾದ ಲೆಕ್ಕಾಚಾರ. ಇರಾಕ್ ಮೇಲಿನ ಯುದ್ಧದಲ್ಲಿ ಅಮೆರಿಕಾದ ಪರವಾಗಿ ಯುದ್ಧ ಮಾಡಿದ ಜಾರ್ಜಿಯಾದ ೨೦೦೦ ಸೈನಿಕರನ್ನೇ ಬಸೆಟಿಯಾದ ಮೇಲಿನ ದಾಳಿಗೂ ಕಳಿಸಲಾಗಿತ್ತು. ಅಷ್ಟರಲ್ಲಿ ರಷ್ಯಾದ ಸೈನ್ಯವು ಆಗಮಿಸಿ ಜಾರ್ಜಿಯಾವನ್ನು ಹಿಮ್ಮೆಟ್ಟಿಸಿದೆ.

ಇದೀಗ ಅಮೆರಿಕಾದ ವಿರುದ್ಧವಾಗಿ ಚೀನಾ, ರಷ್ಯಾಗಳು ಹಲವು ಪಶ್ಚಿಮ ಏಷಿಯಾದ ದೇಶಗಳು ಒಂದಾಗುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕಾದ ಇಂತಹ ಪರೋಕ್ಷ ಯುದ್ಧ(ಪ್ರೊಷಿಬಾರ್)ಗಳು ಇನ್ನಷ್ಟು ಹೆಚ್ಚಲಿದೆ.

ಮಧ್ಯಪ್ರಾಚ್ಯದಲ್ಲಿ ಅಮೆರಿಕಾದ ನೀತಿ

ಮಧ್ಯಪ್ರಾಚ್ಯ ದೇಶಗಳಲ್ಲಿ ‘ಪ್ರಜಾತಂತ್ರ’ದ ಹೆಸರಿನಲ್ಲಿ ‘ಮಾನವೀಯ ಕಳಕಳಿಯ’ ಹೆಸರಿನಲ್ಲಿ ‘ಭಯೋತ್ಪಾದನೆಯ ವಿರುದ್ಧ ಯುದ್ಧ’ದ ಹೆಸರಿನಲ್ಲಿ ಅಮೆರಿಕಾವು ಅನೇಕ ಯುದ್ಧಗಳನ್ನು ನಡೆಸುತ್ತಾ ಬಂದಿದೆ. ಈ ಪ್ರದೇಶದಲ್ಲಿನ ಅಪಾರ ಪ್ರಮಾಣದ ತೈಲ ಸಂಪತ್ತಿನ ಮೇಲಿನ ಆಧಿಪತ್ಯವೇ ಈ ಎಲ್ಲಾ ‘ಮಧ್ಯಪ್ರವೇಶ’ಗಳ ಏಕಮಾತ್ರ ಗುರಿಯಾಗಿದೆ.

ಮುಖ್ಯವಾಗಿ ಈ ರಾಷ್ಟ್ರಗಳಲ್ಲಿ ರಾಷ್ಟ್ರೀಯವಾಗಿ ಸರ್ಕಾರಗಳು ಆಳ್ವಿಕೆ ಬರುವುದನ್ನು ಅಮೆರಿಕಾ ಒಪ್ಪುವುದಿಲ್ಲ. ಹಿಂದೆ ಇರಾನ್‌ನಲ್ಲಿ ಪ್ರಜಾತಾಂತ್ರಿಕವಾಗಿ ಚುನಾಯಿತಗೊಂಡ ಮೊಹಮದ್ ಮೊಸಾದಿಕ್ ಅಧಿಕಾರಕ್ಕೆ ಬಂದೊಡನೆ ತನ್ನ ರಾಷ್ಟ್ರದ ಹಿತಾಸಕ್ತಿಯಿಂದ ಎಲ್ಲಾ ಬ್ರಿಟಿಷ್ ತೈಲ ಕಂಪನಿಗಳನ್ನೂ ರಾಷ್ಟ್ರೀಕರಿಸಿದ್ದ ಉದಾಹರಣೆ ಕಣ್ಣ ಮುಂದಿತ್ತು. ೧೯೭೬ರಲ್ಲಿ ಸಿ.ಐ.ಎ.ಅಧಿಕಾರಿ ಕೆಮಿತ್ ರೂಸ್‌ವೆಲ್ಟ್ ಎಂಬುವವನು ಸಂಚೊಂದನ್ನು ರೂಪಿಸಿ ಈ ಮೊಸಾದಿಕ್‌ನನ್ನು ಪದಚ್ಯುತಗೊಳಿಸುವಲ್ಲಿ ಯಶಸ್ವಿಯಾಗಿದ್ದ. ಅನಂತರ ಅಮೆರಿಕಾದ ಬಂಟ ‘ಷಾ’ನನ್ನು ಅಧಿಕಾರದಲ್ಲಿ ಕೂರಿಸಲಾಗಿತ್ತು.

೧೯೫೭ರಲ್ಲಿ ಅಮೆರಿಕಾದ ಅಧ್ಯಕ್ಷ ಐಸೆನ್ ಹೋವರ್‌ನ ತತ್ವಪ್ರಣಾಳಿಕೆಯು ಮಧ್ಯ ಪ್ರಾಚ್ಯದ ಯಾವುದೇ ದೇಶಕ್ಕೆ ಅಂತಾರಾಷ್ಟ್ರೀಯ ಕಮ್ಯುನಿಸಂನ ವಿರುದ್ಧ ಹೋರಾಡಲು ಸಹಾಯ ನೀಡುವುದಾಗಿ ತಿಳಿಸಿತು. ಲೆಬನಾನ್‌ನ ಚಾಮನ್ ತನ್ನ ಅಧಿಕಾರ ಕಳೆದುಕೊಳ್ಳುವ ಸ್ಥಿತಿ ಎದುರಾದಾಗ ಈ ತತ್ವ ಪ್ರಣಾಳಿಯ ಕೆಳಗೆ ಸಹಾಯ ಹಸ್ತ ಬೇಡಿದನು. ಈ ಅವಕಾಶವನ್ನು ಬಳಸಿಕೊಂಡ ಅಮೆರಿಕಾವು ಇರಾಕನ್ನು ದೃಷ್ಟಿಯಲ್ಲಿರಿಸಿಕೊಂಡು, ಅಗತ್ಯ ಬಿದ್ದಾಗ ದಾಳಿ ನಡೆಸಲು, ಲೆಬನಾನ್‌ನಲ್ಲಿ ‘ಅಣ್ವಸ್ತ್ರ ಅಲರ್ಟ್’ ಘೋಷಿಸಿ ೧೪,೦೦೦ ಸೈನ್ಯವನ್ನು ಇಳಿಸಿತು.

ಇಂದು ಮಧ್ಯ ಪ್ರಾಚ್ಯದಲ್ಲಿ ಅಮೆರಿಕಾದ ‘ಕಾವಲುನಾಯಿ’ ಎಂದೇ ಕುಖ್ಯಾತಿ ಪಡೆದಿರುವ ರಾಷ್ಟ್ರ ಇಸ್ರೇಲ್. ಇದು ಪ್ರಪಂಚದ ಯಾವುದೇ ದೇಶಕ್ಕಿಂತಲೂ ಅತಿ ಹೆಚ್ಚು ಆರ್ಥಿಕ, ಸೈನಿಕ ಸಹಾಯವನ್ನು ಅಮೆರಿಕಾದಿಂದ ಪಡೆದುಕೊಳ್ಳುತ್ತಿದೆ(ಶೇ.೫೪ರಷ್ಟು). ೧೯೪೮ರಲ್ಲಿ ಇಸ್ರೇಲ್ ಅಸ್ತಿತ್ವಕ್ಕೆ ಬಂದಂದಿನಿಂದಲೂ ಪ್ಯಾಲೆಸ್ತಿನಿಯರ ವಿರುದ್ಧ ಸಮರ ಸಾರಿರುವ ಇಸ್ರೇಲ್ ಈವರೆಗೆ ಲಕ್ಷಾಂತರ ಪ್ಯಾಲೆಸ್ತೇನಿಯರನ್ನು ಕೊಂದು ಹಾಕಿದೆ. ಲೆಬನಾನ್, ಜೋರ್ಡಾನ್, ಯೆಮೆನ್ ಹಾಗೂ ಪ್ಯಾಲೆಸ್ತೇನಿಯರ ರಾಷ್ಟ್ರೀಯವಾದಿ ಚಳುವಳಿಗಳನ್ನು ಹತ್ತಿಕ್ಕುವ ಅಮೆರಿಕಾದ ಪ್ರಯತ್ನದಲ್ಲಿ ಇಸ್ರೇಲ್ ಪ್ರಮುಖ ಪಾತ್ರ ವಹಿಸಿದೆ.

ಅಧ್ಯಕ್ಷ ನಿಕ್ಸನ್‌ನ ತತ್ವ ಪ್ರಣಾಳಿಕೆಯ ಪ್ರಕಾರ ಅಮೆರಿಕಾವು ಮದ್ಯಪ್ರಾಚ್ಯದಲ್ಲಿ ಇರಾನ್, ಇಸ್ರೇಲ್ ಹಾಗೂ ಸೌದಿ ಅರೇಬಿಯಾಗಳನ್ನು ಮೂರು ಸ್ಥಂಬಗಳಾಗಿ ಪರಿಗಣಿಸಿ ತನ್ನ ಆಧಿಪತ್ಯವನ್ನು ಸ್ಥಾಪಿಸಿತು. ಸೌದಿ ಅರೇಬಿಯಾವು ಜಗತ್ತಿನ ಅತ್ಯಂತ ದಮನಕಾರಿ ಪ್ರಭುತ್ವವಾಯಿತು.

ಅಮೆರಿಕಾದ ಮಧ್ಯ ಪ್ರಾಚ್ಯದಲ್ಲಿ ಪ್ರಭಾವ ಬೀರುತ್ತಿದ್ದ ರಾಷ್ಟ್ರೀಯ ವಾದವನ್ನು ಮಟ್ಟ ಹಾಕಲು ಇಸ್ಲಾಂ ಮೂಲಭೂತವಾದವನ್ನು ಪ್ರೇರೇಪಿಸಿತು. ಆಫ್ಘಾನಿಸ್ತಾನದ ಮೇಲಿನ ರಷ್ಯಾ ಹಿಡಿತದ ವಿರುದ್ಧ ಮೂಲಭೂತವಾದಿ ತಾಲಿಬಾನ್‌ಗೆ ಸೈನಿಕ ತರಬೇತಿ ನೀಡಿ, ಒಸಾಮ ಬಿನ್ ಲಾಡೆನ್‌ನನ್ನು ಬೆಳೆಸಿ ರಷ್ಯಾ ವಿರುದ್ಧ ಛೂ ಬಿಟ್ಟಿತು.

೧೯೭೯ರಲ್ಲಿ ಇರಾನ್ ನಲ್ಲಿ ತನ್ನ ಕೈಬೊಂಬೆ ‘ಷಾ’ನ ಸರಕಾರವು ಉರುಳಿ ಬಿದ್ದ ಮೇಲೆ ಜಿಮ್ಮಿ ಕಾರ್ಟರ್ ತತ್ವ ಪ್ರಣಾಳಿ ಬಾರಿಗೆ ಬಂದಿತು. ಅದರ ಪ್ರಕಾರ ಅಗತ್ಯವಿರುವ ಕಡೆಗಳಲ್ಲಿ ಅಮೆರಿಕಾವು ತನ್ನ ಸೈನ್ಯವನ್ನು ನಿಯೋಜಿಸಬೇಕೆನ್ನುವುದಾಗಿತ್ತು. ಈ ಹಿನ್ನೆಲೆಯಲ್ಲಿ ಜಿಮ್ಮಿ ಕಾರ್ಟರ್ ‘ತ್ವರಿತ ನಿಯೋಜನಾ ಪಡೆ’ಯನ್ನು ರಚಿಸಿದನು. ಸೌದಿ ಅರೆಬಿಯಾವು ಈ ವ್ಯೆಹ ತಂಡಕ್ಕೆ ನೆಲೆಯನ್ನೊದಗಿಸಿತು. ಇದಕ್ಕಾಗಿ ಅಮೆರಿಕಾ ೫೦ ಬಿಲಿಯನ್ ಡಾಲರ್ ವ್ಯಯಿಸಿತು.

ಇರಾನ್ ಹಾಗೂ ಇರಾಕ್ ನಡುವೆ ನಡೆದ ಯುದ್ಧವನ್ನು ಅಮೆರಿಕಾ ಬೆಂಬಲಿಸಿತು. ಎರಡೂ ದೇಶಗಳು ನಿಶ್ಶಕ್ತಗೊಳ್ಳಬೇಕೆಂಬುದು ಅದರ ಬಯಕೆಯಾಗಿತ್ತು. ೧೯೮೭ರಲ್ಲಿ ಇರಾನ್ ಜಯಶೀಲವಾಗಬಹುದೆಂಬ ಸುಳಿವು ಸಿಕ್ಕಿದೊಡನೆ ಅಮೆರಿಕಾವು ಇರಾಕ್ ಪರ ವಹಿಸಿತು. ಪರಿಣಾಮವಾಗಿ ೧೯೮೮ರಲ್ಲಿ ಇರಾನ್ ಸೋಲನುಭವಿಸಿತು. ಇರಾಕ್‌ನ ಸರ್ವಾಧಿಕಾರಿ ಸದ್ದಾಂ ಹುಸೇನ್‌ಗೆ ಎಲ್ಲಾ ಬಗೆಯ ಸಹಾಯವನ್ನು ನೀಡಿದ ಅಮೆರಿಕಾವು ಕುವೈತ್ ಮೇಲಿನ ಇರಾಕ್ ದಾಳಿಗೆ ಆರಂಭದಲ್ಲಿ ಸಮ್ಮತಿಸಿತ್ತು. ಆದರೆ ದಾಳಿ ನಡೆದು ಇರಾಕ್ ಕುವೈತನ್ನು ಆಕ್ರಮಿಸಿಕೊಂಡ ನಂತರ ಏಕಾಏಕಿ ನಿಲುವು ಬದಲಿಸಿದ ಅಮೆರಿಕಾ ಕುವೈತ್ ನಿಂದ ಹಿಂತಿರುಗುತ್ತಿದ್ದ ಇರಾಕ್ ಸೈನಿಕರ ಮೇಲೆ ದಾಳಿ ನಡೆಸಿತು. ೬ ವಾರಗಳ ಕಾಲದ ನಡೆದ ಈ ದಾಳಿಯಲ್ಲಿ ೧,೫೦,೦೦೦ ಇರಾಕಿಯನ್ನರನ್ನು ಕೊಲ್ಲಲಾಗಿತ್ತು. ಲಕ್ಷಾಂತರ ಜನರ ಮನೆ ಮಠಗಳನ್ನು ಬಾಂಬ್ ದಾಳಿಯಿಂದ ನಾಶಮಾಡಲಾಗಿತ್ತು. ಇದನ್ನು ಅಮೆರಿಕಾ ‘ಅಪರೇಷನ್ ಡೆಸರ್ಟ್ ಸ್ವಾರ್ಮ್’ ಎಂದು ಕರೆಯಿತು. ನಂತರ ವಿಶ್ವಸಂಸ್ಥೆಯು ಇರಾಕ್ ಮೇಲೆ ವಿಧಿಸಿದ ದಿಗ್ಭಂದನ ದಿಂದಾಗಿ ಇರಾಕಿನ ೫ ಲಕ್ಷ ಜನರು ಆಹಾರ, ವಸತಿ, ಔಷಧಿಗಳಿಲ್ಲದೇ ಸತ್ತಿದ್ದಾರೆ.

ಇರಾಕ್‌ನಲ್ಲಿ ಸಮೂಹನಾಶಕ ಅಸ್ತ್ರಗಳಿವೆ(ಡಬ್ಲ್ಯು.ಎಂ.ಡಿ) ಎಂದು ಆರೋಪಿಸಿರುವ ಅಮೆರಿಕಾವು ಶೋಧನೆ ನಡೆಸಲು ಸದಾ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ೨೦೦೩ರಲ್ಲಿ ದೊಡ್ಡ ಮಟ್ಟದಲ್ಲಿ ಸೇನಾದಾಳಿಯ್ನು ನಡೆಸಿತು. ಇದಕ್ಕೂ ಮುನ್ನ ೨೦೦೧ರ ಸೆ.೧೧ರಂದು ಅಮೆರಿಕಾದ ಡಬ್ಲ್ಯು.ಟಿ.ಸಿ. ಹಾಗೂ ಪೆಂಟಗನ್ ಮೇಲಿನ ದಾಳಿಯನ್ನು ನೆಪವಾಗಿಟ್ಟುಕೊಂಡು ‘‘ಜಾರ್ಜ್‌ಬುಷ್ ಭಯೋತ್ಪಾದನೆ ವಿರುದ್ದ’’ ಯುದ್ಧವನ್ನು ಘೋಷಿಸಿದನು. ವಾಸ್ತವದಲ್ಲಿ ಈ ಯುದ್ಧದ ಉದ್ದೇಶ ಮಧ್ಯಪ್ರಾಚ್ಯದಲ್ಲಿ ತನ್ನ ಆಧಿಪತ್ಯಕ್ಕೆ ಅಡ್ಡಿಯುಂಟುಮಾಡುತ್ತಿದ್ದ ಇಸ್ಲಾಮಿಕ್ ರಾಷ್ಟ್ರಗಳ ಮೇಲೆ ಹತೋಟಿಯನ್ನು ಸಾಧಿಸುವುದೇ ಆಗಿತ್ತು. ೨೦೦೩ರಲ್ಲಿ ಸದ್ದಾಂ ಹುಸೇನನ ಸರ್ಕಾರವನ್ನು ಪದಚ್ಯುತಗೊಳಿಸಿ ಇರಾಕನ್ನು ತನ್ನ ವಸಾಹತನ್ನಾಗಿಸಿಕೊಂಡು, ಅಲ್ಲೊಂದು ಕೈಗೊಂಬೆ ಮಧ್ಯಂತರ ಸರ್ಕಾರವನ್ನು ರಚಿಸಿತು. ಸಮೂಹನಾಶಕ ಅಸ್ತ್ರಗಳಿಗಾಗಿ ಇಡೀ ದೇಶವನ್ನೇ ಜಾಲಾಡಿ ಏನೂ ಸಿಗದೆ ಮುಖಭಂಗ ಅನುಭವಿಸಿತು.

೨೦೦೧ರಲ್ಲಿ ಜಾರ್ಜ್‌ಬುಷ್ ಅಧಿಕಾರ ವಹಿಸಿಕೊಳ್ಳುವ ಮೊದಲು ಅಮೆರಿಕಾವು ‘‘ಹೊಸ ಅಮೆರಿಕಾದ ಶತಮಾನಕ್ಕೊಂದು ಯೋಜನೆ’’ಯನ್ನು ತಯಾರಿಸಿತ್ತು. ಇದನ್ನಾಧರಿಸಿ ೨೦೦೨ರ ಸೆ.೧೭ರಂದು ಸರ್ಕಾರವು ಅಮೆರಿಕಾದ ರಾಷ್ಟ್ರಿಯ ಭದ್ರತಾ ವ್ಯೆಹ ತಂತ್ರ  ಎಂಬ ಅಧಿಕೃತ ನೀತಿಯನ್ನು ಹೊರತಂದಿತು. ಇವುಗಳ ಸಾರಾಂಶವೇನೆಂದರೆ ಹೊಸ ಶತಮಾನದಲ್ಲಿ ಅಮೆರಿಕಾವನ್ನು ಯಾರೂ ಪ್ರಶ್ನಿಸುವಂತಿರಬಾರದು; ಯುರೋಪ್ ಎಂದಿಗೂ ಅಮೆರಿಕಾದ ಕೈಗೆಟುಕದೇ ಇರಬೇಕು; ಚೀನಾಕ್ಕೆ ಎಚ್ಚರಿಕೆ ನೀಡಬೇಕು; ಚೀನಾಕ್ಕೆ ಎದುರಾಗಿ ಏಷಿಯಾದಲ್ಲಿ ಭಾರತವನ್ನು ನಿಲ್ಲಿಸಬೇಕು, ಜಾಗತಿಕ ಮಟ್ಟದಲ್ಲಿ ಅಮೆರಿಕಾ ಯಾವುದೇ ಪ್ರತಿಸ್ಪರ್ಧಿ ಇರದಂತೆ ಮಾಡುವುದು.

ಈ ಯೋಜನೆಯ ಭಾಗವಾಗಿಯೇ ‘ಭಯೋತ್ಪಾದನಾ ವಿರೋಧಿ ಯುದ್ಧ’ವನ್ನು ಪ್ರಚುರಗೊಳಿಸಲಾಯಿತು. ಇದರಲ್ಲಿ ಅಮೆರಿಕಾವನ್ನು ಬೆಂಬಲಿಸದವರನ್ನು ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿಸಲಾಯಿತು.

ಭಾರತದೊಂದಿಗಿನ ಅಮೆರಿಕಾದ ನೀತಿ

ಬಹುಹಿಂದಿನಿಂದಲೂ ಆರ್ಥಿಕ ಕ್ಷೇತ್ರದಲ್ಲಿ ಅಮೆರಿಕಾವು ಭಾರತದ ಮೇಲೆ ಪ್ರಾಬಲ್ಯ ಗಳಿಸಿದೆಯಾದರೂ ಆಡಳಿತ ಮೇಲೆ ಸಂಪೂರ್ಣ ಹಿಡಿತವನ್ನು ಹೊಂದಿಲ್ಲ. ಭಾರತವು ಅಮೆರಿಕಾ ಮಾತ್ರವಲ್ಲದೆ ಯುರೋಪ್, ರಷ್ಯಾ, ದೇಶಗಳೊಂದಿಗೂ ಚೌಕಾಸಿ ಮಾಡುವ ನಿಲುವನ್ನು ಹೊಂದಿತ್ತು. ೧೯೯೮ರಲ್ಲಿ ಭಾರತವು ಫೋಖ್ರಾನ್ ಅಣ್ವಸ್ತ್ರ ಪರೀಕ್ಷೆ ನಡೆಸಿದಾಗ ಅಮೆರಿಕಾವು ಭಾರತದ ಮೇಲೆ ಆರ್ಥಿಕ ದಿಗ್ಭಂಧನ ವಿಧಿಸಿತ್ತು. ಆದರೆ ನಂತರದಲ್ಲಿ ನಿರ್ದಿಷ್ಟವಾಗಿ ೨೦೦೧ರ ಸೆಪ್ಟೆಂಬರ್ ೧೧ರ ಘಟನೆಯ ನಂತರದಲ್ಲಿ ಭಾರತವು ಅಮೆರಿಕಾದ ಭಾರತದೊಂದಿಗಿನ ಸಂಬಂಧವು ವ್ಯೆಹಾತ್ಮಕ ಪ್ರಾಮುಖ್ಯತೆಯುಳ್ಳದ್ದು ಎಂದು ಹೇಳುತ್ತಿದೆ.

೨೦೦೫ರ ಜೂನ್ ೨೮ರಂದು ‘‘ಅಮೆರಿಕಾ ಭಾರತ ರಕ್ಷಣಾ ಸಂಬಂಧಕ್ಕೊಂದು ಹೊಸ ರೂಪುರೇಷೆ’’ ಎಂಬ ದಸ್ತಾವೇಜನ್ನು ಬಿಡುಗಡೆ ಮಾಡಿದ ಉಭಯ ಸರ್ಕಾರಗಳು ‘ಭಾರತ ಹಾಗೂ ಅಮೆರಿಕಾಗಳು ಹೊಸ ಯುಗಕ್ಕೆ ಪ್ರವೇಶಿಸಿವೆ ಎಂದು ಘೋಷಿಸಿವೆ. ಇದನ್ನನುಸರಿಸಿ ೨೦೦೫ರ ಜುಲೈ ೧೮ ರಂದು, ಭಾರತದ ಪರಿಮಾಣ ಕಾರ್ಯಕ್ರಮವನ್ನೊಳಗೊಂಡಂತೆ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಜಾರ್ಜ್‌ಬುಷ್ ಹಾಗೂ ಮನಮೋಹನ್ ಸಿಂಗ್‌ರು ಜಂಟಿ ಹೇಳಿಕೆ ನೀಡಿದರು. ಪರಿಣಾಮವೆಂಬಂತೆ ೨೦೦೫ರ ಸೆ.೨೪ರಂದು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಪ್ರಾಧಿಕಾರ(ಐ.ಎ.ಇ.ಎ.)ದ ರಾಜ್ಯಪಾಲರ ಮಂಡಳಿಯ ಸಭೆಯಲ್ಲಿ ಭಾರತವು ಇರಾನ್‌ಗೆ ವಿರುದ್ಧವಾದ ನಿಲುವು ಕೈಗೊಂಡಿತು. ಈ ಘಟನೆಗಳು ಅಮೆರಿಕಾವು ಮಧ್ಯಪ್ರಾಚ್ಯದಲ್ಲಿ ಇಸ್ರೇಲನ್ನು ಮಾಡಿಕೊಂಡಿರುವಂತೆ ಏಷ್ಯಾದಲ್ಲಿ ಭಾರತ ವನ್ನು ತನ್ನ ಕೈಗೊಂಬೆ ಪ್ರಭುತ್ವವನ್ನಾಗಿ ಮಾಡಿಕೊಳ್ಳುತ್ತಿರುವುದು ನಿಚ್ಚಳವಾಗಿದೆ. ಇದೇ ಹಿನ್ನೆಲೆಯಲ್ಲಿ ಭಾರತ ಅಮೆರಿಕಾದ ಸೈನ್ಯಗಳ ಜಂಟಿ ಕಾರ್ಯಾಚರಣೆಯೂ ಹೆಚ್ಚಿದೆ. ಮುಖ್ಯವಾಗಿ ಭಾರತದ ನೌಕಾಪಡೆಯೊಂದಿಗಿನ ಅಮೆರಿಕಾ ಸೈನ್ಯದ ಸಂಬಂಧ ಹತ್ತಿರಗೊಂಡಿದೆ.

ಏಷ್ಯಾದಲ್ಲಿ ಬಲಶಾಲಿಯಾಗಿ ಬೆಳೆಯುತ್ತಿರುವ ಚೀನಾವನ್ನು ಎದುರಿಸಲು ಅಮೆರಿಕಾವು ಭಾರತವನ್ನು ದಾಳವನ್ನಾಗಿ ಮಾಡಿಕೊಂಡಿದೆ. ಈ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಭಾರತೀಯ ಮೇಲೆ ನಕಾರಾತ್ಮಕ ಪರಿಣಾಮಗಳನ್ನೇ ಉಂಟು ಮಾಡುವುದರಲ್ಲಿ ಸಂಶಯವಿಲ್ಲ.

ಭಾರತದ ಆಂತರಿಕ ಸಂಬಂಧಗಳ ವಿಷಯದಲ್ಲಿ ಅಮೆರಿಕಾದ ಸಿಐಎಯ ಹಸ್ತಕ್ಷೇಪ ಹೆಚ್ಚಳವಾಗುತ್ತಿರುವ ಎಲ್ಲಾ ಲಕ್ಷಣಗಳೂ ಕಾಣಿಸಿಕೊಳ್ಳುತ್ತಿವೆ. ಮುಂಬೈ ಭಯೋತ್ಪಾದ ದಾಳಿ ಕುರಿತ ಚರ್ಚೆಯ ನೆಪದಲ್ಲಿ ೨೦೦೯ರ ಮಾರ್ಚ್ ೧೯ ರಂದು ಸಿಐಎ ಮುಖ್ಯಸ್ಥ ಲಿಯೋನ್ ಪಾನೆಟ್ಟಾ ಭಾರತಕ್ಕೆ ಬಂದು ಗೃಹ ಸಚಿವ ಪಿ.ಚಿದಂಬರರ ಜೊತೆ ಮಾತುಕತೆ ನಡೆಸಿ ಹೋಗಿದ್ದಾರೆ. ಇದೇ ಸಂದರ್ಭದಲ್ಲಿ ಅಮೆರಿಕಾದ ಫೆಡರಲ್ ಬ್ಯುರೋ ಆಫ್ ಇನ್ವೆಸ್ಟಿಗೇಶನ್(ಫಿನ್)ನ ಮುಖ್ಯಸ್ಥ ರಾಬರ್ಟ್ ಮುಲ್ಲರ್ ಸಹಾ ಗೃಹ ಸಚಿವರೊಂದಿಗೆ ಚರ್ಚೆ ನಡೆಸಿದ್ದಾನೆ.

ಇದಕ್ಕೂ ಮುನ್ನ ಇಂಡೋ-ಅಮೆರಿಕಾ ಪರಮಾಣು ಒಪ್ಪಂದದ ವಿಚಾರದಲ್ಲಿ ಕೇಂದ್ರ ಸರ್ಕಾರವೇ ಬಿದ್ದು ಹೋಗುವ ಸಂದರ್ಭ ಬಂದಿದ್ದರೂ ಸಹ ಭಾರತವು ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದದಲ್ಲಿ ಎಲ್ಲಕ್ಕಿಂತ ಕಾಳಜಿ ವಿಷಯವೆಂದರೆ ಭಾರತದ ರಾಷ್ಟ್ರೀಯ ಭದ್ರತೆಯದ್ದು. ಈ ಒಪ್ಪಂದದ ಪ್ರಕಾರ ಭಾರತವು ಪರಮಾಣು ರಿಯಾಕ್ಟರುಗಳನ್ನು ನಾಗರಿಕ ಹಾಗೂ ಸೈನಿಕ ಎಂದು ವರ್ಗೀಕರಿಸಿ, ನಾಗರಿಕ ಪರಮಾಣು ಕಾರ್ಯಗಳನ್ನು  ಐಎಇಎ ಸುಪರ್ದಿನಲ್ಲಿ ತರಬೇಕು. ಐಎಇಎಯನ್ನು ಅಮೆರಿಕಾವೇ ನಿಯಂತ್ರಿಸುವುದರಿಂದ ಭಾರತದ ಬಹುತೇಕ ರಿಯಾಕ್ಟರುಗಳು ನೇರವಾಗಿ ಅಮೆರಿಕಾದ ಪರಿವೀಕ್ಷಣೆಗೆ ಒಳಪಡುತ್ತವೆ.

ಈ ಒಪ್ಪಂದವನ್ನು ಜಾರಿಗೊಳಿಸಲೆಂದೇ ಅಮೆರಿಕಾವು ತನ್ನ ಸಂಸತ್ತಿ(ಕಾಂಗ್ರೆಸ್)ನಲ್ಲಿ ಹೈಡ್ ಕಾಯ್ದೆ ಎಂದು ಕರೆಯಲಾಗುವ ‘‘ಅಮೆರಿಕಾ-ಭಾರತ ಶಾಂತಿಯುತ ಅಣುಶಕ್ತಿ ಕಾಯಿದೆ ೨೦೦೬’’ ಎಂಬ ಕಾಯ್ದೆಯನ್ನು ಅಂಗೀಕರಿಸಿ ಜಾರಿಗೊಳಿಸಿತು.

ಚೀನಾ ಕುರಿತ ಅಮೆರಿಕಾದ ನೀತಿ

೧೯೫೦ರಿಂದ ೧೯೭೫ರ ನಡುವಿನ ೨೫ ವರ್ಷಗಳಲ್ಲಿ ಸ್ವಾಲವಂಬೀ ಆರ್ಥಿಕತೆಯನ್ನು ರೂಪಿಸಿಕೊಂಡ ಚೀನಾವು ೮೦, ೯೦ರ ದಶಕದಲ್ಲಿ ಅಮೆರಿಕಾದ ಮುಕ್ತ ಮಾರುಕಟ್ಟೆ ನೀತಿಗಳಿಗೆ ಹಂತ ಹಂತವಾಗಿ ತೆರೆದುಕೊಂಡಿತು. ೯೦ರ ಸೋವಿಯತ್ ರಷ್ಯದೊಂದಿಗಿನ ಶೀತಲ ಸಮರದ ಸಂದರ್ಭದಲ್ಲಿ ಅಮೆರಿಕಾವು ಆಗ್ನೇಯ ಏಷ್ಯಾದಲ್ಲಿ, ಇಂಡೋ ಚೀನಾ ದಲ್ಲಿ ಚೀನಾದ ರಾಜಕೀಯ ಆರ್ಥಿಕ ಪ್ರಭಾವಗಳನ್ನು ಕಡಿಮೆ ಮಾಡಲು ಎಲ್ಲಾ ಪ್ರಯತ್ನ ಗಳನ್ನು ನಡೆಸಿತು. ಚೀನಾ ಪರ ಉತ್ತರ ವಿಯೆಟ್ನಾಂ ವಿರುದ್ಧ ದಕ್ಷಿಣ ವಿಯೆಟ್ನಾಂಗೂ, ಉತ್ತರ ಕೊರಿಯಾ ವಿರುದ್ಧ ದಕ್ಷಿಣ ಕೊರಿಯಾಗೂ ಆರ್ಥಿಕ, ಸೈನಿಕ ಸಹಾಯ ನೀಡಿತು. ಚೀನಾದ ಆಕ್ರಮಣದಿಂದ ದೇಶಭ್ರಷ್ಟರಾದ ಟಿಬೆಟ್‌ನ ದಲಾಯಿ ಲಾಮಾ ಮತ್ತು ಸಹಚರರಿಗೆ ಸಿ.ಐ.ಎ ೧೯೬೦ರ ದಶಕದಲ್ಲಿ ೧೭ ಲಕ್ಷ ಡಾಲರುಗಳನ್ನು ನೀಡಿದ್ದನ್ನು ದಲಾಯಿ ಲಾಮಾನೇ ಒಪ್ಪಿಕೊಂಡು ‘ಅಮೆರಿಕಾವು ಅದನ್ನು ಟಿಬೆಟಿಯನ್ನರ ಒಳಿತಿಗಾಗೇನೂ ಮಾಡದೇ ಚೀನಾ ವಿರುದ್ಧದ ತನ್ನ ಹಿತಾಸಕ್ತಿಯಿಂದ ಮಾತ್ರ ಮಾಡಿತ್ತು’ ಎಂದಿದ್ದರು.

ಚೀನಾವು ಮುಕ್ತ ಮಾರುಕಟ್ಟೆಗೆ ತೆರೆದುಕೊಂಡಾದ ಮೇಲೆ ೯೦ರ ದಶಕದಲ್ಲಿ ಅಮೆರಿಕಾ-ಚೀನಾಗಳು ಆರ್ಥಿಕವಾಗಿ ಹತ್ತಿರವಾಗಿವೆ. ಅಮೆರಿಕಾ ಪ್ರೇರಿತ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಚೀನಾ ಕೇಂದ್ರಿತವಾದ ರಫ್ತು ಉದ್ದಿಮೆಯೊಂದು ರೂಪುಗೊಂಡಿತು. ಚೀನಾದ ಸಾವಿರಾರು ಎಸ್.ಇ.ಝೆುಡ್.ಗಳಲ್ಲಿ ದಿನಂಪ್ರತಿ ಉತ್ಪಾದನೆಯಾಗುವ ಸರಕುಗಳು ಅಮೆರಿಕಾ ತಲುಪಿ ಅಲ್ಲಿಂದ ಪ್ರಪಂಚ ಮಾರುಕಟ್ಟೆಗೆ ರವಾನೆಯಾಗುತ್ತಿವೆ. ಚೀನಾ ಉತ್ಪಾದನೆಯ ಶೇ.೪೦ರಷ್ಟು ರಫ್ತು ಉತ್ಪನ್ನಗಳು ಅಮೆರಿಕಾ ಮಾರುಕಟ್ಟೆಯನ್ನು ತಲುಪುತ್ತವೆ. ಜಾಗತಿಕ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಅಮೆರಿಕಾವು ಈ ಆಮದನ್ನು ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ಚೀನಾ ಬಹಳ ನಷ್ಟಕ್ಕೆ ಗುರಿಯಾಗಿದೆ.

ಏಷಿಯಾದಲ್ಲಿ ಆರ್ಥಿಕವಾಗಿ, ಸೈನಿಕವಾಗಿ ಬಲಿಷ್ಠ ಶಕ್ತಿಯಾಗಿ ಉದ್ಭವವಾಗಿರುವ ಚೀನಾವನ್ನು ತನ್ನ ಹತೋಟಿಯಲ್ಲಿಡಬೇಕೆಂದು ಅಮೆರಿಕಾವು ಪ್ರಯತ್ನಗಳನ್ನು ನಡೆಸುತ್ತಿದೆ. ಆದರೆ ಅಮೆರಿಕಾದ ಬಯಕೆಗೆ ವಿರುದ್ಧವಾಗಿ ಚೀನಾವು ರಷ್ಯಾ ಹಾಗೂ ಮಧ್ಯ ಏಷಿಯಾದ ಕೆಲ ದೇಶಗಳೊಂದಿಗೆ ಸೇರಿ ಶಾಂಘೈ ಸಹಕಾರ ಸಂಘಟನೆ ಎನ್ನುವ ಸಂಘಟನೆಯನ್ನು ಕಟ್ಟಿಕೊಂಡು ಏಷಿಯದಲ್ಲಿ ಅಮೆರಿಕಾದ ಮಾರುಕಟ್ಟೆಯ ಪ್ರಾಬಲ್ಯಕ್ಕೆ ಸೆಡ್ಡು ಹೊಡೆಯು ತ್ತಿರುವುದು ಅಮೆರಿಕಾಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಚೀನಾದ ಈ ಪ್ರಯತ್ನವನ್ನು ಮುರಿಯಲೆಂದೇ ಅಮೆರಿಕಾವು ಭಾರತದ ಮೇಲೆ ವಿಧಿಸಿದ್ಧ ದಿಗ್ಬಂಧಗಳನ್ನು ೨೦೦೧ರಲ್ಲಿ ತೆಗೆದು ಹಾಕಿ ಭಾರತದೊಂದಿಗಿನ ಮೈತ್ರಿಯನ್ನು ಹೆಚ್ಚಿಸಿಕೊಂಡಿದೆ. ಮಾತ್ರವಲ್ಲ ಏಷಿಯಾದಲ್ಲಿ ಭಾರತವನ್ನು ತನ್ನ ಕಾವಲುನಾಯಿಯನ್ನಾಗಿ(ವಾಚ್‌ಡಾಗ್) ಮಾಡಿಕೊಳ್ಳುವ ಪ್ರಯತ್ನಗಳನ್ನೂ ನಡೆಸಿದೆ.

ಮುಂದಿನ ದಿನಗಳಲ್ಲಿ ಚೀನಾವು ಅಮೆರಿಕಾ ಪ್ರತಿಸ್ಪರ್ಧಿ ಯುರೋಪ ಒಕ್ಕೂಟ, ರಷ್ಯಾ ಮತ್ತಿತರ ದೇಶಗಳೊಂದಿಗೆ ಸೇರಿ ಜಾಗತಿಕ ಮಟ್ಟದಲ್ಲಿಯೂ ಅಮೆರಿಕಾಕ್ಕೆ ಸ್ಫರ್ದೆಯನ್ನು ನೀಡುವ ಸಾಧ್ಯತೆಯನ್ನು ಊಹಿಸಿರುವ ಅಮೆರಿಕಾವು ಅದನ್ನು ಆಗಗೊಡದಂತೆ ಮಾಡಲು ತನ್ನೆಲ್ಲ ಪ್ರಯತ್ನಗಳನ್ನು ನಡೆಸುತ್ತಿದೆ.

 

ಪರಾಮರ್ಶನ ಗ್ರಂಥಗಳು

೧. ಜುದ್ದ್ ಬರ್ಬಾರ, ೧೯೬೯. ಎ ನ್ಯೂ ಹಿಸ್ಟರಿ ಆಫ್ ದಿ ಯುನೈಟೆಡ್ ಸ್ಟೇಟ್ಸ್ ಆನ್ ಎನ್‌ಕ್ವೈರಿ ಅಪ್ರೋ ನ್ಯೂಯಾರ್ಕ್.

೨. ಮೋಹನ್ ವೈ.ಆರ್., ೨೦೦೬. ಅಮೆರಿಕಾಯಣ, ಬೆಂಗಳೂರು: ಅಭಿನವ ಪ್ರಕಾಶನ.

೩. ಲೂಥರ್ ಎನ್. ಲಕ್ಡಟ್ಕೆ(ಸಂ), ೧೯೮೮. ಮೇಕಿಂಗ್ ಅಮೆರಿಕಾ, ನವದೆಹಲಿ

೪. ವಾನ್‌ವುಡ್ ವರ್ಡ್ ಸಿ.(ಸಂ), ೧೯೭೮, ಎ ಕಂಪೇರಿಟಿವ್ ಅಪ್ರೋ ಟು ಅಮೆರಿಕನ್ ಹಿಸ್ಟರಿ, ವಾಷಿಂಗ್‌ಟನ್ ಡಿ.ಸಿ.

೪. ಹರ್ಮನ್ ಎಲ್.ಕ್ರೋ ಮತ್ತಿತರರು, ೧೯೭೧. ಅಮೆರಿಕನ್ ಹಿಸ್ಟರಿ: ಎ ಪ್ರಾಬ್ಲಮ್ಸ್ ಅಪ್ರೋ ಸಂಪುಟ ೧, ನ್ಯೂಯಾರ್ಕ್