• ಕ್ರೂರ, ದುಷ್ಟ, ಭ್ರಷ್ಟ, ಶೋಷಕ, ಹಿಂಸಕ, ಸುಖಲೋಲುಪ್ತ ಸರ್ವಾಧಿಕಾರಿಯನ್ನು ಜನರು ಅಧಿಕಾರದಿಂದ ಕಿತ್ತು ಹಾಕಬಹುದು ಎಂದು ಕ್ಯೂಬಾದ ೧೯೪೦ರ ಸಂವಿಧಾನವನ್ನು ಮತ್ತು ಅಲ್ಲಿಯ ಪ್ರಜಾಪ್ರಭುತ್ವ ಪರಂಪರೆಯ, ಕಾನೂನು ಮತ್ತು ನ್ಯಾಯಶಾಸ್ತ್ರವನ್ನು ಎತ್ತಿ ತೋರಿಸಿದರು. ಪೂರಕವಾಗಿ ಭಾರತ, ಗ್ರೀಸ್, ರೋಮ್, ಯುರೋಪ್, ಮತ್ತಿತರ ಪ್ರಾಚೀನ ಸಂಸ್ಕೃತಿಗಳನ್ನು ಮತ್ತು ದಾರ್ಶನಿಕರನ್ನು ಉದಾಹರಿಸಿ ತಿಳಿಸಿದರು. ಫ್ರೆಂಚ್ ಕ್ರಾಂತಿ, ಪ್ಯಾರಿಸ್ ಕಮ್ಯುನ್, ರಷ್ಯಾ ಕ್ರಾಂತಿ, ಚೀನಾ ಕ್ರಾಂತಿ, ವಿಯಟ್ನಾಂ ಕ್ರಾಂತಿ, ರಾಷ್ಟ್ರೀಯ ವಿಮೋಚನಾ ಸಮರಗಳ ಅನುಭವಗಳನ್ನು ಉದಾಹರಿಸಿ ೧೯೫೩ರ ಕ್ರಾಂತಿಯನ್ನು ಸಮರ್ಥಿಸಿಕೊಂಡರು. ಜನ ಬೆಂಬಲವಿರುವ ಕ್ರಾಂತಿ ನ್ಯಾಯಯುತ ಎಂದೂ, ಜನ ಬೆಂಬಲ ಇಲ್ಲದ ಸರ್ವಾಧಿಕಾರ ಕಾನೂನು ಬಾಹಿರ ಎಂದೂ, ಪ್ರಜಾಪ್ರಭುತ್ವದಲ್ಲಿ ಜನರೇ ಸಾರ್ವಭೌಮರು ಎಂದೂ ವಾದಿಸಿದರು.
 • ೧೯೫೩ರ ಕ್ರಾಂತಿಗೆ ಶೇ.೯೫ ರಷ್ಟು ದುಡಿಯುವ ಜನರ ಬೆಂಬಲ ಇದೆ ಎಂದೂ, ಶೇ.೫ರಷ್ಟು ಇರುವ ಪರಾನ್ನ ಜೀವಿಗಳು, ಸುಖದ ಸುಪ್ಪತ್ತಿಗೆಯಲ್ಲಿರುವ ಆಸ್ತಿವಂತ ಅಗರ್ಭ ಶ್ರೀಮಂತರು ಮಾತ್ರ ಈ ಕ್ರಾಂತಿಯನ್ನು ವಿರೋಧಿಸುತ್ತಿರುವರೆಂದು ದೃಢಪಡಿಸಿದರು. ಆ ಕ್ರಾಂತಿಯ ಸಂದರ್ಭದಲ್ಲಿನ ಕ್ಯೂಬಾದ ಜನರ ಆರ್ಥಿಕ ಸ್ಥಿತಿಗತಿಯನ್ನು ಹೀಗೆ ವರ್ಣಿಸುತ್ತಾರೆ.
 • ೬೦೦,೦೦೦ ನಿರುದ್ಯೋಗಿಗಳು ಕೆಲಸಕ್ಕಾಗಿ ಊರು ಪರವೂರು ಅಲೆಯುತ್ತಿದ್ದಾರೆ. ಕಳ್ಳತನದಂತಹ ಅಪರಾಧಗಳಲ್ಲಿ ತೊಡಗಿರುತ್ತಾರೆ. ೫೦೦,೦೦೦ ಜನರು ಶ್ರೀಮಂತರ ಹೊಲಗಳಲ್ಲಿ ದುಡಿಯುತ್ತಾರೆ. ಅವರಿಗೆ ವರ್ಷಕ್ಕೆ ೪ ತಿಂಗಳಷ್ಟು ಕೆಲಸ, ಅತ್ಯಂತ ಕಡಿಮೆ ಕೂಲಿ, ಅವರು ಭೂರಹಿತರು, ಅನಕ್ಷರಸ್ಥರು, ಅನಾರೋಗ್ಯ ಪೀಡಿತರು, ಎಲ್ಲ ಸೌಲಭ್ಯಗಳಿಂದ ವಂಚಿತರು.
 • ೪೦೦,೦೦೦ ಕೈಗಾರಿಕಾ ಕಾರ್ಮಿಕರು. ಕಡಿಮೆ ಕೂಲಿಯಲ್ಲಿ ದುಡಿಯುತ್ತಿರುವವರು. ಇವರು ಶಿಕ್ಷಣ, ಆರೋಗ್ಯ, ವಸತಿ ಸೌಕರ್ಯಗಳಿಂದ ವಂಚಿತರು. ಸಾಲಗಾರರಿಂದ ಪೀಡಿತರು, ಅನಿರ್ದಿಷ್ಟ ಕಾಲಾವಧಿ ದುಡಿತ, ಯಾವತ್ತೂ ಕೆಲಸದಿಂದ ಕಿತ್ತು ಹಾಕಬಹುದು ಎಂಬ ಅಭದ್ರತೆ, ಸ್ಮಶಾನದಲ್ಲಿ ಮಾತ್ರ ಅವರಿಗೆ ವಿಶ್ರಾಂತಿ.
 • ೧೦೦,೦೦೦ ಸಣ್ಣ ರೈತರು, ಬೇರೆಯವರ ಹೊಲದಲ್ಲಿ ದುಡಿಯುವರು. ಒಕ್ಕಲಿಗರು, ತಮ್ಮ ದುಡಿಮೆಯ ಸಿಂಹಪಾಲನ್ನು ಧನಿಗಳಿಗೆ ಒಪ್ಪಿಸಬೇಕಾದವರು. ತಲೆತಲಾಂತರದಿಂದ ಒಂದು ತುಂಡು ಭೂಮಿ ತಮ್ಮ ಸ್ವಂತದ್ದಾಗಿ ಮಾಡಿಕೊಳ್ಳಲಾರದವರು, ಜೀವನವಿಡೀ ಬೇರೆಯವರಿಗೆ ಬಿಟ್ಟಿ ದುಡಿದು ಸಾಯುವವರು.
 • ೩೦೦,೦೦೦ ಶಿಕ್ಷಕರು, ಅಧ್ಯಾಪಕರು, ಮುಂದಿನ ಜನಾಂಗವನ್ನು ರೂಪಿಸುವುದು, ಇವರಿಗೆ ಕಡಿಮೆ ವೇತನ, ಯಾವುದೇ ಸೌಲಭ್ಯಗಳಿಲ್ಲ, ಹೆಚ್ಚು ದುಡಿತ.
 • ೨೦,೦೦೦ ಸಣ್ಣ ಕೈಗಾರಿಕಾ ಉದ್ಯಮಿಗಳು, ಸಾಲದಲ್ಲಿ ಮುಳುಗಿದವರು, ಅಧಿಕಾರಿಗಳಿಗೆ ಲಂಚ ಕೊಟ್ಟು ಸೋತು ಸುಸ್ತಾದವರು.
 • ೧೦,೦೦೦ ಯಾವ ವೃತ್ತಿ ಪ್ರವೀಣರು, ಡಾಕ್ಟರರು, ವಕೀಲರು, ಪ್ರಾಣಿಶಾಸ್ತ್ರಜ್ಞರು, ದಂತ ವಿಜ್ಞಾನಿಗಳು, ಪತ್ರಕರ್ತರು, ಔಷಧಿ ಮಾರಾಟಗಾರರು, ಶಿಲ್ಪಿಗಳು, ಎಂಜನೀಯರು ಗಳು, ಇವರೆಲ್ಲರೂ ಉದ್ಯೋಗಾವಕಾಶಗಳಿಂದ ವಂಚಿತರಾಗಿರುವವರು, ಮಹತ್ವಾಕಾಂಕ್ಷೆ ಯುಳ್ಳವರು. ಇವರಿಗೆ ದೇಶದ ದುಃಸ್ಥಿತಿ ಚೆನ್ನಾಗಿ ತಿಳಿದಿದೆ. ಸಮಾಜದ ಪರಿವರ್ತನೆಗೆ ಹೋರಾಡಲು ಧೈರ್ಯ, ಶೌರ್ಯ, ದೃಢತೆ ಉಳ್ಳವರು.
 • ಬಡ ಸೈನಿಕರು ಹಿಡಿಯ ಅಧಿಕಾರಿಗಳ ಮನೆಗಳಲ್ಲಿ, ಹೊಲಗಳಲ್ಲಿ, ಕಾರ್ಖಾನೆಗಳಲ್ಲಿ ಜೀತದಾಳುಗಳಂತೆ ದುಡಿಯುತ್ತಿದ್ದಾರೆ.

ಈ ಸಮಸ್ತ ದುಡಿಯುವ, ಶೋಷಿತ, ವಿಶಾಲ ಜನಸಮುದಾಯಕ್ಕೆ ೫ ಅಂಶಗಳ ಕಾನೂನುಗಳನ್ನು ಕ್ರಾಂತಿಯ ವಿಜಯದ ನಂತರ ಘೋಷಿಸಬೇಕೆಂದು ಯೋಜಿಸಲಾಗಿತ್ತು. ಇದರ ಪ್ರತಿಗಳನ್ನು ಸರಕಾರದ ಸೈನಿಕರು ನಾಶ ಮಾಡಿದ್ದರು. ಆದರೆ, ಕ್ಯಾಸ್ಟ್ರೊ ತಮ್ಮ ನೆನಪಿನಾಳದಿಂದ ಅವುಗಳನ್ನು ನ್ಯಾಯಾಲಯದ ಮುಂದೆ ಮಂಡಿಸಿದರು. ಮುಖ್ಯವಾಗಿ

೧. ೧೯೪೦ರ ಸಂವಿಧಾನವನ್ನು ಪುನಃ ಜಾರಿಗೊಳಿಸುವುದು, ಮುಂದೆ ಅಗತ್ಯಬಿದ್ದರೆ ತಿದ್ದುಪಡಿ ಮಾಡುವುದು ಜನರಿಗೆ-ಕ್ರಾಂತಿಕಾರಿಗಳಿಗೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳ ಎಲ್ಲಾ ಅಧಿಕಾರ.

೨. ಭೂರಹಿತ ರೈತರಿಗೆ ವ್ಯವಸಾಯಕ್ಕೆ ಭೂಮಿ ಮರು ಹಂಚುವಿಕೆ ಮಾಡುವ ಭೂಸುಧಾರಣಾ ಕಾನೂನು ಜಾರಿಗೊಳಿಸುವುದು. ಒಕ್ಕಲು ಎಬ್ಬಿಸದಂತೆ ಮಾಡುವುದು, ವಿದೇಶಿ ಎಸ್ಟೇಟ್‌ಗಳನ್ನು ಕಾನೂನು ಬಾಹಿರಗೊಳಿಸುವುದು, ಒಬ್ಬ ವ್ಯಕ್ತಿಗೆ ಮತ್ತು ಒಂದು ಸಂಸ್ಥೆಗೆ ಗರಿಷ್ಠ ಭೂಮಿ ನಿರ್ಧರಿಸುವುದು, ಭೂಮಾಲೀಕರಿಗೆ ನ್ಯಾಯಯುತ ಪರಿಹಾರ ನೀಡುವುದು.

೩. ಕಾರ್ಮಿಕರಿಗೆ, ನೌಕರರಿಗೆ ಆಯಾ ಕೈಗಾರಿಕಾ ಸಂಸ್ಥೆಗಳ ಲಾಭ ಗಳಿಕೆಯ ಶೇ.೩೦ರಷ್ಟು ವೇತನ ಮತ್ತಿತರ ಸೌಲಭ್ಯಗಳ ಮೂಲಕ ಕೊಡುವುದು.

೪. ಸಕ್ಕರೆ ಕೈಗಾರಿಕೆಯಲ್ಲಿ ಈ ಪ್ರಮಾಣ ಗರಿಷ್ಠ ಶೇ.೫೫ಕ್ಕೇರಿಸುವುದು. ಮುಟ್ಟುಗೋಲು ಹಾಕುವುದು. ಭ್ರಷ್ಟಚಾರಗಳ, ತೆರಿಗೆಗಳ್ಳರ, ಶೋಷಕರ ಅಪರಾಧಗಳನ್ನು ವಿಚಾರಿಸಿ ಶಿಕ್ಷೆ ನೀಡಲು ವಿಶೇಷ ನ್ಯಾಯಾಲಯಗಳ ಸ್ಥಾಪನೆ. ಈ ಮೂಲದಿಂದ ಸಂಗ್ರಹಿಸಿದ ಸಂಪನ್ಮೂಲದ ಅರ್ಧಾಂಶವನ್ನು ನಿವೃತ್ತ ಕಾರ್ಮಿಕರಿಗೆ ಪೆನ್‌ಶನ್ ಪಾವತಿ ಮಾಡಲು ಬಳಸುವುದು. ಉಳಿದವುಗಳನ್ನು ಆಸ್ಪತ್ರೆಗಳನ್ನು ಮತ್ತು ನಿರಾಶ್ರಿತರ ನಿವಾಸಗಳನ್ನು ನಿರ್ಮಿಸಲು, ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಬಳಸುವುದು.

ಭೂಸುಧಾರಣೆ, ಕೈಗಾರಿಕೀಕರಣ, ಕೆಲವು ಕೈಗಾರಿಕೆಗಳನ್ನು ಸಾರ್ವಜನಿಕ ಕ್ಷೇತ್ರಕ್ಕೆ ತರುವುದು ಮತ್ತು ಎಲ್ಲರಿಗೂ ವಸತಿ, ಶಿಕ್ಷಣ, ಆರೋಗ್ಯ ಸೌಲಭ್ಯಗಳಂತಹ ಸುಧಾರಣೆ ಗಳನ್ನು ಜನರು ಶತಮಾನಗಳಿಂದ ನಿರೀಕ್ಷಿಸುತ್ತಲೇ ಇದ್ದರು. ಅಧಿಕಾರಕ್ಕೆ ಬಂದವರೆಲ್ಲಾ ಇವುಗಳ ಕುರಿತು ಜನರಿಗೆ ಆಶ್ವಾಸನೆಗಳನ್ನು ಮಾತ್ರ ಕೊಡುತ್ತಾ ಮೋಸ ಮಾಡುತ್ತಿದ್ದರು. ಕ್ಯೂಬಾದ ಕ್ರಾಂತಿ ಈ ಕನಸುಗಳನ್ನು ನನಸು ಮಾಡಲಿದೆ. ಹೀಗಾಗಿ ಜನರು ಕ್ರಾಂತಿಯನ್ನು ಬಲವಾಗಿ ಬೆಂಬಲಿಸುತ್ತಾರೆ. ದೇಶದ ಅಭಿವೃದ್ದಿ ಕೇವಲ ಬಿಲಿಯಾಧಿಪತಿಗಳಿಂದ ಆಗಲಾರದು. ಶೋಷಕರಿಂದ ೧.೫. ಬಿಲಿಯ ಪಿಸೋಕ ವಶಪಡಿಸಿಕೊಂಡು ದೇಶದ ಅಭಿವೃದ್ದಿ ಸಾಧಿಸಬಹುದು. ದುಡಿಯುವ ಜನರ-ರೈತ ಕಾರ್ಮಿಕ ಬಹುಸಂಖ್ಯಾತರ ಉತ್ಪಾದನಾ ಶಕ್ತಿಗಳನ್ನು ಹೆಚ್ಚಿಸುವ ಮೂಲಕವೇ ಅಭಿವೃದ್ದಿ ಸಾಧ್ಯ ಎಂದು ವಾದಿಸಿದರು.

 • ೧೯೫೬ರ ಕ್ರಾಂತಿಗೆ ಹೊರಗಿನವರಿಂದ ಅಥವಾ ಒಳಗಿನವರಿಂದ ಹಣ ಪಡೆಯಲಿಲ್ಲ. ಯುವ ಕ್ರಾಂತಿಕಾರಿಗಳು ತಮ್ಮ ಗಳಿಕೆಯ, ಉಳಿತಾಯದ, ಖಾಸಗೀ ಸರಕು ಸಾಮಗ್ರಿಗಳ ಮಾರಾಟದಿಂದ, ತ್ಯಾಗದಿಂದ, ಶಸ್ತ್ರಾಸ್ತ್ರ ಖರೀದಿಸಲು ಧನಸಹಾಯ ಮಾಡಿರುವುದನ್ನು ಎತ್ತಿ ತೋರಿಸಿದರು. ಬಾಟಿಸ್ಟಾ ಸರಕಾರ ಬಿಲಿಯಗಟ್ಟಲೇ ಖರ್ಚು ಮಾಡುತ್ತಿದೆ. ದೇಶ ಹರಾಜು ಹಾಕುತ್ತಿದೆ. ಆದರೆ, ದೇಶದ ರಕ್ಷಣೆಗೆ ಅದು ಸಂಪನ್ಮೂಲ ಒದಗಿಸುತ್ತಿಲ್ಲ ಎಂದು ಟೀಕಿಸಿದರು.
 • ಕ್ಯಾಸ್ಟ್ರೊ ತಮ್ಮ ಸುದೀರ್ಘ ವಾದದಲ್ಲಿ ಸರ್ವಾಧಿಕಾರಿ ಬಾಟಿಸ್ಟಾ ಪ್ರಭುತ್ವ ಹೇಗೆ ಅಮೆರಿಕ ಸಾಮ್ರಾಜ್ಯದ ಎಂಜಲು ತಿನ್ನುವ ನಾಯಿ ಎಂದು ತೋರಿಸಿಕೊಟ್ಟರು. ೧೯೫೩ರ ಕ್ರಾಂತಿಯ ಸೋಲುಗೆಲುವುಗಳ ಕುರಿತು ವಿಮರ್ಶೆ ಮಾಡಿದರು. ಆ ಮೂಲಕ ಮುಂದಿನ ಧೃಢ ಹೆಜ್ಜೆಗೆ ಮಾರ್ಗದರ್ಶನ ನೀಡಿದರು. ಸಮಾಜವಾದವನ್ನು ಸಾಮ್ರಾಜ್ಯ ಶಾಹಿಯಿಂದ ರಕ್ಷಿಸಿಕೊಳ್ಳಲು ಇವರ ವಾದ ಸರಣಿ ದಿವ್ಯಾಸ್ತ್ರವಾಗಿದೆ.
 • ಕ್ಯಾಸ್ಟ್ರೊ ತಮ್ಮ ವಾದವನ್ನು ಹೀಗೆ ಮುಕ್ತಾಯಗೊಳಿಸುತ್ತಾನೆ.

ನಾನು ನನ್ನ ವಾದ ಮುಗಿಸುತ್ತೇನೆ, ಆದರೆ ಎಲ್ಲಾ ವಕೀಲರಂತೆ ನಾನು ಅಪರಾಧಿಯನ್ನು ಬಿಟ್ಟುಬಿಡಿ ಎಂದು ಕೇಳುತ್ತಿಲ್ಲ. ನನಗೆ ನಾನೇ ಸ್ವಾತಂತ್ರ್ಯ ಬಿಡುಗಡೆ ಕೇಳುತ್ತಿಲ್ಲ. ತನ್ನ ಒಡನಾಡಿಗಳು ಜೈಲಿನಲ್ಲಿ ಕೊಳೆಯುತ್ತಿರುವಾಗ ನನ್ನನ್ನು ಅಲ್ಲಿಗೇ ಕಳುಹಿಸಿರಿ. ಅವರನ್ನು ಸೇರಿಕೊಳ್ಳಲು, ಅವರ ಅದೃಷ್ಟವನ್ನು ಹಂಚಿಕೊಳ್ಳಲು ನಾನು ಬಯಸುತ್ತೇವೆ, ಗಣರಾಜ್ಯದಲ್ಲಿ ರಾಷ್ಟ್ರಧ್ಯಕ್ಷ ಒಬ್ಬ ಕ್ರಿಮಿನಲ್. ಅಪರಾಧಿ ಆದರೆ ಮತ್ತು ಒಬ್ಬ ದರೋಡೆ ಕೋರನಾದರೆ, ಪ್ರಾಮಾಣಿಕ ನಾಗರಿಕರು ಸಾಯುತ್ತಾರೆ. ಜೈಲಿನಲ್ಲಿರುತ್ತಾರೆ…. ನಾನು ಜೈಲಿಗೆ ಹೆದರುವುದಿಲ್ಲ. ನಾನು ನನ್ನ ಸಂಗಾತಿಗಳಾದ ೭೦ ಕೈದಿಗಳನ್ನು ಕೊಲೆ ಮಾಡಿದ ಕ್ರೂರಿಗಳಿಗೆ ಹೆದರುವುದಿಲ್ಲ. ನಾನು ಅಪರಾಧಿ ಎಂದು ನಿಂದಿಸಿರಿ. ನನಗೆ ಅದರ ಬಗ್ಗೆ ಕಾಳಜಿ ಇಲ್ಲ. ಚರಿತ್ರೆ ನನ್ನನ್ನು ನಿರಪರಾಧಿಯನ್ನಾಗಿ ಮಾಡಲಿದೆ.

ಅದು ಮುಂದೆ ೧೯೫೯ರ ಜನವರಿ ೧ರಂದು ನಿಜವಾಯಿತು. ಅಪರಾಧಿಗಳು ನಿರಪರಾಧಿ ಗಳಾದರು. ಅಪರಾಧ ಹೊರಿಸಿದವರು ನಿಜವಾದ ಅಪರಾಧಿಗಳಾದರು!

 • ಭಾರತದ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಸರದಾರ್ ಭಗತ್ ಸಿಂಗ್ ಮತ್ತು ಕಮ್ಯುನಿಸ್ಟ್ ಧುರೀಣರ ಮೇಲೆ ಬ್ರಿಟೀಷ್ ಸಾಮ್ರಾಜ್ಯಶಾಹಿ ಹಲವಾರು ಪಿತೂರಿ ಮೊಕದ್ದಮೆಗಳಲ್ಲಿ ‘‘ರಾಷ್ಟ್ರದ್ರೋಹ’’ದ ಆಪಾದನೆ ಹೇರಿದಾಗ ತಮ್ಮನ್ನು ಮತ್ತು ತಾವು ನಂಬಿದ ಉದಾತ್ತ ತತ್ವ ಸಿದ್ಧಾಂತಗಳನ್ನು ಬೆಂಬಲಿಸಿ ಮಾಡಿದ ವಾದ ಸರಣಿಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. ದುಡಿಯುವ ಜನರ ಹೋರಾಟದ ಶ್ರೀಮಂತ ಪರಂಪರೆ ಎಲ್ಲಾ ದೇಶಗಳಲ್ಲಿ, ಎಲ್ಲಾ ಕಾಲಗಳಲ್ಲಿ ಒಂದೇ ಎಂಬುದನ್ನು ಕ್ಯಾಸ್ಟ್ರೊ ವಾದ ಸರಣಿ ರುಜುವಾತುಗೊಳಿಸಿದೆ.

೧೯೫೯ರ ಕ್ರಾಂತಿಸತ್ವಪರೀಕ್ಷೆ

ಕ್ಯೂಬನ್ ಕ್ರಾಂತಿಗೆ ಕ್ಯಾಸ್ಟ್ರೊ ಮತ್ತು ಅವರ ಸಂಗಾತಿಗಳೊಂದಿಗೆ ೧೯೫೫ರಲ್ಲಿ ಅರ್ಜೆಂಟೈನಾ ಮೂಲದ ಇನ್ನೊಬ್ಬ ೨೭ ವರ್ಷ ಪ್ರಾಯದ ಮಹಾನ್ ಯುವಚೇತನ ಅರ್ನೆಸ್ಟೊ ಚೆ ಗುವಾರಾ ಸೇರಿಕೊಂಡರು. ಕ್ರಾಂತಿಗೆ ಬೆಂಕಿ, ಗಾಳಿ ಸೇರಿದಂತಾಯಿತು. ಅವರು ವೃತ್ತಿಯಲ್ಲಿ ವೈದ್ಯಕೀಯ ಪದವೀಧರರಾಗಿದ್ದರು. ವಿದ್ಯಾರ್ಥಿ ದೆಸೆಯಲ್ಲಿ ಸಾಹಸವಾದಿಗಳಾಗಿ ಲ್ಯಾಟಿನ್ ಅಮೆರಿಕದ ಹಲವಾರು ದೇಶಗಳನ್ನು ಸುತ್ತಿಕೊಂಡು ಬಂದು ಜನರ ಸುಖಕಷ್ಟಗಳನ್ನು ಕಂಡುಕೊಂಡರು. ಅವರು ತಮ್ಮ ಮಾತಿನ ಉದ್ದಕ್ಕೂ ಮಧ್ಯೆ ಮದ್ಯೆ ‘ಜೆ.ಜೆ.’ ಎನ್ನುತ್ತಿದ್ದುದರಿಂದ ಸಂಗಾತಿಗಳು ಪ್ರೀತಿಯಿಂದ ಇವರ ಹೆಸರಿಗೆ ‘ಚೆ’ ಎಂದು ಖಾಯಂ ಆಗಿ ಸೇರಿಸಿದರು. ಚೆ ಸ್ವಲ್ಪ ಕಾಲದ ಮಟ್ಟಿಗೆ ಮೆಕ್ಸಿಕೋದಲ್ಲಿ ವೈದ್ಯಕೀಯ ವೃತ್ತಿ ನಡೆಸಿ, ನಂತರ ೧೯೫೬ರಿಂದ ೧೯೫೯ರವರೆಗೆ ಕ್ಯೂಬಾದ ಕ್ರಾಂತಿಯಲ್ಲಿ ನೇರವಾಗಿ ಪಾಲ್ಗೊಂಡರು. ‘‘ಗ್ರಾನ್ ಮೂ’’ (ನಿಜಾರ್ಥ ಅಜ್ಞ) ಎಂಬ ಹಡಗದಲ್ಲಿ ಸಶಸ್ತ್ರ ಕ್ರಾಂತಿಕಾರರು ಕ್ಯೂಬಾಕ್ಕೆ ಬರಲು ಮತ್ತು ಮುಂದಿನ ಕ್ರಾಂತಿಯ ಕಾರ್ಯಾಚರಣೆಗೆ ಯೋಜನೆ ಸಿದ್ಧಗೊಳಿಸಿದರು. ಅದರಂತೆ ೧೯೫೬ರ ಡಿಸೆಂಬರ್ ೨ರಂದು ‘ಗ್ರಾನ್ ಮೂ’ ಹಡಗು ಕ್ಯೂಬಾದ ದಡ ಸೇರಿತು. ಕ್ರಾಂತಿಯ ಮೊದಲ ಗುಂಡು ಹಾರಿದ್ದು ಸಾಂಟಿಯಾಗೊ ನಗರದಲ್ಲಿ ಕ್ಯೂಬಾದ ಕ್ರಾಂತಿಯ ತೊಟ್ಟಿಲಲ್ಲಿ, ೧೯೫೮ರಲ್ಲಿ ಆರಂಭವಾದ ಕಾರ್ಯಾಚರಣೆ ೧೯೫೯ರ ಜನವರಿ ೧ರಂದು ಯಶಸ್ವಿಯಾಗಿ ಮುಕ್ತಾಯಗೊಂಡಿತು. ಬಾಟಿಸ್ಟಾ ಪದಚ್ಯುತಿ ಗೊಂಡು ದೇಶ ಬಿಟ್ಟು ಹೋಗಬೇಕಾಯಿತು. ಆಗ ಕ್ಯಾಸ್ಟ್ರೊ ಮತ್ತು ಚೆ ಅವರೊಡನೆ ಇದ್ದ ಕ್ರಾಂತಿಕಾರಿ ಸೈನ್ಯ ೧೦೦೦ಕ್ಕಿಂತಲೂ ಕಡಿಮೆ; ಜಗತ್ತಿನ ಬಲಿಷ್ಠ ಬಂಡವಾಳಶಾಹಿ ಸಾಮ್ರಾಜ್ಯಶಾಹಿ ದೇಶವಾದ ಅಮೆರಿಕದ ಮಗ್ಗುಲಲ್ಲೇ ಸಮಾಜವಾದದ ಬಾವುಟವನ್ನು ಕ್ಯೂಬಾ ಹಾರಿಸಿತು. ಸಹಜವಾಗಿಯೇ ಸಾಮ್ರಾಜ್ಯಶಾಹಿಯ ಮಗ್ಗುಲು ಮುಳ್ಳಾಗಿಯೇ ಉಳಿಯಿತು.

ಚೆ ಕ್ಯೂಬಾದ ಕ್ರಾಂತಿಯ ಸೇನೆಯ ನಾಯಕರಾದರು. ನಂತರ ಕ್ಯೂಬಾದ ಗೌರವಾನ್ವಿತ ನಾಗರಿಕರಾದರು. ಅಲ್ಲಿಯೇ ಒಬ್ಬಾಕೆಯನ್ನು ಮದುವೆಯಾಗಿ ಎರಡು ಮಕ್ಕಳನ್ನು ಪಡೆದರು. ಕ್ಯೂಬಾದ ಕೃಷಿ ಕೈಗಾರಿಕೆ ಸಚಿವಾರಾದರು ಮತ್ತು ಯೋಜನಾ ಮಂಡಳಿಯ ಸದಸ್ಯರಾದರು. ೧೯೬೦ರಲ್ಲಿ ಅಮೆರಿಕಾ ಪ್ರೇರಿತ ‘‘ಬೇ ಆಫ್ ಪಿಗ್ಸ್-ಹಂದಿಗಳ ಅಖಾತ’’ ಮೂಲಕ ಕ್ಯೂಬಾದ ಮೇಲೆ ನಡೆಸಿದ ಆಕ್ರಮಣವನ್ನು ಹಿಮ್ಮೆಟ್ಟಿಸುವಲ್ಲಿ ಮುಂದಾದರು. ಸೋವಿಯತ್, ಒಕ್ಕೂಟ, ಚೀನಾ, ಭಾರತ ಮತ್ತು ಯುರೋಪ್, ಆಫ್ರಿಕಾ, ಲ್ಯಾಟಿನ್ ಅಮೆರಿಕಾ, ಅರಬ್, ಏಷ್ಯಾ ದೇಶಗಳನ್ನು ಸಂದರ್ಶಿಸಿ ಕ್ಯೂಬಾವನ್ನು ಪ್ರತಿನಿಧಿಸಿ ಅನೇಕ ಸ್ನೇಹ ಸಹಕಾರ ಸೌಹಾರ್ದ ಒಪ್ಪಂದಗಳನ್ನು ಮಾಡಲು ಯಶಸ್ವಿಯಾದರು. ಕ್ಯೂಬಾದ ವಿವಿಧ ಕಮ್ಯುನಿಸ್ಟ್ ಪಕ್ಷಗಳನ್ನು ಒಗ್ಗೂಡಿಸಿ ‘‘ಯುನೈಟೆಡ್ ಪಾರ್ಟಿ ಆಫ್ ಕ್ಯೂಬನ್ ಸೋಶಿಯಲಿಸ್ಟ್ ರೆವಲ್ಯೂಶನ್’’ ಸ್ಥಾಪಿಸಿದರು. ಅದರ ಕೇಂದ್ರ ಸಮಿತಿಯ ಪಾಲಿಟ್ ಬ್ಯೂರೋದ ಸೆಕ್ರೆಟಿರಿಯಟ್‌ನ ಸದಸ್ಯರಾದರು. ವಿಶ್ವಸಂಸ್ಥೆಯಲ್ಲಿ ಮತ್ತು ಅನೇಕ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕ್ಯೂಬಾವನ್ನು ಸಮರ್ಥವಾಗಿ ಪ್ರತಿನಿಧಿಸಿದರು. ಚೆ ‘ಗೊರಿಲ್ಲಾ ಯುದ್ಧ’ ಮತ್ತು ‘ಬೊಲಿವಿಯಾ ದಿನಚರಿ’ ಎಂಬ ಎರಡು ಗ್ರಂಥಗಳನ್ನು ರಚಿಸಿ ಜಾಗತಿಕ ಕ್ರಾಂತಿಗೆ ಅಪೂರ್ವ ಕಾಣಿಕೆ ಸಲ್ಲಿಸಿದರು. ೧೯೬೫ರ ಅಂತ್ಯದಲ್ಲಿ ಚೆ ಕ್ಯೂಬಾ ಬಿಟ್ಟು ಬೊಲಿವಿಯಾ ದೇಶದ ಕ್ರಾಂತಿಯಲ್ಲಿ ಪಾಲ್ಗೊಳ್ಳಲು ತೆರಳಿದರು. ಅಲ್ಲಿ ಸ್ವಲ್ಪ ಕಾಲ ತನ್ನ ಅಭೂತಪೂರ್ವ ಸೇವೆ ಸಲ್ಲಿಸಿದರು. ಆದರೆ ೧೯೬೫ರ ಅಕ್ಟೋಬರ್ ೮ರಂದು ಪ್ರತಿಕ್ರಾಂತಿಕಾರಿಗಳು ಚೆಯನ್ನು ಕೊಲೆ ಮಾಡಿದರು. ಚೆ ವೈದ್ಯ, ರಾಜಕಾರಣಿ, ಕ್ರಾಂತಿಕಾರಿ, ಕವಿ, ಪತ್ರಕರ್ತ, ಪ್ರವಾಸಿ, ಜನನಾಯಕ ಆಗಿ ಕ್ಯೂಬಾದ ಮತ್ತು ಲ್ಯಾಟಿನ್ ಅಮೆರಿಕ, ಏಷ್ಯಾ, ಆಫ್ರಿಕಾ, ಏಷ್ಯಾದ ದುಡಿಯುವ ಜನರ ಕಣ್ಮಣಿ ಆಗಿದ್ದಾರೆ ಮತ್ತು ಅವರ ಹೃದಯ ಮನಸ್ಸುಗಳಲ್ಲಿ ಅಮರರಾಗಿ ಉಳಿದಿದ್ದಾರೆ. ‘‘ಜಗತ್ತಿನಲ್ಲಿ ಪ್ರತಿ ಒಬ್ಬರಿಗೂ ಒಂದು ಸೂರ್ಯ, ಒಂದು ಚಂದ್ರ -ಹಾಗೆಯೇ ಒಬ್ಬ ಚೆ ಗುವಾರಾ’’ ಎಂದಾಗಿದ್ದಾರೆ!

ಕ್ರಾಂತಿಯ ನಂತರ ಕ್ಯೂಬಾದಲ್ಲಿ ಭೂ ಸುಧಾರಣೆಗಳು ಪ್ರಾರಂಭವಾದೊಡನೇ, ಕ್ಯೂಬಾದ ವಿರುದ್ಧ ಅಮೆರಿಕದ ಪರೋಕ್ಷ ಹಾಗೂ ಪ್ರತ್ಯಕ್ಷ ಆಕ್ರಮಣ ಪ್ರಾರಂಭವಾಯಿತು. ವಿಶ್ವಸಂಸ್ಥೆಯ ಎಲ್ಲಾ ಪ್ರಣಾಳಿಕೆಗಳನ್ನು ಉಲ್ಲಂಘಿಸಲಾಯಿತು. ಇಲ್ಲಿ ಅಮೆರಿಕದ ಕಂಪನಿಗಳು ೧೦೦೦೦, ೫೦೦೦೦, ೧೫೦೦೦ ಹೆಕ್ಟೇರುಗಳ ಗಾತ್ರದ ಎಸ್ಟೇಟ್‌ಗಳನ್ನು ಹೊಂದಿದ್ದವು. ಭೂಸುಧಾರಣೆಯಿಂದ ಈ ಭೂ ಹಿಡುವಳಿಗಳು ಕ್ಯೂಬಾದ ಭೂಹೀನ ಬಡ ರೈತರಿಗೆ ಮರು ಹಂಚಿಕೊಡಲಾಯಿತು. ಕ್ರಾಂತಿಯ ಮುಖಂಡರ ಮುಖ್ಯವಾಗಿ ಕ್ಯಾಸ್ಟ್ರೊ ಅವರನ್ನು ಕೊಲ್ಲಲು ಪಿತೂರಿಗಳನ್ನು ಯೋಜಿಸಲಾಯಿತು. ಕ್ರಾಂತಿಪೂರ್ವದಲ್ಲಿ ೧೯೫೪ರಲ್ಲಿ ಅಮೆರಿಕದ ಬಾಡಿಗೆ ಕೊಲೆಗಡುಕರು ೫೦೦೦೦ ಕ್ಯೂಬನ್ನರನ್ನು ಹತ್ಯೆ ಮಾಡಿದ್ದರು. ಕ್ರಾಂತಿಯ ನಂತರದಿಂದ ಇಂದಿನವರೆಗೂ ೪೨ ವರ್ಷಗಳಲ್ಲಿ ನೂರಾರು ಬಾರಿ ನಡೆಸಿದ ಇಂತಹ ಪ್ರಯತ್ನಗಳನ್ನು ಕ್ಯೂಬಾ ವಿಫಲಗೊಳಿಸಿದೆ.

೧೯೫೯ರ ಕೊನೆಯಲ್ಲಿ ಕ್ಯೂಬಾ ಅಮೆರಿಕದ ಯುದ್ಧ ವಿಮಾನಗಳ ದಾಳಿಗೊಳಗಾದ ಯೋಧರ ಶವಸಂಸ್ಕಾರ ಮಾಡುವಾಗ ನಡೆದ ಘಟನೆ ಗಮನಾರ್ಹವಾದುದು. ಆ ವಿಮಾನಗಳಲ್ಲಿ ಕ್ಯೂಬಾದ ರಾಷ್ಟ್ರ ಧ್ವಜವನ್ನಿಟ್ಟುಕೊಂಡು ಹಾರಿಸುತ್ತಾ ಕ್ಯೂಬನ್ನರು ಅದು ತಮ್ಮ ವಿಮಾನಗಳೆಂದೇ ತಿಳಿಯುವಂತೆ ಮಾಡಿ ಮೋಸ ಮಾಡಲಾಗಿತ್ತು! ಅಮೆರಿಕಾದ ರಾಯಭಾರಿ ಸ್ಟೀವನ್‌ಸನ್ ವಿಶ್ವಸಂಸ್ಥೆಯಲ್ಲಿ ಈ ವಿಮಾನಗಳು ಕ್ಯೂಬಾದ ವಿರೋಧ ತಂಡದವುಗಳೆಂದು ಸುಳ್ಳು ಹೇಳಿದ್ದರು. ಅಷ್ಟರಲ್ಲಿ ಅಮೆರಿಕಾದ ಯುದ್ಧ ವಿಮಾನಗಳು ಕ್ಯೂಬಾದ ಸಣ್ಣ ವಿಮಾನ ಪಡೆಯ ಅರ್ಧಾಂಶವನ್ನು ನಾಶಪಡಿಸಿದ್ದವು. ಕ್ಯೂಬಾದಲ್ಲಿ ಗಂಭೀರ ಪರಿಸ್ಥಿತಿಗಳು ಉದ್ಭವಿಸುತ್ತಿದ್ದವು. ಕಬ್ಬಿನ ತೋಟಕ್ಕೆ ಬೆಂಕಿ ಇಟ್ಟು ಧ್ವಂಸ ಮಾಡಲಾಯಿತು. ಹಡಗು ಒಂದನ್ನು ಸಿಡಿಸಿ, ಕೆಡವಿ ೧೦೧ ಕ್ಯೂಬನ್ನರನ್ನು ಸಾವಿಗೀಡು ಮಾಡಲಾಯಿತು. ಅಲ್ಲಲ್ಲಿ ಸಮುದ್ರಗಳ್ಳರು ಬಾಂಬು ಸಿಡಿಸಿ ಬೆದರಿಕೆ ಒಡ್ಡಿದರು.

೧೯೬೦ನೆಯ ಮಾರ್ಚ್ ೧೭ರಂದು ಅಮೆರಿಕಾದ ಉಪರಾಷ್ಟ್ರಪತಿ ರಿಚರ್ಡ್ ನಿಕ್ಸನ್ ಮತ್ತು ವರಿಷ್ಟ ಸೇನಾ ನಾಯಕರು, ವಿದೇಶಾಂಗ ಖಾತೆಯ ಉನ್ನತ ಅಧಿಕಾರಿಗಳು, ಸಿ.ಐ.ಎ. ನಿರ್ದೇಶಕರು ಮತ್ತು ಇತರ ಹಿರಿಯ ಅಧಿಕಾರಿಗಳು, ಮತ್ತು ಇತರರು ಅಧ್ಯಕ್ಷ ಐಸನ್ ಹೋವರ ಅವರ ಅನುಮತಿ ಪಡೆದು ‘‘ಕ್ಯೂಬಾದ ಕ್ಯಾಸ್ಟ್ರೊ ಆಳ್ವಿಕೆಯನ್ನು ಕೊನೆಗೊಳಿಸಲು ಒಂದು ಕಾರ್ಯ ಯೋಜನೆ’’ಯನ್ನು ರಹಸ್ಯವಾಗಿ ಸಿದ್ಧಗೊಳಿಸಿದರು. ಈ ಎಲ್ಲಾ ಅಧಿಕಾರಿಗಳು ಈ ಪಿತೂರಿ ಕುರಿತು ಅಧ್ಯಕ್ಷ ಐಸನ್ ಹೋವರ್ ಅವರಿಗೆ ಏನೂ ತಿಳಿಯದೆಂದು ವರ್ತಿಸಬೇಕೆಂದು ಪ್ರತಿಜ್ಞೆ ಸ್ವೀಕರಿಸಿದರು. ಇದಕ್ಕೆ ಬೇಕಾದ ಸಂಘಟನಾ ಸಂರಚನೆ ಮತ್ತು ಹಣಕಾಸು ನೆರವು ಒದಗಿಸಲಾಯಿತು. ಈ ಪಿತೂರಿಯ ಎಲ್ಲಾ ದಸ್ತಾವೇಜುಗಳೂ ಅಮೆರಿಕಾದ ಕಾನೂನಿನಂತೆ ೪೦ ವರ್ಷಗಳ ನಂತರ ರಹಸ್ಯದಿಂದ ಬೆಳಕಿಗೆ ಬಂದಿವೆ. ಅವುಗಳ ಸಂಪೂರ್ಣ ಅಧಿಕೃತ ಪ್ರತಿಗಳು ಕ್ಯೂಬಾ ಸರಕಾರಕ್ಕೆ ಈಗ ಸಿಕ್ಕಿವೆ. ಇವುಗಳ ಆಧಾರದಲ್ಲಿ ಕ್ಯೂಬಾ ಅಮೆರಿಕದ ವಿರುದ್ಧ ಡಾಲರ್ ೧೮೧ ಬಿಲಿಯ ಪರಿಹಾರಕ್ಕಾಗಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ದಾವೆ ಮಾಡಿದೆ. ಆ ದಾವೆಯ ಪ್ರತಿಯನ್ನು ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಸಮ್ಮೇಳನ ಒಂದರಲ್ಲಿ ಪಾಲ್ಗೊಂಡು ಪ್ರತಿನಿಧಿಗಳಿಗೆ ವಿತರಣೆ ಮಾಡಲಾಯಿತು.

೧೯೬೨ರಲ್ಲಿ ರಿಪಬ್ಲಿಕನ್ ಪಕ್ಷದ ಬಲಪಂಥಿಯ ಐಸನ್ ಹೋವರ್ ಆಗಲೀ, ರಿಚರ್ಡ್ ನಿಕ್ಸನ್ ಆಗಲೀ ಅಧ್ಯಕ್ಷರಾಗಿರಲಿಲ್ಲ. ಡೆಮಾಕ್ರಟಿಕ್ ಪಕ್ಷದ ಪುರೋಗಾಮಿ ಹಾಗೂ ಜನಪ್ರಿಯರೆಂದೆನಿಸಿದ ಅಧ್ಯಕ್ಷ ಜಾನ್ ಎಫ್ ಕೆನಡಿ ಅಧ್ಯಕ್ಷರಾಗಿದ್ದರು. ೧೯೫೯ರ ಒಳಗೆ ಕ್ಯಾಸ್ಟ್ರೊ ಅವರನ್ನು ಕೊಲೆ ಮಾಡುವ ಯೋಜನೆ ವಿಫಲವಾದಾಗ, ೧೯೬೦ರಲ್ಲಿ ರೂಪಿತವಾದ ಪಿತೂರಿ ಯೋಜನೆಯನ್ನು ೧೯೬೨ರಲ್ಲಿ ಮುಂದುವರಿಸಲಾಯಿತು. ಮುಂದಿನ ೯-೧೦ ತಿಂಗಳುಗಳಲ್ಲಿ ವಿಶ್ವಾಸಾರ್ಹ ಆಂತರಿಕ ದಂಗೆಗಳನ್ನು ಎಬ್ಬಿಸಲು ಸಾಧ್ಯವಿಲ್ಲ ಎಂಬ ಖಾತರಿಪಡಿಸಿಕೊಂಡು, ಕ್ಯೂಬಾವನ್ನು ಹೇಗಾದರೂ ಮಾಡಿ ಕೆರಳಿಸಿ ಅಮೆರಿಕದ ಸಿಟ್ಟಿಗೆ ಗುರಿಯಾಗುವಂತೆ ಮಾಡಿ, ಆ ನೆಪದಿಂದ ಅಮೆರಿಕ ಕ್ಯೂಬಾದ ಮೇಲೆ ಮಿಲಿಟರಿ ದಾಳಿ ನಡೆಸುವುದಾಗಿ ಈ ಅಲ್ಪಕಾಲದ ಯೋಜನೆ ಆಗಿತ್ತು. ಅಮೆರಿಕದ ನೌಕಾ ನೆಲೆಯಲ್ಲಿ ಗಲಭೆಗಳನ್ನೆಬ್ಬಿಸಿ ಕ್ಯೂಬಾದ ಮೇಲೆ ದೂರು ಹಾಕುವುದು, ನೀರು ವಿದ್ಯುತ್ ಸರಬಾರಜಿಗೆ ಸಂಬಂಧಿಸಿ ಅಮೆರಿಕಾ ಆಕ್ರಮಣಕಾರಿ ಕ್ರಮವಹಿಸುವುದು, ಕ್ಯೂಬಾದಿಂದ ಅಮೆರಿಕಕ್ಕೆ ವಲಸೆ ಬಂದ ಪ್ರದೇಶದಲ್ಲಿ ಗಲಭೆ ಎಬ್ಬಿಸಿ ಕ್ಯೂಬಾದ ಮೇಲೆ ಗೂಬೆ ಕೂರಿಸುವುದು, ಅಮೆರಿಕ ಯುದ್ಧ ನೌಕೆಯನ್ನು ಮತ್ತು ವಿಮಾನಗಳನ್ನು ಅವರೇ ಹೊಡೆದುರುಳಿಸಿ ಕ್ಯೂಬನ್ನರ ಮೇಲೆ ದೂರು ಹಾಕುವುದು, ನೀರು ವಿದ್ಯುತ್ ಸರಬರಾಜಿಗೆ ಸಂಬಂಧಿಸಿ ಅಮೆರಿಕಾ ಆಕ್ರಮಣಕಾರಿ ಕ್ರಮ ವಹಿಸುವುದು, ಕ್ಯೂಬಾದಿಂದ ಅಮೆರಿಕಕ್ಕೆ ವಲಸೆ ಬಂದ ಪ್ರದೇಶದಲ್ಲಿ ಗಲಭೆ ಎಬ್ಬಿಸಿ ಕ್ಯೂಬಾದ ಮೇಲೆ ಗೂಬೆ ಕೂರಿಸುವುದು, ಅಮೆರಿಕ ಯುದ್ದ ನೌಕೆಯನ್ನು ಮತ್ತು ವಿಮಾನಗಳನ್ನು ಅವರೇ ಹೊಡೆದುರುಳಿಸಿ ಕ್ಯೂಬನ್ನರ ಮೇಲೆ ದೂರು ಹಾಕುವುದು, ಕ್ಯೂಬನ್ ಹಡಗನ್ನು ಮತ್ತು ವಿಮಾನವನ್ನು ಸಿಡಿಸಿ ರೇಗಿಸುವುದು, ಅಮೆರಿಕಾ ವಿಮಾನಗಳನ್ನು ಕ್ಯೂಬಾದ ಎಂ.ಐ.ಜಿ. ವಿಮಾನಗಳೆಂದು ನಂಬಿಸಿ ಕ್ಯೂಬಾದ ಮೇಲೆ ಆಕ್ರಮಣ ಮಾಡುವುದು, ಇತ್ಯಾದಿ ೨೧ ವಿಧಾನಗಳ ಪಿತೂರಿಯನ್ನು ಯೋಜಿಸಿ ಕಾರ್ಯಗತಗೊಳಿಸಲು ಪ್ರಯತ್ನಿಸಲಾಯಿತು.

೧೯೬೨ರ ಆಗಸ್ಟ್‌ನಲ್ಲಿ ಅಂದರೆ, ಮೇಲಿನ ಯೋಜನೆ ರೂಪಿಸಿದ ೫ ತಿಂಗಳ ನಂತರ, ಇವಾವುದೂ ಫಲಕಾರಿಯಾಗಲಿಲ್ಲ ಎಂದು ಅಮೆರಿಕದ ಮುಖ್ಯ ಸೇನಾನಿ ಅಧ್ಯಕ್ಷ ಕೆನಡಿಗೆ ವರದಿ ಮಾಡುತ್ತಾನೆ. ಪರಿಣಾಮವಾಗಿ ಅಧ್ಯಕ್ಷ ಕೆನಡಿ ಕ್ಯೂಬಾದ ವಿರುದ್ಧ ನೇರ ಮಿಲಿಟರಿ ಕಾರ್ಯಾಚರಣೆಗೆ ಅನುಮತಿ ನೀಡಿದರು. ಈ ಕುರಿತು ಕ್ಯೂಬಾಕ್ಕೆ ಸೋವಿಯತ್ ಒಕ್ಕೂಟದ ಮೂಲಗಳಿಂದ ವಿಶ್ವಸನೀಯವಾಗಿ ಸಾಕಷ್ಟು ಮುಂಚಿತವಾಗಿಯೇ ತಿಳಿಯಿತು. ಅಮೆರಿಕದ ಅಣು ಅಸ್ತ್ರಸಜ್ಜಿತ ಯುದ್ಧ ಹಡಗುಗಳ, ವಿಮಾನಗಳ, ಕ್ಷಿಪಣಿಗಳ ದಾಳಿಯನ್ನು ತಡೆಯಲು ಎಲ್ಲ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಯಿತು. ಕ್ಯೂಬಾದ ರಕ್ಷಣೆಗಾಗಿ ಸೋವಿಯತ್ ಒಕ್ಕೂಟದೊಡನೆ ಒಪ್ಪಂದ ಮಾಡಿಕೊಳ್ಳಲಾಯಿತು. ಅದರಂತೆ ಸೋವಿಯತ್ ಒಕ್ಕೂಟದಿಂದಲೂ ಅಮೆರಿಕಕ್ಕೆ ಸರಿಗಟ್ಟುವ ಯುದ್ಧ ವಿಮಾನಗಳು, ಹಡಗುಗಳು, ಕ್ಷಿಪಣಿಗಳು ಕೆರಿಬಿಯನ್ ಸಮುದ್ರದಲ್ಲಿ ಬಂದು ತಂಗಿದವು. ಸ್ವಲ್ಪ ಕಾಲ ಜಗತ್ತು ಮಹಾ ನಾಶದ ಅಂಚಿಗೆ ಬಂದಿತು!

‘ಕ್ಯೂಬಾದ ಮೇಲಿನ ದಾಳಿ ತನ್ನ ಮೇಲೆ ನಡೆದ ದಾಳಿ’ ಎಂದು ಸೋವಿಯತ್ ಒಕ್ಕೂಟ ಘೋಷಿಸಿ ಘರ್ಜಿಸಿತು. ೧೯೬೧ರಲ್ಲಿಯೇ ‘‘ಬೇ ಆಫ್ ಪಿಗ್ಸ್-ಹಂದಿಗಳ ಅಖಾತ’’ ಮೂಲಕ ಅಮೆರಿಕ ದಾಳಿಯನ್ನು ಎದುರಿಸಿ ಹಿಮ್ಮೆಟ್ಟಿಸಲು ಸೋವಿಯತ್ ಒಕ್ಕೂಟ, ಪೂರ್ವ ಯುರೋಪಿನ ಸಮಾಜವಾದಿ ದೇಶಗಳು ಸಾಕಷ್ಟು ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದವು. ಜಗತ್ತಿನಾದ್ಯಂತ ೧೯೬೨ ಕ್ಷಿಪಣಿಗಳ ಮುಖಾಮುಖಿ ಬಿಕ್ಕಟ್ಟಿನ ಕುರಿತು ಚರ್ಚಿಸಲಾಯಿತು. ಜಾತಿಕ ಅಭಿಪ್ರಾಯ ಸಂಪೂರ್ಣವಾಗಿ ಅಮೆರಿಕಾದ ವಿರುದ್ಧ ತಿರುಗಿಬಿತ್ತು. ಅನಿವಾರ್ಯವಾಗಿ ಅಮೆರಿಕ ಹಿಮ್ಮೆಟ್ಟಬೇಕಾಯಿತು. ಆಪತ್‌ಬಂಧು ಸೋವಿಯತ್ ಒಕ್ಕೂಟ ತನ್ನ ಕ್ಷಿಪಣಿ ಗಳನ್ನು ತೆಗೆಗೆದುಕೊಂಡಿತು. ಸ್ವಲ್ಪಕಾಲ ಮಾತ್ರ ಕ್ಯೂಬಾ ಕ್ರಾಂತಿ ಶಿಶುವಿನ ದಾರಿಯಾಯಿತು. ಸ್ವಾಭಿಮಾನಿ, ಸಾರ್ವಭೌಮ ಕ್ಯೂಬಾ ಯಾವ ಮಿಲಿಟರಿ ಬಣಕ್ಕೂ ಸೇರದೇ, ತನ್ನಲ್ಲಿ ಇನ್ನೊಂದು ವಿಯಟ್ನಾಂ ಮಾದರಿ ಸಾಮ್ರಾಜ್ಯಶಾಹಿ ನೇರ ಪಾಲುಗೊಳ್ಳುವ ಯುದ್ಧ ಆಗದಂತೆ ಎಚ್ಚರವಹಿಸಿತ್ತು. ಅಂದಿನಿಂದ ಇಂದಿನವರೆಗೂ ಕ್ಯೂಬಾ ಆಲಿಪ್ತ ರಾಷ್ಟ್ರವಾಗಿ ಮತ್ತು ಅಲಿಪ್ತ ರಾಷ್ಟ್ರಗಳ, ಅಭಿವೃದ್ದಿ ಹೊಂದುತ್ತಿರುವ ಮೂರನೇ ಜಗತ್ತಿನ ರಾಷ್ಟ್ರಗಳ ಹಿತಾಸಕ್ತಿಗಳಾಗಿ ಜವಾಬ್ದಾರಿಕೆಯಿಂದ ಶ್ರಮಿಸುತ್ತಾ ಬಂದಿತು.

ಕ್ರಾಂತಿಯ ಅಪೂರ್ವ ಸಾಧನೆಗಳು

ಅಮೆರಿಕಾಕ್ಕೆ ಕ್ಯೂಬಾದ ಮೇಲಿನ ಮತ್ಸರಕ್ಕೆ ಕಾರಣಗಳು ಇಲ್ಲದಿಲ್ಲ. ಕ್ಯೂಬಾ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಕಬ್ಬು-ಸಕ್ಕರೆ ಉತ್ಪಾದನಾ ದೇಶವಾಗಿದೆ. ಅದನ್ನು ಜಗತ್ತಿನ ಸಕ್ಕರೆ ಕಣಜ ಎಂದೇ ಕರೆಯಲಾಗುತ್ತಿದೆ. ಇಲ್ಲಿಯ ೨ನೇ ದೊಡ್ಡ ಬೆಳೆ ತಂಬಾಕು. ಹೈನುಗಾರಿಕೆ, ಕೋಳಿಸಾಕಣೆ, ಮೀನುಗಾರಿಕೆಗಳಿಗೂ ಕ್ಯೂಬಾ ಹೆಸರುವಾಸಿಯಾಗಿದೆ. ಕ್ಯೂಬಾ ನಿಕ್ಕಲ್, ತಾಮ್ರ, ಮ್ಯಾಂಗನೀಸ್, ಕ್ರೊಮೈಟ್ ಮುಂತಾದ ಅಮೂಲ್ಯ ಖನಿಜ ಸಂಪತ್ತುಗಳನ್ನು ಹೊಂದಿದೆ. ಸಕ್ಕರೆ, ತಂಬಾಕು, ಬಟ್ಟೆ, ಸಿಮೆಂಟ್, ಆಹಾರ ಸಂಸ್ಕರಣೆ ಗಳು ಈ ದೇಶದ ಮುಖ್ಯ ಕೈಗಾರಿಕೆಗಳು. ಹಾಗೆಯೇ ಸಕ್ಕರೆ, ನಿಕ್ಕಲ್ ಮತ್ತು ೫೦೦ಕ್ಕೂ ಹೆಚ್ಚು ವಿಧಗಳ ಮೀನು ಇಲ್ಲಿನ ಪ್ರಮುಖ ರಫ್ತುಗಳು. ಕ್ಯೂಬಾ ಪ್ರವಾಸೋದ್ಯಮಕ್ಕೆ ವಿಶ್ವದಲ್ಲಿಯೇ ಹೆಸರುವಾಸಿಯಾಗಿದೆ. ಕ್ರಾಂತಿ ಪೂರ್ವದಲ್ಲಿ ಅಮೆರಿಕಾದ ಯಾಂಕಿಗಳು ಕ್ಯೂಬಾವನ್ನು ಸುರಾಪಾನಕ್ಕಾಗಿ ತಮ್ಮ ಮೋಜಿನ ತಾಣವನ್ನಾಗಿ ಬಳಸಿಕೊಂಡಿದ್ದರು. ಕ್ಯೂಬಾ ಸೇರಿದಂತೆ ಲ್ಯಾಟಿನ್ ಅಮೆರಿಕಾ ದೇಶಗಳನ್ನು ಅಮೆರಿಕಾ ತನ್ನ ಹಿತ್ತಲು ಪ್ರದೇಶವನ್ನಾಗಿಸಿ ಅಮೂಲ್ಯ ಸಂಪತ್ತುಗಳನ್ನು ಅತಿ ಅಗ್ಗದಲ್ಲಿ ಕೊಳ್ಳೆ ಹೊಡೆಯುತ್ತಾ ೨ ಶತಮಾನಗಳಿಗಿಂತಲೂ ಹೆಚ್ಚು ಕಾಲ ತನ್ನ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸುತ್ತಾ ಬಂದಿತು. ಕ್ಯೂಬಾ ಸ್ವಾತಂತ್ರ್ಯವಾದರೆ, ಸ್ವಾವಲಂಬಿಯಾದರೆ, ಸಾರ್ವಭೌಮತೆ ಪಡೆದರೆ ಕ್ಯೂಬಾ ಹಾಗೂ ಲ್ಯಾಟಿನ್ ಅಮೆರಿಕಾದಲ್ಲಿಯೇ ತನ್ನ ಬೇಳೆ ಬೇಯಲಾರದೆಂದು, ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ತನಗೆ ಸದಾ ಸವಾಲು ಒಡ್ಡುವುದೆಂದೂ ಅಮೆರಿಕಾಕ್ಕೆ ತೀವ್ರ ಆತಂಕ. ಆದುದರಿಂದಲೇ ಶತಾಯ ಗತಾಯ ಕ್ಯೂಬಾವನ್ನು ಬಗ್ಗು ಬಡಿಯಲು ದಶಕಗಳಿಂದ ಅಮೆರಿಕ ಹತ್ತು ಹಲವು ಪಿತೂರಿಗಳನ್ನು ಹೂಡುತ್ತಿದೆ. ಇವುಗಳನ್ನೆಲ್ಲ ಹಿಮ್ಮೆಟ್ಟಿಸಿ, ಕ್ಯೂಬಾ ಕ್ರಾಂತಿ  ಸ್ವಾತಂತ್ರ್ಯ ಗಳಿಸಿದ ಅಪೂರ್ವ ಸಾಧನೆಗಳನ್ನು ನಾವು ಗಮನಿಸಬಹುದು.

‘‘ಒಂದು ಕ್ರಾಂತಿಯು ಸಾಂಸ್ಕೃತಿಕ ಮತ್ತು ವಿಚಾರಗಳಿಂದಲೇ ಹುಟ್ಟಿ ಬರಲಿದೆ’’ ಎಂದೂ, ‘‘ಸಾರ್ವಭೌಮತೆಗಾಗಿ ನಡೆಯುವ ಹೋರಾಟ ಸಂಸ್ಕೃತಿಗಾಗಿ ನಡೆಯುವ ಹೋರಾಟವೂ ‘ಆಗಿದೆ’’ ಎಂದೂ, ಕ್ಯಾಸ್ಟ್ರೊ ೧೯೯೯ರ ಫೆಬ್ರುವರಿಯಲ್ಲಿ ಕಾರಕಾಸ್‌ನ ವೆನಿಜ್ಯೂವೆಲಾ ವಿಶ್ವವಿದ್ಯಾಲಯದಲ್ಲಿ ಮತ್ತು ಜೂನ್‌ನಲ್ಲಿ ಹವಾನಾದಲ್ಲಿ ನಡೆದ ಸಂಸ್ಕೃತಿ ಮತ್ತು ಅಭಿವೃದ್ದಿಯ ಉಪನ್ಯಾಸಗಳಲ್ಲಿ ಒತ್ತಿ ಹೇಳಿರುತ್ತಾರೆ. ಈ ಎರಡೂ ಉಪನ್ಯಾಸಗಳಲ್ಲಿ ಕಳೆದ ೪೦ ವರ್ಷಗಳಲ್ಲಿ ಕ್ಯೂಬಾ ಕ್ರಾಂತಿಯ ಅಪೂರ್ವ ಸಾಧನೆಗಳನ್ನು ಅಮೆರಿಕಾಕ್ಕೆ ಹೋಲಿಸಿ ಸವಿಸ್ತಾರವಾಗಿ ಹೇಳುತ್ತಾರೆ. ಮುಖ್ಯವಾಗಿ

ಸಾಕ್ಷರತೆ: ಕ್ರಾಂತಿಯ ನಂತರ ಸಾಕ್ಷರತೆಗೆ ಮೊದಲ ಆದ್ಯತೆ ನೀಡಲಾಯಿತು. ವಿದ್ಯಾರ್ಥಿ ಮತ್ತು ಶಿಕ್ಷಕರ ನೆರವಿನಿಂದ ‘‘ಸಂಪೂರ್ಣ ಸಾಕ್ಷರತಾ ಆಂದೋಲನ’’ವನ್ನು ಹಮ್ಮಿ ಕೊಳ್ಳಲಾಯಿತು. ಎರಡೇ ವರ್ಷಗಳಲ್ಲಿ ಒಂದು ಮಿಲಿಯ (೧೦ ಲಕ್ಷ) ವಯಸ್ಕರಿಗೆ ಓದು ಬರಹ ಕಲಿಸಿ ಸಾಕ್ಷರರನ್ನಾಗಿ ಮಾಡಲಾಯಿತು. ಸಾಕ್ಷರತಾ ಸ್ವಯಂ ಸೇವಕರು ದೇಶದ ಮೂಲೆ ಮೂಲೆಗಳಿಗೆ ಮತ್ತು ದೂರದ ಗುಡ್ಡಗಾಡುಗಳಿಗೆ ಹೋಗಿ, ಯಾರೊಬ್ಬರನ್ನೂ ಬಿಡದೇ, ೮೦ ವರ್ಷದ ಮುದುಕರನ್ನೂ ಸಹಿತ ಸಾಕ್ಷರರನ್ನಾಗಿ ಮಾಡಿದರು. ಆ ಕುರಿತು ನಿರಂತರ ಬೆನ್ನು ಹತ್ತಿ ಸಾಕ್ಷರತೆಗೆ ಪೂರಕವಾದ ವಿವಿಧ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗಲಾಯಿತು. ಕ್ರಾಂತಿಯ ಪೂರ್ವದಲ್ಲಿ ಸಾಕ್ಷರತಾ ಪ್ರಮಾಣ ಶೇ.೭೦ ರಷ್ಟಿದ್ದುದು, ನಂತರದ ಒಂದೆರಡು ವರ್ಷಗಳಲ್ಲಿ ಶೇ. ೯೦ರ ಗಡಿ ದಾಟಿ, ಈಗ ನೂರಕ್ಕೆ ಮುಟ್ಟಿದೆ. ಹಿಂದೆ ಶೇ.೫೦ರಷ್ಟು ಜನರು ೫ನೇ ತರಗತಿಗಳಿಗೂ ಹೋಗುತ್ತಿರಲಿಲ್ಲ. ೭ ಮಿಲಿಯ(೭೦ ಲಕ್ಷ) ಜನಸಂಖ್ಯೆಯಲ್ಲಿ ೧೫೦,೦೦೦ ಮಾತ್ರ ೫ನೇ ತರಗತಿಗಿಂತಲೂ ಹೆಚ್ಚು ಓದಿದವರಾಗಿದ್ದರು. ಈ ವಿಶ್ವವಿದ್ಯಾಲಯದ ಪದವೀಧರರೇ ೬೦೦,೦೦೦ ಇದ್ದಾರೆ ಮತ್ತು ಶಿಕ್ಷಕರು, ಪ್ರಾಧ್ಯಾಪಕರು ೩೦೦,೦೦೦ ಇದ್ದಾರೆ. ಹವಾನಾ ವಿಶ್ವವಿದ್ಯಾಲಯ, ಸಾಹಿತ್ಯ ಮತ್ತು ಭಾಷಾ ವಿಜ್ಞಾನದ ಅಕಾಡೆಮಿ, ವಿಜ್ಞಾನಗಳ ಅಕಾಡೆಮಿಗಳು, ಅಸಂಖ್ಯಾತ ವೈದ್ಯಕೀಯ ಹಾಗೂ ಇಂಜನಿಯರಿಂಗ್ ಕಾಲೇಜುಗಳು ಇಲ್ಲಿ ಸ್ಥಾಪಿತವಾಗಿವೆ.

ಆಗ ಸಮಾಜವಾದದ ಕುರಿತು ಜನರಲ್ಲಿ ಪೂರ್ವಗ್ರಹ ಬಹಳ ಇತ್ತು. ಸಮಾಜವಾದ ಬೇಡವೇ ಬೇಡ ಎಂದು ಅನೇಕರು ಹೇಳುತ್ತಿದ್ದರು. ಕ್ರಮೇಣ ಶಿಕ್ಷಣ, ವಸತಿ, ಆರೋಗ್ಯ, ಭೂಮಿ, ಉದ್ಯೋಗ, ವೇತನ ಸೌಲಭ್ಯಗಳು ಎಲ್ಲರಿಗೂ ಸಿಗುತ್ತಿರುವುದನ್ನು ಜನರು ಸ್ವಾಗತಿಸಿದರು ಮತ್ತು ಅದಕ್ಕಾಗಿ ನಿಷ್ಠೆಯಿಂದ ಶ್ರಮಿಸಿದರು. ನಂತರ ಇವುಗಳೇ ಸಮಾಜವಾದದ ಅಶಯಗಳೆಂದು ದೃಢವಾಗಿ ನಂಬಿದರು. ಅದರ ರಕ್ಷಣೆಗೆ ಕಟಿಬದ್ಧರಾಗಿ ನಿಂತರು. ಅಮೆರಿಕಾದ ನಗರಗಳಲ್ಲಿ ಕೂಲಿ ಮಾಡುತ್ತಿರುವ ಬಡ ಆಫ್ರಿಕನ್ನರು ಮತ್ತು ಲ್ಯಾಟಿನ್ ಅಮೆರಿಕನ್ನರು ಇನ್ನೂ ಬಹುಪಾಲು ಅನಕ್ಷರಸ್ಥರಾಗಿಯೇ ಉಳಿದಿದ್ದಾರೆ.

ಸಾಹಿತ್ಯ ಪ್ರಸಾರ: ಕ್ಯೂಬಾದ ಕ್ರಾಂತಿಯ ಹಿಂದಿನ ವರ್ಷದಲ್ಲಿ (೧೯೫೮) ಪ್ರಕಟವಾದ ನಾಲ್ಕು ಪಟ್ಟು ಪುಸ್ತಕಗಳಲ್ಲಿ ೯೮ ಕಾದಂಬರಿಗಳು, ೧೨೧ ಕಥಾ ಸಂಗ್ರಹಗಳು (ಪ್ರತಿಗಳು : ೬೦ ಲಕ್ಷ) ೮೬ ಕನವಸಂಗ್ರಹಗಳು (ಪ್ರತಿಗಳು : ೫.೭ ಲಕ್ಷ), ಜರ್ಮನಿಯ ಖ್ಯಾತ ನಾಟಕಗಾರ ಬ್ರೆಕ್ಟನ ಕೃತಿಗಳೂ ಸೇರಿದಂತೆ ೩೫ ನಾಟಕಗಳು (ಪ್ರತಿಗಳು : ೨.೪ ಲಕ್ಷ), ೪೯ ಪ್ರಬಂಧ ಸಂಕಲನಗಳು (ಪ್ರತಿಗಳು: ೨.೮. ಲಕ್ಷ), ಚಿತ್ರಕಲೆ ಮತ್ತು ಸಂಗೀತ ಕುರಿತಾದ ೨೬ ಕೃತಿಗಳು (ಪ್ರತಿಗಳು: ೨.೧೫ ಲಕ್ಷ) ಕ್ಯೂಬಾದ ೨೦ನೇ ವರ್ಷಾಚಾರಣೆಯ ಅಂಗವಾಗಿ ೧೯೭೯ರಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ ಕೃತಿಗಳ ಪ್ರತಿಗಳ ಸಂಖ್ಯೆ ೩ ಕೋಟಿ ೨೦ ಲಕ್ಷ. ಅವುಗಳ ಗ್ರಂಥಕರ್ತರು ೬೦.೨. ಅವರಲ್ಲಿ ೩೧೬ ವಿದೇಶೀಯರು ಮತ್ತು ಉಳಿದವರು ಕ್ಯೂಬನ್ನರು. ಇಲ್ಲಿ ಅನೇಕ ಸ್ಫೂರ್ತಿದಾಯಕ ನಿಯತಕಾಲಿಕಗಳು, ಪ್ರಕಾಶನ ಗೃಹಗಳು ಸದಾ ಚಟುವಟಿಕೆಗಳಿಂದ ಕೂಡಿವೆ. ಲ್ಯಾಟಿನ್ ಅಮೆರಿಕಾದ ಸಾಹಿತ್ಯ ಪ್ರಕಟಣೆಯಲ್ಲಿ ಕ್ಯೂಬಾ ಅಗ್ರಗಣ್ಯ ಸ್ಥಾನ ಪಡೆದಿದೆ. ಇಲ್ಲಿ ಕ್ಯೂಬಾದ ಕಮ್ಯುನಿಸ್ಟ್ ಪಕ್ಷದ ‘‘ಗ್ರಾನ್ ಮೂ’’ ಪತ್ರಿಕೆ ನಿರಂತರವಾಗಿ ಅಪಾರ ಸಂಖ್ಯೆಯಲ್ಲಿ ಪ್ರಕಟವಾಗುತ್ತಿದೆ. ವಿಶ್ವಮಾನ್ಯತೆ ಪಡೆದಿರುವ ಅಮೆರಿಕದ ಸಾಹಿತಿ ಅರ್ನೆಸ್ಟ್ ಹೆಮಿಂಗ್‌ವೆ ಹಲವು ವರ್ಷಗಳ ಕಾಲ ತನ್ನ ಮರಣದ ತನಕವೂ ಹವಾನಾದಲ್ಲಿ ಇದ್ದುದು ಕ್ಯೂಬಾದ ಹೆಮ್ಮೆಯ ಸಂಗತಿ. ಇವೆಲ್ಲವುಗಳನ್ನು ವಿಶ್ವಕಥಾಕೋಶ ಕ್ಯೂಬಾದ ಕಥೆಗಳಿಗೆ ಬರೆದ ಪ್ರಸ್ತಾವನೆಯಲ್ಲಿ ವರ್ಣಿಸಲಾಗಿದೆ.

ಆರೋಗ್ಯ: ಕ್ಯೂಬಾದ ಆರೋಗ್ಯಮಟ್ಟ ವಿಶ್ವದಾಖಲೆ ಉಳ್ಳದ್ದಾಗಿದೆ. ಕ್ಯೂಬಾದಲ್ಲಿ ೧೯೮೯ರಲ್ಲಿ ೬೪೦೦೦ ವೈದ್ಯರಿದ್ದರು. ಕಳೆದ ೧೦ ವರ್ಷಗಳಲ್ಲಿ ೨೫೦೦೦ ವೈದ್ಯರು ಹೆಚ್ಚಿಗೆ ಸೇರಿದ್ದು, ಒಟ್ಟು ೮೯೦೦ ವೈದ್ಯರು ಈಗ ಇಲ್ಲಿ ಇದ್ದಾರೆ. ಕ್ಯೂಬಾದ ಪ್ರತಿ ೧೭೬ ನಾಗರಿಕರಿಗೆ ಒಬ್ಬ ವೈದ್ಯರಿದ್ದಾರೆ. ಈ ಪ್ರಮಾಣ ಅಭಿವೃದ್ದಿ ಹೊಂದಿ ಯಾವುದೇ ಕೈಗಾರಿಕಾ ದೇಶದಲ್ಲಿರುವುದಕ್ಕಿಂತ ಎರಡರಷ್ಟಾಗಿದೆ. ಗ್ರಾಮ, ಗುಡ್ಡಗಾಡು ಎಲ್ಲೆಡೆಗಳಲ್ಲಿಯೂ ವೈದ್ಯರಿದ್ದು ಜನರ ಆರೋಗ್ಯ ರಕ್ಷಣೆ ಮಾಡುತ್ತಿದ್ದಾರೆ. ೧೦ ವರ್ಷಗಳ ಹಿಂದೆ ಕ್ಯೂಬಾದಲ್ಲಿ ಮಕ್ಕಳು ಹುಟ್ಟಿದ ಒಂದು ವರ್ಷದೊಳಗೆ ಸಾಯುತ್ತಿದ್ದ ಪ್ರಮಾಣ ಸಾವಿರಕ್ಕೆ ೧೦-೧೧. ಕಳೆದ ಒಂದು ದಶಕದ ಕಾಲದಲ್ಲಿ ಅಮೆರಿಕ ವಿಧಿಸಿದ ಕಠಿಣ ಆರ್ಥಿಕ ದಿಗ್ಬಂಧನಗಳಿಂದ ಜನರ ಪೌಷ್ಟಿಕ ಆಹಾರ ಸೇವನೆ ಗಣನೀಯವಾಗಿ ಕಡಿಮೆಯಾಗಿದೆ. ಆದರೆ, ಮಕ್ಕಳಿಗೆ ರಿಯಾಯಿತಿ ದರಗಳಲ್ಲಿ ಒದಗಿಸುತ್ತಿತ್ತು ಹಾಲಿನ ಪ್ರಮಾಣದಲ್ಲಿ ಕಡಿಮೆಯಾಗಲಿಲ್ಲ. ಆದುದರಿಂದಲೇ, ಈ ಕಠಿಣ ಕಾಲದಲ್ಲಿಯೂ ಮಕ್ಕಳ ಸಾವಿನ ಪ್ರಮಾಣವನ್ನು ಪೂರ್ವ ಯೋಜಿಸಿದಂತೆ ಶೇ.೩೦ರಷ್ಟು ಇಳಿಸಲಾಗಿದೆ. ಅಂದರೆ, ಸಾವಿರದಲ್ಲಿ ಈಗ ೭ ಮಕ್ಕಳಷ್ಟೇ ಸಾಯುತ್ತಾರೆ. ಕ್ಯೂಬಾಕ್ಕೆ ಬೇಕಾದ ಔಷಧಿಗಳ ಶೇ.೯೦ರಷ್ಟನ್ನು ದೇಶದಲ್ಲಿಯೇ ಉತ್ಪಾದಿಸಲಾಗುತ್ತಿದೆ. ನೆರೆ, ಬರಗಾಲ ಬಂದರೆ ಇಡೀ ರಾಷ್ಟ್ರವೇ ಎಚ್ಚೆತ್ತು ಜನರ ನೆರವಿಗೆ ವೈದ್ಯರೊಡನೆ ನಿಲ್ಲುತ್ತದೆ.

ಆದರೆ ಅಮೆರಿಕಾದ ನ್ಯೂಯಾರ್ಕ್ ಮತ್ತು ಇತರ ಮಹಾನಗರಗಳಲ್ಲಿ ಆಫ್ರಿಕಾ, ಲ್ಯಾಟಿನ್, ಅಮೆರಿಕಾ, ಮತ್ತಿತರ ದೇಶಗಳಿಂದ ವಲಸೆ ಬಂದಿರುವ ಬಡ ಕುಟುಂಬಗಳ ಮಕ್ಕಳು ಸೇತುವೆಗಳ ಅಡಿಯಲ್ಲಿ, ಕೊಳಚೆ ಪ್ರದೇಶಗಳಲ್ಲಿ, ದೊಡ್ಡ ಕಟ್ಟಡಗಳ ನೆರಳಿನಲ್ಲಿ ರದ್ದಿ ಕಾಗದ ಹಾಗೂ ಹರಕು ಬಟ್ಟೆಗಳನ್ನು ಹಾಕಿಕೊಂಡು ಮಲಗಿರುತ್ತವೆ; ನ್ಯೂಯಾರ್ಕ್ ನಗರದ ೪೦೦,೦೦೦ ಮಕ್ಕಳಿಗೆ ಶಿಶು ವೈದ್ಯರಿಲ್ಲ. ಅಲ್ಲಿ ಮಕ್ಕಳ ಸುಶ್ರುಶಾಗಾರ ತೆರೆಯಲು ವಲಸೆಗಾರರ ಪ್ರತಿನಿಧಿಗಳು ಕ್ಯೂಬಾದ ನೆರವು ಕೇಳಲು ಬರುತ್ತಿದ್ದಾರೆ. ಅಮೆರಿಕಾದ ಮಹಾನಗರ ಪ್ರದೇಶಗಳಲ್ಲಿ ಮಕ್ಕಳ ಮರಣದ ಪ್ರಮಾಣ ಸಾವಿರಕ್ಕೆ ೨೦ರಿಂದ ೩೦ ರಷ್ಟಿದೆ. ಪೂರಕ ಶಸ್ತ್ರಾಸ್ತ್ರಗಳ ಮೂಲಕ ಜಗತ್ತಿನ ಬಡದೇಶಗಳನ್ನು ಬೆದರಿಸುತ್ತಿರುವ ಅಮೆರಿಕಾಕ್ಕೆ ತನ್ನ ದೇಶದ ಬಡ ಮಕ್ಕಳ ಆರೋಗ್ಯಕ್ಕೆ ಹಣ ಇಲ್ಲ!

ಕ್ಯೂಬಾದಲ್ಲಿ ಹಿಂದಿನಂತೆ ಸಾವಿನ ಕಾರ್ಯಾಗಾರಗಳಲ್ಲಿ ರಾಜಕೀಯ ಹತ್ಯೆಗಳಿಲ್ಲ, ವಯೋವೃದ್ಧರನ್ನು ಕಡೆಗಣಿಸಲಾಗುತ್ತಿಲ್ಲ. ಮಕ್ಕಳು ಬೀದಿಪಾಲಾಗುತ್ತಿಲ್ಲ. ಯಾರನ್ನೂ ಅವರ ಪಾಡಿಗೆ ಅನಾಥರಾಗಿ ಬಿಡುತ್ತಿಲ್ಲ. ಎಲ್ಲರೂ ಪರಸ್ಪರ ಸಹಾಯ ಸಹಕಾರದಿಂದ ದೇಶದ ಅಭಿವೃದ್ದಿಗೆ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಗೆ ಶ್ರಮಿಸುತ್ತಿದ್ದಾರೆ.