೨೦ನೆಯ ಶತಮಾನದ ಜಾಗತಿಕ ಸನ್ನಿವೇಶದಲ್ಲಿ ‘ಕ್ಯೂಬಾ’ ಎಂದೊಡನೆ, ಪುಟ್ಟ ದೇಶದ ದಿಟ್ಟ ಜನರ ಕ್ರಾಂತಿಯ ಕಥೆ ಕಣ್ಣಿಗೆ ಕಟ್ಟುತ್ತದೆ. ೨೦ನೆಯ ಶತಮಾನದ ಆರಂಭದಿಂದ ಕೊನೆಯವರೆಗೆ ಕ್ಯೂಬಾವು ಅಮೆರಿಕಾ ಖಂಡದಲ್ಲೇ ತನ್ನ ಉಳಿವಿಗಾಗಿ ಮಾಡಿದ ವಿವಿಧ ಮಜಲುಗಳ ಹೋರಾಟದ ಮತ್ತು ಕ್ರಾಂತಿಯ ಚಿತ್ರಣವನ್ನು ನೀಡುವುದು ಇಲ್ಲಿನ ಉದ್ದೇಶವಾಗಿದೆ.

ಕೇಂದ್ರ ಅಮೆರಿಕದ ಪೂರ್ವ ದಿಕ್ಕಿನಲ್ಲಿ ಮೆಕ್ಸಿಕೋ ಕೊಲ್ಲಿಯ ದ್ವಾರದ ಕೆರಿಬಿಯನ್ ಸಮುದ್ರದಲ್ಲಿ ಪೂರ್ವ-ಪಶ್ಚಿಮಾಭಿಮುಖವಾಗಿ ಕ್ಯೂಬಾ ಮೈಚಾಚಿಕೊಂಡಿದೆ ಮತ್ತು ವೆಸ್ಟ್ ಇಂಡೀಸ್ ದ್ವೀಪಗಳ ಸಮುಚ್ಚಯದಲ್ಲಿ ‘ಹವಳ’ದಂತೆ ಕಂಗೊಳಿಸುತ್ತದೆ. ಕ್ಯೂಬಾದ ರಾಜಧಾನಿ ಹವಾನಾ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿದೆ. ಅಲ್ಲಿಯ ಸಾಂಚಿಯಾಗೋ ನಗರ ‘‘ಕ್ಯೂಬಾದ ಕ್ರಾಂತಿಯ ತೊಟ್ಟಿಲು’’ ಎಂದೇ ಪ್ರಸಿದ್ಧ ಪಡೆದಿದೆ. ಭೂಮಿ ದುಂಡಗಿದೆ ಎಂಬ ಸಿದ್ಧಾಂತವನ್ನು ನಂಬಿಕೊಂಡು ಕೊಲಂಬಸ್ ಸ್ಪೇನ್ ದೇಶದಿಂದ ಪಶ್ಚಿಮಾಭಿಮುಖವಾಗಿ ನೌಕೆಯಲ್ಲಿ ಸಮುದ್ರಯಾನ ಮಾಡಿಕೊಂಡು ಪೂರ್ವದ ‘‘ಇಂಡೀಸ್-ಭಾರತ’’ ಸಿಗಲಿದೆ ಎಂಬ ಲೆಕ್ಕಾಚಾರದಲ್ಲಿದ್ದ. ಆದರೆ, ೧೪೯೨ರಲ್ಲಿ ಅವನು ಮೊತ್ತಮೊದಲು ಬಂದು ಇಳಿದಿದ್ದು ಕ್ಯೂಬಾದಲ್ಲಿ. ಕೊಲಂಬಸ್ ಇದನ್ನೇ ಇಂಡೀಸ್ ಎಂದು ತಿಳಿದ. ಈ ಭಾಗ ಮತ್ತು ಇದರ ಪಕ್ಕದಲ್ಲಿರುವ ವಿಶಾಲವಾದ ಉತ್ತರ-ದಕ್ಷಿಣ ಅಮೆರಿಕಾ ಭೂಖಂಡ ಅದುವರೆಗೆ ಯಾರೂ ಕಂಡಿರಲಿಲ್ಲ. ನಂತರ ‘‘ಈಸ್ಟ್ ಇಂಡೀಸ್’’ ದ್ವೀಪಗಳಿಂದ ಕ್ಯೂಬಾ ಮತ್ತಿತರ ದ್ವೀಪಗಳ ಸಮುಚ್ಚಯವನ್ನು ಪ್ರತ್ಯೇಕವಾಗಿ ಗುರುತಿಸಲು ಇವುಗಳನ್ನು ‘‘ವೆಸ್ಟ್ ಇಂಡೀಸ್ ’’ ಎಂದು ಕರೆಯಲಾಯಿತು.

ಈ ಪುಟ್ಟ ದೇಶದ ಉದ್ದ ೧೨೪೩ ಕಿ.ಮೀ., ಅಗಲ ೧೯೦ ಕಿ.ಮೀ. (ಕೆಲವಡೆ ಕೇವಲ ೩೦ ಕಿ.ಮೀ) ಮತ್ತು ವಿಸ್ತೀರ್ಣ ೧೧೪, ೫೨೪ ಚದರ ಕಿ.ಮೀ. ಕ್ಯೂಬಾಕ್ಕೆ ಹತ್ತಿರದ ಪಿನೋ ದ್ವೀಪವೂ ಸೇರಿದಂತೆ ೩೭೧೫ ಪುಡಿ ದ್ವೀಪಗಳು ಸೇರಿವೆ. ೭೭ ಕಿ.ಮೀ. ದೂರದಲ್ಲಿ ಹಾಯಿಟಿ, ೧೩೩ ಕಿ.ಮೀ. ದೂರದಲ್ಲಿ ಜಮೈಕ ಮತ್ತು ೧೪೪ ಕಿ.ಮೀ. ದೂರದಲ್ಲಿ ಬಲಿಷ್ಠ ಅಮೆರಿಕಾ ಸಂಯುಕ್ತ ಸಂಸ್ಥಾನಗಳು (ಮುಂದೆ ಅಮೆರಿಕಾ ಎಂದಷ್ಟೇ ಉಲ್ಲೇಖಿಸಲಾಗುವುದು) ಈ ದೇಶದ ನೆರೆಯ ದೇಶಗಳು. ಮೆಕ್ಸಿಕೋ ದೇಶವೂ ಕ್ಯೂಬಾದ ಹತ್ತಿರವೇ ಇದೆ. ಸದ್ಯ ಇದರ ಜನಸಂಖ್ಯೆ ೧೧.೧ ಮಿಲಿಯ (೧ ಕೋಟಿ ೧೧ ಲಕ್ಷ) ಮತ್ತು ಸರಾಸರಿ ವಾರ್ಷಿಕ ಆದಾಯ ಡಾಲರ್ ೧೨೫೦. ಇದಕ್ಕೆ ಹೋಲಿಸಿದರೆ ಕ್ಯೂಬಾವನ್ನು ತನ್ನ ಪ್ರತಿಸ್ಪರ್ಧಿ ವೈರಿ ಎಂದೇ ಸದಾ ಕೆಂಗಣ್ಣಿನಿಂದ ಕೆಂಡ ಕಾರುತ್ತಿರುವ ಮತ್ತು ದಶಕಗಳಿಂದ ಅವರ ಮೇಲೆ ನಿರಂತರ ಮಿಲಿಟರಿ ಆಕ್ರಮಣ, ಆರ್ಥಿಕ ದಿಗ್ಭಂದನ, ರಾಜಕೀಯ ಅಸ್ಪೃಶ್ಯತೆ, ಸಾಂಸ್ಕೃತಿಕ ದಾಳಿ ನಡೆಸುತ್ತಿರುವ ಜಗತ್ತಿನ ಅಣು ಅಸ್ತ್ರ ಸಜ್ಜಿತ ಹಾಗೂ ಏಕಮೇವ ಮಹಾನ್ ಶಕ್ತಿಶಾಲಿ ಸೂಪರ್ ಪವರ್ ದೇಶವಾದ ೫೦ ರಾಜ್ಯಗಳ ಒಕ್ಕೂಟವಾದ ಅಮೆರಿಕದ ವಿಸ್ತಾರ ೯,೩೨೭,೬೧೪ ಚದರ ಕಿ.ಮೀ. ಜನಸಂಖ್ಯೆ: ೨೫೫.೮ ಮಿಲಿಯ(೨೫ ಕೋಟಿ ೫೮ ಲಕ್ಷ) ಮತ್ತು ಸರಾಸರಿ ವಾರ್ಷಿಕ ಆದಾಯ ಡಾಲರ್ ೨೪೭೨೯. ಆದರೆ ಎರಡೂ ದೇಶಗಳ ಜನರ ಸಾಕ್ಷರತಾ ಪ್ರಮಾಣ ಶೇ.೯೬ಕ್ಕೂ ಹೆಚ್ಚಿವೆ.

ಕ್ಯೂಬಾ ಪುಟ್ಟ ದೇಶದ ದಿಟ್ಟ ಜನರು ತಮ್ಮ ಸ್ವಾಯತ್ತತೆಗಾಗಿ, ಸ್ವಾವಲಂಬನೆಗಾಗಿ, ಸ್ವಾಭಿಮಾನಕ್ಕಾಗಿ, ಸಾರ್ವಭೌಮತೆಗಾಗಿ, ವಿಶ್ವಶಾಂತಿ ಸೌಹಾರ್ದತೆಗಾಗಿ ತತ್ವನಿಷ್ಠವಾದ ಹೋರಾಟ ನಡೆಸುತ್ತಾ ಬಂದಿರುವ ಶ್ರೀಮಂತ ಪರಂಪರೆಯನ್ನು ಹೊಂದಿದ್ದಾರೆ.

೧೫ನೆಯ ಶತಮಾನದಲ್ಲಿ ಲ್ಯಾಟಿನ್ ಮೂಲದ ಸ್ಪ್ಯಾನಿಷ್ ಮತ್ತು ಪೋರ್ಚುಗೀಸ್ ಆಕ್ರಮಣಗಾರರಿಂದಾಗಿ, ಈಗಿನ ಅಮೆರಿಕಾದ ಕೆಳಗಿನ ಭೂಭಾಗವನ್ನೆಲ್ಲಾ ಲ್ಯಾಟಿನ್ ಅಮೆರಿಕ ಎಂದು ಸಾರ್ವತ್ರಿಕವಾಗಿ ಕರೆಯಲಾಗುತ್ತಿದೆ. ಸದ್ಯ ಮಧ್ಯ ಅಮೆರಿಕಾದಲ್ಲಿ ಮೆಕ್ಸಿಕೋ, ಗ್ವಾಟೆಮಾಲಾ, ಎಲ್‌ಸಲ್ಟಾಡಾರಾ, ಕೋಸ್ಟರಿಕಾ, ಪನಮಾ, ನಿಕರಾಗುವಾ, ಬೆಲಿಝ್, ಹೊಂಡುರಾಸ್ ದೇಶಗಳಿವೆ. ಕೆರೆಬಿಯನ್ ಸಮುದ್ರ ಪ್ರದೇಶದಲ್ಲಿ ಕ್ಯೂಬಾ ಸೇರಿದಂತೆ, ಬಹಮಾಸ್, ಜಮೈಕಾ, ಹೆಯಿಟಿ, ಡೊಮಿನಿಕನ್ ರಿಪಬ್ಲಿಕ್ , ಪ್ಯುರ್ಟೆರಿಕೋ, ಬರ್ಬರೋಸ್, ಟ್ರೆನಿಡಾಚ್ ಮತ್ತು ಟೊಬೆಗೊ ದೇಶಗಳಿವೆ. ದಕ್ಷಿಣ ಅಮೆರಿಕಾದ ಮೇಲ್ಭಾಗದಲ್ಲಿ ಈಕ್ವಡಾರ್, ಕೊಲಂಬಿಯಾ, ವೆನುಜೆವೆಲಾ, ಗುಯಾನಾ, ಸುರಿಮಾನ್, ಫ್ರೆಂಚ್ ಗುಯಾನಾ, ಪಶ್ಚಿಮ ಕರಾವಳಿಯಲ್ಲಿ ಪೆರು ಮತ್ತು ಚಿಲಿ; ಮಧ್ಯ ಭಾಗದಲ್ಲಿ ಬೊಲಿವಿಯಾ ಮತ್ತು ಪರಾಗುವೆ; ಪೂರ್ವ ಕರಾವಳಿಯಲ್ಲಿ ಬ್ರೆಜಿಲ್, ಉರುಗ್ವೆ ಮತ್ತು ಅರ್ಜೆಂಟೀನಾ ದೇಶಗಳಿವೆ. ಈ ಎಲ್ಲಾ ಭೂಪ್ರದೇಶಗಳ ಜನರು ಸಾವಿರಾರು ವರ್ಷಗಳ ಪ್ರಾಚೀನ ಸಮುದಾಯ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದ್ದರು. ಮುಂದೆ ಲಿಜಾಟಿಕ್, ಮಾಯಾ ಮತ್ತು ಇಂಕಾ ಸಾಮ್ರಾಜ್ಯಗಳ ಕಲ್ಯಾಣ ರಾಜ್ಯಗಳ ಸುಖವನ್ನು ಅನುಭವಿಸಿದ್ದರು. ತಮ್ಮ ಸಾಮ್ರಾಜ್ಯಗಳ ವಿನಾಶದ ನಂತರ ನೂರಾರು ಬುಡಕಟ್ಟುಗಳಾಗಿ ಒಡೆದು ಹೋದರೂ, ವಿವಿಧ ಪ್ರದೇಶಗಳಿಗೆ ಚದುರಿ ಹೋದರು.

೧೪೯೨ರಲ್ಲಿ ಕೊಲಂಬಸ್ ಕ್ಯೂಬಾದಲ್ಲಿ ಕಾಲಿಟ್ಟಾಗಿನಿಂದ ಪ್ರಾರಂಭದಲ್ಲಿ ಸ್ವಲ್ಪಕಾಲ ಸ್ಪೈನ್ ಸಾಮ್ರಾಜ್ಯ ಈ ಭೂಪ್ರದೇಶದ ಅಳಿದುಳಿದ ಪಾಳೆಯಗಾರರ ಮಧ್ಯೆ ಕೊಡುಕೊಳ್ಳುವ ಒಪ್ಪಂದಗಳ ನಾಟಕ ನಡೆಯಿತು. ಅನತಿಕಾಲದಲ್ಲಿಯೇ, ಬ್ರೆಜಿಲ್‌ನಲ್ಲಿ ಪೋರ್ಚುಗೀಸ್ ಮತ್ತು ಇತರ ಎಲ್ಲಾ ಪ್ರದೇಶಗಳಲ್ಲಿ ಸ್ಪ್ಯಾನಿಷ್ ಧನಗಾಹಿಗಳು ತಮ್ಮ ಆಧುನಿಕ ಶಸ್ತಾಸ್ತ್ರಗಳಾದ ಕೋವಿ-ಬಂದೂಕು, ಫಿರಂಗಿಗಳಿಂದ ಸುಖಶಾಂತಿ, ಸಮೃದ್ದಿ, ಬಯಸುತ್ತಿದ್ದ ಮತ್ತು ಕೇವಲ ಕತ್ತಿ, ಚೂರಿ, ಈಟಿ, ಬಾಣಗಳನ್ನು ಹೊಂದಿದ್ದ ಲಕ್ಷಾಂತರ ಮೂಲ ನಿವಾಸಿಗಳನ್ನು ನಿರ್ದಯೆಯಿಂದ ನಿರ್ನಾಮಗೊಳಿಸಿದರು. ಇವರು ಪುನಃ ಬಲಶಾಲಿ ಗಳಾಗದಂತೆ ಎಚ್ಚರ ವಹಿಸಿದರು. ಸಾವಿರಾರು ಟನ್ನುಗಳಷ್ಟು ಚಿನ್ನವನ್ನು ತಮ್ಮ ದೇಶಗಳಿಗೆ ಸಾಗಿಸಿ ಬಂಡವಾಳವನ್ನಾಗಿ ಮಾಡಿಕೊಂಡರು! ಇವರು ಸ್ಪ್ಯಾನಿಷ್ ಮತ್ತು ಪೋರ್ಚುಗಲ್ ಸಾಮ್ರಾಜ್ಯಕ್ಕೆ ಮತ್ತು ಅಲ್ಲಿನ ಉದಯೋನ್ಮುಖ ಕೈಗಾರಿಕೋದ್ಯಮಿಗಳಿಗೆ ವಿಧೇಯರಾಗಿ ದುಡಿಯುವಂತೆ ಮಾಡಲು ತಮ್ಮ ಕ್ರಿಶ್ಚಿಯನ್ ಧರ್ಮದೊಂದಿಗೆ ಬೆಸೆದರು. ದುಡಿಮೆಗೂ ಮತ್ತು ತಮ್ಮ ಮೂಲಕ ಸಂತಾನ ಉತ್ಪತ್ತಿಗೆ ಆ ಬಡಪಾಯಿಗಳನ್ನು ಬಳಸಿದರು. ಇವರಿಗಿಂತಲೂ ಹೀನಸ್ಥಿತಿಯಲ್ಲಿದ್ದ ಒಂದು ಕೋಟಿ ನೀಗ್ರೋಗಳನ್ನು ೧೭, ೧೮ ಮತ್ತು ೧೯ನೆಯ ಶತಮಾನದ ಪ್ರಾರಂಭದಲ್ಲಿ ಈ ಭೂಪ್ರದೇಶಗಳಲ್ಲಿ ಬಿಳಿಯರು, ಕೆಂಪು ಇಂಡಿಯನ್ನರು, ನೀಗ್ರೋಗಳು, ದೂರ ಪ್ರಾಚ್ಯದ ಜನರ ಮಿಶ್ರ ಸಂತತಿಯವರು, ಇವರೆಲ್ಲರ ಸ್ವಾತಂತ್ರ್ಯ ದಾಹದ ಹೋರಾಟದ ಅಲೆಗಳು ಕೆರಿಬಿಯನ್ ಸಮುದ್ರ ತೀರದ ಕ್ಯೂಬಾಕ್ಕೂ ಮುಟ್ಟಿರಲೇಬೇಕು.

ಕ್ಯೂಬನ್ನರು ಕ್ರಿ.ಪೂ.೫೦೦೦ ವರ್ಷಗಳ ಹಿಂದೆ  ಕೃಷಿಗೆ ತಿರುಗಿದರು ಎಂದು ಹೇಳ ಬಹುದು. ನಂತರ ಲಿಜೆಟೆಕ್ ಮತ್ತು ಮಾಯಾ ನಾಗರಿಕತೆಯ ಕಾಲದಲ್ಲಿ ಕ್ಯೂಬಾ ಮೆಕ್ಸಿಕೋದ ಸಂಪರ್ಕ ಪಡೆದಿದ್ದಿರಬೇಕು. ಮಾಯಾ ಸಾಮ್ರಾಜ್ಯದಿಂದ ಪಾರಾಗಿ ಹಲವು ಬುಡಕಟ್ಟುಗಳು ಕ್ಯೂಬಾಕ್ಕೆ ಬಂದಿರಬಹುದು. ೫೦೦ ವರ್ಷಗಳ ಹಿಂದೆ ೧೪೯೨ರಲ್ಲಿ ಇಲ್ಲಿಗೆ ಕೊಲಂಬಸ್ ಬಂದಾಗ ಈ ದ್ವೀಪದಲ್ಲಿ ಕೇವಲ ೫೦,೦೦೦ ಜನರಿದ್ದಿರಬಹುದು. ಇವರೂ ಸ್ಪೇನಿಷ್ ಆಕ್ರಮಣಕಾರರಿಗೆ ಸೋತು ಗುಲಾಮರಾದರು. ಇವರೊಂದಿಗೆ ದುಡಿಯಲು ೮ ಲಕ್ಷ ನೀಗ್ರೋಗಳನ್ನು ಹೊಸ ಯಜಮಾನರು ಆಫ್ರಿಕಾದಿಂದ ಹಿಡಿದು ತಂದರು. ಹಾಯಿಟಿ ಮತ್ತು ಜಮೈಕ ದ್ವೀಪಗಳಿಂದಲೂ ದುಡಿಯಲು ಕೂಲಿ ಆಳುಗಳು ಬಂದರು. ಏಷ್ಯಾದಿಂದಲೂ ದುಡಿಯಲು ಬಂದರು. ನಾಲ್ಕು ಶತಮಾನಗಳವರೆಗೆ ಈ ದುಡಿಯುವ ಜನರು ವರ್ಣಭೇದವಿಲ್ಲದೇ ಕೂಡಿ ಬಾಳಿದರು. ಇದು ಲ್ಯಾಟಿನ್ ಅಮೆರಿಕಾ, ಆಫ್ರಿಕಾ, ಏಷ್ಯಾ ಹೀಗೆ ಜಗತ್ತಿನ ಮೂರೂ ಭೂಖಂಡಗಳ ದುಡಿಯುವ ಜನರ ಸಂಗಮ ಸ್ಥಾನವಾಯಿತು. ೧೯೫೯ರ ಕ್ರಾಂತಿಯ ನಂತರ ಅಂಗೀಕರಿಸಿದ ಹೊಸ ಸಂವಿಧಾನದಂತೆ ಬೆಳ್ಳಗಿನ ಸ್ಪ್ಯಾನಿಷರು, ಕಪ್ಪಗಿನ ನೀಗ್ರೋಗಳು, ಅರೆಕಪ್ಪಿನ ಏಷ್ಯಾದವರು, ಇತರ ಮಿಶ್ರ ವರ್ಣದವರೂ ಸೇರಿದಂತೆ ವಿಭಿನ್ನ ಸಂಸ್ಕೃತಿಯ ಮಿಶ್ರಣದ ಕ್ಯೂಬಾದ ಜನರು ಆತ್ಮವಿಶ್ವಾಸದಿಂದ ಚೈತನ್ಯದಿಂದ ಪುಟಿಯುತ್ತಿದ್ದಾರೆ.

ಕ್ಯೂಬನ್ನರ ಸ್ಫೂರ್ತಿಪುರುಷರಲ್ಲಿ ೧೯ನೆಯ ಶತಮಾನದ ಪ್ರಾರಂಭದಲ್ಲಿ ಬೊಲಿವಿಯಾ, ಕೊಲಂಬಿಯಾ ಮತ್ತು ವೆನಿಜುಲಾ ರಾಜ್ಯಗಳ ಒಕ್ಕೂಟವಾದ ‘‘ಗ್ರಾನ್ ಕೊಲಂಬಿಯಾ’’ ಸ್ಥಾಪಿಸಿದ ಸ್ಯಾಮನ್ ಬೊಲಿವಾರ್ ಒಬ್ಬರು. ಇವರು ಈಗಿನ ಬೊಲಿವಿಯಾ ಮೂಲದವರು. ಈ ದೇಶ ಇದರಿಂದಲೇ ಈ ಹೆಸರು ಪಡೆಯಿತು. ಇವರು ವಸಾಹತುಶಾಹಿ ಆಳ್ವಿಕೆಯಿಂದ ತೀವ್ರ ಶೋಷಣೆ ಹಾಗೂ ತುಳಿತಕ್ಕೆ ಒಳಗಾಗಿ ಅಸಂತುಷ್ಟಿಗೊಂಡಿದ್ದ ಲ್ಯಾಟಿನ್ ಅಮೆರಿಕಾದವರನ್ನು ಸಂಘಟಿಸಿ ಸಶಸ್ತ್ರ ಬಂಡಾಯ ನಡೆಸಿ ಸ್ಪ್ಯಾನಿಷ್ ಆಳರಸರನ್ನು ಈ ಮೂರು ದೇಶಗಳಿಂದ ಒದ್ದೋಡಿಸಿದರು. ಅಮೆರಿಕಾ ಸಂಯುಕ್ತ ಸಂಸ್ಥಾನಗಳಂತೆಯೇ, ದಕ್ಷಿಣ ಅಮೆರಿಕಾ ಸಂಯುಕ್ತ ಸಂಸ್ಥಾನಗಳನ್ನು ರಚಿಸುವ ಕನಸು ಕಂಡಿದ್ದರು. ಇವರು ೧೭೭೬ರ ಅಮೆರಿಕ ಸ್ವಾತಂತ್ರ್ಯ ಹೋರಾಟ ಮತ್ತು ೧೭೮೧ರ ಫ್ರೆಂಚ್ ಕ್ರಾಂತಿಯಿಂದ ತುಂಬಾ ಪ್ರಭಾವಿತರಾಗಿದ್ದರು. ೧೮೩೦ರಲ್ಲಿ ಇವರ ನಿಧನದ ನಂತರ ಕೊಲಂಬಿಯಾ ಒಕ್ಕೂಟ ಒಡೆದು ಹೋಯಿತು. ಅವರ ಸಮಕಾಲೀನರಾದ ಮತ್ತು ಅಮೆರಿಕಾದ ಸ್ವಾತಂತ್ರ್ಯಕ್ಕೆ ಹೋರಾಡಿದ, ಫ್ರೆಂಚ್ ಕ್ರಾಂತಿಯ ಸಮಯ ಫ್ರಾನ್ಸ್‌ಗೆ ಹೊರಗಿನಿಂದ ಆಕ್ರಮಣವಾಗದಂತೆ ಫ್ರೆಂಚ್ ಸೈನಿಕ ತುಕಡಿಯ ಮುಂದಾಳತ್ವ ವಹಿಸಿದ, ನಂತರ ಲ್ಯಾಟಿನ್ ಅಮೆರಿಕಾದ ವಿಮೋಚನೆಗೂ ಹೋರಾಡಿದ ಮಿರಾಂಡ ಇನ್ನೊಬ್ಬ ಸ್ಫೂರ್ತಿಯ ಚಿಲುಮೆ. ೧೮೯೮ರಲ್ಲಿ ಕ್ಯೂಬಾದ ಮಹಾನುಭಾವ ಜೋಸ್ ಮೂರ್ತಿ ರಾಷ್ಟ್ರಪತಿ ಎಂದೇ ಅಪಾರ ಜನಾದರಣೀಯರಾಗಿದ್ದಾರೆ. ಇವರು ರಾಜಕೀಯ ಧುರೀಣರೂ, ಮಿಲಿಟರಿ ತಜ್ಞರೂ, ಹೋರಾಟಗಾರರೂ, ಜನಪ್ರಿಯ ಕವಿಗಳೂ ಆಗಿದ್ದರು. ‘‘ಸ್ವಾತಂತ್ರ್ಯ ಕೊಡಿ, ರೊಟ್ಟಿ ಕೊಡಿ’’ ಎಂದು ಅವರ ಕರೆಗೆ ಯುವ ಜನರು ಸ್ಪಂದಿಸಿದರು. ಸ್ಪ್ಯಾನಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಕ್ಯೂಬನ್ನರು ಬಂಡಾಯ ಏಳುವಂತೆ ತಮ್ಮ ಭಾಷಣ, ಕವಿತೆ, ಲೇಖನಗಳ ಮೂಲಕ ಪ್ರಚೋದಿಸಿದರು. ದೇಶಪ್ರೇಮಿಗಳನ್ನು ಸಂಘಟಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಮರಣವನ್ನಪ್ಪಿ ಅಮರರಾದರು. ಏಳೇ ವರ್ಷಗಳಲ್ಲಿ ಕ್ಯೂಬಾದ ಸ್ವಾತಂತ್ರ್ಯ ಹೋರಾಟ ಜಯಗಳಿಸಿತು. ೧೯ನೆಯ ಶತಮಾನದ ಜೋಸ್ ಮೂರ್ತಿ ಹೇಳಿದ ಮಾತು ಹೀಗಿದೆ.

ನಿಮ್ಮ ಸ್ವಂತ ಹೃದಯ ಕಂಪನದಿಂದ ಎಲ್ಲ ಹೃದಯಗಳನ್ನು ಪುಲಕ ಗೊಳಿಸುವುದಕ್ಕೆ, ಮಾನವೀಯತೆಯ ಬೀಜಾಣುಗಳೂ ಸ್ಫೂರ್ತಿಯೂ ನಿಮ್ಮಲ್ಲಿರಬೇಕು. ಹೃದಯದಿಂದ ಒಲವು ತುಂಬಿರುವ ತುಟಿಗಳಲ್ಲಿ ಗೀತ ನುಡಿಸುತ್ತಾ ನರಳುತ್ತಿರುವ ಜನರ ಸಮುದಾಯದ ನಡುವೆ ನಡೆಯಬೇಕಾದರೆ ಎಲ್ಲ ಆರ್ತಧ್ವನಿಯೂ ನಿಮಗೆ ಕೇಳಿಸಬೇಕು. ಎಲ್ಲ ಯಾತನೆಯೂ ನಿಮಗೆ ಕಾಣಿಸಬೇಕು. ಎಲ್ಲ ಸುಖಸಂತೋಷಗಳ ಅನುಭವ ನಿಮಗಿರಬೇಕು ಮತ್ತು ಎಲ್ಲರಿಗೂ ಸಮಾನವಾದ ಭಾವಾವೇಶ ದಿಂದ ನೀವು ಸ್ಫೂರ್ತಿ ಪಡೆದಿರಬೇಕು. ಎಲ್ಕಕ್ಕಿಂತ ಹೆಚ್ಚಾಗಿ ಬನ್ನ ಪಡುವ ಜನತೆಯ ನಡುವೆ ನೀವು ಬಾಳಬೇಕು.

ಇದು ಕ್ಯೂಬಾದ, ಒಟ್ಟು ಲ್ಯಾಟಿನ್ ಅಮೆರಿಕಾ ಬರಹಗಾರರನ್ನು, ಬುದ್ದಿಜೀವಿಗಳನ್ನು, ಹೋರಾಟಗಾರರನ್ನು ಗಮನದಲ್ಲಿಟ್ಟುಕೊಂಡು ಜೋಸ್ ಮೂರ್ತಿ ಆಡಿದ ಹಿತೋಕ್ತಿ. ಇದರಿಂದ ನವಯುಗದ ತರುಣರಾದ ಅರ್ನೆಸ್ಟೊಚೆ ಗುವಾರಾ ಮತ್ತು ಫಿಡೆಲ್ ಕಾಸ್ಟ್ರೊ ಸ್ಫೂರ್ತಿ ಪಡೆದು ಹೋರಾಟದ ಶ್ರೀಮಂತ ಪರಂಪರೆಯನ್ನು ಮುಂದುವರಿಸಿದರು.

ನವವಸಾಹತುಶಾಹಿ ಮತ್ತು ಸರ್ವಾಧಿಕಾರದ ತೆಕ್ಕೆಗೆ

ಕ್ಯೂಬಾ ಸೇರಿದಂತೆ ಲ್ಯಾಟಿನ್ ಅಮೆರಿಕಾ ದೇಶಗಳು ೧೯ನೆಯ ಶತಮಾನದಲ್ಲಿಯೇ ಪೋರ್ಚುಗೀಸ್ ಮತ್ತು ಸ್ಪಾನಿಷ್ ಸಾಮ್ರಾಜ್ಯಶಾಹಿಗಳ ವಿರುದ್ಧ ಹೋರಾಡಿ ಸ್ವಾತಂತ್ರ್ಯಗಳಿಸಿ ಗಣರಾಜ್ಯಗಳಾಗಿದ್ದವು. ಆದರೆ, ಅವು ತೀರಾ ಅಸ್ಥಿರತೆಯ ಮತ್ತು ೨೦ನೆಯ ಶತಮಾನದ ಪ್ರಾರಂಭದಲ್ಲಿ ಹೊಸದಾಗಿ ಮೂಡಿ ಬಂದ ಅಮೆರಿಕಾ ಸಾಮ್ರಾಜ್ಯಶಾಹಿಯ ಕೈಗೊಂಬೆ ಪ್ರಭುತ್ವಗಳಾಗಿದ್ದವು. ಇವುಗಳನ್ನು ‘‘ಬನಾನಾ ರಿಪಬ್ಲಿಕ್ಸ್’’ ಅಂದರೆ ಬಾಳೆಹಣ್ಣುಗಳ ಗಣರಾಜ್ಯಗಳೆಂದು ಹಗುರವಾಗಿ ಕರೆಯುವುದುಂಟು. ಇಲ್ಲಿಯ ಪ್ರತಿ ಒಂದು ದೇಶದಲ್ಲಿಯೂ ಅಮೆರಿಕಾದ ದೈತ್ಯ ಗಾತ್ರದ ಬಹುರಾಷ್ಟ್ರೀಯ ಕಂಪನಿಗಳು ಬಾಳೆಹಣ್ಣು, ಸಕ್ಕರೆ, ನಿಕ್ಕಲ್, ಹೊಗೆಸೊಪ್ಪು, ತಾಮ್ರ ಮುಂತಾದ ಪ್ರತಿಯೊಂದೂ ವಸ್ತುಗಳ ಉತ್ಪಾದನೆ, ಸಾಗಾಣಿಕೆ, ಸರಬರಾಜುಗಳಿಗೆ ಸಂಬಂಧಿಸಿ ತಮ್ಮ ಏಕಸ್ವಾಮ್ಯ ಸ್ಥಾಪಿಸಿರುತ್ತವೆ. ‘‘ಸ್ವಾತಂತ್ರ್ಯ ಬಂದರೂ ಸುಲಿಗೆ ತಪ್ಪಲಿಲ್ಲ. ಹಳೆಯ ಉರುಳಿನ ಬದಲು ಹೊಸ ಕುಣಿಕೆ’’ ಬಂದಂತಾಯಿತು. ಈ ಭೂಭಾಗದ ಜನರಿಗೆ.

ಎರಡನೇ ಜಾಗತಿಕ ಯುದ್ಧ ಸಂದರ್ಭದಲ್ಲಿ ರಷ್ಯಾದಲ್ಲಿ ೧೯೧೭ರಲ್ಲಿ ನಡೆದ ಅಕ್ಟೋಬರ್ ಕ್ರಾಂತಿಯ ಕಿಡಿಗಳು ಜಗತ್ತಿನಾದ್ಯಂತ ಸಿಡಿದಂತೆ, ಕ್ಯೂಬಾಕ್ಕೂ ಮತ್ತು ಲ್ಯಾಟಿನ್ ಅಮೆರಿಕಾಕ್ಕೂ ಸಿಡಿದು ಬಂದವು. ಕ್ರಾಂತಿಯ ನಂತರ ಲೆನಿನ್ ನೇತೃತ್ವದಲ್ಲಿ ಸ್ಥಾಪಿತವಾದ ಮೂರನೇ ಕಮ್ಯುನಿಸ್ಟ್ ಅಂತಾರಾಷ್ಟ್ರೀಯ ಜಗತ್ತಿನ ಇತರ ಎಲ್ಲಾ ದೇಶಗಳ ಸ್ಥಿತಿಗತಿಗಳಿಗೆ ಅನುಗುಣವಾಗಿ ಶ್ರಮಿಕ ವರ್ಗದ ಕ್ರಾಂತಿಯನ್ನು ಯಶಸ್ವಿಗೊಳಿಸಲು, ವಸಾಹತುಶಾಹಿ ತುಳಿತಕ್ಕೆ ಒಳಗಾದ ದೇಶಗಳಲ್ಲಿ ರಾಷ್ಟ್ರೀಯ ವಿಮೋಚನಾ ಸಮರಗಳು ವಿಜಯಗಳಿಸಲು ಮಾರ್ಗದರ್ಶನ ನೀಡುತ್ತಾ ಬಂದಿತು. ಭಾರತ ಮೂಲದ ಎಂ.ಎನ್. ರಾಯ್ ಮೆಕ್ಸಿಕೋದಲ್ಲಿ ಕಮ್ಯುನಿಸ್ಟ್ ಪಕ್ಷ ಸ್ಥಾಪಿಸಿ, ಮೂರನೇ ಕಮ್ಯುನಿಸ್ಟ್ ಅಂತಾರಾಷ್ಟ್ರೀಯ ಅಧಿವೇಶನದಲ್ಲಿ ಮೆಕ್ಸಿಕೋ ಮತ್ತು ಭಾರತ ಎರಡೂ ದೇಶಗಳನ್ನು ಪ್ರತಿನಿಧಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಕ್ಯೂಬಾದಲ್ಲಿಯೂ ರಷ್ಯಾದ ಕ್ರಾಂತಿಯ ಪ್ರಭಾವದಿಂದ ಕಾರ್ಮಿಕರ, ರೈತರ, ಕಮ್ಯುನಿಸ್ಟರ, ಮಾರ್ಕ್ಸ್‌ವಾದಿಗಳ ಸಂಘಟನೆಗಳು ಮೂಡಿಬಂದವು. ೧೯೧೮-೧೯೨೩ರ ಕಾಲಘಟ್ಟದಲ್ಲಿ ಮುಷ್ಕರಗಳ ಏರುಬ್ಬರಗಳು ಕಂಡುಬಂದವು. ಅರಾಜಕತೆಯ ಸಿಂಡಿಕಾಲಿಸ್ಟರು ತಮ್ಮ ಪ್ರಭಾವವನ್ನು ಕಳೆದುಕೊಳ್ಳಲು ಪ್ರಾರಂಭಿಸಿದರು. ಸಮಾಜವಾದಿಗಳ, ಮಾರ್ಕ್ಸ್‌ವಾದಿಗಳ ಲೆನಿನ್‌ವಾದಿಗಳ ವಿಚಾರಗಳು ಜನರಿಗೆ, ದುಡಿಯುವ ಜನರಿಗೆ ಆಕರ್ಷಕವಾದವು. ಪ್ರಾರಂಭದಲ್ಲಿ ಜುಲಿಯೋ ಆ್ಯಂಟೋನಿಯೋ ಮಗಾಲಿಯಾ ಕ್ಯೂಬಾದ ಕ್ರಾಂತಿಕಾರ ಜನರನ್ನು ಪ್ರತಿನಿಧಿಸುತ್ತಿದ್ದರು. ೧೯೨೩ರಲ್ಲಿ ಮೊತ್ತ ಮೊದಲ ಬಾರಿಗೆ ಹವಾನಾದಲ್ಲಿ ಕಮ್ಯುನಿಸ್ಟ್ ಪಕ್ಷವನ್ನು ಸ್ಥಾಪಿಸಲಾಯಿತು. ಮುಂದೆ ಇತರ ನಗರಗಳಲ್ಲೂ ಈ ಪಕ್ಷ ಬೇರು ಬಿಟ್ಟಿತು. ೧೯೨೫ರಲ್ಲಿ ದೇಶದ ವಿವಿಧ ಪ್ರದೇಶಗಳ ಕಮ್ಯುನಿಷ್ಟ್ ಗುಂಪುಗಳು ಒಂದಾಗಿ ಕ್ಯೂಬಾದ ಕಮ್ಯುನಿಸ್ಟ್ ಪಕ್ಷ ಸ್ಥಾಪಿತವಾಯಿತು.

ಎರಡು ಜಾಗತಿಕ ಯುದ್ಧಗಳ ಮಧ್ಯೆ ೧೯೧೮ ರಿಂದ ೧೯೩೯ರವರೆಗೆ ಕ್ಯೂಬಾದ ರಾಷ್ಟ್ರೀಯ ಆರ್ಥಿಕ ವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿತು. ಮುಖ್ಯವಾಗಿ ಅಮೆರಿಕಾದ ನ್ಯೂಯಾರ್ಕ್ ಷೇರು ಮಾರುಕಟ್ಟೆಯ ಕುಸಿತದಿಂದ ಪ್ರಾರಂಭಗೊಂಡ ೧೯೨೯-೩೩ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದಾಗಿ ಪೈಪೋಟಿ ಹಾಗೂ ಮುಕ್ತ ಮಾರುಕಟ್ಟೆ ಆಧರಿತ ಬಂಡವಾಳಶಾಹಿ ಆರ್ಥಿಕತೆ ಕೊನೆಗೊಂಡಿತು. ಕ್ಯೂಬಾದ ೪,೦೦೦,೦೦೦ ಜನರಲ್ಲಿ ೬೦೦,೦೦೦ ಜನರು ನಿರುದ್ಯೋಗಿಗಳಾದರು. ಅಮೆರಿಕಾದ ಕೈಗೊಂಬೆಯಾದ ಸರ್ವಾಧಿಕಾರಿ ಮಾಚಾಡೋ ವಿರುದ್ಧ ಜನ ದಂಗೆ ಎದ್ದರು. ೧೯೩೨ರಲ್ಲಿ ಪುಟ್ಟ ಬಂಡವಾಳಶಾಹಿಗಳೂ ಮತ್ತು ರಾಷ್ಟ್ರೀಯ ಬಂಡವಾಳಶಾಹಿಗಳೂ ಸರ್ವಾಧಿಕಾರಿ ವಿರುದ್ಧದ ಬಂಡಾಯದಲ್ಲಿ ಪಾಲ್ಗೊಂಡರು. ಈ ಬಂಡಾಯ ಅಮೆರಿಕಾ ಸಾಮ್ರಾಜ್ಯಶಾಹಿಯ ಗುಲಾಮನಾಗಿ ಸೇವೆ ಮಾಡುತ್ತಿದ್ದ ಮಾಚಾಡೋ ಆಳ್ವಿಕೆಯನ್ನು ಅಂತ್ಯಗೊಳಿಸುವ ರಾಷ್ಟ್ರೀಯ ವಿಮೋಚನಾ ಸಮರವಾಗಿ ಮಾರ್ಪಟ್ಟಿತು. ಕಮ್ಯುನಿಸ್ಟರೂ ಇದರಲ್ಲಿ ಪಾಲ್ಗೊಂಡರು.

೧೯೩೩ರಲ್ಲಿ ಈ ಬಂಡಾಯ ತಾರಕಕ್ಕೆ ಏರಿತು. ಆಗಸ್ಟ್ ೧ರಂದು ಹವಾನಾದಲ್ಲಿ ರಾಷ್ಟ್ರಪ್ರೇಮದ ಬೃಹತ್ ಮತಪ್ರದರ್ಶನ ನಡೆಯಿತು. ಅವರ ಮೇಲೆ ಸರ್ವಾಧಿಕಾರಿ ಮಾಚಾಡೋನ ಸೇವೆ ಮತ್ತು ಪೊಲೀಸ್ ಗುಂಡಿನ ಮಳೆಗರೆಯಿತು. ಈ ಭೀಕರ ರಕ್ತಪಾತದ ವಿರುದ್ಧ ರೈಲ್ವೆ ಕಾರ್ಮಿಕರು, ಹೊಗೆಸೊಪ್ಪು ಕಾರ್ಮಿಕರು, ಆಫೀಸು ನೌಕರರು, ವಿದ್ಯಾರ್ಥಿಗಳು ಸಾರ್ವತ್ರಿಕ ಮುಷ್ಕರ ನಡೆಸಿದರು. ಆಗಸ್ಟ್ ೪ರಂದು ‘ಮಾಚಾಡೋ ಕೆಳಗಿಳಿಯಲಿ’, ಕ್ಯೂಬಾದ ಬಂಧ ವಿಮೋಚನೆಯಾಗಲಿ’ ಎಂಬ ಸ್ಪಷ್ಟ ರಾಜಕೀಯ ಉದ್ದೇಶದ ಘೋಷಣೆಗಳೊಂದಿಗೆ ಸಾರ್ವತ್ರಿಕ ಮುಷ್ಕರ ನಡೆಯಿತು. ಆಗಸ್ಟ್ ೧೧ರಂದು ಪರಿಸ್ಥಿತಿಯ ಗಂಭೀರತೆಯನ್ನು ತಿಳಿದುಕೊಂಡ ಅಮೆರಿಕಾ ಸಾಮ್ರಾಜ್ಯಶಾಹಿ ಬಂಡಾಯದಲ್ಲಿ ಮಧ್ಯೆ ಪ್ರವೇಶಿಸಿತು. ಮಾಚಾಡೋನನ್ನು ಸೆರೆಹಿಡಿಯುವ ನಾಟಕ ನಡೆಯಿತು. ಅಮೆರಿಕಾ ರಾಯಭಾರಿ ಒಪ್ಪಿಗೆ ಪಡೆದು ಮಾಚಾಡೋ ದೇಶ ಬಿಟ್ಟು ಹೋದ. ಈ ಹಿಂದೆ ಅಮೆರಿಕಾ ದಲ್ಲಿ ಕ್ಯೂಬಾ ರಾಯಭಾರಿ ಆಗಿದ್ದ ಸೆಪೆಡೆಸ್‌ನನ್ನು ಸರಕಾರದ ನೂತನ ಮುಖ್ಯಸ್ಥನನ್ನಾಗಿ ಮಾಡಲಾಯಿತು. ಇವನ ಸರಕಾರ ಅಲ್ಪಾಯುಷಿ ಆಗಿತ್ತು. ಕಾರಣ, ಅವನ ಅಮೆರಿಕಾ ಪರವಾದ ನೀತಿಗಳು, ಕಾರ್ಯಕ್ರಮಗಳು ಜನರನ್ನುಇನ್ನಷ್ಟು ಸಿಟ್ಟಿಗೇಳಿಸಿದವು. ಪುಟ್ಟ ಬಂಡವಾಳಶಾಹಿಗಳೂ ರಾಷ್ಟ್ರೀಯ ಬಂಡವಾಳಶಾಹಿಗಳೂ ಕೂಡಿದಂತೆ, ಸಮಸ್ತ ಕಾರ್ಮಿಕ ವರ್ಗ, ಅಂದರೆ ನಗರಗಳಲ್ಲಿನ ಕಾರ್ಮಿಕರು, ದೊಡ್ಡ ದೊಡ್ಡ ಹೊಲಗಳಲ್ಲಿ ದುಡಿಯುವ ಕೃಷಿಕಾರ್ಮಿಕರು, ಬಡರೈತರು, ವಿದ್ಯಾರ್ಥಿಗಳು ಈ ಬಂಡಾಯದ ಮುಖ್ಯ ಬೆನ್ನೆಲುಬಾಗಿದ್ದರು. ಜೊತೆಗೆ ಕ್ರಾಂತಿಕಾರಿ ರಾಷ್ಟ್ರಪ್ರೇಮ ಕೂಡಾ ಸೈನಿಕರಲ್ಲಿ ಉಕ್ಕೇರಿ ಬಂದಿತು. ಸರಕಾರದ ಆಜ್ಞೆಯನ್ನು ಪಾಲಿಸಲು ಸೈನಿಕರು ನಿರಾಕರಿಸಿದರು.

೧೯೩೩ರ ನವೆಂಬರ್‌ನಲ್ಲಿ ಸೈನಿಕ ಅಧಿಕಾರಿ ಬಾಟಿಸ್ಟಾನ್ ನೇತೃತ್ವದಲ್ಲಿ ಸೆಪೆಡಿಸ್ ಆಳ್ವಿಕೆಯನ್ನು ಕಿತ್ತೊಗೆದು, ಪ್ರೊ.ಗ್ರಾವು ಸಾನ್ ಮಾರ್ಟಿನನನ್ನು ಅಧಿಕಾರಕ್ಕೇರಿಸಲಾಯಿತು. ಮಾರ್ಟಿನ್ ತುಂಬಾ ಜನಪ್ರಿಯನಾಗಿದ್ದನು. ೧೯೩೩ರ ಕ್ರಾಂತಿಯಿಂದಾಗಿ, ರಾಷ್ಟ್ರೀಯ ಬಂಡವಾಳಶಾಹಿಗಳ ನೇತೃತ್ವದಲ್ಲಿ ಮತ್ತು ವಿಶಾಲ ಜನಸಮುದಾಯದ ಬೆಂಬಲದಿಂದ ಒಂದು ಹೊಸ ಪ್ರಭುತ್ವ ಅಧಿಕಾರಕ್ಕೆ ಬಂದಿತು. ಕ್ಯೂಬಾದ ಇತಿಹಾಸದಲ್ಲಿ ಇದು ಮೊದಲ ಪ್ರಯೋಗ. ಅದುವರೆಗೆ ಅಮೆರಿಕಾ ಸಾಮ್ರಾಜ್ಯಶಾಹಿಯ ಅರೆ ವಸಾಹತುಶಾಹಿಯ ಕೈಗೊಂಬೆ ಸರಕಾರಗಳೇ ಅಧಿಕಾರದಲ್ಲಿದ್ದವು. ಈಗ ಅದಕ್ಕೆ ತೀವ್ರ ಹಿನ್ನಡೆ ಆಯಿತು. ೧೯೦೧ರಲ್ಲಿ ಅಮೆರಿಕ ತನ್ನದೇ ವರ್ಚಸ್ಸಿನ ಸಂವಿಧಾನವನ್ನು ಕ್ಯೂಬಾದ ಮೇಲೆ ಹೇರಿತ್ತು. ಅದನ್ನು ಜನರು ತೀವ್ರವಾಗಿ ವಿರೋಧಿಸುತ್ತಿದ್ದರು. ಅದಕ್ಕೆ ತಿದ್ದುಪಡಿ ತಂದು ಕ್ಯೂಬಾದಲ್ಲಿ ಸೈನಿಕ ಹಸ್ತಕ್ಷೇಪ ಮಾಡಲು ಅಮೆರಿಕಾಕ್ಕೆ ಅಧಿಕಾರ ನೀಡಲಾಗಿತ್ತು.

ರಾಷ್ಟ್ರೀಯ ಸರಕಾರ ಕಾರ್ಮಿಕರ ‘೮ ಗಂಟೆಗಳ ಬೇಡಿಕೆ’ಯನ್ನು ಮಾನ್ಯತೆ ಮಾಡಿತು. ಅವರ ವೇತನ ಹೆಚ್ಚಿಸಿತು. ಅಮೆರಿಕದ ಕೆಲವು ಕಂಪನಿಗಳಿಗೆ ವ್ಯಾಪಾರೋದ್ಯಮ ನಡೆಸಲು ಕೆಲವು ನಿರ್ಬಂಧಗಳನ್ನು ವಿಧಿಸಿತು. ಈ ಧೋರಣೆಗಳಿಂದಾಗಿ ಹೊಸ ಸರಕಾರ ಅಮೆರಿಕಾ ಸಾಮ್ರಾಜ್ಯಶಾಹಿಯ ತೀವ್ರ ಕೋಪಕ್ಕೆ ಗುರಿಯಾಯಿತು. ಆಗಿನ ಅಮೆರಿಕಾದ ಅಧ್ಯಕ್ಷ ಎಫ್.ರೂಸ್‌ವೆಲ್ಟ್‌ನ ವಿದೇಶಾಂಗ ಧೋರಣೆ ಒಳ್ಳೆಯ ನೆರೆಹೊರೆ ಸಂಬಂಧವಿರಬೇಕೆಂದಾ ಗಿತ್ತು. ಆದರೆ, ಕ್ಯೂಬಾದ ಮೇಲೆ ಸೈನಿಕ ಕಾರ್ಯಾಚರಣೆ ಬೆದರಿಕೆ ನೀಡಿತು. ಆ ದಿಸೆಯಲ್ಲಿ ಯುದ್ಧ ನೌಕೆಗಳನ್ನು ಮುನ್ನಡೆಯಿಸಿತು. ಆದರೆ, ಜಾಗತಿಕ ಅಭಿಪ್ರಾಯಕ್ಕೆ ಹೆದರಿಯೇ ಏನೋ ಕ್ಯೂಬಾದ ಮೇಲೆ ನೇರ ಸೈನಿಕ ಕಾರ್ಯಾಚರಣೆಯ ದುಃಸ್ಸಾಹಸವನ್ನು ಕೈಬಿಟ್ಟಿತು. ಆಗ ಕ್ಯೂಬಾಕ್ಕೆ ಲ್ಯಾಟಿನ್ ಅಮೆರಿಕಾದ ಎಲ್ಲಾ ದೇಶಗಳ ಸಂಪೂರ್ಣ ಬೆಂಬಲವಿತ್ತು. ಆಂತರಿಕವಾಗಿ ಮಾರ್ಟಿನ್ ಸರಕಾರದ ಬಗ್ಗೆ ಜನಸಮುದಾಯಕ್ಕೆ ಅಪಾರ ವಿಶ್ವಾಸ ಹಾಗೂ ಮೆಚ್ಚುಗೆ ಇತ್ತು. ಆದುದರಿಂದ ಅಮೆರಿಕಾ ಸಾಮ್ರಾಜ್ಯಶಾಹಿ ಕ್ಯೂಬಾದ ಒಳಗಿನಿಂದಲೇ ಕ್ಷಿಪ್ರ ಕ್ರಾಂತಿ ನಡೆಸಲು ಸಂಚು ಹೂಡಿತು. ಮಾರ್ಟಿನ್ ಅವರ ಪ್ರಜಾ ಪ್ರಭುತ್ವವಾದಿ ಸಂಘಟನೆಗಳ ಹಾಗೂ ಕಮ್ಯುನಿಸ್ಟರ ವಿರೋಧಿ ಮನೋಭಾವದಿಂದಾಗಿ ಅನತಿಕಾಲದಲ್ಲಿಯೇ ಜನರ ಬೆಂಬಲ ಸೀಮಿತವಾಯಿತು. ಪರಿಸ್ಥಿತಿಯ ದುರುಪಯೋಗ ಪಡೆದು, ಮಹತ್ವಾಕಾಂಕ್ಷಿ ಸೇನಾಧಿಕಾರಿ ಬಾಟಿಸ್ಟಾ ೧೯೩೪ರ ಜೂನ್‌ನಲ್ಲಿ ಅಮೆರಿಕಾದ ಏಜೆಂಟರಿಂದ ಸಾಕಷ್ಟು ಹಣ ಪಡೆದು, ಮಾರ್ಟಿನ್ ರಾಜೀನಾಮೆ ಕೊಡಲು ಪ್ರೇರೇಪಿಸಿದ. ಕ್ಯೂಬಾದಲ್ಲಿ ಪ್ರತಿಕ್ರಾಂತಿಕಾರಿಗಳ ಕೈ ಮೇಲಾಯಿತು. ಅಂದಿನಿಂದ ೨೪ ವರ್ಷಗಳ ಕಾಲ ಬಾಟಿಸ್ಟನ ಸರ್ವಾಧಿಕಾರ ಮುಂದುವರೆಯಿತು. ಕ್ಯೂಬಾದ ೨೦,೦೦೦ಕ್ಕೂ ಹೆಚ್ಚು ಜನರು ಹತರಾದರು.

ಹೊಸ ತಲೆಮಾರಿನವರಿಂದ ಬಂಡಾಯ(೧೯೫೩)

ಎರಡನೇ ಜಾಗತಿಕ ಯುದ್ಧದಲ್ಲಿ ಅಂತಿಮವಾಗಿ ಬಂಡವಾಳಶಾಹಿ ಸಾಮ್ರಾಜ್ಯಶಾಹಿ ಪ್ರಭುತ್ವಗಳ ಕರಾಳ ರೂಪಗಳಾದ ಜರ್ಮನಿಯ ಹಿಟ್ಲರ್‌ನ ನಾಜಿಸಂ, ಇಟಲಿಯ ಮುಸಲೋನಿಯ ಫ್ಯಾಸಿಸಂ ಮತ್ತು ಜಪಾನಿನ ಹಿರೋಹಿಟೋವಿನ ಮಿಲಿಟರಿಸಂ ಸಂಪೂರ್ಣ ಸೋತವು. ಹಾಗೆಯೇ ಸೋವಿಯತ್ ಒಕ್ಕೂಟ ಪ್ರತಿನಿಧಿಸುತ್ತಿದ್ದ ಜಾಗತಿಕ ಸಮಾಜವಾದಕ್ಕೆ ಅಪೂರ್ವ ಜಯ ದೊರಕಿತು. ಪೂರ್ವ ಯುರೋಪ್, ಚೀನಾ, ವಿಯಟ್ನಾಂ ದೇಶಗಳಲ್ಲಿ ರಾಷ್ಟ್ರೀಯ ವಿಮೋಚನಾ ಸಮರಗಳೊಂದಿಗೆ ಜನತಾ ಪ್ರಜಾ ಪ್ರಭುತ್ವ ಕ್ರಾಂತಿಗಳೂ ಜಯಗಳಿಸಿದವು. ಭಾರತವು ಸೇರಿದಂತೆ ನೂರಾರು ವಸಾಹತುಗಳು ಸ್ವಾತಂತ್ರ್ಯ ಗಳಿಸಿದವು. ಎಲ್ಲಾ ರಾಷ್ಟ್ರಗಳ ಸಾರ್ವಭೌಮತೆಯನ್ನು ಗೌರವಿಸುವ, ಅವುಗಳ ಆಂತರಿಕ ವಿಷಯಗಳಲ್ಲಿ ಯಾರೂ ಹಸ್ತಕ್ಷೇಪ ಮಾಡದಿರುವ, ಆರ್ಥಿಕ ಅಭಿವೃದ್ದಿಯಲ್ಲಿ ಪರಸ್ಪರ ಸಹಕರಿಸುವ, ವಿಶ್ವಶಾಂತಿ ಹಾಗೂ ನಿಶ್ಶಸ್ತ್ರೀಕರಣ ಸಾಧಿಸುವ ಉದಾತ್ತ ಧ್ಯೇಯೋದ್ದೇಶಗಳನ್ನು ಹೊತ್ತ ೧೯೪೫ರಲ್ಲಿಯೇ ಅಸ್ತಿತ್ವಕ್ಕೆ ಬಂದಿತು. ಲ್ಯಾಟಿನ್ ಅಮೆರಿಕಾವನ್ನು ಗುಲಾಮಗಿರಿಗೆ ಕೆಡವಿ ಕೊಬ್ಬಿದ ಪೋರ್ಚುಗಲ್ ಮತ್ತು ಸ್ಪೈನ್ ದೇಶಗಳಲ್ಲಿಯೂ ಫ್ಯಾಸಿಸಂ ಹಾಗೂ ಮಿಲಿಟರಿ ಸರ್ವಾಧಿಕಾರದ ವಿರುದ್ಧ ಆಂತರಿಕ ಹಾಗೂ ಅಂತಾರಾಷ್ಟ್ರೀಯ ಮಟ್ಟಗಳ ಹೋರಾಟಗಳು ನಡೆಯುತ್ತಲೇ ಇದ್ದವು. ಮಿಂಚಿನ ವೇಗದಲ್ಲಿ ಸಂಭವಿಸುತ್ತಿದ್ದ ಈ ಎಲ್ಲಾ ಜಾಗತಿಕ ರಾಜಕೀಯ ವಿದ್ಯಮಾನಗಳು ಕ್ಯೂಬಾ ಮತ್ತು ಲ್ಯಾಟಿನ್ ಅಮೆರಿಕದ ಜನರನ್ನು ಬಲವಾಗಿ ತಟ್ಟಿದವು. ಎರಡನೇ ಜಾಗತಿಕ ಯುದ್ಧಾನಂತರದ ೧೯೪೫ರಲ್ಲಿ ಅಮೆರಿಕಾವು ಸೋತ ಜಪಾನಿನ ಮೇಲೆ ಅಣು ಅಸ್ತ್ರಗಳನ್ನು ಸಿಡಿಸಿ, ಅಮಾನುಷ ನರಹತ್ಯೆ ಹಾಗೂ ಸಂಪತ್ತು ನಾಶಗೊಳಿಸಿ ಜಗತ್ತಿಗೆ ತಾನೇ ಗುರಿಕಾರ ಎಂದು ಗಂಟೆ ಬಾರಿಸಿದ್ದು ಕ್ಯೂಬಾ ಜನರಿಗೆ ಕೇಳಿಸಿತು. ಹೊಸ ತಲೆಮಾರಿನ ತರುಣರು ಸಶಸ್ತ್ರ ಬಂಡಾಯ ಹೂಡಲು ಮತ್ತೆ ಸನ್ನದ್ಧರಾದರು.

ಕ್ಯೂಬಾದಲ್ಲಿ ೨೬ ವಯಸ್ಸಿನ ತರುಣ ಫೀಡಲ್ ಕ್ಯಾಸ್ಟ್ರೊ ಹೊಸ ತಲೆಮಾರಿನ ಕ್ರಾಂತಿಕಾರಿ ಯುವಕರ ಮುಂದಾಳತ್ವ ವಹಿಸಿದರು. ಇವರು ಹವಾನಾ ವಿಶ್ವವಿದ್ಯಾಲಯದಿಂದ ನ್ಯಾಯಶಾಸ್ತ್ರ ಪದವೀಧರರಾದರು. ವಿದ್ಯಾರ್ಥಿ ದೆಸೆಯಲ್ಲಿ ಪರ್ವತಾರೋಹಣ ಪ್ರವೀಣರೂ, ಸಮರ್ಥ ಕ್ರೀಡಾಪಟುಗಳೂ ಆಗಿದ್ದರು. ರಾಜಕೀಯ, ಅರ್ಥಶಾಸ್ತ್ರ, ನ್ಯಾಯಶಾಸ್ತ್ರ ಮೊದಲಾದವುಗಳ ಕುರಿತು ಸಾವಿರಾರು ಪುಟಗಳಷ್ಟು ಅಧ್ಯಯನ ಮಾಡಿದ್ದರು. ವಿದ್ಯಾರ್ಥಿಯಾಗಿದ್ದಾಗಲೇ ಮಾರ್ಕ್ಸ್‌ವಾದ-ಲೆನಿನ್ ವಾದದತ್ತ ಆಕರ್ಷಕವಾದರು ಮತ್ತು ಅಲ್ಲಿಯ ಕಮ್ಯುನಿಸ್ಟ್ ಪಕ್ಷಕ್ಕೆ ಸೇರಿದರು. ಪ್ರಾರಂಭದಲ್ಲಿ ಭಾವನಾತ್ಮಕವಾಗಿ ಇವರು ಸಮಾಜವಾದಕ್ಕೆ ಒಲಿದಿದ್ದರು. ಅನತಿಕಾದಲ್ಲಿಯೇ ಸ್ಪಷ್ಟ ಕಾರ್ಯಕ್ರಮ ಪ್ರಯೋಗ ಆಧರಿತ ವೈಜ್ಞಾನಿಕ ಸಮಾಜವಾದಕ್ಕೆ ಕ್ಯಾಸ್ಟ್ರೊ ತಮ್ಮ ನಿಷ್ಠೆ ಗಟ್ಟಿಗೊಳಿಸಿದರು. ಕ್ಯೂಬಾದ ರಾಷ್ಟ್ರಪಿತ ಜೋಸ್ ಮೂರ್ತಿ ಮತ್ತು ಲ್ಯಾಟಿನ್ ಅಮೆರಿಕಾದ ವೀರಸ್ವಾತಂತ್ರ್ಯ ಹೋರಾಟಗಾರಾದ ಸೈಮನ್ ಬೊಲಿವಿಯರ್ ಹಾಗೂ ಮಿರಾಂಡಾ ಮುಂತಾದ ಹಿರಿಯ ಚೇತನಗಳ ಚಿಂತನಾಲಹರಿಗಳಿಂದ ಸ್ಫೂರ್ತಿ ಪಡೆದರು. ‘‘ಹಣಕ್ಕಿಂತ ಗೌರವ ಮುಖ್ಯ’’ ಎಂದು ದಾರ್ಶನಿಕ ಮೂರ್ತಿಯ ವಚನವನ್ನು ಕಾಯಾ ವಾಚಾ ಮನಸಾ ಸ್ವೀಕರಿಸಿ ಆಗಿನ ಬೆಟಿಸ್ಟಾನ್ ಸರ್ವಾಧಿಕಾರಿ ಆಳ್ವಿಕೆಯ ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದರು.

ಆ ಕಾಲದಲ್ಲಿ ಕ್ಯೂಬಾದ ಕಮ್ಯುನಿಸ್ಟರಲ್ಲಿ ಕಾರ್ಮಿಕ, ರೈತ, ಶಿಕ್ಷಕ, ವಿದ್ಯಾರ್ಥಿ, ಯುವಜನ, ಮಹಿಳಾ, ವಿವಿಧ ವೃತ್ತಿಯ ಮೂಲಕ ನಿಷ್ಠಾವಂತರು ಇದ್ದರು. ಅವರಿಗೆ ಕಾರ್ಮಿಕ ವರ್ಗದ ಹಿತಾಸಕ್ತಿಯ ಕುರಿತು ಕಾಳಜಿ ಇತ್ತೇ ಹೊರತು ಅದರ ಬಂಧ ವಿಮೋಚನೆಗೆ ಮಾರ್ಗೋಪಾಯ ಕಂಡುಹಿಡಿಯುವ ರಾಜಕೀಯ ಪ್ರಜ್ಞೆಯ ಅಭಾವವಿತ್ತು. ಆದರೂ, ಕ್ಯೂಬಾದ ಕಮ್ಯುನಿಸ್ಟ್ ಪಕ್ಷವು ಸರ್ವಾಧಿಕಾರಿ ಬೆಟೆಸ್ಚಾನ್ ಆಳ್ವಿಕೆ ವಿರುದ್ಧ ಮತ್ತು ಅದನ್ನು ಬೆಂಬಲಿಸುತ್ತಿದ್ದ ಅಮೆರಿಕಾ ಸಾಮ್ರಾಜ್ಯಶಾಹಿ ವಿರುದ್ಧ ಹೋರಾಡುತ್ತಲೇ ಬಂದಿತು. ೧೯೫೨ರಲ್ಲಿ ಆ ಪಕ್ಷದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸನ್ನಿವೇಶಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಕಾಸ್ಟ್ರೊ ಮತ್ತು ಅವರ ಸಂಗಾತಿಗಳು ಸರ್ವಾಧಿಕಾರಿ ಬಾಟೆಸ್ಟಾನ ಆಳ್ವಿಕೆಯನ್ನು ಕೊನೆಗೊಳಿಸಲು ಸಶಸ್ತ್ರ ಬಂಡಾಯ ಹೂಡಲು ಕ್ರಾಂತಿ ಸೇನೆ ಯನ್ನು ಕಟ್ಟಿದರು. ಮಾರ್ಕ್ಸ್‌ವಾದ ಲೆನಿನ್ ವಾದವನ್ನು ಕೇವಲ ಕಂಠಪಾಠ ಮಾಡದೇ, ರಷ್ಯಾ-ಚೀನಾ ಕ್ರಾಂತಿಗಳ ಮಾದರಿಗಳ ನೇರ ನಕಲು ತೆಗೆಯದೇ, ಅವೆಲ್ಲವುಗಳಿಂದ ಪಾಠ ಕಲಿತು ಮತ್ತು ಸ್ಫೂರ್ತಿ ಪಡೆದು ಕ್ರಾಂತಿಯ ಕಾರ್ಯಾಚರಣೆಯಲ್ಲಿ ಧುಮುಕಿದರು.

೧೯೫೩ರಲ್ಲಿ ಹುತಾತ್ಮ ಜೋಸ್ ಮೂರ್ತಿಯ ೧೦೦ನೇ ಹುಟ್ಟುಹಬ್ಬದ ವಿಚಾರಗಳ ಸಂದರ್ಭ ಮುಚ್ಚಿದ ಕೆಂಡಗಳು ಮಿನುಗಿದವು. ಬಂಡಾಯದ ವಿಚಾರಗಳ ಕಾವಿನಿಂದ ವಾತಾವರಣದ ಬಿಸಿ ಆಯಿತು. ನಗರದಿಂದ ಬಂಡಾಯ ಆರಂಭಿಸಬೇಕು, ಮಾಂಕೋಡಾ ಗೆರಿಸನ್ ಮಿಲಿಟರಿ ನೆಲೆಯನ್ನು ಹಿಡಿಯಬೇಕು, ಅಲ್ಲಿಂದ ರಾಜಧಾನಿ ಹವಾನಾಕ್ಕೆ ನುಗ್ಗಬೇಕು ಎಂದು ಕೆರಿಬಿಯನ್ ಸಮುದ್ರ ತೀರದ ಕೋಳಿ ಸಾಕಣೆಯ ಕೇಂದ್ರದಲ್ಲಿ ಕ್ಯಾಸ್ಟ್ರೊ ಮತ್ತು ಅವರ ಕ್ರಾಂತಿಕಾರಿ ಸಂಗಾತಿಗಳು ಕೂಡಿಕೊಂಡು ಯೋಜನೆ ಸಿದ್ಧಗೊಳಿ ಸಿದರು. ಕಸಕೊಳೆಗಳನ್ನು ಎಲ್ಲಾ ಗೂಡಿಸಿ ಸ್ವಚ್ಚಗೊಳಿಸುವ ‘‘ಪೊರಕೆ’’ ಈ ಕ್ರಾಂತಿಕಾರಿಗಳ ಲಾಂಛನವಾಗಿತ್ತು. ಅವರಲ್ಲಿ ಶಸ್ತ್ರಾಸ್ತ್ರಗಳು ತೀರಾ ಕಡಿಮೆ ಇದ್ದವು. ಹೆಚ್ಚಿನ ಕ್ರಾಂತಿಕಾರಿಗಳು ಹವಾನಾದಲ್ಲಿ ಸಶಸ್ತ್ರ ಬಂಡಾಯಗಾರರನ್ನು ಎದುರುಗಾಣುತ್ತಿದ್ದರು. ೧೯೫೩ನೆಯ ಜುಲೈ ೨೬ರಂದು ಕ್ರಾಂತಿಕಾರರು ಮುನ್ನುಗ್ಗಿದರು. ಅಸಮ ಬಲದ ಹೋರಾಟದಲ್ಲಿ ತಾತ್ಕಾಲಿಕವಾಗಿ ಬಾರ್ಟೆಸ್ಟಾನ್ ಸೇನೆಗೆ ಜಯವಾಯಿತು. ಕ್ಯಾಸ್ಟ್ರೊ ಮತ್ತು ಅವರ ಸಂಗಾತಿಗಳು ಸಣ್ಣ ಸಣ್ಣ ಗುಂಪುಗಳಾಗಿ ದೂರದ ಗುಡ್ಡ-ಕಾಡುಗಳಿಗೆ ಚದುರಿ ಹೋಗಬೇಕಾಯಿತು. ಹಸಿವು ನೀರಡಿಕೆಗಳಿಂದ, ಉರಿ ಬಿಸಿಲಿನಿಂದ ಬಳಲಿದರು ಮತ್ತು ಕೆಲವರು ಸಾವನ್ನಪ್ಪಿದರು. ಅವರಲ್ಲಿ ಹೆಚ್ಚಿನವರನ್ನು ಕೆಲವೇ ದಿನಗಳಲ್ಲಿ ಬಾಟೆಸ್ಟಾನ್ ಸೇನೆ ಸೆರೆ ಹಿಡಿಯಿತು. ೧೦೦ಕ್ಕೂ ಹೆಚ್ಚು ಜನರನ್ನು ಜೈಲಿಗೆ ಸೇರಿಸಿ ತೀವ್ರ ಚಿತ್ರಹಿಂಸೆಗೆ ಗುರಿಪಡಿಸಲಾಯಿತು. ವಿಚಾರಣೆ ಇಲ್ಲದೆ ೫೫ ಜನ ಕೈದಿಗಳನ್ನು ಕೊಲೆಗೈದು ಜೈಲಿನ ಕೋಣೆಗಳ ಮಾಡು ನೆಲೆ ಗೋಡೆಗಳು ರಕ್ತ, ಮಾಂಸ, ಮೆದುಳು, ಎಲುಬುಗಳಿಂದ ತುಂಬಿದವು. ಬದುಕಿ ಉಳಿದವರನ್ನು ವಿಚಾರಣೆಯ ನಾಟಕ ನಡೆಸಿ, ಕ್ಯಾಸ್ಟ್ರೊಗೆ ೧೫ ವರ್ಷ, ಅವರ ತಮ್ಮ ರಾಹುಲ್‌ಗೆ ೧೩ ವರ್ಷ, ಇತರರಿಗೂ, ದೀರ್ಘಾವಧಿ ಶಿಕ್ಷೆ ವಿಧಿಸಲಾಯಿತು. ಆದರೆ. ಜನಾಭಿಪ್ರಾಯದ ಒತ್ತಡಕ್ಕೆ ಮಣಿದು ಎರಡೇ ವರ್ಷಗಳಲ್ಲಿ ಇವರೆಲ್ಲರನ್ನೂ ಬಿಡುಗಡೆ ಮಾಡಲಾಯಿತು. ಕ್ಯಾಸ್ಟ್ರೊ ಮತ್ತು ರಾಹುಲ್ ಮೆಕ್ಸಿಕೋ ದೇಶಕ್ಕೆ ತಲೆ ಮರೆಸಿಕೊಂಡು ಹೋಗಿ ಮುಂದಿನ ಕ್ರಾಂತಿಗೆ ಸಿದ್ಧತೆ ನಡೆಸಿದರು.

ಸೆರೆ ಹಿಡಿಯಲ್ಪಟ್ಟವರ ಪರವಾಗಿ, ತನ್ನನ್ನೂ ಸೇರಿದಂತೆ, ಕ್ಯಾಸ್ಟ್ರೊ ವಕೀಲರಾಗಿ ತಾವೇ ನ್ಯಾಯಾಲಯದಲ್ಲಿ ವಾದಿಸಿದರು. ‘‘ಹಿಸ್ಟರಿ ವಿಲ್ ಎಬ್ಸಾಲ್ಟ್ ಮಿ- ಚರಿತ್ರೆ ತನ್ನನ್ನು ನಿರಪರಾಧಿಯನ್ನಾಗಿ ಮಾಡಲಿದೆ’’ ಎಂಬ ಶಿರೋನಾಮೆಯಲ್ಲಿ ಅವರ ಸುದೀರ್ಘ ಹಾಗೂ ಚರಿತ್ರಾರ್ಹವಾದ ವಾದ ಸರಣಿ ಮುಂದೆ ಸುಮಾರು ೧೦೦ ಪುಟಗಳ ಪುಸ್ತಕ ರೂಪದಲ್ಲಿ ಜಗತ್ತಿನ ಹಲವು ಭಾಷೆಗಳಲ್ಲಿ ಲಕ್ಷಗಟ್ಟಲೆ ಪ್ರತಿಗಳಾಗಿ ಪ್ರಕಟವಾಯಿತು. ಇದು ೧೮೪೮ರಲ್ಲಿ ಮಾರ್ಕ್ಸ್-ಎಂಗೆಲ್ಸ್ ಪ್ರಕಟಿಸಿದ ‘‘ಕಮ್ಯುನಿಸ್ಟ್ ಮೆನಿಫೆಸ್ಟೊ’’ವಿನಷ್ಟೇ ಮಹತ್ವವಾದದ್ದು. ಲ್ಯಾಟಿನ್ ಅಮೆರಿಕಾ, ಆಫ್ರಿಕಾ, ಏಷ್ಯಾ ತ್ರಿಖಂಡಗಳ ಶೋಷಿತ ಜನರ ಮುಂದುವರಿದ ಕ್ರಾಂತಿಗೆ ಇದು ಕೈದೀವಿಗೆ ಆಯಿತು. ಉತ್ಕಟ ರಾಷ್ಟ್ರಪ್ರೇಮ, ಅಭೂತ ಪೂರ್ವ ಕಾವ್ಯ-ಸಾಹಿತ್ಯ, ಹರಿತ ವೈಚಾರಿಕತೆ, ದಿವ್ಯವಿಜ್ಞಾನ, ಆಳವಾದ ಅರ್ಥಶಾಸ್ತ್ರ, ಪ್ರಬುದ್ಧ ರಾಜಕಾರಣ, ಉದಾತ್ತ ತತ್ವಜ್ಞಾನ ಮತ್ತು ಅಪಾರ ಮಾನವೀಯತೆಯಿಂದ ತುಂಬಿದ ಈ ಮಹಾನ್ ಕೃತಿಯ ಮುಖ್ಯಾಂಶಗಳನ್ನು ಮತ್ತು ಮಹತ್ವವನ್ನು ಇಲ್ಲಿ ಸಂಗ್ರಹಿಸಿ ಕೊಡಲಾಗಿದೆ.

  • ಅಪರಾಧಿಗಳ ಪರವಾಗಿ ವಾದಿಸಲು, ವಕೀಲರನ್ನು ನೇಮಿಸಲು, ಕಾನೂನು ಪುಸ್ತಕಗಳನ್ನು ಪಡೆಯಲು, ಬಂಧಿತರನ್ನು ವಕೀಲರು ಭೇಟಿಯಾಗಲು, ಬಂಧಿತರು ಪರಸ್ಪರ ಸಂದರ್ಶಿಸಲು, ದೀರ್ಘಕಾಲ ತನ್ನನ್ನು ಮತ್ತು ಸಂಗಾತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಅವಕಾಶ ನೀಡದಿರುವುದನ್ನು ಕ್ಯಾಸ್ಟ್ರೊ ಖಂಡಿಸಿದರು. ಅವರು ತಮ್ಮ ವಾದವನ್ನು ಮುಂದುವರಿಸದಂತೆ ತಾನು ರೋಗಗ್ರಸ್ಥನೆಂದು ಸುಳ್ಳು ವೈದ್ಯಕೀಯ ಪ್ರಮಾಣಪತ್ರವನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುವುದನ್ನು, ತಾನು ಜೈಲಿನಿಂದ ತಪ್ಪಿಸಿಕೊಂಡಿರುವುದಾಗಿ ಸುಳ್ಳು ಸುದ್ದಿ ಹಬ್ಬಿಸಿ ತನ್ನನ್ನು ಜೈಲಿನಲ್ಲಿಯೇ ಕೊಲೆ ಮಾಡಲು ನಡೆದ ಪಿತೂರಿಗಳನ್ನು ಬಹಿರಂಗಗೊಳಿಸಿದರು. ಸರ್ವಾಧಿಕಾರ ಬಾಟಿಸ್ಟಾ ತನ್ನ ಆಕಾಶವಾಣಿ ಭಾಷಣಗಳ ಮೂಲಕ ಪತ್ರಿಕಾ ಸುದ್ದಿ ಸಮಾಚಾರಗಳ ಮೂಲಕ ಸುಳ್ಳು ಕಂತೆ ಬಿಚ್ಚುತ್ತಿದ್ದಾರೆ ಎಂದು ಎಳೆ ಎಳೆಯಾಗಿ ಎತ್ತಿ ತೋರಿಸಿದರು.
  • ೬೦ ಜನ ಬಂಧಿತರಲ್ಲಿ ೫೫ ಜನರನ್ನು-ಕ್ರಾಂತಿಕಾರಿಗಳನ್ನು ಜೈಲಿನಲ್ಲಿಯೇ ಅಮಾನುಷ ಚಿತ್ರಹಿಂಸೆಗೆ ಒಳಪಡಿಸಿ ಕೊಲೆ ಮಾಡಿದುದನ್ನು ಮತ್ತು ಹತ್ಯೆಗೊಳಗಾದವರ ರಕ್ತ, ಮಾಂಸ, ಮಿದುಳು, ಚರ್ಮ, ಎಲುಬುಗಳು ಜೈಲಿನ ಕೋಣೆಗಳ ಮಾಡು-ನೆಲ-ಗೋಡೆಗಳಲ್ಲಿ ಚಲ್ಲಾಡುತ್ತಿದ್ದುದನ್ನು ಜೈಲನ್ನೇ ಕೊಲೆಗಳ ಕಾರ್ಯಾಗಾರವನ್ನಾಗಿ ಮಾರ್ಪಾಡುಗೊಳಿಸಿದುದನ್ನು ಮತ್ತು ಕೈದಿಗಳ ಖಾಸಗೀ ವಸ್ತುಗಳನ್ನು ಅಪಹರಿಸಿದ ಹೀನಕೃತ್ಯ ಮಾಡಿದುದನ್ನು ಕಟುವಾಗಿ ನಿಂದಿಸಿದರು. ಹಿಂದೆ ಕ್ರೌರ್ಯಕ್ಕೆ ಒಳಗಾದ ಮಹಿಳಾ ಬಂಧಿತರ ಧೈರ್ಯ, ಸಾಹಸ, ಶೌರ್ಯಗಳನ್ನು ಶ್ಲಾಘಿಸಿದರು.
  • ಮುನಿಸಿಪಲ್ ಆಸ್ಪತ್ರೆಯ ಒಂದು ಚಿಕ್ಕ ಕೊಠಡಿಯಲ್ಲಿ ನಡೆದ ರಾಜಕೀಯ ಅಪರಾಧಿಗಳ ವಿಚಾರಣೆಯನ್ನು ಆದಷ್ಟು ರಹಸ್ಯವಾಗಿ ಮಾಡಿದುದನ್ನು, ಸಾರ್ವಜನಿಕರಿಗೆ ಹಾಗೂ ಎಲ್ಲ ಪತ್ರಕರ್ತರಿಗೆ ಹಾಜರಿರಲು ಅವಕಾಶ ಕೊಡದಿರುವುದನ್ನು, ವಿಚಾರಣೆಯ ವಿವರಗಳನ್ನು ಪತ್ರಿಕೆಗಳಲ್ಲಿ ಪ್ರಕಟವಾಗದಂತೆ ಸೆನ್ಸಾರ್ ಮಾಡಿರುವುದನ್ನು, ವಿಚಾರಣಾ ಕೋಣೆಯಲ್ಲಿ ನೂರಾರು ಸಶಸ್ತ್ರ ಕಾವಲು ಇಟ್ಟಿರುವುದನ್ನು ಖಂಡಿಸಿದರು. ಸರ್ವಾಧಿಕಾರಿ ಬಾಟಿಸ್ಟ್ ಸರಕಾರ ಸತ್ಯಕ್ಕೆ ಹೆದರುತ್ತಿದೆ ಎಂದು ಆಪಾದಿಸಿದರು.
  • ಆಪಾದನೆ ಸಾಬೀತುಪಡಿಸಲು ಸರಕಾರಿ ವಕೀಲ ಕೇವಲ ೨ ನಿಮಿಷ ತೆಗೆದುಕೊಂಡಿದ್ದ. ಒಬ್ಬ ಸಾಮಾನ್ಯ ಕಿಸೆ ಕಳ್ಳನ ಅಪರಾಧವನ್ನು ಸಾಬೀತುಪಡಿಸಲು ಇದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳಲಾಗುತ್ತಿತ್ತು. ೨೬ ವರ್ಷಗಳ ಜೀವಾವಧಿ ಶಿಕ್ಷೆ ಅನುಭವಿಸು ವಂತಹ ರಾಷ್ಟ್ರದ್ರೋಹ, ಪ್ರಭುತ್ವದ ವಿರುದ್ಧ ಪಿತೂರಿ-ಬಂಡಾಯ, ಸಂವಿಧಾನದ ಉಲ್ಲಂಘನೆ ಮುಂತಾದ ಗಂಭೀರ ಆಪಾದನೆಗಳನ್ನು ತನ್ನ ಮೇಲೆ ಹೇರಿರುವುದನ್ನು ಸಾಬೀತು ಪಡಿಸಲು ನ್ಯಾಯಾಲಯದಲ್ಲಿ ಸರಕಾರಿ ವಕೀಲ ಕೇವಲ ೨ ನಿಮಿಷ ತೆಗೆದುಕೊಂಡಿರುವುದರಿಂದಲೇ ತಾನು ಅಪರಾಧಿ ಅಲ್ಲ ಎಂದು ವಾದಿಸಿದರು.