ಕ್ಯೂಬಾದಲ್ಲಿ ಅಮೆರಿಕಾ ನೀತಿ

ಒಟ್ಟು ಸ್ಪೇನ್‌ನ ವಸಾಹತಾಗಿದ್ದ ಕ್ಯೂಬಾದ ಸ್ವಾತಂತ್ರ್ಯ ಹೋರಾಟದಲ್ಲಿ ಮಧ್ಯ ಪ್ರವೇಶಿಸಿದ ಅಮೆರಿಕಾ ಸ್ಪೇನ್‌ನೊಂದಿಗೆ ಯುದ್ಧ ನಡೆಸಿ ಕ್ಯೂಬಾವನ್ನು ತನ್ನ ವಶಕ್ಕೆ ಪಡೆದುಕೊಂಡಿತು. ತನ್ನ ಹಸ್ತಕ್ಷೇಪಕ್ಕೆ ಅನುಕೂಲಕರವಾಗುವಂತಹ ಒಂದು ಸಂವಿಧಾನವು ೧೯೦೧ರಲ್ಲಿ ಸಿದ್ಧವಾಗುವಂತೆ ಮಾಡಿತು. ಈ ಅವಧಿಯಲ್ಲಿ ಅಮೆರಿಕಾದ ಕಂಪನಿಗಳು ಬಾಳೆ ತೋಟಗಳನ್ನು ಸ್ಥಾಪಿಸಿದ್ದರಿಂದ ಕ್ಯೂಬಾವೂ ಒಂದು ‘‘ಬನಾನಾ ರಿಪಬ್ಲಿಕ್’’ ಎಂದು ಕರೆಸಿಕೊಂಡಿತು. ೧೯೧೮ರಿಂದ ೧೯೩೯ರವರೆಗೆ ಅಮೆರಿಕಾದ ಕೈಬೊಂಟೆ ಮಚಾಡೋ ಆಳ್ವಿಕೆಯಲ್ಲಿ ಆರ್ಥಿಕತೆ ಕುಸಿದು ಜನರು ದಂಗೆ ಎದ್ದರು. ೧೯೩೩ರ ಆಗಸ್ಟ್ ೧ರಂದು ಬೃಹತ್ ಮತಪ್ರದರ್ಶನದ ಮೇಲೆ ಮಚಾಡೋನ ಸೈನೆ ಗುಂಡಿನ ಮಳೆಗರೆಯಿತು. ಇದರಿಂದ ಕೆರಳಿದ ಜನರು ಆಗಸ್ಟ್ ೪ರಂದು ಇನ್ನು ತೀವ್ರವಾಗಿ ಪ್ರತಿರೋಧ ವ್ಯಕ್ತಪಡಿಸಿದರು. ಪರಿಸ್ಥಿತಿಯ ಗಂಭೀರತೆಯನ್ನರಿತ ಅಮೆರಿಕಾ ಆಗಸ್ಟ್ ೧೧ರಂದು ತಾನೇ ಮಚಾಡೋನನ್ನು ಸೆರೆ ಹಿಡಿಯುವ ನಾಟಕ ಮಾಡಿತು. ಜನರ ಬೆಂಬಲದಿಂದ ಬಂದ ಪ್ರೊ.ಗ್ರಾವುಸಾನ್ ಮಾರ್ಟಿನ್ ಸರ್ಕಾರವು ಹಲವು ಸುಧಾರಣೆಗಳನ್ನು ಜಾರಿಗೊಳಿಸಿತು. ಅಮೆರಿಕಾದ ಕಂಪನಿಗಳಿಗೆ ನಿರ್ಬಂಧ ಹೇರಿತು. ಇದರಿಂದ ಅವಮಾನಿತನಾದ ಅಧ್ಯಕ್ಷ ರೂಸ್‌ವೆಲ್ಟ್ ಸರ್ಕಾರಕ್ಕೆ ಸೈನಿಕ ಕಾರ್ಯಾಚರಣೆಯ ಬೆದರಿಕೆಯೊಡ್ಡಿದ. ಆದರೆ ಸರ್ಕಾರಕ್ಕಿದ್ದ ಜನ ಬೆಂಬಲದ ಕಾರಣಕ್ಕೆ ಹಾಗೆ ಮಾಡದೆ ಸಿ.ಐ.ಎ. ಮೂಲಕ ಸೈನ್ಯಾಧಿಕಾರಿ ಬ್ಯಾಟಿಸ್ತಾನಿಗೆ ಬೆಂಬಲ ನೀಡಿ ೧೯೩೪ರ ಜೂನ್‌ನಲ್ಲಿ ಕ್ಷಿಪ್ರದಂಗೆ ನಡೆಸಿ ಸರ್ಕಾರವನ್ನು ಪಲ್ಲಟಗೊಳಿಸಿತು. ಅಂದಿನಿಂದ ೧೯೫೯ರಲ್ಲಿ ಫಿಡೆಲ್ ಕ್ಯಾಸ್ಟ್ರೋ, ಚೆಗುವಾರ ನೇತೃತ್ವದಲ್ಲಿ ಕ್ರಾಂತಿಯಾಗುವವರೆಗೂ ಬತಿಸ್ತಾ ನಡೆಸಿದ ಆಕ್ರಮ, ಅತ್ಯಾಚಾರಗಳಿಗೆ ಲೆಕ್ಕವಿಲ್ಲ. ಕ್ಯಾಸ್ಟ್ರೋನ ಕ್ರಾಂತಿಕಾರಿ ಸೈನ್ಯ ರಾಜಧಾನಿ ಬಾತಿಸ್ತಾನ ಸೈನ್ಯದೊಂದಿಗೆ ಕಾದಾಡುತ್ತಾ ರಾಜಧಾನಿ ಹವಾನವನ್ನು ವಶಪಡಿಸಿಕೊಂಡ ನಂತರ ಬಾತಿಸ್ತಾ ಪರಾರಿಯಾದ.

ಹೊಸ ಸರ್ಕಾರವು ಭೂ ಸುಧಾರಣೆ, ರಾಷ್ಟ್ರೀಕರಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿ, ಅಮೆರಿಕಾದ ಕಂಪನಿಗಳನ್ನು ಮುಟ್ಟುಗೋಲು ಹಾಕಿಕೊಂಡದ್ದರಿಂದ ಮತ್ತೆ ಅವಮಾನಗೊಂಡ ಅಮೆರಿಕಾ ಕ್ಯಾಸ್ಟ್ರೋನ್ ಸರ್ಕಾರವನ್ನು ಬೀಳಿಸಲು ಹಲವಾರು ಸಲ ವಿಫಲ ಯತ್ನಗಳನ್ನು ನಡೆಸಿದೆ. ಕ್ಯೂಬಾದಲ್ಲಿ ಗಡೀಪಾರಾದ ೧೪೦೦ ಜನರನ್ನು ಬ್ರಿಗೇಡ್ ೨೫೦೬ ಎಂಬ ಪಡೆ ರಚಿಸಿ ೧೯೬೧ರ ಏಪ್ರಿಲ್‌ನಲ್ಲಿ ರಾಜಧಾನಿಯ ಮೇಲೆ ದಾಳಿ ನಡೆಸಲು ನಡೆಸಿದ ಬೇ ಆಫ್ ಪಿಗ್ ದಾಳಿ ಪ್ರಮುಖವಾದುದು. ಈ ಯೋಜನೆಯನ್ನು ರೂಪಿಸಿದ್ದು ಅಧ್ಯಕ್ಷ ಐಸೆನ್ ಹೋವರ್. ೧೯೬೧ರ ಜನವರಿಯಲ್ಲಿ ಅಧಿಕಾರ ಹಿಡಿದ ಜಾನ್ ಎಫ್ ಕೆನಡಿ ಅದನ್ನು ಮುಂದುವರಿಸಿದ. ಸಿ.ಐ.ಎ.ಯು ಬ್ರಿಗೇಡ್ ೨೫೦೬ಕ್ಕೆ ತರಬೇತಿ ನೀಡಿ ಗ್ವಾಟೆ ಮಾಲದ ಕರಾವಳಿಯಿಂದ ಕಳುಹಿಸಿತು. ಅದು ಬೇ ಆಫ್ ಪಿಗ್ ಎಂಬಲ್ಲಿ ತಲುಪಿ ರಾಜಧಾನಿಯ ಮೇಲೆ ದಾಳಿ ನಡೆಸಬೇಕಾಗಿತ್ತು. ಅದೇ ಹೊತ್ತಿಗೆ ಅಮೆರಿಕಾನ್ ಬಿ ಬಾಂಬರ್‌ಗಳು ಕ್ಯೂಬಾದ ವಿಮಾನಗಳಂತೆ ಬಣ್ಣ ಬಳಿದುಕೊಂಡು ಬಂದು ಕ್ಯೂಬಾ ಸೈನಿಕರಿಗೆ ಗೊಂದಲ ಹುಟ್ಟಿಸಿ ಎರಡು ಹಂತಗಳಲ್ಲಿ ಬಾಂಬ್ ದಾಳಿ ನಡೆಸಬೇಕಿತ್ತು. ಮೊದಲ ಹಂತದ ಬಾಂಬ್ ದಾಳಿಯಾದ ತಕ್ಷಣದಲ್ಲಿಯೇ ಅಧ್ಯಕ್ಷ ಕ್ಯಾಸ್ಟ್ರೋ ಮಾಧ್ಯಮಗಳ ಮೂಲಕ ಅಮೆರಿಕಾದ ಈ ಸಂಚನ್ನು ಬಯಲುಗೊಳಿಸಿ, ಬ್ರಿಗೇಡ್ ೨೫೦೬ರ ದಂಗೆಕೋರರನ್ನು ಸೆರೆ ಹಿಡಿದನು. ಅಷ್ಟರಲ್ಲಿ ಸೋವಿಯತ್ ಒಕ್ಕೂಟವು ಕ್ಯೂಬಾದ ಬೆಂಬಲಕ್ಕೆ ಬಂದಿತು. ಅಮೆರಿಕಾವು ಕಾರ್ಯಾಚರಣೆಯನ್ನು ಅರ್ಧಕ್ಕೆ ನಿಲ್ಲಿಸಿತು.

ಅಮೆರಿಕಾವು ಸೋವಿಯತ್ ರಷ್ಯಾವನ್ನು ಗುರಿಯಾಗಿಸಿ ಟರ್ಕಿ ಹಾಗೂ ಇಟಲಿಗಳಲ್ಲಿ ಕ್ಷಿಪಣಿ ಸ್ಥಾವರಗಳನ್ನು ಸ್ಥಾಪಿಸಿದ್ದಕ್ಕೆ ಪ್ರತಿಯಾಗಿ ಸೋವಿಯತ್ ಒಕ್ಕೂಟವು ಕ್ಯೂಬಾದಲ್ಲಿ ಆರ್ ೧೨ ಕ್ಷಿಪಣಿಗಳನ್ನು ರಹಸ್ಯವಾಗಿ ಸ್ಥಾಪಿಸಿತು. ಇದು ಅಮೆರಿಕಾಕ್ಕೆ ತಿಳಿದ ಬಳಿಕ ಎರಡೂ ಅಗ್ರ ರಾಷ್ಟ್ರಗಳು ಕ್ಷಿಪಣಿ ವಿರೋಧಿ ಒಪ್ಪಂದಕ್ಕೆ ಸಹಿ ಹಾಕಿದವು. ಇದನ್ನು ‘ಕ್ಯೂಬನ್ ಮಿಸೈಲ್ ಕ್ರೈಸಿಸ್’ ಎನ್ನಲಾಗುತ್ತದೆ.

ಪನಾಮಾ ಅಪರೇಷನ್ ಇನ್ ಜಸ್ಟ್ ಕಾಸ್

೧೯೦೩ರಲ್ಲಿ ಕೊಲಂಬಿಯಾದಿಂದ ಪನಾಮವನ್ನು ಬೇರ್ಪಡಿಸಿದ ತರುವಾಯ ಅಮೆರಿಕಾವು ತನ್ನ ಸೇನಾ ಸ್ಥಾವರಗಳನ್ನು ಸ್ಥಾಪಿಸಿತು. ಜೊತೆಗೆ ಲ್ಯಾಟಿನ್ ಅಮೆರಿಕಾದಾದ್ಯಂತ ಪ್ರತಿಕ್ರಾಂತಿ ದಂಗೆಗಳನ್ನು ನಡೆಸಲು ಸ್ಥಾಪಿಸಲಾದ ಅಮೆರಿಕಾದ ಮಿಲಿಟರಿ ಕಮ್ಯಾಂಡ್‌ನ ಮುಖ್ಯ ಕೇಂದ್ರವನ್ನಿಲ್ಲಿ ಸ್ಥಾಪಿಸಿತು. ಜನರ ಬೆಂಬಲದಿಂದ ಅಧಿಕಾರಕ್ಕೇರಿದ ರಾಷ್ಟ್ರೀಯವಾದಿ ನಾಯಕ ಓಮರ್ ಟೋರಿಜೋಸ್ ಅಮೆರಿಕಾದೊಂದಿಗಿನ ಅವನ ರಾಜಿರಹಿತ ಕ್ರಿಯೆ ಹಾಗೂ ತನ್ನ ನಾಡಿನ ಬಗೆಗಿನ ಅಪಾರ ಪ್ರೇಮದ ಕಾರಣಕ್ಕಾಗಿ ಸಿ.ಐ.ಎ. ಕೃಪೆಯಿಂದ ೧೯೮೧ರಲ್ಲಿ ವಿಮಾನ ದುರಂತದಲ್ಲಿ ಸಾವಿಗೀಡಾದನು. ಅವನ ಜಾಗದಲ್ಲಿ ಮ್ಯಾನುಯೆಲ್ ನೋರಿಗಾನನ್ನು ಕೂರಿಸಲಾಯಿತು. ಇವನು ಅತ್ಯಂತ ಭ್ರಷ್ಟನೂ, ಕ್ರೂರಿಯೂ ಆಗಿ ರೂಪು ಗೊಂಡನು. ತನ್ನ ಸೇವೆಗೆ ಪ್ರತಿಯಾಗಿ ಸಿ.ಐ.ಎ ಮತ್ತು ಪೆಂಟಗಾನ್‌ಗಳಿಂದ ವೈಯಕ್ತಿಕ ಬಹುಮಾನಗಳನ್ನೂ ಪಡೆದನು. ಇವನ ಮೂಲಕ ಸಿಐಎಯು ನಿಕರಾಗುವಾ ವಿರುದ್ಧದ ಕಾಂಟ್ರಾಯುದ್ಧಕ್ಕೆ ಹಣ ಒದಗಿಸಲು ಕೊಕೇನ್ ಸಾಗಾಣಿಕೆಯ ಬಂದೂಕಿಗಾಗಿ ಡ್ರಗ್ ವ್ಯವಹಾರವನ್ನು ನಡೆಸಿತು.

೧೯೮೯ರಲ್ಲಿ ಜಾರ್ಜ್ ಬುಷ್(ಹಿರಿಯ) ಆಡಳಿತವು ನಾಟಕೀಯವಾಗಿ ಇದೇ ನೋರಿಗಾನನ್ನು ಬಂಧಿಸಿ ವಿಚಾರಣೆ ನಡೆಸಿ ೧೭೦ ವರ್ಷಗಳ ಸೆರೆವಾಸ ವಿಧಿಸಿತು. ೧೯೮೯ರ ಡಿಸೆಂಬರ್ ೨೦ರಂದು ನಡೆಸಿದ ಈ ಕಾರ್ಯಾಚರಣೆಯ ದಿನ ೨೭,೦೦೦ಕ್ಕೂ ಹೆಚ್ಚು ಅಮೆರಿಕಾನ್ ಪಡೆಗಳು ಪುಟ್ಟ ಪನಾಮಾದ ಮೇಲೆ ಲಗ್ಗೆ ಇಟ್ಟವು. ೩ ಸಾವಿರ ಸೈನಿಕರನ್ನು ಸೆರೆ ಹಿಡಿದು ಜನರ ಮೇಲೆ ಮನಬಂದಂತೆ ಹಿಂಸೆ ನಡೆಸಲಾಯಿತು. ಯುದ್ಧ ವಿಮಾನಗಳು ನಡೆಸಿದ ಬಾಂಬ್ ದಾಳಿಯಲ್ಲಿ ೨ರಿಂದ ೬ ಸಾವಿರ ಜನರು ಶವವಾದರು. ಈ ಕಾರ್ಯಾಚರಣೆಗೆ ಬುಷ್ ಇಟ್ಟ ಹೆಸರು ‘ಅಪರೇಷನ್ ಜಸ್ಟ್ ಕಾಸ್.’

ಪನಾಮ ಕಾಲುವೆ ಒಪ್ಪಂದದ ಪ್ರಕಾರ ೧೯೯೦ ಜನವರಿ ೧ರಂದು ಪನಾಮ ಕಾಲುವೆ ಮೇಲಿನ ಒಡೆತನವನ್ನು ಪನಾಮ ಸರ್ಕಾರಕ್ಕೆ ವಹಿಸಿಕೊಡಬೇಕಾಗಿತ್ತು. ಅದನ್ನು ಮತ್ತು ತನ್ನ ಸ್ವಾಮ್ಯದಲ್ಲಿಯೇ ಇರಿಸಿಕೊಳ್ಳಲು ಅಮೆರಿಕಾ ಬಯಸಿತ್ತು. ಇದಕ್ಕೆ ನೋರಿಗಾ ಒಪ್ಪದಿದ್ದುದೇ ಅವನ ಮೇಲಿನ ಅಮೆರಿಕಾದ ಸಿಟ್ಟಿಗೆ ಕಾರಣವಾಗಿತ್ತು. ‘ಅಪರೇಷನ್ ಜಸ್ಟ್ ಕಾಸ್’ ಹೆಸರಲ್ಲಿ ಅಮೆರಿಕಾವು ಪನಾಮ ಹಾಗೂ ಲ್ಯಾಟಿನ್ ಅಮೆರಿಕಾ ಮೇಲಿನ ಹಿಡಿತವನ್ನು ಬಿಗಿಗೊಳಿಸಿತು. ನಂತರದಲ್ಲಿ ಅಮೆರಿಕಾದ ಕೈಬೊಂಬೆಯಾಗಿ ಗಲ್ಲೆರ್ಮೊ ಎಂಡಾರಾನನ್ನು ಕೂರಿಸಲಾಗಿತ್ತು. ಅವನನ್ನೂ ಒಳಗೊಂಡಂತೆ ನಂತರದ ಎಲ್ಲಾ ಅಧ್ಯಕ್ಷರೂ ಅಮೆರಿಕಾಕ್ಕೆ ನಿಷ್ಠಾವಂತರಾಗಿದ್ದಾರೆ.

ಚಿಲಿಅಲೆಂಡೆಯ ಹತ್ಯೆ

ದಕ್ಷಿಣ ಅಮೆರಿಕಾದ ಚಿಲಿಯಲ್ಲಿ ೧೯೭೦ರ ಚುನಾವಣೆಯಲ್ಲಿ ಸಾಲ್ವೆಡಾರ್ ಅಲೆಂಡೆಯು ಗೆದ್ದು ಬಂದನು. ಅವನ ಸರ್ಕಾರವು ಸಮಾಜವಾದಕ್ಕೆ ಶಾಂತಿಯುತ ಪರಿವರ್ತನೆಯ ಕ್ರಮಗಳನ್ನು ಕೈಗೊಂಡಿತು. ಈ ಭಾಗವಾಗಿ ಅಮೆರಿಕಾನ್ ಹಿಡಿತದ ಚಿಲಿಯ ಹಲವು ಕೈಗಾರಿಕೆಗಳನ್ನು ರಾಷ್ಟ್ರೀಕರಣಗೊಳಿಸಿದನು. ೧೯೭೨ರಲ್ಲಿ ವಿಶ್ವಸಂಸ್ಥೆಯಲ್ಲಿ ಅಲೆಂಡೆ ಆಡಿದ ಮಾತುಗಳು ಹೀಗಿವೆ. ಕಳೆದ ೪೨ ವರ್ಷಗಳಿಂದ ಚಿಲಿ ದೇಶದ ತಾಮ್ರವನ್ನು ತೆಗೆಯುವ ಕೆಲಸದಲ್ಲಿ ತೊಡಗಿರುವ ಈ ಕಂಪನಿಗಳು (ಅಮೆರಿಕಾದ ಅನಕೊಂಡ ಹಾಗೂ ಕೆನ್ನೆಕಾಟ ಕಾಪರ್ ಕಾರ್ಪೊರೇಶನ್) ಹೂಡಿದ ಒಟ್ಟು ಬಂಡವಾಳವು ೩೦ ಮಿಲಿಯನ್ ಡಾಲರುಗಳಿಗಿಂತ ಕಡಿಮೆ ಇದ್ದರೆ ಅವು ಮಾಡಿರುವ ಒಟ್ಟು ಲಾಭವು ೪೦೦೦ ಮಿಲಿಯನ್ ಡಾಲರ್‌ಗಳಿಗಿಂತ ಹೆಚ್ಚು. ಒಂದು ಸಣ್ಣ ಆದರೆ ಬಹಳ ನೋವನ್ನುಂಟು ಮಾಡುವ ಸಂಗತಿ ಎಂದರೆ, ಒಂದು ಬಗೆಯ ವಿಪರ್ಯಾಸವೆಂದರೆ, ನನ್ನ ದೇಶದ ೬,೦೦,೦೦ಕ್ಕಿಂತಲೂ ಹೆಚ್ಚು ಮಕ್ಕಳು ತಮ್ಮ ಮೊದಲ ೮ ತಿಂಗಳಲ್ಲಿ ಅಗತ್ಯವಿದ್ದ ಪ್ರೋ ಅಂಶವನ್ನು ಪಡೆಯದೆ ಇರುವುದರಿಂದ ಅವರು ತಮ್ಮ ಬದುಕಿನುದ್ದಕ್ಕೂ ಸಾಮಾನ್ಯ ಗುಣಮಟ್ಟದ ಜೀವನವನ್ನು ನಡೆಸುವುದೂ ಅಸಾಧ್ಯವಾಗಿದೆ. ೪,೦೦೦ ಮಿಲಿಯನ್ ಡಾಲರ್ ನಮ್ಮ ಬಳಿಯೇ ಇರುತ್ತಿದ್ದಲ್ಲಿ ನನ್ನ ದೇಶ ಚಿಲಿ ಸಂಪೂರ್ಣ ಬದಲಾಗುತ್ತಿತ್ತು. ಈ ಅಪಾರ ಮೊತ್ತದ ಒಂದು ಸಣ್ಣ ಭಾಗದಿಂದ ನನ್ನ ದೇಶದ ಎಲ್ಲ ಮಕ್ಕಳಿಗೂ ಪ್ರೋ ಅಂಶವನ್ನು ಒದಗಿಸುವ ಶಾಶ್ವತ ಪರಿಹಾರವನ್ನು ನೀಡಬಹುದಿತ್ತು.

ಅಲೆಂಡೆ ಈ ಭಾಷಣ ಮಾಡಿದ ಏಳು ದಿನದಲ್ಲಿ ಅವನ ಕೊಲೆಯಾಗಿತ್ತು. ಸೆಪ್ಟೆಂಬರ್ ೧೧ರಂದು ಸಿಐಎ ಕೃಪೆಯಿಂದ ಚಿಲಿ ಸೈನದಲ್ಲಿ ದಂಗೆ ನಡೆದು ಬಲಪಂಥೀಯರು ಸರ್ಕಾರವನ್ನು ವಶಕ್ಕೆ ತೆಗೆದುಕೊಂಡರು. ೩,೦೦೦ ಜನರ ಮಾರಣಹೋಮ ನಡೆಸಲಾಯ್ತು. ನಾಲ್ಕು ಲಕ್ಷ ಜನರಿಗೆ ಚಿತ್ರಹಿಂಸೆ ನೀಡಲಾಯ್ತು. ಸಾವಿರಾರು ಬುದ್ದಿಜೀವಿಗಳನ್ನು ಗಡೀಪಾರು ಮಾಡಲಾಯಿತು.

ಅಮೆರಿಕಾದ ಸಾಮಾಜಿಕ ಚಳವಳಿಗಳು
ಕಪ್ಪು ಅಮೆರಿಕಾನ್ನರ ಸ್ವಾಭಿಮಾನಿ ಚಳವಳಿ

ಅಮೆರಿಕಾ ಸ್ವಾತಂತ್ರ್ಯಾನಂತರದಲ್ಲಿ ೧೮೪೯ರಿಂದ ೧೮೬೧ರ ನಡುವೆ ಗುಲಾಮಗಿರಿಯ ವಿಷಯವು ಇಡೀ ರಾಜಕೀಯ ವಲಯವನ್ನೇ ಸಂದಿಗ್ಧತೆಯಲ್ಲಿ ನಿಲ್ಲಿಸಿತ್ತು. ಸಂವಿಧಾನವು ಎಲ್ಲರೂ ಸಮಾನರೆಂದು ಘೋಷಿಸಿದ್ದ ಹೊರತಾಗಿಯೂ ಅಮೆರಿಕಾದ ಜನಸಂಖ್ಯೆಯಲ್ಲಿದ್ದ ಸುಮಾರು ೪೦ ಲಕ್ಷ ನೀಗ್ರೋಗಳನ್ನು ಮನುಷ್ಯ ಸಮಾನರಾಗಿಯೇ ಕಾಣುತ್ತಿರಲಿಲ್ಲ. ಆಫ್ರಿಕಾ ಖಂಡದ ಪ್ರದೇಶಗಳಿಂದ ಹೊತ್ತು ತಂದಿದ್ದ ಇವರು ಬಿಳಿಯ ಭೂಮಾಲೀಕರ ಕೆಳಗೆ ಗುಲಾಮರಾಗಿ ಬಾಳುತ್ತಿದ್ದರು. ಸಂತೆಗಳಲ್ಲಿ ಗುಲಾಮರ ವ್ಯಾಪಾರ ನಡೆಯುತ್ತಿತ್ತು. ಈ ಅಸಮಾನತೆ ವಿರುದ್ಧ ಲಾಯ್ಡ ಗ್ಯಾರಿಸನ್, ಪಿನ್ನೆ ಥಿಯೋಡೋರ್ ಪಾರ್ಕರ್, ಎಮರ್ಸನ್ ಮುಂತಾದವರು ದನಿ ಎತ್ತಿದರು. ಆದರೆ ೧೬ನೆಯ ಅಧ್ಯಕ್ಷನಾಗಿ ಅಬ್ರಹಾಂ ಲಿಂಕನ್ ಆಯ್ಕೆಯಾಗುವವರೆಗೂ ಯಾರೊಬ್ಬರೂ ಕರಿಯರ ಪರವಹಿಸಲಿಲ್ಲ. ಅಬ್ರಹಾಂ ಲಿಂಕನ್ ನೀಗ್ರೋಗಳ ಹಕ್ಕುಗಳಿಗೆ ಮಾನ್ಯತೆ ನೀಡತೊಡಗಿದಂತೆ ಸಂ.ಸಂಸ್ಥಾನದ ದ.ಕಿರೊಲಿನಾ ಸೇರಿದಂತೆ ೭ ರಾಜ್ಯಗಳು ಪ್ರತ್ಯೇಕಗೊಂಡವು. ಅವರಿಗೆ ನೀಗ್ರೋ ಗುಲಾಮಗಿರಿ ಹಾಗೆ ಉಳಿಯಬೇಕಾಗಿತ್ತು. ‘ಗುಲಾಮ ಪದ್ಧತಿ ನಮ್ಮ ಸಾಂವಿಧಾನಿಕ ಹಕ್ಕು ಎಂದು ಅವು ಪ್ರತಿಪಾದಿಸಿದವು. ಆಗ ಲಿಂಕನ್ ನಾಯಕತ್ವದಲ್ಲಿ ಉತ್ತರದ ರಾಜ್ಯಗಳು ನಡೆಸಿದ ದಾಳಿಯನ್ನು ಎದುರಿಸಲಾಗದೆ ೧೮೬೩ರಲ್ಲಿ ದಕ್ಷಿಣ ರಾಜ್ಯಗಳು ಶರಣಾದವು. ನಂತರದ ಚುನಾವಣೆಯಲ್ಲಿ ಲಿಂಕನ್ ಎರಡನೆಯ ಬಾರಿಗೆ ಆಯ್ಕೆಯಾದನು. ಒಂದೆಡೆ ಎರಡೂ ಭಾಗಗಳ ನಡುವೆ ಮಧುರ ಬಾಂಧವ್ಯವನ್ನು ಹೆಚ್ಚಿಸಲು ಗಮನ ನೀಡುತ್ತಲೇ ಗುಲಾಮರನ್ನೂ ಬಂಧಮುಕ್ತಗೊಳಿಸಿದನು. ಅಷ್ಟರಲ್ಲಿ ೧೮೬೪ರಲ್ಲಿ ಏಪ್ರಿಲ್ ೧೪ ರಂದು ನಾಟಕ ಗೃಹವೊಂದರಲ್ಲಿ ಬೂಥ್ ಎಂಬ ದಕ್ಷಿಣದ ಮತಾಂಧ ಗುಂಡು ಹಾರಿಸಿ ಲಿಂಕನ್ ರನ್ನು ಹತ್ಯೆಗೈದನು.

ಗುಲಾಮಗಿರಿಯು ನಿಷೇಧಗೊಂಡರೂ ವರ್ಣಭೇದ ನೀತಿಯು ಅಂತರ್ಗಾಮಿಯಾಗಿ ಅಮೆರಿಕಾ ಸಮಾಜದಲ್ಲಿ ಹರಿಯುತ್ತಲೇ ಇತ್ತು. ಇದರ ವಿರುದ್ಧ ಕರಿಯರು ಬಂಡೇಳಲು ಆರಂಭಿಸಿದರು. ೧೯೦೩ರಲ್ಲಿ ಡಬ್ಲ್ಯು.ಇ.ಬಿ. ದುಬಾಯ್ ನೇತೃತ್ವದಲ್ಲಿ ಕಪ್ಪುಜನರ ‘ನಯಾಗರಾ ಚಳುವಳಿ’ ನಡೆಯಿತು. ಈ ಸಂದರ್ಭದಲ್ಲಿ ಹುಟ್ಟಿಕೊಂಡ ‘‘ಕಪ್ಪು ಜನರ ಆತ್ಮಗಳು’’(ದ ಸೋಲ್ ಆಫ್ ಬ್ಲಾಕ್ ಫೋಕ್)ನಂತಹ ಸಾಹಿತ್ಯ ಕೃತಿಗಳು ಕಪ್ಪು ವರ್ಣೀಯರಲ್ಲಿ ಸ್ವಾಭಿಮಾನಿ ಪ್ರಜ್ಞೆಯನ್ನು ಹೆಚ್ಚಿಸಿತು. ಶಾಲೆಗಳಲ್ಲಿ ಪ್ರತ್ಯೇಕತೆಯ ವಿರುದ್ಧ, ಉನ್ನತ ಶಿಕ್ಷಣದ ಹಕ್ಕು, ಹಣ ಮತ್ತು ಅಂತಸ್ತು ಹೆಚ್ಚಿಸುವ ವೃತ್ತಿಯನ್ನು ಹೊಂದುವ ಹಕ್ಕು ಹಾಗೂ ರಾಜಕೀಯ ಹಕ್ಕುಗಳಿಗಾಗಿನ ಆಂದೋಲನವು ಗಟ್ಟಿಗೊಳ್ಳುತ್ತಾ ಹೋಯಿತು.

೧೯೦೯ರಲ್ಲಿ ಅಸ್ಟಾರ್ಡ್ ವಿಲ್ಲರ್ಡ್, ಜಾನ್ ಡ್ಯೂಯಿ, ಜೀನ್ ಆಡಮ್ಸ್ ಚಳವಳಿಯ ನಾಯಕತ್ವ ವಹಿಸಿದರು. ಅವರು ೧೯೧೦ರಲ್ಲಿ ದ ನ್ಯಾಷನಲ್ ಅಸೋಷಿಯೇಷನ್ ಆಫ್ ದಿ ಅಡ್ವರ್ಸ್‌ಮೆಂಟ್ ಆಫ್ ಕಲರ್ಡ್‌ಪೀಪಲ್(ಎನ್.ಎ.ಎ.ಸಿ.ಪಿ.)  ಸಂಸ್ಥೆಯನ್ನು ಸ್ಥಾಪಿಸಿದರು. ಇದು ಕಪ್ಪು ಜನರನ್ನು ನ್ಯಾಯವಿಚಾರಣೆಗೊಳಪಡಿಸದೆ ನೇಣಿಗೆ ಹಾಕುವುದರ (ಲಿಂಚಿಂಗ್) ವಿರುದ್ಧ ನ್ಯಾಯಾಲಯದಲ್ಲಿ ದಾವಾ ಹೂಡುತ್ತಿತ್ತು. ಹಲವಾರು ಪ್ರಕರಣಗಳಲ್ಲಿ ಅದು ಜಯಗಳಿಸಿದ್ದು ಜನರ ಉತ್ಸಾಹವರ್ಧನೆಗೆ ಕಾರಣವಾಯಿತು. ಈ ಸಂಸ್ಥೆಯು ಬಿಳಿಯ ಕರಿಯರ ನಡುವೆ ಅನುಕಲನ(ಇಂಟಿಗ್ರೇಷನ್)ಕ್ಕೆ ಕರೆ ನೀಡಿತು. ೧೯೨೧ರ ವೇಳೆಗೆ ಎನ್.ಎ.ಎ.ಸಿ.ಪಿ.ನ ೪೦೦ ಶಾಖೆಗಳು ಸ್ಥಾಪನೆಗೊಂಡಿದ್ದವು.

ನಂತರದಲ್ಲಿ ಚಳುವಳಿಯ ಕಾವು ಇಳಿಮುಖವಾಯಿತು. ಮತ್ತೆ ೬೦ರ ದಶಕದಲ್ಲಿ ಓಘವನ್ನು ಪಡೆಯಿತು. ಸದರನ್ ಕ್ರಿಶ್ಚಿಯನ್ ಲೀಡರ್‌ಶಿಪ್ ಕಾನ್ಫರೆನ್ಸ್ (ಎಸ್‌ಸಿಎಲ್‌ಸಿ) ಆರಂಭಗೊಂಡು, ಡಾ.ಮಾರ್ಟಿನ್ ಲೂಥರ್ ಕಿಂಗ್ ಈ ಅಹಿಂಸಾತ್ಮಕ ಸ್ವಾಭಿಮಾನಿ ಚಳವಳಿಯ ನಾಯಕತ್ವ ವಹಿಸಿದ್ದನು. ೧೯೬೧ರಲ್ಲಿ ಸಹಸ್ರಾರು ಜನರನ್ನುದ್ದೇಶಿಸಿ ಕಿಂಗ್ ಮಾಡಿದ ‘‘ನಾನೊಂದು ಕನಸ ಕಂಡೆ’’(ಐ ಹ್ಯಾವೇ ಎ ಡ್ರಿಮ್) ಎಂಬ ಭಾಷಣವು ವ್ಯಾಪಕ ಪ್ರಭಾವವನ್ನು ಬೀರಿತು. ಈ ಸಂದರ್ಭದಲ್ಲಿ ‘ಕಪ್ಪು ಸಾಮರ್ಥ’ (ಬ್ಲ್ಯಾಕ್ ಪವರ್) ಪರಿಕಲ್ಪನೆಯು ವ್ಯಾಪಕಗೊಂಡಿತು. ಚಳುವಳಿಯ ಕಾವೇರತೊಡಗಿದಂತೆ ‘‘ಸ್ವಾತಂತ್ರ್ಯ ದಾಳಿಗಳು,’ ‘ಉಪಾಹಾರಗೃಹ ಅನುಕೂಲ’ಗಳು ನಡೆದವು. ಆದರೆ, ಇವನ್ನು ಸಹಿಸದ ಕೆಲ ದುರಭಿಮಾನಿ ಬಿಳಿಯರು ಕರಿಯರ ವಿರುದ್ಧ ಹಿಂಸಾಚಾರಕ್ಕಿಳಿದರು.

೧೯೬೬ರಲ್ಲಿ ಕಪ್ಪು ನಾಯಕ ಜೇಮ್ಸ್ ಮೆರೆಡಿತ್ ೨೦೦ ಮೈಲಿಗಳ ಭಯ ವಿರೋಧಿ ಪಾದಯಾತ್ರೆಯನ್ನು ಹಮ್ಮಿಕೊಂಡನು. ಆದರೆ ಆತನನ್ನು ಬಿಳಿಯನೊಬ್ಬ ಗುಂಡಿಕ್ಕಿ ಕೊಂದನು. ೧೯೬೫ರಲ್ಲಿ ‘‘ಬ್ಲಾಕ್ ಮುಸ್ಲಿಂ ಫೇಥ್’’ ಕೃತಿ ಬರೆದ ಜನನಾಯಕ ಮಾಲ್ಕಂ ಎಕ್ಸ್ ನ ಕೊಲೆಯಾಯಿತು. ಮೆರೆಡಿತ್ ಆರಂಭಿಸಿದ ಪಾದಯಾತ್ರೆಯನ್ನು ಮಾರ್ಟಿನ್ ಲೂಥರ್ ಕಿಂಗ್ ಮುಂದುವರೆಸಿದರು. ೧೯೬೮ರ ಏಪ್ರಿಲ್ ೪ರಂದು ಅವರನ್ನೂ ಹತೈಗೈಯ ಲಾಯಿತು. ಜನತೆ ರೊಚ್ಚಿಗೆದ್ದ ಪರಿಣಾಮವಾಗಿ ಅಪಾರ ಪ್ರಮಾಣದ ದಂಗೆ, ಲೂಟಿಗಳು ನಡೆದವು.

ಅಮೆರಿಕಾದಲ್ಲಿ ವರ್ಣಬೇಧ ನೀತಿಯು ಇಂದಿಗೂ ಅಳಿದಿಲ್ಲ. ಇಂದು ಅಮೆರಿಕಾದ ಜನಸಂಖ್ಯೆಯಲ್ಲಿ ಕಪ್ಪು ಜನರ ಪಾಲು ಶೇ.೧೨. ಆದರೆ ಅಮೆರಿಕಾದ ಜೈಲುಗಳಲ್ಲಿ ಶೇ.೮೦ರಷ್ಟಿರುವುದು ಕರಿಯರು. ೧೮ರಿಂದ ೨೫ರ ವಯೋಮಾನದ ಶೇ.೫೦ ಕಪ್ಪು ಯುವಕರು ಒಮ್ಮೆಯಾದರೂ ಜೈಲುವಾಸ ಅನುಭವಿಸಿರುತ್ತಾರೆ. ಇಷ್ಟಲ್ಲದೆ, ಅಮೆರಿಕಾ ಪ್ರಭುತ್ವವೇ ಕ್ಲುಕ್ಲುಕ್ಸ್ ಕ್ಲಾನ್ ನಂತರ ದುರಭಿಮಾನಿ ಪಡೆಗಳನ್ನು ಬೆಳೆಸಿ ಕಪ್ಪುವರ್ಣೀಯರ ಮೇಲೆ ದಾಳಿ ನಡೆಸುತ್ತದೆ. ಕಪ್ಪು ಜನರ ಪರವಾಗಿ ದನಿ ಎತ್ತಿದ ಮುಮಿಯಾ ಅಬು ಜಮಾಲ್ ಹಲವಾರು ವರ್ಷಗಳಿಂದಲೂ ಜೈಲಿನಲ್ಲೇ ಇದ್ದಾರೆ. ಸಾವಿರಾರು ಜನರು ಅವರ ಬಿಡುಗಡೆಗೆ ಬೀದಿಗಿಳಿದಿದ್ದರೂ ನ್ಯಾಯಾಲಯವು ಇವರಿಗೆ ೧೮೦ ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.

ಅಮೆರಿಕಾದ ಮಹಿಳಾ ಚಳವಳಿ

ಅಮೆರಿಕಾ ಸಂವಿಧಾನವು ‘‘ಎಲ್ಲಾ ಮಾನವರೂ ಸಮಾನರು’ ಎಂದು ಘೋಷಿಸಿ ತ್ತಾದರೂ, ಸಮಾಜವು ಮಹಿಳೆಯರು ಹಾಗೂ ಕಪ್ಪು ಜನರನ್ನು ಮಾನವರೆಂದು ಬಹುದಿನಗಳವರೆಗೂ ಪರಿಗಣಿಸುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿಯೇ ೨೦ನೇ ಶತಮಾನದ ಆದಿಭಾಗದಲ್ಲಿ ಅಮೆರಿಕಾದಲ್ಲಿ ಮಹಿಳಾ ಚಳವಳಿ ಆರಂಭವಾಯಿತು. ೧೯೧೭ರಲ್ಲಿ ರಷ್ಯಾದಲ್ಲಿ ನಡೆದ ಕ್ರಾಂತಿಯು ಲಿಂಗ ಸಮಾನತೆಯನ್ನು ಸಾಧಿಸುವ ಯತ್ನದಲ್ಲಿ ದಾಪುಗಾಲಿಟ್ಟಿತು. ಇದು ಅಮೆರಿಕಾದ ಮಹಿಳೆಯರ ಮೇಲೆ ಪ್ರಭಾವ ಬೀರಿತ್ತು. ಅವರು ‘‘ನಾವು ಅಮೆರಿಕಾದ ಮಹಿಳೆಯರು ಸಾರಿ ಹೇಳುತ್ತಿರುವುದೆಂದರೆ ಅಮೆರಿಕಾವು ಪ್ರಜಾಪ್ರಭುತ್ವವಲ್ಲ. ಇಲ್ಲಿನ ಇಪ್ಪತ್ತು ಮಿಲಿಯನ್ ಮಹಿಳೆಯರಿಗೆ ಮತದಾನದ ಹಕ್ಕಿಲ್ಲ’’ ಎಂದು ಘೋಷಿಸಿದರು. ಅಮೆರಿಕಾದಲ್ಲಿ ಮತದಾನದ ಹಕ್ಕಿಗಾಗಿನ ಚಳುವಳಿಯು ೧೮೪೮ರಿಂದಲೇ ಆರಂಭವಾಗಿತ್ತು. ಈ ಚಳುವಳಿಗೆ ಸಾಪ್ರೊಗಿಟ್ ಚಳುವಳಿ ಎಂತಲೇ ಕರೆಯಲಾಗುತ್ತಿತ್ತು. ೧೮೬೯ರಲ್ಲಿ ಸೂಸನಿ ಆಂಟನಿ ಎಂಬಾಕೆ ರಾಷ್ಟ್ರೀಯ ಮಹಿಳಾ ಮತದಾನ ಹಕ್ಕು ಹೋರಾಟ ಸಂಸ್ಥೆಯನ್ನು ಸ್ಥಾಪಿಸಿದಳು. ಅವಳೊಂದಿಗೆ ಎಲಿಜಿಬಿತ್ ಗ್ಯಾಡಿ ಸ್ಟಾಂಡನ್ ಕೂಡಾ ಕೈಗೂಡಿಸಿದಳು. ೧೯೦೦ರಲ್ಲಿ ಕ್ಯಾರ‌್ರಿ ಚಾಡ್ ಮನ್ ಕೇಟ್ ರಾಷ್ಟ್ರೀಯ ಮಹಿಳಾ ಸಂಸ್ಥೆಯ ಅಧ್ಯಕ್ಷಿಣಿಯಾದ ಮೇಲೆ ಮಹಿಳಾ ಹಕ್ಕು ಮಸೂದೆಯನ್ನು ಕಾಂಗ್ರೆಸ್‌ನಲ್ಲಿ ಮಂಡಿಸಲು ಒತ್ತಾಯ ಪಡಿಸಲಾಯ್ತು. ಅದಕ್ಕಾಗಿ ಶ್ವೇತಭವನದ ಎದುರು ಮುಷ್ಕರವನ್ನು ಆರಂಭಿಸಿದರು. ಅದಕ್ಕೆ ತಕ್ಷಣದಲ್ಲಿ ಸರ್ಕಾರವು ಸ್ಪಂದಿಸಲಿಲ್ಲ. ಆದರೆ ಚಳುವಳಿಯಲ್ಲಿನ ಏರುಗತಿಯನ್ನು ಕಂಡು ೧೯೧೨ರ ಚುನಾವಣೆಯಲ್ಲಿ ಮಹಿಳೆಯರು ತಮ್ಮ ಬೇಡಿಕೆಗಳನ್ನು ಮಂಡಿಸಲು ಅವಕಾಶ ನೀಡಲಾಯ್ತು. ೧೯೧೮ರಲ್ಲಿ ಅಧ್ಯಕ್ಷ ವುಡ್ರೋ ವಿಲ್ಸನ್ ಅಧ್ಯಕ್ಷತೆಯಲ್ಲಿ ಮಸೂದೆಗೆ ತಿದ್ದುಪಡಿ ತರಲಾಯಿತು. ೧೯೨೦ರಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದ ಎಲ್ಲಾ ಸಂಸ್ಥಾನಗಳ ಅನುಮೋದನೆ ದೊರೆತು ಕಾಯ್ದೆಯಾಯಿತು. ಹೀಗೆ ಅಮೆರಿಕಾದ ಮಹಿಳೆಯರು ಸುದೀರ್ಘ ಹೋರಾಟದ ಮೂಲಕ ಮಹಿಳಾ ಮತದಾನದ ಹಕ್ಕನ್ನು ಪಡೆದರು.

ಏಷಿಯಾದ ದೇಶಗಳಲ್ಲಿ ಅಮೆರಿಕಾದ ನೀತಿ
ವಿಯೆಟ್ನಾಂ

ದ್ವಿತೀಯ ಮಹಾಯುದ್ಧದ ಹೊತ್ತಿಗೆ ಚೀನಾ ದೇಶವೂ ಸಹ ಕಮ್ಯೂನಿಸ್ಟ್ ಕ್ರಾಂತಿಯ ಹೊಸ್ತಿಲಲ್ಲಿ ನಿಂತಿತ್ತು. ಸೋವಿಯತ್ ಒಕ್ಕೂಟ ಹಾಗೂ ಚೀನಾ ಪ್ರಭಾವವು ಆಗ್ನೇಯ ಏಷಿಯಾದ ಮೇಲೆ ಆಗುವುದನ್ನು ತಡೆಯಲು ಅಮೆರಿಕಾದ ಆಗಿನ ಅಧ್ಯಕ್ಷ ಟ್ರೂಮನ್‌ನು ಇಂಡೋ ಚೀನಾ ಪ್ರದೇಶಗಳಿಗೆ ಆರ್ಥಿಕ ಹಾಗೂ ಸೈನಿಕ ಸಹಾಯವನ್ನು ನೀಡತೊಡಗಿದನು. ೧೯೫೪ರಲ್ಲಿ ಫ್ರಾನ್ಸ್ ವಿಯೆಟ್ನಾಂನಿಂದ ಹಿಂದೆ ಸರಿದ ನಂತರ ಮಾಡಲಾದ ಜಿನೀವಾ ಒಪ್ಪಂದದ ಪ್ರಕಾರ ವಿಯೆಟ್ನಾಂ ದೇಶವು ಕಮ್ಯುನಿಸ್ಟ್ ವಿಯೆಟ್ ಮಿನ್ಹ್ ಆಡಳಿತದ ಉತ್ತರ ವಿಯೆಟ್ನಾಂ ಹಾಗೂ ಫ್ರೆಂಚ್ ಮಿತ್ರಕೂಟದ ಆಡಳಿತದ ದಕ್ಷಿಣ ವಿಯೆಟ್ನಾಂ ಎಂದು ವಿಭಜನೆಯಾಯಿತು. ತರುವಾಯದಲ್ಲಿ ಅಮೆರಿಕಾವು ದಕ್ಷಿಣ ವಿಯೆಟ್ನಾಂಗೆ ನಿರಂತರವಾಗಿ ಸಹಾಯ ಹಸ್ತ ನೀಡಲಾರಂಭಿಸಿತು. ೧೯೫೫ ರಿಂದ ೧೯೬೧ರ ನಡುವೆ ಅಧ್ಯಕ್ಷ ಐಸೆನ್ ಹೋವರ್ ಆರ್ಥಿಕ ಸಹಾಯ ನೀಡಿದನು. ನಂತರದ ಅಧ್ಯಕ್ಷ ಕೆನಡಿ ಕೂಡ ಅದನ್ನು ಮುಂದುವರೆಸುವುದರೊಂದಿಗೆ ಆಗ ಇದು ಅಲ್ಲಿದ್ದ ೭೦೦ ಸೈನಿಕ ಸಲಹೆಗಾರರ ಜಾಗದಲ್ಲಿ ೧೬,೦೦೦ ಅಧಿಕಾರಿಗಳನ್ನು ಕಳುಹಿಸಿದನು. ೧೯೬೦ರಲ್ಲಿ ಕೆನಡಿಯ ಕೊಲೆಯಾಯಿತು. ಮುಂದಿನ ಅಧ್ಯಕ್ಷ ಜಾನ್‌ಸನ್ ಕೂಡಾ ಅದೇ ನೀತಿಯಲ್ಲಿ ಬಿಡದೆ ಮುಂದುವರೆಸಿದನು. ಈ ನಡುವೆ ಅಗಸ್ಟ್ ೧೯೬೪ರಲ್ಲಿ ಉತ್ತರ ವಿಯೆಟ್ನಾಂನ ಟೊಂಕಿನ್ ಕೊಲ್ಲಿಯಲ್ಲಿ ಅಮೆರಿಕಾದ ಯುದ್ಧ ನೌಕೆಗಳ ಮೇಲೆ ಒಂದು ದಾಳಿ ನಡೆಯಿತು. ಇದೊಂದು ನೆಪ ಸಾಕಿತ್ತು ಅಮೆರಿಕಾಕ್ಕೆ. ತಕ್ಷಣ ಉತ್ತರ ವಿಯೆಟ್ನಾಂ ಮೇಲೆ ಬಾಂಬ್ ದಾಳಿಗೆ ಆದೇಶ ನೀಡಲಾಯ್ತು. ಅಮೆರಿಕಾದ ಕಾಂಗ್ರೆಸ್ ಸರ್ವಾನುಮತದಿಂದ ‘ಟೊಂಕಿನ್ ಕೊಲ್ಲಿ’ ನಿರ್ಣಯವನ್ನು ಕೈಗೊಂಡು ವಿಯೆಟ್ನಾಂನಲ್ಲಿ ಸೈನ್ಯದ ದಾಳಿಯನ್ನು ನಡೆಸಲು ಅಧ್ಯಕ್ಷನಿಗೆ ಅನುಮತಿ ನೀಡಲಾಯ್ತು. ೧೯೬೮ರ ಹೊತ್ತಿಗೆ ವಿಯೆಟ್ನಾಂನಲ್ಲಿ ಅಮೆರಿಕಾದ ೫ ಲಕ್ಷ ಸೈನಿಕರು ಕಾರ್ಯಾಚರಣೆಗಿಳಿದರು. ಉತ್ತರ ವಿಯೆಟ್ನಾಂ ಮಾತ್ರವಲ್ಲದೆ ಲಾವೋಸ್, ಕಾಂಬೋಡಿಯಾ ಗಳ ಮೇಲೂ ಅಮೆರಿಕಾದ ಯುದ್ಧ ವಿಮಾನಗಳು ಬಾಂಬಿನ ಸುಳಿಮಳೆಗೈದವು. ವಿಯೆಟ್ನಾಂನ ೩೦ ಲಕ್ಷ, ಲಾವೋಸ್‌ನ ೧೦ಲಕ್ಷ ಹಾಗೂ ಕಾಂಬೋಡಿಯಾದ ೨೦ ಲಕ್ಷ ಜನರು ಬಾಂಬ್ ದಾಳಿಗಳಿಗೆ ಈಡಾಗಿ ಹತ್ಯೆಯಾದರು. ಎರಡೂವರೆ ಲಕ್ಷ ಟನ್ನು ಬಾಂಬುಗಳನ್ನು ಸುರಿಯಲಾಗಿದೆ ಎಂದು ಅಮೆರಿಕಾವೇ ಅಧಿಕೃತವಾಗಿ ಒಪ್ಪಿಕೊಂಡಿದೆ. ವಿಯೆಟ್ನಾಂ ನೆಲವು ಅಮೆರಿಕಾದ ಯುದ್ಧಾಸ್ತ್ರಗಳ ಪರೀಕ್ಷಾ ಭೂಮಿಯಾಯಿತು. ೧೯೬೧ರಲ್ಲಿ ಅಮೆರಿಕಾ ಕಂಡುಹಿಡಿದಿದ್ದ ‘ಕಳೆನಾಶಕ ದಾಳಿ’ಯನ್ನು ಪ್ರಯೋಗಿಸಲಾಯ್ತು. ಅದನ್ನು ೧೯೬೨ ರಿಂದ ೧೯೬೦ರ ನಡುವೆ ‘ಏಜೆಂಟ್ ಅರೇಂಜ್ ಹೆಸರಿನಲ್ಲಿ ೪೦ ಲಕ್ಷ ಎಕರೆ ಭೂಮಿಯ ಮೇಲೆ ಸುಮಾರು ನೂರು ಮಿಲಿಯನ್ ಪೌಂಡ್‌ಗಳಷ್ಟನ್ನು ಸುರಿಯಲಾಯಿತು. ೨೫ ಲಕ್ಷ ಎಕರೆ ಕೃಷಿ ಭೂಮಿ ಹಾಗೂ ೧೨ ಲಕ್ಷ ಎಕರೆ ಅರಣ್ಯ ಭೂಮಿಯು ನಾಶವಾಗಿ ಬೆಂಗಾಡಾಯಿತು. ಏಜೆಂಟ್ ಆರೇಂಜ್ ದಾಳಿಯ ಪರಿಣಾಮವಾಗಿ ಡೈಯಾಕ್ಸಿನ್ ಎಂಬ ವಿಷಕಾರಿ ರಾಸಾಯನಿಕವು ವಿಯೆಟ್ನಾಂ ಭೂಮಿಯ ಮೇಲುಳಿಯಿತು. ತಜ್ಞರ ಪ್ರಕಾರ ಮೂರೇ ಚಮಚ ಡೈಯಾಕ್ಸಿನ್‌ನನ್ನು ನ್ಯೂಯಾರ್ಕ್‌ನಂತಹ ನಗರದ ನೀರು ಸರಬರಾಜಿನಲ್ಲಿ ಸೇರಿಸಿದರೆ ಇಡೀ ನಗರದ ಜನಸಂಖ್ಯೆಯನ್ನೇ ಕೊಲ್ಲಬಹುದು. ಇನ್ನು ವಿಯೆಟ್ನಾಂನಲ್ಲಿ ಉಂಟು ಮಾಡಿದ ಪರಿಣಾಮಗಳನ್ನು ಊಹಿಸಿ.

ಇಷ್ಟಾದರೂ ಅಮೆರಿಕಾದ ದುರಾಕ್ರಮಣಕ್ಕೆ ಅಂಜದ ವಿಯೆಟ್ನಾಮಿಗರು ತಕ್ಕ ಪ್ರತಿರೋಧವನ್ನೇ ನೀಡಿದರು. ಗೆರಿಲ್ಲಾ ಮಾದರಿಯ ಹೋರಾಟಗಳ ಮೂಲಕ. ಅಮೆರಿಕಾದ ಸೈನಿಕರನ್ನು ಹಣ್ಣಗಾಯಿ ನಿರುಗಾಯಿ ಮಾಡಿದರು. ಸುಮಾರು ೫೦ ಸಾವಿರ ಅಮೆರಿಕಾನ್ ಸೈನಿಕರು ಹತರಾದರು. ಇದಕ್ಕಿಂತ ಹೆಚ್ಚು ಮಂದಿ ಹೇಳದೇ ಕೇಳದೇ ಓಡಿ ಹೋದರು. ಇದು ಅಮೆರಿಕಾದ ಜಂಘಾಬಲವನ್ನು ಉಡುಗಿಸಿತು. ಜಗತ್ತಿನಾದ್ಯಂತ ಈ ಯುದ್ಧದ ವಿರೋಧಿ ಅಲೆ ಸೃಷ್ಟಿಯಾಗಿ ಸ್ವತ ಅಮೆರಿಕಾದಲ್ಲೇ ಅದರ ಕುರಿತು ಅಪಸ್ವರ ಕೇಳಿ ಬಂದಿತು. ಸೆನೇಟಿಗ ಯೂಜೀನ್ ಮೆಕಾರ್ತಿ ಯುದ್ಧವಿರೋಧಿ ಆಂದೋಲನ ನಡೆಸಿದನು. ಎಲ್ಲದರ ಪರಿಣಾಮವಾಗಿ ಅಧ್ಯಕ್ಷ ಜಾನ್ಸನ್‌ನು ಆಗ್ನೇಯ ಏಷಿಯಾ ದೇಶಗಳ ಮೇಲಿನ ದಾಳಿಯನ್ನು ಹಿಂಪಡೆದನು.

ನಂತರದಲ್ಲಿ ಅಧಿಕಾರ ವಹಿಸಿಕೊಂಡ ನಿಕ್ಸನ್, ಚೀನಾ, ಯುಎಸ್‌ಎಸ್‌ಆರ್‌ಗಳಿಗೆ ಭೇಟಿ ನೀಡಿ, ಆತನ ರಾಷ್ಟ್ರೀಯ ರಕ್ಷಣಾ ಸಲಹೆಗಾರ ಹೆನ್ರಿ ಕಿಸ್ಸಿಂಜರ್ ನನ್ನು ಉತ್ತರ ವಿಯೆಟ್ನಾಂ ಪ್ರತಿನಿಧಿಗಳೊಂದಿಗೆ ಚರ್ಚಿಸಲು ಪ್ಯಾರಿಸ್ಸಿಗೆ ಕಳುಹಿಸುವ ಮೂಲಕ ನಿಪುಣತೆಯನ್ನು ಮೆರೆದನು.

೧೯೭೩ರಲ್ಲಿ ನಿಕ್ಸನ್‌ನ ಎರಡನೆಯ ಅಧಿಕಾರಾವಧಿಯಲ್ಲಿ ಅಮೆರಿಕಾ ಹಾಗೂ ವಿಯೆಟ್ನಾಂ ನಡುವಿನ ಶಾಂತಿ ಮಾತುಕತೆಯು ಪ್ಯಾರಿಸ್‌ನಲ್ಲಿ ಜರುಗಿತು.

ವಿಯೆಟ್ನಾಂ ಯುದ್ಧವು ಅಮೆರಿಕಾಕ್ಕೆ ತೀರಾ ಅವಮಾನಕಾರಿಯಾಗಿತ್ತೆಂದೇ ಹೇಳಬೇಕು. ಪರಿಣಾಮವಾಗಿ

ಅಮೆರಿಕಾವು ಕಮ್ಯುನಿಸಂ ವಿರುದ್ಧ ಹೋರಾಟದಲ್ಲಿ ಏಷಿಯಾದ ದೇಶಗಳಿಗೆ ಸಹಾಯ ಮುಂದುವರೆಸಬೇಕಿರುವುದು ನಿಜವಾದರೂ ಭೂಯುದ್ಧಕ್ಕಾಗಿ ಸೇನಾಪಡೆಗಳನ್ನು ಕಳಿಸಬಾರದು

ಎಂದು ನಿಕ್ಸನ್ ತತ್ವ ಪ್ರಣಾಳಿ(ನಿಕ್ಸನ್ಸ್ ಡಾಕ್ಟ್ರಿನ್)ಯು ಜಾರಿಗೆ ಬಂದಿತು.