ಯುರೋಪಿನ ಭಾಗಗಳಿಂದ ವ್ಯಾಪಾರಕ್ಕಾಗಿ ೧೪೯೨ರಲ್ಲಿ ಅಮೆರಿಕಾ ಖಂಡದಲ್ಲಿ ಕಾಲಿಟ್ಟ ಬ್ರಿಟಿಷರು ಕಾಲಕ್ರಮೇಣ ಅಲ್ಲೇ ನೆಲೆಯೂರಿದರು. ೧೭೭೫ರ ಸುಮಾರಿಗೆ ಅಮೆರಿಕಾದ ಮೇಲೆ ಆಧಿಪತ್ಯ ಹೊಂದಿದ್ದ ಬ್ರಿಟಿಷ್ ರಾಜಪ್ರಭುತ್ವದ ವಿರುದ್ಧ ದಂಗೆ ಎದ್ದು ೧೭೮೧ರಲ್ಲಿ ಬ್ರಿಟನ್ ಸೈನ್ಯವನ್ನು ಪರಾಭವಗೊಳಿಸುವ ಮೂಲಕ ಸ್ವಾತಂತ್ರ್ಯ ಘೋಷಿಸಿಕೊಂಡರು. ೧೭೭೬ರ ಜುಲೈ ೪ ರಿಂದ ಥಾಮಸ್ ಜೆಫರ್‌ಸನ್‌ನ ನೇತೃತ್ವದಲ್ಲಿ ಸ್ವಾತಂತ್ರ್ಯ ಘೋಷಣೆಯ ಕರಡನ್ನು ಅಂಗೀಕರಿಸಲಾಗಿತ್ತು. ಅಮೆರಿಕಾ ಸ್ವಾತಂತ್ರ್ಯ ಘೋಷಣೆಯ ಕರಡು ಹೀಗೆ ಹೇಳಿತು:

ನಾವು ಕೆಳಕಂಡ ಸತ್ಯಗಳನ್ನು ಸ್ವ ಸಾಕ್ಷಿಯೆಂದು ಪರಿಗಣಿಸಿದ್ದೇವೆ. ಎಲ್ಲಾ ಮನುಷ್ಯರೂ ಸಮಾನರಾಗಿ ಸೃಷ್ಟಿಯಾಗಿದ್ದಾರೆ; ಸೃಷ್ಟಿಕರ್ತನು ಅವರಿಗೆ ಪರಭಾರೆ ಮಾಡಲಾಗದ ಕೆಲವು ಹಕ್ಕುಗಳನ್ನು ದಯಪಾಲಿಸಿದ್ದಾನೆ; ಅವುಗಳಲ್ಲಿ ಜೀವನ ಸ್ವಾತಂತ್ರ್ಯ ಹಾಗೂ ಸಂತೋಷವನ್ನು ಪಡೆದುಕೊಳ್ಳುವ ಹಕ್ಕುಗಳೂ ಇವೆ, ಸೇರಿವೆ; ಈ ಹಕ್ಕುಗಳನ್ನು ಜನರಿಗೆ ಒದಗಿಸಲು ಜನರ ಒಪ್ಪಿಗೆಯ ಮೇರೆಗೆ ಸರ್ಕಾರವನ್ನು ರಚಿಸಲಾಗಿದೆ; ಯಾವುದೇ ಸರ್ಕಾರ ಎಂದಾದರೂ ಈ ಹಕ್ಕುಗಳಿಗೆ ವಿನಾಶಕಾರಿಯಾಗಿ ವರ್ತಿಸಿದರೆ ಅದನ್ನು ತಿದ್ದಿ ಅಥವಾ ಅಳಿಸಿ ಹಾಕಿ ಹೊಸ ಸರ್ಕಾರವನ್ನು ಸೃಷ್ಟಿಸುವ ಅಧಿಕಾರ ಜನರಿಗಿದೆ.

ಅಮೆರಿಕಾದ ಕ್ರಾಂತಿಯ ಸೇನಾನಿ ಜಾರ್ಜ್ ವಾಷಿಂಗ್ಟನ್‌ನ ನೇತೃತ್ವದಲ್ಲಿ ೧೭೮೭ರ ಸೆಪ್ಟೆಂಬರ್ ೧೭ರಂದು ಸಂವಿಧಾನವನ್ನು ಅಂಗೀಕರಿಸಲಾಯಿತು. ನ್ಯೂಯಾರ್ಕ್‌ನಲ್ಲಿ ನಡೆದ ಸಂವಿಧಾನದ ಕುರಿತ ಮೊದಲ ಅಧಿವೇಶನದಲ್ಲಿ ಬಿಲ್ ಆಫ್ ರೈಟ್ಸ್ ಎಂದು ಕರೆಯಲಾಗುವ ವೈಯಕ್ತಿಕ ಹಕ್ಕುಗಳ ಘೋಷಣೆಯು ಸಂವಿಧಾನದಲ್ಲಿ ಅಡಕವಾಯಿತು. ೧೭೮೮ರ ಜುಲೈ ೪ರಂದು ಫಿಲಡೆಲ್ಫಿಯಾದಲ್ಲಿ ಬೃಹತ್ ಮೆರವಣಿಗೆಯ ಮೂಲಕ ಜನಪ್ರಿಯ ನಾಯಕ ಜಾರ್ಜ್ ವಾಷಿಂಗ್ಟನ್‌ನನ್ನು ಮೊದಲ ಅಧ್ಯಕ್ಷನನ್ನಾಗಿ ನೇಮಿಸಲಾಯಿತು.

ಮುಂದೆ ೧೮೦೪ರಲ್ಲಿ ಸಂವಿಧಾನಕ್ಕೆ ೧೪ನೇ ತಿದ್ದುಪಡಿಯಲ್ಲಿ ಅಮೆರಿಕಾದ ಅಧ್ಯಕ್ಷನನ್ನು ಜನರೇ ನೇರವಾಗಿ ಆಯ್ಕೆ ಮಾಡುವಂತೆ ಶಾಸನ ರಚಿಸಲಾಯಿತು.

ಅಮೆರಿಕಾ ಸಂಯುಕ್ತ ಸಂಸ್ಥಾನವು ರೂಪುಗೊಂಡ ಇನ್ನೂರು ವರ್ಷಗಳ ಅವಧಿಯಲ್ಲಿ ಅದು ಆರ್ಥಿಕವಾಗಿ, ರಾಜಕೀಯವಾಗಿ, ಸೈನಿಕವಾಗಿ ತನ್ನನ್ನು ಸದೃಢೀಕರಿಸಿಕೊಳ್ಳುತ್ತಾ ಹಂತ ಹಂತವಾಗಿ ಇಡೀ ಜಗತ್ತಿನ ಎಲ್ಲಾ ದೇಶಗಳ ಮೇಲೆ ತನ್ನ ಪ್ರಭಾವವನ್ನು ಬೀರಿತು. ಎರಡನೆಯ ಮಹಾಯುದ್ಧದವರೆಗೂ ಸೂರ್ಯ ಮುಳುಗದ ಸಾಮ್ರಾಜ್ಯವಾಗಿದ್ದ ಬ್ರಿಟನನ್ನೂ ಹಿಂದಿಕ್ಕಿ ತಾನು ನಾಗಾಲೋಟದಲ್ಲಿ ಧಾವಿಸಿ ೨೧ನೆಯ ಶತಮಾನದ ಹೊಸ್ತಿಲಲ್ಲಿ ಇಡೀ ಪ್ರಪಂಚದಲ್ಲಿ ಏಕಾಂಗಿಯಾಗಿ ಯಾವ ದೇಶವೂ ಎದುರಿಸಲಾಗದ ಅಗ್ರರಾಷ್ಟ್ರವಾಗಿ ರೂಪುಗೊಂಡಿದೆ. ಇದಕ್ಕೆ ಪ್ರಮುಖ ಕಾರಣ ಅಮೆರಿಕಾವು ಕಾಲ ಕಾಲಕ್ಕೆ ಕೈಗೊಂಡ ರಾಜಕೀಯ ನೀತಿಗಳು, ಜಾರಿಗೊಳಿಸಿದ ಆರ್ಥಿಕ ಸಿದ್ಧಾಂತಗಳು ಹಾಗೂ ಜಗತ್ತಿನಾದ್ಯಂತ ಮಾಡಿದ ಸೈನಿಕ ಮಧ್ಯ ಪ್ರವೇಶಿಕೆಗಳು.

ಅಮೆರಿಕಾದ ಆರ್ಥಿಕ ನೀತಿ

ಅಮೆರಿಕಾವು ಇತರ ಶ್ರೀಮಂತ ದೇಶಗಳೊಂದಿಗೆ ಸೇರಿ ಅನುಸರಿಸಿದ ಆರ್ಥಿಕ ನೀತಿ ಇಂದು ಜಗತ್ತಿನ ಬಹುತೇಕ ದೇಶಗಳು ಅನುಸರಿಸುತ್ತಿರುವ ಆರ್ಥ ನೀತಿಯಾಗಿದೆ. ಎರಡನೆಯ ಮಹಾಯುದ್ಧದಲ್ಲಿ ಪಾಲ್ಗೊಂಡ ಉಭಯ ಪಕ್ಷಗಳಿಗೂ ಸೈನಿಕ ಸರಬರಾಜು ಮಾಡುತ್ತಾ ತನ್ನ ಶಕ್ತಿಯನ್ನು ವೃದ್ದಿಸಿಕೊಂಡ ಅಮೆರಿಕಾ ಅಂತಿಮ ಕ್ಷಣಗಳಲ್ಲಿ ಜರ್ಮನಿಯ ವಿರುದ್ಧ ನಿಂತು ಜಪಾನಿನ ಮೇಲೆ ಅಣುಬಾಂಬ್ ಸಿಡಿಸಿ ತಾನೇ ಜಗತ್ತಿನ ನಾಯಕ ಎಂದು ಘೋಷಿಸಿಕೊಂಡಿತು.

ಆ ಹೊತ್ತಿಗೆ ಬ್ರಿಟಿಷ್ ವಸಹಾತುಶಾಹಿಗಳ ವಿರುದ್ಧ ಎಲ್ಲೆಡೆ ಪ್ರತಿರೋಧ ವ್ಯಕ್ತಗೊಂಡು ಹಲವು ರಾಷ್ಟ್ರಗಳು ವಿಮೋಚನೆಯತ್ತ ಸಾಗುತ್ತಿದ್ದವು. ಅಂತಹ ಸಂದರ್ಭದಲ್ಲಿ ಅಮೆರಿಕಾವು ಮನ್ರೋ ಸಿದ್ಧಾಂತವನ್ನು ಪಾಲಿಸಿತು. ಮೊದಲು ಲ್ಯಾಟಿನ್ ಅಮೆರಿಕಾದ ೨೦ ದೇಶಗಳಲ್ಲಿ ತನ್ನ ಕೈಗೊಂಬೆ ಸರ್ಕಾರಗಳನ್ನು ಸ್ಥಾಪಿಸಿತು. ಉದಾಹರಣೆಗೆ ಮೆಕ್ಸಿಕೊದ ಸರ್ವಾಧಿಕಾರಿ ಪೊಫಿರೋ ಡಯಜ್, ವೆನಿಜುಲದ ವಿನ್ಸೆಂಟ್ ಗೊಮ್ಟೆಜ್, ಕ್ಯೂಬಾದ ಏಕಾಧಿಪತಿ ಬತಿಸ್ತಾ, ಚಿಲಿಯ ಸರ್ವಾಧಿಕಾರಿ ಪಿನೋಷಿ, ಪೆರುವಿನ ಪೂಜಿಮಾರಿ ಈ ದೇಶಗಳಲ್ಲಿ ಜನರು ಸ್ವಾತಂತ್ರ್ಯಗೊಂಡಿದ್ದೇವೆ ಎಂಬ ಭ್ರಮೆಯಲ್ಲಿದ್ದರೂ ನಿಜವಾದ ಆಡಳಿತವು ವಾಷಿಂಗ್ಟನ್ ವಾಲ್‌ಸ್ಟ್ರೀಟ್‌ನಲ್ಲೇ ಕೇಂದ್ರೀಕರಣಗೊಂಡಿತ್ತು.

ಇದೇ ಬಗೆಯ ಸ್ವಾತಂತ್ರ್ಯವನ್ನು ಏಷಿಯಾ, ಆಫ್ರಿಕಾ, ಲ್ಯಾಟಿನ್ ಅಮೆರಿಕಾದ ಬಹುಪಾಲು ದೇಶಗಳು ಪಡೆದುಕೊಂಡವು. ಮಹಾಯುದ್ಧದ ಬಳಿಕ ೧೯೪೪ರಲ್ಲಿ ಅಮೆರಿಕಾದ ಬ್ರೆಟನ್‌ವುಡ್ ಎಂಬಲ್ಲಿ ಅಮೆರಿಕಾವು ವಿಶ್ವಬ್ಯಾಂಕ್ ಹಾಗೂ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ(ಡಿ.ಎಂ.ಎಫ್)ಗಳನ್ನು ಸ್ಥಾಪಿಸಿತು. ಅಂದಿನಿಂದ ಇಂದಿನವರೆಗೂ ಈ ಎರಡು ಸಂಸ್ಥೆಗಳು ಜಗತ್ತಿನ ದೇಶಗಳಿಗೆ ಸಾಲ ಸಹಕಾರ ನೀಡುತ್ತಾ, ಅಮೆರಿಕಾದ ವಿಶ್ವಾಧಿಪತ್ಯಕ್ಕೆ ಸಾರಥ್ಯ ವಹಿಸಿವೆ. ಇಂದು ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೆರಿಕಾದ ಅಭಿವೃದ್ದಿಶೀಲ ದೇಶಗಳ ಅಭಿವೃದ್ದಿ ಯೋಜನೆಗಳಿಗೆ ನೂರಾರು ಕೋಟಿ ಡಾಲರುಗಳನ್ನು ವಿಶ್ವಬ್ಯಾಂಕ್ ನೀಡುತ್ತಾ ಬಂದಿದೆ. ಹಾಗೆಯೇ ೫೦ ಮತ್ತು ೬೦ರ ದಶಕಗಳಲ್ಲಿ ತೃತೀಯ ಜಗತ್ತಿನ ದೇಶಗಳಿಗೆ ಸಾಲ ನೀಡಿತು. ೭೦ರ ದಶಕದ ಆರಂಭದೊಂದಿಗೆ ತೈಲ ಉತ್ಪಾದಿಸಿದ ತೃತೀಯ ಜಗತ್ತಿನ ದೇಶಗಳ ಸಾಲವು ೬೧೨ ಬಿಲಿಯನ್ ಡಾಲರುಗಳಷ್ಟಾಗಿತ್ತು. ಶ್ರೀಮಂತ ದೇಶಗಳ ಬ್ಯಾಂಕುಗಳನ್ನು ರಕ್ಷಿಸುವ ಹಾಗೂ ಜಾಗತಿಕ ಹಣಕಾಸು ವ್ಯವಸ್ಥೆಯನ್ನು ಕುಸಿತದಿಂದ ತಡೆಯುವುದು ಐಎಂಎಫ್‌ನ ಧ್ಯೇಯವಾಗಿದೆ.

೧೯೮೦ರ ದಶಕದಲ್ಲಿ ಈ ವಿಶ್ವಬ್ಯಾಂಕ್ ಹಾಗೂ ಐಎಂಎಫ್‌ಗಳು ತಾವು ನೀಡಿದ ಸಾಲಗಳಿಗೆ ಪ್ರತಿಯಾಗಿ ಸಾಲಗಾರ ದೇಶಗಳಿಗೆ ಹಲವು ಶರತ್ತುಗಳನ್ನು ವಿಧಿಸಿದವು. ಆ ದೇಶಗಳು ತಂತಮ್ಮ ಆರ್ಥಿಕ ಸಂರಚನೆಗಳಲ್ಲಿ ಮಾರ್ಪಾಡುಗಳನ್ನು ತರುವಂತೆ ಮಾಡಿದವು. ಇದನ್ನು ರಾಚನಿಕ ಹೊಂದಾಣಿಕೆ ಕಾರ್ಯಕ್ರಮ(ಸ್ಟ್ರಕ್ಚರಲ್ ಅಡ್ಜಸ್ಟ್‌ಮೆಂಟ್ ಪ್ರೋ) ಎಂದು ಕರೆಯಲಾಯಿತು. ಈ ಮೂಲಕ ಜಗತ್ತಿನ ಬಹುತೇಕ ದೇಶಗಳು ಅಮೆರಿಕಾ ಹಾಗೂ ಇನ್ನಿತರ ಅಭಿವೃದ್ದಿ ಹೊಂದಿದ ದೇಶಗಳು ಅಭಿವೃದ್ದಿಗೆ ಪೂರಕವಾಗಿ ತಮ್ಮ ನೀತಿ ನಿರೂಪಣೆಗಳನ್ನು ಪುನರ್ ರೂಪಿಸಿಕೊಂಡವು.

ಈ ವಿಶ್ವಬ್ಯಾಂಕ್ ಹಾಗೂ ಐಎಂಎಫ್‌ನ ಹಿಡಿತವಿರುವುದು ಅಮೆರಿಕಾದ ಬಳಿಯೇ. ಇವುಗಳ ಮುಖ್ಯ ಕಚೇರಿಗಳು ವಾಷಿಂಗ್ಟನ್ ಡಿ.ಸಿ.ಯಲ್ಲಿವೆ. ವಿಶ್ವಬ್ಯಾಂಕ್‌ನ ಅಧ್ಯಕ್ಷ ಯಾವಾಗಲೂ ಅಮೆರಿಕಾದವನೇ ಆಗಿರುತ್ತಾನೆ. ಐ.ಎಂ.ಎಫ್.ನ ನಿರ್ದೇಶಕ ಪಶ್ಚಿಮ ಯುರೋಪ್‌ನವನೇ ಆಗಿರುತ್ತಾನೆ. ಐ.ಎಂ.ಎಫ್‌ನ ಯಾವುದೇ ನಿರ್ಣಯದ ಕುರಿತು ಅಮೆರಿಕಾವು ವಿಟೋ ಅಧಿಕಾರ ಹೊಂದಿರುತ್ತದೆ. ಐ.ಎಂ.ಎಫ್.ನಲ್ಲಿ ಸಾಲ ನೀಡುವ ಅಥವಾ ನೀತಿ ನಿರ್ಣಯಗಳನ್ನು ಮಾಡುವ ಸಾಮರ್ಥ್ಯ ಅದಕ್ಕೆ ಹಣ ನೀಡುವುದನ್ನು ಆಧರಿಸಿಯೇ ಇರುತ್ತದೆ. ಹಾಗಾಗಿ ಅಲ್ಲಿ ಅತಿ ಹೆಚ್ಚು ಮತ ಚಲಾಯಿಸುವ ಸಾಮರ್ಥ್ಯ ಇರುವುದು ಅಮೆರಿಕಾದ ಕೈಯಲ್ಲಿ. ಐ.ಎಂ.ಎಫ್.ನ ಒಟ್ಟು ಹಣದಲ್ಲಿ ಶೇ.೨೦ರಷ್ಟು ಅಮೆರಿಕಾದ್ದೇ ಆಗಿರುವುದರಿಂದ, ಅದೇ ಅತಿ ಹೆಚ್ಚು ಮತಸಾಮರ್ಥ್ಯವನ್ನು ಹೊಂದಿದೆ.

ಅಮೆರಿಕಾ ಹಾಗೂ ಜಾಗತೀಕರಣ ನೀತಿ

ಜಾಗತೀಕರಣಗೊಂಡಿರುವ ವಿಶ್ವ ಅರ್ಥವ್ಯವಸ್ಥೆಯು ಬೃಹತ್ ಕುಸಿತವನ್ನು ಕಂಡು ಹಲವು ಆರ್ಥಿಕತೆಗಳು ತೀವ್ರ ಆರ್ಥಿಕ ಹಿನ್ನಡೆಯನ್ನು ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕಾ ಮತ್ತು ಜಾಗತೀಕರಣದ ಸಂಬಂಧ ನಿಚ್ಚಳವಾಗಿದೆ. ಜಾಗತೀಕರಣವೆನ್ನುವುದು ಅಮೆರಿಕಾದ ವಿಶ್ವಾಧಿಪತ್ಯದ ಅಸ್ತ್ರವೇ ಆಗಿದೆ. ಫೈನಾನ್ಷಿಯಲ್ ಟೈಮ್ ಪತ್ರಿಕೆಯಲ್ಲಿ (೧೯೯೯ನೆಯ ಜನವರಿ ೮) ವರದಿಯಾದ ಅಧ್ಯಯನವೊಂದು ತಿಳಿಸುವಂತೆ ಜಾಗತೀಕರಣ ಪ್ರಕ್ರಿಯೆಯಲ್ಲಿ ವಿಶ್ವದ ೫೦೦ ಅತಿ ದೊಡ್ಡ ಕಂಪನಿಗಳಲ್ಲಿ ೨೪೪ ಕಂಪನಿಗಳು ಅಮೆರಿಕಾಕ್ಕೆ ಸೇರಿವೆ. ಜಪಾನಿನ ೪೬, ಜರ್ಮನಿಯ ೨೩ ಅದರಲ್ಲಿದ್ದವು. ಇಡೀ ಯುರೋಪಿನ ಎಲ್ಲಾ ಕಂಪನಿಗಳು ಅದರಲ್ಲಿ ೧೭೩. ಹಾಗೆಯೇ ಅತಿ ಹೆಚ್ಚು ಬಂಡವಾಳ ಕ್ರೋಡೀಕರಿಸಿಕೊಂಡ (೮೬ ಬಿಲಿಯನ್ ಡಾಲರಿಗಿಂತ ಹೆಚ್ಚು) ಅತಿ ದೊಡ್ಡ ೨೫ ಕಂಪನಿಗಳಲ್ಲಿ ಅಮೆರಿಕಾದ ಪಾಲು ಶೇ.೭೦ ಇದ್ದರೆ, ಯುರೋಪಿನ ಶೇ.೨೪ ಹಾಗೂ ಜಪಾನಿನ ಶೇ.೪ ಕಂಪನಿಗಳನ್ನು ಗುರುತಿಸಬಹುದು.

ಹಾಗೆಯೇ ೨೦೦೦ನೇ ಇಸವಿಯಿಂದೀಚೆಗೆ ಜಾಗತಿಕ ಮಟ್ಟದಲ್ಲಿ ಬೃಹದಾಕರಾವಾಗಿ ಬೆಳೆದಿದ್ದ ಹಣಕಾಸು ಮಾರುಕಟ್ಟೆ ಹಾಗೂ ರಿಯಲ್ ಎಸ್ಟೇಟ್ ಮಾರುಕಟ್ಟೆಗಳು ಪ್ರಧಾನವಾಗಿ ಅಮೆರಿಕಾ ಕೇಂದ್ರವಾಗಿಯೇ ಬೆಳೆದಿದ್ದನ್ನು ಗಮನಿಸಬಹುದು. ಈ ಕಾರಣದಿಂದಾಗಿಯೇ ೨೦೦೮ರ ಸೆಪ್ಟೆಂಬರ್‌ನಲ್ಲಿ ಅಮೆರಿಕಾದಲ್ಲಿ ಗೃಹಸಾಲ ಮಾರುಕಟ್ಟೆ ಕುಸಿದು, ಅದರ ಪರಿಣಾಮವಾಗಿ ಹಣಕಾಸು ಮಾರುಕಟ್ಟೆಯಲ್ಲಿ ಸೃಷ್ಟಿಯಾದ ಕ್ರೆಡಿಟ್ ಬಿಕ್ಕಟ್ಟು ತೀವ್ರಗತಿಯಲ್ಲಿ ಇಡೀ ಜಗತ್ತನ್ನು ವ್ಯಾಪಿಸಿದೆ. ಇದು ಪೂರ್ಣಪ್ರಮಾಣದ ಜಾಗತಿಕ ಮಹಾಕುಸಿತವಾಗುವ ದಿಕ್ಕಿನಲ್ಲಿ ಮುಂದುವರೆದಿದೆ.

ಶ್ರೀಮಂತ ದೇಶಗಳ ನಡುವೆ ಮಾರುಕಟ್ಟೆಗಾಗಿ ನಡೆಯುವ ಸ್ಪರ್ಧೆಯು ಅಂತಿಮವಾಗಿ ಎರಡು ಮಹಾಯುದ್ಧಗಳನ್ನು ಸೃಷ್ಟಿಸಿತ್ತು. ಇದನ್ನು ತಡೆಯುವ ಸಲುವಾಗಿಯೇ ಶ್ರೀಮಂತ ರಾಷ್ಟ್ರಗಳು ೧೯೪೪ರಲ್ಲಿ ಗ್ಯಾಟ್ ಸಂಸ್ಥೆಯನ್ನು ಹುಟ್ಟು ಹಾಕಿದ್ದವು. ಇದರ ವ್ಯಾಪ್ತಿಗೆ ಬಹುತೇಕ ದೇಶಗಳು ಒಳಪಟ್ಟು ೧೯೯೬ರಲ್ಲಿ ವಿಶ್ವ ವಾಣಿಜ್ಯ ಒಪ್ಪಂದ (ಡಬ್ಲ್ಯು.ಟಿ.ಓ)ವನ್ನು ಮಾಡಲಾಯಿತು. ಗ್ಯಾಟ್ ಇರಲಿ, ಡಬ್ಲ್ಯು.ಟಿ.ಓ ಇರಲಿ ಅಂತಿಮವಾಗಿ ಅಮೆರಿಕಾದ ಹಿತಾಸಕ್ತಿಗಳನ್ನೇ ರಕ್ಷಿಸುವ ಸಂಸ್ಥೆಗಳಾಗಿವೆ. ಗ್ಯಾಟ್ ಒಪ್ಪಂದದ ಸಂದರ್ಭದಲ್ಲಿ ಅಮೆರಿಕಾದ ವಾಣಿಜ್ಯ ಪ್ರತಿನಿಧಿ ಮಿಕಿಕ್ಯಾಂಟ್ ಹೇಳಿದ್ದೆಂದರೆ ಗ್ಯಾಟ್ ಒಪ್ಪಂದವನ್ನು ಬಳಸಿಕೊಂಡು ಅಮೆರಿಕಾವು ತನ್ನ ಮಾರುಕಟ್ಟೆಯನ್ನು ವಿಸ್ತರಿಸ ಬಯಸುತ್ತದೆ. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ. ಇದಕ್ಕಾಗಿ ಬಹುಪಕ್ಷೀಯ ವ್ಯವಸ್ಥೆಗೆ ಒಪ್ಪಿದರೆ ಒಳ್ಳೆಯದು. ಇಲ್ಲದಿದ್ದರೆ ದ್ವಿಪಕ್ಷೀಯ ತೀರ್ಮಾನಕ್ಕೂ ನಾವು ಸಿದ್ಧ. ಯಾವುದಕ್ಕೂ ಬಗ್ಗದ ರಾಷ್ಟ್ರವನ್ನು ನಮ್ಮ ಸೆಷಲ್ ೩೦೧, ಸೂಪರ್ ೩೦೧ ವಿಧಿ ಬಳಸಿ ತಹಬಂದಿಗೆ ತರಲೂ ನಮಗೆ ಗೊತ್ತು. ಏನಿದ್ದರೂ ನಿಮ್ಮ ಹಿತ್ತಾಸಕ್ತಿಗೆ ನಾವು ಬದ್ಧರು. ದ್ವಿತೀಯ ಮಹಾಯುದ್ಧಕ್ಕೂ ಮುನ್ನ ವಿವಿಧ ದೇಶಗಳಲ್ಲಿದ್ದ ಅಮೆರಿಕಾದ ಕಂಪನಿಗಳು ಪ್ರಮುಖವಾಗಿ ಪ್ರಾಥಮಿಕ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡಿದ್ದವು. ಉದಾಹರಣೆಗೆ ೧೮೯೯ರಲ್ಲಿ ಅಮೆರಿಕಾದ ಕಂಪನಿಯು ಮಧ್ಯ ಅಮೆರಿಕಾ ಹಾಗೂ ಕೆರಿಬಿಯನ್‌ನಲ್ಲಿ ಬಾಳೆ ಸಾಮ್ರಾಜ್ಯ ಸ್ಥಾಪಿಸಿತು. ಮೆಕ್ಸಿಕೋದಲ್ಲಿ ತೈಲ ಹಾಗೂ ಗಣಿಗಾರಿಕೆ, ಚಿಲಿ, ಪೆರು, ಬೆಲ್ಜಿಯಂನಲ್ಲಿ ತಾಮ್ರ ಗಣಿಗಾರಿಕೆ, ಬೊಲವಿಯಾದಲ್ಲಿ ನೆಡುತೋಪು, ಚಿಲಿಯಲ್ಲಿ ಅನಕೊಂಡ, ಕೆನ್ನೆಕಾಟ್‌ನಂತ ದೈತ್ಯ ಅಮೆರಿಕಾದ ಕಂಪನಿಗಳು ಅದಿರು ಸಾಗಿಸುವ ಕೆಲಸ ಮಾಡಿದವು. ಬ್ರಿಟನ್, ಸ್ಪೇನ್‌ನ ಮತ್ತಿತರ ದೇಶಗಳ ಕಂಪನಿಗಳೂ ಹೀಗೆ ಮಾಡಿದವು. ಆದರೆ, ದ್ವಿತೀಯ ಮಹಾಯುದ್ಧದ ನಂತರ ೭೦ರ ದಶಕದ ನಡುಭಾಗದಿಂದ ಉತ್ಪಾದನೆಯು ರಾಷ್ಟ್ರಗಳ ಗಡಿಗಳನ್ನು ಮೀರಿತು. ಅಮೆರಿಕಾ ಒಳಗೊಂಡ ಶ್ರೀಮಂತ ದೇಶಗಳ ಬಂಡವಾಳವು ಹೆಚ್ಚಾಗಿ ವಿದೇಶಿ ನೇರ ಹೂಡಿಕೆ ಹಾಗೂ ವಿದೇಶಿ ಸಾಂಸ್ಥಿಕ ಹೂಡಿಕೆಯ ಹೆಸರಲ್ಲಿ (ಎಫ್‌ಡಿಐ ಮತ್ತು ಎಫ್‌ಐಐ) ಭಾರೀ ಪ್ರಮಾಣದಲ್ಲಿ ಹರಿಯಿತು. ೧೯೭೩ರಿಂದ ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಕಾಣಿಸಿಕೊಂಡ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳುವ ಸಲುವಾಗಿಯೇ ಈ ದೇಶಗಳು ನವ ಉದಾರವಾದಿ ಸಿದ್ಧಾಂತದ ಜಾಗತೀಕರಣ ನೀತಿಗೆ ಅಂಟಿಕೊಂಡವು. ಇದರ ಭಾಗವಾಗಿ ಜಾರಿಯಾದ ಉದಾರೀಕರಣ, ಖಾಸಗೀಕರಣ ನೀತಿಗಳು ಅಮೆರಿಕಾದ ಕಂಪನಿಗಳಿಗೆ ಊಹಿಸಲಸಾಧ್ಯವಾದ ಪ್ರಮಾಣದಲ್ಲಿ ಲಾಭವನ್ನು ತಂದುಕೊಟ್ಟವು. ಅದೇ ವೇಳೆಗೆ ೨೦೦೨ರ ವಿಶ್ವಬ್ಯಾಂಕ್‌ನ ವರದಿಯು ವಿಷದಪಡಿಸುವಂತೆ ಜಗತ್ತಿನಲ್ಲಿ ಶ್ರೀಮಂತ ದೇಶಗಳಿಗೂ ಬಡ ದೇಶಗಳಿಗೂ, ಶ್ರೀಮಂತರಿಗೂ ಬಡವರಿಗೂ ಇರುವ ಅಂತರವನ್ನೂ ಅಗಾಧ ಪ್ರಮಾಣದಲ್ಲಿ ಹೆಚ್ಚಿಸಿದವು.

ಅಮೆರಿಕಾವು ತನ್ನ ಸಾಮ್ರಾಜ್ಯ ವಿಸ್ತರಣೆಯಲ್ಲಿ ೧೮೪೦ರ ದಶಕದಲ್ಲಿ ಮೆಕ್ಸಿಕೋದೊಂದಿಗೆ ನಡೆಸಿದ ಯುದ್ಧದಿಂದ ಮೊದಲುಗೊಂಡು ಇತ್ತೀಚಿಗೆ ಇರಾಕ್, ಆಫ್ಘಾನಿಸ್ತಾನಗಳಲ್ಲಿ ನಡೆಸುತ್ತಿರುವ ಯುದ್ಧಗಳವರೆಗೂ ನಡೆಸಿರುವ ಆಕ್ರಣಗಳು, ಯೋಜಿಸಿರುವ ಸಂಚುಕೂಟಗಳು, ಕ್ಷಿಪ್ರದಂಗೆಗಳು, ಭ್ರಷ್ಟಾಚಾರಗಳಿಗೆ ಲೆಕ್ಕವಿಲ್ಲ. ಅದು ತನ್ನ ಈ ಆಕ್ರಮಣಕಾರಿ ನೀತಿಯಲ್ಲಿ ತಿರುಗಿ ನೋಡಲಾಗದಷ್ಟು ದೂರ ಕ್ರಮಿಸಿದೆ.

೧೮೯೯ ಸ್ಪೇನ್ ಅಮೆರಿಕಾ ಸಮರ

೧೮೯೯ರಲ್ಲಿ ಲ್ಯಾಟಿನ್ ಅಮೆರಿಕಾದ ಕೆಲವಾರು ದೇಶಗಳನ್ನೂ ಫಿಲಿಫೈನ್ಸನ್ನೂ ತನ್ನ ಹಿಡಿತದಲ್ಲಿಟ್ಟುಕೊಂಡಿದ್ದ ಸ್ಪೇನ್ ದೇಶದೊಂದಿಗೆ ಅಮೆರಿಕಾವು ನಡೆಸಿದ ಯುದ್ಧವು ಅಮೆರಿಕಾದ ಜಾಗತಿಕ ಜೈತ್ರಯಾತ್ರೆಗೆ ನಾಂದಿ ಹಾಡಿತ್ತು. ೧೮೨೩ರಲ್ಲಿ ಜೇಮ್ಸ್ ಮನ್ರೋ ಪ್ರತಿಪಾದಿಸಿದ ತತ್ವ ಪ್ರಣಾಳಿಕೆಯನ್ನು ಅಧ್ಯಕ್ಷ ರೂಸ್‌ವೆಲ್ಟ್ ಪಾಲಿಸಿದನು. ಮನ್ರೋ ಪ್ರಕಾರ ಹಳೆಯ ಜಗತ್ತಿನಿಂದ ಯುರೋಪು ಹೊಸ ಜಗತ್ತು ಶಾಶ್ವತ ಸಂಬಂಧ ಕಡಿದು ಕೊಳ್ಳಬೇಕಿರುತ್ತದೆ. ಇದನ್ನು ಪಾಲಿಸಲಿಕ್ಕಾಗಿ ನಾವು ಎಲ್ಲ ದೇಶಗಳ ವೈರತ್ವವನ್ನು ಕಟ್ಟಿಕೊಳ್ಳಲೂ ಸಿದ್ಧ. ವಸಾಹತುಶಾಹಿ ಸ್ಪೇನ್ ವಿರುದ್ಧವಾಗಿ, ಫಿಲಿಫೈನ್ಸ್ ಹಾಗೂ ಕ್ಯೂಬಾದಂತಹ ಲ್ಯಾಟಿನ್ ಅಮೆರಿಕಾದ ದೇಶಗಳಲ್ಲಿ ನಡೆಯುತ್ತಿದ್ದ ಪ್ರಜಾದಂಗೆಯಲ್ಲಿ ಅಮೆರಿಕಾವು ಮಧ್ಯ ಪ್ರವೇಶಿಸಿತು. ಅದರಲ್ಲಿ ಸ್ಪೇನ್‌ನೊಂದಿಗೆ ಯುದ್ಧ ಮಾಡುತ್ತಲೇ ಒಳೊಪ್ಪಂದವೊಂದಕ್ಕೆ ಸಹಿ ಹಾಕಿ ೨೦ ಬಿಲಿಯನ್ ಡಾಲರ್‌ಗೆ ಫಿಲಿಫೈನ್ಸನ್ನು ಕೊಂಡು ಕೊಂಡಿತ್ತು. ನಂತರ ಫಿಲಿಫೈನ್ಸನ್ನು ತನ್ನ ಹಿಡಿತಕ್ಕೆ ತಂದುಕೊಳ್ಳುವ ಸಲುವಾಗಿ ಬೃಹತ್ ದಮನಕಾಂಡ ನಡೆಸಿ ಹತ್ತು ಲಕ್ಷ ಜನರ ಮಾರಣ ಹೋಮವನ್ನೇ ನಡೆಸಿತ್ತು. ೧೯೪೬ರವರೆಗೆ ಅಲ್ಲಿ ತನ್ನ ನೇರ ಆಳ್ವಿಕೆಯನ್ನು ನಡೆಸಿ ೧೯೪೬ನೆಯ ಜುಲೈ ೪ರಂದು ತನ್ನ ಕೈಗೊಂಬೆ ಸರ್ಕಾರವನ್ನು ಕೂರಿಸಿ ಸ್ವಾತಂತ್ರ್ಯ ನೀಡಿತು. ಮುಂದೆ ೧೯೬೬ರಲ್ಲಿ ಫಿಲಿಪೈನ್ಸ್‌ನ ೬ನೇ ಅಧ್ಯಕ್ಷನಾಗಿ ಬಂದ ಮಾರ್ಕೋಸ್ ಹಿಂದೆ ಯಾರೂ ಮಾಡಿರದ ರೀತಿ ಅಮೆರಿಕಾಕ್ಕೆ ಸೇವೆ ಸಲ್ಲಿಸಿ ಜನರ ಮೇಲೆ ಅತ್ಯಂತ ದಮನಕಾರಿ ನೀತಿಯನ್ನೂ ನಡೆಸಿದನು. ಅಮೆರಿಕಾವು ಫಿಲಿಫೈನ್ಸ್‌ನಲ್ಲಿ ಕ್ಲಾರ್ಕ್‌ಫೀಲ್ಡ್ ಹಾಗೂ ಸುಬಿಕ್ ಕೊಲ್ಲಿ ಎಂಬಲ್ಲಿ ಎರಡು ಸೇನಾ ಸ್ಥಾವರಗಳನ್ನು ಸ್ಥಾಪಿಸಿಕೊಂಡಿದೆ. ಇದೇ ರೀತಿಯಲ್ಲಿ ಕ್ಯೂಬಾವನ್ನೂ ವಶಪಡಿಸಿ ಕೊಂಡ ಅಮೆರಿಕಾ ಅಲ್ಲಿ ತನ್ನ ದೇಶದ ಬೃಹತ್ ಕಂಪನಿಗಳ ವ್ಯವಹಾರಕ್ಕೆ ಅವಕಾಶ ಮಾಡಿಕೊಟ್ಟು ಬತಿಸ್ತಾ ಎಂಬ ಸರ್ವಾಧಿಕಾರಿಯನ್ನು ಕೈಬೊಂಬೆಯಾಗಿ ನೇಮಿಸಿತು.

ಲ್ಯಾಟಿನ್ ಅಮೆರಿಕಾದ ಪನಾಮಾ ಕಾಲುವೆ ವೃತ್ತಾಂತ

ಸ್ಪೇನ್‌ನೊಂದಿಗಿನ ಅಮೆರಿಕಾದ ಯುದ್ಧದ ಅವಧಿಯಲ್ಲಿಯೇ ಪನಾಮಾ ಕಾಲುವೆಗೆ ಸಂಬಂಧಿಸಿದ ಘಟನೆಯೂ ನಡೆಯಿತು. ಅಮೆರಿಕಾದ ಇಕ್ಕೆಲಗಳ ಶಾಂತಸಾಗರ ಮತ್ತು ಅಟ್ಲಾಂಟಿಕ್ ಸಾಗರಗಳನ್ನು ಬೆಸೆಯುವ ಅಮೆರಿಕಾದ ಯೋಜನೆಯ ಭಾಗವಾಗಿ ಪನಾಮ ಕಾಲುವೆ ವಿವಾದವು ಕೊಲಂಬಿಯಾದೊಂದಿಗೆ ಹುಟ್ಟಿಕೊಂಡಿತು. ೧೯೦೧ರಲ್ಲಿ ಪನಾಮಾ ಕಾಲುವೆಯನ್ನು ತೋಡುವ ಜವಾಬ್ದಾರಿಯು ಅಮೆರಿಕಾದ್ದೇ ಎಂದು ಇಂಗ್ಲೆಂಡ್ ಅಮೆರಿಕಾ ನಡುವಿನ ಹೇ ಫ್ರಾಂಕ್‌ಫರ್ಟ್ ಒಪ್ಪಂದವು ನಿರ್ಣಯಿಸಿತು. ಇದನ್ನು ಅನುಷ್ಠಾನಗೊಳಿಸಲು ೧೦೦ ವರ್ಷಗಳ ಗುತ್ತಿಗೆಯನ್ನು ಅಮೆರಿಕಾವು ಕೊಲಂಬಿಯಾವನ್ನು ಕೇಳಿತು. ಏಕೆಂದರೆ ಪನಾಮವು ಕೊಲಂಬಿಯಾದ ಭಾಗವಾಗಿತ್ತು. ಆದರೆ ಕೊಲಂಬಿಯಾದ ನ್ಯಾಯವಿಧಾಯಕ ಸಭೆ ಇದಕ್ಕೆ ಒಪ್ಪಲಿಲ್ಲ. ಆದರೆ, ಕೊಲಂಬಿಯಾವನ್ನು ಲೆಕ್ಕಿಸದ ಅಧ್ಯಕ್ಷ ರೂಸ್‌ವೆಲ್ಟ್ ಪನಾಮಾ ಕಾಲುವೆ ಕಂಪನಿಯ ಮೂಲಕ ಕಾಲುವೆ ಕೆಲಸ ಆರಂಭಿಸಿಯೇ ಬಿಟ್ಟನು. ಮಾತ್ರವಲ್ಲದೇ ಕೊಲಂಬಿಯಾದ ವಿರುದ್ಧ ಪನಾಮಾವನ್ನು ಎತ್ತಿ ಕಟ್ಟಿ ಕಂಪನಿಯ ಮೂಲಕ ಹೊಸ ಸರ್ಕಾರವನ್ನು ಸ್ಥಾಪಿಸಿ, ಕಾಲುವೆ ಕೆಲಸ ಅವ್ಯಾಹತವಾಗಿ ನಡೆಯುವಂತೆ ಮಾಡಿದನು.

ಮನ್ರೋ ತತ್ವಕ್ಕೆ ಪೂರಕವಾಗಿಯೇ ತನ್ನ ಉಪತತ್ವವನ್ನು ಸೇರಿಸಿದ ರೂಸ್‌ವೆಲ್ಟನು ಇಡೀ ಲ್ಯಾಟಿನ್ ಅಮೆರಿಕಾದ ಮೇಲಿನ ಅಧಿಕಾರ ತನ್ನದೇ ಎಂದು ಘೋಷಿಸಿದನು. ಈ ಭೂ ಭಾಗಗಳಲ್ಲಿ ಯುರೋಪ್ ಕಾಲಿಡದಂತೆ ಮಾಡುವುದು ಅಮೆರಿಕಾದ ಉದ್ದೇಶವಾಗಿತ್ತು. ರೂಸ್‌ವೆಲ್ಟ್‌ನ ನಂತರ ಬಂದ ವಿಲಿಯಂ ಹೋವರ್ಡನು ಡಾಲರ್ ರಾಜತಂತ್ರದ ಹೆಸರಿನಲ್ಲಿ ಲ್ಯಾಟಿನ್ ಅಮೆರಿಕಾದಲ್ಲಿ ಬಂಡವಾಳ ಹೂಡಿಕೆಯನ್ನು ಮುಂದುವರೆಸಿದನು. ಮಾತ್ರವಲ್ಲ ಅಲ್ಲಿನ ಎಲ್ಲಾ ಆರ್ಥಿಕ ವ್ಯವಹಾರಗಳಿಗೆ ಸೈನಿಕ ರಕ್ಷಣೆಯನ್ನೂ ಒದಗಿಸಿದನು.

೧೯೧೨ರಲ್ಲಿ ಅಧಿಕಾರಕ್ಕೆ ಬಂದ ವುಡ್ರೋ ವಿಲ್ಸನ್‌ನು ಸಹ ಮೆಕ್ಸಿಕೊದಲ್ಲಿ ಜನರ ವಿರುದ್ಧ ಯುದ್ಧ ನಡೆಸಿದನು. ೧೯೧೫ರಲ್ಲಿ ಅಮೆರಿಕಾದ ನೌಕಾಪಡೆಯು ಹೈತಿ ಪ್ರಾಂತ್ಯವನ್ನು ಆಕ್ರಮಿಸಿ ಮುಂದಿನ ೧೯ ವರ್ಷಗಳವರೆಗೆ ಅಮೆರಿಕಾದ ನೇರ ಆಳ್ವಿಕೆಗೆ ಒಳಪಡಿಸಿತು. ನಂತರ ತನ್ನ ಕೈಗೊಂಬೆ ದುವಾಲಿಯರ್‌ನನ್ನು ಅಧಿಕಾರಸ್ಥಾನದಲ್ಲಿ ಕೂರಿಸಿತು. ಅವನ ದಬ್ಬಾಳಿಕೆಯ ವಿರುದ್ಧ ಜನರು ದಂಗೆ ಎದ್ದ ಮೇಲೆ ಅವನು ೧೯೮೬ರಲ್ಲಿ ಫ್ರಾನ್ಸ್‌ಗೆ ಪರಾರಿಯಾದ ನಂತರ ಅಧಿಕಾರಕ್ಕೆ ಬಂದ ಆರಿಸ್‌ಟೈಡ್‌ನನ್ನು ಅಮೆರಿಕಾವು ರಾವುಲ್ ಸೆಡ್ರಾಸ್ ಎಂಬ ಸೈನ್ಯಾಧಿಕಾರಿಯ ಮೂಲಕ ಕೆಳಗಿಳಿಸಿತು. ತಾನು ಅಮೆರಿಕಾಕ್ಕೆ ಬದ್ಧನಾಗಿರುತ್ತೇನೆ ಎಂಬ ಕೋರಿಕೆಯ ಮೇರೆಗೆ ೧೯೯೪ರ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಲ್‌ಕ್ಲಿಂಟನ್ ಸರ್ಕಾರವು ರಾವುಲ್ ಸೆಡ್ರಾಸನ ದಬ್ಬಾಳಿಕೆಯಿಂದ ಹೈಟಿಯ ಜನರನ್ನು ಪಾರು ಮಾಡುವ ಹೆಸರಲ್ಲಿ ‘ಶಾಂತಿ’ ಹಾಗೂ ‘ಪ್ರಜಾತಂತ್ರ’ಗಳನ್ನು ಸ್ಥಾಪಿಸುವ ಹೆಸರಲ್ಲಿ ಮತ್ತೆ ಅರಿಸ್‌ಟೈಡ್‌ನನ್ನೇ ಗದ್ದುಗೆಗೆ ಏರಿಸಿತು. ಅದಾದ ೧೦ ವರ್ಷಗಳ ನಂತರ ಮತ್ತೆ ಒಂದು ಕ್ಷಿಪ್ರದಂಗೆಯನ್ನು ಅಮೆರಿಕಾದ ನಾಗರಿಕ ಆಂಡಿಅಪಾಯಿಡ್ ಮೂಲಕ ಸಿ.ಐ.ಎ. ಆಯೋಜಿಸಿತು. ಇಂದು ಹೈಟಿಯು ಪ್ರಪಂಚದ ಅತ್ಯಂತ ಬಡದೇಶವಾಗಿದ್ದು, ಶೇ.೮೫ ಜನರು ದಿನವೊಂದಕ್ಕೆ ಒಂದು ಡಾಲರಿಗಿಂತಲೂ ಕಡಿಮೆ ಕೂಲಿಯಿಂದ ಬದುಕುತ್ತಿದ್ದಾರೆ. ಈ ದುಸ್ಥಿತಿಗೆ ಅಮೆರಿಕಾದ ನೀತಿಗಳೇ ಕಾರಣ.

ಬೊಲಿವಿಯಾದಲ್ಲಿ ಅಮೆರಿಕಾದ ರಾಜಕೀಯ ನೀತಿ

ಹೈಟಿ, ಮೆಕ್ಸಿಕೊ, ಕ್ಯೂಬಾಗಳ ಜೊತೆಗೆ ಅಮೆರಿಕಾವು ಬೊಲಿವಿಯಾಕ್ಕೂ ಕಾಲಿಟ್ಟಿತು. ಬೊಲಿವಿಯಾದ ಅಪಾರ ಖನಿಜ ಸಂಪತ್ತಿನ ಮೇಲೆ ಕಣ್ಣಿಟ್ಟ ಅಮೆರಿಕಾದ ಕಂಪನಿಗಳು ಅಲ್ಲಿನ ತವರ ನಿಕ್ಷೇಪಗಳಿಗೆ ದಾಳಿ ಇಟ್ಟವು. ೧೯೦೬ರಲ್ಲಿ ಅಮೆರಿಕಾದ ಬ್ಯಾಂಕುಗಳು ಬೊಲಿವಿಯಾದಲ್ಲಿ ಅಪಾರ ಹಣ ಚೆಲ್ಲಿ ರೈಲ್ವೆ ಹಳಿಗಳನ್ನು ಹಾಕಿದವು. ೧೯೨೦ರಲ್ಲಿ ರಾಷ್ಟ್ರೀಯ ಬ್ಯಾಂಕನ್ನು ಅಮೆರಿಕಾ ಅಲ್ಲಿ ಸ್ಥಾಪಿಸಿತು. ಹೊಸ ರೈಲು, ರಸ್ತೆಗಳು ಅಪಾರ ಖನಿಜ ಸಂಪತ್ತಿದ್ದ ಪೋಟೋ ಹಾಗೂ ಬರುಡೇ ಪರ್ವತ ಪ್ರಾಂತ್ಯಗಳ ಅದಿರು ಪ್ರದೇಶಗಳಿಂದ ನೇರವಾಗಿ ಶಾಂತಸಾಗರದ ಬಂದರುಗಳಿಗೆ ತಲುಪುತ್ತಿದ್ದವು. ಖನಿಜ ಸಂಪತ್ತನ್ನು ತುಂಬಿಕೊಂಡ ರೈಲು ಕೆಲವೇ ಗಂಟೆಗಳಲ್ಲಿ ಹೋಗಿ ಬರುತ್ತಿದ್ದರೆ, ಬೊಲಿವಿ ಯಾದ ಪ್ರದೇಶಗಳು ಸಾಂತಾಕ್ರೂಜ್ ನಗರದಿಂದ ರಾಜಧಾನಿ ಲಾಪಾಜ್‌ನಗರವನ್ನು ತಲುಪಲು ಕಾಲ್ನಡಿಗೆಯಲ್ಲಿ ೧೨ ತಿಂಗಳು ಪಯಣಿಸುತ್ತಿದ್ದರು. ೧೯೫೩ರವರೆಗೂ ಬೊಲಿವಿಯಾದ ಮುಖ್ಯನಗರಗಳ ನಡುವೆಯೂ ಸಂಚಾರಕ್ಕಾಗಿ ಒಂದೇ ಒಂದು ರಸ್ತೆ ಇರಲಿಲ್ಲ.

೧೯೩೨ ರಿಂದ ೧೯೩೫ರ ನಡುವೆ ಬೊಲಿವಿಯಾ ಹಾಗೂ ಪರಾಗ್ವೆ ನಡುವೆ ‘ಚಾಕೋ ಸಮರ’ ನಡೆದು ೬೦ ಸಾವಿರ ಜನರು ಸಾವಿಗೀಡಾದರು. ವಾಸ್ತವವಾಗಿ ಈ ಯುದ್ಧವು ತೈಲ ಸಾಗಿಸುವ ಪೈಪ್‌ಲೈನ್ ಹಾಕಲು ಭೂಮಿಗಾಗಿ ಅಮೆರಿಕಾದ ಸ್ಟ್ಯಾಂಡರ್ಡ್ ಆಯಿಲ್ ಹಾಗೂ ಬ್ರಿಟನ್ನಿನ ಶೆಲ್ ಆಯಿಲ್ ಕಂಪನಿಗಳ ನಡುವಿನ ಕಚ್ಚಾಟದಿಂದ ಉಂಟಾಗಿತ್ತು.

೧೯೪೧ರಲ್ಲಿ ಅಮೆರಿಕಾವು ತನ್ನ ಸೈನಿಕ ಕಚೇರಿಗಳನ್ನು ತೆರೆಯಿತು. ಬೊಲಿವಿಯಾದ ಸೈನಿಕರಿಗೆ ‘ಸ್ಕೂಲ್ ಆಫ್ ಅಮೆರಿಕಾದಲ್ಲಿ’ ಸೈನಿಕ ತರಬೇತಿ ನೀಡಲಾಯಿತು. ೧೯೫೦ರ ದಶಕದ ಸುಮಾರಿಗೆ ಬೊಲಿವಿಯಾ ಸರ್ಕಾರದಲ್ಲಿ ಸರ್ಕಾರಿ ನೀತಿಗಳಲ್ಲಿ ಸಿಐಎ ಸಂಪೂರ್ಣವಾಗಿ ಮಾರಿಕೊಂಡಿತು. ಚುನಾವಣೆಯಲ್ಲಿ ಪ್ರತಿ ಅಭ್ಯರ್ಥಿಯನ್ನು ಮೌಲ್ಯ ಅಂದಾಜು ಮಾಡಿ ಅಮೆರಿಕಾದ ಕಂಪನಿಗಳು ಯಾರ‌್ಯಾರಿಗೆ ಎಷ್ಟೆಷ್ಟು ಹಣ ನೀಡಬೇಕೆಂದು ನಿರ್ಧರಿಸುತ್ತಿತ್ತು. ನಂತರದ ಎರಡು ದಶಕಗಳಲ್ಲಿ ಹಲವಾರು ಸೈನಿಕ ಸಂಚುಕೂಟಗಳನ್ನು ಆಯೋಜಿಸಿ ಕ್ಷಿಪ್ರ ದಂಗೆಗಳನ್ನು ನಡೆಸಿದ ಸಿಐಎ ೮೦ರ ದಶಕದಲ್ಲಿ ಕೊಕೈನ್ ವ್ಯವಹಾರದಲ್ಲಿ ತೊಡಗಿತು. ಬೊಲಿವಿಯನ್ನರು ‘ಕೊಕಾ’ವನ್ನು ಮೃದು ಉತ್ತೇಜಕದಂತೆ ಬಳಸುತ್ತಿದ್ದರು. ಆದರೆ ಅದನ್ನು ದೇಶದಾದ್ಯಂತ ಒಂದು ವಾಣಿಜ್ಯ ಬೆಳೆಯನ್ನಾಗಿ ಮಾಡಿದ್ದು ಅಮೆರಿಕಾ ಹಾಗೂ ಸಿ.ಐ.ಎ. ೧೯೭೭ರಲ್ಲಿ ೧೧,೦೦೦ ಎಕರೆ ಇದ್ದ ಕೊಕಾ ಬೆಳೆ ಮುಂದಿನ ಹತ್ತು ವರ್ಷಗಳಲ್ಲಿ ೧,೩೦,೦೦೦ ಎಕರೆಗಳಿಗೆ ವ್ಯಾಪಿಸಿತು. ತವರದ ಬೆಲೆ ಕುಸಿದು ಸುಮಾರು ೨೮,೦೦೦ ಕಾರ್ಮಿಕರು ಕೆಲಸ ವಂಚಿತರಾಗಿ ಬೊಲಿವಿಯಾ ಆರ್ಥಿಕತೆ ಹಿನ್ನಡೆಯಾದ ಸಂದರ್ಭದಲ್ಲಿ ಬೊಲಿವಿಯಾದ ಶ್ರೀಮಂತ ವರ್ಗವು ‘ಕೊಕೇನ್’ ಡ್ರಗ್ ದಂದೆಯಲ್ಲಿ ತೊಡಗಿ ಅಪಾರ ಲಾಭದಲ್ಲಿ ತೊಡಗಿತು. ಸಿಐಎಯು ಕೊಲಂಬಿಯಾದಿಂದ ಅಮೆರಿಕಾದವರೆಗೆ ಡ್ರಗ್ ಕಳ್ಳಸಾಗಾಣಿಕೆಯ ದಾರಿಗಳನ್ನು ಹುಡುಕಿಕೊಂಡು ಅಮೆರಿಕಾದಲ್ಲಿ ಅಗ್ಗದ ಬೆಲೆಗೆ ಕೊಕೇನ್ ಲಭ್ಯವಾಗುವಂತೆ ಮಾಡಿತು. ಅದರಲ್ಲಿ ಬಂದ ಲಾಭವನ್ನೆಲ್ಲಾ ಸಿ.ಐ.ಎ. ನಿಕರಾಗುವಾದಲ್ಲಿ ಸ್ಯಾಂಡಿನಿಸ್ತಾ ಸರ್ಕಾರವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದ್ದ ಕಾಂಟ್ರಾ ಎಂಬ ಸೇನಾಪಡೆಗೆ ಒದಗಿಸಿತು. ಹೀಗೆ ‘ಕೊಕೇನ್’ ವ್ಯವಹಾರದಲ್ಲಿ ಅಮೆರಿಕಾ ತೊಡಗಿಕೊಂಡದ್ದರಿಂದ ಬೊಲಿವಿಯಾ, ಪೆರುಗಳಲ್ಲಿ ‘ಕೊಕಾ’ಗೆ ಬೇಡಿಕೆ ಹೆಚ್ಚಿತು. ೧೯೮೦ರಲ್ಲಿ ಬೊಲಿವಿಯಾದ ದೊಡ್ಡ ಕೊಕೇನ್ ಸಾಗಾಟಗಾರರಿಂದ ಹಣ ಪಡೆಯುತ್ತಿದ್ದ ಜನರಲ್ ಗಾರ್ಸಿಯಾ ಮೆಝಾ ಸಿಐಎ ಬೆಂಬಲದಿಂದ ‘ಕೊಕೇನ್’ ಕ್ಷಿಪ್ರದಂಗೆ ನಡೆಸಿ ಸರ್ಕಾರ ವಶಪಡಿಸಿಕೊಂಡ.

೧೯೮೨ರಲ್ಲಿ ಚುನಾಯಿತ ಸರ್ಕಾರವು ಮೆಜಾನನ್ನು ಸ್ಥಳಾಂತರಗೊಳಿಸಿತು. ೧೯೮೩ರಲ್ಲಿ ಅಮೆರಿಕಾವು ಬೊಲಿವಿಯಾದೊಂದಿಗೆ ‘ಡ್ರಗ್ ವಿರೋಧಿ’ ಒಪ್ಪಂದಕ್ಕೆ ಸಹಿಹಾಕಿ ‘ಡ್ರಗ್ ವಿರೋಧಿ ಯುದ್ಧ’ದ ಹೆಸರಲ್ಲಿ ತನ್ನ ಸೈನ್ಯವನ್ನು ಇಳಿಸಿತು. ೧೯೮೬ರಲ್ಲಿ ‘ಅಪರೇಷನ್ ಬ್ಲಾಕ್ ಫರ್ನೇಸ್’ನಲ್ಲಿ ಅಮೆರಿಕಾದ ಕಾಂಬ್ಯಾಟ್ ಪಡೆಗಳು ಡ್ರಗ್ ವಿರೋಧಿ ಕಾರ್ಯಾಚರಣೆ ನಡೆಸಿತು. ೧೯೯೧ರಲ್ಲಿ ಮತ್ತೊಮ್ಮೆ ನಡೆದ ಡ್ರಗ್ ವಿರೋಧಿ ಕಾರ್ಯಾಚರಣೆಗೆ ಮುನ್ನ ಬೊಲಿವಿಯಾದ ಸೈನ್ಯದ ಎರಡು ಬೆಟಾಲಿಯನ್‌ಗಳಿಗೆ ತರಬೇತಿ ನೀಡಲು ಅಮೆರಿಕಾದ ೫೬ ಸೈನಾ ಮಾರ್ಗದರ್ಶಕರು ಬಂದಿದ್ದರು. ಈ ಕಾರ್ಯಾ ಆಚರಣೆಗಳಲ್ಲಿ ‘ಡ್ರಗ್ ದಾಳಿ’ಗಳ ಹೆಸರಲ್ಲಿ ಸಾವಿರಾರು ಜನರನ್ನು ಹೊಡೆದು, ಹಿಂಸಿಸಿ ಕೊಲ್ಲಲಾಗಿತ್ತು.