ವಸತಿ:

ಕ್ರಾಂತಿಪೂರ್ವದಲ್ಲಿ ಕ್ಯೂಬಾದಲ್ಲಿ ೪೦೦,೦೦೦ ಕುಟುಂಬಗಳು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಯಾವುದೇ ಸೌಕರ್ಯಗಳಿಲ್ಲದ ಗುಡಿಸಲುಗಳಲ್ಲಿ, ಗುಡಾರಗಳಲ್ಲಿ ಪ್ರಾಣಿಗಳಿಗಿಂತಲೂ ಕಳಪೆಯಾಗಿ ವಾಸಿಸುತ್ತಿದ್ದರು. ೨,೭೦೦,೦೦೦ ನಗರವಾಸಿಗಳು ತಮ್ಮ ವೇತನದ ಶೇ.೨೦ ರಿಂದ ೩೩ರಷ್ಟು ಮನೆಬಾಡಿಗೆಗೇ ಖರ್ಚು ಮಾಡುತ್ತಿದ್ದು, ಮನೆಗಳ ಮಾಲೀಕರ ಬೊಕ್ಕಸ ತುಂಬಿಸುತ್ತಿದ್ದರು. ೨,೮೦೦,೦೦೦ ಗ್ರಾಮೀಣ ಹಾಗೂ ಅರೆನಗರ ವಾಸಿಗಳು ಮನೆಗಳ ಬಾಡಿಗೆ ಕಡಿಮೆ ಮಾಡಲು ಒತ್ತಾಯಿಸುತ್ತಿದ್ದರೂ, ಬಾಡಿಗೆ ಕಡಿಮೆಯಾದರೆ ಖಾಸಗಿ ವಲಯದಲ್ಲಿ ಮನೆಗಳನ್ನು ಕಟ್ಟುವುದೇ ಕಡಿಮೆ ಆಗಿ ಬಾಡಿಗೆ ಇನ್ನಷ್ಟು ಹೆಚ್ಚಾಗುವುದೆಂದು ಸರಕಾರ ವಾದಿಸುತ್ತಿತ್ತು. ಹೆಚ್ಚಿನ ಮನೆಗಳಿಗೆ ವಿದ್ಯುತ್ , ನೀರು, ಶೌಚಾಲಯಗಳ ಸೌಕರ್ಯಗಳೇ ಇದ್ದಿಲ್ಲ. ಕ್ರಾಂತಿಯ ನಂತರ ಕ್ಯೂಬಾ ಶ್ರೀಸಾಮಾನ್ಯರ ವಸತಿ ಸೌಕರ್ಯಕ್ಕಾಗಿ ಆದ್ಯತೆ ನೀಡಿತು. ವಸತಿ ಸೌಕರ್ಯ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಯಿತು. ಈಗ ಕ್ಯೂಬಾದಲ್ಲಿ ಎಲ್ಲಾ ಕುಟುಂಬಗಳೂ ಅಗತ್ಯ ಸೌಕರ್ಯಗಳಿರುವ ವಸತಿಗಳನ್ನು ಪಡೆದಿರುತ್ತಾರೆ. ವಸತಿಗಳ ರಚನೆಯ ಕೆಲಸ ನಿರಂತರವಾಗಿ ಸಾಗುತ್ತಿದೆ. ಅದಕ್ಕೆ ಸರಕಾರ ಗರಿಷ್ಠ ಮೊತ್ತದ ಸಂಪನ್ಮೂಲ ಒದಗಿಸುತ್ತಿದೆ. ಅಮೆರಿಕದಲ್ಲಿ ವಲಸೆಗಾರ ಕುಟುಂಬಗಳಲ್ಲಿ ಬಹುಪಾಲು ಜನರು ವಸತಿ ಸೌಕರ್ಯಗಳಿಂದ ವಂಚಿತರಾಗಿದ್ದಾರೆ.

ಕ್ರೀಡೆ: ಕ್ಯೂಬಾ ಕ್ರೀಡಾ ಜಗತ್ತಿನಲ್ಲಿಯೇ ಅಗ್ರಮಾನ್ಯ ಸ್ಥಾನ ಗಳಿಸಿದೆ. ಅಲ್ಲಿ ಸದ್ಯ ಈ ಕ್ಷೇತ್ರದಲ್ಲಿ ಪರಿಣತರಾದ ೩೦,೦೦೦ ವಿಶ್ವವಿದ್ಯಾಲಯ ಪದವೀಧರರಿದ್ದಾರೆ. ಇವರು ತಮ್ಮ ದೇಶದ ಆಟ ಓಟದ ಪಟುಗಳಿಗೆ ಅತ್ಯುನ್ನತ ಮಟ್ಟದ ತರಬೇತಿ ನೀಡುತ್ತಿದ್ದಾರೆ. ಲ್ಯಾಟಿನ್ ಅಮೆರಿಕಾ, ಆಫ್ರಿಕಾ, ಮತ್ತಿತರ ದೇಶಗಳ ಆಸಕ್ತರಿಗೂ ತರಬೇತಿ ಕೊಡುತ್ತಿದ್ದಾರೆ. ೧೯೯೬ರಲ್ಲಿ ಅಟ್ಲಾಂಟಾದಲ್ಲಿ ನಡೆದ ವಿಶ್ವ ಒಲಂಪಿಕ್ಸ್‌ನಲ್ಲಿ ಪ್ರಶಸ್ತಿ ವಿಜೇತ ೪೬ ದೇಶಗಳಲ್ಲಿ ಕ್ಯೂಬಾ ೯ ಚಿನ್ನದ, ೮ ಬೆಳ್ಳಿಯ, ೮ ಕಂಚಿನ ಒಟ್ಟು ೨೫ ಪದಕಗಳನ್ನು ಪಡೆದು ೮ನೆಯ ಸ್ಥಾನ ಗಳಿಸಿದೆ. ಮೊದಲ ೭ ಸ್ಥಾನಗಳನ್ನು ಅನುಕ್ರಮವಾಗಿ ಬಲಿಷ್ಠ ರಾಷ್ಟ್ರಗಳಾದ ಅಮೆರಿಕಾ, ರಷ್ಯಾ, ಜರ್ಮನಿ, ಚೀನಾ, ಫ್ರಾನ್ಸ್, ಇಟಲಿ, ಆಸ್ಟ್ರೇಲಿಯ ಪಡೆದಿವೆ. ಇವುಗಳಲ್ಲಿ ರಷ್ಯಾ ಹಿಂದೆ ಸಮಾಜವಾದಿ ದೇಶವಾಗಿತ್ತೆಂದೂ, ಚೀನಾ ಇನ್ನೂ ಸಮಾಜವಾದಿ ದೇಶವಾಗಿದೆ ಎಂದೂ ಗಮನಿಸಬಹುದು. ೧೯೯೭ರಲ್ಲಿ ನಡೆದ ಜಾಗತಿಕ ಕ್ರೀಡಾಕೂಟದಲ್ಲಿ ಪ್ರಶಸ್ತಿ ವಿಜೇತ ೪೧ ದೇಶಗಳಲ್ಲಿ ಪುಟ್ಟ ಕ್ಯೂಬಾ ೪ ಚಿನ್ನದ, ೧ ಬೆಳ್ಳಿಯ, ೧ ಕಂಚಿನ, ಒಟ್ಟು ೬ ಪದಕಗಳನ್ನು ಪಡೆದು ೩ನೇ ಸ್ಥಾನ ಗಳಿಸಿದೆ. ಅಮೆರಿಕಾ ಮತ್ತು ಜರ್ಮನಿ ಒಂದನೇ ಹಾಗೂ ಎರಡನೇ ಸ್ಥಾನಗಳಿಸಿವೆ. ವಿವಿಧ ಆಟಗಳಲ್ಲಿಯೂ ಕ್ಯೂಬಾ ತನ್ನ ಕೀರ್ತಿ ಮೆರೆಸಿದೆ. ಚಿಕ್ಕಂದಿನಿಂದಲೇ ಶಿಕ್ಷಣದ ಅಂಗವಾಗಿ ಎಲ್ಲರಿಗೂ ಆಟ ಓಟಗಳಲ್ಲಿ ಆದ್ಯತೆಯ ಆಧಾರದಲ್ಲಿ ವಿಪುಲ ಅವಕಾಶಗಳನ್ನೂ, ಅವುಗಳಲ್ಲಿ ಸ್ಪರ್ಧಿಸಬೇಕಾದಷ್ಟು ದೇಹದಾರ್ಢ್ಯತೆ ಪಡೆಯಲು ಆರೋಗ್ಯ ಸೌಕರ್ಯಗಳನ್ನೂ ಕ್ಯೂಬಾದ ಸಮಾಜವಾದಿ ಸರಕಾರ ಒದಗಿಸುತ್ತಾ ಬಂದಿದೆ. ಆದುದರಿಂದಲೇ ಇಂತಹ ಅಭೂತಪೂರ್ವ ಸಾಧನೆಗಳು ಸಾಧ್ಯವಾಗುತ್ತಿವೆ.

ಆರ್ಥಿಕಾಭಿವೃದ್ದಿ: ಕ್ರಾಂತಿಯ ಪ್ರಾರಂಭದಿಂದಲೂ ಅಮೆರಿಕದಿಂದ ಮತ್ತು ಅದರ ಒತ್ತಡದಿಂದ ಕೆಲವು ಮಿತ್ರದೇಶಗಳಿಂದ ಕ್ಯೂಬಾ ಆರ್ಥಿಕ ದಿಗ್ಬಂಧನಗಳಿಗೆ ಒಳಗಾಗಿತ್ತು. ಆದರೂ, ಅದು ತನ್ನ ಜನರ ನಿರಂತರ ಪರಿಶ್ರಮದಿಂದ ಕೃಷಿ, ಕೈಗಾರಿಕೆ, ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಆರೋಗ್ಯ, ವಸತಿ, ಕಲೆ, ಸಾಹಿತ್ಯ, ಕ್ರೀಡೆ ಮುಂತಾದ ಎಲ್ಲಾ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದೆ. ೧೦ ವರ್ಷಗಳ ಹಿಂದೆ, ಹಿಂದಿನ ಸೋವಿಯತ್ ಒಕ್ಕೂಟ ಮತ್ತು ಪೂರ್ವ ಯುರೋಪ್ ದೇಶಗಳಲ್ಲಿ ಸಮಾಜವಾದಕ್ಕೆ ತೀವ್ರ ಹಿನ್ನಡೆ ಆದ ನಂತರ ಅಮೆರಿಕಾ ಕ್ಯೂಬಾದ ಮೇಲಿನ ಆರ್ಥಿಕ ದಿಗ್ಬಂಧನವನ್ನು ಇನ್ನಷ್ಟು ಬಿಗಿಗೊಳಿಸಿದೆ. ಆ ಪುಟ್ಟ ದೇಶವನ್ನು ಮುಗಿಸಿಯೇ ಬಿಡುವ ಯೋಜನೆ ನಡೆಸಿದೆ. ಆದರೆ, ಕ್ಯೂಬಾ ವಿವಿಧ ದೇಶಗಳಿಂದ ಆರ್ಥಿಕ ನೆರವು ಪಡೆಯುತ್ತಾ ಬಂದಿತ್ತು. ವ್ಯಾಪಾರ ಸಂಬಂಧಗಳನ್ನು ಕುದುರಿಸಿಕೊಂಡಿತು. ಭಾರತದ ಸಂವೇದನಾಶಾಲಿ ಜನರು ಎಡಪಕ್ಷಗಳ ಮೂಲಕ ಹಡಗುಗಟ್ಟಲೆ ಆಹಾರ ಧಾನ್ಯಗಳನ್ನು ಔಷಧಿಗಳನ್ನು, ವಿವಿಧ ಸಾಬೂನುಗಳನ್ನು, ಮಕ್ಕಳಿಗೆ ಪುಸ್ತಕ, ಪೆನ್ನು ಪೆನ್ಸಿಲುಗಳನ್ನು, ಬಟ್ಟೆಬರೆಗಳನ್ನು ಸೌಹಾರ್ದಯುತ ದ್ಯೋತಕ ವಾಗಿ ೧೯೯೮ರಲ್ಲಿ ಕಳುಹಿಸಿ ಕೊಟ್ಟಿದ್ದರು.

ಕಳೆದ ೨ ದಶಕದಲ್ಲಿ ಲ್ಯಾಟಿನ್ ಅಮೆರಿಕಾದ ಹೆಚ್ಚಿನ ದೇಶಗಳು ಸ್ವಲ್ಪ ಕಾಲ ಅಮೆರಿಕಾದ ಒತ್ತಡಕ್ಕೆ ಒಳಗಾಗಿ ಕ್ಯೂಬಾದಿಂದ ದೂರ ಸರಿದಿದ್ದರೂ, ಈಗ ಪುನಃ ಅದರ ಹತ್ತಿರ ಬರುತ್ತಿವೆ. ಅಮೆರಿಕಾ ಪ್ರೇರಿತವಾದ ಅಭಿವೃದ್ದಿ ಹೊಂದಿದ ದೇಶಗಳು ತಮ್ಮ ‘‘ನ್ಯಾಟೊ’’ ಸೈನಿಕ ಬಲದಿಂದ ಐ.ಎಂ.ಎಫ್, ಜಾಗತಿಕ ಬ್ಯಾಂಕ್, ವಿಶ್ವವ್ಯಾಪಾರ ಸಂಸ್ಥೆಗಳ ಶರತ್ತುಗಳಂತೆ ಖಾಸಗೀಕರಣ, ಉದಾರೀಕರಣ, ಜಾಗತೀಕರಣ ಆಧರಿತ ಆರ್ಥಿಕ ನೀತಿಯ ಅಬ್ಬರದ ಅಟ್ಟಹಾಸ ನಡೆಯುತ್ತಿವೆ. ಆದರೂ ಕ್ಯೂಬಾ ತನ್ನ ಸ್ವಂತಿಕೆಯನ್ನು, ಸ್ವಾವಲಂಬನೆಯನ್ನು, ಸಾರ್ವಭೌಮತೆಯನ್ನು ಕಾಪಾಡಿಕೊಂಡು ಬಂದಿದೆ. ಇತರ ಎಲ್ಲಾ ದೇಶಗಳೂ ಅಮೆರಿಕಾದ ಡಾಲರಿಗೆ ಸಂಬಂಧಿಸಿ ತಮ್ಮ ನಾಣ್ಯಗಳನ್ನು ಆಗಾಗ ಅಪಮೌಲ್ಯಗೊಳಿಸುತ್ತಾ ಬಂದಿದ್ದರೂ, ಕ್ಯೂಬಾ ಮಾತ್ರ ತನ್ನ ಪಿಸೊ ನಾಣ್ಯವನ್ನು ಆಗಾಗ ಪುನರ್ ಮೌಲ್ಯಗೊಳಿಸುತ್ತಲೇ ಬಂದಿದೆ. ಅದು ಇತರ ಅಭಿವೃದ್ದಿಶೀಲ ದೇಶಗಳಂತೆ ಸಾಲದ ಸುಳಿಯಲ್ಲಿ ಸಿಲುಕಲಿಲ್ಲ. ೧೯೯೪ರಲ್ಲಿ ೧ ಡಾಲರಿಗೆ ೧೫೦ ಪಿಸೋಗಳಿದ್ದರೆ, ೧೯೯೮-೯೯ರಲ್ಲಿ ೨೦ ಪಿಸೋಗಳಾಗಿವೆ. ಅಂದರೆ ಪಿಸೋವಿನ ಬೆಲೆ ಡಾಲರ್‌ನಲ್ಲಿ ಹೆಚ್ಚಿದೆ.

ಅಮೆರಿಕಾದ ನಾಗರಿಕರ ವಾರ್ಷಿಕ ಸರಾಸರಿ ವರಮಾನ ಡಾಲರ್ ೨೪,೭೨೯ ಆಗಿದೆ. ಕ್ಯೂಬಾದ ಜನರ ವಾರ್ಷಿಕ ಸರಾಸರಿ ವರಮಾನ ಡಾಲರ್ ೧೨೫೦. ಆದರೆ ಕ್ಯೂಬಾದಲ್ಲಿ ಪ್ರತಿಯೊಬ್ಬ ನಾಗರಿಕನಿಗೆ ರಿಯಾಯಿತಿ ದರಗಳಲ್ಲಿ ಅಥವಾ ಉಚಿತವಾಗಿ ನೀಡುತ್ತಿರುವ ಶಿಕ್ಷಣ, ಆರೋಗ್ಯ, ವಸತಿ, ಮಕ್ಕಳಿಗೆ ಆರೈಕೆ, ಉಚಿತವಾದ ನೀಡುತ್ತಿರುವ ಶಿಕ್ಷಣ, ಆರೋಗ್ಯ, ವಸತಿ, ಮಕ್ಕಳಿಗೆ ಆರೈಕೆ, ಆಟ ಓಟಗಳಲ್ಲಿ ಸಮಾನಾವಕಾಶ, ಜೀವನಾವಶ್ಯಕ ವಸ್ತುಗಳ ಸಾರ್ವಜನಿಕ ವಿತರಣೆ, ಸಾರಿಗೆ ಸಂಪರ್ಕ ಸೌಲಭ್ಯಗಳು, ಕಲೆ, ಸಾಹಿತ್ಯ, ಸಾಂಸ್ಕೃತಿಕ ಸೌಲಭ್ಯಗಳು ಇತ್ಯಾದಿಗಳನ್ನೆಲ್ಲ ಪರಿಗಣಿಸಿದರೆ, ಕ್ಯೂಬಾದ ಜನರ ಸರಾಸರಿ ವಾರ್ಷಿಕ ಆದಾಯ ಅಮೆರಿಕನ್ನರಿಗಿಂತ ಕಡಿಮೆ ಆಗಲಾರದು. ಆದುದರಿಂದ ಕ್ಯಾಸ್ಟ್ರೊ ಆಗಾಗ ಹೇಳುತ್ತಿರುವುದು

ನಾವು ಹಿಡಿದಿರುವ ಮಾರ್ಗ ಬಂಡವಾಳಗಾರರಿಗಲ್ಲ, ಸಾಮ್ರಾಜ್ಯಶಾಹಿ ಗಳಿಗಲ್ಲ, ಈ ಮಾರ್ಗ ಜನತೆಗೆ, ಕಾರ್ಮಿಕರಿಗೆ, ರೈತರಿಗೆ. ಇದು ನ್ಯಾಯ ಮುನ್ನಡೆಯುವ ಮಾರ್ಗ

ಎಂದು.

ಸಂಸ್ಕೃತಿ: ಸಂಸ್ಕೃತಿ ಎಂದರೆ ರಾಜಕೀಯ ಸಂಸ್ಕೃತಿಯೂ ಸೇರಿದೆ. ಅಮೆರಿಕ ಮತ್ತು ಐರೋಪ್ಯ ಜನರ ಸಾಂಸ್ಕೃತಿಕ ಮಟ್ಟಕ್ಕಿಂತ ಕ್ಯೂಬಾದ ಜನರ ಸಾಂಸ್ಕೃತಿಕ ಮಟ್ಟ ಉನ್ನತವಾದುದು ಎಂದು ಕ್ಯಾಸ್ಟ್ರೊ ಹೇಳುತ್ತಾರೆ. ಕ್ಯೂಬಾ ಸೇರಿದಂತೆ ಲ್ಯಾಟಿನ್ ಅಮೆರಿಕದಲ್ಲಿ ಸಾಮ್ರಾಜ್ಯಶಾಹಿಗಳ ಆಕ್ರಮಣಗಳಿಂದ ಸಂಭವಿಸುತ್ತಿರುವ ಬಡತನ, ಶೋಷಣೆ, ಅಸಮಾನತೆ ಗಳು ಅಲ್ಲಿಯ ಜನರ ರಾಜಕೀಯ ಪ್ರಜ್ಞೆ ಹೆಚ್ಚಾಗಿ ಮೂಡಿಬಂದಿದೆ. ಆದುದರಿಂದಲೇ ಶಿಕ್ಷಕರ ಮತ್ತು ವೈದ್ಯರ ಮಹಾ ಅಧಿವೇಶನಗಳಲ್ಲಿ ಖಾಸಗೀಕರಣ, ಉದಾರೀಕರಣ, ಜಾಗತೀಕರಣದಿಂದಾಗಿ ಸುತ್ತಮುತ್ತಲಿನ ದೇಶಗಳ ಸರಕಾರಗಳು ಶಿಕ್ಷಣ, ಆರೋಗ್ಯ, ವಸತಿ ಮುಂತಾದ ಜನಕಲ್ಯಾಣ ಕಾರ್ಯಕ್ರಮಗಳಿಗೆ ಸಂಪನ್ಮೂಲಗಳನ್ನು ಕಡಿತಗೊಳಿಸುತ್ತಿರುವ ಕುರಿತು ತೀವ್ರ ಆತಂಕ ವ್ಯಕ್ತಪಡಿಸಲಾಗುತ್ತಿದೆ.

ಕ್ರಾಂತಿಯ ಪೂರ್ವದಲ್ಲಿ ಪ್ರವಾಸೋದ್ಯಮದಲ್ಲಿ ತೊಡಗಿದ್ದ ಮಹಿಳಾ ಮಾರ್ಗದರ್ಶಿ ಗಳು ಪ್ರವಾಸಿಗರನ್ನು ಸಂದರ್ಶಿಸುತ್ತಿದ್ದಾಗ ಸಹಜವಾಗಿ ನಗಲೂ ಧೈರ್ಯ ಮಾಡುತ್ತಿರಲಿಲ್ಲ. ಅವರ ನಗುವನ್ನು ಪ್ರವಾಸಿಗರು ತಮ್ಮೊಂದಿಗೆ ಕಾಮಕೇಳಿಗೆ ಕರೆ ಎಂದು ತಿಳಿಯುವರೋ ಎಂದು ಭೀತಿಯಿಂದ ಇದ್ದರು. ಕ್ರಾಂತಿಯ ನಂತರ ಅಂತಹ ಭೀತಿಯಿಂದ ಮಹಿಳಾ ಮಾರ್ಗದರ್ಶಿಗಳು ಮುಕ್ತರಾಗಿದ್ದಾರೆ ಮತ್ತು ಅವರು ತಮ್ಮ ಸಹಜ ನಗುವನ್ನು ಬೀರುವ ಧೈರ್ಯ ಹೊಂದಿದ್ದಾರೆ. ಇದುವೇ ಕ್ರಾಂತಿ ತಂದ ಸಾಂಸ್ಕೃತಿಕ ಬದಲಾವಣೆ.

ಅಮೆರಿಕ ತನ್ನ ಯಜಮಾನಿಕೆಯ ಹೊಸ ಜಾಗತಿಕ ವ್ಯವಸ್ಥೆಗೆ ಲ್ಯಾಟಿನ್ ಅಮೆರಿಕಾ ಮತ್ತು ಇತರ ಅಭಿವೃದ್ದಿ ಹೊಂದುತ್ತಿರುವ ದೇಶಗಳಿಂದ ಇಲೆಕ್ಟ್ರಾನಿಕ್ಸ್ ಹಾಗೂ ಕಂಪ್ಯೂಟರ್ ಸೈನ್ಸ್‌ಗಳಿಗೆ ಸಂಬಂಧಿಸಿದ ೨೦೦,೦೦೦ ಉನ್ನತ ತಂತ್ರಜ್ಞಾನಿಗಳನ್ನು ಸೇರ್ಪಡಿಸಲು ಅಪಾರ ಆಸೆ ಆಮಿಷಗಳನ್ನು ಒಡ್ಡುತ್ತಿದೆ. ಅಮೆರಿಕದ ಕೈಗಾರಿಕಾ ಚಕ್ರ ಸದಾ ತಿರುಗುತ್ತಿರುವಂತೆ ಮಾಡುವುದು, ಅಭಿವೃದ್ದಿ ಹೊಂದುತ್ತಿರುವ ದೇಶಗಳನ್ನು ಕೈಗಾರಿಕೀಕರಣ ದಿಂದ ವಿಮುಖಗೊಳಿಸುವುದು, ಅಲ್ಲಿಂದ ವಸಾಹತುಶಾಹಿ ವ್ಯವಸ್ಥೆಯಲ್ಲಿದ್ದಂತೆ ಕಚ್ಚಾ ಸಾಮಗ್ರಿಗಳನ್ನು ಅಗ್ಗದ ದರಗಳಲ್ಲಿ ಆಮದು ಮಾಡಿಕೊಳ್ಳುತ್ತಿರುವುದು ಮತ್ತು ಅಮೆರಿಕ ದಿಂದ ಸಿದ್ಧ ವಸ್ತುಗಳನ್ನು ಹೆಚ್ಚಿನ ಬೆಳೆಗಳಲ್ಲಿ ಆ ದೇಶಗಳಿಗೆ ರಫ್ತು ಮಾಡುವುದು ಇದರ ಉದ್ದೇಶಗಳಾಗಿವೆ. ಈ ಹೊಸ ನೀತಿಯಲ್ಲಿ ಕ್ಯೂಬಾದ ರಾಷ್ಟ್ರಪ್ರೇಮಿ ಜನರನ್ನೂ ಅಮೆರಿಕಾ ಖರೀದಿಸಲು ಹೊಂಚು ಹಾಕಲಾಗುತ್ತಿದೆ. ‘‘ಕ್ಯೂಬಾದ ಪ್ರತಿಯೊಬ್ಬ ನಾಗರಿಕನ ಬೆಲೆಯನ್ನು ಹೆಚ್ಚಿಸೋಣ, ಒಬ್ಬ ಕ್ಯೂಬನನ್ನಿಗೆ ೨೭ ಅಮೆರಿಕನ್ನರು ಎಂದು ಹೇಳೋಣ’’ ಎಂದು ಕ್ಯಾಸ್ಟ್ರೊ ಆಗಾಗ ಹಾಸ್ಯ ಚಟಾಕಿಗಳನ್ನು ಹಾರಿಸುತ್ತಾರೆ! ಕ್ಯೂಬಾದ ವಿಶ್ವವಿಖ್ಯಾತ ಒಲಂಪಿಕ್ಸ್ ಕ್ರೀಡಾಪಟುಗಳನ್ನಾಗಲೀ, ವಿಜ್ಞಾನಿಗಳನ್ನಾಗಲೀ, ತಂತ್ರಜ್ಞಾನಿಗಳನ್ನಾಗಲೀ, ಶಿಕ್ಷಕರನ್ನಾಗಲೀ, ವೈದ್ಯರನ್ನಾಗಲೀ, ಅಮೆರಿಕಾ ಈ ವಿಧಾನದಲ್ಲಿ ಖರೀದಿಸಲು ಇದುವರೆಗೆ ಯಶಸ್ವಿ ಆಗಲಿಲ್ಲ. ಲ್ಯಾಟಿನ್ ಅಮೆರಿಕದ ವಿಶ್ವವಿಖ್ಯಾತ ಗಾರ್ಸಿಯಾ ಮಾರ್ಕ್ವೆಜ್ ರಂತಹ ಸಾಂಸ್ಕೃತಿಕ ಪ್ರತಿನಿಧಿಗಳನ್ನು ಅಮೆರಿಕ ಎಷ್ಟು ಡಾಲರ್ ಆಮಿಷ ಒಡ್ಡಿದರೂ ಅಲ್ಲಿಗೆ ವಲಸೆ ಬರುವಂತೆ ಮಾಡಲು ಸಾಧ್ಯವಾಗಲಿಲ್ಲ ಎಂದು ಕ್ಯಾಸ್ಟ್ರೊ ಅಭಿಮಾನದಿಂದ ತಿಳಿಸುತ್ತಾರೆ. ಕ್ಯೂಬನ್ನರು ಉನ್ನತ ಸಾಂಸ್ಕೃತಿಕ ಪರಂಪರೆ ಹೊಂದಿದ್ದು ಅಮೆರಿಕದ ಹೊಸ ಸಂಚಿಗೆ ಬಲಿಯಾಗಲಾರರು ಎಂದು ಅವರು ದೃಢವಿಶ್ವಾಸ ಹೊಂದಿದ್ದಾರೆ.

ಸಾಮ್ರಾಜ್ಯಶಾಹಿ ಅಮೆರಿಕಾ ಜಗತ್ತಿನ ೬೦ ವರ್ಷ ಸಮೂಹ ಮಾಧ್ಯಮಗಳನ್ನು ಮತ್ತು ಸಂಪರ್ಕ ಸಾಧನಗಳನ್ನು ತನ್ನ ಹತೋಟಿಯಲ್ಲಿಟ್ಟುಕೊಂಡಿದೆ. ಲ್ಯಾಟಿನ್ ಅಮೆರಿಕದಲ್ಲಿ ಶೇ.೯೦ರಷ್ಟು ಟಿ.ವಿ.ಸರಣಿಗಳು, ಚಲನಚಿತ್ರಗಳು, ಅಮೆರಿಕಾದ ಧನಗಾಹಿ ಬಹುರಾಷ್ಟ್ರೀಯ ಸಂಸ್ಥೆಗಳ ಹಿಡಿತದಲ್ಲಿವೆ. ಅವುಗಳು ಕೇವಲ ತಮ್ಮ ಲಾಭಗಳಿಕೆಗಾಗಿ ಗ್ರಾಹಕ ಸಂಸ್ಕೃತಿಯನ್ನು ಮತ್ತು ಹಿಂಸೆ, ಕ್ರೌರ್ಯ, ಲೈಂಗಿಕತೆಗಳಿಂದ ಮಾಫಿಯಾ ಸಂಸ್ಕೃತಿಯನ್ನು ಬೆಳೆಸುತ್ತಿವೆ. ಈ ಸಂಸ್ಥೆಗಳು ಒಂದೊಂದು ಚಲನಚಿತ್ರಕ್ಕೆ, ಟಿ.ವಿ.ಸರಣಿಗೆ ಬಿಲಿಯಗಟ್ಟಲೆ ಡಾಲರ್ ವಿನಿಯೋಗಿಸುತ್ತಿದೆ. ತಮ್ಮ ಬಂಡವಾಳ ಹೂಡಿಕೆಯ ಹಲವು ಪಟ್ಟು ಲಾಭ ಗಳಿಸಲು ಎಂತಹ ಅಮಾನುಷ ಕೃತ್ಯಕ್ಕೂ, ವ್ಯವಹಾರಕ್ಕೂ ಇವುಗಳು ಹೇಸುವುದಿಲ್ಲ. ಸಾಮ್ರಾಜ್ಯಶಾಹಿ ಜಗತ್ತಿನ ಸಾಂಸ್ಕೃತಿಕ ವೈವಿಧ್ಯತೆಯನ್ನು ಹಾಳುಗೆಡವುತ್ತಿದೆ. ಕಳೆದ ೧೦ ವರ್ಷಗಳಲ್ಲಿ ಹಿಂದಿನ ೧೦೦ ವರ್ಷಗಳಿಗಿಂತ ಹೆಚ್ಚಿನ ಶಕ್ತಿ ಪ್ರಯೋಗದಿಂದ ತನ್ನ ಸಂಸ್ಕೃತಿಯನ್ನು ಜಗತ್ತಿನ ಮೇಲೆ ಹೇರುತ್ತಿದೆ. ಆದರೆ, ಕ್ಯೂಬಾದ ಜನರು ತನ್ನ ಸಂಸ್ಕೃತಿಯ ಉಳಿವಿಗಾಗಿ ಮತ್ತು ಅಭಿವೃದ್ದಿಗಾಗಿ ಕಳೆದ ೪೦ ವರ್ಷಗಳಿಂದ ಯಶಸ್ವಿಯಾಗಿ ಹೋರಾಡುತ್ತಾ ಬಂದಿರುತ್ತಾರೆ. ಕಾರಣ, ಸಂಸ್ಕೃತಿ ಜನರ ಜೀವನದ ಉಸಿರಾಗಿದೆ. ಜಗತ್ತಿನ ವಿವಿಧೆಡೆಗಳಲ್ಲಿರುವ ಸಾಂಸ್ಕೃತಿಕ ವೈವಿಧ್ಯತೆ, ಸಾಮ್ರಾಜ್ಯಶಾಹಿಯ ಮುನ್ನಡೆಗೆ ಅಡ್ಡಿಯಾಗಿವೆ ಮತ್ತು ಅವುಗಳನ್ನು ಕಿತ್ತೊಗೆಯಲು ಪ್ರಯತ್ನಿಸಲಾಗುತ್ತಿದೆ. ಆದರೆ, ಕ್ಯೂಬಾದ ಜನರು ತಮ್ಮ ಉನ್ನತ ಮಟ್ಟದ ರಾಜಕೀಯ ಪ್ರಜ್ಞೆಯಿಂದ ತಮ್ಮ ಸಾಂಸ್ಕೃತಿಕ ವೈಶಿಷ್ಟ್ಯವನ್ನು ರಕ್ಷಿಸಲು ಹೋರಾಟ ಮುಂದುವರೆಸಿದ್ದಾರೆ. ಜಗತ್ತಿನ ಇತರ ದೇಶಗಳ ಜನರ ಸಾಂಸ್ಕೃತಿಕ ಪರಂಪರೆಗಳನ್ನು ಉಳಿಸಿ ಬೆಳೆಸಲು ಸದಾ ನೆರವು ನೀಡುತ್ತಿದ್ದಾರೆ.

ಕ್ರಾಂತಿಯ ಅಂತಾರಾಷ್ಟ್ರೀಯತೆ

ಕ್ಯೂಬಾ ಕ್ರಾಂತಿ ಸಂಕುಚಿತ ಹಾಗೂ ಅತಿ ವೈಭವೀಕೃತ ರಾಷ್ಟ್ರೀಯತೆಯದ್ದಾಗಿಲ್ಲ. ಅದು ಸಮಸ್ತ ಮಾನವತೆಯ ಅಭ್ಯುದಯದ ಆಧಾರದಲ್ಲಿ ಅಂತಾರಾಷ್ಟ್ರೀಯ ದೃಷ್ಟಿಕೋನವನ್ನು ಹೊಂದಿದೆ. ಕ್ರಾಂತಿಪೂರ್ವ ಕ್ಯೂಬನ್ನರು ಬಹುಪಾಲು ಅನಕ್ಷರಸ್ಥರಾಗಿದ್ದರು. ಕ್ರಾಂತಿಕಾರಿಗಳು ಅವರನ್ನು ಸಾಕ್ಷರಸ್ಥರನ್ನಾಗಿ ಮಾಡಿ ಅವರಲ್ಲಿ ಅರಿವು ಮೂಡಿಸಿದರು. ಅವರ ಮಕ್ಕಳು, ಮರಿ ಮಕ್ಕಳು ಇಂದು ೫೦೦,೦೦೦ ಜನರು ಸ್ವಯಂ ಸೇವಕರಾಗಿ, ವೈದ್ಯರಾಗಿ, ಇಂಜನೀಯರುಗಳಾಗಿ, ಶಿಕ್ಷಕರಾಗಿ, ವಿಜ್ಞಾನಿಗಳಾಗಿ, ಜಗತ್ತಿನ ಯಾವ ಮೂಲೆಗಾದರೂ ತಮ್ಮ ಸೇವೆ ಸಲ್ಲಿಸಲಿಕ್ಕೆ ಸದಾ ಸಿದ್ಧತೆಯಲ್ಲಿರುತ್ತಾರೆ. ಲ್ಯಾಟಿನ್ ಅಮೆರಿಕಾ, ಆಫ್ರಿಕಾ ಮತ್ತು ಇತರ ದೇಶಗಳ ರಾಷ್ಟ್ರೀಯ ವಿಮೋಚನಾ ಹೋರಾಟಗಳಿಗೆ ಕ್ಯೂಬಾ ತನ್ನ ಬೆಂಬಲ ನೀಡುತ್ತಾ ಬಂದಿದೆ. ಆ ದೇಶಗಳಿಂದ ಬೇಡಿಕೆ ಬಂದಾಗಲೆಲ್ಲಾ ತನ್ನ ತಜ್ಞರ ತಂಡಗಳನ್ನು ಕಳುಹಿಸುತ್ತಿದೆ. ನೆರೆ, ಬರಗಾಲ, ಭೂಕಂಪ, ಸಾಂಸ್ಕೃತಿಕ ರೋಗ ಮುಂತಾದ ಅನಾಹುತಗಳು ಸಂಭವಿಸಿದಾಗ ಸಂತ್ರಸ್ತ ಜನರನ್ನು ರಕ್ಷಿಸಲು ಮತ್ತು ಅವರಿಗೆ ಅಗತ್ಯದ ಪರಿಹಾರ ಒದಗಿಸಲು ಈ ತಜ್ಞರ ತಂಡಗಳು ಜಗತ್ತಿನ ಯಾವ ಪ್ರದೇಶಗಳಿಗೂ ಧಾವಿಸುತ್ತವೆ. ಈ ತಂಡಗಳು ಹಣದ ಆಸೆಗೆ ಅಲ್ಲಿಗೆ ಹೋಗುತ್ತಿಲ್ಲ. ಬದಲು ಜೀವದಾಸೆ ಬಿಟ್ಟು ಸಂಕಷ್ಟಗಳಿಗೆ ಈಡಾದ ಜನರ ಜೀವ ಉಳಿಸಲು ಅತ್ಯುನ್ನತ ಮಟ್ಟದ ಮಾನವೀಯತೆಯ ದೃಷ್ಟಿಯಿಂದ, ಸೇವಾಭಾವನೆಯಿಂದ ಅಲ್ಲಿಗೆ ಹೋಗಿ ತಮ್ಮ ಕರ್ತವ್ಯಗಳನ್ನು ಸಮರ್ಥವಾಗಿ ನಿರ್ವಹಿಸಿ ಆಯಾ ಜನರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ. ಚೀನಾದ ಕ್ರಾಂತಿಯ ಹೋರಾಟದ ಕಾಲದಲ್ಲಿ (೧೯೪೫-೪೯) ಭಾರತದಿಂದ ಡಾ. ಕೋಟ್ನಿಸ್ ತಮ್ಮ ವೈದ್ಯಕೀಯ ತಂಡ ದೊಂದಿಗೆ ಚೀನಾಕ್ಕೆ ಹೋಗಿ ಹುತಾತ್ಮರಾದ ದಿವ್ಯ ಪರಂಪರೆಯನ್ನು ಇಲ್ಲಿ ನೆನೆಸಿಕೊಳ್ಳಬಹುದು. ಕ್ಯೂಬಾ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಮಟ್ಟದ ಮಾನವ ಸಂಪನ್ಮೂಲ ಹೊಂದಿದೆ.

ಕ್ಯೂಬಾಕ್ಕೆ ಹೋಲಿಸಿದರೆ, ಅಮೆರಿಕಾ ಐ.ಎಂ.ಎಫ್, ಜಾಗತಿಕ ಬ್ಯಾಂಕ್, ವಿಶ್ವವ್ಯಾಪಾರ ಸಂಸ್ಥೆಗಳ ಆರ್ಥಿಕ ನೀತಿಯ ಮೂಲಕ ಮತ್ತು ‘‘ನ್ಯಾಟೊ’’ ಮಿಲಿಟರಿ ಶಕ್ತಿಯ ಪ್ರದರ್ಶನ ಹಾಗೂ ಪ್ರಯೋಗಗಳ ಮೂಲಕ ತನ್ನ ಅಪಾರ ಹಣಕಾಸು ಬಂಡವಾಳವನ್ನು ಜಗತ್ತಿನ ಉದ್ದಗಲಕ್ಕೂ ಅತಿ ಲಾಭ ಗಳಿಕೆಗಾಗಿ ಸಾಗಿಸುತ್ತಿದೆ. ಪರಿಣಾಮವಾಗಿ ಇದಕ್ಕೆ ಅಡ್ಡಿ ಆತಂಕಗಳನ್ನು ಕಡಿದೊಗೆಯಲು ಎಲ್ಲಾ ದೇಶಗಳ ಸಾರ್ವಭೌಮತೆಯನ್ನು ಮತ್ತು ಸಂಸ್ಕೃತಿಗಳನ್ನು ಹಾಳುಗೆಡವುತ್ತಿದೆ. ಇಡೀ ಜಗತ್ತಿನ ಮಾನವ ಕುಲವನ್ನೇ ತನ್ನ ಕಾಲತುಳಿತಕ್ಕೆ ಒಳಪಡಿಸುತ್ತಿದೆ. ಮತ್ತೆ ನವ ವಸಾಹತುಶಾಹಿ ಪ್ರಭುತ್ವವನ್ನು ಮೆರೆಯಿಸುತ್ತಿದೆ. ಅಮೆರಿಕಾ ಹಣಕಾಸು ಬಂಡವಾಳ, ಬಹುರಾಷ್ಟ್ರೀಯ ಸಂಸ್ಥೆಗಳು ನುಗ್ಗಿ ಬರುತ್ತಿರುವ ದೇಶಗಳಲ್ಲಿ ಜನಸಮುದಾಯವನ್ನು ಹಸಿವು, ಬಡತನ, ನಿರುದ್ಯೋಗ, ಶೋಷಣೆ ಮುಂತಾದ ಅನಾಹುತಗಳಿಗೆ ಗುರಿಯಾಗುತ್ತಿವೆ. ದೋಷಯುಕ್ತ ಬೀಜ, ಗೊಬ್ಬರ, ಕ್ರಿಮಿನಾಶಕ, ಔಷಧಿ, ಮಾಡಲಾಗುತ್ತಿದೆ. ಲಕ್ಷಾಂತರ ಜನರನ್ನು ಸಾವು-ನೋವುಗಳಲ್ಲಿ ಕೆಡವಲಾಗುತ್ತಿದೆ. ಅಣು ಅಸ್ತ್ರಗಳೂ ಸೇರಿದಂತೆ ಅಪಾರ ಮಾರಕಾಸ್ತ್ರಗಳನ್ನು ಉಪಯೋಗಿಸಿ ಅಥವಾ ಉಪಯೋಗಿಸುವ ಬೆದರಿಕೆ ಒಡ್ಡಿ ಬಡ ದೇಶಗಳನ್ನು ಸದಾ ಭಯದ ಹಾಗೂ ಅಭದ್ರತೆಯ ಮಡುವಿನಲ್ಲಿಡಲಾಗಿದೆ.

೩೦೦ ವರ್ಷಗಳ ಜಾಗತಿಕ ಬಂಡವಾಳಶಾಹಿ ಸಾಮ್ರಾಜ್ಯಶಾಹಿ ಸಮಾಜದ ಕೊಡುಗೆ ಯನ್ನು ಕ್ಯಾಸ್ಟ್ರೊ ನೆನಪಿಸಿಕೊಡುತ್ತಾರೆ. ಈಗ ಜಗತ್ತಿನಲ್ಲಿ ಶ್ರೀಮಂತ-ಬಡ ರಾಷ್ಟ್ರಗಳ ಮಧ್ಯೆ ಮತ್ತು ಪ್ರತಿಯೊಂದು ಬಂಡವಾಳಶಾಹಿ ರಾಷ್ಟ್ರದಲ್ಲಿ ಶ್ರೀಮಂತ ಬಡವರ ಮಧ್ಯೆ ಅಂತರಗಳು ಹೆಚ್ಚಾಗಿವೆ. ಶ್ರೀಮಂತ ರಾಷ್ಟ್ರಗಳ ನಡುವೆ ಜಾಗತಿಕ ಮಾರುಕಟ್ಟೆಗಾಗಿ ನಡೆಯುತ್ತಿರುವ ಪೈಪೋಟಿಗಳಿಂದಾಗಿ ಎರಡು ಜಾಗತಿಕ ಯುದ್ಧಗಳು ಮತ್ತು ಹಲವಾರು ಪ್ರಾದೇಶಿಕ ಯುದ್ಧಗಳು ಸಂಭವಿಸಿವೆ. ಯುದ್ಧದ ಕಾರ್ಮೋಡಗಳು ಇನ್ನೂ ಕಾಣುತ್ತಿವೆ. ೪೦೦೦ ಮಿಲಿಯ(೪೦೦ ಕೋಟಿ) ಜನರು ಜಗತ್ತಿನಲ್ಲಿ ಬಡವರಾಗಿದ್ದಾರೆ. ಅವರು ಶಿಕ್ಷಣ, ವಸತಿ, ಆರೋಗ್ಯ, ಆಹಾರ ಮುಂತಾದ ಜೀವನದ ಮೂಲಾಧಾರಗಳಿಂದ ವಂಚಿತರಾಗಿದ್ದಾರೆ. ಪ್ರತಿವರ್ಷ ೧೧ ಮಿಲಿಯ (೧ ಕೋಟಿ ೧ ಲಕ್ಷ) ಮಕ್ಕಳು ಪೌಷ್ಟಿಕ ಆಹಾರ ಇಲ್ಲದೇ, ಹಸಿವು ಹಾಗೂ ಅನಾರೋಗ್ಯದಿಂದ ಸಾಯುತ್ತಿವೆ. ಭೂಮಿಯ ಒಳಗೆ, ಮೇಲೆ ಮತ್ತು ಅಂತರಿಕ್ಷದಲ್ಲಿ ಪರಿಸರ ಎಡೆಬಿಡದೆ ನಾಶ ಆಗುತ್ತಿದೆ. ಕೆರೆ, ಬಾವಿ, ನದಿ, ಸಮುದ್ರ, ಸಾಗರಗಳ ನೀರು ಕಲುಷಿತವಾಗುತ್ತಿದೆ. ಈಗಿರುವ ಅಣು ಅಸ್ತ್ರಗಳು ಜಗತ್ತನ್ನು ಹಲವು ಬಾರಿ ಸುಟ್ಟು ಬೂದಿ ಮಾಡಬಲ್ಲವು. ಸಮಾಜವಾದ ಇಂತಹ ಕ್ರೂರ ಬಂಡವಾಳಶಾಹಿ-ಸಾಮ್ರಾಜ್ಯಶಾಹಿ ವ್ಯವಸ್ಥೆಗೆ ಒಂದು ಸಮರ್ಥ ಪರ್ಯಾಯವಾಗಿದೆ ಎಂದು ಕ್ಯಾಸ್ಟ್ರೊ ತಮ್ಮ ಹಾಗೂ ಜಾಗತಿಕ ಅನುಭವಗಳಿಂದ ಸಮರ್ಥಿಸುತ್ತಾರೆ. ಸಾಮ್ರಾಜ್ಯಶಾಹಿಯೊಂದಿಗೆ ಯಾವತ್ತೂ ರಾಷ್ಟ್ರೀಯ ಸಾರ್ವಭೌಮತೆಯ ಕುರಿತು ಚೌಕಾಶಿ ಇಲ್ಲ, ರಾಜಿ ಇಲ್ಲ ಮತ್ತು ಅದನ್ನು ಕ್ಯೂಬನ್ನರು ತಮ್ಮ ಪ್ರಾಣದ ಕೊನೆಯ ಉಸಿರು ಇರುವವರೆಗೂ ರಕ್ಷಿಸುತ್ತಾರೆ ಎಂದು ಕ್ಯಾಸ್ಟ್ರೊ ತಮ್ಮ ದೃಢ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಸಮಕಾಲೀನ ಪರಿಸ್ಥಿತಿಯಲ್ಲಿ ಜಗತ್ತಿನಲ್ಲಿ ಏನೇ ಆಗಲಿ, ಕ್ಯೂಬಾದ ರಾಜಧಾನಿ ಹವಾನಾ ಏನು ಹೇಳುತ್ತಿದೆ ಎಂದು ತಿಳಿಯಲು ಎಲ್ಲರ ದೃಷ್ಟಿ ಅತ್ತ ಹರಿಯುವಂತಾಗಿದೆ. ಅಮೆರಿಕ ಅಂತರ್‌ರಾಷ್ಟ್ರೀಯ ಕಾನೂನುಗಳನ್ನು, ಸಂಪ್ರದಾಯಗಳನ್ನು ಮತ್ತು ವಿಶ್ವಸಂಸ್ಥೆಯ ಪ್ರಣಾಳಿಕೆಯನ್ನು ಉಲ್ಲಂಘಿಸುತ್ತಿದೆ. ಜಗತ್ತಿನ ಯಾವುದೇ ದೇಶದಲ್ಲಿ ‘‘ಮಾನವೀಯ ಹಿತದೃಷ್ಟಿಯಿಂದ,’’ ‘‘ಭಯೋತ್ಪಾದನೆ, ಮಾದಕ ಪದಾರ್ಥಗಳ ಸಾಗಾಣಿಕೆ ಮುಂತಾದ ಜಾಗತಿಕ ಬೆದರಿಕೆ’’ ಮತ್ತು ‘‘ಬಾಹ್ಯ ಸಂಘರ್ಷಣೆ’’ಗಳ ತ್ರಿಸೂತ್ರಗಳ ನೆಪದಲ್ಲಿ ಅಮೆರಿಕ ಮಧ್ಯೆ ಪ್ರವೇಶಿಸಲು ಹಕ್ಕು ಸ್ಥಾಪಿಸಿ ಕಾನೂನು ರಚಿಸಿಕೊಂಡಿದೆ. ಇವುಗಳನ್ನೆಲ್ಲಾ ಕ್ಯೂಬಾ ಪ್ರಬಲವಾಗಿ ರಾಜಿ ಇಲ್ಲದೆ ವಿರೋಧಿಸುತ್ತಿದೆ. ರಷ್ಯಾ, ಯುಗೊಸ್ಲೋವಿಯಾ, ಆಫ್ರಿಕಾ, ಲ್ಯಾಟಿನ್ ಅಮೆರಿಕಾ, ಏಷ್ಯಾ, ಅರಬ್ ಹಾಗೂ ಕೊಲ್ಲಿ ಪ್ರದೇಶಗಳ ದೇಶಗಳಲ್ಲಿ ಅಮೆರಿಕದ ಇದುವರೆಗಿನ ಹಸ್ತಕ್ಷೇಪಗಳ ಕಹಿ ಅನುಭವಗಳ ಆಧಾರಗಳಲ್ಲಿ, ಅಮೆರಿಕಕ್ಕೆ ಯಾವುದೇ ಕಾರಣದಿಂದ ಇತರ ದೇಶಗಳ ವ್ಯವಹಾರಗಳಲ್ಲಿ ಮಧ್ಯ ಪ್ರವೇಶಿಸಲು ಮತ್ತು ಅವುಗಳ ಸಾರ್ವಭೌಮತೆಯನ್ನು ಕೆಡವಲು ಅಧಿಕಾರ ಇರುವುದಿಲ್ಲ ಎಂದು ಕ್ಯೂಬಾ ಸ್ಪಷ್ಟಪಡಿಸುತ್ತಿದೆ. ಅಮೆರಿಕ ಮತ್ತು ಅಭಿವೃದ್ದಿ ಹೊಂದಿದ ಇತರ ದೇಶಗಳು ಒಗ್ಗೂಡುತ್ತಿ ರುವ ಕಾಲಘಟ್ಟದಲ್ಲಿ ಲ್ಯಾಟಿನ್ ಅಮೆರಿಕಾ, ಆಫ್ರಿಕಾ ಮತ್ತು ಏಷ್ಯಾ ತ್ರಿಖಂಡಗಳ ದೇಶಗಳು ಪ್ರಾದೇಶಿಕವಾರು ಒಗ್ಗೂಡಿಕೊಂಡು ಅಮೆರಿಕ ತಂದೊಡುತ್ತಿರುವ ಮಿಲಿಟರಿ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಕ್ಯೂಬಾ ಕರೆ ಕೊಡುತ್ತಿದೆ.

ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಅಲಿಪ್ತ ನೀತಿಯ ಅಂದೋಲನದ ಪ್ರಮುಖ ಸದಸ್ಯರಾಷ್ಟ್ರವಾದ ಮತ್ತು ೧೯೮೦ರ ದಶಕದ ಪ್ರಾರಂಭದಲ್ಲಿ ಇದರ ಅಧ್ಯಕ್ಷ ಸ್ಥಾನದಲ್ಲಿದ್ದ ಕ್ಯೂಬಾ ಈ ಅಂದೋಲನವನ್ನು ಇನ್ನಷ್ಟು ಬಲಪಡಿಸಲು ಕರೆ ಕೊಡುತ್ತಿದೆ. ದಕ್ಷಿಣಾಧರ್ಗೋಲದಲ್ಲಿರುವ ತ್ರಿಖಂಡಗಳ ಬಡ ರಾಷ್ಟ್ರಗಳು ಎಲ್ಲಾ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಸೌಹಾರ್ದತೆಗಳನ್ನು ಬಳಸಿಕೊಳ್ಳಲು ಕ್ಯೂಬಾ ಒತ್ತಾಯಿಸುತ್ತಿದೆ. ವಿಶ್ವಸಂಸ್ಥೆಯಲ್ಲಿ ಬಹುಪಾಲು ಬಡದೇಶಗಳ ಅಭಿವೃದ್ದಿ ಹೊಂದುತ್ತಿರುವ ದೇಶಗಳ ಪ್ರಾತಿನಿಧ್ಯವೇ ಹೆಚ್ಚಾಗಿರುವುದರಿಂದ, ಕಳೆದ ೫೫ ವರ್ಷಗಳ ಅನುಭವಗಳ ಆಧಾರದಲ್ಲಿ, ಅದನ್ನು ಇನ್ನಷ್ಟು ಪ್ರಜಾಪ್ರಭುತ್ವಗೊಳಿಸಬೇಕೆಂದೂ, ಅದರ ಭದ್ರತಾ ಮಂಡಳಿಯಲ್ಲಿ ತ್ರಿಖಂಡಗಳ ಕೆಲವು ಆಯ್ದ ದೇಶಗಳಿಗಾದರೂ ಖಾಯಂ ಸದಸ್ಯತ್ವದ ಸ್ಥಾನ ಸಿಗಬೇಕೆಂದೂ, ‘‘ವಿಟೋ ಪವರ್’’ ತೆಗೆದು ಹಾಕಬೇಕೆಂದೂ ಅಥವಾ ಅದನ್ನು ಮುಂದುವರಿ ಸುವುದೇ ಆದರೆ ಬಲಿಷ್ಠ ರಾಷ್ಟ್ರಗಳಿಗೆ ಮಾತ್ರ ಸೀಮಿತಗೊಳಿಸದೇ ಭದ್ರತಾ ಮಂಡಳಿಯ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಆ ಹಕ್ಕು ಇರಬೇಕೆಂದೂ, ವಿಶ್ವದ ಎಲ್ಲಾ ರಾಷ್ಟ್ರಗಳನ್ನು ಪ್ರತಿನಿಧಿಸುತ್ತಿರುವ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಗೆ ಇನ್ನಷ್ಟು ಹಕ್ಕು ನೀಡಬೇಕೆಂದೂ ಕ್ಯೂಬಾ ಪ್ರತಿಪಾದಿಸುತ್ತದೆ.

ಕ್ಯೂಬಾ ಹಣಕಾಸು ಬಂಡವಾಳದ ಜಾಗತೀಕರಣದ ಅಪಾಯಗಳನ್ನು, ಅನಾಹುತಗಳನ್ನು ಎದುರಿಸಲು ಕಾರ್ಮಿಕರ ವಿದ್ಯಾರ್ಥಿಗಳ ಯುವಜನರ, ಮಹಿಳೆಯರ, ಶಿಕ್ಷಕರ ವೈದ್ಯರ ಅಂತರ್ ರಾಷ್ಟ್ರೀಯ ಸಮಾವೇಶಗಳನ್ನು ಸಂಘಟಿಸುತ್ತಿದೆ. ಅಲಿಪ್ತ ಆಂದೋಲನದ ರಾಷ್ಟ್ರಗಳ, ಅಭಿವೃದ್ದಿ ಹೊಂದುತ್ತಿರುವ ಜಿ-೭೭ ದೇಶಗಳ ಮತ್ತು ವಿಶ್ವಸಂಸ್ಥೆಯ ಹಾಗೂ ಅದರ ವಿವಿಧ ಅಂಗಸಂಸ್ಥೆಗಳ ವೇದಿಕೆಗಳಲ್ಲಿ ಗಣನೀಯ ಪಾತ್ರ ವಹಿಸುತ್ತಿದೆ. ‘‘ಆರ್ಗನೈಸೇಶನ್ ಆಫ್ ಅಮೆರಿಕನ್ ಸ್ಟೇಟ್ಸ್’’ ವೇದಿಕೆಯಲ್ಲಿ ಕ್ಯೂಬಾ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಹತ್ತು ವರ್ಷಗಳಿಂದ ಅಮೆರಿಕಾ ಹೇರಿದ ಕಠಿಣ ಆರ್ಥಿಕ ದಿಗ್ಬಂಧನ ಗಳನ್ನು ಕಳೆದ ಒಂದೆರಡು ವರ್ಷಗಳಲ್ಲಿ ಆಹಾರ ಸಾಮಗ್ರಿಗಳ ಹಾಗೂ ಔಷಧಿಗಳಿಗೆ ಸಂಬಂಧಿಸಿ ಸಡಿಲಗೊಳಿಸಲಾಗಿದೆ. ಅಮೆರಿಕಾದ ಎಷ್ಟೇ ವಿರೋಧ ಇದ್ದರೂ ಕ್ಯೂಬಾಕ್ಕೆ ರೋಮನ್ ಕೆಥೊಲಿಕ್‌ರ ಜಗದ್ಗುರು ಪೋಪ್ ಇತ್ತೀಚೆಗೆ ಭೇಟಿ ನೀಡಿ ಅಲ್ಲಿಯ ಅಭಿವೃದ್ದಿಯನ್ನು ಕಂಡು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಮತ್ತು ಅದರ ಮೇಲಿನ ಆರ್ಥಿಕ ದಿಗ್ಬಂಧನಗಳನ್ನು ತೆಗೆಯಲು ಕರೆ ನೀಡಿದ್ದಾರೆ. ಬಾಲಕ ಈಲಿಯನ್ ಸುರಕ್ಷಿತವಾಗಿ ಅಮೆರಿಕಾದಿಂದ ಕ್ಯೂಬಾದಲ್ಲಿರುವ ಅವನ ತಂದೆಯನ್ನು ಸೇರುವಂತೆ ಮಾಡಲು ಕ್ಯೂಬಾದ ರಾಜತಾಂತ್ರಿಕತೆ ಇತ್ತೀಚೆಗೆ ಯಶಸ್ವಿಯಾಗಿದೆ.

ಕ್ಯೂಬಾದಲ್ಲಿ ೪೦ ವರ್ಷಗಳ ಸಮಾಜವಾದಿ ಶ್ರೀಮಂತ ಅನುಭವಗಳು ಲ್ಯಾಟಿನ್ ಅಮೆರಿಕದ ದೇಶಗಳ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿವೆ. ಕೆಲವು ವರ್ಷಗಳಿಂದ ಈ ಪ್ರದೇಶದ ಹಲವು ದೇಶಗಳು ಅಮೆರಿಕದ ಒತ್ತಡದಿಂದ ಕ್ಯೂಬಾದಿಂದ ದೂರ ಸರಿದಿದ್ದರೂ, ಈಗ ಪುನಃ ಅವುಗಳು ಕ್ಯೂಬಾದೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿವೆ. ಈ ಭೂಪ್ರದೇಶದ ಹೆಚ್ಚಿನ ದೇಶಗಳಲ್ಲಿ ಸಾಮ್ರಾಜ್ಯಶಾಹಿ ವಿರೋಧಿ ಹಾಗೂ ಆಂತರಿಕವಾಗಿ ಬಂಡವಾಳಶಾಹಿ ಭೂಮಾಲೀಕ ಪ್ರಭುತ್ವದ ವಿರುದ್ಧ ರೈತ ಕಾರ್ಮಿಕರ ಪ್ರಗತಿಪರ ಹೋರಾಟಗಳೂ ಹರಿತಗೊಳ್ಳುತ್ತಿವೆ. ಚಿಲಿ ದೇಶದಲ್ಲಿ ೨೫ ವರ್ಷಗಳ ಹಿಂದೆ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷ ಪದವಿಗೇರಿ, ಅನತಿಕಾಲದಲ್ಲಿಯೇ ಅಮೆರಿಕಾದ ಸಿ.ಐ.ಎ.ನ ಪಿತೂರಿಯಿಂದ ಕೊಲೆಗೊಳಗಾದ ಮಾರ್ಕ್ಸ್‌ವಾದಿ ಅಲೆಂಡ್ ಅವರ ಸೋಶಲಿಸ್ಟ್ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಿದೆ. ಅಲ್ಲಿನ ಫ್ಯಾಸಿಸ್ಟ್ ಆಳ್ವಿಕೆಯ ಸರ್ವಾಧಿಕಾರಿ ಪಿನೋಟೆಚ್ ಪದತ್ಯಾಗಗೊಂಡು ಮಾನವ ಹಕ್ಕುಗಳ ಉಲ್ಲಂಘನೆಗಾಗಿ ವಿಚಾರಣೆಗೆ ಗುರಿಯಾಗಿದ್ದಾನೆ. ವೆನೆಜ್ಯೂವೆಲಾದಲ್ಲಿ ೧೯೯೮ರಲ್ಲಿ ಕಾಸ್ಟ್ರೊ ಅವರ ಆಪ್ತ ಗೆಳೆಯ ಹ್ಯುಗೋಚವೆಝ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಲ್ಲಿ ಹೊಸ ಸಂವಿಧಾನವನ್ನು ಅಂಗೀಕರಿಸಿ ಜನರಿಗೆ ಉದ್ಯೋಗ, ಆರೋಗ್ಯ, ಶಿಕ್ಷಣ, ವಸತಿ ಸೌಕರ್ಯ ಗಳನ್ನು ಒದಗಿಸುವ ಆಶ್ವಾಸನೆ ನೀಡಲಾಗಿದೆ. ಆ ದೇಶದ ಹೆಸರನ್ನು ‘ಬೊಲಿವಿಯರಿನ್ ರಿಪಬ್ಲಿಕ್ ಆಫ್ ವೆನೆಜ್ಯೂವೆಲಾ’’ ಎಂದು ಬದಲಾಯಿಸಿ, ದಕ್ಷಿಣ ಅಮೆರಿಕದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಸೈಮನ್ ಬೊಲಿವಿಯಾರ್ ಅವರ ಸ್ಫೂರ್ತಿಯನ್ನು ಚಿರಸ್ಥಾಯಿಗೊಳಿಸಲಾಗಿದೆ.

ಬೊಲಿವಿಯಾ ದೇಶದ ಮೂರನೇ ಒಂದರಷ್ಟು ಭಾಗ ಗೊರಿಲ್ಲಾ ಯುದ್ಧಪಡೆಗಳ ವಶದಲ್ಲಿದೆ. ಇತರ ಕಡೆಗಳಲ್ಲಿ ರೈತ-ಕಾರ್ಮಿಕರ ಹೋರಾಟಗಳೂ ಹೆಚ್ಚುತ್ತಿವೆ. ನಗರಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸಿ ಪ್ರತಿಯೊಂದು ಕುಟುಂಬಕ್ಕೂ ನೀರಿನ ದರ ವಿಪರೀತವಾಗಿ ಏರಿಸಿದ ಬಹುರಾಷ್ಟ್ರೀಯ ಸಂಸ್ಥೆಗಳ ವಿರುದ್ಧ ಈ ದೇಶದ ಇತಿಹಾಸದಲ್ಲಿಯೇ ಕಾಣದಷ್ಟು ದೊಡ್ಡ ಪ್ರಮಾಣದಲ್ಲಿ ರಸ್ತೆ ತಡೆ ಹೋರಾಟಗಳನ್ನು ನಡೆಸುತ್ತಿದ್ದಾರೆ. ಮೆಕ್ಸಿಕೋದಲ್ಲಿ ರಾಜಧಾನಿ ನಗರದ ಚುನಾವಣೆಯಲ್ಲಿ ಎಡಪಂಥೀಯ ಅಭ್ಯರ್ಥಿ ಒಬ್ಬ ಮಹಾಪೌರರಾಗಿ ಆಯ್ಕೆಯಾಗಿದ್ದಾರೆ. ಆ ದೇಶದ ಆಂತರಿಕ ವಿಷಯಗಳಲ್ಲಿ ಅಮೆರಿಕ ಹಸ್ತಕ್ಷೇಪ ಮಾಡದಂತೆ ‘‘ಆರ್ಗನೈಸೇಶನ್ ಆಫ್ ಅಮೆರಿಕನ್ ಸ್ಟೇಟ್ಸ್’’ ಎಚ್ಚರಿಕೆ ನೀಡಿದೆ. ಬ್ರೆಜಿಲ್‌ನಲ್ಲಿ ಭೂರಹಿತ ಕೃಷಿಕೂಲಿಕಾರರು ವಿದೇಶಿಯರ ದೊಡ್ಡ ದೊಡ್ಡ ಎಸ್ಟೇಟ್‌ಗಳನ್ನು ಸರಕಾರ ವಶಪಡಿಸಿಕೊಂಡು ಅವುಗಳನ್ನು ತಮಗೆ ಮರುವಿತರಣೆ ಮಾಡಬೇಕೆಂದೂ ಮತ್ತು ಕನಿಷ್ಠ ಕೂಲಿ, ವರ್ಷವಿಡೀ ಉದ್ಯೋಗ, ಶಿಕ್ಷಣ, ವಸತಿ ಸೌಕರ್ಯಗಳನ್ನು ಒದಗಿಸಬೇಕೆಂದೂ ವೀರಾವೇಶದಿಂದ ಹೋರಾಡುತ್ತಿದ್ದಾರೆ. ಈ ವರ್ಷದ ಅಪೂರ್ವ ಮೇ ದಿನಾಚರಣೆಯಿಂದ ದೇಶದ ಬಂಡವಾಳಶಾಹಿಗಳು ಮತ್ತು ಸಾಮ್ರಾಜ್ಯಶಾಹಿಗಳು ದಿಗಿಲುಗೊಂಡಿದ್ದಾರೆ. ಈ ಮಧ್ಯೆ ಅಮೆರಿಕಾ ಸಂಯುಕ್ತ ಸಂಸ್ಥಾನಗಳಿಗೆ ಸವಾಲಾಗಿ ಲ್ಯಾಟಿನ್ ಅಮೆರಿಕ ಸಂಯುಕ್ತ ಸಂಸ್ಥಾನಗಳನ್ನು ರಚಿಸಿ ಆ ಮೂಲಕ ಈ ಪ್ರದೇಶದ ಸ್ವಾತಂತ್ರ್ಯ ವೀರರಾದ ಸೈಮನ್ ಬೊಲಿವಾರ್ ಮತ್ತು ಜೋಸ್ ಮೂರ್ತಿ ಅವರ ಕನಸುಗಳನ್ನು ನನಸಾಗಿಸಲು ಸತತ ಪ್ರಯತ್ನಗಳು ನಡೆಯುತ್ತಿವೆ.

ಕ್ಯೂಬಾದ ಮೇಲೆ ಅಮೆರಿಕಾ ಅನ್ಯಾಯವಾಗಿ ಹೇರಿದ ಆರ್ಥಿಕ ದಿಗ್ಬಂಧನವನ್ನು ತೆಗೆಯಬೇಕೆಂದು ಕ್ಯೂಬಾ ಜಾಗತಿಕ ಅಭಿಪ್ರಾಯವನ್ನು ಮೂಡಿಸಲು ಯಶಸ್ವಿಯಾಗಿದೆ. ಕೆಲವು ವರ್ಷಗಳ ಹಿಂದೆ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಈ ಕುರಿತು ಮಂಡಿಸಿದ ನಿರ್ಣಯಕ್ಕೆ ೫೫ ರಾಷ್ಟ್ರಗಳ ಪರವಾಗಿಯೂ ಮತ್ತು ೫ ರಾಷ್ಟ್ರಗಳ ವಿರೋಧವಾಗಿಯೂ ಮತ ಚಲಾಯಿಸಿದ್ದವು. ಕಾಲಕ್ರಮೇಣ, ಕ್ಯೂಬಾದ ಪರವಾದ ಮತಗಳು ೬೦:೭೦:೧೦೦ ರ ಗಡಿಗಳನ್ನು ದಾಟಿದವು. ಇತ್ತೀಚೆಗೆ ನಡೆದ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಈ ನಿರ್ಣಯಕ್ಕೆ ೧೫೭ ಸದಸ್ಯ ರಾಷ್ಟ್ರಗಳು ಕ್ಯೂಬಾದ ಪರವಾಗಿ ಮತ ಚಲಾಯಿಸಿದವು. ಅದರ ವಿರುದ್ಧ ಮತ ನೀಡಿದ ಅಮೆರಿಕಾ ಮತ್ತು ಇಂಗ್ಲೆಂಡ್ ಜಾಗತಿಕ ಅಭಿಪ್ರಾಯಗಳಿಂದ ಮೂಲೆ ಗುಂಪಾದವು!

ಸರ್ವನಾಶಕ್ಕೆ ಎಡೆ ಮಾಡಿಕೊಡುವ ತೀವ್ರ ಸ್ಪರ್ಧೆ, ಲಾಭ-ಅತಿಲಾಭ ಗಳಿಕೆಯ ಆರದ ದಾಹ, ವಿಜ್ಞಾನ-ತಂತ್ರಜ್ಞಾನದ ಎರಡನೇ ಕ್ರಾಂತಿಯಿಂದಾಗಿ ಅಪಾರ ಪ್ರಮಾಣದಲ್ಲಿ ಉತ್ಪಾದನಾ ಸಾಧ್ಯತೆಗಳ ಜೊತೆಗೇ ಅವುಗಳನ್ನು ಖರೀದಿಸಿ ಉಪಭೋಗಿಸಲು ಗ್ರಾಹಕ ಶಕ್ತಿ ಇಲ್ಲದ ಅಗಾಧ ಬಡತನ-ದಾರಿದ್ರ್ಯವನ್ನು ಕಾಣಬಹುದು. ಶ್ರೀಮಂತ-ಬಡವರ ಮಧ್ಯೆ ಹೆಚ್ಚುತ್ತಿರುವ ಕಂದಕ, ಎಲ್ಲಾ ರಾಷ್ಟ್ರಗಳ ಸ್ವಾತಂತ್ರ್ಯ ಹಾಗೂ ಸಾರ್ವಭೌಮತೆಯ ಮತ್ತು ವೈವಿಧ್ಯಮಯ ಸಂಸ್ಕೃತಿಗಳ ಹರಣ, ಮಿಲಿಟರಿ ಪ್ರದರ್ಶನ ಹಾಗೂ ಪ್ರಯೋಗ, ಎಲ್ಲ ದೇಶಗಳ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ, ವಿಶ್ವಸಂಸ್ಥೆಯ ಪ್ರಣಾಳಿಕೆಯ ಉಲ್ಲಂಘನೆ ಇತ್ಯಾದಿ ಗುಣಲಕ್ಷಣಗಳಿರುವ ಹಣಕಾಸು ಬಂಡವಾಳ ಆಧಾರಿತ ಜಾಗತೀಕರಣ ಈ ಭೂಮಿಯಲ್ಲಿ ಹೆಚ್ಚು ಕಾಲ ಉಳಿಯಲಾರದು ಎನ್ನುತ್ತಾರೆ ಕ್ಯಾಸ್ಟ್ರೊ. ನೊಂದ ಅದು ಮಾನವ ವಿರೋಧಿ, ಅವೈಚಾರಿಕ ಹಾಗೂ ಆತ್ಮಹತ್ಯೆಯ ಮಾರ್ಗವಾದುದರಿಂದ, ಅದರಿಂದ ನೊಂದು ಬೆಂದ ಜನರು ಸಂಘಟಿತರಾಗಿ ಹಿಂದಿನ ಎಲ್ಲಾ ಕ್ರಾಂತಿಕಾರಿ ಪರಂಪರೆಗಳ ಸ್ಫೂರ್ತಿ ಹಾಗೂ ಅನುಭವಗಳಿಂದ ಈ ಜಾಗತೀಕರಣದ ವ್ಯವಸ್ಥೆಯನ್ನೂ ಅವನತಿಕಾಲದಲ್ಲಿಯೇ ಹಿಮ್ಮೆಟ್ಟಿಸಲಿದ್ದಾರೆ ಎಂದು ಕ್ಯಾಸ್ಟ್ರೊ ಭವಿಷ್ಯ ನುಡಿದಿದ್ದಾರೆ.

ನಾವು ರಕ್ಷಿಸಬೇಕಾದುದು ಮತ್ತು ಮುಕ್ತಗೊಳಿಸಬೇಕಾದುದು ಒಂದು ವಿಚಾರವನ್ನಲ್ಲ, ಒಂದು ದೇಶವನ್ನಲ್ಲ, ಬದಲು ಇಡೀ ಜಗತ್ತನ್ನು ಹಾಗೂ ಮಾನವ ಕುಲವನ್ನು. ಈ ಕರ್ತವ್ಯದಲ್ಲಿ ಮಾರ್ಕ್ಸ್‌ವಾದಿಗಳು, ಕಮ್ಯುನಿಸ್ಟರು, ಎಡಪಂಥೀಯರು, ಪ್ರಜಾಪ್ರಭುತ್ವವಾದಿ ಗಳು ಸೇರಿದಂತೆ ಜನರನ್ನು ಪ್ರೀತಿಸುವ ರೋಮನ್ ಕೆಥೋಲಿಕ್‌ರು ಮತ್ತು ಇತರ ಧರ್ಮೀಯರು ಪಾಲುಗೊಳ್ಳಲಿದ್ದಾರೆ ಎಂದು ಕ್ಯಾಸ್ಟ್ರೊ ವಿಶ್ವಾಸ ವ್ಯಕ್ತಪಡಿಸುತ್ತಾರೆ. ಕ್ಯೂಬಾದ ರಾಷ್ಟ್ರಪಿತ ಜೋಸ್ ಮೂರ್ತಿ ಹೇಳುತ್ತಾರೆ. ‘‘ಮಾನವೀಯತೆಯೇ ನನ್ನ ಮಾತೃಭೂಮಿ’’ ಎಂದು. ಕಾರ್ಲ್‌ಮಾರ್ಕ್ಸ್ ಹೇಳುವಂತೆ, ‘‘ಜಗತ್ತಿನ ಕಾರ್ಮಿಕರೇ ಒಂದಾಗಿರಿ, ನಿಮ್ಮ ಬಂಧನಗಳನ್ನು ಹೊರತು ನೀವು ಕಳೆದುಕೊಳ್ಳುವುದು ಏನೂ ಇಲ್ಲ’’ ಎಂದು. ಭಾರತದ ದಾರ್ಶನಿಕರು ಹೇಳುತ್ತಾರೆ ‘‘ವಸುದೇವ ಕುಟುಂಬಂ- ವಿಶ್ವವೇ ಒಂದು ಕುಟುಂಬ’’ ಎಂದು. ಇದು ಜನರು ಕಾಣುವ ಜಾಗತೀಕರಣ.

 

ಪರಾಮರ್ಶನ ಗ್ರಂಥಗಳು

೧. ಕೆನ್ನರ್ ಎಂ. ಮತ್ತು ಪೆತ್ರಾಸ್ ಜೆ.(ಸಂ), ೧೯೭೦. ಫೀಡಲ್ ಕಾಸ್ಟ್ರೊ ಅವರ ಉಪನ್ಯಾಸಗಳು,  ಇಂಗ್ಲೆಂಡ್: ಪೆಂಗ್ವಿನ್ ಬುಕ್ಸ್.

೨. ಮಾನ್ ಫ್ರೆಡ್ ಎ.ಝಡ್.(ಸಂ), ೧೯೭೪. ಎ ಶಾರ್ಟ್ ಹಿಸ್ಟರಿ ಆಫ್ ದಿ ವರ್ಲ್ಡ್, ಸಂಪುಟ ೨, ಮಾಸ್ಕೊ: ಪ್ರೊಗ್ರೆಸ್ ಪಬ್ಲಿಷರ್ಸ್.

೩. ಫೀಡಲ್ ಕ್ಯಾಸ್ಟ್ರೊ ೧೯೯೯. ಆ್ಯನ್ ಇಂಪಿರಿಯಲಿಸ್ಟ್ ಗ್ಲೊಬಲೈಸೇಷನ್: ಅವರ ೧೯೯೯ರ ಎರಡು ಉಪನ್ಯಾಸಗಳು, ನವದೆಹಲಿ: ಲೆಫ್ಟ್ ವರ್ಲ್ಡ್ ಬುಕ್ಸ್.

೪. ಮನೋರಮಾ ಇಯರ್ ಬುಕ್, ೧೯೯೯. ವರ್ಲ್ಡ್ ಪನೋರಮಾ ಸ್ಪೋರ್ಟ್ಸ್, ತಿರುವನಂತಪುರಂ: ಮಲೆಯಾಳಂ ಮನೋರಮಾ.