೨೦೦೭ನೆಯ ಮಾರ್ಚ್ ಪೂರ್ವಾರ್ಧದಲ್ಲಿ ಒಂದು ಸುದ್ದಿ ಎಲ್ಲರ ಗಮನ ಸೆಳೆದಿತ್ತು. ಒಂದೆಡೆ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷ ಜಾಜ್ ರ್ ಡಬ್ಲ್ಯು. ಬುಶ್ ಲ್ಯಾಟಿನ್ ಅಮೆರಿಕಾ ದೇಶಗಳ ಮುಖಂಡರ ಭೇಟಿಗೆ ಹೊರಟಿದ್ದರೆ, ಅವರನ್ನು ಬೆನ್ನಟ್ಟಿಯೋ ಎಂಬಂತೆ ವೆನೆಜುಲಾದ ಅಧ್ಯಕ್ಷ ಹ್ಯೂಗೋ ಚವೇಝ್ ಕೂಡಾ ಹಲವು ಲ್ಯಾಟಿನ್ ಅಮೆರಿಕನ್ ದೇಶಗಳ ಪ್ರವಾಸ ಕೈಗೊಂಡರು. ಬುಶ್ ಕಾಲಿಟ್ಟಲ್ಲೆಲ್ಲಾ ಪ್ರತಿಭಟನೆ ಗಳೇ ಕಂಡುಬಂದವು. ಅವರ ಘನಿಷ್ಟ ಮಿತ್ರರು ಆಡಳಿತ ನಡೆಸುವ ಕೊಲೊಂಬಿಯಾ ಮತ್ತು ಗ್ವಾಟೆಮಾಲದಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಇತ್ತ ಚವೇಝ್ ಹೋದಲೆಲ್ಲಾ ಅವರಿಗೆ ಜನತೆಯ, ಸರಕಾರದ ಭವ್ಯ ಸ್ವಾಗತ ಕಾದಿತ್ತು. ಅಲ್ಲಿನ ಸರಕಾರಗಳೊಂದಿಗೆ ಹಲವಾರು ಒಪ್ಪಂದಗಳಿಗೆ ಸಹಿ ಹಾಕಿದರು. ಜವೇಝ್ ರದ್ದು ‘‘ಸಾಮ್ರಾಜ್ಯ-ವಿರೋಧಿ ಪ್ರವಾಸ’’ ಎಂದು ಲ್ಯಾಟಿನ್ ಅಮೆರಿಕಾದ ಮಾಧ್ಯಮಗಳು ವರ್ಣಿಸಿದವು.

ಅಮೆರಿಕಾ ಸಂಯುಕ್ತ ಸಂಸ್ಥಾನದ(ಯು.ಎಸ್.ಎ) ಖ್ಯಾತ ಚಿಂತಕ ನೋಮ್ ಚೋಮ್‌ಸ್ಕಿ ಅವರು ಅದಕ್ಕೂ ಒಂದು ವರ್ಷದ ಮೊದಲೇ ‘‘ಯುರೋಪಿಯನ್ ಆಕ್ರಮಣದ ಐದು ಶತಮಾನಗಳ ನಂತರ ಲ್ಯಾಟಿನ್ ಅಮೆರಿಕಾ ತನ್ನ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುತ್ತಿದೆ’’ ಎಂದು ಉದ್ಗರಿಸಿದ್ದರು. ನಂತರದ ಬೆಳವಣಿಗೆಗಳು ಅವರ ಉದ್ಗಾರವನ್ನು ಇನ್ನಷ್ಟು ಪುಷ್ಟಿಗೊಳಿಸುವಂತಿದೆ.

ಸಾಮಾನ್ಯವಾಗಿ, ಅಮೆರಿಕಾ ಖಂಡದಲ್ಲಿ ಸ್ಪಾನಿಷ್ ಮತ್ತು ಪೊರ್ಚುಗೀಸ್ ಭಾಷೆಗಳು ಚಾಲ್ತಿಯಲ್ಲಿರುವ ದೇಶಗಳನ್ನು ಲ್ಯಾಟಿನ್ ಅಮೆರಿಕಾ ಎಂದು ಕರೆಯಲಾಗುತ್ತದೆ. ಏಕೆಂದರೆ ಇವೆರಡು ಲ್ಯಾಟಿನ್ ಮೂಲದ ಭಾಷೆಗಳು. ಫ್ರೆಂಚ್ ಸಾಮ್ರಾಟ ೩ನೆಯ ನೆಪೋಲಿಯನ್ ಮೊದಲಿಗೆ ಈ ಹೆಸರಿಟ್ಟಾತ ಎನ್ನಲಾಗುತ್ತದೆ. ಇವು ೧೬ನೆಯ ಶತಮಾನದಿಂದ ೧೯ನೆಯ ಶತಮಾನದವರೆಗೆ ಸ್ಪೇನ್ ಮತ್ತು ಪೋರ್ಚುಗಲ್‌ನ ವಸಾಹತುಶಾಹಿ ಆಳ್ವಿಕೆಗೆ ಒಳಪಟ್ಟಿದ್ದ ದೇಶಗಳು: ಉತ್ತರದಲ್ಲಿ ಮೆಕ್ಸಿಕೋದಿಂದ ಹಿಡಿದು ದಕ್ಷಿಣದಲ್ಲಿ ಅರ್ಜೆಂಟೈನಾವರೆಗಿನ ಸುಮಾರು ೨೦ ದೇಶಗಳು ಈ ಪಟ್ಟಿಯಲ್ಲಿ ಸೇರುತ್ತವೆ. ಇವನ್ನು ‘ಬಾಳೆಹಣ್ಣು ಗಣತಂತ್ರ’ ಗಳೆಂದೂ ‘ಅಮೆರಿಕಾದ ಹಿತ್ತಿಲು’ ಎಂದೂ ವ್ಯಂಗ್ಯವಾಗಿ ಹೇಳುತ್ತಾರೆ. ಇವು ಗಣತಂತ್ರಗಳೆನಿಸಿ ಕೊಂಡರೂ ಅಧೀನ ದೇಶಗಳಂತೆ ಮುಖ್ಯವಾಗಿ ಅಮೆರಿಕಾ ಸಂಯುಕ್ತ ಸಂಸ್ಥಾನಗಳನ್ನು ಅವಲಂಬಿಸಿದಂತೆ ಇರುವ ದೇಶಗಳು ಎಂಬರ್ಥದಲ್ಲಿ ಈ ಪದ ಬಳಸಲಾಗುತ್ತದೆ. ಆದರೆ ಈಗ ಪರಿಸ್ಥಿತಿ ಬದಲಾಗುತ್ತಿರುವಂತೆ ಕಾಣುತ್ತದೆ.

ವಸಾಹತುಶಾಹಿ ಅವಧಿ

ಯುರೋಪಿಯನ್ನರ ಮುಖ್ಯವಾಗಿ ಸ್ಪೇನ್ ಮತ್ತು ಪೋರ್ಚುಗಲ್‌ನ ವಸಾಹತುಶಾಹಿಗಳ ಆಕ್ರಮಣದ ಮೊದಲು ಇದು ಹಲವಾರು ಬುಡಕಟ್ಟುಗಳ ಅಝಟೆಕ್, ಟೊಲ್ಟೆಕ್, ಕ್ವೆಚುವ, ಕೆರೀಬ್, ಮಾಯಾ, ಇಂಕ ಮುಂತಾದ ಮುಂದುವರೆದ ನಾಗರಿಕತೆಗಳ ಪ್ರದೇಶವಾಗಿತ್ತು. ಭಾರತ, ಚೀನಾ ಮತ್ತು ಜಪಾನಿನ ಸಂಪತ್ತುಗಳ ಮೇಲೆ ಕಣ್ಣಿಟ್ಟ ಯುರೋಪಿಯನ್ನರಿಗಾಗಿ ಪಶ್ಚಿಮದ ಮೂಲಕ ಒಂದು ದಾರಿ ಹುಡುಕುತ್ತಾ ಸ್ಟೇನಿನಿಂದ ಹೊರಟ ಕ್ರಿಸ್ಟೋಫರ್ ಕೊಲಂಬಸ್‌ನ ಸಮುದ್ರಯಾನದ ಪರಿಣಾಮವಾಗಿ ಈ ಪ್ರದೇಶಗಳು ಸ್ಪೇನ್ ಮತ್ತು ಪೋರ್ಚುಗಲ್‌ನ, ನಂತರ ಕೆಲವು ಫ್ರಾನ್ಸ್‌ನ ವಸಾಹತುಗಳಾಗಿ ಮಾರ್ಪಟ್ಟವು. ೧೪೯೨ರಲ್ಲಿ ಅವರು ಕಾಲಿಟ್ಟ ಮೊದಲ ಪ್ರದೇಶಗಳೆಂದರೆ ಈಗಿನ ಹೈಟಿ ಮತ್ತು ಕ್ಯೂಬಾ ಆಮೇಲೆ, ೧೫೦೦ರಲ್ಲಿ ಬ್ರೆಜಿಲ್, ೧೫೦೨ರಲ್ಲಿ ನಿಕರಗುವಾ, ೧೫೦೮ರಲ್ಲಿ ಕೊಲೊಂಬಿಯಾ, ೧೫೧೬ರಲ್ಲಿ ಉರುಗ್ವೇ ಮತ್ತು ಅರ್ಜೆಂಟೈನಾ, ೧೫೧೯ರಲ್ಲಿ ಮೆಕ್ಸಿಕೋ, ೧೫೨೨ರಲ್ಲಿ ವೆನೆಜುವೆಲಾ, ೧೫೧೩ರಲ್ಲಿ ಇಕ್ವೆಡಾರ್, ೧೫೩೨ರಲ್ಲಿ ಪೆರು, ೧೫೩೭ರಲ್ಲಿ ಪರಾಗ್ವೆ, ಬೊಲಿವಿಯಾ, ಚಿಲಿ ಇತ್ಯಾದಿಗಳು ಹೀಗೆ ಒಂದೊಂದಾಗಿ ಇಡೀ ಖಂಡವನ್ನು ಪ್ರವೇಶಿಸಿದ ವಸಾಹತುಶಾಹಿಗಳು ಮುಂದಿನ ಮೂರು ಶತಮಾನಗಳ ಕಾಲ ಇಲ್ಲಿನ ಜನಗಳ ಸಂಪನ್ಮೂಲಗಳ ಲೂಟಿ ಮಾಡಿದರು. ಅವರು ತಂದ ಸಿಡುಬು ದಡಾರಗಳು ಇಲ್ಲಿನ ಲಕ್ಷಾಂತರ ಸ್ಥಳೀಯರಿಗೆ ಮೃತ್ಯುಪಾಯವೇ ಆದವು. ಬದುಕುಳಿದವರು ಯುರೋಪಿಯನ್ ತೋಟಗಳಲ್ಲಿ, ಗಣಿಗಳಲ್ಲಿ ಕೆಲಸ ಮಾಡುವ ಗುಲಾಮರಾದರು. ನಂತರ ಆಫ್ರಿಕಾದಿಂದಲೂ ಗುಲಾಮರನ್ನು ತರಲಾಯಿತು. ಇಲ್ಲಿ ಬಂದು ನೆಲೆಸಿದ ಯುರೋಪಿಯನ್ನರು. ಮತ್ತು ಸ್ಥಳೀಯರ ನಡುವೆ ವೈವಾಹಿಕ ಸಂಬಂಧಗಳಿಂದಾಗಿ ಮೆಸ್ತಿಝೋ ಎಂಬ ಮಿಶ್ರ ಜನಾಂಗವೂ ರೂಪುಗೊಂಡಿತು. ಈಗ ಗ್ವಾಟೆಮಾಲಾ, ಬೊಲಿವಿಯಾ ಮತ್ತು ಸ್ವಲ್ಪ ಮಟ್ಟಿಗೆ ಪೆರುವಿನಲ್ಲಿ ಮೂಲನಿವಾಸಿಗಳ ಸಂಖ್ಯೆ ಹೆಚ್ಚಿದ್ದರೆ ಇತರೆಡೆ ಮಿಶ್ರ ಜನಾಂಗದವರ ಸಂಖ್ಯೆ ಹೆಚ್ಚಿದೆ.

ಸ್ವಾತಂತ್ರ್ಯದ ನಂತರ

ವಸಾಹತುಶಾಹಿಯಡಿಯಲ್ಲಿನ ಬೆಳವಣಿಗೆಗಳು ಮತ್ತು ಶೋಷಣೆಗಳ ಪರಿಣಾಮವಾಗಿ ವಸಾಹತುಶಾಹಿಯ ವಿರುದ್ಧ ಹೋರಾಟಗಳೂ ನಡೆದವು. ಸಿಮೊನ್ ಬೊಲಿವೆರ್, ಜೋಸ್ ದೆ ಸಾನ್ ಮಾರ್ಟಿ, ಲಿಗಸ್ತೊ ಸಿಝರ್ ಸ್ಯಾಂದಿನಿಸ್ಟ. ಎಮಿಲಿನೊ ಝಪಟಾ ಮೊದಲಾದ ದೇಶಪ್ರೇಮಿ ಮುಖಂಡರ ನೇತೃತ್ವದಲ್ಲಿ, ಅವರ ಸ್ಫೂರ್ತಿಯಿಂದ ನಡೆದ ಹೋರಾಟಗಳು ಪರಿಣಾಮವಾಗಿ ೧೮೦೪ರಲ್ಲಿ ಹೈತಿ, ೧೮೧೦ರಲ್ಲಿ ಇಕ್ವೆಡಾರ್, ಕೊಲೊಂಬಿಯಾ ಮತ್ತು ಮೆಕ್ಸಿಕೋ, ೧೮೧೧ರಲ್ಲಿ ಪರಾಗ್ವೆ, ೧೮೨೧ರಲ್ಲಿ ವೆನೆಜುಲ್ಲಾ, ೧೮೨೨ರಲ್ಲಿ ಬ್ರೆಜಿಲ್, ೧೮೨೫ರಲ್ಲಿ ಬೊಲಿವಿಯಾ, ೧೮೪೮ರಲ್ಲಿ ಕ್ಯೂಬಾ ಹೀಗೆ ಎಲ್ಲಾ ಸ್ವತಂತ್ರ ದೇಶಗಳಾದವು.

ಆದರೆ ಹಳೆಯ ಸಾಮಾಜಿಕ ವ್ಯವಸ್ಥೆ ಹಾಗೆಯೇ ಮುಂದುವರೆಯಿತು. ಹೊಸ ರಫ್ತು ಆರ್ಥಿಕಗಳು ಅದಕ್ಕೆ ಒತ್ತಾಸೆಯಾಗಿ ನಿಂತವು. ಹಳೆಯ ಭೂಮಾಲಕ ವರ್ಗದ್ದೇ ಈ ರಫ್ತು ವ್ಯಾಪಾರದಲ್ಲಿ ಪ್ರಾಬಲ್ಯವಿತ್ತು. ರಾಜಕೀಯವೂ ಈ ವರ್ಗದ ಕೈಯಲ್ಲೇ ಇತ್ತು. ಮೊದಲ ಮಹಾಯುದ್ಧ ಮುಗಿಯುವವರೆಗೂ ಈ ರಫ್ತು ವ್ಯಾಪಾರದ ತೇಜಿಯಿಂದಾಗಿ ಇವರಿಗೆ ಬಹಳಷ್ಟು ಲಾಭ ದಕ್ಕಿತ್ತು. ಆದರೆ ಮೊದಲನೇ ಮಹಾಯುದ್ಧ ಮುಗಿಯುತ್ತಿದ್ದಂತೆ ಈ ವ್ಯಾಪಾರದ ತೇಜಿಯೂ ತೀವ್ರವಾಗಿ ಇಳಿಮುಖವಾಯಿತು. ಅತ್ತ ದೊಡ್ಡ ನಗರಗಳು ಬೆಳೆದಿದ್ದು ಅಲ್ಲಿ ಒಂದು ಹೊಸ ವಿದ್ಯಾವಂತ ಮಧ್ಯಮವರ್ಗ ಮೂಡಿ ಬರುತ್ತಿತ್ತು. ಇದರಿಂದ ಸಾಮಾಜಿಕ ಸಮತೋಲನವೂ ಬದಲಾಯಿತು. ಜತೆಗೆ ಯುರೋಪಿನಿಂದ ವಲಸೆ ಬರುತ್ತಿದ್ದವರೊಂದಿಗೆ ರಾಷ್ಟ್ರೀಯವಾದ, ಸಮಾಜವಾದ ಮುಂತಾದ ವಿಚಾರಗಳೂ ಬರಲಾರಂಭಿಸಿದವು. ಈ ಅವಧಿಯಲ್ಲಿ ಇಡೀ ಲ್ಯಾಟಿನ್ ಅಮೆರಿಕಾದಾದ್ಯಂತ ಕಮ್ಮಿ ಸಂಬಳ ಮತ್ತು ನಿಕೃಷ್ಟ ಪರಿಸ್ಥಿತಿಗಳ ವಿರುದ್ಧ ಪ್ರತಿಭಟನೆಗಳ ಅಲೆಯೇ ಹರಡಿತು. ಹಳೆಯ ವ್ಯವಸ್ಥೆ ಕುಸಿಯುತ್ತಿತ್ತು.

ಈ ನಡುವೆ ಲ್ಯಾಟಿನ್ ಅಮೆರಿಕಾದಲ್ಲಿ ಮುಖ್ಯವಾಗಿ ಸರಕುಗಳ ಉತ್ಪಾದನೆಯಲ್ಲಿ ಅಮೆರಿಕಾ ಸಂಯುಕ್ತಸಂಸ್ತಾನಗಳ ಪ್ರಭಾವ ಹೆಚ್ಚಲಾರಂಭಿಸಿತು(ಉದಾಹರಣೆಗೆ ಕ್ಯೂಬಾದಲ್ಲಿ ಸಕ್ಕರೆ, ಚಿಲಿಯಲ್ಲಿ ತಾಮ್ರ ಮೆಕ್ಸಿಕೋದಲ್ಲಿ ತೈಲ ಇತ್ಯಾದಿ). ಇದರಿಂದಾಗಿ ರಾಷ್ಟ್ರೀಯವಾದಿ ಗಳಲ್ಲಿ ಈ ದೇಶದ ಆಳರಸರ ಬಗ್ಗೆ ಕ್ರೋಧವೂ ಹೆಚ್ಚಿತು. ಅಮೆರಿಕಾ ಸಂಯುಕ್ತದ ಆಕ್ರಮಣ, ಹಸ್ತಕ್ಷೇಪಗಳು ಆರಂಭವಾದವು. ೧೯೦೬-೦೮ ಹಾಗೂ ೧೯೧೭-೨೩ರಲ್ಲಿ ಅದು ಕ್ಯೂಬಾವನ್ನು ಆಕ್ರಮಿಸಿಕೊಂಡಿತು; ೧೯೧೪ರಲ್ಲಿ ಮೆಕ್ಸಿಕೋದಲ್ಲಿ ಮಧ್ಯ ಪ್ರವೇಶ ಮಾಡಿತು; ೧೯೨೬-೩೩ರ ನಡುವೆ ನಿಕಾರಾಗುವಾವನ್ನು ಆಕ್ರಮಿಸಿಕೊಂಡಿತು.

ಸ್ವತಂತ್ರ ಅಭಿವೃದ್ದಿಯ ಪ್ರಯತ್ನ

ಆದರೆ ಅಮೆರಿಕಾದ ಪ್ರಾಬಲ್ಯಕ್ಕೆ ಸವಾಲುಗಳಿಗೇನೂ ಕೊರತೆಯಿರಲಿಲ್ಲ. ೧೯೩೦ರ ದಶಕದಿಂದ ೧೯೭೦ರ ದಶಕದವರೆಗೆ ಲ್ಯಾಟಿನ್ ಅಮೆರಿಕಾದ ಹಲವು ದೇಶಗಳಲ್ಲಿ ಅಮೆರಿಕಾದ ಪ್ರಾಬಲ್ಯವನ್ನು ಮುರಿದು ಕೈಗಾರಿಕೀಕರಣ ನಡೆಸುವ, ತಮ್ಮ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಒಡೆತನ ಸ್ಥಾಪಿಸುವ ಪ್ರಯತ್ನಗಳು ನಡೆದವು. ಉದಾಹರಣೆಗೆ, ಮೆಕ್ಸಿಕೋದ ಅಧ್ಯಕ್ಷ ಕಾರ್ಡೆನಾಸ್ ಅಮೆರಿಕನ್ ಪೆಟ್ರೋಲಿಯಂ ಕಂಪನಿಗಳು ರಾಷ್ಟ್ರೀಕರಣ ಮಾಡಿದರು. ಬ್ರೆಜಿಲ್‌ನಲ್ಲಿ ಗೆತುಲಿಯೋ ವರ್ಗಾಸ್ (೧೯೩೦-೪೫). ಅರ್ಜೆಂಟೈನಾದಲ್ಲಿ ಜುವಾನ್ ಡೋಮಿಂಗೋ ಪೆರೋನ್ (೧೯೪೩-೫೫) ಹಾಗೂ ಚಿಲಿಯಲ್ಲಿ ಜನಪ್ರಿಯ ರಂಗ ರಾಷ್ಟ್ರೀಯ ಉದ್ದಿಮೆಗಳಿಗೆ ರಕ್ಷಣೆ ನೀಡಿ ಅವನ್ನು ಬೆಳೆಸುವ ನೀತಿಗಳನ್ನು ಅನುಸರಿಸಿದರು.

೧೯೫೦ರ ದಶಕದಲ್ಲಿ ಗ್ವಾಟೆಮಾಲದಲ್ಲಿ ಅಧ್ಯಕ್ಷ ಅರ್ಬೆಂಝ್ ಅಮೆರಿಕಾದ ಯುನೈಟೆಡ್ ಫ್ರೂಟ್ ಕಂಪನಿಯ ಒಡೆತನದಲ್ಲಿದ್ದ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ರೈತರಿಗೆ ವಿತರಿಸಿದರು. ೧೯೫೨ರಲ್ಲಿ ಬೊಲಿವಿಯಾದಲ್ಲಿ ಒಂದು ರೀತಿಯ ತೀವ್ರಗಾಮಿ ರಾಷ್ಟ್ರೀಯ ಕ್ರಾಂತಿಯೇ ನಡೆಯಿತು. ಅದು ಬಹಳ ದಿನ ಉಳಿಯದಿದ್ದರೂ ಮುಂದಿನ ಸಮರಧೀರ ಚಳುವಳಿಗಳಿಗೆ ನಾಂದಿಯಾಯಿತು. ಕ್ಯೂಬಾದಲ್ಲಿ ಫೀಡೆಲ್ ಕಾಸ್ಟ್ರೋ ಮತ್ತು ಅವರ ಸಂಗಾತಿಗಳ ನೇತೃತ್ವದಲ್ಲಿ ಬಾಟಿಸ್ಠಾ ಸರ್ವಾಧಿಕಾರವನ್ನು ಉರುಳಿಸಿ ಸಮಾಜವಾದಿ ಕ್ರಾಂತಿ ನಡೆಯಿತು. ಕಳೆದ ಐದು ದಶಕಗಳಿಂದ ಅದು ಅಮೆರಿಕಾದ ವಿವಿಧ ರೀತಿಯ ದಾಳಿಗಳನ್ನು, ಆರ್ಥಿಕ ದಿಗ್ಭಂಧನಗಳನ್ನು ಎದುರಿಸಿ ಲ್ಯಾಟಿನ್ ಅಮೆರಿಕಾದ ಜನಗಳಿಗೆ ಸ್ಫೂರ್ತಿಯ ಸೆಲೆಯಾಗಿ ಉಳಿದಿದೆ.

೧೯೬೦ರ ಮತ್ತು ೧೯೭೦ರ ದಶಕದಲ್ಲಿ ಲ್ಯಾಟಿನ್ ಅಮೆರಿಕಾದಾದ್ಯಂತ ಹಲವಾರು ರಾಷ್ಟ್ರೀಯವಾದಿ ಪ್ರಜಾಸತ್ತಾತ್ಮಕ ಮತ್ತು ಜನಪರ ಸರಕಾರಗಳು ಬಂದವು. ಇವು ಜನಸಾಮಾನ್ಯರ ದೃಷ್ಟಿಯಿಂದ, ಪ್ರಜಾಪ್ರಭುತ್ವ ದೃಷ್ಟಿಯಿಂದ ಸಾಕಷ್ಟು ಮುನ್ನಡೆಯನ್ನು ಸಾಧಿಸಿದವು. ಈ ಅವಧಿಯಲ್ಲಿ ಕಂಡುಬಂದ ರಾಷ್ಟ್ರೀಕರಣದ ಅಲೆಯಿಂದಾಗಿ ಆರ್ಥಿಕದ ಪ್ರಮುಖ ವಲಯಗಳು ರಾಷ್ಟ್ರೀಯ ಪ್ರಭುತ್ವಗಳ ಹತೋಟಿಯೊಳಗೆ ಬಂದವು. ಕಾರ್ಮಿಕರು, ರೈತರು ಮತ್ತು ನೌಕರ ವರ್ಗಗಳಿಗೂ ಕೆಲವಾರು ಸಾಮಾಜಿಕ ಸೌಲಭ್ಯಗಳು ದೊರೆತವು. ರಕ್ಷಕ ಶಾಸನಗಳು ಬಂದವು. ಒಟ್ಟು ರಾಷ್ಟ್ರೀಯ ಆದಾಯದಲ್ಲಿ ದುಡಿಯುವ ಜನಗಳ ಪಾಲು ಗಮನಾರ್ಹವಾಗಿ ಹೆಚ್ಚಿತು. ಸಾರ್ವಜನಿಕ ಶಿಕ್ಷಣ ಮತ್ತು ಆರೋಗ್ಯ ವಲಯಗಳಲ್ಲೂ ಸಾಕಷ್ಟು ಮುನ್ನಡೆ ಕಂಡುಬಂತು.

ಆದರೆ ಈ ಅವಧಿ ಯಾವುದೇ ರೀತಿಯಲ್ಲಿ ತೀವ್ರವಾದೀ ಕ್ರಮಗಳ ಅವಧಿಯಾಗಿರಲಿಲ್ಲ ಎನ್ನುತ್ತಾರೆ ಅರ್ಜೆಂಟೈನಾದ ನಿರುದ್ಯೋಗಿ ಕಾರ್ಮಿಕರ ಚಳುವಳಿಯ ಮತ್ತು ಬ್ರೆಜಿಲ್‌ನ ಭೂಹೀನ ಕೂಲಿಗಾರರ ಆಂದೋಲನದೊಡನೆ ಕೆಲಸ ಮಾಡುತ್ತಿರುವ ಜೇಮ್ಸ್ ಪೆಟ್ರಾಸ್. ರಾಷ್ಟ್ರೀಕರಣಗಳ ಅಲೆಗಳಾಗಲೀ ದುಡಿಯುವ ಜನಸಮೂಹಗಳಿಗೆ ರೂಪಿಸಿದ ರಕ್ಷಕ ಶಾಸನಗಳಾಗಲೀ ಕ್ಯೂಬಾವನ್ನು ಬಿಟ್ಟು ಬೇರಾವ ಲ್ಯಾಟಿನ್ ಅಮೆರಿಕನ್ ದೇಶದಲ್ಲೂ ವಿದೇಶೀ ಬಂಡವಾಳದ ಬಹುರಾಷ್ಟ್ರೀಯ ಕಂಪನಿಗಳ ಲಾಭವನ್ನು ಬಹುವಾಗಿ ತಟ್ಟಲಿಲ್ಲ. ಕೆಲವು ಹತೋಟಿಗಳಿಗೆ ಒಳಪಟ್ಟವಷ್ಟೆ. ಇಷ್ಟರಿಂದಲೇ ಕುಪಿತಗೊಂಡ ಸಂಪನ್ನ ವಿಭಾಗಗಳು ಸೇನಾಪಡೆಗಳತ್ತ, ಬಹುರಾಷ್ಟ್ರೀಯ ಕಂಪನಿಗಳತ್ತ ತಿರುಗಿ ಈ ಜನಪರ ರಾಜಕೀಯವನ್ನು ತಡೆಯಲು ಮುಂದಾದವು.

ಚಿಲಿ ಇದಕ್ಕೆ ಒಂದು ಮಹತ್ವದ ಉದಾಹರಣೆ. ೧೯೭೦ರಲ್ಲಿ ಅಲ್ಲಿ ಸಮಾಜವಾದಿಗಳು, ಕಮ್ಯುನಿಸ್ಟರು ಮತ್ತಿತರ ಎಡಪಂಥೀಯರು ಸೇರಿದ್ದ ‘ಜನಪ್ರಿಯ ಐಕ್ಯತೆ’ ರಂಗದ ಅಭ್ಯರ್ಥಿ ಸಾಲ್ವಡೊರ್ ಅಲೆಂದೆ ಅಧ್ಯಕ್ಷರಾಗಿ ಚುನಾಯಿತರಾದರು. ಜನತೆಗೆ ವಚನ ನೀಡಿದಂತೆ ಅಲೆಂದೆ ಸರಕಾರ ದೊಡ್ಡ ಗಣಿಗಳನ್ನು ಸರಕಾರದ ನಿಯಂತ್ರಣಕ್ಕೆ ಒಳಪಡಿಸಿತು. ಸಣ್ಣ ಮತ್ತು ಮಧ್ಯಮ ವ್ಯಾಪಾರಗಳಿಗೆ ಸಾಲ ಒದಗಿಸಲಿಕ್ಕಾಗಿ ದೇಶೀ ಖಾಸಗಿ ಬ್ಯಾಂಕುಗಳನ್ನು ರಾಷ್ಟ್ರೀಕರಿಸುವ ಮಸೂದೆ ಮಂಡಿಸುವುದಾಗಿ ಅಧ್ಯಕ್ಷ ಅಲೆಂದೆ ಪ್ರಕಟಿಸಿದರು. ಚಿಲಿಯ ವಿದೇಶೀ ವಿನಿಮಯಗಳಲ್ಲಿ ಮುಕ್ಕಾಲು ಪಾಲು ಒದಗಿಸುವ ತಾಮ್ರ ಉದ್ದಿಮೆಯ ರಾಷ್ಟ್ರೀಕರಣಕ್ಕೆ ಅನುಕೂಲ ಕಲ್ಪಿಸುವ ಸಂವಿಧಾನ ತಿದ್ದುಪಡಿಗೆ ಸರ್ವಾನುಮತದ ಒಪ್ಪಿಗೆ ದೊರೆಯಿತು. ಈ ಖಾಸಗಿ ತಾಮ್ರ ಕಂಪನಿಗಳು ಹಿಂದಿನ ೧೫ ವರ್ಷಗಳಲ್ಲಿ ಮಾಡಿದ್ದ ೭೭.೪ ಕೋಟಿ ಡಾಲರುಗಳಷ್ಟು ‘ಹೆಚ್ಚುವರಿ ಲಾಭ’ಗಳನ್ನು ಅವುಗಳಿಗೆ ನೀಡುವ ಪರಿಹಾರದಿಂದ ಮುರಿದುಕೊಳ್ಳಲಾಗುವುದು ಎಂದು ಅಧ್ಯಕ್ಷ ಅಲೆಂದೆ ಸಾರಿದರು. ಅಮೆರಿಕನ್ ದೂರಸಂಪರ್ಕ ಕಂಪನಿ ಐಟಿಟಿ ೧೯೩೦ರಿಂದ ೭೦ ಬಂಡವಾಳ ಹೊಂದಿದ ‘ಚಿಲಿಯನ್ ಟೆಲಿಪೋನ್ ಕಂಪನಿಯ(ಚಿಟೆಲೋ) ನಿರ್ವಹಣೆಯನ್ನು ಚಿಲಿಯನ್ ಸರಕಾರ ವಹಿಸಿಕೊಂಡಿತು.

ಚಿಲಿಯಲ್ಲಿ ಅಧ್ಯಕ್ಷೀಯ ಚುನಾವಣೆಗಳ ಸಿದ್ಧತೆ ೧೯೭೦ರಲ್ಲಿ ನಡೆಯುತ್ತಿರುವಾಗಲೇ ಈ ಐ.ಟಿ.ಟಿ.ಕಂಪನಿ ಸಿಐಎ ಜತೆಗೂಡಿ ಅಲೆಂದೆ ಗೆಲ್ಲದಂತೆ ತಡೆಯಲು, ಗೆದ್ದು ಬಂದರೆ ಅವರ ಸರಕಾರವನ್ನು ಉರುಳಿಸಲು ಯೋಜನೆ ಹೂಡಿತ್ತು ಎಂದು ಅಮೆರಿಕಾದ ಪತ್ರಕರ್ತ ಜಾಕ್ ಆ್ಯಂಡರ್ಸನ್ ೧೯೭೨ನೆಯ ಮಾರ್ಚ್ ೨೧ರಂದು ಆಪಾದಿಸಿದರು. ಅಲೆಂದೆ ಅಧಿಕಾರ ಸ್ವೀಕರಿಸುವ ವೇಳೆಗೆ ಚಿಲಿಯಲ್ಲಿ ನೂರಕ್ಕೂ ಹೆಚ್ಚು ವಿದೇಶಿ ಕಂಪನಿಗಳು ೧೦೦ ಕೋಟಿ ಡಾಲರುಗಳಷ್ಟು ಹೂಡಿದ್ದವಂತೆ. ಅದರಲ್ಲಿ ೨೦ ಲಕ್ಷ ಡಾಲರು ಹೂಡಿದ್ದ ಐ.ಟಿ.ಟಿ.ಯದ್ದೇ ಮೊದಲ ಸ್ಥಾನ. ಅತ್ತ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ರಾಷ್ಟ್ರೀಯ ಭದ್ರತಾ ಮಂಡಳಿ ನಿರ್ದೇಶಕ ಮತ್ತು ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಸಿಂಜರ್  ‘‘ಒಂದು ದೇಶ ಅಲ್ಲಿಯ ಜನಗಳ ಬೇಜವಾಬ್ದಾರಿಯಿಂದಾಗಿ ಕಮ್ಯುನಿಸ್ಟ್ ಆಗುತ್ತಿದ್ದರೆ ನಾವು ಸುಮ್ಮನೆ ನಿಂತು ನೋಡುತ್ತಿರುವ ಅಗತ್ಯವಿಲ್ಲ’’  ಎಂದಿದ್ದರಂತೆ. ಐಟಿಟಿ ವಾಶಿಂಗ್ಟನ್ ನಲ್ಲಿರುವ ಅಮೆರಿಕಾದ ಅಧ್ಯಕ್ಷರಿಗೆ ಸಲ್ಲಿಸಿದ ೧೮ ಅಂಶಗಳ ಯೋಜನೆಯಲ್ಲಿ ಆರ್ಥಿಕ ಯುದ್ಧ, ಬುಡಮೇಲು ಕೃತ್ಯಗಳನ್ನು ಒಂದು ವಿಶೇಷ ಶ್ವೇತ ಭವನ ಕಾರ್ಯಪಡೆಯು ಸಿಐಐ ನೆರವಿನಿಂದ ನಡೆಸಬೇಕು. ಈ ಮೂಲಕ ಚಿಲಿಯಲ್ಲಿ ಆರ್ಥಿಕ ಅರಾಜಕತೆಯನ್ನು ತಂದು ಚಿಲಿಯ ಸಶಸ್ತ್ರ ಪಡೆಗಳು ಮಧ್ಯ ಪ್ರವೇಶಿಸಿ ‘ಸುವ್ಯವಸ್ಥೆ’ ಕಲ್ಪಿಸುವಂತಾಗಬೇಕು ಎಂದು ಯೋಜಿಸಲಾಗಿತ್ತು ಎಂದು ಆ್ಯಂಡರ್ಸನ್ ನಂತರ ಸಾರ್ವಜನಿಕಗೊಳಿಸಿದ ಗುಪ್ತ ದಸ್ತಾವೇಜಿನಿಂದ ತಿಳಿದುಬಂತು.

ಚಿಲಿಯಲ್ಲಿನ ೧೯೭೦-೭೩ರ ಘಟನೆಗಳು ಈ ಯೋಜನೆಯ ಪ್ರಕಾರವೇ ನಡೆದವು. ಕೊನೆಗೆ ೧೯೭೩ರ ಸೆಪ್ಟೆಂಬರ್ ೧೧ರಂದು ಹಿಂದಿನ ಸೇನಾಧಿಪತಿಯ ಹತ್ಯೆಯ ನಂತರ ಅಧಿಕಾರ ವಹಿಸಿಕೊಂಡಿದ್ದ ಜನರಲ್ ಅಗಸ್ತೊ ಪಿನೋಚೆ ಉಗಾರ್ಟೆ ನೇತೃತ್ವದಲ್ಲಿ ಅಧ್ಯಕ್ಷರ ಭವನದ ಮೇಲೆ ಟ್ಯಾಂಕುಗಳು, ಜೆಟ್ ವಿಮಾನಗಳಿಂದ ದಾಳಿ ನಡೆಯಿತು. ಅವರಿಗೆ ರಾಜೀನಾಮೆ ನೀಡಿ ಇಲ್ಲವೆ ಶರಣಾಗಿ ಎಂದು ಆದೇಶಿಸಲಾಯಿತು. ಅಧ್ಯಕ್ಷ ಅಲೆಂದೆ ಅದಕ್ಕೆ ನಿರಾಕರಿಸಿದರು. ಪಿನೋಚೆಯ ಸೈನಿಕರನ್ನು ಎದುರಿಸಿ ಹೋರಾಡುತ್ತಾ ಪ್ರಾಣಾರ್ಪಣೆ ಮಾಡಿದರು. ಪಿನೋಚೆಯ ಕ್ರೂರ ಮಿಲಿಟರಿ ಸರ್ವಾಧಿಕಾರ ಆರಂಭವಾಯಿತು. ಸಾವಿರ ಸಾವಿರ ಸಂಖ್ಯೆಯಲ್ಲಿ ಚಿಲಿಯನ್ನರು ‘ಕಾಣೆ’ಯಾಗಲಾರಂಭಿಸಿದರು. ೧೯೭೧ರಲ್ಲಿ ನೊಬೆಲ್ ಸಾಹಿತ್ಯ ಪ್ರಶಸ್ತಿ ಪಡೆದ ಚಿಲಿಯ ಪ್ರಿಸದ್ಧ ಕವಿ ಪಾಬ್ಲೊ ನೆರುದಾ ನಿವಾಸಕ್ಕೂ ಪಿನೊಚೆಯ ಬಂಟರು ಬಂದಿದ್ದರಂತೆ. ಈ ಕವಿ ೧೯೭೩ನೆಯ ಸೆಪ್ಟೆಂಬರ್ ೨೩ರಂದು ನಿಧನರಾದರು.

ಪಿನೊಚೆಯ ಕ್ರೂರ ಮಿಲಿಟರಿ ಸರ್ವಾಧಿಕಾರದ ಆರಂಭ ಲ್ಯಾಟಿನ್ ಅಮೆರಿಕಾದಲ್ಲಿ ಮಾತ್ರವಲ್ಲ, ಇಡೀ ಜಗತ್ತಿನಲ್ಲಿಯೇ ಐ.ಎಂ.ಎಫ್. ಮತ್ತು ವಿಶ್ವಬ್ಯಾಂಕ್ ಪ್ರೇರಿತ ‘ನವ ಉದಾರವಾದಿ’ ನೀತಿಗಳ ಆರಂಭದ ಸಂಕೇತವೂ ಆಯಿತು ಎಂಬುದು ಗಮನಾರ್ಹ. ಚಿಲಿಯಲ್ಲಿ ಮಿಲಿಟರಿ ಸರ್ವಾಧಿಕಾರ ಹೇರಿದ ಸಂದರ್ಭದಲ್ಲೇ ಅರ್ಜೆಂಟೈನಾ, ಬ್ರೆಜಿಲ್ ಮತ್ತು ಉರುಗ್ವೆಯಲ್ಲೂ ಚುನಾಯಿತ ಸರಕಾರಗಳನ್ನು ಉರುಳಿಸಿ ಮಿಲಿಟರಿ ಸರ್ವಾಧಿಕಾರಗಳು ಬಂದವು. ಅಲ್ಲಿಯೂ ಈ ನವ-ಉದಾರವಾದಿ ಆರ್ಥಿಕ ನೀತಿಗಳು ಜಾರಿಯಾಗಲಾರಂಭಿಸಿದವು.

೧೯೫೦ರ ಮತ್ತು ೧೯೬೦ರ ದಶಕದ ‘ಪ್ರಭುತ್ವ’ ಕೇಂದ್ರಿತ ಅಥವಾ ಸರಕಾರದಿಂದ ನಿರ್ದೇಶಿತ ಆರ್ಥಿಕ ನೀತಿಗಳ ವಿಫಲತೆಯಿಂದಾಗಿ ಈ ‘ಮುಕ್ತ ಮಾರುಕಟ್ಟೆ’ ಅಥವಾ ‘ನವ-ಉದಾರವಾದಿ’ ನೀತಿಗಳು ಅನಿವಾರ್ಯವಾದವು ಎಂದು ಕೆಲವು ಆರ್ಥಿಕತಜ್ಞರು ಹೇಳುತ್ತಾರೆ. ಆದರೆ ವಾಸ್ತವವಾಗಿ ಈ ‘ನವ ಉದಾರವಾದಿ’ ನೀತಿಗಳು ಆರಂಭವಾದದ್ದು ೧೯೫೦ರ ಮತ್ತು ೧೯೬೦ರ ದಶಕದ ಸಾಮಾಜಿಕ ಸುಧಾರಣಾ ಪರ ಆರ್ಥಿಕ ನೀತಿಗಳ ಯಶಸ್ವಿನಿಂದಾಗಿಯೇ. ಅದಕ್ಕೆ ಪ್ರತಿಕ್ರಿಯೆಯಾಗಿ, ಹಿಂಸಾತ್ಮಕ ರಾಜಕೀಯ ಮಧ್ಯಪ್ರದೇಶದಿಂದ ಇವನ್ನು ಹೇರಲಾಯಿತು. ಎಂದು ಇನ್ನು ಕೆಲವು ತಜ್ಞರ ಅಭಿಪ್ರಾಯ. ಮೇಲೆ ಹೇಳಿದ ಚಿಲಿಯ ಉದಾಹರಣೆ ಈ ಅಭಿಪ್ರಾಯವನ್ನು ಪುಷ್ಟೀಕರಿಸುತ್ತದೆ.

ಕಳಕೊಂಡ ದಶಕ

ಚಿಲಿಯ ಜನರಲ್ ಪಿನೋಚೆಯ ಮಿಲಿಟರಿ ಸರ್ವಾಧಿಕಾರ ಉದ್ಘಾಟಿಸಿ ನಂತರ ಲ್ಯಾಟಿನ್ ಅಮೆರಿಕಾದಲ್ಲೆಲ್ಲಾ ಹರಡಿದ ನವ-ಉದಾರೀಕರಣದ ಕಾಲು ಶತಮಾನದ ಅವಧಿಯಲ್ಲಿ ಕ್ಯೂಬಾ ಬಿಟ್ಟು ಲ್ಯಾಟಿನ್ ಅಮೆರಿಕಾದ ಎಲ್ಲಾ ದೇಶಗಳಲ್ಲಿ ಸುಮಾರು ಒಂದು ಟ್ರಿಲಿಯನ್(೧ ಲಕ್ಷ ಕೋಟಿ) ಡಾಲರುಗಳ ಸೂರೆ ನಡೆಯಿತು ಎಂದು ಅಂದಾಜು ಮಾಡಲಾಗಿದೆ.

ಈ ಆರ್ಥಿಕ ನೀತಿಗಳು ಲ್ಯಾಟಿನ್ ಅಮೆರಿಕಾದಲ್ಲಿ ತಂದ ಬದಲಾವಣೆಗಳು ಅಪಾರ. ಅರ್ಜೆಂಟೈನಾದ ಅಧ್ಯಕ್ಷ ಕಾರ್ಲೋಸ್ ಮೆನೆಮ್, ಬ್ರೆಜಿಲ್‌ನ ಫೆರ್ನಾಂಡೋ ಕಾರ್ಡೋಸೊ, ಮೆಕ್ಸಿಕೋದ ಅರ್ನೆಸ್ಟೋ ಝೆುಡಿಲ್ಲೋ ಮತ್ತು ಚಿಲಿಯ ಎಡ್ವರ್ಡೊ ಫೇಯಿ ಪ್ರಕಾರ ಅವರ ದೇಶಗಳು ಮೊದಲ ಜಗತ್ತನ್ನು ಪ್ರವೇಶಿಸಿವೆ. ಅಂದರೆ ಮುಂದುವರೆದ ದೇಶಗಳಾಗಿ ಬಿಟ್ಟಿವೆ. ಅದಕ್ಕೆ ನಿದರ್ಶನಗಳಾಗಿ ಅವರು ಆಧುನಿಕ ಶಾಪಿಂಗ್ ಮಾಲ್‌ಗಳನ್ನು, ಮೊಬೈಲ್ ಫೋನುಗಳನ್ನು, ಆಮದಾದ ಸರಕುಗಳಿಂದ ತುಂಬಿದ ಸೂಪರ್ ಮಾರ್ಕೆಟ್‌ಗಳನ್ನು, ಕಾರುಗಳಿಂದ ತುಂಬಿದ ರಸ್ತೆಗಳನ್ನು, ವಿದೇಶಗಳಿಂದ ದೊಡ್ಡ ಜೂಜುಕೋರರನ್ನು ಆಕರ್ಷಿಸುವ ಶೇರು ಮಾರುಕಟ್ಟೆಗಳನ್ನು ತೋರಿಸುತ್ತಾರೆ ಎನ್ನುತ್ತಾರೆ ಜೇಮ್ಸ್ ಪೆಟ್ರಾಸ್.

೧೯೭೦ರ ದಶಕದಲ್ಲಿ ಆರಂಭವಾದ ನವ-ಉದಾರೀಕರಣ ನೀತಿಗಳು ಸಮಾಜದ ಒಟ್ಟು ಜನಸಂಖ್ಯೆಯ ೧೦-೧೫ ಶೇಕಡಾದಷ್ಟಿರುವ ಒಂದು ವಿಭಾಗಕ್ಕೆ ಸಮೃದ್ದಿ ತಂದಿದೆ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಆದರೆ ಉಳಿದ ಶೇ.೮೫-೯೦ ಜನರಿಗೆ ಏನು ಕೊಟ್ಟಿದೆ ಎಂಬ ಪ್ರಶ್ನೆಯೂ ಏಳುತ್ತದೆ. ಆ ೨೫ ವರ್ಷಗಳಲ್ಲಿ ಲ್ಯಾಟಿನ್ ಅಮೆರಿಕಾದ ಹಲವು ದೇಶಗಳು ಸಾಲ ಬಿಕ್ಕಟ್ಟನ್ನು ಎದುರಿಸಿದವು. ೧೯೭೫ರಿಂದ ೧೯೮೨ರ ನಡುವೆ ವಾಣಿಜ್ಯ ಬ್ಯಾಂಕುಗಳು ಪಡೆದ ಸಾಲಗಳ ಪ್ರಮಾಣ ವಾರ್ಷಿಕ ೨೦.೪ ದರದಲ್ಲಿ ಏರಿತು. ವಿದೇಶ ಸಾಲದ ಮೊತ್ತ ೧೯೭೮ರಲ್ಲಿ ೭೫ ಬಿಲಿಯ ಡಾಲರ್ ಇದ್ದದ್ದು ೧೯೮೩ರಲ್ಲಿ ೩೧೫ ಬಿಲಿಯ ಡಾಲರುಗಳಾಯಿತು. ಅಂದರೆ ನಾಲ್ಕು ಪಟ್ಟು ಹೆಚ್ಚಿತು. ಇದು ಈ ಪ್ರದೇಶದ ಒಟ್ಟು ಆಂತರಿಕ ಉತ್ಪನ್ನದ ಅರ್ಧದಷ್ಟು. ಸಾಲ ಮರುಪಾವತಿ ಮತ್ತು ಬಡ್ಡಿಗಾಗಿ ತೆತ್ತ ಹಣ ೧೯೭೫ರಲ್ಲಿ ೧೨ ಬಿಲಿಯ ಡಾಲರ್ ಇದ್ದದ್ದು ೧೯೮೨ರಲ್ಲಿ ೬೬ ಬಿಲಿಯ ಡಾಲರಿಗೇರಿತು. ೧೯೮೨ರಲ್ಲಿ ಮೆಕ್ಸಿಕೋದ ಹಣಕಾಸು ಮಂತ್ರಿ ಜೀಸಸ್ ಸಿಲ್ವಾ ಹೆರ್ಝೋನ್ ತನ್ನ ದೇಶ ಸಾಲ ಮರುಪಾವತಿ ಮಾಡುವ ಸ್ಥಿತಿಯಲ್ಲಿಲ್ಲ ಎಂದು ಹೇಳಬೇಕಾಗಿಬಂತು. ಮತ್ತೆ ೧೯೯೪ರಲ್ಲಿ ಸಾಲ ಬಿಕ್ಕಟ್ಟು ಮೆಕ್ಸಿಕೋವನ್ನು ಆವರಿಸಿತು. ಆ ಸಂದರ್ಭದಲ್ಲಿ ೫೫ ಬಿಲಿಯ ಡಾಲರ್ ಬಂಡವಾಳ ದೇಶ ಬಿಟ್ಟೋಡಿತು. ಇದಕ್ಕೆ ಪ್ರತಿಯಾಗಿ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷ ಕ್ಲಿಂಟನ್ ಅವರು ೪೦ ಬಿಲಿಯ ಡಾಲರುಗಳ ಪ್ಯಾಕೇಜಿನ ಭರವಸೆ ನೀಡಿದರು. ಆದರೆ ಇದಕ್ಕೆ ಮೆಕ್ಸಿಕೋ ತೆರಬೇಕಾಗಿದ್ದ ಬೆಲೆ ಅಪಾರ. ಈ ಸಾಲಕ್ಕೆ ಒತ್ತೆಯಾಗಿ ಅದು ತನ್ನ ತೈಲ ರಫ್ತಿನ ಆದಾಯವನ್ನು ಹಾಗೂ ತನ್ನ ತೈಲ ನಿಕ್ಷೇಪಗಳನ್ನು ಒತ್ತೆ ಇಡಬೇಕಾದ ಅವಮಾನಕಾರೀ ಪರಿಸ್ಥಿತಿ ಬಂದಿತು.

೧೯೯೯-೨೦೦೨ರ ಅವಧಿಯಲ್ಲಿ ಅರ್ಜೆಂಟೈನಾ ಕೂಡಾ ಇಂತಹ ಪರಿಸ್ಥಿತಿ ಎದುರಿಸಬೇಕಾಯಿತು. ಇದರ ಪರಿಣಾಮವಾಗಿ ಅದು ಎರಡೇ ವಾರಗಳಲ್ಲಿ ನಾಲ್ಕು ಅಧ್ಯಕ್ಷರ ರಾಜೀನಾಮೆಯನ್ನು ಕಾಣಬೇಕಾಯಿತು.

೧೯೭೦ರ ದಶಕದಲ್ಲಿ ಮಿಲಿಟರಿ ಸರ್ವಾಧಿಕಾರ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳ ಆಳರಸರು ಆರಂಭಿಸಿದ ನವ-ಉದಾರವಾದಿ ನೀತಿಗಳು ‘ಕಲ್ಯಾಣ ಪ್ರಭುತ್ವ’ದ ಪರಿಕಲ್ಪನೆಯನ್ನು ನಾಶಮಾಡಿ ದುಡಿಯುವ ಜನಗಳ ಮೇಲೆ ದಾಳಿ ಮಾಡಿ ಬಂಡವಾಳ ಯಾವ ಲಂಗುಲಗಾಮಿಲ್ಲದೆ ವಿಸ್ತರಿಸಲು ಅವಕಾಶ ಮಾಡಿ ಕೊಟ್ಟವು. ಪೆಟ್ರೋಲಿಯಂ ಬೆಲೆಯೇರಿಕೆ ಮತ್ತಿತರ ಕಾರಣಗಳಿಂದ ಬಂಡವಾಳ ತುಂಬಿ ತುಳುಕುತ್ತಿದ್ದ ಅಮೆರಿಕಾ ಮತ್ತು ಇತರ ಮುಂದುವರೆದ ದೇಶಗಳ ಬ್ಯಾಂಕುಗಳು. ಹಣಕಾಸು ಸಂಸ್ಥೆಗಳು ಪುಷ್ಕಳವಾಗಿ ಲ್ಯಾಟಿನ್ ಅಮೆರಿಕಾ ದೇಶಗಳ ಸರಕಾರಗಳಿಗೆ, ಖಾಸಗಿಯವರಿಗೆ ಸಾಲ ಒದಗಿಸಿದವು. ಅವನ್ನು ಅರಗಿಸಿಕೊಳ್ಳಲಾಗದಾದ ಅವನ್ನು ಶೇರುಗಳಾಗಿ ಪರಿವರ್ತಿಸಿ ಹಲವು ಕಂಪನಿಗಳನ್ನು ಉದ್ದಿಮೆಗಳನ್ನು ವಶಪಡಿಸಿಕೊಂಡವು. ಅಥವಾ ಸಾಲ ತೀರಿಸಲಿಕ್ಕಾಗಿ ಮತ್ತೆ ಸಾಲ ನೀಡಿ ದವು. ಕಠಿಣ ಶರತ್ತುಗಳನ್ನು ಹಾಕಿದವು. ಲ್ಯಾಟಿನ್ ಅಮೆರಿಕಾದ ದೇಶಗಳು ಅನುಭವಿಸಿದ ಸಾಲ ಬಿಕ್ಕಟ್ಟಿಗೆ ಇವೆಲ್ಲಾ ಕಾರಣ ಎನ್ನಲಾಗಿದೆ.

ಇವೆಲ್ಲವುಗಳಿಗೆ ವಿಪರೀತ ಬೆಲೆ ತೆರಬೇಕಾಗಿ ಬಂದದ್ದು ಈ ದೇಶದ ಜನಸಾಮಾನ್ಯರು, ದುಡಿಮೆಯಿಂದಲೇ ಜೀವನ ಸಾಗಿಸಬೇಕಾದವರು. ಸರಕಾರ ಅಥವಾ ಪ್ರಭುತ್ವದ ಹಿಂದೆ ಸರಿಯುವಿಕೆ, ‘ಕಲ್ಯಾಣ ಪ್ರಭುತ್ವ’ದ ಪರಿಕಲ್ಪನೆಗೆ ವಿರೋಧ ನವ-ಉದಾರವಾದಿ ನೀತಿಗಳ ಜೀವಾಳ ಎನ್ನಲಾಗುತ್ತದೆ. ಲ್ಯಾಟಿನ್ ಅಮೆರಿಕಾ ದೇಶಗಳ ಆರ್ಥಿಕ ಆಯೋಗದ  (ಎಕ್ಲಾಕ್) ಪ್ರಕಾರ ಲ್ಯಾಟಿನ್ ಅಮೆರಿಕಾ ಪ್ರದೇಶ ವಿಶ್ವದಲ್ಲೇ ಅತಿ ಹೆಚ್ಚು ಅಸಮಾನತೆ ಯಿಂದ ಕೂಡಿದ ಪ್ರದೇಶ. ೧೯೮೦ರ ದಶಕದಲ್ಲಿ ಈ ಪ್ರದೇಶದಲ್ಲಿ ಬಡತನದ ಮಟ್ಟ ಶೇ.೩೫ರಿಂದ ೪೧ಕ್ಕೇರಿತು. ೧೯೯೦ರ ದಶಕದಲ್ಲಿ ಇದು ಸ್ವಲ್ಪ ಕಡಿಮೆಯಾಯಿತು ಎನ್ನಲಾಗುತ್ತದೆ. ಆದರೆ ಮೂಲ ಅಗತ್ಯಗಳ ಪೂರೈಕೆಯ ದೃಷ್ಟಿಯಿಂದ ಲೆಕ್ಕ ಹಾಕಿದರೆ ಜನಸಂಖ್ಯೆಯಲ್ಲಿ ಬಡವರ ಮಟ್ಟ ೬೦ ಶೇಕಡಾ ತಲುಪುತ್ತಿದೆ ಎಂದು ಅಂದಾಜು ಮಾಡಲಾಗಿದೆ.

‘ಹೊಸ ಆರ್ಥಿಕ ಮಾದರಿ’ಯಲ್ಲಿ ‘ಸಂರಚನಾ ಹೊಂದಾಣಿಕೆ ಕಾರ್ಯಕ್ರಮ(ಸ್ಯಾಪ್)ದಲ್ಲಿ ಉದ್ಯೋಗದ ಸ್ವರೂಪಗಳನ್ನು, ಉದ್ಯೋಗದ ಪರಿಸ್ಥಿತಿಗಳನ್ನು ಬಂಡವಾಳದ ವಿಸ್ತರಣೆಗೆ ಅನುಕೂಲವಾಗುವಂತೆ ಬದಲಿಸಲಾಯಿತು. ಉದ್ಯೋಗಗಳನ್ನು ರಕ್ಷಿಸುವ, ಕಾರ್ಮಿಕರನ್ನು ರಕ್ಷಿಸುವ ಶಾಸನಗಳು ಬಂಡವಾಳದ ವಿಸ್ತರಣೆಗೆ ಅಡ್ಡಿಯಾಗುತ್ತವೆ ಎಂಬ ಕಾರಣವೊಡ್ಡಿ ‘ಶ್ರಮ ಸುಧಾರಣೆ’ಗಳನ್ನು(ಲೇಬರ್ ರೀಫಾರ್ಮ್ಸ್) ತರಲಾಯಿತು. ಈ ಮೂಲಕ ಕಾರ್ಮಿಕರ ಸಂಘಟನೆಗಳನ್ನು ದುರ್ಬಲಗೊಳಿಸಲಾಯಿತು. ಬಂಡವಾಳದೊಂದಿಗೆ ಅವರ ಚೌಕಾಸಿಯ ಸಾಮರ್ಥ್ಯ ದುರ್ಬಲಗೊಂಡಿತು. ಇದರ ಒಟ್ಟು ಫಲವೆಂದರೆ ಈ ಎಲ್ಲಾ ದೇಶಗಳಲ್ಲಿ ರಾಷ್ಟ್ರೀಯ ಆದಾಯದಲ್ಲಿ ಕಾರ್ಮಿಕರ ಕೂಲಿ-ಸಂಬಳಗಳ ಪಾಲು ತೀವ್ರವಾಗಿ ಇಳಿಯಿತು. ೧೭ ವರ್ಷಗಳ ಮಿಲಿಟರಿ ಸರ್ವಾಧಿಕಾರ ಹಾಗೂ ‘ಮುಕ್ತ ಮಾರುಕಟ್ಟೆ’ ಸುಧಾರಣೆ’ಗಳ ನಂತರ ೧೯೮೯ರಲ್ಲಿ ಅದು ಶೇ.೧೯ಕ್ಕೆ ಇಳಿಯಿತು.

ಇದು ಕೇವಲ ಚಿಲಿಯ ಕಥೆಯಲ್ಲ. ಲ್ಯಾಟಿನ್ ಅಮೆರಿಕಾದಲ್ಲಿ ಸರಾಸರಿಯಾಗಿ ರಾಷ್ಟ್ರೀಯ ಆದಾಯದಲ್ಲಿ ಕೂಲಿ-ಸಂಬಳಗಳ ಪ್ರಮಾಣ ನವ-ಉದಾರವಾದಿ ನೀತಿಗಳ ಆರಂಭದಲ್ಲಿ ೪೦ ಇದ್ದದ್ದು ಎರಡು ದಶಕಗಳಲ್ಲಿ ೨೦ ಶೇ.ಕ್ಕಿಂತಲೂ ಕಡಿಮೆಯಾಯಿತು. ೧೯೭೦ರಿಂದ ೧೯೮೯ರ ನಡುವೆ ಅರ್ಜೆಂಟೈನದಲ್ಲಿ ಇದು ೪೦.೯ಶೇ.ದಿಂದ ೨೪.೯ ಪೆರುವಿನಲ್ಲಿ ೪೦ ಶೇ.ದಿಂದ ೨೫.೫ ಶೇ.ಕ್ಕೆ ಇಳಿಯಿತು. ೧೯೯೨ರಲ್ಲಿ ಇದು ೧೬.೮ ಶೇ.ಕ್ಕೆ ಇಳಿಯಿತು. ಅರ್ಜೆಂಟೈನಾ ಮತ್ತು ವೆನೆಜುಲಾದಲ್ಲಿ ೧೯೯೦ರ ದಶಕದಲ್ಲಿ ವೇತನಮಟ್ಟ ೧೯೭೦ಕ್ಕಿಂತ ಕೆಳಗಿತ್ತು. ಮೆಕ್ಸಿಕೋದಲ್ಲಿ ೧೯೯೪ರ ಬಿಕ್ಕಟ್ಟಿನ ವೇಳೆಗೆ ವೇತನಮಟ್ಟ ೧೯೮೦ರ ಮೌಲ್ಯದ ೪೦ ಶೇ.ದಷ್ಟು ಮಾತ್ರ ಇತ್ತು ಎಂದು ಬ್ಯಾಂಕ್ ಆಫ್ ಮೆಕ್ಸಿಕೋ ಅಂದಾಜು ಮಾಡಿತ್ತು.

೧೯೭೫ರಲ್ಲಿ ಜನಸಂಖ್ಯೆಯಲ್ಲಿ ತುತ್ತ ತುದಿಯ ೫ಶೇ. ಮತ್ತು ಅತಿ ಕೆಳಗಿನ ೫ ಶೇ. ಜನಗಳ ಆದಾಯದ ಅನುಪಾತ ೮:೧ ಇತ್ತು. ೧೯೯೭ರ ವೇಳೆಗೆ ಇದು ೨೫:೧ ಆಯಿತು. ಅಂದರೆ ಅಸಮಾನತೆ ಮೂರು ಪಟ್ಟು ಹೆಚ್ಚಿತು. ಬ್ರೆಜಿಲ್ ನ ಮೇಲಿನ ೧೦ ಶೇ. ಮಂದಿಯ ಆದಾಯ ಕೆಳಗಿನ ೧೦ ಶೇ.ಮಂದಿಯ ಆದಾಯದ ೪೪ ಪಟ್ಟು. ಲ್ಯಾಟಿನ್ ಅಮೆರಿಕಾ ದೇಶಗಳಲ್ಲಿನ ಅಸಮಾನತೆಯ ಚಿತ್ರ ಬಹಳವೇನೂ ಭಿನ್ನವಾಗಿರಲಿಲ್ಲ. ‘ಕಳಕೊಂಡ ದಶಕ’ ಎಂದೇ ಕೆಲವು ಆರ್ಥಿಕತಜ್ಞರು ಇದನ್ನು ವರ್ಣಿಸಿದ್ದಾರೆ.