ವರ್ಣಭೇದ ನೀತಿ

ವರ್ಣಭೇದ ನೀತಿಯೆಂದರೆ, ಸಮಾಜದ ಒಂದು ವರ್ಗವನ್ನು ಹುಟ್ಟಿನ, ಜನಾಂಗದ ಅಥವಾ ವರ್ಣದ ಆಧಾರದ ಮೇಲೆ ಪ್ರತ್ಯೇಕವಾಗಿಡುವುದು. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಎರಡು ರೀತಿಯ ವರ್ಣಭೇದ ನೀತಿ ಜಾರಿಯಲ್ಲಿತ್ತು. ಅವುಗಳೆಂದರೆ, ಕಾನೂನು ಮಾನ್ಯತೆ ಪಡೆದ ವರ್ಣಭೇದ ಮತ್ತು ಸಾಮಾಜಿಕ ಆಚರಣೆಯಾಗಿದ್ದ ವರ್ಣ ಭೇದ ನೀತಿ, ಕಾನೂನು ಮಾನ್ಯತೆ ಪಡೆದ ವರ್ಣಭೇದವು ಸ್ಥಳೀಯ, ರಾಜ್ಯದ ಅಥವಾ ರಾಷ್ಟ್ರದ ಕಾನೂನುಗಳು ಜನಾಂಗೀಯ ವರ್ಣಭೇದವನ್ನು ಅನುಸರಿಸುವುದಕ್ಕೆ ಆಸ್ಪದ ಕೊಡುತ್ತವೆ. ಇಂತಹ ಭೇದವನ್ನು, ಪ್ರತ್ಯೇಕತೆಯನ್ನು ಅಮೆರಿಕಾದಲ್ಲಿ ೧೯೬೦ರ ಮಧ್ಯದಲ್ಲಿ ನಿಷೇಧಿಸಲಾಯಿತು. ಆದರೆ ಒಂದು ಪ್ರಾಂತ್ಯದ ಆರ್ಥಿಕ ವ್ಯವಸ್ಥೆ, ಸಾಮಾಜಿಕ ಆಚರಣೆಗಳು, ರಾಜಕೀಯ ಕಾರ್ಯಗಳು ಅಥವಾ ಸಾರ್ವಜನಿಕ ನೀತಿಗಳು ವರ್ಣಭೇದ ನೀತಿಯನ್ನು ಪುಷ್ಟಿಗೊಳಿಸುತ್ತವೆ. ಇಂಥವು ವರ್ಣಭೇದವನ್ನು ಕಾನೂನು ಪ್ರಕಾರವಾಗಿ ರಾಜ್ಯಗಳು ನಿಷೇಧಿಸಿದ್ದರೂ ಮುಂದುವರೆದಿತ್ತು.

ವರ್ಣಭೇದ ನೀತಿಯು ಅಮೆರಿಕಾಕ್ಕೆ ಸೀಮಿತಗೊಂಡಿರದೇ ಅದು ಪ್ರಪಂಚದ ವಿವಿಧ ಭಾಗಗಳಲ್ಲಿ ವಿವಿಧ ರೂಪದಲ್ಲಿತ್ತು. ಉದಾಹರಣೆಗೆ ಯುರೋಪಿನಲ್ಲಿ ೧೫೦೦ರಿಂದ ೧೮೦೦ ರವರೆಗೆ ಯಹೂದಿಗಳು ಪ್ರತ್ಯೇಕವಾಗಿ ವಾಸಿಸುವಂತೆ ಬಲಾತ್ಕಾರ ಮಾಡಲಾಗಿತ್ತು. ೧೯೩೦ರಲ್ಲಿ ಜರ್ಮನಿಯು ಯಹೂದಿಗಳನ್ನು ಮತ್ತು ಜಿಪ್ಸಿಗಳನ್ನು ಪ್ರತ್ಯೇಕವಾಗಿಡಲಾಗಿತ್ತು. ಜರ್ಮನಿಯ ಮೂರನೆಯ ರೇಚ್ ಹಿಟ್ಲರ್‌ನ ಆಳ್ವಿಕೆಯಲ್ಲಿ ಪ್ರತ್ಯೇಕತೆಯನ್ನು ದಾಟಿ ಯಹೂದಿಗಳನ್ನು, ಜಿಪ್ಸಿಗಳನ್ನು ಮತ್ತಿತರರನ್ನು ದೇಶದಿಂದ ಹೊರಹಾಕುವುದು, ಹತ್ಯೆ ಮಾಡುವುದು ಮತ್ತು ವಿವಿಧ ರೀತಿಯ ಹಿಂಸೆಗೊಳಪಡಿಸುವುದು ಸಾಮಾನ್ಯವಾಗಿತ್ತು. ಜಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಕಟ್ಟುನಿಟ್ಟಿನ ಕಾನೂನುಗಳನ್ನು ಮಾಡಿ ಸ್ಥಳೀಯ ಮತ್ತು ಯುರೋಪಿನ ಮೂಲದರವನ್ನು ಪ್ರತ್ಯೇಕವಾಗಿ ಇಡಲಾಗಿತ್ತು. ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯು ಅಪಾರ್ಥೈಡ್ ಎಂದು ಪ್ರಸಿದ್ದಿಯಾಗಿದ್ದು, ಅದನ್ನು ೧೯೯೦ರ ಮೊದಲ ಭಾಗದಲ್ಲಿ ನಿಷೇಧಿಸಲಾಯಿತು.

ಅಮೆರಿಕಾದಲ್ಲಿ ಕಾನೂನು ಮಾನ್ಯತೆ ಪಡೆದ ವರ್ಣಭೇದ ನೀತಿಯು ಜರ್ಮನಿಯಲ್ಲಿದ್ದ ವರ್ಣಭೇದ ನೀತಿಯಷ್ಟು ಕೆಟ್ಟದಾಗಿರಲಿಲ್ಲ ಅಥವಾ ಆ ಮಟ್ಟಕ್ಕೆ ಮುಟ್ಟಿರಲಿಲ್ಲ. ಇಲ್ಲಿಯ ವರ್ಣಭೇದ ನೀತಿಯು ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಸಂಸ್ಥಾಪನೆಯೊಂದಿಗೆ ಪ್ರಾರಂಭವಾಗಿ ನಂತರದ ೮೦ ವರ್ಷಗಳಲ್ಲಿ ದಕ್ಷಿಣದ ರಾಜ್ಯಗಳಲ್ಲಿ ಹೆಚ್ಚಾಗಿ ಪ್ರಸಾರ ಗೊಂಡಿತ್ತು. ಆದರೆ ನ್ಯಾಯಾಲಯ ಮತ್ತು ಅಮೆರಿಕಾ ಕಾಂಗ್ರೆಸ್ ೧೯೫೦ ಮತ್ತು ೧೯೬೦ರಲ್ಲಿ ಕಾನೂನು ಮಾನ್ಯತೆಗೊಂಡಿದ್ದ ವರ್ಣಭೇದ ನೀತಿಯನ್ನು ನಿಷೇಧಿಸಲಾಯಿತು. ಇಪ್ಪತ್ತನೆಯ ಶತಮಾನದ ಕೊನೆಯ ಭಾಗದಲ್ಲಿ ಸಾಂಪ್ರದಾಯಿಕವಾಗಿ ಆಚರಿಸುತ್ತಿದ್ದ ವರ್ಣಭೇದ ನೀತಿಯು ಅಮೆರಿಕಾದ ಹಲವಾರು ಭಾಗಗಳಲ್ಲಿ ಸಮಸ್ಯೆಯಾಗಿ ಉಳಿಯಿತು. ಈ ರೀತಿಯ ವರ್ಣಭೇದ ನೀತಿಯು ಹಲವಾರು ಕಾರಣಗಳಿಂದ ಉಳಿದುಕೊಂಡಿತ್ತು. ಅವುಗಳೆಂದರೆ, ನಿವೇಶನಗಳ ಮಾದರಿ, ಆರ್ಥಿಕ ಅಂಶಗಳು, ವೈಯಕ್ತಿಕ ಆಯ್ಕೆ, ಪಟ್ಟಣ ಗಳಿಂದ ಬಿಳಿಯರ ಪಲಾಯನ, ಮನೆಯ ಯಜಮಾನರಿಂದ ತಾರತಮ್ಯತೆ, ಮತ್ತಿತರ ಸಂಘ ಸಂಸ್ಥೆಗಳು. ಇದರಿಂದಾಗಿ ಇಂತಹ ಪ್ರತ್ಯೇಕತೆಯು ಅಕ್ಕಪಕ್ಕದವರಲ್ಲಿ, ಶಾಲೆಗಳಲ್ಲಿ, ಔತಣಕೂಟಗಳಲ್ಲಿ ಮತ್ತಿತರ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಬೆಳೆಯ ತೊಡಗಿತು.

ಕಾನೂನು ಮಾನ್ಯತೆ ಪಡೆದ ವರ್ಣಭೇದ ನೀತಿಯು ದಕ್ಷಿಣದ ರಾಜ್ಯಗಳಲ್ಲಿ ಸಾಮಾನ್ಯವಾಗಿ ಕಂಡುಬಂದರೂ ಅದರ ಪಾಲನೆ ಮತ್ತು ಲಕ್ಷಣಗಳನ್ನು ಅಮೆರಿಕಾದ್ಯಂತ ಕಾಣಬಹುದಿತ್ತು. ಅಮೆರಿಕಾದಲ್ಲಿ ಪ್ರಪ್ರಥಮ ಬಾರಿಗೆ ಇದರ ವಿರುದ್ಧ ಕಾನೂನಿನ ಸವಾಲೆಸೆದವರೆಂದರೆ(೧೮೪೯) ಮಸ್ಸಾಚುಸೆಟ್ಸ್‌ನ ಬೆಂಜಮಿನ್ ಎಫ್ ರಾಬರ್ಟ್ ಎಂಬ ನಿಗ್ರೋ ಜನಾಂಗದವನು. ಇವನು ತನ್ನ ಮಗಳು ಸಾರಾಳನ್ನು ದೂರದ ಪ್ರತ್ಯೇಕ ಶಾಲೆಗೆ ಕಳುಹಿಸುವ ಬದಲು ಹತ್ತಿರದ ಪ್ರಾಥಮಿಕ ಶಾಲೆಗೆ ಪ್ರವೇಶವನ್ನು ಕೋರಿ ಬೋಸ್ಟನ್ ಪಟ್ಟಣದ ಮೇಲೆ ದಾವೆಯನ್ನು ನ್ಯಾಯಾಲಯದಲ್ಲಿ ಹೂಡಿದನು. ರಾಬರ್ಟ್ ಮೊರೀಸ್ ಮತ್ತು ಚಾರ್ಲ್ಸ್ ಸುಮ್ನರ್ ಎಂಬ ಪ್ರಸಿದ್ಧ ವಕೀಲರು ಅವನ ಪರ ವಾದಿಸಿದ್ದರು. ಮಸ್ಸಾಚುಸೆಟ್ಸ್‌ನ ಶ್ರೇಷ್ಠ ನ್ಯಾಯಾಲಯದಲ್ಲಿ ಸುಮ್ನರ್ ಕರಿಯರಿಗೆ ಪ್ರತ್ಯೇಕತೆಯಿಂದಾಗುವ ಮಾನಸಿಕ ನೋವುಗಳನ್ನು ಮತ್ತು ಕೀಳರಿಮೆಯನ್ನು ಕುರಿತು ವಾದಿಸಿದ್ದನು. ರಾಬರ್ಟ್ ಈ ಸಂದರ್ಭದಲ್ಲಿ ಸೋತರೂ ಸಹ ಮಸ್ಸಾಚುಸೆಟ್ಟಿನಲ್ಲಿದ್ದ ಕರಿಯರು, ಶಾಸಕಾಂಗದಲ್ಲಿ ೧೮೫೫ರಲ್ಲಿ ವರ್ಣಭೇದ ನೀತಿಯನ್ನು ನಿಷೇಧಿಸಿದ್ದರಿಂದ, ಜಯ ಗಳಿಸುವಂತಾಯಿತು. ಇವರು ನಿರ್ಮೂಲನಾ ಸಂಘಟನೆಗಳೊಡನೆ ಜೊತೆಗೂಡಿ ಸಾರ್ವಜನಿಕ ಸ್ಥಳಗಳಲ್ಲಿ, ವಾಹನಗಳಲ್ಲಿ ಕರಿಯರಿಗೆ ಆಗುತ್ತಿದ್ದ ಕಿರುಕುಳವನ್ನು ಮತ್ತು ಹಿಂಸೆಯನ್ನು ವಿರೋಧಿಸ ಲಾರಂಭಿಸಿದರು.

ಅಮೆರಿಕಾ ಸರಕಾರವು ಪ್ರಾರಂಭದಿಂದಲೂ ವರ್ಣಭೇದ ನೀತಿಯನ್ನು ಅನುಸರಿಸಲು ಕಾನೂನು-ನೀತಿಗಳನ್ನು ಮಾಡುತಿತ್ತು. ಅಂತರ್ಯುದ್ಧದ(೧೮೬೦-೧೮೬೫) ಮೊದಲು ಕರಿಯರನ್ನು ರಾಷ್ಟ್ರದ ಸೈನ್ಯಕ್ಕೆ, ನೌಕಾದಳಕ್ಕೆ ಮತ್ತಿತರ ಸೇವೆಗಳಿಗೆ ಸೇರಿಸುತ್ತಿರಲಿಲ್ಲ. ಹಾಗೂ ಅವರಿಗೆ ಪರವಾನಗಿ ನೀಡುತ್ತಿರಲಿಲ್ಲ. ೧೮೫೭ರ ಡ್ರೆಡ್ ಸ್ಕಾಟ್ ಕೇಸಿನಲ್ಲಿ ಅಮೆರಿಕಾದ ಶ್ರೇಷ್ಠ ನ್ಯಾಯಾಲಯವು ಕರಿಯರು ಅಮೆರಿಕದ ಪ್ರಜೆಗಳಿಗೆ ಸರಿಸಮಾನರಲ್ಲ ವೆಂದು ಘೋಷಿಸಿತು. ಅಂತರ್ಯುದ್ಧದ ಪ್ರಾರಂಭದಲ್ಲಿ ಅಮೆರಿಕಾ ಸರಕಾರವು ಕರಿಯರನ್ನು ಸೇನೆಗೆ ಸೇರಿಸಿಕೊಳ್ಳಲು ನಿರಾಕರಿಸಿತು. ಆದರೆ ೧೮೬೨ರಲ್ಲಿ ಸರಕಾರವು ಪ್ರತ್ಯೇಕ ಪ್ರದೇಶಗಳಲ್ಲಿ ಕರಿಯರು ಸೇನೆಯನ್ನು ಸೇರಿ ಬಿಳಿಯ ಅಧಿಕಾರಿಗಳಿಂದ ನಿಯಂತ್ರಿಸಲ್ಪಡುವುದಕ್ಕೆ ಅವಕಾಶ ಮಾಡಿಕೊಟ್ಟಿತು. ಅಂತರ್ಯುದ್ಧದ ಕೊನೆಯಲ್ಲಿ ಸುಮಾರು ೨,೦೦,೦೦೦ ಕರಿಯರು ಅಮೆರಿಕಾದ ಸೈನ್ಯ ಮತ್ತು ನೌಕಾಪಡೆಗಳಲ್ಲಿ ಸೇವೆ ಸಲ್ಲಿಸಿದ್ದರು. ಅಧ್ಯಕ್ಷ ಅಬ್ರಹಾಂ ಲಿಂಕನ್ನರು ಸಾರ್ವಜನಿಕವಾಗಿ ಕರಿಯರಿಗೆ ಮತ ಕೊಡುವಂತೆ ಕರೆಯಿತ್ತರು. ರಿಪಬ್ಲಿಕನ್ ಪಕ್ಷದಲ್ಲಿದ್ದ ಕೆಲವು ಮುಖಂಡರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಎಲ್ಲಾ ರೀತಿಯ ಜನಾಂಗೀಯ ತಾರತಮ್ಯಗಳನ್ನು ನಿಷೇಧಿಸುವಂತೆ ಪ್ರಯತ್ನಿಸಿದರು. ಅಂತರ್ಯುದ್ಧದ ನಂತರ ಅಮೆರಿಕಾದ ಸಂವಿಧಾನಕ್ಕೆ ಮೂರು ತಿದ್ದುಪಡಿಗಳನ್ನು ಮಾಡಲಾಯಿತು. ಅವುಗಳೆಂದರೆ, ೧೮೬೫ರಲ್ಲಿ ೧೩ನೆಯ ತಿದ್ದುಪಡಿ ಮಾಡಿ ಅದರ ಮುಖಾಂತರ ಗುಲಾಮಗಿರಿಯನ್ನು ಕೊನೆಗೊಳಿಸುವುದು. ೧೪ನೆಯ ತಿದ್ದುಪಡಿಯನ್ನು ೧೮೬೮ರಲ್ಲಿ ಮಾಡಿ ಕರಿಯರಿಗೆ ಅಮೆರಿಕಾದ ಪೌರತ್ವವನ್ನು ನೀಡುವುದು ಹಾಗೂ ರಾಜ್ಯದ ಕಾನೂನುಗಳು ಏನಾದರು ಕರಿಯರಿಗೆ ಸಮಾನ ರಕ್ಷಣೆ ನೀಡದಿದ್ದಲ್ಲಿ ಅವುಗಳನ್ನು ಅನೂರ್ಜಿತಗೊಳಿಸುವುದು ಮತ್ತು ೧೫ನೇ ತಿದ್ದುಪಡಿಯನ್ನು ೧೮೭೦ರಲ್ಲಿ ಮಾಡಿ ಮತ ಚಲಾವಣೆಯಲ್ಲಿ ಜನಾಂಗೀಯ ತಾರತಮ್ಯವನ್ನು ನಿಷೇಧಿಸ ಲಾಯಿತು. ಅಂತರ್ಯುದ್ಧದ ನಂತರ ಉತ್ತರದ ಬಹುತೇಕ ರಾಜ್ಯಗಳು ಪ್ರತ್ಯೇಕತೆಯನ್ನು ನಿಷೇಧಿಸಿದವು. ಆದರೂ ೧೯೪೦ರವರೆಗೂ ಉತ್ತರ ರಾಜ್ಯದ ಕೆಲವು ಪ್ರದೇಶಗಳಲ್ಲಿ ಕಾನೂನು ಮಾನ್ಯತೆ ಪಡೆದ ಪ್ರತ್ಯೇಕತೆಯು ಮುಂದುವರಿದಿತ್ತು. ಪಶ್ಚಿಮದ ರಾಜ್ಯಗಳಲ್ಲಿ ೧೯ ಮತ್ತು ೨೦ನೆಯ ಶತಮಾನದಲ್ಲಿಯೂ ಹಿಸ್ಪಾನಿಕ್ ಮತ್ತು ಏಷ್ಯಾ ಮೂಲದವರು ವರ್ಣಭೇದ ನೀತಿಯನ್ನು ಎದುರಿಸುತ್ತಿದ್ದರು. ೧೯೦೬ರಲ್ಲಿ ಜಪಾನ್ ಮತ್ತು ಚೀನಿ ವಿದ್ಯಾರ್ಥಿಗಳನ್ನು ಪ್ರತ್ಯೇಕ ವಾಗಿಡಲಾಗಿತ್ತು. ಕ್ಯಾಲಿಫೋರ್ನಿಯಾದಲ್ಲಿಯೂ ಸಹ ೧೯೪೦ರ ದಶಕದಲ್ಲಿ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಲ್ಲಿ ಜಪಾನ್, ಚೀನಾ, ಭಾರತ, ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿಡಲಾಗಿತ್ತು.

ಅಂತರ್ಯುದ್ಧದ ನಂತರ ಕಾನೂನುಬದ್ಧ ಪ್ರತ್ಯೇಕತೆಯು ದಕ್ಷಿಣದ ರಾಜ್ಯಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿತ್ತು. ಅಂತರ್ಯುದ್ಧಕ್ಕೆ ಮುಂಚೆ ಪ್ರತ್ಯೇಕತೆಯ ಅವಶ್ಯಕತೆ ಅಷ್ಟಾಗಿರಲಿಲ್ಲ. ಏಕೆಂದರೆ ಶೇ.೯೫ರಷ್ಟು ಗುಲಾಮರೆಲ್ಲರೂ ಕರಿಯರಾಗಿದ್ದರು. ಆದರೆ ಮುಕ್ತಿಗೊಂಡ ಕರಿಯ ಅಲ್ಪಸಂಖ್ಯಾತರು ಪ್ರತ್ಯೇಕತೆಯ ಪಿಡುಗನ್ನು ಶಾಲೆಗಳಲ್ಲಿ, ಸಿನಿಮಾ ಮಂದಿರಗಳಲ್ಲಿ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಎದುರಿಸಬೇಕಾಯಿತು. ಅಂತರ್ಯುದ್ಧದ ನಂತರ ದಕ್ಷಿಣ ರಾಜ್ಯಗಳ ಶಾಸನ ಸಭೆಯು ರಾಜ್ಯದಿಂದ ರಾಜ್ಯಗಳಿಗೆ ಭಿನ್ನವಾಗಿದ್ದು, ಸಾಮಾನ್ಯವಾಗಿ ಕರಿಯರ ವೃತ್ತಿಗಳು ಮತ್ತು ಆಸ್ತಿಗಳ ಮೇಲೆ ಕಡಿವಾಣ ಹಾಕಲಾಗಿತ್ತು. ಇದಲ್ಲದೇ ನಿರುದ್ಯೋಗಿ ಕರಿಯರು ಬಿಳಿಯರ ಮನೆಗಳಲ್ಲಿ ಕಡ್ಡಾಯವಾಗಿ ಕೆಲಸ ಮಾಡುವಂತೆ ಮಾಡಲಾಯಿತು. ಉದಾಹರಣೆಗೆ ಮಿಸ್ಸಿಸಿಪ್ಪಿಯಲ್ಲಿ ಕರಿಯರು ಪಟ್ಟಣಗಳಲ್ಲಿ ತಮ್ಮ ಮನೆಗಳನ್ನು ಬಾಡಿಗೆಗೆ ಕೊಟ್ಟರೆ, ಬಿಳಿಯರಿಗೆ ಸೇವೆ ಮಾಡಲು ನಿರಾಕರಿಸಿದರೆ ಅಂತಹವರಿಗೆ ದಂಡ ವಿಧಿಸುವುದರ ಜೊತೆಗೆ ಬಂಧಿಸಲಾಗುತ್ತಿತ್ತು. ಈ ಕ್ರಮಗಳೆಲ್ಲವೂ ಕರಿಯರು ಪ್ರತ್ಯೇಕ ನೆಲೆಗಳನ್ನು ಸ್ಥಾಪಿಸುವುದಕ್ಕೆ ಅನುವು ಮಾಡಿಕೊಟ್ಟರು. ಇವರಿಗೆ ಪ್ರತ್ಯೇಕ ಶಾಲೆ, ನ್ಯಾಯಾಲಯ ಮತ್ತು ನ್ಯಾಯಾಧೀಶರುಗಳನ್ನು ನೇಮಿಸುವುದಕ್ಕೆ ಕಾನೂನುಗಳನ್ನು ರಚಿಸಲಾಯಿತು. ಇಂತಹ ಕರಿಯರಿಗೆ ಮಾಡಿದ ಕಾನೂನುಗಳು ಹೊಸದಾಗಿ ಗುಲಾಮಗಿರಿಯಿಂದ ಮುಕ್ತಗೊಂಡ ಕರಿಯರು ತಮ್ಮ ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನಗಳನ್ನು ಹೆಚ್ಚಿಸಿಕೊಳ್ಳಲು ತೊಡಕಾಗಿದ್ದವು.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಮೆರಿಕಾದ ಕಾಂಗ್ರೆಸ್ ೧೮೬೬ರಲ್ಲಿ ದಕ್ಷಿಣದ ರಾಜ್ಯಗಳನ್ನು ಪುನರ್ ನಿರ್ಮಾಣ ಮಾಡಲು ಮುಂದಾಯಿತು. ಅದರಲ್ಲೂ ರಿಪಬ್ಲಿಕನ್ ಪಕ್ಷದ ಸದಸ್ಯರು ಹೊಸದಾಗಿ ಮುಕ್ತಗೊಂಡ ಕರಿಯರನ್ನೊಳಗೊಂಡ ಸಮಾಜವನ್ನು ಕಟ್ಟಲು ಪಣತೊಟ್ಟರು. ದಕ್ಷಿಣದ ರಾಜ್ಯಗಳನ್ನು ೧೮೬೫ರಿಂದ ೧೮೭೭ರ ಅವಧಿಯಲ್ಲಿ ಪುನಾರಚಿಸುವಾಗ ರಿಪಬ್ಲಿಕನ್ ಪಕ್ಷವು ದಕ್ಷಿಣದ ರಾಜ್ಯಗಳ ಸರಕಾರವನ್ನು ಅಥವಾ ಆಡಳಿತವನ್ನು ತಾನೇ ನೇರವಾಗಿ ನಿಯಂತ್ರಿಸುತ್ತಿತ್ತು. ಇಂತಹ ಸಮಯದಲ್ಲಿ ಕರಿಯರು ತಮ್ಮ ಪ್ರತಿನಿಧಿಗಳನ್ನು ಆರಿಸುವ ರಾಜಕೀಯ ಅಧಿಕಾರವನ್ನು ಗಳಿಸಿಕೊಂಡರು. ೧೮೬೮ರ ಹೊತ್ತಿಗೆ ದಕ್ಷಿಣದಲ್ಲಿ ಬಂದ ಹೊಸ ಶಾಸಕಾಂಗವು ಇದುವರೆಗೂ ಕರಿಯರನ್ನು ಪ್ರತ್ಯೇಕಿಸಲು ಮತ್ತು ಅವರ ಹಕ್ಕುಗಳನ್ನು ಕಿತ್ತುಕೊಳ್ಳಲು ಮಾಡಿದ್ದ ಕಾನೂನುಗಳೆಲ್ಲವನ್ನೂ ಹಿಂತೆಗೆದುಕೊಳ್ಳಲಾಯಿತು ಅಥವಾ ರದ್ದುಪಡಿಸಲಾಯಿತು. ಅದೇ ಸಮಯದಲ್ಲಿ ಕಾಂಗ್ರೆಸ್ ಹಿಂದೆ ಇದ್ದ ಗುಲಾಮರ ಹಕ್ಕುಗಳನ್ನು ಕಾಪಾಡಲು ಮುಂದಾಯಿತು. ಇಂತಹ ಪುನಾರಚನೆಯಲ್ಲಿ ಪ್ರಮುಖವಾದವುಗಳೆಂದರೆ ೧೮೬೬ರ ನಾಗರಿಕ ಹಕ್ಕು ಸಂಹಿತೆ, ಸಂವಿಧಾನದ ೧೪ ಮತ್ತು ೧೫ನೆಯ ತಿದ್ದುಪಡಿ ಮತ್ತು ಹಲವಾರು ಕಾಯಿದೆಗಳನ್ನು ಹೊಸ ತಿದ್ದುಪಡಿಗಳನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಲಾಯಿತು. ೧೮೭೫ರಲ್ಲಿ ಕಾಂಗ್ರೆಸ್ ಒಂದು ಹೊಸ ನಾಗರಿಕ ಹಕ್ಕು ಸಂಹಿತೆಯನ್ನು ಜಾರಿಗೊಳಿಸಿ ಸಿನಿಮಾ ಮಂದಿರ ಗಳಲ್ಲಿ, ಹೋಟೆಲುಗಳಲ್ಲಿ ಮತ್ತು ಶಾಲೆಗಳಲ್ಲಿ ವರ್ಣಭೇದ ನೀತಿಯನ್ನು ನಿಷೇಧಿಸಲಾಯಿತು.

ಈ ಬೆಳವಣಿಗೆಗಳ ನಡುವೆ ಅಂದರೆ ೧೮೭೭ರಲ್ಲಿ ಡೆಮಾಕ್ರಾಟಿಕ್ ಪಕ್ಷವು ದಕ್ಷಿಣದ ರಾಜ್ಯಗಳಲ್ಲಿ ಅಧಿಕಾರವನ್ನು ಹಿಡಿದು ಪುನಾರಚನೆಯ ಕಾರ್ಯಗಳನ್ನು ಅಂತ್ಯಗೊಳಿಸಿತು. ಕರಿಯರು ಸಂಪಾದಿಸಿದ್ದ ಹಕ್ಕುಗಳಾದ ರಾಜಕೀಯ ಅಧಿಕಾರ, ಮತ ಚಲಾವಣೆಯ ಅಧಿಕಾರ ಮತ್ತು ಸಾಮಾಜಿಕ ಸಮಾನತೆ ಇವೆಲ್ಲವುಗಳನ್ನು ಹಿಂತೆಗೆದುಕೊಳ್ಳಲಾಯಿತು. ಡೆಮಾಕ್ರಾಟಿಕ್ ಪಕ್ಷದ ಅಧಿಕಾರಾವಧಿಯಲ್ಲಿ ಇದುವರೆಗೂ ಕರಿಯರಿಗೆ ನೀಡಿದ್ದ ಎಲ್ಲಾ ಸೌಲಭ್ಯಗಳನ್ನು ವಾಪಸ್ಸು ತೆಗೆದುಕೊಂಡು ಮತ್ತೆ ತಾರತಮ್ಯವನ್ನು ವಿಧಿಸಲಾಯಿತು. ಈ ಕಾನೂನುಗಳು ಎರಡು ಪ್ರಮುಖ ಗುರಿಗಳನ್ನು ಸಾಧಿಸಿತು. ಅವುಗಳೆಂದರೆ, ಕರಿಯರ ಮತದ ಹಕ್ಕುಗಳನ್ನು ಮೊಟಕುಗೊಳಿಸುವುದು ಮತ್ತು ವರ್ಣಭೇದ ನೀತಿಯನ್ನು ಅನುಷ್ಠಾನಗೊಳಿಸಿ ಕರಿಯರ ರಾಜಕೀಯ ಹಕ್ಕನ್ನು ಕಿತ್ತುಕೊಳ್ಳುವುದು. ಇಂತಹ ಕ್ರಮ ಗಳಿಂದಾಗಿ ಕರಿಯರು ಮತ ಹಾಕದಂತೆ ಮಾಡಿದರು. ಇದನ್ನು ಸಾಧಿಸಲು ಮತಗಟ್ಟೆಯ ಸುಂಕ, ಸಾಕ್ಷರತೆಯ ಜ್ಞಾನ ಮುಂತಾದವುಗಳನ್ನು ಮುಂದೊಡ್ಡಿ ಕರಿಯರು ಮತಗಟ್ಟೆಗೆ ಬಾರದಂತೆ ತಡೆಗಟ್ಟಲಾಯಿತು. ಡೆಮೊಕ್ರಾಟಿಕ್ ಪಕ್ಷವು ತನ್ನ ಆಡಳಿತಾವಧಿಯಲ್ಲಿ ಯಶಸ್ವಿಯಾಗಿ ಕರಿಯರು ಮತ್ತು ಬಿಳಿಯರಿಗೆ ಪ್ರತ್ಯೇಕ ಶಾಲೆಗಳು ಮತ್ತಿತರ ಸೌಲಭ್ಯಗಳನ್ನು ನೀಡಿ ಪ್ರತ್ಯೇಕತೆಯನ್ನು ಪ್ರತಿ ಕ್ಷೇತ್ರದಲ್ಲೂ ನಿರ್ಮಾಣ ಮಾಡಿದರು.

ಇದರೊಂದಿಗೆ ಶ್ರೇಷ್ಠ ನ್ಯಾಯಾಲಯವು ಕೂಡ ಜನಾಂಗೀಯ ಸಮಾನತೆಯ ವಿಷಯದಲ್ಲಿ ಹಿಂತೆಗೆಯಿತು. ೧೮೮೩ರ ನಾಗರಿಕ ಹಕ್ಕುಗಳ ವ್ಯಾಜ್ಯದಲ್ಲಿ ಅಮೆರಿಕಾದ ಕಾಂಗ್ರೆಸ್ಸಿಗೆ ತಾರತಮ್ಯದ ವಿಷಯದಲ್ಲಿ ಭಾಗಿಯಾಗಲು ಯಾವುದೇ ಆಧಿಕಾರವಿಲ್ಲವೆಂದು ತೀರ್ಪನ್ನು ಘೋಷಿಸಿತು. ಇದರಿಂದಾಗಿ ಕರಿಯರು ಹೊಸ ಕಾನೂನುಗಳ ಲಾಭ ಪಡೆಯದೆ ಮತ್ತಷ್ಟು ತಾರತಮ್ಯತೆಗೆ ಮತ್ತು ಪ್ರತ್ಯೇಕತೆಗೊಳಗಾದರು. ೧೮೯೬ರ ಪ್ಲೆಸಿ ಮತ್ತು ಫರ್ಗುಸನ್ನರ ವ್ಯಾಜ್ಯದಲ್ಲಿ ಮಿಸ್ಸಿಪ್ಪಿಯಲ್ಲಿದ್ದ ಕರಿಯರ ರಾಜಕೀಯ ಚಟುವಟಿಕೆಗಳನ್ನು ಕಡಿತಗೊಳಿಸಲು ಇದ್ದ ಯೋಜನೆಗಳಿಗೆ ಸಮ್ಮತಿ ನೀಡಿತು. ಇದರಿಂದಾಗಿ ಕರಿಯರು ಮತ ಚಲಾವಣೆಯ ಹಕ್ಕನ್ನು ಗಣನೀಯ ಪ್ರಮಾಣದಲ್ಲಿ ಕಳೆದುಕೊಂಡರು.

೧೯೦೦ರ ನಂತರ ದಕ್ಷಿಣ ರಾಜ್ಯಗಳ ಶಾಸಕರು ಕರಿಯರ ಪ್ರತ್ಯೇಕತೆಯನ್ನು ತೀವ್ರ ಗೊಳಿಸಿದರು. ೧೯೧೪ರಲ್ಲಿ ಲೌಸಿಯಾನದಲ್ಲಿ ಸರ್ಕಸ್ಸಿಗೆ ಹೋಗಲು ಪ್ರತ್ಯೇಕ ದ್ವಾರಗಳನ್ನು ಇಡಲಾಗಿತ್ತು. ೧೯೧೫ರಲ್ಲಿ ಓಕ್ಲಹಾಮ ಕರಿಯರಿಗೆ ಪ್ರತ್ಯೇಕ ಟೆಲಿಫೋನ್ ಬೂತ್‌ಗಳನ್ನು ಇಡಲಾಗಿತ್ತು. ೧೯೨೦ರ ಮಿಸ್ಸಿಪ್ಪಿ ಕಾನೂನು ಸಾಮಾಜಿಕ ಸಮಾನತೆ ಮತ್ತು ಕರಿಯರ ಮತ್ತು ಬಿಳಿಯರ ನಡುವೆ ವಿವಾಹ ಸಂಬಂಧಗಳನ್ನು ಏರ್ಪಡಿಸುವವರನ್ನು ಅಪರಾಧಿಗಳೆಂದು ಪರಿಗಣಿಸಬೇಕೆಂದು ತಿಳಿಸಿತು. ಕೆಂಟಕಿಯಲ್ಲಿ ಪ್ರತ್ಯೇಕ ಶಾಲೆಗಳ ಜೊತೆಗೆ ಕರಿಯರು ಉಪಯೋಗಿಸಿದ ಪುಸ್ತಕ ಮತ್ತಿತರ ಸಾಮಗ್ರಿಗಳನ್ನು ಬಿಳಿಯರಿಗೆ ಪ್ರತ್ಯೇಕವಾಗಿ ಶೇಕರಿಸಿಡಲಾಗಿತ್ತು. ಅಲಬಾಮದಲ್ಲಿ ಕರಿಯರು ಮತ್ತು ಬಿಳಿಯರು ಒಟ್ಟಿಗೆ ಆಡುವಂತಿ ರಲಿಲ್ಲ. ದಕ್ಷಿಣದ ಎಲ್ಲಾ ರಾಜ್ಯಗಳಲ್ಲಿ ಅಂತರ್ ಜನಾಂಗೀಯ ವಿವಾಹಗಳನ್ನು ನಿಷೇಧಿಸ ಲಾಗಿತ್ತು. ಜಾರ್ಜಿಯಾದಲ್ಲಿ ಕರಿಯ ಮಂತ್ರಿಗಳು ಬಿಳಿಯ ದಂಪತಿಗಳಿಗೆ ವಿವಾಹ ಆಚರಣೆ ಮಾಡುವುದನ್ನು ನಿಷೇಧಿಸಲಾಗಿತ್ತು. ನ್ಯೂ ಆರ್ಲಿನ್ಸ್‌ನಲ್ಲಿ ಪ್ರತ್ಯೇಕ ವೈಶ್ಯಾವಾಟಿಕೆ ಕೇಂದ್ರಗಳನ್ನು ತೆರೆಯಲಾಗಿತ್ತು.

ಎರಡನೆಯ ಮಹಾಯುದ್ಧದ ಸಮಯದಲ್ಲಿಯೂ ಸಹ ಅಮೆರಿಕಾದ ದಕ್ಷಿಣ ರಾಜ್ಯಗಳು ಪ್ರತ್ಯೇಕತೆಯಿಂದ ಕೂಡಿದ ಸಮಾಜವಾಗಿತ್ತು. ಪ್ರತಿ ಶಾಲೆ, ಹೋಟೆಲು, ರೈಲು, ನಿರೀಕ್ಷಣಾ ಕೊಠಡಿ, ಸಾರ್ವಜನಿಕ ಸ್ನಾನಗೃಹ, ಕಾಲೇಜು, ಆಸ್ಪತ್ರೆ, ಸ್ಮಶಾನ, ಈಜುಕೊಳ, ಜೈಲು ಮತ್ತು ಚರ್ಚುಗಳು ಕರಿಯರಿಗೆ ಮತ್ತು ಬಿಳಿಯರಿಗೆ ಪ್ರತ್ಯೇಕವಾಗಿದ್ದವು. ನ್ಯಾಯಾಲಯಗಳಲ್ಲಿ ಬಿಳಿಯರು ಒಂದು ಬೈಬಲ್ ಮೇಲೆ ಪ್ರಮಾಣ ಮಾಡಿದರೆ ಬಿಳಿಯರು ಮತ್ತೊಂದು ಬೈಬಲ್ ಮೇಲೆ ಪ್ರಮಾಣ ಮಾಡುತ್ತಿದ್ದರು. ೨೦ನೆಯ ಶತಮಾನದ ಮೊದಲಾರ್ಧ ಭಾಗದಲ್ಲಿ ದಕ್ಷಿಣ ರಾಜ್ಯದ ಜನತೆ ಪ್ರತ್ಯೇಕ ಆಸ್ಪತ್ರೆಗಳಲ್ಲಿ ಜನಿಸಿ, ಪ್ರತ್ಯೇಕ ಶಾಲಾ ಕಾಲೇಜುಗಳಲ್ಲಿ ಓದಿ ಸತ್ತ ನಂತರವೂ ಪ್ರತ್ಯೇಕ ಸ್ಮಶಾನಗಳಲ್ಲಿ ಹೂಳಲ್ಪಡುತ್ತಿದ್ದರು.

ದಕ್ಷಿಣ ರಾಜ್ಯಗಳಾದ್ಯಂತ ಪ್ರತ್ಯೇಕತಾ ತತ್ವವು ಕಾನೂನು ಮತ್ತು ಪೊಲೀಸರ ರಕ್ಷಣೆ ಯಿಂದ ಕಾಪಾಡಲ್ಪಟ್ಟಿತು. ಇವೆರಡರ ಹೊರಗೆ ಯಾರಾದರೂ ಕರಿಯರು ಈ ಆಚರಣೆ ಗಳನ್ನು ಪ್ರಶ್ನಿಸಿದರೆ ಅಂತಹವರನ್ನು ಗೂಂಡಾಗಳು ಮತ್ತು ಆತಂಕವಾದಿಗಳು (ಟೆರರಿಸ್ಟ್) ಹೆದರಿಸುತ್ತಿದ್ದರು. ರಿಪಬ್ಲಿಕನ್ ಪಕ್ಷವು ಅಧಿಕಾರದಲ್ಲಿದ್ದಾಗ ದಕ್ಷಿಣದ ರಾಜ್ಯಗಳಲ್ಲಿ ಪುನಾರಚನೆಯ ಕೆಲಸಗಳನ್ನು ಕೈಗೊಂಡ ಸಮಯದಲ್ಲಿ ಬಿಳಿಯರ ಆತಂಕವಾದಿಗಳು ಮತ್ತು ಗೂಂಡಾಗಳು ಸಾವಿರಾರು ಕರಿಯರನ್ನು ಮತ್ತು ಕೆಲವು ಬಿಳಿಯರನ್ನು ಸಾಯಿಸಿದರು. ಇದರ ಉದ್ದೇಶ ಮತ್ತು ರಾಜಕೀಯ ಜೀವನಕ್ಕೆ ಪ್ರವೇಶಿಸದಂತೆಯೂ ಮತ್ತು ಅವರು ತಮ್ಮ ಪ್ರತಿನಿಧಿಗಳನ್ನು ಆರಿಸದಂತೆ ಮಾಡುವುದಾಗಿತ್ತು. ಕೂ ಕ್ಲಕ್ಸ್ ಕ್ಲಾನ್(ಕೆಕೆಕೆ)ಎಂಬ ಸಂಘಟನೆಯು ೧೮೬೫-೧೮೬೬ರಲ್ಲಿ ಅಸ್ತಿತ್ವಕ್ಕೆ ಬಂದು ಕರಿಯರು ಮತ್ತು ಉತ್ತರದ ನಿರ್ಮೂಲನಾವಾದಿಗಳು ದಕ್ಷಿಣದಲ್ಲಿ ಅವರ ಆಡಳಿತ ಮತ್ತು ಸಾಮಾಜಿಕ ಸುಧಾರಣೆಗಳನ್ನು ಮಾಡದಂತೆ ಅಡ್ಡಿಪಡಿಸಲಾಗುತ್ತಿತ್ತು. ಈ ಸಂಘಟನೆಯ ಸದಸ್ಯರು ಕರಿಯ ಭೂಮಾಲೀಕರು, ಬಿಳಿಯರನ್ನು ಹಾಗೂ ರಿಪಬ್ಲಿಕನ್ ಪಕ್ಷ ಮತ್ತು ಜನಾಂಗೀಯ ಸಮಾನತೆಯನ್ನು ಉಪದೇಶಿಸುವವರನ್ನು ಹೆದರಿಸಿ ಮಟ್ಟ ಹಾಕುತ್ತಿದ್ದರು. ಪುನಾರಚನೆಯ ಸಮಯದಲ್ಲಿ ಅಮೆರಿಕಾ ಸೇನೆಯು ಅಮಾಯಕ ಕರಿಯರನ್ನು ಕೊಲ್ಲುವುದನ್ನು ಮಾತ್ರ ತಪ್ಪಿಸಿತು. ಆದರೂ ಅಲ್ಲಿದ್ದ ಸೇನೆಯ ಸಂಖ್ಯೆ ತುಂಬಾ ಕಡಿಮೆಯಿದ್ದು ಹೆಚ್ಚಿನ ಸಾವನ್ನು ತಡೆಯಲಿಕ್ಕಾಗಲಿಲ್ಲ. ಉದಾಹರಣೆಗೆ ೧೮೭೬-೧೮೭೭ರಲ್ಲಿ ಬಿಳಿಯರ ಗುಂಪು ದಕ್ಷಿಣ ಕೆರೊಲಿನಾದಲ್ಲಿ ಸಾವಿರಾರು ಕರಿಯರನ್ನು ಕೊಂದು ಹಾಕಿ ಅವರು ಇನ್ನು ಮುಂದೆ ರಾಜಕೀಯಕ್ಕೆ ಹಾಗೂ ಅಧಿಕಾರಕ್ಕೆ ಬಾರದಂತೆ ಭಯ ಹುಟ್ಟಿಸಿತು.

೧೮೭೭ರಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನವು ಪುನಾರಚನೆಯ ಕೆಲಸ ಮುಗಿದ ಮೇಲೆ ತನ್ನ ಸೇನೆಯನ್ನು ವಾಪಸ್ಸು ತೆಗೆದುಕೊಂಡಿತು. ರಾಷ್ಟ್ರೀಯ ಸೇನೆ ಹಿಂತೆಗೆದ ತಕ್ಷಣ ದಕ್ಷಿಣ ರಾಜ್ಯಗಳ ಬಿಳಿ ಭೂಮಾಲೀಕರು ಹಿಂಸಾತ್ಮಕ ಕೃತ್ಯಗಳನ್ನು ಹೆಚ್ಚಿಸಿ ಸ್ಥಳೀಯ ಮತ್ತು ರಾಜ್ಯ ಸರಕಾರಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ಬಿಳಿಯರ ಅಧಿಪತ್ಯವನ್ನು ಕರಿಯರ ಮೇಲೆ ಮತ್ತೆ ಹೇರಲಾರಂಭಿಸಿದರು. ಕರಿಯರಿಗೆ ನೀಡುತ್ತಿದ್ದ ಹಿಂಸೆಗಳಲ್ಲಿ ಪ್ರಮುಖವಾದುದೆಂದರೆ ತಪ್ಪಿತಸ್ಥ ಕರಿಯರನ್ನು ನ್ಯಾಯ ವಿಚಾರಣೆಗೊಳಪಡಿಸದೇ ಬಿಳಿಯರು ಕರಿಯರಿಗೆ ಶಿಕ್ಷೆ ನೀಡುವುದು ಅಥವಾ ಹಿಂಸಿಸುವುದು ಅಥವಾ ನೇಣು ಹಾಕುವುದಾಗಿತ್ತು. ೧೮೮೪ ಮತ್ತು ೧೯೦೦ರ ನಡುವೆ ಬಿಳಿಯರ ಗುಂಪು ಸುಮಾರು ೨೦೦೦ ಕರಿಯರನ್ನು ನ್ಯಾಯಾಂಗ ವಿಚಾರಣೆ ಮಾಡದೇ ತಾವೇ ಕರಿಯರನ್ನು ಶಿಕ್ಷೆಗೆ ಗುರಿಪಡಿಸಿದರು. ೨೦ನೆಯ ಶತಮಾನದ ಆದಿ ಭಾಗದಲ್ಲಿ ಇದರ ತೀವ್ರತೆ ಹೆಚ್ಚಾಗಿ ಸಾವಿನ ಸಂಖ್ಯೆಯು ಜಾಸ್ತಿಯಾಗತೊಡಗಿತು. ಪ್ರಥಮ ಮಹಾಯುದ್ಧದ ಸಮಯದಲ್ಲಿ ಇದರ ತೀವ್ರತೆ ಕಡಿಮೆಯಾಗಿ ಸಾವಿನ ಸಂಖ್ಯೆಯೂ ಇಳಿಮುಖವಾಯಿತು. ಆದರೆ ೧೯೦೦-೧೯೨೦ರ ಸಮಯದಲ್ಲಿ ಸುಮಾರು ೧೦೦೦ ಕರಿಯರು ಸಾವಿಗೀಡಾದರು. ಇದಕ್ಕಿಂತ ಅಧಿಕ ಸಂಖ್ಯೆಯ ಕರಿಯರು ಬಿಳಿಯರ ಹೆಂಗಸರನ್ನು ಮಾತನಾಡಿಸಿದರೆ, ಮತ ಚಲಾವಣೆ ಮಾಡಲು ಪ್ರಯತ್ನಿಸಿದರೆ ಬಿಳಿಯರಿಂದ ಶಿಕ್ಷೆಗೊಳಪಟ್ಟು ಕೊಲ್ಲಲ್ಪಡುತ್ತಿದ್ದರು. ಬಿಳಿಯರು ಕರಿಯರನ್ನು ಒಂದಲ್ಲ ಒಂದು ನೆಪದಲ್ಲಿ (ಜನಾಂಗೀಯ) ನೇಣು ಹಾಕಿದರು. ಮತ್ತೆ ಹಲವರನ್ನು ಜೀವಂತ ಸುಟ್ಟು ಹಾಕಿದರು. ಬಂದೂಕಿನಲ್ಲಿ ಹೊಡೆದು ಕೊಂದುಹಾಕಿದರು. ಕೆಲವೊಮ್ಮೆ ಇಂತಹ ಕೃತ್ಯಗಳು ದಂಗೆಗಳ ರೂಪಗಳನ್ನು ಪಡೆದು ಕೊಂಡವು. ೧೯೦೪ರಲ್ಲಿ ಜಾರ್ಜಿಯಾದಲ್ಲಿ ಇಬ್ಬರು ಕರಿಯರನ್ನು ಕೊಲ್ಲುವುದರ ಜೊತೆಗೆ ಅವರ ಆಸ್ತಿಪಾಸ್ತಿಗಳನ್ನು ಸುಟ್ಟು ಹಾಕಿದರು. ಈ ಅಮಾನುಷ ಕೃತ್ಯದ ಜೊತೆಗೆ ಬಿಳಿಯರು ಕರಿಯರನ್ನು ಮತ ಚಲಾಯಿಸದಂತೆ ಹೆದರಿಸಿ ಭಯ ಹುಟ್ಟಿಸುತ್ತಿದ್ದರು. ಅತಂಕಕ್ಕಾಗಿ ಸಂಘಟನೆಗಳು ರಾಜಕೀಯ ಪ್ರಚಾರಗಳಲ್ಲಿ ಪ್ರಮುಖ ಪಾತ್ರ ವಹಿಸಿ ಕರಿಯರು ಮತ ಚಲಾಯಿಸದಂತೆ ಮಾಡಿದ್ದವು. ವಿಲ್ಲಿಂಗ್ಟನ್, ಉತ್ತರ ಕೆರೊಲಿನಾ(೧೮೯೯), ಅಟ್ಲಾಂಟ ಮತ್ತು ಜಾರ್ಜಿಯಾ(೧೯೦೬)ಗಳಲ್ಲಿ ಬಿಳಿಯರು ಕರಿಯರನ್ನು ಕೊಲ್ಲುವುದು ಮತ್ತು ಗಾಯಗೊಳಿಸುವುದರೊಂದಿಗೆ ಕರಿಯರನ್ನು ಮತ ಚಲಾಯಿಸದಂತೆ ಹೆದರಿಸಿ ದೂರವಿಡುತ್ತಿದ್ದರು. ದಂಗೆಯ ನಂತರ ಕರಿಯರ ರಾಜಕೀಯ ಪ್ರಾಬಲ್ಯ ಗಣನೀಯವಾಗಿ ಕಡಿಮೆಯಾಯಿತು. ಉತ್ತರದ ರಾಜ್ಯಗಳಲ್ಲಿ ಕೆಲವು ಕಡೆ ಇಂತಹ ದಂಗೆಗಳಾದವು. ಅಬ್ರಹಾಂ ಲಿಂಕನ್ನರ ಪ್ರಾಂತ್ಯಗಳಾದ ಇಲಿನಾಯ್ಸರಲ್ಲೂ ಸಹ ಆದ ಇಂತಹ ಘಟನೆಗಳು ಇಡೀ ದೇಶವನ್ನು ನಡುಗಿಸಿತ್ತು.

ಗುಲಾಮಗಿರಿ ವಿರೋಧಿ ಚಳವಳಿ

೧೭೯೨ರಲ್ಲಿ ಡೆನ್ಮಾರ್ಕ್ ಪ್ರಥಮ ಯುರೋಪಿನ ರಾಷ್ಟ್ರವಾಗಿ ಗುಲಾಮಗಿರಿಯನ್ನು ರದ್ದು ಮಾಡಿತು. ಇದರ ನಂತರ ಇಂಗ್ಲೆಂಡ್ ೧೮೦೭ರಲ್ಲಿ ಮತ್ತು ಅಮೆರಿಕಾ ೧೮೦೮ರಲ್ಲಿ ರದ್ದು ಮಾಡಿತು. ೧೮೧೪ರ ವಿಯೆನ್ನಾ ಕಾಂಗ್ರೆಸ್ಸಿನಲ್ಲಿ ಬ್ರಿಟನ್ ಯುರೋಪಿನ ಎಲ್ಲಾ ರಾಷ್ಟ್ರಗಳಿಗೂ ಗುಲಾಮಗಿರಿಯನ್ನು ರದ್ದುಪಡಿಸುವಂತೆ ಕರೆ ನೀಡಿತು. ಇದರ ಪರಿಣಾಮವಾಗಿ ಯುರೋಪಿನ ಎಲ್ಲಾ ರಾಷ್ಟ್ರಗಳು ಗುಲಾಮಗಿರಿಯನ್ನು ರದ್ದುಪಡಿಸುವುದಕ್ಕೆ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ ಅದನ್ನು ನಿಷೇಧಿಸಲು ಕೆಲವು ಒಪ್ಪಂದಗಳನ್ನು ಸಹ ಮಾಡಿ ಕೊಂಡರು. ೧೮೪೨ರಲ್ಲಿ ಬ್ರಿಟನ್ ಮತ್ತು ಸಂಯುಕ್ತ ಸಂಸ್ಥಾನಗಳ ನಡುವೆ ಆಸ್‌ಬರ್ಟನ್ ಒಪ್ಪಂದವಾಗಿ ಪ್ರತಿ ರಾಷ್ಟ್ರವೂ ಆಫ್ರಿಕಾದ ತೀರಗಳಿಂದ ಗುಲಾಮರನ್ನು ಆಮದು ಮಾಡಿಕೊಳ್ಳದಂತೆ ಒಪ್ಪಲಾಯಿತು. ೧೮೪೫ರಲ್ಲಿ ಇಂಗ್ಲೆಂಡ್ ಮತ್ತು ಫ್ರಾನ್ಸಿನ ನೌಕಾದಳಗಳ ನಡುವೆ ಜಂಟಿ ಸಹಕಾರವು ಏರ್ಪಟ್ಟು ಪರಸ್ಪರ ಗುಲಾಮರ ವ್ಯಾಪಾರವನ್ನು ಹುಡುಕುವ ಅವಕಾಶವನ್ನು ಮಾಡಲಾಯಿತು. ಗುಲಾಮರ ಪೂರೈಕೆಯಲ್ಲಿ ಖಡಿತವಾದ್ದರಿಂದ  ಗುಲಾಮರ ಯಜಮಾನರು, ಗುಲಾಮರ ಸ್ಥಿತಿಗತಿಗಳನ್ನು ಮರು ಅವಲೋಕಿಸಿ ಅವರ ಸ್ಥಿತಿಗತಿಗಳನ್ನು ಉತ್ತಮಪಡಿಸುವುದಕ್ಕೆ ಪ್ರಯತ್ನಿಸಲಾರಂಭಿಸಿದರು. ೧೮೪೮ರಲ್ಲಿ ಫ್ರೆಂಚರು ಗುಲಾಮರನ್ನು ಮುಕ್ತಗೊಳಿಸಿದರು. ಡೆನ್ಮಾರ್ಕ್‌ನ ಗುಲಾಮರಿಗೆ ೧೮೬೩ರಲ್ಲಿ ಸ್ವಾತಂತ್ರ್ಯವನ್ನು ನೀಡಲಾಯಿತು. ದಕ್ಷಿಣ ಅಮೆರಿಕಾದ ಎಲ್ಲಾ ರಾಷ್ಟ್ರಗಳು ಗುಲಾಮಗಿರಿಯನ್ನು ಮುಕ್ತಗೊಳಿಸುವುದಕ್ಕೆ ಕ್ರಮ ಕೈಗೊಂಡರು. ಬ್ರಿಟನ್ನಿನಲ್ಲಿ ೧೮೮೮ರವರೆಗೂ ಗುಲಾಮಗಿರಿ ಯನ್ನು ರದ್ದುಪಡಿಸಿರಲಿಲ್ಲ.

ಅಮೆರಿಕಾದಲ್ಲಿ ಬ್ರಿಟಿಷ್ ವಸಾಹತುಶಾಹಿ ಕಾಲದಲ್ಲಿ  ಗುಲಾಮ ಪದ್ಧತಿಗೆ ಯಾವುದೇ ರೀತಿಯ ವಿರೋಧವಿರಲಿಲ್ಲ. ೧೭ ಮತ್ತು ೧೮ನೆಯ ಶತಮಾನದ ನಿವಾಸಿಗಳಲ್ಲಿ ದುರ್ಬಲರನ್ನು ಸಬಲರು ಶೋಷಣೆಗೈಯುತ್ತಿದ್ದರು. ಭೂಮಾಲೀಕರು ಗುಲಾಮರನ್ನು ಹೊಡೆಯುವುದು ಮತ್ತಿತರ ಹಿಂಸೆಗೊಳಪಡಿಸುತ್ತಿದ್ದರು. ಕ್ರಮೇಣವಾಗಿ ಭೂಮಾಲೀಕರು ತಮ್ಮ ಗುಲಾಮರನ್ನು ನೋಡಿಕೊಳ್ಳುವ ದೃಷ್ಟಿಯಲ್ಲಿ ಬದಲಾವಣೆಗಳು ಕಂಡುಬಂದವು. ಎರಡನೇ ತಲೆಮಾರಿನ ಮಾಲೀಕರು ಗುಲಾಮರೊಡನೆಯೇ ಬೆಳೆದುಬಂದವು. ಎರಡನೇ ತಲೆಮಾರಿನ ಮಾಲೀಕರು ಗುಲಾಮರೊಡನೆಯೇ ಬೆಳೆದುದರಿಂದ ತಮ್ಮ ಪೂರ್ವಜರಿಗಿಂತ ಕಡಿಮೆ ಸ್ಥಾನಮಾನ ಹೊಂದಿದವರೆಂದು ಭಾವಿಸಿದ್ದರು. ಇಂತಹ ಗುಲಾಮ ಮಾಲೀಕರು ತಮ್ಮ ಗುಲಾಮರನ್ನು ಸ್ವಲ್ಪ ಆದರದಿಂದ ನೋಡಿಕೊಳ್ಳಲಾರಂಭಿಸಿದರು. ಕೆಲವು ಭಾಗಗಳಲ್ಲಿ ಕರುಣೆ, ಪ್ರೀತಿಯಿಂದ ನೋಡಿಕೊಳ್ಳಲಾಗಿ ಅಂತಹ ಮಾಲೀಕರನ್ನು ಗುಲಾಮರು ತಮ್ಮ ಪೋಷಕರೆಂದು ನಂಬಿದ್ದರು. ಇನ್ನೂ ಕೆಲವು ಗುಲಾಮರ ಮಾಲೀಕರು ೧೮ನೆಯ ಶತಮಾನದ ಕೊನೆಯ ಭಾಗದಲ್ಲಿ ಹರಡುತ್ತಿದ್ದ ಗುಲಾಮಗಿರಿ ಪದ್ಧತಿಯನ್ನು ಪ್ರಶ್ನಿಸುವುದು ಹೆಚ್ಚಾಯಿತು. ಈ ಸಮಯದಲ್ಲಿ ಸಾಮಾಜಿಕ ಸಮಾನತೆ ತತ್ವವು ಅಮೆರಿಕಾದ ಹೆಚ್ಚಿನ ಬಿಳಿಯರು ಗುಲಾಮಗಿರಿಯನ್ನು ಪ್ರಶ್ನಿಸುವಂತೆ ಪ್ರೇರೇಪಿಸಿತು. ಅಮೆರಿಕಾ ಸ್ವಾತಂತ್ರ್ಯದ ಘೋಷಣೆ ಮತ್ತು ಅಲ್ಲಿಯ ಗುಲಾಮಗಿರಿ ಪದ್ಧತಿಯು ದ್ವಂದ್ವ ನೀತಿಗೆ ಸಾಕ್ಷಿಯಾಗಿತ್ತು. ಹೊಸ ಸರ್ಕಾರದ ಹಲವು ಮುಖಂಡರು ಅದರಲ್ಲೂ ಅಧ್ಯಕ್ಷರಾದ ಜಾರ್ಜ್ ವಾಷಿಂಗ್‌ಟನ್ ಮತ್ತು ಥಾಮಸ್ ಜೆಫರ್‌ಸನ್ ಮತ್ತಿತರಿಗೆ ಈ ಪದ್ಧತಿಯ ಅಸ್ತಿತ್ವವು ತುಂಬಾ ನೋವನ್ನುಂಟು ಮಾಡಿತ್ತು. ಇದನ್ನು ನಿಧಾನವಾಗಿ ನಿರ್ಮೂಲನೆ ಮಾಡಲು ಅವರು ಜಾಗರೂಕತೆಯಿಂದ ಕೆಲವು ಕ್ರಮಗಳನ್ನು ಕೈಗೊಂಡರು.

ಇಂತಹ ಕ್ರಮಗಳು ಅಮೆರಿಕಾದ ದೆಲವೇರ್ ರಾಜ್ಯದ ಉತ್ತರದ ಭಾಗಗಳಲ್ಲಿ ಗುಲಾಮಗಿರಿಯನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡಲು ಯಶಸ್ವಿಯಾದವು. ೧೭೮೦ರಲ್ಲಿ ಪೆನ್ಸಿಲ್ವೇನಿಯಾದಲ್ಲಿ ಹುಟ್ಟಿದ ಮಕ್ಕಳು ೨೮ ವರ್ಷ ವಯಸ್ಸಿಗೆ ಬಂದ ನಂತರ ಗುಲಾಮ ಪದ್ಧತಿಯಿಂದ ಮುಕ್ತಗೊಳಿಸುವುದಾಗಿತ್ತು. ೧೭೮೭ರಿಂದ ಎರಡು ಪ್ರಮುಖ ಕ್ರಮಗಳು ಗುಲಾಮಗಿರಿಯನ್ನು ಅಳಿಸಲು ನೆರವಾದವು. ಅವುಗಳೆಂದರೆ ಮೊದಲನೆಯದಾಗಿ ಆಗ್ನೇಯ ಸುಗ್ರೀವಾಜ್ಞೆಯು ಆಗ್ನೇಯ ಭಾಗದ ಪ್ರಾಂತ್ಯಗಳಲ್ಲಿ ಗುಲಾಮಗಿರಿಯನ್ನು ನಿಷೇಧಿಸಿತು. ಎರಡನೆಯದಾಗಿ ೧೮೦೮ರಲ್ಲಿ ಗುಲಾಮರನ್ನು ಆಮದು ಮಾಡಿಕೊಳ್ಳುವುದನ್ನು ಸಂವಿಧಾನಾತ್ಮಕವಾಗಿ ನಿಷೇಧಿಸಲಾಯಿತು. ಇದೇ ಸಮಯದಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದ ಅನೇಕ ರಾಜ್ಯಗಳು ತನ್ನ ನಾಗರಿಕರಿಗೆ ತಮ್ಮ ಗುಲಾಮರನ್ನು ಸ್ವತಂತ್ರರನ್ನಾಗಿ ಮಾಡುವ ಅವಕಾಶವನ್ನು ಮಾಡಿಕೊಡಲಾಯಿತು. ಇದರಿಂದಾಗಿ ಸಾವಿರಾರು ಗುಲಾಮ ಮಾಲೀಕರು ತಮ್ಮಲ್ಲಿದ್ದ ಗುಲಾಮರನ್ನು ಮುಕ್ತ ಗೊಳಿಸಿದರು. ಇದಲ್ಲದೇ ನೂರಾರು ಗುಲಾಮರು ಅಮೆರಿಕಾ ಕ್ರಾಂತಿಯ ಸಮಯದ ಸದುಪಯೋಗಪಡಿಸಿಕೊಂಡು ತಮ್ಮಷ್ಟಕ್ಕೆ ತಾವೇ ಗುಲಾಮಗಿರಿಯಿಂದ ಮುಕ್ತಗೊಂಡರು. ಇವೆಲ್ಲವುಗಳ ಪರಿಣಾಮವಾಗಿ ಅಮೆರಿಕಾ ಕ್ರಾಂತಿಯ ನಂತರ ಕರಿಯರ ಜನಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಹೆಚ್ಚಾಯಿತು.

ಅಮೆರಿಕಾ ಕ್ರಾಂತಿಯ ಸಮಯದಲ್ಲಾದ ಗುಲಾಮಗಿರಿ ನಿರ್ಮೂಲನ ಪ್ರಕ್ರಿಯೆಯು ಕೇವಲ ಉತ್ತರದ ರಾಜ್ಯಗಳಲ್ಲಿ ಹೆಚ್ಚು ಫಲ ನೀಡಿತು. ಆದರೆ ಈ ಗುಲಾಮಗಿರಿ ವಿರೋಧಿ ಚಳವಳಿಯು ದಕ್ಷಿಣದ ರಾಜ್ಯಗಳಾದ ಜಾರ್ಜಿಯಾ ಮತ್ತು ದಕ್ಷಿಣ ಕೆರೊಲಿನಾಗಳಲ್ಲಿ ಯಾವುದೇ ಪ್ರಗತಿಯನ್ನು ಕಾಣಲಿಲ್ಲ. ಇದನ್ನು ತಡೆಗಟ್ಟುವ ಬದಲು ತೋಟಗಳ ಮಾಲೀಕರು ಸಾವಿರಾರು ಸಂಖ್ಯೆಯಲ್ಲಿ ಆಫ್ರಿಕಾದ ಕರಿಯರನ್ನು ಆಮದು ಮಾಡಿಕೊಳ್ಳ ಲಾರಂಭಿಸಿದರು. ದಕ್ಷಿಣದ ಮೇಲ್ಭಾಗದ ರಾಜ್ಯಗಳಲ್ಲಿ ಸಮಾನತೆಯ ತತ್ವ ಕ್ರಮೇಣವಾಗಿ ಮಾಯವಾಗತೊಡಗಿತು. ಗುಲಾಮರನ್ನು ಆಮದು ಮಾಡಿಕೊಳ್ಳದಿದ್ದರೂ ಗುಲಾಮರ ಸಂಖ್ಯೆ ಅಮೆರಿಕಾದ ರಾಜ್ಯಗಳಲ್ಲಿ ಕಡಿಮೆಯಾಗಲಿಲ್ಲ. ಏಕೆಂದರೆ ಈ ಅವಧಿಯಲ್ಲಿ ಗುಲಾಮರೇ ಹೆಚ್ಚು ಮಕ್ಕಳನ್ನು ಹೊಂದಲಾರಂಭಿಸಿದರು. ಇದರ ಪರಿಣಾಮವಾಗಿ ಗುಲಾಮಗಿರಿ ನಿರ್ಮೂಲನೆಯ ವರ್ಗ ಸಂಸ್ಥೆಯಾಗಿ ಮಾರ್ಪಟ್ಟಿತು.

ಗುಲಾಮರು ಮನೆಗೆಲಸ, ಅಡಿಗೆ ಕೆಲಸ ಮುಂತಾದ ಕೆಲಸಗಳನ್ನು ಮಾಡಿ ಬದುಕು ತ್ತಿದ್ದರು. ಇವರು ಚಿಕ್ಕ ಚಿಕ್ಕ ಕುಟುಂಬಗಳಲ್ಲಿ ವಾಸಿಸುತ್ತಿದ್ದರು. ರಾಷ್ಟ್ರದ ಕಾನೂನುಗಳು ಇವರಿಗೆ ಅನ್ವಯಿಸುತ್ತಿರಲಿಲ್ಲ. ಇವರಿಗೆ ಅವರ ಧರ್ಮ ಮತ್ತು ಸಾಂಸ್ಕೃತಿಕ ಆಚರಣೆಗಳಲ್ಲಿ ಅಚಲವಾದ ನಂಬಿಕೆಯಿತ್ತು. ಅಮೆರಿಕಾ ಕ್ರಾಂತಿಯ ನಂತರ ಇವರು ಕ್ರೈಸ್ತ ಧರ್ಮವನ್ನು ಅವಲಂಬಿಸಿದರು. ಇವರು ತಮ್ಮ ಮಾಲೀಕರನ್ನು ಕ್ರಮೇಣವಾಗಿ ವಿರೋಧಿಸಲಾರಂಭಿಸಿದರು. ಈ ರೀತಿಯ ವಿರೋಧಗಳನ್ನು ತಕ್ಷಣವೇ ಹತ್ತಿಕ್ಕಲಾಯಿತು. ಇಂತಹ ಪ್ರಕರಣಗಳು ೧೭೪೧ರಲ್ಲಿ ನ್ಯೂಯಾರ್ಕ್, ೧೮೦೦ರಲ್ಲಿ ವರ್ಜೀನಿಯಾ ಮತ್ತು ೧೮೨೨ರಲ್ಲಿ ದಕ್ಷಿಣ ಕೆರೊಲಿನಾದಲ್ಲಿ ನಡೆದವು. ಯಜಮಾನರ ಹಿಡಿತದಿಂದ ತಪ್ಪಿಸಿಕೊಳ್ಳುವುದು ಸಾಮಾನ್ಯ ರೂಪದ ವಿರೋಧಗಳಾಗಿದ್ದವು. ಪ್ರತಿ ವರ್ಷ ೧೦೦೦ ಗುಲಾಮರು ತಮ್ಮ ಯಜಮಾನರ ಹಿಡಿತದಿಂದ ತಪ್ಪಿಸಿಕೊಳ್ಳುತ್ತಿದ್ದರು.

ಗುಲಾಮಗಿರಿಯು ಪ್ರಮುಖವಾಗಿ ದಕ್ಷಿಣ ರಾಜ್ಯಗಳ ಸಾಮಾಜಿಕ, ಆರ್ಥಿಕ ಸಂಸ್ಥೆಯಾಗಿತ್ತು. ಉತ್ತರದ ರಾಜ್ಯಗಳಲ್ಲಿ ಇದನ್ನು ನಿರ್ಮೂಲನ ಮಾಡಲು ಅಮೆರಿಕಾ ಕ್ರಾಂತಿಯ ಸಮಯದಲ್ಲಿ ಪ್ರಾರಂಭವಾಗಿ ೧೮೩೦ರ ಸಮಯದಲ್ಲಿ ಹೆಚ್ಚು ಕಡಿಮೆ ಅಂತ್ಯಗೊಂಡಿತು. ಇಡೀ ಅಮೆರಿಕಾ ಸಂಯುಕ್ತ ಸಂಸ್ಥಾನವನ್ನು ಗುಲಾಮಗಿರಿಯ ದಕ್ಷಿಣ ರಾಜ್ಯಗಳು ಮತ್ತು ಗುಲಾಮರಹಿತ ಉತ್ತರದ ರಾಜ್ಯಗಳಾಗಿ ವಿಂಗಡಿಸಿತು. ಇದರಿಂದಾಗಿ ದಕ್ಷಿಣದ ರಾಜ್ಯಗಳಲ್ಲಿ ಗುಲಾಮಗಿರಿಯನ್ನು ಸಂರಕ್ಷಿಸುವುದು ಹಾಗೂ ಇದನ್ನು ಉತ್ತರದಲ್ಲಿ ವಿರೋಧಿಸುವ ಚಳವಳಿಗಳು ಹುಟ್ಟಿಕೊಂಡವು. ದಕ್ಷಿಣದ ರಾಜ್ಯಗಳಲ್ಲಿ ಗುಲಾಮರನ್ನು ಹೊಂದಿದ ಮಾಲೀಕರ ಸಂಖ್ಯೆ ಕಡಿಮೆಯಾಗುತ್ತಿದ್ದರೂ ದಕ್ಷಿಣದ ರಾಜ್ಯಗಳು ರಾಷ್ಟ್ರದ ಇತರ ರಾಜ್ಯಗಳಿಂದ ಪ್ರತ್ಯೇಕವಾಗಿ ಉಳಿಯಲ್ಪಟ್ಟವು. ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಆಚರಿಸುವ ಶತಮಾನದಲ್ಲಿ ಗುಲಾಮಗಿರಿ ಹೊಂದಿದ್ದ ದಕ್ಷಿಣದ ರಾಜ್ಯಗಳು ದಮನಕಾರಿ ನೀತಿಗಳನ್ನು ಮತ್ತು ಹಿಂದುಳಿದ ಲಕ್ಷಣಗಳನ್ನು ಹೊಂದಿದ್ದವು.

ವೈಚಾರಿಕತೆಯ ವಿಷಯದಲ್ಲಿ ದಕ್ಷಿಣದ ಮತ್ತು ಉತ್ತರದ ರಾಜ್ಯಗಳಲ್ಲಿ ಗುಲಾಮಗಿರಿ ಯನ್ನು ತೊಡೆದುಹಾಕಲು ನಿರ್ಮೂಲನಾಕಾರರ ಸಂಘವೊಂದು ಅಸ್ತಿತ್ವಕ್ಕೆ ಬಂದಿತು. ಆದರೆ ದಕ್ಷಿಣದ ರಾಜ್ಯಗಳಲ್ಲಿದ್ದ ಬಿಳಿಯ ಭೂಮಾಲೀಕರು, ರಾಜಕಾರಣಿಗಳು, ಮಂತ್ರಿಗಳು, ವೃತ್ತಪತ್ರಿಕೆಯ ಸಂಪಾದಕರು ಮತ್ತು ಬರವಣಿಗೆಗಾರರು ಗುಲಾಮಗಿರಿಯನ್ನು ದಕ್ಷಿಣದ ರಾಜ್ಯಗಳ ಸಮಾಜದ ತಳಹದಿಯೆಂದು ವಾದಿಸಲಾರಂಭಿಸಿದರು. ಗುಲಾಮಗಿರಿಯ ಪ್ರೋ ವಿವಿಧ ರೀತಿಯ ವಾದಗಳೊಂದಿಗೆ ಅದನ್ನು ಸಂರಕ್ಷಿಸಲು ಮುಂದಾದರು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಜನಾಂಗೀಯ, ಆರ್ಥಿಕ ಮತ್ತು ಧಾರ್ಮಿಕ. ಇದಲ್ಲದೇ ಗುಲಾಮಗಿರಿಯು ದೇವರ ಯೋಜನೆಯಾಗಿದ್ದು, ಗುಲಾಮರನ್ನು ನಾಗರಿಕರನ್ನಾಗಿ ಮಾಡುವುದು ಬಿಳಿಯರ ಆದ್ಯ ಕರ್ತವ್ಯವೆಂದು ನಂಬಲಾಗಿತ್ತು.

ದಕ್ಷಿಣದ ರಾಜ್ಯಗಳು ತಮ್ಮ ಸಾಮಾಜಿಕ ಮತ್ತು ಆರ್ಥಿಕ ಚೌಕಟ್ಟನ್ನು ಗುಲಾಮಗಿರಿಯ ಮೇಲೆ ಕಟ್ಟಲು ಹೆಚ್ಚು ಒತ್ತು ಕೊಟ್ಟಿದ್ದರು. ಗುಲಾಮಗಿರಿಯು ಅವರ ಆರ್ಥಿಕತೆಯ ಅವಿಭಾಜ್ಯ ಅಂಗವೆಂದು ಪರಿಗಣಿಸಿದ್ದರು. ಇದರಿಂದಾಗಿ ದಕ್ಷಿಣದ ರಾಜ್ಯಗಳಲ್ಲಿ ಸೌಹಾರ್ದಯುತ, ಸಮಯೋಚಿತ ಧಾರ್ಮಿಕ ಮತ್ತು ಸಂಪ್ರದಾಯತ್ವದ ಸಮಾಜವಿದ್ದು ಅವು ಉತ್ತರದ ರಾಜ್ಯಗಳಿಗಿಂತ ಭಿನ್ನವಾಗಿದ್ದವು. ದಕ್ಷಿಣದವರ ಪ್ರಕಾರ ಉತ್ತರದ ರಾಜ್ಯಗಳಲ್ಲಿ ಅತಂತ್ರ ಮತ್ತು ಭಯದಿಂದ ಕೂಡಿದ ವಾತಾವರಣವಿದ್ದು, ತೀವ್ರತರವಾದ ಸುಧಾರಣೆಗಳು, ವ್ಯಕ್ತಿತ್ವವಾದ, ವರ್ಗ ಕಲಹಗಳಿಂದಾಗಿ ನಿರ್ಮೂಲನಾವಾದಗಳು ಹುಟ್ಟಿ ಕೊಂಡವು. ಉತ್ತರ ರಾಜ್ಯಗಳ ಜನರ ಪ್ರಕಾರ ಗುಲಾಮಗಿರಿಯು ದಕ್ಷಿಣದ ರಾಜ್ಯಗಳನ್ನು ಬಡತನ, ಹಿಂದುಳಿಯುವಿಕೆ ಮತ್ತು ಅಸಮರ್ಥತೆಗೆ ಕಾರಣವೆಂದು ನಂಬಿದ್ದರು. ಆದರೆ ದಕ್ಷಿಣದವರು ಗುಲಾಮಗಿರಿಯು ದಕ್ಷಿಣದ ರಾಜ್ಯಗಳನ್ನು ಆಧುನಿಕತೆಯ ಬಿರುಗಾಳಿಯಿಂದ ರಕ್ಷಿಸುತ್ತದೆಂದು ನಂಬಿದ್ದರು.

ಅಮೆರಿಕಾದ ರಾಜಕೀಯವು ೧೮೪೦ರ ಸಮಯದಲ್ಲಿ ಗುಲಾಮಗಿರಿಯ ಚಟುವಟಿಕೆಯ ಕೇಂದ್ರ ಸ್ಥಾನವಾಗಿತ್ತು. ಉತ್ತರದ ರಾಜ್ಯಗಳ ಪ್ರಜೆಗಳು ಪಶ್ಚಿಮ ರಾಜ್ಯಗಳು ಬಿಳಿಯ ರಿಗೇ ಮೀಸಲಾಗಿರಬೇಕೆಂದು ಒತ್ತಡ ಹೇರಲಾರಂಭಿಸಿದರು. ಆದರೆ ಇದಕ್ಕೆ ವಿರುದ್ಧವಾಗಿ ದಕ್ಷಿಣದ ರಾಜ್ಯಗಳು ಗುಲಾಮಗಿರಿಯನ್ನು ಯಾವುದೇ ರೀತಿಯಲ್ಲಿ ನಿಯಂತ್ರಿಸುವುದು ಸಂವಿಧಾನಕ್ಕೆ ವಿರುದ್ಧವಾಗುತ್ತದೆ ಹಾಗೂ ಅಂತಹ ಕ್ರಮಗಳು ದಕ್ಷಿಣದ ರಾಜ್ಯಗಳ ಸಾಮಾಜಿಕ ತಳಹದಿಯನ್ನು ಅಲುಗಾಡಿಸುತ್ತದಲ್ಲದೇ, ದಕ್ಷಿಣ ರಾಜ್ಯಗಳ ಪ್ರತಿಷ್ಠೆಗೆ ಧಕ್ಕೆಯಾಗುತ್ತದೆಂದು ಅಭಿಪ್ರಾಯಪಟ್ಟರು. ೧೮೬೦ರಲ್ಲಿ ಗುಲಾಮ ಮುಕ್ತ ರಾಜ್ಯಗಳಲ್ಲಿ ಅಬ್ರಹಾಂ ಲಿಂಕನ್ನರನ್ನು ಅಮೆರಿಕಾದ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದು, ರಾಜಕೀಯ ಮತ್ತು ಸಂವಿಧಾನದ ಸಂದಿಗ್ದತೆಗೆ ದಾರಿ ಮಾಡಿ ಸುಮಾರು ದಕ್ಷಿಣದ ಏಳು ರಾಜ್ಯಗಳು ಅಮೆರಿಕಾದ ಸಂಯುಕ್ತ ಸಂಸ್ಥಾನದಿಂದ ಬೇರ್ಪಟ್ಟು ಪ್ರತ್ಯೇಕ ಒಕ್ಕೂಟ ರಾಜ್ಯಗಳಾಗಿ ಹೊರಹೊಮ್ಮಿದವು. ಇದರಿಂದಾಗಿ ೧೮೬೧ರ ಏಪ್ರಿಲ್ ತಿಂಗಳಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಒಕ್ಕೂಟದ(ದಕ್ಷಿಣ) ರಾಜ್ಯಗಳ ನಡುವೆ ಅಂತರ್ಯುದ್ಧ ಪ್ರಾರಂಭವಾಯಿತು. ಇದರಿಂದಾಗಿ ದಕ್ಷಿಣದ ಇನ್ನೂ ನಾಲ್ಕು ರಾಜ್ಯಗಳು ಅಮೆರಿಕಾದಿಂದ ಬೇರ್ಪಟ್ಟು ಒಕ್ಕೂಟಕ್ಕೆ ಸೇರ್ಪಡೆಗೊಂಡವು. ಆದರೆ ಮೆರಿಲ್ಯಾಂಡ್, ದೆಲವೇರ್, ಕೆಂಟಕಿ, ಮಿಸ್ಸೌರಿ ಮತ್ತು ಪಶ್ಚಿಮ ವರ್ಜಿನೀಯಾ ಅಮೆರಿಕಾದೊಡನೆ ಉಳಿದುಕೊಂಡವು.

ದಕ್ಷಿಣ ರಾಜ್ಯಗಳ ರಾಜಕಾರಣಿಗಳು ಗುಲಾಮಗಿರಿಯನ್ನು ಸಂರಕ್ಷಿಸುವ ಉದ್ದೇಶದಿಂದ ಅಮೆರಿಕಾ ಸಂಯುಕ್ತ ಸಂಸ್ಥಾನಗಳಿಂದ ಹೊರಬಂದಿದ್ದರೂ ಅವರ ಕ್ರಮವು ಗುಲಾಮಗಿರಿ ಯನ್ನು ಹತ್ತಿಕ್ಕಲು ನೆರವಾಯಿತು. ಅಂತರ್ಯುದ್ಧ ಮುಂದುವರಿದಂತೆ ಉತ್ತರದವರ ಯುದ್ಧದ ಗುರಿಗಳು ಕ್ರಮೇಣವಾಗಿ ಒಕ್ಕೂಟವನ್ನು ಸಂರಕ್ಷಿಸುವ ಬದಲು ಗುಲಾಮಗಿರಿ ಯನ್ನು ನಿರ್ಮೂಲನ ಮಾಡುವ ಕಡೆಗೆ ಬದಲಾಯಿತು. ಈ ಗುರಿಯು ಅಬ್ರಹಾಂ ಲಿಂಕನ್‌ನು ೧೮೬೩ರ ಜನವರಿ  ೧ರಂದು ಹೊರಡಿಸಿದ ವಿಮುಕ್ತ ಘೋಷಣೆಯೊಂದಿಗೆ ಮತ್ತಷ್ಟು ಧೃಡಪಟ್ಟಿತು. ಸಂವಿಧಾನಕ್ಕೆ ೧೩ನೆಯ ತಿದ್ದುಪಡಿ ಮಾಡುವುದರೊಂದಿಗೆ ೧೮೬೫ರ ಡಿಸೆಂಬರ್‌ನಲ್ಲಿ ಅಮೆರಿಕಾದಲ್ಲಿ ಗುಲಾಮಗಿರಿಯನ್ನು ನಿರ್ಮೂಲನ ಮಾಡುವ ನಿಶ್ಚಯ ಮಾಡಲಾಯಿತು. ಗುಲಾಮಗಿರಿಯನ್ನು ನಿರ್ಮೂಲನೆ ಮಾಡಿದ ಮೇಲೆ ವಿಮುಕ್ತ ಗೊಂಡ ಗುಲಾಮರ ಸಾಮಾಜಿಕ ಸ್ಥಾನಮಾನಗಳ ಬಗ್ಗೆ ಸಾಕಷ್ಟು ಚರ್ಚೆಗಳು ಮತ್ತು ಚಳವಳಿಗಳು ನಡೆದವು. ಮುಂದಿನ ದಶಕಗಳಲ್ಲಿ ಅಮೆರಿಕಾದ ಕರಿಯರು ಬಡತನ ಜನಾಂಗೀಯ ಸಮಸ್ಯೆ ಮತ್ತು ಪ್ರತ್ಯೇಕತೆ ವಿರುದ್ಧ ಮತ್ತು ಗುಲಾಮತನದಿಂದ ಹೊರಬರಲು ಸಾಕಷ್ಟು ಪ್ರಮಾಣದಲ್ಲಿ ಹೋರಾಡುವಂತಾಯಿತು.