ದಕ್ಷಿಣ ಅಮೆರಿಕಾ ಒಂದು ಸ್ವತಂತ್ರ ಖಂಡವಾಗಿದ್ದು, ಆಫ್ರಿಕ ಮತ್ತು ಆಸ್ಟೇಲಿಯಾ ಖಂಡಗಳ ಭೂಗರ್ಭಶಾಸ್ತ್ರವನ್ನು ಹೆಚ್ಚು ಕಡಿಮೆ ಹೋಲುತ್ತದೆ. ಇದು ಪನಾಮದ ಇಸ್ತಮಸ್ ಮೂಲಕ ಉತ್ತರ ಅಮೆರಿಕಾದ ಸಂಪರ್ಕವನ್ನು ಹೊಂದಿದೆ. ದಕ್ಷಿಣ ಅಮೆರಿಕಾ ಖಂಡದಲ್ಲಿ ಪರ್ವತಗಳು ಮತ್ತು ಬೆಂಕಿ ಜ್ವಾಲೆಗಳು (ವಾಲ್ ಕೆನ್ ಗಳು) ಕಂಡುಬರುತ್ತವೆ. ಇವುಗಳು ಸ್ವಲ್ಪಮಟ್ಟಿಗೆ ಭೂ ಅದುರುವಿಕೆಯನ್ನು ಉಂಟುಮಾಡುತ್ತದೆ. ಈ ಖಂಡದಲ್ಲಿ ಪ್ರಪಂಚದ ಅತೀ ಹೆಚ್ಚು ಉದ್ದದ ಪರ್ವತ ಶ್ರೇಣಿಯಾದ ಅಂಡ್ಸ್ ಪರ್ವತವು ಕಂಡುಬರುತ್ತದೆ. ದಕ್ಷಿಣ ಅಮೆರಿಕಾದ ಶೇಕಡ ೬೦ರ ಭಾಗವು ಸಮತಟ್ಟಾದ ಪ್ರದೇಶದಿಂದ ಕೂಡಿರುತ್ತದೆ ಮತ್ತು ಸುಮಾರು ಶೇಕಡ ೫೦ರಷ್ಟು ಪ್ರದೇಶವು ೩ ದೊಡ್ಡ ನದಿಗಳ ವ್ಯವಸ್ಥೆಯಲ್ಲಿರುತ್ತದೆ. ಅವುಗಳೆಂದರೆ, ಉತ್ತರದ ವರ್ನಿಕೋ, ಕೇಂದ್ರೀಯ ಉತ್ತರ ಭಾಗದ ಅಮೆಜಾನ್‌ನ ಮತ್ತು ದಕ್ಷಿಣದ ರಿಯೋ-ಡಿ-ಲಾ ಪ್ಲಾಟಾ.

ಅಮೆಜಾನ್ ನದಿಯು ಸುಮಾರು ೩,೯೦೦ ಮೈಲುಗಳು(೬,೨೮೦ ಕಿ.ಮೀ) ಉದ್ದವಿದ್ದು ಪ್ರಪಂಚದ ಎರಡನೇ ದೊಡ್ಡ ನದಿಯಾಗಿರುತ್ತದೆ. ಅಮೆಜಾನ್ ನದಿಯು ತನ್ನ ಉಪನದಿಗಳ ಮೂಲಕ ಸುಮಾರು ೨,೭೨೨,೦೦೦ ಚದುರ ಮೈಲಿಗಳು (೭,೦೫೦,೦೦೦ ಕಿ.ಮೀ) ಭೂಮಿಗೆ ನೀರುಣಿಸುತ್ತದೆ. ವರ್ನಿಕೋ ನದಿಯು ಸುಮಾರು ೧,೨೮೧ ಮೈಲಿಗಳು (೨,೦೬೨ ಕಿ.ಮೀ) ಉದ್ದವಿದ್ದು ಅಂಡ್ಸ್ ಪರ್ವತ ಮತ್ತು ಗುಹೇನಾ ಪ್ರದೇಶಗಳಿಗೆ ನೀರಾವರಿಯನ್ನೊದಗಿಸುತ್ತದೆ. ರಿಯೋ-ಡಿ-ಲಾ ನದಿಯು ಪರಾನಾ ಮತ್ತು ಉರುಬೆ ನದಿಗಳ ಜೊತೆಗೆ ಮತ್ತು ಅದರ ಉಪನದಿಗಳ ಮೂಲಕ ದಕ್ಷಿಣ ಅಮೆರಿಕಾದ ಸಂಪರ್ಕ ಸಾಧನವಾಗಿದೆ. ದಕ್ಷಿಣ ಅಮೆರಿಕಾವು ಅನೇಕ ಜಲಪಾತಗಳನ್ನು ಹೊಂದಿದೆ. ಅದರಲ್ಲಿ ಪ್ರಪಂಚದ ಅತೀದೊಡ್ಡ ಎಂಜಲ್ಸ್ ಜಲಪಾತವು ವೆನಿಜೋಲಿಯಾದಲ್ಲಿರುತ್ತದೆ. ಇದರ ಎತ್ತರ ೩,೨೧೨ ಅಡಿ ಇರುತ್ತದೆ. ದಕ್ಷಿಣ ಅಮೆರಿಕಾ ಬೇಸಿಗೆಯಲ್ಲಿ ಹೆಚ್ಚು ಉಷ್ಣಾಂಶ ಹೊಂದಿರುತ್ತದೆ. ಅಮೆಜಾನ್ ಕಣಿವೆಯಲ್ಲಿ ಅತಿ ಹೆಚ್ಚಿನ ಮಳೆ ಉಂಟಾಗುತ್ತದೆ. ಗುಹೇನಾ ಕರಾವಳಿ ಪ್ರದೇಶ ಮತ್ತು ಕೊಲಂಬಿಯ ಕರಾವಳಿ, ಇಕ್ವಿಡಾರ್ ಮತ್ತು ಚಿಲಿಯ ದಕ್ಷಿಣ ಭಾಗವು ಹೆಚ್ಚಿನ ಮಳೆ ಬೀಳುವ ಪ್ರದೇಶವಾಗಿರುತ್ತದೆ.

ದಕ್ಷಿಣ ಅಮೆರಿಕಾವು ದಟ್ಟ ಕಾಡು ಮತ್ತು ನಿತ್ಯ ಹರಿದ್ವರ್ಣದ ಕಾಡುಗಳನ್ನು ಹೊಂದಿರುತ್ತದೆ. ಜೊತೆಗೆ ಹುಲ್ಲುಗಾವಲಿನ ಪ್ರದೇಶಗಳನ್ನು ಕೂಡ ಹೊಂದಿರುತ್ತದೆ. ವರ್ನಿಕೋ ನದಿಯ ಪ್ರದೇಶಗಳಲ್ಲಿ ಹುಲ್ಲುಗಾವಲನ್ನು ಇಲಾನಸ್ ಎಂದು ಬ್ರೆಜಿಲ್‌ನಲ್ಲಿ ಕ್ಯಾಂಪೋಸ್ ಮತ್ತು ಅರ್ಜೆಂಟೈನಾ, ಉರುಗ್ವೆಯಲ್ಲಿ ಪಂಪಸ್ ಎಂದು ಕರೆಯುತ್ತಾರೆ. ದಕ್ಷಿಣ ಅಮೆರಿಕಾ ಅನೇಕ ಮೃಗಗಳನ್ನು ಹೊಂದಿರುತ್ತದೆ. ಆದರೆ ದೊಡ್ಡ ಕಾಡುಪ್ರಾಣಿಗಳನ್ನು ಅಲ್ಲಿ ಕಾಣಲು ಸಾಧ್ಯವಿಲ್ಲ. ದಕ್ಷಿಣ ಅಮೆರಿಕಾದಲ್ಲಿ ನಾಲ್ಕು ಬಗೆಯ ಒಂಟೆಗಳು ಇರುವುದೇ ಒಂದು ವಿಶೇಷ.

ಇತಿಹಾಸ ಮತ್ತು ಸಂಸ್ಕೃತಿ

ದಕ್ಷಿಣ ಅಮೆರಿಕಾದ ಅತೀ ಹಳೆಯ ಮನುಕುಲವೆಂದರೆ ಅಮೀರ್ ಇಂಡಿಯನ್ಸ್. ಇವರು ಉತ್ತರ ಅಮೆರಿಕಾದ ಮಾರ್ಗವಾಗಿ ಸುಮಾರು ೨೦,೦೦೦ ವರ್ಷಗಳ ಹಿಂದೆ ದಕ್ಷಿಣ ಅಮೆರಿಕಾಕ್ಕೆ ಬಂದು ನೆಲೆಸಿರುತ್ತಾರೆ. ಕ್ರಿಸ್ಟಫರ್ ಕೊಲಂಬಸ್ ೧೪೯೨ ಆಗಮನದ ವೇಳೆಯಲ್ಲಿ ಸುಮಾರು ೧೦ ಮಿಲಿಯನ್ ಅಮೀರ್ ಇಂಡಿಯನ್ ಜನಾಂಗವು ದಕ್ಷಿಣ ಅಮೆರಿಕಾದಲ್ಲಿ ವಾಸಿಸುತ್ತಿದ್ದರು ಎಂದು ಊಹಿಸಲಾಗಿದೆ. ಪೆರುವಿನ ಇಂಕಾ ಮನೆತನವು ದಕ್ಷಿಣ ಅಮೆರಿಕಾದಲ್ಲಿ ದೊಡ್ಡ ನಾಗರಿಕತೆಯನ್ನು ಮತ್ತು ಸಾಮ್ರಾಜ್ಯವನ್ನು ಸ್ಥಾಪಿಸಿತು. ೬ನೇ ಪೋಪ್ ಅಲೆಕ್ಸಾಂಡರನು ಸ್ಪೈನ್ ಮತ್ತು ಪೋರ್ಚುಗೀಸರ ಪ್ರಭಾವದ ಆಧಾರಗಳ ಮೇಲೆ ದಕ್ಷಿಣ ಅಮೆರಿಕಾ ಖಂಡವನ್ನು ವಿಭಜಿಸಿದನು. ೧೪೯೪ರಲ್ಲಿ ಕೊರಾಲೀಸ್ ಇಲಾಸ್ ಒಪ್ಪಂದವನ್ನು ಸ್ಪೇನ್‌ಗೆ, ಪೋರ್ಚ್‌ಗಲ್ಲಿಗೆ ಮತ್ತು ಅವುಗಳ ಏಳಿಗೆಗೆ ಮುಕ್ತ ಅವಕಾಶ ವನ್ನು ನೀಡಿತು. ಐರೋಪ್ಯದ ಮುಖ್ಯ ಅತಿಕ್ರಮಣವು ದಕ್ಷಿಣ ಅಮೆರಿಕಾದ ಮೇಲೆ ೧೫೩೪ರಲ್ಲಿ ನಡೆಯಿತು. ಇದರ ನಾಯಕತ್ವವನ್ನು ಫ್ರಾನ್ಸಿನ ಫ್ರಾನ್ಸಿಸ್ಕೋ ಫಿಜಾರೋ ವಹಿಸಿದ್ದರು. ೧೫೬೦ರ ವೇಳೆಗೆ ಸ್ಪೈನಿಯರು ದಕ್ಷಿಣ ಅಮೆರಿಕಾದ ಬಹುಭಾಗವನ್ನು ತಮ್ಮ ವಶದಲ್ಲಿಟ್ಟುಕೊಳ್ಳಲು ಸಾಧ್ಯವಾಯಿತು. ಇವರು ಇಂಡಾ ಸಾಮ್ರಾಜ್ಯವನ್ನು ಕಿತ್ತೊಗೆಯುವ ಮೂಲಕ ಪೋರ್ಚುಗೀಸರು ಬ್ರೆಜಿಲ್‌ನಲ್ಲಿ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಡಚ್ಚರು, ಬ್ರಿಟಿಷರು ಮತ್ತು ಫ್ರೆಂಚರು ೭ನೇ ಶತಮಾನದ ವೇಳೆಗೆ ಗುಹೆನಾಗಳ ಮೇಲೆ ತಮ್ಮ ಹಿಡಿತವನ್ನು ಸ್ಥಾಪಿಸಿದರು.

ಅತಿಕ್ರಮಣಕಾರರು ತಮ್ಮ ಸಂಗಾತಿಯರನ್ನು ಕರೆದುಕೊಂಡು ಹೋಗಲು ಸಾಧ್ಯವಾಗದೆ, ಇದರಿಂದ ಅಲ್ಲಿನ ಮೂಲನಿವಾಸಿಗಳ ಮಹಿಳೆಯರ ಸಂಪರ್ಕ ಹೊಂದುವಂತಾಯಿತು. ಈ ಮೂಲಕ ಅಮೀರ್ ಇಂಡಿಯನ್ ಮತ್ತು ಐರೋಪ್ಯ ರಕ್ತಗಳ ಸಂಮಿಶ್ರಣಗಳ ಜನಾಂಗೀಯ ಮಿಶ್ರಣವನ್ನು ಈ ಖಂಡದಲ್ಲಿ ಹೆಚ್ಚಾಗಿ ಕಾಣಬಹುದು. ಈ ರೀತಿಯ ಜನಾಂಗವನ್ನು ಮಿಸ್ಟ್ರಿಜೋಸ್ ಎಂದು ಗುರುತಿಸಲಾಗುತ್ತದೆ.

ದಕ್ಷಿಣ ಅಮೆರಿಕಾ ಖಂಡವು ೧೩ ರಾಷ್ಟ್ರಗಳನ್ನು ಒಳಗೊಂಡಿರುತ್ತದೆ. ಇವುಗಳ ರಾಜಕೀಯ ವ್ಯವಸ್ಥೆಯು ಪ್ರಾರಂಭದಲ್ಲಿ ಅಭದ್ರತೆಯಿಂದ ಕೂಡಿತ್ತು. ಮಿಲಿಟರಿ ಆಡಳಿತವು ಈ ೧೩ ರಾಷ್ಟ್ರಗಳಲ್ಲಿ ಕಂಡುಬಂದಿರುವುದು ಒಂದು ವೈಶಿಷ್ಟ್ಯದ ಬೆಳವಣಿಗೆ ಯಾಗಿದೆ. ಇದರ ಜೊತೆಗೆ ಬಲಪಂಥೀಯ ಮತ್ತು ಎಡಪಂಥೀಯ ನಾಯಕರ ನಡುವೆ ಘರ್ಷಣೆಯು ಆಗಿಂದಾಗ್ಗೆ ನಡೆಯುತ್ತಿದ್ದವು. ಅನೇಕ ಸಲ ಸಂವಿಧಾನದ ಬದಲಾವಣೆಗಳು ನಡೆದಿರುವ ಉದಾಹರಣೆಯನ್ನು ಕಾಣಬಹುದು. ಈ ಎಲ್ಲಾ ರಾಷ್ಟ್ರಗಳಲ್ಲಿ ರಾಷ್ಟ್ರಾಧ್ಯಕ್ಷರ ಆಳ್ವಿಕೆ ಇರುವುದು ಮತ್ತೊಂದು ವಿಶೇಷವಾಗಿದೆ. ಈ ಹಿನ್ನೆಲೆಯಲ್ಲಿ ೧೩ ರಾಷ್ಟ್ರಗಳ ಒಂದು ಸಂಕ್ಷಿಪ್ತ ಪರಿಚಯವನ್ನು ಇಲ್ಲಿ ಮಾಡಲಾಗಿದೆ.

. ಅರ್ಜೆಂಟೈನಾ : ಅಜೆಂಟೈನಾದ ವಿಸ್ತೀರ್ಣ ೧,೦೬೮, ೩೦೨ ಚದುರ ಮೈಲಿಗಳು (೨,೭೬೬,೮೮೯ ಕಿ.ಮೀ.ಗಳು). ೧೯೯೧ರ ಜನಗಣತಿಯ ಪ್ರಕಾರ ಜನಸಂಖ್ಯೆಯು ೩೨,೬೧೫, ೫೨೮. ಇಲ್ಲಿಯ ಆಡಳಿತ ಭಾಷೆ ಸ್ಪೇನ್. ಇಲ್ಲಿಯ ಜನರು ಶೇಕಡಾ ೯೦ರಷ್ಟು ಕ್ರಿಶ್ಚಿಯನ್ ರೋಮನ್ ಕ್ಯಾಥೋಲಿಕ್ ಧರ್ಮಕ್ಕೆ ಸೇರಿದವರಾಗಿದ್ದಾರೆ. ಇಲ್ಲಿಯ ಕರೆನ್ಸಿಯ ಹೆಸರು ಪಿಸೋ ಆಗಿದೆ. ಅರ್ಜೆಂಟೈನಾ ಗಣರಾಜ್ಯವು ದಕ್ಷಿಣ ಅಮೆರಿಕಾದ ಎರಡನೇ ದೊಡ್ಡ ರಾಷ್ಟ್ರವಾಗಿದೆ ಹಾಗೂ ಎರಡನೇ ಪ್ರಮುಖ ಬಲಿಷ್ಠ ರಾಷ್ಟ್ರವೂ ಆಗಿದೆ. ಇದರ ರಾಜಧಾನಿ ಬ್ಯುನಸ್ ಐರಸ್.

ಸ್ವಲ್ಪ ಪ್ರಮಾಣದ ಅಮೀರ್ ಇಂಡಿಯನ್ಸ್ ಜನಾಂಗವು ಅರ್ಜೆಂಟೈನಾದಲ್ಲಿ ವಾಸಿಸು ತ್ತಿತ್ತು. ೧೬ನೇ ಶತಮಾನದಲ್ಲಿ ಸ್ಪೈನಿಯರು ಅರ್ಜೆಂಟೈನಾದಲ್ಲಿ ಬಂದು ನೆಲೆಸಿದರು. ಇದು ಸುಮಾರು ೨೮೬ ವರ್ಷಗಳವರೆಗೆ ಪೆರುವಿನ ಅಧಿಕಾರದಲ್ಲಿತ್ತು. ೧೮೧೬ರಲ್ಲಿ ಅರ್ಜೆಂಟೈನಾವು ಸ್ವತಂತ್ರ ರಾಷ್ಟ್ರವಾಯಿತು. ಆದರೆ ಅದರ ನೈಜ ಅಭಿವೃದ್ದಿಯು ೧೮೫೩ರಲ್ಲಿ ಅಮೆರಿಕಾದ ಸಂವಿಧಾನದ ಮಾದರಿಯ ಸಂವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ಪ್ರಾರಂಭವಾಯಿತು.

ಅರ್ಜೆಂಟೈನಾದಲ್ಲಿ ಶೇಕಡಾ ೯೦ ಜನರು ಐರೋಪಿಯನ್ನರಾಗಿದ್ದಾರೆ. ಅದರಲ್ಲಿ ಇಟಲಿ, ಸ್ಪೈನ್ ಮತ್ತು ಜರ್ಮನಿ ರಾಷ್ಟ್ರದವರಾಗಿದ್ದರೆ, ಕೇವಲ ಶೇಕಡಾ ೨ರಷ್ಟು ಮಾತ್ರ ಅಮೀರ್ ಇಂಡಿಯನ್ಸ್ ಹಾಗೂ ಇನ್ನುಳಿದವರು ಮೀಸ್ತ್ರೀಜೋನ್ ಜನಾಂಗಕ್ಕೆ ಸೇರಿದವರಾಗಿರುತ್ತಾರೆ. ರಾಜಕೀಯ ಮತ್ತು ಸಾಮಾಜಿಕ ಅಶಾಂತಿಯು ೧೯೩೦ರ ವೇಳೆಗೆ ಅರ್ಜೆಂಟೈನಾದಲ್ಲಿ ಅತಿಯಾಯಿತು. ಪರಿಣಾಮವಾಗಿ ೧೯೫೮ರವರೆಗೆ ಅನೇಕ ಮಿಲಿಟರಿ ಆಡಳಿತಗಾರರು ರಾಷ್ಟ್ರವನ್ನು ಆಳಿದರು. ಇದು ೧೯೬೬ರಿಂದ ೧೯೭೨ ಮತ್ತು ೧೯೭೬ರಿಂದ ೧೯೮೩ರವರೆಗೆ ಮಿಲಿಟರಿ ಆಡಳಿತಕ್ಕೆ ರಾಷ್ಟ್ರವು ಓಳಪಡುವಂತಾಯಿತು. ೧೯೮೨ರಲ್ಲಿ ಅರ್ಜೆಂಟೈನಾವು ಫಾಕಲೈನ್ ದ್ವೀಪವನ್ನು ಆಕ್ರಮಿಸುವ ಪ್ರಯತ್ನದಲ್ಲಿ ರಾಷ್ಟ್ರವನ್ನು ಮತ್ತಷ್ಟು ದುಸ್ಥಿತಿಗೆ ಕೊಂಡೊಯ್ಯಿತು.

ಅರ್ಜೆಂಟೈನಾ ರಾಷ್ಟ್ರವು ಅಧ್ಯಕ್ಷ ಮಾದರಿಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುತ್ತದೆ. ಇಲ್ಲಿ ದ್ವಿಸದನ ವ್ಯವಸ್ಥೆಯನ್ನು ಕಾಣಬಹುದು. ಅವುಗಳೆಂದರೆ ಛೇಂಬರ್ ಆಫ್ ಡೆಪ್ಯೂಟಿ. ಇದು ೨೫೪ ಸದಸ್ಯರುಗಳನ್ನು ಹೊಂದಿರುತ್ತದೆ. ಈ ಎಲ್ಲಾ ಸದಸ್ಯರು ವಯಸ್ಕ ಮತದಾನ ಪದ್ಧತಿಯಿಂದ ಜನರಿಂದ ನೇರವಾಗಿ ೪ ವರ್ಷಗಳ ಅವಧಿಗೆ ಆಯ್ಕೆಯಾಗುತ್ತಾರೆ. ಮತ್ತೊಂದು ಸದನವಾದ ಸೆನೆಟ್, ೪೮ ಸದಸ್ಯರನ್ನು ಹೊಂದಿರುತ್ತದೆ. ಇವರು ಪ್ರಾಂತೀಯ ಶಾಸಕಾಂಗದ ಸಭೆಗಳ ಮೂಲಕ ಒಂಬತ್ತು ವರ್ಷಗಳ ಅವಧಿಗೆ ಆಯ್ಕೆಯಾಗಿರುತ್ತಾರೆ. ೧೯೯೫ರ ನಂತರ ಸೆನೆಟ್‌ನ ಸದಸ್ಯರ ಸಂಖ್ಯೆಯನ್ನು ೬೨ಕ್ಕೆ ಹೆಚ್ಚಿಸಲಾಯಿತು. ಈ ಮೂಲಕ ೨೨ ಪ್ರಾಂತ್ಯಗಳಿಂದ ಪ್ರತಿ ೩ ಸದಸ್ಯರನ್ನು ಮತ್ತು ಬ್ಯೂನಸ್ ಐರಸ್‌ನ ಪೆಡರಲ್ ಜಿಲ್ಲೆ ಹಾಗೂ ರಾಷ್ಟ್ರೀಯ ಭೂ ಪ್ರದೇಶದ ಟೈರ್-ಡಲ್-ಫಿಗೋ ಸೆನೆಟ್ ಅಧಿಕಾರ ಅವಧಿಯನ್ನು ೬ ವರ್ಷಕ್ಕೆ ಅವಧಿಗೆ ಆಯ್ಕೆಯಾಗುತ್ತಾರೆ. ಇವರಿಗೆ ಆಡಳಿತದಲ್ಲಿ ನೆರವಾಗಲು ಮಂತ್ರಿಮಂಡಲವು ಕಾರ್ಯ ನಿರ್ವಹಿಸುತ್ತದೆ. ಅರ್ಜೆಂಟೈನಾವು ೨೨ ಪ್ರಾಂತ್ಯಗಳು, ಒಂದು ಸಂಯುಕ್ತ ಜಿಲ್ಲೆ ಬ್ಯೂನಸ್ ಐರಸ್ ಹಾಗೂ ರಾಷ್ಟ್ರೀಯ ಭೂಪ್ರದೇಶವಾದ ಟೈರೋ-ಢಲ್-ಫಿಗೋ ಒಳಗೊಂಡಿರುತ್ತದೆ. ಇಲ್ಲಿ ಸ್ಥಳೀಯ ಸರ್ಕಾರವು ಕೂಡ ಕಾರ್ಯ ನಿರ್ವಹಿಸುತ್ತವೆ. ಸುಮಾರು, ೧,೬೧೭ ಪುರಸಭೆಗಳನ್ನು ಅರ್ಜೆಂಟೈನಾ ಹೊಂದಿದೆ.

ಪ್ರಮುಖ ಬೆಳೆಗಳೆಂದರೆ ಗೋಧಿ, ಭತ್ತ, ಬಾರ್ಲಿ, ಮುಸುಕಿನ ಜೋಳ, ತೋಕೆ ಗೋಧಿ ಮತ್ತು ಎಣ್ಣೆ ಕಾಳುಗಳು. ಎಣ್ಣೆಯನ್ನು ತಯಾರಿಸುವ ಕೈಗಾರಿಕೆಗಳು, ಗೋಧಿಹಿಟ್ಟಿನ ಕೈಗಾರಿಕೆಗಳು, ಬೀರ್, ಸಿಗರೇಟ್, ಪೇಪರ್ ಮುಂತಾದ ಕೈಗಾರಿಕೆಗಳು ಇಲ್ಲಿನ ಪ್ರಮುಖ ಕೈಗಾರಿಕೆಗಳಾಗಿವೆ. ೧೯೯೩ರ ವಿಶ್ವಬ್ಯಾಂಕಿನ ಅಂದಾಜಿನ ಪ್ರಕಾರ ಅರ್ಜೆಂಟೈನಾದ ರಾಷ್ಟ್ರೀಯ ನಿವ್ವಳ ಉತ್ಪನ್ನ ೧೯೯೧-೯೩ರ ಬೆಳೆಗಳ ಸರಾಸರಿಯಲ್ಲಿ ಯು.ಎಸ್.ಎ ಡಾಲರ್ ೨೪೪,೦೧೩ ಮಿಲಿಯನ್ ಆಗಿರುತ್ತದೆ.

. ಬೊಲಿವಿಯಾ : ಇದರ ಭೂ ಪ್ರದೇಶವು ೧,೦೮೪,೩೯೧ ಚದುರ ಕಿ.ಮೀ.ಗಳು. ನೀರಿನಿಂದ ಆವೃತವಾದ ಪ್ರದೇಶ ೧೪,೧೯೦ ಚದುರ ಕಿ.ಮೀ. ಒಟ್ಟು ೧,೦೯೮,೫೮೧ ಚ.ಕಿ.ಮೀ (೪೨೪,೧೬೪ ಚ.ಮೈಲಿ). ೧೯೯೨ರಲ್ಲಿ ಜನಸಂಖ್ಯೆ ೬,೪೨೦,೭೯೨ರಷ್ಟಿತ್ತು. ಬೊಲಿವಿಯಾದ ರಾಜಧಾನಿ ಲಿಪಾಸ್ ಇಲ್ಲಿನ ಅಧಿಕೃತ ಭಾಷೆಗಳು : ಸ್ಪೇನ್, ಕ್ಯುಲೀಚು, ಐಮರ್. ರೋಮನ್ ಕ್ಯಾಥೊಲಿಕ್ ಧರ್ಮವು ಇಲ್ಲಿ ಪ್ರಬಲವಾಗಿದೆ.

ಬೊಲಿವಿಯಾ ಗಣರಾಜ್ಯವು ದಕ್ಷಿಣ ಅಮೆರಿಕಾದ ಭೂ ಪ್ರದೇಶದ ರಾಷ್ಟ್ರವಾಗಿದೆ. ಇದು ಚಿಲಿ ಮತ್ತು ಪೆರು ರಾಷ್ಟ್ರಗಳನ್ನು ಪಶ್ಚಿಮಕ್ಕೆ ಹೊಂದಿದೆ. ಬ್ರೆಜಿಲ್ ರಾಷ್ಟ್ರವು ಇದರ ಪೂರ್ವ ಮತ್ತು ಉತ್ತರಕ್ಕೆ ಇರುತ್ತದೆ. ಪರಾಗ್ವೆ ಮತ್ತು ಅರ್ಜೆಂಟೈನಾ ಇದರ ಉತ್ತರಕ್ಕಿದೆ. ಈ ರಾಷ್ಟ್ರವು ಹಲವಾರು ಖನಿಜ ಸಂಪನ್ಮೂಲಗಳನ್ನು ಹೊಂದಿದೆ. ಅವುಗಳೆಂದರೆ ತಾಮ್ರ, ಚಿನ್ನ, ಬೆಳ್ಳಿ, ಜಿಂಕ್, ಟಿನ್ ಮತ್ತು ಯುರೇನಿಯಂ.

ಸ್ಪೇನಿಯರು ಬೊಲಿವಿಯಾದ ಇಂಕಾಸ್ ಜನಾಂಗದವರನ್ನು ೧೫೩೮ರಲ್ಲಿ ಆಕ್ರಮಿಸುವ ಮೂಲಕ ಸ್ಪೇನಿನ ಆಳ್ವಿಕೆಯನ್ನು ೧೯೨೫ರವರೆಗೆ ಸ್ಥಾಪಿಸಿದರು. ಸೈಮನ್ ಬೊಲಿವಿಯರ್ ಎಂಬ ವ್ಯಕ್ತಿಯು (೧೭೮೩-೧೮೩೦) ರಾಷ್ಟ್ರವನ್ನು ಸ್ವಾತಂತ್ರಗೊಳಿಸಲು ನೆರವಾದರು. ಈ ಕಾರಣಕ್ಕಾಗಿ ಈ ರಾಷ್ಟ್ರವನ್ನು ಅವರ ಹೆಸರಿನ ಮೂಲಕ ಕರೆಯಲಾಗಿದೆ. ಬೊಲಿವಿಯಾ ಇತಿಹಾಸದಲ್ಲಿ ಅನೇಕ ದಂಗೆಗಳು ಮತ್ತು ನೆರೆಹೊರೆಯ ಅತಿಕ್ರಮಣ ನಡೆಯುತ್ತಿದ್ದವು. ಅದುದರಿಂದ ಈ ರಾಷ್ಟ್ರವನ್ನು ದಕ್ಷಿಣ ಅಮೆರಿಕಾದ ಬಡರಾಷ್ಟ್ರ ಎಂದು ಭಾವಿಸಲಾಗಿದೆ. ಈ ರಾಷ್ಟ್ರದಲ್ಲಿ ಪ್ರಪಂಚದ ಅತಿ ದೊಡ್ಡ ಸರೋವರವಾದ ಟಿಟಿಕಾವೂ ಪೆರುವಿನ ಗಡಿಯ ಹತ್ತಿರವಿದೆ.

ಬೊಲಿವಿಯ ರಾಜಕೀಯ ವ್ಯವಸ್ಥೆಯಲ್ಲಿ ದ್ವಿಸದನ ವ್ಯವಸ್ಥೆಯನ್ನು ಕಾಣಬಹುದು. ಅವುಗಳೆಂದರೆ ಸೆನೆಟ್ ೨೭ ಸದಸ್ಯರನ್ನು ಮತ್ತು ಛೇಂಬರ್ ಆಫ್ ಡೆಪ್ಯೂಟಿ ೧೩೦ ಸದಸ್ಯರನ್ನು ಹೊಂದಿರುತ್ತದೆ. ಇವರು ೪ ವರ್ಷಗಳ ಅವಧಿಗೆ ಜನರಿಂದ ನೇರವಾಗಿ ಆಯ್ಕೆ ಮಾಡಲ್ಪಡುತ್ತಾರೆ. ಶಾಸಕಾಂಗದ ಅಧಿಕಾರವೆಲ್ಲವು ಈ ಸದನವು ಹೊಂದಿರುತ್ತದೆ. ಕಾರ್ಯಾಂಗದ ಅಧಿಕಾರವೆಲ್ಲವು ಜನರಿಂದ ೪ ವರ್ಷದ ಅವಧಿಗೆ ನೇರವಾಗಿ ಆಯ್ಕೆಯಾದ ರಾಷ್ಟ್ರಾಧ್ಯಕ್ಷರ ಬಳಿಯಲ್ಲಿರುತ್ತದೆ. ಈ ರಾಷ್ಟ್ರಪತಿಯ ಚುನಾವಣೆಯಲ್ಲಿ ಯಾವೊಬ್ಬ ಅಭ್ಯರ್ಥಿಯು ಹೆಚ್ಚಿನ ಸಂಖ್ಯೆಯಲ್ಲಿ ಮತಗಳನ್ನು ಪಡೆಯುವಲ್ಲಿ ವಿಫಲವಾದರೆ ದ್ವಿಸದನ ಅಧ್ಯಕ್ಷರನ್ನು ಆಯ್ಕೆ ಮಾಡುತ್ತದೆ. ಆಡಳಿತದ ಅನುಕೂಲಕ್ಕಾಗಿ ಬೊಲಿವಿಯಾ ರಾಷ್ಟ್ರವನ್ನು ೯ ವಿಭಾಗಗಳನ್ನಾಗಿ ಮಾಡಲಾಗಿದೆ. ಪ್ರತಿಯೊಂದು ವಿಭಾಗವು ರಾಷ್ಟ್ರಾಧ್ಯಕ್ಷರಿಂದ ನೇಮಿಸಲ್ಪಟ್ಟ ಪ್ರಿಪೆಕ್ಟರಿಂದ ಆಳಲ್ಪಡುತ್ತದೆ.

ಬೊಲಿವಿಯಾದ ಪ್ರಮುಖ ಬೆಳೆಗಳೆಂದರೆ ಗೋಧಿ, ಭತ್ತ, ಬಾರ್ಲಿ, ಮುಸುಕಿನ ಜೋಳ, ಆಲೂಗಡ್ಡೆ ಮುಂತಾದವು. ಸಿಮೆಂಟ್, ಸಕ್ಕರೆ, ಕಾಫಿ, ಮದ್ಯಪಾನ ತಯಾರಿಸುವ ಕೈಗಾರಿಕೆ, ವಿದ್ಯುಚ್ಛಕ್ತಿ ಮುಂತಾದವು ಇಲ್ಲಿನ ಪ್ರಮುಖ ಕೈಗಾರಿಕೆಗಳು. ೧೯೯೩ರ ವಿಶ್ವಬ್ಯಾಂಕಿನ ಅಂದಾಜಿನ ಪ್ರಕಾರ ಬೊಲಿವಿಯಾದ ನಿವ್ವಳ ರಾಷ್ಟ್ರೀಯ ಉತ್ಪನ್ನ ೧೯೯೧-೯೩ರ ಬೆಲೆಗಳ ಸರಾಸರಿಯಲ್ಲಿ ಯು.ಎಸ್.ಎ. ಡಾಲರ್ ೫,೪೭೨ ಮಿಲಿಯನ್ ಆಗಿರುತ್ತದೆ.

. ಬ್ರೆಜಿಲ್: ಬ್ರೆಜಿಲ್‌ನ ಭೂ ಪ್ರದೇಶವು ೮,೫೧೧,೯೯೬ ಚ.ಕಿ.ಮೀ ಅಥವಾ ೩,೨೮೬,೫೦೦ ಚ.ಮೈಲಿಗಳು. ೧೯೯೧ರ ಜನಗಣತಿಯ ಪ್ರಕಾರ ಜನಸಂಖ್ಯೆ ೧೪೬, ೧೫೪, ೫೦೨ ಇಲ್ಲಿನ ಅಧಿಕೃತ ಭಾಷೆ. ಪೋರ್ಚುಗೀಸ್, ಧರ್ಮವು ಇಲ್ಲಿ ಪ್ರಮುಖ ಧರ್ಮವಾಗಿದೆ.

ಇದು ಪ್ರಪಂಚದ ೫ನೇ ದೊಡ್ಡ ರಾಷ್ಟ್ರವಾಗಿದೆ ಹಾಗೂ ಇತರ ದಕ್ಷಿಣ ಅಮೆರಿಕಾ ರಾಷ್ಟ್ರಗಳಿಗಿಂತ ಹೆಚ್ಚಿನ ಭೂ ಪ್ರದೇಶವನ್ನು ಹೊಂದಿರುವ ರಾಷ್ಟ್ರವಾಗಿದೆ. ಈ ರಾಷ್ಟ್ರದ ಉತ್ತರಕ್ಕೆ ವೆನಿಜೋಲಿಯಾ, ಕೊಲಂಬಿಯಾ, ಗಯಾನಾ, ಸೂರ್ಯನಾಂ, ಫ್ರೆಂಚ್ ಗಯಾನಾ ರಾಷ್ಟ್ರಗಳು ಇರುತ್ತವೆ. ಪಶ್ಚಿಮಕ್ಕೆ ಪೆರು, ಬೊಲಿವಿಯ ರಾಷ್ಟ್ರಗಳಿರುತ್ತವೆ ಮತ್ತು ದಕ್ಷಿಣಕ್ಕೆ ಪರಾಗ್ವೆ, ಅರ್ಜೆಂಟೈನಾ, ಉರುಗ್ವೆ ರಾಷ್ಟ್ರಗಳಿರುತ್ತವೆ. ಈ ರಾಷ್ಟ್ರವು ಅತೀ ಉದ್ದವಾದ ಕರಾವಳೀ ಪ್ರದೇಶವನ್ನು ಅಟ್ಲಾಂಟಿಕ ಸಾಗರದಲ್ಲಿ ಹೊಂದಿರುತ್ತದೆ.

ಬ್ರೆಜಿಲ್ ರಾಷ್ಟ್ರವು ಪ್ರಾರಂಭದಲ್ಲಿ ಪೋರ್ಚುಗೀಸರ ವಶವಾಗಿತ್ತು. ಈ ರಾಷ್ಟ್ರವು ಪೋರ್ಚುಗೀಸರಿಂದ ೧೮೨೨ರಲ್ಲಿ ವಿಮುಕ್ತಿ ಹೊಂದಿತು. ಈ ಮೂಲಕ ರಾಜಪ್ರಭುತ್ವವನ್ನು ಬ್ರೆಜಿಲ್‌ನಲ್ಲಿ ೧೮೮೯ರವರೆಗೆ ಕಾಣಲಾಗಿತ್ತು. ೧೮೯೧ರ ವೇಳೆಗೆ ಸಂಯುಕ್ತ ಸಂವಿಧಾನವನ್ನು ಜಾರಿಗೊಳಿಸಲಾಯಿತು. ೧೯೨೦ರ ವೇಳೆಯಲ್ಲಿ ಸಾಮಾಜಿಕ ಅಶಾಂತಿ ರಾಷ್ಟ್ರದಲ್ಲಿ ತಲೆ ಎತ್ತಿತ್ತು. ಇದು ಸಾಲದು ಎಂಬಂತೆ ಆರ್ಥಿಕ ದಿವಾಳಿತನವನ್ನು ೧೯೩೦ರಲ್ಲಿ ಬ್ರೆಜಿಲ್ ಎದುರಿಸಿತು. ಈ ಅನಾಹುತಗಳಿಂದ ಮುಕ್ತಿ ಪಡೆಯಲು ರಾಷ್ಟ್ರದಲ್ಲಿ ಒಂದು ದೊಡ್ಡ ಕ್ರಾಂತಿಯನ್ನು ಡಾ.ಗೆಟಿಲಿಯೋ ವರ್ಗಸ್‌ರ ನಾಯಕತ್ವದಲ್ಲಿ ನಡೆಸಲಾಯಿತು. ಮುಂದೆ ಇವರು ರಾಷ್ಟ್ರದ ಆಡಳಿತದ ಚುಕ್ಕಾಣಿ ಹಿಡಿದರು. ಇದು ೧೯೮೮ರ ಸಂವಿಧಾನದ ಅಡಿಯಲ್ಲಿ ಬ್ರೆಜಿಲ್ ರಾಷ್ಟ್ರವು ಸಂಯುಕ್ತ ಗಣರಾಜ್ಯ ರಾಷ್ಟ್ರವಾಗಿದೆ. ಇದು ೨೬ ರಾಜ್ಯಗಳನ್ನು ಮತ್ತು ಒಂದು ಸಂಯುಕ್ತ ಜಿಲ್ಲೆಯಾದ ಬ್ರೆಜಿಲಿಯಾವನ್ನು ಒಳಗೊಂಡಿರುತ್ತದೆ. ಈ ರಾಷ್ಟ್ರವು ದ್ವಿಸದನಗಳನ್ನೊಳಗೊಂಡಿರುತ್ತದೆ. ಶಾಸಕಾಂಗದ ಅಧಿಕಾರಗಳೆಲ್ಲವು ದ್ವಿಸದನದಲ್ಲಿರುತ್ತದೆ. ಅವುಗಳೆಂದರೆ ಛೇಂಬರ್ ಆಫ್ ಡೆಪ್ಯೂಟೀಸ್ ಮತ್ತು ಫೆಡರಲ್ ಸೆನೆಟ್. ಛೇಂಬರ್ ಆಫ್ ಡೆಪ್ಯೂಟಿ ಸದಸ್ಯರು ೪ ವರ್ಷಗಳ ಅವಧಿಗೆ ಜನಸಂಖ್ಯಾಗನುಗುಣವಾಗಿ ಆಯ್ಕೆಯಾಗುತ್ತಾರೆ. ಫೆಡರಲ್ ಸೆನೆಟ್‌ನ ಸದಸ್ಯರು ಬಹುಸಂಖ್ಯಾ ತತ್ವದ ಆಧಾರದ ಮೇಲೆ ೮ ವರ್ಷಗಳ ಅವಧಿಗೆ ಆಯ್ಕೆಯಾಗುತ್ತಾರೆ. ಕಾರ್ಯಾಂಗದ ಅಧಿಕಾರವೆಲ್ಲವೂ ರಾಷ್ಟ್ರಾಧ್ಯಕ್ಷರ ಬಳಿಯಲ್ಲಿರುತ್ತದೆ. ರಾಷ್ಟ್ರಾಧ್ಯಕ್ಷರು ಜನರಿಂದ ನೇರವಾಗಿ ೪ ವರ್ಷಗಳ ಅವಧಿಗೆ ಆಯ್ಕೆಯಾಗುತ್ತಾರೆ. ಬ್ರೆಜಿಲ್‌ನ ೨೬ ರಾಜ್ಯಗಳು ಜನರಿಂದ ನೇರವಾಗಿ ಆಯ್ಕೆಯಾದ ರಾಜ್ಯಪಾಲರನ್ನು ಮತ್ತು ಚುನಾಯಿತ ಶಾಸಕಾಂಗವನ್ನು ಹೊಂದಿರುತ್ತವೆ. ಈ ಮೂಲಕ ಆಡಳಿತವು ನಡೆಯಲ್ಪಡುತ್ತದೆ.

ಇಲ್ಲಿನ ಪ್ರಮುಖ ಬೆಳೆಗಳೆಂದರೆ: ಗೋಧಿ, ಕಬ್ಬು, ಭತ್ತ, ತೋಕೆ ಗೋಧಿ, ಕಾಫಿ. ಪ್ರಮುಖ ಕೈಗಾರಿಕೆಗಳೆಂದರೆ: ಕಬ್ಬಿಣ, ಸಿಮೆಂಟ್, ವಿದ್ಯುಚ್ಛಕ್ತಿ ಕೈಗಾರಿಕೆಗಳು.

೧೯೯೩ರ ವಿಶ್ವಬ್ಯಾಂಕಿನ ಅಂದಾಜಿನ ಪ್ರಕಾರ ರಾಷ್ಟ್ರೀಯ ನಿವ್ವಳ ಆದಾಯವು ೧೯೯೧-೯೩ರ ಸರಾಸರಿ ಬೆಲೆಗಳಲ್ಲಿ ಯು.ಎಸ್.ಡಾಲರ್ ೪೭೧, ೯೭೮ ಮಿಲಿಯನ್.

. ಚಿಲಿ : ಚಿಲಿಯ ಭೂ ಪ್ರದೇಶ ೭೫೬, ೬೨೬, ಚ.ಕಿ.ಮೀ ಅಥವಾ ೨೯೨, ೧೩೫ ಚ.ಮೈಲಿಗಳು. ೧೯೯೨ರಲ್ಲಿ ಜನಸಂಖ್ಯೆ ೧೩,೩೪೮,೪೦೧. ಇದರ ರಾಜಧಾನಿ: ಸ್ಯಾಂಟಿಯಾಗೋ, ಇಲ್ಲಿನ ಅಧಿಕೃತ ಭಾಷೆ ಸ್ಪ್ಯಾನಿಷ್. ರೋಮನ್ ಕ್ಯಾಥೊಲಿಕ್. ಧರ್ಮವು ಇಲ್ಲಿ ಪ್ರಬಲವಾಗಿದೆ.

ಚಿಲಿ ರಾಷ್ಟ್ರವು ದಕ್ಷಿಣ ಅಮೆರಿಕಾದ ಪೆಸಿಫಿಕ್ ಕರಾವಳಿ ಪ್ರದೇಶದಲ್ಲಿದ್ದು ಉತ್ತರಕ್ಕೆ ಪೆರು ಮತ್ತು ಬೊಲಿವಿಯ ರಾಷ್ಟ್ರಗಳಿವೆ. ಪೂರ್ವಕ್ಕೆ ಅರ್ಜೆಂಟೈನಾ ರಾಷ್ಟ್ರವಿರುತ್ತದೆ. ಈ ರಾಷ್ಟ್ರವು ಸುಮಾರು ೩,೭೮೦ ಕಿ.ಮೀ.ಗಳು(೨,೩೫೦ ಮೈಲಿಗಳು) ಕರಾವಳಿ ತೀರ ಹೊಂದಿದೆ.

ಈ ರಾಷ್ಟ್ರವು ೧೬ನೆಯ ಶತಮಾನದಿಂದ ೧೮೧೮ರವರೆಗೆ ಸ್ಪೇನಿನ ಆಳ್ವಿಕೆಗೆ ಒಳಪಟ್ಟಿತ್ತು. ೧೯ನೇ ಶತಮಾನದಲ್ಲಿ ಭೂಮಾಲೀಕರ ಆಡಳಿತಕ್ಕೆ ಒಳಪಟ್ಟಿತ್ತು. ಚಿಲಿ ರಾಷ್ಟ್ರವು ೧೮೭೯-೮೩ರ ಪೆಸಿಫಿಕ್ ಯುದ್ಧದಲ್ಲಿ ಬೊಲಿವಿಯದ ವಿರುದ್ಧ ಜಯ ಗಳಿಸಿತ್ತು. ಇಂದು ಚಿಲಿ ಗಣರಾಜ್ಯವು ೧೨ ಪ್ರಾದೇಶಿಕ ವಲಯಗಳ ಮತ್ತು ಒಂದು ಮೆಟ್ರೋಪಾಲಿಟಿ ಪ್ರದೇಶವನ್ನು ಹೊಂದಿದೆ. ೧೯೭೫ರ ಮುಂಚೆ ೨೫ ಪ್ರಾಂತ್ಯಗಳನ್ನು ಹೊಂದಿತ್ತು. ಕಾರ್ಯಾಂಗದ ಅಧಿಕಾರವನ್ನು ರಾಷ್ಟ್ರಾಧ್ಯಕ್ಷರು ಹೊಂದಿರುತ್ತಾರೆ. ಇವರು ಜನರಿಂದ ನೇರವಾಗಿ ೬ ವರ್ಷಗಳ ಅವಧಿಗೆ ಆಯ್ಕೆಯಾಗಿರುತ್ತಾರೆ. ಶಾಸಕಾಂಗದ ಅಧಿಕಾರವು ದ್ವಿಸದನ ವ್ಯವಸ್ಥೆಯಲ್ಲಿರುತ್ತದೆ. ಅವುಗಳೆಂದರೆ ಸೆನೆಟ್ ಮತ್ತು ಛೆಂಬರ್ ಆಫ್ ಡೆಪ್ಯೂಟಿಸ್. ಸೆನೆಟ್ ಸದಸ್ಯರ ಸಂಖ್ಯೆ ೪೨. ಇವರುಗಳು ೮ ವರ್ಷಗಳ ಅವಧಿಗೆ ಆಯ್ಕೆಯಾಗಿರುತ್ತಾರೆ. ಛೇಂಬರ್ಸ್ ಆಫ್ ಡೆಪ್ಯೂಟಿ ಸದಸ್ಯರ ಅವಧಿ ೪ ವರ್ಷಗಳಾಗಿದ್ದು ಇದರ ಸಂಖ್ಯೆಯು ೧೨೦.

ಇಲ್ಲಿನ ಪ್ರಮುಖ ಬೆಳೆಗಳೆಂದರೆ : ಕಬ್ಬು, ಗೋಧಿ, ಭತ್ತ, ಬಾರ್ಲಿ, ತೋಕೆ ಗೋಧಿ, ಮುಸುಕಿನ ಜೋಳ, ಸಿಮೆಂಟ್, ಸಕ್ಕರೆ, ಬಿಯರ್, ಗ್ಯಾಸೋಲಿನ್, ಡೀಸಲ್, ಗ್ಲಾಸ್, ಟೈರ್‌ಗಳು ಇಲ್ಲಿನ ಪ್ರಮುಖ ಕೈಗಾರಿಕೆಗಳಾಗಿವೆ.

೧೯೯೩ರ ವಿಶ್ವಬ್ಯಾಂಕಿನ ಅಂದಾಜಿನ ಪ್ರಕಾರ ರಾಷ್ಟ್ರದ ನಿವ್ವಳ ಆದಾಯವು ೧೯೯೧-೯೩ರ ಬೆಲೆಗಳ ಸರಾಸರಿಯಲ್ಲಿ ಯು.ಎಸ್.ಡಾಲರ್ ೪೨,೪೫೪ ಮಿಲಿಯನ್ ನಷ್ಟಿತ್ತು.