ಯುರೋಪಿಯನ್ನರು ಉತ್ತರ ಅಮೆರಿಕಾಕ್ಕೆ ಹೋಗಿ ನೆಲೆಸುವ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ ಮೂರು ಶತಮಾನ ಕಾಲವಾದರೂ ಬೇಕಾಗಿತ್ತು. ಇಂದು ಫ್ಲೋರಿಡಾ ಎಂಬ ಹೆಸರಿನಿಂದ ಕರೆಯಲ್ಪಡುವ ಸೈಂಟ್ ಆಗಸ್ಟೀನ್‌ನಲ್ಲಿ ಸ್ಪೈನರು ೧೫೬೫ರಲ್ಲಿ ಮೊಟ್ಟಮೊದಲ ಬಾರಿಗೆ ಶಾಶ್ವತ ನೆಲೆಸ್ಥಾಪಿಸಿಕೊಂಡರು. ತರುವಾಯ ಟೆಕ್ಸಾಸ್ ಹಾಗೂ ಕ್ಯಾಲಿಫೋರ್ನಿಯಗಳ ಮೇಲೂ ಅವರು ವಸಾಹತುಶಾಹಿ ಹಿಡಿತ ಸಾಧಿಸಿದರು.

ಆದರೆ ಅಮೆರಿಕಾವನ್ನು ವಸಾಹತುವಾಗಿಸಿದ ಎರಡು ಪ್ರಬಲ ದೇಶಗಳೆಂದರೆ ಬ್ರಿಟನ್ ಮತ್ತು ಫ್ರಾನ್ಸ್, ಈ ದೇಶಗಳ ಮೊದಲ ವಲಸೆಗಾರರಲ್ಲಿ ಧಾರ್ಮಿಕ ಆಚಾರಗಳೇ ಮೊದಲಾದ ತಾತ್ವಿಕ ಧ್ಯೇಯವನ್ನಿಟ್ಟುಕೊಂಡು ಹೋದ ಕೆಲವರನ್ನು ಬಿಟ್ಟರೆ, ಉಳಿದ ವರೆಲ್ಲರೂ ಆರ್ಥಿಕ ಕಾರಣಗಳಿಗೋಸ್ಕರ ಆಟ್ಲಾಂಟಿಕ್‌ನ್ನು ದಾಟಿದವರೇ ಆಗಿದ್ದರು.

೧೮ನೇ ಶತಮಾನದ ಮಧ್ಯಾವಧಿಯಾಗುವಷ್ಟರಲ್ಲಿ ಉತ್ತರ ಅಮೆರಿಕಾದ ಪೂರ್ವ ಕರಾವಳಿಯಲ್ಲಿ ೧೩ ಬ್ರಿಟಿಷ್ ವಸಾಹತುಗಳು ಸ್ಥಾಪಿಸಲ್ಪಟ್ಟಿತ್ತು. ಸುಮಾರು ಒಂದೂವರೆ ಮಿಲಿಯನ್ ಯುರೋಪಿಯನ್ನರು ಅವುಗಳಲ್ಲಿ ವಾಸಿಸತೊಡಗಿದ್ದರು.

ಕೆನಡದಲ್ಲಿ ಫ್ರಾನ್ಸ್ ಕೂಡ ನಿರಾತಂಕವಾಗಿ ವಸಾಹತು ವ್ಯವಹಾರ ಮುಂದುವರೆಸಿತ್ತು. ಕ್ರಿ.ಶ.೧೬೦೮ರಲ್ಲಿ ಸಾಮ್ಯುಯೆಲ್-ಡಿ-ಚಾಂಪ್ಲೈನ್ ಕ್ಯೂಬೆಕ್‌ನ್ನು ಸ್ಥಾಪಿಸಿದನು. ೧೬೪೨ರಲ್ಲಿ ಮಾಂಟ್ರಿಯಲ್ಲನ್ನು ಒಂದು ಮಿಶನರಿ ಕೇಂದ್ರವನ್ನಾಗಿ ಸ್ಥಾಪಿಸಲಾಯಿತು. ೧೬೬೩ರಲ್ಲಿ ಫ್ರಾನ್ಸ್ ಕೆನಡವನ್ನು ಒಂದು ರಾಯಲ್ ಪ್ರಾಂತ್ಯವೆಂದು ಘೋಷಿಸಿತು ಮತ್ತು ಸಾವಿರಾರು ಮಂದಿ ಫ್ರೆಂಚರು ಅಟ್ಲಾಂಟಿಕ್‌ನ್ನು ದಾಟಿ ಹೋಗಲಾರಂಭಿಸಿದರು.

ಕೆನಡದ ಅನ್ವೇಷಣೆ : ವಿಸ್ತ್ರೀರ್ಣದಲ್ಲಿ, ವಿಶ್ವದ ಬಲಿಷ್ಠರಾಷ್ಟ್ರವಾಗಿರುವ ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕಿಂತ ೩,೦೦,೦೦೦ ಚ.ಮೈಲಿಗಳಷ್ಟು ದೊಡ್ಡದಿರುವ ಕೆನಡದ ಇತಿಹಾಸ ಮತ್ತು ಹಲವು ಕುತೂಹಲಕರ ತಿರುವುಗಳಿಂದ ಕೂಡಿದ್ದು, ಇತಿಹಾಸ ವಿದ್ಯಾರ್ಥಿಗಳ ಮನಸೂರೆಗೈಯುತ್ತದೆ. ದಟ್ಟಡವಿಯನ್ನು ಕಡಿದು, ಕಾಡನ್ನು ನಾಡಾಗಿ ಬೆಳಗಿ ಒಂದು ಸಮೃದ್ಧ ರಾಷ್ಟ್ರವನ್ನು ಕಟ್ಟಿಬೆಳೆಸಿದವರ ಕತೆಯೇ ಕೆನಡದ ಇತಿಹಾಸ.

ಧೀರರಾದ ಅನ್ವೇಷಕರು, ಮಿಶನರಿಗಳು, ತುಪ್ಪಳ (ಫರ್) ವ್ಯಾಪಾರಿಗಳೆಲ್ಲರೂ ಅದರ ನದಿ-ಸರೋವರಗಳಲ್ಲಿ ಹುಟ್ಟು ಹಾಕುತ್ತಾ ಅಡ್ಡಾಡಿದ್ದಾರೆ. ಅದರ ಮೇಲಿನ ಏಕಸ್ವಾಮ್ಯಕ್ಕಾಗಿ ಫ್ರೆಂಚರು ಮತ್ತು ಬ್ರಿಟಿಷರು ಸುದೀರ್ಘ ಕಾಲದವರೆಗೆ ಕಾದಾಡಿದ್ದಾರೆ.

ಉತ್ತರ ಅಮೆರಿಕಾದ ಉತ್ತರ ಭಾಗದಲ್ಲಿರುವ ಕೆನಡ ೩,೮೫೧,೮೦೯ ಚ.ಮೈಲು ವಿಸ್ತ್ರೀರ್ಣ ಹೊಂದಿದ್ದು, ವಿಶ್ವದ ಮೂರನೇ ಅತಿದೊಡ್ಡ ದೇಶವಾಗಿದೆ. ಸರಿಸುಮಾರು ಯುರೋಪ್‌ನಷ್ಟೇ ವಿಸ್ತಾರವಾಗಿರುವ ಕೆನಡ, ಅಮೆರಿಕಾದೊಡನೆ ಸು.೪,೦೦೦ ಕಿ.ಮೀ.ನಷ್ಟು ಉದ್ದವಾದ ಗಡಿಯನ್ನು ಹಂಚಿಕೊಂಡಿದೆ. ಮೂರು ಸಮುದ್ರಗಳಲ್ಲಿ (ಪೂರ್ವದಲ್ಲಿ ಅಟ್ಲಾಂಟಿಕ್, ಪಶ್ಚಿಮದಲ್ಲಿ ಪೆಸಿಪಿಕ್ ಹಾಗೂ ಉತ್ತರದಲ್ಲಿ ಆರ್ಕಟಿಕ್) ತನ್ನ ಕರಾವಳಿ ಯನ್ನು ಹರಡಿಕೊಂಡಿರುವ ಕೆನಡವು ರಾತೋರಾತ್ರಿ ಒಂದು ರಾಷ್ಟ್ರವಾಗಿ ಹೊರಹೊಮ್ಮಿದ್ದಲ್ಲ. ಅಸಂಖ್ಯ ರಾಜಕೀಯ ಬೆಳವಣಿಗೆಗಳೊಡನೆ ಹಂತಹಂತವಾಗಿ ಕೆನಡವೆಂಬ ಭವ್ಯರಾಷ್ಟ್ರದ ನಿರ್ಮಾಣವಾಯಿತು.

ಲೀಫ್ ಎರಿಕ್ ಸನ್ ಎಂಬ ನಾರ್ವೆಯ ಅನ್ವೇಷಕನು ಕ್ರಿ.ಶ.೧೦೦೦ದಷ್ಟು ಹಿಂದೆಯೇ ಕೆನಡಾದ ಕಿನಾರೆಗಳನ್ನು ತಲುಪಿರುವನೆಂಬ ಉಲ್ಲೇಖಗಳಿವೆಯಾದರೂ ಅದರ ದಾಖಲಿತ ಇತಿಹಾಸ ಆರಂಭವಾಗುವುದು ಕ್ರಿ.ಶ.೧೪೯೭ರಿಂದಾಗಿದೆ.

ಜಾನ್ ಕೇಬೋಟ್ ಎಂಬ ಇಂಗ್ಲಿಷ್ ನಾವಿಕನು ಇಂಗ್ಲೆಂಡಿನಿಂದ ತೇಲಿ ೧೩೯೭ರಲ್ಲಿ ಕೆನಡದ ಅಟ್ಲಾಂಟಿಕ್ ತೀರವನ್ನು ಮುಟ್ಟಿದನು. ಇತಿಹಾಸಕಾರರು ಆತ ನ್ಯೂ ಫೌಂಡ್ ಲ್ಯಾಂಡ್ ಇಲ್ಲವೇ ಕೇಪ್ ಬ್ರಿಟನ್ ದ್ವೀಪದಲ್ಲಿ ಇಳಿದಿರಬಹುದೆಂದು ನಂಬಿದ್ದಾರೆ. ಆದರೆ ಈ ಕುರಿತು ಯಾವುದೇ ಧನಾತ್ಮಕ ಪುರಾವೆಗಳು ಪ್ರಾಪ್ತವಾಗಿಲ್ಲ. ಇದಾದ ಸುಮಾರು ಒಂದು ಶತಮಾನದ ತರುವಾಯವಷ್ಟೇ ಅಲ್ಲಿ ಫ್ರೆಂಚರಿಂದ ಮೊದಲ ವಸಾಹತು  ಸ್ಥಾಪಿತವಾಯಿತು.

ಕ್ರಿ.ಶ.೧೫೨೪ರಲ್ಲಿ ಗಿಯೋವಾನ್ನ-ಡ-ವರ‌್ರಾಜಾನೊ ಎಂಬ ಇಟಾಲಿಯನ್ನರು ಫ್ರಾನ್ಸ್‌ನ ಸಾಮ್ರಾಟ ಒಂದನೇ ಫ್ರಾನ್ಸಿಸ್‌ನ ಪರವಾಗಿ ತೇಲಿ ಕೆನಡಾ ತೀರವನ್ನು ಶೋಧಿಸಿದನು. ಹತ್ತು ವರ್ಷಗಳ ತರುವಾಯ ಫ್ರಾನ್ಸಿಸ್‌ನು ಜಾಕ್ಕಸ್ ಕಾರ್ಟಿಯೆರ್ ಎಂಬ ಫ್ರೆಂಚ್ ಅನ್ವೇಷಕ ನನ್ನು ಕೆನಡಾಕ್ಕೆ ಕಳುಹಿಸಿದನು. ಕಾರ್ಟಿಯೆರನು ಸೈಂಟ್ ಲಾರೆನ್ಸ್ ಕೊಲ್ಲಿಯನ್ನು ಶೋಧಿಸಿ, ಅದರ ಸುತ್ತಮುತ್ತಲಿನ ಪ್ರದೇಶಗಳು ಫ್ರಾನ್ಸಿಗೆ ಸೇರತಕ್ಕದ್ದೆಂದು ಘೋಷಿಸಿದನು. ೧೫೩೫ರಲ್ಲಿ ಕಾರ್ಟಿಯರ್ ಸೈಂಟ್‌ಲಾರೆನ್ಸ್ ನದಿಯುದ್ದಕ್ಕೂ ತೇಲಿ, ಇಂದು ಮಾಂಟ್ರಿಯಲ್ ನಗರ ನೆಲೆ ನಿಂತಿರುವ ದ್ವೀಪದವರೆಗೆ ಸಾಗಿದನು. ಕ್ರಿ.ಶ.೧೫೪೧ರಲ್ಲಿ ತನ್ನ ಮೂರನೇ ಪಯಣ ಕೈಗೊಂಡ ಕಾರ್ಟಿಯರ್, ವಸಾಹತೊಂದನ್ನು ಸ್ಥಾಪಿಸುವ ವಿಫಲಯತ್ನ ನಡೆಸಿದನು. ಕ್ಯಾಪ್ ರೋಗ್‌ನಲ್ಲಿ ಕೆಲವು ಮುಖ್ಯ ಠಾಣ್ಯಗಳನ್ನಷ್ಟೇ ನಿರ್ಮಿಸುವಲ್ಲಿ ಸಫಲನಾದ ಕಾರ್ಟಿಯರ್, ಬಳಿಕ ಫ್ರಾನ್ಸಿಗೇ ಹಿಂದಿರುಗಿದನು.

ಫ್ರಾನ್ಸ್ ೧೫೦೦ರ ನಂತರ ಕೆನಡದ ವಿಷಯದಲ್ಲಿ ಹೆಚ್ಚಿನ ಆಸಕ್ತಿ ವಹಿಸಿದಂತೆ ಕಂಡುಬರುವುದಿಲ್ಲ. ಆದರೆ ಫ್ರೆಂಚ್ ನಾವಿಕರು ಆಗಾಗ್ಗೆ ಪೂರ್ವತೀರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು ಮತ್ತು ಹಿಡಿದ ಮತ್ಸ್ಯಗಳನ್ನು ಒಣಗಿಸಲು ಸಾಗರ ದಂಡೆಗೆ ತೆರಳುತ್ತಿದ್ದರು. ಹೀಗೆ ಅವರು ಅಲ್ಲಿನ ಭಾರತೀಯರೊಡನೆ ತುಪ್ಪಳ ವ್ಯಾಪಾರಕ್ಕಿಳಿದರು. ತಮಗೆ ತುಪ್ಪಳ ವ್ಯಾಪಾರದ ಹಕ್ಕುಗಳನ್ನು ನೀಡುವುದಾದರೆ, ತಾವು ಕೆನಡದಲ್ಲಿ ವಸಾಹತುಗಳನ್ನು ಸ್ಥಾಪಿಸಲು ನೆರವಾಗುವುದಾಗಿ ಫ್ರೆಂಚ್ ವರ್ತಕರು ತಮ್ಮ ಸಾಮ್ರಾಟನಿಗೆ ಆಹ್ವಾನವಿತ್ತರು.

‘ನೂತನ ಫ್ರಾನ್ಸಿನ ಪಿತಾಮಹ’ ಎಂದೇ ಕರೆಯಲ್ಪಡುವ ಫ್ರೆಂಚ್ ಅನ್ವೇಷಕನೂ, ವಸಾಹತುಶಾಹಿಯ ಮುಂಚೂಣಿ ಪ್ರವರ್ತಕನೂ ಆಗಿದ್ದ ಸಾಮ್ಯುಯಲ್ ಲ-ಡಿ-ಚಾಂಪ್ಲೈನ್ ನು ೧೬೦೪ರಲ್ಲಿ ಫಂಡಿ ಕೊಲ್ಲಿಯ ಕರಾವಳಿಯಲ್ಲಿ ಅಕಾಡಿಯಾ ಎಂಬ ಚಿಕ್ಕ ವಸಾಹತೊಂದನ್ನು ಸ್ಥಾಪಿಸಲು ನೆರವಾದನು. ಆದರೆ ಈಗಾಗಲೇ ೧೬೦೩ರಲ್ಲಿ ಸೈಂಟ್ ಲಾರೆನ್ಸ್ ನದಿಯನ್ನು ಸಂಶೋಧಿಸಿದ್ದ ಚಾಂಪ್ಲೈನ್, ಈ ಮಹಾನದಿಯ ತಟವು ಜನವಾಸಕ್ಕೆ ಯೋಗ್ಯವಾಗಿದೆ ಎಂಬುದನ್ನು ಮನಗಂಡಿದ್ದ. ೧೬೦೮ರಲ್ಲಿ ಆತ ಕೆನಡದ ಮೊಟ್ಟಮೊದಲ ಬಡಾವಣೆಯನ್ನಾಗಿ ಕ್ಯೂಬಿಕ್ಕನ್ನು ಸ್ಥಾಪಿಸಿದನು. ಮತ್ತೊಂದು ಸರೋವರ ವನ್ನೂ ಪತ್ತೆ ಹಚ್ಚಿ ಅದಕ್ಕೆ ತನ್ನ ಹೆಸರಿಟ್ಟನು. ಮಾಂಟ್ರಿಯಲ್(ಇದರ ಮೊದಲ ಹೆಸರು ವಿಲ್ಲೇ ಮೇರಿ)ನ್ನು ೧೬೪೨ರಲ್ಲಿ ಒಂದು ಮಿಶನರಿ ಕೇಂದ್ರವನ್ನಾಗಿ ಪರಿವರ್ತಿಸಿದನು.

ಸುಮಾರು ೬೦ ವರ್ಷಗಳವರೆಗೆ ತುಪ್ಪಳ ವ್ಯಾಪಾರಿ ಕಂಪೆನಿಗಳು ಕೆನಡದ ಮೇಲೆ ನಿಯಂತ್ರಣ ಸಾಧಿಸಿದ್ದವು. ಈ ಅವಧಿಯಲ್ಲಿ ಹಲವಾರು ಮಂದಿ ಭಾರತೀಯರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಲಾಯಿತು. ೧೬೬೩ರಲ್ಲಿ ೧೪ನೆಯ ಲೂಯಿಯು ಕೆನಡವನ್ನು ಫ್ರಾನ್ಸಿನ ಒಂದು ಪ್ರಾಂತ್ಯವೆಂದು ಸಾರಿದನು. ಕ್ರಿ.ಶ.೧೬೦೮ ಮತ್ತು ೧೭೫೬ರ ಮಧ್ಯಾವಧಿಯಲ್ಲಿ ಸು. ೧೦,೦೦೦ದಷ್ಟು ಫ್ರೆಂಚರು ಕೆನಡಕ್ಕೆ ಬಂದಿಳಿದರು. ಇಂದು ಕೆನಡದಲ್ಲಿ ವಾಸವಿರುವ ಹೆಚ್ಚಿನ ಎಲ್ಲಾ ಫ್ರೆಂಚ್ ಕೆನಡಿಯನ್ನರ ಪೂರ್ವಜರು ಇವರೇ ಆಗಿದ್ದಾರೆ. ಫ್ರೆಂಚರು ತಮ್ಮ ಉತ್ತರ ಅಮೆರಿಕಾನ್ ವಸಾಹತುಗಳನ್ನು ‘ನ್ಯೂ ಫ್ರಾನ್ಸ್’ ಎಂದು ಕರೆದರು. ಚಾಂಪ್ಲೈನ್ ಈ ‘ನ್ಯೂ ಫ್ರಾನ್ಸ್’ನ ಪಿತಾಮಹ ಎನಿಸಿಕೊಂಡನು.

ಫ್ರೆಂಚ್ ಆಡಳಿತ : ಫ್ರಾನ್ಸಿನ ವಸಾಹತಾಗಿ ‘ನ್ಯೂಫ್ರಾನ್ಸ್’ ಇಬ್ಬರಿಂದ ಆಳಲ್ಪಟ್ಟಿತ್ತು. ಒಬ್ಬಾತ ರಾಜನ ಸೇನಾ ಪ್ರತಿನಿಧಿಯಾದ ಗಮರ್ನರ್, ಇನ್ನೊಬ್ಬ ಪರಮಾಧಿಕಾರ ಮಂಡಲದ ಅಧ್ಯಕ್ಷ. ಈ ಕೌನ್ಸಿಲ್ ನವಫ್ರಾನ್ಸಿನಲ್ಲಿ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗದ ಕೆಲಸಗಳನ್ನು ಮಾಡುತ್ತಿತ್ತು. ಈ ಮಂಡಲದ ಓರ್ವ ಪ್ರಭಾವೀ ಸದಸ್ಯನೆಂದರೆ ಕ್ಯೂಬೆಕ್‌ನ ರೋಮನ್ ಕೆಥೋಲಿಕ್ ಬಿಷಪ್. ಈತ ಜನರ ಧಾರ್ಮಿಕ ಬೇಡಿಕೆಗಳ ಉಸ್ತುವಾರಿಕೆ ಹೊಂದಿದ್ದ. ಗವರ್ನರ್‌ನ(ಸೇನಾ ಪ್ರತಿನಿಧಿ)ನ ಪ್ರಧಾನ ಕರ್ತವ್ಯವು ಇಂಡಿಯನ್ನರ ಆಕ್ರಮಣದ ವಿರುದ್ಧ ವಸಾಹತಿಗೆ ರಕ್ಷಣೆ ನೀಡುವುದೇ ಆಗಿದ್ದಿತು. ಹೀಗೆ ಹೋಗಿ ನೆಲೆಸಿದವರು ಅಲ್ಲಿನ ಭಾರತೀಯರ ವಿರುದ್ಧ ೧೭೦೦ರವರೆಗೂ ಕಾದಾಡಿದರು.

ಬ್ರಿಟಿಷರ ಅಕ್ರಮಣ :

ಕೆನಡದಲ್ಲಿ ಮೊಟ್ಟಮೊದಲು ತಳವೂರಿದವರು ಫ್ರೆಂಚರೇ ಆಗಿದ್ದರೂ ಅದನ್ನು ವಸಾಹತೀಕರಿಸುವಲ್ಲಿ ಅವರು ಸಂಪೂರ್ಣ ಸಫಲತೆ ಕಾಣಲಿಲ್ಲ. ಬ್ರಿಟಿಷ್ ಹಿತಾಸಕ್ತಿಗಳನ್ನು ಹೊತ್ತ ದೋಣಿಗಳು ಕೆನಡದತ್ತ ತೇಲಿದಾಗ ಫ್ರೆಂಚರು ಅದೇ ಮೊದಲ ಬಾರಿಗೆ ಪ್ರತಿಸ್ಪರ್ಧಿಯೊಬ್ಬನನ್ನು ಎದುರಿಸಬೇಕಾಯಿತು. ಚಿನ್ನಕ್ಕಿಂತಲೂ ಮಿಗಿಲಾದ ಶ್ರೀಮಂತಿಕೆ ತುಪ್ಪಳದಲ್ಲಿದೆಯೆಂಬುದನ್ನು ಇಂಗ್ಲೆಂಡ್ ಮನಗಂಡ ದಿನದಿಂದಲೇ ಪ್ರತಿಸ್ಪರ್ಧೆಯು ತಡೆಯಲಸಾಧ್ಯ ವಾಸ್ತವವಾಯಿತು.

ತಾವು ತೆರಳಿ ನೆಲೆಯೂರಿದ ಆರಂಭಿಕ ವರ್ಷಗಳಲ್ಲೇ ಫ್ರೆಂಚ್ ಮತ್ತು ನವ ಇಂಗ್ಲೆಂಡಿನ ವಸಾಹತುಶಾಹಿಗಳು ಓಹಿಯೋ ಹಾಗೂ ಸೈಂಟ್ ಲಾರೆನ್ಸ್ ನದಿ ಕಣಿವೆಗಳ ಸಮೃದ್ಧ ತುಪ್ಪಳ ವ್ಯಾಪಾರಕ್ಕಾಗಿ ಕಚ್ಚಾಡಲಾರಂಭಿಸಿದ್ದರು. ಆದರೆ ಈ ಜಗಳವು ೧೬೮೯ರವರೆಗೂ ಒಂದು ಬಹಿರಂಗ ಸಂಘರ್ಷವಾಗಿರಲಿಲ್ಲ. ಈಗ ಫ್ರಾಂಟಿನಾಕ್ ನು ೨ನೇ ಬಾರಿಗೆ ಹೊಸಫ್ರಾನ್ಸಿನ (ಕೆನಡ ವಸಾಹತುಗಳ) ಗವರ್ನರ್ ಆಗಿ ಪುನರಾಯ್ಕೆಯಾದನು.

ಅತ್ತ ೧೬೭೦ರಲ್ಲೇ ಅಸ್ತಿತ್ವಕ್ಕೆ ಬಂದಿದ್ದ ಹಡ್ಸನ್ ಕೊಲ್ಲಿ ಕಂಪೆನಿಯು ಇಂಗ್ಲೆಂಡ್‌ಗೆ ಪಾದವೂರಲು ಬೇಕಾಷ್ಟು ಸ್ಥಳಾವಕಾಶ ಸಂಪಾದಿಸಿತ್ತು. ಹಲವಾರು ವರ್ಷಗಳವರೆಗೆ ಇಂಗ್ಲೆಂಡಿನ ಹಿಡಿತದಲ್ಲಿದ್ದ ಹಡ್ಸನ್ ಕೊಲ್ಲಿಗೆ ೧೬೮೬ರಲ್ಲಿ ಫ್ರೆಂಚರಿಂದ ಬೆದರಿಕೆ ಎದುರಾಯಿತು. ೧೬೮೬ರಲ್ಲಿ ಪಿಯರ‌್ರೆ ಟ್ರಾಯೆಸ್‌ನು ಮಾಂಟ್ರಿಯೆಲ್‌ನಿಂದ ದಂಡಯಾತ್ರೆ ಕೈಗೊಂಡು ಕೊಲ್ಲಿಯ ದಡದವರೆಗೆ ತಲುಪಿದನು. ಅಲ್ಲಿ ಆತನ ಬೆಂಬಲಿಗರು ಬ್ರಿಟಿಷ್ ಕಂಪೆನಿಗೆ ಸೇರಿದ್ದ ಹಲವಾರು ಕೋಟೆಗಳನ್ನು ಆಶ್ಚರ್ಯಕರ ರೀತಿಯಲ್ಲಿ ವಶಪಡಿಸಿಕೊಂಡರು. ನಂತರದ ಕೆಲವು ವರ್ಷಗಳಲ್ಲೂ ಪಿಯರ‌್ರೆ ಮತ್ತು ಅವನ ಸಹೋದ್ಯೋಗಿಗಳು ಈ ಪ್ರದೇಶದ ಮೇಲೆ ಅಸಂಖ್ಯ ನೌಕಾದಾಳಿಗಳನ್ನು ನಡೆಸಿ ಬ್ರಿಟಿಷ್ ಅಸ್ತಿತ್ವಕ್ಕೆ ಬೆದರಿಕೆಯೊಡ್ಡಿದರು.

ಅಟ್ಲಾಂಟಿಕ್ ತೀರದುದ್ದಕ್ಕೂ ಅಕಾಡಿಯಾ ಮತ್ತು ಹೊಸ ಇಂಗ್ಲೆಂಡ್‌ಗಳ ನಡುವೆ ಘರ್ಷಣೆಗಳು ನಡೆದವು. ಪಿಯರ‌್ರೆ-ಲಿ-ಮೋಯ್ನೆ, ಹಾಗೂ ಸಿಯರ್-ಡಿ-ಐಬರ್ ವಿಲ್ಲೆ ಇವರುಗಳು ೧೬೯೯ರಲ್ಲಿ ಲೂಸಿಯಾನವನ್ನು ಫ್ರೆಂಚ್ ವಸಾಹತುವನ್ನಾಗಿಸಿದರು. ಆದರೆ ೧೭೧೩ರ ಉಟ್ರೆಕ್ಟ್ ಒಪ್ಪಂದದಂತೆ ಗ್ರೇಟ್ ಬ್ರಿಟನ್ ನೋವಾ ಸ್ಕೋಟಿಯಾ ಹಾಗೂ ಹಡ್ಸನ್ ಕೊಲ್ಲಿ ಪ್ರದೇಶಗಳನ್ನು ಗಳಿಸಿಕೊಂಡಿತು. ಈ ಒಡಂಬಡಿಕೆಯ ತರುವಾಯ ನವಫ್ರಾನ್ಸ್ ತನ್ನ ಇತಿಹಾಸದಲ್ಲೇ ಸುಧೀರ್ಘವಾದ ೩೦ ವರ್ಷಗಳವರೆಗೆ ಶಾಂತಿಯುತ ವಾತಾವರಣವನ್ನು ಕಂಡಿತು.

ಆದರೆ ಘರ್ಷಣೆ ಇಲ್ಲಿಗೇ ಮುಗಿಯಲಿಲ್ಲ. ೧೭೪೫ರಲ್ಲಿ ಹೊಸ ಇಂಗ್ಲೆಂಡ್‌ನ ಸೇನೆಯು ಬ್ರೆಟನ್ ದ್ವೀಪದ ತುದಿಯಲ್ಲಿದ್ದ ಫ್ರೆಂಚರ ಲೂಯಿಸ್ ಬರ್ಗ್ ಕೋಟೆಯನ್ನು ವಶಪಡಿಸಿಕೊಂಡವು. ಆದರೆ ೧೭೪೮ರ ಏಕ್ಸೆ-ಲಾ-ಚೌಪೆಲ್ ಒಪ್ಪಂದವು ಯುರೋಪಿಯನ್ ಯುದ್ಧವನ್ನು ಉಪಶಮನಗೊಳಿಸುವುದರೊಂದಿಗೆ ಕೋಟೆಯು ಫ್ರೆಂಚರಿಗೆ ಹಿಂದಿರುಗಿಸಲ್ಪಟ್ಟಿತು. ಸಪ್ತವರ್ಷಗಳ ಸಮರವು (೧೭೫೬-೬೩) ಆರಂಭವಾಗುವುದಕ್ಕೆ ಮೊದಲೇ ಅತ್ತ ಕಾಳಗದ ಕದ ತೆರೆದವು. ೧೭೫೪ರಲ್ಲಿ ಓಹಿಯೋ ನದೀದಂಡೆಯಲ್ಲಿ ಫ್ರೆಂಚರ ಹಿಡಿತದಲ್ಲಿದ್ದ ಡ್ಯುಕಸ್ ಕೋಟೆಯನ್ನು ವಶಪಡಿಸಲು ಬ್ರಿಟಿಷರು ಒಂದು ದಂಡಯಾತ್ರೆ ಕೈಗೊಂಡರು. ಈ ದಾಳಿ ಮತ್ತು ಮುಂದಿನ ವರ್ಷದಲ್ಲಿ ನಡೆಸಲಾದ ಮತ್ತೊಂದು ದಾಳಿ ಎರಡೂ ಕೂಡ ವಿಫಲವಾದವು. ಬ್ರಿಟಿಷರ ಉದ್ದೇಶವು ನ್ಯೂಫ್ರಾನ್ಸನ್ನು ವಿಶೇಷವಾಗಿ ಕ್ಯೂಬೆಕ್‌ನ್ನು ವಶಪಡಿಸುವುದಾಗಿತ್ತು. ಆದರೆ ಕುಶಲ ದಂಡನಾಯಕರನ್ನು ಹೊಂದಿದ್ದ ಫ್ರೆಂಚರು ಬ್ರಿಟಿಷ್ ಯತ್ನಗಳನ್ನು ಹಿಮ್ಮೆಟ್ಟಿಸಿದರು. ೧೭೫೮ರವರೆಗೂ ವಿಜಯಲಕ್ಷ್ಮಿ ಫ್ರೆಂಚರ ಸಂಗಾತಿಯಾಗಿದ್ದಳು. ಆದರೆ ೧೭೫೮ರಲ್ಲಿ ಕೇಪ್ ಬ್ರೆಟನ್ ದ್ವೀಪದಲ್ಲಿ ಪ್ರಬಲ ಬ್ರಿಟಿಷ್ ಪಡೆಯೊಂದು ಬಂದಿಳಿಯಿತು. ಇದು ಯುದ್ಧದ ಗತಿಯನ್ನೇ ಬದಲಿಸಿತು. ಲೂಯಿಸ್ ಬರ್ಗ್ ದ್ವಿತೀಯ ಬಾರಿ ಮತ್ತು ಶಾಶ್ವತವಾಗಿ ಬ್ರಿಟಿಷರ ತೆಕ್ಕೆಗೆ ಬಿದ್ದಿತು. ೧೭೫೯ರಲ್ಲಿ ಸು. ೯.೦೦೦ ಯೋಧರನ್ನು ಹೊತ್ತಿದ್ದ ೧೪೦ ಯುದ್ಧನೌಕೆಗಳು ಜನರಲ್ ಜೇಮ್ಸ್ ವೋಲ್ಫ್‌ನ ದಂಡನಾಯಕತ್ವದಲ್ಲಿ ಸೈಂಟ್ ಲಾರನ್ಸ್‌ನುದ್ದಕ್ಕೂ ತೇಲಿ ನವ ಫ್ರಾನ್ಸ್‌ನ ರಾಜಧಾನಿಗೇ ಮುತ್ತಿಗೆ ಹಾಕಿತು. ಬ್ರಿಟಿಷ್ ಪಡೆಗಳು ಫ್ರಾನ್ಸಿನಿಂದ ಬರುತ್ತಿದ್ದ ಸರಬರಾಜೆಲ್ಲವನ್ನೂ ತಡೆಗಟ್ಟಿದವು. ೧೭೫೯ರ ಕ್ಯೂಬೆಕ್ ಕದನದಲ್ಲಿ ಬ್ರಿಟಿಷರು ನಿರ್ಣಾಯಕ ವಿಜಯ ಸಂಪಾದಿಸಿದರು. ಬ್ರಿಟಿಷ್ ದಂಡನಾಯಕತ್ವ ವಹಿಸಿದ್ದ ವೋಲ್ಫ್ ಮತ್ತು ಫ್ರೆಂಚ್ ಪಡೆಗಳ ದಂಡನಾಯಕತ್ವ ವಹಿಸಿದ್ದ ಜನರಲ್ ಮರ್ಕ್ಯೂಸ್-ಡಿ-ಮಾಂಟ್ ಕಾಮ್ ಇಬ್ಬರೂ ಕದನದಲ್ಲಿ ಕೊಲ್ಲಲ್ಪಟ್ಟರು. ಫ್ರೆಂಚ್ ಗವರ್ನರ್‌ನು ೧೭೬೦ರಲ್ಲಿ ವಸಾಹತಿನೊಡನೆ ಶರಣಾಗತನಾದನು. ೧೭೬೩ರ ಫೆಬ್ರವರಿ ೧೦ರಂದು ನಡೆದ ಪ್ಯಾರಿಸ್ ಒಪ್ಪಂದದಂತೆ ಫ್ರಾನ್ಸ್ ಕೆನಡವನ್ನು ಗ್ರೇಟ್ ಬ್ರಿಟನ್‌ಗೆ ಹಸ್ತಾಂತರಿಸಿತು.

ಬ್ರಿಟನ್ನಿನ ವಿಜಯವು ಒಂದು ಭಿನ್ನ ತೆರನಾದ ಆಡಳಿತಕ್ಕೆ ನಾಂದಿಯಾಯಿತು. ನ್ಯೂ ಫ್ರಾನ್ಸ್ ಬ್ರಿಟನ್ನಿನ ವಸಾಹತಾಯಿತು. ಬ್ರಿಟಿಷರು ಇಡೀ ಪ್ರದೇಶವನ್ನು ತಮ್ಮ ಕೈವಶ ಮಾಡಿದರಲ್ಲದೆ ತಮ್ಮದೇ ರೀತಿಯ ಸರ್ಕಾರವನ್ನೂ ಸ್ಥಾಪಿಸಿತು.

ಸರ್ಕಾರದ ಸಮಸ್ಯೆಗಳು : ಬ್ರಿಟಿಷ್ ವಿಜಯದ ಮೊದಲ ನಾಲ್ಕು ವರ್ಷಗಳ ಕಾಲ ಕೆನಡವು ಸೇನೆಯ ಆಳ್ವಿಕೆಗೊಳಪಟ್ಟಿತ್ತು. ಕೆನಡವನ್ನು ಅಧಿಕೃತವಾಗಿ ‘‘ಕ್ಯೂಬೆಕ್ ಪ್ರಾಂತ್ಯ’’ (ಪ್ರಾವಿನ್ಸ್ ಆಫ್ ಕ್ಯೂಬೆಕ್) ಎಂದು ಪುನರ್ ನಾಮಕರಣ ಮಾಡಲಾಯಿತು.

೧೯೬೩ನೆಯ ಅಕ್ಟೋಬರ್ ೭ರಂದು ಕ್ಯೂಬೆಕ್ ಪ್ರಾಂತ್ಯಕ್ಕೆ ಹೊಸ ಸಂವಿಧಾನವನ್ನು ಜಾರಿಗೊಳಿಸಲಾಯಿತು. ಇದು ಬ್ರಿಟನ್ನಿನ ಪದ್ಧತಿಗನುಗುಣವಾದ ರಾಜಕೀಯ ಸಂಸ್ಥೆಗಳನ್ನು ರಚಿಸಲು ತಾಕೀತು ಮಾಡಿತ್ತು.

ಸುಮಾರು ಹನ್ನೊಂದು ವರ್ಷಗಳ ತರುವಾಯ ಜಾರಿಗೆ ಬಂದ ಕ್ಯೂಬೆಕ್ ಕಾಯ್ದೆಯು ಮೇಲುದ್ಧೃತ ೧೭೬೩ರ ಲಂಡನ್ ರಾಜನ ಘೋಷಣೆಯನ್ನು ಸ್ಥಳಾಂತರಿಸಿತು. ಕೆನಡಿಯನ್ನರೊಡನೆ ವ್ಯವಹರಿಸುವಲ್ಲಿ ಹೆಚ್ಚು ವಸ್ತುನಿಷ್ಠವಾದ ನೀತಿಗಳನ್ನು ಜಾರಿಗೆ ತಂದಿತು. ಇದು ಫ್ರೆಂಚ್ ನಾಗರಿಕ ಕಾನೂನನ್ನು ಪುನಃ ಸ್ಥಾಪಿಸಿತು. ಫ್ರೆಂಚ್ ಭಾಷೆ ಮತ್ತು ಕೆಥೋಲಿಕ್ ಧರ್ಮಗಳಿಗೆ ಅಧಿಕೃತ ಸ್ಥಾನಮಾನ ನೀಡಿತು. ಫ್ರೆಂಚ್ ಮೂಲದ ಕೆನಡಿಯನ್ನರಿಗೆ ವಸಾಹತಿನ ನಾಗರಿಕ ಆಡಳಿತದಲ್ಲಿ ಭಾಗವಹಿಸಲು ಅವಕಾಶ ಒದಗಿಸಲಾಯಿತು.

ಈ ಎಲ್ಲಾ ಬದಲಾವಣೆಗಳು ಅತ್ಯಗತ್ಯವಾಗಿದ್ದವು. ಏಕೆಂದರೆ ಬ್ರಿಟಿಷ್ ಸಾಮ್ರಾಜ್ಯವು ಆ ಹಿಂದೆಂದೂ ಹೊಂದಿರದಿದ್ದಷ್ಟು ಬೃಹತ್ ಸಂಖ್ಯೆಯಲ್ಲಿ ಮತ್ತೊಂದು ರಾಷ್ಟ್ರೀಯತೆಗೆ ಸೇರಿದ ಬಿಳಿಯ ಪ್ರಜೆಗಳನ್ನು (ಸು.೬೫.೦೦೦) ಇದೇ ಮೊದಲ ಬಾರಿಗೆ ಕಂಡಿತು. ಈ ಜನರು ಬ್ರಿಟಿಷ್ ವ್ಯವಸ್ಥೆಗೆ ಹೊಂದಿಕೊಳ್ಳುವರೋ ಅಥವಾ ವ್ಯವಸ್ಥೆಯೇ ಈ ಜನರೊಡನೆ ಹೊಂದಿಕೊಳ್ಳಬೇಕೋ ಎಂಬ ಗೊಂದಲ ಬ್ರಿಟಿಷರದಾಗಿತ್ತು. ನೋವಾ ಸ್ಕೋಟಿಯಾದಲ್ಲಿ ಬ್ರಿಟಿಷ್ ವ್ಯವಸ್ಥೆಯನ್ನೇ ಜಾರಿಗೆ ತರಲಾಯಿತು. ೧೭೧೩ರಲ್ಲಿ ಬ್ರಿಟಿಷರು ಇದನ್ನು ವಶಕ್ಕೆ ತೆಗೆದುಕೊಂಡಾಗ ಇದರ ಜನಸಂಖ್ಯೆ ತೀರಾ ಚಿಕ್ಕದಿತ್ತು. ಅಕಾಡಿಯನ್ನರನ್ನು ಪ್ರತಿಬಂಧಿಸಿ, ಇಂಗ್ಲಿಷ್ ಮಾತನಾಡುವ ಇತರರನ್ನು ವಿಶೇಷವಾಗಿ ನ್ಯೂ ಇಂಗ್ಲೆಂಡಿಗರನ್ನು ಈ ಪ್ರದೇಶದಲ್ಲಿ ಬಂದು ನೆಲೆಸಲು ಪ್ರೋ ಅದನ್ನು ಆಂಗ್ಲಮಯಗೊಳಿಸಿದರು ಮತ್ತು ಇತರ ಬ್ರಿಟಿಷ್ ಕಾಲೋನಿಗಳಂತೆಯೇ ಇದನ್ನೂ ಆಳಿದರು.

ಲಂಡನ್ ಸರ್ಕಾರವು ಆರಂಭದಲ್ಲಿ ಕೆನಡಕ್ಕೂ ಇದೇ ಮಾದರಿಯ ಸರ್ಕಾರವನ್ನು ಪ್ರಸ್ತಾಪಿಸಿತ್ತು. ಆಗ ಇದ್ದ ಬ್ರಿಟಿಷ್ ಕಾನೂನಿನಂತೆ ಯಾವೊಬ್ಬ ರೋಮನ್ ಕೆಥೋಲಿಕನೂ ಮತ ಚಲಾಯಿಸುವಂತಿರಲಿಲ್ಲ. ಚುನಾವಣೆಗೆ ಸ್ಪರ್ಧಿಸುವಂತಿರಲಿಲ್ಲ. ಇದರರ್ಥ ವಸಾಹತುವಿನ ನಿವಾಸಿಗಳನ್ನು ಸರ್ಕಾರದ ಪಾಲುದಾರಿಕೆಯಿಂದ ಹೊರಗಿಡುವುದೇ ಆಗಿತ್ತು. ಆದರೆ ಕೇವಲ ಕೆಲವೇ ನೂರರಷ್ಟು ಪ್ರೊಟೆಸ್ಟೆಂಟ್ ಬ್ರಿಟಿಷ್ ನಾಗರಿಕರಷ್ಟೇ ಕೆನಡಾಕ್ಕೆ ಬಂದಿದ್ದರು ಮತ್ತು ಉಳಿದ ಫ್ರೆಂಚ್ ಕೆನಡಿಯನ್ನರೆಲ್ಲರೂ ಕೆಥೋಲಿಕರಾಗಿದ್ದರು.

ಗವರ್ನರ್ ಜನರಲ್ ಜೇಮ್ಸ್ ಮುರ‌್ರೇ ಫ್ರೆಂಚ್ ಕೆನಡಿಯನ್ನರ ನಿಕಟವರ್ತಿಯಾಗಿದ್ದ. ಕ್ಯಾಥೊಲಿಕರಿಗೂ ಸರ್ಕಾರದಲ್ಲಿ ಧ್ವನಿಯಿರಬೇಕೆಂದು ಆತನ ಅಭಿಲಾಷೆಯಾಗಿತ್ತು. ಈತ ವಸಾಹತಿನ ವಾತಾವರಣಕ್ಕೆ ಅನುಗುಣವಾದ ರೀತಿಯಲ್ಲಿ ಆಡಳಿತ ವ್ಯವಸ್ಥೆಯನ್ನು ಪರಿವರ್ತಿಸಲು ಕಾರ್ಯಪ್ರವೃತ್ತನಾದನು. ಸರ್-ಗೈ-ಕಾರ್ಲ್‌ಟನ್‌ರು ಈತನಿಗೆ ಬೆಂಬಲ ನೀಡಿದರು. ಇದರ ಪರಿಣಾಮವಾಗಿ ೧೭೭೪ರ ಕ್ಯೂಬೆಕ್ ಕಾಯ್ದೆ ಜಾರಿಗೆ ಬಂದಿತು.

ಒಂದೊಮ್ಮೆ ಪ್ರಸ್ತುತ ಕ್ಯೂಬೆಕ್ ಕಾಯ್ದೆ ಜಾರಿಗೆ ಬಾರದೇ ಇರುತ್ತಿದ್ದು ಫ್ರೆಂಚ್ ಕೆನಡಿಯನ್ ಮುಖಂಡರ ಮನವೊಲಿಸದೇ ಇರುತ್ತಿದ್ದರೆ ಹದಿಮೂರು ಅಮೆರಿಕಾನ್ ಕಾಲೋನಿಗಳು ಗ್ರೇಟ್ ಬ್ರಿಟನ್ ವಿರುದ್ಧ ದಂಗೆಯೆದ್ದಾಗ ಫ್ರೆಂಚ್ ಕೆನಡಿಯನ್ನರೂ ಅವರೊಡನೆ ಸೇರಿಕೊಳ್ಳಬಹುದಿತ್ತು. ಆದರೆ ಹಾಗಾಗಲಿಲ್ಲ. ಕ್ರಾಂತಿಕಾರಿ ಯುದ್ಧದ ತಕ್ಷಣದ ಪರಿಣಾಮವೆಂಬಂತೆ ಸು.೪೦,೦೦೦ ವಿಧೇಯರು ಬ್ರಿಟಿಷರ ಪರವಾಗಿದ್ದರು. ಇವರಲ್ಲಿ ಹೆಚ್ಚಿನವರು ಇಂದು ಅಟ್ಲಾಂಟಿಕ್ ಪ್ರಾಂತ್ಯವೆಂದು ಗುರುತಿಸಲ್ಪಡುವ ಪ್ರದೇಶದಲ್ಲಿ ಬಂದು ನೆಲೆಸಿದರು. ಉಳಿದವರು ಕ್ಯೂಬೆಕ್‌ನ ನೈಋತ್ಯ ದಿಕ್ಕಿನತ್ತ ಸಾಗಿದರು.

ಇಬ್ಭಾಗವಾದ ಕೆನಡ : ೧೭೧೯ರ ಸಾಂವಿಧಾನಿಕ ಕಾಯ್ದೆಯು ಕ್ಯೂಬೆಕ್ ಅನ್ನು ಎರಡು ಪ್ರತ್ಯೇಕ ಸ್ವಸರ್ಕಾರಗಳುಳ್ಳ ಪ್ರಾಂತ್ಯಗಳನ್ನಾಗಿ ಒಡೆಯಿತು. ಲಂಡನ್ ಪಾರ್ಲಿಮೆಂಟ್ ಹೊರಡಿಸಿದ ಈ ಕಾಯ್ದೆಯು ಕ್ಯೂಬೆಕ್ ಕಾಯ್ದೆಯನ್ನು ರದ್ದುಪಡಿಸಲಿಲ್ಲವಾದರೂ ಅದಕ್ಕೆ ಕೆಲವೊಂದು ತಿದ್ದುಪಡಿಗಳನ್ನು ಮಾಡಿತು. ಹೊಸ ಕಾಯ್ದೆಯು ಕೆನಡಿಯನ್ ಭೂ ಪ್ರದೇಶವನ್ನು ಎರಡು ಪ್ರತ್ಯೇಕ ವಸಾಹತುಗಳನ್ನಾಗಿ ಒಡೆಯಿತು. ಮೇಲಿನ ಕೆನಡ (ಅಪ್ಪರ್ ಕೆನಡಾ)ದಲ್ಲಿ ಹೆಚ್ಚಾಗಿ ಇಂಗ್ಲಿಷ್ ಮಾತನಾಡುವವರೂ, ಕೆಳಗಿನ ಕೆನಡ(ಲೋಯರ್ ಕೆನಡಾ)ದಲ್ಲಿ ಫ್ರೆಂಚ್ ಮಾತನಾಡುವವರೂ ನೆಲೆಸಿದರು.

ಹೊಸ ಸಂವಿಧಾನವು ಶಾಸನ ಸಭೆ ಮತ್ತು ಕಾರ್ಯಕಾರಿ ಮಂಡಲ ನಡುವಿನ ಸಂಘರ್ಷಕ್ಕೆ ಯಾವುದೇ ಪರಿಹಾರ ತರಲಿಲ್ಲ. ಆದ್ದರಿಂದಲೇ ೧೭೧೯ರ ಕಾಯ್ದೆಯು ಕೆಳಗಿನ ಕೆನಡಕ್ಕೆ ಸಂಸತ್ತಿನ ವ್ಯವಸ್ಥೆಯನ್ನು ಜಾರಿಗೊಳಿಸಿತು. ಆದರೆ ಇದು ಪ್ರಜಾ ಪ್ರಭುತ್ವವನ್ನು ತರಲಿಲ್ಲ. ಈ ಅವಧಿಯಲ್ಲಿ ಕೆಳಗಿನ ಕೆನಡದ ಜನಸಂಖ್ಯೆ ೧,೬೦,೦೦೦ವಾಗಿದ್ದು ಇವರಲ್ಲಿ ೨೦,೦೦೦ ಮಂದಿ ಇಂಗ್ಲಿಷ್ ಮಾತನಾಡುವವರಾಗಿದ್ದರು. ಈ ಪ್ರದೇಶವನ್ನು ನಾಲ್ಕು ಆಡಳಿತಾತ್ಮಕ ಜಿಲ್ಲೆಗಳನ್ನಾಗಿ ಮತ್ತು ೨೫ ಕೌಂಟಿಗಳನ್ನಾಗಿ ವಿಭಜಿಸಲಾಗಿತ್ತು. ಸುದೀರ್ಘವಾದ ವಾದ-ವಿವಾದಗಳ ಬಳಿಕ ಫ್ರೆಂಚ್ ಮತ್ತು ಇಂಗ್ಲಿಷ್‌ಗಳೆರಡನ್ನೂ ಅಧಿಕೃತ ಭಾಷೆಗಳೆಂದು ಘೋಷಿಸಲಾಯಿತು.

೧೭೦೦ರ ಮುಸ್ಸಂಜೆ ಮತ್ತು ೧೮೦೦ರ ಮುಂಜಾನೆಗಳಲ್ಲಿ ಸಂಶೋಧಕರು ಕೆನಡದ ಹಲವು ಅಜ್ಞಾತ ಒಳನಾಡುಗಳನ್ನು ಪತ್ತೆಹಚ್ಚಿದರು. ಸರ್ ಅಲೆಗ್ಸಾಂಡರ್ ಮೆಕೆಂಜಿ ಅವರು ಮೆಕೆಂಜಿ ನದಿಯನ್ನು ದಾಟಿ ಆರ್ಕಟಿಕ್ ಸಮುದ್ರದತ್ತ ತೆರಳಿದರು. ತರುವಾಯ ಅವರು ಇಂದು ಬ್ರಿಟಿಷ್ ಕೊಲಂಬಿಯಾ ನೆಲೆ ನಿಂತಿರುವ ಪೀಸ್ ಹಾಗೂ ಪಾರ್ಶಿಪ್ ನದೀಕಣಿವೆಗಳನ್ನು ಪರಿಶೋಧಿಸಿದರು. ಪಶ್ಚಿಮದಲ್ಲಿದ್ದ ಏಕೈಕ ವಸಾಹತೆಂದರೆ, ಕೆಂಪು ನದೀ ವಸಾಹತು (ಇಂದಿನ ಮಾನಟೋಬಾ). ಲಾರ್ಡ್‌ಸೆಲ್ ಕಿರ್ಕ್‌ನು ೧೮೧೨ರಲ್ಲಿ ಸ್ಕಾಟಿಷ್ ವಲಸೆಗಾರರಿಗಾಗಿ ಒಂದು ವಸಾಹತನ್ನು ರೂಪಿಸುವಲ್ಲಿ ಯಶಸ್ವಿಯಾದನು.