ಜವಾಬ್ದಾರಿಯುತ ಸರ್ಕಾರಕ್ಕಾಗಿ ಹೋರಾಟ :

ಅಮೆರಿಕಾದ ಕ್ರಾಂತಿಕಾರಿ ಯುದ್ಧವು ಬ್ರಿಟಿಷ್ ಮನದಲ್ಲೂ ಗೊಂದಲದ ಗಂಟೆ ಬಾರಿಸಿತು. ಕಟ್ಟುನಿಟ್ಟಾದ ಆಡಳಿತ ವ್ಯವಸ್ಥೆಯನ್ನು ಜಾರಿಗೊಳಿಸದೇ ಹೋದಲ್ಲಿ ತಾವೂ ಕೂಡ ಕೆನಡದಲ್ಲಿ ತಮ್ಮ ವಸಾಹತುಗಳನ್ನು ಕಳೆದುಕೊಳ್ಳಬೇಕಾದೀತೆಂಬ ಭಯ ಅವರನ್ನಾವರಿಸಿತು. ೧೮೧೨ರಲ್ಲಿ ಅಮೆರಿಕಾದ ದಾಳಿಯ ವಿರುದ್ಧ ತಮ್ಮ ನೆಲವನ್ನು ರಕ್ಷಿಸಲು ಕೆನಡಿಯನ್ನರು ಮುನ್ನಡೆದರು. ಶಾಂತಿ ಸ್ಥಾಪನೆಯಾದಾಗ ಅವರು ಸ್ವಸರ್ಕಾರದ ಬೇಡಿಕೆಯನ್ನು ಮುಂದಿಟ್ಟರು.

ಇದೇ ವೇಳೆ ಮಾಂಟ್ರಿಯಲ್‌ನ ವಾಯವ್ಯ ಕಂಪೆನಿ ಮತ್ತು ಹಡ್ಸನ್ ಕೊಲ್ಲಿ ಕಂಪೆನಿಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತು. ಬ್ರಿಟಿಷರು ತುಪ್ಪಳ ವ್ಯಾಪಾರವನ್ನು ಆರ್ಕಟಿಕ್ ಹಾಗೂ ಪೆಸಿಫಿಕ್‌ನ ಹೊರ ವಲಯದವರೆಗೆ ಕೊಂಡೊಯ್ದರು. ೧೮೨೧ರಲ್ಲಿ ಹಡ್ಸನ್ ಬೇ ಕಂಪೆನಿಯೆದುರು ನಾರ್ಥ್‌ವೆಸ್ಟ್ ಕಂಪೆನಿಯು ತನ್ನ ಅಸ್ತಿತ್ವ ಕಳೆದುಕೊಂಡಿತು.

ಅತೃಪ್ತ ವಸಾಹತುವಾಸಿಗಳು ಸರ್ಕಾರದ ವಿರುದ್ಧ ೧೮೩೭ ಮತ್ತು ೧೮೩೮ರಲ್ಲಿ ಎರಡು ಅಲ್ಪಾವಧಿಯ ಬಂಡಾಯಗಳನ್ನೆಬ್ಬಿಸಿದರು. ತೀವ್ರ ಸ್ವರೂಪದ ಅಗ್ರಗಾಮಿ ಮುಂದಾಳುಗಳಾಗಿದ್ದ ವಿಲಿಯಂ ಲಿಯಾನ್ ಮೆಕೆಂಜಿಗೆ ಮೇಲಿನ ಕೆನಡಕ್ಕೂ, ಲೂಯಿಸ್ ಜೋಸೆಫ್ ಪಾಪಿನಿಯಾನ್‌ಗೆ ಕೆಳಗಿನ ಕೆನಡಕ್ಕೂ ನಾಯಕತ್ವ ನೀಡಿದ್ದರು.

ಈ ದಂಗೆಗಳಿಂದ ಎಚ್ಚೆತ್ತ ಬ್ರಿಟಿಷ್ ಸರ್ಕಾರ ವಸಾಹತುಗಳ ಸಮಸ್ಯೆಗಳು ಮತ್ತು ಅವುಗಳನ್ನು ಬಗೆಹರಿಸುವ ವಿಧಾನಗಳನ್ನು ಅಧ್ಯಯನ ನಡೆಸಲು ಲಾರ್ಡ್ ಡುರ್ಹಾಮ್ ನನ್ನು ಕೆನಡಕ್ಕೆ ಕಳುಹಿಸಿತು. ೧೮೩೯ರಲ್ಲಿ ಲಾರ್ಡ್ ಡುರ್ಹಾಮನು ರಾಣಿ ವಿಕ್ಟೋರಿಯಾಳಿಗೆ ಸಲ್ಲಿಸಿದ ವರದಿಯು ಇಂಗ್ಲಿಷ್ ಇತಿಹಾಸದಲ್ಲೇ ಒಂದು ಮಹತ್ವದ ದಾಖಲೆಯಾಗಿದೆ. ಲಂಡನ್ ಸರ್ಕಾರವು ಉತ್ತರ ಅಮೆರಿಕಾನ್ ವಸಾಹತುಗಳಿಗೆ ಸ್ವಾಯತ್ತತೆ ನೀಡುವುದೊಂದೇ ಈಗ ಉಳಿದಿರುವ ಏಕೈಕ ಪರಿಹಾರೋಪಾಯವೆಂದು ವರದಿ ಸ್ಪಷ್ಟಪಡಿಸಿತ್ತು. ಅಲ್ಲದೆ ಫ್ರೆಂಚ್ ಮತ್ತು ಇಂಗ್ಲೀಷ್ ಭಾಷೆಗಳನ್ನಾಡುವ ಕೆನಡಿಯನ್ನರಿಬ್ಬರೂ ಏಕೋಭಾವದಿಂದ ಒಂದೇ ಜನತೆಯಾಗಿ ಬಾಳಬೇಕಾದ ಅಗತ್ಯವನ್ನೂ ಡುರ್ಹಾಮ್ ಒತ್ತಿಹೇಳಿದ್ದ.

ಆರಂಭದಲ್ಲಿ ಬ್ರಿಟಿಷ್ ಸರ್ಕಾರ ಲಾರ್ಡ್ ಡುರ್ಹಾಮ್‌ನ ವರದಿಯನ್ನು ಉದ್ಧಟತನದ್ದೆಂದು ಪರಿಗಣಿಸಿತ್ತು. ಅದು ಮೇಲಿನ ಮತ್ತು ಕೆಳಗಿನ ಕೆನಡಗಳನ್ನು ೧೮೪೦ರ ಯೂನಿಯನ್ ಕಾಯ್ದೆ ಮೂಲಕ ಒಂದುಗೂಡಿಸಲು ಪ್ರಯತ್ನಿಸಿತು. ಆದರೆ ಯೂನಿಯನ್ ಕಾಯ್ದೆ ವಿಫಲಗೊಂಡಿತು. ೧೮೪೬ ಮತ್ತು ೧೮೪೮ರ ಮಧ್ಯಾವಧಿಯಲ್ಲಿ ಬ್ರಿಟಿಷ್ ಸರ್ಕಾರ ಕೆನಡದ ಗವರ್ನರನ ಅಧಿಕಾರಗಳನ್ನು ಮೊಟಕುಗೊಳಿಸಿ ವಸಾಹತುಗಾರರಿಗೆ ಜವಾಬ್ದಾರಿಯುತ ಸರ್ಕಾರವನ್ನು ನೀಡಿತು. ಬ್ರಿಟಿಷರು ಹೀಗೇಕೆ ಮಾಡಿದರೆಂದರೆ, ತಾವು ಅಮೆರಿಕಾಕ್ಕೆ ಹೊಂದಿಕೊಂಡಿರುವ ವಸಾಹತುಗಳನ್ನು ತಮ್ಮ ಸಾಮ್ರಾಜ್ಯದಲ್ಲಿ ಬಹಳ ಕಾಲದವರೆಗೆ ಮುಂದುವರಿಸಲಾಗದೆಂಬುದನ್ನು ಮನಗಂಡಿದ್ದರು. ಆದ್ದರಿಂದ ಕೊನೆಗೆ ಕೋಪಾವೇಶದ ನಿರ್ಧಾರಗಳನ್ನು ಕೈಗೊಳ್ಳುವುದರ ಬದಲು ಈಗಲೇ ಹೆಚ್ಚು ಶಾಂತಿಯುತವಾದ ಯೋಜನೆ ರೂಪಿಸುವುದು ಸೂಕ್ತವೆಂದು ಅವರು ಭಾವಿಸಿದ್ದರು. ಈಗ ಲಾರ್ಡ್ ಡುರ್ಹಾಮ್‌ನ ನಿಲುವು ಸತ್ಯವಾಯಿತು. ವಸಾಹತುಗಳು ಸಂಪೂರ್ಣ ಬೇರ್ಪಟ್ಟು ದೂರ ಹೋಗಬಯಸದಿದ್ದರೂ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಬಿಗಿಮುಷ್ಟಿಯಿಂದ ಸ್ವತಂತ್ರವಾಯಿತು.

ಕೆನಡಾದ ಒಕ್ಕೂಟ : ಜವಾಬ್ದಾರಿ ಸರ್ಕಾರವನ್ನು ನೀಡುವುದೆಂದರೆ ಕೆನಡವು ಬ್ರಿಟಿಷ್ ಕ್ಯಾಬಿನೆಟ್ ಮಾದರಿಯ ಸರ್ಕಾರಿ ವ್ಯವಸ್ಥೆಯನ್ನು ಹೊಂದಬೇಕೆಂಬುದೇ ತಾತ್ಪರ್ಯ. ಈ ವ್ಯವಸ್ಥೆಯು ಸಮುದ್ರ ದ್ವೀಪ ಪ್ರಾಂತ್ಯಗಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿತ್ತು. ಆದರೆ ಸಂಯುಕ್ತ ಕೆನಡಾದಲ್ಲಿ ಅದು ಫಲ ನೀಡಲಿಲ್ಲ. ಇಲ್ಲಿನ ಶಾಸನ ಸಭೆಯಲ್ಲಿ ಇಂಗ್ಲಿಷ್ ಮತ್ತು ಫ್ರೆಂಚ್ ಕೆನಡಿಯನ್ನರಿಬ್ಬರೂ ಸಮಬಲ ಹೊಂದಿದ್ದು, ಕೆನಡ ಮತ್ತೊಮ್ಮೆ ಇಬ್ಭಾಗವಾಗಬೇಕೆಂಬುದನ್ನು ಸ್ಪಷ್ಟಪಡಿಸುತ್ತಿತ್ತು. ಆದರೆ ಇದು ಮತ್ತಷ್ಟು ಸಮಸ್ಯೆಗಳನ್ನು ತಂದೊಡ್ಡುವ ಸಾಧ್ಯತೆಯಿತ್ತು. ಕೆನಡದ ಎರಡು ಹೋಳುಗಳೂ ಸಮಾನ ಆರ್ಥಿಕ ಹಿತಾಸಕ್ತಿಗಳನ್ನು ಹೊಂದಿದ್ದು, ಒಂದು ಸಾಮಾನ್ಯ ಸರ್ಕಾರದ ಅವಶ್ಯಕತೆಯನ್ನು ಒತ್ತಿ ಹೇಳುತ್ತಿತ್ತು. ಈಗ ಉಳಿದಿದ್ದ ಏಕಮೇವ ಪರಿಹಾರೋಪಾಯವೆಂದರೆ ರಾಷ್ಟ್ರದ ಒಕ್ಕೂಟ. ಇದರಂತೆ ಫ್ರೆಂಚ್ ಹಾಗೂ ಇಂಗ್ಲಿಷ್‌ಗಳೆರಡೂ ಒಂದೇ ಕೇಂದ್ರ ಸರ್ಕಾರ ವನ್ನು ಹೊಂದಿರು ತ್ತವೆಯಾದರೂ ಅವರವರ ಸ್ಥಳೀಯ ವ್ಯವಹಾರಗಳನ್ನು ಅವರವರೇ ನಿಭಾಯಿಸಿಕೊಳ್ಳುತ್ತಾರೆ.

ಕೆನಡಿಯನ್ನರು ನ್ಯೂಬರ್ನ್ ಸ್ವಿಕ್, ನೋವಾಸ್ಕೋಟಿಯಾ ಮತ್ತು ಪ್ರಿನ್ಸ್ ಎಡ್ವರ್ಡ್ ದ್ವೀಪಗಳನ್ನು ಒಕ್ಕೂಟದಲ್ಲಿ ಸೇರಿಸಿಕೊಳ್ಳಬಯಸಿದರು. ಆದರೆ ಈ ವಸಾಹತುಗಳ ನಾಯಕರುಗಳು ಈಗಾಗಲೇ ತಮ್ಮದೇ ಒಂದು ಪ್ರತ್ಯೇಕ ಒಕ್ಕೂಟದ ಯೋಜನೆ ಹಾಕಿ ನ್ಯೂಫೌಂಡ್ ಲ್ಯಾಂಡನ್ನು ತಮ್ಮೊಡನೆ ಸೇರುವಂತೆ ಆಹ್ವಾನಿಸಿದ್ದರು. ೧೮೬೪ರಲ್ಲಿ ಪ್ರಿನ್ಸ್ ಎಡ್ವರ್ಡ್ ದ್ವೀಪದಲ್ಲಿ ಕರೆಯಲಾಗಿದ್ದ ಸಮಾವೇಶದಲ್ಲಿ ಮೇಲಿನ ಮತ್ತು ಕೆಳಗಿನ ಕೆನಡಗಳೆರಡರ ಪ್ರತಿನಿಧಿಗಳೂ ಸಮುದ್ರದ್ವೀಪ ಪ್ರಾಂತ್ಯದವರಲ್ಲಿ ಬ್ರಿಟಿಷ್ ಉತ್ತರ ಅಮೆರಿಕಾನ್ ವಸಾಹತುಗಳ ಒಕ್ಕೂಟ ಸ್ಥಾಪಿಸುವ ತಮ್ಮ ಯೋಜನೆಯನ್ನು ಪರಿಗಣಿಸುವಂತೆ ಕೇಳಿಕೊಂಡರು. ಇದಾದ ಒಂದು ತಿಂಗಳ ತರುವಾಯ ಕ್ಯೂಬೆಕ್ ಸಮಾವೇಶವನ್ನು ಕರೆಯಲಾಯಿತು. ಇದರಲ್ಲಿ ಭಾಗವಹಿಸಿದ್ದವರನ್ನು ‘‘ದಿ ಫಾದರ್ಸ್ ಆಫ್ ಕಾನ್‌ಫಿಡರೇಶನ್’’ ಎಂದು ಕರೆಯಲಾಗಿದೆ. ಕೆಲವರು ಹೊಸ ಸರ್ಕಾರವನ್ನು ‘‘ದಿ ಕಿಂಗ್ ಡಂ ಆಫ್ ಕೆನಡ’’ ಎಂದು ಕರೆಯಬೇಕೆಂದು ಬಯಸಿದರಾದರೂ ಅದಕ್ಕೆ ಬದಲಾಗಿ ಪ್ರಭುತ್ವ-ಚಕ್ರಾಧಿಪತ್ಯ (ಡೊಮಿನಿಯನ್) ಎಂಬ ಪದವನ್ನು ಆರಿಸಲಾಯಿತು.

ನ್ಯೂಫೌಂಡ್ ಲ್ಯಾಂಡ್ ಮತ್ತು ಪ್ರಿನ್ಸ್ ಎಡ್ವರ್ಡ್ ದ್ವೀಪಗಳು ಕ್ಯೂಬೆಕ್ ಸಮಾವೇಶದ ಯೋಜನೆಯನ್ನು ತಕ್ಷಣವೇ ತಿರಸ್ಕರಿಸಿದವು. ಆದರೆ ನ್ಯೂಬರ್ನ್ ಸ್ವಿಕ್, ಮತ್ತು ನೋವಾಸ್ಕೋಟಿಯಾಗಳು ೨ ವರ್ಷಗಳ ತರುವಾಯ ಒಪ್ಪಿಕೊಂಡವು. ಈ ಯೋಜನೆಯನ್ನು ಅಂತಿಮವಾಗಿ ‘‘ದಿ ಬ್ರಿಟಿಶ್ ನಾರ್ತ್ ಅಮೆರಿಕಾ ಆಕ್ಟ್’’ನ ರೂಪದಲ್ಲಿ ಬ್ರಿಟಿಷ್ ಸಂಸತ್ತು ೧೮೬೭ರಲ್ಲಿ ಅಂಗೀಕರಿಸಿತು. ಮೇಲಿನ ಕೆನಡದಲ್ಲಿ ಕನ್ಸರ್ವೇಟಿವ್ ಪಕ್ಷದ ನಾಯಕನಾಗಿದ್ದ ಸರ್ ಜಾನ್.ಎ. ಮೆಕ್‌ಡೊನಾಲ್ಡ್‌ನು ಈ ಚಕ್ರಾಧಿಪತ್ಯದ ಪ್ರಪ್ರಥಮ ಪ್ರಧಾನಿಯಾದನು.

೧೮೬೭ರಲ್ಲಿ ಪ್ರಸ್ತುತ ಪ್ರಭುತ್ವದಡಿಯಲ್ಲಿ ಕೇವಲ ನಾಲ್ಕು ಪ್ರಾಂತ್ಯಗಳಷ್ಟೇ ಬರುತ್ತಿದ್ದವು (ಕ್ಯೂಬೆಕ್, ಆನಟಾರಿಯೋ, ನೋವಾಸ್ಕೋಟಿಯ ಹಾಗೂ ನ್ಯೂಬರ್ನ್‌ಸ್ವಿಕ್ ಗಳು). ಆದರೆ ಈ ಚಕ್ರಾಧಿಪತ್ಯದ ಸ್ಥಾಪಕರು ಇದನ್ನು ಇನ್ನಷ್ಟು ವಿಸ್ತರಿಸಬಯಸಿದರು. ೧೮೬೯ರಲ್ಲಿ ಅವರು ಉತ್ತರ ಮತ್ತು ಪಶ್ಚಿಮದಲ್ಲಿ ತುಪ್ಪಳ ವ್ಯಾಪಾರಿ ಕಂಪೆನಿಗಳ ಕೈಕೆಳಗಿದ್ದ ಪ್ರದೇಶಗಳನ್ನು ಖರೀದಿಸಲು ಒಂದು ಯೋಜನೆ ಹಾಕಿದರು. ಹಡ್ಸನ್ ಬೇ ಕಂಪೆನಿ ಮತ್ತು ಬ್ರಿಟಿಷರೊಡನೆ ಒಂದು ಒಮ್ಮತಕ್ಕೆ ಬರಲಾದ ಬಳಿಕ ಮಾನಿಟೋಬಾ ಪ್ರಾಂತ್ಯವನ್ನು ಸೃಷ್ಟಿಸಲಾಯಿತು. ವಾಂಕೋವರ್ ದ್ವೀಪವನ್ನೊಳಗೊಂಡು ಬ್ರಿಟಿಷ್ ಕೊಲಂಬಿಯಾ ೧೮೭೧ರಲ್ಲಿ ಆರನೇ ಪ್ರಾಂತ್ಯವಾಗಿ ಚಕ್ರಾಧಿಪತ್ಯದಲ್ಲಿ ವಿಲೀನವಾಯಿತು. ಪೂರ್ವದಲ್ಲಿ ನ್ಯೂಫೌಂಡ್ ಲ್ಯಾಂಡ್, ಚಕ್ರಾಧಿಪತ್ಯದಿಂದ ದೂರ ಉಳಿಯುವ ತನ್ನ ಹಿಂದಿನ ನಿರ್ಧಾರಕ್ಕೇ ಅಂಟಿಕೊಂಡರೆ, ಪ್ರಿನ್ಸ್ ಎಡ್ವರ್ಡ್ ದ್ವೀಪವು ತನ್ನ ಮೊದಲ ನಿರ್ಧಾರವನ್ನು ಬದಲಿಸಿಕೊಂಡಿತು ಮತ್ತು ೧೮೭೩ರಲ್ಲಿ ಏಳನೇ ಪ್ರಾಂತ್ಯವಾಗಿ ಸೇರ್ಪಡೆಗೊಂಡಿತು. ೧೯೦೫ರಲ್ಲಿ ಆಲ್ಬೆರ್ಟಾ ಹಾಗೂ ಸಾಸ್ಕಚೆವಾನ್ ಪ್ರಾಂತ್ಯಗಳನ್ನು ಸೃಷ್ಟಿಸಲಾಯಿತು. ನ್ಯೂಫೌಂಡ್ ಲ್ಯಾಂಡ್‌ನ ಜನರು ೧೯೪೮ರಲ್ಲಿ ಕೆನಡದೊಡನೆ ಒಗ್ಗೂಡುವುದರ ಪರವಾಗಿ ಮತ ಚಲಾಯಿಸಿದರು ಮತ್ತು ನ್ಯೂಫೌಂಡ್ ಲ್ಯಾಂಡ್ ೧೯೪೯ರಲ್ಲಿ ಹತ್ತನೇ ಪ್ರಾಂತ್ಯವಾಗಿ ಕೆನಡಿಯನ್ ಪ್ರಭುತ್ವ ವ್ಯಾಪ್ತಿಯಲ್ಲಿ ವಿಲೀನಗೊಂಡಿತು.

ಐಕ್ಯತೆಗಾಗಿ ಹೋರಾಟ : ಚಕ್ರಾಧಿಪತ್ಯದ ಮೊದಲ ೩೦ ವರ್ಷಗಳಲ್ಲಿ ಹೊಸ ದೇಶವು ಆರ್ಥಿಕ ಮುಗ್ಗಟ್ಟಿನಿಂದ ನರಳಿತು. ೧೮೯೦ರ ದಶಕದಲ್ಲಿ ಈ ದೇಶಕ್ಕೆ ಬಂದವರಿಗಿಂತಲೂ ದೇಶ ತ್ಯಜಿಸಿ ಹೋದವರ ಸಂಖ್ಯೆಯೇ ದೊಡ್ಡದಿತ್ತು. ಆದರೆ ೧೮೯೬ರ ಬಳಿಕ ಯುರೋಪ್ ಮತ್ತು ಅಮೆರಿಕಾ ಸಂಸ್ಥಾನಗಳಿಂದ ಅಪಾರ ಸಂಖ್ಯೆಯ ವಲಸಿಗರು ಕೆನಡಕ್ಕೆ ಆಗಮಿಸಿದರು.

ಆರಂಭಿಕ ಸರ್ಕಾರ ಎದುರಿಸಿದ ಮತ್ತೊಂದು ಸಮಸ್ಯೆಯೆಂದರೆ, ಫ್ರೆಂಚ್ ಮತ್ತು ಇಂಗ್ಲಿಷ್ ಮಾತನಾಡುವವರ ನಡುವೆ ಇದ್ದ ಕಹಿಭಾವನೆಗಳು. ೧೮೬೯ರ ಕೆಂಪುನದೀ ಬಂಡಾಯದ ವೇಳೆ ಈ ಮನಸ್ತಾಪ ಮತ್ತಷ್ಟು ಹೆಚ್ಚಿತ್ತು. ಕೆನಡದ ಪ್ರಭುತ್ವವು ಹಡ್ಸನ್ ಕೊಲ್ಲಿ ಕಂಪೆನಿಯೊಡನೆ ಅದರ ನೆಲವನ್ನು ಖರೀದಿಸುವ ಕುರಿತು ಮಾತುಕತೆಗಿಳಿದು ತಾವು ತಮ್ಮ ಮನೆ ಮಠಗಳನ್ನು ಕಳೆದುಕೊಳ್ಳಬಹುದೆಂಬ ಹೆದರಿಕೆಯೇ ಈ ಬಂಡಾಯಕ್ಕೆ ಕಾರಣವಾಗಿತ್ತು. ೧೮೮೫ರಲ್ಲಿ ಎರಡನೇ ಬಾರಿಗೆ ಮೇಟಿಗಳು ಬಂಡೆದ್ದರಾದರೂ ಸರ್ಕಾರ ಅದನ್ನೂ ವಿಫಲಗೊಳಿಸಿತು.

೧೮೯೬ರಲ್ಲಿ ಉದಾರವಾದಿ ಪಕ್ಷದ ಧುರೀಣ ಸರ್ ವಿಲ್‌ಫ್ರೆಡ್ ಲೌರಿಯರ್ ಕೆನಡದ ಪ್ರಧಾನಿಯಾದನು. ಮೊದಲ ಫ್ರೆಂಚ್-ಕೆನಡಿಯನ್ ಪ್ರಧಾನಿಯಾಗಿರುವ ಈತ ಎಲ್ಲಾ ಕೆನಡಿಯನ್ನರನ್ನೂ ಒಗ್ಗೂಡಿಸಲು, ಕೆನಡದಲ್ಲಿ ಐಕ್ಯತೆ ಸ್ಥಾಪಿಸಲು ಶಕ್ತಿಮೀರಿ ಶ್ರಮಿಸಿದನು. ಇವನ ಆಡಳಿತಾವಧಿಯಲ್ಲಿ ರೈಲ್ವೆ ಹಳಿ ನಿರ್ಮಾಣ, ಕೃಷಿ ಮತ್ತು ಗಣಿಗಾರಿಕೆಗಳು ವೃದ್ದಿಸಿದವು.

ಪ್ರಥಮ ಮಹಾಯುದ್ಧ ಮತ್ತು ಕೆನಡ ೧೯೧೪ರಲ್ಲಿ ಬ್ರಿಟನ್ ಜರ್ಮನಿಯ ಮೇಲೆ ಯುದ್ಧ ಘೋಷಿದಾಗ ಕೆನಡ ತಕ್ಷಣದಿಂದಲೇ ಬ್ರಿಟನ್‌ಗೆ ನೆರವಾಗಲು ಮುಂದಾಯಿತು. ಆಗ ಕೆನಡಿಯನ್ ಸೇನೆಯಲ್ಲಿದ್ದುದು ಕೇವಲ ೩,೦೦೦ ಸೈನಿಕರು. ಆದರೆ ೧೯೧೪ರ ಅಕ್ಟೋಬರ್ ವೇಳೆಯಷ್ಟರಲ್ಲಿ ಆ ಸಂಖ್ಯೆಯನ್ನು ೩೩ ಸಾವಿರಕ್ಕೇರಿಸಲಾಯಿತು. ಇವರು ಬ್ರಿಟನ್‌ಗೆ ತೆರಳಿ ತರಬೇತಿ ಪಡೆದು ೧೯೧೫ರ ಫೆಬ್ರವರಿಯಾಗುವಷ್ಟರಲ್ಲಿ ಫ್ರಾನ್ಸಿನಲ್ಲಿ ಬಂದಿಳಿದರು. ೧೯೧೬ರ ವೇಳೆಗಾಗುವಷ್ಟರಲ್ಲಿ ಇಂತಹ ನಾಲ್ಕು ಕೆನಡಿಯನ್ ಬೆಟಾಲಿಯನ್‌ಗಳು ಸಿದ್ಧವಾದವಲ್ಲದೆ ಇವು ಯುದ್ಧದಲ್ಲಿ ಮುಖ್ಯ ಪಾತ್ರ ವಹಿಸಿದವು. ಯುದ್ಧದಲ್ಲಿ ೭೨ ಶತ್ರು ವಿಮಾನಗಳನ್ನು ಹೊಡೆದುರುಳಿಸಿದ ಹೆಗ್ಗಳಿಕೆ ಇರುವ ಕೆನಡಿಯನ್ ಸೇನೆಯಲ್ಲಿ ೫೫,೦೦೦ ಸೈನಿಕರು ಯುದ್ಧದಲ್ಲಿ ಪ್ರಾಣತೆತ್ತರು. ದೇಶವು ತನ್ನ ಮಿತ್ರರಿಗೆ ಯುದ್ಧಾವಧಿಯಲ್ಲಿ ಸಾಕಷ್ಟು ಆಹಾರ ಮತ್ತು ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಿತ್ತು. ೧೯೧೪ರಲ್ಲಿ ಮತ್ತೆ ಫ್ರೆಂಚ್ ಹಾಗೂ ಇಂಗ್ಲಿಷ್ ಮಾತೃಭಾಷಿಕರಲ್ಲಿ ಒಡಕುಂಟಾಗುವ ಸಾಧ್ಯತೆಯಿತ್ತಾದರೂ, ಅದೇ ವರ್ಷ ಲಿಬರಲ್ ಮತ್ತು ಕನ್ಸರ್‌ವೇಟಿವ್ ಪಕ್ಷಗಳು ಒಗ್ಗೂಡಿ ಯೂನಿಯನ್ ಪಕ್ಷವನ್ನು ಹುಟ್ಟುಹಾಕುವುದರೊಂದಿಗೆ ಬಿಕ್ಕಟ್ಟು ಬಗೆಹರಿಯಿತು.

ಒಂದು ರಾಷ್ಟ್ರವಾಗಿ ಕೆನಡ : ಪ್ರಥಮ ವಿಶ್ವಯುದ್ಧದ ನಂತರದ ಹತ್ತು ವರ್ಷಗಳಲ್ಲಿ ಕೆನಡ ಪ್ರಗತಿಯತ್ತ ದಾಪುಗಾಲು ಹಾಕತೊಡಗಿತು. ಹೊಸ ಗಣಿ ತಂತ್ರಜ್ಞಾನಗಳು ಅಳವಡಿಸಲ್ಪಟ್ಟವು. ಸರ್ಕಾರ ಎರಡು ಪ್ರಮುಖ ರೈಲ್ವೆ ರಸ್ತೆ ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಅಲ್ಲದೆ ಅಂತರಾಷ್ಟ್ರೀಯ ವ್ಯವಹಾರಗಳಲ್ಲೂ ಹಂತಹಂತವಾಗಿ ಕೆನಡ ಕಾಣಿಸಿಕೊಳ್ಳ ತೊಡಗಿತು. ವರ್ಸೇಲ್ಸ್ ಶಾಂತಿ ಸಾಮಾವೇಶದಲ್ಲಿ ಭಾಗವಹಿಸುವ ಅವಕಾಶವನ್ನು ಪಡೆದುಕೊಂಡಿತು ಮತ್ತು ರಾಷ್ಟ್ರಗಳ ಸಂಘದಲ್ಲಿ ಸದಸ್ಯತ್ವವನ್ನು ಗಳಿಸಿತು.

೧೯೨೬ರಲ್ಲಿ ಒಂದು ಸಾಂವಿಧಾನಿಕ ಸಮಸ್ಯೆ ಕಾಣಿಸಿಕೊಂಡಿತು. ಉದಾರವಾದಿಗಳು ಹಗರಣವೊಂದರಲ್ಲಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ರಾಜನು ಪಾರ್ಲಿಮೆಂಟನ್ನು ವಿಸರ್ಜಿಸುವಂತೆ ಗವರ್ನರ್ ಜನರಲ್‌ಗೆ ನಿರ್ದೇಶಿಸಿದನು. ಆದರೆ ಗವರ್ನರ್ ಜನರಲ್ ಲಾರ್ಡ್‌ಬಿಂಗ್ ಇದನ್ನು ತಿರಸ್ಕರಿಸಿದಾಗ ಸ್ವತಃ ರಾಜನೇ ರಾಜೀನಾಮೆ ನೀಡಿದನು. ಆರ್ಥರ್ ಮೈಘೆನ್‌ನು ಒಂದು ಕ್ಯಾಬಿನೆಟ್ಟನ್ನು ರಚಿಸಲು ಪ್ರಯತ್ನಿಸಿದನಾದರೂ ಪಾರ್ಲಿಮೆಂಟಿನ ಬೆಂಬಲ ಗಳಿಸುವಲ್ಲಿ ವಿಫಲನಾದನು.

ರಾಜನು ಲಂಡನ್‌ನಲ್ಲಿ ಸಾಮ್ರಾಜ್ಯಶಾಹಿ ಸಮಾವೇಶದಲ್ಲಿ ಭಾಗಿಯಾದನು ಮತ್ತು ಮರುವರ್ಷವೇ ಗ್ರೇಟ್ ಬ್ರಿಟನ್ ಮತ್ತು ಅದರ ಅಧೀನ ಪ್ರಭುತ್ವಗಳ ನಡುವಿನ ಸಂಬಂಧದ ಕುರಿತು ಚರ್ಚಿಸಲು ಆಸಕ್ತಿವಹಿಸಿದನು. ಇದರ ಪರಿಣಾಮವಾಗಿ ಸಮಾವೇಶವು ಎಲ್ಲಾ ಬ್ರಿಟಿಷ್ ಡೊಮಿನಿಯನ್‌ಗಳೂ ಸಮಾನ ಸ್ಥಾನಮಾನ ಹೊಂದಿರುತ್ತವೆ ಎಂಬ ಠರಾವನ್ನು ಅಂಗೀಕರಿಸಲಾಯಿತು. ೧೯೩೧ರಲ್ಲಿ ಬ್ರಿಟಿಷ್ ಸಂಸತ್ತು ವೆಬ್ ಮಿನಿಸ್ಟರ್ ಶಾಸನವನ್ನು ಅನುಮೋದಿಸಿತು. ಕೆನಡವು ಬ್ರಿಟಿಷ್ ಕಾಮನ್‌ವೆಲ್ತ್ ರಾಷ್ಟ್ರಗಳಲ್ಲಿ ಒಬ್ಬ ಸದಸ್ಯನೆಂದು ಪರಿಗಣಿಸಲ್ಪಟ್ಟಿತು.

೧೯೨೯ರಲ್ಲಿ ವಿಶ್ವವನ್ನೇ ನಡುಗಿಸಿದ ಆರ್ಥಿಕ ಮುಗ್ಗಟ್ಟಿನಿಂದ ಕೆನಡ ಕೂಡ ಹೊರತಾಗಿರಲಿಲ್ಲ. ಇದು ಕೃಷಿ ಮತ್ತು ಗಣಿಗಾರಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡಿತು. ೧೯೩೦ರಲ್ಲಿ ಕನ್ಸರ್‌ವೇಟಿವ್ ಪಕ್ಷ ಅಧಿಕಾರಕ್ಕೆ ಬಂದಿತು. ೧೯೩೨ರಲ್ಲಿ ರಾಜಧಾನಿ ಒಟ್ಟಾವದಲ್ಲಿ ನಡೆದ ಸಾರ್ವಭೌಮಿಕ ಸಮಾವೇಶವು ವಾಣಿಜ್ಯದ ಸ್ಥಿತಿ-ಗತಿಗಳನ್ನು ಅಭಿವೃದ್ದಿಪಡಿಸಲು ನಿರ್ಧರಿಸಿತು. ಕೆನಡವು ವ್ಯಾಪಾರವನ್ನು ಉತ್ತೇಜಿಸುವ ಸಲುವಾಗಿ ಇತರ ಕಾಮನ್‌ವೆಲ್ತ್ ದೇಶಗಳೊಡನೆ ಸುಂಕ ಸಂಬಂಧಿ ಒಪ್ಪಂದಗಳಿಗೆ ಸಹಿ ಹಾಕಿತು.

ದ್ವಿತೀಯ ಮಹಾಯುದ್ಧ ಮತ್ತು ಕೆನಡ : ೧೯೩೮ನೆಯ ಸೆಪ್ಟೆಂಬರ್ ೧೦ರಂದು ಕೆನಡವು ಜರ್ಮನಿಯ ಮೇಲೆ ಯುದ್ಧ ಘೋಷಿಸಿತು. ಕೆನಡ ಸ್ವತಂತ್ರವಾಗಿ ಯುದ್ಧವೊಂದನ್ನು ಘೋಷಿಸಿರುವುದು ಇದೇ ಮೊದಲ ಬಾರಿಯಾಗಿದೆ. ಆದರೆ ಕೆನಡವು ಯುದ್ಧವೊಂದಕ್ಕೆ ಇನ್ನೂ ಸಿದ್ಧಗೊಂಡಿರಲಿಲ್ಲ. ಒಂದು ಪುಟ್ಟ ಭೂಸೇನೆಯನ್ನಷ್ಟೇ ಹೊಂದಿದ್ದ ಇದು ಭಾಗಶಃ ಯಾವುದೇ ನೌಕಾದಳವನ್ನಾಗಲೀ, ವಾಯುಪಡೆಯನ್ನಾಗಲೀ ಹೊಂದಿರಲಿಲ್ಲ. ೧೯೪೧ರ ಡಿಸೆಂಬರ್ ೮ರಂದು ಜಪಾನಿಯರು ಪರ್ಲ್ ಹಾರ್ಬರ್ ಮೇಲೆ ದಾಳಿ ನಡೆಸಿದಾಗ ಕೆನಡ ಜಪಾನಿನ ಮೇಲೂ ಯುದ್ಧ ಘೋಷಿಸಿತು.

೧೯೪೦ರಲ್ಲಿ ಕೆನಡ ಮತ್ತು ಅಮೆರಿಕಾಗಳು ರಕ್ಷಣಾ ವಿಚಾರದಲ್ಲಿ ಒಂದು ಶಾಶ್ವತ ಮಂಡಲಿಯನ್ನು ಸ್ಥಾಪಿಸಿದವು. ಈ ಸಮಿತಿಯು ಉಭಯದೇಶಗಳಿಗೂ ಅಟ್ಲಾಂಟಿಕ್ ಹಾಗೂ ಪೆಸಿಫಿಕ್ ತೀರಗಳಲ್ಲಿ ಬೇಕಾಗಬಹುದಾದ ರಕ್ಷಣಾ ಅಗತ್ಯಗಳ ಸಮೀಕ್ಷೆ ನಡೆಸಿತು. ಇದರ ಒಂದು ಪರಿಣಾಮವಾಗಿ ಅಲಾಸ್ಕ ಹೆದ್ದಾರಿಯ ಕಾಮಗಾರಿ ಪೂರ್ಣ ಗೊಂಡಿತು ಮತ್ತು ಅಲಾಸ್ಕಕ್ಕೆ ಸೇನಾ ಸರಬರಾಜು ಮಾಡಲು ಅದನ್ನು ಬಳಸಿಕೊಳ್ಳಲಾಯಿತು.

ಇಷ್ಟರಲ್ಲಾಗಲೇ ಕೆನಡ ತನ್ನ ಸೇನಾಬಲ ಹೆಚ್ಚಿಸಿಕೊಂಡಿತ್ತು. ಅದರ ರಾಯಲ್ ಕೆನಡಿಯನ್ ವಾಯುಪಡೆಯಲ್ಲಿ ೩,೦೦,೦೦೦ ದಷ್ಟು ಯೋಧರಿದ್ದು, ಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ಆರಂಭದಲ್ಲಿ ಕೇವಲ ೪,೫೦೦ರಷ್ಟು ನಿಯಮಿತ ಸೈನಿಕರನ್ನು ಹೊಂದಿದ್ದ ಕೆನಡದ ಭೂಸೇನಾ ಬಲ ಈಗ ೬,೦೦,೦೦೦ ಕ್ಕೇರಿತ್ತು. ಸಿಸಿಲಿ ಮತ್ತು ಇಟಲಿಗಳಲ್ಲಿ ಕೆನಡಿಯನ್ ಸೇನೆ ವೀರಾವೇಶದಿಂದ ಹೋರಾಡಿತು. ಬೆಲ್ಜಿಯಂ ಮತ್ತು ನೆದರ್‌ಲ್ಯಾಂಡ್‌ಗಳ ವಿಮೋಚನೆ ಮತ್ತು ಅಂತಿಮವಾಗಿ ಜರ್ಮನಿಯನ್ನು ಆಕ್ರಮಿಸುವುದರಲ್ಲೂ ಕೆನಡ ಪ್ರಮುಖ ಪಾತ್ರ ವಹಿಸಿತ್ತು. ಆರಂಭದಲ್ಲಿ ಕೇವಲ ೧೩ ಹಡಗುಗಳು ಮತ್ತು ೩,೬೦೦ ನೌಕಾಯೋಧರನ್ನು ಹೊಂದಿದ್ದ ಕೆನಡ ೧೯೪೫ರ ವೇಳೆಯಷ್ಟರಲ್ಲಿ ೭೦೦ ಯುದ್ಧನೌಕೆಗಳು ಮತ್ತು ೧,೦೦,೦೦೦ ಮಂದಿ ಯೋಧರನ್ನು ಒಳಗೊಂಡಿತ್ತು. ಅಟ್ಲಾಂಟಿಕ್ ಯುದ್ಧಗಳಲ್ಲಿ ಇವರ ಸಮರನೌಕೆಗಳು ನಿರ್ಣಾಯಕ ಪಾತ್ರ ವಹಿಸಿದ್ದು, ಜರ್ಮನಿಯ ಶರಣಾಗತಿಯ ನಂತರ ಜಪಾನಿನ ವಿರುದ್ಧ ಕಾದಲು ಪೆಸಿಫಿಕ್ ಕಡೆ ಮುನ್ನಡೆದವು. ಆಹಾರ, ಔಷಧಿ ಮತ್ತು ಶಸ್ತ್ರಾಸ್ತ್ರಗಳನ್ನೂ ಕೆನಡ ಸಕಾಲದಲ್ಲಿ ತನ್ನ ಮಿತ್ರ ಪಡೆಗಳಿಗೆ ಸರಬರಾಜು ಮಾಡುತ್ತಾ ದ್ವಿತೀಯ ಮಹಾಯುದ್ಧದಲ್ಲಿ ಪ್ರಧಾನ ಪಾತ್ರ ವಹಿಸಿತ್ತು.

ಯುದ್ಧದ ಬಳಿಕ ಕೆನಡದ ಹಿತಾಸಕ್ತಿಗಳಿಗೂ ಶುಕ್ರದೆಸೆ ಪ್ರಾಪ್ತವಾದವು. ಯುದ್ಧಾನಂತರದ ಮೊದಲ ಹತ್ತು ವರ್ಷಗಳಲ್ಲಿ ಕೆನಡ ಇತರ ದೇಶಗಳಿಗೆ ೪,೦೦೦,೦೦೦,೦೦೦ ಡಾಲರ್ ಗಳನ್ನು ಸಾಲ ನೀಡಿತ್ತೆಂದರೆ ಅದರ ಸಮೃದ್ದಿಯನ್ನು ಊಹಿಸಬಹುದಾಗಿದೆ.

ಕಮ್ಯುನಿಸ್ಟ್ ವಿರೋಧಿ ಆಂದೋಲನದಲ್ಲಿ ಅಮೆರಿಕಾ ಮತ್ತು ಕೆನಡಾಗಳು ಪಶ್ಚಿಮದ ಪ್ರಧಾನ ವಕ್ತಾರರಾಗಿದ್ದರು. ನ್ಯಾಟೋದ ಸದಸ್ಯತ್ವ ಹೊಂದಿರುವ ಕೆನಡ ಕೊರಿಯ ಯುದ್ಧದಲ್ಲಿ ಕಮ್ಯುನಿಸ್ಟ್ ಆಕ್ರಮಣಕಾರರ ವಿರುದ್ಧ ಕಾದಿತ್ತು. ೧೯೫೬ರ ಸೂಯೆಜ್ ಬಿಕ್ಕಟ್ಟನ್ನು ಬಗೆಹರಿಸಲು ವಿಶ್ವಸಂಸ್ಥೆಯ ಬಾವುಟದಡಿ ತನ್ನ ತುಕಡಿಯನ್ನೂ ಕಳುಹಿಸಿ ಕೊಟ್ಟಿತ್ತು.

ಆಧುನಿಕ ಕೆನಡ : ವಿಶ್ವದ ಸಮೃದ್ಧ ಕೈಗಾರಿಕಾ ದೇಶಗಳಲ್ಲಿ ಇಂದು ಕೆನಡವೂ ಒಂದಾಗಿದ್ದು ನೈಸರ್ಗಿಕ ಸಂಪನ್ಮೂಲಗಳಿಂದಲೂ ಗಮನ ಸೆಳೆಯುತ್ತದೆ. ಚಿನ್ನ, ಬೆಳ್ಳಿ, ತೈಲ, ಯುರೇನಿಯಂ, ಕಲ್ಲಿದ್ದಲು, ಕಬ್ಬಿಣ, ಸೀಸ, ಸತು ಮೊದಲಾದ ಖನಿಜ ಸಂಪನ್ಮೂಲಗಳಿಂದ ಅದರ ಭೂಗರ್ಭವು ಸಮೃದ್ಧವಾಗಿದೆ. ೧೯೫೦ರ ದಶಕದಲ್ಲಿ ಕೆನಡಾದ ಕಾರ್ಖಾನೆಗಳು ೧೯೩೦ರ ದಶಕದಲ್ಲಿದ್ದುದಕ್ಕಿಂತ ಆರು ಪಟ್ಟು ಹೆಚ್ಚು ಉತ್ಪಾದಿಸಿದವು.

ಇಂದು ಕೆನಡದಲ್ಲಿ ಬ್ರಿಟಿಷ್ ಮತ್ತು ಫ್ರೆಂಚ್ ಮೂಲದವರಿಬ್ಬರೂ ಸಹಬಾಳ್ವೆ ನಡೆಸುತ್ತಿದ್ದು, ಫ್ರೆಂಚ್ ಮತ್ತು ಇಂಗ್ಲಿಷ್‌ಗಳೆರಡೂ ಅಧಿಕೃತ ಆಡಳಿತ ಭಾಷೆಗಳಾಗಿವೆ. ಹತ್ತು ಪ್ರಾಂತ್ಯಗಳ ಒಕ್ಕೂಟವಾಗಿರುವ ಕೆನಡ ಇಂದು ಸಂವಿಧಾನಬದ್ಧ ರಾಜಪ್ರಭುತ್ವವನ್ನು ಹೊಂದಿದ್ದು, ಇಂಗ್ಲೆಂಡಿನ ಎರಡನೇ ಎಲಿಜಬೆತ್‌ಳೇ ಕೆನಡಕ್ಕೂ ರಾಣಿಯಾಗಿದ್ದಾಳೆ.

 

ಪರಾಮರ್ಶನ ಗ್ರಂಥಗಳು

೧. ದಿ ವರ್ಲ್ಡ್ ಬುಕ್ ಎನ್ ಸೈಕ್ಲೋಪೀಡಿಯಾ, ೧೯೬೩. ವಾಲ್ಯುಂ. ೩, ಯು.ಎಸ್.ಎ.

೨. ಮೋರ್ಟನ್ ಡಬ್ಲ್ಯು.ಎಲ್., ೧೯೬೫. ದಿ ಕೆನೆಡಿಯನ್ ಐಡೆಂಟಿಟಿ, ಕೆನಡಾ.