ಒಬಾಮ ಮತ್ತು ರಿಪಬ್ಲಿಕ್ ಪಾರ್ಟಿ

೧೮೫೪ರಲ್ಲಿ ರಿಪಬ್ಲಿಕನ್ ಪಾರ್ಟಿಯನ್ನು ಸ್ಥಾಪಿಸಲಾಯಿತು. ಸ್ಥಾಪನೆಯಾದ ಕೆಲವೇ ವರ್ಷಗಳಲ್ಲಿ ಇದು ತನ್ನ ಗುಲಾಮಗಿರಿ ವಿರೋಧಿ ನೀತಿಯಿಂಧಾಗಿ ಬಹಳ ಜನಪ್ರಿಯವಾಯಿತು. ಹಾಗಾಗಿ ರಾಜಕೀಯ ಪಕ್ಷವಾಗಿ ಆರಂಭಗೊಂಡ ಕೇವಲ ಆರೇ ವರ್ಷಗಳಲ್ಲಿ ಇದು ಅಧಿಕಾರಕ್ಕೆ ಬಂತು. ೧೮೬೦ರಲ್ಲಿ ಅಧಿಕಾರಕ್ಕೆ ಬಂದ ಈ ಪಕ್ಷದ ಅಭ್ಯರ್ಥಿ ಅಬ್ರಹಾಂ ಲಿಂಕನ್ ಅಮೆರಿಕನ್ ಸಿವಿಲ್ ವಾರ್ ಅನ್ನು ನಡೆಸಿದ ಮತ್ತು ನಾಗರಿಕ ಅಮೆರಿಕಾದ ಪುನರ್ ನಿರ್ಮಾಣವನ್ನೂ ಮಾಡಿದ. ಅಂಥ ಚಾರಿತ್ರ್ಯವಿರುವ ಮತ್ತು ಅಂಥ ಚಾರಿತ್ರಿಕ ಸಾಧನೆಯಿರುವ ಈ ಪಕ್ಷ ಇಂದು ಕನ್ಸರ್ವೇಟಿವ್‌ಗಳ (ಸಂಪ್ರದಾಯವಾದಿ) ಮತ್ತು ನಿಯೋ ಕನ್ಸರ್ವೇಟಿವ್‌ಗಳ(ನವ ಸಂಪ್ರದಾಯವಾದಿ) ವೇದಿಕೆಯಾಗಿ ಪರಿವರ್ತನೆಗೊಂಡಿದೆ. ಈಗಿನ ಅಧ್ಯಕ್ಷರಾಗಿರುವ ಜಾಜ್ ರ ಡಬ್ಲ್ಯೂ ಬುಷ್ ಅಮೆರಿಕಾವನ್ನು ಆಳುತ್ತಿರುವ ರಿಪಬ್ಲಿಕನ್ ಪಾರ್ಟಿಯನ್ನು ಪ್ರತಿನಿಧಿಸುತ್ತಿರುವ ೧೯ನೆಯ ಮತ್ತು ಅಮೆರಿಕಾವನ್ನು ಆಳುತ್ತಿರುವ ೪೩ನೆಯ ಅಧ್ಯಕ್ಷ.

ಗುಲಾಮಗಿರಿ ವಿರೋಧಿ ನಿಲುವನ್ನು ಹೊಂದುತ್ತಲೇ ಈ ಪಕ್ಷ ಅಂದಿನ ದಿನಗಳಲ್ಲಿ ಅಮೆರಿಕದ ಅಧುನೀಕರಣವನ್ನು ಬಯಸಿತ್ತು. ಉನ್ನತ ಶಿಕ್ಷಣ, ಬ್ಯಾಂಕಿಂಗ್, ರೈಲ್ವೇ ಮಾರ್ಗಗಳ ನಿರ್ಮಾಣ, ಕೈಗಾರೀಕರಣ, ಗಣಿಗಾರಿಕೆ, ರೈತರಿಗೆ ಉಚಿತ ಮನೆ ಇತ್ಯಾದಿಗಳು ಈ ಪಕ್ಷದ ಪ್ರಾಥಮಿಕ ಆದ್ಯತೆಗಳಾಗಿದ್ದವು.

ಮುಕ್ತ ಆರ್ಥಿಕ ನೀತಿಯ ಪ್ರತಿಪಾದಕರಾಗಿರುವ ರಿಪಬ್ಲಿಕನ್ನರು ಸರಕಾರದ ನೀತಿಗಳು ವ್ಯಾಪಾರ-ವಹಿವಾಟನ್ನು ವೃದ್ದಿಸುವಂತಿರಬೇಕು. ಆರ್ಥಿಕ ಉದಾರೀಕರಣದಿಂದ ಅಮೆರಿಕಾ ಜಗತ್ತಿನ ಉಳಿದ ರಾಷ್ಟ್ರಗಳ ಮಾರುಕಟ್ಟೆಯನ್ನು ವಶಪಡಿಸುವಂತಿರಬೇಕು ಮತ್ತು ಸಶಕ್ತವಾದ ಮಿಲಿಟರಿಯ ಮೂಲಕವೂ ತನಗೆ ಬಗ್ಗದ ರಾಷ್ಟ್ರಗಳನ್ನು ಸದೆಬಡಿಯಬೇಕೆಂಬ ನಿಲುವನ್ನು ಆಗಿಂದಾಗ್ಗೆ ವ್ಯಕ್ತಪಡಿಸಿದ್ದಿದೆ. ಆಧುನಿಕ ರಿಪಬ್ಲಿಕನ್ನರು ಪೂರೈಕೆ ಪರ ಅರ್ಥಶಾಸ್ತ್ರದ ಬೆಂಬಲಿಗರಾಗಿದ್ದಾರೆ ಇದನ್ನು ಅಂದಿನ ಅಧ್ಯಕ್ಷ ರೊನಾಲ್ಡ್ ರೇಗನ್ ಪ್ರತಿಪಾದಿಸಿದ್ದ. ಹಾಗಾಗಿ ಇದನ್ನು ‘ರೇಗನಾಮಿಕ್ಸ್’ ಎಂದೂ ಕರೆಯುತ್ತಾರೆ(ಭಾರತದಲ್ಲಿ ಆರ್ಥಿಕ ಉದಾರೀಕರಣದ ನಂತರ ಅರ್ಥನೀತಿಯನ್ನು ‘ಮನಮೋಹನಾಮಿಕ್ಸ್’ ಎಂದು ಕರೆದಂತೆ). ಈ ಅರ್ಥನೀತಿ ಆದಾಯ ತೆರಿಗೆಯ ದರವನ್ನು ತಗ್ಗಿಸಿ ಜಿ.ಡಿ.ಪಿ.ಯನ್ನು ಹೆಚ್ಚು ಮಾಡುವುದರ ಪರವಾಗಿದೆ. ಹೆಚ್ಚಿನ ರಿಪಬ್ಲಿಕನ್ನರು ಆದಾಯ ತೆರಿಗೆ ವ್ಯವಸ್ಥೆಯನ್ನು ಅಸಮರ್ಪಕ ಎಂದೇ ಭಾವಿಸುತ್ತಾರೆ. ಅವರ ಪ್ರಕಾರ ಈ ಬಗೆಯ ಆದಾಯ ತೆರಿಗೆ ನೀತಿ ಉದ್ಯೋಗಗಳನ್ನು ಮತ್ತು ಸಂಪತ್ತನ್ನು ಸೃಷ್ಟಿಸುವವರನ್ನು ಅನ್ಯಾಯವಾಗಿ ಬಾಧಿಸುತ್ತದೆ. ಖಾಸಗಿಯವರ ಹೂಡಿಕೆ ಸರಕಾರಿ ಹೂಡಿಕೆಗಿಂತ ಹೆಚ್ಚು ಯೋಜನಾಬದ್ಧವೂ, ವ್ಯವಸ್ಥಿತವೂ ಆಗಿರುತ್ತದೆ. ಹಾಗಾಗಿ ಖಾಸಗಿ ವ್ಯವಸ್ಥೆಯನ್ನು ಕಾಯ್ದೆ-ಕಾನೂನುಗಳ ಮೂಲಕ ಗಲಿಬಿಲಿ ಗೊಳಿಸುವುದು ತರವಲ್ಲ. ಹಾಗೆಯೇ ರಿಪಬ್ಲಿಕನ್ನರಲ್ಲಿ ಹೆಚ್ಚಿನವರು ಕಡೆಮೆ ಅದೃಷ್ಟವಂತ ಉದ್ಯಮಿಗಳಿಗೆ ಒಂದು ಬಗೆಯ ‘ರಕ್ಷಣಾ ಕವಚ’(ಸೇಪ್ಟಿ ನೆಟ್) ಬೇಕು ಎಂದೂ ವಾದಿಸುತ್ತಾರೆ.

ರಿಪಬ್ಲಿಕನ್ನರು ಸಾಮಾಜಿಕ ಭದ್ರತೆ, ಸಾಮಾಜಿಕ ಆರೋಗ್ಯ ಮತ್ತು ಆರೋಗ್ಯ ಭಾಗ್ಯಗಳಂತಹ ಕಾರ್ಯಕ್ರಮಗಳನ್ನು ಆರಂಭದಲ್ಲಿ ತೀವ್ರವಾಗಿ ವಿರೋಧಿಸಿದರು. ಆದರೆ ಅನಂತರ ಬುಷ್ ಆಡಳಿತದಲ್ಲಿ ನಿಧಾನವಾಗಿ ಈ ಬಗೆಯ ಸರಕಾರಿ ನೀತಿಗಳನ್ನು ಬೆಂಬಲಿಸಿದರು.

ಸರ್ವೇಸಾಮಾನ್ಯವಾಗಿ ಎಲ್ಲಾ ರಿಪಬ್ಲಿಕನ್ನರು ಕಾರ್ಮಿಕ ಕಾನೂನುಗಳನ್ನು, ಕಾರ್ಮಿಕ ಸಂಘಟನೆಗಳನ್ನು ವಿರೋಧಿಸಿದರು. ಅಷ್ಟು ಮಾತ್ರವಲ್ಲದೆ ಇವರು ಕಾರ್ಮಿಕರಿಗೆ ಕೊಡುವ ಸಾಮಾನ್ಯ ಕನಿಷ್ಠ ವೇತನವನ್ನು ಹೆಚ್ಚು ಮಾಡುವುದನ್ನು ವಿರೋಧಿಸಿದರು. ಯಾಕೆಂದರೆ ಕನಿಷ್ಠ ವೇತನವನ್ನು ಜಾಸ್ತಿ ಮಾಡಿದರೆ ಎಷ್ಟೋ ಉದ್ಯಮಿಗಳು ತಮ್ಮ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸುತ್ತಾರೆ. ಅಥವಾ ತಮ್ಮ ವಸ್ತುಗಳ ಬೆಲೆಯನ್ನು ಹೆಚ್ಚಿಸಿ ತಮಗಾದ ನಷ್ಟವನ್ನು ಸರಿದೂಗಿಸಿಕೊಳ್ಳುತ್ತಾರೆ ಎಂಬುದು ಇವರ ವಾದ.

ಪರಿಸರದ ಕುರಿತಾಗಿಯೂ ರಿಪಬ್ಲಿಕನ್ನರದು ಉದ್ಯಮಸ್ನೇಹಿ ನಿಲುವಾಗಿತ್ತು. ಬಿಗಿಯಾದ ಪರಿಸರ ನೀತಿಗಳು ಉದ್ಯಮ ವ್ಯವಹಾರದ ಮೇಲೆ ಅಡ್ಡ ಪರಿಣಾಮವನ್ನುಂಟು ಮಾಡುತ್ತವೆ ಎನ್ನುವುದು ಇವರ ನಂಬಿಕೆಯಾಗಿತ್ತು. ರಿಪಬ್ಲಿಕನ್ನರ ಸಾಮಾಜಿಕ ನೀತಿಯ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳಾಗಿವೆ ಮತ್ತು ಅವರ ‘ಅಬಾರ್ಷನ್’ ನಿಷೇಧದ ನಿಲುವಿನ ಬಗೆಗೂ ವ್ಯಾಪಕ ಟೀಕೆಗಳೂ ಬಂದಿವೆ. ಸಲಿಂಗಿಗಳ ವಿವಾಹದ ಬಗೆಗೂ ಅವರದು ನೇತ್ಯಾತ್ಮಕ ಧೋರಣೆಯೂ ಆಗಿದೆ.

ರಾಷ್ಟ್ರ ರಕ್ಷಣೆ ಮತ್ತು ಮಿಲಿಟರಿ ಬಗೆಗಿನ ರಿಪಬ್ಲಿಕನ್ನರ ನಿಲುವಿಗೆ ಪಾರ್ಟಿಯೊಳಗಡೆ ಅಖಂಡ ಸಹಮತವಿದೆ. ರಿಪಬ್ಲಿಕನ್ ಪಾರ್ಟಿ ಯಾವತ್ತೂ ಈ ಕುರಿತು ಬಹಳ ಬಲವಾದ ವಕೀಲಿಕೆಯನ್ನು ಮಾಡುತ್ತಿತ್ತು. ಬಹಳ ಮಂದಿ ರಿಪಬ್ಲಿಕನ್ನರು ವಿಶ್ವಶಾಂತಿಗೆ ನಿರ್ಮಾಣವಾದ ‘ಸಂಯುಕ್ತ ರಾಷ್ಟ್ರಸಂಸ್ಥೆ’ಯ(ಲೀಗ್ ಆಫ್ ನೇಶನ್ಸ್) ರಚನೆಯನ್ನು ಕೊನೆಗೆ ‘ನ್ಯಾಟೋ’ದ ರಚನೆಯನ್ನೂ ವಿರೋಧಿಸಿದರು. ಯಾಕೆಂದರೆ ಇವೆಲ್ಲಾ ಅಮೆರಿಕಾದ ಮಿಲಿಟರಿ ನೀತಿಗೂ ಒಂದಲ್ಲ ಒಂದು ರೀತಿ ಧಕ್ಕೆ ತರುತ್ತದೆ ಎಂಬ ಕಾರಣಕ್ಕಾಗಿ ರಿಪಬ್ಲಿಕನ್ನರು ೨೦೦೨ ಮತ್ತು ೨೦೦೮ರ ಸಾರ್ವತ್ರಿಕ ಚುನಾವಣೆಗಳಲ್ಲಿ ಗೆಲ್ಲಲು ಕೂಡಾ ಇದೇ ನೀತಿ ಕಾರಣವಾಯಿತು. ಅಮೆರಿಕಾದ ಅವಳಿ ಕಟ್ಟಡಗಳ ಮೇಲೆ ೨೦೦೧ನೆಯ ಸೆಪ್ಟೆಂಬರ್ ೧೧ರಂದು ಭಯೋತ್ಪಾದಕರು ನಡೆಸಿದ ದಾಳಿಯ ನಂತರವಂತೂ ರಿಪಬ್ಲಿಕನ್ನರೊಳಗೆ ನವ ಸಂಪ್ರದಾಯವಾದಿಗಳ ಮೈಲುಗೈಯಾಯಿತು. ಇದರಿಂದಲೇ ಅಮೆರಿಕಾ ೨೦೦೧ರಲ್ಲಿ ಅಫ್ಘಾನಿಸ್ತಾನದ ವಿರುದ್ಧ ಹಾಗೂ ೨೦೦೩ರಲ್ಲಿ ಇರಾಕ್ ವಿರುದ್ಧ ಸಮರ ನಡೆಸಿತು. ಈ ಸಮರ ಮತ್ತು ಅದರಿಂದ ಉಂಟಾದ ಮಾನ-ಧನ ಹಾನಿ, ತೀವ್ರವಾದ ಆರ್ಥಿಕ ಹಿಂಜರಿತ, ಕುಸಿಯುತ್ತಿರುವ ಡಾಲರ್ ಬೆಲೆ, ವಿಶ್ವದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಏಷ್ಯಾ ಈ ಎಲ್ಲಾ ಇಕ್ಕಟ್ಟುಗಳ ನಡುವೆ ಅಮೆರಿಕಾದಲ್ಲಿ ಈಗ (೨೦೦೮) ಅಧ್ಯಕ್ಷೀಯ ಚುನಾವಣೆ ನಡೆದಿದೆ. ಈ ಚುನಾವಣೆಯಲ್ಲಿ ಸ್ಪರ್ಧಿಸಿದವರು ಡೆಮಾಕ್ರಾಟಿಕ್ ಪಕ್ಷದಿಂದ ಬರಾಕ್ ಒಬಾಮ ಮತ್ತು ರಿಪಬ್ಲಿಕನ್ ಪಕ್ಷದಿಂದ ಜಾನ್ ಮೆಕೈನ್.

ಒಬಾಮನ ಪ್ರತಿಸ್ಪರ್ಧಿ ಜಾನ್ ಮೆಕೈನ್

ಈ ಬಾರಿಯ (೨೦೦೮) ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಾರ್ಟಿಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಮಾಜಿ ಯೋಧ ಹಾಗೂ ಮಾಜಿ ಯುದ್ಧ ಕೈದಿ ಜಾನ್ ಮೆಕೈನ್ ಉಳಿದ ರಿಪಬ್ಲಿಕನ್ನರ ಹಾಗೆ ಕಟ್ಟಾ ಸಂಪ್ರದಾಯವಾದಿ ಅಲ್ಲ. ಈತನ ಅಪ್ಪ ಮತ್ತು ಅಜ್ಜ ಇಬ್ಬರೂ ಅಮೆರಿಕದ ನೌಕಾದಳದಲ್ಲಿ ಆಡ್ಮಿರಲ್ ಆಗಿದ್ದವರು. ಜಾನ್ ಮೆಕೈನ್ ಕೂಡ ನೌಕಾದಳದಲ್ಲಿ ಯುದ್ಧವಿಮಾನದ ಪೈಲೆಟ್ ಆಗಿದ್ದ. ವಿಯಟ್ನಾಂನ ಯುದ್ಧ ಕಾಲದಲ್ಲಿ ಮೆಕೈನ್ ಹಾರಿಸುತ್ತಿದ್ದ ಯುದ್ದ ವಿಮಾನವನ್ನು ವಿಯಟ್ನಾಮ್ ನ ಕ್ರಾಂತಿಕಾರಿಗಳು ಹೊಡೆದುರುಳಿಸಿದರು. ಮೆಕೈನ್ ಯುದ್ಧಕೈದಿಯಾದ. ಯುದ್ಧ ಮುಗಿದ ತರುವಾಯ ಬಿಡುಗಡೆಯಾದ. ಅನಂತರವೂ ಆತ ಅಮೆರಿಕಾದ ನೌಕಾದಳದಲ್ಲಿ ಸೇವೆ ಸಲ್ಲಿಸಿದ. ಅನಂತರ ಅರಿಜೋನ ಪ್ರಾಂತ್ಯದಿಂದ ಅಮೆರಿಕಾದ ಪ್ರಜಾಪ್ರತಿನಿಧಿ ಸಭೆಗೆ ರಿಪಬ್ಲಿಕನ್ ಪಕ್ಷದಿಂದ ಆಯ್ಕೆಯಾದ, ಆಮೇಲೆ ಸೆನೆಟರ್ ಆದ. ತನ್ನ ಪಕ್ಷದ ಉಳಿದ ಸಹೋದ್ಯೋಗಿಗಳಂತೆ ಕಟ್ಟಾ ಸಂಪ್ರದಾಯವಾದಿ ಅಲ್ಲದ ಮೆಕೈನ್ ಅನೇಕ ವಿಷಯಗಳಲ್ಲಿ ರಿಪಬ್ಲಿಕನ್ನರನ್ನು ಕೈ ಹಿಡಿದು ಮುನ್ನಡೆಸುವ ಬಲಪಂಥೀಯ ಕ್ರಿಶ್ಚಿಯನ್ನರನ್ನು ವಿರೋಧಿಸಿದ್ದ. ಎಂಟು ವರ್ಷಗಳ ಹಿಂದೆಯೇ ಅಮೆರಿಕದ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವ ಪೂರ್ವದಲ್ಲಿ ನಡೆದ ಪಕ್ಷದ ಪ್ರಾಥಮಿಕ ಚುನಾವಣೆಯಲ್ಲಿ ಈತ ಈಗಿನ ಅಧ್ಯಕ್ಷ ಜಾರ್ಜ್ ಬುಷ್ ವಿರುದ್ಧ ಸೋತು ಹೋದ ಈತನ ಸೋಲಿಗೆ ಇದೇ ಬಲಪಂಥೀಯ ಕ್ರಿಶ್ಚಿಯನ್ನರು ಕಾರಣರಾಗಿದ್ದರು.

ಇಲ್ಲಿಯ ರಿಪಬ್ಲಿಕನ್ನರು ಗರ್ಭಿಣಿ ಹೆಂಗಸು (ಅತ್ಯಾಚಾರಕ್ಕೊಳಗಾದವಳೂ ಸೇರಿದಂತೆ) ಯಾವುದೇ ಕಾರಣಕ್ಕೂ ಗರ್ಭಪಾತ ಮಾಡಿಸಬಾರದು ಎಂದರೆ ಮೆಕೈನ್ ಅದನ್ನು ಬೆಂಬಲಿಸಲಿಲ್ಲ. ಗರ್ಭವನ್ನು ಉಳಿಸಿಕೊಳ್ಳುವ ಅಥವಾ ತ್ಯಜಿಸುವ ಆಯ್ಕೆ ಗರ್ಭಿಣಿ ಹೆಂಗಸಿನದೇ ಎಂಬ ಡೆಮಾಕ್ರಾಟಿಕ್‌ನಗಳ ನಿಲುವಿಗೆ ಮೆಕೈನ್‌ನದು ಸಂಪೂರ್ಣ ಸಹಮತ. ಭ್ರೂಣದ ಜೀವಕೋಶಗಳ ಸಂಶೋಧನೆ ಸಂಪ್ರದಾಯವಾದಿಗಳಿಗೆ ಪಥ್ಯವಾಗದ ವಿಷಯವಾದರೆ ಅದಕ್ಕೂ ಮೆಕೈನ್ ನ ವಿರೋಧವಿಲ್ಲ. ಅಮೆರಿಕದ ವಾಣಿಜ್ಯ ರಾಜಧಾನಿ ಎಂದೇ ಗುರುತಿಸಲ್ಪಟ್ಟ ‘ವಾಲ್ ಸ್ಟ್ರೀಟ್ ’ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಪತನಕ್ಕೊಳಗಾಗುವರೆಗೂ ಸಮೀಕ್ಷೆಗಳ ಪ್ರಕಾರ ಜಾನ್ ಮೆಕೈನ್ ಅಧ್ಯಕ್ಷೀಯ ಸ್ಪರ್ಧೆಯ ಓಟದಲ್ಲಿ ಮುಂದಿದ್ದ. ಆದರೆ ಈತನ ಹಿಂದೆ ಇರುವ ಮತೀಯ ಸಂಪ್ರದಾಯವಾದಿ ಮತ್ತು ಯುದ್ಧಪಿಪಾಸು ರಿಪಬ್ಲಿಕನ್ ಪಕ್ಷದ ಮೂಗುದಾರ ಹಾಗೂ ಅಮೆರಿಕಾದ ಜನತೆ  ‘ರಾಷ್ಟ್ರೀಯ ಭದ್ರತೆ’ ಮತ್ತು ‘ಸಾಮಾಜಿಕ ಭದ್ರತೆ’ ಎಂಬ ಎರಡು ಆಯ್ಕೆಗಳಲ್ಲಿ ‘ಸಾಮಾಜಿಕ  ಭದ್ರತೆ’ಯನ್ನು ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡಿಕೊಂಡಿದುದರಿಂದ ಈತ ಬರಾಕ್ ಒಬಾಮನ ಮುಂದೆ ಸೋತು ಹೋದ.

ಬರಾಕ್ ಹುಸೇನ್ ಒಬಾಮಅಮೆರಿಕದ ನೂತನ ಅಧ್ಯಕ್ಷ

ಬರಾಕ್ ಒಬಾಮನ ಪೂರ್ಣ ಹೆಸರು ಬರಾಕ್ ಹುಸೇನ್ ಒಬಾಮ. ಆಫ್ರಿಕಾ ಖಂಡದ ಪುಟ್ಟ ದೇಶ ಕೀನ್ಯಾದ ಕೆಳಪಂಗಡಕ್ಕೆ ಸೇರಿದ ಒಬಾಮನ ತಂದೆ ಮುಸ್ಲಿಂ. ನಾಸ್ತಿಕನಾಗಿದ್ದ ಆತನ ಹೆಸರು ಬರಾಕ್. ಈ ಬರಾಕ್‌ನ ಅಪ್ಪ ಅಂದರೆ ಒಬಾಮನ ಅಜ್ಜನ ಹೆಸರು ಹುಸೇನ್. ಒಬಾಮ ಹುಟ್ಟಿದ್ದು ೧೯೬೧ರ ಆಗಸ್ಟ್ ೪ರಲ್ಲಿ. ಅಂದರೆ ಒಬಾಮ ಅಮೆರಿಕಾದಲ್ಲಿ ವರ್ಣೀಯ ಜನರ ನಾಗರಿಕ ಹಕ್ಕುಗಳ ಹೋರಾಟದ ಫಲಿತಾಂಶ ಬಂದ ನಂತರದ ತಲೆಮಾರಿನವ. ಒಬಾಮನ ತಾಯಿ ಕ್ರಿಶ್ಚಿಯನ್. ಹಾಗೆಂದು ಆಕೆಯೇನೂ ಸಂಪ್ರದಾಯವಾದಿ ಕ್ರಿಶ್ಚಿಯನ್ ಅಲ್ಲ. ಆಕೆಯೂ ನಾಸ್ತಿಕಳೇ(ಚುನಾವಣೆಯ ಸಂದರ್ಭದಲ್ಲಿ ಬಹುಸಂಖ್ಯಾತ ಕ್ರಿಶ್ಚಿಯನ್ನರನ್ನು ಸಂಪ್ರೀತಿಗೊಳಿಸಲು ಒಬಾಮ ತನ್ನ ತಾಯಿಯ ನಾಸ್ತಿಕ ವಿಚಾರವನ್ನೂ ಎಲ್ಲೂ ಪ್ರಸ್ತಾಪಿಸುವುದಿಲ್ಲ). ವಿದ್ಯಾಭ್ಯಾಸದ ಕಾರಣಕ್ಕಾಗಿ ಸ್ವಲ್ಪ ಕಾಲ ಇಂಡೋನೇಷ್ಯಾದಲ್ಲಿದ್ದ ಒಬಾಮ ಅಲ್ಲಿಯ ಒಂದು ಮದರಸಾದಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಮುಗಿಸುತ್ತಾನೆ(ಚುನಾವಣೆಯ ಸಂದರ್ಭದಲ್ಲಿ ಅಮೆರಿಕನ್ ಮಾಧ್ಯಮಗಳು ಒಬಾಮನ ಈ ಮದರಸಾದ ಶಿಕ್ಷಣವನ್ನು ಪ್ರಸ್ತಾಪಿಸಿ ಇದೇನೂ ಮುಸ್ಲಿಮ್ ಮುಲ್ಲಾಗಳು ನಡೆಸುವ ಸಂಪ್ರದಾಯವಾದಿ ಮದರಸಾ ಅಲ್ಲ ಎಂದು ಘೋಷಿಸಿಬಿಡುತ್ತವೆ. ಪ್ರಾಯಶಃ ಇದರ ಹಿಂದೆ ಒಬಾಮನ ಮುಸ್ಲಿಂ ಮೂಲ ಆತಂಕಕಾರಿಯಾದದ್ದಲ್ಲ ಎಂಬುದನ್ನು ಅಮೆರಿಕಾದ ಬಹುತೇಕ ಮುಸ್ಲಿಮ್ ವಿರೋಧಿ ಮತೀಯವಾದಿ ಕ್ರಿಶ್ಚಿಯನ್ನರಿಗೆ ತಿಳಿಯ ಪಡಿಸುವ ಉದ್ದೇಶ ಇದ್ದಿರಬಹುದು). ಆ ಬಳಿಕ ಅಂದರೆ ೧೯೭೯ರಲ್ಲಿ ಮತ್ತೆ ಪುನಃ ಅಮೆರಿಕಾಕ್ಕೆ(ಹೊನೊಲುಲು) ತೆರಳಿದ ಒಬಾಮ ಅಲ್ಲಿ ತನ್ನ ಪ್ರೌಢ ಶಿಕ್ಷಣವನ್ನು ಪೂರೈಸಿದನು. ಹಾಗೆಯೇ ತನ್ನ ೨೦ನೆಯ ವಯಸ್ಸಿನಲ್ಲಿ ಕ್ರಿಶ್ಚಿಯನ್ ಆಗಿ ದೀಕ್ಷೆ ಸ್ವೀಕರಿಸಿದನು.

ಲಾಸ್ ಏಂಜಲೀಸ್‌ನ ಓಕ್ಸಿಡೆಂಟ್ ಕಾಲೇಜ್ ನಲ್ಲಿ, ನ್ಯೂಯಾರ್ಕಿನ ಕೊಲಂಬಿಯಾ ಕಾಲೇಜ್‌ನಲ್ಲಿ ಮತ್ತು ಹಾರ್ವರ್ಡ್‌ನ ಕಾನೂನು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ ೧೯೯೧ರಲ್ಲಿ ಜೂನಿಸ್ ಡಾಕ್ಟರ್(ಜೆ.ಡಿ) ಎಂಬ ಹೆಸರಿನ ಡಾಕ್ಟರೇಟ್ ಪಡೆದ ಬಳಿಕ ಒಬಾಮ ಚಿಕಾಗೋಗೆ ಬಂದನು. ಚಿಕಾಗೋದ ಕಾನೂನು ಸ್ಕೂಲ್‌ಗೆ ಬಂದ ಒಬಾಮ ಅಲ್ಲಿ ಅಧ್ಯಾಪನದ ಕೆಲಸಗಳನ್ನು ನಿರ್ವಹಿಸುತ್ತಲೇ ‘ವರ್ಣೀಯ ಕಾನೂನು ಅಧ್ಯಯನ’ದ ಕುರಿತು ಪುಸ್ತಕವೊಂದನ್ನು ಬರೆಯುವ ಪ್ರೊಜೆಕ್ಟ್ ಹಾಕಿಕೊಂಡಿದ್ದ. ಚಿಕಾಗೋ ಸ್ಕೂಲ್ ಈ ಪ್ರೊಜೆಕ್ಟ್‌ಗೆ ಫೆಲೋಶಿಫ್ ನೀಡಿತು. ಒಂದು ವರ್ಷದ ಅವಧಿಯೊಳಗೆ ಮುಗಿಸಬೇಕಾದ ಈ ಪುಸ್ತಕ ಒಬಾಮನ ಬದುಕಿನ ಕುರಿತ ನೆನಪುಗಳ ಪುಸ್ತಕವೂ ಆಗಿ ‘ಡ್ರೀಮ್ಸ್ ಫ್ರಮ್ ಮೈ ಫಾದರ್’ ಎಂಬ ಹೆಸರಿನಲ್ಲಿ ಹೊರಬಂತು. ಈ ಪುಸ್ತಕಕ್ಕೆ ವ್ಯಾಪಕ ಪ್ರಶಂಸೆಯೂ ಒದಗಿತು. ಒಬಾಮ ಕಾನೂನು ಕಲಿಸುವುದರ ಜೊತೆಗೆ ಕಾನೂನು ರೂಪಿಸುವ ನಾಗರಿಕ ಹಕ್ಕುಗಳ ಹೋರಾಟದಲ್ಲೂ ತೊಡಗಿದ.

ಒಬಾಮನ ರಾಜಕೀಯ ಜೀವನ ಆರಂಭಗೊಂಡದ್ದೂ ಒಂದು ಪ್ರೊಜೆಕ್ಟ್‌ನ ಮೂಲಕವೇ. ೧೯೯೨ರಲ್ಲಿ ‘ಇಲಿನಾಯಿಸ್’ ಎಂಬ ಪುಟ್ಟ ಪ್ರಾಂತ್ಯದಲ್ಲಿ ‘ಪ್ರೊಜೆಕ್ಟ್ ವೋಟ್’ ಎಂಬ ಯೋಜನೆ ರೂಪಿಸಿದ ಒಬಾಮ, ಮತದಾನದ ಹಕ್ಕಿನ ಬಗ್ಗೆ ನಿರ್ಲಿಪ್ತತೆ ಯಿಂದ ಇದ್ದ ಆಫ್ರಿಕನ್-ಅಮೆರಿಕನ್ ಜನರಲ್ಲಿ ಮತದಾನದ ಅರಿವು ಮೂಡಿಸಿದ. ಮತದಾನದ ಹಕ್ಕಿನಿಂದ ವಂಚಿತರಾಗಿದ್ದ ಈ ಪ್ರಾಂತ್ಯದ ಸುಮಾರು ನಾಲ್ಕು ಲಕ್ಷ ಆಫ್ರಿಕನ್-ಅಮೆರಿಕನ್ನರಲ್ಲಿ ಸುಮಾರು ಒಂದೂವರೆ ಲಕ್ಷ ಜನರ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿದ. ಇದು ಈತನ ಆಧ್ಯಾಪನದ ಜೊತೆಗೆ ಈತನಿಗೆ ಒಂದು ರಾಜಕೀಯ ಪ್ರಭಾವಳಿಯನ್ನು ಒದಗಿಸಿತು. ಹೀಗಾಗಿ ೧೯೯೬ರಲ್ಲಿ ಇಲಿನಾಯಿಸ್ ಪ್ರಾಂತ್ಯದ ಸೆನೆಟ್ ಸದಸ್ಯನಾಗಿ ಆಯ್ಕೆಯಾದ.

ಆದಾದ ನಾಲ್ಕು ವರ್ಷಗಳಿಗೆ ಒಬಾಮ ಇನ್ನೂ ಮೇಲಿನ ಸೆನೆಟ್ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ. ಆದರೆ ತನ್ನದೇ ಪಕ್ಷದ ಪ್ರಾಥಮಿಕ ಸ್ಪರ್ಧೆಯಲ್ಲಿ ಸೋತ. ಹೀಗೆ ಸೋತ ನಾಲ್ಕು ವರ್ಷಗಳ ಅನಂತರ ದೇಶದ ಸೆನೆಟ್ ಸ್ಥಾನಕ್ಕೆ ಸ್ಪರ್ಧಿಸಿದ. ಇದೇ ಸಮಯದಲ್ಲಿ ಅಂದರೆ ೨೦೦೪ರಲ್ಲಿ ಡೆಮಾಕ್ರಾಟಿಕ್ ಪಕ್ಷದ ಅಭ್ಯರ್ಥಿ ಜಾನ್ ಕೆರ‌್ರಿ ಅಮೆರಿಕಾದ ಈಗಿನ ಅಧ್ಯಕ್ಷ ಜಾರ್ಜ್ ಬುಷ್ ವಿರುದ್ಧ ಸ್ಪರ್ಧಿಸಿದ್ದ. ಒಬಾಮ ಜಾನ್ ಕೆರ್ರಿಯ ಪರವಾಗಿ ಡೆಮಾಕ್ರಾಟಿಕ್ ಪಕ್ಷದ ಸಮ್ಮೇಳನದಲ್ಲಿ ಅಮೆರಿಕಾದ ಎಲ್ಲಾ ಜನರ ಗಮನ ಸೆಳೆಯುವಂಥ ಪ್ರಭಾವಕಾರಿ ಭಾಷಣ ಮಾಡಿದ. ಈ ಭಾಷಣದಿಂದ ಒಬಾಮ ಜಾನ್.ಎಫ್.ಕೆನಡಿಯ ಅನಂತರದ ಅತ್ಯುತ್ತಮ ಮಾತುಗಾರ ಎಂಬ ಪ್ರಶಂಸೆಗೆ ಪಾತ್ರನಾದ. ಅಮೆರಿಕದ ರಾಜಕೀಯ ವಿಶ್ಲೇಷಕರು ಅಂದಿನ ಭಾಷಣದಲ್ಲೇ ಭವಿಷ್ಯದ ರಾಷ್ಟ್ರನಾಯಕನನ್ನು ಒಬಾಮನಲ್ಲಿ ಗುರುತಿಸಿದ್ದರು. ಆ ಚುನಾವಣೆಯಲ್ಲಿ ಜಾನ್ ಕೆರ‌್ರಿ ಸೋತಿದ್ದ. ಆದರೆ ಇಲಿನಾಯ್‌ನ ತನ್ನ ಸೆನೆಟ್ ಸ್ಥಾನವನ್ನು ಒಬಾಮ ಗೆದ್ದಿದ್ದ. ಆ ಮೇಲಿನ ನಾಲ್ಕು ವರ್ಷಗಳ ನಂತರ ಅಂದರೆ ೨೦೦೮ರಲ್ಲಿ ಒಬಾಮ ಡೆಮಾಕ್ರಾಟಿಕ್ ಪಕ್ಷದ ಪ್ರಭಾವಿ ನಾಯಕಿ ಹಿಲರಿ ಕ್ಲಿಂಟನ್‌ಳನ್ನು ರಾಷ್ಟ್ರದ ಅಧ್ಯಕ್ಷ ಹುದ್ದೆಗೆ ನಡೆದ ಪ್ರಾಥಮಿಕ ಸ್ಪರ್ಧೆಯಲ್ಲಿ ಸೋಲಿಸಿ, ಆ ಬಳಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ವಿರೋಧಿ ರಿಪಬ್ಲಿಕನ್ ಪಕ್ಷದ ಧೀರ ಅಭ್ಯರ್ಥಿಯಾದ ಜಾನ್ ಮೆಕೈನ್ ನನ್ನೂ ಮಣಿಸಿ ಈಗ ಅಮೆರಿಕಾ ಸಂಯುಕ್ತ ಸಂಸ್ಥಾನದ ೪೪ನೆಯ ಅಧ್ಯಕ್ಷನಾಗಿ ಆಯ್ಕೆಯಾಗಿದ್ದಾನೆ. ೨೦೦೯ನೆಯ ಜನವರಿ ೨೦ರಂದು ಅಧಿಕಾರ ಸ್ವೀಕರಿಸಿದ್ದಾನೆ.

ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯ ಕ್ರಮ

ಜಗತ್ತಿಗೆ ಪ್ರಜಾಪ್ರಭುತ್ವದ ಮೂಲ ಪಾಠಗಳನ್ನು ಕಲಿಸಿಕೊಟ್ಟ ಅಮೆರಿಕಾದಲ್ಲಿ ಅಧ್ಯಕ್ಷರ ಆಯ್ಕೆ ನಡೆಯುವುದು ಸಾರ್ವತ್ರಿಕ ಚುನಾವಣೆಯ ಮೂಲಕ ಅಲ್ಲ ಎಂಬುದು ಒಂದು ವಿಚಿತ್ರವಾದ ಸಂಗತಿ. ಇಲ್ಲಿ ಅಧ್ಯಕ್ಷರನ್ನು ಆರಿಸುವುದು ಸಾಮಾನ್ಯ ಮತದಾರರಲ್ಲ. ಇಲೆಕ್ಟೋರಲ್ ಕಾಲೇಜ್ ಎಂಬ ೫೩೮ ವಿಶೇಷ ಜನಪ್ರತಿನಿಧಿಗಳ ಕೂಟ. ಈ ಜನಪ್ರತಿನಿಧಿಗಳ ಅಂಕಿ-ಅಂಶಗಳ ವಿನ್ಯಾಸ ಹೀಗಿದೆ: ಅಮೆರಿಕಾದ ಸೆನೆಟ್ ಅಂದರೆ ಇಲ್ಲಿಯ ಆಡಳಿತಾಂಗದ ಮೇಲ್ಮನೆ(ಭಾರತದಲ್ಲಿ ರಾಜ್ಯಸಭೆ ಇದ್ದ ಹಾಗೆ). ಈ ಮೇಲ್ಮನೆಯಲ್ಲಿ ನೂರು ಮಂದಿ ಸೆನೆಟರ್‌ಗಳು ಇರುತ್ತಾರೆೆ. ಅಮೆರಿಕಾದ ಸಂಯುಕ್ತ ಸಂಸ್ಥಾನಗಳ ಪ್ರತಿಯೊಂದು ಪ್ರಾಂತ್ಯದಿಂದ ತಲಾ ಇಬ್ಬರು ಜನಪ್ರತಿನಿಧಿಗಳು ಇಲ್ಲಿಗೆ ಆಯ್ಕೆಯಾಗಿ ಬಂದಿರುತ್ತಾರೆ.

ಭಾರತದಲ್ಲಿ ಲೋಕಸಭೆ ಇದ್ದ ಹಾಗೆ ಅಮೆರಿಕಾದಲ್ಲಿ ಹೌಸ್ ಆಫ್ ರೆಪ್ರೆಸೆಂಟಿಟೀವ್ಸ್ ಇದೆ. ಇಲ್ಲಿಗೆ ಬರುವ ಜನಪ್ರತಿನಿಧಿಗಳು ನೇರ ಸಾರ್ವತ್ರಿಕ ಚುನಾವಣೆಯಲ್ಲಿ ಆರಿಸಿ ಬರುತ್ತಾರೆ. ಪ್ರತಿಯೊಂದು ಪ್ರಾಂತ್ಯದ ಜನಸಂಖ್ಯೆಯ ಆಧಾರದ ಮೇಲೆ ಆಯಾ ಪ್ರಾಂತ್ಯದ ಪ್ರತಿನಿಧಿಗಳ ಸಂಖ್ಯೆ ನಿಗದಿಯಾಗಿರುತ್ತದೆ. ಪ್ರತಿಯೊಂದು ಪ್ರಾಂತ್ಯದಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಯಾವ ಪಕ್ಷ ಬಹುಮತ ಗಳಿಸುತ್ತದೋ ಆ ಪಕ್ಷಕ್ಕೆ ಆ ಪ್ರಾಂತ್ಯದ ಎಲ್ಲ ಪ್ರತಿನಿಧಿಗಳೂ ರಾಜಕೀಯ ಪಕ್ಷ ಭೇದ ಮರೆತು ಮತ ಹಾಕಬೇಕು. ಈ ಚುನಾವಣೆಯಲ್ಲಿ ಆರಿಸಿ ಬರುವ ಜನಪ್ರತಿನಿಧಿಗಳ ಒಟ್ಟು ಸಂಖ್ಯೆ ೪೩೫.

ಹೀಗೆ ಸೆನೆಟ್‌ನ ೧೦೦ ಮಂದಿ, ಹೌಸ್ ಆಫ್ ರೆಪ್ರೆಸೆಂಟಿಟೀವ್ಸ್‌ನ ೪೩೫ ಮತ್ತು ಅಮೆರಿಕಾದ ರಾಜಧಾನಿ ವಾಷಿಂಗ್ಟನ್ ಡಿ.ಸಿ.ಯ ಮೂವರು ಪ್ರತಿನಿಧಿಗಳು ಸೇರಿದಂತೆ ಈ ಇಲೆಕ್ಟೋರಲ್ ಕಾಲೇಜಿನ ಒಟ್ಟು ಪ್ರತಿನಿಧಿಗಳ ಸಂಖ್ಯೆ ೫೩೮. ಇವರಲ್ಲಿ ೨೭೦ ಪ್ರತಿನಿಧಿಗಳ ಮತ ಪಡೆದವನು ಅಧ್ಯಕ್ಷನಾಗಿ ಚುನಾಯಿತನಾಗುತ್ತಾನೆ.

ಈ ಮಾದರಿಯ ಚುನಾವಣಾ ಕ್ರಮದಿಂದಾಗಿ ಕೆಲವೊಮ್ಮೆ ಫಲಿತಾಂಶಗಳು ವೈಪರೀತ್ಯಗೊಳ್ಳುವುದೂ ಇದೆ. ಅಂದರೆ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತ ಗಳಿಸಿದ ಅಭ್ಯರ್ಥಿ, ಇಲೆಕ್ಟೋರೆಲ್ ಕಾಲೇಜ್‌ನಲ್ಲಿ ಕನಿಷ್ಠ ಪ್ರತಿನಿಧಿಗಳ ಬೆಂಬಲ ಗಳಿಸದೇ ಹೋದರೆ ಆತ ಸೋತು ಹೋಗುವ ಸಾಧ್ಯತೆಯೂ ಇದೆ. ಇದಕ್ಕೆ ಇತ್ತೀಚಿನ ಅತ್ಯಂತ ಒಳ್ಳೆಯ ಉದಾಹರಣೆ ಎಂದರೆ ೨೦೦೧ರ ಚುನಾವಣೆಯಲ್ಲಿ ಅಮೆರಿಕಾದ ಹಿಂದಿನ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ವಿರುದ್ಧ ಸ್ಪರ್ಧಿಸಿದ್ದ ಡೆಮಾಕ್ರಾಟಿಕ್ ಪಕ್ಷದ ಅಭ್ಯರ್ಥಿಯೂ ಮತ್ತು ಯೋಗ್ಯ ಹಾಗೂ ಉದಾತ್ತ ರಾಜಕಾರಣಿಯೂ ಆಗಿದ್ದ ಅಲ್ ಗೋರೆ. ಈತ ಸಾರ್ವತ್ರಿಕ ಚುನಾವಣೆಯಲ್ಲಿ ೫೦.೧೬ ಮಿಲಿಯ ಮತಗಳನ್ನು ಪಡೆದಿದ್ದ. ಬುಷ್ ೪೯.೮೨ ಮಿಲಿಯ ಮತಗಳನ್ನು ಪಡೆದಿದ್ದ. ಆದರೆ ಅಲ್ ಗೋರೆ ಇಲೆಕ್ಟೋರೆಲ್ ಕಾಲೇಜಿನಲ್ಲಿ ಕನಿಷ್ಠ ಅವಶ್ಯಕ ೨೭೦ ಮತಗಳನ್ನು ಪಡೆಯುವುದರಲ್ಲಿ ವಿಫಲನಾದ. ಬುಷ್ ೨೭೧ ಮತಗಳನ್ನು ಪಡೆದು ವಿಜಯಿಯಾದ. ಇದು ಈ ಬಗೆಯ ಚುನಾವಣಾ ಕ್ರಮದ ವಿರೋಧಾಭಾಸ.

ಸಮನ್ವಯಕಾರನಾಗಿ ಒಬಾಮ

ಈಗಾಗಲೇ ಪ್ರಸ್ತಾವಿಸಿದಂತೆ ಬರಾಕ್ ಒಬಾಮನ ಹುಟ್ಟಿನಲ್ಲೇ ಒಂದು ಬಗೆಯ ಸಮನ್ವಯತೆ ಇದೆ. ಇದು ಒಂದು ರೀತಿಯಲ್ಲಿ ಆಕಸ್ಮಿಕವೇ ಹೌದಾಗಿದ್ದರೂ ಬರಾಕ್ ಒಬಾಮನ ಮಾತು ಮತ್ತು ಚಿಂತನೆಗಳಲ್ಲಿ ಈ ಸಮನ್ವಯತೆ ಕಾಣಿಸಿಕೊಳ್ಳುವುದು ಪ್ರಜ್ಞಾಪೂರ್ವಕವಾದ ಅತನ ರಾಜಕೀಯ ನಿಲುವಿನಿಂದಾಗಿಯೇ. ಈ ಬಗೆಯ ರಾಜಕೀಯ ನಿಲುವಿಗೆ ಆತ ಪ್ರತಿನಿಧಿಸುವ ಡೆಮಾಕ್ರಟಿಕ್ ಪಕ್ಷದ ಲಿಬರಲ್ ನಿಲುವೂ ಒಂದು ಬಗೆಯಲ್ಲಿ ಕಾರಣವಾಗಿದ್ದಿರಬಹುದು.

ಅಮೆರಿಕಾದಲ್ಲಿ ಆಗಿರುವ ಸಾಮಾಜಿಕ ಬದಲಾವಣೆ ಮತ್ತು ಈ ಬದಲಾವಣೆಯನ್ನು ಒಬಾಮ ಗ್ರಹಿಸಿರುವ ರೀತಿ ಆತನನ್ನು ಮುತ್ಸದ್ದಿಯನ್ನಾಗಿ ಮಾಡಿವೆ ಹಾಗೂ ಆತನ ಮಾತುಗಳಲ್ಲಿ ಪಕ್ವತೆಯನ್ನು ತಂದಿವೆ. ತಲೆಮಾರು-ತಲೆಮಾರುಗಳ ಹಿಂದಿನ ವರ್ಣಭೇದ, ಅಸಮಾನತೆ, ಜನಾಂಗೀಯ ದ್ವೇಷ ಮತ್ತು ಕಲಹ ಮುಂತಾದ ಅನಾಗರಿಕ ಲಕ್ಷಣಗಳನ್ನು ಕ್ರಮಿಸಿ ಬಂದಿರುವ ಅಮೆರಿಕಾ ಇಂದು ಓರ್ವ ಕಪ್ಪು ಬಣ್ಣದ ಅಧ್ಯಕ್ಷನನ್ನು ಆಯ್ಕೆ ಮಾಡಿದೆ ಎಂಬುದು ನಿಜವಾದರೂ ಒಬಾಮ ಇದನ್ನು ಹೀಗೆಯೇ ಹೇಳುವುದಿಲ್ಲ ಎನ್ನುವುದು ಆತನ ಮುತ್ಸದ್ದಿತನಕ್ಕೆ ಸಾಕ್ಷಿ. ಆತ ಈ ಬದಲಾವಣೆಯನ್ನು ಅಮೆರಿಕಾದ ಸಮಗ್ರ ಐಕ್ಯತೆಯಾಗಿ ಕಾಣುತ್ತಿದ್ದಾನೆ. ಹಾಗಾಗಿಯೇ ಆತ ಹೀಗೆ ಹೇಳುತ್ತಾನೆ.

ನಮ್ಮಲ್ಲಿ ಬಿಳಿಯರ ಅಮೆರಿಕಾ ಮತ್ತು ಕರಿಯರ ಅಮೆರಿಕಾ ಎಂಬುದು ಇಲ್ಲ. ನಮಗೆ ಇರುವುದು ಒಂದೇ ಅಮೆರಿಕಾ ಅದು ಅಮೆರಿಕಾ ಸಂಯುಕ್ತ ಸಂಸ್ಥಾನ. ಇದರ ಹೆಸರಿನಲ್ಲೇ ಸಂಯುಕ್ತಗೊಳ್ಳುವ ಗುಣವಿದೆ. ನಮ್ಮಲ್ಲಿ ಬಿಳಿಚರ್ಮದ ಯುರೋಪ್ ಮೂಲದ ಅಮೆರಿಕಾ, ಆಫ್ರಿಕನ್ ಅಮೆರಿಕಾ, ಹಿಸ್ಪಾನಿಕ್ ಅಮೆರಿಕಾ ಮತ್ತು ಏಷ್ಯನ್ ಅಮೆರಿಕಾ ಎಂಬ ಅಮೆರಿಕಾಗಳಿಲ್ಲ, ನಮಗೆ ಇರುವುದು ಒಂದೇ ಅಮೆರಿಕಾ, ಅದು ಅಮೆರಿಕಾ ಸಂಯುಕ್ತ ಸಂಸ್ಥಾನ. ಜಗತ್ತಿಗೆ ಈ ಉತ್ತರವನ್ನು ಕೊಟ್ಟವರು ಅಮೆರಿಕಾದ ತರುಣರು, ವೃದ್ಧರು, ಶ್ರೀಮಂತರು, ಬಡವರು, ಡೆಮಾಕ್ರಾಟರು, ರಿಪಬ್ಲಿಕನ್ನರು, ಸಬಲರು, ಅಂಗವಿಕಲರು. ನಮ್ಮದು ಕೇವಲ ಕೆಲವೇ ವ್ಯಕ್ತಿಗಳು, ಕೆಂಪು(ರಿಪಬ್ಲಿಕನ್ ಪಕ್ಷದ ಬಣ್ಣ) ನೀಲಿ (ಡೆಮಾಕ್ರಾಟಿಕ್ ಪಕ್ಷದ ಬಣ್ಣ) ಬಣ್ಣಗಳನ್ನು ಹೊಂದಿರುವ ಪ್ರಾಂತ್ಯಗಳ ಕೂಟ ಅಲ್ಲ, ಇದೊಂದು ಒಕ್ಕೂಟ ಎನ್ನುವುದನ್ನು ನಾವು ಜಗತ್ತಿಗೆ ಈ ಮೂಲಕ ತೋರಿಸಿದ್ದೇವೆ.

ಅನೇಕ ವಿಚಾರಗಳಲ್ಲಿ ಒಬಾಮ ಅಮೆರಿಕಾದ ಇತರ ಆಫ್ರಿಕನ್-ಅಮೆರಿಕನ್‌ರ ರೀತಿ ಅಲ್ಲ. ಇದಕ್ಕೆ ಈತ ಅಮೆರಿಕಾದ ವರ್ಣ ಸಂಘರ್ಷದ ನಂತರದ ತಲೆಮಾರಿನವ ಎಂಬುದೂ ಒಂದು ಕಾರಣವಾಗಿದ್ದಿರಬಹುದಾದರೂ ಅದೇ ಕಾರಣ ಎಂದು ವಾದಿಸುವುದು ಒಬಾಮನ ವ್ಯಕ್ತಿತ್ವದ ಮತ್ತು ಆತನ ಚಿಂತನೆಯ ಘನತೆಯನ್ನು ಕುಬ್ಜಗೊಳಿಸಿದಂತೆ. ಬದಲಾಗಬೇಕಾದ ಮತ್ತು ಬದಲಾಯಿಸಬೇಕಾದ ಅಮೆರಿಕಾದಲ್ಲಿ ಗತಕಾಲದ ಹಿಂಸೆಯನ್ನು, ದೌರ್ಜನ್ಯವನ್ನು ಮರೆತು ಮುಂದೆ ಸಾಗಬೇಕಾಗಿದೆ ಎನ್ನುವುದು ಒಬಾಮನ ಸ್ಪಷ್ಟ ನಿಲುವು. ಮಾರ್ಟಿನ್ ಲೂಥರ್ ಕಿಂಗ್‌ನಿಂದ ತೀವ್ರ ಪ್ರಭಾವಕ್ಕೊಳಗಾಗಿರುವ ಒಬಾಮ ಲೂಥರ್‌ನದ್ದೇ ಶೈಲಿಯಲ್ಲಿ ತಣ್ಣನೆಯ ಮತ್ತು ಚಿಂತನೆಗೆ ಹಚ್ಚುವಂತಹ ಭಾಷೆಯನ್ನು ಬಳಸುತ್ತಾನೆ. ಹಿಂಸೆಗೊಳಗಾದವರಿಗೆ ಹೆಚ್ಚು ಹಕ್ಕು ಬೇಕು ಎಂದು ಒತ್ತಾಯಿಸುವ ಬಣಕ್ಕೆ ಸೇರದ ಒಬಾಮ ಅಮೆರಿಕಾದ ಎಲ್ಲ ಪೌರರೂ ನಾಗರಿಕರಾಗಬೇಕಾದ ಅಗತ್ಯವನ್ನು ಮತ್ತೆ ಮತ್ತೆ ಪ್ರಸ್ತಾವಿಸುತ್ತಾನೆ. ‘ವಿ ಕೆನ್ ಬಿಲಿವ್ ಇನ್ ಚೆಂಜ್’ ಎಂಬ ಧ್ಯೇಯ ವಾಕ್ಯವನ್ನು ತನ್ನ ಚುನಾವಣೆಯ ಉದ್ದಕ್ಕೂ ಸಾರಿದ ಒಬಾಮ ಹೀಗೆ ನಾಗರಿಕರಾಗುವ ಮೂಲಕ ಮಾತ್ರ ಈ ದೇಶದ ಅಖಂಡತೆಯನ್ನು ಮತ್ತು ಐಕ್ಯತೆಯನ್ನು ಸಾಧಿಸಬಹುದು ಎಂದು ಪ್ರತಿಪಾದಿಸುತ್ತಾನೆ.

ಅಮೆರಿಕಾದ ವಿದೇಶಾಂಗ ಮತ್ತು ಆರ್ಥಿಕ ನೀತಿ
ಒಬಾಮ ಹಾಗೂ ಭಾರತ

ಅಮೆರಿಕಾದ ವಿದೇಶಾಂಗ ನೀತಿ ಮತ್ತು ಆರ್ಥಿಕ ನೀತಿ ಯಾವತ್ತೂ ಜೊತೆ ಜೊತೆಯಾಗಿಯೇ ಸಾಗಿದೆ. ಆಕ್ರಮಣಕಾರೀ ಅನೀತಿಯನ್ನೇ ತನ್ನ ವಿದೇಶಾಂಗ ನೀತಿಯಾಗಿ ಹೊಂದಿರುವ ಅಮೆರಿಕಾದ ಮೊದಲ ದೌರ್ಜನ್ಯ ನಡೆದಿರುವುದು ಅದರ ಸಮೀಪದಲ್ಲಿರುವ ದಕ್ಷಿಣ ಅಮೆರಿಕಾದ ದೇಶಗಳ ಮೇಲೆ. ಇಡೀ ದಕ್ಷಿಣ ಅಮೇರಿಕದ ಅಪಾರ ಖನಿಜ ಮತ್ತು ಸಸ್ಯ ಸಂಪತ್ತನ್ನು ತನ್ನ ಸ್ವಾಧೀನದಲ್ಲಿರಿಸಿಕೊಂಡ ಅಮೆರಿಕಾ ೧೯೬೦ರಿಂದ ೧೯೭೮ರವರೆಗೆ ಈ ದೇಶಗಳೆಲ್ಲೆಲ್ಲಾ ತನ್ನ ಕೈಗೊಂಬೆ ಸರಕಾರಗಳನ್ನೇ ಕೂರಿಸಿದೆ. ಈ ಹತಭಾಗ್ಯ ದೇಶಗಳ ಕಾರ್ಮಿಕ ಸಂಘಟನೆಗಳನ್ನು, ಸರಕಾರಿ ಸಂಘಗಳನ್ನು ನಾಶಪಡಿಸಿ, ಭೂ ಸುಧಾರಣೆಗಳನ್ನು ಸ್ಥಗಿತಗೊಳಿಸಿ, ಆಯಾ ದೇಶಗಳ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನೇ ಬಗ್ಗು ಬಡಿದಿದೆ. ಚಿಲಿ, ಡಾಮಿನಿಕನ್ ರಿಪಬ್ಲಿಕ್, ಅರ್ಜೆಂಟೀನಾ, ಎಲೆಸಾಲ್ವೆಡೋರ್, ಹೈಟಿ, ಕೊಲಂಬಿಯಾ, ಗ್ವಾಟೆಮಾಲಾ, ಬೊಲಿವಿಯಾ, ನಿಕರಾಗುವಾ ಈ ಮೊದಲಾದ ದೇಶಗಳಲ್ಲಿ ಅಮೆರಿಕಾ ತನಗೆ ನಿಷ್ಠವಾಗಿರುವ ಸರ್ವಾಧಿಕಾರೀ ಸರಕಾರಗಳನ್ನೇ ಸ್ಥಾಪಿಸಿದೆ. ದಕ್ಷಿಣ ಅಮೆರಿಕಾ ಖಂಡದಲ್ಲಿ ಹಲವು ದಶಕಗಳ ಕಾಲ ಅಮೆರಿಕಾದ ಆಕ್ರಮಣವನ್ನು ವಿರೋಧಿಸಿ ನಿಂತಿರುವ ಏಕೈಕ ಪುಟ್ಟ ರಾಷ್ಟ್ರವಾಗಿರುವ ಕ್ಯೂಬಾ ಕೂಡಾ ಒಬಾಮ ಅಮೆರಿಕಾದ ಅಧ್ಯಕ್ಷನಾದುದಕ್ಕೆ ತನ್ನ ಸಂತಸವನ್ನು ವ್ಯಕ್ತಪಡಿಸಿದೆ. ಕಳೆದ ಎಂಟು ವರ್ಷಗಳಲ್ಲಿ ಅಮೆರಿಕಾದೊಂದಿಗಿನ ತೀವ್ರ ವೈಷಮ್ಯವನ್ನು ಮರೆಯಲು ಪ್ರಯತ್ನಿಸುವುದಾಗಿ ಹೇಳಿರುವ ಈ ಲ್ಯಾಟಿನ್ ಅಮೆರಿಕಾದ ನಾಯಕರು(ವೆನಿಜುವೆಲಾದ ಹ್ಯೂಗೋ ಷಾ ವೆಜ್ ಕೂಡ ಸೇರಿದಂತೆ) ಅಮೆರಿಕಾದ ನೂತನ ಅಧ್ಯಕ್ಷರೊಂದಿಗೆ ಸುಮಧುರ ಬಾಂಧವ್ಯ ಹೊಂದುವ ನಿರೀಕ್ಷೆಯಲ್ಲಿರುವುದಾಗಿ ಹೇಳಿರುವುದು ಬದಲಾಗುತ್ತಿರುವ ಜಾಗತಿಕ ವಿದ್ಯಮಾನವನ್ನು ಹೇಳುತ್ತಿದೆ.

ದಕ್ಷಿಣ ಅಮೆರಿಕಾದಲ್ಲಿ ನಡೆಸಿದ ಹಾಗೆ ಅಮೆರಿಕಾ ಏಷ್ಯಾದ ಬಹುಪಾಲು ದೇಶಗಳ ಆಂತರಿಕ ರಾಜಕಾರಣದಲ್ಲೂ ತನ್ನ ಮೂಗು ತೂರಿಸಿದೆ. ವಿಯಟ್ನಾಮ್‌ನಲ್ಲಿ ಅದು ಕನಿಷ್ಟ ೧೫ ಲಕ್ಷ ಜನರನ್ನು ಕೊಂದುಹಾಕಿದೆ. ವಿಯಟ್ನಾಮ್ ಸಮೀಪದ ಲಾವೋಸ್, ಕಾಂಬೋಡಿಯಾ, ಇಂಡೋನೇಷಿಯಾ, ಫಿಲಿಫೈನ್ಸ್‌ಗಳಲ್ಲೂ ಅದು ನರಮೇಧವನ್ನು ನಡೆಸಿದೆ. ಆಫ್ರಿಕಾ ಖಂಡದಲ್ಲೂ ಅದು ತನ್ನ ದುಂಡಾವರ್ತಿ ಮೆರೆದಿದೆ. ಅದರ ಇತ್ತೀಚೆಗಿನ ದುರಾಕ್ರಮಣ ಎದುರಿಸಿದ್ದು ಮಧ್ಯಪ್ರಾಚ್ಯ ದೇಶಗಳು. ಮಧ್ಯಪ್ರಾಚ್ಯದ ಎಲ್ಲಾ ಇಸ್ಲಾಮಿಕ್ ದೇಶಗಳಲ್ಲೂ ಅಮೆರಿಕಾ ಹಸ್ತಕ್ಷೇಪ ನಡೆಸಿದೆ. ಅದರ ಮೊದಲ ಬಲಿ ಇರಾನ್. ಅದು ಅಲ್ಲಿ ಎಡಪಕ್ಷಗಳ ಒಕ್ಕೂಟದ ಸರಕಾರವನ್ನು ಪತನಗೊಳಿಸಿ ರಾಜರ ಆಳ್ವಿಕೆ ಆರಂಭಗೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟಿತು. ಅಂಥ ಇರಾನ್ ಈಗ ರಾಜನನ್ನೂ ಪದಚ್ಯುತಗೊಳಿಸಿ ಮತೀಯವಾದಿ ಸರಕಾರದ ಆಳ್ವಿಕೆಯ ಆಶ್ರಯದಲ್ಲಿದೆ. ಬುಷ್‌ನ ಕಾಲದಲ್ಲಿ ಇರಾಕ್‌ನ ನಂತರ ಇರಾನ್ ತಮ್ಮ ಘೋಷಿತ ಶತ್ರು ಎಂದು ಅಮೆರಿಕಾ ಸಾರಿತ್ತು. ಹಾಗೆಯೇ ಸೌದಿ ಅರೇಬಿಯಾವನ್ನು ಸಾಕಿದ ಅಮೆರಿಕಾ ಅಲ್ಲಿ ತನ್ನ ಮಿಲಿಟರಿ ನೆಲೆಗಳನ್ನೂ ಸ್ಥಾಪಿಸಿದೆ. ೧೯೭೧ರಲ್ಲಿ ತೈಲಬೆಲೆ ನಾಲ್ಕು ಪಟ್ಟು ಜಾಸ್ತಿಯಾದುದರಿಂದ ಸೌದಿ ಅರೇಬಿಯಾಕ್ಕೆ ಹರಿದು ಬಂದ ಅಪಾರ ಪ್ರಮಾಣದ ಹಣದ ಪರಿಣಾಮವೇ ಇವತ್ತಿನ ತಾಲಿಬಾನ್ ಮತ್ತು ಅದರ ನಾಯಕ ಒಸಾಮಾ ಬಿನ್ ಲಾಡೆನ್. ಈತ ಅಮೆರಿಕಾ ಸೃಷ್ಟಿಸಿದ ಸನ್ನಿವೇಶದ ಕೂಸು. ಹಾಗೆಯೇ ಈಜಿಪ್ಟ್‌ನಲ್ಲೂ ನಾಸೆರ್ ಎಂಬ ಮಹಾನಾಯಕನೊಬ್ಬನನ್ನು ಮುಗಿಸಿದ ಅಮೆರಿಕಾ ಅಲ್ಲಿ ಅನ್ವರ್ ಸಾದಾತ್ ಎಂಬವನನ್ನು ಅಧಿಕಾರದಲ್ಲಿ ಕೂರಿಸಿದೆ. ಇವತ್ತು ಈಜಿಪ್ಟ್ ಕೂಡಾ ಮತಾಂಧ ಶಕ್ತಿಗಳ ತೊಟ್ಟಿಲು ಆಗಿದೆ. ಇದರ ಜೊತೆಗೆ ಲಿಬಿಯಾ, ಪ್ಯಾಲೆಸ್ಟೈನ್ ಮತ್ತು ಇಸ್ರೇಲ್‌ಗಳನ್ನೂ ನೆನಪಿಸಿಕೊಳ್ಳಲೇಬೇಕು.

ಇವತ್ತು ಜಗತ್ತಿನ ಅತಿ ದೊಡ್ಡ ಮಿಲಿಟರಿ ಶಕ್ತಿ ಅಮೆರಿಕಾ, ಅದರ ಜೊತೆಗೆ ಶಸ್ತ್ರಾಸ್ತ್ರಗಳನ್ನು ಅತಿ ದೊಡ್ಡ ಪ್ರಮಾಣದಲ್ಲಿ ರಫ್ತು ಮಾಡುವ ದೇಶವು ಅಮೆರಿಕಾವೂ ಆಗಿದೆ. ಈಗ ಅದರ ಆರ್ಥಿಕ ಚೈತನ್ಯ ಉಡುಗಿ ಹೋಗಿದ್ದರೂ ಅದರ ಮಿಲಿಟರಿ ಪ್ರಾಬಲ್ಯಕ್ಕೇನೂ ಧಕ್ಕೆ ಒದಗಿಲ್ಲ. ಭಾರತ ಮತ್ತು ಪಾಕಿಸ್ತಾನ ಈ ಎರಡೂ ದೇಶಗಳಿಗೂ ಇವತ್ತು ಶಸ್ತ್ರಾಸ್ತ್ರ ಬರುತ್ತಿರುವುದು ಅಮೆರಿಕಾದಿಂದಲೇ. ಭಾರತ ನಡೆಸಿರುವ ನಾಗರಿಕ ಪರಮಾಣು ಒಪ್ಪಂದವೂ ಅಮೆರಿಕಾದ ಜೊತೆಗೇನೆ. ಈ ಒಪ್ಪಂದದ ಬಗ್ಗೆ ಡೆಮಾಕ್ರಾಟ್ ರಿಗೆ ತಕರಾರು ಇದೆ. ಒಬಾಮ ಇದನ್ನು ಹೇಗೆ ನಿಭಾಯಿಸಲಿದ್ದಾನೆ ಎನ್ನುವುದು ಭವಿಷ್ಯದ ಭಾರತ ಮತ್ತು ಅಮೆರಿಕಾದ ಸಂಬಂಧದ ಸ್ವರೂಪವನ್ನೂ ನಿರ್ಧರಿಸಲಿದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ವಿಜಯಿಯಾದ ದಿವಸ ಒಬಾಮ ತನ್ನ ಸ್ವಂತ ಊರು ಷಿಕಾಗೋದಲ್ಲಿ ನಡೆದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ-

ನಮ್ಮ ದೇಶದ ನಿಜವಾದ ಸಂಪತ್ತು ಇರುವುದು ಸೇನಾಬಲ ಅಥವಾ ಸಂಪತ್ತಿನಲ್ಲಿ ಅಲ್ಲ. ಜಗತ್ತಿನ ಬಹುದೊಡ್ಡ ತತ್ತ್ವಾದರ್ಶಗಳಾದ ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಅವಕಾಶ ಹಾಗೂ ದೃಢ ವಿಶ್ವಾಸದಲ್ಲಿ ಇದೆ ಎನ್ನುವುದನ್ನು ಈ ದೇಶದ ಪ್ರಜೆಗಳು ಸಾಬೀತುಪಡಿಸಿದ್ದಾರೆ

ಎಂದಿದ್ದಾನೆ. ಇದನ್ನು ನಿಜಗೊಳಿಸುವ ಸಾಧ್ಯತೆ ಅಮೆರಿಕಾಕ್ಕೆ ಇದೆ. ಯಾಕೆಂದರೆ ಎಡ್ವರ್ಡ್ ಸಯೀದ್ ಎಂಬ ಉದ್ಧಾಮ ಚಿಂತಕ ಹೇಳುವ ಹಾಗೆ ಸಂಸ್ಕೃತಿ, ದೇಶ ಮತ್ತು ಧರ್ಮಗಳು ಯಾವತ್ತೂ ಅಖಂಡವಲ್ಲ. ಹಲವು ಬಗೆಯ ಭಾರತಗಳಿರುವಂತೆ, ಹಲವು ಬಗೆಯ ಹಿಂದೂ ಧರ್ಮಗಳಿರುವಂತೆ, ಹಲವು ಬಗೆಯ ಇಸ್ಲಾಮ್ ಧರ್ಮಗಳಿರುವಂತೆ, ಹಲವು ಬಗೆಯ ಅಮೆರಿಕಾಗಳೂ ಇವೆ. ಆ ಹಲವು ಅಮೆರಿಕಾಗಳಲ್ಲಿ ಕೆಲವು ಅಮೆರಿಕಾಗಳ ದರ್ಶನ ಆಗಿದೆ. ಅದು ಗುಲಾಮಗಿರಿಯ ವಿರುದ್ಧ ಹೋರಾಟ ನಡೆಸಿದ ಅಮೆರಿಕಾದ ಇರಬಹುದು. ನಾಗರಿಕ ಹಕ್ಕುಗಳ ಹೋರಾಟವನ್ನು ನಡೆಸಿದ ಅಮೆರಿಕಾ ಇರಬಹುದು ಅಥವಾ ಇವತ್ತು ಒಬಾಮನಂಥ ಒಬ್ಬ ಆಫ್ರಿಕನ್-ಅಮೆರಿಕನ್‌ನನ್ನು ತನ್ನ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ ಅಮೆರಿಕಾ ಇರಬಹುದು. ಇವೆಲ್ಲವೂ ಅಮೆರಿಕಾದ ಆಂತರಂಗಿಕ ವಿದ್ಯಮಾನಗಳು. ಆದರೆ ಹೊರಗಿನ ವಿದ್ಯಮಾನಗಳಿಗೆ ಮಾತ್ರ ಇದುವರಿಗೆ ಅಮೆರಿಕಾ ತನ್ನ ಒಂದೇ ಮುಖದಿಂದ ಪ್ರತಿಕ್ರಿಯಿಸಿದೆ. ಅದು ಒಬಾಮನ ಮೂಲಕ ಬೇರೆ ಮುಖಗಳಿಂದಲೂ ಪ್ರತಿಕ್ರಿಯಿಸಬಹುದೇ ಎನ್ನುವುದು ಅಮೆರಿಕಾದಿಂದ ಹೊರಗಿರುವ ನಾಗರಿಕ ಜಗತ್ತಿನ ನಿರೀಕ್ಷೆಯಾಗಿದೆ.

ಭಾರತಕ್ಕೆ ಸಂಬಂಧಿಸಿದ ತನ್ನ ವಿದೇಶಾಂಗ ನೀತಿಯಲ್ಲಿ ಕೆಲವು ಬದಲಾವಣೆಗಳಿರು ವುದನ್ನು ಈಗಾಗಲೇ ಸೂಚಿಸಿರುವ ಒಬಾಮ ಕಾಶ್ಮೀರದ ಬಗ್ಗೆ ಪ್ರಸ್ತಾಪಿಸಿ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್‌ನನ್ನು ಈ ಬಗ್ಗೆ ವಿಶೇಷ ದೂತನಾಗಿ ನೇಮಿಸುವುದರ ಬಗ್ಗೆ ಕೆಲವೊಂದು ಸಂಕೇತಗಳನ್ನು ನೀಡಿದ್ದಾನೆ. ಇದು ಈ ವಿಷಯಕವಾಗಿ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಯನ್ನು ಒಪ್ಪದ ಭಾರತಕ್ಕೆ ಒಂದು ಬಗೆಯಲ್ಲಿ ಹಿನ್ನೆಡೆಯೇ ಹೌದು. ಪಾಕಿಸ್ತಾನದ ಬಗೆಗೆ ಮಾತ್ರ ಬಹಳ ಉದಾತ್ತವಾದ ಮಾತುಗಳನ್ನೇ ಆಡಿರುವ ಒಬಾಮ ಪಾಕಿಸ್ತಾನದ ಸರಕಾರವು ಪ್ರಜಾತಾಂತ್ರಿಕ ಹಾದಿಯಲ್ಲಿ ಮುನ್ನಡೆಯುವ ನಿಟ್ಟಿನಲ್ಲಿ ನಾವೆಲ್ಲರೂ ಸಹಕಾರ ನೀಡಬೇಕಾಗಿದೆ ಎಂದಿದ್ದಾನೆ. ಅಂದರೆ ಇದರ ಅರ್ಥ ಪಾಕಿಸ್ತಾನಕ್ಕೆ ಸೇನಾ ನೆರವು ನೀಡುವುದು ಎಂದಲ್ಲ. ಬದಲಿಗೆ ಅಲ್ಲಿನ ಬಡತನ ಮತ್ತು ಅನಕ್ಷರತೆ ಹೋಗಲಾಡಿಸುವ ನಿಟ್ಟಿನಲ್ಲಿ ನಾಗರಿಕ ನೆರವು ನೀಡಬೇಕಾಗಿದೆ ಎಂಬುದನ್ನೂ ಆತ ಹೇಳಿದ್ದಾನೆ ಎನ್ನುವುದು ಇಲ್ಲಿ ಮುಖ್ಯವಾಗಿದೆ.

ಅಧ್ಯಕ್ಷನಾಗಿ ಆಯ್ಕೆಯಾದ ಕೂಡಲೇ ಇರಾಕ್‌ನಲ್ಲಿರುವ ಅಮೆರಿಕಾದ ಸೇನೆಯನ್ನು ವಾಪಸ್ ಕರೆಸಿಕೊಂಡು ಅಫ್ಘಾನಿಸ್ಥಾನದ ಮೇಲೆ ನಾನು ಹೆಚ್ಚು ಗಮನ ಕೇಂದ್ರೀಕರಿಸುತ್ತೇನೆ ಎಂಬ ಒಬಾಮನ ಮಾತಿನ ಹಿಂದೆ ಒಸಾಮಾನು ಇದ್ದಾನೆ, ಪಾಕಿಸ್ತಾನವೂ ಇದೆ ಮತ್ತು ಕಾಶ್ಮೀರವೂ ಇದೆ. ಅಫ್ಘಾನಿಸ್ಥಾನದ ಎಲ್ಲಾ ಉಲ್ಬಣಾವಸ್ಥೆಗೆ ಕಾರಣವಾದ ಅಲ್ ಖೈದಾಕ್ಕೆ ಪಾಕಿಸ್ತಾನವೇ ಸುರಕ್ಷಿತ ಅಡಗುದಾಣ. ಹಾಗಾಗಿ ಸಮಸ್ಯೆಯ ಮೂಲಕಾರಣ ಪಾಕಿಸ್ತಾನ ಎಂದು ಭಾವಿಸಿರುವ ಒಬಾಮ ಪಾಕಿಸ್ತಾನವನ್ನು ತಾನು ಹೇಳಿದಂತೆ ಕೇಳುವ ಹಾಗೆ ಮಾಡಲು ಕಾಶ್ಮೀರವನ್ನು ಅಸ್ತ್ರವಾಗಿ ಬಳಸಬಹುದು ಎಂದುಕೊಂಡಿದ್ದಾರೆ. ಇದು ಭಾರತವನ್ನು ಆತಂಕಕ್ಕೆ ತಳ್ಳಿದೆ. ಒಸಾಮಾ ಮತ್ತು ಒಬಾಮನ ಮುಖಾಮುಖಿ ಪಾಕಿಸ್ತಾನದ ಮೂಲಕ ಈ ರೀತಿಯಲ್ಲಿ ನಡೆದರೆ ಭಾರತಕ್ಕೆ ಹೊಸ ಬಿಕ್ಕಟ್ಟೊಂದು ಎದುರಾದ ಹಾಗೆ.

ಕಾಶ್ಮೀರದ ಬಿಕ್ಕಟ್ಟು ೧೯೯೦ರ ದಶಕದಲ್ಲಿ ತೀವ್ರ ಸ್ವರೂಪವನ್ನು ಪಡೆದುಕೊಂಡಾಗ ಅಮೆರಿಕಾದ ಕ್ಲಿಂಟನ್‌ನ ಡೆಮಾಕ್ರಾಟಿಕ್‌ರ ಆಡಳಿತ ತೆಗೆದುಕೊಂಡ ನಿಲುವುಗಳು ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದವು. ಆ ಬಳಿಕ ಬಂದ ಬುಷ್ ಮಾತುಕತೆಗೆ ಬೆಂಬಲ ನೀಡಿತು. ಈಗ ನಡೆದಿರುವ ನಾಗರಿಕ ಪರಮಾಣು ಒಪ್ಪಂದಕ್ಕಿಂತಲೂ ಕಾಶ್ಮೀರದ ಕುರಿತಾದ ಬುಷ್ ಆಡಳಿತದ ನಿಲುವೇ ಅಮೆರಿಕಾ ಮತ್ತು ಭಾರತ ಹೆಚ್ಚು ನಿಕಟವಾಗಲು ಕಾರಣ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಬದಲಾದ ಸನ್ನಿವೇಶದಲ್ಲಿ ಭಾರತ-ಪಾಕ್ ಮತ್ತು ಅಮೆರಿಕಾದ ಸಂಬಂಧ ಹೊಸರೂಪ ಪಡೆಯಲಿದೆ ಎಂದೇ ಎಲ್ಲರೂ ಭಾವಿಸುತ್ತಿದ್ದಾರೆ. ಯಾಕೆಂದರೆ ಕಾಶ್ಮೀರದ ಕುರಿತು ಒಬಾಮ ವ್ಯಕ್ತಪಡಿಸಿದ ನಿಲುವನ್ನು ಕಾಶ್ಮೀರದ ಪ್ರತ್ಯೇಕವಾದಿ ಸಂಘಟನೆಗಳು ಈಗಾಗಲೇ ಬೆಂಬಲಿಸಿವೆ.

ಒಬಾಮ ತನ್ನ ಚುನಾವಣಾ ಪ್ರಚಾರದಲ್ಲಿ ತನ್ನ ಪಕ್ಷದ ಆರ್ಥಿಕ ನೀತಿಯನ್ನು ಜನರ ಮುಂದೆ ಮಂಡಿಸಿದ್ದು ಹೀಗೆ

ನೋಡಿ ನಮ್ಮ ದೇಶದ ಮುಂದೆ ಎರಡು ಮಾದರಿಗಳಿವೆ ಅಥವಾ ಎರಡು ಆಯ್ಕೆಗಳಿವೆ. ಅದರಲ್ಲಿ ಒಂದು ರಿಪಬ್ಲಿಕನ್ನರು ಈಗಾಗಲೇ ಮಾಡಿದ್ದು. ಅದೇನೆಂದರೆ ವಿದೇಶಕ್ಕೆ ಉದ್ಯೋಗವನ್ನು ಸರಬರಾಜು ಮಾಡಿದ ಮತ್ತು ಮಾಡುವ ಕಂಪೆನಿಗಳಿಗೆ ತೆರಿಗೆ ರಿಯಾಯಿತಿಯನ್ನು ಕೊಡುವುದು. ಅದರಿಂದ ಅಮೆರಿಕಾಕ್ಕೆ ಭರಿಸಲಾರದ ಆರ್ಥಿಕ ಒತ್ತಡಗಳು ಉಂಟಾಗಿದೆ ಎನ್ನುವುದು ನಿಮಗೂ ಗೊತ್ತು. ಎರಡನೆಯದು, ನಾವು ಅಂದರೆ ಡೆಮಾಕ್ರಾಟಿಕ್‌ರು ಮಾಡಲಿಕ್ಕಿರುವುದುಅದು ದೇಶೀಯ ವಾಗಿಯೇ ಉದ್ಯೋಗ ಉಳಿಸುವ ಸಂಸ್ಥೆಗಳಿಗೆ ಸಹಾಯ ಮಾಡುವುದು. ಆಯ್ಕೆ ನಿಮ್ಮದು.

ಅಮೆರಿಕಾದ ಜನ ಸಹಜವಾಗಿಯೇ ಎರಡನೆಯದನ್ನು ಆರಿಸಿದ್ದಾರೆ. ಈಗ ಹೇಳಿದ್ದನ್ನು ಮಾಡಲಿರುವುದು ಒಬಾಮನಿಗೆ ಮತ್ತು ಅದರ ಬಿಸಿ ತಾಗುವುದು ಭಾರತಕ್ಕೆ ಯಾರು ಎಷ್ಟೇ ನಿರಾಕರಿಸಿದರೂ ಮುಂದಿನ ನಾಲ್ಕು ವರ್ಷಗಳಲ್ಲಿ ಇದು ಆಂಶಿಕವಾಗಿಯಾದರೂ ಸಂಭವಿಸಿಯೇ ಬಿಡುವ ಎಲ್ಲಾ ಸಾಧ್ಯತೆಗಳೂ ದಟ್ಟವಾಗಿವೆ. ಭಾರತ ಮತ್ತು ಅಮೆರಿಕಾದ ನಡುವೆ ೨೦೦೭-೦೮ರ ಅವಧಿಯಲ್ಲಿ ೪೫ ಶತಕೋಟಿ ವಹಿವಾಟು ನಡೆದಿತ್ತು. ಇದರಲ್ಲಿ ಬಹುಪಾಲು ಐಟಿ ಮತ್ತು ಬಿಪಿಓ ಕ್ಷೇತ್ರವಾಗಿತ್ತು ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಈ ವರ್ಷ ಇದು ೬೦ ಶತಕೋಟಿ ಡಾಲರ್‌ಗಳಾಗಬಹುದೆಂಬ ನಿರೀಕ್ಷೆ ಇದೆ. ಆದರೆ ಒಬಾಮ ಈ ಭಾರೀ ನಿರೀಕ್ಷೆಗೆ ತಡೆಗೋಡೆಯಾಗುವ ಸಂಭವ ಇದೆ.

ಅಧ್ಯಕ್ಷನಾಗಿ ಅಯ್ಕೆಯಾದ ನಂತರದ ತಮ್ಮ ಮೊದಲ ಪತ್ರಿಕಾಗೋಷ್ಠಿಯಲ್ಲೇ ಅಮೆರಿಕಾದ ಆರ್ಥಿಕತೆಯ ಪುನಶ್ಚೇತನಕ್ಕೆ ತಕ್ಕ ಯೋಜನೆಯನ್ನು ತಕ್ಷಣವೇ ರೂಪಿಸುವುದಾಗಿ ಒಬಾಮ ಪ್ರಕಟಿಸಿದ್ದಾನೆ. ಅತಿ ಹೆಚ್ಚಿನ ಪ್ರಮಾಣದ ಉದ್ಯೋಗ ಕಡಿತ ಮತ್ತು ತೆರಿಗೆ ಹೆಚ್ಚಳಗಳ ಮೂಲಕ ಈಗಾಗಲೇ ಇರುವ ಸಮಸ್ಯೆಯನ್ನು ಇನ್ನಷ್ಟು ದೊಡ್ಡದು ಮಾಡುವುದಿಲ್ಲ ಎಂದು ಹೇಳಿರುವ ಒಬಾಮನ ಅರ್ಥನೀತಿ ಭಾರತದ ಮೇಲೆ ‘ಖಂಡಿತ’ ಪರಿಣಾಮವನ್ನು ಉಂಟು ಮಾಡಲಿದೆ. ಆದರೆ ಭಾರತವೂ ತನ್ನ ವ್ಯಾಪಾರ-ವಹಿವಾಟನ್ನು, ತನ್ನ ತಂತ್ರಜ್ಞಾನದ ವಿನಿಮಯವನ್ನು ಅಮೆರಿಕಾ ಕೇಂದ್ರಿತವಾಗಿ ಮಾಡದೆ ವಿಶ್ವದ ಇತರ ದೇಶಗಳ ಕಡೆಗೂ ವಿಸ್ತರಿಸಬೇಕಾದ ಅಗತ್ಯ ಇದೆ. ಅಂದರೆ ಭಾರತವು ತನ್ನ ಮಾರುಕಟ್ಟೆಯನ್ನು ಅಮೆರಿಕಾ ಹೊರತುಪಡಿಸಿ ವಿಸ್ತರಿಸಬೇಕಾದ ಅನಿವಾರ್ಯತೆಯೂ ಇದೀಗ ಪ್ರಾಪ್ತವಾಗಿದೆ.

 

ಪರಾಮರ್ಶನ ಗ್ರಂಥಗಳು

೧. ಜೋಶಿ ಪಿ.ಎಸ್. ಮತ್ತು ಗೋಲ್ಕರ್ ಎಸ್.ವಿ., ೧೯೬೦. ಹಿಸ್ಟರಿ ಆಫ್ ಮಾರ್ಡನ್ ವರ್ಲ್ಡ್೧೯೦೦, ನ್ಯೂಡೆಲ್ಲಿ.

೨. ದೀಕ್ಷಿತ್ ಜಿ.ಎಸ್., ೧೯೮೬. ಅಮೆರಿಕಾ, ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ.

೩. ಮೋಹನ್ ವೈ.ಆರ್., ೨೦೦೩. ಅಮೆರಿಕಾಯಣ, ಬೆಂಗಳೂರು: ಅಭಿನವ ಪ್ರಕಾಶನ.

೪. ಚಾಲ್ಸ್ ಸೆಲ್ಲರ್ಸ್ ಮತ್ತಿತರರು, ೧೯೯೦. ಎ ಸಿಂತೆಸಿಸ್ ಆಫ್ ಅಮೆರಿಕನ್ ಹಿಸ್ಟರಿ, ಸಂಪುಟ ೧, ದೆಹಲಿ.

೫. ಜಾರ್ಜ್ ಬ್ರೌನ್ ಟಿಂಡಲ್ ಮತ್ತು ಡೇವಿಡ್ ಇ.ಶೀ., ೨೦೦೪. ಅಮೆರಿಕಾ ಎ ನೆರೇಟಿವ್ ಹಿಸ್ಟರಿ, ನ್ಯೂಯಾರ್ಕ್: ನೊರಟನ್ ಆ್ಯಂಡ್ ಕಂಪನಿ.