ಕಮ್ಯುನಿಸಂ ತತ್ವಗಳ ಹರಡುವಿಕೆಗೆ ತಡೆಗೋಡೆ

ಐಸೆನ್ ಹಾವರ್‌ನ ನೇತೃತ್ವದಲ್ಲಿ ಆಡಳಿತಕ್ಕೆ ಬಂದ ರಿಪಬ್ಲಿಕನ್‌ರ ಮುಖ್ಯ ಕಾರ್ಯಯೋಜನೆ ಎಂದರೆ ತೀವ್ರವಾಗಿ ಹರಡುತ್ತಿದ್ದ ಕಮ್ಯುನಿಸಂ ವ್ಯವಸ್ಥೆಗೆ ತಡೆಗೋಡೆ  ನಿರ್ಮಿಸುವುದು. ಹಾವರ್‌ನ ಆಪ್ತ ಸಲಹೆಗಾರ ಜಾನ್ ಫಾಸ್ಟರ್ ಡಲೆಸ್‌ನು ಕಮ್ಯುನಿಸ್ಟ್ ಆಡಳಿತಗಳ ವಿರುದ್ಧ ಹೋರಾಡುವುದು ಅಮೆರಿಕಾದ ಮುಖ್ಯ ಗುರಿ ಹಾಗೂ ಅಂಥ ವ್ಯವಸ್ಥೆಗಳನ್ನು(ಕಮ್ಯುನಿಸ್ಟ್ ಸರಕಾರಗಳ) ಒಡೆದು ಹಾಕಲು ಅಮೆರಿಕಾ ಯಾವ ತ್ಯಾಗಕ್ಕಾದರೂ ಸಿದ್ಧವಿರುವುದಾಗಿ ಘೋಷಿಸಿದನು. ಸಿಐಎ ಬೇಹುಗಾರಿಕಾ ಸಂಸ್ಥೆಯನ್ನು ಛೂಬಿಡುವುದು ಅಪಾರವಾದ ಹಣವನ್ನು ತನ್ನ ಏಜೆಂಟರುಗಳಿಗೆ ಚೆಲ್ಲುವುದರ ಮೂಲಕ ಕಮ್ಯೂನಿಸ್ಟ್ ಆಡಳಿತಗಳನ್ನು ಅಸ್ಥಿರಗೊಳಿಸುವ ಪ್ರಯತ್ನದಲ್ಲಿ ಡಲೆಸ್‌ನು ತೊಡಗಿದನು. ಇದೇ ಕಾಲಕ್ಕೆ ಕಮ್ಯುನಿಸಂ ಸಿದ್ಧಾಂತದ ತೀವ್ರ ಪ್ರತಿಪಾದಕ ಹಾಗೂ ಅದನ್ನೆಲ್ಲ ಜಗತ್ತಿನ ತುಂಬ ತೀವ್ರವಾಗಿ ಹರಡುತ್ತಿದ್ದ ಗಟ್ಟಿ ಆಡಳಿತಗಾರ ಸ್ಟಾಲಿನ್ ತೀರಿಹೋದನು. ಸಂದರ್ಭದ ಸದುಪಯೋಗ ಪಡೆಯಲು ಹವಣಿಸಿದ ಅಮೆರಿಕಾ ಸೋವಿಯಟ್ ರಷ್ಯಾವನ್ನು ತಹಬಂದಿಗೆ ತರಲು ಸರಿಯಾದ ಸಮಯವೆಂದು ನಿರೀಕ್ಷಿಸಿ ಕುತಂತ್ರದಿಂದ ಕೂಡಿದ ಕಾರ್ಯಯೋಜನೆ ರೂಪಿಸಲಾಯಿತು. ಆದರೆ ಸ್ಟಾಲಿನ್‌ನ ನಂತರ ಆಳ್ವಿಕೆಗೆ ಬಂದ ನಿಕಿಟಿವ್ ಕ್ರುಶ್ಚೇವ್ ಶಾಂತಿಯುತ ಸಹಬಾಳ್ವೆಗೆ ಬೆಂಬಲಿಸಿ ಜಾಗತಿಕ ಮಟ್ಟದಲ್ಲಿ ನಡೆಯುತ್ತಿದ್ದ ಅಸಮಾಧಾನಗಳಿಗೆ ತೆರೆ ಎಳೆಯಲು ಪ್ರಯತ್ನಿಸಿದನು. ಈ ಹಿಂದಿನ ಕಮ್ಯುನಿಸಂ ಆಡಳಿತ ತನ್ನ ನೀತಿಗಳಿಗೆ ಅನುಗುಣವಾಗಿ ಹೆಣೆಯುತ್ತಿದ್ದ ರಣನೀತಿ ತಂತ್ರಗಳ ವಿರುದ್ಧವಾಗಿ ಕ್ರುಶ್ಚೇವ್‌ನು ಕೇವಲ ಯುದ್ಧ ಹಾಗೂ ಆಕ್ರಮಣಗಳಿಂದ ಮಾತ್ರ ಕಮ್ಯುನಿಸಂ ಹರಡುವುದಕ್ಕೆ ಸಾಧ್ಯವೆಂಬ ಸ್ಟಾಲಿನ್‌ನ ಕಾರ್ಯನೀತಿಯನ್ನು ಬದಲಾಯಿಸಿ ಆಯಾ ದೇಶಗಳಲ್ಲಿ ತಿಳುವಳಿಕೆ ಹೇಳುವುದರ ಮೂಲಕ ಸಮತಾವಾದವನ್ನು ವಿಸ್ತರಿಸಬಹುದೆಂದು ಪ್ರಚುರಪಡಿಸಿದನು. ಹೀಗಾಗಿ ಅಣ್ವಸ್ತ್ರಗಳ ಮೂಲಕ ರಷ್ಯಾವನ್ನು ಕಟ್ಟಿಹಾಕುವ ಡಲೆಸ್ ಕಾರ್ಯಯೋಜನೆಗಳಿಗೆ ತಾತ್ಕಾಲಿಕ ಹಿನ್ನೆಡೆ ಉಂಟಾಯಿತು. ಆದರೆ ಈ ಕಾಲದಲ್ಲಿ ಅಮೆರಿಕಾ ಹಾಗೂ ರಷ್ಯಾ ದೇಶಗಳು ತಮ್ಮ ಬಲಾಬಲ ಪ್ರದರ್ಶನ ಮಾಡುವ ಹುಚ್ಚು ಪ್ರಯತ್ನಗಳಿಗೆ ಏಷ್ಯಾದಲ್ಲಿದ್ದ ಕೊರಿಯಾ ಭೂಪ್ರದೇಶವು ಯುದ್ಧ ರಂಗಭೂಮಿಯಾಗಿ ಮಾರ್ಪಾಡಾಯಿತು. ಇವರ ಯೋಜನೆ ಮತ್ತು ಯೋಚನೆಗೆ ಅನುಗುಣವಾಗಿ ದಕ್ಷಿಣ ಹಾಗೂ ಉತ್ತರ ಕೊರಿಯಾ ಎಂದು ಅಡ್ಡವಾಗಿ ಕತ್ತರಿಸಿ ಅವುಗಳನ್ನು ೩೮ರ ರೇಖಾಂಶಕ್ಕೆ ಸೀಮಿತಗೊಳಿಸಿ ಅಖಂಡ ದೇಶವನ್ನು ವಿಭಾಗಿಸಲಾಯಿತು. ತೆರೆಮರೆಯಲ್ಲಿ ರಷ್ಯಾ ಮತ್ತು ಚೀನಾ ಒಂದಾಗಿ ರೂಪಿಸಿದ ತಂತ್ರದಿಂದ ಅಮೆರಿಕಾ ಬೋನಿಗೆ ಸಿಕ್ಕಿ ಒದ್ದಾಡುವ ಇಲ್ಲಿ ಯಂತೆ ಚಡಪಡಿಸಿತು. ರಷ್ಯಾ ಬಲವಂತವಾಗಿ ಅಮೆರಿಕಾದ ಕೈ ಹಿಡಿದು ನಿಶ್ಶಸ್ತ್ರ ಒಪ್ಪಂದಗಳಿಗೆ ಸಹಿ ಹಾಕಿಸಿತು. ಕೊರಿಯಾ ಯುದ್ಧದಲ್ಲಿ ಸುಮಾರು ೩೩೦೦೦ ಸಾವಿರ ಸೈನಿಕರನ್ನು ಹಾಗೂ ೨೨ ಬಿಲಿಯನ್ ಡಾಲರ್ ಹಣವನ್ನು ಕಳೆದುಕೊಂಡು ಅಮೆರಿಕಾ ಕೈ ಸುಟ್ಟು ಕೊಂಡಿತ್ತು.

ಎರಡನೆಯ ಮಹಾಯುದ್ಧದಲ್ಲಿ ಜಪಾನ್ ಸೋತು ಪಲಾಯನಗೈದ ನಂತರ  ಫ್ರೆಂಚರು ತಮ್ಮ ಅಧೀನದಲ್ಲಿದ್ದ ಹಳೆಯ ವಸಾಹತು ಪ್ರದೇಶ ಆಗ್ನೇಯ ಏಷ್ಯದ ಇಂಡೋ ಚೀನಾ ಅಥವಾ ‘ವಿಯಟ್ನಾಂ’ ದೇಶವನ್ನು ಮತ್ತೆ ವಶಪಡಿಸಿಕೊಂಡರು. ಆದರೆ ಫ್ರೆಂಚರು ಪ್ರವೇಶಿಸುವುದರ ಒಳಗಾಗಿ ಇಲ್ಲಿ ಕಮ್ಯುನಿಸ್ಟ್ ನಾಯಕ ಹೋಚಿಮಿನ್‌ನ ನೇತೃತ್ವದಲ್ಲಿ ತೀವ್ರವಾದ ಹೋರಾಟಗಳು ನಡೆದಿದ್ದವು. ವಸಾಹತುಗಳಿಂದ ಸ್ವಾತಂತ್ರ್ಯ ಪಡೆಯುವುದೇ ಮುಖ್ಯ ಉದ್ದೇಶವೆಂದು ತಿಳಿದು ತೀವ್ರ ಹೋರಾಟದಲ್ಲಿ ವಿಯಟ್ನಾಂ ತೊಡಗಿತ್ತು. ಇವರ ಗೆರಿಲ್ಲಾ ಮಾದರಿಯ ಯುದ್ಧಗಳು ಫ್ರೆಂಚರನ್ನು ಕಂಗೆಡಿಸಿದವು. ಫ್ರೆಂಚರನ್ನು ಮೊದಲು ವಿರೋಧಿಸಿದ ಅಮೆರಿಕಾ ತನ್ನ ಸಿದ್ಧಾಂತಗಳ ಕಡು ವಿರೋಧಿ ರಾಷ್ಟ್ರಗಳಾದ ರಷ್ಯಾ ಹಾಗೂ ಚೀನ ದೇಶಗಳು ಹೋಚಿಮಿನ್‌ನ ಸಹಾಯಕ್ಕೆ ಬಂದಿವೆ ಎಂದು ತಿಳಿದು ತನ್ನ ಮೊದಲ ನೀತಿಗಳಿಂದ ತಿರುವು ಪಡೆದು ಅಮೆರಿಕಾ ಫ್ರೆಂಚ್ ಸರಕಾರದ ಪರ ವಕಾಲತ್ತು ವಹಿಸಿ ಅದರ ಸಹಾಯಕ್ಕೆ ಇಳಿಯಿತು. ಅಮೆರಿಕಾದ ಮುಖ್ಯ ಉದ್ದೇಶವೆಂದರೆ ಕಮ್ಯುನಿಸಂ ಸಿದ್ಧಾಂತ ಹರಡದಂತೆ ಮಾಡುವುದಾಗಿತ್ತು. ಆದರೆ ವಿಯಟ್ನಾಂದಲ್ಲಿನ ಸಮಸ್ಯೆ ಬೇರೆಯದೇ ಆಗಿತ್ತು.  ಇದನ್ನು ಗ್ರಹಿಸುವಲ್ಲಿ ಅಮೆರಿಕಾ ಸೋತಿತ್ತು. ಹೋಚಿಮಿನ್‌ನ ಹೋರಾಟವು ಕಮ್ಯುನಿಸಂ ಚಳವಳಿ ರೂಪ ಪಡೆಯುವುದಕ್ಕಿಂತ ಮೊದಲೇ ಸ್ಥಳೀಯವಾಗಿ ಇಡೀ ರಾಷ್ಟ್ರವೇ ಅದರಲ್ಲಿ ಭಾಗವಹಿಸಿದ್ದರಿಂದ ಅದೊಂದು ರಾಷ್ಟ್ರೀಯ ಚಳವಳಿಯಾಗಿ ಮಾರ್ಪಟ್ಟಿತ್ತು. ಹೀಗಾಗಿ ಗೆರಿಲ್ಲಾ ಮಾದರಿಯ ಯುದ್ಧಕ್ಕೆ ಅಲ್ಲಿನ ಜನತೆಯೇ ಸ್ವಯಂ ಬೆಂಬಲಿಸಿದ್ದರಿಂದ ಫ್ರೆಂಚ್ ಸರಕಾರಕ್ಕೂ ಹಾಗೂ ಅದನ್ನು ಬೆಂಬಲಿಸಿದ ಅಮೆರಿಕಾ ಸೇನಾ ಕಾರ್ಯಗಳಿಗೆ ಭಾರೀ ಹಿನ್ನಡೆ ಉಂಟಾಯಿತು. ಈಗಾಗಲೇ ಕೊರಿಯಾ ಯುದ್ಧದಿಂದ ಪಾಠ ಕಲಿತಿದ್ದ ಬಂಡವಾಳಶಾಹಿ ರಾಷ್ಟ್ರ ಏಕಾಏಕಿ ಯುದ್ಧವನ್ನು ನಿಲ್ಲಿಸಿತು. ಅಪಾರ ನಷ್ಟ ಹಾಗೂ ಅವಮಾನ ಹೊಂದಿದ ಅಮೆರಿಕಾ ಹಾಗೂ ಫ್ರೆಂಚ್ ಸರಕಾರಗಳು ಹೋಚಿಮಿನ್‌ನನ್ನು ಶಾಂತಿ ಸಂಧಾನಕ್ಕೆ ಆಹ್ವಾನಿಸಿದವು. ಅಖಂಡ ವಿಯಟ್ನಾಂನನ್ನು ಇಬ್ಭಾಗಿಸಿ ಉತ್ತರ ಮತ್ತು ದಕ್ಷಿಣವೆಂದು ಮಾಡಲಾಯಿತು. ೧೭ನೇ ಸಮಾಂತರ ರೇಖೆಯನ್ನು ಗಡಿಯನ್ನಾಗಿ ಗೊತ್ತುಪಡಿಸಿ, ಈ ಎರಡು ದೇಶಗಳು ಚುನಾವಣೆಯ ನಂತರ ರೂಪುಗೊಳ್ಳಬಹುದಾದ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಒಂದುಗೂಡಬಹುದಾದ ಒಡಂಬಡಿಕೆಯೊಂದಿಗೆ ದೇಶವನ್ನು ವಿಭಜಿಸ ಲಾಯಿತು. ಅಲ್ಲದೇ ಇಂಡೋ-ಚೈನಾದ(ವಿಯಟ್ನಾಂ) ಭಾಗಗಳಾಗಿದ್ದ ಕಾಂಬೋಡಿಯಾ ಹಾಗೂ ಲಾವೋಸ್ ದ್ವೀಪಗಳನ್ನು ಸಹ ಸ್ವತಂತ್ರಗೊಳಿಸಲಾಯಿತು. ವಿಯಟ್ನಾಂ ದಕ್ಷಿಣ-ಉತ್ತರಭಾಗಗಳಾಗಿ ಇಬ್ಭಾಗಗೊಂಡ ನಂತರ ದಕ್ಷಿಣದಲ್ಲಿ ರೋಮನ್ ಕ್ಯಾಥೊಲಿಕ್ ಬೆಂಬಲಿತ ನ್ಗೋಡಿನ್ ಡಿಯೆಮ್ ಅಧಿಕಾರಕ್ಕೆ ಬಂದನು. ಈತನು ಅನುಸರಿಸುತ್ತಿದ್ದ ತಪ್ಪು ನೀತಿಗಳಿಂದ ಇಡೀ ದೇಶವೇ ಭ್ರಷ್ಟಾಚಾರ ಹಾಗೂ ದುರಾಡಳಿತದಲ್ಲಿ ಮುಳುಗಿತು. ಇಂಥ ಘಟನೆಗಳನ್ನು ಅಮೆರಿಕಾ ಸೂಕ್ಷ್ಮವಾಗಿ ಎಚ್ಚರಿಸಿದರೂ ದೊರೆ ಯಾವುದೇ ನಿರ್ದಿಷ್ಟ ಕ್ರಮ ಕೈಗೊಳ್ಳಲಿಲ್ಲ. ಆದರೂ ಅಮೆರಿಕಾ, ಕಮ್ಯುನಿಸ್ಟ್ ಚೀನ ಹಾಗೂ ರಷ್ಯಾದ ಭಯದಿಂದ ದೊರೆಯ ಎಲ್ಲ ದುರಾಡಳಿತಕ್ಕೆ ಬೆಂಬಲ ನೀಡಿತು.ಇದು ಆ ಸಂದರ್ಭದ ಅನಿವಾರ್ಯವೂ ಆಗಿತ್ತು.

ವಿಯಟ್ನಾಂ ಯುದ್ಧದಿಂದ ಮುಖಭಂಗ

ಎರಡನೆಯ ಜಾಗತಿಕ ಯುದ್ಧದಲ್ಲಿ ಜಪಾನ್ ದೇಶವು ಇಂಡೊ-ಚೀನಾ ಪ್ರದೇಶಗಳನ್ನು ಫ್ರೆಂಚರಿಂದ ಕಿತ್ತುಕೊಂಡು ಅವರನ್ನು ಬಹುದೂರದವರೆಗೆ ಓಡಿಸಿತ್ತು. ಆದರೆ ಮಿತ್ರರಾಷ್ಟ್ರಗಳಾದ ಅಮೆರಿಕಾ ಹಾಗೂ ಇಂಗ್ಲೆಂಡ್ ದೇಶಗಳು ಜಪಾನ್ ದೇಶವನ್ನು ಸೋಲಿಸಿದವು. ಇದರ ಲಾಭ ಪಡೆಯಲು ಒತ್ತಡದ ಮೂಲಕ ಫ್ರೆಂಚ್ ಸರಕಾರ ತನ್ನ ವಸಾಹತುಗಳನ್ನು ಮರಳಿ ಪಡೆಯುವ ಪ್ರಯತ್ನ ಮುಂದುವರೆಸಿತು. ಆದರೆ ಅಷ್ಟರೊಳಗೆ ಇಂಡೋ-ಚೀನಾ ಸಂಸ್ಥಾನ ಗಳಲ್ಲಿದ್ದ ಕ್ರಾಂತಿಕಾರಿಗಳು ಬಂಡಾಯ ಎದ್ದು ಫ್ರೆಂಚರಿಂದ ಹಾಗೂ ಸ್ಥಳೀಯ ರಾಜ್ಯವ್ಯವಸ್ಥೆಯಿಂದ ಒಂದೇ ಸಲಕ್ಕೆ ಬಿಡುಗಡೆಗೊಳ್ಳುವ ಹೋರಾಟ ತೀವ್ರಗೊಳಿಸಿದರು. ಹೋಚಿಮಿನ್‌ನ ನೇತೃತ್ವದಲ್ಲಿ ನಡೆದ ಈ ಬಿಡುಗಡೆಯು ಸಂಪೂರ್ಣವಾಗಿ ಸಮತಾವಾದ ಸಿದ್ಧಾಂತದ ಹಿನ್ನೆಲೆಯಲ್ಲಿ ನಡೆದಿರುವುದು ಅಮೆರಿಕಾವನ್ನು ಕೆರಳಿಸಿತು. ಇದಕ್ಕೆ ರಷ್ಯಾ ಹಾಗೂ ಚೀನಾ ದೇಶಗಳು ಪರೋಕ್ಷವಾಗಿ ಸಹಾಯ ಮಾಡುತ್ತಿವೆ ಎಂದು ತಿಳಿದ ಅಮೆರಿಕಾವು ಸ್ಥಳೀಯವಾಗಿ ಪ್ರಾರಂಭವಾದ ಹೋರಾಟವನ್ನು ಬೆಂಬಲಿಸದೆ ತಪ್ಪು ಲೆಕ್ಕಾಚಾರಗಳಿಂದ ಲಾಭಕೋರ ಮಿತ್ರ ಫ್ರೆಂಚರ ಪರವಾಗಿ ಸಹಾಯಕ್ಕಿಳಿಯಿತು. ೧೯೪೯ರಲ್ಲಿ ಮಾಜಿ ಚಕ್ರವರ್ತಿ ಬಾವೊಡೈನ್‌ನ ನೇತೃತ್ವದಲ್ಲಿನ ಗುಂಪನ್ನು ಫ್ರೆಂಚ್‌ರು ಬೆಂಬಲಿಸಿದ್ದರಿಂದ ವಿಯಟ್ನಾಂನಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬಂದಿತು. ಇದನ್ನು ಬೆಂಬಲಿಸಿದ ಹೂವರ್ ಸರಕಾರವು ಆರ್ಥಿಕ ಹಾಗೂ ರಕ್ಷಣಾ ಸಹಾಯವನ್ನು ಸ್ಥಳೀಯ ಸರಕಾರಗಳಿಗೆ ನೀಡಿತು. ಆದರೆ ಅಮೆರಿಕಾ ನೀಡಿದ ಅಪಾರ ಬೆಂಬಲದ ಮಧ್ಯೆಯೂ ಸ್ವಾತಂತ್ರ್ಯವೀರ ಹೊಚಿಮಿನ್‌ನು ೧೯೫೪ರಲ್ಲಿ ಕ್ಷಿಪ್ರ ಬಂಡಾಯ ಎದ್ದು ರಾಜತ್ವವನ್ನು ಹಾಗೂ ರಾಜನ ಬೆಂಬಲಕ್ಕೆ ನಿಂತಿದ್ದ ಫ್ರೆಂಚ್ ಸೈನ್ಯವನ್ನು ನಿರ್ಣಾಯಕವಾಗಿ ಸೋಲಿಸಿದನು. ಡೀನ್ ಬೀನ್ ಫೂ ಯುದ್ಧದಲ್ಲಿ ಸಿಕ್ಕಿಬಿದ್ದ ಫ್ರೆಂಚ್ ಸೈನ್ಯ ತೊಂದರೆಗಳನ್ನು ತಾಳಲಾರದೆ ಅಮೆರಿಕಾದ ಸಹಾಯ ಬೇಡಿತು. ಫ್ರೆಂಚ್ ಸರಕಾರದ ಬೇಡಿಕೆಯನ್ನು ಅಮೆರಿಕಾ ತಳ್ಳಿಹಾಕಿತು. ಕಾಂಗ್ರೆಸ್ ಅಮೆರಿಕಾ ಆಡಳಿತವು ಸುಖಾಸುಮ್ಮನೆ ಇಂಥ ಗೊಂದಲಗಳಲ್ಲಿ ಮಧ್ಯ ಪ್ರವೇಶಿಸುವುದನ್ನು ವಿರೋಧಿಸಿತು. ಹೀಗಾಗಿ ಐಸನ್ ಹಾವರ್ ವಿಯಟ್ನಾಂ ಯುದ್ಧದಿಂದ ದೂರ ಇರಬೇಕಾಯಿತು. ತನಗೆ ಸಂಬಂಧಿಸಲಾರದ ಸಮಸ್ಯೆಯಿಂದ ತಪ್ಪಿಸಿಕೊಂಡಂತಾಯಿತು. ಇದೇ ವೇಳೆಗೆ ಫ್ರಾನ್ಸ್, ಅಮೆರಿಕಾ, ರಷ್ಯಾ ಹಾಗೂ ಚೀನ ದೇಶಗಳು ಸೇರಿ ವಿಯಟ್ನಾಂ ಸಮಸ್ಯೆ ಬಗೆಹರಿಸಲು ಜಿನೀವಾದಲ್ಲಿ ಸಭೆ ಸೇರಿದವು. ಚುನಾವಣೆಗಳ ಮೂಲಕ ಒಂದು ಸ್ಥಿರ ಆಡಳಿತ ವ್ಯವಸ್ಥೆ ಬರುವವರೆಗೂ ಅಖಂಡ ವಿಯಟ್ನಾಂನನ್ನು ಇಬ್ಭಾಗಿಸಿ ಉತ್ತರ ಮತ್ತು ದಕ್ಷಿಣ ವಿಯಟ್ನಾಂ ಎಂದು ನಾಮಕರಣ ಮಾಡಲಾಯಿತು. ಉತ್ತರ ವಿಯಟ್ನಾಂನಲ್ಲಿ ರಷ್ಯಾ ಬೆಂಬಲಿತ ಹೊಚಿಮಿನ್ ಆಡಳಿತ ಚುಕ್ಕಾಣಿ ಹಿಡಿಯಿತು. ಕರಾರಿನಂತೆ ಕೆಲವು ದಿನಗಳ ನಂತರ ಎರಡು ದೇಶಗಳು ಒಂದಾಗುವ ಸಂದರ್ಭವನ್ನು ಕೆಡಿಸಿ ಬಾವೊಡೈನ್ ಮತ್ತೆ ಪ್ರತ್ಯೇಕತೆಯನ್ನು ಘೋಷಿಸಿಕೊಂಡು ಮುಂದುವರೆದನು. ಅಮೆರಿಕಾವು ಸಹ ಪರೋಕ್ಷವಾಗಿ ನಿಯಂತ್ರವಾಗುತ್ತಿದ್ದ ರಷ್ಯಾ ಬೆಂಬಲಿತ ಸಮತಾವಾದ ವ್ಯವಸ್ಥೆಯನ್ನು ವಿರೋಧಿಸುವ ಹಿನ್ನೆಲೆಯಲ್ಲಿ ಡೈನ್‌ನನ್ನು ಸಂರಕ್ಷಿಸುವ ಪ್ರಯತ್ನದಲ್ಲಿ ತೊಡಗಿತು. ವಿಪರೀತ ಭ್ರಷ್ಟಾಚಾರ, ಅತಂತ್ರ ರಕ್ಷಣಾ ತಂತ್ರಗಳು ಮತ್ತು ಅವ್ಯಸ್ಥಿತ ಆಡಳಿತ ದಕ್ಷಿಣ ವಿಯಟ್ನಾಂನಲ್ಲಿ ಮನೆ ಮಾಡಿದ್ದರೂ ರಷ್ಯಾ ಮತ್ತು ಚೀನಾ ದೇಶಗಳನ್ನು ಹದ್ದುಬಸ್ತಿನಲ್ಲಿಡುವ ಏಕಮಾತ್ರ ಉದ್ದೇಶದಿಂದ ಅಮೆರಿಕಾ ದಕ್ಷಿಣ ವಿಯಟ್ನಾಂನಲ್ಲಿದ್ದ ಅರಾಜಕತೆಯನ್ನು ಸಹಿಸಿಕೊಂಡಿತು. ತಾನೇ ಮಾಡಿಕೊಂಡ ಕರಾರನ್ನು ಮುರಿದ ಡೈನ್‌ನ ಹಾಗೂ ಅಮೆರಿಕಾದ ವಿರುದ್ಧ ಸ್ಥಳೀಯ ಜನತೆ ಒಕ್ಕಟ್ಟಿನಿಂದ ‘‘ರಾಷ್ಟ್ರೀಯ ವಿಮೋಚನ ಹೋರಾಟ’’ವನ್ನು ದಕ್ಷಿಣ ವಿಯಟ್ನಾಂ ಆಡಳಿತದ ವಿರುದ್ಧ ಕೈಗೊಂಡಿತು. ಆಳುವ ಸರಕಾರವನ್ನು ಅಸ್ಥಿರಗೊಳಿಸಲು ‘‘ವಿಯಟ್ ಕಾಂಗ್’’ (ಗೆರಿಲ್ಲಾ ಮಾದರಿ) ಎಂಬ ಹೆಸರಿನಿಂದ ಕರೆಯುವ ಭಿನ್ನ ಹೋರಾಟವನ್ನು ಸ್ವಾತಂತ್ರ್ಯ ಹೋರಾಟಗಾರರು ಕೈಗೊಂಡರು. ತತ್‌ಕ್ಷಣ ದಾಳಿ ಮಾಡುವ ಚಟುವಟಿಕೆಯ ಮೂಲಕ ಭಯವನ್ನು ಹುಟ್ಟಿಸುವ ಯುದ್ಧವನ್ನು ಹೊಚೆಮಿನ್‌ನ ಬೆಂಬಲಿಗರು ಪ್ರಾರಂಭಿಸಿದರು. ಇದಕ್ಕೆ ಉತ್ತರ ವಿಯಟ್ನಾಂ ಸಹ ಬೆಂಬಲಿಸಿತು. ಇದರಿಂದ ವಿಚಲಿತವಾದ ಅಮೆರಿಕಾದಲ್ಲಿದ್ದ ಆಡಳಿತಗಳು ಹೆಚ್ಚಿನ ಸೈನ್ಯ ಹಾಗೂ ರಕ್ಷಣಾ ಸಂಬಂಧಿ ಕರಾರುಗಳನ್ನು ದಕ್ಷಿಣ ವಿಯಟ್ನಾಂ ಜೊತೆಗೆ ಮಾಡಿಕೊಂಡವು. ಆದರೂ ೧೯೬೫ರಿಂದ ೧೯೬೯ರವರೆಗಿನ ನಾಲ್ಕು ವರ್ಷಗಳ ಯುದ್ಧದಲ್ಲಿ ಅಮೆರಿಕಾ ಸುಮಾರು ೪೦ ಸಾವಿರ ಸೈನಿಕರನ್ನು ಕಳೆದುಕೊಂಡಿತು. ಜಯ ಪಡೆಯದ ಅಮೆರಿಕಾವು ಈ ಯುದ್ಧದಲ್ಲಿ ಎಲ್ಲ ಜನತೆಯ ವಿರೋಧಕ್ಕೆ ಒಳಗಾಯಿತು. ವಿಯಟ್ನಾಂ ಯುದ್ಧಕ್ಕೆ ಸರಕಾರವು ವಿಶೇಷವಾಗಿ ತನ್ನ ಸೈನ್ಯದಲ್ಲಿರುವ ಲ್ಯಾಟಿನ್‌ಅಮೆರಿಕಾ ಹಾಗೂ ಕರಿಯ ಜನಾಂಗದ ಸೈನಿಕರನ್ನು ಸಾವಿರಾರು ಸಂಖ್ಯೆಯಲ್ಲಿ ಕಳುಹಿಸಿಕೊಟ್ಟಿತು. ಅವರು ಈ ಯುದ್ಧದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸತ್ತು ಹೋದರು. ಅಮೆರಿಕಾದ ಸೈನ್ಯಾಡಳಿತವು ಅನುಸರಿಸುತ್ತಿದ್ದ ಇಂಥ ದ್ವಂದ್ವವನ್ನು ಜಗತ್ತಿಗೆ ಮಾಧ್ಯಮಗಳು ಸಾಬೀತುಪಡಿಸಿದವು. ಭಾರೀ ಪ್ರತಿಭಟನೆಗಳ ಮಧ್ಯೆ ಅಮೆರಿಕಾದ ಸೈನ್ಯವು ೧೯೬೯ರಲ್ಲಿ ವಿಯಟ್ನಾಂನಿಂದ ಹಿಂದೆ ಸರಿಯಿತು.

೧೯೬೮ರಲ್ಲಿ ರಷ್ಯಾದ ಜೊತೆಗೆ ಅಮೆರಿಕಾ ‘ಅಣ್ವಸ್ತ್ರ ಪ್ರಸರಣ ವಿರೋಧ’  ಎಂಬ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿತು. ಇದನ್ನು ಕೆಲವೇ ದಿನಗಳಲ್ಲಿ ಮುರಿದು ಬಹಿರಂಗವಾಗಿ ರಷ್ಯಾ  ಹಲವು ಆಕ್ರಮಣಗಳನ್ನು ಯುರೋಪ್‌ನಲ್ಲಿ ಮಾಡಿತು. ಆದರೆ ಅಮೆರಿಕಾ ಯಾವ ಪ್ರತಿಕ್ರಿಯೆಯನ್ನು ರಷ್ಯಾದ ವಿರುದ್ಧ ತೋರಲಿಲ್ಲ.  ಇದಕ್ಕೆ ಬಹುಮುಖ್ಯ ಕಾರಣ ವಿಯಟ್ನಾಂನಲ್ಲಿನ ಸೋಲಿನಿಂದ ಅಮೆರಿಕಾ ಕಂಗಾಲಾಗಿತ್ತು. ಇದೇ ವೇಳೆಗೆ ದೂರ ಪ್ರಾಚ್ಯದ ಮೇಲೆ ಕೇಂದ್ರೀಕೃತವಾಗಿದ್ದ ಅಮೆರಿಕಾದ ಸ್ಥಿತಿಗಳಿಂದ ಲಾಭ ಪಡೆದು ತನ್ನ ಮಗ್ಗುಲಿಗೆ ಇದ್ದ ಲ್ಯಾಟಿನ್ ಅಮೆರಿಕಾದಲ್ಲಿಯೇ ಅದಕ್ಕರಿವಿಲ್ಲದಂತೆ ಹಲವಾರು ದಂಗೆಗಳು ಎದ್ದವು. ಪನಾಮ ದೇಶ ಅಮೆರಿಕಾದ ಜೊತೆಗೆ ತನ್ನೆಲ್ಲ ರಾಯಭಾರ ಸಂಬಂಧಗಳನ್ನು ಕಡೆೆದುಕೊಂಡಿತು. ಜಾಗತಿಕ ವಿದ್ಯಮಾನಗಳಲ್ಲಿ ಅಮೆರಿಕಾ ಬಲಹೀನ ಗೊಂಡಿರುವುದನ್ನು ಗ್ರಹಿಸಿದ ಉತ್ತರ ಕೊರಿಯಾ ಎದುರಾಳಿ ದಕ್ಷಿಣ ಕೊರಿಯಾವನ್ನು ಕೆಣಕಲಾರಂಭಿಸಿತು. ಅನೇಕ ರಾಜಕೀಯ ಮೇಲಾಟಗಳ ಮಧ್ಯೆಯೂ ಅಮೆರಿಕಾ ದೇಶ ವೈಜ್ಞಾನಿಕ ವಿಸ್ಮಯ ಗಳನ್ನು ಇದೇ ಅವಧಿಯಲ್ಲಿ ಮಾಡಿ ಜಗತ್ತು ನಿಬ್ಬೆರಗಾಗುವಂತೆ ಮಾಡಿತು. ಕೆನಡಿ ಹಾಕಿಕೊಟ್ಟ ಮಾರ್ಗದಲ್ಲಿ ನಡೆದ ಅಧ್ಯಕ್ಷ ಜಾನ್‌ಸನ್ ಬಾಹ್ಯಾಕಾಶ ವಿಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಿದನು. ೧೯೬೮ರಲ್ಲಿ ಅಮೆರಿಕಾದ ಮೂರು ಗಗನಯಾತ್ರಿಗಳು ಯಶಸ್ವಿಯಾಗಿ ಚಂದ್ರಲೋಕಯಾನ ಮುಗಿಸಿದರು.

ವಿಯಟ್ನಾಂ ಹಾಗೂ ಕೊರಿಯಾಗಳಲ್ಲಿ ಆದ ಬದಲಾವಣೆಗಳು ವಿದೇಶಾಂಗ ಸಚಿವ ಡಲೆಸ್‌ಗೆ ನಿದ್ದೆಗೆಡೆಸಿದವು. ಮುಂದಿನ ದಿನಗಳಲ್ಲಿ ರಷ್ಯಾ ಹಾಗೂ ಚೀನ ತಮ್ಮ ಪ್ರಾಬಲ್ಯ ಸ್ಥಾಪಿಸಬಹುದೆಂಬ ಹಿನ್ನೆಲೆಯಲ್ಲಿ ಆಗ್ನೇಯ ಏಷ್ಯಾ ದೇಶಗಳನ್ನೊಳಗೊಂಡ ಯುದ್ಧ ಕರಾರು ಸಂಸ್ಥೆಗಳನ್ನು ರಚಿಸಿಕೊಳ್ಳುವ ತೀವ್ರ ಪ್ರಯತ್ನದಲ್ಲಿ ಅಮೆರಿಕಾ ತೊಡಗಿತು. ಇಂಗ್ಲೆಂಡ್, ಫ್ರಾನ್ಸ್, ಆಸ್ಟ್ರೇಲಿಯಾ ನ್ಯೂಜಿಲ್ಯಾಂಡ್, ಫಿಲಿಫೈನ್ಸ್,  ಪಾಕಿಸ್ತಾನ ಹಾಗೂ ಥೈಲ್ಯಾಂಡ್ ದೇಶಗಳನ್ನೊಳಗೊಂಡ ಸೀಟೋ (ಸೌಥ್ ಏಷಿಯಾ ಟ್ರಿಟಿ ಆರ್ಗನೈಜೇಷನ್) ಸಂಘಟನೆ ೧೯೫೪ರಲ್ಲಿ ಅಸ್ತಿತ್ವಕ್ಕೆ ಬಂದಿತು. ಈ ಎಲ್ಲ ದೇಶಗಳು ಈ ಸಂಸ್ಥೆಯಲ್ಲಿದ್ದರೂ ಅಮೆರಿಕಾದ ಪಾತ್ರವೇ ಹಿರಿದಾಗಿತ್ತು. ಐವತ್ತು ಹಾಗೂ ಅರವತ್ತರ ದಶಕದಲ್ಲಿ ಅಮೆರಿಕಾ ತನ್ನ ಆಸಕ್ತಿಗಳನ್ನು ಆಗ್ನೇಯ ಏಷ್ಯಾದಲ್ಲಿ ಕೇಂದ್ರೀಕರಿಸಿ ದಾಗ ಇದನ್ನು ಗ್ರಹಿಸಿಕೊಂಡು ಸೋವಿಯಟ್ ಯೂನಿಯನ್ ಮಧ್ಯ ಪ್ರಾಚ್ಯದಲ್ಲಿ ಸಾವಕಾಶವಾಗಿ ನುಸುಳಿಕೊಂಡಿತು. ತಾನು ತೈಲಬಾವಿಗಳ ಮೇಲೆ ಹೊಂದಿದ್ದ ಲಾಭಕೋರತನಕ್ಕೆ ಸಂಚಕಾರ ಬರಬಹುದೆಂಬ ಭೀತಿಯಿಂದ ತನ್ನ ಸ್ವಾರ್ಥ ರಾಜಕೀಯವನ್ನು ಗುಪ್ತವಾಗಿ ಯಾರಿಗೂ ಅರಿವಿಲ್ಲದಂತೆ ರಕ್ಷಿಸಲು ಅಮೆರಿಕಾ ಅರಬ್ ದೇಶಗಳ ಬೆಂಬಲಕ್ಕೆ ಇಳಿಯಿತು. ಅಲ್ಲದೇ ಅದೇ ವೇಳೆಗೆ ಅರಬ್ ಜಗತ್ತಿನ ಮನೋಭಾವನೆಗಳ ವಿರುದ್ಧವಾಗಿ ಹೊಸದಾಗಿ ಹುಟ್ಟಿಕೊಂಡ ಇಸ್ರೇಲ್ ದೇಶದ ಹಿತಾಸಕ್ತಿಗೂ ಅಮೆರಿಕಾ ಬೆಂಬಲಿಸಿದ್ದರಿಂದ ವಿಶ್ವಕ್ಕೆ ಅದರ ಎಡಬಿಡಂಗಿತನ ಸ್ಪಷ್ಟವಾಗಿ ಕಂಡುಬಂತು. ಹೀಗಾಗಿ ಹೆಚ್ಚಿನ ಸಂಖ್ಯೆಯ ಅರಬ್ ರಾಷ್ಟ್ರಗಳ ಮನ ಗೆಲ್ಲುವಲ್ಲಿ ಅಮೆರಿಕಾ ವಿಫಲವಾಯಿತು. ಅಮೆರಿಕಾದ ಕುಟಿಲ ತಂತ್ರಗಳಿಂದಾಗಿಯೇ ಅರ್ಧಶತಮಾನ ಕಾಲದಿಂದಲೂ ಈ ಸಮಸ್ಯೆ ಹಾಗೆ ಉಳಿದುಕೊಂಡು ಬಂದಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಇಸ್ರೇಲ್ ಹಾಗೂ ಅರಬ್ ರಾಷ್ಟ್ರಗಳ ಸಮಸ್ಯೆ ಈವರೆಗೂ ಜೀವಂತವಾಗಿರುವುದಕ್ಕೆ ಅಮೆರಿಕಾವನ್ನು ಬಹುಮಟ್ಟಿಗೆ ಕಾರಣೀಭೂತ ದೇಶವನ್ನಾಗಿ ಮಾಡಲಾಗುತ್ತದೆ.

ಸೂಯೆಜ್ ಕಾಲುವೆಯ ಅಂತಾರಾಷ್ಟ್ರೀಕರಣ

ಇಸ್ರೇಲ್ ದೇಶದ ಬೆಂಬಲಕ್ಕೆ ನಿಂತು ಮಾರ್ಗದರ್ಶನ ಮಾಡುತ್ತಿದ್ದ ವಿವಾದದಲ್ಲಿ  ಅಮೆರಿಕಾವು ಅರಬ್ ರಾಷ್ಟ್ರಗಳ ಭಾರೀ ಅಸಾಮಾಧಾನಗಳಿಗೆ ಗುರಿಯಾಯಿತು. ಇದರಿಂದ ಹೊರಬರಲು ಅರಬ್ ರಾಷ್ಟ್ರಗಳಿಗೆ ಸಹಾಯ ನೀಡಲು ಡಲೆಸ್ ಯೋಚಿಸಿ ಕಾರ್ಯ ಪ್ರವೃತ್ತನಾದ. ಇದರಂತೆ ಮೊಟ್ಟಮೊದಲಿಗೆ ಈಜಿಪ್ಟ್ ದೇಶಕ್ಕೆ ವಿಶೇಷ ನೆರವು ಕೊಡುವ ವಾಗ್ದಾನ ಮಾಡಲಾಯಿತು. ಅಷ್ಟರೊಳಗೆ ರಷ್ಯಾ ಹಿಂಬಾಗಿಲಿನಿಂದ ಈಜಿಪ್ಟ್ ದೇಶದ ಮಿತ್ರತ್ವ ಸಾಧಿಸಿತ್ತು. ಇದನ್ನರಿತ ಅಮೆರಿಕಾ ಈಜಿಪ್ಟ್‌ಗೆ ಕೊಟ್ಟ ಸಹಾಯಧನದ ಬಗೆಗೆ ಮರು ಯೋಚಿಸಲಾರಂಭಿಸಿತು. ಈ ಕಾರಣಕ್ಕಾಗಿ ಕ್ರೋಧಗೊಂಡ ಈಜಿಪ್ಟ್ ಅಧ್ಯಕ್ಷ ಗಮಾಲ್ ಅಬ್ದುಲ್ ನಾಸೆರ್ ಸೂಯೆಜ್ ಕಾಲುವೆಯನ್ನು ಅಂತಾರಾಷ್ಟ್ರೀಕರಣಗೊಳಿಸಿದನು. ಇದರಿಂದ ನೂರಾರು ವರ್ಷಗಳಿಂದಲೂ ಈ ಕಾಲುವೆಯ ಮಾಲೀಕತ್ವವನ್ನು ಹೊಂದಿದ್ದ ಇಂಗ್ಲೆಂಡ್ ಹಾಗೂ ಫ್ರಾನ್ಸ್ ದೇಶಗಳು ಅಸಮಾಧಾನಗೊಂಡವು. ಅಲ್ಲದೇ ಇಸ್ರೇಲ್ ನೊಂದಿಗೆ ಜೊತೆಗೂಡಿ ಏಕಾಏಕಿ ಈಜಿಪ್ಟ್ ದೇಶದ ಮೇಲೆ ಅಪಾಯಕಾರಿಯಾದ ಸೈನ್ಯಕಾರ‌್ಯಾಚರಣೆಯ ದಾಳಿಗಿಳಿದವು. ಆದರೆ ಅಂತಾರಾಷ್ಟ್ರೀಯ ಸೂಕ್ಷ್ಮತೆಯನ್ನು ಅರಿತಿದ್ದ ಅಮೆರಿಕಾ ಇಂಗ್ಲೆಂಡ್ ಹಾಗೂ ಫ್ರಾನ್ಸ್ ದೇಶಗಳಿಗೆ ತಮ್ಮ ದಾಳಿಯನ್ನು ನಿಲ್ಲಿಸುವಂತೆ ಒತ್ತಾಯಿಸಿ ಯಶಸ್ವಿಯಾಯಿತು. ಇಂಥ ಅನುಕೂಲಸಿಂಧು  ಆಟವಾಡುವ ಅಮೆರಿಕಾದ ರಾಜಕೀಯವನ್ನು ಟೀಕಿಸಿದ ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳು ಯುಎನ್‌ಓದ ಒತ್ತಡದಿಂದಾಗಿ ತಾವು ರೂಪಿಸಿದ ದಾಳಿಯನ್ನು ನಿಲ್ಲಿಸಿದವು. ಅಲ್ಲದೇ ತನ್ನ ಸಹಾಯಕ್ಕೆ ಬಾರದ ಅಮೆರಿಕಾದ ಜೊತೆಗೆ ಕೆಲವು ವರ್ಷಗಳ ಕಾಲ ಮುನಿಸಿಕೊಂಡವು. ಅಮೆರಿಕಾ ತಳೆದ ನಿಲುವಿನಿಂದಾಗಿ ಈ ವಿಷಯದಲ್ಲಿ ಜಾಗತಿಕ ಮಟ್ಟದಲ್ಲಿ ಅಮೆರಿಕಾ ಮಾತ್ರ ಹೆಚ್ಚಿನ ಲಾಭವನ್ನೇ ಪಡೆಯಿತು. ಮಧ್ಯಪ್ರಾಚ್ಯ ದೇಶಗಳ ಕಡೆಗೆ ತನ್ನ ವಿದೇಶಿ ನೀತಿಯನ್ನು ಕೇಂದ್ರೀಕರಿಸಿದ ಅಮೆರಿಕಾ ಜೋರ್ಡಾನ್ ಹಾಗೂ ಲೆಬನಾನ್ ದೇಶಗಳಲ್ಲಿ ಬಂಡವಾಳಶಾಹಿ ಪರವಾದ ಧೋರಣೆಗಳಿಗೆ ಹಾಗೂ ವ್ಯವಸ್ಥೆ ನಿರ್ಮಾಣದಲ್ಲಿ ಕುಮ್ಮಕ್ಕು ನೀಡಿತು. ಆದರೆ ಸದಾಕಾಲ ಲಾಭವನ್ನೇ ಪ್ರಮುಖ ಗುರಿಯನ್ನಾಗಿಟ್ಟುಕೊಂಡು ರೂಪಿಸುತ್ತಿದ್ದ ಅದರ ನೀತಿಗಳು ಹೆಚ್ಚಿನ ಅರಬ್‌ರಿಗೆ ಅಸಮಾಧಾನ ತಂದವು.

ಪ್ಯಾನ್ ಅಮೆರಿಕಾ ಒಪ್ಪಂದದ ಮೂಲಕ ಲ್ಯಾಟಿನ್ ಅಮೆರಿಕಾದ ದೇಶಗಳೊಂದಿಗೆ ಮಾಡಿಕೊಂಡ ಕರಾರುಗಳು ೧೯೫೮ರ ವೇಳೆಗೆ ಸವೆದು ಹೋಗಿದ್ದವು. ಅಲ್ಲದೇ ಇದೇ ಒಪ್ಪಂದಗಳ ಮೂಲಕ ಅಮೆರಿಕಾ ದೇಶವು ‘‘ಆರ್ಥಿಕ ಸಾಮ್ರಾಜ್ಯಶಾಹಿ’’ (ಎಕಾನಾಮಿಕ್ ಇಂಪಿರಿಯಲಿಸಂ) ಧೋರಣೆಗಳನ್ನು ವ್ಯವಸ್ಥಿತವಾಗಿ ಹರಡುತ್ತಿರುವ ಬಗೆಗೆ ಹೆಚ್ಚಿನ ದೇಶಗಳು ಕಳವಳಗೊಂಡವು. ಗ್ವಾಟೆಮಾಲದಲ್ಲಿದ್ದ ಎಡಪಂಥೀಯ ಸರಕಾರವನ್ನು ತನ್ನ ಕುತಂತ್ರದಿಂದ ಅಮೆರಿಕಾ ಕೆಡವಿತು. ಮಾಡಿಕೊಂಡ ಒಪ್ಪಂದಗಳನ್ನು ಉಲ್ಲಂಘಿಸುತ್ತ ಹೋದ ಅಮೆರಿಕಾ ಪೆರು ಹಾಗೂ ವೆನಿಜುವೆಲಾದಲ್ಲಿ ಸ್ಥಳೀಯವಾಗಿ ಭಾರೀ ಪ್ರತಿಭಟನೆ ಎದುರಿಸಿತು. ಇಂಥ ವಿರೋಧದ ಸೂಕ್ಷ್ಮವನ್ನು ಅರಿತ ಅಮೆರಿಕಾ ಹೆಚ್ಚಿನ ಸಹಾಯಧನ ನೀಡಲು ‘ಅಂತರ್ ಅಮೆರಿಕಾನ್ ಬ್ಯಾಂಕ’ನ್ನು ಸ್ಥಾಪಿಸಿತು. ಸಹಾಯಧನದ ಯೋಜನೆಗೆ ಸಂಬಂಧಿಸಿದ ಘೋಷಣೆ ಆಗುವುದರೊಳಗೆ ತನ್ನ ನೆರೆಯ ರಾಷ್ಟ್ರ ಕ್ಯೂಬಾದಲ್ಲಿ ಫ್ಲೂಜೆನ್ಸಿಯೋ ಬಟಿಸ್ಟನನ್ನು ಪದಚ್ಯುತಿಗೊಳಿಸಿ ಯುವ ನಾಯಕ ಫೀಡಲ್‌ಕ್ಯಾಸ್ಟ್ರೋ  ಅಮೆರಿಕಾದ ಸಹಾಯದೊಂದಿಗೆ ಅಧಿಕಾರಕ್ಕೆ ಬಂದನು. ಮೊದಮೊದಲು ಅಮೆರಿಕಾದ ಪರವಾಗಿದ್ದೇನೆಂದು ಬಿಂಬಿಸಿ ಕೆಲವೇ ದಿನಗಳಲ್ಲಿ ರಷ್ಯಾದ ಪರವಾಗಿ ತಿರುಗಿಕೊಂಡು ಅಮೆರಿಕಾವನ್ನು ಗೊಂದಲಗೊಳಿಸಿದನು.  ದಿನಗಳೆದಂತೆ ಪರಿಸ್ಥಿತಿ ಕೈಮೀರಿ ಕ್ಯೂಬಾ ಅಂತಾರಾಷ್ಟ್ರೀಯ ಸಮಸ್ಯೆಯಾಗಿ ನಿಂತಿತು. ಕ್ಯೂಬಾದ ಮೇಲೆ ಅಮೆರಿಕಾ ದಾಳಿ ಮಾಡಿದ್ದೇ ಆದರೆ ಇದನ್ನು ನೆಪವಾಗಿ ಮಾಡಿಕೊಂಡು ಸೋವಿಯಟ್ ರಷ್ಯಾ ಜಗತ್ತನ್ನು ಸರ್ವನಾಶ ಮಾಡುವುದಾಗಿ ಬೆದರಿಕೆ ಹಾಕಿತು. ರಷ್ಯಾದ ಆಕ್ರಮಣ ಪ್ರವೃತ್ತಿಯನ್ನು ಹದ್ದುಬಸ್ತಿನಲ್ಲಿಡಲು ಅಮೆರಿಕಾ ನ್ಯಾಟೋವನ್ನು ಮತ್ತೆ ಪುನಶ್ಚೇತನಗೊಳಿಸಿತು. ಫ್ರಾನ್ಸ್ ದೇಶದ ವಿರೋಧದ ನಡುವೆಯೂ ಪಶ್ಚಿಮ ಜರ್ಮನಿಯನ್ನು ನ್ಯಾಟೋ ಕರಾರಿಗೆ ಒಳಪಡಿಸಿಕೊಳ್ಳಲಾಯಿತು. ರಷ್ಯಾ ಒಡ್ಡಿದ್ದ ಭಯದಿಂದ ಅಮೆರಿಕಾ ಏನೆಲ್ಲ ತಂತ್ರದಿಂದ ಈ ಬಗೆಯ ಒಪ್ಪಂದಗಳನ್ನು ಮಾಡುತ್ತಿತ್ತಾದರೂ ಜಾನ್ ಎಫ್.ಕೆನಡಿ ಆಡಳಿತ ವೇಳೆಗೆ ಅಧ್ಯಕ್ಷ ಕ್ರುಶ್ಚೋವ್ ಸೋವಿಯಟ್ ಯೂನಿಯನ್‌ನನ್ನು ಶಾಂತಿಯುತ ರಾಷ್ಟ್ರವನ್ನಾಗಿ ಮಾಡಬೇಕೆಂಬ ಧೋರಣೆಗಳನ್ನು ಬೆಂಬಲಿಸಲಾರಂಭಿಸಿದನು. ಇದರಿಂದ ಹೊಂದಿದ್ದ ಅಮೆರಿಕಾ ಆತಂಕವನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಲು ಸಹಾಯಕವಾಯಿತು.

ಶೀತಲಸಮರದ ಕಾವು ಆರಿಸಲು ಎರಡೂ ದೇಶಗಳು ನಿರ್ಧರಿಸಿ ಅಧ್ಯಕ್ಷರ ಮಟ್ಟದಲ್ಲಿಯೇ ಕೆಲವು ಕರಾರುಗಳನ್ನು ಮಾಡಿಕೊಳ್ಳಲು ಒಪ್ಪಿದವು. ಇದರ ನಡುವೆ ಸೋವಿಯತ್ ರಷ್ಯಾ ತನ್ನ ನೀತಿಗಳನ್ನು ವಿಸ್ತರಿಸುತ್ತಾ ಪೂರ್ವ ಯುರೋಪಿನಲ್ಲಿ ಕೆಲವು ದಮನ ನೀತಿಗಳನ್ನು ಸಹ ಅನುಸರಿಸಿತು. ಆದರೆ ಅಮೆರಿಕಾ ಜಾಣ ಕಿವುಡನ ಹಾಗೇ ತನಗೆ  ಇದು ಯಾವುದೂ ಗೊತ್ತಿಲ್ಲವೆಂದು ಮಧ್ಯ ಪ್ರವೇಶಿಸಲಿಲ್ಲ. ಅಮೆರಿಕಾ ತಳೆದ ತಾಟಸ್ಥ್ಯ ನಿಲುವುಗಳನ್ನು ಎರಡು ದೇಶಗಳ ಮಧ್ಯೆ ಉದ್ಭವಗೊಂಡಿದ್ದ ಬಿಸಿಯನ್ನು ಸ್ವಲ್ಪಮಟ್ಟಿಗೆ ಆರಿಸಲು ಸಹಾಯ ಮಾಡಿತು. ಜಿನೀವಾ ಶೃಂಗಸಭೆ ೧೯೫೫ರ ಜುಲೈ ತಿಂಗಳಲ್ಲಿ ನಡೆಯಿತು. ಬಹುವರ್ಷಗಳ ನಂತರ ಎರಡು ದೇಶಗಳು ಒಂದು ಕಡೆಗೆ ಸೇರುವ ಪ್ರಯತ್ನವಾಯಿತು. ೧೯೬೦ರಲ್ಲಿ ಕ್ರುಶ್ಚೋವ್ ಅಮೆರಿಕಾಕ್ಕೆ ಭೇಟಿ ಕೊಟ್ಟು ಇನ್ನೊಂದು ಶೃಂಗಸಭೆಯನ್ನು ಜರುಗಿಸುವ ಒಪ್ಪಂದವಾಯಿತು. ಇದು ನಡೆಯುವುದರೊಳಗಾಗಿ ಒಂದು ಅಪನಂಬಿಕೆಗೆ ಇಂಬುಕೊಡುವ ಘಟನೆ ಸಂಭವಿಸಿತು. ಅಮೆರಿಕಾದ ಗೂಢಚಾರ ವಿಮಾನ ರಷ್ಯಾದ ಸೈನ್ಯ ಬಲ ತಿಳಿದುಕೊಳ್ಳಲು ಗುಪ್ತ ಹಾರಾಟ ನಡೆಸಿತು. ವಿಮಾನವನ್ನು ಹೊಡೆದುರುಳಿಸಿದ ಸೋವಿಯತ್ ರಷ್ಯಾ ಅಮೆರಿಕಾದ ಬಗೆಗೆ ತೀವ್ರ ಅಸಮಾಧಾನಗೊಂಡು ನಡೆಯುತ್ತಿದ್ದ ಎಲ್ಲ ಶಾಂತಿ ಕರಾರುಗಳನ್ನು ನಿಲ್ಲಿಸಿ ವಾತಾವರಣವನ್ನು ಮತ್ತಷ್ಟು ಬಿಗಿಗೊಳಿಸಿತು. ಸೋವಿಯತ್ ರಷ್ಯಾ ಈ ವೇಳೆಗೆ ಯಾರು ಕೇಳರಿಯದ ಅಣು ಪರೀಕ್ಷೆಗಳನ್ನು ಹಾಗೂ ಮಾನವ ನಿರ್ಮಿತ ಉಪಗ್ರಹ ಸ್ಪೂಟ್ನಿಕ್ಕನ್ನು ಬಾಹ್ಯಾಕಾಶದಲ್ಲಿ ಹಾರಿಬಿಟ್ಟಿತು. ರಷ್ಯಾದ ಪ್ರಗತಿಯನ್ನು ಕಂಡು ದಂಗಾದ ಅಮೆರಿಕಾ ತಾನು ತನ್ನ ವಿಜ್ಞಾನಿ ಗಳಿಗೆ ಹಾಗೂ ಸಂಬಂಧಿಸಿದ ಸಂಸ್ಥೆಗಳಿಗೆ ಮಿಲಿಯನ್ ಡಾಲರ್ ನೆರವು ನೀಡಿ ರಷ್ಯಾದ ಪ್ರಗತಿಗೆ ಸವಾಲೊಡ್ಡುವ ಸಾಧನೆಗಳನ್ನು ಮಾಡಲು ತನ್ನ ನಾಗರಿಕರನ್ನು ಹುರಿದುಂಬಿಸಲಾರಂಭಿಸಿತು.

ಅಮೆರಿಕಾ ಅನುಸರಿಸಿದ ಯುದ್ಧ, ಅಸಮಾಧಾನ, ಅಶಾಂತಿ ಹಾಗೂ ಕರಾರುಗಳ ನಡುವೆಯೂ ಐಸೆನ್ ಹಾವರ್‌ನ ಆಡಳಿತಾವಧಿಯಲ್ಲಿ ಅಗಾಧವಾದ ವೈಜ್ಞಾನಿಕ ಬೆಳವಣಿಗೆಗಳು ಹಾಗೂ ಸಂಶೋಧನೆಗಳು ನಡೆದವು. ಟಿವಿ ಮಾಧ್ಯಮವು ಜಗತ್ತೇ ಬೆರಗುಗೊಳ್ಳುವಂತೆ ಕಾಲಿರಿಸಿ ಯಶಸ್ವಿಯಾಯಿತು. ರಾಜಕೀಯ ಭಾಷಣಗಳ ವೇದಿಕೆಯಾಗಿ ಟಿವಿ ಮಾಧ್ಯಮ ಪರಿಣಾಮಕಾರಿಯಾಯಿತು. ನ್ಯೂಯಾರ್ಕ್ ನಗರದಲ್ಲಿ ಮೊಟ್ಟ ಮೊದಲಿಗೆ ಟಿವಿ ಪ್ರದರ್ಶನಗೊಂಡಿತು. ೧೯೫೮ರಲ್ಲಿ ‘‘ರಾಷ್ಟ್ರೀಯ ರಕ್ಷಣಾ ಶಿಕ್ಷಣ’’ದ ಮೂಲಕ ಕೆಲವು ಕಾನೂನುಗಳನ್ನು ಮಾಡಿ ಶಿಕ್ಷಣ ಹಾಗೂ ಜ್ಞಾನ ಸಂಪತ್ತನ್ನು ಸಾರ್ವಜನಿಕಗೊಳಿಸಲಾಯಿತು. ಮೊದಮೊದಲು ಕೇವಲ ವಿನಾಶಕ್ಕಾಗಿ ಹುಟ್ಟಿಕೊಂಡಿದೆ ಎಂದು ಭಾವಿಸಲಾದ ಅಣುಶಕ್ತಿಯನ್ನು ಹೊಸ ಆವಿಷ್ಕಾರಗಳಿಂದಾಗಿ ಅದನ್ನು ತೈಲ ಪರಿಶೋಧನೆ, ಕ್ರಿಮಿನಾಶಕ, ಎಲೆಕ್ಟ್ರಾನಿಕ್ ಕ್ಷೇತ್ರ, ವೈದ್ಯವಿಜ್ಞಾನ, ವಿದ್ಯುಚ್ಛಕ್ತಿ ಹಾಗೂ ಇತರೆ ಗೃಹೋಪಯೋಗಿ ಕಾರ್ಯಗಳಿಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಯಿತು. ಇದರ ಅಗಾಧ ಉಪಯೋಗ ಹಾಗೂ ಕಡಿಮೆ ಖರ್ಚುಗಳಲ್ಲಿ ರೂಪಗೊಳ್ಳುವ ಇದರ ಕಾರ್ಯಗಳು ಹೊಸ ಕ್ರಾಂತಿಯನ್ನೇ ಉಂಟು ಮಾಡಿದವು. ಇದೇ ವೇಳೆಗೆ ರಷ್ಯಾದ ಜೊತೆಗಿನ ಸ್ಪರ್ಧೆಯಿಂದ ತಾನು ಸಹ ಉಪಗ್ರಹ ಸಂಶೋಧನೆಗಳನ್ನು ಹೊಸ ಆವಿಷ್ಕಾರಗಳೊಂದಿಗೆ ತೀವ್ರವಾಗಿ ಮುಂದುವರೆಸಿತು. ಉಪಗ್ರಹಗಳು ಹವಾಮಾನ, ಭೂಗೋಳದಲ್ಲಿನ ಬದಲಾವಣೆಗಳನ್ನು ತಿಳಿಯಲು ಹೆಚ್ಚಿನ ಸಹಾಯ ಮಾಡಿದವು. ಎಲ್ಲಕ್ಕಿಂತ ಮುಖ್ಯವಾಗಿ ಸಮುದ್ರ ನೀರಿನಿಂದ ಉಪ್ಪನ್ನು ತೆಗೆದು ಅದನ್ನು ಸಿಹಿ ನೀರನ್ನಾಗಿ ಪರಿವರ್ತಿಸಿದ ಪ್ರಯೋಗಗಳು ಅಮೆರಿಕಾದ ನೀರಿನ ದಾಹವನ್ನು ಶಾಶ್ವತವಾಗಿ ನೀಗಿಸಿತು.

ಜಾನ್ ಎಫ್. ಕೆನಡಿ ಆಡಳಿತ

ರಿಪಬ್ಲಿಕನ್ ಪಕ್ಷದವರಿಂದ ಆದ ತಪ್ಪು ಕ್ರಮಗಳಿಂದ ಅಮೆರಿಕಾ ದೇಶವು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಅಪಮಾನ ಅನುಭವಿಸಿತು ಎಂದು ತಿಳಿದ ಅಮೆರಿಕದ ಜನತೆ ೧೯೬೦ರ ಚುನಾವಣೆಯಲ್ಲಿ ರಿಚರ್ಡ್ ನಿಕ್ಸನ್‌ನನ್ನು ಸೋಲಿಸಿ ಡೆಮೊಕ್ರಾಟಿಕ್ ಪಕ್ಷದ ತರುಣ ಹಾಗೂ ಉತ್ಸಾಹಿ ಯುವಕ ಜಾನ್ ಎಫ್ ಕೆನಡಿಯನ್ನು ಭಾರೀ ಬಹುಮತದಿಂದ ಆಯ್ಕೆ ಮಾಡಿತು. ಕೆನಡಿಯ ಗೆಲುವಿನಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿದ್ದ ಟಿವಿ ಮಾಧ್ಯಮ ಪ್ರಮುಖ ಪಾತ್ರ ವಹಿಸಿತು. ಹಾರ್ವರ್ಡ್ ವಿಶ್ವವಿದ್ಯಾಲಯದ ಪದವೀಧರನಾಗಿದ್ದ ಭರವಸೆ ನಾಯಕ ಎರಡನೆಯ ಜಾಗತಿಕ ಯುದ್ಧದಲ್ಲಿ ಅಮೆರಿಕಾದ ಪರವಾಗಿ ಹೋರಾಟ ಮಾಡಿ ಹೆಸರು ಗಳಿಸಿದ್ದ. ಕ್ಯಾಥೋಲಿಕ್ ಪಂಗಡಕ್ಕೆ ಸೇರಿದ ಮೊಟ್ಟಮೊದಲ ಅಧ್ಯಕ್ಷನಾಗಿ ಆಯ್ಕೆ ಆದ ಕೆನಡಿಯ ವಯಸ್ಸು ಆಗ ಕೇವಲ ೪೩. ಅದುವರೆಗೂ ಅಮೆರಿಕಾ ಇತಿಹಾಸದಲ್ಲಿ ಅಷ್ಟು ಚಿಕ್ಕ ವಯಸ್ಸಿನ ವ್ಯಕ್ತಿ ಅಂಥ ದೊಡ್ಡ ಹುದ್ದೆಯನ್ನು ವಹಿಸಿಕೊಂಡಿರಲಿಲ್ಲ. ಅಮೆರಿಕಾ ದೇಶಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದ ಕ್ಯೂಬಾ ಸಮಸ್ಯೆಯಿಂದ ಮೊಟ್ಟಮೊದಲಿಗೆ ತನ್ನ ಪ್ರಬಲ ಪ್ರತಿಸ್ಪರ್ಧಿಯಾದ ಸೋವಿಯಟ್ ರಷ್ಯಾವನ್ನು ತಾತ್ಕಾಲಿಕವಾಗಿ ಕಾಲುಕೀಳುವಂತೆ ಮಾಡಿದನು. ಕ್ರುಶ್ಚೋವನ ಬೆದರಿಕೆಗೆ ಬಗ್ಗದೇ ಪೂರ್ವ ಯುರೋಪಿನಲ್ಲಿ ಮಿತ್ರರಾಷ್ಟ್ರಗಳ ಪಡೆಗಳು(ನ್ಯಾಟೋ ಪಡೆ) ಅಲ್ಲಿರುವಂತೆಯು ಕ್ರಮ ಕೈಗೊಂಡನು. ಜಾಗತಿಕ ಮಟ್ಟದಲ್ಲಿ ಒತ್ತಡ ತಂತ್ರಗಳನ್ನು ರೂಪಿಸುವುದರ ಮೂಲಕ ಕ್ಯೂಬಾದಲ್ಲಿದ್ದ ರಷ್ಯಾದ ಕ್ಷಿಪಣಿಗಳು ತೊಲಗುವಂತೆ ಮಾಡಿ ಕೆಲವೇ ದಿನಗಳಲ್ಲಿ ತಾನು ವಹಿಸಿಕೊಂಡ ಜವಾಬ್ದಾರಿಯ ಕಾರ್ಯ ದಕ್ಷತೆಯಿಂದ ಅಮೆರಿಕಾದ ಜನತೆಗೆ ಪ್ರೀತಿ ಪಾತ್ರನಾದನು. ದೇಶ ನಮಗೇನು ಮಾಡಿದೆಯೆಂದು ಕೇಳ ಬೇಡಿ, ನಾವು ನಮ್ಮ ದೇಶಕ್ಕೆ ಏನು ಕೊಟ್ಟಿದ್ದೇವೆ  ಎಂದು ಪ್ರಶ್ನಿಸಿಕೊಳ್ಳಿ ಎಂಬ ಮಹಾನ್ ವಿಚಾರವನ್ನು ಅಮೆರಿಕಾದ ಅಧ್ಯಕ್ಷನಾಗಿ ಎಲ್ಲ ದೇಶಪ್ರೇಮಿಗಳಿಗೆ ಮನಮಟ್ಟುವಂತೆ ಹೇಳಿದ.

ಕೆನಡಿ ಆಡಳಿತಾವಧಿಯ ಕೆಲವೇ ದಿನಗಳಲ್ಲಿ ಅಮೆರಿಕಾ ರಷ್ಯಾ ದೇಶವು ಸಾಧಿಸಿದ ಸಾಧನೆಯನ್ನು ಹಿಂದಿಕ್ಕಿ ಅದ್ಭುತವಾಗಿ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬೆಳೆಸಿಕೊಂಡಿತು. ಚಾಲಕರಹಿತ ಬಾಹ್ಯಾಕಾಶ ಸಾಧನೆ ಮಾಡಿ ಜಗತ್ತೇ ಹುಬ್ಬೇರಿಸುವಂತೆ ಮಾಡಿತು. ಗ್ಲೆನ್, ಸ್ಕಾಟ್ ಕಾರ್ಪೆಂಟರ್, ವಾಲ್ಟರ್ ಕ್ಷಿರ್ರಾ, ಟೆಲಿಸ್ಟಾರ್ ಹಾಗೂ ಮ್ಯಾರಿನರ್-೨ ಕೃತಕ ಉಪಗ್ರಹಗಳನ್ನು ಕೆನಡಿ ಆಡಳಿತಾವಧಿಯಲ್ಲಿ ಹಾರಿಸಲಾಯಿತು. ಎರಡನೆಯ ಜಾಗತಿಕ ಮಹಾಯುದ್ಧದಲ್ಲಿ ಅಮೆರಿಕಾ ಪ್ರಯೋಗಿಸಿದ ಅಣುಬಾಂಬಿನ ಜಾಡುಹಿಡಿದು ರಷ್ಯಾ ಕೆಲವೇ ವರ್ಷಗಳಲ್ಲಿ ಅಣು ಪರೀಕ್ಷೆಯ ಪ್ರಯೋಗವನ್ನು ಯಶಸ್ವಿಯಾಗಿ ಮಾಡಿ ಅಮೆರಿಕಾಕ್ಕೆ ಮತ್ತೆ ಭಯ ಹುಟ್ಟಿಸಿತ್ತು. ಹೀಗಾಗಿ ಎರಡು ಮಹಾಶಕ್ತಿಗಳು ಒಂದರ ಮೇಲೆ ಒಂದು ಸ್ಪರ್ಧೆಗಿಳಿದು ತಮ್ಮ ಕಾರ್ಯಸಾಧನೆಗಳಿಂದ ತೋರಿದ ಅಪಾಯಕಾರಿ ಪ್ರಗತಿಗಳು ಇಡೀ ಜಗತ್ತಿಗೆ ಭಯ ಹುಟ್ಟಿಸಿದವು. ಈ ಭಯಾನಕ ಸ್ಪರ್ಧೆಯನ್ನು ನಿಲ್ಲಿಸುವಂತೆ ಜಗತ್ತಿನ ಎಲ್ಲ ರಾಷ್ಟ್ರಗಳು ಮನವಿ ಮಾಡಿಕೊಂಡವು. ಅದರೂ ಅಣುಬಾಂಬಿಗಿಂತ ಪ್ರಬಲ ಹಾಗೂ ಹೆಚ್ಚಿನ ವಿನಾಶಕಾರಿಯಾದ ಜಲಜನಕ ಬಾಂಬನ್ನು ಎರಡು ದೇಶಗಳು ಪರೀಕ್ಷಿಸಿದವು. ಅರವತ್ತು ಎಪ್ಪತ್ತರ ದಶಕಗಳ ಕಾಲಾವಧಿಯಲ್ಲಿ ಯಾರ ಮಾತನ್ನು ಕೇಳದ ಈ ಎರಡು ದೇಶಗಳು ಹಟಕ್ಕೆ ಬಿದ್ದು ಶಸ್ತ್ರ ತಯಾರಿಸುವಲ್ಲಿ ಪೈಪೋಟಿಗಿಳಿದು ವಿಶ್ವಕ್ಕೆ ಭಯ ಹುಟ್ಟಿಸಿದವು. ಕೊನೆಗೆ ಇಂಗ್ಲೆಂಡ್‌ನ ಮಧ್ಯಸ್ಥಿಕೆಯಿಂದ ಮೂರು ದೇಶಗಳು ಸೇರಿ ಕೆಲವು ಒಪ್ಪಂದಗಳನ್ನು ಮಾಡಿಕೊಂಡು ಆತಂಕದ ವಾತಾವರಣವನ್ನು ಸ್ವಲ್ಪಮಟ್ಟಿಗೆ ತಗ್ಗಿಸಲು  ತಾವು ಮಾಡುತ್ತಿದ್ದ ಪರೀಕ್ಷೆಯ ಪ್ರಯೋಗಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿದವು. ಕೆನಡಿ ಮಾಸ್ಕೋದಲ್ಲಿ ಸುಮಾರು ೧೦ ದಿನಗಳ ಕಾಲ ಈ ಕುರಿತಂತೆ ಮಾತುಕತೆ ನಡೆಸಿದ.

ಅಮೆರಿಕಾ ಏನೆಲ್ಲ ಪ್ರಗತಿ ಸಾಧಿಸಿದ್ದರೂ ಕರಿಯರ ಬಗೆಗೆ ಇದ್ದ ಅವರ ಧೋರಣೆಗಳು ಬದಲಾಗಲಿಲ್ಲ. ಅದರಲ್ಲೂ ದಕ್ಷಿಣ ರಾಜ್ಯಗಳಲ್ಲಿ ಅವರ ಶೋಷಣೆಗಳು ತಮಗೆ ದೈವ ದತ್ತವಾಗಿ  ಸಿಕ್ಕಿರುವ ಕಡ್ಡಾಯ ಅವಕಾಶಗಳೆಂದು ತಿಳಿದು ವರ್ತಿಸುತ್ತಿದ್ದರು. ಇದರ ರಕ್ಷಣೆಗಾಗಿ ಕಾನೂನುಗಳನ್ನು ಜಾರಿಗೆ ತರಲು ಬಿಳಿಯರ ಕೆಲವು ಸಂಘಟನೆಗಳು ಹವಣಿಸುತ್ತಿದ್ದವು. ಇದನ್ನು ಪ್ರತಿಭಟಿಸಲು ಕರಿಯರ ಬಗೆಗೆ ಸಮಾನ ಪ್ರೀತಿಯುಳ್ಳ ಕೆಲವು ಬಿಳಿಯರು ‘‘ಬಿಡುಗಡೆಯ ಬಸ್ಸುಗಳಲ್ಲಿ’’(ಫ್ರೀಡಮ್ ಬಸ್) ಕರಿಯರ ಜೊತೆಗೂಡಿ ಪ್ರಯಾಣಿಸಿದರು. ಜನಾಂಗಗಳ ಮಧ್ಯೆ ಇದ್ದ ಪ್ರತ್ಯೇಕತೆಯನ್ನು ವಿರೋಧಿಸಿದ ಪ್ರಜ್ಞಾವಂತರು ಧರಣಿ, ಚಳವಳಿ ಮತ್ತು ಮುಷ್ಕರಗಳಲ್ಲಿ ಭಾಗವಹಿಸಿ ಕೆನಡಿ ಕೈಗೊಂಡ ಸುಧಾರಣ ಆಡಳಿತ ಕ್ರಮಗಳನ್ನು ಬೆಂಬಲಿಸಿದರು. ಇದರಿಂದ ಉತ್ತೇಜಿತನಾದ ಕೆನಡಿಯು ನಾಗರಿಕ ಹಕ್ಕುಗಳು ಮತ್ತು ಶಾಲೆಗಳಲ್ಲಿದ್ದ ಪ್ರತ್ಯೇಕತೆಯನ್ನು ಕಾನೂನಿನ ಮೂಲಕ ನಿಷೇಧಿಸುವ ಸಾಹಸ ಮಾಡಿದನು. ಕರಿಯರ ಹಕ್ಕುಗಳ ಪಾಲನೆಗೆ ಕೆಲವೊಮ್ಮೆ ಸೈನ್ಯವನ್ನು ಸಹ ಬಲಪ್ರಯೋಗಿಸಿದನು. ‘‘ಮೊದಲ ಬಾರಿಗೆ ಮತದಾನ’’ ಮಾಡುವ ಹಕ್ಕನ್ನು ಕರಿಯರಿಗೆ ಕೆನಡಿ ಆಡಳಿತಾವಧಿಯಲ್ಲಿ ನೀಡಿದ್ದು ಹೆಚ್ಚಿನ ವಿರೋಧ ವ್ಯಕ್ತವಾಗಲು ಕಾರಣವಾಯಿತು. ಇಂಥ ಸ್ಥಿತಿಯಿಂದ ದಕ್ಷಿಣ ರಾಜ್ಯಗಳಲ್ಲಿ ಆಂತರಿಕ ಕಲಹಕ್ಕಿಂತ ಮುಂಚೆ ಇದ್ದ ದ್ವಿಪಕ್ಷ ರಾಜಕೀಯ ಸ್ಥಿತಿಯು ಮತ್ತೆ ಉಲ್ಬಣವಾಯಿತು. ಆದರೆ ಅಮೆರಿಕಾದ ಪ್ರಜ್ಞಾವಂತರ ಬೆಂಬಲ ಹಾಗೂ ವಿಶ್ವದಲ್ಲಿನ ಎಲ್ಲ ಪ್ರಗತಿಪರರ ಹೊಗಳಿಕೆಯಿಂದ ಸೈ ಎನಿಸಿಕೊಂಡ ಕೆನಡಿ ಕೊನೆಗೂ ದಿಟ್ಟ ನಿರ್ಧಾರಗಳನ್ನು ಜಾರಿಗೆ ತರುವಲ್ಲಿ ಸಫಲನಾದ. ಕರಿಯರ ಬಗೆಗೆ ಅವನು ತೆಗೆದುಕೊಂಡ ನಿಲುವುಗಳು ಆ ದೇಶದಲ್ಲಿದ್ದ ದೀರ್ಘಕಾಲಿನ ಸಮಸ್ಯೆಗೆ ತೆರೆ ಎಳೆಯುವಂತೆ ಮಾಡಿದವು.

ಪರಸ್ಪರ ತಿಳುವಳಿಕೆಯಿಂದ ಯುರೋಪ್ ದೇಶಗಳೊಂದಿಗೆ ವ್ಯಾಪಾರ ವೃದ್ದಿಸಲು ೧೯೬೨ರ ವಾಣಿಜ್ಯ ವಿಸ್ತರಣಾ ಕಾಯ್ದೆಯನ್ನು ಜಾರಿಗೊಳಿಸಲಾಯಿತು. ಇದರಿಂದ ಅಮೆರಿಕಾದ ರಫ್ತು ವ್ಯಾಪಾರ ಹೆಚ್ಚಾದರೂ ಊಹಿಸಿದಷ್ಟು ಯಶ ಸಿಗಲಿಲ್ಲ. ವ್ಯಾಪಾರಿ ಸುಂಕದ ಏರಿಕೆ ಇಳಿಕೆ ಮಾಡುವ ಪರಮಾಧಿಕಾರವನ್ನು ಈ ಕಾಯ್ದೆ ಅಧ್ಯಕ್ಷನಿಗೆ ನೀಡಿತು. ಪೌರಹಕ್ಕುಗಳ ಕಾಯ್ದೆಯನ್ನು ಜಾರಿಗೆ ತಂದನು. ಮಾರ್ಟಿನ್ ಲೂಥರ್‌ನಂಥ ಹೋರಾಟ ಗಾರರು ಕೆನಡಿ ಆಡಳಿತವನ್ನು ಮೆಚ್ಚಿದರು. ಕರಿಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋ ನೀಡುವುದರ ಮೂಲಕ ಅವರಿಗೊಂದು ಹೊಸ ಆಶಾಕಿರಣವಾಗಿ ಹೊಮ್ಮಿದನು. ವಿಶ್ವಕ್ಕೆ ಪ್ರಜಾಪ್ರಭುತ್ವವನ್ನು ಹೊಸ ಬಗೆಯಲ್ಲಿ ಹೇಳಿಕೊಟ್ಟ ಕೆನಡಿಯು ಅತ್ಯಂತ ತರುಣಾವಸ್ಥೆಯಲ್ಲಿ ಸಂಚಿನ ಸಾವಿಗೆ ಒಳಗಾಗಬೇಕಾಯಿತು. ಅದ್ಭುತವಾಗಿ ಪ್ರಗತಿ ಸಾಧಿಸುತ್ತಾ ಮುನ್ನಡೆದಿದ್ದ ಅಮೆರಿಕಾ ಇಂಥ ದಾರುಣ ಘಟನೆಯಿಂದ ಮತ್ತೆ ಕೆಲವು ಶತಮಾನಗಳಷ್ಟು ಹಿಂದೆ ಹೋದಂತೆ ಭಾಸವಾಯಿತು.

ಕೆನಡಿಯ ಹತ್ಯೆಯ ನಂತರ ಲಿಂಡನ್ ಬೇಯ್‌ನ್ಸ್ ಜಾನ್‌ಸನ್ ಅಮೆರಿಕಾದ ೩೬ನೆಯ ಅಧ್ಯಕ್ಷನಾಗಿ ೧೯೬೩ರಲ್ಲಿ ನೇಮಕನಾದನು. ಹಲವಾರು ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿದ್ದ ಜಾನ್ಸನ್ ೧೯೬೪ರಲ್ಲಿ ನಡೆದ ಮಹಾಚುನಾವಣೆಯಲ್ಲಿ ಡೆಮೊಕ್ರಾಟಿಕ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆ ಆದನು. ಜಾನಸನ್ ತನ್ನ ಆಡಳಿತಾವಧಿಯಲ್ಲಿ ಕೆನಡಿ ಆಡಳಿತವು ತಂದ ‘ಮಹಾ ಸಮಾಜದ’ ಕಲ್ಪನೆ(ದ ಗ್ರೇಟರ್ ಸೊಸೈಟಿ)ಯಲ್ಲಿ ಅನೇಕ ಸುಧಾರಣೆಗಳನ್ನು ಜಾರಿಗೆ ತಂದನು. ಶಿಕ್ಷಣ ಅಭಿವೃದ್ದಿಗೆ ಹೆಚ್ಚಿನ ಸಹಾಯಧನ ನೀಡಿದನು. ವೃದ್ಧರಿಗೆ ಸಾಮಾಜಿಕ ಭದ್ರತಾ ವ್ಯವಸ್ಥೆ ಕಲ್ಪಿಸಿದನು. ಶಿಕ್ಷಣ, ವಸತಿ, ನಗರಾಭಿವೃದ್ದಿ ಕಾರ್ಯಗಳು ಹಾಗೂ ಪುನರ್ ನಿರ್ಮಾಣ ಯೋಜನೆಗಳನ್ನು ಜಾರಿಗೆ ತಂದನು. ನೀರು ಹಾಗೂ ವಾಯುಮಾಲಿನ್ಯ ತಡೆಗಟ್ಟುವಿಕೆಗೆ ಕಾಯ್ದೆಗಳನ್ನು ಮೊಟ್ಟ ಮೊದಲಿಗೆ ಅಮೆರಿಕಾದಲ್ಲಿ ಜಾನ್ಸನ್ ಆಡಳಿತಾವಧಿಯಲ್ಲಿ ಜಾರಿಗೆ ತರಲಾಯಿತು.

ಆಂತರಿಕ ಆಡಳಿತಕ್ಕೆ ಹೆಚ್ಚಿನ ಗಮನ ಹರಿಸಿದ ಲಿಂಡನ್ ಜಾನ್ಸನ್‌ನು ವಿದೇಶಾಂಗ ವ್ಯವಹಾರಗಳಲ್ಲಿ ವಿಫಲನಾದ ಅಧ್ಯಕ್ಷನೆಂದು ರಾಜಕೀಯತಜ್ಞರು ವಿಶ್ಲೇಷಿಸಿದ್ದಾರೆ. ಅಮೆರಿಕಾದ ಕ್ರಮಗಳಿಂದ ಬೇಸತ್ತ ಫ್ರಾನ್ಸ್‌ನ ಅಧ್ಯಕ್ಷ ಡಿಗಾಲ್, ನ್ಯಾಟೋದಿಂದ ಹಾಗೂ ಅಮೆರಿಕಾದ ಮಿತ್ರತ್ವದಿಂದ ಬೇರ್ಪಟ್ಟನು. ಕಾರಣ ಇಂಗ್ಲೆಂಡಿನ ಮೇಲಿದ್ದ ಅಮೆರಿಕಾದ ವಿಶೇಷ ಪ್ರೀತಿ ಫ್ರೆಂಚ್‌ರನ್ನು ತೀವ್ರ ಅಸಮಾಧಾನಗೊಳಿಸಿತು. ಲ್ಯಾಟಿನ್ ಅಮೆರಿಕಾದ ಡೋಮಿನಿಕನ್ ರಿಪಬ್ಲಿಕನ್‌ನಲ್ಲಿ ಆಂತರಿಕ ಕ್ಷೋಭೆ ಉಂಟಾಗಿ ಅಮೆರಿಕಾ ಮಧ್ಯ ಪ್ರವೇಶಿಸುವಂತಾಯಿತು. ಅಲ್ಲದೇ ಇಸ್ರೇಲ್‌ನ ಹಠಮಾರಿತನವನ್ನು ಕಂಡೂಕೇಳದವರಂತೆ ನಟಿಸಿ ಅರಬ್ ರಾಷ್ಟ್ರಗಳ ಪಾಲಿಗೆ ಅತೃಪ್ತ ನಾಯಕನಾದ.

ಇಸ್ರೇಲ್ ದೇಶದ ಆಕ್ರಮಣ ನೀತಿಯನ್ನು ವಿರೋಧಿಸಿದ ಅರಬ್ ರಾಷ್ಟ್ರಗಳು ಅದರ ನಾಶಕ್ಕೆ ಒಂದಾದವು. ಇದೇ ಕಾರಣವನ್ನೊಡ್ಡಿ ಈಜಿಪ್ಟ್ ದೇಶ ಧರ್ಮಯುದ್ಧವನ್ನು ಇಸ್ರೇಲ್‌ನ ವಿರುದ್ಧ ಸಾರಿತು. ಆದರೆ ಇಸ್ರೇಲಿಗೆ ಅಮೆರಿಕಾ ಆಂತರಿಕವಾಗಿ ಬೆಂಬಲಿಸಿಯೇ ತೀರುತ್ತದೆ ಎಂಬ ಬಲವಾದ ನಂಬಿಕೆಯಿಂದ ಇಸ್ರೇಲ್ ದೇಶವು ಅರಬ್ ದೇಶಗಳು ನಿರೀಕ್ಷಿಸುವುದಕ್ಕಿಂತ ಮೊದಲೇ  ಕ್ಷಿಪ್ರವಾಗಿ  ಈಜಿಪ್ಟ್, ಸಿರಿಯಾ ಹಾಗೂ ಲೆಬೆನಾನ್ ದೇಶಗಳ ಮೇಲೆ ಯುದ್ಧ ಸಾರಿ ಅವುಗಳು ಯುದ್ಧ ತಯಾರಿ ಮಾಡಿಕೊಳ್ಳುದರೊಳಗಾಗಿ ಮಿಂಚಿನಂತೆ ಎರಗಿ ಅವುಗಳ ಪ್ರದೇಶಗಳನ್ನು ಆಕ್ರಮಿಸಿಕೊಂಡಿತು. ಇಸ್ರೇಲ್ ನಿರೀಕ್ಷಿದಂತೆಯೇ ಇದನ್ನೆಲ್ಲ ಗಮನಿಸುತ್ತಿದ್ದ ಜಾನ್ಸನ್‌ನ ಆಡಳಿತ ತನಗೆ ಗೊತ್ತಿಲ್ಲವೆಂಬಂತೆ ನಟಿಸುತ್ತ ಕಾಲ ಕಳೆಯಿತು.