ಯುರೋಪಿನ ರಾಜತ್ವ ಹಾಗೂ ಜಡ್ಡುಗಟ್ಟಿದ ಧರ್ಮಾಧಿಕಾರಿಗಳಿಂದ ಹೊರದಬ್ಬಲ್ಪಟ್ಟ ಜನರು ಅಮೆರಿಕಾದ ಚರಿತ್ರೆಗೆ ಹೊಸ ಆಯಾಮವನ್ನು ತಂದುಕೊಟ್ಟರು. ಸ್ವಾಭಿಮಾನದ ಮನೋಭಾವನೆಯಿಂದ ಕೆಲವು ಜನರು ವ್ಯಕ್ತಿಸ್ವಾತಂತ್ರ್ಯವನ್ನು ಧಿಕ್ಕರಿಸಿದಕ್ಕಾಗಿ, ತಮ್ಮ ತಾಯಿ ನೆಲವನ್ನು ಬಿಟ್ಟು ಬಹು ದೂರದ ಪ್ರದೇಶಗಳಿಗೆ ವಲಸೆ ಹೋದರು. ಯುರೋಪಿನ ಸಾಹಸಿ ನಾವಿಕರಿಂದ ಕಂಡುಹಿಡಿಯಲ್ಪಟ್ಟ ಹೊಸ ಭೂ ಪ್ರದೇಶಗಳು ಇವರಿಗೆ ಆಶ್ರಯ ತಾಣಗಳಾದವು. ಅನೇಕ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ಕೆಲವರು ಹುತಾತ್ಮರಾದರೆ ಉಳಿದವರು ಸ್ವಾಭಿಮಾನದಿಂದ ಸಮಸ್ಯೆಗಳನ್ನು ಎದುರಿಸಿ ಹೊಸ ರಾಜ್ಯಗಳನ್ನು ಕಟ್ಟಿಕೊಂಡರು. ತಮ್ಮ ಅಸ್ತಿತ್ವಕ್ಕೆ ಅಡೆತಡೆ ಮಾಡಿದ ಮೂಲನಿವಾಸಿಗಳನ್ನು ಬಡಿದೊಡಿಸಿದರು. ಬಲತ್ಕಾರದಿಂದ ತಮ್ಮನ್ನು ಯುರೋಪಿನ ನೆಲದಿಂದ ತಂದು ಬಿಟ್ಟ ತಮ್ಮ ಸಹೋದರ ಸಂಬಂಧಿಗಳು ವ್ಯಕ್ತಿಸ್ವಾತಂತ್ರ್ಯಕ್ಕೆ ಧಕ್ಕೆ ತಂದಾಗ ಅವರ ವಿರುದ್ಧ  ವಸಾಹತುಗಳ, ಧನಿಕರ ವಿರುದ್ಧ ತಮ್ಮ ಅನುಕೂಲದ ಒಕ್ಕೂಟವನ್ನು ಕಟ್ಟಿಕೊಂಡರು. ಅದರ ಉಳಿವಿಗಾಗಿ ರಕ್ತಕ್ರಾಂತಿಯ ಮೂಲಕ ಹೋರಾಟಕ್ಕೆ ಅವರು ಮುನ್ನುಡಿ ಬರೆದರು. ವಿವಿಧ ಜನಾಂಗ, ಭಾಷೆ, ಸಂಸ್ಕೃತಿ ಹಾಗೂ ಯುರೋಪಿನ ಬೇರೆ ಬೇರೆ ಪ್ರದೇಶಗಳಿಂದ ವಲಸೆ ಬಂದ ಈ ಸಮುದಾಯಗಳು ೧೭೭೬ರ ಮಹಾಕ್ರಾಂತಿಯನ್ನು ಮಾಡಿದರು. ಆ ಮೂಲಕ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಒಕ್ಕೂಟ ಕಟ್ಟಿಕೊಂಡು ಪ್ರಜಾಪ್ರಭುತ್ವದ ರಾಜ್ಯಭಾರಕ್ಕೆ ಅಸ್ತಿಭಾರ ಹಾಕಿದರು.

ವ್ಯಕ್ತಿಸ್ವಾತಂತ್ರ್ಯ, ಸಹೋದರತೆ ಹಾಗೂ ಸ್ವಾಭಿಮಾನದ ಪ್ರತೀಕದಂತಿದ್ದ ಅಮೆರಿಕಾ ಒಕ್ಕೂಟದ ಜನಪ್ರತಿನಿಧಿಗಳು ಸ್ವಾರ್ಥರಹಿತ ಹೋರಾಟದ ಮೂಲಕ ಹೊಸ ದೇಶವನ್ನು ಕಟ್ಟಿಕೊಂಡರು.  ಇವರು ಮುಂದಿನ ಪೀಳಿಗೆಗೆ ದಾರಿದೀಪವಾದರು. ತಮ್ಮನ್ನು ತಾವು ಉಳಿಸಿ ಕೊಳ್ಳುವುದಕ್ಕಾಗಿ ಅನೇಕ ಹೋರಾಟಗಳನ್ನು ಮಾಡಿ ವಿಜಯಿಯಾದರು. ಅವರು ಮಾನವನ ಸಮಾಜ, ರಾಜಕೀಯ ಹಾಗೂ ಸಂಸ್ಕೃತಿಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿದರು. ಇಂತಹ ಧ್ಯೇಯಗಳನ್ನು ಜಾರಿಗೆ ತರುವಲ್ಲಿ ಧೃತಿಗೆಡದೆ ನಾಯಕರು ಧೈರ್ಯದಿಂದ ನಿರ್ಧಾರಗಳನ್ನು ತೆಗೆದುಕೊಂಡರು. ವ್ಯಕ್ತಿಸ್ವಾತಂತ್ರ್ಯದ ಮಹತ್ವ ಕುರಿತು ಅಮೆರಿಕಾದ ಜನತೆ ಬೇಧಭಾವಗಳನ್ನು ಪೋಷಿಸಿಕೊಂಡಿರುವುದು ಚರಿತ್ರೆಯ ಒಂದು ವ್ಯಂಗ್ಯ. ಈ ಎಲ್ಲ ಆಯಾಮಗಳನ್ನು ಒಳಗೊಂಡ ಅಮೆರಿಕಾದ ರಾಜಕಾರಣ ಕುರಿತು ಇಲ್ಲಿ ಚರ್ಚಿಸಲಾಗಿದೆ.

ಸಂಯುಕ್ತ ಸಂಸ್ಥಾನಗಳಿಂದ ಕೂಡಿದ ಅಮೆರಿಕಾ ಪ್ರದೇಶದಿಂದ ಫ್ರೆಂಚರನ್ನು ಸಂಪೂರ್ಣವಾಗಿ ಹೊರಗಟ್ಟಿದ ಬ್ರಿಟಿಷ್ ಸರಕಾರವು ವಸಾಹತುಗಳಲ್ಲಿ ನೇರ ಹಸ್ತಕ್ಷೇಪ ಮಾಡಲಾರಂಭಿಸಿತು. ವಸಾಹತುಗಳಿಂದ ಸಿಗುವ ಲಾಭಗಳು ಮಾತ್ರ ಇಂಗ್ಲೆಂಡಿನ ಸರಕಾರದ ಉದ್ದೇಶಿತ ಸಂಗತಿಗಳಾದವು. ತನ್ನ ಹಿತಾಸಕ್ತಿಗಳನ್ನು ಅನೇಕ ಕಾನೂನುಗಳನ್ನು ಜಾರಿಗೆ ತರುವುದರ ಮೂಲಕ ಬ್ರಿಟಿಷ್ ಸರಕಾರ ವಸಾಹತುಗಾರರನ್ನು ಹಾಗೂ ಸ್ಥಳೀಯ ಜನರನ್ನು  ನಿಯಂತ್ರಿಸಲಾರಂಭಿಸಿತು. ಇಂಥ ಅವೈಜ್ಞಾನಿಕ ಧೋರಣೆಗಳಿಂದ ಬೇಸತ್ತ ಐರೋಪ್ಯ ವಲಸೆಗಾರರು ಇದುವರೆಗೂ ತಾವು ಇಟ್ಟುಕೊಂಡಿದ್ದ ತಮ್ಮ ತಾಯ್ನಡಿನ ಮೇಲಿನ ಪ್ರೀತಿ ಕಡಿಮೆಯಾಗಿ ಅಲ್ಲಿರುವ ಆಡಳಿತಶಾಹಿಯ ವಿರುದ್ಧವೇ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿತು. ಪ್ರಾರಂಭದಲ್ಲಿ ಇಂಥ ಪರಿಣಾಮಗಳನ್ನು ಅರಿಯದ ವಸಾಹತು ವಲಸೆಗಾರರು ಕ್ರಮೇಣ ತಮ್ಮ ರಕ್ಷಣೆಯ ಜೊತೆ ಜೊತೆಗೆ ಸ್ವಾತಂತ್ರ್ಯದ ಮನೋಭಾವನೆಯನ್ನು ತಾಳಿದರು. ಈ ಹಿನ್ನೆಲೆಯಲ್ಲಿ ಆರಂಭದಲ್ಲಿಯೇ ರಚನೆಗೊಂಡಿದ್ದ ಹದಿಮೂರು ವಸಾಹತುಗಳು ತಮ್ಮಲ್ಲಿರುವ ಮನಸ್ತಾಪಗಳನ್ನು ಮರೆತು ಬ್ರಿಟಿಷ್ ಸರಕಾರದ ವಿರುದ್ಧವೇ ಒಂದುಗೂಡಿದವು.

ಅಧಿಕಾರದ ವಿರುದ್ಧ ಪ್ರತಿಭಟನೆ

ತಮ್ಮ ಸ್ವಸಾಮರ್ಥ್ಯವನ್ನು ಖಾತ್ರಿಪಡಿಸಿಕೊಂಡಿದ್ದ ಕೆಲವು ವಸಾಹತುಗಾರರು ಬ್ರಿಟಿಷ್ ಸರಕಾರದ ವಿರುದ್ಧ ತಿರುಗಿ ಬೀಳುವ ಸಾಹಸಕ್ಕೆ ಕೈಹಾಕಿದರು. ಅದರೆ ಹೆಚ್ಚಿನ ಜನ  ನೂರಾರು ವರ್ಷಗಳಿಂದ ಭಾವನಾತ್ಮಕವಾಗಿ ಇಂಗ್ಲೆಂಡಿನ ಜೊತೆಗೆ ಹೊಂದಿದ ರಾಜಕೀಯ ಹಾಗೂ ಸಾಂಸ್ಕೃತಿಕ ಸಂಬಂಧಗಳನ್ನು ತಕ್ಷಣವೇ ಕೈಬಿಡಲು ಸಿದ್ಧರಿರಲಿಲ್ಲ. ಆದರೆ ಇವುಗಳನ್ನು ಗಂಭೀರವಾಗಿ ಪರಿಗಣಿಸಿದ ಬ್ರಿಟಿಷ್ ಸರಕಾರವು ಅಮೆರಿಕಾದಲ್ಲಿದ್ದ ಜನರ ಭಾವನೆಗಳನ್ನು ಲೆಕ್ಕಿಸಲಿಲ್ಲ. ಹಾಗಾಗಿ ವಸಾಹತು ವ್ಯಾಪಾರಿಗಳ ಹಿತಾಸಕ್ತಿಯನ್ನು ಕಡೆಗಣಿಸಿದ  ಹೊಸ ಕಾನೂನುಗಳನ್ನು ಜಾರಿಗೆ ತಂದಿತು. ನಿಜಾಂಶಗಳನ್ನು ಅರಿಯದ ಇಂಥ ಕಾನೂನುಗಳು ಸ್ಫೋಟಗೊಳ್ಳಲಿರುವ ಕ್ರಾಂತಿಯ ಕಿಚ್ಚಿಗೆ ತುಪ್ಪ ಸುರಿದಂತಾಯಿತು. ಹೀಗಾಗಿ ವಸಾಹತುಗಳಲ್ಲಿನ ಜಮೀನ್ದಾರರು ಹಾಗೂ ವಸಾಹತು ವ್ಯಾಪಾರಿಗಳು ಕೂಡಿಕೊಂಡು ಬ್ರಿಟಿಷ್ ಆಧಿಪತ್ಯದ ವಿರುದ್ಧವಾಗಿ ಸಂಘರ್ಷಕ್ಕೆ ನಾಂದಿ ಹಾಡಿದರು. ಕಡೆಗೆ ಮುಖಮಾಡಿ ನಿಂತರು. ಇದೇ ಸಂದರ್ಭದಲ್ಲಿ ವಸಾಹತುಗಳಲ್ಲಿದ್ದ ಸಾಮಾನ್ಯ ಕೃಷಿಕರು, ಶ್ರೀಮಂತ ಜಮೀನ್ದಾರರಿಂದ ಮುಕ್ತಿ ಪಡೆಯಲು ಪ್ರಜಾಪ್ರಭುತ್ವ ಮಾದರಿ ಸರಕಾರ ಬೇಕೆಂಬ ಉತ್ಕಟೇಚ್ಛೆಯಿಂದ ಸಂಘರ್ಷಕ್ಕಿಳಿದರು. ಅಲ್ಲದೇ ಅಮೆರಿಕಾ ದೇಶವು ಎಲ್ಲ ವಲಯಗಳಲ್ಲಿ ಸಮರ್ಥವಾಗಿ ಬೆಳೆಯಲಾರಂಭಿಸಿತ್ತು. ಎಲ್ಲ ಸಮುದಾಯಗಳಿಗೆ ಸ್ವಾಭಿಮಾನ ಮತ್ತು ಪ್ರಜ್ಞಾವಂತಿಕೆಯ ಅರಿವಾಯಿತು. ಅಮೆರಿಕಾದಲ್ಲಿನ ವಸಾಹತು ವಲಸೆಗಾರರಿಗೆ ತಮ್ಮ ಮಧ್ಯೆ ಹೊಸದಾಗಿ ಹುಟ್ಟಿಕೊಂಡಿದ್ದ ರಾಜ್ಯಾಧಿಕಾರ ನಡೆಗಳನ್ನು ನಿರ್ವಹಿಸುವುದು ಅಂಥ ಕಷ್ಟದ ಸಂಗತಿಗಳೇನು ಆಗಿರಲಿಲ್ಲ. ಆದರೂ ಸಂಪೂರ್ಣವಾಗಿ ಅಮೆರಿಕಾದ ಜನತೆ ಬ್ರಿಟಿಷ್ ಅಧಿಕಾರದ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳಲಿಲ್ಲ. ಕಾರಣ ಸ್ವಾತಂತ್ರ್ಯ ಹೋರಾಟಕ್ಕಿಂತ ತಮ್ಮ ವ್ಯಾವಹಾರಿಕ ಹಿತಾಸಕ್ತಿಗಳು ಮುಖ್ಯವಾಗಿದ್ದವು. ಇದೇ ಸಂದರ್ಭದಲ್ಲಿ ಇಂಗ್ಲೆಂಡಿನ ರಾಜಕೀಯದಲ್ಲಾದ ಸ್ಥಿತ್ಯಂತರಗಳು ಹೊಸ ಸಂಗತಿಗಳನ್ನು ಹುಟ್ಟು ಹಾಕಿದವು. ಅಂದರೆ ಕ್ರಿ.ಶ.೧೭೬೦ರಲ್ಲಿ ಚಕ್ರಾಧಿಪತಿಯಾಗಿ ಅಧಿಕಾರ ವಹಿಸಿಕೊಂಡ ೩ನೆಯ ಜಾರ್ಜ್ ನಾಮಮಾತ್ರ ಅಧಿಕಾರಿಯಾಗಿರಲು ಒಪ್ಪಲಿಲ್ಲ. ತತ್ಪರಿಣಾಮವಾಗಿ ಬ್ರಿಟಿಷ್ ಪಾರ್ಲಿಮೆಂಟ್ ಹಾಗೂ ಬ್ರಿಟಿಷ್ ವಸಾಹತುಗಳ ಆಡಳಿತದಲ್ಲಿ ನೇರವಾಗಿ ಹಸ್ತಕ್ಷೇಪ ಮಾಡಲಾರಂಭಿಸಿದನು. ಹೀಗಾಗಿ ಈತನಿಗೆ ಇಂಗ್ಲೆಂಡ್‌ನ ಹಿತಾಸಕ್ತಿಗಳು ಪ್ರಮುಖವೆನಿಸಿದವೇ ಹೊರತು ನೂರಾರು ವರ್ಷಗಳಿಂದ ಅಮೆರಿಕಾ ಪ್ರದೇಶಗಳಲ್ಲಿದ್ದ ಯುರೋಪಿನ ಬಂಧುಗಳಲ್ಲ. ಇವನು ಇವರನ್ನು ಲಾಭದಾಯಕರೆಂದು ಪರಿಭಾವಿಸಿದ. ಸ್ವಾರ್ಥದಿಂದ ಕೂಡಿದ ಈತನ ಧೋರಣೆಗಳು ಸ್ವಾತಂತ್ರ್ಯಪ್ರಿಯರಾದ ಅಮೆರಿಕಾನ್ನರಿಗೆ  ಅಪ್ರಿಯವೆನಿಸಿದವು. ಹೀಗಾಗಿ ಅಮೆರಿಕಾದ ಕ್ರಾಂತಿಗೆ ೩ನೇ ಜಾರ್ಜ್ ಅರಸನನ್ನು ಬಹಳ ಮಟ್ಟಿಗೆ ಕಾರಣೀಪುರುಷನನ್ನಾಗಿ ಅಧ್ಯಯನಕಾರರು ಬಿಂಬಿಸಿದ್ದಾರೆ. ಇದುವರೆಗೂ ವಸಾಹತು ವ್ಯಾಪಾರಿಗಳು ನಡೆಸಿಕೊಂಡು ಬಂದಂಥ ವಾಮಮಾರ್ಗದ ವ್ಯಾಪಾರವನ್ನು ರಾಜನ ಆಜ್ಞೆಯ ಮೇರೆಗೆ ಸುಂಕಾಧಿಕಾರಿಗಳು ಹತೋಟಿಗೆ ತರಲಾರಂಭಿಸಿದರು. ಈ ಸಂಗತಿ ಅಮೆರಿಕಾದ ವ್ಯಾಪಾರಿ ವಲಸೆಗಾರರ ಮೇಲೆ ಹೆಚ್ಚಿನ ಪರಿಣಾಮ ಬೀರಿತು. ಅಲ್ಲದೇ ಫ್ರೆಂಚರು ಅಮೆರಿಕಾ ಸಂಯುಕ್ತ ಸಂಸ್ಥಾನಗಳಿಂದ ಕಾಲ್ತೆಗೆದ ನಂತರ ವಸಾಹತುಗಾರರಲ್ಲಿ ಭೂಹಂಚಿಕೆಯ ಸಂಬಂಧವಾಗಿ ಆಂತರಿಕ ಮನಸ್ತಾಪಗಳು ತೀವ್ರವಾಗಿ ಉದ್ಭವಿಸಿದವು. ಇದು ಸರಕಾರಕ್ಕೂ ಪೇಚಿನ ಸಂಗತಿಯಾಗಿತ್ತು. ಇದನ್ನು ಹತೋಟಿಗೆ ತರುವ ಪ್ರಯತ್ನದಲ್ಲಿ ಕಠಿಣವಾದ ಕಾನೂನುಗಳು ಜಾರಿಯಾದವು. ಅಲ್ಲದೇ ಧರ್ಮವು ಆಡಳಿತವನ್ನು ನಿರ್ಧರಿಸುವ ಬಹುದೊಡ್ಡ ಮಾನದಂಡವಾಗಿ ಪರಿಗಣಿಸಲ್ಪಟ್ಟಿತು. ಮುಖ್ಯವಾಗಿ ಆಂಗ್ಲಿಕನ್ ಚರ್ಚು, ಫ್ಯೂರಿಟನ್ ಹಾಗೂ ಕ್ಯಾಥೊಲಿಕರ ಚರ್ಚುಗಳ ನಡುವೆ ಭೇದಗಳು ಹುಟ್ಟಿದವು. ಇಂಗ್ಲೆಂಡಿನ ಧರ್ಮವನ್ನು (ಆಂಗ್ಲಿಕನ್ ಚರ್ಚು) ಅನುಸರಿಸುವ ಅಧಿಕಾರಿಗಳಿಗೆ ಹೆಚ್ಚಿನ ಅನುಕೂಲವನ್ನು ಆ ಸರಕಾರ ಕಲ್ಪಿಸಿಕೊಟ್ಟಿತು. ಇದು ಉಳಿದ ಮತ ಅವಲಂಬಿಗಳನ್ನು ಅಸಂತೋಷಗೊಳಿಸಿತು.

ಸ್ಟಾಂಪ್ ಶಾಸನ

ಇಂಗ್ಲೆಂಡ್ ಸರಕಾರ ‘ವಾಣಿಜ್ಯ ಸಿದ್ಧಾಂತ’ (ಮರ್ಕಂಟೈಲಿಸಂ) ಹಾಗೂ ಸಮುದ್ರಯಾನ ಶಾಸನಗಳನ್ನು(ನ್ಯಾವಿಗೇಷನ್ ಆ್ಯಕ್ಟ್) ಜಾರಿಗೊಳಿಸಿತು. ಆ ಮೂಲಕ ವಸಾಹತುಗಾರರ ಮೇಲೆ ಹಿಡಿತ ಸಾಧಿಸಲು ಅಸಂವಿಧಾನಾತ್ಮಕ ನಿರ್ಣಯ ಕೈಗೊಂಡಿತು. ಪ್ರಧಾನಿ ಜಾರ್ಜ್ ಗ್ರೆನ್ಪಿಲ್, ಪಾರ್ಲಿಮೆಂಟಿನ ಅನುಮೋದನೆ ಪಡೆದು, ಸ್ಟ್ಯಾಂಪ್ ಶಾಸನ ಜಾರಿಗೆ ತಂದನು. ಅಮೆರಿಕಾದಲ್ಲಿನ ಬ್ರಿಟಿಷ್ ವಸಾಹತುಗಳಲ್ಲಿರುವ ಪ್ರಜೆಗಳು ತಮಗೆ  ಬೇಕಾದ ಖರೀದಿ ಅಥವಾ ಕರಾರು ಪತ್ರಗಳನ್ನಾಗಲಿ  ಹಾಗೂ ಒತ್ತೆ ಪತ್ರಗಳನ್ನು ಇಂಗ್ಲೆಂಡಿನ ಪಾರ್ಲಿಮೆಂಟ್ ಕೊಡಮಾಡಿದ ಸ್ಟ್ಯಾಂಪ್‌ಗಳಲ್ಲಿ ಮಾತ್ರ ಬರೆಯಬೇಕು ಎಂಬ ಕಟ್ಟುನಿಟ್ಟಿನ ಕ್ರಮವನ್ನು ಜಾರಿಗೊಳಿಸಲಾಯಿತು. ಆದರೆ ಸ್ವಾಭಿಮಾನಿಗಳಾದ ಅಮೆರಿಕಾನ್ನರು ಇದನ್ನು ಪ್ರತಿಭಟಿಸಿ ರಾಣಿಗೆ ಮನವಿ ಸಲ್ಲಿಸಿದರು. ಎಲ್ಲ ವಸಾಹತುಗಳು ಸರಕಾರದ ವಿರುದ್ಧ ದಂಗೆ ಎದ್ದವು. ಇದನ್ನು ವಿರೋಧಿಸಲು ‘‘ಸ್ವಾತಂತ್ರ್ಯ ಕುವರರು’’(ಸನ್ಸ್ ಆಫ್ ಲಿಬರ್ಟಿ) ಹೋರಾಟಕ್ಕಿಳಿದರು. ‘ಪ್ರಾತಿನಿಧ್ಯವಿಲ್ಲದೇ ತೆರಿಗೆ ಇಲ್ಲ’ ಎಂಬುದು ವಸಾಹತುಗಾರರ ಪ್ರಮುಖ ಬೇಡಿಕೆಯಾಗಿತ್ತು. ಇದೇ ಸಂದರ್ಭದಲ್ಲಿ ಜಾನ್‌ಲಾಕ್ ಎಂಬ ರಾಜಕೀಯ ತತ್ವಜ್ಞಾನಿಯಿಂದ ಪ್ರಭಾವಿತರಾದ  ಅಮೆರಿಕಾದ ಸ್ಥಳೀಯ ಜನತೆ, ಪ್ರಜೆಗಳು ಹೊಂದ ಬಹುದಾದ ಸ್ವಾತಂತ್ರ್ಯದ ಬಗೆಗೆ ಆಸಕ್ತಿ ತಾಳಿ ಹೋರಾಟಕ್ಕಿಳಿದರು. ಇಂಥ ಬಿರುಸಿನ ಒತ್ತಡಗಗಳಿಗೆ ಬೆದರಿದ ಇಂಗ್ಲೆಂಡ್ ಸರಕಾರ ಅಸಹಾಯಕವಾಗಿ ೧೭೬೭ರಲ್ಲಿ ಸ್ಟ್ಯಾಂಪ್ ಶಾಸನವನ್ನು ಹಿಂದಕ್ಕೆ ಪಡೆಯಿತು. ಇದು ಅಮೆರಿಕಾದಲ್ಲಿ ಸಂಭವಿಸಬಹುದಾಗಿದ್ದ ಮುಂದಿನ ಕ್ರಾಂತಿಗೆ ಮುನ್ನುಡಿ ಆಯಿತು.

ಬೋಸ್ಟನ್ ಟೀ ಪಾರ್ಟಿ

ಸರಕಾರದ ಆರ್ಥಿಕ ಕೊರತೆಯನ್ನು ನೀಗಿಸಲು ಅರ್ಥಸಚಿವ ಟೌನ್ ಷೆಂಡ್ ೧೭೬೭ರಲ್ಲಿ ತನ್ನದೇ ಹೆಸರಿನಲ್ಲಿ ಕೆಲವು ಶಾಸನಗಳನ್ನು ಜಾರಿಗೊಳಿಸಿದನು. ಈ ಶಾಸನಗಳ ಪ್ರಕಾರ ವಸಾಹತುಗಳಲ್ಲಿನ ಆಂತರಿಕ ತೆರಿಗೆಗಳು ಜನತೆಗೆ ಸಂಬಂಧಿಸಿದ್ದ ವಾಗಿದ್ದರೂ ಇದನ್ನು ತಿರಸ್ಕರಿಸಿ ಆಯಾತ-ನಿರ್ಯಾತ ಸರಕುಗಳ ಮೇಲಿನ ತೆರಿಗೆಗಳನ್ನು ಇಂಗ್ಲೆಂಡ್ ಸರಕಾರವೇ ನಿಯಂತ್ರಿಸಲಾರಂಭಿಸಿತು. ಹೀಗೆ ಬಂದಂಥ ತೆರಿಗೆಯಿಂದ ವಸಾಹತುಗಳಲ್ಲಿರುವ ರಾಜ್ಯಪಾಲರಿಗೆ ಅಧಿಕ ವೇತನ ಕೊಡಮಾಡಿ ಅವರನ್ನು ತನ್ನ ಕೈಗೊಂಬೆಗಳನ್ನಾಗಿ ಮಾಡಿಕೊಳ್ಳುವ ಹವಣಿಕೆಯನ್ನು ಸರಕಾರ ಹೊಂದಿತ್ತು. ಇದನ್ನು ಪ್ರತಿಭಟಿಸಿದ ಮೆಸ್ಸಾಚುಸೆಟ್ಸ್‌ನ ಕ್ರಾಂತಿಕಾರಿ ಸ್ಯಾಮ್ ಆಡೆಮ್ಸ್‌ನು ಸರಕಾರದ ವಿರುದ್ಧ ಕ್ರಾಂತಿಗೆ ತತ್‌ಕ್ಷಣದ ಮುನ್ನುಡಿ ಬರೆದನು. ಕಡೆಗೂ ಪ್ರತಿಭಟನೆ ಉಗ್ರರೂಪ ತಾಳಿದಾಗ ಸರಕಾರ ಅಸ್ತಿತ್ವದಲ್ಲಿದ್ದ ಶಾಸನ ಸಭೆಗಳನ್ನು ರದ್ದುಪಡಿಸಿ ನಿರಂಕುಶಾಧಿಕಾರವನ್ನು ಸ್ಥಾಪಿಸಿತು. ಇದರಿಂದ ಮತ್ತಷ್ಟು ಕುಪಿತರಾದ ಹೋರಾಟಗಾರರು ನೇರವಾದ ಸಂಘರ್ಷಕ್ಕಿಳಿದರು. ಸೈನ್ಯದ ಮುಖಾಮುಖಿಯಲ್ಲಿ ಐದು ಜನರು ಸಾವಿಗೀಡಾದರು. ಇದನ್ನು ‘ಬೋಸ್ಟನ್ ಕಗ್ಗೊಲೆ’ ಎಂದು ಕರೆಯಲಾಗುತ್ತದೆ. ೧೭೭೩ರಲ್ಲಿ ಅಧಿಕಾರಕ್ಕೆ ಬಂದ ಲಾರ್ಡ್ ನಾರ್ತನು ಇಂಥ ಜನವಿರೋಧಿ ಶಾಸನವನ್ನು ಹಿಂತೆಗೆದುಕೊಂಡು ಚಹಾದ ಮೇಲಿನ ಸುಂಕವನ್ನು ಹೊರತುಪಡಿಸಿ ಉಳಿದೆಲ್ಲ ಸಾಮಾನು ಸರಂಜಾಮುಗಳ ಮೇಲೆ ಸರಕಾರವು ಹೊಂದಿದ್ದ ಆಯಾತ-ನಿರ್ಯಾತ ತೆರಿಗೆಯ ಹಕ್ಕನ್ನು ರದ್ದುಗೊಳಿಸಿದನು. ಆದರೆ ಚಹಾದ ಮೇಲೆ ಹೊಂದಿದ್ದ ಏಕಸ್ವಾಮ್ಯವನ್ನು ಸಹ ಪ್ರಶ್ನಿಸಿದ ಹೋರಾಟಗಾರರು ವೇಷ ಮರೆಸಿ ಬೋಸ್ಟನ್ ಬಂದರಿನಲ್ಲಿ ನಿಂತಿದ್ದ ಚಹಾದ ಹಡಗುಗಳನ್ನು ಲೂಟಿ ಮಾಡಿ ಚಹಾವನ್ನು ಸಮುದ್ರಕ್ಕೆ ಎಸೆದು ಹಾಳು ಮಾಡಿದರು. ಇದು ‘ಬೋಸ್ಟನ್ ಟೀ ಪಾರ್ಟಿ’ ಎಂದು ಅಮೆರಿಕಾದ ಇತಿಹಾಸದಲ್ಲಿ ಪ್ರಸಿದ್ಧವಾಗಿದೆ. ಅಮೆರಿಕಾನ್‌ರ ಕ್ರಾಂತಿಯಿಂದ ಧೃತಿಗೆಟ್ಟ ಇಂಗ್ಲೆಂಡ್ ಸರಕಾರ ಬೋಸ್ಟನ್ ಬಂದರನ್ನು ಮುಚ್ಚಿತಲ್ಲದೇ ಮೆಸ್ಸಾಚುಸೆಟ್ಸ್ ವಸಾಹತುವನ್ನು ನೇರವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಬೋಸ್ಟನ್ ಘಟನೆಯ ಪ್ರತೀಕಾರವಾಗಿ ಲಾರ್ಡ್ ನಾರ್ತ್ ಕೆಲವು ಬಲಾತ್ಕಾರದ ಶಾಸನಗಳನ್ನು ಜಾರಿಗೊಳಿಸಿದನು. ಇದರಿಂದ ಪರಿಸ್ಥಿತಿ ಮತ್ತಷ್ಟು  ಬಿಗಡಾಯಿಸಿ ವಿಷಮ ಸ್ಥಿತಿಯನ್ನು ತಲುಪಿತು. ವಸಾಹತುಗಳಲ್ಲಿನ ಫ್ರೆಂಚ್ ಮತ್ತು ಅಮೆರಿಕಾದ ವಸಾಹತುಗಾರರ ಮಧ್ಯೆ ಬಿರುಕು ಹುಟ್ಟಿಸಲು ಬ್ರಿಟಿಷ್ ಸರಕಾರವು ಕುತಂತ್ರಗಳನ್ನು ಹೆಣೆಯಲಾರಂಭಿಸಿತು. ಅಮೆರಿಕೆಯ ಜನತೆಯ ಮನೋಭಾವನೆಗಳಿಗೆ ಹೊಂದಲಾರದ ಹಾಗೂ ತನ್ನ ಇಚ್ಛೆಯ ವಿರುದ್ಧವಾಗಿದ್ದ ರೋಮನ್ ಕ್ಯಾಥೊಲಿಕ್ ಪಂಥವನ್ನು ಅನುಸರಿಸಲು ಫ್ರೆಂಚರಿಗೆ ಅನುಕೂಲ ಮಾಡಿಕೊಡುವ ಮೂಲಕ ವಸಾಹತುಗಳಲ್ಲಿ ಅಶಾಂತಿಯನ್ನು ಹುಟ್ಟಿಹಾಕಿತು. ಅಮೆರಿಕಾದಲ್ಲಿದ್ದ ವಸಾಹತುಗಾರರ ಮನೋಭಾವನೆಗಳನ್ನು ಕೆರಳಿಸಲು ಇಂಗ್ಲೆಂಡ್ ಸರಕಾರ ಬೇರೆ ಬೇರೆ ಬಗೆಯ ಶಾಸನಗಳನ್ನು ಜಾರಿಗೊಳಿಸುವುದರ ಮೂಲಕ ವಸಾಹತುಗಾರರನ್ನು ಮತ್ತೆ ಮತ್ತೆ ಗಾಯಗೊಳಿಸುತ್ತಿತ್ತು. ಇಂಗ್ಲೆಂಡ್ ಸರಕಾರದ ವಿರುದ್ಧ ಜಾರ್ಜಿಯಾ ವಸಾಹತು ಒಂದನ್ನು ಬಿಟ್ಟು ಉಳಿದ ಹನ್ನೆರಡು ವಸಾಹತುಗಳು ಪ್ರತಿಭಟನೆಗಿಳಿದವು. ಕಾಂಗ್ರೆಸ್ ಪ್ರತಿನಿಧಿಗಳು ೧೭೭೪ರ ಸೆಪ್ಟೆಂಬರ್ ೫ರಂದು ಫಿಲಿಡೆಲ್ಫಿ ಯಾದಲ್ಲಿ ಸಭೆ ಸೇರಿದರು. ಅಮೆರಿಕಾದ ಕ್ರಾಂತಿಯ ಇತಿಹಾಸದಲ್ಲಿ ಮೈಲಿಗಲ್ಲು ಎಂದೆನ್ನಿಸಿಕೊಳ್ಳುವ ಈ ಸಭೆಯು ‘ಸ್ವದೇಶಿವಾದ’ವನ್ನು ಪ್ರಬಲವಾಗಿ ಪ್ರತಿಪಾದಿಸಿತು.  ಸ್ಯಾಮ್ ಆಡೆಮ್ಸ್, ಜಾನ್ ಆಡೆಮ್ಸ್, ಪ್ಯಾಟ್ರಿಕ್ ಹೆನ್ರಿ ಹಾಗೂ ರಿಚರ್ಡ್ ಹೆನ್ರಿ ಮುಂತಾದ ಕ್ರಾಂತಿಕಾರರು ಇಂಗ್ಲೆಂಡಿನ ವಸ್ತುಗಳನ್ನು ಬಹಿಷ್ಕರಿಸುವ ಬಹುಮಹತ್ವದ ಕರೆ ನೀಡಿದರು. ಫಿಲಿಡೆಲ್ಫಿಯಾದಲ್ಲಿ ನಡೆದ ಈ ಸಭೆಯನ್ನು ಪ್ರಥಮ ಕಾಂಟಿನೆಂಟಿಲ್ ಕಾಂಗ್ರೆಸ್ ಸಭೆಯೆಂದು ಕರೆಯುತ್ತಾರೆ. ಈ ಸಭೆಯಿಂದ ಹೊರಹೊಮ್ಮಿದ ಪರಿಣಾಮಗಳನ್ನು ಜಾರಿಗೊಳಿಸಲು ತಮಗೆ ಎದುರಾಗಬಹುದಾದ ಅಡಚಣೆಗಳನ್ನು ಎದುರಿಸಲು ವಸಾಹತುಗಾರರು ತಮ್ಮ ಅಧೀನದಲ್ಲಿರುವ ಸ್ವಂತದ ಸೈನ್ಯವನ್ನು ರಚಿಸಿದರು.

ಎರಡನೆಯ ಕಾಂಟಿನೆಂಟಲ್ ಕಾಂಗ್ರೆಸ್ ಸಭೆ

೧೭೭೫ರಲ್ಲಿ ಫಿಲಿಡೆಲ್ಫಿಯಾದಲ್ಲಿ ಜಾರ್ಜಿಯವನ್ನು ಹೊರತುಪಡಿಸಿ ಉಳಿದ ಹನ್ನೆರಡು ವಸಾಹತುಗಳು ಮತ್ತೆ ಸಭೆ ಸೇರಿದವು. ಇದನ್ನು ‘‘ಎರಡನೆಯ ಕಾಂಟಿನೆಂಟಲ್ ಕಾಂಗ್ರೆಸ್ ಸಭೆ’’ ಎಂದು ಕರೆಯುತ್ತಾರೆ. ಈ ಸಭೆಯಲ್ಲಿ ಬೆಂಜಮಿನ್ ಫ್ರಾಂಕ್ಲಿನ್, ಥಾಮಸ್ ಜಫರ್‌ಸನ್‌ರಂಥ ಮೇಧಾವಿಗಳು ಭಾಗವಹಿಸಿದ್ದರು. ಪ್ರತಿಭಟನೆ ಕೈಗೊಂಡ ಹನ್ನೆರಡು ವಸಾಹತುಗಳಲ್ಲಿ ನ್ಯೂ ಇಂಗ್ಲೆಂಡ್  ಪ್ರದೇಶದಲ್ಲಿದ್ದ ವಸಾಹತುಗಳು ಮುಂಚೂಣಿಯಲ್ಲಿ ನಿಂತವು. ಜಾನ್ ಆಡೆಮ್ಸ್‌ನ ಸಲಹೆಯ ಮೇರೆಗೆ ಜಾರ್ಜ್ ವಾಷಿಂಗ್ಟನ್ ಸೈನ್ಯದ ಮುಖ್ಯಾಧಿಕಾರಿಯಾದನು. ಇಂತಹ ಗೊಂದಲಗಳ ನಡುವೆ ತಲೆದೋರಿರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಕೆಲವರು ಇಂಗ್ಲೆಂಡ್ ಸರಕಾರದ ಮೊರೆ ಹೋದರು. ಆದರೆ ಸ್ವಾತಂತ್ರ್ಯವನ್ನು ಪಡೆದೇ ತೀರಬೇಕೆಂಬ ಉಜ್ವಲ ಹೋರಾಟವು ಬಹುತೇಕರ ಮನದಾಳದಲ್ಲಿ ಮೂಡಿದ್ದರಿಂದ ಕ್ರಾಂತಿಯು ನಿರ್ಣಾಯಕವಾದ ಅಂತಿಮ ಹಂತ ತಲುಪಿತು. ಸೈನ್ಯದ ಮುಖಂಡತ್ವ ವಹಿಸಿಕೊಂಡಿದ್ದ ವಾಷಿಂಗ್ಟನ್ ಬ್ರಿಟಿಷರನ್ನು ಬೇರು ಸಹಿತ ಕಿತ್ತೊಗೆದನು. ಅಸಹಾಯಕರಾದ ಬ್ರಿಟಿಷರು ಬೋಸ್ಟನ್ ಬಂದರು ತೆರವು ಮಾಡಿ ಮತ್ತೆ ನ್ಯೂಯಾರ್ಕನ್ನು ಹಿಡಿದುಕೊಂಡರು. ಇದಾವುದನ್ನು ಲೆಕ್ಕಿಸದ ಕಾಂಗ್ರೆಸ್ ೧೭೭೬ನೆಯ ಜುಲೈ ೪ರಂದು  ಅಮೆರಿಕಾದ ಸ್ವಾತಂತ್ರ್ಯವನ್ನು ಘೋಷಿಸಿತು. ಶ್ರೇಷ್ಠ ಚಿಂತಕರಾದ ಥಾಮಸ್ ಜಫರ್‌ಸನ್ ಹಾಗೂ ಥಾಮಸ್ ಪೇಯಿನ್ ಇಬ್ಬರೂ ‘ಉದಾರ ಆದರ್ಶ’ವನ್ನು(ಲಿಬರಲ್ ಐಡಿಯಲಿಸಂ) ಪ್ರಚಾರ ಮಾಡಿದರು. ಪೇಯಿನ್‌ನ ‘‘ಕಾಮನ್ ಸೆನ್ಸ್’’ ಪತ್ರಿಕೆ ಹೆಸರಿಗೆ ತಕ್ಕಂತೆ ಕಾರ್ಯ ನಿರ್ವಹಿಸಿತು. ಜಫರ್‌ಸನ್‌ನ ‘‘ಘೋಷಣಾ ಪತ್ರ’’ವನ್ನು ಎಲ್ಲ ವಸಾಹತುಗಳಲ್ಲಿ ಸಾರಲಾಯಿತು. ಒಟ್ಟಾರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಂದು ಗಟ್ಟಿಯಾದ ತಳಹದಿಯನ್ನು ಅಮೆರಿಕಾನ್ನರು ಕ್ಷಿಪ್ರವಾದ ಇಂಥ ಕ್ರಾಂತಿಯ ಮೂಲಕ ಈ ಜಗತ್ತಿಗೆ ನೀಡಿದರು. ಅನೇಕ ವರ್ಷಗಳ ಕಾಲ ನಡೆದ ಇಂಥ ಅನಿಶ್ಚಿತತೆ ಹಾಗೂ ಗೊಂದಲದ ರಾಜಕೀಯದಲ್ಲಿ ತಪ್ಪು ಲೆಕ್ಕಾಚಾರದಿಂದ ಕೂಡಿದ ಕಾಮಿಂಗಗಳನ್ನು ಬ್ರಿಟಿಷ್ ಸೈನ್ಯ ಉರುಳಿಸಿತು. ಜಾರ್ಜ್ ವಾಷಿಂಗ್ಟನ್‌ನ ಸೈನ್ಯದ ಎದುರಿಗೆ ಅಸಹಾಯಕವಾದ ಬ್ರಿಟಿಶ್ ಸೈನ್ಯ ಶರಣಾಯಿತು. ಶಾಶ್ವತವಾದ ಇಂಥ ಸೋಲಿಗೆ ಇಂಗ್ಲೆಂಡ್‌ನ ರಾಜಪ್ರಭುತ್ವದ ಸಹಕಾರ ಸಕಾಲದಲ್ಲಿ ದೊರೆಯದೆ ಕಂಪನಿ ಸರಕಾರ ಸೋಲುವಂತಾಯಿತು. ಕ್ರಾಂತಿಯ ಯಶಸ್ವಿಯಿಂದಾಗಿ ೧೭೮೧ನೆಯ ಆಕ್ಟೋಬರ್ ೧೯ರಲ್ಲಿ ಕಾರನ್‌ವಾಲೀಸನ ನೇತೃತ್ವದ ಬ್ರಿಟಿಷ್ ಸೈನ್ಯ ಅಮೆರಿಕಾನ್‌ರಿಗೆ ಶರಣಾಗುವುದರೊಂದಿಗೆ ಅಮೆರಿಕಾದ ಸ್ವಾತಂತ್ರ್ಯಕ್ಕೆ ನಾಂದಿ ಹಾಡಿತು. ಅಲ್ಲದೇ ಮತ್ತೆ ಅಮೆರಿಕಾದ ಕಡೆಗೆ ಬ್ರಿಟಿಶ್ ಸೈನ್ಯ ತಲೆ ಹಾಕಲಿಲ್ಲ.

೧೭೮೩ರಲ್ಲಿ ಪ್ಯಾರಿಸ್‌ನಲ್ಲಾದ ಒಪ್ಪಂದದಿಂದ ಅಮೆರಿಕಾನ್ನರು ಅನೇಕ ಹಕ್ಕುಗಳನ್ನು ಪಡೆದರು. ಇಂಥ ಸಂದರ್ಭಗಳಲ್ಲಿ ಬ್ರಿಟಿಷ್ ಮತ್ತು ಫ್ರೆಂಚ್ ಸರಕಾರದ ದುರುದ್ದೇಶವನ್ನು ನಯವಾಗಿ ಧಿಕ್ಕರಿಸಿ ಯೋಜನೆಯನ್ನು ಒಪ್ಪಲಾಯಿತು. ಕೆಲವು ಸಲ ಒತ್ತಾಯಪೂರ‌್ವಕವಾಗಿ ಹೇರಿದ ಸಂಧಾನಗಳನ್ನು ಕೆಲವು ಕಾರಣಗಳಿಗಾಗಿ ಒಲ್ಲದ ಮನಸ್ಸಿನಿಂದ ಒಪ್ಪಿ ಸಮಸ್ಯೆಯ ತೀವ್ರತೆಯನ್ನು ಕಡಿಮೆಗೊಳಿಸಿಕೊಳ್ಳಲಾಯಿತು. ಒಟ್ಟಾರೆ ಕ್ರಾಂತಿಯ ಲಾಭ ಪಡೆದು ಅಮೆರಿಕಾದ ವಸಾಹತುಗಳು ಆಂತರಿಕವಾಗಿ ಹಾಗೂ ಬಾಹ್ಯವಾಗಿ ಯುರೋಪಿನ ಸಾರ್ವ ಭೌಮತ್ವದಿಂದ ಬಿಡಿಸಿಕೊಂಡು ಸ್ವಾತಂತ್ರ್ಯವನ್ನು ಘೋಷಿಸಿಕೊಂಡವು.

ಧರ್ಮವನ್ನು ರಾಜಕೀಯ ಆಡಳಿತದಿಂದ ದೂರ ಇಡುವ ನಿರ್ಣಯಗಳನ್ನು ಕೈಗೊಂಡ ಅಮೆರಿಕಾನ್ನರು ಕೃಷಿ, ಕೈಗಾರಿಕೆ, ಭೂ ಒಡೆತನ ಹಾಗೂ ಶಿಕ್ಷಣದಲ್ಲಿ ಹೊಸ ಬಗೆಯ ವಿಚಾರ ಕ್ರಮಗಳನ್ನು ಅನುಮೋದಿಸಿದರು. ಪ್ರಜಾಪ್ರಭುತ್ವದ ಮಾದರಿಗೆ ಹೊಂದಿಕೊಳ್ಳ ಬಹುದಾದ ಹಕ್ಕುಗಳನ್ನು ಎತ್ತಿಹಿಡಿದು ಪ್ರತಿ ವಸಾಹತುಗಳು ತಮ್ಮದೇ ಆದ ಸಂವಿಧಾನ ವನ್ನು ಸಿದ್ಧಪಡಿಸಿಕೊಂಡವು. ತಮ್ಮ ಅನುಕೂಲಕ್ಕೆ ತಕ್ಕಂತೆ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳನ್ನು ರೂಪಿಸಿಕೊಂಡವು. ಅಲ್ಲದೇ ಎಲ್ಲಕ್ಕಿಂತ ಮುಖ್ಯವಾಗಿ ವಿಶ್ವದಲ್ಲಿಯೇ ಮೊಟ್ಟಮೊದಲಿಗೆ ‘ಲಿಖಿತವಾದ ಸಂವಿಧಾನವನ್ನು’  ಅಮೆರಿಕಾನ್ನರು ಸಿದ್ಧಪಡಿಸಿಕೊಂಡು ಜಾರಿಗೊಳಿಸಿದರು. ಆದರೆ ಒಕ್ಕೂಟ ಸರಕಾರ ರಚಿಸಲು ಎಲ್ಲ ವಸಾಹತುಗಳು ಒಮ್ಮತಕ್ಕೆ ಬರಲು ಮೀನಾಮೇಷದ ಧೋರಣೆಗಳನ್ನು ತಾಳಿದವು. ಈ ನಿಟ್ಟಿನಲ್ಲಿ ಅಮೆರಿಕಾದ ಕಾಂಗ್ರೆಸ್ ಹೆಚ್ಚಿನ ಮುತುವರ್ಜಿ ವಹಿಸಿ ಒಕ್ಕೂಟ ಸರಕಾರವನ್ನು ರಚಿಸಿಕೊಂಡು ಯು.ಎಸ್.ಎ. ಎಂಬ ಹೆಸರಿನ ಹೊಸ ದೇಶ ಉದಯವಾಗಲು ಕಾರಣವಾಯಿತು.

ನವೀನವಾಗಿ ಹುಟ್ಟಿಕೊಂಡ ಈ ದೇಶವು ವ್ಯಾವಹಾರಿಕ ಸ್ವಾತಂತ್ರ್ಯತೆಯ ಕಾರಣಗಳಿಂದಾಗಿ ಮಾತ್ರ ತಾತ್ಕಾಲಿಕ ಹೊಂದಾಣಿಕೆಯನ್ನು ಮಾಡಿಕೊಂಡಿತು. ನಂತರ ಹದಿಮೂರು ವಸಾಹತುಗಳು ಒಂದಾಗಿದ್ದವೇ ಹೊರತು ಅವುಗಳಿಗೆ ದೀರ್ಘಕಾಲದ ಯಾವೊಂದು ಕಾರ್ಯಯೋಜನೆಯೂ ಇರಲಿಲ್ಲ. ಪ್ರತಿಯೊಂದು ವಸಾಹತು ಒಕ್ಕೂಟವು ಪ್ರತ್ಯೇಕ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳನ್ನು ಹೊಂದಿದ್ದ ಸ್ವತಂತ್ರ ರಾಷ್ಟ್ರ ಗಳಂತಿದ್ದವು. ಕಾಂಗ್ರೆಸ್ ಕೇವಲ ಹೆಸರಿಗೆ ಮಾತ್ರ ಕಾರ್ಯ ನಿರ್ವಹಿಸುತ್ತಿತ್ತು. ಇದಕ್ಕೆಲ್ಲ ಕಾರಣವೆಂದರೆ ಇದೇ ನೆಪದಲ್ಲಿ ಪೂರ್ಣ ಪ್ರಮಾಣದ ಅಧಿಕಾರ ಪಡೆದು ಕಾಂಗ್ರೆಸ್ ಮತ್ತೆ ಏಕಚಕ್ರಾಧಿಪತ್ಯ ಸ್ಥಾಪಿಸಿ ಹಳೆಯ ವ್ಯವಸ್ಥೆ ಮುಂದುವರಿಸಬಹುದಾದ ಭಾವನೆ ಹೆಚ್ಚಿನ ಅಮೆರಿಕಾದ ಸಾಧ್ಯಾಸಾಧ್ಯತೆಗಳು ಮುಖಂಡರಲ್ಲಿ ಹಾಗೂ ಜನರಲ್ಲಿ ಮೂಡಿತ್ತು. ಆದರೆ ಇದೇ ಕಾಲಕ್ಕೆ ತಲೆದೋರಿದ್ದ ಸಮಸ್ಯೆಯೆಂದರೆ ಹೊಸದಾಗಿ ರಚನೆಗೊಂಡಿದ್ದ ಒಕ್ಕೂಟದ ಅತಂತ್ರ ಸ್ಥಿತಿಯು ಸಹ ಯಾವುದೇ ಬಾಹ್ಯ ಶಕ್ತಿಗಳೊಂದಿಗೆ ಎದೆ ಒಡ್ಡಿ ನಿಲ್ಲುವ ಶಕ್ತಿ ಹೊಂದಿರಲಿಲ್ಲ. ಇಂಥ ಎಲ್ಲ ಕ್ಲಿಷ್ಟಗಳನ್ನು ಎದುರಿಸಲು ಒಂದು ಬಲಾಢ್ಯವಾದ ಸರಕಾರ ಬೇಕೆಂಬ ಇಚ್ಛೆಯಿಂದ ೧೭೮೮ರಲ್ಲಿ ಹದಿಮೂರು ವಸಾಹತುಗಳು ಸೇರಿ ರೂಪಿಸಿಕೊಂಡಿದ್ದ ಹೊಸ ಸಂವಿಧಾನದ ಜೊತೆಗೆ ಒಂದು ಸಂಯುಕ್ತ ಸಂಸ್ಥಾನವನ್ನು  ಸ್ಥಾಪಿಸುವಲ್ಲಿ ಯಶಸ್ವಿಯಾದವು. ಆದರೂ ಇಂಥ ತೀವ್ರತರದ ರಾಜಕೀಯ ಬದಲಾವಣೆಗಳು ಅಮೆರಿಕಾ ದಲ್ಲಿ ಹೆಚ್ಚಿನ ಸಂಘರ್ಷಕ್ಕೆ ಎಡೆಮಾಡಿಕೊಟ್ಟವು. ಮುಖ್ಯವಾಗಿ ಪ್ರಜಾಪ್ರಭುತ್ವ ವಾದಿಗಳ ಹಾಗೂ ಶ್ರೀಮಂತರ ಮನೋಭಾವನೆಗಳಿಂದ ರೂಪುಗೊಂಡ ಪ್ರಭುತ್ವದ ಪ್ರತಿಪಾದಕರ ಮಧ್ಯ ಕಲಹಗಳು ಪ್ರಾರಂಭವಾದವು. ಥಾಮಸ್ ಜೆಫರಸನ್, ಹೆನ್ರಿ ಆಡೆಮ್ಸ್ ಹಾಗೂ ಜಾರಸನ್ ಅವರಂಥ ಪ್ರಗತಿಪರವಾದಿಗಳು ವಸಾಹತುಗಳಲ್ಲಿನ ಅಶಕ್ತ ಜನತೆಯ ಬೆನ್ನೆಲುಬಾಗಿ ನಿಂತರು. ಸ್ವಾತಂತ್ರ್ಯ ಹಾಗೂ ಎಲ್ಲ ಜನರ ಹಕ್ಕುಗಳ ಮಾನ್ಯತೆಗೆ ಮನ್ನಣೆ ಕೊಡುವ ರಾಜ್ಯ ಮಾತ್ರ ನಮಗೆ ಬೇಕು ಎಂಬ ಪ್ರಬಲ ವಾದವನ್ನು ಪ್ರತಿಪಾದಿಸಿದರು. ಆದರೆ ಹ್ಯಾಮಿಲ್ಟನ್‌ನಂಥ ಪ್ರಜಾಪ್ರಭುತ್ವ ವಾದಿಗಳು ಅಶಕ್ತ ಹಾಗೂ ನಿರಕ್ಷರಿಗಳಿಂದ ನಿರ್ವಹಿಸಲ್ಪಡುವ ರಾಜ್ಯದ ಉದ್ಧಾರ ಖಂಡಿತ ಸಾಧ್ಯವಾಗಲಾರ ದೆಂದು ಪ್ರತಿವಾದ ಮಂಡಿಸಿದನು. ಶ್ರೀಮಂತವಾದಿಗಳು(ಫೆಡರಲಿಸ್ಟ್‌ಗಳು) ಸಾಂಪ್ರದಾಯಿಕ ಇಂಗ್ಲೆಂಡನ್ನು ದಾಟಿ ವಿಚಾರ ಮಾಡುವ ಕ್ರಮಕ್ಕೆ ಅಡ್ಡಗೋಡೆ ಹಾಕಿಕೊಂಡರು. ಅಮೆರಿಕಾದ ಜಮೀನನ್ನು ಸಣ್ಣ ಹಿಡುವಳಿದಾರರಿಗೆ ಹಂಚಬೇಕು ಹಾಗೂ ಸರಕಾರವೇ ಎಲ್ಲ ಜನರ ಅಭಿವೃದ್ದಿಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕೆಂಬುದು ಉದಾರವಾದಿಗಳ ನೀತಿ ಯಾಗಿತ್ತು. ಶ್ರೀಮಂತವಾದಿಗಳು(ಫೆಡರಲಿಸ್ಟ್‌ಗಳು) ಖಾಸಗಿ ಒಡೆತನದಲ್ಲಿ ಹೆಚ್ಚಿನ ಭೂಮಿ ಇರಬೇಕು ಹಾಗೂ ಬೆಳವಣಿಗೆಗಾಗಿ ಸಾಲ ಮನ್ನಾ ಮಾಡಿ ಹೊರ ದೇಶಗಳೊಂದಿಗೆ ಲಾಭದಾಯಕ ವ್ಯಾಪಾರ ಮಾಡಲು ಎಲ್ಲ ತರಹದ ಅನುಕೂಲಗಳನ್ನು ಕಾನೂನುಗಳ ಮೂಲಕ ಅಧಿಕೃತಗೊಳಿಸಬೇಕೆಂದು ಪ್ರತಿಪಾದಿಸಿದರು.

ಸ್ಥಾನಿಕ ಸರಕಾರಗಳಿಗೆ ಹೆಚ್ಚಿನ ಸ್ವಾಯತ್ತತೆ ಕೊಡಬೇಕು ಹಾಗೂ ನಾಮಮಾತ್ರ ಕೇಂದ್ರ ಸರಕಾರ ಭವಿಷ್ಯದ ಅಮೆರಿಕಾದಲ್ಲಿ ಇರಬೇಕೆಂಬುದು ಒಂದು ವರ್ಗದ ಪ್ರತಿಪಾದನೆಯಾದರೆ, ಇನ್ನೊಂದು ವರ್ಗ ಬಲಾಢ್ಯವಾದ ಕೇಂದ್ರ ಸರ್ಕಾರದ ಮೂಲಕ ವಿದೇಶಾಂಗ, ಕೈಗಾರಿಕೆ, ರಕ್ಷಣೆ ಹಾಗೂ ವಾಣಿಜ್ಯ ವ್ಯಾಪಾರಗಳನ್ನು ನಿಯಂತ್ರಿಸಿ ದೇಶವನ್ನು ಸುವ್ಯವಸ್ಥೆಗೊಳಿಸ ಬೇಕೆಂಬುದಾಗಿತ್ತು. ಈ ಎರಡು ರೀತಿಯ ವಾದ-ಪ್ರತಿವಾದಗಳನ್ನು ಮುಖಾಮುಖಿಗೊಳಿಸಿ ಮೇಳೈಸಿಕೊಂಡು ಅಮೆರಿಕಾ ಸಂಯುಕ್ತ ಸಂಸ್ಥಾನವು ಬಲಾಢ್ಯ ಶಕ್ತಿಯಾಗಿ ಹೊರಹೊಮ್ಮುವ ಪ್ರಯತ್ನದಲ್ಲಿ ತೊಡಗಿತು. ಆದರೆ ಪ್ರತಿಯೊಂದು ರಂಗದಲ್ಲಿ ತಮ್ಮ ಶಕ್ತಿಸಾಮರ್ಥ್ಯಗಳನ್ನು ಸಾಬೀತುಪಡಿಸಿದ್ದ ಶ್ರೀಮಂತ ವರ್ಗಗಳು ಪ್ರಜಾಪ್ರಭುತ್ವವಾದಿಗಳ ವಿಭಿನ್ನ ನಿರ್ಣಯಗಳಿಂದ ಪ್ರಾರಂಭದ ಆಡಳಿತಗಾರರು ನಿಸ್ಸಹಾಯಕರಾದರು. ಉದಾರವಾದಿಗಳ ಬಲವಾದ ಹೊಡೆತಕ್ಕೆ ಪ್ರಭುತ್ವವಾದಿಗಳು ಸಹಕರಿಸಲೇಬೇಕಾದಂತ ಸ್ಥಿತಿ ನಿರ್ಮಾಣವಾಯಿತು. ಈ ದಿಸೆಯಲ್ಲಿ ಹಲವಾರು ಸುಧಾರಣೆಗಳನ್ನು  ಸಂಯುಕ್ತ ಸಂಸ್ಥಾನಗಳಲ್ಲಿ ತರಲಾಯಿತು. ಭೂಸುಧಾರಣೆಗಳ ಕಾಯ್ದೆ ಜಾರಿ ಮಾಡುವುದರ ಮೂಲಕ ಇಂಗ್ಲೆಂಡ್ ಸರಕಾರಕ್ಕೆ ನಿಷ್ಠರಾಗಿದ್ದವರಿಂದ ಭೂಮಿಯನ್ನು ಕಸಿದುಕೊಂಡು ಆಯಾ ರಾಜ್ಯ ಸರಕಾರಗಳೇ ಸ್ವಾಧೀನಪಡಿಸಿಕೊಂಡವು.

ಆದರೆ ಉದಾರವಾದಿಗಳ ಮನಸೇಚ್ಛೆಯಂತೆ ಭೂಮಿ ಹಂಚಿಕೆಯಾಗಲಿಲ್ಲ. ವಂಶ ಪಾರಂಪರ್ಯವಾಗಿ ಭೂಮಾಲೀಕರಿಗೆ ಭೂಮಿಯು ದೊರೆಯಲಾರಂಭಿಸಿತು. ಜೆಫರ್‌ಸನ್ ಹಾಗೂ ಮ್ಯಾಡಿಸನ್ ಅವರಂಥ ಪ್ರಗತಿವಾದಿಗಳು ಜಾತ್ಯತೀತ ರಾಷ್ಟ್ರ ಕಟ್ಟುವ ಗುರಿಯಲ್ಲಿ ಧರ್ಮವನ್ನು ರಾಜಕೀಯದಿಂದ ತಟಸ್ಥಗೊಳಿಸಬೇಕೆಂಬ ಕಾನೂನು ಕಟ್ಟಳೆಗಳನ್ನು ರಾಜ್ಯ ಸರಕಾರಗಳು ಶಾಸನಾಂಗಗಳ ಮೂಲಕ ಜಾರಿಗೆ ತರುವಂತೆ ಸೂಚಿಸಿದರು. ಆದರೆ ಇಂಥ ಜಾತ್ಯತೀತ ನೀತಿಗಳನ್ನು ಕೆಲವು ರಾಜ್ಯಗಳು ಒಪ್ಪಲಿಲ್ಲ. ಜೆಫರ್‌ಸನ್ನನು ಗುಲಾಮಗಿರಿಯಂಥ ಅಮಾನವೀಯ ಪದ್ಧತಿಯನ್ನು ಕೈಬಿಡಬೇಕೆಂದು ಬಲವಾದ ಒತ್ತಾಯ ತಂದನು. ಇದನ್ನು ಅನುಸರಿಸಿದ ಉತ್ತರ ರಾಜ್ಯಗಳು ಶಾಸನಗಳ ಮೂಲಕ ಗುಲಾಮಗಿರಿಯು ಅಪರಾಧವೆಂದು ನಿರ್ಣಯಿಸಿದವು. ಆದರೆ ಗುಲಾಮಗಿರಿಯಂತಹ ಪದ್ಧತಿಯಿಂದಲೇ ಶ್ರೀಮಂತವಾದ ದಕ್ಷಿಣದ ರಾಜ್ಯಗಳು ಇಂತಹ ಸುಧಾರಣೆಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿದವು.

ಸಂದಿಗ್ಧಕಾಲ

ಜಾನ್ ಕೆನಸನ್ ರೂಪಿಸಿದ ಸಂವಿಧಾನಕ್ಕೆ ಹಲವಾರು ತಿದ್ದುಪಡಿಗಳನ್ನು ತರುವುದರ ಮೂಲಕ ಬಲಹೀನ ಕೇಂದ್ರ ಸರಕಾರವನ್ನು ನಿರ್ಮಿಸಲಾಯಿತು. ವಿದೇಶಿನೀತಿ ಹಾಗೂ ರಕ್ಷಣೆಯನ್ನುಳಿದ ಎಲ್ಲ ವಾಣಿಜ್ಯ ಮತ್ತು ತೆರಿಗೆ ಸಂಗ್ರಹ ಅಧಿಕಾರಗಳನ್ನೂ ರಾಜ್ಯ ಸರಕಾರಗಳೇ ನಿರ್ವಹಿಸುವಂತೆ ಮಾಡಲಾಯಿತು. ಕಾರ್ಯಾಂಗ ಮತ್ತು ನ್ಯಾಯಾಂಗಗಳು ಪ್ರತ್ಯೇಕಗೊಳ್ಳಲಿಲ್ಲ. ಒಟ್ಟಾರೆ ಇದೊಂದು ಅನುಕೂಲಸಿಂಧು ರಾಜಕೀಯ ಒಪ್ಪಂದದಂತೆ ಇತ್ತು. ಇದನ್ನು ಅಮೆರಿಕಾದ ರಾಜಕೀಯ ಪರಿಸ್ಥಿತಿಯ ‘ಸಂದಿಗ್ಧಕಾಲ’ ಎಂದು ಕರೆಯುತ್ತಾರೆ. ಇದೇ ವೇಳೆಗೆ ಮೆಸ್ಸಾಚುಸೆಟ್ಸ್ ಪ್ರಾಂತದಲ್ಲಿ ಡೇನಿಯಲ್ ಷೇಸ್ ಎಂಬಾತನ ನಾಯಕತ್ವದಲ್ಲಿ ಪ್ರಸ್ತುತ ಸರಕಾರಗಳು ಅನುಸರಿಸುತ್ತಿದ್ದ ಆರ್ಥಿಕ ನೀತಿಗಳ ವಿರುದ್ಧ ದಂಗೆ ಹೂಡಿದರು. ರಾಜನಿಷ್ಠರಿಂದ ವಶಪಡಿಸಿಕೊಂಡ ಭೂಮಿಯನ್ನು ಎಲ್ಲರಿಗೂ ಸಮನಾಗಿ ಹಂಚಿಕೊಡಬೇಕು ಎಂಬುದು ಇವರ ಪ್ರಮುಖ ಬೇಡಿಕೆಯಾಗಿತ್ತು. ಅಲ್ಲದೇ ಅನೇಕ ರಾಜ್ಯಗಳು ಕೇಂದ್ರವನ್ನು ಮಾನ್ಯ ಮಾಡದೇ ಪರಸ್ಪರ ತಾವೇ ತಂಟೆ-ತಕರಾರುಗಳಿಗೆ ಇಳಿದಿದ್ದವು. ಒಟ್ಟಿನಲ್ಲಿ ಒಂದು ಬಲಯುತವಾದ ಕೇಂದ್ರ ಶಾಸನ ಎಲ್ಲ ವರ್ಗದವರಿಗೆ ಜರೂರಾಗಿ ಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಗಟ್ಟಿಯಾದ ಸಂವಿಧಾನದ ರಚನೆಯ ಅವಶ್ಯಕತೆಯ ಹೆಚ್ಚಿನಾಂಶ ಅಮೆರಿಕಾನ್ನರಲ್ಲಿ ಮೂಡಿತ್ತು.

ಪಶ್ಚಿಮ ಭಾಗಗಳಲ್ಲಿ ರಾಜ್ಯ ವಿಸ್ತರಣೆಗಾಗಿ ವಸಾಹತುಗಳು ಕದನಕ್ಕಿಳಿದವು. ಅಶಕ್ತವಾದ ಅಮೆರಿಕಾದ ಕಾಂಗ್ರೆಸ್ ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಆದರೆ ಮೇರಿಲ್ಯಾಂಡ್ ವಸಾಹತು ಕಾಂಗ್ರೆಸ್ಸನ್ನು ಮಾನ್ಯ ಮಾಡಿ ಹೊಸದಾಗಿ ಶೋಧನೆ ಮಾಡಿದ ಭೂ  ಹಂಚಿಕೆಯನ್ನು ಕೇಂದ್ರಕ್ಕೆ ಬಿಡುವುದು ಸೂಕ್ತವಾದುದೆಂದು ನಿರ್ಣಯಿಸಿತು. ಇದರ ಸಂಪೂರ್ಣ ಲಾಭ ಪಡೆದ ಕೇಂದ್ರಸರಕಾರ ಕಾನೂನುಗಳ ಮೂಲಕ ಪ್ರಗತಿದಾಯಕ ಕಾರ್ಯಗಳನ್ನು ನಿರ್ವಹಿಸಲಾರಂಭಿಸಿತು. ರಾಜ್ಯಗಳ ಮಧ್ಯೆ ಇದ್ದಂತಹ ವ್ಯಾಜ್ಯಗಳನ್ನು ಬಗೆಹರಿಸಿತು. ಪರಿಣಾಮವಾಗಿ ಓಹಾಯೊ, ಇಂಡಿಯಾನಾ, ಇಲಿನಾಯ್ಸ, ಮಿಷಿಗನ್ ಮತ್ತು ವಿಸ್ಕಾನ್ಸಿನ್ ಎಂಬ ಹೊಸ ರಾಜ್ಯಗಳು ಅಸ್ತಿತ್ವಕ್ಕೆ ಬಂದವು. ಜಾನ್ ಜೇ ಅಂಥ ವಿದೇಶಾಂಗ ವ್ಯವಹಾರ ಸಚಿವನ ಅತಾರ್ಕಿಕ ಒಪ್ಪಂದದಿಂದ ಒಕ್ಕೂಟ ಸರಕಾರ ಹಾಗೂ ಪಶ್ಚಿಮದ ವಸಾಹತು ವಲಸೆಗಾರರಲ್ಲಿ ಮತ್ತೆ ಭಿನ್ನಾಭಿಪ್ರಾಯಗಳು ತಲೆದೋರಿದವು. ಇಂಥ ಅನೇಕ ಬಿಕ್ಕಟ್ಟುಗಳನ್ನು ಪರಿಹರಿಸುವಲ್ಲಿ ಎಡವಿದ ಕೇಂದ್ರ ಸರಕಾರ ಶಕ್ತಿಯಿಲ್ಲದ ದೇಹದಂತಾಗಿತ್ತು. ಫೆಡರಲಿಸ್ಟರು (ಸಂಯುಕ್ತ ರಾಷ್ಟ್ರವಾದಿಗಳು) ಬಲವಾದ ಕೇಂದ್ರವನ್ನು ಸ್ಥಾಪಿಸಿಯೇ ತೀರಬೇಕೆಂಬ ಪ್ರಯತ್ನಗಳಲ್ಲಿ ತೀವ್ರವಾಗಿ ತೊಡಗಿದ್ದರು. ಆದರೆ ಉದಾರವಾದಿಗಳು ಇದರ ವಿರುದ್ಧವಾಗಿದ್ದರು. ಶ್ರೀಮಂತರಾದ ಮ್ಯಾಡಿಸನ್ ಹಾಗೂ ಹ್ಯಾಮಿಲ್ಟನ್ ಕಾಂಗ್ರೆಸ್‌ನ ಅಧಿಕಾರವನ್ನು ನಿಯಂತ್ರಿಸುತ್ತಿದ್ದ ಲೀ ಆಡೆಮ್ಸ್‌ನನ್ನು  ಕೆಳಗಿಳಿಸಿ, ಸಂಪ್ರದಾಯವಾದಿಗಳನ್ನು ಅಧಿಕಾರಕ್ಕೆ ತಂದರು. ಆದರೆ ಇವರು ಸೂಚಿಸಿದ ತಿದ್ದುಪಡಿಗಳು ಬಹುಮತದ ಕೊರತೆಯಿಂದಾಗಿ ಮುಂಚಿತವಾಗಿಯೇ ಶಾಸನ ಸಭೆಯ ಚರ್ಚೆಗಳಲ್ಲಿ ಬಿದ್ದುಹೋದವು. ಆದರೆ ಇದೇ ವೇಳೆಗೆ ಎಲ್ಲರಿಗೂ ಕೇಂದ್ರೀಕೃತ ರಾಷ್ಟ್ರೀಯ ಸರಕಾರದ ಅವಶ್ಯಕತೆ ತುಂಬಾ ಜರೂರಾಗಿತ್ತು. ಜಾನ್ ಹ್ಯಾಮಿಲ್ಟನ್‌ನ ಮುತುವರ್ಜಿಯಿಂದ ರಾಷ್ಟ್ರೀಯ ಸರಕಾರ ಸ್ಥಾಪಿಸುವ ಗುರಿ ಇಟ್ಟುಕೊಂಡು ಎಲ್ಲ ಪ್ರಾಂತಗಳ ಕಮೀಷನರರು (ಪ್ರತಿನಿಧಿಗಳು), ೧೭೮೯ನೆಯ  ಮೇ ೨೫ರಲ್ಲಿ ಫಿಲಿಡೆಲ್ಫಿಯಾದಲ್ಲಿ ಸಭೆ ಸೇರಿದರು. ಜಾರ್ಜ್ ವಾಷಿಂಗ್ಟನ್ ಇದರ ಅಧ್ಯಕ್ಷತೆಯನ್ನು ವಹಿಸಿದ್ದನು. ಮ್ಯಾಡಿಸನ್ ತನ್ನ ತೀವ್ರವಾದ ಕಾಳಜಿಯಿಂದ ಕೇಂದ್ರ ಸರಕಾರದ ಅಸ್ತಿತ್ವವನ್ನು ಪ್ರಬಲವಾಗಿ ಪ್ರತಿಪಾದಿಸಿದನು. ಆದರೆ ರಾಜ್ಯಗಳು ತಮ್ಮ ಹಕ್ಕುಗಳನ್ನು ಬಿಟ್ಟುಕೊಡುವವರೆಗೆ ಬಲಾಢ್ಯವಾದ ಕೇಂದ್ರ ಸರಕಾರದ ರಚನೆ ಅಸಾಧ್ಯವೆಂಬುದು ಹ್ಯಾಮಿಲ್ಟನ್‌ನ ಅಭಿಪ್ರಾಯವಾಗಿತ್ತು.

ರಚನೆಯಾಗಬಹುದಾದ ಸರಕಾರದ ಬಹುಮುಖ್ಯ ಗುರಿಗಳೆಂದರೆ: ಶ್ರೀಮಂತರಿಂದ ಬಡವರ ಶೋಷಣೆ ಆಗಬಾರದು ಹಾಗೂ ಬಡವರಿಂದ ಶ್ರೀಮಂತರ ಆಸ್ತಿಗಳ ಲೂಟಿಯನ್ನು ತಡೆಯುವ ಪ್ರಮುಖ ಜವಾಬ್ದಾರಿಯಾಗಿತ್ತು ಹಾಗೂ ಅದಕ್ಕಾಗಿ ಬಲಿಷ್ಠ ಕೆಂದ್ರ ಸರಕಾರದ ರಚನೆ ಮಾತ್ರ ಉಳಿದಿರುವ ಮಾರ್ಗಗಳೆಂದು ಮ್ಯಾಡಿಸನ್ ಪ್ರತಿಪಾದಿಸಿದನು. ಈ ಹೋರಾಟದಲ್ಲಿ ನ್ಯೂಟನ್‌ನಂಥ ವಿಜ್ಞಾನಿಗಳ ಹಾಗೂ ಮಾಂಟೆಸ್ಕೊರಂಥ ತತ್ವಜ್ಞಾನಿಗಳಿಂದ ಅಮೆರಿಕಾನ್ನರು ಪ್ರಭಾವಿತರಾಗಿ ರಾಷ್ಟ್ರ ಕಟ್ಟುವ ನಿರ್ಧಾರ ಮಾಡಿದರು. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಸ್ವತಂತ್ರತೆಯನ್ನು ಎಲ್ಲ ಪ್ರತಿನಿಧಿಗಳು ಅನುಮೋದಿಸಿದರು. ಆದರೆ ಭೌಗೋಳಿಕ ವಿಸ್ತರಣೆಯ ದೃಷ್ಟಿಯಿಂದ ರಾಜ್ಯಗಳು ತಮ್ಮ ಪ್ರತಿನಿಧಿಗಳ ಆಯ್ಕೆ ಯಲ್ಲಿ ಗೊಂದಲವನ್ನುಂಟುಮಾಡಿಕೊಂಡವು. ತಮ್ಮ ಸ್ವಹಿತಾಸಕ್ತಿಗಳನ್ನು ದೃಷ್ಟಿಯಲ್ಲಿಟ್ಟು ಕೊಂಡು ವರ್ಜೀನಿಯಾ ಹಾಗೂ ನ್ಯೂಜರ್ಸಿ ರಾಜ್ಯಗಳು ತಮ್ಮ ಅನುಕೂಲಕರ ಯೋಜನೆಗಳನ್ನು ಮಾತ್ರ ಮುಂದಿಟ್ಟವು. ನಂತರ ಕೇಂದ್ರದಲ್ಲಿ ಎರಡು ಸಭೆಗಳಿರಬೇಕು ಹಾಗೂ ಅದರ ಪ್ರತಿನಿಧಿಗಳನ್ನು ಜನಸಂಖ್ಯಾಧಾರದ ಮೇಲೆ ಪ್ರತಿನಿಧಿಸುವ ಕಾನೂನುಗಳನ್ನು ರಚಿಸುವ ಒಮ್ಮತಾಭಿಪ್ರಾಯಕ್ಕೆ ಬಂದವು.

ಹಲವು ವರ್ಷಗಳ ಕಾಲ ವಾದ-ಪ್ರತಿವಾದಗಳು ನಡೆದರೂ ಕೊನೆಗೆ ಒಕ್ಕೂಟ ಸರಕಾರದ ಬದಲಾಗಿ ಸಂಯುಕ್ತ ಸರಕಾರ ಅಮೆರಿಕಾದಲ್ಲಿ ಅಂತಿಮವಾಗಿ ಜಾರಿ ಆಯಿತು. ಅಧಿಕಾರಗಳು ಸಂವಿಧಾನಬದ್ಧವಾಗಿ ಕೇಂದ್ರ ಹಾಗೂ ರಾಜ್ಯಗಳ ನಡುವೆ ಹಂಚಲ್ಪಟ್ಟವು. ಕೇಂದ್ರ ಸರಕಾರದ ಶಾಸನಗಳನ್ನು ಹಾಗೂ ನ್ಯಾಯಾಲಯಗಳನ್ನು ರಾಜ್ಯ ಸರಕಾರಗಳು ಮನ್ನಿಸಬೇಕಾಗಿತ್ತು. ಒಂದು ವೇಳೆ ಉಲ್ಲಂಘಿಸಿದರೆ ಆಯಾ ರಾಜ್ಯ ಸರಕಾರಗಳನ್ನೇ ಅದಕ್ಕೆ ಹೊಣೆಗಾರರನ್ನಾಗಿ ಮಾಡುವ ನೀತಿ-ನಿಯಮಗಳನ್ನು ರೂಪಿಸಲಾಯಿತು. ರಕ್ಷಣೆ, ವಿದೇಶಾಂಗ ಹಾಗೂ ಅಂತಾರಾಷ್ಟ್ರೀಯ ವಾಣಿಜ್ಯ ನೀತಿಗಳು ಕೇಂದ್ರದ ಅಧೀನಕ್ಕೊಳಪಟ್ಟವು. ನೋಟುಗಳ ಮುದ್ರಣದ ಹಕ್ಕನ್ನು ಕೇಂದ್ರವೇ ವಹಿಸಿಕೊಂಡಿತು. ಶಾಸನಸಭೆಗೆ ತನ್ನ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕಳುಹಿಸುವುದರ ಮೂಲಕ ಕೇಂದ್ರವನ್ನು ಹಿಡಿತದಲ್ಲಿಟ್ಟು ಕೊಳ್ಳುವಂಥ ಅಧಿಕಾರವನ್ನು ರಾಜ್ಯಕ್ಕೆ ಕೊಡಮಾಡಲಾಗಿತ್ತು.