ಕರಿಯರ ಪ್ರತಿಭಟನೆ

ಜಾಗತಿಕ ಮಟ್ಟದ ರಾಜಕಾರಣದಲ್ಲಿ ಹಲವು ಬಗೆಯ ಆಟಗಳನ್ನಾಡಿ ಏರಿಳಿತಗಳನ್ನು ಕಂಡಿದ್ದರೂ ಅಮೆರಿಕಾ ತನ್ನಲ್ಲಿರುವ ಅಗಾಧ ಸಂಪನ್ಮೂಲಗಳಿಂದ ಹಾಗೂ ಆ ದೇಶದ ಜನತೆಯಲ್ಲಿರುವ ದೃಢಮನಸ್ಸಿನಿಂದ ಜಗತ್ತೇ ಬೆರಗಾಗುವಂತೆ ಕೆಲವು ನೂರು ವರ್ಷಗಳಲ್ಲಿ ಪ್ರಪಂಚದ ಮಹಾಶಕ್ತಿಯಾಗಿ ಬೆಳೆದು ನಿಂತಿತು. ಆದರೆ ಇದೇ ಸಂದರ್ಭಗಳಲ್ಲಿ ಅಮೆರಿಕಾದ ಸಾಮಾಜಿಕ ವ್ಯವಸ್ಥೆಯಲ್ಲಿ ತಲೆದೋರುತ್ತಿದ್ದ ಅನಿಷ್ಟಗಳು ಮಾತ್ರ ಯಾರೂ ಇಷ್ಟಪಡಲಾರದ ರೀತಿಯಲ್ಲಿ ಬೆಳೆದು ನಿಂತವು. ಬಿಳಿಯರು ಮತ್ತು ಕರಿಯರ ಸಮಸ್ಯೆಗಳು ಬಗೆಹರಿಯ ಲಾರದಷ್ಟು ಬ್ರಹ್ಮಾಂಡರೂಪ ತಳೆದವು. ಇವುಗಳಿಗೆಲ್ಲ ಪರಿಹಾರ ಕಂಡುಕೊಳ್ಳಲು ೧೯೬೦-೬೮ರ ದಶಕದಲ್ಲಿ ಅಮೆರಿಕಾದ ಕರಿಯರು ಅಭೂತಪೂರ್ವ ಪ್ರತಿಭಟನೆಗಳನ್ನು ಕೈಗೊಂಡರು. ಮಾರ್ಟಿನ್ ಲೂಥರ್ ಕಿಂಗ್ ಎಂಬ ಸಮಾಜ ಸುಧಾರಕನ ನೇತೃತ್ವದಲ್ಲಿ ನಡೆದ ಅಹಿಂಸಾತ್ಮಕ ರೂಪದ ಪರಿಣಾಮಕಾರಿ ಚಳವಳಿಗಳು ಅಮೆರಿಕಾದ ಆಡಳಿತಕ್ಕೆ ಎಲ್ಲ ಬಗೆಯ ಎಚ್ಚರಿಕೆಯ ಗಂಟೆಯಾದವು. ಸಾಮಾಜಿಕ ನ್ಯಾಯ, ಕರಿಯ ಶಕ್ತಿ, ಕಪ್ಪುತನದಲ್ಲಿರುವ ಹೆಮ್ಮೆ ಇವು ಕರಿಯ ಸಮುದಾಯದ ಧ್ಯೇಯಗಳಾದವು. ಪ್ರಾರಂಭದಲ್ಲಿ ಅಹಿಂಸಾ ರೂಪದಲ್ಲಿದ್ದ ಕರಿಯರ ಹೋರಾಟಗಳು ಕಾಲಾನಂತರ ಹೆಚ್ಚಿನ ತೀವ್ರತೆಯನ್ನು ಪಡೆದು ಭಯ ಹುಟ್ಟಿಸಲಾರಂಭಿಸಿದವು. ಮಾಲ್ಕಂ ಎಕ್ಸ್‌ನ ನೇತೃತ್ವದಲ್ಲಿ ಕಪ್ಪು ಚಿರತೆ ಎಂಬ ಪಕ್ಷ ಪ್ರಾರಂಭವಾಯಿತು. ಒಂದೇ ಕೂಗಿನಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಸೇರುತ್ತಿದ್ದ ಕಪ್ಪು ಜನರು ಸಾರ್ವಜನಿಕ ಬದುಕಿನಲ್ಲಿ ತಮ್ಮನ್ನು ಪರಿಗಣಿಸುವಂತೆ ಹೋರಾಟಗಳನ್ನು ಶುರು ಮಾಡಿದರು. ಇಂಥ ಚಳವಳಿಯ  ಕೇಂದ್ರಗಳು ಮುಖ್ಯವಾಗಿ ಅಮೆರಿಕಾದ ವಿಶ್ವವಿದ್ಯಾಲಯಗಳು, ಅಂಗಡಿ-ಮುಂಗಟ್ಟುಗಳು ಹಾಗೂ ಸಾರ್ವಜನಿಕ ಸ್ಥಳಗಳಾಗಿದ್ದವು. ಪ್ರಾರಂಭದಲ್ಲಿ ಶಾಂತವಾಗಿ ನಡೆದಿದ್ದ ಹೋರಾಟಗಳು ೧೯೬೮ರ ನಂತರ ಇದ್ದಕ್ಕಿದ್ದಂತೆ ತೀವ್ರತೆ ಪಡೆದವು ಹಾಗೂ ಭಾರೀ ಪ್ರಮಾಣದ ಹಿಂಸಾ ರೂಪವನ್ನು ತಾಳಿದವು. ಕೊನೆಗೆ ಸಂಘಟನೆಗಳಲ್ಲಿಯೇ ಒಳಭೇದಗಳು ಪ್ರಾರಂಭವಾಗಿ ಮಾಲ್ಕಂ ಎಕ್ಸ್ ಹಾಗೂ ಮಾರ್ಟಿನ್ ಲೂಥರ್ ಕಿಂಗ್‌ರಂಥ ಪ್ರಮುಖ ನೇತಾರರ ಕೊಲೆಗಳು ನಡೆಯುವುದರ ಮೂಲಕ ಈಗಾಗಲೇ ಪ್ರಾರಂಭಗೊಂಡಿದ್ದ ಈ ಉಗ್ರ ಚಳವಳಿಗಳು ದುರಂತದಲ್ಲಿ ಪರ್ಯವಸಾನಗೊಂಡವು. ಸುಮಾರು ೬-೭ ವರ್ಷಗಳಿಂದ ಇಂಥ ಸಾಮಾಜಿಕ ಅವಘಡಗಳು ಅಮೆರಿಕಾದ ಆಂತರಿಕ ಶಾಂತಿಗೆ ಭಂಗ ತಂದವು. ಅಧ್ಯಕ್ಷ ಜಾನ್ಸನ್ ಇಂಥ ಹಿಂಸಾತ್ಮಕ ಘಟನೆಗಳಿಂದ ತೀವ್ರವಾಗಿ ನೊಂದುಕೊಂಡನು. ಅಲ್ಲದೇ ಪ್ರಗತಿಪರ ಧೋರಣೆಗಳನ್ನು ಹೊಂದಿದ ಬಿಳಿಯ ಸಮುದಾಯದ ಯುವ ಜನಾಂಗ ಸಮಾನತೆಯನ್ನು ಬೋಧಿಸುವ ವಾಮಪಂಥದ ಬಗೆಗೆ ಹೆಚ್ಚಿನ ಒಲವು ತೋರಲಾರಂಭಿಸಿದರು. ಇದು ಅಮೆರಿಕಾದ ಆಂತರಿಕ ಭದ್ರತೆಗೆ ತಲೆನೋವಾಗಿ ಪರಿಣಮಿಸಿತು.

ಜಾನ್ ಎಫ್. ಕೆನಡಿ ಕಾಲದಲ್ಲಿ ಡೆಮೊಕ್ರಾಟಿಕ್ ಪಕ್ಷ ಗಳಿಸಿದ್ದ ಜನತೆಯ ವಿಶ್ವಾಸವು ಅಧ್ಯಕ್ಷ ಲಿಂಡನ್ ಜಾನ್ಸನ್‌ನ ಕಾಲದಲ್ಲಿ ಕರಗಿಹೋಯಿತು. ೧೯೬೮ರ ಮಹಾಚುನಾವಣೆ ಯಲ್ಲಿ ರಿಪಬ್ಲಿಕನ್ ಪಕ್ಷದ ರಿಚರ್ಡ್ ನಿಕ್ಸನ್ ಅಲ್ಪಮತದಿಂದ ಡೆಮಾಕ್ರಾಟಿಕ್ ಪಕ್ಷದ ಹ್ಯೂಬರ್ಟ್ ಹಂಫ್ರಿಯನ್ನು ಸೋಲಿಸಿ ಅಮೆರಿಕಾದ ಹೊಸ ಅಧ್ಯಕ್ಷನಾದನು. ಐಸೆನ್ ಹಾವರ್‌ನ ಆಡಳಿತಾವಧಿಯಲ್ಲಿ ಎರಡು ಅವಧಿಗೆ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದ ನಿಕ್ಸನ್ ಕಾರಣಾಂತರಗಳಿಂದ ಸ್ವಲ್ಪ ಕಾಲ ರಾಜಕೀಯದಿಂದ ದೂರವಾಗಿದ್ದನು. ಆದರೆ ಮತ್ತೆ ರಾಜಕೀಯ ರಂಗದ ಪ್ರವೇಶ ಪಡೆದ ಈತನು ಕಮ್ಯುನಿಸ್ಟ್‌ರ ಬಗೆಗೆ ತಾನು ತಾಳಿದ್ದ ಕಡುವಿರೋಧಿ ನೀತಿಯಿಂದಾಗಿ ಹೆಚ್ಚಿನ ಜನರ ಬೆಂಬಲ ಪಡೆದು ೩೭ನೆಯ ಅಧ್ಯಕ್ಷನಾಗಿ ಆಯ್ಕೆ ಆದನು. ಮರು ಆಯ್ಕೆಯಾದ ಅಧ್ಯಕ್ಷ ನಿಕ್ಸನ್ ಸ್ವಲ್ಪಮಟ್ಟಿಗೆ ಸಂಪ್ರದಾಯಸ್ಥ ನಂಬಿಕೆಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಕಾರ್ಯರೂಪಕ್ಕಿಳಿದನು. ತನ್ನ ಮಂತ್ರಿ ಮಂಡಲ ದಲ್ಲಿಯೂ ಅಂಥ ವ್ಯಕ್ತಿಗಳನ್ನೇ ಆಯ್ಕೆ ಮಾಡಿಕೊಂಡನು. ಕಾನೂನಿನಲ್ಲಿ ಹೊಸ ಬದಲಾವಣೆಗಳನ್ನು ತರುವುದರ ಮೂಲಕ ತಾಳ್ಮೆಯಿಂದ ಕ್ರಮೋಪಾಯಗಳನ್ನು ಜಾರಿಗೊಳಿಸುವುದು ನಿಕ್ಸನ್‌ನ ಆಡಳಿತದ ಮೂಲತಂತ್ರವಾಗಿತ್ತು. ಸುಮಾರು ೧೦ ವರ್ಷಗಳ ಕಾಲ ನಿರಂತರವಾಗಿ ಕಾಡಿದ ಕರಿಯರ ಸಮಸ್ಯೆಗಳಿಗೆ ಹೆಚ್ಚಿನ ಗಮನ ಹರಿಸಲಾಯಿತು. ಖಾಸಗಿ ಉದ್ಯೋಗದಲ್ಲಿ ಕಡ್ಡಾಯವಾಗಿ ಕರಿಯರನ್ನು ಪರಿಗಣಿಸುವಂತೆ ಕಾನೂನುಗಳನ್ನು ಜಾರಿಗೊಳಿಸಲಾಯಿತು. ೧೯೭೨ರಲ್ಲಿ ಸಂವಿಧಾನದ ೨೬ನೆಯ ತಿದ್ದುಪಡಿ ಮಾಡಿ ಮತದಾನದ ವಯಸ್ಸನ್ನು ೧೮ಕ್ಕೆ ಇಳಿಸಲಾಯಿತು. ಈ ಹಿಂದೆ ಉದ್ಭವಿಸಿದ್ದ ಹಣದುಬ್ಬರವನ್ನು ನಿಯಂತ್ರಿಸಲು ‘ಹೊಸ ಆರ್ಥಿಕ ಧೋರಣೆ’ಗಳನ್ನು ಜಾರಿಗೆ ತಂದನು. ಕರಿಯರು ಕೈಗೊಂಡ ಯಶಸ್ವಿ ಹೋರಾಟಗಳಿಂದ ಉತ್ತೇಜಿತಗೊಂಡ ಆದಿವಾಸಿ ಸಮುದಾಯ, ಮೆಕ್ಸಿಕನ್ ಅಮೆರಿಕಾನ್, ಫೋರ್ಟೋರಿಕನ್ನರು ಹಾಗೂ ಸಲಿಂಗರತಿ (ಮಂಗಳಮುಖಿ) ಸಂಘಗಳು ತಮ್ಮ ಹಕ್ಕು ಭಾದ್ಯತೆಗಳಿಗಾಗಿ ಹೋರಾಟಕ್ಕಿಳಿದವು. ತೀವ್ರ ಅಸಮಾಧನಗೊಂಡಿದ್ದ ಇಂಥವರಿಗೆಲ್ಲ ಕೆಲವು ವಿಶೇಷ ಅನುದಾನ ನೀಡುವುದರ ಮೂಲಕ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಯಿತು.

ಕೆನಡಿ ನಿಧನಾನಂತರ ಅಮೆರಿಕಾದ ಆಂತರಿಕ ವ್ಯವಹಾರ ಎಷ್ಟು ಕುಸಿದಿತ್ತೋ ಅದಕ್ಕಿಂತ ಹೆಚ್ಚಿನಂಶ ಅಂತಾರಾಷ್ಟ್ರೀಯ ಸಂಬಂಧಗಳು ಅಮೆರಿಕಾದ ಹಿಡಿತದಿಂದ ತಪ್ಪಿಸಿಕೊಂಡಿದ್ದವು. ಆದ್ದರಿಂದ ನಿಕ್ಸನ್‌ನು ಬೇರೆ ಬಗೆಯಲ್ಲಿ ತಂತ್ರಗಳನ್ನು ಹೆಣೆಯಲಾರಂಭಿಸಿದನು. ತಮ್ಮದೇ ಆದ ರಾಜತಾಂತ್ರಿಕತೆಯನ್ನು ಜಾರಿಗೊಳಿಸುವ ಮೊದಲ ಪ್ರಯತ್ನವಾಗಿ ಅಮೆರಿಕಾ ತಾನು ಈ ಹಿಂದೆ ತಾಳಿರುವ ನಿಲುವಿನಿಂದ ವಿಮುಖವಾಯಿತು. ಇದರ ಮೊದಲ ಪರಿಣಾಮವೆಂದರೆ ವಿಯೆಟ್ನಾಂ ಯುದ್ಧದಿಂದ ಅಮೆರಿಕಾ ಈ ಮೊದಲು ತತ್‌ಕ್ಷಣವೇ ಹಿಂದೆ ಸರಿದಿದ್ದರೂ ದಕ್ಷಿಣ ವಿಯಟ್ನಾಂನಲ್ಲಿನ ರಷ್ಯಾ ಮತ್ತು ಚೀನ ಬೆಂಬಲಿತ ಉತ್ತರ ವಿಯೆಟ್ನಾಂ ಪಡೆಗಳನ್ನು ಓಡಿಸುವುದು ಅತಿಮುಖ್ಯವಾದ ತಂತ್ರವೆಂಬ ಸೂತ್ರವನ್ನು ಘೋಷಿಸಿಸುವ ಮೂಲಕ ಅಮೆರಿಕಾ ಮತ್ತೆ ಆಕ್ರಮಣಕಾರಿ ಪ್ರವೃತಿಗೆ ಇಳಿಯಿತು. ಇದನ್ನೇ ರಾಜಕೀಯ ಪರಿಭಾಷೆಯಲ್ಲಿ ‘‘ವಿಯಟ್ನಾಮೀಯತೆ’’ ಅಥವಾ ‘‘ವಿಯಟ್ನಾಮೀಕರಣ’’ ಎಂದು ಕರೆಯಲಾಗುತ್ತದೆ. ಚುನಾವಣೆಯಲ್ಲಿ ವಾಗ್ದಾನ ಮಾಡಿದಂತೆ ವಿದೇಶದಲ್ಲಿರುವ ಅಮೆರಿಕಾದ ಸೈನ್ಯವನ್ನು ಹಿಂದಕ್ಕೆ ಪಡೆಯುವ ಕಾರ್ಯದಲ್ಲಿ ನಿಕ್ಸನ್ ಪ್ರವೃತ್ತನಾದರೂ ವಿಯಟ್ನಾಂ ಸಮಸ್ಯೆಗೆ ಸಂಬಂಧಿಸಿದಂತೆ ಸಂಪೂರ್ಣ ಸೈನ್ಯವನ್ನು ಹಿಂದಕ್ಕೆ ಪಡೆಯಲಿಲ್ಲ. ಹೀಗಾಗಿ ವಿರೋಧಗಳು ಇನ್ನಿಲ್ಲದಂತೆ ಅಮೆರಿಕಾದಲ್ಲಿ ಹುಟ್ಟಿಕೊಂಡವು. ಬಹುತೇಕ ಪ್ರತಿಭಟನೆ ಗಳನ್ನು ವಿಶ್ವವಿದ್ಯಾಲಯಗಳಲ್ಲಿನ ವಿದ್ಯಾರ್ಥಿಗಳು ಭಾರೀ ಸಂಖ್ಯೆಯಲ್ಲಿ ಭಾಗವಹಿಸಿ ಬೀದಿಗಿಳಿದು ಮುನ್ನಡೆಸಿದರು. ಆದರೂ ಅಮೆರಿಕಾ ಆಡಳಿತವು ತನ್ನ ತಪ್ಪು ಲೆಕ್ಕಾಚಾರದಿಂದ ಪೂರ್ಣಪ್ರಮಾಣದಲ್ಲಿ ಹಿಂದೆ ಸರಿಯದೇ ಮತ್ತೆ ವಿಯಟ್ನಾಂ ಯುದ್ಧದಲ್ಲಿ ಪ್ರವೇಶಿಸಿತು. ಅಧ್ಯಕ್ಷನ ಆಪ್ತಸಹಾಯಕ ಹಾಗೂ ರಾಜಕೀಯ ಮುತ್ಸದ್ದಿ ಪ್ಯಾರಿಸ್‌ನಲ್ಲಿ ವಿಯಟ್ನಾಂ ಜೊತೆಗೆ ಅನೇಕ ಬಾರಿ ಒಪ್ಪಂದಗಳನ್ನು ಮಾಡಿಕೊಂಡ ನಂತರವೂ ಯುದ್ಧ ಮುಂದುವರೆದಿತ್ತು. ಕೊನೆಗೆ ೧೯೭೫ರಲ್ಲಿ ದಕ್ಷಿಣ ವಿಯಟ್ನಾಂ ಸೈನ್ಯ ಪಡೆಗಳು ಉತ್ತರದ ಸೈನ್ಯಕ್ಕೆ ಶರಣಾಗುವುದರ ಮೂಲಕ ಯುದ್ಧ ಕೊನೆಗೊಂಡಿತು. ಅಮೆರಿಕಾ ಅಂತಾರಾಷ್ಟ್ರೀಯ ಸಂಬಂಧಗಳ ಸಂಬಂಧವಾಗಿ ಈಗಾಗಲೇ ಹಲವಾರು ಯುದ್ಧಗಳನ್ನು ಮಾಡಿತ್ತು. ಆದರೆ ವಿಯಟ್ನಾಂ ಯುದ್ಧದಲ್ಲಿ ಅನುಭವಿಸಿದಷ್ಟು ನಷ್ಟವನ್ನು ಹಾಗೂ ರಾಜಕೀಯ ಅಪಮಾನವನ್ನು ಎರಡನೆಯ ಮಹಾಯುದ್ಧದಲ್ಲಿಯೂ ಅಮೆರಿಕಾ ಅನುಭವಿಸಿರಲಿಲ್ಲ. ಅಂದಾಜು ೫೦ ಸಾವಿರ ಸೈನಿಕರನ್ನು ಹಲವು ಮಿಲಿಯನ್ ಡಾಲರಗಳಷ್ಟು ಅನವಶ್ಯಕ ಖರ್ಚನ್ನು ಈ ಯುದ್ಧದಲ್ಲಿ ಯಾವುದೇ ರೀತಿಯ ಕನಿಷ್ಠ ಲಾಭ ಪಡೆದುಕೊಳ್ಳದೇ ಕಳೆದುಕೊಂಡಿತ್ತು. ಜಾಗತಿಕ ಮಟ್ಟದಲ್ಲಿ ತಾನು ಹೊಂದಿದ ಬಲದ ಬಗೆಗೆ ಬೇರೆಯವರು ಶಂಖೆ ವ್ಯಕ್ತಪಡಿಸಲಾರಂಭಿಸಿದಂತೆ ಇದನ್ನು ಗ್ರಹಿಸಿದ ಕಾಂಗ್ರೆಸ್ ಒತ್ತಾಯಪೂರ್ವಕವಾಗಿ ಮಧ್ಯ ಪ್ರವೇಶಿಸಿ ಯುದ್ಧವನ್ನು ನಿಲ್ಲಿಸುವಂತೆ ಅಮೆರಿಕಾದ ಆಡಳಿತಕ್ಕೆ ಎಚ್ಚರಿಸಿತು. ಆಮೇಲೆ ಅಮೆರಿಕಾದ ಸೈನ್ಯ ಕಾಂಬೋಡಿಯಾ, ಲಾವೋಸ್ ಹಾಗೂ ವಿಯಟ್ನಾಂಗಳಿಂದ ಹಿಂದೆ ಸರಿಯಿತು.

ಅಮೆರಿಕಾ ದೇಶವು ಚೀನಾ ದೇಶದೊಂದಿಗೆ ಕಳೆದ ಇಪ್ಪತ್ತು ವರ್ಷಗಳಿಂದ ರದ್ದುಗೊಳಿಸಿದ ವ್ಯಾಪಾರ ಸಂಬಂಧಗಳನ್ನು ಹೆನ್ರಿ ಕಿಸ್ಸೆಂಜರ್‌ನ ದೂರನೀತಿಗಳಿಂದ ಪುನಃ ಪ್ರಾರಂಭಿಸಿತು. ಪಿಂಗ್-ಪಾಂಗ್ ಆಡಳಿತಗಾರರು ಚೀನಾದೇಶಕ್ಕೆ ಬರುವುದರ ಮೂಲಕ ಎರಡು ದೇಶಗಳ ಸಂಬಂಧ ವೃದ್ದಿಸಿತು. ಅಲ್ಲದೆ ಎಲ್ಲರೂ ಬೆರಗಾಗುವಂತೆ ಅಧ್ಯಕ್ಷ ರಿಚರ್ಡ್ ನಿಕ್ಸನ್, ಕಿಸ್ಸೆಂಜರ್‌ನ ಸಲಹೆ ಮೇರೆಗೆ ಚೀನಕ್ಕೆ ದಿಢೀರ್ ಭೇಟಿ ನೀಡಿದನು. ಇದೇ ಕಾಲಕ್ಕೆ ಸೋವಿಯಟ್ ರಷ್ಯಾಕ್ಕೂ ಭೇಟಿ ನೀಡಿದ. ಕೆನಡಿ ನಂತರ ದೀರ್ಘ ಕಾಲಾವಧಿಯ ಬಳಿಕ ರಷ್ಯಾಕ್ಕೆ ಭೇಟಿ ನೀಡಿದ ಅಮೆರಿಕಾದ ಎರಡನೆಯ ಅಧ್ಯಕ್ಷ ನಿಕ್ಸನ್‌ನಾಗಿದ್ದಾನೆ. ಅಣ್ವಸ್ತ್ರ ನಿಷೇಧದ ಹಲವು ಒಪ್ಪಂದಗಳನ್ನು ಎರಡು ದೇಶಗಳು ಮಾಡಿಕೊಂಡವು. ಈ ಕಾಲದಲ್ಲಿ ನಡೆದ ಎರಡು ಬೃಹತ್ ರಾಷ್ಟ್ರಗಳ ನಡುವಿನ ಈ ಒಪ್ಪಂದಗಳು ೧೯೪೫ರ ನಂತರ ತಲೆತೋರಿದ ‘ಶೀತಲ ಸಮರದ’ ಕಾವನ್ನು ತಗ್ಗಿಸಲು ಇಟ್ಟ ಮೊದಲ ಪರಿಣಾಮಕಾರಿ ಹೆಜ್ಜೆಗಳಾದವು.

ಎರಡನೆಯ ಅವಧಿಗೆ ೧೯೭೨ರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಉಮೇದುವಾರಿಕೆಯಿಂದ ರಿಚರ್ಡ್ ನಿಕ್ಸನ್ ಮತ್ತೆ ಮರು ಆಯ್ಕೆ ಬಯಸಿದನು. ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಿನ ಜನರು ಆಸಕ್ತಿ ಕಳೆದುಕೊಂಡಿದ್ದರು. ಇದರ ಲಾಭ ಪಡೆದ ನಿಕ್ಸನ್‌ನು ಕಡಿಮೆ ಪ್ರಮಾಣದ ಮತದಾನದಲ್ಲೂ ಹೆಚ್ಚಿನ ಬಹುಮತದಿಂದ ಆಯ್ಕೆ ಆದನು. ಜಯ ಪಡೆದ ನಿಕ್ಸನ್ ಎರಡನೆಯ ಅವಧಿಗೆ ಒಬ್ಬ ಸರ್ವಾಧಿಕಾರಿಯಂತೆ ಮೆರೆದ. ಈತನ ಆಡಳಿತಾವಧಿಯಲ್ಲಿ ನಡೆದ ವಾಟರ್‌ಗೇಟ್ ಹಗರಣವು ಕಪ್ಪು ಚುಕ್ಕೆಯಿಂದ ಕೂಡಿದ ಚಾರಿತ್ರಿಕ ಘಟನೆಯಾಗಿ ಅಮೆರಿಕಾ ಇತಿಹಾಸದಲ್ಲಿ ಉಳಿದುಕೊಂಡಿತು. ಆಡಳಿತದಲ್ಲಿ ಯಾರನ್ನೂ ಲೆಕ್ಕಿಸದ ನಿಕ್ಸನ್‌ನು ಕಾಂಗ್ರೆಸ್ಸಿನ ಅನುಮತಿ ಪಡೆಯದೇ ಕಾಂಬೋಡಿಯಾದ ಮೇಲೆ ವೇಗವಾಗಿ ಸೈನ್ಯ ನುಗ್ಗಿಸಿದನು. ಅಲ್ಲದೆ ಕಾಂಗ್ರೆಸ್ ಸೂಚಿಸಿದ ಅನೇಕ ಸಾಮಾಜಿಕ ಕಾರ್ಯಗಳನ್ನು ನಿರ್ದಾಕ್ಷಿಣ್ಯವಾಗಿ ತಳ್ಳಿಹಾಕಿದನು. ಇಂಥ ಕ್ರಮಗಳು ಪ್ರಜಾಪ್ರಭುತ್ವವಾದಿ ಅಮೆರಿಕಾನ್ನರನ್ನು ಸಿಟ್ಟಿಗೆಬ್ಬಿಸಿದವು. ಇಷ್ಟೆಲ್ಲ ಪ್ರಕರಣಗಳು ಸಂಭವಿಸಲು ನಿಕ್ಸನ್‌ನ ಜೊತೆಗಿದ್ದ ರಾಜತಾಂತ್ರಿಕರೇ ಕಾರಣರಾಗಿದ್ದರು. ಅವರು ನೀಡುತ್ತಿದ್ದ ತಪ್ಪು ಮಾರ್ಗದರ್ಶಗಳು ಈತನ ಆಡಳಿತಕ್ಕೆ ಮುಳ್ಳಾಗಿ ಪರಿಣಮಿಸಿದವು. ಅವರನ್ನು ಹದ್ದುಬಸ್ತಿನಲ್ಲಿಡದ ನಿಕ್ಸನ್ ಅನಿವಾರ್ಯವಾಗಿ ಅಧಿಕಾರ ತ್ಯಜಿಸಬೇಕಾಯಿತು.

ವಾಟರ್‌ಗೇಟ್ ಹಗರಣ

ಅಮೆರಿಕಾದ ಇತಿಹಾಸ ಹಾಗೂ ಜಾಗತಿಕ ಮಟ್ಟದಲ್ಲಿ ಎಂದೆಂದಿಗೂ ನೆನಪಿನಲ್ಲಿ ಉಳಿಯುವ ಹಗರಣ ಇದಾಗಿದೆ. ಎರಡನೆಯ ಅವಧಿಯ ಆಡಳಿತದಲ್ಲಿ ಅಧ್ಯಕ್ಷ ನಿಕ್ಸನ್ ಥೇಟ್ ಸರ್ವಾಧಿಕಾರಿಯಂತೆ ವರ್ತಿಸಲಾರಂಭಿಸಿದ. ತನಗಾಗದವರನ್ನು ಹಣಿಯಲು ಬೇಹುಗಾರಿಕೆಯನ್ನು ಜಾಗೃತಗೊಳಿಸಿದನು. ಅಂಥ ಪ್ರಕರಣಗಳಲ್ಲಿ ವಾಟರ್‌ಗೇಟ್ ಹಗರಣವು ಒಂದು. ವಾಷಿಂಗ್‌ಟನ್‌ನಲ್ಲಿರುವ ಡೆಮಾಕ್ರಾಟಿಕ್ (ವಿರೋಧಪಕ್ಷ) ಪಕ್ಷದ ಕಛೇರಿಯಲ್ಲಿ ನಡೆಯುವ ವಿವರಗಳನ್ನು ಗುಪ್ತವಾಗಿ ತಿಳಿಯಲು ಐದು ಜನರನ್ನು ಕಳ್ಳಮಾರ್ಗದಿಂದ ಪ್ರವೇಶಿಸಲು ಸಹಾಯ ಮಾಡಲಾಯಿತು. ಗುಪ್ತದಳದ ಮುಖ್ಯ ಕೆಲಸಗಳೆಂದರೆ ಅಲ್ಲಿರುವ ದಾಖಲೆಗಳನ್ನು ಹುಡುಕುವುದು, ಕದ್ದಾಲಿಸಿ ಕೇಳುವುದು ಹಾಗೂ ಮಹತ್ವ ಪತ್ರಗಳ ನಕಲು ಪ್ರತಿಗಳನ್ನು ನಿಕ್ಸನ್‌ನಿಗೆ ಕಳುಹಿಸಿ ಕೊಡುವುದಾಗಿತ್ತು. ಇಂಥ ಕಾರ್ಯಗಳಲ್ಲಿ ಸರಕಾರಿ ಯಂತ್ರದಲ್ಲಿದ್ದ ಕೆಲವು ಸದಸ್ಯರು ಪಾಲ್ಗೊಂಡಿದ್ದರು. ಆಡಳಿತದಲ್ಲಿನ ಸದಸ್ಯರು ಈ ರೀತಿಯಲ್ಲಿ ವಿರೋಧ ಪಕ್ಷಕ್ಕೆ ಸಂಬಂಧಿಸಿದ ವಿವರಗಳನ್ನು ಅಧ್ಯಕ್ಷನಿಗೆ ನೀಡುವ ಇಂಥ ರಹಸ್ಯ ಮಾಹಿತಿಗಳನ್ನು ಪತ್ರಿಕೆಯವರು ಬಹಿರಂಗಗೊಳಿಸಿದಾಗ ಈ ಘಟನೆಯನ್ನು ಟೀಕಿಸದೇ ಸ್ವತಃ ಅಧ್ಯಕ್ಷರು ಉದ್ಧಟತನದಿಂದ ಕಳ್ಳರ ಸಹಾಯಕ್ಕೆ ನಿಂತರು. ಆದರೆ ಈ ಪ್ರಕರಣದಲ್ಲಿದ್ದ ಆರೋಪಿಗಳು ತಮ್ಮ ತಪ್ಪೊಪ್ಪಿಗೆಯಲ್ಲಿ ಇದಕ್ಕೆಲ್ಲ ನಿಕ್ಸನ್‌ನೇ ಕಾರಣವೆಂದು ಬಾಯಿಬಿಟ್ಟರು. ಸಂಬಂಧಿಸಿದ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾಯಾಲಯ ಮಧ್ಯ ಪ್ರವೇಶಿಸಿತು. ೧೯೭೫ರ ವೇಳೆಗೆ ವಿಚಾರಣೆ ಕೈಗೊಂಡು, ದೋಷಾರೋಪಣೆಯಲ್ಲಿ ತಪ್ಪೊಪ್ಪಿಗೆಗಳನ್ನು ಒಪ್ಪಿಕೊಂಡ ಅಪರಾಧಿಗಳಲ್ಲಿ ಕೆಲವರನ್ನು ಶಿಕ್ಷೆಗೆ ಗುರಿಪಡಿಸಿತು. ಅದರಲ್ಲಿ ಅಮೆರಿಕಾದ ನ್ಯಾಯಾಂಗ ಇಲಾಖೆಗೆ ಸಂಬಂಧಿಸಿದ ಸಚಿವರು ಸೇರಿದ್ದು ವಿಶೇಷವಾಗಿತ್ತು. ಇಂಥ ಘಟನೆಯಿಂದ ಅಮೆರಿಕಾದಲ್ಲಿ ಕೆಲವು ವರ್ಷಗಳ ಕಾಲ ಜನರು, ಸರಕಾರ ಹಾಗೂ ಅಧ್ಯಕ್ಷನ ಮೇಲೆ ನಂಬಿಕೆಯನ್ನು ಕಳೆದುಕೊಂಡಂತೆ ತಮ್ಮ ಮನೋಭಾವ ವ್ಯಕ್ತಪಡಿಸುತ್ತಿದರು.

ವಾಟರಗೇಟ್ ಪ್ರಕರಣ ತೀವ್ರ ಸ್ವರೂಪವನ್ನು ಪಡೆದುಕೊಂಡ ಇದೇ ದಿನಗಳಲ್ಲಿಯೇ ಅಮೆರಿಕಾದ ಉಪಾಧ್ಯಕ್ಷ ಆ್ಯಗ್‌ನ್ಯೂ ಸಹ ಆದಾಯ ಕಟ್ಟದಿರುವ ಹಾಗೂ ಲಂಚವನ್ನು ಪಡೆದಿದ್ದಾನೆ ಎಂಬ ಆರೋಪದಲ್ಲಿ ಶಿಕ್ಷೆಗೆ ಒಳಗಾಗಿ ರಾಜೀನಾಮೆ ನೀಡಿದನು. ಇದು ಅಮೆರಿಕಾ ಇತಿಹಾಸದಲ್ಲಿ ನಿಕ್ಸನ್ ಆಡಳಿತಾವಧಿಯಲ್ಲಿ ನಡೆದ ಎರಡನೆಯ ಪ್ರಮುಖ ಪ್ರಕರಣವಾಗಿತ್ತು. ಈತನ ಸ್ಥಾನಕ್ಕೆ ಜೆರಾಲ್ಡ್ ಫೋರ್ಡ್‌ನನ್ನು ನಿಕ್ಸನ್ ನೇಮಿಸಿದನು. ಅಧ್ಯಕ್ಷ ನಿಕ್ಸನ್‌ನ ಆಡಳಿತದಲ್ಲಿದ್ದ ಭ್ರಷ್ಟಾಚಾರ ಹಾಗೂ ಸರ್ವಾಧಿಕಾರದ ನಡತೆಗಾಗಿ ಆತನ ಪಕ್ಷದವರೇ ಛೀಮಾರಿ ಹಾಕಿದರು. ಇದರ ಉಪಯೋಗ ಪಡೆದ ಡೆಮೊಕ್ರಾಟಿಕನ್‌ರು ಅಧ್ಯಕ್ಷನ ವಿರುದ್ಧ ಭಾರೀ ಪ್ರಮಾಣದ ಟೀಕೆಗೆ ಇಳಿದರು. ಆತನನ್ನು ಕಿತ್ತೊಗೆಯುವಂತೆ ನಿರ್ಣಯಿಸಿ ಕಾಂಗ್ರೆಸ್ಸಿನ ಸಭೆಯಲ್ಲಿ ವಾದವನ್ನು ಮಂಡಿಸುವ ತೀವ್ರ ಪ್ರಯತ್ನದಲ್ಲಿ ತೊಡಗಿದರು. ಇದಕ್ಕೆ ರಿಪಬ್ಲಿಕನ್ ಪಕ್ಷದ ಸೆನೆಟರ್‌ಗಳ ಬೆಂಬಲವು ಸಹ ಇರುವ ಸೂಚನೆಯನ್ನರಿತು ನಿಕ್ಸನ್ ಮುಖಭಂಗ ಅನುಭವಿಸುವುದಕ್ಕಿಂತ ಹುದ್ದೆಯಿಂದ ಇಳಿಯುವುದೇ ಲೇಸೆಂದು ಕಾಲಾವಧಿಗಿಂತ ಮೊದಲೇ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದನು. ತನ್ನ ಉತ್ತರಾಧಿಕಾರಿಯಾಗಿ ಜೆರಾಲ್ಡ್ ಫೋರ್ಡ್‌ನನ್ನು ನೇಮಕ ಮಾಡಿದನು. ಈ ಘಟನೆಗಳಿಂದ ಅಮೆರಿಕಾದ ಇತಿಹಾಸದಲ್ಲಿ ಇದುವರೆಗೂ ಕೇಳರಿಯದ ಹೊಸ ಸಂಗತಿಗಳು ದಾಖಲಾದವು. ಅವಧಿಗಿಂತ ಮುಂಚೆ ಆರೋಪ ಹೊತ್ತು ರಾಜೀನಾಮೆ ನೀಡಿದ ಮೊದಲ ಅಧ್ಯಕ್ಷ ನಿಕ್ಸನ್ನನಾದರೆ ಚುನಾವಣೆ ಎದುರಿಸದೇ ಅಧ್ಯಕ್ಷನಾಗಿ ಆಯ್ಕೆಯಾದ ಸಂಗತಿಗೆ ಫೋರ್ಡ್ ಪಾತ್ರದಾರನಾದ.

ಮೂವತ್ತೊಂಬತ್ತನೆಯ ಅಧ್ಯಕ್ಷನಾಗಿ ಚುನಾವಣೆ ಇಲ್ಲದೆ ಆಯ್ಕೆ ಆದ ಫೋರ್ಡ್ ನಿಕ್ಸನ್‌ನ ಆಡಳಿತ ಕ್ರಮಗಳನ್ನೇ ಅಲ್ಪ ಸ್ವಲ್ಪ ಬದಲಾಯಿಸಿ ಮುಂದುವರಿಸಿದನು. ಹೆನ್ರಿ ಕಿಸ್ಸೆಂಜರ್ ಸಲಹೆ ಪಡೆದ ಈತನು ಅಮೆರಿಕಾದ ಈ ಹಿಂದಿನ ಆಡಳಿತ ತಾಳಿದ್ದ ವಿದೇಶಿ ನೀತಿನಿಯಮಗಳ ಯಥಾಸ್ಥಿತಿ ಕಾಪಾಡಿಕೊಂಡು ಬಂದನು. ಹೊರಜಗತ್ತಿನಲ್ಲಿ ಅಮೆರಿಕಾದ ಮೌಲ್ಯವನ್ನು ಉಳಿಸಿಕೊಳ್ಳಲು ಹೆಚ್ಚಿನ ಹಣವನ್ನು ಮೀಸಲಿರಿಸಿದನು. ಹಣದುಬ್ಬರವನ್ನು ಕಡಿಮೆ ಮಾಡಲು ಅನೇಕ ಯೋಜನೆಗಳನ್ನು ಕೈಗೊಂಡನು. ‘ಹಣದುಬ್ಬರ ಹತ್ತಿಕ್ಕಿರಿ’ ಎಂಬ ಯೋಜನೆಯನ್ನು ಜಾರಿಗೊಳಿಸಿ ಅದನ್ನು ನಿಯಂತ್ರಿಸಲು ಪ್ರಯತ್ನಿಸಿದನು. ನಿರುದ್ಯೋಗವನ್ನು ಕಡಿಮೆ ಮಾಡುವ ಕ್ರಮಗಳನ್ನು ಜಾರಿಗೊಳಿಸಿ ಅದನ್ನು ಸಹ ತಹಬಂದಿಗೆ ತರಲು ಪ್ರಯತ್ನಿ ಸಿದನು. ನಿರುದ್ಯೋಗವನ್ನು ಕಡಿಮೆ ಮಾಡಲು ಬೇಕಾದ ಕ್ರಮಗಳನ್ನು ಕೈಗೊಳ್ಳಲಾಯಿತು. ಇದೇ ವೇಳೆಗೆ ಹಿಂದಿನ ಅಧ್ಯಕ್ಷ ರಿಚರ್ಡ್ ನಿಕ್ಸನ್‌ನಿಗೆ ಕ್ಷಮಾದಾನ ನೀಡಿ ಅವನ ಕಾಲದಲ್ಲಾದ ಎಲ್ಲ ಆರೋಪಗಳಿಂದ ಅವನನ್ನು ಮುಕ್ತಗೊಳಿಸಲಾಯಿತು. ಆದರೆ ಇದು ಹೆಚ್ಚಿನ ಜನರು ಅಸಮಾಧಾನಗೊಳ್ಳುವಂತೆ ಮಾಡಿತು. ಫೋರ್ಡ್‌ನ ಆಡಳಿತಾವಧಿಯಲ್ಲಿ ಅಮೆರಿಕಾ ತನ್ನ ಸ್ವಾತಂತ್ರ್ಯೋತ್ಸವದ ದ್ವಿಶತಮಾನೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿತು.

ಕಮ್ಯುನಿಸ್ಟ್ ಸಿದ್ಧಾಂತಗಳನ್ನು ಅನುಸರಿಸುತ್ತಿದ್ದ ರಾಷ್ಟ್ರಗಳ ಜೊತೆಗಿನ ತನ್ನ ಭಿನ್ನಾಭಿಪ್ರಾಯಗಳನ್ನು ಅಧ್ಯಕ್ಷನು ವ್ಯಕ್ತಪಡಿಸಿದನು. ಆದರೂ ಶಾಂತಿ ಮಾತುಕತೆಗಳನ್ನು ಸಹ ರಷ್ಯಾ ಹಾಗೂ ಪೂರ್ವ ಯುರೋಪಿನ ದೇಶಗಳೊಂದಿಗೆ ಚಾಣಾಕ್ಷ ರೀತಿಯಿಂದ ಮುಂದುವರೆಸಿದನು. ಇಸ್ರೇಲ್ ವಿಚಾರದಲ್ಲಿ ಪ್ಯಾಲೈಸ್ಟೇನ್ ದೇಶದ ನಿರ್ಮಾಣ ಕುರಿತ ವಿಷಯವನ್ನು ಬೆಂಬಲಿಸುವಂತೆ ಮಾಡಲು ಅಮೆರಿಕಾ ದೇಶಕ್ಕೆ ಅರಬ್ ದೇಶಗಳು ತಮ್ಮಲ್ಲಿದ್ದ ಹೇರಳವಾದ ಎಣ್ಣೆಯನ್ನು ರಫ್ತು ಮಾಡುತ್ತಿದ್ದರೂ ಅದನ್ನು ಕಡೆಗಣಿಸಿ ಆಕ್ರಮಣಕಾರಿ ಇಸ್ರೇಲ್ ದೇಶಕ್ಕೆ ಫೋರ್ಡ್ ಬೆಂಬಲವಾಗಿ ನಿಂತನು. ವಿಯಟ್ನಾಂ ದೇಶದಿಂದ ಅಮೆರಿಕಾ ತನ್ನ ಸೈನ್ಯವನ್ನು ಸಂಪೂರ್ಣವಾಗಿ ಹಿಂದಕ್ಕೆ ಕರೆಯಿಸಿಕೊಂಡಿತು. ಇದರಿಂದ ಒಡೆದುಹೋಗಿದ್ದ ವಿಯಟ್ನಾಂ ಒಂದಾಯಿತು. ಸುಮಾರು ಹತ್ತು ವರ್ಷಗಳ ಕಾಲ ತೀವ್ರ ಹಠದಿಂದ ಈ ಅನಾವಶ್ಯಕ ಯುದ್ಧದಲ್ಲಿ ಭಾಗವಹಿಸಿ ರಷ್ಯಾ ಹಾಗೂ ಚೀನವನ್ನು ಬಗ್ಗು ಬಡಿಯುವ ದುಸ್ಸಾಹಸ ಮಾಡಿತು. ಆದರೆ ಅಮೆರಿಕಾ ಇದರಲ್ಲಿ ಅಂತಿಮವಾಗಿ ಸಂಪೂರ್ಣ ವಿಫಲಗೊಂಡು ಪಡೆದುಕೊಂಡದ್ದು ಮಾತ್ರ ಶೂನ್ಯ. ಕಮ್ಯುನಿಸಂ ಬೆಂಬಲಿತ ವ್ಯವಸ್ಥೆಯನ್ನು ವಿರೋಧಿಸಬೇಕೆಂಬ ಏಕಮೇವ ಧ್ಯೇಯದಿಂದ ವಿಯಟ್ನಾಂನಲ್ಲಿ ಪ್ರವೇಶಿಸಿತು. ಆದರೆ ಅಂತಿಮವಾಗಿ ಅಮೆರಿಕಾದ ಲೆಕ್ಕಾಚಾರಗಳು ತಪ್ಪಾದವು. ಕಾರಣ ಕಮ್ಯುನಿಸಂಕ್ಕಿಂತ ಅಪಾಯಕಾರಿಯಾದ ಸರ್ವಾಧಿಕಾರಿಗಳು ಏಷ್ಯ, ಆಫ್ರಿಕ ಹಾಗೂ ಲ್ಯಾಟಿನ್ ಅಮೆರಿಕಾ ದೇಶಗಳಲ್ಲಿ ಬೆಳೆದು ಬಂದರು. ಇಂಥ ಸರ್ವಾಧಿಕಾರಿಗಳು ಅಮೆರಿಕಾದಿಂದ ತಮಗೆ ಬೇಕಾದಾಗ ಹೇರಳವಾದ ಸಹಾಯ ಪಡೆದು ನಂತರದ ದಿನಗಳಲ್ಲಿ ತಿರುಗಿ ಬಿದ್ದಿರುವ ಉದಾಹರಣೆಗಳುಂಟು. ತನ್ನ ಆಡಳಿತಾವಧಿಯಲ್ಲಿ ಆದ ಅನೇಕ ರಾಜಕೀಯ ಗೊಂದಲಗಳ ಮಧ್ಯೆಯೂ ಫೋರ್ಡ್ ಸೋವಿಯತ್ ರಷ್ಯಾ ಜೊತೆಗೆ ಮಾತುಕತೆಯ ಮೂಲಕ ಭೂಗರ್ಭದಲ್ಲಿ ಈ ಎರಡು ದೇಶಗಳು ಅಣ್ವಸ್ತ್ರ ಪರೀಕ್ಷೆಯನ್ನು ನಿಷೇಧಿಸುವ ಒಪ್ಪಂದವನ್ನು ಮಾಡಿಕೊಂಡು ವಿಶ್ವವು ಕಂಡುಕೊಂಡಿದ್ದ ಭಯದ ವಾತಾವರಣವನ್ನು ತಿಳಿಗೊಳಿಸಿದವು. ದೂರದೃಷ್ಟಿ ರಾಜಕಾರಣವನ್ನು ಅತ್ಯಂತ ಚಾಣಾಕ್ಷ ರೀತಿಯಿಂದ ನಿಭಾಯಿಸುತ್ತಿದ್ದ ಫೋರ್ಡ್‌ನು ಕಾಂಬೋಡಿಯಾ ವಿಚಾರದಲ್ಲಿ  ಮಾತ್ರ ತಪ್ಪು ಲೆಕ್ಕಾಚಾರ ಹಾಕಿದ. ಕಾಂಬೋಡಿಯಾ ಸರಕಾರ ಅಮೆರಿಕಾದ ವ್ಯಾಪಾರ ನೌಕೆಯನ್ನು ರಕ್ಷಣಾ ನೌಕೆಯೆಂದು ತಪ್ಪಾಗಿ ಗ್ರಹಿಸಿ ಸೆರೆಹಿಡಿಯಿತು. ಆದರೆ ಅಮೆರಿಕಾವು ಸಹ ತಾಳ್ಮೆಯಿಂದ ಈ ಘಟನೆಯನ್ನು ಅವಲೋಕಿಸದೆ ಏಕಾಏಕಿ ಸೈನ್ಯಕಾರ್ಯಾಚರಣೆ ಕೈಗೊಂಡಿತು. ಈ ಯುದ್ಧದ ಕಾರ್ಯಾಚರಣೆಯನ್ನು ಫೋರ್ಡ್ ಕಾಂಗ್ರೆಸ್ಸಿನ ಒಪ್ಪಿಗೆ ಪಡೆಯದೇ ನಡೆಸಿರುವುದು ಸಹ ಪ್ರಮಾದವಾಗಿತ್ತು. ಬಂಧಿತರನ್ನು ಬಿಡುಗಡೆಗೊಳಿಸುವುದರೊಳಗಾಗಿ ಕಾಂಬೋಡಿಯಾದಲ್ಲಿನ ಅನೇಕ ಜನರು ಅಮೆರಿಕಾದ ದಾಳಿಯಿಂದ ಸತ್ತು ಹೋದರು. ಇಂಥ ಆತುರದ ಕ್ರಮಗಳು ಜಾಗತಿಕ ಮಟ್ಟದಲ್ಲಿ ಅಮೆರಿಕಾವನ್ನು ಹೆಚ್ಚಿನ ಇಕ್ಕಟ್ಟುಗಳಿಗೆ ಸಿಕ್ಕಿಸಿದಂತಾಯಿತು. ಅಲ್ಲದೇ ಅಪಾರ ನಷ್ಟವನ್ನು ಅಮೆರಿಕಾ ಈ ಕೃತ್ಯದಿಂದ ಅನುಭವಿಸಿತು. ಇಂಥ ಘಟನೆಗಳು ಸೂಕ್ಷ್ಮಮತಿಯಾಗಿದ್ದ ಫೋರ್ಡ್‌ನನ್ನು ಕುಗ್ಗಿಸಿದವು. ಇದರಿಂದ ಜಾಗತಿಕ ಮಟ್ಟದಲ್ಲಿ ಅಧ್ಯಕ್ಷನು ಭಾರೀ ಟೀಕೆಗೆ ಒಳಗಾದನು.

ಇಪ್ಪತ್ತನೆಯ ಶತಮಾನದ ಅರವತ್ತು ಹಾಗೂ ಎಪ್ಪತ್ತರ ದಶಕಗಳು ಅಮೆರಿಕಾ ಇತಿಹಾಸದಲ್ಲಿ ಚಳವಳಿಯ ವರ್ಷಗಳಾಗಿವೆ. ಸುಮಾರು ಎಂಟು ವರ್ಷಗಳ ಕಾಲ ಅಮೆರಿಕಾ ವಿಯಟ್ನಾಂ ಜೊತೆಗೆ ಹೋರಾಡಿ ಯಾವುದೇ ಜಯ ದಕ್ಕಿಸಿಕೊಳ್ಳಲಾರದೇ ಕೊನೆಗೆ ಕಳೆದುಕೊಂಡದ್ದೇ ಹೆಚ್ಚಾಗಿತ್ತು. ಅಲ್ಲದೇ ಅಂತಾರಾಷ್ಟ್ರೀಯ ಸಮಸ್ಯೆಗಳತ್ತ ಹೆಚ್ಚಿನ ಗಮನ ಹರಿಸಿದ್ದರಿಂದ ದೇಶದಲ್ಲಿ ಆಂತರಿಕ ಆಂದೋಲನಗಳು ಇನ್ನಿಲ್ಲದಂತೆ ಹುಟ್ಟಿಕೊಂಡವು. ಅಮೆರಿಕಾ ತಾಳಿದ್ದ ಯುದ್ಧನೀತಿಯನ್ನು ಸ್ಥಳೀಯರು ಹಾಗೂ ಪ್ರಗತಿಪರರರು ಪ್ರಬಲವಾಗಿ ವಿರೋಧಿಸಿದರು.

ಹಲವು ಶತಮಾನಗಳಿಂದಲೂ ನಿರ್ಜೀವವಾಗಿದ್ದ ಸಮಸ್ಯೆಗಳು ಮರುಜೀವ ಪಡೆದುಕೊಂಡವು. ಪೋರ್ಟೋರಿಕನ್, ಕ್ಯಾಲಿಫೋರ್ನಿಯಾದಲ್ಲಿನ ಮೆಕ್ಸಿಕನ್ ವಲಸೆಗಾರರು, ಆದಿವಾಸಿ ರೆಡ್ ಇಂಡಿಯನ್ನರ ಹಾಗೂ ಮಹಿಳಾ ಸಮಸ್ಯೆಗಳ ಪರಿಹಾರಕ್ಕಾಗಿ ಅಮೆರಿಕಾ ದಲ್ಲಿ ಪ್ರಬಲವಾಗಿ ಆಂದೋಲನಗಳು ಪ್ರಾರಂಭವಾದವು. ಇವುಗಳಿಗೆಲ್ಲ ಅಮೆರಿಕಾದ ಸರಕಾರವು ತಲೆಬಾಗಿ ಲಗುಬಗೆಯಿಂದ ಪರಿಹಾರ ಹುಡುಕಲಾರಂಭಿಸಿತು. ಮಹಿಳೆಯರಿಗೆ ಸಂಬಂಧಿಸಿದ ಕಾಯ್ದೆಗಳನ್ನು ಅಮೆರಿಕಾನ್ ಕಾಂಗ್ರೆಸ್ ಕೂಡಾ ಹೆಚ್ಚಿನ ಮುತುವರ್ಜಿ ವಹಿಸಿ ಅಂಗೀಕರಿಸಿತು.

ಮರು ಆಯ್ಕೆಯನ್ನು ಬಯಸಿ ೧೯೭೬ರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಫೋರ್ಡ್ ನೇಮಕಗೊಂಡನು. ಆತನ ಪ್ರತಿಸ್ಪರ್ಧಿಯಾಗಿ ಜಾರ್ಜಿಯಾದ ಮಾಜಿ ಗವರ್ನರ್ ಆಗಿದ್ದ ಜಿಮ್ಮಿ ಕಾರ್ಟರ್ ಡೆಮೊಕ್ರಾಟಿಕ್ ಪಕ್ಷದ ಪರವಾಗಿ ಕಣಕ್ಕಿಳಿದನು. ಹಲವಾರು ಸುತ್ತಿನ ಚುನಾವಣೆಯ ನಂತರ ಹಾಗೂ ಮುಖಾಮುಖಿ ಚರ್ಚೆಗಳ ನಂತರ ಅಮೆರಿಕಾದ ಜನತೆ ಡೆಮೊಕ್ರಾಟಿಕ್ ಪಕ್ಷದ ಜಿಮ್ಮಿ ಕಾರ್ಟರ್‌ನನ್ನು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದರು. ಕಾಂಗ್ರೆಸ್ ಮತ್ತು ಸೆನಟ್‌ಗಳಲ್ಲಿ ಸಹ ಡೆಮೊಕ್ರಾಟಿಕ್ ಪಕ್ಷದಿಂದ ಹೆಚ್ಚಿನ ಉಮೇದುವಾರರು ಗೆಲುವು ಪಡೆದರು. ಜೆರಾಲ್ಡ್ ಫೋರ್ಡ್‌ನನ್ನು ಸೋಲಿಸಿ ೩೯ನೆಯ ಅಧ್ಯಕ್ಷನಾದ ಕಾರ್ಟರ್ ಗ್ರಾಮೀಣ ಪ್ರದೇಶದಿಂದ ಬಂದವನಾಗಿದ್ದ. ಅಲ್ಲದೇ ಜನತೆಯ ಪ್ರೀತಿಗೆ ಪಾತ್ರನಾಗಿದ್ದ. ಆದರೆ ಆಡಳಿತ ಮಂಡಳಿಗಳಾದ ಕಾಂಗ್ರೆಸ್ ಹಾಗೂ ಸೆನೆಟ್‌ನಲ್ಲಿನ ಸದಸ್ಯರೊಂದಿಗೆ ಸದಾ ಭಿನ್ನಾಭಿಪ್ರಾಯ ತಾಳಿದ್ದನು. ಹೀಗಾಗಿ ಅನೇಕ ಮಸೂದೆಗಳು ಕಾಂಗ್ರೆಸ್ಸಿನ ಬೆಂಬಲವಿಲ್ಲದೇ ಬಿದ್ದು ಹೋದವು. ಯುದ್ಧದಲ್ಲಿ ಸೈನ್ಯಕ್ಕೆ ಸೇರಲು ನಿರಾಕರಿಸಿದ ೧೦,೦೦೦ ಜನರನ್ನು ಕ್ಷಮಾದಾನದ ಮೂಲಕ ಬಿಡುಗಡೆ ಗೊಳಿಸಿದನು. ನಿರುದ್ಯೋಗ ಸಮಸ್ಯೆಯನ್ನು ತಗ್ಗಿಸಿ ಕನಿಷ್ಠ ವೇತನದ ಏರಿಕೆಯನ್ನು ಮಾಡಿದ್ದು ಕಾರ್ಟರ್‌ನ ಕಾಲದಲ್ಲಾದ ಮುಖ್ಯ ಸುಧಾರಣೆಗಳಲ್ಲಿ ಒಂದು. ಆದರೆ ತೈಲ ಬೆಲೆಯಲ್ಲಿ ಆದ ಏರಿಕೆ ಹಾಗೂ ಪೂರೈಕೆಯಲ್ಲಾದ ಕೊರತೆ ಕಾರ್ಟರ್‌ನ ಕಾಲದ ಆಡಳಿತದಲ್ಲಿ ಉದ್ಭವಿಸಿದ ಕಪ್ಪುಚುಕ್ಕೆಯಾಯಿತು. ಇದು ಇಸ್ರೇಲ್ ದೇಶದ ವಿಷಯದಲ್ಲಿ ದ್ವಂದ್ವ ನೀತಿಯನ್ನು ಅನುಸರಿಸುತ್ತಿದ್ದ ಅಮೆರಿಕಾದ ತಂತ್ರಗಳನ್ನು ವಿರೋಧಿಸಿದ ಅರಬ್ ರಾಷ್ಟ್ರಗಳು ಒಗ್ಗಟ್ಟಿನಿಂದ ಎದುರಿಸಿ ತಿರುಗಿಬಿದ್ದುದರ ಪರಿಣಾಮದಿಂದಾಗಿತ್ತು. ಈ ಪರಿಣಾಮಗಳು ಅಮೆರಿಕಾದ ಆರ್ಥಿಕ ಸ್ಥಿತಿಯನ್ನೇ ಬುಡಮೇಲು ಮಾಡಿದವು.

ಆಂತರಿಕ ಆಡಳಿತದಲ್ಲಿನ ಬಿಗಿಹಿಡಿತ ಸಡಿಲುಗೊಳ್ಳುವುದರ ಜೊತೆಗೆ ಈ ಹಿಂದೆ ಅಮೆರಿಕಾ ಹೊಂದಿದ್ದ ವಿದೇಶ ನೀತಿಗಳು ಸಹ ಕಾರ್ಟರ್‌ನ ಆಡಳಿತದಲ್ಲಿ ಗೊಂದಲಕ್ಕೆ ಒಳಗಾದವು. ತಾನೇ ನೇಮಿಸಿಕೊಂಡ ಆಡಳಿತ ಮಂಡಳಿಯ ಸದಸ್ಯರುಗಳ ನಡುವೆ ತಾಳಮೇಳ ಸರಿಯಾಗಿಲ್ಲದೇ ಅನೇಕ ಬಾರಿ ಪೇಚಿಗೆ ಸಿಲುಕಿದ್ದುಂಟು. ಇರಾನಿನಲ್ಲಿ ನಡೆದ ಪ್ರಕರಣ ಈತನ ಆಡಳಿತದಲ್ಲಿ ನಡೆದ ಒಂದು ಕೆಟ್ಟ ಘಟನೆಯಾಗಿತ್ತು. ಅಮೆರಿಕಾವನ್ನು ಬೆಂಬಲಿಸುತ್ತ ಬಂದಿದ್ದ ಸರ್ವಾಧಿಕಾರಿ ಷಾ ಮಹಮ ರೇಜಾ ಷಾ ಪೆಹ್ಲವಿ ಆಡಳಿತದ ವಿರುದ್ಧ ಸ್ಥಳೀಯರು ದಂಗೆ ಎದ್ದು ಆತನನ್ನು ಆಡಳಿತದಿಂದ ಪದಚ್ಯುತಗೊಳಿಸಲಾಯಿತು. ಆಲ್ಲದೇ ಸರ್ವಾಧಿಕಾರಿಯ ಬೆಂಬಲಕ್ಕಿದ್ದ ಅಮೆರಿಕಾಕ್ಕೆ ಭಯ ಹುಟ್ಟಿಸಲು ಸುಮಾರು ೫೨ ಜನ ಅಮೆರಿಕಾನ್ನರನ್ನು ಇರಾನ್ ಕ್ರಾಂತಿಕಾರಿಗಳು ಒತ್ತೆ ಇರಿಸಿಕೊಂಡರು. ಇದರಿಂದ ವಿಚಲಿತ ಗೊಂಡ ಕಾರ್ಟರ್ ಮೊದಮೊದಲು ಬೆದರಿಕೆಯ ತಂತ್ರಗಳನ್ನು ಅನುಸರಿಸಿದರೂ ಇರಾನ್ ಬಗ್ಗಲಿಲ್ಲ. ಎರಡು ವರ್ಷಗಳ ನಂತರ ಕೆಲವು ಷರತ್ತುಗಳ ಮೇಲೆ ಕೆಲವರನ್ನು ಬಿಡುಗಡೆಗೊಳಿಸಲಾಯಿತು. ಇದು ಕಾರ್ಟರ್‌ನ ಆಡಳಿತದ ವೈಫಲ್ಯವೆಂದು ಅಭಿಪ್ರಾಯಿಸ ಲಾಗಿದೆ.

ಸಾಲ್ಟ್ ಒಪ್ಪಂದಗಳು

ಸೋವಿಯತ್ ರಷ್ಯಾದ ಅಧ್ಯಕ್ಷ ಬ್ರಿಜೆನೆವ್‌ನೊಡನೆ ಸಾಲ್ಟ್ ಒಪ್ಪಂದವನ್ನು ಅಧ್ಯಕ್ಷ ಕಾರ್ಟರ್ ಮಾಡಿಕೊಂಡನು. ಇದರ ಮೂಲಕ ಶಸ್ತ್ರಾಸ್ತ್ರಗಳ ತಯಾರಿಕಾ ಪೈಪೋಟಿಯನ್ನು ಕಡಿಮೆಗೊಳಿಸಿ ಶೀತಲಸಮರದ ಕಾವನ್ನು ಕಡಿಮೆ ಮಾಡಲಾಯಿತು. ಆದರೆ ಇಥಿಯೋಪಿಯಾ, ಅಂಗೋಲಾ ಹಾಗೂ ಅಫ್ಘಾನಿಸ್ತಾನದಲ್ಲಿ ಸೋವಿಯತ್ ರಷ್ಯಾ ಕೈಗೊಂಡ ಸೈನಿಕ ಕಾರ್ಯಾಚರಣೆಗಳಿಂದಾಗಿ ಮತ್ತೆ ಎರಡು ದೇಶಗಳ ನಡುವೆ ಭಾರೀ ಮನಸ್ತಾಪ ಉಂಟಾಯಿತು. ಅಲ್ಲದೇ ಯು.ಎಸ್.ಎಸ್.ಆರ್‌ನ ನೀತಿಗಳನ್ನು ವಿರೋಧಿಸಿ, ಪ್ರತಿಭಟನೆಯ ಪ್ರಯುಕ್ತ ಮಾಸ್ಕೋದಲ್ಲಿ ನಡೆದ ಒಲಂಪಿಕ್ ಕ್ರೀಡಾಕೂಟವನ್ನು ಅಮೆರಿಕಾ ಬಹಿಷ್ಕರಿಸಿ ತನ್ನ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಕಾರ್ಟರ್‌ನ ಆಡಳಿತಾವಧಿಯಲ್ಲಿ ತೆಗೆದುಕೊಂಡ ಕೆಲವು ಮಹತ್ವದ ನಿರ್ಣಯಗಳಲ್ಲಿ ಪನಾಮಾ ಸಮಸ್ಯೆ ಮುಖ್ಯವಾದುದು. ಕೆಲವು ದಶಕಗಳಿಂದಲೂ ಪನಾಮಾ ಕಾಲುವೆ ಮೇಲಿದ್ದ ಅಮೆರಿಕಾದ ಹಕ್ಕು ಸ್ವಾಮ್ಯವನ್ನು ಬೇಷರತ್ತಾಗಿ ಹಿಂತೆಗೆದುಕೊಂಡು ಪನಾಮಾ ದೇಶಕ್ಕೆ ಜವಾಬ್ದಾರಿಗಳನ್ನು ವಹಿಸಿಕೊಡಲಾಯಿತು. ಇಂಥ ಬದಲಾವಣೆಗಳು ಭವಿಷ್ಯದಲ್ಲಿ ಅಮೆರಿಕಾ ಬದಲಾಗುವ ಸೂಚನೆಯನ್ನು ನೀಡಿತು.

ಇಸ್ರೇಲ್‌ನ ಅಸ್ತಿತ್ವವನ್ನು ಸದಾ ಅಲ್ಲಗಳೆಯುತ್ತಿದ್ದ ಅರಬ್ ಒಕ್ಕೂಟವನ್ನು ಅಸ್ಥಿರಗೊಳಿಸುವುದರಲ್ಲಿ ಅಮೆರಿಕ ಕಾರ್ಯಪ್ರವೃತ್ತವಾಯಿತು. ಮೊಟ್ಟಮೊದಲಿಗೆ ಈ ಒಕ್ಕೂಟದಿಂದ ಈಜಿಪ್ಟ್ ದೇಶವನ್ನು ಅಮೆರಿಕಾವು ಉಪಾಯವಾಗಿ ಹೊರಬರುವಂತೆ ಮಾಡಿತು. ಇಸ್ರೇಲ್, ಈಜಿಪ್ಟ್ ಹಾಗೂ ಅಮೆರಿಕಾ ದೇಶಗಳ ನಡುವೆ ಶಾಂತಿ ಸಂಧಾನ ಮಾಡುವ ಪ್ರಯತ್ನದಲ್ಲಿ ಅರಬ್ ಒಕ್ಕೂಟದ ಇನ್ನೊಂದು ಗುಂಪನ್ನು ರಚಿಸುವಲ್ಲಿ ಯಶಸ್ವಿಯಾಯಿತು. ಕ್ಯಾಂಪ್ ಡೇವಿಡ್‌ನಲ್ಲಿ ಸಭೆ ಸೇರಿ ತೆಗೆದುಕೊಂಡ ನಿರ್ಣಯಗಳಲ್ಲಿ ಇಸ್ರೇಲ್ ದೇಶವನ್ನು ಅರಬ್ ಒಕ್ಕೂಟದಲ್ಲಿದ್ದ ಈಜಿಪ್ಟ್ ದೇಶವು ಒಪ್ಪುವಂತೆ ಮಾಡಿದ್ದು, ಇಡೀ ವಿಶ್ವವೇ ಈ ಹಿಂದೆ ಇಸ್ರೇಲ್ ಬಗೆಗೆ ತಳೆದಿದ್ದ ನಿಲುವಿನಲ್ಲಿ ಮರು ಆಲೋಚಿಸುವಂತೆ ಮಾಡಿತು. ಇಂಥ ಅದ್ಭುತಕಾರ್ಯ ಮಾಡುವಲ್ಲಿ ಮೊಟ್ಟ ಮೊದಲಿಗೆ ಅಧ್ಯಕ್ಷ ಕಾರ್ಟರ್ ಫಲಪ್ರದನಾದ. ಮಾವೋನ ಆಡಳಿತದ ಸಮಯದಲ್ಲಿ ತೀವ್ರವಾಗಿ ಹದಗೆಟ್ಟಿದ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಚೀನಾ ದೇಶದೊಡನೆ ಪೂರ್ಣ ಪ್ರಮಾಣದ ರಾಯಭಾರ ಸಂಬಂಧವನ್ನು ಸ್ಥಾಪಿಸಿದನು. ಕಾರಣ ಎಪ್ಪತ್ತರ ದಶಕದ ಕೊನೆಯ ಅವಧಿಯಲ್ಲಿ ಚೀನಾ ಮತ್ತು ರಷ್ಯಾ ದೇಶಗಳು ಹದಗೆಡಲಾರಂಭಿಸಿದ್ದವು. ಇದನ್ನೇ ಕಾಯುತ್ತಿದ್ದ ಅಮೆರಿಕಾ ತನಗೆ ಇಷ್ಟವಿಲ್ಲದಿದ್ದರೂ ಸಂಬಂಧಗಳ ದಾಳಗಳನ್ನು ಎಸೆಯುವಲ್ಲಿ ಸಫಲವಾಯಿತು. ಅಲ್ಲದೇ ಇದರಿಂದ ಚೀನಾ ದೇಶವು ವಿಶ್ವಸಂಸ್ಥೆಯಲ್ಲಿ ಖಾಯಂ ಪ್ರತಿನಿಧೀಕರಣ ಪಡೆಯುವಲ್ಲಿ ಅಮೆರಿಕಾದಿಂದ ಹೆಚ್ಚಿನ ಸಹಾಯ ಲಭ್ಯವಾಯಿತು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಕೆಲವು ತೀರ್ಮಾನಗಳನ್ನು ಕಾರ್ಟರ್ ಆಡಳಿತ ಕೈಗೊಂಡರೂ ಆಂತರಿಕ ಹಾಗೂ ವಿದೇಶಿ ವ್ಯವಹಾರಗಳ ನಿರ್ವಹಣೆಯಲ್ಲಿ ಅನುತ್ತೀರ್ಣನಾದವನಂತೆ ಕಂಡುಬಂದ. ಆಡಳಿತದ ಹೆಚ್ಚಿನ ವೈಫಲ್ಯ ಹೊಂದಿದ ಕಾರ್ಟರ್ ೧೯೮೦ರ ಮಹಾಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ರೋನಾಲ್ಡ್ ರೇಗನ್ ವಿರುದ್ಧ ಭಾರೀ ಅಂತರದಿಂದ ಸೋತನು. ಸೆನೆಟ್‌ನಲ್ಲಿಯೂ  ಕಾರ್ಟರ್‌ನ ಡೆಮೊಕ್ರಾಟಿಕ್ ಪಕ್ಷ ಈ ಹಿಂದೆ ಹೊಂದಿದ್ದ ಸಂಖ್ಯಾಬಲವನ್ನು ಕಳೆದುಕೊಂಡಿತು. ಕ್ಯಾಲಿಫೋರ್ನಿಯಾದ ಗವರ್ನರನಾಗಿ ಆಡಳಿತ ಅನುಭವ ಹೊಂದಿದ್ದ ರೇಗನ್ ಈ ಮೊದಲು ಹಾಲಿವುಡ್ ತಾರೆಯಾಗಿಯೂ ಮಿಂಚಿದ್ದನು. ಅಲ್ಲದೇ ಈ ಹಿಂದೆ ೧೯೭೬ರ ಚುನಾವಣೆಯಲ್ಲಿ ಜೆರಾಲ್ಡ್ ಫೋರ್ಡ್‌ನ ವಿರುದ್ಧ ಸ್ಪರ್ಧಿಸಿ ಸೋತ ಅನುಭವವಿತ್ತು. ಸಾಂಪ್ರದಾಯಿಕ ರಾಜಕೀಯ ತತ್ವಗಳಲ್ಲಿ ನಂಬಿಕೆ ಇಟ್ಟಿದ್ದ ರೇಗನ್ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ, ಸರಕಾರದ ವೆಚ್ಚವನ್ನು ತಗ್ಗಿಸುವ, ತಲಾ ಆದಾಯದ ಮೇಲಿನ ಸುಂಕವನ್ನು ಕಡಿಮೆ ಮಾಡುವ ಪ್ರಮುಖ ಕಾರ್ಯಗಳನ್ನು ಕೈಗೆತ್ತಿಕೊಂಡನು. ಆಡಳಿತದ ನಿರ್ವಹಣೆಯಲ್ಲಿ ಮಹತ್ವದ ಕ್ಷೇತ್ರಗಳಾಗಿದ್ದ ರಕ್ಷಣೆ ಹಾಗೂ ಬಾಹ್ಯಾಕಾಶ ವಿಜ್ಞಾನ ಪ್ರಗತಿಗೆ ಹೆಚ್ಚಿನ ಹಣ ಒದಗಿಸಿದನು. ಮೊದಲಿನಿಂದಲೂ ತನ್ನ ಆಡಳಿತ ಮಂಡಳಿಯ ಸದಸ್ಯರ ಮೇಲೆ ಅಷ್ಟೊಂದು ಆಸಕ್ತಿ ತೋರಿಸದ ರೇಗನ್ ಅವರ ಚಾರಿತ್ರ್ಯಹೀನತೆಯ ಬಗೆಗೆ ಹೆಚ್ಚಿನ ಮುತುವರ್ಜಿ ವಹಿಸಲಿಲ್ಲ. ಹೀಗಾಗಿ ಆಡಳಿತ ಸಿಬ್ಬಂದಿಯು ವ್ಯಭಿಚಾರ ಹಾಗೂ ಭ್ರಷ್ಟಾಚಾರದಲ್ಲಿ ಮುಳುಗಿದ್ದರು. ಇದರ ಪರಿಣಾಮದಿಂದ ಹೆಚ್ಚಿನ ಜನರು ರೇಗನ್ ಆಡಳಿತದ ಬಗೆಗೆ ಅಸಮಾಧಾನಗೊಳ್ಳುವಂತಹ ಪರಿಸ್ಥಿತಿಯು ನಿರ್ಮಾಣವಾಯಿತು. ಆದರೆ ೧೯೮೧ರಲ್ಲಿ ರೇಗನ್ ಮೇಲೆ ನಡೆದ ಹತ್ಯೆಯ ಘಟನೆಯು ವಿಫಲಗೊಂಡು ಅಪಾಯದಿಂದ ಅಧ್ಯಕ್ಷ ರೇಗನ್ ಪಾರಾದಾಗ ಇದ್ದಕ್ಕಿದ್ದಂತೆ ಆತನ ಬಗೆಗೆ ಅನುಕಂಪದ ಅಲೆ ವೇಗವಾಗಿ  ಬೀಸಲಾರಂಭಿಸಿತು. ಇದರಿಂದ ಆತನ ಜನಪ್ರಿಯತೆ ಹೆಚ್ಚಿನ ಪರಾಕಾಷ್ಠತೆಯನ್ನು ತಲುಪಿತು. ಅದು ಮುಂದಿನ ಚುನಾವಣೆಯಲ್ಲಿ ಗೆಲುವಿನ ಹೊಸದಾರಿಯನ್ನು ಮೊದಲೇ ಸೃಷ್ಟಿಸಿದಂತಾಯಿತು.

ರೇಗನಾಮಿಕ್ಸ್

ರೋನಾಲ್ಡ್ ವಿಲ್ಸನ್ ರೇಗನ್ ಜಾರಿಗೆ ತಂದ ತುರ್ತು ಆರ್ಥಿಕ ಕಾರ್ಯಕ್ರಮಗಳನ್ನು ರೇಗನಾಮಿಕ್ಸ್ ಎಂದು ಕರೆಯುತ್ತಾರೆ. ಫೆಡರಲ್ ಸರಕಾರದ ಖರ್ಚು ಕಡಿಮೆ ಮಾಡುವುದು, ತೆರಿಗೆಗಳನ್ನು ಕಡಿತಗೊಳಿಸುವುದು ಹಾಗೂ ಸಾಲದ ಮೇಲಿನ ಬಡ್ಡಿಯ ದರ ಏರಿಸುವುದರಿಂದ ಹದಗೆಟ್ಟಿದ್ದ ಆರ್ಥಿಕ ವ್ಯವಸ್ಥೆ ಉತ್ತಮಗೊಳ್ಳುವುದೆಂದು ನಿರೀಕ್ಷಿಸಿದ್ದನು. ಆದರೆ ಇಂಥ ನೀತಿಗಳಿಂದ ರಾಷ್ಟ್ರಮಟ್ಟದಲ್ಲಿ ಆರ್ಥಿಕ ಪ್ರಗತಿಯ ಇಳಿಕೆ ಕಂಡುಬಂದಿತೇ ಹೊರತು ಏರಿಕೆಯಾಗಲಿಲ್ಲ. ಹೀಗಾಗಿ ಪ್ರತಿ ಬಜೆಟ್‌ನಲ್ಲಿ ಕೊರತೆಯು ಭಾರೀ ಪ್ರಮಾಣದಲ್ಲಿ ತಲೆದೋರಿತು. ಇವೆಲ್ಲವುಗಳ ಪರಿಣಾಮದಿಂದಾಗಿ ನಿರುದ್ಯೋಗ ಪ್ರಮಾಣ ವೇಗವಾಗಿ ಹಾಗೂ ಅಪಾಯಕಾರಿ ಪ್ರಮಾಣದಲ್ಲಿ ಏರುತ್ತ ಹೋಗಿ ದೇಶವೇ ಗಾಬರಿ ಗೊಳ್ಳುವಂತ ಸ್ಥಿತಿ ನಿರ್ಮಾಣವಾಯಿತು. ಈ ಸ್ಥಿತಿಯನ್ನು ಸ್ವತಃ ರಿಪಬ್ಲಿಕನ್ ಪಕ್ಷದ ನೇತಾರ ಜಾರ್ಜ್ ಬುಷ್(ಸೀನಿಯರ್) ಕಟುವಾಗಿ ಟೀಕಿಸಿದನು. ಅಪಾಯವನ್ನು ಅರಿತ ರೇಗನ್ ಆಡಳಿತವು ಸಾಲದ ಮಿತಿಯನ್ನು ಗರಿಷ್ಠ ಪ್ರಮಾಣದಲ್ಲಿ ಏರಿಸಿ ಜಾರಿಗೊಳಿಸಲು ಕಾಂಗ್ರೆಸ್‌ನ ಒಪ್ಪಿಗೆ ಪಡೆಯಿತು. ಈ ಎಲ್ಲ ಪ್ರಪಾತಗಳ ಮಧ್ಯೆಯೂ ಅಮೆರಿಕಾದ ಜನತೆಯ ವೈಯಕ್ತಿಕ ಸಂಪತ್ತು ಹಾಗೂ ಅವರು ಮಾಡುತ್ತಿದ್ದ ವೆಚ್ಚಗಳು ಗಣನೀಯ ಪ್ರಮಾಣದಲ್ಲಿ ಏರಿಕೆ ಆಗಿದ್ದವು. ಇದೊಂದು ಅದ್ಭುತವೇ ಸರಿ. ಕ್ರಮೇಣ ಹಣದುಬ್ಬರ ಕಡಿಮೆ ಆಯಿತು. ನಿರುದ್ಯೋಗದ ಪ್ರಮಾಣ ಶೇಕಡಾ ೧೧ಕ್ಕೆ ಮಿತಿಗೊಳಗಾಯಿತು. ಆದಾಯದ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವುದರಿಂದ ಈ ಮೂಲಕ ಹೆಚ್ಚುವ ಆದಾಯದಿಂದ ಉದ್ಯೋಗ ಸೃಷ್ಟಿಗೊಂಡು ಇಮ್ಮಡಿಗೊಳ್ಳಬಹುದೆಂದು ನಿರೀಕ್ಷಿಸಲಾಗಿತ್ತು ಆದರೆ ಬರುವ ಆದಾಯ ಕೆಲವರ ಕೈಯಲ್ಲಿ ಸಿಕ್ಕಿದ್ದರಿಂದ ಲೆಕ್ಕಾಚಾರದಂತೆ ಕಾರ್ಯಗಳು ನಡೆಯಲಿಲ್ಲ, ವಿಪರೀತ ಖಾಸಗೀಕರಣಕ್ಕೆ ಆಸ್ಪದ ನೀಡಿದ್ದರಿಂದ ಸಾಲ ಹಾಗೂ ಉಳಿತಾಯ ಮಾಡುವ ಸಂಸ್ಥೆಗಳ ಮೇಲೆ ಅನಿಯಂತ್ರಣ ತಲೆದೋರಿತು. ಕೇವಲ ಬಾಯಿಮಾತಿನಿಂದ ಮಾತ್ರ ಈ ಸಂಸ್ಥೆಗಳ ವ್ಯವಹಾರ ನಡೆಯುತ್ತಿದ್ದವು. ಅವುಗಳನ್ನು ನಿಯಂತ್ರಿಸುವ ನೀತಿ ನಿಯಮಗಳು ರೂಪ ಗೊಳ್ಳಲಿಲ್ಲ. ಅಲ್ಲದೇ ಯಾವುದೇ ನಿರ್ದಿಷ್ಟವಾದ ಜವಾಬ್ದಾರಿ ಅವುಗಳಿಗೆ ಇರಲಿಲ್ಲ.

ಸರಕಾರದ ನಿಯಂತ್ರಣ ತಪ್ಪಿತೆಂದು ಅರಿತ ಕೆಲವು ಕಂಪನಿಗಳು ದಿವಾಳಿ ಘೋಷಿಸುವ ಹುನ್ನಾರ ಮಾಡಿದವು. ಆದರೆ ಉಪಾಯದಿಂದ ರೇಗನ್ ಮಧ್ಯ ಪ್ರವೇಶಿಸಿ ಆಗಬಹುದಾದ ಭಾರೀ ಪ್ರಮಾಣದ ಅನಾಹುತವನ್ನು ಚಾಣಾಕ್ಷತನದಿಂದ ತಪ್ಪಿಸಿದನು. ಸಣ್ಣ ಸಣ್ಣ ಹಣಕಾಸಿನ ಸಂಸ್ಥೆಗಳು ದೊಡ್ಡ ಸಂಸ್ಥೆಗಳಲ್ಲಿ ವಿಲೀನಗೊಂಡು ಬಂಡವಾಳ ಟ್ರಿಲಿಯನ್ ಡಾಲರ್‌ವರೆಗೂ ವಿಸ್ತರಿಸಿತು. ಆದರೆ ಅದರ ನಿಯಂತ್ರಣ ಮಾತ್ರ ಕೇವಲ ಕೆಲವೇ ಶ್ರೀಮಂತರ ಕೈವಶವಾಗಿ ಈ ಪರಿಣಾಮದಿಂದ ಬಡವರು ಹಾಗೂ ನಿರ್ಗತಿಕರು ಹೆಚ್ಚಾದರು. ಒಟ್ಟಿನಲ್ಲಿ ಆರ್ಥಿಕತೆಯ ವೈಫಲ್ಯ ಕಂಡ ವಿಫಲ ಆಡಳಿತವೆಂದು ರೇಗನ್‌ನ ಕಾಲವನ್ನು ಟೀಕೆಗೆ ಒಳಪಡಿಸಿದ್ದಾರೆ. ಆಕ್ರಮಣಕಾರಿ ಧೋರಣೆಗಳಿಂದ ಆಡಳಿತ ಪ್ರಾರಂಭಿಸಿದ ರೇಗನ್ ಅಮೆರಿಕಾ ಹೊಂದಿದ್ದ ಬಾಹ್ಯ ಸಂಬಂಧಗಳಿಗೂ ಸಹ ಉದ್ವೇಗದ ಚಲನೆಯನ್ನು ನೀಡಿದ. ಮುಖ್ಯವಾಗಿ ಸೋವಿಯಟ್ ರಷ್ಯಾ ಹಾಗೂ ಅದರ ಬೆಂಬಲಿತ ದೇಶಗಳು ಆತನ ತಿರಸ್ಕಾರಕ್ಕೆ ಒಳಗಾದವು. ತನ್ನ ರಕ್ಷಣಾ ವೆಚ್ಚವನ್ನು ಏರಿಸುವುದರ ಜೊತೆಗೆ ಹಾಗೂ ಶಸ್ತ್ರಾಸ್ತ್ರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸುವ ಮೂಲಕ ಸೋವಿಯಟ್ ರಷ್ಯಾದ ಆಡಳಿತಕ್ಕೆ ಭಯ ಹಾಗೂ ಅದರ ದಿಕ್ಕು ತಪ್ಪಿಸುವ ತಂತ್ರಗಳನ್ನು ಅನುಸರಿಸಿದನು. ಏಕಕಾಲಕ್ಕೆ ಅಲ್ಲದೇ ರಷ್ಯಾದ ಮಿತ್ರತ್ವದಿಂದ ಹಿಂದೆ ಸರಿದಿದ್ದರ ಪರಿಣಾಮವನ್ನು ಸದುಪಯೋಗಪಡಿಸಿಕೊಂಡು ಚೀನಾ ದೇಶದೊಡನೆ ಅವಕಾಶ ಬಳಸಿಕೊಂಡು  ತತ್‌ಕ್ಷಣವೇ ತೀವ್ರವಾದ ರಾಯಭಾರ ಸಂಬಂಧಗಳನ್ನು ಆರಂಭಿಸಿದ. ಈ ಮೂಲಕ ದಕ್ಷಿಣ ಹಾಗೂ ಪೂರ್ವ ಏಷ್ಯಾದ ಮೇಲೆ ಅಮೆರಿಕಾದ ಹಿಡಿತವನ್ನು ಬಿಗಿಗೊಳಿಸಿ ವಿಸ್ತರಿಸುವ ಗುರಿ ಆತನದ್ದಾಗಿತ್ತು. ಅದೇ ಕಾಲಕ್ಕೆ ಈ ಎರಡು ದೇಶಗಳು ಮನಸ್ತಾಪದಿಂದ ದೂರವಾದಾಗ ಎಲ್ಲರಿಗೂ ತೋರಿಕೆಯ ರೂಪದಲ್ಲಿ ಕಾಣುವಂತೆ ಅವುಗಳನ್ನು(ರಷ್ಯಾ ಮತ್ತು ಚೀನಾ ದೇಶಗಳನ್ನು) ಒಂದೇ ವೇದಿಕೆಗೆ ತಂದು ಶಾಂತಿ ಸ್ಥಾಪಿಸುವ ಪ್ರತಿತಂತ್ರವನ್ನು ಸಹ ಅಮೆರಿಕಾ ಮಾಡುತ್ತಿತ್ತು. ಮೇಲ್ನೋಟದಲ್ಲಿ ಇದು ಜಾಗತಿಕ ಶಾಂತಿಯ ಬಗೆಗೆ ಅಮೆರಿಕಾ ಎಷ್ಟೊಂದು ಉತ್ಸುಕವಾಗಿದೆ ಎಂದು ತೋರಿಸುವ ಕಾರ್ಯತಂತ್ರವು ಇದರ ಹಿಂದಿತ್ತು. ಜಾಗತಿಕ ಮಟ್ಟದಲ್ಲಿ ತಲೆದೋರಿದ್ದ ಅಸ್ಥಿರತೆಯನ್ನು ಉಪಯೋಗಿಸಿಕೊಂಡು ಮಧ್ಯ ಪ್ರಾಚ್ಯದಲ್ಲಿ ಇಸ್ರೇಲ್ ಹೆಚ್ಚಿನ ಆಕ್ರಮಣಕಾರಿ ನೀತಿಯನ್ನು ಅನುಸರಿಸಲಾರಂಭಿಸಿತು. ರೇಗನ್ ಆಡಳಿತ ಅದನ್ನು ನಿಯಂತ್ರಿಸುವ ಬದಲು ಅದಕ್ಕೆ ಹಿಂಬಾಗಿಲಿನಿಂದ ಕುಮ್ಮಕ್ಕು ಹಾಗೂ ಅದೇ ವೇಳೆಗೆ ಹೇರಳ ಪ್ರಮಾಣದಲ್ಲಿ ಹಣ ಸಹಾಯ ಮಾಡಿತು. ಒಟ್ಟಿನಲ್ಲಿ ಅರಬ್ ಜಗತ್ತಿನ ಶಾಂತಿವ್ಯವಸ್ಥೆ ಯಾವ ಅಧ್ಯಕ್ಷನಿಗೆ ಬೇಕಾಗಿರಲಿಲ್ಲ ಎಂಬುದು ವೇದ್ಯವಾಗುತ್ತದೆ.

ಇರಾನ್ ಹಾಗೂ ಇರಾಕ್ ಯುದ್ಧದಲ್ಲಿ ಇರಾಕ್‌ಗೆ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಸರಬರಾಜು ಮಾಡಿ ಇಸ್ಲಾಂ ಮತೀಯರ ಕೆಂಗಣ್ಣಿಗೆ ರೇಗನ್ ಗುರಿಯಾದನು. ಲೆಬೆನಾನ್ ದೇಶದ ಸಮಸ್ಯೆ ರೇಗನ್‌ನ ಕಾಲದಲ್ಲಿ ಅತ್ಯಂತ ಗರಿಷ್ಠ ಮಟ್ಟದಲ್ಲಿ ಪ್ರಕ್ಷುಬ್ದವಾಯಿತು. ಒಂದೇ ಸಮನೆ ಇಸ್ರೇಲ್ ಲೆಬೆನಾನ್ ಪ್ರದೇಶಗಳನ್ನು ಆಕ್ರಮಿಸಿಕೊಳ್ಳುತ್ತ ಹೋಯಿತು. ಅದರ ಆಪಾಯವನ್ನು ಅರಿತ ಸಿರಿಯಾ, ಲಿಬಿಯಾ ಹಾಗೂ ಇರಾನ್ ದೇಶಗಳು ಗುಪ್ತವಾಗಿ ಲೆಬೆನಾನ್ ಬಂಡುಕೋರರ ಪರವಾಗಿ ಯುದ್ಧಕ್ಕಿಳಿದವು. ಇದೇ ವೇಳೆಗೆ ಅಮೆರಿಕಾ ಶಾಂತಿ ಪಾಲನಾ ಪಡೆಯ ನೆಪದಲ್ಲಿ ಇಸ್ರೇಲ್‌ನ ಪರವಾಗಿ ಲೆಬನಾನ್‌ನಲ್ಲಿ ತನ್ನ ದೇಶದ ಸೈನಿಕರನ್ನು ಪ್ರತಿ ಹೋರಾಟಕ್ಕೆ ಕಾರ್ಯಗತಗೊಳಿಸಿತು. ಇದರಿಂದ ರೊಚ್ಚಿಗೆದ್ದ ಕಟ್ಟರ್ ಇಸ್ಲಾಂ ಬೆಂಬಲಿಗರು ಅಮೆರಿಕಾ ಹಾಗೂ ಇಸ್ರೇಲ್ ವಿರುದ್ಧ ಜಿಹಾದ್(ಧರ್ಮಯುದ್ಧ) ಘೋಷಿಸಿದರು. ಒಟ್ಟಿನಲ್ಲಿ ಇಡೀ ಮಧ್ಯಪ್ರಾಚ್ಯ ೧೯೮೦ರ ದಶಕದಲ್ಲಿ ಯುದ್ಧದ ಕೂಪ ವಾಗಿ ಪರಿವರ್ತನೆ ಹೊಂದಿ ಜಾಗತಿಕ ಮಟ್ಟದಲ್ಲಿ ವಿವಾದದ ಬಹುದೊಡ್ಡ ಕೇಂದ್ರ ಬಿಂದುವಾಯಿತು. ಇಸ್ರೇಲ್ ಬಗೆಗೆ ಅಮೆರಿಕಾ ತಾಳಿದ್ದ ನಿಲುವುಗಳನ್ನು ವಿರೋಧಿಸಿದ ಲಿಬಿಯಾ ಗುಪ್ತವಾಗಿ ಪ್ಯಾಲೆಸ್ಟೈನ್ ಬಂಡುಕೋರರ ಪರವಾಗಿ ಯುದ್ಧಕ್ಕಿಳಿಯಿತು. ಇದರಿಂದ ಆಫ್ರಿಕ ಖಂಡದಲ್ಲಿರುವ ಅರಬ್ ರಾಷ್ಟ್ರವಾದ ಲಿಬಿಯಾ ಅಮೆರಿಕಾದ ಕೆಂಗಣ್ಣಿಗೆ ಸಹಜವಾಗಿ ಗುರಿಯಾಯಿತು. ಅಲ್ಲಿನ ಸರ್ವಾಧಿಕಾರಿ ಕರ್ನಲ್ ಮಹ್ಮದ್ ಗಡಾಫಿ ರಷ್ಯಾದ ಕುಮ್ಮಕ್ಕಿನಿಂದ ಜಾಗತಿಕ ಮಟ್ಟದಲ್ಲಿ ಅಮೆರಿಕಾದ ವಿರುದ್ಧ ಗುಪ್ತ ದಾಳಿಗಳಿಗೆ ಬೆಂಬಲ ನೀಡಿ ಸಂಘಟಿಸಿದನು. ಈ ಅಪಾಯವನ್ನು ಅರಿತ ಅಮೆರಿಕಾ ಲಿಬಿಯಾದ ಮೇಲೆ ತನ್ನ ಎಲ್ಲ ಸಿಟ್ಟನ್ನು ಕೇಂದ್ರೀಕರಿಸಿತು. ಅಲ್ಲದೇ ಲಿಬಿಯಾದ ನಿರಂಕುಶ ಆಡಳಿತ ಜಾಗತಿಕ ಭಯೋತ್ಪಾದನೆಯನ್ನು ಸೃಷ್ಟಿಸುತ್ತಿದೆ ಎಂದು ವ್ಯವಸ್ಥಿತವಾಗಿ ಪ್ರಚಾರ ಮಾಡಿತು. ಮಧ್ಯಪ್ರಾಚ್ಯದ ದೇಶಗಳ ಮೇಲೆ ಅಮೆರಿಕಾದ ಆಡಳಿತ ಎಲ್ಲ ಬಗೆಯ ದೃಷ್ಟಿಕೋನ ಕೇಂದ್ರೀಕರಿಸಿ ಅವುಗಳ ನಾಶಕ್ಕೆ ಅಂತಾರಾಷ್ಟ್ರೀಯ ಮಟ್ಟದ ವೇದಿಕೆಯನ್ನು ಸೃಷ್ಟಿಸಿತು. ಇದರಿಂದ ಉತ್ತೇಜನ ಪಡೆದ ಇಸ್ರೇಲ್ ವೇಗವಾಗಿ ಲೆಬನಾನ್‌ನನ್ನು ಆಕ್ರಮಿಸಿಕೊಳ್ಳುತ್ತ ಸಿರಿಯಾ ದೇಶಕ್ಕೆ ಭಯ ಹುಟ್ಟಿಸಿತು. ಮುನ್ನುಗುತ್ತಿದ್ದ ಇಸ್ರೇಲ್‌ಗೆ ಕಡಿವಾಣ ಹಾಕಲು ಅಮೆರಿಕಾ ಕಣ್ಣೊರೆಸುವ ತಂತ್ರಗಳನ್ನು ಅನುಸರಿಸುತ್ತ ಮಧ್ಯ ಪ್ರವೇಶಿಸಿ ತಾಕೀತು ಮಾಡುವ ವೇಳೆಗೆ ಲಘು ಬಗೆಯಿಂದ ಇಸ್ರೇಲ್ ಆಡಳಿತ ಲೆಬನಾನ್ ರಾಜಧಾನಿ ಬೈರೂತ್‌ನ್ನು ಒಳಗೊಂಡಂತೆ ಗೋಲ್ಡ್‌ನ ದಿಣ್ಣೆಗಳನ್ನು ಆಕ್ರಮಿಸಿಕೊಂಡಿತು. ಹಾಗೂ ತನ್ನ ಸೈನಿಕ ನೆಲೆಗಳನ್ನು ಸ್ಥಾಪಿಸಿ ಅಮೆರಿಕಾದ ಮುಂದಿನ ನಡವಳಿಕೆಗಳ ಬಗೆಗೆ ಕಾತುರತೆಯಿಂದ ಕಾಯಲಾರಂಭಿಸಿತು. ಅಲ್ಲದೇ ಏಕಾಏಕಿ ಇರಾಕ್ ಮೇಲೆ ಮಿಂಚಿನ ದಾಳಿ ಮಾಡಿ ಅಲ್ಲಿನ ಅಣುಕೇಂದ್ರಗಳನ್ನು ನಾಶಪಡಿಸಿತು. ಇಸ್ರೇಲ್ ದೇಶದ ಇಂಥ ಅತಿರೇಕದ ಕ್ರಮಗಳು ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಅಸಮಾಧಾನಕ್ಕೆ ಒಳಗಾದವು. ಇದರಿಂದ ಅಮೆರಿಕಾ ಸಹ ಇಸ್ರೇಲ್‌ನ ಸಂಬಂಧವಾಗಿ ತೀವ್ರ ಮುಖಭಂಗ ಅನುಭವಿಸುವಂತಾಯಿತು. ಮಧ್ಯಪ್ರಾಚ್ಯ ಸಮಸ್ಯೆಯಲ್ಲಿ ಅಮೆರಿಕಾದ ಪ್ರವೇಶದಿಂದ ಲೆಬನಾನ್‌ನಲ್ಲಿನ ಸ್ಥಳೀಯ ಕ್ರೈಸ್ತ ಸಂಘಟನೆಗಳು ಉತ್ತೇಜನಗೊಂಡು ಪ್ಯಾಲೆಸ್ಟೈನ್ ಜನರ ಸಾಮೂಹಿಕ ಕಗ್ಗೊಲೆಗೆ ಮುಂದಾದವು. ಹೀಗಾಗಿ ಮೊದಮೊದಲು ರಾಜಕೀಯ ಮೇಲಾಟಗಳಿಂದ ಕೂಡಿದ್ದ ಇಲ್ಲಿನ ಸಮಸ್ಯೆಗಳು ನಂತರದಲ್ಲಿ ಅಮೆರಿಕಾ ಕೈಗೊಂಡ ತಂತ್ರಗಳಿಂದ ಜನಾಂಗೀಯ ಬಣ್ಣ ಪಡೆದುಕೊಂಡ ಶಾಶ್ವತ ವೈಷಮ್ಯದ ಅಖಾಡವಾಗಿ ಮಧ್ಯಪ್ರಾಚ್ಯ ಮೈದಾನವು ಮಾರ್ಪಟ್ಟಿತು.