ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲೆದೋರಿದ್ದ ರಾಜಕೀಯ ಸಮಸ್ಯೆಗಳು

ಅಂತಾರಾಷ್ಟ್ರೀಯ ವ್ಯಾಪ್ತಿಯಲ್ಲಿ ೨೦೦೦ದಿಂದ ೨೦೦೯ರವರೆಗೆ ಮಧ್ಯಪ್ರಾಚ್ಯದಲ್ಲಿರುವ ಪ್ಯಾಲೆಸ್ಟೈನ್ ಹಾಗೂ ಹಳೆಯ ಬಾಲ್ಕನ್ ಪ್ರದೇಶದ ಯುಗೋಸ್ಲೋವಿಯಾ ರಾಷ್ಟ್ರಗಳು ಬಹುದೊಡ್ಡ ವಿವಾದದ ಕೇಂದ್ರ ಬಿಂದುಗಳಾದವು. ಅಮೆರಿಕಾವು ಯುಗೋಸ್ಲೋವಿಯದಲ್ಲಿನ ಕೊಸಾವೊ ಪ್ರದೇಶಕ್ಕೆ ಪ್ರತ್ಯೇಕ ರಾಷ್ಟ್ರ ಮನ್ನಣೆ ನೀಡಿ ಮುದ್ರೆ ಒತ್ತಿತ್ತು. ಅಖಂಡ ಯುಗೋಸ್ಲೋವಿಯಾದಿಂದ ಒಡೆದು ಪ್ರತ್ಯೇಕ ರಾಷ್ಟ್ರವಾಗಿದ್ದ ಸರ್ಬಿಯಾದಿಂದ ಮತ್ತೆ ಒಡೆದು ಅನೇಕ ಗೊಂದಲಗಳ ಮಧ್ಯೆ ಕೊಸಾವೊ ೨೦೦೯ರಲ್ಲಿ ಪ್ರತ್ಯೇಕತೆಯನ್ನು ಹೊಂದಿತು. ಈ ಪ್ರದೇಶದಲ್ಲಿದ್ದ ಅಲ್ಬೇನಿಯಾ ಜನಾಂಗಕ್ಕೆ ಸೇರಿದ ಮುಸ್ಲಿಂ ಸಮುದಾಯಕ್ಕೆ ಸಂಬಂಧಿಸಿದ ಜನರನ್ನು ತೊಂಬತ್ತರ ದಶಕದಲ್ಲಿ ಸರ್ಬಿಯಾದ ಆಡಳಿತಗಾರರು ನಿರ್ದಯವಾಗಿ ಲಕ್ಷ ಸಂಖ್ಯೆಯಲ್ಲಿ ಹತ್ಯೆಗೀಡು ಮಾಡಿದರು.

ಸರ್ಬಿಯಾದ ರಕ್ತಪಿಪಾಸು ಮನೋಭಾವನೆಗೆ ಬೇಸತ್ತು ೨೦೦೮ರಲ್ಲಿ  ಮಾಂಟೆನಿಗ್ರೊ ಪ್ರದೇಶವು ಸರ್ಬಿಯಾ ಒಕ್ಕೂಟದಿಂದ ಪ್ರತ್ಯೇಕವಾಯಿತು. ಅಲ್ಲದೇ ಐರೋಪ್ಯ ಒಕ್ಕೂಟದ ಬೆಂಬಲ ಹಾಗೂ ಅಮೆರಿಕಾ ನೇತೃತ್ವದ ನ್ಯಾಟೋ ಪಡೆಗಳ ಸಹಾಯದಿಂದ ಪ್ರತ್ಯೇಕತೆಯ ದಾರಿ ತುಳಿದ ಕೊಸಾವೊ ೨೦೦೯ರಲ್ಲಿ ಪ್ರತ್ಯೇಕವಾಯಿತು. ಬಿಲ್ ಕ್ಲಿಂಟನ್ ಆಡಳಿತದಲ್ಲಿ ಚಿಗುರಿಕೊಂಡಿದ್ದ ಕೊಸಾವೊ ಹೋರಾಟ ಬುಷ್‌ನ ಕಠಿಣ ನಿರ್ಧಾರಗಳಿಂದ ಅಂತಿಮ ರೂಪ ತಾಳುವಂತೆ ಮಾಡಿದವು. ಭವಿಷ್ಯದಲ್ಲಿ ಬಾಲ್ಕನ್ ಪ್ರದೇಶದ ಮೇಲೆ ಏಷ್ಯಾದ ಬಿಗಿ ಹಿಡಿತವನ್ನು ಸಡಿಲಿಸುವ ಹಾಗೂ ತನಗೊಂದು ಶಾಶ್ವತ ಮಿಲಿಟರಿ ನೆಲೆಯನ್ನು ಐರೋಪ್ಯ ಪ್ರದೇಶಗಳಲ್ಲಿ ಸ್ಥಾಪಿಸಿಕೊಳ್ಳುವ ಉದ್ದೇಶದಿಂದ ಹೊಸ ಉತ್ಸಾಹದೊಂದಿಗೆ ಕೊಸಾವೊದ ಪ್ರತ್ಯೇಕತೆಯನ್ನು ಅಮೆರಿಕಾ ಜಾಗತಿಕ ಮಟ್ಟದಲ್ಲಿ ಪ್ರಬಲವಾಗಿ ಪ್ರತಿಪಾದಿಸಿತು. ಆದರೆ ಇದನ್ನು ಸರ್ಬಿಯಾ ಆಡಳಿತ ಸುತರಾಂ ಒಪ್ಪಿಲ್ಲ. ಅಮೆರಿಕಾದ ಕುತಂತ್ರದಿಂದ ಹುಟ್ಟಿದ ಈ ರಾಷ್ಟ್ರ ನಕಲಿ ರಾಷ್ಟ್ರವು ಯಾವುದೇ ಗೊತ್ತು ಗುರಿಗಳಿಲ್ಲದ್ದು ಎಂದು ಮೂದಲಿಸಿ ಸರ್ಬಿಯಾ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿತು. ಈ ಸಂಬಂಧವಾಗಿ ಸರ್ಬಿಯಾ ಅಂತಾರಾಷ್ಟ್ರೀಯ ಕೋರ್ಟಿನ ಮೆಟ್ಟಲೇರಿದೆ. ಆದರೆ ವಿಶ್ವಸಂಸ್ಥೆಯ ಮೂಲಕ ಅಮೆರಿಕಾ ಹೂಡುತ್ತಿರುವ ತಂತ್ರಗಳ ಮುಂದೆ ಸರ್ಬಿಯಾದ ಯಾವ ಪ್ರತಿಭಟನಾ ಪ್ರಯತ್ನಗಳು ಫಲಕಾರಿಯಾಗುತ್ತಿಲ್ಲ. ಅಲ್ಲದೇ ಅಮೆರಿಕಾ ಆಡುವ ದ್ವಂದ್ವ ಆಟವನ್ನು ರಷ್ಯಾ, ಚೀನ ಹಾಗೂ ವಿಯಟ್ನಾಂ ದೇಶಗಳು ಮಾತ್ರ ಬಲವಾಗಿ ವಿರೋಧಿಸಿವೆ. ಇದು ಸಹ ಯಾವ ಪ್ರಯೋಜನಕ್ಕೆ ಬರಲಿಲ್ಲ. ಅಮೆರಿಕಾದ ಒತ್ತಡ ತಂತ್ರಗಳ ಮೂಲಕ ಜನಾಂಗವಾದದ ಹಿನ್ನೆಲೆಯಲ್ಲಿ ಕೊಸೊವೊಗೆ ಪ್ರತ್ಯೇಕತೆಯನ್ನು ನೀಡಿದ ವಿಷಯವನ್ನು ವಿಶ್ವಸಂಸ್ಥೆಯಲ್ಲಿ ಪ್ಯಾಲೈಸ್ಟೈನ್ ಹೋರಾಟಗಾರರು ಪ್ರಶ್ನಿಸಲಾರಂಭಿಸಿದ್ದಾರೆ. ಕೊಸೊವೊವನ್ನು ಒಪ್ಪುವು ದಾದರೆ ನಮಗೂ ಜನಾಂಗದವಾದದ  ನೀತಿ ನಿಯಮಗಳಡಿಯಲ್ಲಿ ಸ್ವತಂತ್ರ ದೇಶದ ಪರವಾನಿಗೆ ನೀಡಿ ಎಂಬುದು ಪ್ಯಾಲೈಸ್ಟೈನ್ ಆಡಳಿತಗಾರರ ಒತ್ತಡವಾಗಿದೆ. ಆದರೆ ಇಸ್ರೇಲ್‌ನ ಪರಮಾಪ್ತ ಅಮೆರಿಕಾವು ಈ ಸಮಸ್ಯೆಯನ್ನು ಕಂಡು ಕೇಳದಂತೆ ನಟಿಸಿ ಸುಮ್ಮನಾಗಿದೆ.

ಭಾರತದ ಜೊತೆಗಿನ ಅಮೆರಿಕಾದ ಸಂಬಂಧಗಳು

ದಕ್ಷಿಣ ಏಷ್ಯದ ರಾಜಕಾರಣಕ್ಕೆ ಸಂಬಂಧಿಸಿದಂತೆ ಈ ದಶಕದಲ್ಲಿ ಅಮೆರಿಕಾದ ಮನೋಭಾವನೆಗಳಲ್ಲಿ ಕೆಲಮಟ್ಟಿಗೆ ಬದಲಾವಣೆಗಳಾಗಿವೆ. ಭಾರತದ ಸಂಬಂಧಗಳಲ್ಲಿ ಭಾರೀ ಬದಲಾವಣೆಗಳನ್ನು ತಂದು ತೀವ್ರತರವಾದ ವಿಶ್ವಾಸವನ್ನು ಹೊಂದಲಾರಂಭಿಸಿ ಅನೇಕ ಒಪ್ಪಂದಗಳನ್ನು ಮಾಡಿಕೊಳ್ಳಲಾರಂಭಿಸಿದೆ. ಸೋವಿಯಟ್ ರಷ್ಯಾ ಪತನಾನಂತರ ಆ ಸ್ಥಾನವನ್ನು ಚೀನ ಅಕ್ರಮಿಸಿಕೊಳ್ಳುವ ಭಯ ಅಮೆರಿಕಾದ ಆಡಳಿತಕ್ಕಿದೆ. ಹೀಗಾಗಿ ಚೀನದಷ್ಟೇ ಶಕ್ತಿಶಾಲಿಯಾಗಿ ಎಲ್ಲ ರಂಗಗಳಲ್ಲಿ ಬೆಳೆಯುತ್ತಿರುವ ಭಾರತದ ಪರವಾಗಿ ಅಮೆರಿಕಾ ಹೆಚ್ಚಿನ ನಂಬಿಕೆಗೆ ಅರ್ಹವಾದ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದೆ. ಅಲ್ಲದೇ ತನ್ನಂತೆಯೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದಮ್ಯ ವಿಶ್ವಾಸ ಇಟ್ಟು ಮುನ್ನಡೆಯುತ್ತಿರುವ ಭಾರತವು ಅಮೆರಿಕಾದ ಪ್ರೀತಿಗೆ ಪಾತ್ರವಾಗುತ್ತಿದೆ. ಭವಿಷ್ಯತ್ತಿನಲ್ಲಿ ಸಮೂಹನಾಶಕ ಅಣ್ವಸ್ತ್ರಗಳನ್ನು ಬೃಹತ್ ಭಾರತವು ಉತ್ಪಾದಿಸದಿರಲಿ ಎಂಬ ಮುಖ್ಯ ಉದ್ದೇಶವಿಟ್ಟುಕೊಂಡು ಅಭಿವೃದ್ದಿಯ ನೆಪದಲ್ಲಾದರೂ ಭಾರತಕ್ಕೆ ಪರಮಾಣು ಇಂಧನ ಪೂರೈಸುವ ಕರಾರಿಗೆ ಒಪ್ಪಿಸಿ ಅಮೆರಿಕಾ ಅಡಳಿತವು ಭಾರತವನ್ನು ಕಟ್ಟಿಹಾಕುವ ಪ್ರಯತ್ನದಲ್ಲಿ ಯಶಸ್ವಿಯಾಗಿದೆ ಎಂಬುದು ರಾಜಕೀಯ ಟೀಕಾಕಾರರ ವಿಶ್ಲೇಷಣೆಯಾಗಿದೆ. ವಿಶ್ವಮಟ್ಟದಲ್ಲಿ ಪ್ರಬಲಶಕ್ತಿಯಾಗಿ ಬೆಳೆದು ಬರುತ್ತಿರುವ ಭಾರತವು ಎರಡು ಬಾರಿ ಯಶಸ್ವಿಯಾಗಿ ಅಣ್ವಸ್ತ್ರ ಪರೀಕ್ಷೆಯ ಪ್ರಯೋಗಗಳನ್ನು ಯಾವುದೇ ಅಂಜಿಕೆ ಇಲ್ಲದೆ ಕ್ರಮವಾಗಿ ೧೯೭೪ ಹಾಗೂ ೧೯೯೮ರಲ್ಲಿ ಮಾಡಿ ಕೈತೊಳೆದುಕೊಂಡಿದೆ. ಇದರಿಂದ ಹೆದರಿದ ಅಮೆರಿಕಾ ಹಾಗೂ ಐರೋಪ್ಯ ರಾಷ್ಟ್ರಗಳು ಭವಿಷ್ಯದಲ್ಲಿ ಅಣ್ವಸ್ತ್ರ ಬಲಾಬಲ ಪರೀಕ್ಷೆಗಳಲ್ಲಿ ಏಷ್ಯದ ರಾಷ್ಟ್ರಗಳು ತೊಡಗಿಸಿಕೊಳ್ಳದಂತೆ ನಿರ್ಬಂಧಿಸಲು ಎನ್.ಎಸ್.ಜಿ.(ನ್ಯೂಕ್ಲಿಯರ್ ಸಪ್ಲೆ ಗ್ರೂಪ್)ಯನ್ನು ಹುಟ್ಟುಹಾಕಿದವು. ಇವುಗಳೆಲ್ಲವು ಸೇರಿ ಎನ್.ಪಿ.ಟಿ. (ಅಣ್ವಸ್ತ್ರ ನಿಷೇಧ) ಒಪ್ಪಂದಕ್ಕೆ ಸಹಿ ಹಾಕಿ ಅಭಿವೃದ್ದಿಶೀಲ ರಾಷ್ಟ್ರಗಳನ್ನು ಕಟ್ಟಿ ಹಾಕುವ ಪ್ರಯತ್ನದಲ್ಲಿ ಯಶಸ್ವಿಯಾದವು. ಆದರೆ ಇದನ್ನು ಲೆಕ್ಕಿಸಿದ ಭಾರತ, ಚೀನಾ, ಪಾಕಿಸ್ತಾನ, ಇಸ್ರೇಲ್ ಹಾಗೂ ಉತ್ತರ ಕೊರಿಯಾ ದೇಶಗಳು ಗುಪ್ತವಾಗಿ ಅಣ್ವಸ್ತ್ರ ಸ್ಫೋಟಿಸುವ ಪ್ರಯೋಗಗಳನ್ನು ನಿರಂತರವಾಗಿ ಮಾಡಿದವು. ಇಂಥ ತ್ವೇಷಮಯ ವಾತಾವರಣ ಕಡಿಮೆಗೊಳಿಸಲು ಹಾಗೂ ಮುಂದಿನ ದಿನಗಳಲ್ಲಿ ಚೀನದ ವಿರುದ್ಧವಾಗಿ ಭಾರತವನ್ನು ನಿಲ್ಲಿಸುವ ತಂತ್ರಗಳ ಮುಂದಾಲೋಚನೆಯಿಂದ ಉಪಾಯವಾಗಿ ಅಮೆರಿಕಾ ೧೨೩ ಎಂಬ ಹೆಸರಿನಲ್ಲಿರುವ ಪರಮಾಣು ಒಪ್ಪಂದಕ್ಕೆ ಭಾರತವು ಶರಣಾಗುವಂತೆ ಮಾಡಿ ೨೦೦೮ರಲ್ಲಿ ಸಹಿ ಹಾಕುವಂತೆ ಮಾಡಿತು.

ಶಾಂತಿಯುತ ಉದ್ದೇಶಗಳಿಗೆ ಅಣುಶಕ್ತಿಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಎರಡು ದೇಶಗಳು ಸಹಿ ಹಾಕಿದವು. ಇದಕ್ಕೆ ಸಂಬಂಧಿಸಿದ ಸಂಶೋಧನೆ ಹಾಗೂ ಅವುಗಳ ವರ್ಗಾವಣೆಗಳಿಗೆ ಎರಡು ದೇಶಗಳು ಸಹಮತಿಸಿವೆ. ಅಲ್ಲದೇ ಎನ್‌ಎಸ್‌ಜಿ ದೇಶಗಳು ಭಾರತದ ಅಣುಶಕ್ತಿಗೆ ಬೇಕಾದ ಸಂಸ್ಕರಣಗೊಂಡ ಯುರೇನಿಯಂ ರಫ್ತು ಮಾಡಲು ತಮಗೆ ಮನಸ್ಸಿಲ್ಲದ್ದಿದ್ದರೂ ಅಮೆರಿಕಾದ ಒತ್ತಡದಿಂದ ಒಪ್ಪಿದವು. ಅಣು ಇಂಧನ ಮರುಸಂಸ್ಕರಣದ ಸ್ಥಾವರಗಳ ಹಾಗೂ ಅಣು ತಯಾರಿಕಾ ಘಟಕದ ಯೋಜನೆಗಳಿಗೆ ಅಂತಾರಾಷ್ಟ್ರೀಯ ಸುರಕ್ಷತಾ ಏಜೆನ್ಸಿ(ಐಎಇಎ) ವಿನಾಯಿತಿ ನೀಡುವ ಕಾರ್ಯಗಳಿಗೂ ಒಪ್ಪಂದದಲ್ಲಿ ಅನುಕೂಲ ಮಾಡಿಕೊಡಲಾಯಿತು. ಆದರೆ ಈ ಒಪ್ಪಂದದ ಕುರಿತು ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ವಿರೋಧ ವ್ಯಕ್ತವಾಯಿತು. ಇರಾನ್ ಮತ್ತು ಭಾರತದ ಸಂಬಂಧಗಳನ್ನು ಹದಗೆಡಿಸುವ ಹಾಗೂ ಚೀನದ ವಿರುದ್ಧ ಭಾರತವನ್ನು ಬಳಸಿಕೊಳ್ಳುವ ಹುನ್ನಾರ ೧೨೩ ಒಪ್ಪಂದದ ಹಿಂದೆ ಇದೆ ಎಂಬುದು ಪ್ರಮುಖ ಟೀಕೆಯಾಗಿದೆ. ಈಗಾಗಲೇ ಒಪ್ಪಿದಂತೆ ಕೊಳವೆ ಮಾರ್ಗಗಳ ಮೂಲಕ ಇರಾನ್ ದೇಶವು ಭಾರತಕ್ಕೆ ಪೂರೈಸಬೇಕೆಂದಿರುವ ಅನಿಲ ಕೊಳವೆ ಯೋಜನೆ ಸ್ಥಗಿತಗೊಳ್ಳುವ ಎಲ್ಲ ಸಾಧ್ಯತೆಗಳಿವೆ ಎಂದು ಅಭಿಪ್ರಾಯಿಸಲಾಗುತ್ತಿದೆ. ಅಲ್ಲದೇ ಎಲ್ಲ ಸಂಘಟನೆಗಳು ಒಡ್ಡಿರುವ ಅಡೆತಡೆಗಳನ್ನು (ಸಿ.ಟಿ.ಬಿ.ಟಿ, ಎನ್.ಪಿ.ಟಿ, ಎನ್.ಎಸ್.ಜಿ ಹಾಗೂ ಐ.ಎ.ಇ.ಎ) ಬದಿಗೊತ್ತಿ ಅಮೆರಿಕಾ ಭಾರತದ ಬೆಂಬಲಕ್ಕೆ ನಿಂತಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ೯/೧೧ರ ಘಟನೆಯ ನಂತರ ಅಮೆರಿಕಾ ತನ್ನ ನೀತಿಗಳಲ್ಲಿ ಭಾರೀ ಬದಲಾವಣೆ ತಂದುಕೊಂಡು ಭವಿಷ್ಯದಲ್ಲಿ ಭಾರತದ ಸಹಕಾರ ಅತೀ ಅವಶ್ಯಕ ಎಂಬ ಹಿನ್ನೆಲೆಯಲ್ಲಿ ಕಾರ್ಯ ಪ್ರವೃತ್ತವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ೨೦೦೬ರಲ್ಲಿ ಆದ ಹೈಡ್ ಕಾಯ್ದೆ ಪ್ರಕಾರ  ಭಾರತಕ್ಕೆ ಅಣು ಇಂಧನ ಪೂರೈಸುವ ಹಾಗೂ ಸ್ಥಗಿತ ಗೊಳಿಸುವ ಎಲ್ಲ ನೀತಿ ನಿಯಮಗಳ ಜುಟ್ಟುಗಳು ಅಮೆರಿಕಾದ ಕೈಯಲ್ಲಿ ಉಳಿದು ಕೊಂಡಿವೆ ಎಂದು ಕೆಲವು ಟೀಕಾಕಾರರು ಅಭಿಪ್ರಾಯಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಡಿಕೊಂಡ ಈ ಅಣು ಒಪ್ಪಂದದಿಂದ ಭಾರತವು ಇದುವರೆಗೂ ಕಾಯ್ದುಕೊಂಡು ಬಂದಿರುವ ಅಲಿಪ್ತ ಧೋರಣೆಗಳಿಗೆ ಪೂರ್ಣಪ್ರಮಾಣದ ತಿಲಾಂಜಲಿ ಇಟ್ಟಿದೆ ಎಂಬ ಪ್ರಬಲ ಆರೋಪ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಬಂದಂತಿದೆ. ಟೀಕೆ ಟಿಪ್ಪಣಿಗಳು ಏನೇ ಆಗಿದ್ದರೂ ಅಗಾಧವಾಗಿ ಬೆಳೆಯುತ್ತಿರುವ ಭಾರತದಲ್ಲಿನ ಜನಸಂಖ್ಯೆಯ ಆಗುಹೋಗು ಗಳಿಗೆ ಬೇಕಾಗಿರುವ ಭವಿಷ್ಯದಲ್ಲಿನ ಇಚ್ಛೆಗಳನ್ನು ಪೂರೈಸಲು ಕಡ್ಡಾಯವಾಗಿ ಅಪರಿಮಿತ ಇಂಧನ ಪೂರೈಕೆ ಬೇಕೇ ಬೇಕು. ಈ ಹಿನ್ನೆಲೆಯಲ್ಲಿ ಅಮೆರಿಕಾದ ಜೊತೆಗಿನ ಭಾರತದ ಒಪ್ಪಂದ ಸಂದರ್ಭೋಚಿತವಾದುದು ಎಂಬ ಅಭಿಪ್ರಾಯವನ್ನು ಸಹ ಹೆಚ್ಚಿನ ಜನ ವ್ಯಕ್ತಪಡಿಸಿದ್ದಾರೆ.

ಇರಾನ್ ಹಾಗೂ ಉತ್ತರ ಕೊರಿಯಾದ ಪೀಡನೆ

ಮಧ್ಯಪ್ರಾಚ್ಯದಲ್ಲಿ ತನ್ನ ಬಿಗಿ ಹಿಡಿತವನ್ನು ತೆರೆಮರೆಯಲ್ಲಿ ಕಾಯ್ದುಕೊಂಡು ಬರು ತ್ತಿರುವ ಅಮೆರಿಕಾ ಆಡಳಿತ ಇಸ್ರೇಲ್‌ನ ಬೆಂಬಲಕ್ಕೆ ನಿಂತಿದೆ. ಅಧ್ಯಕ್ಷ ಬುಷ್‌ನು, ೨೦೦೮ರಲ್ಲಿ ಇಸ್ರೇಲ್ ದೇಶವು ಲೆಬನಾನ್ ಮೇಲೆ ಮಾಡಿದ ಸಶಸ್ತ್ರ ದಾಳಿಯನ್ನು ಸಮರ್ಥಿಸಿಕೊಂಡನು. ಅಲ್ಲದೇ ೧೧/೯ರ ಘಟನೆ ನಂತರ ಅಮೆರಿಕಾದ ಅಂತಾರಾಷ್ಟ್ರೀಯ ನೀತಿಗಳು ಬದಲಾಗಿವೆ. ಹಿಜಿಬುಲ್ಲಾ ಹಾಗೂ ಮುಸ್ಲಿಂ ಮೂಲಭೂತವಾದ ಭವಿಷತ್ತಿನಲ್ಲಿ ತನಗೆ ತುಂಬಾ ಅಪಾಯಕಾರಿಯಾಗಿ ಮಾರ್ಪಾಡಾಗಬಹುದಾದ ಸಂಗತಿಗಳನ್ನು ದಟ್ಟವಾಗಿ ಮನಗಂಡಂತಿದೆ.  ಇದೇ ಕಾರಣದಿಂದ ಏನೋ ವಿಶ್ವಸಂಸ್ಥೆಯಲ್ಲಿ ಇಸ್ರೇಲನ್ನು ರಷ್ಯಾ ಹಾಗೂ ಚೀನ ಸೇರಿದಂತೆ ಅನೇಕ ರಾಷ್ಟ್ರಗಳು ಬಹಿರಂಗವಾಗಿ ಟೀಕಿಸಿದರೂ ಸ್ವಲ್ಪವೂ ತಲೆ ಕೆಡಿಸಿಕೊಳ್ಳದೇ ಅದರ ಎಲ್ಲ ಆಕ್ರಮಣಗಳಿಗೆ ರಾಜಕೀಯ ಬೆಂಬಲ ನೀಡಿ ಸುಮ್ಮನಾಗಿದೆ. ಕಾರಣ ಇಸ್ರೇಲ್ ಮೂಲಕ ಅರಬ್ ಜಗತ್ತನ್ನು ಸದಾ ಆತಂಕದಲ್ಲಿಡುವುದು ಅಮೆರಿಕಾದ ಯೋಜನೆ ಆಗಿದೆ. ಅಲ್ಲದೇ ಮಧ್ಯಪ್ರಾಚ್ಯದ ತ್ವೇಷಮಯ ವಾತಾವರಣಕ್ಕೆ ಇರಾನ್ ದೇಶವೇ ಬಹುಮುಖ್ಯ ಕಾರಣ ಎಂಬುದನ್ನು ಅಮೆರಿಕಾ ಹಾಗೂ ಇಸ್ರೇಲ್ ಪ್ರಬಲವಾಗಿ ಪ್ರತಿಪಾದಿಸುತ್ತಿವೆ. ಹೀಗಾಗಿ ಸಾಂಪ್ರದಾಯಿಕ ಬದ್ಧವೈರಿಗಳಾದ ಇರಾನ್ ಮತ್ತು ಸಿರಿಯಾ ರಾಷ್ಟ್ರಗಳು ಅಮೆರಿಕಾದ ಪ್ರಬಲ ವಿರೋಧಿಗಳಾಗಿ ಮಧ್ಯ ಪ್ರಾಚ್ಯದಲ್ಲಿ ನಿರ್ಮಾಣಗೊಂಡಿವೆ. ಆ ಕಡೆಗೆ ಪೂರ್ವ ತೀರದ ಏಷ್ಯಾದ ವಿಯಟ್ನಾಂ ಹಾಗೂ ಉತ್ತರ ಕೊರಿಯಾ ರಾಷ್ಟ್ರಗಳು ಕಳೆದ ಹತ್ತು ವರ್ಷಗಳಿಂದ ಅಮೆರಿಕಾದ ನಿದ್ದೆಗೆಡಿಸುತ್ತಿವೆ. ಚೀನಾದ ಕುಮ್ಮಕ್ಕಿನಿಂದ ಭಯಾನಕ ಅಸ್ತ್ರಗಳನ್ನು ಉತ್ತರ ಕೊರಿಯಾ ಹೊಂದಿತಲ್ಲದೇ ಎನ್.ಪಿ.ಟಿ.ಯಿಂದ ಹಿಂದೆ ಸರಿದು ೨೦೦೬ರಲ್ಲಿ ಅಣ್ವಸ್ತ್ರ ಪ್ರಯೋಗವನ್ನು ಯಶಸ್ವಿಯಾಗಿ ಪೂರೈಸಿತು. ಇದಕ್ಕೆ ಬೇಕಾದ ತಂತ್ರಜ್ಞಾನವನ್ನೂ ಚೀನ ಪಾಕಿಸ್ತಾನದ ಮೂಲಕ ಪೂರೈಸಿದೆ ಎಂಬ ಗುಮಾನಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿದೆ. ಅಪಾಯಕಾರಿಯಾಗಿ ಬೆಳೆದು ಮುನ್ನುಗ್ಗುತ್ತಿರುವ   ಕಮ್ಯುನಿಸ್ಟ್ ಸರ್ವಾಧಿಕಾರವನ್ನು ತಹಬಂದಿಗೆ ತರಲು ಅಮೆರಿಕಾ ವಿಶ್ವಸಂಸ್ಥೆಯಲ್ಲಿ ಒತ್ತಡ ಹೇರಿ ಉತ್ತರ ಕೊರಿಯಾದ ಮೇಲೆ ನಿಷೇಧಾಜ್ಞೆಯನ್ನು ಜಾರಿಗೊಳಿಸಲು ಯಶಸ್ವಿಯಾಯಿತು. ಅರಬ್ ಜಗತ್ತಿನ ಇರಾನ್ ದೇಶ ಅಮೆರಿಕಾದ ವಿರುದ್ಧ ಸಡ್ಡು ಹೊಡೆಯುತ್ತ ಅಮೆರಿಕಾ ಹಾಗೂ ಮಿತ್ರರಾಷ್ಟ್ರಗಳನ್ನು ಪೇಚಿಗೆ ಸಿಕ್ಕಿಸುತ್ತಲೇ ಇದೆ. ತನ್ನ ಸಾಮರ್ಥ್ಯದಿಂದಲೇ ಪರಮಾಣು ಅಣ್ವಸ್ತ್ರ ಪ್ರಯೋಗವನ್ನು ಯಶಸ್ವಿಯಾಗಿ ಮಾಡಿರುವ ಬಗೆಗೆ ೨೦೦೭ರಲ್ಲಿ ಇರಾನ್ ಘೋಷಿಸಿತು. ಇಂಥ ಕಾರ್ಯದ ನಡೆಗಳು ಅಮೆರಿಕಾವನ್ನು ಯಾವಾಗಲೂ ಆತಂಕಕ್ಕೀಡು ಮಾಡುವುದು ಇವುಗಳ ಮುಖ್ಯ ಉದ್ದೇಶವಾಗಿದೆ. ಆದರೆ ಅಮೆರಿಕಾ ಇದನ್ನು ಬಲವಾಗಿ ನಂಬುತ್ತಿಲ್ಲ. ಇದು  ಅಮೆರಿಕಾವನ್ನು ಬೆದರಿಸುವ ತಂತ್ರ ಮಾತ್ರವಾಗಿದೆ ಎಂದು ಅಂತಾರಾಷ್ಟ್ರೀಯ ರಾಜಕೀಯ ಘಟನೆಗಳ ವಿಶ್ಲೇಷಕರು ಸಹ ಅಭಿಪ್ರಾಯಿಸುತ್ತಿದ್ದಾರೆ.

ಜಾಗತಿಕ ಮಟ್ಟದಲ್ಲಿ ದೊಡ್ಡ ಹಾಗೂ ಸಣ್ಣ ದೇಶಗಳಿಗೆ ಬಿಲಿಯನ್‌ಗಟ್ಟಲೆ ಸಾಲಕೊಟ್ಟ ಅಮೆರಿಕಾವು ತಾನೇ ದೊಡ್ಡ ಪ್ರಪಾತಕ್ಕೆ ೨೦೦೮ರಲ್ಲಿ ಬಿದ್ದಿತು. ಅಮೆರಿಕಾದ ಆರ್ಥಿಕ ವ್ಯವಸ್ಥೆಯಲ್ಲಿ ಬಂಡವಾಳ ಹೂಡಿಕೆಯ ಮುಖ್ಯಸಂಸ್ಥೆಗಳಾದ ಲೀಮನ್ ಬ್ರದರ್ಸ್, ಮೆರಿಲ್ ಲಿಂಚ್ ಹಾಗೂ ಇಂಟರ್ ನ್ಯಾಷನಲ್ ಗ್ರೂಪ್(ಎಐಜಿ ಸಂಸ್ಥೆಗಳ) ದಿವಾಳಿ ಎದ್ದು ಕದ ಮುಚ್ಚಿಕೊಂಡವು. ಇದರಿಂದ ನ್ಯೂಯಾರ್ಕಿನ ಷೇರು ಮಾರುಕಟ್ಟೆ ಎಂದೂ ಕೇಳರಿಯದಷ್ಟು ಕೆಳಕ್ಕೆ ಜಾರಿತು. ಇಂಥ ಪರಿಣಾಮಗಳು ಕೇವಲ ಅಮೆರಿಕಾಕ್ಕೆ ಅಷ್ಟೇ ಅಲ್ಲದೇ ಇಡೀ ಜಗತ್ತೇ ಆರ್ಥಿಕ ಕುಸಿತ ಅನುಭವಿಸುವಂತಾಯಿತು. ಮಹಾಕುಸಿತಕ್ಕೆ ಮುಖ್ಯ ಕಾರಣಗಳೆಂದರೆ ಬುಷ್ ಆಡಳಿತವು ಕೈಗೊಂಡಿದ್ದ ಗೃಹಸಾಲದ ಮೇಲಿನ ನೀತಿ ನಿಯಮಗಳಲ್ಲಿ ಉಂಟಾದ ಸಡಿಲತೆ ಎಂದು ರಾಜಕೀಯ- ಆರ್ಥಿಕ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ರಾಷ್ಟ್ರೀಯ ಆದಾಯವು ತೀವ್ರವಾಗಿ ಏರುತ್ತಿರುವ ಇಂಥ ಆರ್ಥಿಕ ಪರಿಸ್ಥಿತಿಯಲ್ಲಿ ಅಮೆರಿಕಾದ ಕೇಂದ್ರ ಹಾಗೂ ರಾಜ್ಯ ಅಡಳಿತಗಳು ೨೦೦೪-೦೬ರಲ್ಲಿ ಒಟ್ಟು ೧.೫ ಟ್ರಿಲಿಯನ್ ಗೃಹಸಾಲ ನೀಡಿದವು. ಇಂಥ ಸಾಲ ಯೋಜನೆಗಳನ್ನು ಆಕರ್ಷಕವಾಗಿ ರೂಪಿಸಿದ ಮ್ಯೂಚುವೆಲ್ ಫಂಡ್ ಸಂಸ್ಥೆಗಳು ಪ್ರೈಮ್(ಗ್ರಾಹಕ ಸಾಲ) ಹಾಗೂ ಸಬ್ ಪ್ರೈಮ್(ಸುಸ್ತಿದಾರ ಗ್ರಾಹಕರ ಸಾಲ) ಎಂಬ ಎರಡು ರೀತಿಯ ಸಾಲಗಳನ್ನು ಹೆಚ್ಚಿನ ಭದ್ರತೆ ಇಲ್ಲದೇ ಒದಗಿಸಿದವು. ಆದರೆ ಸಾಲ ಪಡೆದ ಗ್ರಾಹಕರು ಕಾಲಕಾಲಕ್ಕೆ ಅಸಲು ಮತ್ತು ಬಡ್ಡಿಯ ಮರುವಳಿಗಳನ್ನು ಮಾಡದೇ ದಿವಾಳಿ ಘೋಷಿಸಿಕೊಂಡರು. ಇದು ಅಮೆರಿಕಾದ ಆರ್ಥಿಕ ಮಹಾಕುಸಿತ ಅಥವಾ ಹಿಂಜರಿತಕ್ಕೆ ಮೂಲ ಕಾರಣವಾಯಿತು. ಅಲ್ಲದೇ ಮಾಹಿತಿ ತಂತ್ರಜ್ಞಾನ ಹಾಗೂ ಹೊರ ಗುತ್ತಿಗೆ(ಬಿ.ಪಿ.ಓ.) ಸಂಬಂಧಿಸಿದಂತೆ ಕಾರ್ಯನೀತಿಯಿಂದ ಅಮೆರಿಕಾದ ಆರ್ಥಿಕ ವ್ಯವಸ್ಥೆಯು ಬುಡ ಮೇಲಾಯಿತು. ಬಿ.ಪಿ.ಓ. ಉದ್ಯೋಗ ವಲಯದಲ್ಲಿ ಅಮೆರಿಕಾದ ಯುವಕರಿಗೆ ಸಿಗಬೇಕಾದ ಉದ್ಯೋಗ ಹಾಗೂ ಲಾಭಗಳು ಏಷ್ಯಾದ ರಾಷ್ಟ್ರಗಳಿಗೆ ಹರಿದು ಬಂತು. ಇದರಿಂದ ಅಮೆರಿಕಾದಲ್ಲಿ ಸಹಜವಾಗಿ ಅಗಾಧ ಪ್ರಮಾಣದಲ್ಲಿ ನಿರುದ್ಯೋಗ ಸೃಷ್ಟಿಯಾಯಿತು. ಒಟ್ಟಾರೆ ೨೦೦೮ರಲ್ಲಿ ಘಟಿಸಿದ ಆರ್ಥಿಕ ಹಿಂಜರಿತದಿಂದ ವಿಶ್ವವು ೧೨ಲಕ್ಷ ಕೋಟಿ ಡಾಲರ್ ನಷ್ಟವನ್ನು ಹೊಂದಿತು ಎಂದು ಆರ್ಥಿಕತಜ್ಞರು ಅಂದಾಜಿಸಿದ್ದಾರೆ. ಪ್ರಮುಖವಾಗಿ ಅಮೆರಿಕಾದ ಬ್ಯಾಂಕಿಂಗ್, ಹಣಕಾಸು ಸೇವೆ ಹಾಗೂ ವಿಮೆ ವಲಯಗಳು ಆರ್ಥಿಕ ಹಿಂಜರಿತದ ಪರಿಣಾಮವಾಗಿ ಭಾರೀ ಪ್ರಮಾಣದ ನಷ್ಟವನ್ನು ಅನುಭವಿಸಿದವು.

ಜಿ-೮ ಸಂಘದ ಮುಖ್ಯ ಪ್ರವರ್ತಕ ಅಮೆರಿಕಾವು ೨೦೦೮ರ ಮೇನಲ್ಲಿ ನಡೆದ ಶೃಂಗಸಭೆಯಲ್ಲಿ ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ಹವಾಮಾನ ಬದಲಾವಣೆ ಕುರಿತಂತೆ ಗಂಭೀರವಾಗಿ ಎಚ್ಚರಿಸಿತಲ್ಲದೇ ೨೦೫೦ರ ವೇಳೆಗೆ ಹಸಿರು ಮನೆ ಅನಿಲಗಳು ಪರಿಸರದ ಮೇಲೆ ಉಂಟುಮಾಡುವ ದುಷ್ಪರಿಣಾಮವನ್ನು ಶೇ.೫೦ರಷ್ಟು ಕಡಿಮೆಗೊಳಿಸುವ ಗುರಿಯು ಜಗತ್ತಿನ ಎಲ್ಲ ದೇಶಗಳ ಹೊಂದಬೇಕಾದದ್ದು ಅನಿವಾರ್ಯವೆಂದು ಅಮೆರಿಕಾ ಪ್ರತಿಪಾದಿಸಿತು. ಕಾಲಕ್ಕೆ ತಕ್ಕಂತೆ ಬದಲಾವಣೆಗೆ ಒಳಗಾಗುತ್ತಿರುವ ಅಮೆರಿಕಾವು ನ್ಯೂಯಾರ್ಕ್ ನಗರದಲ್ಲಿ ಬಹುಮುಖ್ಯ ಅಂತಾರಾಷ್ಟ್ರೀಯ ದಲಿತ ಸಮ್ಮೇಳನ ನಡೆಯಲು ಕಾರಣೀಭೂತವಾಯಿತು. ೨೦೦೮ರಲ್ಲಿ ಜರುಗಿದ ಈ ಸಮ್ಮೇಳನದಲ್ಲಿ ಶೋಷಣೆಗೆ ಒಳಗಾದ ಅಸ್ಪೃಶ್ಯರು, ಕರಿಯರ ಬಗ್ಗೆ ಹಾಗೂ ಅನೇಕ ಕಾರಣಗಳಿಂದ ಬೇರೆ ಬೇರೆ ದೇಶಗಳಲ್ಲಿ ತಿರಸ್ಕೃತರಾದ ಜನಾಂಗಗಳ ಬಗೆಗಿನ ಸಾಮಾಜಿಕ ನ್ಯಾಯ ಕುರಿತಂತೆ ಮೊಟ್ಟ ಮೊದಲಿಗೆ ಜಾಗತಿಕ ಮಟ್ಟದಲ್ಲಿ ಚರ್ಚೆ ಪ್ರಾರಂಭವಾಗುವಂತೆ ಮಹತ್ವದ ಕಾರ್ಯ ಹಮ್ಮಿಕೊಂಡಿತು. ಇದರಲ್ಲೂ ಭಾರತವು ಭಾಗವಹಿಸಿತ್ತು.

೨೦೦೮-೦೯ನೇ ಸಾಲಿನಲ್ಲಿ ಅಮೆರಿಕಾದಲ್ಲಾದ ಆರ್ಥಿಕ ಹಿಂಜರಿತ ಜಗತ್ತಿನ ಎಲ್ಲ ದೇಶಗಳ ಮೇಲೆ ಅಗಾಧ ಪರಿಣಾಮ ಬೀರಿತು. ಐರೋಪ್ಯ ಒಕ್ಕೂಟದ ಆರ್ಥಿಕ ವ್ಯವಸ್ಥೆ ದಿಕ್ಕೆಟ್ಟಿತು. ಇದನ್ನು ಪರಿಹರಿಸಿ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ೨೦೦೯ರ ಏಪ್ರಿಲ್‌ನಲ್ಲಿ ಜಿ ೨೦ ದೇಶಗಳ ಶೃಂಗ ಸಭೆಯನ್ನು ಲಂಡನ್‌ನಲ್ಲಿ ಆಯೋಜಿಸಲಾಯಿತು. ಈ ಸಭೆಯ ಮುಖ್ಯ ಅಜೆಂಡವೇ ಜಾಗತಿಕ ಆರ್ಥಿಕ ಹಿಂಜರಿತವನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳು ಯಾವುವು ಎಂಬುದು. ಇಂಥ ಆತಂಕದ ಪರಿಣಾಮಗಳನ್ನು ಹೋಗಲಾಡಿಸಲು ಆರ್ಥಿಕ ವಲಯಗಳಿಗೆ ವಿಶೇಷ ಪ್ಯಾಕೇಜ್ ನೀಡುವುದರ ಮೂಲಕ ಪುನಶ್ಚೇತನಗೊಳಿಸ ಬಹುದಾಗಿದೆ ಎಂದು ಅಮೆರಿಕಾ ವಾದ ಮಾಡಿತು. ಅಲ್ಲದೇ ತೃತೀಯ ಜಗತ್ತಿನ ಬಲಾಢ್ಯ ರಾಷ್ಟ್ರಗಳಾದ ಭಾರತ ಮತ್ತು ಚೀನಾ ಸಹ ಅಮೆರಿಕಾದ ನಿರ್ಣಯಗಳಿಗೆ ಸಹಮತ ವ್ಯಕ್ತಪಡಿಸಿದವು. ಆದರೆ ಐರೋಪ್ಯ ಒಕ್ಕೂಟದ ರಾಷ್ಟ್ರಗಳಾದ  ಜರ್ಮನಿ ಹಾಗೂ ಫ್ರಾನ್ಸ್ ದೇಶಗಳು ಪ್ಯಾಕೇಜ್ ಕ್ರಮವನ್ನು ವಿರೋಧಿಸಿ ಅಂತಾರಾಷ್ಟ್ರೀಯ ಹಣಕಾಸು ವಹಿವಾಟನ್ನು ನಿಯಂತ್ರಿಸುವ ಮೂಲಕ ಇದನ್ನು ತಹಬಂದಿಗೆ ತರಬಹುದೆಂದು ಹಟ ಹಿಡಿದವು. ಆದರೆ ಕೊನೆಗೆ ಅಮೆರಿಕಾದ ಮಾತೆ ಅಂತಿಮಗೊಂಡು ಜಾಗತಿಕ ಆರ್ಥಿಕ ಹಿಂಜರಿತವನ್ನು ಹತೋಟಿಯಲ್ಲಿಡಲು ಐ.ಎಂ.ಎಫ್. ಒಂದು ಸಾವಿರ ಕೋಟಿ ಡಾಲರ್‌ಗಳ ವಿಶೇಷ ನೆರವನ್ನು ನೀಡಲು ಸಮ್ಮತಿಸಿತು.

ಜಾರ್ಜ್ ಬುಷ್ ಆಡಳಿತದಲ್ಲಿ ಜಾರಿಗೆ ತಂದ ಬಂದೂಕು ಲೈಸನ್ಸ್ ಪದ್ಧತಿಯಿಂದ ಒಕ್ಕೂಟದಲ್ಲಿರುವ ರಾಜ್ಯಗಳು ಆತಂಕಗೊಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದವು. ಬಂದೂಕು ಹೊಂದುವುದು ಪ್ರತಿ ಅಮೆರಿಕಾನ್‌ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಆದರೆ ಇದಕ್ಕೆ ಸರಿಯಾದ ನಿಯಮಾವಳಿಗಳು ರೂಪಿತಗೊಂಡಿರಲಿಲ್ಲ. ಹೀಗಾಗಿ ಈ ಪ್ರಯೋಜನದಿಂದ ಆಗುವ ಅನಿಯಂತ್ರಿತ ಕೊಲೆಗಳನ್ನು ಕಡಿಮೆ ಮಾಡಲು ಬಂದೂಕುಗಳನ್ನು ನಿಯಂತ್ರಿಸಲು ಬಿಗಿಯಾದ ಕ್ರಮಗಳನ್ನು ಕೈಗೊಂಡು ಕಾನೂನು ಮಾಡಲಾಯಿತು. ಇದರ ಪರಿಣಾಮದಿಂದ ಕರೋಲಿನಾ ಮತ್ತು ನ್ಯೂಹಾಪ್‌ಷೈರ್ ರಾಜ್ಯಗಳು ಒಕ್ಕೂಟದಿಂದ ಹೊರಬರುವ ಬೆದರಿಕೆ ಹಾಕಿದವು. ಆದರೂ ಹೆಚ್ಚಿನ ರಾಜ್ಯಗಳು ಈ ಕಾನೂನು ಪರವಾಗಿದ್ದವು. ಹೀಗಾಗಿ ಎದ್ದಿರುವ ಸಮಸ್ಯೆ ಮಂಜಿನಂತೆ ಕರಗಿ ಹೋಯಿತು.

ಆಪೆಕ್(ಎಷಿಯನ್ ಫೆಸಿಫಿಕ್ ಎಕಾನಮಿಕ್ ಕಾರ್ಪೊರೇಷನ್)(ಏಷ್ಯಾ ಫೆಸಿಫಿಕ್ ಆರ್ಥಿಕ ಸಹಕಾರ) ಸಭೆಯ ೨೦ನೆಯ ವಾರ್ಷಿಕ ಶೃಂಗ ಸಭೆಯಲ್ಲಿ ಭಾಗವಹಿಸಿದ ಜಿ ೨೦ ರಾಷ್ಟ್ರಗಳು ತೆಗೆದುಕೊಂಡ ನಿಲುವುಗಳು ಹಾಗೂ ದೋಹಾದಲ್ಲಿ ನಡೆದ ಆರ್ಥಿಕ ಮಾರುಕಟ್ಟೆಗೆ ಸಂಬಂಧಿಸಿದ ಮಾತುಕತೆಗಳ ಹಿನ್ನೆಲೆಯಲ್ಲಿ ಜಾಗತಿಕ ಆರ್ಥಿಕ ವ್ಯವಸ್ಥೆ ಬಲಗೊಳ್ಳಬೇಕೆಂದು ಅಮೆರಿಕಾ ಪ್ರತಿಪಾದಿಸಿತು.

ಡಬ್ಲ್ಯು.ಟಿ.ಓ. ಮೂಲಕ ಅಮೆರಿಕಾ ಆಡುವ ಕಣ್ಣುಮುಚ್ಚಾಲೆ ಆಟಗಳಿಗೆ ಬ್ರೆಜಿಲ್, ಭಾರತ ಹಾಗೂ ಚೀನ ದೇಶಗಳು ಇತ್ತೀಚಿನ ವರ್ಷಗಳಲ್ಲಿ ಅಡ್ಡಗೋಡೆಗಳಾಗಿ ನಿಂತವು. ೨೦೦೧ರಲ್ಲಿ ದೋಹಾದಲ್ಲಿ ನಡೆದ ವಿಶ್ವವ್ಯಾಪಾರದ ಮೇಲಿನ ಮಾತುಕತೆಗಳು ವಿಫಲವಾಗಿ ಮತ್ತೆ ೨೦೦೪ರಲ್ಲಿ ಜಿನಿವಾದಲ್ಲಿ ಎಲ್ಲ ರಾಷ್ಟ್ರಗಳನ್ನು ಅಮೆರಿಕಾದ ಗುಪ್ತ ಸೂಚನೆಯಂತೆ ಡಬ್ಲ್ಯುಟಿಓ ಸೇರಿಸಿತು. ಹೇಗಾದರೂ ಮಾಡಿ ಅಭಿವೃದ್ದಿಶೀಲ ರಾಷ್ಟ್ರಗಳನ್ನು ಅಮೆರಿಕಾದ ಆಣತಿಯಂತೆ ಸಿದ್ಧಗೊಳಿಸಿಕೊಳ್ಳುವ ಪ್ರಯತ್ನ ಮಾಡಿತು. ಆದರೆ ಅಮೆರಿಕಾದ ಕುತಂತ್ರಕ್ಕೆ ಭಾರತ, ಚೀನಾ ಮತ್ತು ಬ್ರೆಜಿಲ್ ತಣ್ಣೀರೆಚಿದವು. ಇದರಿಂದ ಜಿನೀವಾ ಮಾತುಕತೆಗಳು ಸಹ ಮುರಿದು ಬಿದ್ದವು. ಇದಕ್ಕೆ ಕಾರಣ ದೋಹದಲ್ಲಿ ನಡೆದ ಮಾತುಕತೆಯ ಮುಖ್ಯ ಅಂಶಗಳನ್ನು ಜಾರಿಗೆ ತಂದಿದ್ದೇ ಆದರೆ ಇಂಥ ಪರಿಣಾಮಗಳಿಂದ ಪ್ರತಿ ದೇಶಗಳ ಕೃಷಿ ಕ್ಷೇತ್ರ ಮುಕ್ತಗೊಂಡು ಇದು ಅಭಿವೃದ್ದಿಶೀಲ ರಾಷ್ಟ್ರಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂಬ ಅಭಿವೃದ್ದಿಶೀಲ ರಾಷ್ಟ್ರಗಳು ಪ್ರತಿಪಾದಿಸಿರುವ ಅಂಶವೇ ಮುಖ್ಯ ಕಾರಣವಾಯಿತು. ಕೃಷಿ ಪದಾರ್ಥಗಳ ಆಮದು ಶೇಕಡ ಹದಿನೈದರಷ್ಟಾದರೆ ಅದರ ಮೇಲೆ ಶೇಕಡಾ ೨೫ರಷ್ಟು ಸುಂಕ ವಿಧಿಸುವ ಅಧಿಕಾರ ಆ ದೇಶಗಳಿಗೆ ಇರಬೇಕು ಎಂಬುದು ಅಭಿವೃದ್ದಿಶೀಲ ರಾಷ್ಟ್ರಗಳ ಮುಖ್ಯ ಅಭಿಪ್ರಾಯವಾಗಿತ್ತು. ಅಮೆರಿಕಾವು ತನ್ನ ರೈತರ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಕೃಷಿ ಪದಾರ್ಥಗಳ ಆಮದು ಶೇಕಡಾ ನಲವತ್ತಕ್ಕಿಂತ ಹೆಚ್ಚಾದಾಗ ಮಾತ್ರ ಸುಂಕವನ್ನು ವಿಧಿಸಬೇಕಾಗುವ ಷರತ್ತಿನೊಂದಿಗೆ ವಾದಕ್ಕಿಳಿಯಿತು. ಈ ಪ್ರಮುಖ ಕಾರಣದಿಂದ ಜಿನೀವಾ ಮಾತುಕತೆಗಳು ಮುರಿದುಬಿದ್ದವು. ಸಭೆಯು ವಿಫಲ ಗೊಳ್ಳಲು ಭಾರತವು ಮುಖ್ಯಕಾರಣವಾಯಿತು. ಅಲ್ಲದೇ ಅಮೆರಿಕಾ ತನ್ನ ರೈತರಿಗೆ ನೀಡುವ ಬಿಲಿಯನ್ ಡಾಲರ್ ರೂಪದ ಸಬ್ಸಿಡಿಯನ್ನು ನಿಲ್ಲಿಸಬೇಕು. ಇಂಥ ಅವಕಾಶಗಳಿಂದ ಅಮೆರಿಕಾದಲ್ಲಾ ಗುತ್ತಿರುವ ಕೃಷಿ ಉತ್ಪನ್ನಗಳ ಹೆಚ್ಚಳವನ್ನು ಕಡಿಮೆ ಮಾಡಿ ಜಾಗತಿಕ ಮಟ್ಟದಲ್ಲಿ ಸಮತೋಲನ ಸಾಧಿಸಬಹುದಾಗಿದೆ ಎಂದು ಬ್ರೆಜಿಲ್, ಚೀನ ಹಾಗೂ ಭಾರತದಂತಹ ಅಭಿವೃದ್ದಿಶೀಲ ರಾಷ್ಟ್ರಗಳು ಪ್ರಬಲವಾಗಿ ವಾದ ಮಾಡಿದವು. ಇವು ತೆಗೆದುಕೊಂಡ ದೃಢ ನಿರ್ಧಾರಗಳು ಜಿನೀವಾ ಮಾತುಕತೆ ಮುರಿದು ಬೀಳಲು ಕಾರಣವಾಯಿತು.