ನ್ಯೂ ಡೀಲ್ ಯೋಜನೆಗಳು

ಲಿಂಕನ್ನನ ನಂತರ ಅತ್ಯಂತ ಸಮರ್ಥ ನಾಯಕನೆಂದೆನಿಸಿಕೊಂಡವನು ಎಫ್.ಡಿ. ರೂಸ್‌ವೆಲ್ಟ್. ಆರ್ಥಿಕ ಮುಗ್ಗಟ್ಟಿನಿಂದ ಅಮೆರಿಕಾ ಜರ್ಜರಿತವಾಗಿತ್ತು. ಆಂತರಿಕ ಹಾಗೂ ಬಾಹ್ಯ ಸಮಸ್ಯೆಗಳಿಂದ ಇಡೀ ವ್ಯವಸ್ಥೆ ಮಲಿನವಾಗಿತ್ತು. ಇಂಥ ಸಂದಿಗ್ಧತೆಯಲ್ಲಿ ರೂಸ್‌ವೆಲ್ಟ್ ೧೯೨೦ರಲ್ಲಿ ನಡೆದ ಚುನಾವಣೆಯ ರಾಜಕೀಯ ಚದುರಂಗದಾಟದಲ್ಲಿ ಪ್ರಚಂಡ ಬಹುಮತದಿಂದ ಆಯ್ಕೆ ಆದನು. ಆಡಳಿತದ ಒಳನೋಟಗಳನ್ನು ಅರಿತಿದ್ದ ಈತನು ಉದ್ದಿಮೆ, ಕೃಷಿರಂಗ, ಬಡತನ ನಿರ್ಮೂಲನೆ, ಅಂತಾರಾಷ್ಟ್ರೀಯ ಸಂಬಂಧಗಳನ್ನು ಸುಧಾರಿಸುವಲ್ಲಿ ಪ್ರಯತ್ನಿಸಿದನು. ರೂಸ್‌ವೆಲ್ಟ್‌ನ ಸುಧಾರಣಾ ಯೋಜನೆಗಳನ್ನು ‘ನ್ಯೂ ಡೀಲ್’ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಈ ಕಾರ್ಯ-ಯೋಜನೆಗಳಲ್ಲಿ ಮೊಟ್ಟಮೊದಲಿಗೆ ಬ್ಯಾಂಕುಗಳನ್ನು ನಿಯಂತ್ರಿಸಲಾಯಿತು. ಟೆನಿಸ್ಸಿ ನದಿಯ ಬೃಹತ್ ಯೋಜನೆ ಕೈಗೊಂಡು ಅದರಿಂದಾಗುವ ಉಪಯೋಗದಿಂದ ಕೃಷಿ ಹಾಗೂ ವಿದ್ಯುತ್‌ನ ಲಾಭವನ್ನು ಹೆಚ್ಚಿಸಲಾಯಿತು. ಕೃಷಿಯನ್ನು ನಿಯಂತ್ರಿಸಿ, ಕೃಷಿ ಉತ್ಪನ್ನ ವಸ್ತುಗಳಿಗೆ ಹೆಚ್ಚಿನ ಭದ್ರತೆ ನೀಡಲಾಯಿತು.

ಲೋಕಸೇವಾ ಆಡಳಿತದ ಮೂಲಕ ನೇಮಕಾತಿಗಳನ್ನು ಹೆಚ್ಚಿಸಲಾಯಿತು. ಉದ್ದಿಮೆಗಳ ಪುನರುಜ್ಜೀವನಕ್ಕಾಗಿ ವಸ್ತುಗಳ ಬೆಲೆಗಳನ್ನು ನಿಯಂತ್ರಿಸಲಾಯಿತು. ಬಾಲ ಕಾರ್ಮಿಕ ಪದ್ಧತಿಯನ್ನು ನಿಷೇಧಿಸಿ ಕಾನೂನು ರೂಪಿಸಲಾಯಿತು. ಕೆಲವು ಯೋಜನೆಗಳನ್ನು ಸುಪ್ರೀಂ ಕೋರ್ಟು ಕಾನೂನು ಬಾಹಿರಗೊಳಿಸಿದರೂ ಆಡಳಿತದಲ್ಲಿ ರೂಸ್‌ವೆಲ್ಟ್ ಹೊಂದಿದ ಚಾಕಚಕ್ಯತೆಗಳಿಂದ ಅವು ಇನ್ನೊಂದು ರೂಪದಲ್ಲಿ ಜಾರಿಗೆ ಬಂದವು. ಮೊದಲ ಅವಧಿಯಲ್ಲಿ ಯಶಸ್ವಿಯಾಗಿ ಆಡಳಿತ ನಿರ್ವಹಿಸಿದ ರೂಸ್‌ವೆಲ್ಟ್ ಎರಡನೆಯ ಅವಧಿಗೆ ಮತ್ತೆ ವಿಜಯಿಯಾದನು. ತನ್ನ ಕಾರ್ಯಯೋಜನೆಗಳನ್ನು ಜಾರಿಗೊಳಿಸುವಲ್ಲಿ ತೀವ್ರ ಅಡ್ಡಿಯಾಗಿದ್ದ ನ್ಯಾಯಾಲಯವನ್ನು ಟೀಕಿಸಲಾರಂಭಿಸಿದನು. ನ್ಯಾಯಾಲಯಗಳ ಆಡಳಿತ ದಲ್ಲಿ ವಿನಾಕರಣ ಹಸ್ತಕ್ಷೇಪ ಮಾಡುತ್ತಿರುವುದನ್ನು ಜನರಿಗೆ ಮನದಷ್ಟು ಮಾಡಿದನು. ನಿರುದ್ಯೋಗವನ್ನು ನಿವಾರಿಸಿ ಆರ್ಥಿಕ ಸ್ಥಿರತೆಯನ್ನು ಸಾಧಿಸುವುದು ಯೋಜನೆಗಳ ಮುಖ್ಯ ಉದ್ದೇಶವಾಗಿದ್ದರೂ ಅವು ಸಂಪೂರ್ಣವಾದ ಒಂದು ತುದಿಯನ್ನು ತಲುಪುವಲ್ಲಿ ವಿಫಲಗೊಂಡವು. ಮೇಲ್ನೋಟದಲ್ಲಿ ಕೃಷಿ ಕಾರ್ಮಿಕರಿಗೆ ಹೆಚ್ಚಿನ ಭದ್ರತೆ ಒದಗಿಸಿದರೂ ಶೋಷಣೆಗೂ ಸಹ ವಿಪುಲವಾದ ಅವಕಾಶ ಒದಗಿಸಿತು. ರಾಷ್ಟ್ರದ ಹಿತದೃಷ್ಟಿಯಿಂದ ಡಾಲರಿನ ಅಪಮೌಲೀಕರಣವನ್ನು ರೂಸ್‌ವೆಲ್ಟ್ ಮಾಡಿದನು. ಜರ್ಜರಿತಗೊಂಡಿದ್ದ ಆಂತರಿಕ ಆಡಳಿತದಿಂದಾಗಿ ೧೯೨೫-೧೯೪೦ರ ಕಾಲಾವಧಿಯ ವಿದೇಶಿ ನೀತಿಯಲ್ಲಿ ಅಮೆರಿಕಾ ದೇಶವು ಸಂಪೂರ್ಣ ತಟಸ್ಥ ನೀತಿಗಳನ್ನು ಕಾಪಾಡಿಕೊಂಡು ಬಂದಿತು. ಈ ಪರಿಣಾಮದಿಂದಾಗಿಯೇ ತನ್ನ ಮಗ್ಗುಲಲ್ಲಿಯೇ ಅಪಾಯಕಾರಿ ಪ್ರದೇಶಗಳೆಂದು ಕಂಡುಬರಬಹುದಾಗಿದ್ದ ಲ್ಯಾಟಿನ್ ಅಮೆರಿಕಾದಲ್ಲಿನ ರಾಜಕೀಯ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ಕೂಡ ತಾತ್ಕಾಲಿಕವಾಗಿ ನಿಲ್ಲಿಸಿತು. ಆದರೆ ಐರೋಪ್ಯ ರಾಷ್ಟ್ರಗಳಲ್ಲಿ ಅಮೆರಿಕಾ ಮೊದಲ ಜಾಗತಿಕ ಮಹಾಯುದ್ಧದ ಸಮಯದಲ್ಲಿ ಆಡಿದ ಆಟಗಳಿಂದಾದ ಸೋಲಿನ ಪರಿಣಾಮವಾಗಿ ಮತ್ತೆ ಜರ್ಮನಿಯ ಸೇಡಿನ ಕ್ರಮ ಹೆಚ್ಚಾಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕಾದ ಗೈರುಹಾಜರಿ ಯುರೋಪ್ ಮತ್ತು ಏಷ್ಯಾದ ಕೆಲವು ರಾಷ್ಟ್ರಗಳಿಗೆ ವರದಾನವಾಯಿತು. ಗಾಯದ ನೋವು ಉಲ್ಬಣಗೊಂಡಿತು. ಯುರೋಪಿನಲ್ಲಿ ಜರ್ಮನಿಯು, ಏಷ್ಯಾದಲ್ಲಿ ಮತ್ತೆ ಜಪಾನ್ ಹಾಗೂ  ಆಫ್ರಿಕಾ  ಖಂಡಗಳಲ್ಲಿ ಇಟಲಿ ದೇಶಗಳು ತಮ್ಮ ಹೊಸ ಶಕ್ತಿಯ ಪ್ರದರ್ಶನದ ಅಖಾಡಕ್ಕಿಳಿದವು. ಇದೇ ವೇಳೆಗೆ ೧೯೪೦ರಲ್ಲಿ ಅಮೆರಿಕಾದ ಇತಿಹಾಸದಲ್ಲಿ ಮೊದಲೆನ್ನುವ ಘಟನೆಯಲ್ಲಿ ರೂಸ್‌ವೆಲ್ಟ್ ಮೂರನೆಯ ಬಾರಿಗೆ ಅಧ್ಯಕ್ಷನಾಗಿ (೧೯೩೬) ಆಯ್ಕೆಯಾದನು.

ಪ್ರಥಮ ಜಾಗತಿಕ ಯುದ್ಧದ ಪರಿಣಾಮದಿಂದ ಈ ಹಿಂದೆ ಇದ್ದ ಸಾಮ್ರಾಜ್ಯಶಾಹಿಗಳ ಆಡಳಿತ ಯುರೋಪ್ ಖಂಡದಲ್ಲಿ ತಾತ್ಕಾಲಿಕವಾಗಿ ಉಪಶಮನ ಕಂಡು ಪ್ರಜಾಪ್ರಭುತ್ವ ಮಾದರಿ ಸರಕಾರಗಳು ರಚನೆಗೊಂಡಿದ್ದವು. ಆದರೆ ವಿಶ್ವದ ಆರ್ಥಿಕ ಹಾಗೂ ಆಡಳಿತ ರಂಗಗಳಲ್ಲಿ ತೀವ್ರವಾಗಿ ಆದ ಏರುಪೇರುಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆಗಳು ಸಹ ಕೆಲವೇ ವರ್ಷಗಳಲ್ಲಿ ನಾಶವಾದವು. ಇಂಥ ಸಮಸ್ಯೆಗಳು ಮತ್ತೆ ಅಪಾಯಕಾರಿಯಾದ ನಿರಂಕುಶಾಧಿಕಾರಕ್ಕೆ ಎಡೆಮಾಡಿಕೊಟ್ಟವು. ಜರ್ಮನಿಯಲ್ಲಿ ಹಿಟ್ಲರನು (ನಾಜಿ), ಇಟಲಿಯಲ್ಲಿ ಬೆನಟೊ ಮುಸಲೋನಿ(ಫ್ಯಾಸಿಸ್ಟ್) ಹಾಗೂ ಜಪಾನಿನಲ್ಲಿ ಅಕಿಹಿಟೋ ರಾಜಪ್ರಭುತ್ವ ಸ್ಥಾಪಿತಗೊಂಡು ಅವೆಲ್ಲವು ದ್ವೇಷ ಅಸೂಯೆಯಿಂದ ಆಕ್ರಮಣ ಪ್ರವೃತ್ತಿಗೆ ಇಳಿದವು. ಪ್ರಥಮ ಜಾಗತಿಕ ಯುದ್ಧದ ಒಪ್ಪಂದಗಳಿಂದಾದ ಹಾನಿಗಳು ಹಾಗೂ ಜನಾಂಗೀಯ ಉತ್ಕೃಷ್ಟತೆಗಳು(ಮೇಲು-ಕೀಳು) ಮೂಲ ಸಮಸ್ಯೆಗಳಾಗಿ ಪರಿವರ್ತನೆಗೊಂಡವು. ರಷ್ಯಾದ  ಕ್ರಾಂತಿಯಿಂದ  ಉದ್ಭವವಾದ ಕಮ್ಯುನಿಸ್ಟ್ ಶಕ್ತಿ ಜಗತ್ತನ್ನೇ ತನ್ನ ಕಬಂಧ ಬಾಹುಗಳಲ್ಲಿ ಹಿಡಿದುಕೊಳ್ಳುವ ಹುನ್ನಾರದಲ್ಲಿ ತೀವ್ರ ರೀತಿಯಲ್ಲಿ ಕಾರ್ಯಪ್ರವೃತ್ತವಾಯಿತು. ಜನಾಂಗೀಯ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಝಕೊಸ್ಲೋವಾಕಿಯವನ್ನು ಹಿಟ್ಲರ್ ಕೆಲವೇ ದಿನಗಳಲ್ಲಿ ಮುಗುಚಿ ಹಾಕಿದನು. ಯಾರ ಅಂಜಿಕೆ ಇಲ್ಲದೇ ಒಂದೇ ಸಮನೆ ಜರ್ಮನಿಯು ಮುನ್ನುಗು ತ್ತಿದ್ದ ಧೋರಣೆಗಳು ಬ್ರಿಟನ್-ಫ್ರಾನ್ಸ್ ಜೊತೆಗಿನ ಈ ಮೊದಲು ಸ್ಥಾಪಿತವಾಗಿದ್ದ ಸಂಧಾನಗಳು ಮುರಿದು ಬೀಳುವಂತೆ ಮಾಡಿದವು. ಐರೋಪ್ಯ ಪ್ರದೇಶಗಳಲ್ಲಿ ರಾಜಕೀಯ ಸ್ವಹಿತಾಸಕ್ತಿಗಳು ಬಲಗೊಂಡವು. ಒಳಗೊಳಗೆ ಬೆದರಿ ಬೆಂಡಾಗಿದ್ದ ಫ್ರಾನ್ಸ್ ಮತ್ತು ಇಂಗ್ಲೆಂಡ್ ದೇಶಗಳು ಆಕ್ರಮಣಕಾರಿ ಧೋರಣೆಯ ಜರ್ಮನಿಯನ್ನು ಬಗ್ಗು ಬಡಿಯಲು ಅದರ ವಿರುದ್ಧವಾಗಿ ಪೋಲೆಂಡ್ ಸಹಕಾರಕ್ಕೆ ನಿಂತವು. ಇದನ್ನರಿತು, ಸರ್ವಾಧಿಕಾರಿಗಳ ಹಿಡಿತದಲ್ಲಿದ್ದ ರಷ್ಯಾ ಮತ್ತು ಜರ್ಮನಿ ಐರೋಪ್ಯ ಒಕ್ಕೂಟದ ವಿರುದ್ಧ ಒಂದಾದವು. ಪೋಲೆಂಡ್‌ನ ಸಮಸ್ಯೆಯನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಎರಡನೆಯ ಜಾಗತಿಕ ಯುದ್ಧಕ್ಕೆ ಹಿಟ್ಲರ್ ರಣಕಹಳೆ ಊದಿದನು. ಸಬಲವಾಗಿದ್ದ ಜರ್ಮನಿಯ ಸೈನ್ಯ ಕೆಲವೇ ದಿನಗಳಲ್ಲಿ ಮಿಂಚಿನಂತೆ ಎರಗಿ ಪೋಲೆಂಡನ್ನು ಆಕ್ರಮಿಸಿತು. ಮೊದಮೊದಲು ತಾಟಸ್ಥ್ಯ ನೀತಿಯನ್ನು ತಾಳಿ ದೂರದಲ್ಲಿಯೇ ನಿಂತು ಎಲ್ಲವನ್ನು ನೋಡುತ್ತಿದ್ದ ಅಮೆರಿಕಾ ತನ್ನ ನೀತಿಯನ್ನು ಬದಲಾಯಿಸಿ ಐರೋಪ್ಯ ರಾಷ್ಟ್ರಗಳಿಗೆ ರೋಖು(ಇನ್ ಕ್ಯಾಷ್) ವ್ಯಾಪಾರದ ಮೂಲಕ ತನ್ನ ಯುದ್ಧ ಸಾಮಗ್ರಿಗಳನ್ನು ಗುಪ್ತವಾಗಿ ಮಾರಲಾರಂಭಿಸಿತು.

ಮೊದಲ ಮಹಾಯುದ್ಧದಲ್ಲಿ ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳು ಮಿಲಿಯನ್ ಡಾಲರ್ ಹಣದ ಸಹಾಯವನ್ನು ಅಮೆರಿಕಾದಿಂದ ಪಡೆದಿದ್ದವು. ಅವು ಹಿಂತಿರುಗಿಸುವಲ್ಲಿ ಕೈಚೆಲ್ಲಿದ್ದವು. ಹೀಗಾಗಿ ಅಮೆರಿಕಾ ಜಾಣತನದಿಂದ ರೋಖು ವ್ಯಾಪಾರಕ್ಕೆ ಹೆಚ್ಚಿನ ಒತ್ತು ನೀಡಿತು.  ಇದನ್ನೆಲ್ಲ ಗಮನಿಸಿದ ಜರ್ಮನಿಯು ಫ್ರಾನ್ಸ್ ಮೇಲೆ ಎರಗಿ ಬಲವಾದ ಹೊಡೆತ ಕೊಟ್ಟಿತು. ಇದರಿಂದ ಹೆದರಿ ಫ್ರಾನ್ಸ್ ದೇಶವು ಜರ್ಮನಿಗೆ ಶರಣಾಗಿ ತನ್ನ ಶಸ್ತ್ರಗಳನ್ನು ಇಂಗ್ಲೆಂಡಿಗೆ ಗುಪ್ತಮಾರ್ಗದಲ್ಲಿ ರವಾನಿಸಿತು. ಅಲ್ಲದೇ ದಿನದಿನಕ್ಕೆ ಪ್ರಬಲಗೊಳ್ಳುತ್ತಿದ್ದ ಜರ್ಮನಿಯ ಮಿಂಚಿನ ಆಕ್ರಮಗಳು ಅಮೆರಿಕಾ ಖಂಡಗಳಲ್ಲಿನ ಐರೋಪ್ಯ ವಸಾಹತುಗಳನ್ನು (ವೆಸ್ಟ್ ಇಂಡೀಸ್ ದ್ವೀಪಗಳು, ಕೊಸ್ಟರಿಕಾ, ಬೊಲಿವಿಯಾ ಮುಂತಾದ ದೇಶಗಳು) ವಶಪಡಿಸಿಕೊಳ್ಳಬಹುದೆಂಬ ಭೀತಿ ಅಮೆರಿಕಾ ದೇಶಕ್ಕೆ ಉಂಟಾಯಿತು. ಇದರಿಂದ ಬೆದರಿದ ಅಮೆರಿಕಾವು ಎಚ್ಚರಗೊಂಡು, ಅಮೆರಿಕಾ ಖಂಡದಲ್ಲಿನ ಯಾವುದೇ ರಾಷ್ಟ್ರಗಳ ಮೇಲೆ ಯುದ್ಧವಾದರೆ ಅದರ ಪ್ರತಿಕಾರಾತ್ಮಕವಾಗಿ ಶತ್ರುವನ್ನು ಎಲ್ಲರೂ(ಕೆನಡಾ, ಮೆಕ್ಸಿಕೋ, ಅರ್ಜೆಂಟೈನಾ, ಬ್ರೆಜಿಲ್ ಹಾಗೂ ಚಿಲಿ) ಸೇರಿ ಸಂಹರಿಸುವ ಒಪ್ಪಂದವಾಯಿತು. ಇವುಗಳನ್ನೆಲ್ಲ ಲೆಕ್ಕಿಸದ ಜರ್ಮನಿ ನಿರಂತರವಾಗಿ ತನ್ನ ಆಕ್ರಮಣಗಳನ್ನು ಜಾರಿಯಲ್ಲಿಟ್ಟಿತ್ತು. ಡೆನ್ಮಾರ್ಕ್, ಹಾಲೆಂಡ್ ಹಾಗೂ ನಾರ್ವೆ ಹೀಗೆ ಐರೋಪ್ಯ ಖಂಡದ ಎಲ್ಲ ರಾಷ್ಟ್ರಗಳು ಜರ್ಮನಿಯ ಹೊಡೆತಕ್ಕೆ ಹಣ್ಣುಗಾಯಿ ಆದವು. ಇದರ ಭೀತಿಯನ್ನು ಮನಗಂಡು ಅಮೆರಿಕಾ ತೀವ್ರವಾಗಿ ಎಚ್ಚರವಾಯಿತು. ಜಾಗತಿಕ ಮಟ್ಟದಲ್ಲಿ ಸಂಭವಿಸುತ್ತಿದ್ದ ಅಪಾಯಕಾರಿ ಪರಿಣಾಮಗಳ ಕಾರಣವಾಗಿ ಅಮೆರಿಕಾದ ಸಂಪ್ರದಾಯಕ್ಕೆ ವಿರುದ್ಧವಾಗಿ ರೂಸ್‌ವೆಲ್ಟ್‌ನು ನಾಲ್ಕನೆಯ ಬಾರಿಗೆ ಅಧ್ಯಕ್ಷನಾಗಿ(೧೯೪೦) ಆಯ್ಕೆಯಾದನು. ೧೯೪೧ರಲ್ಲಿ ರೂಸ್‌ವೆಲ್ಟ್ ಮತ್ತು ಚರ್ಚಿಲ್ ಮುಂದೊದಗಬಹುದಾದ ಯುದ್ಧ ಭೀತಿಯನ್ನು ಮನಗಂಡು ಎಂಟು ಅಂಶಗಳ ‘ಅಟ್ಲಾಂಟಿಕ್ ನಿಯಮಾವಳಿ’ ಒಪ್ಪಂದ ಮಾಡಿಕೊಂಡರು. ಈ ಒಪ್ಪಂದದಲ್ಲಿ ಮುಖ್ಯವಾಗಿ ಅಮೆರಿಕಾ ಮತ್ತು ಬ್ರಿಟನ್ ದೇಶಗಳು ಜಾಗತಿಕ ಮಟ್ಟದಲ್ಲಿ ಆಕ್ರಮಣಗಳಿಂದ ಆಗುತ್ತಿದ್ದ ಭೂವಿಸ್ತರಣೆಯಂತಹ ಬದಲಾವಣೆ ತರುವ ಪ್ರಾದೇಶಿಕವಾದವನ್ನು ಉಗ್ರವಾಗಿ ಖಂಡಿಸುತ್ತವೆ ಎಂದು ಹೇಳಿದವು. ಆದರೆ ಇದನ್ನು ಲೆಕ್ಕಿಸದೇ ಮುನ್ನುಗ್ಗಿದ ಹಿಟ್ಲರ್‌ನು ಬಾಲ್ಕನ್ ಪ್ರದೇಶಗಳನ್ನು ಕೆಲವೇ ಗಂಟೆಗಳಲ್ಲಿ ವಶಪಡಿಸಿಕೊಂಡನು. ಕ್ರಿಮಿಯಾ ಯುದ್ಧದಲ್ಲಿ ಕೈ ಸುಟ್ಟುಕೊಂಡು ಈ ಮೊದಲು ನಲುಗಿದ್ದ ರಷ್ಯಾ ತನ್ನ ಯೋಜನೆಯಂತೆ ತನಗೆ ಈ ಹಿಂದೆ ಆಗಿರುವ ಸೋಲಿನ ಪ್ರತೀಕಾರವಾಗಿ ಬಾಲ್ಕನ್ ಪ್ರದೇಶಗಳನ್ನು ಮತ್ತೆ ಮರಳಿ ಪಡೆಯುವ ಹಂಬಲ ಹೊಂದಿತ್ತು. ಆದರೆ ರಷ್ಯಾದ ಅಂಕಿ-ಸಂಖ್ಯೆಗಳಿಂದ ಕೂಡಿದ ಲೆಕ್ಕಾಚಾರವನ್ನು ತಲೆಕೆಳಗು ಮಾಡಿ ಜರ್ಮನಿ ಬಾಲ್ಕನ್ ಪ್ರದೇಶಗಳನ್ನು ಮೊದಲೇ ವಶಪಡಿಸಿಕೊಂಡಿತು.  ಮುಂದಿನ ದಿನಗಳಲ್ಲಿ ತನ್ನನ್ನೇ ನುಂಗಿಹಾಕಲು ಹಿಟ್ಲರ್ ಹೇಸಲಾರ ಎಂದು ಒಳಗೊಳಗೆ ಕುದಿಯಲಾರಂಭಿಸಿತು. ಇದರಿಂದ ರಷ್ಯಾ ತತ್‌ಕ್ಷಣವೇ ತನ್ನ ಮೈತ್ರಿ ಕಳಚಿ ತಿರುಗಿ ಪುನಃ ಜರ್ಮನಿ ವಿರುದ್ಧ ನಿಂತಿತು. ಪೌರ್ವಾತ್ಯದಲ್ಲಿ ಜಪಾನ್ ಆಕ್ರಮಣಕಾರಿ ಯಾಗಿತ್ತು. ಪೆಸಿಫಿಕ್‌ನಲ್ಲಿನ ಪರ್ಲ್ ಹಾರ್ಬರನ್ನು ವಶಪಡಿಸಿಕೊಳ್ಳುವುದರೊಂದಿಗೆ ಇಡೀ ಏಷ್ಯ ಹಾಗೂ ಆಸ್ಟ್ರೇಲಿಯ ಖಂಡಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಯೋಜನೆ ಜಪಾನ್‌ದಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನಷ್ಟೇ ಬಲಸಂವರ್ಧನೆ ಗೊಂಡಿದ್ದ ಜಪಾನ್ ದೇಶದ ಜೊತೆಗೆ ಜರ್ಮನಿಯ ಕೈಜೋಡಿಸಿತು. ಇದರಿಂದ ಪುಷ್ಟಿಗೊಂಡ ಜಪಾನ್, ಅಮೆರಿಕಾದ ನವವಸಾಹತುಗಳಾಗಿದ್ದ ಫಿಲಿಫೈನ್ಸ್ ದ್ವೀಪಗಳ ಮೇಲೆ ದಾಳಿ ಇಟ್ಟಿತು. ಈ ಅಪಾಯದ ಹೊಡೆತದಿಂದ ಗಲಿಬಿಲಿಗೊಂಡ ಅಮೆರಿಕಾ ಅನಿವಾರ್ಯವಾಗಿ ಎರಡನೆಯ ಜಾಗತಿಕ ಯುದ್ಧಕ್ಕಿಳಿಯಿತು. ಇದರ ನಾಯಕತ್ವದಲ್ಲಿ ೨೨ ರಾಷ್ಟ್ರಗಳು ಅಟ್ಲಾಂಟಿಕ್ ನಿಯಮಾವಳಿಗಳನ್ನು ಒಪ್ಪಿ ಶತ್ರುಪಕ್ಷಗಳ ವಿರುದ್ಧ ದಾಳಿಗಿಳಿದವು. ಮುಗ್ಗಟ್ಟಿನಿಂದ ಚಮತ್ಕಾರಿಕವಾಗಿ ಮೇಲೆದ್ದು ಬಂದ ಅಮೆರಿಕಾ ೧೯೪೦ರ ಹೊತ್ತಿಗೆ ಎಲ್ಲ ವಲಯಗಳಲ್ಲಿ ಸಮರ್ಥವಾಗಿತ್ತು. ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಹಾಗೂ ಸೈನ್ಯದ ಹೆಚ್ಚಳಕ್ಕಾಗಿ ಕ್ರಮ ವಹಿಸಲು ನುರಿತ ಆಡಳಿತಗಾರರ ನೇತೃತ್ವದಲ್ಲಿ ಮಂಡಳಿಗಳನ್ನು ಸ್ಥಾಪಿಸಲಾಗಿತ್ತು. ನಿರುದ್ಯೋಗವು ನಿಯಂತ್ರಣವಾಗಿ ಯುದ್ಧೋಪಕರಣಗಳ ತಯಾರಿಕೆ ಭರದಿಂದ ಸಾಗಿದವು. ಪ್ರಥಮ ಜಾಗತಿಕ ಯುದ್ಧಕ್ಕಿಂತ ಹತ್ತುಪಟ್ಟು ಹೆಚ್ಚಿನ ಹಣವನ್ನು (೩೦೦,೦೦೦,೦೦೦,೦೦೦) ಅಮೆರಿಕಾ ವ್ಯಯಿಸಿದರೂ ಯಾವುದೇ ಆತಂಕಕ್ಕೀಡಾಗಲಿಲ್ಲ.  ಜನತೆಯು ಸಹ ತಮ್ಮ ದೇಶಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಉಂಟಾದ ಆತಂಕಗಳನ್ನು ಹೋಗಲಾಡಿಸಲು ಆಡಳಿತಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದರು.

ಜರ್ಮನಿಯು ಮಿಂಚಿನಂತೆ ಎರಗಿ ಪೋಲೆಂಡನ್ನು ಜಯಿಸಿತು. ಕೆಲವೇ ವಾರಗಳಲ್ಲಿ ಇಡೀ ಯುರೋಪ್ ಜರ್ಮನಿಯ ದಾಳಿಗೆ ತತ್ತರಿಸಿ ಹೋಯಿತು. ಆದರೆ ಜರ್ಮನಿಯು ತಪ್ಪು ಲೆಕ್ಕಾಚಾರ ಮಾಡಿಕೊಂಡು ರಷ್ಯಾದ ಮೇಲೆ ದಾಳಿ ಮಾಡಿ ಕೈಸುಟ್ಟುಕೊಂಡಿತು. ಜರ್ಮನಿಯ ಜೊತೆಗೆ ಸ್ನೇಹದಿಂದ ರಷ್ಯಾ, ಬಾಲ್ಕನ್ ಪ್ರದೇಶಗಳನ್ನು ಒಳಪಡಿಸಿ ಕೊಂಡಿದ್ದರಿಂದ ಅಸಮಾಧಾನಗೊಂಡು ಮೈತ್ರಿ ಮುರಿದುಕೊಂಡಿತ್ತು. ಇದರಿಂದ ಸಿಟ್ಟಾದ ಜರ್ಮನಿ ರಷ್ಯಾದ ಮೇಲೆ ಎರಗಿತು. ಆದರೆ ದುರ್ದೈವವಶಾತ್ ಈ ಆಕ್ರಮಣ ಜರ್ಮನಿಯ ಮೇಲೆ ಎರಗಿತು.  ಜರ್ಮನಿಯ ಸೈನ್ಯ  ಜಂಘಾ ಬಲವನ್ನೇ ಗುಡಿಸಿ ಹಾಕಿತು. ಇದೇ ಘಟನೆ ಜರ್ಮನಿಯ ಸೋಲಿಗೆ ಪ್ರಮುಖ ಕಾರಣಗಳೆಂದು ವಿಶ್ಲೇಷಿಸಲಾಗಿದೆ. ರೂಸ್‌ವೆಲ್ಟ್, ಚರ್ಚಿಲ್, ಐಸೆನ್ ಹಾವರ್, ಮೌಂಟ್ ಬ್ಯಾಟನ್ ಮತ್ತು ಸ್ಟಾಲಿನ್ ಅವರಂಥ ದಿಗ್ಗಜರು ಯೋಜನೆಗಳನ್ನು ರೂಪಿಸಿ ಜರ್ಮನಿ, ಇಟಲಿ ಹಾಗೂ ಜಪಾನ್‌ಗಳನ್ನು ಹತೋಟಿಗೆ ತಂದರು. ಮಹಾಯುದ್ಧದ ಹೋರಾಟದಲ್ಲಿ ಪ್ರಮುಖ ಕಾರಣನಾದ ಜನಪ್ರಿಯ ಅಧ್ಯಕ್ಷ ಎಫ್.ಡಿ.ಆರ್. ಇದೇ ವೇಳೆಗೆ ಕಾಲವಾದನು. ಹೊಸ ಅಧ್ಯಕ್ಷ ಟ್ರೂಮನ್, ಚರ್ಚಿಲ್ ಹಾಗೂ ಸ್ಟಾಲಿನ್‌ರು ಕೂಡಿ ಜರ್ಮನಿಯನ್ನು ಇಬ್ಭಾಗ ಮಾಡಿದರು. ಜಪಾನಿನ ಅಬ್ಬರ ಕಡಿಮೆ ಮಾಡಲು ಅಮೆರಿಕಾ ಮೊಟ್ಟಮೊದಲಿಗೆ ಅಣುಬಾಂಬನ್ನು ಪ್ರಯೋಗಿಸಿತು. ಇದರಿಂದ ನಿಸ್ಸಹಾಯಕವಾದ ಜಪಾನ್ ಮಿತ್ರರಾಷ್ಟ್ರ ಪಡೆಗಳಿಗೆ ಶರಣಾಗತವಾಯಿತು. ೧೯೪೫ರ ಸೆಪ್ಟೆಂಬರ್ ೨ರಂದು ದ್ವಿತೀಯ ಜಾಗತಿಕ, ಯುದ್ಧ ಕೊನೆಗೊಂಡಿತು. ಶತ್ರುಪಡೆಯ ನಾಯಕರನ್ನು ‘ಮಾನವೀಯತೆ ವಿರುದ್ಧದ ಅಪರಾಧ’ದಡಿಯಲ್ಲಿ ವಿಚಾರಣೆಗೊಳಪಡಿಸಿ ಕಠಿಣ ಶಿಕ್ಷೆ ವಿಧಿಸಲಾಯಿತು. ಯುದ್ಧ ಸಮಯದಲ್ಲಿ ಅಮೆರಿಕಾವು ಇತರ ದೇಶಗಳೊಂದಿಗೆ ಹೆಚ್ಚಿನ ಸಂಯಮದಿಂದ ವರ್ತಿಸಿತು. ಭವಿಷ್ಯದಲ್ಲಿ ಉದ್ಭವವಾಗುವ ಆತಂಕಗಳಿಗೆ ಶಾಶ್ವತವಾದ ತೆರೆ ಎಳೆಯುವಲ್ಲಿ ಅಮೆರಿಕಾ, ಚೀನಾ, ಇಂಗ್ಲೆಂಡ್, ರಷ್ಯಾ ಹಾಗೂ ಫ್ರಾನ್ಸ್‌ಗಳನ್ನೊಳಗೊಂಡ ಎಲ್ಲ ದೇಶಗಳು ‘ಸಂಯುಕ್ತ ರಾಷ್ಟ್ರಸಂಘ’ವನ್ನು ಸ್ಥಾಪಿಸಿದವು. ಇದರ ಕೇಂದ್ರ ಕಚೇರಿಯನ್ನು ‘ನ್ಯೂಯಾರ್ಕ್’ ನಗರದಲ್ಲಿ ಪ್ರಾರಂಭಿಸಲಾಯಿತು. ಈ ಹೊತ್ತು ಜಗತ್ತಿನ ಬಹುತೇಕ ರಾಷ್ಟ್ರಗಳು ಈ ಸಂಸ್ಥೆಯ ಸದಸ್ಯರಾಗಿವೆ.

ಯುದ್ಧ ಕೊನೆಗೊಂಡರೂ, ಶಕ್ತಿರಾಷ್ಟ್ರಗಳು ತಮ್ಮ ಬಲವರ್ಧನೆಗೆ ಸ್ಪರ್ಧೆಗಿಳಿದವು. ಬಡದೇಶಗಳಲ್ಲಿನ ಬಡಜನರಿಗೆ ರಷ್ಯಾದ ಸಮತಾವಾದವು ಆದರ್ಶವಾಯಿತು. ಹೀಗಾಗಿ ಪೂರ್ವ ಯುರೋಪಿನ ರಾಷ್ಟ್ರಗಳು ‘ಸಮತಾವಾದ’ ಹಿನ್ನೆಲೆಯ ಸರಕಾರಗಳನ್ನು ರೂಪಿಸಿ ರಷ್ಯಾದ ಬೆಂಬಲಕ್ಕೆ ನಿಂತವು. ಆದರೆ ಬಂಡವಾಳಶಾಹಿ ಮನೋವೃತ್ತಿಯ ರಾಷ್ಟ್ರಗಳಾದ ಅಮೆರಿಕಾ, ಬ್ರಿಟನ್ ಹಾಗೂ ಫ್ರಾನ್ಸ್‌ಗಳು ‘‘ಪ್ರಜಾಪ್ರಭುತ್ವದಡಿಯ ಸರಕಾರಗಳನ್ನು’’ ಬೆಂಬಲಿಸಿದವು. ಮದ್ದು-ಗುಂಡುಗಳ ಸಹಾಯವಿಲ್ಲದೆ ತಾತ್ವಿಕ ಎಳೆದಾಟವು ೧೯೪೫ರ ನಂತರದ ವಿಶ್ವದಲ್ಲಿ ಪ್ರಾರಂಭವಾಯಿತು. ಇದನ್ನೇ ಶೀತಲಸಮರವೆಂದು ಕರೆಯುತ್ತಾರೆ. ಈಗ ರಷ್ಯಾದ ಸ್ಟಾಲಿನ್ನನು ಆಕ್ರಮಣಕಾರಿ ಪ್ರವೃತ್ತಿಗಿಳಿದು ಅಮೆರಿಕಾದ ನೀತಿಗಳನ್ನು ಧಿಕ್ಕರಿಸುತ್ತ ಕಮ್ಯುನಿಸಂನ್ನು ಗಟ್ಟಿಗೊಳಿಸಿದನು. ಒಂದು ಕಡೆಗೆ ಅಮೆರಿಕಾ ತನ್ನ ಸೈನಿಕ ಶಕ್ತಿಯನ್ನು ಕುಗ್ಗಿಸಿದರೆ, ರಷ್ಯಾ ಅದನ್ನು ಹಿಗ್ಗಿಸಿಕೊಳ್ಳುತ್ತ ಹೋಯಿತು. ರೂಸ್‌ವೆಲ್ಟ್‌ನ ನಂತರ ಆಡಳಿತವನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋದ ಟ್ರೂಮನ್ ಎಲ್ಲ ಜನರ ಪ್ರೀತಿಯನ್ನು ಗಳಿಸಿದನು. ನ್ಯೂ ಡೀಲ್ ಯೋಜನೆಗಳನ್ನು ‘ಫೇರ್ ಡೀಲ್’ ಎಂಬ ಹೆಸರಿ ನಿಂದ ಮುಂದುವರಿಸಿದನು. ಕೆಲವು ನಿಯಂತ್ರಣಗಳನ್ನು ಸರಕಾರ ತೆಗೆದು ಹಾಕಿದ್ದರಿಂದ ಮತ್ತೆ ಆಡಳಿತದಲ್ಲಿ ಭ್ರಷ್ಟಾಚಾರ ಬೆಳೆಯಿತು. ಇವೆಲ್ಲವುಗಳ ಹಾಗೂ ಡೆಮಾಕ್ರೆಟಿಕ್ ಪಕ್ಷದಲ್ಲಿನ ಒಡಕಿನ ಲಾಭಗಳನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ವಿಫಲವಾದ ರಿಪಬ್ಲಿಕನ್ ಪಕ್ಷವು, ಪರೋಕ್ಷವಾಗಿ ಮತ್ತೊಂದು ಅವಧಿಗೆ ಟ್ರೂಮನ್‌ನೇ ಅಧ್ಯಕ್ಷನಾಗಿ ಆಯ್ಕೆ ಆಗುವಂತೆ ಸಹಕಾರಿಯಾಯಿತು. ತನ್ನ ಎರಡನೆಯ ಅವಧಿಯ ಆಡಳಿತದಲ್ಲಿ ಕಾರ್ಮಿಕರ ವೇತನ ಹೆಚ್ಚಿಸಿದ. ಕೃಷಿಗೆ ಆದ್ಯತೆ ನೀಡಿದ. ಅಪಾಯಕಾರಿಯಾಗಿ ಮುನ್ನುಗುತ್ತಿದ್ದ ರಷ್ಯಾದ ಆಕ್ರಮಣ ಪ್ರವೃತ್ತಿಗೆ ಕಡಿವಾಣ ಹಾಕಲು ಮತ್ತೆ ತಮ್ಮ ದೇಶದ  ಸೈನ್ಯ ನೀತಿಯನ್ನು ಪುನರ್ ಪರಿಶೀಲಿಸಲಾರಂಭಿಸಿದನು. ರಷ್ಯಾದ ವಿರುದ್ಧದ ಪ್ರಬಲಶಕ್ತಿಯಾಗಿ ಅಮೆರಿಕಾವನ್ನು ಜಗತ್ತಿನ ರಾಜಕೀಯ ಪರದೆಯ ಮೇಲೆ ಎಳೆದು ತರುವುದು ಟ್ರೂಮನ್‌ನ ಮುಖ್ಯ ಕರ್ತವ್ಯವಾಗಿತ್ತು. ಐವತ್ತು ಮತ್ತು ಅರವತ್ತರ ದಶಕದಲ್ಲಿ ಇವೆಲ್ಲವುಗಳಿಗೆ ಗ್ರೀಸ್ ದೇಶವು  ಆಟದ ಮೈದಾನವಾಗಿ ಪರಿವರ್ತನೆಗೊಂಡಿತು. ಟ್ರೂಮನ್, ರಷ್ಯಾವನ್ನು ನಿಯಂತ್ರಿಸಲು ಕಾಂಗ್ರೆಸ್ಸಿನಿಂದ ವಿಶೇಷ ಮನ್ನಣೆ ಪಡೆದು ೪೦ ಕೋಟಿ ಡಾಲರ್ ಸಹಾಯಧನ ಮಂಜೂರು ಮಾಡಿ ಕೊಂಡನು. ಮಧ್ಯಪ್ರಾಚ್ಯದಲ್ಲಿನ ಕಾವನ್ನು ಸದಾ ಕಾಯ್ದುಕೊಂಡು ಹೋಗುವ ಸಂಬಂಧದಿಂದಾಗಿ ಹೊಸ ರಾಷ್ಟ್ರಗಳಾಗಿ ಹುಟ್ಟಿದ ಇಸ್ರೇಲ್ ಹಾಗೂ ಜೋರ್ಡಾನ್ ದೇಶಗಳಿಗೆ ಅಮೆರಿಕಾ ಬೆಂಬಲವಾಗಿ ನಿಂತಿತು. ಬಡರಾಷ್ಟ್ರಗಳಲ್ಲಿನ ತತ್ವಸಿದ್ಧಾಂತಗಳು (ಸಮತಾವಾದ) ಬದಲಾಗು ವುದರಿಂದ ಅವು ಅಭಿವೃದ್ದಿಗೊಳ್ಳುವುದಿಲ್ಲ ಹೊರತು ಇದಕ್ಕೆ ವಿರುದ್ಧವಾಗಿ ಅವುಗಳಿಗೆ ಆರ್ಥಿಕ ನೆರವು ನೀಡುವುದರ ಮೂಲಕ ಅವುಗಳನ್ನು ಪರಿವರ್ತಿಸ ಬಹುದಾಗಿದೆ ಎಂದು ಅಭಿಪ್ರಾಯಿಸಿದನು. ರಷ್ಯಾವನ್ನು ನಿಯಂತ್ರಿಸುವುದು ಬಹಳ ಮುಖ್ಯವಾದುದೆಂದು ಪರಿಗಣಿಸಿ ಟ್ರೂಮನ್‌ನು ‘ಮಾರ್ಷಲ್ ಯೋಜನೆ’ಗಳನ್ನು ರೂಪಿಸಿದನು.

ಶೀತಲ ಸಮರ

ಜರ್ಮನಿ ಹಾಗೂ ಅದರ ಬೆಂಬಲಿತ ರಾಷ್ಟ್ರಗಳು ಎರಡನೆಯ ಮಹಾಯುದ್ಧದಲ್ಲಿ ಸೋತು ಮಿತ್ರರಾಷ್ಟ್ರಗಳ ಮುಂದೆ ಮಂಡಿಯೂರಿ ನಿಂತವು. ಅಮೆರಿಕಾದ ಧೈರ್ಯ ಹಾಗೂ ರಷ್ಯಾದ ಧೃತಿಗೆಡದ ಆಕ್ರಮಣಗಳು ಯುದ್ಧದ ಪರಿಣಾಮವನ್ನು ತಮ್ಮ ಕಡೆಗೆ ವಾಲುವಂತೆ ಮಾಡಿಕೊಂಡವು. ಈ ವಿಜಯದಲ್ಲಿ ಇಂಗ್ಲೆಂಡ್ ಹಾಗೂ ಫ್ರಾನ್ಸ್ ದೇಶಗಳು ಸಹ ಪಾಲುದಾರ ರಾಷ್ಟ್ರಗಳಾದವು. ಜರ್ಮನಿ ಹಾಗೂ ಜಪಾನ್ ದೇಶಗಳ ಸರ್ವಾಧಿಕಾರದ ಆಡಳಿತಗಳ ಅಪಾಯವನ್ನು ಅಡಗಿಸಲು ಮಿತ್ರರಾಷ್ಟ್ರಗಳು ಒಂದಾಗಿ ಹೋರಾಟ ಮಾಡಿದರೂ ವಾಸ್ತವದಲ್ಲಿ ಅವು ಸಹ ಬೇರೆ ತತ್ವಸಿದ್ಧಾಂತಗಳಲ್ಲಿ ನಂಬಿಕೆ ಇಟ್ಟು ರಾಜ್ಯಭಾರ ಮಾಡುತ್ತಿದ್ದವು. ಹೀಗಾಗಿ ಯುದ್ಧ ಮುಗಿದ ಕೆಲವೇ ಗಂಟೆಗಳಲ್ಲಿ ಭಿನ್ನ ನೆಲೆಯಲ್ಲಿ ಯೋಚನೆ ಮಾಡಲು ಪ್ರಾರಂಭಿಸಿದವು. ಪ್ರಮುಖವಾಗಿ ವ್ಯಕ್ತಿಸ್ವಾತಂತ್ರ್ಯವನ್ನು ಮುಖ್ಯವಾಗಿಟ್ಟುಕೊಂಡು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟು ಆಡಳಿತ ಕಟ್ಟಿಕೊಂಡಿದ್ದ ಅಮೆರಿಕಾ, ಇಂಗ್ಲೆಂಡ್ ಹಾಗೂ ಫ್ರಾನ್ಸ್ ದೇಶಗಳು ಒಂದು ಕಡೆಗಾದರೆ, ಅದಕ್ಕೆ ವಿರುದ್ಧವಾದ ಹಾಗೂ ತಮ್ಮ ಮೂಲಸಿದ್ಧಾಂತಕ್ಕೆ ವಿರುದ್ಧವಾದ ಕಮ್ಯುನಿಸಂ ಸಿದ್ಧಾಂತವನ್ನು ರಷ್ಯಾ ಪ್ರತಿನಿಧಿಸುತ್ತಿತ್ತು. ಎರಡನೆಯ ಮಹಾಯುದ್ಧದ ತರುವಾಯ ಪೂರ್ವ ಯುರೋಪಿನ ರಾಷ್ಟ್ರಗಳು ರಷ್ಯಾದ ತತ್ವಗಳಿಗೆ ಮನಸೋತು ಸಮತಾವಾದವನ್ನು ಜಾರಿಗೊಳಿಸಿದವು. ಕ್ಷಿಪ್ರಕ್ರಾಂತಿಯ ಮೂಲಕ ಜನರು ದಂಗೆ ಏಳುವ ಮೂಲಕ ಹಾಗೂ ರಷ್ಯಾ ತನ್ನ ಆಕ್ರಮಣಗಳ ಮೂಲಕ ಕಮ್ಯುನಿಸಂ ನೀತಿಗಳನ್ನು ಜಾರಿಗೆ ತಂದಿತು. ಯಾಲ್ಟಾ ಶೃಂಗಸಭೆಯ ನಿರ್ಣಯಗಳಂತೆ ಜರ್ಮನಿಯನ್ನು ನಾಲ್ಕು ರಾಷ್ಟ್ರಗಳು ವಿಭಾಗಿಸಿಕೊಂಡವು. ಆದರೆ ಕರಾರಿನಂತೆ ಅಲ್ಲಿ ಪ್ರಜಾಪ್ರಭುತ್ವ ಜಾರಿಗೆ ಬರಲೇ ಇಲ್ಲ. ರಷ್ಯಾ ದೇಶವು ಪೂರ್ವ ಜರ್ಮನಿಯಲ್ಲಿ ಕಮ್ಯುನಿಸಂ ಬೆಂಬಲಿತ ನಾಯಕರನ್ನು ಗೆಲ್ಲುವಂತೆ ನೋಡಿಕೊಂಡು ತನಗೆ ಇಷ್ಟವಾದ ಸರಕಾರವನ್ನು ಸ್ಥಾಪಿಸಿಕೊಂಡಿತು. ಮಿತ್ರತ್ವ ಸಂಪಾದಿಸುವ ಮೂಲಕ ಇಲ್ಲವೇ ದಂಗೆಗಳನ್ನು ಹುಟ್ಟು ಹಾಕುವ ಮೂಲಕ ಬೇರೆ ಬೇರೆ ಭೂಪ್ರದೇಶಗಳಲ್ಲಿ ಭರದಿಂದ ಹರಡುತ್ತಿದ್ದ ರಷ್ಯಾದ ನೀತಿಗಳು ಅಮೆರಿಕಾ ಹಾಗೂ ಅದರ ಮಿತ್ರರಾಷ್ಟ್ರಗಳನ್ನು ಆತಂಕಕ್ಕೀಡು ಮಾಡಿದವು.

ಸ್ಟಾಲಿನ್‌ನು ಕೈಗೊಂಡ ಭೌಗೋಳಿಕ ವಿಸ್ತರಣೆಯು ಅಮೆರಿಕಾವನ್ನು ಸಹಜವಾಗಿ ಅಸಮಾಧಾನಗೊಳ್ಳುವಂತೆ ಮಾಡಿತು. ಇದೇ ಕಾಲಕ್ಕೆ ಗ್ರೀಸ್ ದೇಶವು ಅಮೆರಿಕಾ, ಇಂಗ್ಲೆಂಡ್ ಹಾಗೂ ರಷ್ಯಾ ದೇಶಗಳಿಗೆ ತಮ್ಮ ತತ್ವ ಸಿದ್ಧಾಂತಗಳನ್ನು ಜಾರಿಗೊಳಿಸುವ ಚದುರಂಗದಾಟದ ಮೈದಾನದಂತೆ ನಿರ್ಮಾಣಗೊಂಡಿತು. ಹಲವು ದಶಕಗಳಿಂದ ಇಂಗ್ಲೆಂಡಿನ ಮಾರ್ಗದರ್ಶನದಂತೆ ಗ್ರೀಸ್‌ನಲ್ಲಿ ರಾಜನಿಷ್ಠ ಪ್ರಜಾಪ್ರಭುತ್ವ(ಸಾಂಪ್ರದಾಯಿಕ) ಸರಕಾರ ಅಸ್ತಿತ್ವದಲ್ಲಿತ್ತು. ಇದನ್ನು ಅಲ್ಲಿ ಶತಾಯಗತಾಯ ಉಳಿಸುವುದು ಹಾಗೂ ಮುಂದಿನ ದಿನಗಳಲ್ಲಿ ಅದನ್ನು ಕಾಯ್ದುಕೊಂಡು ಹೋಗುವುದು ಇಂಗ್ಲೆಂಡಿಗೆ ದೊಡ್ಡ ತಲೆನೋವಾಗಿತ್ತು. ಎರಡನೆಯ ಮಹಾಯುದ್ಧದಲ್ಲಿ ಅಪಾರ ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ಗ್ರೀಸ್‌ನಲ್ಲಿನ ರಾಜಕೀಯ ಸ್ಥಿರತೆಯ ಬಗೆಗೆ ಇಂಗ್ಲೆಂಡ್ ಅಲಕ್ಷ್ಯವಹಿಸಿ ಅನಾದರ ತಾಳಿತು. ಇದರ ಸುದುಪಯೋಗ ಪಡೆದ ಸ್ಥಳೀಯ ಕಮ್ಯುನಿಸ್ಟ್ ನಾಯಕರು ಹಾಗೂ ಕೆಲವು ಸಂಘಟನೆಗಳು ರಷ್ಯಾ ಹಾಗೂ ಗ್ರೀಸ್ ಸುತ್ತಲಿನ ಕೆಲವು ದೇಶಗಳಿಂದ ಹಣದ ಸಹಾಯ ಪಡೆದು ಸಾಂಪ್ರದಾಯಿಕ ಸರಕಾರವನ್ನು ಬುಡಸಮೇತ ಕಿತ್ತೊಗೆಯಲು ಸಂಚು ರೂಪಿಸಿದವು. ತಾನು ಅಂದುಕೊಂಡಂತೆ ಗ್ರೀಸ್ ಹಾಗೂ ಟರ್ಕಿ ತನ್ನ ಅಣತಿಗೆ ಒಳಪಡುವುದರಿಂದ ಏಷ್ಯ ಹಾಗೂ ಆಫ್ರಿಕ ಖಂಡಗಳ ಮೇಲೆ ಸರಳವಾಗಿ ನಿಯಂತ್ರಣ ಹೊಂದಬಹುದೆಂದು ರಷ್ಯಾ ಲೆಕ್ಕಾಚಾರ ಸೃಷ್ಟಿಸಿಕೊಂಡಿತ್ತು. ಆದರೆ ಅಮೆರಿಕಾದ ಅಧ್ಯಕ್ಷ ಟ್ರೂಮನ್ ರಷ್ಯಾದ ಅಲೋಚನೆಗಳಿಗೆ ಕಡಿವಾಣ ಹಾಕದಿದ್ದರೆ ಇನ್ನೊಂದು ಭಯಾನಕ ಯುದ್ಧವನ್ನು ಜಗತ್ತು ಕಾಣುವುದು ಅನಿವಾರ್ಯವಾದೀತೆಂದು ಗಂಭೀರವಾದ ಎಚ್ಚರಿಕೆ ನೀಡಿದ. ಇಂಥ ತೆರೆಮರೆಯಲ್ಲಿ ಆಗಬಹುದಾದ ಅನಾಹುತಗಳನ್ನು ತಡೆಗಟ್ಟಲು ಹಾಗೂ ಪ್ರಜಾಪ್ರಭುತ್ವವನ್ನು ಎಲ್ಲ ರಾಷ್ಟ್ರಗಳಲ್ಲಿ ಸ್ಥಾಪಿಸುವ ಅವಶ್ಯಕತೆಯನ್ನು ಮನಗಂಡು ಅಧ್ಯಕ್ಷ ಟ್ರೂಮನ್, ಗ್ರೀಸ್ ಹಾಗೂ ಟರ್ಕಿ ದೇಶಗಳಲ್ಲಿ ಸಂಭವಿಸುವ ವಿಪ್ಲವಗಳಿಗೆ ಅಮೆರಿಕಾ ಪ್ರತಿರೋಧ ಒಡ್ಡದೇ ಇರಲಾರದು ಎಂದು ಪರೋಕ್ಷವಾಗಿ ರಷ್ಯಾಕ್ಕೆ ಎಚ್ಚರಿಕೆ ನೀಡಿ ಕಾರ್ಯರೂಪಕ್ಕೆ ಇಳಿದನು. ತನ್ನ ಕಾರ್ಯ ಯೋಜನೆಗಳನ್ನು ಜಾರಿಗೊಳಿಸಲು ೪೦೦ ದಶಲಕ್ಷ ಡಾಲರ್ ಸಹಾಯಧನ ನೀಡುವಂತೆ ಅಮೆರಿಕಾದ ಕಾಂಗ್ರೆಸ್ಸನ್ನು ಕೋರಿಕೊಂಡನು. ವಿಶ್ವದಲ್ಲಿನ ಪ್ರತಿವ್ಯಕ್ತಿಯ ಸ್ವಾತಂತ್ರ್ಯವನ್ನು ರಕ್ಷಿಸುವುದು ತನ್ನ ದೇಶದ ಪರಮ ಧ್ಯೇಯ ಎಂದು ಸಾರಿದ. ಈತನ ನೀತಿಗಳನ್ನು ಟ್ರೂಮನ್ ಸಿದ್ಧಾಂತಗಳೆೆಂದು ಕರೆಯುತ್ತಾರೆ.

ನೇರವಾದ ಮುಖಾಮುಖಿಯಿಲ್ಲದೇ ಕೇವಲ ತತ್ವ ಸಿದ್ಧಾಂತಗಳನ್ನು ಪ್ರಚುರಪಡಿಸು ವುದರ ಮೂಲಕ ತಮ್ಮ ಶಕ್ತಿಯನ್ನು ವಿಸ್ತರಿಸಿ ಭಯ ಹುಟ್ಟಿಸುವ ತಂತ್ರಕ್ಕೆ ಸಾಮಾನ್ಯವಾಗಿ ಶೀತಲಸಮರವೆಂದು ಕರೆಯುತ್ತಾರೆ. ಟ್ರೂಮನ್‌ನ ಕ್ಯಾಬಿನೆಟ್‌ನಲ್ಲಿ ವಿದೇಶ ಸಚಿವನಾಗಿದ್ದ ಜಾರ್ಜ್ ಮಾರ್ಷಲ್ ಯುರೋಪಿನಲ್ಲಿ ರಷ್ಯಾದ ಬೆಳವಣಿಗೆಯನ್ನು ತಡೆಗಟ್ಟಿ ಅದರ ಪ್ರತೀಕಾರಾತ್ಮಕ ಅಭಿವೃದ್ದಿಯನ್ನು ತಡೆಗಟ್ಟುವುದು ಅವಶ್ಯಕ ಹಾಗೂ ಅನಿವಾರ್ಯವೆಂದು ಪ್ರತಿಪಾದಿಸಿದನು. ಈತನ ನೀತಿಗಳನ್ನು ಬೆಂಬಲಿಸಿದ ಟ್ರೂಮನ್ ಹಾಗೂ ಅಮೆರಿಕಾನ್ ಕಾಂಗ್ರೆಸ್ ಐದು ಬಿಲಿಯನ್ (೫೦೦ ಕೋಟಿ) ಡಾಲರ್ ಸಹಾಯಧನವನ್ನು ಯುರೋಪಿನ ಬಡರಾಷ್ಟ್ರಗಳಿಗೆ ಹಂಚುವ ಮೂಲಕ ರಷ್ಯಾದ ಹಿಡಿತವನ್ನು ಸಡಿಲುಗೊಳಿಸುವುದಕ್ಕಾಗಿ ವಿಶೇಷ ಕಾರ್ಯಕ್ರಮಗಳ ಅಡಿಯಲ್ಲಿ ಹಣದ ಮಂಜೂರಾತಿ ನೀಡಿತು. ಇದು ಸಂಪೂರ್ಣ ವಾಗಿ ಅಮೆರಿಕಾ ಸರಕಾರದ ಅಧೀನದಲ್ಲಿ ಜಾರಿಗೊಂಡಿತು. ಈ ಯೋಜನೆಯನ್ನು ‘‘ಮಾರ್ಷಲ್ ಯೋಜನೆ’’ ಎಂದು ಕರೆಯುತ್ತಾರೆ. ಇಂಥ ಪ್ರಥಮ ಪ್ರಯೋಗವನ್ನು ಅಮೆರಿಕಾ ಇಟಲಿಯಲ್ಲಿ ರಷ್ಯಾದ ತಂತ್ರಗಳಿಗೆ ಪ್ರತಿಯಾಗಿ ಪ್ರಯೋಗಿಸಿ ಯಶಸ್ವಿಯಾಯಿತು. ಮುಂದಿನ ದಿನಗಳಲ್ಲಿ ಯುರೋಪಿನ ಸರ್ವತೋಮುಖ ಅಭಿವೃದ್ದಿಗೆ ಮಾರ್ಷಲ್ ಯೋಜನೆ ಬಹಳ ಮುಖ್ಯವಾದ ಪಾತ್ರ ವಹಿಸಿತು.

ನಾರ್ತ್ ಅಟ್ಲಾಂಟಿಕ್ ಟ್ರಿಟಿ ಆರ್ಗನೈಜೇಶನ್ನನ್ನು(ನ್ಯಾಟೊ)(ಉತ್ತರ ಅಟ್ಲಾಂಟಿಕ್ ಕರಾರು ಸಂಸ್ಥೆ) ಅಮೆರಿಕಾದ ಸಹಾಯದಿಂದ ಯುರೋಪಿನ ರಾಷ್ಟ್ರಗಳು ೧೯೪೯ರಲ್ಲಿ ಸ್ಥಾಪಿಸಿಕೊಂಡವು. ಈ ಕರಾರಿಗೆ ೧೨ ದೇಶಗಳು ಸಹಿ ಹಾಕಿದವು. ಕರಾರಿಗೆ ಒಳಪಟ್ಟ ಈ ದೇಶಗಳು ತಮ್ಮ ಸಂಸ್ಥೆಯಡಿಯಲ್ಲಿ ಮಿತ್ರರಾಗಿರುವ ಯಾವುದೇ ಒಂದು ದೇಶದ ಮೇಲೆ ಬೇರೊಂದು ರಾಷ್ಟ್ರವು ಚಿಕ್ಕ ಯುದ್ಧ ಮಾಡಿದರೂ ತತ್‌ಕ್ಷಣವೇ ಆಕ್ರಮಣಕ್ಕೊಳಗಾದ ಆ ದೇಶದ ನೆರವಿಗೆ, ಕರಾರಿಗೆ ಒಳಪಟ್ಟ ಎಲ್ಲ ದೇಶಗಳು ಧಾವಿಸಿ ಅದರ ಬೆಂಬಲಕ್ಕೆ ಸಹಾಯ ಮಾಡುವುದು ಇದರ ಮುಖ್ಯ ಉದ್ದೇಶವಾಗಿತ್ತು. ಅಣ್ವಸ್ತ್ರಗಳನ್ನು ಶೇಖರಿಸಲು ನ್ಯಾಟೋ ದೇಶಗಳಿಗೆ ಒಪ್ಪಿಗೆ ನೀಡಲಾಗಿತ್ತು.  ಇದಕ್ಕೊಂದು ಪ್ರತ್ಯೇಕ ಸೈನ್ಯ ಸ್ಥಾಪಿಸಿ ಇದಕ್ಕೆ ಐಸನ್ ಹೋವರ್‌ನನ್ನು ಮಹಾದಂಡನಾಯಕನನ್ನಾಗಿ ನೇಮಿಸಲಾಯಿತು. ರಷ್ಯಾದ ಬಿಗಿಹಿಡಿತವನ್ನು ಸಡಿಲಿಸಲು ಇಂಥ ನೀತಿಗಳನ್ನು ಪಶ್ಚಿಮ ಯುರೋಪ್ ಪ್ರದೇಶದಲ್ಲಿನ ರಾಷ್ಟ್ರಗಳಲ್ಲಿ ಮಾತ್ರ ಜಾರಿಗೆ ತರಲು ಅಮೆರಿಕಾ ಹೆಚ್ಚಿನ ನಿಗಾ ವಹಿಸಿತು. ಆದರೆ ರಷ್ಯಾ ಇದನ್ನರಿತು ಹಿಂಬಾಗಿಲಿನಿಂದ ಏಷ್ಯದ ಬೃಹತ್ ಪ್ರದೇಶದಲ್ಲಿ ತನ್ನ ನೀತಿಗಳನ್ನು ಹರಡಿ ಗಟ್ಟಿಗೊಂಡಿತು. ಅಮೆರಿಕಾದ ಪರಮಾಪ್ತ ಮಿತ್ರನಾದ ಚೈನಾದೇಶದ ಚಿಯಾಂಗ್ ಕೈಷೆಕ್ ಹಾಗೂ ಆತನ ರಾಷ್ಟ್ರೀಯ ಸರಕಾರವನ್ನು ರಷ್ಯಾದ ಪರೋಕ್ಷ ಬೆಂಬಲದಿಂದ ಕ್ರಾಂತಿಕಾರಿ ಮಾವೋತ್ಸೆ ತುಂಗನು ಕಿತ್ತೊಗೆದು ಕಮ್ಯುನಿಸ್ಟ್ ಸರಕಾರವನ್ನು ಸ್ಥಾಪಿಸಿದನು. ಈ ಬದಲಾದ ಪರಿಣಾಮದಿಂದ ಫಾರ್ಮೋಸಾ ದ್ವೀಪಕ್ಕೆ ಓಡಿ ಹೋದ ಕೈಷೆಕ್ ಅಮೆರಿಕಾದ ರಕ್ಷಣೆ ಪಡೆದನು. ಸಂಯುಕ್ತ ಸಂಸ್ಥಾನಗಳ ಅಧೀನದಲ್ಲಿದ್ದ ಫಾರ್ಮೋಸಾ ದ್ವೀಪವು ಚೀನ ಹಾಗೂ ಅಮೆರಿಕಾದ ಶೀತಲಸಮರಕ್ಕೆ ಸಾಕ್ಷಿಯಾಗಿ ನಿಂತಿತು.

ಪೂರ್ವ ಏಷ್ಯಾದ ರಾಜಕೀಯ ರಂಗದಲ್ಲಿ ಅಮೆರಿಕಾದ ಪ್ರವೇಶ

ಕೊರಿಯಾ ಸಮಸ್ಯೆಯಲ್ಲಿ ಅಮೆರಿಕಾವು ಅನಿವಾರ್ಯವಾಗಿ ಪ್ರವೇಶಿಸಬೇಕಾಯಿತು. ಈ ಮೊದಲು ಜಪಾನ್‌ನ ಆಕ್ರಮಣದಿಂದ ಜರ್ಜರಿತವಾಗಿದ್ದ ಅಖಂಡ ಕೊರಿಯಾ ನ್ಯಾಟೋ ಸೈನ್ಯದ ಸಹಾಯದಿಂದ ಬಿಡುಗಡೆಗೊಂಡು, ನಂತರದ ದಿನಗಳಲ್ಲಿ ಆದ ಕ್ಷಿಪ್ರ ರಾಜಕೀಯ ಬದಲಾವಣೆಗಳಿಂದ ಉತ್ತರ ಹಾಗೂ ದಕ್ಷಿಣ ಕೊರಿಯಾ ಎಂದು ವಿಭಾಗಿಸಲ್ಪಟ್ಟಿತು. ರಾಜಿ ಸಂಧಾನಗಳ ಮೂಲಕ ತಾತ್ಕಾಲಿಕವಾಗಿ ಉಪಶಮನಗೊಂಡಿದ್ದ ಈ ದೇಶಗಳ ನಡುವೆ ಇರುವ ಸಮಸ್ಯೆಗಳು ಶಾಶ್ವತವಾಗಿ ಬಗೆಹರಿಯಲಿಲ್ಲ. ಇದನ್ನು ಸದುಪಯೋಗ ಪಡಿಸಿಕೊಂಡು ರಷ್ಯಾ ಮತ್ತು ಚೀನದ ಕುಮ್ಮಕ್ಕಿನಿಂದ ಉ.ಕೊರಿಯಾ  ದೇಶವು ದಕ್ಷಿಣ ಕೊರಿಯಾದ ಬಹುಭಾಗವನ್ನು ಬಲಾತ್ಕಾರವಾಗಿ ವಶಪಡಿಸಿಕೊಂಡಿತು. ಸದ್ದಿಲ್ಲದೇ ಮುಂದುವರೆಯುತ್ತಿದ್ದ ರಷ್ಯಾದ ನೀತಿಗಳಿಂದ ಆತಂಕ್ಕೊಳಗಾದ ಅಮೆರಿಕಾ ಈ ಘಟನೆ ಯನ್ನು ಪ್ರತಿಭಟಿಸಿ ದ.ಕೊರಿಯಾಕ್ಕೆ ಸೈನ್ಯ ಸಹಾಯ ನೀಡಿ ಉ.ಕೊರಿಯಾದ ಭಾಗಗಳನ್ನು ಜನರಲ್ ಮೆಕಾರ್ಥರ್‌ನ ನೇತೃತ್ವದಲ್ಲಿ ಯುದ್ಧ ಮಾಡಿ ಮತ್ತೆ ಮರಳಿ ಪಡೆಯುವಲ್ಲಿ ಯಶಸ್ವಿಯಾಯಿತು. ಜಯದಿಂದ ಉನ್ಮತ್ತರಾದ ಸೈನಿಕರು ಉ.ಕೊರಿಯಾದ ಬಹುಭಾಗವನ್ನು ಕ್ಷಿಪ್ರವಾಗಿ ವಶಪಡಿಸಿಕೊಂಡರು. ಆದರೆ ಇದೇ ವೇಳೆಗೆ ಚೈನಾ ದೇಶವು ಉತ್ತರ ಕೊರಿಯಾದ ಪರವಾಗಿ ಬಹಿರಂಗ ಯುದ್ಧಕ್ಕಿಳಿದಿದ್ದರಿಂದ ಜನರಲ್ ಮೆಕಾರ್ಥನ ನೇತೃತ್ವದ ಪಡೆಗಳು ಮತ್ತೆ ರೇಖಾಂಶ ೩೮ವರೆಗೆ ಹಿಂದೆ ಸರಿದವು. ಕಮ್ಯುನಿಸ್ಟರ ನಿಸ್ವಾರ್ಥದ ಹೋರಾಟ ತಂತ್ರಗಳು ಅಮೆರಿಕಾ ಹಾಗೂ ಇತರ ರಾಷ್ಟ್ರಗಳನ್ನು ಬೆಚ್ಚಿಬೀಳಿಸಿತು.  ಸೋಲಿನಿಂದಾದ ಹೊಡೆತದಿಂದ ಬಂಡವಾಳ ಪ್ರಭುತ್ವಗಳ ಎದೆ ಬಡಿತ ಮತ್ತಷ್ಟು ಹೆಚ್ಚಿಸಿತು. ಎರಡನೆಯ ಮಹಾಯುದ್ಧದಿಂದ ಸಾಕಷ್ಟು ತೊಂದರೆಗೆ ಒಳಗಾಗಿದ್ದ ಅಮೆರಿಕಾ ಅದೇ ಸ್ಥಿತಿಯಲ್ಲಿ ಉತ್ತರ ಕೊರಿಯಾದ ವಿರುದ್ಧ ಪ್ರಬಲವಾದ ಯುದ್ಧ ಮುಂದುವರೆಸಲು ಶಕ್ತವಾಗಿರಲಿಲ್ಲ. ಹಾಗೂ ಈ ಯುದ್ಧದ ಬಗೆಗೆ ಅಧ್ಯಕ್ಷ ಟ್ರೂಮನ್ ನಿರುತ್ಸಾಹಿಯಾಗಿದ್ದನು. ಆದರೆ ದಂಡನಾಯಕ ಜನರಲ್ ಮೆಕಾರ್ಥನು ಟ್ರೂಮನ್‌ನ ಮನೋಭಾವನೆಯ ವಿರುದ್ಧ ನಿಲುವು ತಾಳಿದನು. ಅಮೆರಿಕಾ ಹಾಗೂ ಮಿತ್ರರಾಷ್ಟ್ರಗಳ ಮೃದುಧೋರಣೆಯನ್ನು ಪ್ರಶ್ನಿಸಿ ಸೈನ್ಯವನ್ನು ತ್ಯಜಿಸಿ ಅಮೆರಿಕಾದ ರಾಜಕೀಯ ರಂಗದ ಪ್ರವೇಶ ಮಾಡಿದನು. ಆದರೆ ಆತನ ಯುದ್ಧೋತ್ಸಾಹ ಹಾಗೂ ಸೈನ್ಯತನದ ಹಟಮಾರಿ ಧೋರಣೆ, ಪ್ರಜಾವ್ಯವಸ್ಥೆಯಲ್ಲಿ ನಂಬಿಕೆ ಇಟ್ಟ ಅಮೆರಿಕಾನ್‌ರನ್ನು ಒಲಿಸಿಕೊಳ್ಳಲಾಗಲಿಲ್ಲ.  ಡೆಮಾಕ್ರೆಟಿಕ್ ಪಕ್ಷದಲ್ಲಿಯೇ  ಇದ್ದರೂ ಮೆಕಾರ್ಥನು ಟ್ರೂಮನ್‌ನ ವಿರುದ್ಧ ಕಟುವಾದ ಟೀಕೆಗಳ ಸುರಿಮಳೆಗೈದನು. ಆದರೆ ಈ ಯಾವ ಕಾರಣಗಳು ಟ್ರೂಮನ್‌ನ ವಿರುದ್ಧದ ಕೆಲಸಕ್ಕೆ ಬರಲಿಲ್ಲ. ಎರಡನೆಯ ಅವಧಿಗೆ ಮತ್ತೆ ಆಯ್ಕೆ ಆದ ಅಧ್ಯಕ್ಷ ಟ್ರೂಮನ್ ತನ್ನ ಆಡಳಿತದ ಅವಧಿಯಲ್ಲಿ ಮುಖ್ಯವಾಗಿ ‘ನ್ಯಾಯವಾದ ಹಂಚಿಕೆ’(ಫೇರ್ ಡೀಲ್) ಕಾರ್ಯ ಯೋಜನೆಯನ್ನು ಅನುಷ್ಠಾನಗೊಳಿಸಲು ಶ್ರಮಿಸಿದನು. ಆದರೆ ರಿಪಬ್ಲಿಕನ್‌ರು ಹಾಗೂ ಕನ್ಸ್‌ರ್‌ವೇಟನ್ನರು ಮೆಕಾರ್ಥರ್ ಮಾಡಿದ ಟೀಕೆಗಳನ್ನಿಟ್ಟುಕೊಂಡು ಟ್ರೂಮನ್‌ನನ್ನು ಹೀಯಾಳಿಸಲು ಮುಂದಾದರು. ಇದೇ ವೇಳೆಗೆ ದುರ್ದೈವವಶಾತ್ ಅಮೆರಿಕಾದ ಸೇನೆ ಕೊರಿಯಾದಲ್ಲಿ ಸೋತು ಕಮ್ಯುನಿಸಂನ ಆಡಳಿತ ಪ್ರಾಬಲ್ಯಕ್ಕೆ ದಾರಿ ಮಾಡಿಕೊಟ್ಟಿತು. ಇಂಥ ಗಂಭೀರ ವೈಫಲ್ಯದ ಹೊಣೆಗಾರಿಕೆಯನ್ನು ಸಹ ಅಧ್ಯಕ್ಷ ಟ್ರೂಮನ್‌ನ ಮೇಲೆ ಹೊರಿಸಲಾಯಿತು. ಈತನ ಆಡಳಿತಾವಧಿಯಲ್ಲಿ ವಿಪರೀತ ಭ್ರಷ್ಟಾಚಾರ ತಲೆದೋರಿತು. ಅಲ್ಲದೇ ಕಾರ್ಖಾನೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಲ್ಲಿ ಸಮಸ್ಯೆಯನ್ನು ಸೃಷ್ಟಿಸಿ ಕೊಂಡಿರುವ ಸಂಬಂಧವಾಗಿ ಸರ್ವೋಚ್ಚ ನ್ಯಾಯಾಲಯದಿಂದ ಛೀಮಾರಿ ಸಹ ಹಾಕಿಸಿಕೊಂಡು ಆಡಳಿತದ ಭಾರೀ ವೈಫಲ್ಯ ಅನುಭವಿಸಿದ.

ದೇಶದ ಆಂತರಿಕ ವ್ಯವಸ್ಥೆಯಲ್ಲೂ ಸಹ ಅನುಮಾನಗಳು ಹುಟ್ಟಿಕೊಂಡವು. ಅಮೆರಿಕಾ ದೇಶದ ಜನತೆಯ ಆತಂಕವೆಂದರೆ ಕಮ್ಯುನಿಸ್ಟ್ ರಷ್ಯಾ ಪ್ರಬಲವಾಗಿ ಬೆಳೆಯುತ್ತಿರುವ ರೀತಿ. ರಷ್ಯಾ ದೇಶವು ಬೃಹತ್ ಚೀನಾವನ್ನು ತನ್ನ ಸಿದ್ಧಾಂತದಡಿಯಲ್ಲಿ ಕಟ್ಟಿಹಾಕಿತು. ಅಲ್ಲದೇ ಇದುವರೆಗೂ ಅಮೆರಿಕಾ ದೇಶವು ಅಣುಬಾಂಬ್ ಅಸ್ತ್ರಗಳು ತನ್ನ ಬಳಿ ಮಾತ್ರ ಇವೆ ಎಂಬ ಹುಮ್ಮಸ್ಸಿನಲ್ಲಿ ಬೀಗುತ್ತಿತ್ತು. ಆದರೆ ಈಗ ರಷ್ಯಾ ಕೂಡ ಸಣ್ಣದಾದ ಯಾವ ಸುಳಿವು ಕೊಡದೇ ಅಣುಬಾಂಬ್ ಪರೀಕ್ಷೆ ನಡೆಸಿ ಅಮೆರಿಕಾಕ್ಕೆ ಭಯ ಹುಟ್ಟಿಸಿತು. ರಷ್ಯಾದ ತೀವ್ರ ಪ್ರಗತಿಗೆ ಅಮೆರಿಕಾದಲ್ಲಿಯೇ ಇರುವ ಕೆಲವು ಕಮ್ಯುನಿಸಂ ಸಿದ್ಧಾಂತ ಪ್ರತಿಪಾದಕರು ಒಳಸಂಚು ನಡೆಸಿ ರಷ್ಯಾದ ನೀತಿಗಳಿಗೆ ಒಳಗೊಳಗೆಯೇ ಬೆಂಬಲಿಸುತ್ತಿದ್ದಾರೆ ಎಂದು ಸರಕಾರವು ಅನುಮಾನಿಸಿತು. ವಿಶೇಷವಾಗಿ ಅಮೆರಿಕಾದಲ್ಲಿರುವ ಬಡ ಕೂಲಿಕಾರ್ಮಿಕರ ಮೇಲೆ ಗುಮಾನಿಗಳನ್ನು ವ್ಯಕ್ತಪಡಿಸಲಾಯಿತು.  ಇನ್ನೊಂದು ಹೆಜ್ಜೆ ಮುಂದೆ ಹೋಗಿ ಕಾರ್ಮಿಕರ ಮುಷ್ಕರ ವೇಳೆಯಲ್ಲಿ ನಾಯಕತ್ವ ವಹಿಸಿದ ನಾಯಕರ ಮೇಲೆ ಹೆಚ್ಚಿನ ಗಮನವಿರಿಸಲಾಯಿತು. ತನಿಖಾ ಸಮಿತಿ ಮಾಡಿ ಕೆಲವರನ್ನು ಶಿಕ್ಷಿಸಲಾಯಿತು. ಅಣು ವಿಜ್ಞಾನಿಗಳಾದ ರೋಸೆನ್ ಬರ್ಗ್ ದಂಪತಿ ಹಾಗೂ ಕ್ಲಾಸ್ ಫ್ಯೂಕ್ಸ್ ಎಂಬ ವಿಜ್ಞಾನಿಯು ಇಂಥ  ಗುಮಾನಿ ಶಿಕ್ಷೆಯಿಂದ ಗಲ್ಲಿಗೇರಿದರು. ವಿಸ್‌ಕಾನ್ಸಿನ್‌ನ ಸೆನೆಟರ್ ಮೆಕಾರ್ಥಿ (ರಿಪಬ್ಲಿಕನ್ ಪಕ್ಷದ) ಕಮ್ಯುನಿಸಂ ವಿರುದ್ಧದ ಮಾತಿನ ದಾಳಿಗಳನ್ನು ಸಂಘಟಿಸುವಲ್ಲಿ ಮುಂಚೂಣಿಯಲ್ಲಿ ನಿಂತನು. ಇನ್ನೊಂದು ಹೆಜ್ಜೆ ಮುಂದೆ ಹೋಗಿ ಗಂಭೀರವಾದ ಟೀಕೆಗಳನ್ನು ಮಾಡುತ್ತ ಈತನು ಅಧ್ಯಕ್ಷ ಟ್ರೂಮನ್‌ನು ಸಹ ಕಮ್ಯುನಿಸ್ಟ್ ತತ್ವ ಸಿದ್ಧಾಂತದ ಬಗೆಗೆ ಪ್ರೀತಿವುಳ್ಳವನು ಎಂದು ಕ್ಷುಲ್ಲಕವಾಗಿ ಆರೋಪಿಸಿದನು. ತನಗಾದ ನೋವು ಹಾಗೂ ನಿರಾಸಕ್ತಿಯಿಂದ ೧೯೫೨ರ ಮಹಾಚುನಾವಣೆಯಿಂದ ಹ್ಯಾರಿ ಟ್ರೂಮನ್ ಹಿಂದೆ ಸರಿದನು. ಸುಮಾರು ೨೦ ವರ್ಷಗಳ ಕಾಲ ಬೇರೆ ಬೇರೆ ಹುದ್ದೆಯಲ್ಲಿದ್ದ ಟ್ರೂಮನ್ ನೇತೃತ್ವದಲ್ಲಿದ್ದ ಡೆಮಾಕ್ರಾಟಿಕನ್‌ರು ಸುಭದ್ರವಾದ ರಾಜ್ಯಭಾರ ಮಾಡಿದರು. ಟ್ರೂಮನ್ ಹಿಂದೆ ಸರಿದಿದ್ದರಿಂದ ನ್ಯೂಯಾರ್ಕ್ ಗವರ್ನರ್ ಆಡ್ಲೈಸ್ಟೀವನ್‌ಸನ್‌ನನ್ನು ಡೆಮಾಕ್ರಾಟಿಕ್ ಪಕ್ಷ ಚುನಾವಣೆಗೆ ಇಳಿಸಿತು. ರಿಪಬ್ಲಿಕನ್ ಪಕ್ಷ ಐಸೆನ್ ಹಾವರ್‌ನ್ನನ್ನು ಪ್ರತಿಯಾಗಿ ನಿಲ್ಲಿಸಿತು. ಉಪಾಧ್ಯಕ್ಷ ಸ್ಥಾನಗಳಿಗೆ ಡೆಮಾಕ್ರಾಟಿಕ್ ಪಕ್ಷದ ಜಾನ್ ಸ್ಟಾರ್ಕ್‌ಮನ್ ಹಾಗೂ ರಿಪಬ್ಲಿಕ್ ಪಕ್ಷದ ರಿಚರ್ಡ್ ನಿಕ್ಸನ್ ಸ್ಪರ್ಧೆಗಿಳಿದರು. ಇಪ್ಪತ್ತು ವರ್ಷ ಕಾಲ ಆಡಳಿತ ನಡೆಸಿದ ಡೆಮಾಕ್ರಾಟಿಕನ್‌ರ ಬಗೆಗೆ ಅಮೆರಿಕಾದ ಜನತೆ ಅಸಮಾಧಾನ ಹೊಂದಿದ್ದರು. ಇದರಿಂದ ಚುನಾವಣೆಯಲ್ಲಿ ಡೆಮಾಕ್ರಾಟಿಕನ್‌ರು ಬಹುಮತ ಕಳೆದುಕೊಂಡು ಸೋಲನ್ನನುಭವಿಸ ಬೇಕಾಯಿತು. ಮತ್ತೆ ಇಪ್ಪತ್ತು ವರ್ಷಗಳ ನಂತರ ರಿಪಬ್ಲಿಕನ್‌ರು ಅಧಿಕಾರ ಚುಕ್ಕಾಣಿ ಹಿಡಿದರು. ಐಸನ್ ಹಾವರ್ ಹಾಗೂ ರಿಚರ್ಡ್ ನಿಕ್ಸನ್ ಎಂಬ ಮೇಧಾವಿಗಳು ೫೨ನೇ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗಿ ಅಧಿಕಾರ ವಹಿಸಿಕೊಂಡರು.

ಮಾರ್ಡನ್ ರಿಪಬ್ಲಿಕ ಸಂನ ಪ್ರತಿಪಾದನೆ(ಐಸೆನ್‌ಹಾವರ್ ಆಡಳಿತ)

ಅಮೆರಿಕಾದ ೩೪ನೇ ಅಧ್ಯಕ್ಷನಾಗಿ ಐಸೆನ್ ಹಾವರ್ ಬಹುಮತದಿಂದ ಆಯ್ಕೆ ಆದನು. ಮೂಲತಃ ಈತನೊಬ್ಬ ಸೈನ್ಯ ನಾಯಕನಾಗಿದ್ದ. ಡಗ್ಲಾಸ್ ಮೆಕಾರ್ಥರನ ನೇತೃತ್ವದಲ್ಲಿ ನಡೆದ ಎರಡನೇ ಮಹಾಯುದ್ಧದಲ್ಲಿ ಜಯಸಾಧಿಸಿದ ಅಮೆರಿಕಾ ಸೈನ್ಯದಲ್ಲಿ ಹಾವರ್ ಕೂಡಾ ಮಹತ್ವದ ಪಾತ್ರ ವಹಿಸಿದ್ದನು. ಜನರಲ್ ಗ್ರಾಂಟ್‌ನ ನಂತರ ಸೈನ್ಯಕ್ಕೆ ಸೇರಿದ ವ್ಯಕ್ತಿಯೊಬ್ಬ ಅಧ್ಯಕ್ಷನಾಗಿ ಆಯ್ಕೆ ಆದ ವ್ಯಕ್ತಿ ಎಂದರೆ ಐಸೆನ್ ಹಾವರ್. ‘‘ಮಾಡರ್ನ್ ರಿಪಬ್ಲಿಕಸಂ’’ನ ಪ್ರತಿಪಾದಕನೆೆಂದು ಗುರುತಿಸಿಕೊಳ್ಳುವ ಈತನು ಆಡಳಿತದಲ್ಲಿ ಪಕ್ಷಭೇದ ಮರೆತು ಎಲ್ಲರನ್ನು ಒಂದು ಕಡೆಗೆ ತಂದು ಸಮನ್ವಯತೆಯನ್ನು ಸಾಧಿಸಿದನು. ವ್ಯಾಪಾರಿ ವರ್ಗಗಳನ್ನು ಪ್ರೋ ಅಧಿಕಾರದಲ್ಲಿ ಸಹಾಯ ಮಾಡುವಂತೆ ನೋಡಿಕೊಂಡನು. ಆದ್ದರಿಂದ ಈತನ ಬಗೆಗೆ ಕೆಲವರು ಅಸಮಾಧಾನ ಹೊಂದಿದರು. ಈತನ ಕುರಿತು ಒಂದು ಕಟೂಕ್ತಿ ಹುಟ್ಟಿಕೊಂಡಿತು. ‘‘ಒಂಬತ್ತು ಮಿಲಿಯನಾಧಿಪತಿಗಳಿಂದ ಮತ್ತು ಒಬ್ಬ ಕೊಳವೆ (ಮೋರೆ) ರಿಪೇರಿ ಮಾಡುವವನಿಂದ ಕೂಡಿದ ಕ್ಯಾಬಿನೆಟ್’’ ಹಾವರ್‌ನ ಆಡಳಿತವಾಗಿದೆ ಎಂದು ಟೀಕಿಸಿದರು. ‘ಮಣ್ಣಿನ ಬ್ಯಾಂಕು’ ಎಂಬ ಲಾಭದಾಯಕ ವ್ಯವಸ್ಥೆ ಹಾವರ್‌ನ ಆಡಳಿತದಲ್ಲಿತ್ತು ಎಂದು ಕೆಲವರು ವ್ಯಂಗ್ಯ ಮಾಡುತ್ತಾರೆ. ಅಮೆರಿಕಾದಲ್ಲಿ ಕೃಷಿ ಉತ್ಪನ್ನಗಳ ಮೇಲೆ ಹತೋಟಿ ಸಾಧಿಸಲು ನಿರ್ದಿಷ್ಟಪಡಿಸಿದ ಭೂಮಿಯಲ್ಲಿ  ಅಗತ್ಯಕ್ಕೆ ಬೇಕಾದಷ್ಟು ಉತ್ಪನ್ನಗಳನ್ನು ಬೆಳೆಯುವುದು ಮಾತ್ರ ಉಚಿತ ಮತ್ತು ಅವಶ್ಯಕವಾದುದೆಂದು ಅಭಿಪ್ರಾಯಿಸಿದ. ಈ ಅವಶ್ಯಕತೆಯ ಹಿನ್ನೆಲೆಯಲ್ಲಿ ಕಾನೂನು ಜಾರಿಗೊಳಿಸಲಾಯಿತು. ಸರಕಾರವು ನಿಗದಿಪಡಿಸಿದ ಕೃಷಿ ಭೂಮಿಯನ್ನು ಬಿಟ್ಟು ಉಳಿದ ಸಾವಿರಾರು ಎಕರೆಯ ಕೃಷಿರಹಿತ ಭೂಮಿಗೂ ಸಹ ಪರಿಹಾರ ಕೊಡುವ ನಿರ್ಣಯಗಳಾದವು. ಹೀಗಾಗಿ ಇದರ ದುರುಪಯೋಗ ಪಡೆದ ಜನರು ಕೃಷಿ ಭೂಮಿಯನ್ನು ಸಹ ಉಳದೇ ಬಿಟ್ಟು  ಇದರಿಂದ ತಮಗಾದ ನಷ್ಟವನ್ನು ಸರಕಾರದಿಂದ ವಸೂಲಿ ಮಾಡುತ್ತಿದ್ದರು. ಬೆಳೆ ಬೆಳೆಯದೇ ಪಡೆಯುವ ಈ ಮೋಸದ ಕ್ರಮವನ್ನು ಮಣ್ಣಿನ ಬ್ಯಾಂಕುಗಳಿಂದ ಪಡೆಯುವ ಲಾಭವೆಂದು ಗೇಲಿ ಮಾಡುತ್ತಿದ್ದರು.

ಹಾವರ್‌ನ ಆಡಳಿತಾವಧಿಯಲ್ಲಿ ಭಾರತವು ಆತಂಕ ಪಡುವ ಕಾರಣಗಳು ತಲೆದೋರಿದವು. ವಿದೇಶಾಂಗ ಕಾರ್ಯದರ್ಶಿ ಜಾನ್ ಫಾಸ್ಟರ್ ಡಲೆಸ್ ಎಂಬ ವ್ಯಕ್ತಿ ತನ್ನ ನೀತಿ-ಧೋರಣೆಗಳಿಂದ ಭಾರತ-ಪಾಕಿಸ್ತಾನ ದೇಶಗಳ ನಡುವೆ ತಾರತಮ್ಯ ಹುಟ್ಟುವಂತೆ ನೋಡಿಕೊಂಡನು. ಹೊಸದಾಗಿ ಹುಟ್ಟಿಕೊಂಡಿದ್ದ ಎರಡು ದೇಶಗಳ ನಡುವೆ ಏರ್ಪಡಬಹುದಾಗಿದ್ದ ಸೌಹಾರ್ದತೆಯನ್ನು ಕೆಡಿಸಿದ ಮೊದಲ ವ್ಯಕ್ತಿ ಈತನೇ ಎಂದು ಆರೋಪಿಸುತ್ತಾರೆ. ಸಂವಿಧಾನದ ೧೪ನೆಯ ತಿದ್ದುಪಡಿಯ ಮೂಲಕ ಜಾರಿಗೊಳಿಸಿದ್ದ ಕರಿಯರು ಹಾಗೂ ಬಿಳಿಯರು ಶಿಕ್ಷಣದಲ್ಲಿ ಸಮಾನ ಸೌಲಭ್ಯ ಪಡೆಯುವ ಬಗೆಗೆ ನೀಡಿದ ತೀರ್ಪಿನ ಜಾರಿಯ ಬಗೆಗೆ ಮತ್ತೊಮ್ಮೆ ಅಸಮಾಧಾನ ಹುಟ್ಟಿಕೊಂಡಿತು. ನ್ಯಾಯಾಲಯವು ನಿರ್ದೇಶಿಸಿದ ಯಾವ ನಿಯಮಗಳು ಜಾರಿಗೊಂಡಿರಲಿಲ್ಲ. ಇಂಥ ಬಿಕ್ಕಟ್ಟಿನ ಬಗೆಗೆ ನ್ಯಾಯಾಲಯ ಸರಕಾರಕ್ಕೆ ತಾಕೀತು ಮಾಡಿ ತನ್ನ ಆಜ್ಞೆಗಳು ವ್ಯವಸ್ಥಿತವಾಗಿ ಜಾರಿಗೊಳ್ಳುವಂತೆ ಕಟ್ಟಪ್ಪಣೆ ನೀಡಿ ಯಶಸ್ವಿಯಾಯಿತು. ಕಾರ್ಮಿಕರಿಗೆ ವಿಶೇಷ ನೆರವು, ಕೂಲಿಕಾರ್ಮಿಕರಿಗೆ ದಿನದ ವೇತನದ ನಿಶ್ಚಿತತೆ ಹಾಗೂ ಸೆಂಟ್ ಲಾರೆನ್ಸ್ ನದಿಯ ಮೂಲಕ ಸಮುದ್ರಯಾನಕ್ಕೆ ಅನುಕೂಲವಾಗುವ ಕಾಲುವೆಯನ್ನು ನಿರ್ಮಿಸಿದ್ದು ಈತನ ಆಡಳಿತ ಅವಧಿಯಲ್ಲಿ ಮಾಡಿದ ಪ್ರಮುಖ ಸಾಧನೆಗಳಾಗಿವೆ.

೧೯೫೬ರ ಚುನಾವಣೆಯಲ್ಲಿ ಐಸೆನ್ ಹಾವರ್ ಮತ್ತೆ ಗೆದ್ದು ಬಂದನು. ಆದರೆ ಕಾಂಗ್ರೆಸ್ ಹಾಗೂ ಸೆನೆಟ್‌ಗಳಲ್ಲಿ ರಿಪಬ್ಲಿಕನ್‌ರು ಮತ್ತೆ ಅಲ್ಪಮತವನ್ನು ಹೊಂದಿದ್ದರು. ಇದು ಕಠಿಣ ನಿರ್ಧಾರ ತೆಗೆದುಕೊಳ್ಳುವಲ್ಲಿ ಬಹುದೊಡ್ಡ ಅಡಚರಣೆಗಳನ್ನು ಸೃಷ್ಟಿಸಿತು. ಎರಡನೆಯ ಅವಧಿಯಲ್ಲಿ ಹಾವರ್‌ನ ಆಡಳಿತ ಹೆಚ್ಚಿನ ಟೀಕೆಗೆ ಒಳಗಾಯಿತು. ಭ್ರಷ್ಟಾಚಾರ ಇನ್ನಿಲ್ಲದಂತೆ ಬೆಳೆಯಿತು. ಕೃಷಿಕರು ಸರಕಾರದ ತಪ್ಪು ನೀತಿಗಳಿಂದ ಸೋಮಾರಿಗಳಿಗೆ ಹೆಚ್ಚಿನ ಲಾಭ ಪಡೆದರು. ಕಾರ್ಮಿಕರನ್ನು ಹತೋಟಿಯಲ್ಲಿಡಲು ಲ್ಯಾಂಡ್ರ್‌ಮ್‌ಗ್ರಿಫಿತ್ ಕಾಯ್ದೆ ಜಾರಿಗೆ ತಂದರು. ೧೯೫೨ರಲ್ಲಿ ಸೂಯೆಜ್ ಕಾಲುವೆ ಸಂಬಂಧವಾಗಿ ಹುಟ್ಟಿಕೊಂಡ ರಾಜಕೀಯ ಅಮೆರಿಕಾಕ್ಕೆ ವರದಾನವಾಯಿತು. ೧೯೫೮ರಲ್ಲಿ ಅಲಾಸ್ಕ, ೧೯೫೯ರಲ್ಲಿ ಹವಾಯಿ ಅಮೆರಿಕಾ ಸಂಸ್ಥಾನಗಳಿಗೆ ಸೇರಿದವು. ಅಮೆರಿಕಾದಲ್ಲಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾಭ್ಯಾಸ ಕೈಗೊಳ್ಳಲು ವಿಶೇಷ ಪ್ರೋ ಸಹಾಯಧನ ನೀಡಲಾಯಿತು. ಇದಕ್ಕಾಗಿ ‘‘ರಾಷ್ಟ್ರೀಯ ಶಿಕ್ಷಣ ಕಾಯ್ದೆ’’ಯನ್ನು ಜಾರಿಗೆ ತಂದರು.

ಅಮೆರಿಕಾ ದೇಶವು ಕೃಷಿ, ಕೈಗಾರಿಕೆ ಹಾಗೂ ವೈಜ್ಞಾನಿಕ ಕ್ಷೇತ್ರಗಳಲ್ಲಿ ಅಗಾಧವಾದ ಹಾಗೂ ನಿರೀಕ್ಷಿಸಲಾರದ ಯಶಸ್ಸು ಸಾಧಿಸಿದ್ದರೂ ಮಾನವ ಹಕ್ಕುಗಳ ಜಾರಿಯಲ್ಲಿ ತಾರತಮ್ಯ ಮಾಡುತ್ತಿತ್ತು. ಆಫ್ರಿಕದಿಂದ ಬಂದ ಕರಿಯರನ್ನು ಅಮಾನವೀಯವಾಗಿ ನಡೆಸಿಕೊಳ್ಳುವ ಹಾಗೂ ಅವರನ್ನು ಶಿಕ್ಷಿಸುವ ಕಾರ್ಯಗಳು ಯಾವುದೇ ರೀತಿಯ ಅಡೆತಡೆಗಳು ಇಲ್ಲದೇ ನಡೆಯುತ್ತಿದ್ದವು. ದಕ್ಷಿಣದ ರಾಜ್ಯಗಳಲ್ಲಂತೂ ಇದು ಹೆಚ್ಚಿನ ಕ್ರೂರತೆಯನ್ನು ಪಡೆದಿತ್ತು. ಇಂಥ ಹೇಯ ಕೃತ್ಯವನ್ನು ನಿಲ್ಲಿಸಲು ಕಾನೂನುಗಳಲ್ಲಿ ಬದಲಾವಣೆ ತರಲು ೧೯೫೭ರಲ್ಲಿ ಐಸೆನ್ ಹಾವರ್ ಯಶಸ್ವಿಯಾದನು. ಸಂವಿಧಾನದಲ್ಲಿ ಇದರ ಬಗೆಗೆ ತಿದ್ದುಪಡಿಗಳನ್ನು ಸೇರಿಸಿ ೧೯೬೦ರಲ್ಲಿ ಈ ಕಾಯ್ದೆ ಜಾರಿಗೆ ಬರುವಂತೆ ಮಾಡಲಾಯಿತು. ಕರಿಯರ ಬಗೆಗೆ ತಾರತಮ್ಯ ತಾಳುವ ವ್ಯಕ್ತಿ ಹಾಗೂ ಸಂಸ್ಥೆಗಳನ್ನು ಶಿಕ್ಷಿಸುವ ಅಧಿಕಾರವನ್ನು ನ್ಯಾಯಾಂಗಕ್ಕೆ ನೀಡಲಾಯಿತು. ತಿದ್ದುಪಡಿ ಮೂಲಕ ಕಾನೂನುಗಳನ್ನು ಮತ್ತಷ್ಟು ಗಟ್ಟಿಗೊಳಿಸಲಾಯಿತು. ಇಂಥ ಕಾನೂನುಗಳು ಜಾರಿಗೆ ಬರಲು ಮುಖ್ಯ ಕಾರಣ ಮಾಂಟೋಮರಿ ಬಸ್ ಪ್ರಕರಣ. ಕರಿಯ ಮಹಿಳೆಯೊಬ್ಬಳಿಗೆ ಬಸ್ಸಿನಲ್ಲಿ ಸ್ಥಾನ ಕೊಡುವುದರ ಬಗೆಗೆ ಎದ್ದ ವಿವಾದ ಇಡೀ ರಾಷ್ಟ್ರವನ್ನು ವ್ಯಾಪಿಸಿತು. ಜಾಗತಿಕ ಮಟ್ಟದಲ್ಲಿಯೂ ಹೆಚ್ಚಿನ ವಿಮರ್ಶೆ ಮತ್ತು ಟೀಕೆಗೆ ಒಳಗಾದ ಈ ಘಟನೆ ಅಮೆರಿಕಾದ ಇತಿಹಾಸದಲ್ಲಿ ಹೊಸ ಸಂಚಲನವನ್ನುಂಟುಮಾಡಿತು. ಮಾರ್ಟಿನ್ ಲೂಥರ್ ಕಿಂಗ್‌ನಂಥ ಕರಿಯರ ನಾಯಕನ ನೇತೃತ್ವದಲ್ಲಿ ಅಹಿಂಸಾತ್ಮಕ ರೂಪದ ರಾಷ್ಟ್ರೀಯ ಚಳವಳಿ ಪ್ರಜ್ಞಾವಂತರಿಂದ ಪ್ರಾರಂಭವಾದ ಇಂಥ ತಾರತಮ್ಯ ನೀತಿಯ ವಿರುದ್ಧ ತೀವ್ರವಾದ ಹೋರಾಟ ಕೆಂಪು ಅಮೆರಿಕಾನ್ ಪ್ರಜೆಗಳನ್ನು ಸಹ ಎಚ್ಚರಗೊಳಿಸಿತು. ಅಲ್ಲದೇ ಇದರಲ್ಲಿ ಕರಿಯರು ಮೊಟ್ಟ ಮೊದಲ ನಿಶ್ಚಿತ ಜಯ ಸಾಧಿಸಿದ ಗೌರವಕ್ಕೆ ಪಾತ್ರರಾದರು. ಬಿಳಿಯರ ಆಕ್ರೋಶಕ್ಕೆ ಒಳಗಾದ ಲೂಥರ್ ಕಿಂಗ್‌ನು ‘‘ಅನ್ಯಾಯದ ಕಾನೂನುಗಳನ್ನು ತಿರಸ್ಕರಿಸುವುದು ಅಪರಾಧವಲ್ಲ. ಜನರ ಇಚ್ಛೆಗೆ ವಿರುದ್ಧವಾದ ಕಾನೂನು-ನಿಯಮಗಳನ್ನು ಒತ್ತಾಯದ ಮೇಲೆ ಹೇರುವುದು ಅಪರಾಧ’’ ಎಂದು ವ್ಯಾಖ್ಯಾನಿಸಿದನು. ಇಂಥ ಹೇಯಕೃತ್ಯವನ್ನು ವಿರೋಧಿಸಿದ ಕೆಲವು ಪ್ರಗತಿಪರರು  ಕೆಲವು ಪ್ರಜ್ಞಾವಂತ ಬಿಳಿಯರು ಸಹ ಕರಿಯರ ಬೇಡಿಕೆಗಳನ್ನು ಈಡೇರಿಸುವ ಒತ್ತಾಯಕ್ಕಾಗಿ ಕೆಲವು ಸಂಘಟನೆಗಳನ್ನು ಸಂಘಟಿಸಿ ಹೋರಾಟಕ್ಕಿಳಿದರು.