ಜಾಗತಿಕ ವ್ಯಾಪಾರ ಸಂಘಟನೆ (ಡಬ್ಲ್ಯು.ಟಿ.ಓ.)

೧೯೯೫ ಜನವರಿ ೧ರಂದು ವಿಶ್ವವ್ಯಾಪಾರ ಸಂಘಟನೆ ಅಸ್ತಿತ್ವಕ್ಕೆ ಬಂದಿತು. ಇದು ವಿಶ್ವಬ್ಯಾಂಕ್‌ನ ಮಾರ್ಗದರ್ಶನದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಯೊಂದು ದೇಶಗಳ ಕೊಡಕೊಳ್ಳುವಿಕೆಗಳು ಮುಕ್ತವಾಗಿ ನೆರವೇರಬೇಕೆಂಬ ಆಶಯದೊಂದಿಗೆ ಕಾರ್ಯಪ್ರವೃತ್ತವಾಗಿದೆ. ಇಂದಿನ ಪ್ರಪಂಚ ವ್ಯಾಪಾರದ ಜಗತ್ತಾಗಿದೆ. ಆದ್ದರಿಂದ ಜಗತ್ತಿನಲ್ಲಿರುವ ಪ್ರತಿ ದೇಶವು ಮುಕ್ತ ವ್ಯಾಪಾರವನ್ನು ಅನುಸರಿಸಿ ಆರ್ಥಿಕ ಅಭಿವೃದ್ದಿಯನ್ನು ತೀವ್ರವಾಗಿ ಸಾಧಿಸಬೇಕೆಂಬ ಮಹದಿಚ್ಛೆಯನ್ನು ಹೊಂದಿರುವುದು ಸಕಾರಣವು ಹಾಗೂ ಅವಶ್ಯಕವಾಗಿದೆ. ೧೫೩ ದೇಶಗಳು ಇದರ ಸದಸ್ಯ ರಾಷ್ಟ್ರಗಳು. ಇದರ ನಿರ್ವಹಣೆಯ ಪ್ರಧಾನ ಕಚೇರಿ ಜಿನೀವಾ(ಸ್ವಿಟ್ಜರ್‌ಲ್ಯಾಂಡ್)ದಲ್ಲಿದೆ. ವಿಶ್ವದಲ್ಲಿ ನಡೆಯುವ ವ್ಯಾಪಾರಗಳಲ್ಲಿ ಸಮನ್ವಯತೆ ಸಾಧಿಸಿ ಆರ್ಥಿಕ ಅಭಿವೃದ್ದಿ ಹೆಚ್ಚಿಸುವುದು ಹಾಗೂ ಬಡದೇಶಗಳಿಗೆ ಪೂರಕವಾಗುವಂತೆ ವ್ಯಾಪಾರ ಅಭಿವೃದ್ದಿ ಹಾಗೂ ತಾಂತ್ರಿಕ ಕೌಶಲ್ಯವನ್ನು ಒದಗಿಸುವುದು ಪ್ರತಿಯೊಂದು ರಾಷ್ಟ್ರದ ಧ್ಯೇಯೋದ್ದೇಶವಾಗಿರಬೇಕೆಂಬುದು ಮುಖ್ಯವಾದದ್ದು. ಆದರೆ ಇಂಥ ಮಹತ್ವದ ಉದ್ದೇಶ ಹೊಂದಿರುವ ಈ ಜಾಗತಿಕ ಸಂಘಟನೆಯನ್ನು ತೆರೆಮರೆಯಲ್ಲಿ ಅಮೆರಿಕಾ ಹಾಗೂ ಯುರೋಪಿನ ರಾಷ್ಟ್ರಗಳು ನಿಯಂತ್ರಿಸುತ್ತಿರುವುದು ಅನೇಕ ಗೊಂದಲಗಳಿಗೆ ಕಾರಣವಾಗಿವೆ.

ಡಬ್ಲ್ಯು.ಟಿ.ಓ ವಿಶ್ವದ ವ್ಯಾಪಾರ ವಹಿವಾಟಿನಲ್ಲಿ ಮುಕ್ತತೆಯನ್ನು ಸಾಧಿಸಲು ೧೯೪೦ರ ದಶಕದಿಂದಲೂ ಹಲವು ಸುತ್ತಿನ ಮಾತುಕತೆಗಳ ಶೃಂಗಸಭೆಗಳನ್ನು ಜಾಗತಿಕ ಬ್ಯಾಂಕ್ ಮೂಲಕ ನಿರ್ವಹಿಸಲಾಗುತ್ತಿದೆ. ಅವುಗಳಲ್ಲಿ ಉರುಗ್ವೆ, ದೋಹಾ, ಸಿಯಾಟಲ್, ದೋಹಾ ಮತ್ತು ಜಿನೀವಾ ಎಂಬ ಸ್ಥಳಗಳಲ್ಲಿ ಜಾಗತಿಕ ವ್ಯಾಪಾರ ವಹಿವಾಟಿನ ಕುರಿತ ಚರ್ಚೆಗಳು ಮುಖ್ಯವಾಗಿ ನಡೆದಿವೆ. ದೋಹಾ ಸುತ್ತಿನಲ್ಲಿ ಕೈಗೊಂಡ ನಿರ್ಣಯಗಳನ್ನು ೨೦೦೧ರಲ್ಲಿ ಜಾರಿಗೊಳಿಸಲು ಇದರ ಪೂರ್ವಭಾವಿ ಪ್ರಯೋಗವಾಗಿ ಜಿನೀವಾದಲ್ಲಿ ಇನ್ನೊಂದು ಸುತ್ತಿನ ಮಾತುಕತೆಯ ಮೂಲಕ ಪ್ರಾರಂಭಿಸಲಾಯಿತು. ಆದರೆ ಬ್ರೆಜಿಲ್, ಭಾರತ ಹಾಗೂ ದಕ್ಷಿಣ ಆಫ್ರಿಕಾ ದೇಶಗಳು ದೋಹಾದಲ್ಲಿ ನಡೆದ ಮಾತುಕತೆಯ ಪರಿಣಾಮಗಳನ್ನು ಸುಧಾರಿಸುವ ಮೊದಲು, ಜಿನೀವಾ ಮಾತುಕತೆಗಳನ್ನು ಒಪ್ಪಲಾಗದು ಎಂದು ಹಟ ಹಿಡಿದು ಕುಳಿತು ವಿಫಲವಾಗುವಂತೆ ಪ್ರತಿಭಟಿಸಿದವು. ಆದ್ದರಿಂದ ಸಂಧಾನ ಮಾತುಕತೆಗಳಿಗೆ ಡಬ್ಲು.ಟಿ.ಓ.ನ ಮಹಾನಿರ್ದೇಶಕ ಪಸ್ಕಲ್ ಲ್ಯಾಮಿ ಮತ್ತೆ ಪ್ರಯತ್ನಿಸಲಾರಂಭಿಸಿದ್ದಾರೆ. ಕಳೆದ ವರ್ಷ ಜಿನೀವಾದಲ್ಲಿ ಮುರಿದು ಬಿದ್ದು ಮಾತುಕತೆಗಳಿಗೆ ಪರಿಹಾರಾತ್ಮಕ ಉಪಾಯಗಳನ್ನು ಹುಡುಕಲು ಡಬ್ಲ್ಯು.ಟಿ.ಓ. ಮತ್ತೆ ಪ್ರಯತ್ನಿಸುತ್ತದೆ. ಇದನ್ನು ಅಭಿವೃದ್ದಿಶೀಲ ರಾಷ್ಟ್ರಗಳ ಒತ್ತಾಯಕ್ಕೆ ಮಣಿದು ಭಾರತದ ದೆಹಲಿಯಲ್ಲಿ ಮುರಿದು ಬಿದ್ದ ಮಾತುಕತೆಗೆ ಈಗ ಚಾಲನೆ ಸಿಕ್ಕಂತಾಗಿದೆ. ಇದರಲ್ಲಿ ಸುಮಾರು ೪೦ ದೇಶಗಳು ಭಾಗವಹಿಸಲು ಸಮ್ಮತಿ ಸೂಚಿಸಿವೆ. ಇದು ಭಾರತಕ್ಕೆ ಸಿಕ್ಕ ಪ್ರತಿಫಲವೆಂದು ಅಂತಾರಾಷ್ಟ್ರೀಯ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿ ಶೇಕಡಾ ೬೦ರಷ್ಟು ವಹಿವಾಟಿನ ಪಾಲನ್ನು ಭಾರತ, ಚೀನ, ಬ್ರೆಜಿಲ್, ದಕ್ಷಿಣ ಆಫ್ರಿಕಾ ಹಾಗೂ ಆಸಿಯನ್ ದೇಶಗಳು ಒಳಗೊಂಡಿವೆ. ಆದ್ದರಿಂದ  ಇವುಗಳ ಪ್ರತಿಭಟನೆಗೆ ಅಮೆರಿಕಾ ಮತ್ತು ಯುರೋಪಿನ ರಾಷ್ಟ್ರಗಳು ಬಗ್ಗಲೇಬೇಕಾಗಿದೆ. ತನ್ನ ರೈತರಿಗೆ ಅಗಾಧ ಪ್ರಮಾಣದಲ್ಲಿ ಸಬ್ಸಿಡಿ ನೀಡುವ ಹಾಗೂ ಅದೇ ಕಾಲಕ್ಕೆ ಬೇರೆ ದೇಶಗಳು ಅಮದು ಸುಂಕವನ್ನು ಕಡಿಮೆ ಮಾಡಲು ಒತ್ತಡ ಹೇರುತ್ತಿರುವ ಅಮೆರಿಕಾದ ಸ್ವಾರ್ಥಹಿತ ಧೋರಣೆಗಳು ದೋಹಾ ಹಾಗೂ ಜಿನೀವಾ ಮಾತುಕತೆಗಳು ಮುರಿದು ಬೀಳಲು ಕಾರಣವಾಗಿತ್ತು. ಎಲ್ಲ ದೇಶಗಳ ರೈತರಿಗೂ ಹೆಚ್ಚಿನ ಲಾಭ ಸಿಗುವಂತೆ ವ್ಯಾಪಾರ ವಹಿವಾಟಿನ ಪದ್ಧತಿಗಳನ್ನು ಬದಲಾಯಿಸಬೇಕೆಂಬುದು ಭಾರತದ ಪ್ರಬಲ ನಿಲುವಾಗಿದೆ. ಇದಕ್ಕೆ ಜಗತ್ತಿನ ೧೧೦ ದೇಶಗಳು ಸಹಮತ ವ್ಯಕ್ತ ಪಡಿಸಿವೆ. ಶ್ರೀಮಂತ ದೇಶಗಳಿಗೆ ಮಾತ್ರ ವ್ಯಾಪಾರದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟರೆ ಬಡ ದೇಶಗಳ ಕೃಷಿ ಹಾಗೂ ಕೈಗಾರಿಕಾ ಉತ್ಪನ್ನಗಳು ವಿಕ್ರಯವಾಗದೇ ಭಾರೀ ನಷ್ಟ ಅನುಭವಿಸಬೇಕಾಗುತ್ತದೆ ಎಂಬುದು ಭಾರತ, ಬ್ರೆಜಿಲ್, ಚೀನ ಹಾಗೂ ದಕ್ಷಿಣ ಅಫ್ರಿಕಾ ದೇಶಗಳ ಬಿಗಿ ನಿಲುವಾಗಿವೆ.

ಜಿ-೨೦ ದೇಶಗಳು(ಭಾರತ, ಬ್ರೆಜಿಲ್, ಚೀನ ಹಾಗೂ ಆಸಿಯಾನ್ ದೇಶಗಳು) ಕೃಷಿ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಶೇ.೫೪ರಷ್ಟು ಕಡಿತಗೊಳಿಸಲು ಮುಂದಾದರೆ ಅಮೆರಿಕಾವು ಶೇಕಡ ೬೦ರಷ್ಟು ಅಮದು ಸುಂಕ ಕಡಿತಗೊಳಿಸಲು ಬಯಸಿದೆ. ಸದ್ಯ ಎಲ್ಲಕ್ಕಿಂತ ಹೆಚ್ಚಿನ ವಿವಾದಕ್ಕೆ ಒಳಗಾದ ವಿಚಾರವೆಂದರೆ ಕೃಷಿ ಮೇಲಿನ ಸಬ್ಸಿಡಿ. ಜಗತ್ತಿನ ೨೧ ಶ್ರೀಮಂತ ರಾಷ್ಟ್ರಗಳು ತಮ್ಮ ರೈತರಿಗೆ ಒಟ್ಟಾರೆ ೨೫೦ ಶತಕೋಟಿ ಡಾಲರ್ ಸಬ್ಸಿಡಿಯನ್ನು ನೀಡಿದರೆ ಉಳಿದ ಎಲ್ಲ ಬಡರಾಷ್ಟ್ರಗಳು(೧೩೨) ಕೇವಲ ೩೦೦ ಶತಕೋಟಿ ಡಾಲರ್ ಮಾತ್ರ ಸಬ್ಸಿಡಿ ನೀಡುವ ಪರವಾನಿಗೆಯನ್ನೂ ಹೊಂದಿವೆ. ಅಲ್ಲದೇ ಸಣ್ಣ ಕೈಗಾರಿಕೆ ಹಾಗೂ ಅಟೋ ಮೊಬೈಲ್ ವಲಯದಲ್ಲಿ ಹೆಚ್ಚಿನ ಅವಕಾಶಗಳನ್ನು ಹೊಂದಿರುವ ಭಾರತವು ಇವುಗಳ ಮೇಲಿನ ಆಮದು ಸುಂಕವನ್ನು ಶೇ.೧೫ಕ್ಕೆ ಸೀಮಿತಗೊಳಿಸಲು ನಿರ್ಧರಿಸಿದೆ. ಉನ್ನತ ಶಿಕ್ಷಣ ಕ್ಷೇತ್ರ, ಆಡಳಿತ ನಿರ್ವಹಣೆ ಹಾಗೂ ಸೇವಾರಂಗದಲ್ಲಿ ಭಾರತವು ಈಗಾಗಲೇ ಹೊಂದಿದ ನಿರ್ಬಂಧವನ್ನು ಸಡಿಲಿಸುವಂತೆ ಸಹ ಡಬ್ಲ್ಯುಟಿ.ಓ.ವು ಆಗ್ರಹಪಡಿಸಿದೆ. ಇಂಥ ಒತ್ತಡಗಳನ್ನು ಸಹಿಸಿಕೊಂಡ ಅಭಿವೃದ್ದಿಶೀಲ ರಾಷ್ಟ್ರಗಳು ಒಟ್ಟಿನಲ್ಲಿ ಮತ್ತೆ ಎಲ್ಲ ದೇಶಗಳೊಂದಿಗೆ ಮುರಿದು ಬಿದ್ದಿದ್ದ ಮಾತುಕತೆಗಳಿಗೆ ಚಾಲನೆ ನೀಡಿರುವುದು ಬಹಳ ಮಹತ್ವದ ವಿಷಯ. ಎಲ್ಲ ಅಡೆತಡೆಗಳನ್ನು ಆದಷ್ಟು ಶೀಘ್ರವಾಗಿ ಪರಿಹರಿಸಲಾಗುವುದು ಎಂದು ಡಬ್ಲುಟಿ ನಿರ್ದೇಶಕ ಪಸ್ಕಲ್ ಲ್ಯಾಮಿ ತುಂಬ ಆಶಾದಾಯಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಏಷ್ಯಾದ ರಾಜಕೀಯ ಕುರಿತಂತೆ ಅಮೆರಿಕಾ ಭಾರೀ ಪ್ರಮಾಣದಲ್ಲಿ ತನ್ನ ನಿಲುವನ್ನು ಬದಲಾಯಿಸಿಕೊಳ್ಳುತ್ತಿದೆ. ಈವರೆಗೂ ನೆಚ್ಚಿನ ರಾಷ್ಟ್ರವಾಗಿದ್ದ ಪಾಕಿಸ್ತಾನವು ತನ್ನ ಆಂತರಿಕ ಆಡಳಿತದಲ್ಲಿ ವೈಫಲ್ಯವಾಗಿರುವ ಹಿನ್ನೆಲೆಯಲ್ಲಿ ಹಾಗೂ ಜಾಗತಿಕ ಭಯೋತ್ಪಾದಕರ ಮೂಲ ತಾಣವಾಗಿ ಪಾಕಿಸ್ತಾನದ ಪ್ರದೇಶವು ಮಾರ್ಪಟಾಗಿರುವುದು ಅಮೆರಿಕಾಕ್ಕೆ ಹೆಚ್ಚಿನ ಆಂತಕವನ್ನು ಉಂಟುಮಾಡಿದೆ. ಹಿಂದಿನಿಂದಲೂ ಅಮೆರಿಕಾ ದೇಶವು ರಷ್ಯಾದ ಅಪ್ತಮಿತ್ರ ಭಾರತವನ್ನು ಏಷ್ಯಾದ ರಾಜಕೀಯದಲ್ಲಿ ನಿಯಂತ್ರಿಸುವ ಸಲುವಾಗಿ ಪಾಕಿಸ್ತಾನಕ್ಕೆ ಶತಕೋಟಿ ಡಾಲರ್‌ಗಳ ನೆರವನ್ನು ಬೇಷರತ್ತಾಗಿ ನೀಡುತ್ತ ಬಂದಿತ್ತು. ಆದರೆ ಆಂತರಿಕವಾಗಿ ಕುಸಿದುಹೋಗಿರುವ ಪಾಕಿಸ್ತಾನದ ಆಡಳಿತಗಳು ತೆರೆಮರೆಯಲ್ಲಿ ಅತಿ ಅಪಾಯಕಾರಿಯಾಗಿರುವ ಜೆಹಾದಿ (ಧರ್ಮಯುದ್ಧ) ಕಾರ್ಯಗಳಿಗೆ ಅಮೆರಿಕಾ ಕೊಟ್ಟಿರುವ ಹಣವನ್ನು ಗುಪ್ತವಾಗಿ ನೀಡಿದವು. ಇದರಿಂದ ಸಾಕಷ್ಟು ಪ್ರಮಾಣದಲ್ಲಿ ಹರಿದು ಬಂದಿದ್ದ ಪುಕ್ಕಟೆಯಾಗಿ ಸಿಕ್ಕಿದ್ದ ಡಾಲರ್ ಹಣದಿಂದ ಅಪಾಯಕಾರಿ ಶಸ್ತ್ರಾಸ್ತ್ರ ಹಾಗೂ ಮೂಲಭೂತವಾದವನ್ನು ಜಗತ್ತಿನ ತುಂಬ ಹರಡಲು ಜೆಹಾದಿ ಗುಂಪುಗಳು ಯಶಸ್ವಿಯಾದವು. ಇದು ನಂತರದ ದಿನಗಳಲ್ಲಿ ತಿರುವಾಗಿ ಅಮೆರಿಕಾಕ್ಕೆ ಈ ಸಂಘಟನೆಗಳು ಕಂಡುಕೊಂಡಿರುವ ಮೂಲಭೂತ ವಾದವೇ ಮುಳುವಾಯಿತು. ಕೆಲವು ಸ್ವಾರ್ಥ ಉದ್ದೇಶಗಳಿಗಾಗಿ ಒಂದು ದೇಶವನ್ನು ಇನ್ನೊಂದು ದೇಶದ ವಿರುದ್ಧ ಎತ್ತಿ ಕಟ್ಟುವ ಇಂಥ ಕುತಂತ್ರಗಳನ್ನು ಹೆಣೆದು ಜಾಲ ಬೀಸುವ ಅಮೆರಿಕಾದ ಆಡಳಿತಕ್ಕೆ ಈಗ ತನ್ನ ಬುಡಕ್ಕೆ ಬಂದು ಅಪ್ಪಳಿಸಿದ ಅನಾಹುತಗಳಿಂದ ಎಚ್ಚರವಾಗಿದೆ. ಇತ್ತೀಚಿನ ದಿನಗಳಲ್ಲಿ ಭಾರತದ ಅಲಿಪ್ತ ನೀತಿ ಹಾಗೂ ಸಹಾನುಭೂತಿ ಗುಣವನ್ನು ಅಮೆರಿಕಾ ಮೆಚ್ಚಿ ಹಸ್ತಲಾಘವ ಮಾಡಿದೆ. ಅಂತಾರಾಷ್ಟ್ರೀಯ ಅಣ್ವಸ್ತ್ರ ನಿಯಂತ್ರಣ ಆಯೋಗದ ಕಠಿಣ ನಿಯಮಗಳನ್ನು ಏಷ್ಯದ ಬೃಹತ್ ರಾಷ್ಟ್ರಕ್ಕಾಗಿ ಅನುಕೂಲ ಮಾಡಿ ಕೊಡಲು ಅಮೆರಿಕಾವು ಯಶಸ್ವಿಯಾಗಿದೆ. ಒತ್ತಾಯದ ಮೂಲಕ ಅಂತಾರಾಷ್ಟ್ರೀಯ ಅಣುಪ್ರಸರಣ ನಿಯಮಗಳನ್ನೂ ಸಡಿಲಿಸುವಂತೆ ಮಾಡಿ ಭಾರತವನ್ನು ೧೨೩ ಒಪ್ಪಂದದಿಂದ ತನಗೆ ಅತೀ ಸಮೀಪ ಬರುವಂತೆ ಮಾಡಿತು. ಈವರೆಗೂ ಪಾಕಿಸ್ತಾನಕ್ಕೆ ನೀಡುತ್ತಿದ್ದ ಬೇಷರತ್ ಶತಕೋಟಿ ಡಾಲರ್‌ಗಳ ಸಹಾಯಧನವನ್ನು ಇತ್ತೀಚೆಗೆ ಕಠಿಣ ಷರತ್ತು ಹಾಗೂ ಕರಾರಿಗೆ ಒಳಗಾದರೆ ಮಾತ್ರ ನೆರವು ನೀಡುವ ತಾಕೀತಿನೊಂದಿಗೆ ಸಮ್ಮತಿಸಿದೆ. ಅಫ್ಘಾನಿಸ್ತಾನದ ತಾಲೀಬಾನ್ ಆಡಳಿತದಿಂದ ಆಗಿರುವ ಅನಾಹುತಗಳು ಮುಂದೆ ಯಾವ ಕಾಲಕ್ಕೂ ಉದ್ಭವಿಸದಂತೆ ಅಮೆರಿಕಾ ಸದ್ಯ ಅಪಘಾನಿಸ್ತಾನವನ್ನು ಪಾಶ್ಚಿಮಾತ್ಯ ಮಾದರಿಯಲ್ಲಿ ಆಧುನೀಕರಣಗೊಳಿಸುತ್ತಿದೆ. ಇದಕ್ಕೆ ಭಾರತದ ನೆರವನ್ನು ಸಹ ನಿರೀಕ್ಷಿಸಿ ಸಹಾಯ  ಮಾಡಲು ಒಪ್ಪಿಸಿದೆ. ಜಾಗತಿಕ ಭಯೋತ್ಪಾದನೆಯನ್ನು ತಡೆಗಟ್ಟಲು ಅಫ್ಘಾನ ಸಮಸ್ಯೆಗೆ ಎಲ್ಲ ದೇಶಗಳ ನೆರವಿನ ತೀವ್ರ ಅಗತ್ಯವಿದೆ ಎಂಬ ಹಿನ್ನೆಲೆಯಲ್ಲಿ ಹೇಳಿಕೆಗಳನ್ನು ನೀಡಿದೆ.

ತೀವ್ರಗತಿಯಲ್ಲಿ ಆಗುತ್ತಿರುವ ಬದಲಾವಣೆಗಳು ಜಾಗತಿಕ ಮಟ್ಟದಲ್ಲಿ ಇಂಥ ಕೆಲವು ಗೊಂದಲಗಳನ್ನು ಹುಟ್ಟುಹಾಕಿವೆ. ಅಲ್ಲದೇ ಅಮೆರಿಕಾವನ್ನು ಇಕ್ಕಟ್ಟಿಗೆ ಸಿಕ್ಕಿಸಿವೆ. ತನಗೆ ಸಂಬಂಧಿಸಿರದ ಅನೇಕ ಸಮಸ್ಯೆಗಳಲ್ಲಿ ಅಮೆರಿಕಾದ ಆಡಳಿತಗಳು ಅನವಶ್ಯಕ ಪ್ರವೇಶ ಪಡೆದು ನಷ್ಟವನ್ನು ಅನುಭವಿಸಿ ತಮ್ಮ ಮೇಲೆ ಕೆಟ್ಟ ಪರಿಣಾಮ ಬೀರುವಂತೆ ಮಾಡಿ ಕೊಳ್ಳುತ್ತಿರುವ ಕಾರಣಗಳಿಗೆ ಅಮೆರಿಕಾದ ಜನತೆ ರೋಸಿ ಹೋಗಿದ್ದಾರೆ. ಆದ್ದರಿಂದ ಇಂಥ ಮುಜುಗರದ ಸಂಗತಿಗಳಿಂದ ಪಾರಾಗಲು ಹಾಗೂ ತನ್ನ ಆಡಳಿತದ ಬಗೆಗೆ ಜನತೆಯ ವಿಶ್ವಾಸ ಪಡೆದುಕೊಳ್ಳುವ ಪ್ರಯತ್ನದಲ್ಲಿ ಬುಷ್ ಆಡಳಿತ ಸಂರಕ್ಷಣಾ ವಾದವನ್ನು ಹುಟ್ಟುಹಾಕಿತು. ಅಂದರೆ ತನ್ನ ಪ್ರಗತಿ ಹಿತಾಸಕ್ತಿಗಳಿಗೆ ಅನುಗುಣವಾಗಿ ಮಾತ್ರ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುವುದು ಮುಖ್ಯವಾದುದು ಎಂಬ ನೀತಿಯಡಿಯಲ್ಲಿ ಕಾರ್ಯ ನಿರ್ವಹಿಸಲಾರಂಭಿಸುವ ಉದ್ದೇಶವನ್ನು ಬುಷ್ ಆಡಳಿತ ಕೊನೆ ದಿನಗಳಲ್ಲಿ ಪ್ರತಿಪಾದಿಸಿತು. ಅಲ್ಲದೇ ಇದುವರೆಗೂ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಮೂಲಕ ಹೇರಳ ಪ್ರಮಾಣದಲ್ಲಿ ಹಿಂದುಳಿದ ದೇಶಗಳಿಗೆ ನೀಡುತ್ತಿದ್ದ ಹಣಕಾಸಿನ ಸಹಾಯದ ಬಗೆಗೆ ಮರು ಯೋಚಿಸಲಾರಂಭಿಸಿದೆ. ಇಂಥ ಕಾರ್ಯಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿ ತಾನೇ ವಿಶ್ವಬ್ಯಾಂಕ್‌ನಿಂದ ಹೆಚ್ಚಿನ ಸಾಲ ಪಡೆದು ಕುಸಿದು ಹೋಗಿರುವ ಆರ್ಥಿಕ ವ್ಯವಸ್ಥೆಯನ್ನು ಬಲಗೊಳಿಸಿಕೊಳ್ಳುವ ಏಕ ಮಾತ್ರ ಉದ್ದೇಶ ಅಮೆರಿಕಾಕ್ಕೆ ಸದ್ಯಕ್ಕಿದಂತಿದೆ. ಆದರೆ ಜಾಗತಿಕ ಬ್ಯಾಂಕಿನ ಪ್ರಮುಖ ಪಾಲುದಾರ ರಾಷ್ಟ್ರವಾದ  ಅಮೆರಿಕಾ ವಿಶ್ವಬ್ಯಾಂಕಿನಿಂದ ಹೆಚ್ಚಿನ ಹಣವನ್ನು ಸಾಲ ರೂಪದಲ್ಲಿ ಮರಳಿ ಪಡೆಯುವ ಪರಿಣಾಮದಿಂದ ಸಹಜವಾಗಿ ತೃತೀಯ ಜಗತ್ತಿನ ರಾಷ್ಟ್ರಗಳು ಈ ಹಿಂದೆ ಜಾಗತಿಕ ಬ್ಯಾಂಕಿನಿಂದ ಪಡೆಯುತ್ತಿದ್ದ ಅಪಾರ ಸಾಲಸೌಲಭ್ಯಗಳಿಂದ ವಂಚಿತವಾಗುತ್ತವೆ. ಆದರೆ ಅಮೆರಿಕಾದ ಆರ್ಥಿಕ ಅಭಿವೃದ್ದಿಯ ಪುನಶ್ಚೇತನಕ್ಕೆ ಅಲ್ಲಿನ ಆಡಳಿತಗಳು ಇಡುತ್ತಿರುವ ಈ ದಿಟ್ಟ ಹೆಜ್ಜೆಗಳು ಅದಕ್ಕೆ ಅನಿವಾರ್ಯವಾಗಿವೆ. ಹೀಗಾಗಿ ಸಾಲದ ಹಳಿಗಳ ಮೇಲೆ ಓಡಾಡುತ್ತಿರುವ ಹಿಂದುಳಿದ ರಾಷ್ಟ್ರಗಳ ಅಭಿವೃದ್ದಿಯ ರೈಲು ಅಪಘಾತಕ್ಕೀಡಾಗುವುದರಲ್ಲಿ ಸಂಶಯವಿಲ್ಲ. ಅಮೆರಿಕಾ ನಿಗದಿ ಮಾಡಿ ನೀಡುವ ಸಾಲದ ಮೇಲಿನ ಬಡ್ಡಿಯನ್ನು ಬೇರೆ ರಾಷ್ಟ್ರಗಳು ಅಷ್ಟೇ ಪ್ರಮಾಣದಲ್ಲಿ ಭರಿಸುವುದು ಕಷ್ಟಸಾಧ್ಯ.

ಬರಾಕ್ ಹುಸೇನ್ ಒಬಾಮ ಆಯ್ಕೆ

ಅಮೆರಿಕಾದಲ್ಲಿ ಮೊದಲಿನಿಂದಲೂ ರಿಪಬ್ಲಿಕನ್ ಹಾಗೂ ಡೆಮಾಕ್ರೆಟಿಕ್ ಎಂಬ ಎರಡು ಪಕ್ಷಗಳು ಕ್ರಮವಾಗಿ ಆನೆ ಹಾಗೂ ಕತ್ತೆಯನ್ನು ಪಕ್ಷದ ಚಿನ್ಹೆಯನ್ನಾಗಿ ಮಾಡಿಕೊಂಡಿವೆ. ರಿಪಬ್ಲಿಕನ್‌ರು ಯಾವಾಗಲೂ ಬಂಡವಾಳವಾದ ಹಾಗೂ ಸಾಮ್ರಾಜ್ಯಶಾಹಿ ಧೋರಣೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರೆ ಡೆಮಾಕ್ರಾಟಿಕ್‌ನ್‌ರು ಪ್ರಜಾಪ್ರಭುತ್ವ ಹಾಗೂ ಉದಾರವಾದದ ವಿಚಾರಗಳಿಗೆ ಹೆಚ್ಚಿನ ಮಹತ್ವ ನೀಡುತ್ತ ಬಂದಿದ್ದಾರೆ. ಚುನಾವಣೆಯಲ್ಲಿ ಆಯ್ಕೆಯಾದ ಅಧ್ಯಕ್ಷ ಅತ್ಯಂತ ಪ್ರಭಾವಿ ಹಾಗೂ ಆಡಳಿತ ಎಲ್ಲ ಅಧಿಕಾರಿಗಳನ್ನು ಪ್ರಶ್ನಾತೀತನಾಗಿ ಚಲಾಯಿಸುವ ಅಧಿಕಾರ ಹೊಂದಿರುತ್ತಾನೆ. ಅಧ್ಯಕ್ಷ ಹಾಗೂ ಆತನ ಕ್ಯಾಬಿನೆಟ್ ಸಂವಿಧಾನದ ಅನ್ವಯ ಆಡಳಿತ ನಿರ್ವಹಿಸುತ್ತಿದ್ದರೂ ಕಾಂಗ್ರೆಸ್ ಹಾಗೂ ಫೆಡರಲ್‌ಕೋರ್ಟ್(ಸುಪ್ರೀಂ ಕೋರ್ಟ್) ನೀಡುವ ತೀರ್ಪು ಹಾಗೂ ನೀತಿ ನಿಮಯಗಳು ಕಾಲಕಾಲಕ್ಕೆ ಆಡಳಿತದಲ್ಲಿ ಸಹಾಯಕ ಅಂಶಗಳಾಗಿ ನಿಲ್ಲುತ್ತವೆ. ಅಲ್ಲದೇ ಅಂಥ ವಿಷಯದಲ್ಲಿ ನೀಡುವ ಮಾರ್ಗದರ್ಶನಗಳು ಮುಂದಿನ ದಿನಗಳಲ್ಲಿ ಕಾನೂನು ನೀತಿಗಳಾಗಿ ಅಮೆರಿಕಾದಲ್ಲಿ ಜಾರಿಗೆ ಬರುತ್ತವೆ.

ಅಮೆರಿಕಾದಲ್ಲಿ ಚುನಾವಣೆಗೆ ಎಲ್ಲಿಲ್ಲದ ಮಹತ್ವ ಇದೆ. ನೇರವಾಗಿ ಜನರೇ ಅಧ್ಯಕ್ಷನನ್ನು ಆಯ್ಕೆ ಮಾಡಿದರೂ ಮೂರು ಹಂತಗಳಲ್ಲಿ ಅಭ್ಯರ್ಥಿಯು ಸ್ಪರ್ಧಿಸಿ ಚುನಾಯಿತನಾಗಬೇಕಾಗುತ್ತದೆ. ಮೊದಲ ಹಂತದಲ್ಲಿ ಪಕ್ಷದ ಅಭ್ಯರ್ಥಿ ನೇರವಾಗಿ ಜನರ ಬಳಿ ತನ್ನ ಅಭ್ಯರ್ಥಿತನವನ್ನು ಸಾಬೀತುಪಡಿಸಲು ಯಶಸ್ವಿಯಾಗಬೇಕು. ಎರಡನೆಯ ಹಂತದಲ್ಲಿ ರಾಜ್ಯ ಸಮಾವೇಶದಲ್ಲಿ ಆಯ್ಕೆಯಾದ ಅಭ್ಯರ್ಥಿಯ ಉಮೇದುವಾರಿಕೆಯನ್ನು ಎಲ್ಲ ರಾಜ್ಯಗಳಲ್ಲಿರುವ ಆಯಾ ಪಕ್ಷದ ಕೇಂದ್ರಗಳಲ್ಲಿರುವ ಸದಸ್ಯರು ಒಮ್ಮತದ ಸೂಚನೆಯನ್ನು ನೀಡಿ ಮುಂದಿನ ಕ್ರಮಕ್ಕಾಗಿ ಅಣಿಗೊಳಿಸುತ್ತಾರೆ. ಮೂರನೆಯ ಹಂತದಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸಭೆಯ ಸದಸ್ಯರು ಅಂತಿಮ ಅಭ್ಯರ್ಥಿಯನ್ನು ನಿರ್ಧರಿಸುತ್ತಾರೆ. ಇಲ್ಲಿ ಆಯ್ಕೆಯಾಗುವ ಅಭ್ಯರ್ಥಿಯು ಕಾಂಗ್ರೆಸ್‌ನಲ್ಲಿನ (ಕೆಳಮನೆ ಹಾಗೂ ಸೆನೆಟ್ ಸದಸ್ಯರು ಸೇರಿ) ಸದಸ್ಯರು ನೀಡುವ ಮತದಾನದಿಂದ ಅಧ್ಯಕ್ಷನಾಗಿ ಆಯ್ಕೆ ಆಗುತ್ತಾನೆ. ೨೦೦೮ರಲ್ಲಿ ನಡೆದ ಮಹಾಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದಿಂದ ಸರ್ವಾನುಮತ ಅಭ್ಯರ್ಥಿಯಾಗಿ  ಬರಾಕ್ ಹುಸೇನ್ ಒಬಾಮಾ ಅಧ್ಯಕ್ಷಗಾದಿಗಾಗಿ ಚುನಾವಣೆಗೆ ನಿಂತರೆ, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಜಾನ್ ಮೇಕೇನ್ ಬಿರುಸಿನಿಂದ ಕಣಕ್ಕಿಳಿದನು. ವಿಯೆಟ್ನಾಂ ಯುದ್ಧದಲ್ಲಿ ಜನರಲ್ ಆಗಿ ಅನುಭವ ಪಡೆದ ಮೇಕೇನ್ ಸಹ ಅಕ್ರಮಣ ನೀತಿಯ ಪ್ರತಿಪಾದಕನಾಗಿದ್ದನು. ಆದರೆ ಡೆಮಾಕ್ರಟಿಕ್ ಪಕ್ಷದ ಒಬಾಮ ಜನತೆಗೆ ತಾಳ್ಮೆಯ ಹಾಗೂ ಶಾಂತಚಿತ್ತ ವ್ಯಕ್ತಿಯಾಗಿ ಪ್ರತಿಬಿಂಬಿತನಾಗಿದ್ದ. ಇವುಗಳೆಲ್ಲಕ್ಕಿಂತ ಮುಖ್ಯವಾದ ಸಂಗತಿ ಎಂದರೆ ಅಮೆರಿಕಾದ ಇತಿಹಾಸದಲ್ಲಿ ಮೊಟ್ಟಮೊದಲಿಗೆ ಕಪ್ಪುವರ್ಣೀಯನೊಬ್ಬ ಅಧ್ಯಕ್ಷಗಾದಿಗೆ ಏರುವ ಅವಕಾಶಗಳು ಈ ಚುನಾವಣೆಯಿಂದ ಸೃಷ್ಟಿಯಾಗಿದ್ದವು. ಇರಾನ್, ಇರಾಕ್, ಹೈಟಿ, ಸರ್ಬಿಯಾ ಹಾಗೂ ಅಫ್ಘಾನಿಸ್ತಾನದ ಯುದ್ಧದಲ್ಲಿ ಅವ್ಯಾಹತವಾಗಿ ಎಡಬಿಡದೆ ಅಮೆರಿಕಾವನ್ನು ತೊಡಗಿಸಿದ್ದರಿಂದ ರಿಪಬ್ಲಿಕನ್ ಪಕ್ಷವು ಹೆಚ್ಚಿನ ಜನತೆಯ ಸಹಾನುಭೂತಿ ಕಳೆದುಕೊಂಡಿತ್ತು. ಅಲ್ಲದೇ ಬರಸಿಡಿಲಿನಂತೆ ಅಪ್ಪಳಿಸುತ್ತಿದ್ದ ಎಂದು ಕೇಳರಿಯದ  ಮಹಾ ಆರ್ಥಿಕ ಹಿಂಜರಿತ ಬುಷ್ ಆಡಳಿತದ ನೀತಿಯಿಂದಲೇ ಆಗಿರುವಂಥದ್ದು ಎಂಬುದು ಜನರ ಬಲವಾದ ನಂಬಿಕೆಯಾಗಿತ್ತು. ಇಡೀ ಜಗತ್ತೇ ತಲ್ಲಣಿಸುವಂತೆ ಈ ಆರ್ಥಿಕ ಹಿಂಜರಿತ ೨೦೦೮ರಲ್ಲಿ ಸಂಭವಿಸಿತು. ಇದರಿಂದ ನಿರುದ್ಯೋಗಿಗಳಾಗಿದ್ದ ಹೆಚ್ಚಿನ ಜನರಲ್ಲಿ ತೀವ್ರ ಅಸಮಾಧಾನ ಉಂಟಾಗಿತ್ತು. ಈ ಪರಿಣಾಮಗಳಿಂದ ಯುವ ಜನತೆ ರಿಪಬ್ಲಿಕನ್ ಪಕ್ಷದ ಕಡುವಿರೋಧಿಗಳಾಗಿ ಬಿರುಸಿನಿಂದ ಚುನಾವಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅಂತಿಮ ಹಣಾಹಣಿಯಲ್ಲಿ ಡೆಮಾಕ್ರಟಿಕ್ ಪಕ್ಷದ ಬರಾಕ್ ಹುಸೇನ್ ಒಬಾಮ ಹೆಚ್ಚಿನ ಮತಗಳಿಂದ ಗೆಲವು ಸಾಧಿಸುವಂತೆ ಯುವಜನತೆ ಕಾರ್ಯ ರೂಪಿಸಿತು. ಅಲ್ಲದೆ ಒಬಾಮ ಗೆಲುವು ಇತಿಹಾಸ ನಿರ್ಮಿಸುವ ನಿರ್ಣಾಯಕ ಘಟ್ಟಕ್ಕೆ ಬಂದು ತಲುಪಿತು. ಈ ಸಂಗತಿ ಎಲ್ಲರನ್ನು ಹುರಿದುಂಬಿಸಿ ಹೆಚ್ಚಿನ ಜನರನ್ನು ಚುನಾವಣೆಗೆ ಅಣಿಗೊಳಿಸಿತು. ಮೊಟ್ಟಮೊದಲಿಗೆ ಆಫ್ರಿಕನ್ ಮೂಲದ ಕರಿಯ ಜನಾಂಗದವನೊಬ್ಬ ಅಮೆರಿಕಾದ ಅಧ್ಯಕ್ಷನಾಗಿ ಆಯ್ಕೆ ಆಗುವುದರಿಂದ ಇಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆಯು ಜಗತ್ತಿಗೆ ಮಾದರಿಯಾಗಬಲ್ಲದೆಂದು ತಿಳಿದು ಎಲ್ಲ ಅಮೆರಿಕಾನ್ನರು ಉತ್ಸಾಹ ದಿಂದ ಭಾಗವಹಿಸಿ ಇತಿಹಾಸ ನಿರ್ಮಿಸಿದರು. ಜನವರಿ ೧೦, ೨೦೦೯ರಂದು ಚುನಾವಣೆ ಯಲ್ಲಿ ವಿಜಯಿಯಾದ ಅಧ್ಯಕ್ಷ ಒಬಾಮ ಅಧಿಕಾರದ ಚುಕ್ಕಾಣಿ ವಹಿಸಿಕೊಂಡು ಕಾರ್ಯನಿರತರಾಗಿದ್ದಾರೆ.

ಅಧ್ಯಕ್ಷ ಬರಾಕ್ ಹುಸೇನ್ ಒಬಾಮ ಅವರು ಮಧ್ಯ ಏಷ್ಯಾ ಹಾಗೂ ಮುಸ್ಲಿಮ್ ರಾಷ್ಟ್ರಗಳ ಬಗೆಗೆ ಈ ಹಿಂದೆ ಅಮೆರಿಕಾ ಆಡಳಿತ ಹೊಂದಿದ್ದ ಮನೋಭಾವನೆಗಳನ್ನು  ತೀವ್ರತರದಲ್ಲಿ ಬದಲಾಯಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಇಂಥ ಪ್ರಾರಂಭದ ಪ್ರಯತ್ನದಲ್ಲಿ ಜಾತ್ಯತೀತ, ಪ್ರಜಾಪ್ರಭುತ್ವ ಹಾಗೂ ಇಸ್ಲಾಂ ಕಾನೂನುಗಳಡಿಯಲ್ಲಿ ಆಡಳಿತ ನಿರ್ವಹಿಸುತ್ತಿರುವ ಟರ್ಕಿ ರಾಷ್ಟ್ರಕ್ಕೆ ಒಬಾಮ ಮೊದಲ ಭೇಟಿ ನೀಡಿದರು. ಜ್ವಾಲೆಯಿಂದ ಅಗ್ನಿಯನ್ನು ಆರಿಸಲು ಸಾಧ್ಯವಿಲ್ಲ ಎಂಬ ಹೇಳಿಕೆ ನೀಡಿ ಮುಂದಿನ ದಿನಗಳಲ್ಲಿ ಅಮೆರಿಕಾ ಆಡಳಿತ ಹೊಂದಬಹುದಾದ ಮಾರ್ಗಸೂಚಿಗಳನ್ನು ಸ್ಪಷ್ಟಪಡಿಸಿದ್ದಾರೆ. ಇಂಥ ಹೇಳಿಕೆಯನ್ನು ನೀಡುವುದರ ಮೂಲಕ ಈವರೆಗೂ ಮುಸ್ಲಿಂ ರಾಷ್ಟ್ರಗಳು ಅಮೆರಿಕಾದ ಬಗೆಗೆ ಹೊಂದಿದ್ದ ಅತೃಪ್ತಿಯನ್ನು ಉಪಶಮನ ಮಾಡಲು ಅಮೆರಿಕಾ ಆಡಳಿತವು ಬಹಳ ವರ್ಷಗಳ ನಂತರ ಮೊದಲ ಹೆಜ್ಜೆ ಇಟ್ಟಂತಾಗಿದೆ. ಮುಸ್ಲಿಂ ರಾಷ್ಟ್ರಗಳನ್ನು ಮೆಚ್ಚಿಸುವ ಹಿನ್ನೆಲೆಯ ಕಾರ್ಯ ತಂತ್ರರೂಪದಲ್ಲಿ ಅಮೆರಿಕಾಕ್ಕೆ ಹತ್ತಿರವಾಗಿರುವ ಟರ್ಕಿಯನ್ನು ಯುರೋಪಿನ್ ಒಕ್ಕೂಟಕ್ಕೆ ಸೇರಿಸಿಕೊಳ್ಳುವಂತೆ ಐರೋಪ್ಯ ಸಮುದಾಯವನ್ನು ಅಮೆರಿಕಾ ಒತ್ತಾಯಿಸಿದೆ. ಟರ್ಕಿ ಐರೋಪ್ಯ ಒಕ್ಕೂಟಕ್ಕೆ ಸೇರಿದ್ದೇ ಆದರೆ  ಅದು ಸಹಜವಾಗಿ ನ್ಯಾಟೋ ಸದಸ್ಯತ್ವವನ್ನು ಪಡೆದು ಮಹತ್ವದ ಪಾತ್ರ ವಹಿಸಬಹುದಾಗಿದೆ. ಅಲ್ಲದೇ ಅನ್ವರ್ ಸಾದತ್ ಹತ್ಯೆಯ ನಂತರ ಕಾಲಾವಧಿಯಲ್ಲಿ ಹದಗೆಟ್ಟಿದ್ದ ಈಜಿಪ್ಟ್ ಜೊತೆಗಿನ ದ್ವಿಪಕ್ಷಿಯ ಸಂಬಂಧಗಳನ್ನು ಸುಧಾರಿಸಿ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಅಮೆರಿಕಾದ ಅಧ್ಯಕ್ಷ ಒಬಾಮ ತಕ್ಕಮಟ್ಟಿಗೆ ಪ್ರಯತ್ನ ಮಾಡಿದ್ದಾರೆ.

ಅಲ್ಲದೇ ಕಾಂಡಕೋಶಗಳ ಸಂಶೋಧನೆಯ ಮೇಲಿನ ನಿಷೇಧದ ರದ್ದು ಕಾಯ್ದೆಯನ್ನು ಬರಾಕ್ ಒಬಾಮ ಪ್ರಕಟಿಸಿದರು. ಇದರಿಂದ ಓಕ್ಲಹಾಮ ಮತ್ತು ಜಾರ್ಜಿಯಾ ರಾಜ್ಯಗಳು ಮುನಿಸಿಕೊಂಡಿವೆ. ವನ್ಯಪ್ರಾಣಿಗಳನ್ನು ಸಾಕುವುದಕ್ಕೆ ಕಡಿವಾಣ ಹಾಕುವ ಕಾಯ್ದೆ ತರಲಾಗಿದೆ. ಇದು ವಿಲಾಸಿ ಅಮೆರಿಕಾನ್ ಸೆನೆಟರುಗಳಿಗೆ ಅಸಮಾಧಾನ ತಂದಿದೆ. ಒಟ್ಟಾರೆ ಫೆಡರಲ್ ಸರಕಾರ ಹಿಂಬಾಗಿಲಿನಿಂದ ರಾಜ್ಯಗಳನ್ನು ಅಸಹಾಯಕರನ್ನಾಗಿ ಮಾಡಿ ವಾಷಿಂಗ್‌ಟನ್ ಕೇಂದ್ರವು ಬಲಗೊಳ್ಳುವ ಕುತಂತ್ರಗಳನ್ನು ಹೂಡಿದೆ ಎಂದು ಹೆಚ್ಚಿನ ರಾಜ್ಯಗಳು ತಿಳಿದು ಕೊಂಡಂತಿವೆ. ಈ ಕಾರಣಗಳಿಂದ ಇತ್ತೀಚೆಗೆ ವಿಶಾಲ ಅಮೆರಿಕಾದ ಸ್ಥಿರತೆಗೆ ಅಭದ್ರತೆ ಉಂಟಾಗುವ ಸೂಚನೆಗಳು ತಲೆದೋರಿವೆ.

ಇತ್ತೀಚೆಗೆ ಇರಾನ್ ದೇಶದ ಹೇಳಿಕೆಗಳು ಅಮೆರಿಕಾವನ್ನು ಹೆಚ್ಚಿನ ಚಿಂತೆಗೀಡು ಮಾಡಿವೆ. ಪರಮಾಣು ಅಣ್ವಸ್ತ್ರ ತಯಾರಿಸುವ ಪ್ರಯತ್ನದಲ್ಲಿ ಇರಾನ್ ಸಫಲವಾಗಿದ್ದೇ ಆದಲ್ಲಿ ಇಡೀ ಮಧ್ಯ ಪ್ರಾಚ್ಯ ಪ್ರದೇಶದಲ್ಲಿ ಗಂಭೀರ ಸ್ವರೂಪದ ಆತಂಕಗಳು ಉಂಟಾಗುತ್ತವೆ ಎಂಬುದು ಅಮೆರಿಕಾ ಹಾಗೂ ಅದರ ಮಿತ್ರ ಮಂಡಳಿಯ ರಾಷ್ಟ್ರಗಳ ವಾದ. ಆದರೆ ಅಮೆರಿಕಾದ ಎಚ್ಚರಿಕೆಗಳನ್ನು ಮಾನ್ಯ ಮಾಡದ ಇರಾನ್ ದೇಶವು ಉತ್ತರ ಕೊರಿಯಾದ ಸಹಾಯದಿಂದ ತಾನು ಹಾಕಿಕೊಂಡಿರುವ ಯೋಜನೆಗಳನ್ನು ಮುಗಿಸಿಯೇ ತಿರುವ ಹಟಕ್ಕೆ ಬಿದ್ದಂತೆ ವರ್ತಿಸುತ್ತಿದೆ. ಇದನ್ನೆಲ್ಲ ಗಮನಿಸುತ್ತಿರುವ ವಿಶಾಲ ಚೀನಾ ದೇಶವು ಎಲ್ಲವನ್ನು ತೆರೆಮರೆಯಲ್ಲಿ ನಿರ್ವಹಿಸುತ್ತ ಅಮೆರಿಕಾವನ್ನು ದಿಕ್ಕು ತಪ್ಪಿಸುತ್ತಿದೆ. ಇದೇ ವೇಳೆಗೆ ಅತೀ ನಿರೀಕ್ಷೆ ಇಟ್ಟುಕೊಂಡಿರುವ ಭಾರತಕ್ಕೆ ಬರಾಕ್ ಹುಸೇನ್ ಒಬಾಮ ಆಡಳಿತ ಮರ್ಮಾಘಾತದ ಏಟನ್ನು ನೀಡುತ್ತಿದೆ. ಐಟಿ ಮತ್ತು ಬಿಟಿ ಕ್ಷೇತ್ರಗಳಲ್ಲಿ ಅಗಾಧ ಪ್ರಗತಿ ಸಾಧಿಸುತ್ತಿರುವ ಭಾರತವು ಅಮೆರಿಕಾದ ಲಾಭದ ಬಂಡವಾಳವನ್ನು ಬಾಚಿಕೊಳ್ಳುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಅಧ್ಯಕ್ಷ ಒಬಾಮ ನಮಗೆ ‘ಬೆಂಗಳೂರು ಬೇಡ ಬಫೆಲೋ ಬೇಕೆಂಬ’ ತೀಕ್ಷ್ಣವಾದ ಹೇಳಿಕೆ ಭಾರತದ ಮಾಹಿತಿಜ್ಞಾನ ಕ್ಷೇತ್ರವನ್ನು ತಲ್ಲಣಗೊಳಿಸಿದೆ. ಆದರೆ ಕೆಲವೇ ತಿಂಗಳುಗಳಲ್ಲಿ ಭಾರತದ ಬಗೆಗೆ ಬರಾಕ್ ಹುಸೇನ್ ಒಬಾಮ ಹೊಂದಿದ್ದ ತಮ್ಮ ಅಭಿಪ್ರಾಯದಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ.

ಇಂದಿನ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಭಾರತ ಇಲ್ಲವೇ ಪ್ರಾತಿನಿಧೀಕರಣವನ್ನು ಊಹಿಸಿಕೊಳ್ಳುವುದೇ ಅಸಾಧ್ಯವಾದ ಮಾತಾಗಿದೆ. ಅಮೆರಿಕಾವು ವಿಶ್ವದ ಅತಿದೊಡ್ಡ ಆರ್ಥಿಕತೆಯ ದೇಶವಾಗಿದ್ದರೆ ಭಾರತ ಅಷ್ಟೇ ತೀವ್ರವಾಗಿ ಆರ್ಥಿಕ ವಲಯದಲ್ಲಿ ಬಲಗೊಳ್ಳುತ್ತಿರುವ ಎರಡನೆಯ ದೊಡ್ಡ ರಾಷ್ಟ್ರ. ಆದ್ದರಿಂದ ದ್ವಿಪಕ್ಷೀಯ ವಾಣಿಜ್ಯ ವ್ಯವಹಾರಗಳ ಒಪ್ಪಂದಗಳನ್ನು ಮಾಡಿಕೊಳ್ಳುವುದು ಎರಡು ದೇಶಗಳಿಗೆ ಅನುಕೂಲಕರ. ಆರ್ಥಿಕ ಹಿಂಜರಿತದಿಂದ ೨೦೦೮-೧೦ನೆಯ ಸಾಲಿನಲ್ಲಿ ಸುಮಾರು ೯೦ ದಶಲಕ್ಷದಷ್ಟು ಉದ್ಯೋಗಾವಕಾಶಗಳು ಅಮೆರಿಕಾದಲ್ಲಿ ನಷ್ಟವಾಗಿವೆ. ಹೇಗಾದರೂ ಮಾಡಿ ಆರ್ಥಿಕ ಪುನಶ್ಚೇತನ ಪಡೆಯುವುದು ಅಮೆರಿಕಾದ ಪ್ರಮುಖ ಗುರಿ. ಸಾಫ್ಟ್‌ವೇರ್ ತಂತ್ರಜ್ಞರು ಹಾಗೂ ಹೊರಗುತ್ತಿಗೆ(ಬಿ.ಪಿ.ಓ.)ಯಿಂದ ಭಾರತ ಪಡೆಯುತ್ತಿರುವ ಹೆಚ್ಚಿನ ಲಾಭಗಳು ಅಮೆರಿಕಾ ಆಡಳಿತಗಾರರ ಭಾರೀ ಅಸಮಾಧಾನಕ್ಕೆ ಕಾರಣಗಳಾಗಿದ್ದವು. ಆದರೆ ದಿನಗಳೆದಂತೆ ಒಬಾಮ ಆಡಳಿತ ಇದರ ಬಗೆಗೆ ಇರುವ ಸಾಧ್ಯತೆಗಳನ್ನು ಪರಿಗಣಿಸಿ ಈ ಸೇವಾ ಕ್ಷೇತ್ರಗಳಿಂದ ಭಾರತವನ್ನು ಹೊರದಬ್ಬಿದರೆ ತನಗೆ ಲಾಭಕ್ಕಿಂತ ನಷ್ಟವೇ ಜಾಸ್ತಿ ಎಂದು ತಿಳಿದು ಸುಮ್ಮನಾಗಿದೆ. ಕಾರಣ ಇಂತಹ ಸೇವೆಗಳಿಗಾಗಿ ಭಾರತೀಯರು ಪಡೆಯುತ್ತಿರುವ ಸೇವಾ ಶುಲ್ಕವನ್ನು ಅಮೆರಿಕಾನ್ ಉದ್ಯೋಗಿಗಳು ಪಡೆಯುವ ಸೇವಾ ಶುಲ್ಕಗಳಿಗೆ ಹೋಲಿಸಿದರೆ ಅಜಗಜಾಂತರ ವ್ಯತ್ಯಾಸವಿದೆ. ಆದ್ದರಿಂದ ಈ ಮೊದಲು ಅಮೆರಿಕಾ ಹೊಂದಿದ್ದ ತಪ್ಪು ಅಭಿಪ್ರಾಯಗಳು ಭಾರತದ ಐಟಿಬಿಟಿ ಕ್ಷೇತ್ರಕ್ಕೆ ಹೆಚ್ಚಿನ ಆತಂಕವನ್ನು ಸೃಷ್ಟಿಸಿದವು. ಇತ್ತೀಚಿಗೆ ಅಧ್ಯಕ್ಷ ಒಬಾಮ ಭಾರತದ ಭೇಟಿಯ ಸಂದರ್ಭದಲ್ಲಿನ ಹೇಳಿಕೆಗಳು ಹೆಚ್ಚಿದ್ದ ಆತಂಕವನ್ನು ಕಡಿಮೆಗೊಳಿಸಿದೆ. ಮಾರುವ ಹಾಗೂ ಕೊಳ್ಳುವ ಈ ಕ್ಷೇತ್ರಗಳಲ್ಲಿ ಸರಿಸಮಾನ ಸಾಮರ್ಥ್ಯವನ್ನು ಹೊಂದಿರುವ ಈ ಎರಡೂ ದೇಶಗಳು ಅರಿತುಕೊಂಡು ನಡೆಯುವುದು ಸಮಯೋಚಿತವಾದದೆಂದು ಅಭಿಪ್ರಾಯಿಸಿದ್ದಾರೆ. ಇಂತಹ ಹೇಳಿಕೆಗಳಿಂದ ಉತ್ತೇಜನಗೊಂಡಿರುವ ಭಾರತವು ಒಬಾಮ ಭೇಟಿ ಫಲಪ್ರದ ವಾಗಿದೆ ಎಂದು ಅಭಿಪ್ರಾಯಿಸಿದೆ.

ವಿಶ್ವದ ಅತಿದೊಡ್ಡ ಮಾರುಕಟ್ಟೆಗಳಾಗಿರುವ ಈ ಎರಡೂ ದೇಶಗಳು ಸುಮಾರು ೧೫ ಶತಕೋಟಿ ಡಾಲರ್‌ಗಳಷ್ಟು ವ್ಯವಹಾರ ಒಪ್ಪಂದಗಳನ್ನು ಮಾಡಿಕೊಂಡು ಅಭಿವೃದ್ದಿಯ ಕಡೆಗೆ ದಾಪುಗಾಲು ಇಟ್ಟಿದೆ. ಇದರಿಂದ ಸುಮಾರು ೫೦ ಸಾವಿರದಷ್ಟು ಹೊಸ ಉದ್ಯೋಗಾವ ಕಾಶಗಳು ಸೃಷ್ಟಿಯಾಗಲಿವೆ. ಸೇವಾ ಕ್ಷೇತ್ರಗಳಿಂದ ಹೆಚ್ಚಾಗುವ ವರಮಾನವು ಸಹಜವಾಗಿಯೇ ಎರಡು ದೇಶಗಳ ಆರ್ಥಿಕ ಅಭಿವೃದ್ದಿ ದರವನ್ನು ಉತ್ತೇಜಿಸಿ ಮುನ್ನಡೆಯುವುದರಲ್ಲಿ  ಯಾವ ಸಂಶಯವಿಲ್ಲ. ವಿದೇಶಿ ಬಂಡವಾಳದ ನೇರ ಹೂಡಿಕೆಯಲ್ಲಿ ಎರಡೂ ದೇಶಗಳು ಮುಂಚೂಣಿಯಲ್ಲಿವೆ. ಭಾರತದಲ್ಲಿ ವಿದೇಶಿ ಬಂಡವಾಳದ ನೇರ ಹೂಡಿಕೆ ಅತಿದೊಡ್ಡ ರಾಷ್ಟ್ರ ಅಮೆರಿಕಾವಾಗಿದೆ. ಅದರಂತೆ ಭಾರತದ ಬಂಡವಾಳಗಾರರು ಸಹ ೨೦೦೮-೨೦೧೦ನೆಯ ಸಾಲಿನಲ್ಲಿ ಸುಮಾರು ೧೦ ಶತಕೋಟಿ ಡಾಲರನ್ನು ಅಮೆರಿಕಾದ ವಿವಿಧ ಕ್ಷೇತ್ರಗಳಲ್ಲಿ ಹೂಡಿದ್ದಾರೆ. ಇಂತಹ ನೇರ ಹೂಡಿಕೆಯಲ್ಲದೆ ಬೇರೆ ಬೇರೆ ವಲಯದಲ್ಲಿಯೂ ಸಹ ಒಟ್ಟು ಸುಮಾರು ೫೦ ಶತಕೋಟಿ ಡಾಲರ್‌ನಷ್ಟು ಪ್ರಮಾಣದ ಭಾರೀ ಬಂಡವಾಳ ವನ್ನು ಅಮೆರಿಕಾದ ಮುಕ್ತ ಮಾರುಕಟ್ಟೆಯಲ್ಲಿ ಭಾರತವು ತೊಡಗಿಸಿದೆ. ಪ್ರಮುಖವಾಗಿ ಜವಳಿ, ಔಷಧಿ, ಮಾಹಿತಿತಂತ್ರಜ್ಞಾನ ಮತ್ತು ಸೇವಾ ವಲಯಗಳಲ್ಲಿ ಈ ಹಣವನ್ನು ಹೂಡಲಾಗಿದೆ. ಅಮೆರಿಕಾದಲ್ಲಿ ಪರೋಕ್ಷವಾಗಿ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುತ್ತಿರುವ ಭಾರತದ ಬಂಡವಾಳವನ್ನು ಅಲ್ಲಿನ ಆರ್ಥಿಕ ಶಕ್ತಿಯ ಬೆನ್ನಲುಬಾಗಿ ನಿಂತಿದೆ. ಇಂತಹ ಅನಿವಾರ್ಯತೆ ಯನ್ನು ಮನಗಂಡಿರುವ ಅಮೆರಿಕಾದ ಆಡಳಿತ ಭಾರತದ ಜೊತೆಗೆ ಎಲ್ಲ ಕ್ಷೇತ್ರಗಳಲ್ಲಿ ಮುಕ್ತ ವ್ಯಾಪಾರ ಒಪ್ಪಂದ (ಫ್ರೀ ಟ್ರೈಡ್ ಅಗ್ರಿಮೆಂಟ್) ಮಾಡಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದೆ. ಇದು ಪ್ರಬಲ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವ ಭಾರತಕ್ಕೆ ಹೆಮ್ಮೆಯ ಸಂಗತಿಯೂ ಹೌದು.

೨೧ನೆಯ ಶತಮಾನದಲ್ಲಿ ಅಮೆರಿಕಾ ಜಾಗತಿಕ ಪೊಲೀಸ್ ಶಕ್ತಿಯಾಗಿ ಮೆರೆಯುತ್ತಿದೆ. ಸ್ವಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ತನ್ನೆಲ್ಲಾ ಶಕ್ತಿ ಸಾಮರ್ಥ್ಯವನ್ನು ಪಣಕ್ಕಿಟ್ಟಿದೆ. ಈ ಕಾಲಾವಧಿಯಲ್ಲಿ ಉದ್ಭವವಾಗಿರುವ ಇಕ್ಕಟ್ಟು ಬಿಕ್ಕಟ್ಟುಗಳಿಗೆ ತನ್ನದೇ ಆದ ವಿವೇಚನೆಯಲ್ಲಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ. ಉದಾರ ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಸಿರಾಡುವ ಅಮೆರಿಕಾದ ಆಡಳಿತ ಜಾಗತಿಕ ಸಂದರ್ಭದ ಕಾರಾಣಗಳಿಂದಾಗಿ ತದ್ವಿರುದ್ಧವಾದ ನಿಲುವುಗಳನ್ನು ಪ್ರದರ್ಶಿಸಿದೆ. ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ವೈಜ್ಞಾನಿಕ ಕ್ಷೇತ್ರಗಳಲ್ಲಿ ಅಗಾಧವಾದ ಪ್ರಗತಿಯನ್ನು ೨೦ನೆಯ ಶತಮಾನದ ಅಮೆರಿಕಾ ಸಾಧಿಸುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದೆ.

 

ಪರಾಮರ್ಶನ ಗ್ರಂಥಗಳು

೧. ಹಿಲಿ ಡೇವಿಡ್, ‘‘ಯುನೈಟೆಡ್ ಸ್ಟೇಟ್ಸ್ ಎಕ್ಸ್‌ಪ್ಯಾನಿಸಮ್’’, ದಿ ಇಂಪಿರಿಯಲಿಸ್ಟ್ ಅರ್ಜ್ ಇನ್ ದಿ ಗ್ಲೋಬಲ್ ವರ್ಲ್ಡ್, ಸ್ಟಾನ್‌ಫೋರ್ಡ್ : ಯೂನಿವರ್ಸಿಟಿ ಪ್ರೆಸ್.

೨. ಓಸ್‌ಗುಡ್ ರಾಬರ್ಟ್, ಅಮೆರಿಕಾ ಆ್ಯಂಡ್ ವರ್ಲ್ಡ್ ಫ್ರಾಮ್ ದಿ ಟ್ರೂಮನ್ ಡಾಕ್ಟರೈನ್ ಟು ವಿಯೆಟ್ನಾಂ, ಬಾಲ್ಟಿಮೋರ್: ಜಾನ್ ಹಾಪಕಿನ್ಸ್ ಪ್ರೆಸ್.

೩. ಥಾಮಸ್ ಜಾನ್, ಅಮೆರಿಕನ್ ಕಲ್ಚರ್ ಆ್ಯಂಡ್ ಪಾಲಿಟಿಕ್ಸ್ ಇನ್ ದಿ ಗಿಲ್ಡಸ್ ಏಜ್, ಸ್ಟಾನ್‌ಫೋರ್ಡ್ : ಯೂನಿವರ್ಸಿಟಿ ಪ್ರೆಸ್.

೪. ಜಾರ್ಜ್‌ಟ್ರೆನ್ ಟಿಂಡಲ್ ಮತ್ತು ಡೇವಿಡ್ ಇ.ಶೀ. ಅಮೆರಿಕಾ, ಎ ನೆರೇಟಿವ್  ಹಿಸ್ಟರಿ

೫. ಜೋಶಿ ಪಿ.ಎಸ್ ಮತ್ತು ಗೊಲ್ಕರ್ ಎಸ್.ವಿ., ೧೯೮೬. ಹಿಸ್ಟರಿ ಆಫ್ ದಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ, ನ್ಯೂದೆಲ್ಲಿ: ಎಸ್.ಜಾವಿದ್ ಮತ್ತು ಕಂಪನಿ

೬. ದಿ ನ್ಯೂ ಎನ್‌ಸೈಕ್ಲೋಪಿಡಿಯಾ ಬ್ರಿಟಾನಿಕಾ, ೧೯೯೦. ಲಂಡನ್‌ಪ್ರೆಸ್.

೭. ಬಿರ್ಡ್ ಸಿ.ಎ., ಮತ್ತು ಬಿರ್ಡ್ ಎಮ್.ಆರ್., ೧೯೬೦. ದಿ ಬೇಸಿಕ್ ಹಿಸ್ಟರಿ ಆಫ್ ದಿ ಯುನೈಟೆಡ್ ಸ್ಟೇಟ್ಸ್.

೮. ಸಿ ವ್ಯಾನ್ ವುಡ್‌ವರ್ಡ್(ಸಂ), ೧೯೬೯. ಕಂಪಾರೆಟಿವ್ ಅಪ್ರೋ ಟು ಅಮೆರಿಕಾನ್ ಹಿಸ್ಟರಿ, ಮದ್ರಾಸ್.

೯. ಜೋಶಿ ಪಿ.ಎಸ್. ಮತ್ತು ಗೋಲ್ಕರ್ ಎಸ್.ವಿ., ೧೯೬೦. ಹಿಸ್ಟರಿ ಆಫ್ ಮಾರ್ಡನ್ ವರ್ಲ್ಡ್ ೧೯೦೦,  ನ್ಯೂದೆಹಲಿ.

೧೦. ಮೋಹನ್  ವೈ.ಆರ್., ೨೦೦೩. ಅಮೆರಿಕಾಯಣ, ಬೆಂಗಳೂರು : ಅಭಿನವ ಪ್ರಕಾಶನ.

೧೧. ದೀಕ್ಷಿತ್ ಜಿ.ಎಸ್., ಅಮೆರಿಕಾ, ಧಾರವಾಡ : ಕರ್ನಾಟಕ ವಿಶ್ವವಿದ್ಯಾಲಯ.

೧೨. ತಂಬಂಡ ವಿಜಯ್ ಪೂಣಚ್ಚ(ಸಂ), ೨೦೦೧. ಚರಿತ್ರೆ ವಿಶ್ವಕೋಶ, ವಿದ್ಯಾರಣ್ಯ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.