ಇರಾನ್ ಮತ್ತು ಕಾಂಟ್ರಾ ಹಗರಣ

ಇರಾನ್-ಇರಾಕ್ ದೇಶಗಳು ತೈಲಮಾರ್ಗದ ಹಕ್ಕುಸ್ವಾಮ್ಯಕ್ಕಾಗಿ ಸೆಣಸಾಟ ಪ್ರಾರಂಭಿಸಿ ರಾಸಾಯನಿಕ ಅಸ್ತ್ರಗಳ ಪ್ರಯೋಗದವರೆಗೆ ಬಂದು ನಿಂತವು. ಮೊದಮೊದಲು ಅಮೆರಿಕಾ ಇದನ್ನು ಸೂಕ್ಷ್ಮವಾಗಿ ಗಮನಿಸುತ್ತ ತಾಟಸ್ಥ್ಯ ನೀತಿಯನ್ನು ತಾಳುವ ನಿರ್ಧಾರ ಮಾಡಿತು. ಆದರೆ ಸದಾ ಕುತಂತ್ರದಲ್ಲಿ ಮುಳುಗೇಳುವ ಅಮೆರಿಕಾದ ನೀತಿಗಳು ಹಾಗೂ ರಾಜಕಾರಣಿಗಳು ಸುಮ್ಮನಾಗಲಿಲ್ಲ. ಗುಪ್ತವಾಗಿ ಇರಾಕಿನ ಸರ್ವಾಧಿಕಾರಿ ಸದ್ದಾಂ ಹುಸೇನ್‌ಗೆ ಅಮೆರಿಕಾ ಆಡಳಿತ ಶಸ್ತ್ರಾಸ್ತ್ರ ಸರಬರಾಜು ಮಾಡಿತು. ಅಲ್ಲದೇ ಆಶ್ಚರ್ಯವೆಂಬಂತೆ ಒಳಗೊಳಗೆ ಇರಾನ್ ದೇಶಕ್ಕೂ ಗುಪ್ತವಾಗಿ ಶಸ್ತ್ರಾಸ್ತ್ರಗಳನ್ನು ಪೂರೈಸಿತು. ಇದು ರೇಗನ್ ಆಡಳಿತದಲ್ಲಿ ಅನುಸರಿಸಿದ ಪ್ರಮುಖ ದ್ವಂದ್ವ ನೀತಿಗಳ ಹಗರಣವಾಗಿ ಪರಿಣಮಿಸಿತು. ಇದನ್ನು ‘‘ಇರಾನ್-ಕಾಂಟ್ರಾ ಹಗರಣ’’ ಎಂದು  ಕರೆಯಲಾಗುತ್ತದೆ. ಅಮೆರಿಕಾದ ಆಂತರಿಕ ಮಿತ್ರನಾಗಿ ಮಾರ್ಪಡುತ್ತಿದ್ದ ಈಜಿಪ್ಟ್ ದೇಶದ ಬಗೆಗೆ ಹಾಗೂ ಅಲ್ಲಿನ ಅಧ್ಯಕ್ಷ ಅಮೆರಿಕಾದ ಪರವಾಗಿ ತೆಗೆದುಕೊಳ್ಳುವ ನಿರ್ಣಯಗಳಿಂದ ಆ ದೇಶದಲ್ಲಿನ ಮೂಲಭೂತ ವಾದಿಗಳು ಅಸಂತುಷ್ಟ ಗೊಂಡು ಅಧ್ಯಕ್ಷ ಅನ್ವರ ಸಾದತ್‌ನ್ನನ್ನು ಕೊಲೆ ಮಾಡಿದರು. ಇದು ಅಮೆರಿಕಾಕ್ಕೆ ಭಾರೀ ಹಿನ್ನಡೆ ಆದಂತಾಯಿತು. ಕಾರಣ ಈಜಿಪ್ಟ್ ದೇಶದ ಮೂಲಕ ಅರಬ್ ಜಗತ್ತನ್ನು ಹಾಗೂ ಮುಸ್ಲಿಂ ಧರ್ಮದ ಅನುಯಾಯಿಗಳನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದ ಉತ್ತಮ ಅವಕಾಶ ತಪ್ಪಿದಂತಾಯಿತು. ಅಧ್ಯಕ್ಷನ ದುರಂತ ಕೊಲೆಯಿಂದ ಅಮೆರಿಕಾ ಏಕಾಂಗಿಯಾಯಿತು.

ಸುಮಾರು ಐದು ದಶಕಗಳ ಕಾಲ ಅಮೆರಿಕದಷ್ಟೇ ಶಕ್ತಿಶಾಲಿ ರಾಷ್ಟ್ರವಾಗಿದ್ದ ಸಮಾನ ತಾಕತ್ತಿನ ಸೋವಿಯತ್ ರಷ್ಯಾ ತನ್ನ ಆಂತರಿಕ ಸಮಸ್ಯೆಗಳಿಂದ ಪತನದ ಹಾದಿ ಹಿಡಿದಿತ್ತು. ಇದರ ವಾಸನೆ ಅರಿತ ರೇಗನ್ ಸೋವಿಯತ್ ಒಕ್ಕೂಟ ಭಯಪಡುವಷ್ಟು ಅಮೆರಿಕಾದ ರಕ್ಷಣಾ ಸಂಬಂಧಿ ವೆಚ್ಚವನ್ನು ಹೆಚ್ಚಿಸಿದನು. ಹೇಗಾದರೂ ಮಾಡಿ ಕಮ್ಯುನಿಸ್ಟ್ ದುಷ್ಟ ಸಾಮ್ರಾಜ್ಯವನ್ನು ಜಾಗತಿಕ ಭೂಪಟದಿಂದ ಅಳಿಸಿ ಹಾಕುವುದು ಅಮೆರಿಕಾದ ಪರಮ ಧ್ಯೇಯವಾಗಿತ್ತು. ಇದೇ ವೇಳೆಗೆ ಲ್ಯಾಟಿನ್ ಅಮೆರಿಕಾ ದೇಶಗಳಲ್ಲೂ ಹಾಗೂ ಪೂರ್ವ ಯುರೋಪಿನ ರಾಷ್ಟ್ರಗಳಲ್ಲಿ ಸಮತಾವಾದ ಆಡಳಿತಗಳ ವಿರುದ್ಧದ ಅಸಮಾಧಾನದ ಬುಗ್ಗೆಗಳು ಒಡೆಯಲಾರಂಭಿಸಿದವು. ಈಗ ಕಮ್ಯುನಿಸ್ಟ್ ಧೋರಣೆಯನ್ನು ವಿರೋಧಿಸುವುದು ಮಾತ್ರ ಅಮೆರಿಕಾದ ಏಕಮೇವ ಅಂತಿಮ ಉದ್ದೇಶವಾಯಿತು. ಹೀಗಾಗಿ ಕೆಲವೊಮ್ಮೆ ತಾನು ಮಾಡುತ್ತಿರುವುದು ತಪ್ಪೆಂದು ಕಂಡುಬಂದರೂ ಕಮ್ಯುನಿಸಂನ ನಾಶವೇ ತನ್ನ ಆದ್ಯತೆ ಎಂದು ಭಾವಿಸಿ ಅನಿವಾರ್ಯವಾಗಿ ಕೆಲವು ಸರ್ವಾಧಿಕಾರಿಗಳಿಗೆ ಸಹಾಯ ನೀಡಿ ಅವಘಡಗಳನ್ನು ಸಹ ಅಹ್ವಾನಿಸಿಕೊಂಡಿತು. ಸೋವಿಯತ್ ಒಕ್ಕೂಟದ ಮಿತ್ರ ದೇಶ ಪೋಲಂಡ್‌ನಲ್ಲಿ ಆಂತರಿಕ ಕಲಹವುಂಟಾಗಿ ಲೆಕ್ ವಲೆಸಾನ ನೇತೃತ್ವದಲ್ಲಿ ಅಮೆರಿಕಾ ಬೆಂಬಲಿತ ಸರಕಾರ ಆಡಳಿತದ ಚುಕ್ಕಾಣಿ ಹಿಡಿಯಿತು. ಇಂಥ ಬದಲಾವಣೆ ಪೂರ್ವ ಯುರೋಪಿನ ಪ್ರದೇಶಗಳಲ್ಲಿ ರಷ್ಯಾದ ಬಿಗಿಹಿಡಿತ ತಪ್ಪುತ್ತಿರುವುದರ ಬಗೆಗೆ ಮುನ್ಸೂಚನೆಯಾಯಿತು.

ಡೆಮೊಕ್ರಾಟಿಕ್ ಪಕ್ಷದ ವಾಲ್ಟರ್ ಮಾಂಡೇಲ್ ರಿಪಬ್ಲಿಕನ್ ಪಕ್ಷದ ರೋನಾಲ್ಡ್ ರೇಗನ್ ವಿರುದ್ಧ ೧೯೮೪ರ ಮಹಾಚುನಾವಣೆಯಲ್ಲಿ ಸೋತನು. ತನ್ನ ಮೊದಲ ಆಡಳಿತಾವಧಿಯಲ್ಲಿ ಮಾಡಿದ ಆರ್ಥಿಕ ಸುಧಾರಣೆಗಳು ರೇಗನ್‌ನ ಎರಡನೆಯ ಅವಧಿಯ ಚುನಾವಣೆಯ ಗೆಲುವಿಗೆ ಸಹಾಯಕವಾದವು. ಹಿಂದಿನ ಸಲದಂತೆ ಜಾರ್ಜ್ ಬುಷ್(ಸೀನಿಯರ್) ಉಪಾಧ್ಯಕ್ಷನಾಗಿ ಆಯ್ಕೆ ಆದನು. ನಿರುದ್ಯೋಗದ ಪ್ರಮಾಣ ಕಳೆದ ೩೦ ವರ್ಷಗಳಲ್ಲಿ ಇಷ್ಟೊಂದು ಕಡಿಮೆ ಆಗಿರಲಿಲ್ಲ. ಈ ಶ್ರೇಯಸ್ಸು ರೇಗನ್‌ನ ಆಡಳಿತಕ್ಕೆ ಸಲ್ಲುತ್ತದೆ. ಆದರೆ ಸಟ್ಟಾ ವ್ಯಾಪಾರ ಕುಸಿದು ಹೋಗಿತ್ತು. ಇದರ ಪರಿಣಾಮ ಮಾತ್ರ ಅತಿ ಕಡಿಮೆ ಪ್ರಮಾಣದಲ್ಲಿತ್ತು. ರೇಗನ್‌ನಿಗೆ ಬೇಕಾಗದೇ ಇದ್ದರೂ ಒತ್ತಾಯಪೂರ್ವಕವಾಗಿ ಕೆಲವು ನಿಯಮಗಳನ್ನು ಕಾಂಗ್ರೆಸ್ ಸಭೆಯು ಅಧ್ಯಕ್ಷನನ್ನು ಮೀರಿ ಜಾರಿಗೊಳಿಸಿತು. ಅವುಗಳಲ್ಲಿ ಪ್ರಮುಖವಾದುದೆಂದರೆ ‘ವಲಸೆ ನಿಯಂತ್ರಣ ಕಾಯ್ದೆ’. ಅಮೆರಿಕಾದ ಪ್ರಗತಿಗೆ ಮನಸೋತು ಬೇರೆ ಬೇರೆ ದೇಶಗಳಿಂದ ಅದರಲ್ಲೂ ಏಷ್ಯ ರಾಷ್ಟ್ರಗಳಿಂದ ಸಾವಿರಾರು ಸಂಖ್ಯೆಯಲ್ಲಿ ಅಮೆರಿಕಾಕ್ಕೆ ವಲಸೆ ಬರಲಾರಂಭಿಸಿದರು. ಈ ವಲಸೆ ಸಮಸ್ಯೆಗಳು ಸ್ಥಳೀಯರ ಅಸ್ತಿತ್ವಕ್ಕೆ ಆತಂಕ ಮೂಡುವಷ್ಟು ಬೆಳೆಯಲಾರಂಭಿಸಿದವು. ಇಂಥ ಅತೀ ಪ್ರಮಾಣದ ವಲಸೆಯನ್ನು ವಿರೋಧಿಸಿದ ಕಾಂಗ್ರೆಸ್ ವಿದೇಶಿ ವಲಸೆಗಾರರನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ರೇಗನ್ ಆಡಳಿತಕ್ಕೆ ಸೂಚಿಸಿತು. ಎರಡನೆಯ ಜಾಗತಿಕ ಮಹಾಯುದ್ಧದಲ್ಲಿ ಜಪಾನ್ ದೇಶವು ತಾಳಿದ ಹಠಮಾರಿ ಧೋರಣೆಯಿಂದ ಬೇಸತ್ತು, ಅದನ್ನು ಬೆದರಿಸುವ ತಂತ್ರವಾಗಿ ಅಮೆರಿಕಾದಲ್ಲಿರುವ ಜಪಾನೀಯರನ್ನು ಸಿಟ್ಟಿನಿಂದ  ನಿರ್ವಸತಿಗೊಳಿಸುವ ಪ್ರಯತ್ನ ಮಾಡಲಾಗಿತ್ತು. ಈ ತಪ್ಪನ್ನು ಸರಿಪಡಿಸಿಕೊಳ್ಳಲು ರೇಗನ್ ಆಡಳಿತಾವಧಿಯಲ್ಲಿ ನಿರ್ವಸತಿಕರಾಗಿದ್ದ ಜಪಾನೀಯರಿಗೆ ಪರಿಹಾರಗಳನ್ನು ಘೋಷಿಸಲಾಯಿತು. ಇದರಿಂದ ಜಪಾನ್ ಹಾಗೂ ಅಮೆರಿಕಾದ ಸಂಬಂಧಗಳು ತೀವ್ರಗತಿಯಲ್ಲಿ ಸುಧಾರಣೆಗೊಂಡವು. ಅಮೆರಿಕಾದಲ್ಲಿ ಕಾರ್ಯಾಂಗದಷ್ಟೇ ನ್ಯಾಯಾಂಗವು ಸಹ ಗಟ್ಟಿಯಾಗಿದೆ. ಹೀಗಾಗಿ ದೇಶವನ್ನು ನಿರ್ಧರಿಸುವ ನಿರ್ಣಯಗಳು ನ್ಯಾಯಾಲಯದಿಂದಲೂ ಸಹ ಪರಿಣಾಮಕಾರಿಯಾಗಿ ಹುಟ್ಟಿಕೊಳ್ಳುತ್ತವೆ. ಆದ್ದರಿಂದ ಪ್ರತಿಯೊಬ್ಬ ಅಧ್ಯಕ್ಷನು ಸುಪ್ರೀಂ ಕೋರ್ಟಿನ     ನ್ಯಾಯಾಧೀಶರು ತನ್ನ ಆಡಳಿತದ ನೀತಿ ನಿಯಮಗಳನ್ನು ಬೆಂಬಲಿಸುವ ಅಥವಾ ಪ್ರೋ ಮನೋಭಾವದವರಾಗಿರಬೇಕೆಂದು ಅಪೇಕ್ಷಿಸುತ್ತಿರುತ್ತಾನೆ. ಅದಕ್ಕಾಗಿ ರೇಗನ್ ಸಹ ಅದೇ ಕಾರ್ಯ ಮಾಡಿ ತನಗೆ ಹೊಂದಿಕೊಳ್ಳುವ ನ್ಯಾಯಾಧೀಶರನ್ನು ನೇಮಕ ಮಾಡಿದನು. ತನಗಿಷ್ಟವಾದ ಇಂಥ ನೇಮಕಗಳನ್ನು ಮಾಡಿಕೊಂಡು ಆಡಳಿತವನ್ನು ತನ್ನ ನೀತಿಗಳಂತೆ ನಿಯಂತ್ರಣಗೊಳಿಸಿಕೊಂಡಿದ್ದರೂ ರೇಗನ್ ಆಡಳಿತದಲ್ಲಿ ಅನೇಕ ಅವಘಡ ಗಳು ಘಟಿಸದೇ ಇರಲಿಲ್ಲ. ಈ ಕಾರಣದಿಂದ ವಿರೋಧಿ ಟೀಕೆಗಳು ಪ್ರಬಲವಾದವು. ಮುಖ್ಯವಾಗಿ ಸಂಪ್ರದಾಯನಿಷ್ಠರಿಗೆ ಹೆಚ್ಚಿನ ಮಣೆ ಹಾಕಿದನು. ಈ ಧೋರಣೆಗಳು ಪ್ರಗತಿಪರ ಅಮೆರಿಕಾನ್ನರಿಗೆ ಸರಿಬರಲಿಲ್ಲ. ರೇಗನ್ ಆಡಳಿತಾವಧಿಯಲ್ಲಿ ಆರ್ಥಿಕ-ರಾಜಕೀಯ ಪ್ರಗತಿಗಳನ್ನು ಸಾಧಿಸುತ್ತ ಮುನ್ನಡೆಯುವ ಸಂದರ್ಭಗಳಲ್ಲಿ ಅಮೆರಿಕಾ ಆಡಳಿತ ವ್ಯವಸ್ಥೆಗೆ ಪೆಟ್ಟು ಬೀಳುವಂತೆ ಬಾಹ್ಯಾಕಾಶದಲ್ಲಿ ದುರಂತವೊಂದು ಸಂಭವಿಸಿತು. ಮಹತ್ವಾಕಾಂಕ್ಷೆಯ ‘ಚಾಲೆಂಜರ್’ ಬಾಹ್ಯಾಕಾಶ ನೌಕೆ ತಾಂತ್ರಿಕ ಕಾರಣಗಳಿಂದ ವಿಸ್ಫೋಟಗೊಂಡು ಜನತೆ ಭಯಗೊಳ್ಳುವಂತೆ ಮಾಡಿತು. ಕೋಟ್ಯಂತರ ಡಾಲರ್‌ಗಳ ನಷ್ಟ ಅನುಭವಿಸಿದ ಅಮೆರಿಕಾ ತನ್ನ ಪ್ರಮುಖ ಏಳು ವಿಜ್ಞಾನಿಗಳನ್ನು ಕಳೆದುಕೊಂಡಿತು. ಆದರೂ ಇದರಿಂದ ವಿಚಲಿತಗೊಳ್ಳದೇ ಮುನ್ನುಗ್ಗುತ್ತಿದ್ದುದು ಅಮೆರಿಕಾದ ಆರ್ಥಿಕ ವ್ಯವಸ್ಥೆಗೆ ಇರುವ ಸ್ಥಿರತೆಯನ್ನು ಸಾಬೀತುಪಡಿಸಿತು.

ಆಂತರಿಕ ಆತಂಕಗಳು ಎಷ್ಟೇ ಪ್ರಮಾಣದಲ್ಲಿ ಸಂಭವಿಸಿದರೂ ಅಮೆರಿಕಾದ ಆಡಳಿತ ಅದನ್ನು ಅಷ್ಟೇ ವೇಗವಾಗಿ ಪರಿಹರಿಸುವ ಪ್ರಯತ್ನಗಳಲ್ಲಿ ತೊಡಗುತ್ತಿತ್ತು. ಆದರೆ ವಿದೇಶ ವ್ಯವಹಾರಗಳಲ್ಲಿ ಅದು ನಿರೀಕ್ಷಿಸಿದಂತೆ ಕಾರ್ಯಗಳಾಗದೇ ಅದರ ಲೆಕ್ಕಾಚಾರ ಹೆಚ್ಚಿನಾಂಶ ತಲೆಕೆಳಗಾಗುತ್ತಿದ್ದವು. ಆಪ್ತಮಿತ್ರ ಇಸ್ರೇಲ್‌ನ್ನನ್ನು ಎಲ್ಲ ಕಾಲಕ್ಕೂ ಸದಾ ಬೆಂಬಲಿಸಿದ್ದರಿಂದ ಅರಬ್ ರಾಷ್ಟ್ರಗಳು ಹಾಗೂ ಇಸ್ಲಾಂ ಮೌಲ್ವಿಗಳು ಅಮೆರಿಕಾದ ಅಶಾಂತಿಯನ್ನು ಹಾಗೂ ಕೇಡನ್ನು ಬಯಸುತ್ತಿದ್ದರು. ಹೀಗಾಗಿ ಕೆಲವು ಸಂಘಟನೆಗಳು ಭಯೋತ್ಪಾದಕ ಕೃತ್ಯಗಳ ಮೂಲಕ ಜಾಗತಿಕ ವಲಯದಲ್ಲಿ ಅಮೆರಿಕಾನ್‌ರನ್ನು ನಾಶಪಡಿಸುವ ಗುರಿ ಇಟ್ಟುಕೊಂಡು ಕುಕೃತ್ಯಗಳನ್ನು ನಡೆಸಲು ಸಂಘಟಿತಗೊಂಡವು. ಇದರಿಂದ ರೇಗನ್ ಕಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆತಂಕಗಳು ಸಂಭವಿಸಿದವು. ಲಿಬಿಯಾ, ಸಿರಿಯಾ ಹಾಗೂ ಪ್ಯಾಲೆಸ್ಟೈನ್ ಬಂಡುಕೋರರು ಅಮೆರಿಕಾವನ್ನು ನಾಶಪಡಿಸುವ ಮುಖ್ಯಗುರಿ ಇಟ್ಟುಕೊಂಡು ಪ್ರತಿಯಾಗಿ ಹೋರಾಟ ಪ್ರಾರಂಭಿಸಿದರು. ಇವರು ಕೈಗೊಂಡ ದೃಷ್ಕೃತ್ಯ ಗಳಿಂದ ಅಮೆರಿಕಾದ ಅನೇಕ ವಿಮಾನಗಳು ಆಸ್ಫೋಟಿಸಿದವು. ಸಭೆ ಸಮಾರಂಭಗಳಲ್ಲಿ ಅಮೆರಿಕಾವನ್ನು ಗುರಿಯಾಗಿಟ್ಟುಕೊಂಡು ಬಾಂಬು ಸಿಡಿಸಿದರು. ಇಂಥ ಘಟನೆಗಳು ಅಮೆರಿಕಾವನ್ನು ಹೆಚ್ಚಿನ ಚಿಂತೆಗೀಡು ಮಾಡಿದವು. ಈ ಸಿಟ್ಟಿನಿಂದ ರೇಗನ್ ಆಡಳಿತ ತನ್ನ ವಿರುದ್ಧ ತಂತ್ರ ಹೂಡುವ ಕೃತ್ಯಗಳಿಗೆ ಎಚ್ಚರಿಕೆಯ ರೂಪದಲ್ಲಿ ಲಿಬಿಯಾದ ಮೇಲೆ ವೈಮಾನಿಕ ದಾಳಿಯನ್ನು ನಡೆಸಿದ್ದುಂಟು. ಇದೇ ಕಾಲಕ್ಕೆ ಅಮೆರಿಕಾದ ಅಧ್ಯಕ್ಷರುಗಳಾದ ಎಫ್.ಟಿ.ಆರ್. ಹಾಗೂ ಕೆನಡಿ ಕಾಲದಲ್ಲಿ ದಕ್ಷಿಣ ಅಮೆರಿಕಾ ಖಂಡ ರಾಷ್ಟ್ರಗಳೊಂದಿಗೆ ಅಮೆರಿಕಾ ಹೊಂದಿದ ಸಂಬಂಧಗಳು ಸಹ ನಂತರದ ದಿನಗಳಲ್ಲಿ ಕೆಡುತ್ತಾ ಹೋದವು. ನಿಕರಾಗುವ, ಎಲ್‌ಸಲ್ವೋಡಾರ, ಪನಾಮಾ, ಅರ್ಜೆಂಟೈನಾ ಹಾಗೂ ಹಾಂಡೂರಾಸ್‌ಗಳಲ್ಲಿ ಅಮೆರಿಕಾ ವಿರೋಧಿ ದಂಗೆಗಳು ಸ್ಥಳೀಯ ಸರಕಾರಗಳನ್ನು ಚಿಂತೆಗೀಡು ಮಾಡಿದವು. ಅಂಥ ದಂಗೆಗಳನ್ನು ಅಡಗಿಸಲು ಅಮೆರಿಕಾದ ಸಿ.ಐ.ಎ ಹಾಗೂ ಗುಪ್ತಚಾರ ಸಂಸ್ಥೆಗಳು ಕೋಟ್ಯಂತರ ಡಾಲರ್ ವ್ಯಯಿಸಿದವು.

ತನ್ನ ವಿರುದ್ಧ ಕಟುಟೀಕೆ ಮಾಡುತ್ತಿದ್ದ ನಿಕರಾಗುವಾ ಸರಕಾರದ ವಿರುದ್ಧವಾಗಿ ನಿಕರಾಗುವಾದ ಕಾಂಟ್ರಾ ಹೋರಾಟಗಾರರಿಗೆ ರೇಗನ್ ಆಡಳಿತ ೧೦೦ ಮಿಲಿಯನ್ ಡಾಲರ್‌ಗಳ ಸಹಾಯ ನೀಡಿತು. ಆದರೆ ಇರಾನ್-ಇರಾಕ್ ಜೊತೆಗೆ ಅಮೆರಿಕಾ ಅನುಸರಿಸು ತ್ತಿದ್ದ ನೀತಿ ನಿಯಮಗಳು ಬಹಿರಂಗಗೊಂಡು ರೇಗನ್ ಆಡಳಿತ ಹೊಸ ವಿವಾದಕ್ಕೆ ಸಿಲುಕಿತು. ಇರಾಕ್ ದೇಶಕ್ಕೆ ಬಹಿರಂಗ ಬೆಂಬಲ ನೀಡುವುದರ ಮೂಲಕ ಇರಾನ್ ದೇಶದ ಇಸ್ಲಾಂ ಬೆಂಬಲಿತ ಮೂಲಭೂತವಾದವನ್ನು ಅಮೆರಿಕಾ ಸಹಿಸುವುದಿಲ್ಲ ಎಂದು ಹೇಳಿ ಕಾಂಗ್ರೆಸ್‌ನಿಂದ ಅಪಾರ ಬೆಂಬಲ ಪಡೆದಿತ್ತು. ಆದರೆ ಒಳಗೊಳಗೆ ಶತ್ರು ರಾಷ್ಟ್ರ ಇರಾನಿಗೆ ಇಸ್ರೇಲ್ ಮೂಲಕ ಶಸ್ತ್ರಾಸ್ತ್ರಗಳನ್ನು ಪೂರೈಸಿ ಅಪಾರ ಲಾಭವನ್ನು ಗಳಿಸುತ್ತಿತ್ತು. ಹಾಗೂ ಈ ಲಾಭದ ಹಣವನ್ನು ನಿಕರಾಗುವಾದಲ್ಲಿನ ಕಾಂಟ್ರಾ ದಂಗೆಕೋರರಿಗೆ ಗುಪ್ತವಾಗಿ ನೀಡುತ್ತಿತ್ತು. ಇಂಥ ತೆರೆಮರೆಯ ಆಟವನ್ನು ಪತ್ರಿಕೆಗಳು ಬಹಿರಂಗಪಡಿಸಿದಾಗ ಅಮೆರಿಕಾ ದಲ್ಲಿ ವಿವಾದ ಗಾಳಿ ಜೋರಾಗಿ ಹಬ್ಬಿತು. ರೇಗನ್ ಒಳಗೊಂಡಂತೆ ಅಮೆರಿಕಾದ ಆಡಳಿತಕ್ಕೆ ಇವೆಲ್ಲ ತಿಳಿದಿದ್ದರೂ ತಿಳಿಯದ ಹಾಗೆ ಇರುವುದನ್ನು ಮಾಧ್ಯಮಗಳು ಬಹಿರಂಗಪಡಿಸಿದವು. ಆದರೆ ಅಧ್ಯಕ್ಷ ರೇಗನ್ ನೇರವಾಗಿ  ಈ ಹಗರಣದಲ್ಲಿ ಭಾಗವಹಿಸಿರುವ ಸಾಕ್ಷ್ಯಾಧಾರಗಳು ಸಿಗಲಿಲ್ಲ. ಸಾಕ್ಷಿಗಳ ಕೊರತೆಯಿಂದ ವಿರೋಧಿಗಳು ಮಾಡಿದ ದೋಷಾರೋಪಣೆಯಿಂದ ಅಧ್ಯಕ್ಷ ರೇಗನ್ ತುಂಬಾ ಪ್ರಯಾಸದಿಂದ ಪಾರಾದ. ಈ ವಿವಾದವನ್ನು ಇರಾನ್-ಕಾಂಟ್ರಾ ವಿವಾದವೆಂದು ಕರೆಯುತ್ತಾರೆ. ಇದರಲ್ಲಿ ಅಮೆರಿಕಾದ ಗುಪ್ತಚರ ಇಲಾಖೆ ಸಿ.ಐ.ಎ. ಹಾಗೂ ರಕ್ಷಣಾ ಸಿಬ್ಬಂದಿ ಪಾಲ್ಗೊಂಡಿತ್ತು. ಆದರೆ ಇದನ್ನು ಅಮೆರಿಕಾ ಆಡಳಿತ ಕೊನೆಗೂ ಬಹಿರಂಗಪಡಿಸಲಿಲ್ಲ.

ಅಮೆರಿಕಾದ ಪರಮಾಪ್ತ ರಾಷ್ಟ್ರವಾಗಿದ್ದ ಫಿಲಿಫೈನ್ಸ್‌ನ ಅಧ್ಯಕ್ಷ ಫರ್ಡಿನಾಂಡೊ ಮಾರ್ಕೋಸ್ ತನ್ನ ಸರ್ವಾಧಿಕಾರವನ್ನು ಬಲಗೊಳಿಸಲು ರಾಜಕೀಯ ಹತ್ಯೆಗಳನ್ನು ಮಾಡಲಾರಂಭಿಸಿದನು. ಆದರೆ ಅಮೆರಿಕಾ ಇದನ್ನು ಸಹಿಸಲಿಲ್ಲ. ಯಾವುದೇ ತಂತ್ರವಾದರೂ ಸರಿ ಈತನ ಆಡಳಿತವನ್ನು ಕಿತ್ತೊಗೆಯಲು ಒಳಗೊಳಗೆ ಕೋರಾಜಾನ್ ಅಕಿನೋಳ ನೇತೃತ್ವದಲ್ಲಿ ನಡೆದ ಆಂದೋಳನಕ್ಕೆ ಮಾರ್ಕೋಸನ ವಿರುದ್ಧವಾಗಿ ಅಮೆರಿಕಾ ಸಹಾಯ ಘೋಷಿಸಿತು. ಅಮೆರಿಕಾದ ಒತ್ತಾಯಕ್ಕೆ ಮಣಿದು ಮಾರ್ಕೋಸ್ ಚುನಾವಣೆ ಸಾರಿದ. ಆದರೆ ಅವು ಮಿಲಿಟರಿ ಆಡಳಿತದ ನೆರಳಿನಲ್ಲಿ ನಡೆದಿದ್ದರಿಂದ ಗೆಲುವು ಅವನದೇ ಆಯಿತು. ಇದರಿಂದ ಜನ ಮತ್ತೆ ದಂಗೆ ಎದ್ದರು. ಅಲ್ಲದೇ ಈತನನ್ನು ಸಹಿಸದೆ ಸೈನ್ಯದಲ್ಲಿ ಅಮೆರಿಕಾದ ಕುಮ್ಮಕ್ಕಿನಿಂದ  ಕಲಹ ಉಂಟಾಗಿ ಅಧಿಕಾರಿಗಳು ಮಾರ್ಕೋಸನ ವಿರುದ್ಧ ನಿಂತರು. ಇದರಿಂದ ಬೆದರಿದ ಮಾರ್ಕೋಸ್ ದೇಶ ಬಿಟ್ಟು ಹವಾಯಿ ದ್ವೀಪಗಳ ಕಡೆಗೆ ಪಲಾಯನಗೈದ. ಇದರಿಂದ ಆತನ ವಿಲಾಸಿ ಜೀವನಕ್ಕೆ ತೆರೆಬಿದ್ದಂತಾಯಿತು. ಅಮೆರಿಕಾ ಕೈಬೊಂಬೆಯಾಗಿದ್ದ ಅಕಿನೋಳ ನೇತೃತ್ವದಲ್ಲಿ ಸರಕಾರ ರಚನೆಯಾಯಿತು.

ರಷ್ಯಾದ ಛಿದ್ರೀಕರಣ

೧೯೯೦ರ ದಶಕದಲ್ಲಿ ಸೋವಿಯತ್ ರಷ್ಯಾದಲ್ಲಿ ಸುಧಾರಣಾವಾದಿ ಮಿಕಾಯೆಲ್ ಗೊರ್ಬಚೆವ್ ಅಧಿಕಾರಕ್ಕೆ ಬಂದನು. ಪ್ರಗತಿಯ ಪ್ರತಿಪಾದಕನಾಗಿದ್ದ ಈತನು ತನ್ನ ಪೆರೆಸ್ತ್ರೊವಿಕಾ ಹಾಗೂ ಗ್ಲಾನ್‌ನೊಸ್ತೊ ನೀತಿಗಳಿಂದ ಕಮ್ಯುನಿಸಂ ವ್ಯವಸ್ಥೆಯನ್ನು ಸಡಿಲು ಗೊಳಿಸಿ ಹಲವು ದಶಕಗಳಿಂದ ಕೂಡಿದ್ದ ಒಕ್ಕೂಟ ರಾಷ್ಟ್ರಗಳು ಸ್ವತಂತ್ರವಾಗಬಹುದೆಂದು ಒಪ್ಪಿಗೆ ನೀಡಿದನು. ತನ್ನ ಆಂತರಿಕ ಸಮಸ್ಯೆಗಳಿಂದಲೇ ಗೊಂದಲದ ಗೂಡಾಗಿದ್ದ ಯು.ಎಸ್.ಎಸ್.ಆರ್ ಅನ್ನು ವಿಶ್ವದ ಬಂಡವಾಳಶಾಹಿ ಪ್ರಭುತ್ವಗಳು ಮುಗಿಸಿ ಹಾಕುವ ಸಂಚು ರೂಪಿಸಿದವು. ರೇಗನ್ ಆಡಳಿತಾವಧಿಯಲ್ಲಿ ಅಮೆರಿಕಾ ಪರೋಕ್ಷವಾಗಿ ಕೊಡುತ್ತಿದ್ದ ಏಟುಗಳು ರಷ್ಯಾ ಒಕ್ಕೂಟವು ಮೇಲೇಳದಂತೆ ಮಾಡಿತು. ಶಾಂತಿ ಒಪ್ಪಂದಗಳ ಮೂಲಕ ಅನೇಕ ಶೃಂಗಸಭೆಗಳನ್ನು ಎರಡು ದೇಶಗಳು ನಡೆಸಿದರೂ ಅಮೆರಿಕಾ ತನ್ನ ಹಟದಿಂದ ಹಿಂದೆ ಸರಿಯಲಿಲ್ಲ. ಅಂತರಿಕ್ಷದ ಯುದ್ಧಕ್ಕೆ(ಸ್ಟಾರ್ ವಾರ್ಸ್‌) ಯು.ಎಸ್.ಎಸ್.ಆರ್ ಅನ್ನು ಪುಸಲಾಯಿಸಿ ಅಣುಕಿಸಲಾರಂಭಿಸಿತು. ಆದರೆ ಸಂಪೂರ್ಣವಾಗಿ ಗಾಯಗೊಂಡು ಮೇಲೇಳೆದ ಸೋವಿಯತ್ ಯೂನಿಯನ್ ಯುದ್ಧಕ್ಕಿಂತ ಮುಂಚೆ ತನ್ನ ಆಯುಧಗಳನ್ನು ಕೆಳಗಿಟ್ಟು ಶರಣಾಗತವಾಯಿತು. ಸಾಲ್ಟ್ I ಹಾಗೂ II ಒಪ್ಪಂದಗಳು(ಸಟ್ಯೆಾಟೆಜಿಕ್ ಆರ್ಮ್ ಲಿಮಿಟೇಶನ್ಸ್ ಟ್ರಿಟಿ-ಶಸ್ತ್ರಾಸ್ತ್ರಗಳನ್ನು ಕಡಿಮೆ ಮಾಡುವ ಒಪ್ಪಂದ) ಮಿಖಾಯೆಲ್ ಗೋರ್ಬಚೆವ್ ಆಡಳಿತಾವಧಿಯಲ್ಲಿ ಸೋವಿಯತ್ ರಷ್ಯಾ ಸಂಪೂರ್ಣವಾಗಿ ವಿಘಟನೆಯ ಕಡೆಗೆ ಮುಖ ಮಾಡಿತು. ಅದರ ಛಿದ್ರೀಕರಣಕ್ಕೆ ಬೇಕಾದ ಎಲ್ಲ ತಂತ್ರಗಳನ್ನು ಅಮೆರಿಕಾ ಹೆಣೆದಿತ್ತು. ಅದರ ಅವನತಿ ಗೊತ್ತಿದ್ದರೂ ಸೋವಿಯತ್ ರಷ್ಯಾದ ಕ್ಷಿಪಣಿಗಳ ಬಗೆಗೆ ಭಾರಿ ಭಯ ಒಳಗೊಳಗೆ ಅಮೆರಿಕಾಕ್ಕೆ ಕಾಡುತ್ತಿತ್ತು. ಇದನ್ನು ಉಪಶಮನಗೊಳಿಸಲು ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು ಸೋವಿಯತ್ ರಷ್ಯಾ ನಾಶ ಮಾಡದೇ ಅಥವಾ ಅವುಗಳ ನಿರ್ಮಾಣದ ಪ್ರಮಾಣ ತಗ್ಗಿಸದೇ ತಾನು ರಷ್ಯಾದ ಜೊತೆಗೆ ಯಾವ ಒಪ್ಪಂದಗಳನ್ನು ಮಾಡಿಕೊಳ್ಳಲು ಸಾಧ್ಯವಿಲ್ಲವೆಂದು ರೇಗನ್ ಆಡಳಿತ ಪಟ್ಟು ಹಿಡಿಯಿತು. ಇದರ ಪರಿಣಾಮದಿಂದ ಅಪಾಯಕಾರಿ ಶಸ್ತ್ರಾಸ್ತ್ರಗಳ ನಾಶ ಅಥವಾ ಕಡಿಮೆಗೊಳಿಸುವ ಕ್ರಮವನ್ನು ಸಾಲ್ಟ್ ಒಪ್ಪಂದ ಎಂದು ಕರೆಯಲಾಗುತ್ತದೆ. ಸೋವಿಯತ್ ಒಕ್ಕೂಟ ವಿಘಟನೆ ಯಾಗುವವರೆಗೂ ಅಮೆರಿಕಾ ಇಂತಹ ಎರಡು ಒಪ್ಪಂದಗಳನ್ನು ಮಾಡಿಕೊಂಡು ಮುಂದಿನ ದಿನಗಳಲ್ಲಿ ಬಾಹ್ಯಾಕಾಶದ ನಡೆಯಬಹುದಾಗಿದ್ದ ಅಪಾಯಕಾರಿ ಯುದ್ಧವನ್ನು ತಡೆಯುವ ಪ್ರಯತ್ನ ಈ ಒಪ್ಪಂದಗಳಲ್ಲಿ ಅಡಗಿತ್ತು)  ನಡೆದು ಎರಡು ದೇಶಗಳು ಕೆಲವು ಅಪಾಯಕಾರಿ ಕ್ಷಿಪಣಿಗಳನ್ನು ನಾಶಪಡಿಸಿದವು. ಅಲ್ಲದೇ ಅಫ್ಘಾನಿಸ್ತಾನದಲ್ಲಿದ್ದ ಸೋವಿಯಟ್ ಒಕ್ಕೂಟದ ಪಡೆಗಳನ್ನು ಸಂಪೂರ್ಣವಾಗಿ ಹಿಂದಕ್ಕೆ ಪಡೆಯಲು ಅಮೆರಿಕಾ ಒತ್ತಾಯಿಸಿ ಯಶಸ್ವಿಯಾಯಿತು. ಈ ವೇಳೆಗಾಗಲೇ ರಷ್ಯಾ ಸಂಪೂರ್ಣವಾಗಿ ಕುಸಿದು ಹೋಗಿ ಒಡೆಯಲಾರಂಭಿಸಿತು. ರಷ್ಯಾವನ್ನು ಅಸ್ಥಿರಗೊಳಿಸುವಲ್ಲಿ ರೇಗನ್ ಆಡಳಿತದ ಕೊಡುಗೆಗಳು ಬಹಳಷ್ಟಿವೆ ಎಂದು ಚರಿತ್ರೆಕಾರರು ಅಭಿಪ್ರಾಯಿಸಿದ್ದಾರೆ. ತನ್ನ ಎಂಟು ವರ್ಷದ ಆಡಳಿತಾವಧಿಯಲ್ಲಿ ರೋನಾಲ್ಡ್ ರೇಗನ್ ಅಮೆರಿಕಾ ದೇಶವನ್ನು ಬಲವಾಗಿ ಕಟ್ಟಿದ. ಭಾರತದ ಬಗೆಗೆ ವಿಶೇಷ ಆಸಕ್ತಿ ವಹಿಸಿ ಹಲವು ಸಹಾಯ ಸಹಕಾರಗಳನ್ನು ಘೋಷಿಸಿದ. ಈತನ ನಂತರ ಮುಂದಿನ ಚುನಾವಣೆಯಲ್ಲಿ ಉಪಾಧ್ಯಕ್ಷ ಜಾರ್ಜ್ ಬುಷ್ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಡೆಮೊಕ್ರಾಟಿಕ್ ಪಕ್ಷದ ಅಭ್ಯರ್ಥಿಯಾಗಿ ಡುಕಾಕಿ ಸ್ಪರ್ಧೆಗಿಳಿದನು. ರೇಗನ್ ಆಡಳಿತದಲ್ಲಿ ಜಾಗತಿಕ ಏಕಮೇವ ಶಕ್ತಿಯಾಗಿ ಹೊರಹೊಮ್ಮಿದ ಅಮೆರಿಕಾದ ಯಶಸ್ಸು ಮಹಾಚುನಾವಣೆಯಲ್ಲಿ ರಿಪಬ್ಲಿಕನ್‌ರಿಗೆ ಅಂತಿಮವಾಗಿ ಜಯದ ಮೂಲಕ ಫಲಪ್ರದವಾಯಿತು. ಜಾರ್ಜ್ ಬುಷ್‌ನ ಹೆಚ್ಚಿನ ಅಂತರದಿಂದ ಗೆಲುವು ಪಡೆದು ಅಧ್ಯಕ್ಷನಾದ.

ಏಕಮೇವ ಜಾಗತಿಕ ಶಕ್ತಿಯಾಗಿ ಬೆಳೆದ ಅಮೆರಿಕಾ

ಶ್ರೀಮಂತ ವರ್ಗದಲ್ಲಿ ಜನಿಸಿದ ಜಾರ್ಜ್ ವಾಕರ್ ಬುಷ್ ಅಮೆರಿಕಾದ ೪೧ನೇ ಅಧ್ಯಕ್ಷನಾಗಿ ರಿಪಬ್ಲಿಕನ್ ಪಕ್ಷದ ಉಮೇದುವಾರಿಕೆಯಲ್ಲಿ ಆಯ್ಕೆ ಆದನು. ಅಮೆರಿಕಾ ದೇಶವು ಹಲವಾರು ದಶಕಗಳಿಂದ ತನ್ನ ಮೂಲ ಮಂತ್ರವಾಗಿ ಜೋಪಾನ ಮಾಡಿಟ್ಟುಕೊಂಡು ಸಾಕಿದ್ದ ‘ಉದಾರತೆ’ಯ ನೀತಿಯನ್ನು ಉದಾಸೀನ ಮಾಡಿ ಕೈಬಿಟ್ಟನು. ನನ್ನ ದೇಶದಲ್ಲಿ ಶಾಂತಿ ಹಾಗೂ ಸಮೃದ್ಧತೆಯನ್ನು ತರಲು ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುವುದು ಮಾತ್ರ ನನಗಿರುವ ಮುಖ್ಯಗುರಿ ಎಂದು ಸಾರಿದನು. ಹೆಚ್ಚಿನ ವಲಸೆಯನ್ನು ತಡೆಗಟ್ಟಿ ತನ್ನ ದೇಶದಿಂದ ಹೋಗುತ್ತಿದ್ದ ದೊಡ್ಡ ಪ್ರಮಾಣದ ಲಾಭಾಂಶವನ್ನು ತನ್ನಲ್ಲಿ ಉಳಿಸಿಕೊಳ್ಳುವ ಹೆಜ್ಜೆ ಇಟ್ಟನು. ಅಧ್ಯಕ್ಷನಾಗುವ ಮೊದಲು ಉನ್ನತ ಶಿಕ್ಷಣ ಪೂರೈಸಿ ನೌಕಾದಳವನ್ನು ಸೇರಿಕೊಂಡಿದ್ದ ಬುಷ್ ವಿಶ್ವಸಂಸ್ಥೆಯಲ್ಲಿ ಅಮೆರಿಕಾದ ರಾಯಭಾರಿಯಾಗಿ ಹಾಗೂ ಸಿ.ಐ.ಎ ನಿರ್ದೇಶಕನಾಗಿಯೂ ಸೇವೆಗೈದಿದ್ದ. ೪೦ನೇ ಅಧ್ಯಕ್ಷನಾಗಿದ್ದ ರೇಗನ್‌ನ ಆಡಳಿತಾವಧಿಯಲ್ಲಿ ಉಪಾಧ್ಯಕ್ಷನಾಗಿ ಎಂಟು ವರ್ಷಗಳ ರಾಜಕೀಯ ಅನುಭವವನ್ನು ಸಹ ಪಡೆದಿದ್ದ. ಅಮೆರಿಕಾ ದೇಶದ ಆಡಳಿತದ ಎಲ್ಲ ಮಗ್ಗುಲುಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದ ಜಾರ್ಜ್ ಬುಷ್, ಡಿಕ್‌ಚೇನಿ, ಜೇಮ್ಸ್ ಬೇಕರ್ ಹಾಗೂ ನಿಕೊಲಾಸ್ ಬ್ರೇಡಿಯಂಥ ನುರಿತ ರಾಜಕೀಯ ಧುರೀಣರು ತನ್ನ ಆಡಳಿತದಲ್ಲಿ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಳ್ಳುವಂತೆ ಮಾಡಿದನು. ಎಲ್ಲಕ್ಕಿಂತ ಮುಖ್ಯವಾಗಿ ಅಧ್ಯಕ್ಷ ಜಾರ್ಜ್ ಬುಷ್‌ನ ಹೆಂಡತಿ ಬಾರ್ಬರಾ ಪ್ರೈಸ್ ಅಪ್ರತ್ಯಕ್ಷವಾಗಿ ಅತ್ಯಂತ ಮಹತ್ವದ ಪಾತ್ರವನ್ನು ಈತನ ಆಡಳಿತ ಅವಧಿಯಲ್ಲಿ ವಹಿಸಿದಳು.

ಅಧಿಕಾರ ವಹಿಸಿಕೊಂಡ ಪ್ರಾರಂಭದ ದಿನಗಳಲ್ಲಿ ಅಮೆರಿಕಾದ ಆರ್ಥಿಕ ಸ್ಥಿತಿ ಹದಗೆಟ್ಟಿತ್ತು. ಇದಕ್ಕೆ ಮುಖ್ಯ ಕಾರಣಗಳೆಂದರೆ ರೇಗನ್ ಆಡಳಿತದಲ್ಲಿ ಅಮೆರಿಕಾ ತೋರಿದ ತೀವ್ರತರವಾದ ಅಂತಾರಾಷ್ಟ್ರೀಯ ಹಸ್ತಕ್ಷೇಪಗಳು. ಇದರಿಂದ ಒಳಾಡಳಿತ ಪೂರ್ಣವಾಗಿ ಕುಸಿದಿತ್ತು. ನೂರಾರು ಬ್ಯಾಂಕ್‌ಗಳು ದಿವಾಳಿಯಾಗಿದ್ದವು. ಇದನ್ನು ತಡೆಗಟ್ಟಲು ‘‘ರೆಸುಲೇಷನ್ ಟ್ರಸ್ಟ್’’ ಎಂಬ ಕಂಪನಿಯನ್ನು ಪ್ರಾರಂಭಿಸಿ ಮುಚ್ಚಿದ ಬ್ಯಾಂಕುಗಳಿಗೆ ಆಸರೆಯಾಗಿ ನಿಲ್ಲುವಂತಹ ಕಾರ್ಯ ಮಾಡಿದ. ೧೯೯೦ರ ಹೊತ್ತಿಗೆ ಖೋತಾ ಬಜೆಟ್ ಮಂಡಿಸಿ ಅಮೆರಿಕಾದ ಆರ್ಥಿಕ ದುಸ್ಥಿತಿ ನಿವಾರಣೆಗೆ ಕಾಂಗ್ರೆಸಿನಿಂದ ಅನುಕಂಪದ ಒಪ್ಪಿಗೆ ಪಡೆದು ಫೆಡರಲ್ ಬ್ಯಾಂಕಿನಿಂದ ಬಿಲಿಯನ್ ಡಾಲರ್ ಹಣದ ಸಹಾಯವನ್ನು ದಕ್ಕಿಸಿಕೊಂಡನು. ಸಾಂಪ್ರದಾಯಿಕ ಪರಂಪರೆಯಲ್ಲಿ ನಂಬಿಕೆ ಇಟ್ಟಿದ್ದ ಬುಷ್ ಸಾಮಾಜಿಕ ನ್ಯಾಯ ಅನುಷ್ಠಾನದಲ್ಲಿ ಸರಕಾರಕ್ಕಿಂತ ಸಾಮಾಜಿಕ ಸಂಸ್ಥೆಗಳು ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳಬೇಕೆಂಬ ಯೋಜನೆಯನ್ನು ರೂಪಿಸಿದನು. ಮಹಿಳೆಯರು ಒತ್ತಾಯ ಪೂರ್ವಕವಾಗಿ ಮಾಡಿಕೊಳ್ಳುವ ಗರ್ಭಪಾತಗಳು ಕಾನೂನುಬಾಹಿರವಾದವೆೆಂದು ಘೋಷಿಸಿದನು. ಅಮೆರಿಕಾದಲ್ಲಿ ಮಹಾಮಾರಿಯಾಗಿ ಬೆಳೆಯುತ್ತಿದ್ದ ಏಡ್ಸ್ ರೋಗವನ್ನು ತಡೆಗಟ್ಟಲು ವಿಶ್ವಶ್ರೇಷ್ಠ ಬ್ಯಾಸ್ಕೆಟ್‌ಬಾಲ್ ಕ್ರೀಡಾಪಟು ಮ್ಯಾಜಿಕ್ ಜಾನ್‌ಸನ್‌ನನ್ನು ಏಡ್ಸ್ ಪ್ರತಿಬಂಧಕ ಆಯೋಗದ ಅಧ್ಯಕ್ಷನನ್ನಾಗಿ ನೇಮಿಸಿದನು. ಸಂಪ್ರದಾಯನಿಷ್ಠನಾದ ಬುಷ್ ಅಲ್ಪಸಂಖ್ಯಾತರಿಗೆ ಹಾಗೂ ಕರಿಯರಿಗೆ ಕೊಡುವ ವಿಶೇಷ ಅಧಿಕಾರದ ಮಸೂದೆಯನ್ನು ನಯವಾಗಿ ತಿರಸ್ಕರಿಸಿ ಉಪಾಯವಾಗಿ ಬಿಳಿಯರಿಗೆ ಅನುಕೂಲವಾಗುವಂತೆ  ಮಾಡಿಕೊಟ್ಟ. ಅಲ್ಲದೇ ಇಂಥ ತಾರತಮ್ಯಗಳಿಗಾಗಿ ನ್ಯಾಯಾಲಯಗಳಿಂದ ಛೀಮಾರಿ ಹಾಕಿಸಿಕೊಳ್ಳಬೇಕಾದ ಪ್ರಸಂಗಗಳಿಂದ ಉಪಾಯವಾಗಿ ತಪ್ಪಿಸಿಕೊಂಡ ಬುಷ್ ಆಡಳಿತವು ಕಾನೂನುಗಳ ಮೂಲಕ ಶಿಕ್ಷಿಸಬೇಕಾದ ಸಂಪ್ರದಾಯಬದ್ಧ ವರ್ಣದ್ವೇಷಿಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡ ಲಾಯಿತೇ ವಿನಃ ಅವರನ್ನು ತಹಬಂದಿಗೆ ತರುವ ಪ್ರಯತ್ನ ಮಾಡಲಿಲ್ಲ. ಇದರಿಂದ ನ್ಯಾಯಾಲಯ ಕೊಡುವ ಶಿಕ್ಷೆಯಿಂದಲೂ ಸಹ ವರ್ಣದ್ವೇಷಿಗಳು  ರಕ್ಷಿತವಾದರು.  ಸಂಪ್ರದಾಯಬದ್ಧರ ವಿರುದ್ಧವಾಗಿ ನಡೆಯುತ್ತಿದ್ದ ಚರ್ಚೆಗಳು ಒಂದು ವೇಳೆ ಕಾನೂನು ಗಳಾಗಿದ್ದರೆ ಅಮೆರಿಕಾದ ಇತಿಹಾಸ ಚಿತ್ರಣ ಭಾರೀ ಪ್ರಮಾಣದಲ್ಲಿ ಬದಲಾಗುವ ಸಾಧ್ಯತೆಗಳಿದ್ದವು. ಬುಷ್‌ಗಿದ್ದ ‘ವಿಟೋ’ ಅಧಿಕಾರದಿಂದ ಉದ್ದಿಮೆದಾರರನ್ನು, ಬಂಡವಾಳ ಗಾರರನ್ನು ಹಾಗೂ ಮಾಲೀಕ ವರ್ಗಗಳನ್ನು ರಕ್ಷಿಸಿದ. ಈತನ ಆಡಳಿತಾವಧಿಯಲ್ಲಿ ಎರಡು ಪ್ರಮುಖ ಕಾಯ್ದೆಗಳನ್ನು ಜಾರಿಗೊಳಿಸಲಾಯಿತು. ವಲಸೆ ನಿಯಂತ್ರಣ ಕಾಯ್ದೆಯಿಂದ ತನ್ನ ಪೂರ್ವಜರ ಸ್ಥಳಗಳಾದ ಯುರೋಪ್ ದೇಶಗಳಿಂದ ಅಲ್ಲಿನ ಹೆಚ್ಚಿನ ಸಂಖ್ಯೆಯೂ ಅಮೆರಿಕಾಕ್ಕೆ ಬರುವುದನ್ನು ಪ್ರೋ ಇದೇ ವೇಳೆಗೆ ಏಷ್ಯ ಮತ್ತು ಆಫ್ರಿಕ ರಾಷ್ಟ್ರಗಳಿಂದ ಬರುವ ಹೆಚ್ಚಿನ ವಲಸೆಗಾರರನ್ನು ನಿಯಂತ್ರಿಸಿತು. ಆಮ್ಲೀಯ ಮಳೆ(ಆಸಿಡ್ ರೈನ್)ಯನ್ನು ತಡೆಯಲು ವಾಯುಮಾಲಿನ್ಯ ನಿಯಂತ್ರಣ ಕಾಯ್ದೆಯನ್ನು ತರಲಾಯಿತು. ಓಜೋನ್ ಪದರವನ್ನು ಧಕ್ಕೆಗೊಳಿಸುವ ಹಾಗೂ ಶುದ್ಧವಾದ ಗಾಳಿಯನ್ನು ಸಂರಕ್ಷಿಸಲು ವಾಹನ ಹಾಗೂ ಇತರ ವಿಲಾಸಿ ವಸ್ತುಗಳು ಸೂಸುವ ಹೊಗೆಯನ್ನು (ಸಲ್ಫರ್ ಡೈಅಕ್ಸೈಡ್) ನಿಯಂತ್ರಿಸಲು ಕಟ್ಟುನಿಟ್ಟಿನ ಕಾಯ್ದೆಗಳನ್ನು ಬುಷ್ ಆಡಳಿತದಲ್ಲಿ ತರಲಾಯಿತು. ಇಂಥ ನಿಯಂತ್ರಣಗಳನ್ನು ಖಾಸಗಿ ಕಂಪನಿಗಳ ಮೇಲೂ ಹೇರಲಾಯಿತು.

ಆಂತರಿಕವಾಗಿ ಬುಷ್ ಆಡಳಿತದಲ್ಲಿ ತೆಗೆದುಕೊಂಡ ಗರ್ಭಪಾತದ ಬಗೆಗಿನ ನ್ಯಾಯತೀರ್ಮಾನಗಳು ಹೆಚ್ಚಿನ ಮಹತ್ವ ಪಡೆದವು. ಗರ್ಭಪಾತ ಮಾಡಿಕೊಳ್ಳುವ ಹಾಗೂ ತಿರಸ್ಕರಿಸುವ ಸ್ವಾತಂತ್ರ್ಯವನ್ನು ಸಂಬಂಧಿಸಿದವರಿಗೆ ಬಿಡುವುದು ಆರೋಗ್ಯಕರವಾದುದೆಂದು ಅಮೆರಿಕಾದ ನ್ಯಾಯಾಲಯವು ಮಹತ್ವದ ತೀರ್ಪು ನೀಡಿತು. ಆದರೆ ಅದನ್ನು ವಿರೋಧಿಸಿದ ಸಂಪ್ರದಾಯವಾದಿಗಳು ನ್ಯಾಯ ತೀರ್ಪಿನ ವಿರುದ್ಧ ಪ್ರತಿಭಟಿಸಲಾರಂಭಿಸಿದರು. ಈ ವಿಷಯ ಜಾಗತಿಕ ಮಟ್ಟದಲ್ಲೂ ಹೆಚ್ಚಿನ ಚರ್ಚೆಗೆ ಗ್ರಾಸವಾಯಿತು. ರಾಷ್ಟ್ರ ಧ್ವಜದ ಬಗೆಗೆ ಹಾಗೂ ಸಂಪ್ರದಾಯವಾದಿ ಕ್ರೈಸ್ತ ಪಾದ್ರಿಗಳು ಶಾಲೆಯಲ್ಲಿ ಹಾಡುವ ಧರ್ಮಾಧಾರಿತ ವಿಷಯಗಳನ್ನು ಮೇಳೈಸಿಕೊಂಡು ಹಾಡುವ ಹಾಡುಗಳ ಬಗೆಗೆ ರಾಷ್ಟ್ರಮಟ್ಟದಲ್ಲಿ ಗಂಭೀರವಾದ ಚರ್ಚೆಗಳು ಪ್ರಾರಂಭವಾದವು. ಈ ಸಂಗತಿಗಳ ಬಗೆಗೆ ಪರ-ವಿರೋಧ ಹೋರಾಟಗಳು ಈ ಕಾಲದಲ್ಲಿ ತೀವ್ರಸ್ವರೂಪವನ್ನು ತಾಳಿದವು. ಕೊನೆಗೆ ನ್ಯಾಯಾಲಯ ಮಧ್ಯ ಪ್ರವೇಶಿಸಿ ರಾಷ್ಟ್ರಧರ್ಮದ ಪರಿಕಲ್ಪನೆಯನ್ನು ಮೂಡಿಸಿ ಗೊಂದಲವನ್ನು ತಿಳಿಗೊಳಿಸಿತು.

ಈ ಹಿಂದಿನ ಆಡಳಿತದಲ್ಲಿ ಅಂತಾರಾಷ್ಟ್ರೀಯ ವಿಷಯಗಳ ಬಗೆಗೆ ಹೆಚ್ಚಿನ ಮುತುವರ್ಜಿ ವಹಿಸಿದ್ದರಿಂದ ಆಂತರಿಕ ಆಡಳಿತದ ಗಾಲಿಗಳು ಹಳಿ ತಪ್ಪಿದ್ದವು. ಆದ್ದರಿಂದ ಬುಷ್ ಆಡಳಿತವು ಆಂತರಿಕ ಸಮಸ್ಯೆಗಳಿಗೆ ಹೆಚ್ಚಿನ ಒತ್ತು ನೀಡಿತು. ಆರ್ಥಿಕ ಅಭಿವೃದ್ದಿಯ  ಗೆರೆ ಇಳಿಮುಖಗೊಂಡಿತು. ಹೀಗಾಗಿ  ಮತ್ತೆ ಅಭಿವೃದ್ದಿಯ ವಿಚಾರಗಳಿಗೆ ಹಿನ್ನಡೆಯಾಗಿ ದೇಶದ ಆರ್ಥಿಕ ಬುನಾದಿಯು ಅಲುಗಾಡಲಾರಂಭಿಸಿತು. ನಿರುದ್ಯೋಗದ ಪ್ರಮಾಣ ಶೇ.೬ರಷ್ಟು ಹೆಚ್ಚಾಯಿತು. ನಿತ್ಯದ ಬಳಕೆಯ ವಸ್ತುಗಳ ಬೆಲೆಗಳು ಒಂದೇ ಸಮನೆ ಏರಿದವು. ಇದೇ ವೇಳೆಗೆ ಅಮೆರಿಕಾದ ಆಪ್ತಮಿತ್ರನಾಗಿದ್ದ ಸದ್ದಾಂ ಹುಸೇನ್ ತಾನು ಹೊಂದಿದ ಸರ್ವಾಧಿಕಾರದ ದಾಹದಿಂದ ತನ್ನ ಪಕ್ಕದಲ್ಲಿರುವ ಕುವೈತ್ ಪ್ರದೇಶವನ್ನು ಒಂದೇ ಏಟಿಗೆ ಹೊಡೆದು ಹಾಕಿ ಇರಾಕಿಗೆ ಸೇರಿಸಿಕೊಂಡನು. ಈ ಪರಿಣಾಮ ಮಿತ್ರತ್ವದ ದುರುಪಯೋಗ ಎಂದು ಬುಸುಗುಟ್ಟಲಾರಂಭಿಸಿತು. ಇದರಿಂದ ವಿಚಲಿತವಾದರೂ ತಾನು ಇರಾಕ್‌ನೊಂದಿಗೆ ಈ ಹಿಂದೆ ಹೊಂದಿದ್ದ ಸಂಬಂಧಗಳ ಹಿನ್ನೆಲೆಯಲ್ಲಿ ಅಮೆರಿಕಾ ಪ್ರಾರಂಭದಲ್ಲಿ ತಾಳ್ಮೆ ಯಿಂದ ಇರಾಕ್‌ಗೆ ಎಚ್ಚರಿಕೆಗಳನ್ನು ನೀಡಿತು. ಆದರೆ ಸಂಧಾನದ ಎಲ್ಲ ಬಾಗಿಲುಗಳನ್ನು ಮೊದಲೇ ಮುಚ್ಚಿಕೊಂಡಿದ್ದು ಏನೂ ಕೇಳಿಸಿಕೊಳ್ಳದಂತೆ ಇರಾಕ್‌ನ ಸರ್ವಾಧಿಕಾರ ವರ್ತಿಸಿತು. ಇಂಥ ದಿಢೀರ್ ಆಕ್ರಮಣದ ಪರಿಣಾಮಗಳಿಂದ ಅಮೆರಿಕಾ ದೇಶಕ್ಕೆ ಬರುವ ಹೇರಳ ಪ್ರಮಾಣದ ತೈಲ ಸಂಪನ್ಮೂಲ ನಿಂತು ಹೋಯಿತು. ಅಲ್ಲದೇ ಈ ಮೊದಲೇ ಆಂತರಿಕವಾಗಿ ದೇಶದಲ್ಲಿ ಆರ್ಥಿಕ ಮುಗ್ಗಟ್ಟು ತಲೆದೋರಿತ್ತು. ಗಾಯದ ಮೇಲೆ ಬರೆ ಎಳೆಸಿಕೊಂಡ ಅಮೆರಿಕಾದ ಸ್ಥಿತಿ ಪೇಚಿಗೆ ಸಿಕ್ಕಂತಾಯಿತು. ಅಂತಾರಾಷ್ಟ್ರೀಯ  ವ್ಯಾಪಾರ ಕುಸಿದು ಅಮೆರಿಕಾ ಎಲ್ಲ ರಂಗಗಳಲ್ಲಿ ಅಸಹಾಯಕವಾಯಿತು. ಇದನ್ನು ಸರಿದೂಗಿಸಿಕೊಂಡು ಕುಸಿದು ಹೋದ ವ್ಯಾಪಾರವನ್ನು ತಡೆಗಟ್ಟಲು ಚರಿತ್ರೆಯ ವ್ಯಂಗ್ಯವೆಂಬಂತೆ ಈತನೇ ಪ್ರಯತ್ನಿಸಿದನು. ತನ್ನ ಸರಕುಗಳನ್ನು ರಫ್ತು ಮಾಡಿ ಲಾಭ ಪಡೆಯುವ ಉದ್ದೇಶದಿಂದ ಜಪಾನ್, ಕೆನಡಾ ಹಾಗೂ ಮೆಕ್ಸಿಕೊ ದೇಶಗಳ ಬಾಗಿಲಿಗೆ ಕರೆಯದೇ ಬರುವ ಅತಿಥಿಯಂತೆ ಸ್ವತಃ ಅಧ್ಯಕ್ಷರೇ ಭೇಟಿ ನೀಡಿದರು. ಆದರೂ ಇವು ಯಾವುವೂ ಪ್ರಯೋಜನಕ್ಕೆ ಬರಲಿಲ್ಲ. ಅಮೆರಿಕಾದ ವ್ಯಾಪಾರಿ ತಂತ್ರದಿಂದ ತಮ್ಮ ದೇಶಗಳಲ್ಲಿ ನಿರುದ್ಯೋಗ ಹೆಚ್ಚಾಗಬಹುದೆಂದು ಕೆನಡ, ಜಪಾನ್ ಹಾಗೂ ಮೆಕ್ಸಿಕೊ ದೇಶದ ಪ್ರಗತಿಪರರು ಪ್ರತಿಭಟನೆಗಳನ್ನು ಪ್ರಾರಂಭಿಸಿದರು. ಒಟ್ಟಿನಲ್ಲಿ ಬುಷ್ ಆಡಳಿತಾವಧಿಯಲ್ಲಿ (೧೯೯೦-೯೪) ಅಮೆರಿಕಾ ಆಂತರಿಕ ಸಮಸ್ಯೆಗಳಿಂದ ಹಾಗೂ ಬಾಹ್ಯ ವ್ಯಾಪಾರದಲ್ಲಾದ ಗೊಂದಲಗಳಿಂದ ಬರುವ ಆದಾಯವು ಕುಂಠಿತಗೊಂಡು ಹೆಚ್ಚಿನ ಪ್ರಮಾಣದಲ್ಲಿ ನಷ್ಟಕ್ಕೊಳಗಾಗಿ ಅಮೆರಿಕಾದ ಆರ್ಥಿಕ ವ್ಯವಸ್ಥೆ ಎಂದೂ ಕೇಳಲರಿಯಲಾರದಷ್ಟು ಗಾಸಿಯಾಯಿತು.

ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷರಾಗಿದ್ದ ರೇಗನ್ ಹಾಗೂ ಅಧ್ಯಕ್ಷ ಬುಷ್ ಆಡಳಿತ ವಿರುದ್ಧ ಅಮೆರಿಕಾದ ಒಳಗೆ ಹೊರಗೆ ಭಾರೀ ಪ್ರತಿಭಟನೆ ಹಾಗೂ ಟೀಕೆಗಳು ವ್ಯಕ್ತವಾದರೂ ಯಾವುದಕ್ಕೂ ಅವರು ತಲೆಕೆಡಿಸಿಕೊಳ್ಳಲಾಗದೆ ತಮ್ಮ ಕಾರ್ಯಯೋಜನೆಗಳಿಂದ ತಲೆದೋರಿದ್ದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಲ್ಲಿ ನಿರತರಾದರು. ಆಡಳಿತದ ಸಮಸ್ಯೆಗಳನ್ನು ನಿವಾರಿಸಿ ಕೊಳ್ಳುವ ಇಂಥ ಹಗ್ಗಜಗ್ಗಾಟದಲ್ಲಿ ಕೆಲವೊಮ್ಮೆ ಗೊಂದಲದಲ್ಲಿ ಸಿಕ್ಕಿಕೊಂಡಿದ್ದುಂಟು. ಆದರೆ ಈ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕಾ ತೆಗೆದುಕೊಂಡ ನಿರ್ಧಾರಗಳು ಮಾತ್ರ ಅತ್ಯಂತ ಮಹತ್ವದವು ಹಾಗೂ ಪರಿಣಾಮಕಾರಿಯಾಗಿದ್ದವು. ಸುಮಾರು ಎಪ್ಪತ್ತು ವರ್ಷಗಳ ಕಾಲ ಬೆನ್ನಿಗಿದ್ದ ಹುಣ್ಣಿನಂತೆ ಕಾಡಿದ್ದ ಕಮ್ಯುನಿಸ್ಟ್ ಆಡಳಿತಗಳ ಭದ್ರಕೋಟೆಗಳು ಅಲುಗಾಡಲಾರಂಭಿಸಿದ್ದವು. ಅದರ ಮುಖ್ಯ ನೇತಾರ ಹಾಗೂ ಪ್ರವರ್ತಕನಾಗಿದ್ದ ಯು.ಎಸ್.ಎಸ್.ಆರ್ ದೇಶವು ಸ್ವತಃ ತಾನೇ ಸೃಷ್ಟಿಸಿಕೊಂಡ ಸಮಸ್ಯೆಗಳಿಂದ ಅಸ್ಥಿರಗೊಂಡಿತು. ಅಧ್ಯಕ್ಷ ಗೊರ್ಬಚೇವ್ ತಂದ ನೀತಿಗಳಿಂದ ಹೊಸಗಾಳಿ ಬೀಸಲಾರಂಭಿಸಿತ್ತು. ನಂತರ ಅಧಿಕಾರಕ್ಕೆ ಬಂದ ಬೋರಿಸ್ ಯೆಲಿಸ್ಟಿನ್ ಕಮ್ಯೂನಿಸಂ ಸಿದ್ಧಾಂತಕ್ಕೆ ಬಲವಾದ ಕೊಡಲಿ ಪೆಟ್ಟು ಹಾಕಿದ. ಹೀಗಾಗಿ ವೇಗವಾಗಿ ರಷ್ಯಾದ ರಾಜಕೀಯದಲ್ಲಿ ಭಾರೀ ಬದಲಾವಣೆಗಳು ಕೆಲವೇ ದಿನಗಳಲ್ಲಿ ಜಾರಿಗೆ ಬಂದವು. ಚರಿತ್ರೆಯ ವ್ಯಂಗ್ಯವೆಂಬಂತೆ ರಷ್ಯಾದ ಆಡಳಿತಗಾರರೇ ಕಮ್ಯುನಿಸಂ ತತ್ವದ ಕಟು ಟೀಕಾಕಾರರಾಗಿ ಜಗತ್‌ಪ್ರಸಿದ್ದಿ ಪಡೆದರು. ಕಮ್ಯುನಿಸ್ಟ್ ಆಡಳಿತಗಳನ್ನು ಶಾಶ್ವತವಾಗಿ ಮಣ್ಣುಗೂಡಿಸಲು ಅಮೆರಿಕಾ ವಹಿಸಬೇಕಾದ ಪಾತ್ರವನ್ನು ಯೆಲಿಸ್ಟಿನ್‌ನೇ ನಿರ್ವಹಿಸಲಾರಂಭಿಸಿದ. ಇದರಿಂದ ಹಲವು ದಶಕಗಳ ಕಾಲ ಅಮೆರಿಕಾಕ್ಕಿದ್ದ ಭಯವೆಂಬ ಆತಂಕದ ಮಂಜು ತಾನೇ ಕರಗಲಾರಂಭಿಸಿತು. ಸಮತಾವಾದ ತತ್ವದ ಮೇಲೆ ಹಲವು ದಶಕಗಳಿಂದ ಗಟ್ಟಿಯಾಗಿ ನಿಂತಿದ್ದ ಐತಿಹಾಸಿಕ ಬರ್ಲಿನ್ ಗೋಡೆ ಅಮೆರಿಕಾ ಹೂಡಿದ ತಂತ್ರಗಳಿಂದ ಕುಸಿದು ನೆಲಕ್ಕೆ ಬಿತ್ತು. ಹಲವು ವರ್ಷಗಳಿಂದ ದೂರವಾಗಿದ್ದ ಪೂರ್ವ ಜರ್ಮನಿಯ ತನ್ನ ಸಹೋದರರನ್ನು ಪಶ್ಚಿಮ ಜರ್ಮನಿ ಪ್ರೀತಿಯಿಂದ ಮೇಳೈಸಿಕೊಂಡಿತು. ಇದರ ಗಂಭೀರ ಪರಿಣಾಮ  ಇಡೀ ಯುರೋಪ್ ಖಂಡದ ಮೇಲಾಯಿತು. ಝೆುಕೊ ಸ್ಲೋವಿಕಿಯಾ, ಹಂಗೇರಿ, ಪೋಲೆಂಡ್, ರುಮೇನಿಯಾಗಳಲ್ಲಿದ್ದ ಸಮತಾವಾದ ಸರ್ವಾಧಿಕಾರಿಗಳು ದೇಶ ಬಿಟ್ಟು ಓಡಿ ಹೋಗುವ ಪ್ರಯತ್ನದಲ್ಲಿ ಜನರಿಂದ ಕೊಲ್ಲಲ್ಪಟ್ಟರು. ಯುಗೋಸ್ಲಾವಿಯಾ ಈ ಹಂತದಲ್ಲಿ ಅಂತಾರಾಷ್ಟ್ರೀಯವಾಗಿ ಸಮಸ್ಯೆಯ ಕೇಂದ್ರವಾಯಿತು. ಜನಾಂಗವಾದದಲ್ಲಿ ನಂಬಿಕೆ ಇಟ್ಟಿದ್ದ ಸರ್ಬ್ ನಾಯಕ ಸ್ಲೊಬೊಡಾನ್ ಮಿಲೊಸೋವಿಚ್ ಯುಗೋಸ್ಲಾವಿಯಾದ ಲಕ್ಷಾಂತರ ಸಂಖ್ಯೆಯಲ್ಲಿದ್ದ ಮುಸ್ಲಿಮರನ್ನು ವ್ಯವಸ್ಥಿತವಾಗಿ ಕೊಲೆ ಮಾಡುವುದರ ಮೂಲಕ ಅವರನ್ನು ಸಾವಿರ ಸಂಖ್ಯೆಗೆ ಇಳಿಸಿದ. ಅಮೆರಿಕಾ ದೇಶವು ಸರ್ಬ್ ನಾಯಕರಿಂದ ನಡೆದ ಕಗ್ಗೊಲೆಗಳನ್ನು ಬಹಿರಂಗವಾಗಿ ವಿರೋಧಿಸಿ ಗಂಭೀರವಾದ ಎಚ್ಚರಿಕೆ ನೀಡಿತು. ಆದರೆ ಅದು ಯಾವುದೂ ಪ್ರಯೋಜನಕ್ಕೆ ಬರಲಿಲ್ಲ. ಸರ್ಬ್ ನಾಯಕರು ತಮ್ಮ ಹಠವನ್ನು ಬಿಡಲಿಲ್ಲ. ನಂತರ ಕ್ಲಿಂಟನ್ ಆಡಳಿತದಲ್ಲಿ ಸರ್ಬ್‌ರನ್ನು ತಹಬಂದಿಗೆ ತರಲಾಯಿತು. ಬಲ್ಗೇರಿಯಾದಲ್ಲಿ ತಂಗಾಳಿ ಬೀಸಿತು. ಅಮೆರಿಕಾ ಹಾಗೂ ಐರೋಪ್ಯ ಒಕ್ಕೂಟ ಪರೋಕ್ಷವಾಗಿ ಕೊಡುತ್ತಿದ್ದ ಹೊಡೆತಗಳಿಂದ ಅಖಂಡ ಯು.ಎಸ್.ಎಸ್.ಆರ್ ಕರಗಿ ಛಿದ್ರವಾಯಿತು. ಆದರೆ ಚೀನ ಹಾಗೂ ಕ್ಯೂಬಾ ದೇಶಗಳ ಸಮತಾವಾದದ ಸರಕಾರಗಳು ಅಮೆರಿಕಾದ ಹುನ್ನಾರವನ್ನು ಅರಿತು ಇದಕ್ಕೆಲ್ಲ ಕಾರಣ ಅಮೆರಿಕಾ ಮಾಡುವ ಕುತಂತ್ರವೆಂದು ತಿಳಿದು ಎಚ್ಚರಗೊಂಡವು. ಅಲ್ಲದೇ ಸೈನ್ಯದ ಬಲಪ್ರಯೋಗಗಳ ಮೂಲಕ ತಮ್ಮ ದೇಶದಲ್ಲಿ ನಡೆಯುವ ಪ್ರತಿಭಟನೆಗಳನ್ನು ಹತ್ತಿಕ್ಕಿ ತಮ್ಮ ಹಿಡಿತವನ್ನು ಬಲಗೊಳಿಸಿಕೊಂಡವು. ಪೂರ್ವ ಏಷ್ಯದ ರಾಷ್ಟ್ರಗಳಾದ ಉತ್ತರ ಕೊರಿಯಾ ಹಾಗೂ ವಿಯಟ್ನಾಂಗಳಲ್ಲಿನ ಸರಕಾರಗಳು ತೆರೆಮರೆಯಲ್ಲಿ ನಿಂತು ನಿರ್ದೇಶನ ಮಾಡುತ್ತಿದ್ದ ತನ್ನ ವಿರೋಧಿ ನಿಲುವುಗಳು ಹಾಗೂ ಸಮಸ್ಯೆಗಳು ಅಮೆರಿಕಾದ ತೀವ್ರ ಅಸಮಾಧಾನಕ್ಕೆ ಕಾರಣಗಳಾದವು. ಇಂಥ ಮಹತ್ವದ ಘಟನೆಗಳ ಮಧ್ಯೆಯೂ ಅಮೆರಿಕಾ ಅಣ್ವಸ್ತ್ರ ಹಾಗೂ ರಾಸಾಯನಿಕ ಅಸ್ತ್ರಗಳ ಪರೀಕ್ಷೆಯ ನಿಷೇಧ ಒಪ್ಪಂದಗಳನ್ನು ಛಿದ್ರಗೊಂಡಿದ್ದ ಸೋವಿಯತ್ ರಷ್ಯಾದ ಜೊತೆ ಮಾಡಿಕೊಂಡು ಜಾಗತಿಕ ಶಾಂತಿ ಸಂಧಾನಗಳಿಗೆ ಪ್ರೋ ನೀಡುವ ಕಾರ್ಯವನ್ನು ಸಹ ಮುಂದುವರೆಸಿತು.