ಸರ್ವಾಧಿಕಾರಿಗಳು ಅಮೆರಿಕಾದ ಆಡಳಿತಕ್ಕೆ ನೀಡಿದ ತಿರುಗುಬಾಣ

ಸಮತಾವಾದ ಸಿದ್ಧಾಂತಿಗಳನ್ನು ಜಾಗತಿಕ ಭೂಪಟದಿಂದ ಶಾಶ್ವತವಾಗಿ ನಾಶಪಡಿಸಲು ಅಮೆರಿಕಾ ತಕ್ಕ ಕಾರಣಗಳನ್ನು ಹುಡುಕಿ ಅವುಗಳನ್ನು ಪ್ರಯೋಗಿಸಿ ಯಶಸ್ವಿಯಾಯಿತು. ಆದರೆ ಇದನ್ನು ಸಾಧಿಸುವ ಸಂದರ್ಭದಲ್ಲಿ ಪೆಂಡೋರಾ ಪೆಟ್ಟಿಗೆಯಲ್ಲಿದ್ದ ರಾಕ್ಷಸರನ್ನು ಬಂಧಮುಕ್ತಗೊಳಿಸಿ ಹೆಚ್ಚಿನ ಅಪಾಯ ತಾನೇ ಸೃಷ್ಟಿಸಿಕೊಂಡಿತು. ಅಮೆರಿಕಾದಿಂದ ಎಲ್ಲ ರೀತಿಯ ಸಹಾಯ ಪಡೆದು ಅಥವಾ ಅಮೆರಿಕಾವೇ ಪರೋಕ್ಷವಾಗಿ ಎಲ್ಲ ದುಷ್ಟರಿಗೆ ನೀರೆರೆಯಿತು. ಅಂಥವರೆಲ್ಲ ಭೂತಾಕಾರ ತಾಳಿ ತನಗರಿವಿಲ್ಲದಂತೆ ತನ್ನ ವಿರುದ್ಧವೇ ತಿರುಗಿಬಿದ್ದರು. ಇಂಥ ವ್ಯಂಗ್ಯಗಳಿಗೆ ಅಮೆರಿಕಾ ಬಹಳಷ್ಟು ಬಾರಿ ಒಳಗಾಯಿತು. ಅವರಲ್ಲಿ ಮುಖ್ಯವಾಗಿ ಪನಾಮಾ ದೇಶದ ಅಧ್ಯಕ್ಷ ನಾರಿಯೇಗನ್, ಇರಾಕ್ ಅಧ್ಯಕ್ಷ ಸದ್ದಾಂ ಹುಸೇನ್, ಸರ್ಬ್ ನಾಯಕ ಮಿಲೊಸೋವಿಚ್, ಅಫ್ಘಾನಿಸ್ತಾನ ದಲ್ಲಿದ್ದ ತಾಲಿಬಾನಿ ನಾಯಕರು ಅಂತಾರಾಷ್ಟ್ರೀಯ ಕುಖ್ಯಾತಿ ಪಡೆದಿರುವ ಅಲ್‌ಖೈದಾ ಸಂಘಟನೆಯ ಒಸಮಾಬಿನ್ ಲಾಡೆನ್ ಹಾಗೂ ಹೈಟಿ ದೇಶದ ಸರ್ವಾಧಿಕಾರಿಗಳನ್ನು ಉದಾಹರಿಸಬಹುದು. ತನ್ನ ಪಕ್ಕದಲ್ಲಿದ್ದ ಪನಾಮಾ ದೇಶವು ಅಮೆರಿಕಾದ ಯುವಶಕ್ತಿಯ ಜೀವ ಸೆಲೆಗೆ ಮಾರಕವಾಗಿ ನಿಂತಿತ್ತು. ಕಾರಣ ಆ ದೇಶದಲ್ಲಿ ಹೇರಳವಾಗಿ ಬೆಳೆಯುತ್ತಿದ್ದ ಮಾದಕ ಪಾನೀಯಗಳನ್ನು ವಿಲಾಸಿ ಬದುಕಿನ ನಿರ್ವಹಣೆಕಾರ ರಾಷ್ಟ್ರವಾಗಿರುವ ಅಮೆರಿಕಾಕ್ಕೆ ದೊಡ್ಡ ಪ್ರಮಾಣದಲ್ಲಿ ರಫ್ತು ಮಾಡಿ ಅಲ್ಲಿರುವ ಯುವಶಕ್ತಿಯನ್ನೇ ಅದರ ದಾಸರನ್ನಾಗಿ ಮಾಡಿತು. ಈ ಕೃತ್ಯದಿಂದ ಪನಾಮದ ಮಾದಕ ದ್ರವ್ಯ ವ್ಯಾಪಾರಿಗಳು ಅಗಾಧ ಪ್ರಮಾಣದ ಲಾಭ ಗಳಿಸಿದ್ದರು. ಇದೊಂದು ಅಂತಾರಾಷ್ಟ್ರೀಯ ‘ಡ್ರಗ್ಸ್ ಮಾಫಿಯಾ’ (ಮಾದಕ ವಸ್ತುಗಳ ಕಳ್ಳಸಾಗಾಣಿಕೆದಾರರು) ಅಮೆರಿಕಾವನ್ನು ಅತ್ಯಂತ ಗಾಢವಾಗಿ ಪೀಡಿಸುತ್ತಿತ್ತು. ಇಂಥ ಕುಕೃತ್ಯಗಳನ್ನು ನಿಯಂತ್ರಿಸಲು ಪ್ರಾರಂಭದಲ್ಲಿ ಅಮೆರಿಕಾ ಪನಾಮದಲ್ಲಿನ ಸೇನಾ ನಾಯಕ ಮಾನ್ಯುಯೆಲ್ ನಾರಿಯೇಗನ್‌ನ ಸಹಾಯಕ್ಕೆ ನಿಂತಿತು. ಹಿಂದೆ ಜಾರ್ಜ್ ಬುಷ್ ಸಿ.ಐ.ಎ. ನಿರ್ದೇಶಕನಾಗಿದ್ದಾಗ ಈತನನ್ನು ಅಮೆರಿಕಾದ ಏಜೆಂಟನನ್ನಾಗಿ ಬೆಳೆಸಿದ್ದ. ಒಟ್ಟಾರೆ ಆತನ ಜೊತೆಗೊಂದು ಕೊಡುಕೊಳ್ಳುವ ಸಂಬಂಧ ಅಮೆರಿಕಾಕ್ಕೆ ಇತ್ತು. ಆದರೆ ಬುಷ್ ಅಧ್ಯಕ್ಷನಾಗುವ ಹೊತ್ತಿಗೆ ಎಲ್ಲವೂ ಬದಲಾಗಿತ್ತು. ನಾರಿಯೇಗನ್ ಅಮೆರಿಕಾದ ಬುಡಕ್ಕೆ ಕೈ ಹಾಕಿದ್ದ. ಡ್ರಗ್ಸ್ ಮಾಫಿಯಾ ಸಂಘಟನೆಯ ನೇತಾರನೇ ಅವನಾಗಿ ಬದಲಾಗಿದ್ದ. ಇದರಿಂದ ಹೆದರಿದ ಬುಷ್ ಆಡಳಿತ ಸೈನಿಕ ಕಾರ್ಯಾಚರಣೆ ಕೈಗೊಂಡು ಆತನನ್ನು ಸೆರೆಹಿಡಿದು ಗಲ್ಲಿಗೇರಿಸಿತು.

ಬುಷ್ ಆಡಳಿತಾವಧಿಯಲ್ಲಿ ಇರಾಕ್‌ನ ಅಧ್ಯಕ್ಷ ಸದ್ದಾಂ ಹುಸೇನ್ ರಾಜ್ಯವಿಸ್ತರಣೆಯ ದುಸ್ಸಾಹಸ ಕೈಗೊಂಡನು. ತನ್ನ ವಿರುದ್ಧವಾಗಿ ಸದಾ ಕಟು ಟೀಕೆ ಮಾಡುತ್ತಿದ್ದ ಇರಾನ್‌ನಲ್ಲಿನ ಇಸ್ಲಾಂ ಮೂಲಭೂತವಾದವನ್ನು ದಮನ ಮಾಡಲು ಅಮೆರಿಕಾ ಇನ್ನೊಂದು ಮಾರ್ಗದಲ್ಲಿ ಇರಾಕ್‌ನಲ್ಲಿದ್ದ ಸರ್ವಾಧಿಕಾರಿ ಸದ್ದಾಂನನ್ನು ಪುಸಲಾಯಿಸಿತು. ಇದರ ಸದುಪಯೋಗ ಪಡೆದ ಮಿಲಿಟರಿ ನಾಯಕ ಸದ್ದಾಂ ಕೆಲವೇ ದಿನಗಳಲ್ಲಿ ತಿರುಗಿ ನಿಂತು ಬಲಿಷ್ಠ ಅಮೆರಿಕಾವನ್ನು ಬಗ್ಗು ಬಡಿಯಲು ಕುವೈತ್‌ನ ತೈಲ ಸಂಪತ್ತಿನ ಮೇಲೆ ಕಣ್ಣು ಹಾಕಿದ. ಈ ಸಮಯದಲ್ಲಿ ಕುವೈತ್ ದೇಶವು ಅಮೆರಿಕಾಕ್ಕೆ ಹೆಚ್ಚಿನ ತೈಲೋತ್ಪನ್ನ ಮಾರುವ ಅಧೀನ ರಾಷ್ಟ್ರವಾಗಿತ್ತು. ಇದರ ಲಾಭ ನಷ್ಟದ ಅಂಕಗಣಿತವನ್ನು ಚೆನ್ನಾಗಿ ತಿಳಿದುಕೊಂಡಿದ್ದ ಇರಾಕ್ ಆಡಳಿತ ಕುವೈತ್‌ನ ಸಂಪತ್ತನ್ನು ವಶಪಡಿಸಿಕೊಂಡು ಅಮೆರಿಕಾ ಸೇರಿದಂತೆ ಜಗತ್ತಿನ ಎಲ್ಲ ರಾಷ್ಟ್ರಗಳನ್ನು ತನ್ನ ಕೈಗೊಂಬೆಯನ್ನಾಗಿ ಮಾಡಿಕೊಳ್ಳಬೇಕೆಂಬ  ಮಹಾತ್ವಾಕಾಂಕ್ಷೆಯಿಂದ ಆಕ್ರಮಣಕ್ಕಿಳಿಯಿತು. ಆದರೆ ಸರ್ವಾಧಿಕಾರಿಯ ರಾಜಕೀಯ ಲೆಕ್ಕಾಚಾರ ಅಮೆರಿಕಾದ ಶಾಂತಿಯನ್ನು ಭಂಗಗೊಳಿಸಿತು. ಅಲ್ಲದೇ ಇದೇ ವೇಳೆಗೆ ಅಮೆರಿಕಾವನ್ನು ಎದುರು ಮಾಡಿಕೊಳ್ಳುವ ಈ ಪ್ರಯತ್ನ ಎಲ್ಲ ಅರಬ್ ರಾಷ್ಟ್ರಗಳಿಗೆ ರುಚಿಸಿ ಅವು ತನ್ನ ಬೆಂಬಲಕ್ಕೆ ನಿಲ್ಲಬಹುದೆಂದು ಇದೇ ವೇಳೆಗೆ ಯೋಚನೆ ಮಾಡಿ ಸದ್ದಾಂ ಹುಸೇನ್ ಈ ದುಸ್ಸಾಹಸ ಮಾಡಿದನು. ಆದರೆ ರಾಜಕೀಯ ಚದುರಂಗದಾಟದಲ್ಲಿ ಪಳಗಿದ್ದ ಅಮೆರಿಕಾ ಕುವೈತ್‌ನ ಜನಾಭಿಪ್ರಾಯವನ್ನು ಕಾಪಾಡುವುದೇ ತನ್ನ ಮುಖ್ಯ ಗುರಿ ಎಂಬ ದಾಳಗಳನ್ನು ಉರುಳಿಸಿತು. ಮುಂದಿನ ಅಪಾಯಗಳನ್ನು ಅರಿತ ಅಮೆರಿಕಾದ ಅಧ್ಯಕ್ಷ ಜಾರ್ಜ್ ಬುಷ್ ಆಡಳಿತ ತರಾತುರಿಯಲ್ಲಿ ಇರಾಕ್ ವಿರುದ್ಧ ವಿಶ್ವಸಂಸ್ಥೆಯಲ್ಲಿ ದಿಗ್ಬಂಧನ ಮಸೂದೆಗಳನ್ನು ಮಂಡಿಸಿತು. ಇದಕ್ಕೆ ಅರಬ್ ರಾಷ್ಟ್ರಗಳು ಸೇರಿದಂತೆ ಜಗತ್ತಿನ ಎಲ್ಲ ರಾಷ್ಟ್ರಗಳು ಅಮೆರಿಕಾದ ಬೆಂಬಲಕ್ಕೆ ನಿಂತವು. ಹೀಗಾಗಿ ಸದ್ದಾಂ ಏಕಾಂಗಿಯಾಗಿ ಹೋರಾಟಕ್ಕಿಳಿಯುವ ಪ್ರಸಂಗ ಉದ್ಭವವಾಯಿತು.

ಜಾಗತಿಕ ಬಂಡವಾಳಶಾಹಿ ಶಕ್ತಿಗಳಾದ ಅಮೆರಿಕಾ, ಇಂಗ್ಲೆಂಡ್, ಸ್ಪೇನ್ ಹಾಗೂ ಫ್ರಾನ್ಸ್ ದೇಶಗಳು ಸೇರಿ ಕುವೈತ್ ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದವು. ಜನರಲ್ ನಾರ್ಮನ್ ಶಾರ್ಟ್‌ಕಾಫ್‌ನ ನೇತೃತ್ವದಲ್ಲಿ ಅಮೆರಿಕಾ ಬೆಂಬಲದ ಸಂಯುಕ್ತ ಸೇನೆ ‘ಮರುಭೂಮಿ ಕಾರ್ಯಾಚರಣೆ (ಆಫರೇಷನ್ ಡೆಸಾರ್ಟ್) ಕೈಗೊಂಡಿತು. ಕೇವಲ ಮೂರೇ ದಿನಗಳಲ್ಲಿ ಇರಾಕ್‌ನ ಸೈನ್ಯ ಅಮೆರಿಕಾ ನೇತೃತ್ವದಲ್ಲಿನ ಒಕ್ಕೂಟದ ಸೈನ್ಯಶಕ್ತಿಯ ವಿರುದ್ಧ ಸೋತು ಓಡಿಹೋಯಿತು. ಇದರಿಂದ ಕ್ರುದ್ಧನಾದ ಸದ್ದಾಂ ಇಸ್ರೇಲ್ ಮೇಲೆ ದಾಳಿ ಆರಂಭಿಸಿದ. ಕಾರಣ ಈ ರೀತಿ ಮಾಡುವುದರಿಂದ ಅರಬ್ ರಾಷ್ಟ್ರಗಳ ಹಾಗೂ ವಿಶ್ವದ ಎಲ್ಲ ಮುಸ್ಲಿಂ ರಾಷ್ಟ್ರದ ಆಡಳಿತಗಾರರ ಬೆಂಬಲ ಪಡೆಯಬಹುದೆಂದು ನಿರೀಕ್ಷಿಸಿದ್ದ. ಈ ತಂತ್ರಗಳು ಇರಾಕ್‌ಗೆ ಫಲಿಸಲಿಲ್ಲ. ತುರ್ತಾಗಿ ಅಮೆರಿಕಾದ ಸಹಾಯ ದಿಂದ ಇಸ್ರೇಲ್ ತನ್ನ ರಕ್ಷಣೆಯನ್ನು ಸಮರ್ಥವಾಗಿ ಮಾಡಿಕೊಂಡಿತು. ಇದೇ ವೇಳೆಗೆ ತನ್ನ ವಿರುದ್ಧ ತನ್ನದೇ ದೇಶದಲ್ಲಿರುವ ಖುರ್ದ್ ಜನರು ಅಮೆರಿಕಾದ ಕುಮ್ಮಕ್ಕಿನಿಂದ ರಾಜಕೀಯ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿ ಇರಾಕ್‌ನಲ್ಲಿದ್ದ ಖುರ್ದಿಸ್ಥಾನದ ಮೇಲೆ ರಸಾಯನಿಕ ಅಸ್ತ್ರ ಪ್ರಯೋಗ ಮಾಡಿ ಲಕ್ಷಾಂತರ ಜನರನ್ನು ಸದ್ದಾಂ ಹುಸೇನ್ ಆಡಳಿತವು ಬರ್ಬರವಾಗಿ ಕೊಂದು ಹಾಕಿತು. ಇದರಿಂದ ಇರಾಕನ ಆಡಳಿತದ ಹೆಚ್ಚಿನ ನಷ್ಟವನ್ನು ಅನುಭವಿಸುವಂತಾಯಿತು. ಅಲ್ಲದೇ ಇಸ್ಲಾಂ ಜಗತ್ತು ಈ ಕ್ಯತ್ಯವನ್ನು ಉಗ್ರವಾಗಿ ಖಂಡಿಸಿತು. ಸರ್ವಾಧಿಕಾರಿ ಆಡಳಿತವು ಇಂಥ ಪೈಶಾಚಿಕ ಕಾರ್ಯಾಚರಣೆಯನ್ನು ಗುಪ್ತವಾಗಿ ಇಟ್ಟಿತು.

ಕುವೈತ್ ಯುದ್ಧದಲ್ಲಿ ರಷ್ಯಾ ಮತ್ತು ಚೀನಾ ದೇಶವನ್ನು ಅಮೆರಿಕಾದ ವಿರುದ್ಧ ಪುಸಲಾಯಿಸುವ ತಂತ್ರವನ್ನು ಇರಾಕ್ ಆಡಳಿತ ಮಾಡಿತು. ಇಂಥ ಯಾವ ಆಟಗಳು ಉಪಯೋಗಕ್ಕೆ ಬರಲಿಲ್ಲ. ಸೋತ ಸದ್ದಾಂನ ಸೈನ್ಯ ಕುವೈತ್ ತೆರವುಗೊಳಿಸಿ ಬರುವಾಗ ಅಲ್ಲಿನ ಅಮೂಲ್ಯ ತೈಲ ಸಂಪತ್ತಿಗೆ ಬೆಂಕಿ ಹೆಚ್ಚಿ ಅನಾಹುತ ಸೃಷ್ಟಿಸಿತು. ಆದರೆ ಇದಾವುದನ್ನು ಲೆಕ್ಕಿಸದೇ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ ಜಾರ್ಜ್ ಬುಷ್ ಆಡಳಿತ ಜಗತ್ತಿನ  ಹೆಚ್ಚಿನ ದೇಶಗಳಲ್ಲಿ ಭಾರೀ ಜನಪ್ರಿಯತೆ ಪಡೆಯಿತು. ಆದರೆ ಕೆಲವೇ ದಿನಗಳ ಸೋಮಾಲಿಯಾ ಹಾಗೂ ಹರ್ಜಿಗೋವಿನಾ (ಯುಗೋಸ್ಲೋವಿಯಾ) ಸಮಸ್ಯೆಗಳಲ್ಲಿ ಅಮೆರಿಕಾ ತಲೆ ತೂರಿಸಿ ವಿನಾಕಾರಣ ಸಂಕಟಪಟ್ಟಿತು. ವಿಶ್ವಸಂಸ್ಥೆಯ ನೇತೃತ್ವದಲ್ಲಿ ಬಂದಿಳಿದ ಅಮೆರಿಕಾದ ಸೈನ್ಯವನ್ನು ಒಳಗೊಂಡ(ವಿಶ್ವಸಂಸ್ಥೆಯ ಸುಪರ್ದಿಯಲ್ಲಿದ್ದ) ಶಾಂತಿ ಪಾಲನಾ ಪಡೆಯ ಸೈನಿಕರನ್ನು ಸೋಮಾಲಿಯಾದಲ್ಲಿರುವ ಬುಡಕಟ್ಟು ಜನರು ಕೊಲೆಗೈದರು. ಇದರಿಂದ ಅಮೆರಿಕಾದ ಜನತೆಯು ಅಸಮಾಧಾನಗೊಂಡು ತಮ್ಮದಲ್ಲದ ಸಮಸ್ಯೆಗಳಿಗೆ ‘ನಾವೇಕೆ ಜೀವ ನೀಡಬೇಕು’ ಎಂಬ ಗಂಭೀರವಾದ ಚರ್ಚೆಗಳು ಅಮೆರಿಕಾ ಪ್ರಜೆಗಳಲ್ಲಿ ಪ್ರಾರಂಭವಾದವು. ಅಲ್ಲದೇ ಮೇಲಿಂದ ಮೇಲೆ ತಲೆದೋರುತ್ತಿದ್ದ ಇಂಥ ಅನವಶ್ಯಕ ಖರ್ಚುವೆಚ್ಚಗಳು ಅಮೆರಿಕಾ ಆಡಳಿತಕ್ಕೆ ಭಾರೀ ಹೊಡೆತ ನೀಡಿದವು. ಹೀಗಾಗಿ ಸೋಮಾಲಿಯಾ ಹಾಗೂ ಯುಗೋಸ್ಲೋವಿಯಾಗಳಿಂದ ಬುಷ್ ಸೇನೆ ಒಂದಿಷ್ಟು ಯೋಚಿಸದೇ  ಮಾಡಿಕೊಂಡ ಅನಾಹುತಗಳಿಗೆ ಪ್ರಾಯಶ್ಚಿತ್ತಪಡುತ್ತಾ ಕಾಲ್ತೆಗೆಯಿತು.

ಕುವೈತ್ ಆಕ್ರಮಣದ ತೆರವನ್ನು ಕ್ಷಣಾರ್ಧದಲ್ಲಿ ಮಾಡಿ ಮುಗಿಸಿದ ಬುಷ್ ಆಡಳಿತ ಜನ ಮೆಚ್ಚುಗೆ ಗಳಿಸಿ ಅಭೂತಪೂರ್ವ ಅಭಿನಂದನೆಗೆ ಪಾತ್ರವಾಯಿತು. ಆದರೆ ಸದ್ದಾಂ ಹುಸೇನ್‌ನನ್ನು ಉಪಾಯವಾಗಿ ತಡೆಯಲು ಸಾಧ್ಯವಾದೇ ಇರುವುದಕ್ಕೆ ಆಡಳಿತವು ವಿಫಲತೆ ಕಂಡಿತು. ಹೀಗಾಗಿ ಕೆಲವು ಟೀಕೆಗಳಿಗೂ ಒಳಗಾಗಬೇಕಾಯಿತು. ಅಲ್ಲದೇ ೧೯೯೦ರ ದಶಕದಲ್ಲಿ ೨೫ ಮಿಲಿಯನ್ ಜನರು ನಿರುದ್ಯೋಗಿಗಳಾದರು. ಶೇಕಡಾ ಇಪ್ಪತ್ತರಷ್ಟು ದುಡಿಯುವ ಕೂಲಿಕಾರರು ಕೆಲಸವನ್ನು ಕಳೆದುಕೊಂಡರು. ಅಮೆರಿಕಾದ ಪ್ರತಿಷ್ಠಿತ ಕಂಪನಿಗಳಾದ ಜಿ.ಎಂ., ಐ.ಬಿ.ಎಂ. ಹಾಗೂ ಜೆರಾಕ್ಸ್‌ನಂತಹ ಕಾರ್ಪೋರೆಟ್ ಸಂಸ್ಥೆಗಳು ೧ ಲಕ್ಷಕ್ಕಿಂತ ಹೆಚ್ಚಿನ ಉದ್ಯೋಗಿಗಳನ್ನು ಬರಕಾಸ್ತು ಮಾಡಿದವು. ಅಮೆರಿಕಾದ ಆರ್ಥಿಕ ವ್ಯವಸ್ಥೆಯಲ್ಲಿದ್ದ ಕೊರತೆಯ ಪ್ರಮಾಣ ೧೫೦ ಬಿಲಿಯನ್ ಡಾಲರ್‌ನಿಂದ ೪೫೦ ಬಿಲಿಯನ್ ಡಾಲರ್‌ಗೆ ಏರಿಕೆ ಆಗಿ ಭಯ ಹುಟ್ಟಿಸಿತು. ಇಂಥ ದುಷ್ಪರಿಣಾಮಗಳು ಬುಷ್ ಆಡಳಿತದ ವೈಫಲ್ಯತೆಯನ್ನು ಸೂಚಿಸಿದವು.

ತನ್ನ ಆಪ್ತಮಿತ್ರ ಇಸ್ರೇಲ್ ದೇಶವನ್ನು ಕರೆತಂದು ಶಾಂತಿ ಮಾತುಕತೆಗೆ ಬುಷ್ ಬಗ್ಗಿಸಿದನು. ಮೊಟ್ಟಮೊದಲಿಗೆ ಪ್ಯಾಲೈಸ್ಟೈನ್ ಜನರನ್ನು ಹಾಗೂ ಅದರ ಅಸ್ತಿತ್ವವನ್ನು ಒಪ್ಪುವಂತೆ ಇಸ್ರೇಲಿಗೆ ತಾಕೀತು ಮಾಡಲಾಯಿತು. ಇದರಿಂದ ಪ್ಯಾಲೈಸ್ಟೈನ್ ನಿರಾಶ್ರಿತರು ಹಲವಾರು ವರ್ಷಗಳಿಂದ ಕಾಣುತ್ತಿದ್ದ ಕನಸು ಪ್ರತ್ಯೇಕ ದೇಶದ ರಚನೆಯ ಸಾಧ್ಯತೆಗಳ ಜೊತೆಗೆ ಹೆಚ್ಚಾದವು. ಇಂಥ ನನಸನ್ನು ಬುಷ್ ಆಡಳಿತದ ಸಹಕಾರದಿಂದ ಕಾಣುವಂತಾಯಿತು. ಜಾಗತಿಕ ಮಟ್ಟದಲ್ಲಿ ಬುಷ್ ಶಾಂತಿ ಸಂಧಾನದ ಹರಿಕಾರನೆಂದು ಪ್ರಚುರಪಡಿಸಲಾಯಿತು.  ಇದರ ಸಂಪೂರ್ಣ ಲಾಭವನ್ನು ಅಮೆರಿಕಾದ ಅಧ್ಯಕ್ಷ ಪದವಿಗಾಗಿ ೧೯೯೨ರಲ್ಲಿ ಅಮೆರಿಕಾದಲ್ಲಿ ನಡೆದ ಮಹಾಚುನಾವಣೆಯಲ್ಲಿ ಬುಷ್ ಪಡೆಯಲು ಪ್ರಯತ್ನಿಸಿದನು. ಅಧ್ಯಕ್ಷ ಸ್ಥಾನಕ್ಕೆ ರಿಪಬ್ಲಿಕನ್ ಪಕ್ಷದಿಂದ ಜಾರ್ಜ್‌ಬುಷ್ ಮತ್ತೆ ಮರು ಆಯ್ಕೆ ಬಯಸಿ ಸ್ಪರ್ಧೆಗಿಳಿದನು. ಉಪಾಧ್ಯಕ್ಷ ಸ್ಥಾನಕ್ಕೆ ಕ್ವೇಲ್‌ನನ್ನು ಆಯ್ಕೆ ಮಾಡಿಕೊಂಡನು. ಸುಮಾರು ೧೨ ವರ್ಷಗಳಿಂದ ವಿರೋಧ ಪಕ್ಷವಾಗಿ ರಚನಾತ್ಮಕ ಕಾರ್ಯ ನಿರ್ವಹಿಸಿದ್ದ ಡೆಮೊಕ್ರಾಟಿಕ್ ಪಕ್ಷವು ಅಂತಿಮವಾಗಿ ಅರ್ಕನ್‌ಸಾದ ಗವರ್ನರ್ ಬಿಲ್ ಕ್ಲಿಂಟನ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅಲ್-ಗೋರ್‌ನನ್ನು ರಿಪಬ್ಲಿಕ್ ಪಕ್ಷದ ಅಭ್ಯರ್ಥಿಗಳ ವಿರುದ್ಧ ಸ್ಪರ್ಧೆಗೆ ಇಳಿಸಿತು. ತನ್ನ ವಿದೇಶಿ ನೀತಿಗಳ ಮೂಲಕ ಅಮೆರಿಕಾವನ್ನು ಜಾಗತಿಕ ಪೊಲೀಸ್ ಕೆಲಸಕ್ಕೆ  ತಂದು ನಿಲ್ಲಿಸಿದ್ದ ಬುಷ್ ತಾನು ಆಯ್ಕೆ ಆಗೇ ಆಗುತ್ತೇನೆ ಎಂದು ಭರದಿಂದ ಚುನಾವಣಾ ಪ್ರಚಾರಕ್ಕೆ ಇಳಿದನು. ಆದರೆ ಡೆಮಾಕ್ರಾಟಿಕ್ ಪಕ್ಷದ ಯುವ ನಾಯಕ ಕ್ಲಿಂಟನ್ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವುದು ಹಾಗೂ ಯುದ್ಧಗಳಿಂದ ಹಿಂದೆ ಸರಿದು ಅನಾವಶ್ಯಕವಾಗಿ ಅಮೆರಿಕಾ ಎದುರಿಸುತ್ತಿದ್ದ ಅನಾಹುತಗಳನ್ನು ಕಡಿಮೆ ಮಾಡಿಕೊಳ್ಳುವುದು ತನ್ನ ಆದ್ಯತೆಗಳೆಂದು ಪ್ರಚಾರ ಪ್ರಾರಂಭಿಸಿದ. ರಿಪಬ್ಲಿಕನ್ ಪಕ್ಷದ ಬುಷ್ ಆಡಳಿತದ ಆಕ್ರಮಣಕಾರಿ ನೀತಿಗಳಿಂದ ತಪ್ಪಿಸಿಕೊಂಡು ಆದಷ್ಟು ಬೇಗ ತಮ್ಮ ಬಿಡುಗಡೆಗೆ ಹವಣಿಸುತ್ತಿದ್ದ ಅಮೆರಿಕಾದ ಮಹಾಜನತೆಗೆ ಕ್ಲಿಂಟನ್‌ನ ಶಾಂತವಾಗಿ ಪ್ರತಿಕ್ರಿಯಿಸುವ  ತಾಳ್ಮೆಯಿಂದ ವರ್ತಿಸುವ ಸ್ವಭಾವ ಮೆಚ್ಚುಗೆಗೆ ಪಾತ್ರವಾಯಿತು. ಈತನ ಜನಪ್ರಿಯತೆಯನ್ನು ತಗ್ಗಿಸಲು ಬುಷ್ ರಾಜಕೀಯೇತರ ವಿಷಯಗಳಿಗೆ ಸಂಬಂಧಿಸಿದಂತೆ ಅಗ್ಗದ ಪ್ರಚಾರ ಕೈಗೊಂಡನು. ಆದರೆ ರಿಪಬ್ಲಿಕನ್‌ರು ಚುನಾವಣೆಯಲ್ಲಿ ಕೈಗೊಂಡ ಯಾವ ಗಿಮಿಕ್‌ಗಳು ಪ್ರಯೋಜನಕ್ಕೆ ಬರಲಿಲ್ಲ. ಅಂತಿಮವಾಗಿ ಡೆಮೊಕ್ರಾಟಿಕ್ ಪಕ್ಷದ ಬಿಲ್ ಕ್ಲಿಂಟನ್ ಹಾಗೂ ಅಲ್ ಗೋರ್ ಆಯ್ಕೆಯಾದರು. ಯುವ ನಾಯಕ ಬಿಲ್ ವಿಲಿಯಂ ಜಫರಸನ್ ಕ್ಲಿಂಟನ್ ಅಮೆರಿಕಾದ ೪೩ನೇ ಅಧ್ಯಕ್ಷನಾಗಿ ಹಾಗೂ ರಾಜಕೀಯ ಮುತ್ಸದ್ದಿ ಅಲ್ ಗೋರ್ ಉಪಾಧ್ಯಕ್ಷನಾಗಿ ಬಹುಮತದಿಂದ ಆಯ್ಕೆ ಆದರು.

ಬಿಲ್ ಕ್ಲಿಂಟನ್ ಆಡಳಿತ

ಬಾಲ್ಯದಲ್ಲಿಯೇ ಅನೇಕ ಕಷ್ಟಗಳಿಂದ ಮೇಲೆದ್ದು ಬಂದ ಕ್ಲಿಂಟನ್ ಅಕ್ಸ್‌ಫರ್ಡ್ ಹಾಗೂ ಯೇಲ್‌ನಲ್ಲಿರುವ ಜಗತ್ಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗವನ್ನು ಮುಗಿಸಿ ಅರ್ಕನ್‌ಸಾ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕನಾಗಿ ತನ್ನ ವೃತ್ತಿ ಬದುಕನ್ನು ಪ್ರಾರಂಭಿಸಿದ. ಡೆಮೊಕ್ರಾಟಿಕ್ ಪಕ್ಷದಿಂದ ನಾಲ್ಕು ಬಾರಿ ಅರ್ಕನ್‌ಸಾ ರಾಜ್ಯದ ಗವರ್ನರ್ ಆಗಿ ಕಾರ್ಯ ನಿರ್ವಹಿಸಿ ಆಡಳಿತದ ಅನುಭವ ಪಡೆದಿದ್ದನು. ಕೊನೆಗೆ ಜಾರ್ಜ್ ಬುಷ್(ಸೀನಿಯರ್) ವಿರುದ್ಧ ಸೆಣಸಿ ವಿಜಯ ಪಡೆದು ಅಧ್ಯಕ್ಷನಾದನು. ಅತ್ಯಂತ ಕಿರಿಯ ವಯಸ್ಸಿನಲ್ಲಿ ಶ್ವೇತಭವನ ಪ್ರವೇಶಿಸಿದ ಮುತ್ಸದ್ದಿ ಎಂಬ ಪಾತ್ರಕ್ಕೆ ಪಾತ್ರನಾದ. ಹಿಲರಿ ಎಂಬ ಸುಂದರಿಯು ಈತನ ಪತ್ನಿಯಾಗಿದ್ದಳು. ಕ್ಲಿಂಟನ್ ಆಡಳಿತದಲ್ಲಿ ಇವಳೂ ಸಹ ಮಹತ್ವದ ಪಾತ್ರ ವಹಿಸಿದಳು. ಎರಡು ಅವಧಿಗೆ(ಎಂಟು ವರ್ಷ) ಅಮೆರಿಕಾದ ಅಧ್ಯಕ್ಷನಾಗಿ ಆಡಳಿತ ನಿರ್ವಹಿಸಿದ ಶ್ರೇಯಸ್ಸು ಕ್ಲಿಂಟನ್‌ಗೆ ಸಲ್ಲುತ್ತದೆ. ಅಲ್ಲದೇ ಅನೇಕ ಗೊಂದಲಗಳಿಗೆ ಹಾಗೂ ಪುಕ್ಕಟೆ ಸುದ್ದಿಗ್ರಾಸಗಳಿಗೆ ಈಡಾದ. ಇವೆಲ್ಲವುಗಳ ಮಧ್ಯೆ ಕ್ಲಿಂಟನ್‌ನು ತನ್ನ ಪಕ್ಷಕ್ಕೆ ಒಂದು ಬಿಗಿಯಾದ ನಿಲುವನ್ನು ಒದಗಿಸಿಕೊಟ್ಟ. ಭಾರತ ಸೇರಿದಂತೆ ಏಷ್ಯದ ಎಲ್ಲ ರಾಷ್ಟ್ರಗಳಿಗೆ ಭೇಟಿ ನೀಡಿ ಬಡ ದೇಶಗಳ ಪ್ರೀತಿಗೆ ಪಾತ್ರನಾದ. ವ್ಯಭಿಚಾರದಲ್ಲಿ ಸಿಕ್ಕಿ ಹಾಕಿಕೊಂಡಿದ್ದರೂ ತನ್ನ ಮಾನವೀಯ ಹಿನ್ನೆಲೆಯ ಕೆಲಸ ಕಾರ್ಯಗಳಿಗಾಗಿ ಇಂದಿಗೂ ಜನರ ಮನದಲ್ಲಿ ಒಬ್ಬ ಮಾನವೀಯ ಗುಣವುಳ್ಳ ಅಧ್ಯಕ್ಷನಾಗಿ ಅಚ್ಚಳಿಯದೇ ಉಳಿದಿದ್ದಾನೆ.

ತನ್ನ ಆಡಳಿತಾವಧಿಯ ಮೊದಲ ನೂರು ದಿನಗಳಲ್ಲಿ ತಾನು ಈ ಹಿಂದೆ ಚುನಾವಣೆ ಯಲ್ಲಿ ನೀಡಿರುವ ವಾಗ್ದಾನಗಳ ಬಗೆಗೆ ಮೌಲ್ಯಮಾಪನ ಕಾರ್ಯ ಕೈಗೊಂಡನು. ಸಾರ್ವಜನಿಕರಿಗೆ ಶ್ವೇತಭವನದ ಪ್ರವೇಶವನ್ನು ಸರಳಗೊಳಿಸಿ ಎಲ್ಲರ ಪ್ರೀತಿಗೆ ಪಾತ್ರನಾದ. ರೇಗನ್ ಹಾಗೂ ಬುಷ್ ಆಡಳಿತಾವಧಿಯಲ್ಲಿ ಗರ್ಭಪಾತ ವಿಷಯದ ಬಗೆಗೆ ಎದ್ದಿರುವ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ಹುಡುಕಿದ. ಅವುಗಳ ಜಾರಿಗೆ ತೆಗೆದುಕೊಳ್ಳ ಬೇಕಾದ ನಿರ್ಣಯಗಳಿಗಿದ್ದ ತಡಗೋಡೆಯನ್ನು ಒಡೆದು ಜನರ ಇಚ್ಛೆಗೆ ಬಿಟ್ಟುಬಿಟ್ಟನು. ರಕ್ಷಣಾದಳಗಳಲ್ಲಿ ಗುಪ್ತವಾಗಿ ನಡೆಯುತ್ತಿದ್ದ ಸಲಿಂಗಕಾಮದ ಬಗೆಗೆ ಇದ್ದ ಕಾನೂನು ತೊಡಕುಗಳನ್ನು ನಿವಾರಿಸಿದ. ಎಲ್ಲಕ್ಕಿಂತ ಮುಖ್ಯವಾಗಿ ಬುಷ್ ಕಾಲದಲ್ಲಿ ಹದಗೆಟ್ಟು ಹೋಗಿದ್ದ ಅಮೆರಿಕಾದ ಆರ್ಥಿಕ ಪರಿಸ್ಥಿತಿಯನ್ನು ಮೇಲಕ್ಕೆತ್ತಲು ಶ್ರೀಮಂತರ ಮೇಲಿನ ತೆರಿಗೆಯನ್ನು ಹೆಚ್ಚಿಸಿದ ಹಾಗೂ ಬಡವರ ಮೇಲಿನ ತೆರಿಗೆಯ ಭಾರವನ್ನು ಕಡಿಮೆ ಮಾಡಿದ. ತಾನು ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಸಾಮಾಜಿಕ ಕಾರ್ಯಗಳ ಬಗೆಗೆ ಸ್ಪಷ್ಟ ಯೋಜನೆ ರೂಪಿಸಿಕೊಂಡ ಕ್ಲಿಂಟನ್ ಕೈಗೊಂಡ ಸುಧಾರಣೆಗಳನ್ನು ಮಹಾ ಸಮಾಜ (ಗ್ರೇಟರ್ ಸೊಸೈಟಿ) ಹಾಗೂ ಹೊಸಕ್ಷೇತ್ರ(ನ್ಯೂ ಫ್ರಾಂಟಿಯರ್)ಯೋಜನೆಗಳೆಂದು ಕರೆಯುತ್ತಾರೆ.

ಮೊದಲಿಂದಲೂ ಅಲ್ಪಸಂಖ್ಯಾತರ ಹಾಗೂ ಮಹಿಳೆಯರ ಹಕ್ಕುಗಳ ಬಗೆಗೆ ವಿಶೇಷ ಕಾಳಜಿ ವಹಿಸಿದ ಕ್ಲಿಂಟನ್ ತನ್ನ ಆಡಳಿತ ಮಂಡಳಿಯಲ್ಲಿ ಮಹಿಳೆಯರನ್ನು ಹಾಗೂ ಅಲ್ಪಸಂಖ್ಯಾತರನ್ನು ಆಯ್ಕೆ ಮಾಡುವ ಮೂಲಕ ತನ್ನನ್ನು ಸಮರ್ಥಿಸಿಕೊಂಡನು. ಜನೆಟ್ ರೀನೊಳ ಎಂಬ ಮಹಿಳೆಯನ್ನು ಅಟಾರ್ನಿ ಜನರಲ್ ಹುದ್ದೆಗೆ ನೇಮಿಸಿದನು. ಇದು ಅಮೆರಿಕಾ ಇತಿಹಾಸದಲ್ಲಿ ಮೊದಲ ಘಟನೆಯಾಗಿತ್ತು. ಟೆಕ್ಸಾಸ್ ರಾಜ್ಯದಲ್ಲಿ ಬೀಡುಬಿಟ್ಟಿದ್ದ ಪ್ರವಾದಿ ಹಾಗೂ ಮೂಲಭೂತವಾದಿಯಾಗಿದ್ದ ಡೇವಿಡ್ ಕರೆಷನ್‌ನು ಧಾರ್ಮಿಕತೆಯ ನಶೆಯಲ್ಲಿ ಅನೇಕ ಗುಪ್ತಹತ್ಯೆ ಹಾಗೂ ಜನರು ತಾವೇ ಸ್ವತಃ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೆಪಿಸುತ್ತಿದ್ದ. ಅಮೆರಿಕಾದ ಆಡಳಿತಕ್ಕೆ ಇದೊಂದು ಗಂಭೀರವಾದ ದೊಡ್ಡ ಪಿಡುಗಾಗಿತ್ತು. ಇಂಥ ಹೇಯ ಯೋಜನೆಗಳನ್ನು ರೂಪಿಸುತ್ತಿದ್ದ ಮೂಲಭೂತವಾದಿಗಳನ್ನು ಅನೇಕ ವಿರೋಧಗಳ ಮಧ್ಯೆಯು ಸಂಪೂರ್ಣವಾಗಿ ಈ ದಿಟ್ಟ ಮಹಿಳೆಯು ಹತ್ತಿಕ್ಕಿದಳು. ಈ ಘಟನೆಯು ಸಾರ್ವಜನಿಕರಿಗೆ ಮೆಚ್ಚುಗೆ ಆಗಿ ಕ್ಲಿಂಟನ್ ಸರಕಾರಕ್ಕೆ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿತು. ಜಿಮ್ಮಿ ಕಾರ್ಟರ್‌ನ ಕಾಲದ ಆಡಳಿತಲ್ಲಿದ್ದು ಹೆಸರು ಮಾಡಿದ್ದ ರಾಜಕೀಯ ನಿಪುಣ ವಾರೆನ್ ಕ್ರಿಸ್ಟೊಫರ್‌ನನ್ನು ಮತ್ತೆ ಕರೆತಂದು ಅತೀ ಮಹತ್ವದ ವಿದೇಶಾಂಗ ಇಲಾಖೆಯ ಜವಾಬ್ದಾರಿ ಹುದ್ದೆಗೆ ನೇಮಿಸಿದನು. ಜನರ ಆರೋಗ್ಯ ಸುಧಾರಣೆಗಳ ಬಗೆಗೆ ಮೊದಲಿನಿಂದಲೂ ಆಸಕ್ತಿ ಹೊಂದಿದ್ದ ಕ್ಲಿಂಟನ್ ‘‘ಆರೋಗ್ಯ ಆಯೋಗವನ್ನು’’ ರೂಪಿಸಿದನು. ಅದಕ್ಕೆ ತನ್ನ ಹೆಂಡತಿ ಹಿಲರಿಯನ್ನು ನೇಮಿಸಿ ಅನೇಕರ ಟೀಕೆಗೆ ಒಳಗಾದನು. ಇವುಗಳನ್ನು ಲೆಕ್ಕಿಸದ ಕ್ಲಿಂಟನ್ ತನ್ನ ಆಡಳಿತದ ಅವಧಿಯುದ್ಧಕ್ಕೂ ಹಿಲರಿಯನ್ನು ಒಂದಿಲ್ಲ ಒಂದು ಜವಾಬ್ದಾರಿಗೆ ನೇಮಿಸುತ್ತಿದ್ದನು. ಕಾರಣ ಅವಳೊಬ್ಬಳು ನುರಿತ ಆಡಳಿತಗಾರಳಾಗಿದ್ದಳು ಎಂದು ಸಮರ್ಥಿಸಿಕೊಂಡ ಅಧ್ಯಕ್ಷನು ತನ್ನ ಸಂಬಂಧಿಗಳನ್ನು ಯಾವುದೇ ಜವಾಬ್ದಾರಿಯ ಕೆಲಸಗಳಿಗೆ ನೇಮಿಸಬಾರದೆಂಬ ವಾಡಿಕೆ ಇದ್ದರೂ ಅದನ್ನು ಮುರಿದು ಎಲ್ಲರ ಅಸಮಾಧಾನಕ್ಕೆ ಕಾರಣನಾದನು.

ಅಮೆರಿಕಾದ ಆರ್ಥಿಕ ಪರಿಸ್ಥಿತಿಯನ್ನು ತಹಬಂದಿಗೆ ತರುವುದು ಕ್ಲಿಂಟನ್‌ನ ಮೊದಲ ಆದ್ಯತೆಯಾಗಿತ್ತು. ಆರ್ಥಿಕ ವಹಿವಾಟುಗಳಿಗೆ ವೇಗವನ್ನು ನೀಡುವುದು ಹಾಗೂ ಖೋತಾ ಬಜೆಟ್ಟನ್ನು ಸಮತೋಲನಗೊಳಿಸುವುದು ಆತನ ಆಡಳಿತದ ಮುಖ್ಯ ಉದ್ದೇಶಗಳಾಗಿದ್ದವು. ಇದಕ್ಕಾಗಿ ಎಲ್ಲ ತೆರಿಗೆಗಳನ್ನು ಹೆಚ್ಚಿಸಿದ ಹಾಗೂ ಆರ್ಥಿಕ ವ್ಯವಸ್ಥೆಯನ್ನು ಪುನಃಶ್ಚೇತನಗೊಳಿಸುವುದಕ್ಕಾಗಿಯೇ ವಿಶೇಷ ಸಾಲ ಪಡೆಯಲು ಕಾಂಗ್ರೆಸ್‌ನ ಅನುಮೋದನೆ ಪಡೆಯಲು ಕಾರ್ಯೋನ್ಮುಖನಾದನು. ಸುಮಾರು ೧:೫ ಟ್ರಿಲಿಯನ್ ಡಾಲರ್‌ಗಳ ಅಯವ್ಯಯ ಹಾಗೂ ೪೯೬ ಬಿಲಿಯನ್ ಡಾಲರ್‌ಗಳ ಖೋತಾ ಬಜೆಟ್ ಮಂಡಿಸಲು ಕಾಂಗ್ರೆಸ್‌ನ್ನು ಒಪ್ಪಿಸಿದನು. ಆಡಳಿತದ ವಿಪರೀತ ಖರ್ಚನ್ನು ತಗ್ಗಿಸಲು ಶ್ವೇತಭವನದ ಸಿಬ್ಬಂದಿಗಳನ್ನು ಕಡಿತಗೊಳಿಸಿ ಜನತೆಯ ಮೆಚ್ಚುಗೆ ಪಡೆದ. ಅಲ್ಲದೇ ಸರಕಾರಿ ವ್ಯವಸ್ಥೆಯಲ್ಲಿ ಆಗುತ್ತಿದ್ದ ಅನಾವಶ್ಯಕ ಖರ್ಚುಗಳನ್ನು ಕಡಿಮೆಗೊಳಿಸಿ ಉಳಿದೆಲ್ಲ ಆಡಳಿತಗಾರರಿಗೆ ಮಾದರಿಯಾದನು.

ರಾಜಕೀಯ ನಾಯಕರು ತಮ್ಮ ಚುನಾವಣೆಗಳಿಗೆ ಪಡೆಯುವ ವಂತಿಗೆಯ ಹಣದ ದುರುಪಯೋಗವಾಗದಂತೆ ಹಾಗೂ ಅದನ್ನು ಕಾನೂನು ರೀತಿ ತಡೆಗಟ್ಟುವ ಕ್ರಮ ಕೈಗೊಳ್ಳಲು ಕಾಂಗ್ರೆಸ್‌ನ ಒಪ್ಪಿಗೆಗಾಗಿ ಒತ್ತಾಯಿಸಿದ. ಮೋಟಾರ್ ವಾಹನ ಕಾಯ್ದೆ ಹಾಗೂ ತಮ್ಮ ರಕ್ಷಣೆಗಾಗಿ ಕಡ್ಡಾಯವಾಗಿ ಹೊಂದಿದ್ದ ಅಸ್ತ್ರಗಳ ಬಗೆಗಿದ್ದ ಕಾಯ್ದೆಗಳನ್ನು ಸುಧಾರಿಸುವ ಮಹತ್ವದ ಕ್ರಮಕೈಗೊಂಡನು. ಅಮೆರಿಕಾದಲ್ಲಿ ಪ್ರತಿಯೊಬ್ಬರು ತಮ್ಮ ರಕ್ಷಣೆಗಾಗಿ ವೈಯಕ್ತಿಕ ಅಸ್ತ್ರಗಳನ್ನು ಇಟ್ಟುಕೊಳ್ಳುವುದು ಅವರ ಹಕ್ಕುಗಳಲ್ಲಿ ಒಂದೆಂದು ಪರಿಗಣಿಸುತ್ತಾರೆ. ಅಲ್ಲದೆ ಇದು ಅವರಿಗೆ ತುಂಬಾ ಗೌರವದ ವಿಚಾರ. ಆದರೆ ಇದರ ದುರುಪಯೋಗ ತಡೆಗಟ್ಟಲು ಕಾನೂನು ಚೌಕಟ್ಟಿನಲ್ಲಿ ಬಿಗಿಯಾದ ನಿಲುವುಗಳಿರಲಿಲ್ಲ. ಆದ್ದರಿಂದ ಪ್ರತಿ ವ್ಯಕ್ತಿಯು ಬಂದೂಕಿನ ಲೈಸನ್ಸ್ ಪಡೆಯುವಾಗ ಕಠಿಣ ತಪಾಸಣೆಯು ಅವಶ್ಯಕವೆಂದು ಕಾನೂನು ಮಾಡಲಾಯಿತು.

ಕ್ಲಿಂಟನ್‌ನ ಕಾಲದಲ್ಲಿ ಅತೀ ಹೆಚ್ಚಿನ ಚರ್ಚೆಗೆ ಒಳಗಾದ ವಿಷಯವೆಂದರೆ ‘ನಾಫ್ಟಾ’ (ನಾರ್ಥ ಅಮೆರಿಕಾನ್ ಫ್ರೀಟ್ರೇಡ್ ಅಗ್ರಿಮೆಂಟ್) ಒಪ್ಪಂದ. ಕೆನಡ ಹಾಗೂ ಮೆಕ್ಸಿಕೊ ದೇಶಗಳನ್ನೊಳಗೊಂಡ ಅಮೆರಿಕಾದ ವ್ಯಾಪಾರಿ ಸಂಬಂಧಗಳಿಗೆ ಅಮೆರಿಕಾದ ಸೆನೆಟರುಗಳೇ ವಿರೋಧ ವ್ಯಕ್ತಪಡಿಸುತ್ತಿದ್ದರು. ಅಸಮಾಧಾನಗೊಂಡ ಸದಸ್ಯರೆನ್ನಲ್ಲ ಸೇರಿಸಿಕೊಂಡು ಇದನ್ನು ಚರ್ಚೆಯ ಮೂಲಕ ಬಗೆಹರಿಸಿ ಒಪ್ಪಂದ ಮಾಡಿಕೊಳ್ಳಲು ಯಶಸ್ವಿಯಾದನು. ನಂತರದ ದಿನಗಳಲ್ಲಿ ಎಲ್ಲ ದೇಶಗಳೊಂದಿಗೆ ಅಮೆರಿಕಾ ದೇಶವು ಮುಕ್ತ ವ್ಯಾಪಾರ ಹೊಂದುವಂತೆ ಕ್ಲಿಂಟನ್ ತನ್ನ ಆಡಳಿತದಲ್ಲಿ ನಿರ್ಣಾಯಕ ರೀತಿಯ ಕ್ರಮ ಕೈಗೊಂಡನು. ೧೯೯೩ರಲ್ಲಿ ಅಮೆರಿಕಾದ ಆರ್ಥಿಕ ಹೃದಯವಾಗಿದ್ದ ವರ್ಲ್ಡ್ ಟ್ರೇಡ್ ಸೆಂಟರ್‌ನ ಮೇಲೆ ಭಯೋತ್ಪಾದಕರು ದಾಳಿ ಮಾಡಿ ೧೦ ಜನರ ಸಾವಿಗೆ ಕಾರಣರಾದರು. ನ್ಯೂಯಾರ್ಕ್‌ನಲ್ಲಿರುವ ಈ ಕಟ್ಟಡ ಮುಂದೊಂದು ದಿನ ಬುಡಸಮೇತ ಬಿದ್ದು ಹೋಗಬಹುದೆಂಬ ನಿರೀಕ್ಷೆ ಅಮೆರಿಕಾನ್‌ರಿಗಿರಲಿಲ್ಲ. ೧೯೯೩ರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಅಮೆರಿಕಾದ ಬೇಹುಗಾರಿಕೆ ಇಲಾಖೆ(ಎಫ್.ಐ.ಬಿ ಮತ್ತು ಸಿ.ಐ.ಎ) ಮಧ್ಯಪ್ರಾಚ್ಯದ ಮುಸ್ಲಿಂ ಮೂಲಭೂತವಾದಿಗಳ ಕೈವಾಡಗಳಿರುವ ಬಗೆಗೆ ಗುಪ್ತವರದಿ ನೀಡಿ ಸುಮ್ಮನಾಯಿತು. ಆದರೆ ಈ ಘಟನೆಯಿಂದ ಸಿಟ್ಟಿಗೆದ್ದ ಅಮೆರಿಕಾನ್ನರು ಏಷ್ಯ ಖಂಡದ ಎಲ್ಲ ದೇಶಗಳ ವಲಸೆಗಳನ್ನು ತಡೆಗಟ್ಟಲು ಕಠಿಣವಾದ ಕಾನೂನುಗಳನ್ನು ರೂಪಿಸಲು ಒತ್ತಾಯಿಸಿದರು. ಇವುಗಳನ್ನೆಲ್ಲ ಲೆಕ್ಕಿಸದ ಅಮೆರಿಕಾ ಮುಂದಿನ ದಿನಗಳಲ್ಲಿ ಭಾರೀ ಅನಾಹುತಕ್ಕೊಳಗಾದುದು ಇತಿಹಾಸ.

ಜಾಗತಿಕ ಸನ್ನಿವೇಶದಲ್ಲಿ ಯು.ಎಸ್.ಎಸ್.ಆರ್.ನ್ನು ಒಡೆಯಲು ಅಮೆರಿಕಾ ಮಾಡಿದ ಪ್ರಯತ್ನಗಳು ಫಲಿಸಿತು. ಬಂಡವಾಳಶಾಹಿ ರಾಷ್ಟ್ರಗಳು ಅಂದುಕೊಂಡಂತೆ ಅಖಂಡ ಸೋವಿಯತ್ ಯೂನಿಯನ್ ಹದಿನಾಲ್ಕು ಭಾಗಗಳಲ್ಲಿ ಛಿದ್ರವಾಯಿತು. ಗೊರ್ಬಚೇವ್ ನಂತರ ಬಂದ ಯೆಲ್ಸಿಸ್ಟಿನ್ ಆಡಳಿತದ ನೀತಿಗಳು ಕಮ್ಯುನಿಸ್ಟ್ ಪ್ರತಿಪಾದಕರನ್ನೇ ಸಂಪೂರ್ಣವಾಗಿ ಅಸಹಾಯಕರನ್ನಾಗಿ ಮಾಡಿ ಕೈಕಟ್ಟಿ ಕುಳಿತುಕೊಳ್ಳುವಂತೆ ಮಾಡಿದವು. ಅಲ್ಲದೇ ತನ್ನನ್ನು ಹಲವಾರು ದಶಕಗಳಿಂದ ಅಗಾಧವಾಗಿ ವಿರೋಧಿಸುತ್ತ ಬಂದಿದ್ದ ತನ್ನ ಕಡುವೈರಿ ಅಮೆರಿಕಾದ ಮುಂದೆ ಸಾಲಕ್ಕಾಗಿ ಸ್ವತಃ ಯೆಲ್ಸಿಸ್ಟಿನ್‌ನೇ ತಲೆಬಾಗಿ ನಿಂತನು. ಈಗ ಯಾವ ಪೂರ್ವಗ್ರಹಗಳಿಗೆ ಒಳಗಾಗದೇ ಕ್ಲಿಂಟನ್ ಆಡಳಿತವು ಸಹ ಕೆಲವು ಷರತ್ತುಗಳನ್ನು ವಿಧಿಸಿ ಬಿಲಿಯನ್ ಡಾಲರ್‌ಗಳ ಆರ್ಥಿಕ ನೆರವು ರಷ್ಯಾದ ಹೊಸ ಆಡಳಿತಕ್ಕೆ ನೀಡಿತು. ರಷ್ಯಾ ನೇತೃತ್ವದ ಪೂರ್ವ ಯುರೋಪಿಯನ್ ರಾಷ್ಟ್ರಗಳು ರಷ್ಯಾದ ಗೆಳೆತನ ತೊರೆದು ರಷ್ಯಾ ಸೇರಿದಂತೆ ಎಲ್ಲ ರಾಷ್ಟ್ರಗಳು ನ್ಯಾಟೋ ಸೇರಿ ಅಮೆರಿಕಾದ ನಾಯಕತ್ವವನ್ನು ಒಪ್ಪಿದವು.  ಇಂಥ ಪರಿಣಾಮಗಳೊಂದಿಗೆ ಸುಮಾರು ಐದು ದಶಕಗಳ ಕಾಲ ನಿರಂತರವಾಗಿ ನಡೆದ ಶೀತಲ ಸಮರ ಸೋವಿಯತ್ ಯೂನಿಯನ್‌ನ ಅಸ್ಥಿರತೆಯೊಂದಿಗೆ ಕೊನೆಗೊಂಡಂತಾಯಿತು.

ಸೋಮಾಲಿಯಾದ ಹಸಿವಿನ ಸಮಸ್ಯೆ ಈ ಸಮಯದಲ್ಲಿ ಅಂತಾರಾಷ್ಟ್ರೀಯ ಬಹುದೊಡ್ಡ ವಿವಾದ ಕೇಂದ್ರವಾಯಿತು. ಅಲ್ಲಿನ ಸ್ಥಳೀಯರು ನೀಡುತ್ತಿದ್ದ ಅಸಹಕಾರದಿಂದ ಬೇಸತ್ತ ಕ್ಲಿಂಟನ್ ತನ್ನ ಪಡೆಗಳನ್ನು ಹಿಂದಕ್ಕೆ ಕರೆಯಿಸಿಕೊಂಡನು. ಯುಗೋಸ್ಲಾವಿಯಾ ಒಡೆದು ಹೋದ ನಂತರ ಸರ್ಬರ್  ಮಾಡುತ್ತಿದ್ದ ಜನಾಂಗೀಯ ದ್ವೇಷ  ಐರೋಪ್ಯ ಜಗತ್ತಿನಲ್ಲಿ ಹೊಸಬಗೆಯ ತಲ್ಲಣಗಳನ್ನು ಸೃಷ್ಟಿಸಿತು. ಇಲ್ಲಿ ನಡೆಯುವ ಅಮಾನವೀಯ ಘಟನೆಗಳನ್ನು ತಕ್ಷಣ ನಿಲ್ಲಿಸುವಂತೆ ಸರ್ಬ್ ಮುಖಂಡರಿಗೆ  ಅಮೆರಿಕಾದ ಆಡಳಿತ ತಾಕೀತು ಮಾಡಿತು. ಆದರೆ ಇದಾವುದಕ್ಕೂ ಸರ್ಬ್ ನಾಯಕರು ಬಗ್ಗಲಿಲ್ಲ. ಅಲ್ಲದೇ ಅಂತಾರಾಷ್ಟ್ರೀಯವಾಗಿ ಇದರ ಬಗೆಗೆ ಜಗತ್ತಿನ ಉಳಿದ ಯಾವ ದೇಶಗಳು ತಲೆಕೆಡಿಸಿಕೊಳ್ಳಲಿಲ್ಲ. ಕೊನೆಗೆ ಈ ಕೃತ್ಯಗಳನ್ನು ತಡೆಗಟ್ಟಲೇಬೇಕೆಂಬ ಇಚ್ಛೆಯೊಂದಿಗೆ ಏಕಾಂಗಿಯಾಗಿ ಅಮೆರಿಕಾ ಬಾಂಬರ್ ದಾಳಿಗೆ ಇಳಿಯಿತು. ಕಾರ್ಯಾಚರಣೆ ಕೈಗೊಂಡು ಯಶಸ್ವಿಯಾದ ಬಳಿಕ ರಷ್ಯಾ ಸೇರಿದಂತೆ ಪ್ರಪಂಚದ ಎಲ್ಲ ರಾಷ್ಟ್ರಗಳು ಕ್ಲಿಂಟನ್‌ನನ್ನು ಶ್ಲಾಘಿಸಿದವು. ಹಲವು ದಶಕಗಳಿಂದಿದ್ದ ವಿಯಟ್ನಾಂನ ಮೇಲಿನ ಆರ್ಥಿಕ ದಿಗ್ಬಂಧಗಳನ್ನು ತೆರುವುಗೊಳಿಸಿ ತನ್ನ ಉದಾರ ನೀತಿಗಳನ್ನು ಸಾಬೀತು ಪಡಿಸಿದನು. ಇವೆಲ್ಲವುಗಳ ಮಧ್ಯೆ ಉತ್ತರ ಕೊರಿಯಾದ ಸಮತಾವಾದ ಸರ್ವಾಧಿಕಾರಿಗಳು ಚೀನದ ಕುಮ್ಮಕ್ಕಿನಿಂದ ದಕ್ಷಿಣ ಕೊರಿಯಾದ ಮೇಲೆ ವಿನಾಕಾರಣ ಜಗಳ ತೆಗೆಯುವುದನ್ನು ಪ್ರಾರಂಭಿಸಿದರು. ಅದರ ಅಪಾಯವನ್ನರಿತ ಕ್ಲಿಂಟನ್ ಆಡಳಿತವು ಉತ್ತರ ಕೊರಿಯಾದ ಬಗೆಗೆ ಬಿಗಿಯಾದ ನಿಲುವು ತಾಳಿತು. ಅಲ್ಲದೇ ಅದು ಗುಪ್ತವಾಗಿ ತಯಾರಿಸುತ್ತಿದ್ದ ಅಣ್ವಸ್ತ್ರಗಳನ್ನು ನಾಶಪಡಿಸಲು ಒತ್ತಡ ಹೇರಲಾರಂಭಿಸಿತು ಹಾಗೂ ಮುಂದಿನ ದಿನಗಳಲ್ಲಿ ಅವುಗಳನ್ನು ನಿರ್ಮಿಸಿದಂತೆ ತಾಕೀತು ಮಾಡುವಲ್ಲಿ ಯಶಸ್ವಿಯಾಯಿತು.

ಅಮೆರಿಕಾದ ಆಂತರಿಕ ಆಡಳಿತದ ಬಗೆಗೆ ಯಾವಾಗಲೂ ಒಂದು ಭಯ ಕಾಡಿ ಬಾಧಿಸುತ್ತಿತ್ತು. ಅದೆಂದರೆ ಅಮೆರಿಕಾದ ಅಧ್ಯಕ್ಷರು ಅಂತಾರಾಷ್ಟ್ರೀಯ ಸಮಸ್ಯೆಗಳಿಗೆ ಹೆಚ್ಚಿನ ಮಹತ್ವ ಹಾಗೂ ಒತ್ತು ನೀಡುತ್ತಿದ್ದರಿಂದ ತನ್ನ ದೇಶದಲ್ಲಿ ಆಂತರಿಕವಾಗಿ ತಲೆದೋರುತ್ತಿದ್ದ ಆರ್ಥಿಕ ಹಿನ್ನಡೆಯ ಬಗೆಗೆ ಆಡಳಿತವು ತಾತ್ಸಾರ ಮಾಡುತ್ತಿದೆ ಎಂದು ತಿಳಿದು ಹೆಚ್ಚಿನ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ ಅಧ್ಯಕ್ಷರು ಮತ್ತೆ ನಂತರದ ದಿನಗಳಲ್ಲಿ ಅಂತಾರಾಷ್ಟ್ರೀಯ ಸಮಸ್ಯೆಗಳಿಂದ ವಿಮುಖಗೊಂಡು ಆಂತರಿಕ ವಿಚಾರಗಳ ಬಗೆಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳುತ್ತಿದ್ದರು. ಕ್ಲಿಂಟನ್‌ನಿಗೂ ಸಹ ಅದೇ ಇತಿಹಾಸ ಪುನಾರಾವರ್ತನೆಯಾಯಿತು. ದೇಶದಲ್ಲಿನ ಆರ್ಥಿಕ ಸುಧಾರಣೆಗಳನ್ನು ಭರದಿಂದ ಕೈಗೊಂಡ ಕ್ಲಿಂಟನ್ ಆಡಳಿತ ಜಾಗತಿಕ ಮಟ್ಟದಲ್ಲಿಯೂ ಸಹ ಆರ್ಥಿಕ ಶೃಂಗಸಭೆಗಳಲ್ಲಿ ಅಮೆರಿಕಾದ ನೀತಿಗಳಿಗೆ ಹೆಚ್ಚಿನ ಲಾಭವಾಗುವಂತೆ ಪ್ರಯತ್ನಿಸಿ ಸಫಲವಾಯಿತು. ಇದು ಹೆಚ್ಚಿನಂಶ ಅಮೆರಿಕಾನ್‌ರ ವಿಶ್ವಾಸ ಗಳಿಸಲು ಕ್ಲಿಂಟನ್ ಆಡಳಿತದ ಮುಂಜಾಗ್ರತೆಯ ಕ್ರಮಗಳಾಗಿದ್ದವು. ಇದೇ ವೇಳೆಗೆ ಅಮೆರಿಕಾದ ಇತಿಹಾಸದಲ್ಲಿ ಕೇಳರಿಯಲಾರದ ಕೆಲವು ಘಟನೆಗಳು ನಡೆದವು. ಪಶ್ಚಿಮ ಕರಾವಳಿಯಲ್ಲಿ ದಿಢೀರನೆ ಹುಟ್ಟಿಕೊಂಡ ಬಿರುಗಾಳಿ ಹಾಗೂ ಭೂಕಂಪನಗಳಿಂದ ಕೋಟ್ಯಂತರ ಡಾಲರಗಳ ಆರ್ಥಿಕ ನಷ್ಟ ಅಮೆರಿಕಾ ಅನುಭವಿಸಿತು. ಇಂತಹ ಎಲ್ಲ ಸಮಸ್ಯೆಗಳಿಗೆ ಎದೆಗುಂದಲಿಲ್ಲ. ನೈಸರ್ಗಿಕ ಅವಘಡಗಳಿಂದ ಉಂಟಾದ ಕಷ್ಟಕಾರ್ಪಣ್ಯಗಳನ್ನು ಮಾನವೀಯ ನೆಲೆಯಲ್ಲಿ ಗಂಭೀರವಾಗಿ ಪರಿಗಣಿಸಿ ಕ್ಲಿಂಟನ್ ಆಡಳಿತ ಜನ ಮೆಚ್ಚುವಂತೆ ಕಾರ್ಯ ಕೈಗೊಂಡು ಯಶ ಸಾಧಿಸಿತು. ಅಮೆರಿಕಾದ ದಿಟ್ಟಕ್ರಮಗಳು ವಿಶ್ವಕ್ಕೆ ಮಾದರಿಯಾದವು.

ಅನವಶ್ಯಕ ವೆಚ್ಚಗಳನ್ನು ಸರಕಾರವು ತಗ್ಗಿಸಲು ‘‘ಸರ್ಕಾರದ ಅನ್ವೇಷಣೆ’’ ಎಂಬ ಮಹತ್ವದ ಕಾರ್ಯ ಮಾಡಲಾಯಿತು. ಚುನಾವಣೆಯ ಖರ್ಚುಗಳಿಗೆ ಕಡಿವಾಣ ಹಾಕಲಾಯಿತು. ಅಪರಾಧಿ ಕಾಯ್ದೆಗಳನ್ನು ಮತ್ತಷ್ಟು ಬಿಗಿಗೊಳಿಸಲಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ಜನರ ಆರೋಗ್ಯದ ಬಗೆಗೆ ಹೆಚ್ಚಿನ ಕಾಳಜಿ ವಹಿಸಿದ ಕ್ಲಿಂಟನ್ ಆಡಳಿತ ಪ್ರತಿಯೊಬ್ಬನು ಸದೃಢವಾದ ಆರೋಗ್ಯ ಪಡೆಯುವುದು ಆತನ ಮೂಲಭೂತ ಹಕ್ಕು ಎಂದು ತಿಳಿದು ಅದಕ್ಕೆ ಆಳುವ ಸರಕಾರ ವಿಶೇಷ ಸವಲತ್ತುಗಳನ್ನು ನೀಡಬೇಕೆಂದು ಅನುಶಾಸನ ಮಾಡಿದನು. ಒಬ್ಬ ರಾಷ್ಟ್ರಾಧ್ಯಕ್ಷನಾಗಿ ತನ್ನ ಆಡಳಿತಾವಧಿಯಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಅನೇಕ ಯೋಜನೆ ಹಾಗೂ ಕಾಯ್ದೆಗಳನ್ನು ಜಾರಿಗೆ ತಂದನು. ಈವರೆಗೂ ಯಾವ ಅಧ್ಯಕ್ಷನು ತಮ್ಮ ಸರಕಾರಗಳಲ್ಲಿ ಮಾಡಲಾರದಷ್ಟು ಸಹಾಯವನ್ನು ಅಮೆರಿಕಾದ ಮಹಾಜನತೆಗೆ ಕ್ಲಿಂಟನ್ ಆಡಳಿತ ಕಲ್ಪಿಸಿ ಕೊಟ್ಟಿತು. ಆದರೆ ಕ್ಲಿಂಟನ್‌ನ ವೈಯಕ್ತಿಕ ಬದುಕು ಹೆಚ್ಚಿನ ರಾಜಕೀಯ ಚರ್ಚೆಗೆ ಗ್ರಾಸವಾಯಿತು. ಮೊನಿಕಾ ಲೆವಿನ್ಸ್ಕಿಯ ಪ್ರಕರಣವಂತೂ ಜಾಗತಿಕ ಮಟ್ಟದ ಚರ್ಚಾ ವಿಷಯವಾಗಿತ್ತು. ಮೊದಮೊದಲು ತನ್ನ ಮೇಲಿನ ಆಪಾದನೆಗಳು ದುರುದ್ದೇಶದಿಂದ ಕೂಡಿವೆ ಎಂದು ಹೇಳಿದ. ಆದರೆ ಲಿಂಡಾ ಟ್ರೆಪ್ ಎನ್ನುವ ವ್ಯಕ್ತಿ ಸಾಕ್ಷಿ ಸಮೇತ ಮಾಧ್ಯಮಗಳಿಗೆ ವಿಷಯ ಬಹಿರಂಗಪಡಿಸಿದಾಗ ತಾನು ಮಾಡಿರುವುದು ತಪ್ಪೆಂದು ಹೇಳಿಕೊಂಡು ಕ್ಷಮೆ ಯಾಚಿಸಿದ. ಇದನ್ನು ರಾಜಕೀಯ ಬಂಡವಾಳವನ್ನಾಗಿ ಮಾಡಿಕೊಳ್ಳಲು ರಿಪಬ್ಲಿಕನ್ ಸೆನೆಟರುಗಳು ಅಪಪ್ರಚಾರವನ್ನು ಕೈಗೊಂಡರು ಹಾಗೂ ಅಧ್ಯಕ್ಷನನ್ನು ಅವಧಿಯ ಮುನ್ನವೆ ತೆಗೆದು ಹಾಕುವಂತೆ ಜೋರಾದ ಪ್ರಚಾರ ಕಾರ್ಯ ಮಾಡಿದರು. ಆದರೆ ಅಮೆರಿಕಾದ ಜನತೆ ಕ್ಲಿಂಟನ್ ಕೈಗೊಳ್ಳುತ್ತಿದ್ದ ಮಾನವೀಯ ಅನುಕಂಪದ ನೀತಿ-ನಿಯಮಗಳಿಗೆ ಮನಸೋತು ಆತನು ಮಾಡಿದ ಪ್ರಮಾದ ಗಳನ್ನು ಕ್ಷಮಿಸಿದರು. ಈ ಸಂಗತಿಗಳು ಕ್ಲಿಂಟನ್‌ನ ಸಹಾಯಕ್ಕೆ ಬಂದು ಆತನನ್ನು ಇನ್ನೂ ಉನ್ನತಮಟ್ಟಕ್ಕೆ ಏರಿಸಿದವು. ಹೀಗಾಗಿ ರಿಪಬ್ಲಿಕನ್‌ರಿಗೆ ಮುಖಭಂಗವಾಯಿತು. ಆತನ ವೈಯಕ್ತಿಕ ಬದುಕಿನಲ್ಲಿ ವ್ಯಭಿಚಾರದ ಘಟನೆಗಳು ತಳಕು ಹಾಕಿಕೊಂಡರೂ ಅಮೆರಿಕಾದ ಜನತೆಯಲ್ಲಿ ಹಾಗೂ ಜಾಗತಿಕ ಮಟ್ಟದಲ್ಲಿ ಕ್ಲಿಂಟನ್ ಒಬ್ಬ ಮಾನವೀಯ ಅನುಕಂಪದ ಅಧ್ಯಕ್ಷನೆಂದು ಬಿಂಬಿತನಾಗಿದ್ದಾನೆ.

ಅಲ್ಲದೇ ತೃತೀಯ ಜಗತ್ತಿನ ರಾಷ್ಟ್ರಗಳಲ್ಲಿನ ಬಡತನ, ಅನಕ್ಷರತೆ ಹಾಗೂ ಅನಾರೋಗ್ಯ ಗಳು ಶಾಶ್ವತವಾಗಿ ಹೋಗಲಾಡುವಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕ ಅನುದಾನಗಳನ್ನು ನೀಡಿದನು. ಈ ಶತಮಾನದ ಮಹಾಪಿಡುಗಾದ ಏಡ್ಸ್‌ನ ತಡೆಗಟ್ಟುವಿಕೆಯ ಬಗೆಗೆ ವಿಶ್ವಮಟ್ಟದಲ್ಲಿ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿ ಸಂಶೋಧನೆಗಳನ್ನು ಪ್ರೋ ಇಂಥ ಕಾರ್ಯಗಳನ್ನು ಆಡಳಿತದಿಂದ ನಿವೃತ್ತಿ ಹೊಂದಿದ ನಂತರವೂ ಮುಂದುವರೆಸಿದನು. ಹೀಗಾಗಿ ಕ್ಲಿಂಟನ್ ಮಾಜಿ ಆಗಿದ್ದರೂ ಪ್ರಪಂಚದ ಯಾವುದೇ ರಾಷ್ಟ್ರವು ಆತನ ಭೇಟಿಗಾಗಿ ಕುತೂಹಲದಿಂದ ಕಾಯುತ್ತಿರುತ್ತದೆ. ಈತನ ಕಾಲದಲ್ಲಿ ಭಾರತದ ಜೊತೆಗಿನ ಸಂಬಂಧಗಳು ಭಾರೀ ಪ್ರಮಾಣದಲ್ಲಿ ಸುಧಾರಣೆಗೊಂಡವು. ಮಾಹಿತಿ ತಂತ್ರಜ್ಞಾನದ ಶಕ್ತಿ ಭಾರತ ಎಂದು ಬಹಿರಂಗವಾಗಿ ಕ್ಲಿಂಟನ್ ಒಪ್ಪಿ ಶ್ಲಾಘಿಸಿದನು. ಕ್ಲಿಂಟನ್ ಆಡಳಿತಾವಧಿಯಲ್ಲಿ ಭಾರತ-ಪಾಕಿಸ್ತಾನ ನಡುವೆ ಸೌಹಾರ್ದ ಸಂಬಂಧಗಳು ಏರ್ಪಡುವಂತೆ ಅಮೆರಿಕಾದ ಶ್ವೇತಭವನವು ಪಾಕಿಸ್ತಾನದ ಲಷ್ಕರಿ(ಮಿಲಿಟರಿ) ಆಡಳಿತದ ಮುಖ್ಯಸ್ಥ ಜನರಲ್ ಪರ್ವೇಜ್ ಮುಷರಫ್‌ನನ್ನು ಒತ್ತಾಯಿಸಿ ಯಶಸ್ವಿಯಾಯಿತು. ಮಧ್ಯ ಪ್ರಾಚ್ಯದಲ್ಲಿನ ಇಸ್ರೇಲ್ ಹಾಗೂ ಪ್ಯಾಲೈಸ್ಟೈನ್‌ನ ಸಂಬಂಧಗಳು ಸುಧಾರಿಸಿದವು. ಒಟ್ಟಾರೆ ಜಾಗತಿಕ ಮಟ್ಟದಲ್ಲಿ ಶಾಂತಿಯ ಸ್ಥಾಪನೆಯ ಉದ್ದೇಶಗಳನ್ನಿಟ್ಟುಕೊಂಡು ಕ್ಲಿಂಟನ್ ಮಾಡಿದ ಮಹತ್ವದ ಕಾರ್ಯಗಳು ಆತನನ್ನು ಮಹಾಮುತ್ಸದ್ದಿಯನ್ನಾಗಿ ನಿರ್ಮಾಣ ಮಾಡಿದವು.

೧೯೯೦ರ ದಶಕದ ಅಮೆರಿಕಾದಲ್ಲಿನ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಗಳು

ಕ್ಲಿಂಟನ್ ಆಡಳಿತದಲ್ಲಿ ಆಂತರಿಕ ವಿಷಯಗಳು ಎಷ್ಟು ಪ್ರಾಮುಖ್ಯತೆಯನ್ನು ಪಡೆದಿದ್ದವೋ ಅಷ್ಟೇ ಮಹತ್ವವನ್ನು ವಿದೇಶಾಂಗ ವ್ಯವಹಾರ ನೀತಿಗಳು ಹೊಂದಿದ್ದವು.  ಸೀನಿಯರ್ ಬುಷ್‌ನ ಆಡಳಿತ ತೆಗೆದುಕೊಂಡ ನಿರ್ಧಾರಗಳಲ್ಲಿ ಕೆಲವನ್ನು ಪ್ರೋ ಕ್ಲಿಂಟನ್ ಆಡಳಿತ ಬೆಂಬಲಿಸಿ ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿತು.  ಸೋಮಾಲಿಯಾದ ಸಮಸ್ಯೆಗೆ ಅಮೆರಿಕಾ ಆಡಳಿತ ಕಠಿಣ ಕ್ರಮಗಳನ್ನು ತೆಗೆದುಕೊಂಡಿತು. ತನ್ನ ನೆರೆಯಲ್ಲಿರುವ ದ್ವೀಪ ರಾಷ್ಟ್ರವಾದ ಹೈಟಿಯಲ್ಲಿ ಅಲ್ಲಿನ ಜಿನ್ ಬೆರ್‌ಟ್ರೆಂಡ್ ಆರಿಸ್ಟೈಡ್‌ನ ನೇತೃತ್ವದಲ್ಲಿನ ಚುನಾಯಿತ ಸರಕಾರವನ್ನು ಕಿತ್ತೊಗೆದು ಮಿಲಿಟರಿ ಆಡಳಿತವು ಸಂಚಲನ ಮೂಡಿಸಿತ್ತು. ಆದರೆ ಮಧ್ಯ ಪ್ರವೇಶಿಸಿದ ಕ್ಲಿಂಟ್‌ನ ಆಡಳಿತ ಲಷ್ಕರ ಸರ್ವಾಧಿಕಾರಿಗಳನ್ನು ಓಡಿಸಿ ಮತ್ತೆ ಆರಿಸ್ಟೈಡನ್ ಚುನಾಯಿತ ಸರಕಾರದ ಆಡಳಿತವನ್ನು ಮರು ಸ್ಥಾಪಿಸಿತು.

ಮಧ್ಯಪ್ರಾಚ್ಯಕ್ಕೆ ಸಂಬಂಧಿಸಿದಂತೆ ಕ್ಲಿಂಟನ್‌ನು ಇಸ್ರೇಲಿನ ಪ್ರಧಾನಿ ಯಿಜ್ಜಾಕ್ ರಾಬಿನ್ ಹಾಗೂ ಪಿ.ಎಲ್.ಓ ನಾಯಕ ಯಾಸೀರ್ ಅರಾಫತ್ ಅವರನ್ನು ನಾರ್ವೆಯ ಓಸ್ಲೊವೊ ಶಾಂತಿ ಸಭೆಗೆ ಒಪ್ಪಿಸಿ ಪರಿಹಾರ ಸೂಚಿಸಿಕೊಳ್ಳಲು ಪ್ರಯತ್ನಿಸಿದ. ಮೊಟ್ಟಮೊದಲಿಗೆ ಇಸ್ರೇಲ್ ಪ್ಯಾಲೆಸ್ಟೈನ್‌ನ ಸ್ವತಂತ್ರತೆಯನ್ನು ಒಪ್ಪುವಂತೆ ಒತ್ತಾಯಿಸಿ ಯಶಸ್ವಿಯಾದನು. ಆದರೆ ಈವರೆಗೂ ಇಸ್ರೇಲ್ ಅನುಸರಿಸಿಕೊಂಡು ಬಂದಿರುವ ನೀತಿಗಳಲ್ಲಿ ಅಗಾಧ ಬದಲಾವಣೆಗೆ ಕಾರಣಕರ್ತನಾದ ಪ್ರಧಾನಿ ಯಿಟ್ಜಾಕ್ ರಾಬಿನ್‌ನನ್ನು ಸಹಿಸಲಾರದ ಮೂಲಭೂತವಾದಿ ಜ್ಯೂಯಿಶ್‌ಗಳು ಹತ್ಯೆ ಮಾಡಿದರು. ಇದರಿಂದ ಶಾಂತಿ ಪ್ರಕ್ರಿಯೆ ಮೂಲಕ ಶಾಶ್ವತವಾಗಿ ಮುಗಿದು ಹೋಗುವ ಪ್ಯಾಲೆಸ್ಟೈನ್‌ನ ಸಮಸ್ಯೆ ಮತ್ತೆ ಹಿಂಸೆಯ ಉಗ್ರ ರೂಪವನ್ನು ತಾಳಿತು. ಬಲಪಂಥೀಯ ಧೋರಣೆಯ ನಾಥನ್ ಯಾಹೂ ಅಧಿಕಾರಕ್ಕೆ ಬಂದ ನಂತರ ಗಾಜಾ ಪಟ್ಟಿಯ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿತು. ಇದೇ ವೇಳೆಗೆ ಪೂರ್ವ ಯುರೋಪ್ ಪ್ರದೇಶದ ಬಾಲ್ಕನ್ ಪ್ರದೇಶದ ಯುಗೋಸ್ಲಾವಿಯಾ ಸಮಸ್ಯೆ ತೊಂಬತ್ತರ ದಶಕದಲ್ಲಿ ತೀವ್ರತೆಯನ್ನು ಪಡೆಯಿತು. ಸರ್ಬ್‌ನಾಯಕರು ಜನಾಂಗೀಯ ಹಿಂಸೆಗೆ ಪ್ರಚೋದನೆ ನೀಡಿ ಕೊಸೊವೊ ಪ್ರಾಂತ್ಯದ ಅಲ್ಬೆನಿಯನ್ ಮುಸ್ಲಿಮರನ್ನು ಲಕ್ಷಾಂತರ ಸಂಖ್ಯೆಯಲ್ಲಿ ಕಗ್ಗೊಲೆ ಮಾಡಿದರು. ಇದರ ಪರಿಣಾಮ ಅರಿತ ಕ್ಲಿಂಟನ್ ಆಡಳಿತ ನ್ಯಾಟೊದ ನೇತೃತ್ವದಲ್ಲಿ ಸೈನ್ಯಕಾರ‌್ಯಾಚರಣೆ ಪ್ರಾರಂಭಿಸಿ ಸರ್ಬರನ್ನು ಹತೋಟಿಗೆ ತರಲಾಯಿತು. ಸರ್ಬಿಯನ್ ನಾಯಕ ಸ್ಲೊಬಂಡನ್ ಮಿಲೊಸೆವಿಕ್‌ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಯಿತು. ಹಾಗೂ ಕೊಸೊವೊದಲ್ಲಿದ್ದ ಸರ್ಬಿಯನ್ ಮಿಲಿಟರಿಯನ್ನು ನಿಶ್ಶಸ್ತ್ರಗೊಳಿಸಿ ಮುಂದೆ ಉದ್ಭವಿಸಬಹುದಾದ ಎಲ್ಲ ಅನಾಹುತಗಳಿಗೆ ಕ್ಲಿಂಟನ್ ಆಡಳಿತ ಶಾಶ್ವತ ತೆರೆ ಎಳೆಯಿತು. ನಂತರದ ದಿನಗಳಲ್ಲಿ ಅಂದರೆ ೨೦೦೯ರಲ್ಲಿ ಪ್ರತ್ಯೇಕ ಕೊಸೊವೊ ಪ್ರಾಂತ್ಯಕ್ಕೆ ಸ್ವತಂತ್ರ ರಾಷ್ಟ್ರದ ಸ್ಥಾನಮಾನ ಕೊಡಲಾಯಿತು. ಇದನ್ನು ವಿಶ್ವಸಂಸ್ಥೆ ಸಹ ಮಾನ್ಯ ಮಾಡಿ ಪುರಸ್ಕರಿಸಿದೆ.

ಎರಡು ಅವಧಿಯವರೆಗೆ ಆಡಳಿತ ನಿರ್ವಹಿಸಿದ ಡೆಮೊಕ್ರಾಟಿಕ್ ಪಕ್ಷದ ಕ್ಲಿಂಟನ್ ನಂತರ ೨೦೦೦ರಲ್ಲಿ ನಡೆದ ಮಹಾ ಚುನಾವಣೆಗೆ ಉಪಾಧ್ಯಕ್ಷನಾಗಿದ್ದ ಅಲ್‌ಗೋರ್‌ನನ್ನು ಡೆಮೊಕ್ರಾಟಿಕ್ ಪಕ್ಷ ತನ್ನ ಹುರಿಯಳಾಗಿ ನೇಮಿಸಿತು. ರಿಪಬ್ಲಿಕನ್ ಪಕ್ಷದಿಂದ ಸೀನಿಯರ್ ಜಾರ್ಜ್ ಬುಷ್‌ನ ಮಗ ಹಾಗೂ ಟೆಕ್ಸಾಸ್ ಪ್ರಾಂತ್ಯದ ಗರ್ವನರ್ ಆಗಿದ್ದ ಜಾರ್ಜ್ ಡಬ್ಲ್ಯು ಬುಷ್ ಪ್ರತಿಸ್ಪರ್ಧಿಯಾಗಿ ಕಣಕ್ಕೆ ಇಳಿದನು. ತೆರಿಗೆ ಕಡಿತ ಹಾಗೂ ಆರೋಗ್ಯ ಸುಧಾರಣೆಯ ಮುಖ್ಯ ವಿಷಯಗಳನ್ನು ರಿಪಬ್ಲಿಕನ್‌ರು ಚರ್ಚೆಗೆ ಇಟ್ಟರು. ಅಲ್ಲದೇ ಬೋಸ್ನಿಯಾ, ಹೈಟಿ ಹಾಗೂ ಇನ್ನುಳಿದ ಕಡೆ ಇರುವ ಅಮೆರಿಕಾದ ಮಿಲಿಟರಿಯನ್ನು ವಾಪಸ್ಸು ಕರೆಯಿಸಿ ಖರ್ಚನ್ನು ತಗ್ಗಿಸಲಾಗುವುದು ಎಂದು ಬುಷ್‌ನು ಪ್ರಚಾರಪಡಿಸಿದನು. ಅಂತಿಮವಾಗಿ ಫ್ಲೋರಿಡಾ ಮತದಾರರ ನಿರ್ಣಯಾತ್ಮಕ ಮತಗಳಿಂದ ಹಾಗೂ ಸುಪ್ರೀಂ ಕೋರ್ಟಿನ ಮಾರ್ಗದರ್ಶನ ದಂತೆ ರಿಪಬ್ಲಿಕ್ ಪಕ್ಷದ ಜಾರ್ಜ್ ಡಬ್ಲ್ಯು ಬುಷ್ ಆಯ್ಕೆಯಾದನು.