ಸಂದಿಗ್ಧ ಕಾಲ

೧೮೪೯ರಿಂದ ೧೮೬೧ರವರೆಗಿನ ಕಾಲವನ್ನು ಅಮೆರಿಕಾದ ರಾಜಕೀಯ ಸಂದಿಗ್ಧದ ಕಾಲವೆಂದು ಕರೆಯುತ್ತಾರೆ. ಗುಲಾಮಗಿರಿ ಸಮಸ್ಯೆ ಎಲ್ಲವುಗಳ ಕೇಂದ್ರಬಿಂದುವಾಯಿತು. ಈ ಕಾಲಾವಧಿಯಲ್ಲಿ ಅನೇಕ ವಿರೋಧಗಳು ರಾಷ್ಟ್ರದ ಭದ್ರತೆಗೆ ಮಾರಕವಾದವು. ನೆಲೆ ಇಲ್ಲದ ಯುರೋಪಿಯನ್‌ರು ಹೊಸ ಜಗತ್ತಿಗೆ ಹೋದಾಗ ಅಲ್ಲಿಯ ಮೂಲನಿವಾಸಿಗಳನ್ನೇ (ರೆಡ್ ಇಂಡಿಯನ್ನರು) ತಮ್ಮ ಆಳುಗಳನ್ನಾಗಿ ಮಾಡಿಕೊಳ್ಳುವ ಹುನ್ನಾರದಲ್ಲಿ ವಿಫಲ ರಾಗಿದ್ದರು. ಆದರೆ ಆಫ್ರಿಕಾದಿಂದ ಅಮೆರಿಕಾನ್ನರ ಹೊಲಗಳಲ್ಲಿ ಕೆಲಸ ಮಾಡಲು ತಂದಿಟ್ಟು ಕೊಂಡ ನೀಗ್ರೋಗಳು ಅಂದಿನ ಸಮಾಜದಲ್ಲಿ ಅತೀ ಕನಿಷ್ಠನಾಗಿದ್ದ ಒಬ್ಬ ಕೆಂಪು ಅಮೆರಿಕಾನ್ನರಿಂದಲೂ ಸಹ ಶೋಷಣೆಗೊಳಗಾಗುವಂತಾಯಿತು. ಸಂವಿಧಾನಾತ್ಮಕವಾಗಿ ಗುಲಾಮಿ ಪದ್ಧತಿ ನಿರ್ಮೂಲಗೊಳಿಸಿದ್ದರೂ, ಅಲ್ಲಿನ ಜನರ ಮನೋಭಾವನೆಗಳಲ್ಲಿ ವರ್ಣಭೇದ ಭಾವನೆ ಮಾತ್ರ ಮುಂದುವರೆದಿತ್ತು. ೧೭೯೦ರಲ್ಲಿದ್ದ ೭ ಲಕ್ಷ ಗುಲಾಮರು, ೧೮೬೦ರ ಹೊತ್ತಿಗೆ ೪೦ ಲಕ್ಷಕ್ಕೂ ಹೆಚ್ಚಿನ ಸಂಖ್ಯೆಗೆ ಮೀರಿ ನಿಂತಿತು. ಅಂದರೆ ಎಷ್ಟೊಂದು ಪ್ರಮಾಣದಲ್ಲಿ  ಕಪ್ಪು ಜನರನ್ನು ಜಗತ್ತಿನ ಬೇರೆ ಬೇರೆ ಕಡೆಯಿಂದ ಒತ್ತಾಯಪೂರ್ವಕವಾಗಿ ತರಲಾಗುತ್ತಿತ್ತು ಎಂಬುದನ್ನು ಈ ಅಂಕಿ-ಸಂಖ್ಯೆಗಳಿಂದ ತಿಳಿಯಬಹುದು.

ಗುಲಾಮರು ಅತ್ಯಂತ ಶೋಚನೀಯ ಸ್ಥಿತಿಯಲ್ಲಿ ಬದುಕನ್ನು ನಿರ್ವಹಿಸುತ್ತಿದ್ದರು. ಭೂಮಾಲೀಕರ ಭೋಗದ ವಸ್ತುಗಳಾಗಿದ್ದ ಇವರು ಸಾಮಾಜಿಕವಾಗಿ ಎಲ್ಲ ಚಟುವಟಿಕೆ ಗಳಿಂದಲೂ ಗುಲಾಮರನ್ನು ದೂರವಿಡುತ್ತಿದ್ದರು. ಅವರಿಗಿರುವ ಪ್ರತಿಭಟನೆ, ಸ್ವಾತಂತ್ರ್ಯದ ಹಕ್ಕನ್ನು ಕಸಿದುಕೊಳ್ಳಲಾಗಿತ್ತು. ಇಂಥ ಅಮಾನವೀಯ ಸಂಗತಿಗಳನ್ನು ಧಿಕ್ಕರಿಸುವಂತ ಪ್ರಜ್ಞಾವಂತರೂ ಸಹ ಅಮೆರಿಕಾದಲ್ಲಿದ್ದರು. ಈ ದಿಶೆಯಲ್ಲಿ ಅಮೆರಿಕಾದ ಪತ್ರಿಕೆಗಳು ಹಾಗೂ ಸಾಹಿತ್ಯ ಕೃತಿಗಳು ಶ್ಲಾಘನೀಯ ಕಾರ್ಯ ನಿರ್ವಹಿಸಿದವು. ‘ಲಿಬರೇಟರ್’ ಪತ್ರಿಕೆ(ಗ್ಯಾರಿಸನ್) ಹಾಗೂ ಅಂಕಲ್ ಟಾಮ್ಸ್ ಕ್ಯಾಬಿನ್(ಹ್ಯಾರಿಯೆಟ್ ಬೀಚರ್‌ಸ್ಟೋವ್) ಎಂಬ ಕಾದಂಬರಿಗಳು ಗುಲಾಮಿತನದ ವಿರುದ್ಧ ಜನಜಾಗೃತಿಗೊಳಿಸಿದವು. ಲಾಯ್ಡ ಗ್ಯಾರಿಸನ್, ಧರ್ಮಪ್ರಚಾರಕ ಪಿನ್ನೆ ಥಿಯೋಡೋರ್ ಪಾರ್ಕರ್, ಹಾಗೂ ಎಮರ್ಸನ್ ಮುಂತಾದವರು ಇದರ ವಿರುದ್ಧ ಧ್ವನಿ ಎತ್ತಿ ಹೋರಾಟದ ಭೂಮಿಕೆಯನ್ನು ಸಜ್ಜುಗೊಳಿಸಿದರು. ರೋಮ್‌ನ ಚರ್ಚುಗಳೇ ಗುಲಾಮಗಿರಿಯನ್ನು ಪುಷ್ಟೀಕರಿಸಿದ್ದಾಗ ಅಮೆರಿಕಾನ್ನರು ಇದನ್ನು  ಅನುಮೋದಿಸುವುದರಲ್ಲಿ ಯಾವ ತಪ್ಪಿಲ್ಲ ಎಂಬುದು ದಕ್ಷಿಣ ಕರೋಲಿನ್ ರಾಜಕೀಯ ಮುಖಂಡ ಕಾಲಹೂನನ ಅಭಿಪ್ರಾಯವಾಗಿತ್ತು. ಆದರೆ ಪೆನ್ಸಿಲ್ವೇನಿಯಾದ ಡೇರಿಡ್ ವಿಲ್ಮಾಟ್‌ನು, ಅಮೆರಿಕಾ ಸಂಯಕ್ತ ಸಂಸ್ಥಾನಗಳಿಗೆ ಸೇರಿದ ಹೊಸ ರಾಜ್ಯಗಳಲ್ಲಿ ಗುಲಾಮಗಿರಿಯನ್ನು ಅನುಸರಿಸಕೂಡದೆಂದು ಕಾಂಗ್ರೆಸ್ಸಿನಲ್ಲಿ ವಾದ ಮಂಡಿಸಿದನು. ಕಾಂಗ್ರೆಸ್ ಇದನ್ನು ಮನ್ನಿಸಿದರೂ ಸೆನೆಟ್ ಈ ನಿರ್ಣಯವನ್ನು ತಿರಸ್ಕರಿಸಿತು. ತನಗೆ ಇಷ್ಟಬಂದಂತೆ ಶಾಸನಗಳನ್ನು ಮಾಡುವ ಅಧಿಕಾರ ಕಾಂಗ್ರೆಸ್ಸಿಗೆ ಇಲ್ಲ ಎಂದು ಕಾಲಹೂನನು ವಾದಿಸಿದನು. ಒಟ್ಟಿನಲ್ಲಿ ೧೮೪೮ರ ಮಹಾಚುನಾವಣೆಯ ಮುಖ್ಯ ಸಂಗತಿಯು ಗುಲಾಮಗಿರಿ ಸಮಸ್ಯೆ ವಿಷಯವೇ ಆಯಿತು. ಡೆಮಾಕ್ರೆಟಿಕ್ ಪಕ್ಷ ಹೋಳಾಗಿ ಯಾವೊಂದು ನಿರ್ಣಯಕ್ಕೆ ಬರಲಿಲ್ಲ. ಹೀಗಾಗಿ ವಿಗ್ ಪಕ್ಷದ ಝಕರಿ ಟೇಲರ್ ತನ್ನ ಜನಪ್ರಿಯತೆಯಿಂದ ಆಯ್ಕೆ ಆದನು. ಆದರೆ ಟೇಲರ್ ಈ ವಿಷಯದಲ್ಲಿ ತಟಸ್ಥ ಧೋರಣೆ ತಾಳಿ ಗುಲಾಮಿಪದ್ಧತಿ ಆಚರಣೆಯನ್ನು ಆಯಾ ರಾಜ್ಯಗಳೇ ನಿರ್ಧರಿಸಿಕೊಳ್ಳಬೇಕೆಂದು ಹೇಳಿದನು ಹಾಗೂ ಹೊಸದಾಗಿ ಸೇರ್ಪಡೆಯಾದ ರಾಜ್ಯಗಳಿಗೆ ಸಂಬಂಧಿಸಿದಂತೆ ೧೮೫೦ರ ಶಾಸನಗಳನ್ನು ಜಾರಿಗೊಳಿಸಿದನು. ಈ ಶಾಸನಗಳ ಪ್ರಕಾರ ಗುಲಾಮಿಪದ್ಧತಿ ಆಚರಣೆಯನ್ನು ಆಯಾ ರಾಜ್ಯಗಳಿಗೆ ಬಿಟ್ಟುಕೊಡಲಾಯಿತು. ಅಲ್ಲದೇ ಪಲಾಯನಗೈದ ಗುಲಾಮರನ್ನು ಅವರ ಹಿಂದಿನ ಒಡೆಯರಿಗೆ ಮರಳಿಸತಕ್ಕದ್ದೆಂದು ನಿರ್ಣಯಿಸಿತು. ೧೮೫೨ರ ಚುನಾವಣೆಯಲ್ಲಿ ವಿಗ್ ಪಕ್ಷ ಸೋತಿತು. ತರುವಾಯ ಡೆಮಾಕ್ರೆಟಿಕ್ ಪಕ್ಷದ ಫ್ರಾಂಕ್ಲಿನ್ ಪಿಯರ್ಸ್ ಅಧ್ಯಕ್ಷನಾಗಿ ಚುನಾಯಿತನಾದನು. ಗುಲಾಮರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ೧೮೫೪ರಲ್ಲಿ ಕನ್ಸಾಸ್-ನೆಬ್ರಾಸ್ಕ್ ಶಾಸನ(ಕಾಯ್ದೆಗಳ) ವಿಷಯಗಳು ಮುಖ್ಯವಾದವು. ಅಮೆರಿಕಾ ಗಳಿಸಿಕೊಂಡಿದ್ದ ಭೌಗೋಳಿಕ ವಿಸ್ತರಣೆಯಿಂದ ದೊರೆತ ಬೃಹತ್ತಾದ ಪ್ರದೇಶದಲ್ಲಿ ಅಲ್ಲಿನ ಭೂ ಒಡೆಯರು ತಮ್ಮ ಜಮೀನಿನಲ್ಲಿನ ಕೆಲಸಗಳಿಗೆ ಗುಲಾಮರನ್ನು ಒಯ್ಯಬಹುದು ಆದರೆ ಆ ಪ್ರದೇಶವು ರಾಜ್ಯದ ಸ್ಥಾನಮಾನ ಪಡೆಯುವಾಗ ಅಲ್ಲಿ ಗುಲಾಮಗಿರಿ ಇರಬೇಕೋ ಅಥವಾ ಬೇಡವೋ ಎಂಬುದನ್ನು ಜನರೇ ನಿರ್ಧರಿಸಬೇಕು ಎಂದು ಪ್ರಭಾವಿ ಸೆನೆಟರ್ ಸ್ಟೀಫನ್ ಡಗ್ಲಾಸ್ ಮಸೂದೆಯೊಂದನ್ನು ಮಂಡಿಸಿದನು. ಇದರ ಲಾಭ-ನಷ್ಟಗಳನ್ನು ಮುಂದಾಲೋಚಿಸಿ ಪರೋಕ್ಷವಾಗಿ ತಮಗೆ ಲಾಭವಾಗುವ ಈ ಮಸೂದೆಯನ್ನು ದಕ್ಷಿಣ ರಾಜ್ಯಗಳು ಬೆಂಬಲಿಸಿ ಶಾಸನವನ್ನಾಗಿ ಮಾಡಿದವು. ಆದರೆ ಉತ್ತರದ ರಾಜ್ಯಗಳು ಇದನ್ನು ವಿರೋಧಿಸಿ ಸಂಘರ್ಷಕ್ಕಿಳಿದವು.

ಗುಲಾಮಗಿರಿಯ ಅನುಮೋದಕರು ಮಾಡಿದ ಬಲತ್ಕಾರ ಮತದಾನದಿಂದ ಗುಲಾಮಿ ಪದ್ಧತಿ ಇನ್ನೂ ಗಟ್ಟಿಯಾಯಿತು. ಆದರೆ ಇದನ್ನು ವಿರೋಧಿಸಿದ ಜನರು ತಮ್ಮದೇ ಸಂವಿಧಾನವನ್ನು ಕೆನ್ಸಾಸ್‌ದಲ್ಲಿ ರಚಿಸಿಕೊಂಡರು. ಇದನ್ನು ಒಕ್ಕೂಟವು ಹಾಗೂ ಅಧ್ಯಕ್ಷ ಪಿಯರ್ಸ್ ಬಲವಾಗಿ ವಿರೋಧಿಸಿ ಇವರ ವಿರುದ್ಧ ಸೈನಿಕ ಕಾರ್ಯಾಚರಣೆಗಳನ್ನು ಕೈಗೊಂಡನು. ಆದರೆ ರೊಚ್ಚಿಗೆದ್ದ ಗುಲಾಮಿಪದ್ಧತಿ ವಿರೋಧಿಗಳು ಊರಿಗೆ ಬೆಂಕಿ ಇಟ್ಟರು. ಅಲ್ಲದೇ ಗುಲಾಮಿ ಪದ್ಧತಿಯ ಅನುಮೋದಕರನ್ನು ಕಂಡಲ್ಲಿ ಕೊಚ್ಚಿ ಕೊಂದರು. ಇದರ ನೇತೃತ್ವವನ್ನು ಜಾನ್ ಬ್ರೌನ್ ವಹಿಸಿದ್ದನು. ಹೋರಾಟದ ತೀವ್ರತೆ ಯನ್ನು ಮನಗಂಡ ಅಧ್ಯಕ್ಷ ಪಿಯರ್ಸ್ ದಕ್ಷಿಣ-ಉತ್ತರ ರಾಜ್ಯಗಳ ನಡುವೆ  ಪರಸ್ಪರ ಹುಟ್ಟಿಕೊಂಡಿದ್ದ ವಿರೋಧಗಳ ಮಧ್ಯೆಯೂ ಹೊಸ ಸಂವಿಧಾನಕ್ಕೆ ದೀಢಿರಾಗಿ ಸೂಚಿಸಿ ಚಾಲನೆಗೊಳಿಸಿದನು. ಆದರೆ ಇದನ್ನು ವಿರೋಧಿಸಿದ ಸೆನೆಟರ್ ಸಮ್ನರ್‌ನು ಶಾಶ್ವತವಾಗಿ ಗುಲಾಮಪದ್ಧತಿ ಹೋಗಬೇಕೆಂದು ಪಟ್ಟು ಹಿಡಿದನು. ಗುಲಾಮಿ ಅನುಮೋದಕ ಬಟ್ಲರ್‌ನನ್ನು ಸಮ್ನರ್‌ನು ಮೂದಲಿಸಿದ. ಪರಿಣಾಮ ಚೆನ್ನಾಗಿ ಹೊಡೆತ ತಿಂದ ಸಮ್ನರನು ದಕ್ಷಿಣದ ರಾಜ್ಯಗಳ ಹಿಂಸಾವೃತ್ತಿಯನ್ನು ಖಂಡಿಸಿ ಇದನ್ನೇ ಚುನಾವಣೆಗೆ ಮುಖ್ಯ ವಿಷಯವನ್ನಾಗಿ ಮಾಡಿಕೊಂಡನು.

ಜಾನ್ ಅಬ್ರಾಹಂ ಲಿಂಕನ್‌ನ ಪ್ರವೇಶ

೧೮೫೬ರ ಚುನಾವಣೆಯಲ್ಲಿ ದಕ್ಷಿಣ ರಾಜ್ಯಗಳ ಪರ ಚಿಂತಕ ಪೆನ್ಸಿಲ್ವೇನಿಯಾದ ಜೇಮ್ಸ್ ಬುಕಾನನ್(ಡೆಮಾಕ್ರೆಟಿ) ಆಯ್ಕೆ ಆದನು. ಇದೇ ಸಮಯಕ್ಕೆ ಅಮೆರಿಕಾದ ಸುಪ್ರೀಮ್ ಕೋರ್ಟ್ ಅಂದರೆ ಮುಖ್ಯ ನ್ಯಾಯಾಧೀಶ ರೋಜರ್ ತ್ಯಾನೆಯು ಒಬ್ಬ ಗುಲಾಮನ ಸಂಬಂಧವಾಗಿ ಕೊಟ್ಟ ನಿರ್ಣಯ, ಗುಲಾಮಿ ವ್ಯವಸ್ಥೆಯ ವಿರೋಧಿಗಳನ್ನು ರೊಚ್ಚಿಗೆಬ್ಬಿಸಿತು. ಗುಲಾಮ ಎಲ್ಲೇ ಇದ್ದರೂ, ಹೇಗೆ ಇದ್ದರೂ(ಗುಲಾಮನು) ಆತನು ತನ್ನ ಹಳೆಯ ಒಡೆಯನ ಆಸ್ತಿಯೇ ಎಂಬುದು ಈ ತೀರ್ಪಿನ ಸಾರವಾಗಿತ್ತು. ಇದು ಅಮೆರಿಕಾದ ಒಕ್ಕೂಟ ಹಾಗೂ ರಾಜಕೀಯ ವ್ಯವಸ್ಥೆಯನ್ನು ಬುಡಸಮೇತ ಅಲ್ಲಾಡಿಸಿತು. ಇಂಥ ಸಂದರ್ಭದಲ್ಲಿಯೇ ಹೊಸ ವಿಚಾರದ ಆಶಾಕಿರಣವಾಗಿ ಇಲಿನಾಯ್ಸನ ಜನಪ್ರಿಯ ನಾಯಕ ಅಬ್ರಹಾಂ ಲಿಂಕನ್ ಪ್ರಚಾರಕ್ಕೆ ಬಂದನು. ಸ್ಟೀಫನ್ ಡಗ್ಲಾಸ್ ವಿರುದ್ಧ ಚುನಾವಣೆಯಲ್ಲಿ ಸೋತರೂ ಗುಲಾಮಿತನದ ನೈತಿಕತೆಯನ್ನು ಪ್ರಶ್ನಿಸಿದನು. ಕನ್ಸಾಸ್‌ದ ನಿವಾಸಿ ಬ್ರೌನ್ ಉತ್ಸಾಹದಲ್ಲಿ ವರ್ಜೀನಿಯಾದ ಶಸ್ತ್ರಾಗಾರಕ್ಕೆ ದಾಳಿ ಇಟ್ಟನು. ಆದರೆ ಸೆರೆ ಸಿಕ್ಕ ಈತನು ಗಲ್ಲಿಗೇರಿಸಲ್ಪಟ್ಟನು. ಮಾನವನ ಹಕ್ಕುಗಳ ಮಾನ್ಯತೆಯ ಪ್ರತಿಪಾದನೆಯಲ್ಲಿ ಮಾಡಿದ ಇಂಥ ಮಹತ್ವದ ಕೃತ್ಯದಿಂದ ಅಮೆರಿಕಾದ ಇತಿಹಾಸದಲ್ಲಿ ಈತನು ಹುತಾತ್ಮನೆನಿಸಿಕೊಂಡಿದ್ದಾನೆ. ಅಧ್ಯಕ್ಷ ಬುಕಾನನ್ ನೀತಿಯಿಂದ ಡೆಮಾಕ್ರೆಟಿಕ್ ಪಕ್ಷ ಇಬ್ಭಾಗವಾಯಿತು. ಜಾನ್ ಬ್ರೆಕಿನ್ ರಿಜ್ಜ್‌ನು ಹಾಗೂ ಡಗ್ಲಾಸ್‌ನು, ರಿಪಬ್ಲಿಕನ್ ಪಕ್ಷದ ಅಬ್ರಹಾಂ ಲಿಂಕನ್‌ನ ವಿರುದ್ಧ ಚುನಾವಣೆಗೆ ಇಳಿದರು. ಆದರೆ ಲಿಂಕನ್‌ನ ಜನಪ್ರಿಯತೆಯ ಮುಂದೆ ಈ ಇಬ್ಬರು ನಾಯಕರು ಸೋತು ಸುಣ್ಣವಾದರು. ಈಗಾಗಲೇ ಅನೇಕ ಹೋರಾಟ ಗಳಿಂದ ಹೆಸರುವಾಸಿಯಾಗಿದ್ದ ಲಿಂಕನ್‌ನು ಅಮೆರಿಕಾದ ೧೬ನೆಯ ಅಧ್ಯಕ್ಷನಾಗಿ ಬಹುಮತ ದೊಂದಿಗೆ ಆಯ್ಕೆ ಆದನು.

ಸಮಾನತೆಯ ಆರ್ಥಿಕ ಅಭಿವೃದ್ದಿಯಿಂದ ಉತ್ತರ ರಾಜ್ಯಗಳು ಹೆಚ್ಚಿನ ಲಾಭಾಂಶ ಗಳಿಸಿದವು. ಆಮದುಗಳ ಮೇಲಿನ ಸುಂಕವು ಇಲ್ಲಿನ ಕೃಷಿ ಹಾಗೂ ಕೈಗಾರಿಕೆಯ ವಸ್ತುಗಳಿಗೆ ಗರಿಷ್ಠ ಪ್ರಮಾಣದ ಲಾಭ ಗಳಿಸಲು ಅನುಕೂಲವಾಯಿತು. ಇದಕ್ಕೆ ವಿರುದ್ಧ ವಾಗಿ ದಕ್ಷಿಣದ ರಾಜ್ಯಗಳಿಗೆ ಗುಲಾಮಿ ರಾಜ್ಯಗಳನ್ನು ಸ್ಥಾಪಿಸುವುದು ಹಾಗೂ ಅವುಗಳನ್ನು ಉಳಿಸಿಕೊಳ್ಳುವುದೇ ಬಹುಮುಖ್ಯ ಗುರಿಗಳಾಗಿದ್ದವು. ಹೀಗಾಗಿ ಉಳಿದಂತೆ ಯಾವುದೇ ಸಂಗತಿಗಳ ಬಗೆಗೆ ಸ್ಪರ್ಧಿಸದೇ ಹಿಂದೆ ಬಿದ್ದವು. ರಿಪಬ್ಲಿಕನ್ ಪಕ್ಷವು ಅಬ್ರಹಾಂ ಲಿಂಕನ್‌ನನ್ನು ತನ್ನ ಅಧಿಕೃತ ಅಭ್ಯರ್ಥಿಯನ್ನಾಗಿಸಿದ್ದರೆ ಡೆಮಾಕ್ರೆಟಿಕ್ ಪಕ್ಷವು ಮತಭೇದ ದಿಂದ ಹೋಳಾಗಿ ಡಗ್ಲಾಸ್ ಮತ್ತು ಬ್ರೆಕನ್ ರಿಜ್ಜಾ ಎಂಬಿಬ್ಬರು ಲಿಂಕನ್‌ನ ವಿರುದ್ಧದ ಅಭ್ಯರ್ಥಿಗಳಾದರು. ಡಗ್ಲಾಸ್ ಗುಲಾಮಿ ಸಮಸ್ಯೆಯನ್ನು ಆಯಾ ರಾಜ್ಯಗಳಿಗೆ ಬಿಡಬೇಕೆಂದು ಪ್ರತಿಪಾದಿಸಿದರೆ, ಬ್ರೆಕನ್ ರಿಜ್ಜಾನು, ತನ್ನ ವಿರುದ್ಧದ ರಿಪಬ್ಲಿಕನ್ ಪಕ್ಷದ ಪ್ರಣಾಳಿಕೆ ಒಕ್ಕೂಟದಲ್ಲಿ ಜಾರಿಯಾದರೆ ದಕ್ಷಿಣದ ರಾಜ್ಯಗಳು ಒಕ್ಕೂಟದಿಂದ ಹಿಂದೆ ಸರಿಯುವಂತೆ ಮಾಡುತ್ತೇನೆ ಎಂದು ಮೊದಲೇ ಘೋಷಿಸಿದನು. ಆದರೆ ಇವರಿಬ್ಬರ ಒಡಕಿನ ಲಾಭ ಪಡೆದ ಲಿಂಕನ್ ಅಧ್ಯಕ್ಷನಾಗಿ ಆಯ್ಕೆ ಆದನು. ಪರಿಣಾಮ ದಕ್ಷಿಣ ಕರೋಲಿನಾ ರಾಜ್ಯವನ್ನೊಳಗೊಂಡ ದಕ್ಷಿಣದ ಏಳು ರಾಜ್ಯಗಳು ಕೇಂದ್ರ ಒಕ್ಕೂಟದಿಂದ (ಅಮೆರಿಕಾ ಸಂಯುಕ್ತ ಸಂಸ್ಥಾನ) ಪ್ರತ್ಯೇಕಗೊಂಡವು. ಪ್ರತ್ಯೇಕಗೊಂಡ ರಾಜ್ಯಗಳು ‘ಮೈತ್ರಿಕೂಟ’ದ ರಾಜ್ಯಗಳೆಂದು ಹೆಸರು ಪಡೆದವು. ಉಳಿದವು ಕೇಂದ್ರ ಒಕ್ಕೂಟದಲ್ಲಿಯೇ ಉಳಿದವು. ಮೈತ್ರಿಕೂಟವನ್ನು ಮತ್ತೆ ನಾಲ್ಕು ರಾಜ್ಯಗಳು ಸೇರಿಕೊಂಡವು. ತನ್ನ ಆಯ್ಕೆಯ ಪರಿಣಾಮ ದಿಂದ ಇಂಥ ಪ್ರತ್ಯೇಕೀಕರಣ ಘಟನೆಗಳು ಸಂಭವಿಸಲಾರಂಭಿಸಿದ್ದು ಲಿಂಕನ್‌ನನ್ನು ತೀವ್ರವಾಗಿ ಗಾಸಿಗೊಳಿಸಿದವು. ತಾನು ಹಾಗೂ ತನ್ನ ಪಕ್ಷವು ಗುಲಾಮಿ ಸಮಸ್ಯೆಯ ಬಗೆಗೆ ಹೊಂದಿದ ದೃಢಕಾರ್ಯದಿಂದ ಒಕ್ಕೂಟವು ಛಿಧ್ರಗೊಂಡ ಬಗೆಗೆ ವಿಷಾದಿಸುತ್ತ ನನಗೆ ಗುಲಾಮಿ ಸಮಸ್ಯೆಗಿಂತ ಒಕ್ಕೂಟದ ಐಕ್ಯತೆ ಬಹುಮುಖ್ಯವಾದುದೆಂದು  ಮತ್ತೆ ಪ್ರತಿಪಾದಿಸಿದ. ಅಲ್ಲದೇ ಪ್ರತ್ಯೇಕಗೊಂಡ ರಾಜ್ಯಗಳಿಗೆ ಪುನಃ ಒಕ್ಕೂಟ ಸೇರುವಂತೆ ಒತ್ತಾಯ ಮಾಡಿದನು. ಒಕ್ಕೂಟದ ನೀತಿ ನಿಯಮಗಳನ್ನು ಉಲ್ಲಂಘಿಸಿದರೆ ತಾನು ಬಲಪ್ರಯೋಗಕ್ಕೆ ಸಿದ್ಧವೆಂದು ಗುಡುಗಿದನು. ಆದರೂ ದಕ್ಷಿಣ ರಾಜ್ಯಗಳು ಲಿಂಕನ್‌ನ ಮಾತುಗಳನ್ನು ಲೆಕ್ಕಿಸದೇ ಅವನಿಗಿಂತ ಮೊದಲೇ ಕೇಂದ್ರ ಒಕ್ಕೂಟದ ಜೊತೆಗೆ ಸಂಘರ್ಷಕ್ಕಿಳಿದವು. ಹೀಗಾಗಿ ಉತ್ತರದ ಎಲ್ಲ ರಾಜ್ಯಗಳು ಒಮ್ಮತದಿಂದ  ಅಮೆರಿಕಾ ಸಂಸ್ಥಾನಗಳ ಒಕ್ಕೂಟದಿಂದ ಪ್ರತ್ಯೇಕಗೊಂಡ ರಾಜ್ಯಗಳ ಮೇಲೆ ಯುದ್ಧ ಮಾಡಲು ಲಿಂಕನ್ನನಿಗೆ ಅನುಮತಿಯಿತ್ತವು.

ಪ್ರತ್ಯೇಕತೆಯ ಕೂಗು

ಮೊದಲೇ ಪ್ರತ್ಯೇಕಗೊಂಡ ದಕ್ಷಿಣ ಕರೋಲಿನಾ, ಮಿಸ್ಸಿಸಿಪಿ, ಫ್ಲೋರಿಡಾ, ಅಲಬಾಮ, ಜಾರ್ಜಿಯಾ, ಲೂಸಿಯಾನ, ಟೆಕ್ಸಾಸ್ ಹಾಗೂ ನಂತರ ಸೇರಿದ ಉತ್ತರ ಕರೋಲಿನಾ, ಆರ್ಕನ್ಸಾಸ್, ಟೆನಿಸ್ ಮತ್ತು ವರ್ಜೀನಿಯಾ ರಾಜ್ಯಗಳನ್ನೊಳಗೊಂಡ ಮೈತ್ರಿ ಕೂಟವು ಜೆಫರ್‌ಸನ್ ಡೇವಿಸ್‌ನನ್ನು ಅಧ್ಯಕ್ಷನನ್ನಾಗಿಯೂ, ಅಲೆಗ್ಜಾಂಡರ್ ಸ್ಟೀಫನ್ಸ್ ನನ್ನು ಉಪಾಧ್ಯಕ್ಷನನ್ನಾಗಿ ಆಯ್ಕೆ ಮಾಡಿದವು. ಹೊಸ ಸಂವಿಧಾನವನ್ನು ಜಾರಿಗೊಳಿಸಿ ನಾವು ಒಕ್ಕೂಟದ ಯಾವ ಬಂಧನಕ್ಕೂ ಒಳಗಾದವರಲ್ಲ ಹಾಗೂ ಗುಲಾಮಿ ಪದ್ಧತಿ ಸಂವಿಧಾನಾತ್ಮಕ ಹಕ್ಕೆಂದೇ ಪ್ರತಿಪಾದಿಸಿದವು. ಭಾವನಾತ್ಮಕ ವಿಷಯಗಳನ್ನು ಮುಂಚೂಣಿಗೆ ತಂದು ನಿಲ್ಲಿಸಿದ ದಕ್ಷಿಣದ ರಾಜ್ಯಗಳು ಉತ್ತರದ ಜೊತೆಗೆ ಹಗೆತನಕ್ಕಿಳಿದವು. ಇದನ್ನು ತಡೆಗಟ್ಟಲು ಉತ್ತರ ರಾಜ್ಯಗಳು ಇದೇ ಸಂದರ್ಭವನ್ನು ಸದುಪಯೋಗಪಡಿಸಿಕೊಂಡು ದಕ್ಷಿಣದ ಎಲ್ಲ ವ್ಯಾಪಾರಿ ಬಂದರುಗಳನ್ನು ಮುಟ್ಟುಗೋಲು ಹಾಕಿ ದಕ್ಷಿಣದವರನ್ನು ಹೆಚ್ಚಿನ ಸಂಕಷ್ಟಕ್ಕೀಡು ಮಾಡಿದವು. ಇದೇ ವೇಳೆಗೆ ದಕ್ಷಿಣವು ತುಂಬಾ ಆಶಾದಾಯಕವಾಗಿ ನಿರೀಕ್ಷಿಸಿದಂತೆ ವಿದೇಶಿ ರಾಷ್ಟ್ರಗಳ ಸಹಾಯ ಸಹ ಹೊಸದಾಗಿ ರಚನೆಯಾದ ಒಕ್ಕೂಟಕ್ಕೆ  ಲಭಿಸಲಿಲ್ಲ. ಒಕ್ಕೂಟದ ಛಿದ್ರೀಕರಣಕ್ಕೆ ಹಿಂದಿನ ಅಧ್ಯಕ್ಷ ಬುಕಾನನ್(೧೮೫೭-೬೧) ಹಾಗೂ ಜೆಫರ್‌ಸನ್ ಡೇವಿಸ್‌ರು ಬಹುಮುಖ್ಯ ಕಾರಣಕರ್ತರಾದರು. ಇದೇ ವೇಳೆಗೆ ಜನಸಂಖ್ಯೆ, ಆಹಾರ ಸ್ವಾವಲಂಬನೆ ಹಾಗೂ ಕೈಗಾರಿಕೆಗಳಲ್ಲಿ ಮುಂದುವರೆದಿದ್ದ ಉತ್ತರದ ರಾಜ್ಯಗಳ  ಮುಂದೆ ಅಭಿವೃದ್ದಿ ಹೊಂದದ ದಕ್ಷಿಣದ ರಾಜ್ಯಗಳು ಉತ್ತರದ ರಾಜ್ಯಗಳು ಒಡ್ಡಿರುವ ಸಂಕಷ್ಟದಿಂದ ಪಾರಾಗಲು ಜೆಫರಸನ್ ಡೆವಿಸ್‌ನ ಆಡಳಿತ ಅನಿವಾರ್ಯವಾಗಿ ಜನತೆಯ ಮೇಲೆ ಹೆಚ್ಚಿನ ಸುಂಕವನ್ನು ಹೇರಿದತು.  ಆದರೆ ಇದಾವುದು ಉಪಯೋಗಕ್ಕೆ ಬರಲಿಲ್ಲ.   ಉತ್ತರದ ರಾಜ್ಯಗಳು ಸೈನಿಕ ಶಕ್ತಿಯಲ್ಲಿ ಬಲಾಢ್ಯವಾಗಿದ್ದರಿಂದ ದಕ್ಷಿಣದವರ ಆಸ್ತಿ ಯನ್ನು ಕಸಿದುಕೊಳ್ಳುತ್ತಿದ್ದರು. ದಿನದಿನಕ್ಕೂ ತನ್ನ ಮೇಲೆ ಉತ್ತರದ ರಾಜ್ಯಗಳು ದೋರುತ್ತಿದ್ದ ಆಕ್ರಮಣಗಳನ್ನು ತಡೆಗಟ್ಟಲು ದಕ್ಷಿಣದ ಸೈನ್ಯ ವಿಫಲವಾಯಿತು. ಇಂಥವುಗಳಿಗೆ ಸರಿಯಾಗಿ ಸ್ಪಂದಿಸದ ‘‘ಮೈತ್ರಿಕೂಟ’’ಗಳ ಬಗೆಗೆ ದಕ್ಷಿಣದ ಜನತೆಯೇ ತಿರಸ್ಕಾರ ಭಾವನೆ ತಾಳಿದರು.

ಅಮೆರಿಕಾದಲ್ಲಿನ ಆಂತರಿಕ ಬಿಕ್ಕಟ್ಟನ್ನು ಅಂತಾರಾಷ್ಟ್ರೀಯ ಸಮಸ್ಯೆಯನ್ನಾಗಿ ಪರಿವರ್ತಿಸುವ ಹುನ್ನಾರವನ್ನು ದಕ್ಷಿಣದ ರಾಜ್ಯಗಳು ಪ್ರಾರಂಭಿಸಿದವು. ಫ್ರಾನ್ಸ್, ಸ್ಪೇನ್ ಹಾಗೂ ಇಂಗ್ಲೆಂಡ್ ತಾವು ಕಳೆದುಕೊಂಡ ವಸಾಹತುಗಳನ್ನು ಮರಳಿ ಗಳಿಸುವ ಸಮಯಕ್ಕಾಗಿ ಕಾದು ಕುಳಿತಿದ್ದವು. ಆದರೆ ಸೇವಾರ್ಡ್‌ನಂತಹ ವಿದೇಶಾಂಗ ವ್ಯವಹಾರಗಳ ಸಚಿವ ಹಾಗೂ ಫ್ರಾನ್ಸಿಸ್ ರಾಯಭಾರಿ ಆಡಮ್ಸ್‌ನಂತಹ ಆಡಳಿತ ಚತುರರು ಸಕಾಲಕ್ಕೆ ಲಿಂಕನ್‌ನ ಬೆಂಬಲಕ್ಕೆ ನಿಂತರು.

ತನ್ನದೇ ಪಕ್ಷವಾದ ರಿಪಬ್ಲಿಕನ್‌ರಲ್ಲಿ ಕೆಲವರು ಒಕ್ಕೂಟದ ಐಕ್ಯತೆಗೆ ಪ್ರಾಮುಖ್ಯತೆ ನೀಡಿದರೆ ಇನ್ನು ಕೆಲವರು ಗುಲಾಮಗಿರಿ ತೊಲಗಿಸುವುದಕ್ಕಾಗಿ ಪ್ರಾಧಾನ್ಯತೆ ನೀಡಿದರು. ಹೀಗಾಗಿ ಅಧ್ಯಕ್ಷ ಲಿಂಕನ್‌ನು ಜನತೆಗೆ ಇಷ್ಟವಾಗದಿದ್ದರೂ ಕೆಲವು ತಂತ್ರಗಳನ್ನು ಅನುಸರಿಸಿದನು. ಯುದ್ಧ ಪ್ರಾರಂಭಿಸಿದ ಲಿಂಕನ್‌ನು ಸೇನಾಧಿಕಾರಿಗಳನ್ನು ಬದಲಾಯಿಸು ವುದರ ಮೂಲಕ ಹಾಗೂ ಯುದ್ಧದಲ್ಲಿ ದಕ್ಷಿಣದ ರಾಜ್ಯಗಳಿಂದ ಪಡೆದ ಗುಲಾಮರನ್ನು ಉತ್ತರದ ಸೈನ್ಯಕ್ಕೆ ಸೈನಿಕರನ್ನಾಗಿ ಸೇರಿಸಿಕೊಳ್ಳುವುದರ ಮೂಲಕ ಸೈನ್ಯ ಹೆಚ್ಚಿಸಿ ಯುದ್ಧವನ್ನೇ ಪ್ರಬಲಗೊಳಿಸಿದನು. ಅವುಗಳಲ್ಲಿ ಈ ಕಾರ್ಯಗಳು ಮುಖ್ಯತಂತ್ರವಾಗಿದ್ದವು. ‘‘ಮೈತ್ರಿಕೂಟದ’’ ರಾಜಧಾನಿ ರಿಚ್‌ಮಂಡ(ವರ್ಜೀನಿಯಾ)ನ್ನು ಮುತ್ತಿಗೆ ಹಾಕಿ ಈ ಮೊದಲು ವಿಫಲಗೊಂಡ ಉತ್ತರ ಸೈನ್ಯ ನಂತರದ ದಿನಗಳಲ್ಲಿ ಮೆಕ್‌ಲೆಲ್ಲಾನ್ ನೇತೃತ್ವದಲ್ಲಿ ಮತ್ತೆ ದಾಳಿಗೈದು ದಕ್ಷಿಣದ ಸೈನ್ಯಾಧಿಕಾರಿ ಲೀಯ ಸೈನ್ಯವನ್ನು ಧೂಳಿಪಟ ಮಾಡಿತು. ಆದರೆ ಈ ಗೆಲುವು ಸಹ ತಾತ್ಕಾಲಿಕವಾಗಿತ್ತು. ಜಾರುವ ಮೀನಿನಂತೆ ಚಂಗನೆ ಹಾರಿ ಗೆಲುವು ದಕ್ಷಿಣದ ರಾಜ್ಯಗಳ ಕಡೆಗೆ ವಾಲಿತು. ಆದರೆ ಮತ್ತೆ ಈ ಗೆಲುವು ಗ್ರಾಂಟನು ಉತ್ತರದ ಸೇನಾಪತಿಯಾದ ನಂತರ ಯುದ್ಧವು ತೀವ್ರತೆಯನ್ನು ಪಡೆದು ೧೮೬೩ರಲ್ಲಿ ಇಡೀ ದಕ್ಷಿಣವನ್ನು ಹಣ್ಣುಗಾಯಿ, ನೀರುಗಾಯಿ ಮಾಡಿ ಜಯವನ್ನು ತನ್ನ ತೆಕ್ಕೆಗೆ ತೆಗೆದು ಕೊಂಡನು. ದಕ್ಷಿಣದ ಸಮರ್ಥ ಸೇನಾನಿಗಳು ಜಾರ್ಜಿಯಾವನ್ನು ಕೊಳ್ಳೆ ಹೊಡೆದರೂ ಉತ್ತರದ ಸೇನಾನಿ ಗ್ರಾಂಟನ್ ಹೊಡೆತಕ್ಕೆ ಕೈ ಚೆಲ್ಲಿ ಶರಣಾದರು. ಇದರ ಪರಿಣಾಮ ಅಮೆರಿಕಾದಲ್ಲಿ ಉದ್ಭವಿಸಿದ ಅಂತಃಕಲಹಕ್ಕೆ ಒಂದು ತಾತ್ಕಾಲಿಕ ತೆರೆ ಎಳೆದಂತಾಯಿತು. ವಿಜಯಿಯಾದ ಸೈನ್ಯವನ್ನು ಉದ್ದೇಶಿಸಿ ೧೮೬೩ರ ನವೆಂಬರ್ ೧೯ರಂದು ಗೆಟ್ಟಿಸ್‌ಬರ್ಗ್‌ನಲ್ಲಿ ಐತಿಹಾಸಿಕವಾದ ಭಾಷಣವನ್ನು ಅಧ್ಯಕ್ಷ ಲಿಂಕ್‌ನ ಮಾಡುತ್ತಾನೆ. ‘‘ಎಲ್ಲರೂ ಸಮಾನತೆಯ ಹಾಗೂ ಸ್ವಾತಂತ್ರ್ಯ ಪರಿಕಲ್ಪನೆಯ ತತ್ವದಡಿಯಲ್ಲಿ ಕಟ್ಟಿಕೊಂಡ ಈ ದೇಶ ಎಷ್ಟು ಕಾಲ ಬದುಕಿ ಬಾಳಬಹುದೆಂಬ ಪರೀಕ್ಷಿಸುವ ಹುಚ್ಚು ಪರೀಕ್ಷೆಯನ್ನು ಯುದ್ಧದ ಮೂಲಕ ಕಂಡುಕೊಳ್ಳಲು ಕೆಲವರು ಹೊರಟಿದ್ದಾರೆ. ಭೇದದ ಮನೋಭಾವನೆಯಿಂದ ಭೂಮಿಯನ್ನು ಪವಿತ್ರಗೊಳಿಸುವುದಾಗಲಿ ಅಥವಾ ಸಂಸ್ಕರಿಸುವುದಾಗಲಿ ಯಾರಿಗೂ ಸಾಧ್ಯವಿಲ್ಲ. ಇಲ್ಲಿ ಹೋರಾಡಿ ಉಳಿದ ಮತ್ತು ಅಳಿದ ಧೀರರು ತಮ್ಮ ಶಕ್ತಿ ಸಾಮರ್ಥ್ಯದಿಂದ ಈಗಾಗಲೇ ಈ ಭೂಮಿಯನ್ನು ಪವಿತ್ರಗೊಳಿಸಿದ್ದಾರೆ. ಹೀಗಾಗಿ ಹೊಸದಾಗಿ ಕಂಡುಕೊಂಡಿರುವ ಈ ಭೂಮಿಯನ್ನು ಕಡಿಮೆಗೊಳಿಸುವುದಾಗಲಿ ಅಥವಾ ಹೆಚ್ಚಿಸುವುದಾಗಲಿ ನಮ್ಮ ಶಕ್ತಿಗೆ ಮೀರಿದ್ದು. ಆದ್ದರಿಂದ ನಮ್ಮ ಹಿರಿಯರು ಬಿಟ್ಟು ಹೋದ ಮುಗಿಯದ ಕಾರ್ಯವನ್ನು ಪೂರ್ಣಗೊಳಿಸಲು ನಾವೆಲ್ಲರೂ ನಮ್ಮನ್ನು ಸಮರ್ಪಿಸಿಕೊಳ್ಳಬೇಕಾಗಿದೆ. ರಾಷ್ಟ್ರದ ಐಕ್ಯತೆಗಾಗಿ ಮಡಿದವರ ಮರಣ ವ್ಯರ್ಥವಲ್ಲ. ರಂಣರಂಗದ ಮೇಲೆ ಉಂಟಾಗಬಹುದಾದ ಫಲಿತಾಂಶದ ಹೊಸ ಸ್ವಾತಂತ್ರ್ಯದಲ್ಲಿ ಜನರಿಂದ, ಜನರಿಗಾಗಿ ಹಾಗೂ ಜನರೇ ನಿರ್ವಹಿಸುವ ಆಡಳಿತ ಈ ಭೂಮಿಯಿಂದ ಎಂದೂ ನಾಶವಾಗದಂತೆ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ.’’  ಇಂಥ ಹೇಳಿಕೆ ಅಮೆರಿಕಾದ ಮಹಾಜನತೆ ತಮ್ಮ ಐಕ್ಯತೆಗಾಗಿ ಎಂತಹ ಬಲಿದಾನಕ್ಕೂ ಸಿದ್ಧರಾಗುವಂತೆ ಹುರಿದುಂಬಿಸಿತು. ೧೮೬೪ರ ಚುನಾವಣೆಯಲ್ಲಿ ಲಿಂಕನ್‌ನು ಪ್ರಗತಿಪರ ಡೆಮಾಕ್ರೆಟಿಕ್‌ರು ಹಾಗೂ ರಿಪಬ್ಲಿಕನ್‌ರು ಜೊತೆಗೆ ಕಟ್ಟಿದ ಹೊಸ ‘‘ಯೂನಿಯನ್’’ ಪಕ್ಷದಿಂದ ಮತ್ತೆ ಎರಡನೇ ಅವಧಿಗೆ ಅಧ್ಯಕ್ಷನಾಗಿ ಆಯ್ಕೆ ಆದನು. ತಾತ್ಕಾಲಿಕವಾಗಿ ನಿಲುಗಡೆಗೊಂಡಿದ್ದ ಎರಡು ಪ್ರಾಂತ್ಯಗಳ ಮಧ್ಯದ ಜಗಳ ಮತ್ತೆ ಪ್ರಾರಂಭ ವಾಯಿತು.  ಶರ್‌ಮನ್ ನೇತೃತ್ವದ ಉತ್ತರದ(ಫೆಡರಲ್) ಸೈನ್ಯ ದಕ್ಷಿಣದ(ಕಾನ್‌ಫೆಡರಸಿ) ಸೈನ್ಯವನ್ನು ಸೋಲಿಸಿ ಸವನ್ನಾದಿಂದ ಅಟ್ಲಾಂಟ್ ಪ್ರದೇಶದವರೆಗಿನ ವಿಸ್ತಾರವಾದ ಭೂಮಿಯನ್ನು ಹೆಚ್ಚಿನ ಪ್ರತಿರೋಧವಿಲ್ಲದೆ ವಶಪಡಿಸಿಕೊಂಡಿತು. ಇದರಿಂದ ಉತ್ತೇಜನ ಹೊಂದಿದ ಶರ್‌ಮನ್ ಸೈನ್ಯವು ೧೮೬೫ರಲ್ಲಿ ದಕ್ಷಿಣ ಕರೊಲಿನ ಸಂಸ್ಥಾನದ ಕೊಲಂಬಿಯಾ ವನ್ನು ಯಾವ ಅಡೆ ತಡೆ ಇಲ್ಲದೆ ತನ್ನ ಅಧೀನಕ್ಕೆ ಒಳಪಡಿಸಿಕೊಂಡಿತು. ೧೮೬೫ರ ಏಪ್ರಿಲ್  ತಿಂಗಳ ಕೊನೆಯ ಅವಧಿಯ ಒಳಗಾಗಿ ಜನರಲ್ ಲೀ ನೇತೃತ್ವದ ಕಾನ್‌ಫೆಡರೆಟ್ ಸೈನ್ಯ ದಕ್ಷಿಣ ಕರೊಲಿನ, ಉತ್ತರ ಕರೊಲಿನ, ರಿಚ್‌ಮಂಡ್ ಪೀಟರ್ಸ್‌ಬರ್ಗ್ ಪ್ರದೇಶಗಳಿಂದ ಪಲಾಯನಗೈದು ಲಿಂಚ್‌ಬರ್ಗ್‌ನಲ್ಲಿ ಅಸಹಾಯಕನಾಗಿ ಗ್ರಾಂಟ್‌ನ ನೇತೃತ್ವದ ಸೈನ್ಯದ ಮುಂದೆ ಮಂಡಿಯೂರಿ ಕುಳಿತನು. ಉತ್ತರದ ಸೈನ್ಯದ ಅಣತಿಯಂತೆ ಎಲ್ಲ ಒಪ್ಪಂದಗಳಿಗೆ ಬೇಷರತ್ತಾಗಿ ರುಜು ಹಾಕಿದನು. ಸಂಟರ್ ಕೋಟೆಯಿಂದ ಪ್ರಾರಂಭವಾದ ಅಂತಃಕಲಹ  ನಾಲ್ಕು ವರ್ಷಗಳ ನಂತರ ಅದೇ ಕೋಟೆಯ ಮೇಲೆ ಅಖಂಡ ಸಂಯುಕ್ತ ಸಂಸ್ಥಾನದ ಧ್ವಜ ಹಾರಿಸುವುದರ ಮೂಲಕ ಯುದ್ಧ ಕೊನೆಗೊಂಡಿತು.

ಎರಡನೆಯ ಅವಧಿಗೆ ಆಯ್ಕೆಯಾದ ಕರುಣಾಮಯಿ ಲಿಂಕನ್‌ನು ತನ್ನ ಆಡಳಿತದಲ್ಲಿ ಸೇಡಿನ ರಾಜಕೀಯ ಅನುಸರಿಸದೇ ದಕ್ಷಿಣದ ಜೊತೆಗೆ ಸಂಬಂಧಗಳನ್ನು ಮಧುರಗೊಳಿಸಲು ಪ್ರಯತ್ನಿಸಿದನು. ಸೇಡು ಮತ್ತು ಶಿಕ್ಷೆಗಳು ಸಮಸ್ಯೆಗಳಿಗೆ ಶಾಶ್ವತ ಪರಿಹಾರಗಳಲ್ಲ ಎಂಬ ಭಾವನೆ ವ್ಯಕ್ತಪಡಿಸಿದ ಮಹಾಮೇಧಾವಿ ಲಿಂಕನ್ ೧೮೬೫ರ ಏಪ್ರಿಲ್ ೧೪ರಂದು ನಾಟಕ ಗೃಹದಲ್ಲಿ ಜಾನ್ ವಿಲ್ಕ್ಸ್ ಬೂಥ್ ಎಂಬ ದಕ್ಷಿಣದ ಮತಾಂಧನಿಂದ ಕೊಲೆಗೈಯಾದನು. ಬಡತನದಲ್ಲಿ ಹುಟ್ಟಿ ಬೆಳೆದ ಲಿಂಕನ್ ಸರಳಜೀವಿ, ರಾಜಕೀಯ ಮುತ್ಸದ್ದಿ, ಪ್ರಜಾ ಪ್ರಭುತ್ವದ ಪ್ರಬಲ ಪ್ರತಿಪಾದಕ ಹಾಗೂ ಕಠೋರ ನಿರ್ಧಾರಗಳ ರಾಜಕೀಯ ಧುರೀಣನಾಗಿ ವಿಶ್ವದ ರಾಜಕೀಯ ಇತಿಹಾಸದಲ್ಲಿ ಅಮರನಾಗಿದ್ದಾನೆ.

ಬ್ರಿಟನ್ ಜೊತೆಗೆ ನಡೆದ ಅಚಾತುರ್ಯ ಘಟನೆಯಿಂದ ಲಿಂಕನ್ ತನ್ನ ಆತ್ಮಗೌರವವನ್ನು ಲೆಕ್ಕಿಸದೇ ನೇರವಾಗಿ ಬ್ರಿಟನ್ ಸರಕಾರದ ಕ್ಷಮೆ ಕೇಳಿ, ಒಂದೇ ಏಟಿಗೆ ಸಮಸ್ಯೆಯನ್ನು ಬಗೆಹರಿಸಿದ. ಇಂಥ ಸ್ವಯಂ ತಾಳ್ಮೆಯಿಂದ ಅಮೆರಿಕಾ ಒಕ್ಕೂಟದ ವಿರುದ್ಧ ಒಂದಾಗುವ ಪ್ರಯತ್ನಿದಲ್ಲಿದ್ದ ವಿದೇಶಿ ರಾಷ್ಟ್ರಗಳನ್ನೆಲ್ಲ ತಟಸ್ಥ ಧೋರಣೆ ತಾಳುವಂತೆ ಮಾಡಿ ದಕ್ಷಿಣದ ರಾಜ್ಯಗಳನ್ನು ನಿಸ್ಸಹಾಯಕವನ್ನಾಗಿ ಮಾಡಿದನು. ಗುಲಾಮಿ ಪದ್ಧತಿಯನ್ನು ಶಾಶ್ವತವಾಗಿ ನಿರ್ಮೂಲಗೊಳಿಸುವ ದೂರದೃಷ್ಟಿಯಿದ್ದರೂ ಒಕ್ಕೂಟದ ಐಕ್ಯತೆ ಎಲ್ಲಕ್ಕಿಂತ ಮಿಗಿಲಾದುದೆಂದು ಲಿಂಕನ್ ಪರಿಭಾವಿಸಿದ್ದನು. ಪ್ರಗತಿಪರರ ಒತ್ತಡ ಲಿಂಕನ್‌ನ ಮೇಲೆ ತೀವ್ರವಾಗಿತ್ತು. ಒಂದೇ ಕಲ್ಲಿನೇಟಿಗೆ ಹಣ್ಣನ್ನು ಹಾಗೂ ಹಕ್ಕಿಯನ್ನು ಉರುಳಿಸಿದ ಲಿಂಕನ್ ಸಂವಿಧಾನಾತ್ಮಕವಾಗಿ ಗುಲಾಮಿಪದ್ಧತಿಯನ್ನು ಶಾಶ್ವತವಾಗಿ ಅಮೆರಿಕಾದಿಂದ ಉಚ್ಛಾಟಿಸುವ ಮಸೂದೆ ಮಂಡಿಸಿದ ಹಾಗೂ ಅಖಂಡ ಒಕ್ಕೂಟ ವ್ಯವಸ್ಥೆಯನ್ನು ಉಳಿಸಿದನು. ಯುದ್ಧದ ಪರಿಣಾಮವಾಗಿ ಶಾಶ್ವತವಾದ ಒಕ್ಕೂಟ ವ್ಯವಸ್ಥೆ ಪ್ರಬಲಗೊಂಡಿತು. ಅಲ್ಲದೇ ದಕ್ಷಿಣದ ಗುಲಾಮರೆಲ್ಲ ಸ್ವತಂತ್ರರಾದರು. ತಮ್ಮ ಉಪಜೀವನಕ್ಕಾಗಿ ಉತ್ತರದ ಕಡೆಗೆ ವಲಸೆ ಬಂದರು. ವಿಸ್ತರಣೆಯಾದ ಪಶ್ಚಿಮ ರಾಜ್ಯದಲ್ಲಿನ ಭೂಮಿಯನ್ನು ಸ್ಥಳೀಯರಿಗೆ ಹಂಚುವ ಶಾಸನವನ್ನು ಜಾರಿಗೆ ತರಲಾಯಿತು.

ಜಾನ್ ಅಬ್ರಹಾಂ ಲಿಂಕ್‌ನ್‌ನ ಹತ್ಯೆಯಿಂದ ತೆರವಾದ ಸ್ಥಾನವನ್ನ ಉಪಾಧ್ಯಕ್ಷನಾಗಿದ್ದ ಆ್ಯಂಡ್ರೂ ಜಾನ್‌ಸನ್ ವಹಿಸಬೇಕಾಯಿತು. ಮೂಲತಃ ಈತನು ದಕ್ಷಿಣಾತ್ಯ ಪ್ರದೇಶಕ್ಕೆ ಸೇರಿದವನು. ಅಂತಃಕಲಹ ಸಂದರ್ಭದಲ್ಲಿ ಅಮೆರಿಕಾದ ವಿಘಟನೆಯನ್ನು ಬಲವಾಗಿ ವಿರೋಧಿಸಿ ಫೆಡರಲ್ ರಾಜ್ಯಾಧಿಕಾರಕ್ಕೆ ಬೆಂಬಲವಾಗಿ ನಿಂತನು. ಟೆನ್ನಸ್ಸೀ ರಾಜ್ಯವು ದಕ್ಷಿಣಕ್ಕೆ ಸೇರಿದ ಮೇಲೆ ಈತನು ಉತ್ತರ ರಾಜ್ಯಗಳ ಜೊತೆಗೆ ಗುರುತಿಸಿಕೊಂಡನು.  ತೆಗೆದುಕೊಂಡ ದೃಢನಿರ್ಧಾರಗಳು ರಿಪಬ್ಲಿಕನ್ನರ ಮನಗೆದ್ದವು. ೧೮೬೫ರಲ್ಲಿ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ ಜಾನ್‌ಸನ್ ಶ್ರೀಮಂತ ಪ್ಲಾಂಟರ್‌ಗಳನ್ನು ಉಗ್ರವಾಗಿ ದ್ವೇಷಿಸಲಾರಂಭಿಸಿದನು. ಆದರೆ ಕರಿಯರ ಬಗೆಗೂ ಪೂರ್ವಗ್ರಹ ಪೀಡಿತನಾಗಿ ವರ್ತಿಸಿದನು. ಜಾನ್‌ಸನ್‌ನ ಆಡಳಿತದಲ್ಲಿ ಜಾರಿಗೆ ತಂದ ಕಪ್ಪು ಕಾಯಿದೆಗಳು ಆತನು ಕರಿಯರ ಬಗೆಗೆ ಹೊಂದಿದ್ದ ದ್ವೇಷವನ್ನು ಸಾಬೀತುಪಡಿಸಿವೆ. ಈ ಕಾಯಿದೆಯ ಮೂಲಕ ಕರಿಯರ ಮತದಾನದ ಹಕ್ಕನ್ನು ಕಸಿದುಕೊಂಡು ಅವರು ಎಲ್ಲರಂತೆ ಮುಕ್ತವಾಗಿ ವ್ಯವಹರಿಸುವುದು ಮಹಾ ಅಪರಾಧವೆಂದು ಜಾನ್‌ಸನ್‌ನ ಆಡಳಿತ ಸಾರಿತು. ಆದರೆ ಮತ್ತೆ ಹುಟ್ಟಿಕೊಂಡ ಉಗ್ರಪ್ರತಿಭಟನೆಯಿಂದ ಹೊಸ ಕಾಯಿದೆಗಳನ್ನು ತಿದ್ದುಪಡಿಯೊಂದಿಗೆ ಜಾರಿಗೆ ತರಲಾಯಿತು. ಪೌರತ್ವ ಹಕ್ಕುಗಳ ಕಾಯಿದೆ ವರ್ಣದ್ವೇಷದ ಮೇಲೆ ಮತ ನೀಡುವ ಹಕ್ಕನ್ನು ನಿರಾಕರಿಸುವ ಮನೋಭಾವನೆಯನ್ನು ನಿಷೇಧಿಸಲಾಯಿತು. ಅಂತಃಕಲಹದ ನಂತರ ಅಮೆರಿಕಾದ ಪುನರ್ ನಿರ್ಮಾಣ ಯೋಜನೆಗಳಿಗೆ ಸ್ವತಃ ಅಧ್ಯಕ್ಷರೇ ವಿರೋಧಿಸು ತ್ತಿದ್ದಾರೆ ಎಂಬ ಆಪಾದನೆಯನ್ನು ರಿಪಬ್ಲಿಕನ್ನರೇ ಮಾಡಿದರು. ಅಲ್ಲದೇ ಜಾನ್‌ಸನ್‌ನನ್ನು ಪದವಿಯಿಂದ ಕಿತ್ತೊಗೆಯುವ ದೋಷಾರೋಪಣೆ ಪಟ್ಟಿಯನ್ನು ಪ್ರಕಟಿಸಿದರು. ಆದರೆ ಹೆಚ್ಚಿನ ಸೆನೆಟರುಗಳ ಬೆಂಬಲ ಜಾನ್‌ಸನ್‌ಗೆ ಇದ್ದುದರಿಂದ ಇಂತಹ ಆಪಾದನೆಯಿಂದ ತಪ್ಪಿಸಿಕೊಂಡ.

೧೯೬೮ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಗೆ ಡೆಮೊಕ್ರಾಟರು ನ್ಯೂಯಾರ್ಕಿನ ಹೊರೆಷಿಯೊ ಸೆಯ್‌ಮರ್‌ನನ್ನು ಸ್ಪರ್ಧಿಗಿಳಿಸಿದರು. ಜಾನ್‌ಸನ್‌ನ ಆಡಳಿತದ ಅವಧಿಯಲ್ಲಿ ಆದ ತಪ್ಪುಗಳನ್ನು ಸದುಪಯೋಗಪಡಿಸಿಕೊಳ್ಳುವ ಪ್ರಯತ್ನದಿಂದ ಡೆಮೊಕ್ರಾಟರು ಚುನಾವಣಾ ಪ್ರಚಾರದಲ್ಲಿ ತೊಡಗಿದರು. ರಿಪಬ್ಲಿಕನ್ ಪಕ್ಷದ ಉಮೇದುವಾರನಾಗಿ ಜನರಲ್ ಗ್ರಾಂಟ್ ಸ್ಪರ್ಧಿಸಿದನು. ಅಂತಃಕಲಹದಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಗ್ರಾಂಟ್‌ನು ಶಾಂತಿಯನ್ನು ಪ್ರತಿಪಾದಿಸುವ ಆಡಳಿತದ ಬಗೆಗೆ  ಅಭಿಪ್ರಾಯಿಸಿದ. ಅನೇಕ ರಕ್ತಪಾತಗಳಿಂದ ರೋಸಿ ಹೋಗಿದ್ದ ಅಮೆರಿಕಾದ ಜನತೆ ಸಹಜವಾಗಿ ಶಾಂತಿಯ ಪ್ರತಿಪಾದಕನಾದ ಗ್ರಾಂಟ್‌ನನ್ನು ಬೆಂಬಲಿಸಿ ಆಯ್ಕೆ ಮಾಡಿದರು. ಈತನ ಆಯ್ಕೆಯಲ್ಲಿ ನಡೆದಿರುವ ಆಶ್ಚರ್ಯದ ಸಂಗತಿ ಎಂದರೆ ಅಂತಃಕಲಹದಲ್ಲಿ ಗ್ರಾಂಟ್‌ನ ವಿರುದ್ಧ ಸೋತ ದಕ್ಷಿಣಾತ್ಯ ರಾಜ್ಯಗಳೇ ಹೆಚ್ಚಿನ ಮತವನ್ನು ಈತನ ಪರವಾಗಿ ಚಲಾಯಿಸಿ ವಿಜಯಕ್ಕೆ ಕಾರಣಗಳಾಗಿದ್ದವು.

ಗಿಲೀಟಿನ ಯುಗ

ಮಾರ್ಕ್‌ಟ್ವೇನ್ ಮತ್ತು ಚಾರ್ಲ್ಸ್ ವಾರ್ನರ್ ಎಂಬ ವಿದ್ವಾಂಸರಿಬ್ಬರು ೧೮೬೫- ೧೯೦೦ರವರೆಗಿನ ಅಮೆರಿಕಾದ ಆಡಳಿತವನ್ನು ಗಿಲೀಟಿನ ಯುಗವೆಂದು ಕರೆದಿದ್ದಾರೆ. ಸಾಮಾನ್ಯವಾಗಿ ಗಿಲೀಟ್ ಎಂದರೆ ವಸ್ತುಗಳು ಕೆಲವು ಕ್ಷಣ ಮಾತ್ರ ಹೊಳೆದು ಕಪ್ಪಾಗುವ ಗುಣಧರ್ಮವನ್ನು ವ್ಯಕ್ತಪಡಿಸುವುದಕ್ಕೆ ಈ ಮಾತನ್ನು ಅನ್ವಯಿಸಲಾಗುತ್ತದೆ. ಆ ಸಂದರ್ಭದ ಅಭಿವೃದ್ದಿ ರಾಜಕಾರಣ ಕ್ಷಣ ಮಾತ್ರ ಹೊಳೆದು ಕಪ್ಪಾಗುವ ಘಟನೆಗಳು ಅಮೆರಿಕಾದ ಇತಿಹಾಸದಲ್ಲಿ ಜರುಗಿದವು. ಲಾಭಕೋರತನ ಹಾಗೂ ಲಂಚ ಎಲ್ಲ ಕ್ಷೇತ್ರಗಳನ್ನು ಆವರಿಸಿಕೊಂಡಿತು. ಇಂತಹ ವ್ಯವಹಾರವನ್ನು ನಿಯಂತ್ರಿಸುವ ಯಾವ ಗೋಜಿಗೆ ಸರ್ಕಾರ ಪ್ರಯತ್ನ ಮಾಡಿರಲಿಲ್ಲ. ಅಲ್ಲದೆ ಇಂತಹ ಅನಿಯಂತ್ರಣವನ್ನು ನಿಯಂತ್ರಿಸುವ ಒತ್ತಡವನ್ನು ರಾಜಕಾರಣಿಗಳು ಮಾಡಲಿಲ್ಲ. ಉದ್ಯಮಪತಿಗಳು ರಾಜಕಾರಣಿ ಗಳಾಗಿ ಮಾರ್ಪಡುವ ಪೈಪೋಟಿ ಹುಟ್ಟಿಕೊಂಡಿತು. ಹೀಗಾಗಿ ಪರಿಶುದ್ಧ ರಾಜಕಾರಣಿಗಳು ಇಂತಹವರ ಪ್ರವೇಶದಿಂದ ಹೆದರಿ ಕಂಡು ಕಾಣದಂತೆ ಇರಬೇಕಾಯಿತು. ಅಮೆರಿಕಾದ ಎರಡೂ ರಾಜಕೀಯ ಪಕ್ಷಗಳಲ್ಲಿ ಬಂಡವಾಳಗಾರರೇ ಹೆಚ್ಚಿನ ಹಿಡಿತವನ್ನು ಹೊಂದಿದ್ದರು. ಲಾಭಕೋರ ವ್ಯಾಪಾರತನಕ್ಕೆ ಅಡ್ಡಗಾಲು ಹಾಕುವ ರಾಜಕಾರಣಿಯನ್ನು ಹಾಗೂ ಕಾಯ್ದೆಗಳನ್ನು ಉಸಿರಾಟ ಇಲ್ಲದ ದೇಹದಂತೆ ಮಾಡಿ ಇಡಲಾಯಿತು. ಇದೇ ಕಾಲದಲ್ಲಿ ೧೮ನೇ ಅಧ್ಯಕ್ಷನಾಗಿ ಜನರಲ್ ಗ್ರಾಂಟ್ ಎರಡು ಅವಧಿಗೆ ಆಡಳಿತ ನಡೆಸಿದ ಸೈನ್ಯಾಧಿಕಾರಿಯಾಗಿ ಪಡೆದ ಘನತೆಯನ್ನು ಗ್ರಾಂಟ್ ಅಸಹಾಯಕ ಅಧ್ಯಕ್ಷನಾಗಿ ಪರಿವರ್ತನೆಗೊಳ್ಳುವುದರ ಮೂಲಕ ತನ್ನ ಮಹತ್ವವನ್ನು ಕಳೆದುಕೊಂಡ. ಈ ಕಾಲದಲ್ಲಿ ವಿಪರೀತ ಭ್ರಷ್ಟಾಚಾರ ತುಂಬಿ ತುಳುಕಲಾರಂಭಿಸಿತು. ಈ ಅವಧಿಯಲ್ಲಿ ಫಿಸ್ಕ್-ಗೌಲ್ಡ್ ಎಂಬ ಹಗರಣ ಬಹಳ ಕುಪ್ರಸಿದ್ದಿ ಪಡೆಯಿತು. ಜೇಗೌಲ್ಡ್ ಮತ್ತು ಜಿಮ್ ಫಿಸ್ಕ್ ಎಂಬ ಇಬ್ಬರು ಸಟ್ಟಾವ್ಯಾಪಾರಿಗಳು ಅಧ್ಯಕ್ಷ ಗ್ರಾಂಟ್‌ನನ್ನು ನಂಬಿಸಿ ಇಡೀ ದೇಶದ ಚಿನ್ನವನ್ನೇ ಮಂಗಮಾಯ ಮಾಡಿದರು. ಇಂತಹ ಕುತಂತ್ರ ಅಧ್ಯಕ್ಷನಿಗೆ ತಿಳಿಯದೇ ಹೋಗಿದುದಕ್ಕೆ ಜನ ತುಂಬ ವ್ಯಥೆಪಟ್ಟರು. ಗ್ರಾಂಟ್‌ನ ನಂತರ ಅಧಿಕಾರಕ್ಕೆ ಬಂದ ರುದರ್‌ಫೋರ್ಡ್ ಹೇಯ್ಸ ಅತ್ಯಂತ ಪ್ರಯಾಸದಿಂದ ಅಧ್ಯಕ್ಷನಾಗಿ ಆಯ್ಕೆಯಾದ. ಅಂತಃಕಲಹದ ಸಂದರ್ಭ ದಲ್ಲಿ ದಕ್ಷಿಣದಲ್ಲಿ ಉಳಿದಿದ್ದ ಫೆಡರಲ್ ಸೈನ್ಯವನ್ನು ಸಂಪೂರ್ಣವಾಗಿ ಹಿಂತೆಗೆದುಕೊಂಡನು. ಸರಕಾರಿ ಕಚೇರಿಗಳಲ್ಲಿ ತುಂಬಿತುಳುಕುತಿದ್ದ ಭ್ರಷ್ಟಾಚಾರ ಯಾವ ಎಗ್ಗಿಲ್ಲದೆ ಮುಂದು ವರೆಯಿತು. ವಿಪರೀತವಾದ ಖಾಸಗಿ ನಿಯಂತ್ರಣದ ಹಿಡಿತ ಆರ್ಥಿಕ ಮುಗ್ಗಟಿಗೆ ಎಡೆ ಮಾಡಿಕೊಟ್ಟಿತು. ದೇಶದಲ್ಲಿನ ಕಾರ್ಖಾನೆಗಳ ಮಾಲೀಕರು ಸ್ವೇಚ್ಛಾಚಾರದಿಂದ ವರ್ತಿಸಿದರು. ಅದನ್ನು ನಿಯಂತ್ರಿಸುವ ಯಾವ ಕಾನೂನುಗಳು ಇರಲಿಲ್ಲ. ಚೀನಿಯರ ವಲಸೆ ಈ ಸಮಯದಲ್ಲಿ ಭೂತದಂತೆ ಬೆನ್ನಟ್ಟಿತು. ಅಮೆರಿಕಾದಲ್ಲಿ ತಲೆದೋರಿದ ನಿರುದ್ಯೋಗ ಹಾಗೂ ಅನುತ್ಪಾದಕ ಕಾರಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವ ಚೀನಿ ವಲಸೆಗಾರರು ಕಾರಣವೆಂದು ಅಪಾದಿಸಲಾಯಿತು. ಇದಕ್ಕೆ ಸಂಬಂಧಿಸಿದ ಯಾವ ಕಾನೂನುಗಳನ್ನು ಹೇಯ್ಸ ರಚಿಸಲಿಲ್ಲ. ಇದು ಅಧ್ಯಕ್ಷ ಮತ್ತು ರಿಪಬ್ಲಿಕನ್ ಪಕ್ಷಕ್ಕೆ ಹೆಚ್ಚಿನ ಮಾರಕ ವಾಯಿತು.

ಮೊದಲ ಆಡಳಿತಾವಧಿಗೆ ಬೇಸತ್ತ ಹೇಯ್ಸ ಮುಂದಿನ ಅವಧಿಗೆ ಸ್ಪರ್ಧಿಸಲು ನಿರಾಕರಿಸಿದ ರಿಪಬ್ಲಿಕನ್ ಪಕ್ಷವು ಜೇಮ್ಸ್ ಗಾರ್ ಫೀಲ್ಡ್‌ನನ್ನು ಕಣಕ್ಕಿಳಿಸಿತು. ೧೮೮೦ ಮಹಾಚುನಾವಣೆಯಲ್ಲಿ ಗೆದ್ದ ಈತನು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದರ ಮೂಲಕ ಆಡಳಿತ ಪ್ರಾರಂಭಿಸಿದ. ಆದರೆ ಈಗಾಗಲೇ ಭ್ರಷ್ಟಾಚಾರದ ಕೂಪವಾಗಿ ನಿರ್ಮಾಣವಾಗಿದ್ದ ಆಡಳಿತದಲ್ಲಿನ ಭ್ರಷ್ಟಾಚಾರದ ಬೆಂಬಲಿಗರು ಈತನ ಆಡಳಿತದಿಂದ ತೀವ್ರ ಅಸಮಾಧಾನಗೊಂಡರು. ಹೀಗಾಗಿ ಅಧಿಕಾರ ವಹಿಸಿಕೊಂಡು ಕೇವಲ ನಾಲ್ಕು ತಿಂಗಳಲ್ಲಿ ಗಾರ್‌ಫೀಲ್ಡ್‌ನ ಹತ್ಯೆ ಮಾಡಲಾಯಿತು. ಇದರಿಂದ ತೆರವಾದ ಸ್ಥಾನವನ್ನು ಉಪಾಧ್ಯಕ್ಷ ಅರ್ಥರ್ ವಹಿಸಿಕೊಂಡನು. ಆಡಳಿತದಲ್ಲಿ ಯಾವುದೇ ಅನುಭವ ಹೊಂದಿರ ದಿದ್ದರೂ ಅನೇಕ ಮಹತ್ವದ ಸುಧಾರಣೆಗಳನ್ನು ಜಾರಿಗೊಳಿಸಿದ. ಭ್ರಷ್ಟಾಚಾರದ ಹಣ ಪ್ರಭಾವವನ್ನು ತಗ್ಗಿಸುವಲ್ಲಿ ಯಶಸ್ವಿಯಾದ. ಸಾರ್ವಜನಿಕ ವಲಯದಲ್ಲಿ ಅಧಿಕಾರಿಗಳನ್ನು ಅರ್ಹತೆಯ ಮೂಲಕ ಆಯ್ಕೆ ಮಾಡಿದ. ಹೆಚ್ಚಿನ ಸುಂಕದಿಂದ ಬಂದ ಹಣದಿಂದ ನೌಕಾದಳವನ್ನು ಪ್ರಬಲಗೊಳಿಸಲು ತೊಡಗಿದ. ರಿಪಬ್ಲಿಕನ್ ಪಕ್ಷದ ನಾಯಕರ ತಾಳಕ್ಕೆ ತಕ್ಕಂತೆ ಕುಣಿಯದ ಅರ್ಥರ್‌ನನ್ನು ಎರಡನೇ ಅವಧಿಗೆ ಅಭ್ಯರ್ಥಿಯನ್ನಾಗಿ ನಿಲ್ಲಿಸಲು ನಿರಾಕರಿಸಿದರು. ಈಗಾಗಲೇ ಅಮೆರಿಕಾದ ಜನತೆ ರಿಪಬ್ಲಿಕನ್‌ರ ಆಡಳಿತದಿಂದ ಸಮಾಧಾನಗೊಂಡು ಡೆಮಾಕ್ರಟಿಕ್ ಪಕ್ಷದ ಉಮೇದುವಾರನಾದ ಕ್ಲೀವ್‌ಲ್ಯಾಂಡ್‌ನನ್ನು ೧೮೮೪ರ ಚುನಾವಣೆಯಲ್ಲಿ ಬಹುಮತದಿಂದ ಆಯ್ಕೆ ಮಾಡಿದರು. ಆಡಳಿತದ ಪ್ರಾರಂಭ ದಲ್ಲಿ ಸುಂಕದ ದರವನ್ನು ಕಡಿಮೆ ಮಾಡುವ ಕುರಿತು ಕಠಿಣ ನಿರ್ಧಾರ ತೆಗೆದುಕೊಳ್ಳಲಾಯಿತು. ಈತನ ಆಡಳಿತಾವಧಿಯಲ್ಲಿ ಬ್ರಿಟನ್ ಪರವಾಗಿ ಅಮೆರಿಕಾ ತಾಳಿದ ನಿಲುವಿನಿಂದ ಐರಿಷ್ ಜನರು ತೀವ್ರ ಅಸಮಾಧಾನಗೊಂಡರು. ಈ ಎರಡು ಪ್ರಮುಖ ನಿರ್ಧಾರಗಳು ಮುಂದಿನ ಚುನಾವಣೆಯಲ್ಲಿ ಕ್ಲೀವ್‌ಲ್ಯಾಂಡ್‌ನ ಸೋಲಿಗೆ ಮುಖ್ಯ ಕಾರಣಗಳಾದವು. ರಿಪಬ್ಲಿಕ್‌ನ ಪಕ್ಷದ ಬೆಂಜಮಿನ್ ಹ್ಯಾರಿಸನ್ ಅಮೆರಿಕಾದ ೨೩ನೇ ಅಧ್ಯಕ್ಷನಾಗಿ ೧೮೮೮ರ ಚುನಾವಣೆ ಯಲ್ಲಿ ಆಯ್ಕೆಯಾದ. ಈತನು ಸಾರ್ವಜನಿಕ ಸೇವಾ ವ್ಯವಸ್ಥೆಯನ್ನು ಸುಧಾರಿಸುವ ಮುಖ್ಯ ಗುರಿಗಳೊಂದಿಗೆ ಆಡಳಿತ ಪ್ರಾರಂಭಿಸಿದ. ಎಫ್.ಡಿ.ರೂಸ್‌ವೆಲ್ಟ್ ಎಂಬ ಚತುರ ಆಡಳಿತಗಾರ ಹ್ಯಾರಿಸ್‌ನನ ಬೆಂಬಲಕ್ಕೆ ನಿಂತ. ಸಂಪದ್ಭರಿತವಾದ ಪಶ್ಚಿಮ ವಲಯದ ಪ್ರದೇಶಗಳನ್ನು ಸಂಯುಕ್ತ ಸಂಸ್ಥಾನಗಳಿಗೆ ಸೇರಿಸಿಕೊಳ್ಳಲಾಯಿತು. ಅಲ್ಲದೇ ಅಮೆರಿಕಾಕ್ಕೆ ವಲಸೆ ಬಂದ ಜನರನ್ನು ಈ ಹೊಸ ಪ್ರದೇಶಗಳಿಗೆ ನುಗ್ಗಿಸಲಾಯಿತು.

ಗಿಲೀಟನ ಯುಗದಲ್ಲಿ ಅಮೆರಿಕಾದ ಆಡಳಿತ ಸ್ವಜನಪಕ್ಷಪಾತ, ಭ್ರಷ್ಟಾಚಾರ ಹಾಗೂ ಲಾಭಕೋರತನಕ್ಕೆ ತೆರೆದುಕೊಂಡಿತು. ಪಶ್ಚಿಮದ ಕಡೆಗೆ ಸಂಸ್ಥಾನ ವಿಸ್ತರಣೆಗೊಂಡಿರುವುದು ಆಡಳಿತದ ಯಶಸ್ಸಿನ ಒಂದು ಭಾಗವಾಯಿತು. ಆದರೆ ಇದೇ ಕಾಲಕ್ಕೆ ಅಮೆರಿಕಾದ ಮೂಲ ನಿವಾಸಿಗಳನ್ನು ಹಾಗೂ ಆದಿವಾಸಿಗಳನ್ನು ಸಂಪೂರ್ಣವಾಗಿ ಹತ್ತಿಕ್ಕುವ ಪ್ರಯತ್ನ ಮಾಡಲಾಯಿತು. ಕೃಷಿ ಹಾಗೂ ಕೈಗಾರಿಕೆಗಳು ಬಂಡವಾಳಗಾರರಿಂದ ಶೋಷಣೆಗೊಳಗಾದರೆ ಇದರ ಪರಿಣಾಮ ಇಡೀ ರಾಜಕೀಯ ವ್ಯವಸ್ಥೆಯನ್ನು ಬುಡಸಮೇತ ಅಲುಗಾಡಿಸುವ ಶಕ್ತಿಯನ್ನು ಔದ್ಯೋಗೀಕರಣದ ಶಕ್ತಿಗಳಿಗೆ ಧಾರೆ ಎರೆಯಲಾಯಿತು. ರಾಕ್ ಫೇಲರ್ ಮತ್ತು ಜೆ.ಪಿ.ಮಾರ್ಗನ್‌ನಂಥ ಉದ್ಯಮಿಗಳು ಇಡೀ ಅಮೆರಿಕಾದ ಆಡಳಿತ ವ್ಯವಸ್ಥೆಯನ್ನು ನಿಯಂತ್ರಿಸುವ ಶಕ್ತಿಯನ್ನು ಪಡೆದಿದ್ದರು. ಕಾರ್ಮಿಕರು, ಕೃಷಿಕರು ಮತ್ತು ಸೇವಕರು ಕೇವಲ ದುಡಿಯುವ ವಸ್ತುಗಳಾಗಿ ಮಾರ್ಪಟ್ಟರು. ಇದೇ ವೇಳೆಗೆ ಅಮೆರಿಕಾ ಬೃಹತ್ ಪ್ರಮಾಣದ ನಗದೀಕರಣಕ್ಕೆ ತೆರೆದುಕೊಂಡಿತು. ರೈಲುಮಾರ್ಗಗಳು ಇಡೀ ಅಮೆರಿಕಾವನ್ನು ಕುಬ್ಜ ಗೊಳಿಸಿದವು. ಆದರೆ ಅಷ್ಟೇ ಪ್ರಮಾಣದಲ್ಲಿ ಅಭಿವೃದ್ದಿ ರಾಜಕಾರಣ, ಅನೈತಿಕ ರಾಜಕಾರಣಕ್ಕೆ ಎಡೆಮಾಡಿಕೊಟ್ಟು ಪ್ರಗತಿಪರ ಸಮಾಜದ ನಿರ್ಮಾಣದ ಎಲ್ಲ ಹಾದಿಗಳು ಮುಚ್ಚುವಂತೆ ಈ ಯುಗದಲ್ಲಿ ಅಮೆರಿಕಾ ಇತಿಹಾಸ ಬದಲಾಯಿತು.