ರಾಷ್ಟ್ರಧ್ಯಕ್ಷನಿಗೆ ಪರಮಾಧಿಕಾರ

ಕಾರ್ಯಾಂಗ(ಸರಕಾರ) ನಡೆಸಲು ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡುವ ಅಧಿಕಾರವನ್ನು ಎಲ್ಲ ರಾಜ್ಯಗಳ ಶಾಸನ ಸಭೆಯ ಪ್ರತಿನಿಧಿಗಳಿಗೆ ಬಿಟ್ಟುಕೊಡಲಾಯಿತು. ಅಧ್ಯಕ್ಷ ತನ್ನ ಆಯ್ಕೆ ನಂತರ ತಾನೇ ಮಂತ್ರಿಮಂಡಲವನ್ನು ರಚಿಸಿಕೊಳ್ಳುವ ಪರಮಾಧಿಕಾರ ನೀಡಲಾಯಿತು. ತಾನು ಆರಿಸಿಕೊಂಡಿರುವ ಆಡಳಿತದಲ್ಲಿನ ಸದಸ್ಯರಿಗೆ ಸೆಕ್ರೆಟರಿ ಎಂದು ಕರೆಯುತ್ತಾರೆ. ಅಧ್ಯಕ್ಷರ ಅವಧಿಯನ್ನು ನಾಲ್ಕು ವರ್ಷಗಳಿಗೆ ಸೀಮಿತಗೊಳಿಸಲಾಯಿತು. ಅಲ್ಲದೇ ಶಾಸಕಾಂಗ ಹಾಗೂ ಕಾರ್ಯಾಂಗವನ್ನು ಪ್ರತ್ಯೇಕಗೊಳಿಸಲಾಯಿತು. ಈ ಟೀಕೆಗೆ ಕಾಂಗ್ರೆಸ್ ಗುರಿಯಾದರೂ ಅದು ಅಧ್ಯಕ್ಷನ ಮೇಲೆ ಅಂಕುಶವನ್ನು ಹೊಂದಿತು. ಅಲ್ಲದೇ ಅಧ್ಯಕ್ಷನು ಆಡಳಿತ ನಿರ್ವಹಿಸಲು ಸಹ ಅಷ್ಟೇ ಬಲವಾದ ಅಧಿಕಾರವನ್ನು ಹೊಂದಿದ್ದನು. ಹೊಸದಾಗಿ ಜಾರಿಗೆ ತಂದ ಪದ್ಧತಿಯಿಂದ ರಾಜ್ಯ ಸರಕಾರಗಳ ಪ್ರತಿನಿಧಿಗಳು ರಾಷ್ಟ್ರೀಯ ಪಕ್ಷಗಳಲ್ಲಿ ಇಬ್ಭಾಗಗೊಂಡರು. ಹೀಗಾಗಿ ಈವರೆಗೂ ರಾಜ್ಯಗಳು ಮಾಡಿಕೊಂಡು ಬರುತ್ತಿದ್ದಂತಹ ರಾಜಕೀಯವು ಕ್ಷೀಣಿಸಲಾರಂಭಿಸಿತು. ಸಂವಿಧಾನದ ತಿದ್ದುಪಡಿಯ ಮೂಲಕ ರಾಜ್ಯ ಪ್ರತಿನಿಧಿಗಳಿಂದ ರಾಷ್ಟ್ರಾಧ್ಯಕ್ಷನನ್ನು ಆಯ್ಕೆ ಮಾಡುವ ವಿಧಾನವನ್ನು ರದ್ದುಗೊಳಿಸಿ ಜನರೇ ನೇರವಾಗಿ  ಅಧ್ಯಕ್ಷನನ್ನು ಆರಿಸುವ ಪ್ರಕ್ರಿಯೆ ಪ್ರಾರಂಭಿಸಿದರು(೧೮೦೪ ರಲ್ಲಿ ೧೪ನೆಯ ತಿದ್ದುಪಡಿ). ಮೊದಮೊದಲು ಪ್ರತಿಯೊಂದಕ್ಕೂ ಸೆನೆಟ್‌ನ ಅನುಮೋದನೆ ಅವಶ್ಯಕವಾಗಿತ್ತು. ಆದರೆ ವಾಷಿಂಗ್ಟನ್‌ನಂತಹ ಧೈರ್ಯಶಾಲಿಯು ಇವುಗಳನ್ನು ಲೆಕ್ಕಿಸದೇ ಕಾರ್ಯಾಂಗವೇ ನೇರವಾಗಿ ಅಧಿಕಾರ ಚಲಾಯಿಸುವಂತಹ ದಿಟ್ಟ ಕ್ರಮ ಕೈಗೊಂಡನು. ಹೊಸದಾಗಿ ಜಾರಿಗೆ ಬಂದ ಆಡಳಿತ ಕ್ರಮದ ಹಾಗೂ ಸಂವಿಧಾನದ ಬಗೆಗೆ ಬಿರುಸಿನ ಚರ್ಚೆಗಳಾದವು. ರಾಷ್ಟ್ರೀಯವಾದಿಗಳು ತಮ್ಮ ವಾಕ್ಪಟುತ್ವದ ಮೂಲಕ ಜನರನ್ನು ತಮ್ಮ ಕಡೆಗೆ ಸೆಳೆದುಕೊಂಡರು.  ೧೭೮೮ನೆಯ ಜುಲೈ ೪ರಲ್ಲಿ ಫಿಲಡೆಲ್ಪಿಯಾದಲ್ಲಿ ತುರ್ತಾಗಿ ಸಭೆ ಸೇರಿ ಬಲಾಢ್ಯ ಸರಕಾರ ರಚಿಸಬೇಕೆಂಬ ಗುರಿಯೊಂದಿಗೆ ಜನತೆ ಬೃಹತ್ ಮೆರವಣಿಗೆ ಕೈಗೊಂಡು ಪ್ರತಿಭಟಿಸಿದರು. ಈ ಪರಿಣಾಮದಿಂದ ಅಮೆರಿಕಾದಲ್ಲಿ ಜನರಿಂದ ಆಯ್ಕೆಯಾದ ಸರಕಾರ ಆಸ್ತಿತ್ವಕೆ ಬಂದಿತು. ಜನಪ್ರಿಯ ನಾಯಕ ಜಾರ್ಜ್ ವಾಷಿಂಗ್ಟನ್‌ನನ್ನು ಹೊಸ ಸರಕಾರದ ಮೊದಲ ಅಧ್ಯಕ್ಷನನ್ನಾಗಿ ನೇಮಕ ಮಾಡಲಾಯಿತು. ೧೭೮೯ರಲ್ಲಿ ನ್ಯೂಯಾರ್ಕ್ ನಗರದ ವಾಲ್‌ಸ್ಟ್ರೀಟ್ ಫೆಡರಲ್ ಭವನದಲ್ಲಿ ಪ್ರಥಮ ಅಧ್ಯಕ್ಷನಾಗಿ ಜಾರ್ಜ್ ವಾಷಿಂಗ್ಟನ್ ಅಧಿಕಾರ ವಹಿಸಿಕೊಂಡನು. ಇದರಿಂದ ತೀವ್ರವಾಗಿ ತಲೆದೋರಿದ್ದ ರಾಜಕೀಯ ಗೊಂದಲಗಳು ಸ್ವಲ್ಪಮಟ್ಟಿಗೆ ಕಡಿಮೆ ಆದವು.

ಪ್ರಜಾಪ್ರಭುತ್ವವೆಂಬ ಹೊಸ ಪ್ರಯೋಗ

ಅಮೆರಿಕಾದ ಪ್ರಜಾಪ್ರಭುತ್ವವು ವಿಶ್ವದ ಅಂದಿನ ರಾಜಕೀಯ ವ್ಯವಸ್ಥೆಯಲ್ಲಿ ಸ್ಥಾಪಿತವಾದ ಹೊಸ ಪ್ರಯೋಗವಾಗಿತ್ತು. ಬೃಹತ್ ಪ್ರದೇಶಗಳನ್ನು ಹೊಂದಿರುವ ಅಮೆರಿಕಾದಲ್ಲಿ ಪ್ರಜಾಪ್ರಭುತ್ವದ ಆ ಯಶಸ್ಸನ್ನು ಹೆಚ್ಚಿನ ಜನರು ಅನೇಕ ಸಂಶಯಗಳಿಂದ ಸ್ವೀಕರಿಸಿದ್ದರು. ಆದರೆ ಹೊಸ ಆಡಳಿತಗಾರರು(ಫೆಡರಲಿಸ್ಟರು) ಎಲ್ಲರೂ ಸಂಶಯಿಸಲ್ಪಟ್ಟ ಅಂಥ ಅನಿಸಿಕೆಗಳನ್ನು ಹುಸಿಗೊಳಿಸಿ ಆಡಳಿತ ನಡೆಸುವಲ್ಲಿ ಯಶಸ್ವಿಯಾದರು. ಮೊಟ್ಟ ಮೊದಲನೆಯ ಕೇಂದ್ರ ಸರಕಾರದ ಅಧ್ಯಕ್ಷನಾಗಿ ವಾಷಿಂಗ್ಟನ್ ಹಾಗೂ ಉಪಾಧ್ಯಕ್ಷನಾಗಿ ಜಾನ್ ಆಡೆಮ್ಸ್ ಆಯ್ಕೆ ಆದರು. ೧೭೮೯ರಲ್ಲಿ ನ್ಯೂಯಾರ್ಕ್ ನಗರವು ಹೊಸ ದೇಶದ ಪ್ರಥಮ ರಾಜಧಾನಿ ಆಯಿತು. ಅದಮ್ಯ ವಿಶ್ವಾಸ ಇರಿಸಿಕೊಂಡ ಜನಾನುರಾಗಿ, ಧೈರ್ಯಶಾಲಿ ಹಾಗೂ ಪ್ರಾಮಾಣಿಕನಾದ ವಾಷಿಂಗ್ಟನ್ ಯಾವುದೇ ಅಳುಕಿಲ್ಲದೇ ಆಡಳಿತ ನಿರ್ವಹಿಸಲಾರಂಭಿಸಿದನು. ಅಲೆಗ್ಜಾಂಡರ್ ಹ್ಯಾಮಿಲ್ಟನ್, ಥಾಮಸ್ಸ್ ಜೆಫರ್‌ಸನ್, ಹೆನ್ರಿ ನಾಕ್ಸ್ ಎಂಬ ನಾಯಕರನ್ನು ಮಂತ್ರಿಮಂಡಳಕ್ಕೆ ಸೇರಿಸಿಕೊಂಡನು. ಅಲ್ಲದೇ ಹ್ಯಾಮಿಲ್ಟನ್‌ನ ವಿಚಾರಧಾರೆಯಂತೆ ನ್ಯಾಯಾಂಗವನ್ನು ಪ್ರತ್ಯೇಕಿಸಿ ಸುಪ್ರೀಮ್ ಕೋರ್ಟನ್ನು ರಚಿಸಲಾಯಿತು. ಮೊದಲ ಮುಖ್ಯ ನ್ಯಾಯಾಧೀಶನನ್ನಾಗಿ ಜಾನ್ ಜೇಯು ನೇಮಕವಾದನು. ಕಟ್ಲೆಗಳ ಶೀಘ್ರ ಪರಿಹಾರಕ್ಕಾಗಿ ಜಿಲ್ಲಾ ಕೋರ್ಟುಗಳನ್ನು ಹಾಗೂ ಸಂಚಾರಿ ಕೋರ್ಟುಗಳನ್ನು ರಚಿಸಲಾಯಿತು. ಸಂವಿಧಾನಕ್ಕೆ ಅನೇಕ ತಿದ್ದುಪಡಿಗಳನ್ನು ತರುವುದರ ಮೂಲಕ ಜನತೆಗೆ ಅವಶ್ಯವಿರುವ ವಾಕ್ ಸ್ವಾತಂತ್ರ್ಯ, ಧಾರ್ಮಿಕ ಆಚರಣೆಗಳ ಅನುಮತಿ, ಪ್ರಕಟಣೆ ಸ್ವಾತಂತ್ರ್ಯ, ಸಭೆ-ಸಮಾರಂಭಗಳನ್ನು ಏರ್ಪಡಿಸುವ ಹಕ್ಕುಗಳನ್ನು ಕೊಡಲಾಯಿತು. ಇವುಗಳಿಗೆ ಯಾರದೇ ಯಾವುದೇ ರೀತಿಯ ಒತ್ತಡ ಅಥವಾ ಕಸಿದುಕೊಳ್ಳುವಿಕೆಯನ್ನು ತಡೆಗಟ್ಟಲು ಕಾನೂನುಗಳನ್ನು ತರಲಾಯಿತು. ಮ್ಯಾಡಿಸನ್ ಅಂಥ ಮುತ್ಸದ್ದಿಗಳು ಜನರು ಅನುಭವಿಸುವ ಹಕ್ಕುಗಳ ಜೊತೆಗೆ ಜನತೆಯ ಪ್ರಜಾಕರ್ತವ್ಯಗಳನ್ನು ನಿರೀಕ್ಷೆಯನ್ನು ಜನರು ಒಪ್ಪುವಂತೆ ಮಾಡಿದರು. ಹ್ಯಾಮಿಲ್ಟನ್‌ನಂಥ ಪ್ರಾಮಾಣಿಕ ವ್ಯಕ್ತಿಯು ಹಣಕಾಸು ಮಂತ್ರಿಯಾಗಿ ಅನೇಕ ಕಠಿಣ ಕ್ರಮ ತೆಗೆದುಕೊಳ್ಳುವುದರ ಮೂಲಕ ಆರ್ಥಿಕ ಪರಿಸ್ಥಿತಿಯನ್ನು ಸದೃಢಗೊಳಿಸಿದನು. ರಾಜಧಾನಿಗಳ ಸ್ಥಳಾಂತರ ಮಾಡುವುದರ ಮೂಲಕ ಹಾಗೂ ಶಕ್ತಿಯುತ ರಾಜ್ಯಗಳಿಗೆ ಹೆಚ್ಚಿನ ತೆರಿಗೆಗಳನ್ನು ವಿಧಿಸುವುದರ ಮೂಲಕ ಸಾಲವನ್ನು ಹತೋಟಿಗೆ ತಂದನು. ಅಬಕಾರಿ ಸುಂಕಗಳು ಆಮದು ಹಾಗೂ ರಫ್ತುಗಳ ನಿರ್ವಹಣೆಗೆ ಬ್ಯಾಂಕಿನ ತುರ್ತನ್ನು ಮನಗಂಡನು. ಸರಕಾರ ಹಾಗೂ ಖಾಸಗಿ ಬಂಡವಾಳಗಾರರನ್ನು ಕೂಡಿಸಿಕೊಂಡು ‘‘ಬ್ಯಾಂಕ್ ಆಫ್ ಅಮೆರಿಕಾ’’ವನ್ನು ವಾಷಿಂಗ್ಟನ್‌ನ ಆಡಳಿತದಲ್ಲಿ ಸ್ಥಾಪಿಸಲಾಯಿತು. ಇದು ಮುಖ್ಯವಾಗಿ ನೋಟುಗಳ ಮುದ್ರಣ, ಚಲಾವಣೆ ಹಾಗೂ ನಿಯಂತ್ರಣಗಳನ್ನು ನಿಭಾಯಿಸುವ ಕಾರ್ಯದಲ್ಲಿ ತೊಡಗಿತು. ಜೆಫರ್‌ಸನ್‌ನಂತಹ ಪ್ರಗತಿಪರರು ಹ್ಯಾಮಿಲ್ಟನ್‌ನ ಕಾರ್ಯವೈಖರಿಯನ್ನು ವಿರೋಧಿಸಿದರು. ಆದರೆ ವಾಷಿಂಗ್ಟನ್‌ನ ಬೆಂಬಲದೊಂದಿಗೆ ಕ್ರಿ.ಶ.೧೭೯೧ರಲ್ಲಿ ರಾಷ್ಟ್ರೀಯ ಬ್ಯಾಂಕನ್ನು ಹ್ಯಾಮಿಲ್ಟನ್ ಸ್ಥಾಪಿಸುವಲ್ಲಿ ಯಶಸ್ವಿಯಾದನು.

೧೮ನೆಯ ಶತಮಾನದ ವೈಚಾರಿಕ ಕ್ರಾಂತಿಯುಗದಲ್ಲಿ ಯುರೋಪಿನ ರಾಷ್ಟ್ರಗಳ ಮುಂದೆ ತನ್ನ ಧೋರಣೆಗಳನ್ನು ಸ್ಪಷ್ಟಪಡಿಸಿಕೊಳ್ಳುವುದು ಅಮೆರಿಕಾ ದೇಶಕ್ಕೆ ಕಷ್ಟಸಾಧ್ಯವಾಗಿತ್ತು. ಆದರೆ ವಾಷಿಂಗ್ಟನ್ ನಂತರವೂ ಸಹ ಅಮೆರಿಕಾದ ಚತುರ ಆಡಳಿತಗಾರರು ಇಂಗ್ಲೆಂಡ್, ಸ್ಪೇನ್ ಹಾಗೂ ಫ್ರಾನ್ಸ್ ದೇಶಗಳೊಡನೆ ಹಲವಾರು ಒಪ್ಪಂದಗಳನ್ನು ಮಾಡಿಕೊಂಡು ತಮ್ಮ ದೇಶದಲ್ಲಿ ಆಗಬಹುದಾದ ಕ್ರಾಂತಿಗಳಿಂದ ಅಮೆರಿಕಾವನ್ನು ದೂರ ನಿಲ್ಲಿಸಿದರು. ಈ ಮಧ್ಯೆ ಹ್ಯಾಮಿಲ್ಟನ್ ಹಾಗೂ ಜೆಫರ್‌ಸನ್‌ನ ಅನುಯಾಯಿಗಳ ನಡುವೆ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆದವು. ನಂತರ ರಾಷ್ಟ್ರೀಯವಾದಿಗಳ ಪಕ್ಷ ಒಡೆದು ಜೆಫರ್‌ಸನ್, ಮ್ಯಾಡಿಸನ್ ಹಾಗೂ ಇನ್ನಿತರರು ಸೇರಿ ರಿಪಬ್ಲಿಕನ್ ಪಕ್ಷವನ್ನು ಸ್ಥಾಪಿಸಿದರು. ಜನಪ್ರಿಯ ನಾಯಕ ವಾಷಿಂಗ್ಟನ್‌ನ ಎರಡು ಅವಧಿಗಳ ಆಡಳಿತದ ನಂತರ ಅಧಿಕಾರವನ್ನು ತ್ಯಜಿಸಿದ ಪರಿಣಾಮದಿಂದ ಚುನಾವಣೆಗಳು ನಡೆದವು. ಫೆಡರಲಿಸ್ಟರಿಗೆ ಸಮೀಪವರ್ತಿಯಾದ ಜಾನ್ ಆಡೆಮ್ಸ್ ಅಧ್ಯಕ್ಷನಾಗಿಯೂ ಈತನ ವಿರುದ್ಧ ಸ್ಪರ್ಧಿಸಿ ಸೋತ ಜೆಫರ್‌ಸನ್ ಉಪಾಧ್ಯಕ್ಷನಾಗಿ ಆಯ್ಕೆ ಆದನು. ಆದರೆ ಪ್ರಾಮಾಣಿಕನಾದ ಅಡೆಮ್ಸ್, ರಾಷ್ಟ್ರೀಯವಾದಿ ಹ್ಯಾಮಿಲ್ಟನ್‌ನ ಪ್ರಭಾವದಿಂದ ಹೊರಬರಲಾಗಲಿಲ್ಲ. ವಾಷಿಂಗ್ಟನ್‌ನ ಕಾಲಾವಧಿಯಲ್ಲಿ ತಲೆದೋರಿದ ವಿದೇಶಿ ನೀತಿಯ ಸಂಬಂಧದಲ್ಲಿ ಆದ ಒಪ್ಪಂದಗಳಲ್ಲಿ ಫ್ರಾನ್ಸ್-ಅಮೆರಿಕಾ ಬಾಂಧವ್ಯ ತೀವ್ರವಾಗಿ ಹದಗೆಟ್ಟಿತ್ತು. ಆದರೆ ಚಾಣಾಕ್ಷ ಆ್ಯಡಮ್ಸ್‌ನು ಸಿಟ್ಟಿನಿಂದ ಫ್ರಾನ್ಸ್ ದೇಶವು ಅಮೆರಿಕಾದ ವಿರುದ್ಧ ಕೈಗೊಳ್ಳಬಹುದಾಗಿದ್ದ ಆ ರೀತಿಯ ಭಯಾನಕ ಯುದ್ಧದಿಂದ ಅಮೆರಿಕಾವನ್ನು ರಕ್ಷಿಸಿ, ರಾಷ್ಟ್ರರಕ್ಷಣೆಗಾಗಿ ಕೆಲವು ಶಾಸನಗಳನ್ನು ಜಾರಿಗೆ ತಂದನು. ಆದರೆ ಇವುಗಳನ್ನು ವಿರೋಧಿಸಿದ ಕೆನಟಿಕ್ ಮತ್ತು ವರ್ಜೀನಿಯಾ ರಾಜ್ಯಗಳು ಜೆಫರ್‌ಸನ್ ಬೆಂಬಲದೊಂದಿಗೆ ಫೆಡರಲ್ ಸರಕಾರ ವ್ಯವಸ್ಥೆಯಿಂದ ಸಿಡಿದುಹೋಗುವ ಸೂಚನೆಗಳನ್ನಿತ್ತವು.

ಮಧ್ಯರಾತ್ರಿಯ ನೇಮಕಗಳು

೧೮೦೦ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಜೆಫರ್‌ಸನ್‌ನು ಹ್ಯಾಮಿಲ್ಟನ್‌ನ ಸಹಾಯದಿಂದ ಅಮೆರಿಕಾದ ಅಧ್ಯಕ್ಷನಾಗಿ ಆಯ್ಕೆ ಆದನು. ಇದುವರೆಗೂ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗಳಿಗೆ ಅನುಸರಿಸಿಕೊಂಡು ಬಂದಿರುವ ವಿಧೇಯಕವನ್ನು ತಿದ್ದುಪಡಿ ಮಾಡಲಾಯಿತು. ಚುನಾವಣೆಯಲ್ಲಿ ಆಡೆಮ್ಸ್ ಸೋತರೂ ಫೆಡರಲಿಸ್ಟರ ಪರವಾಗಿದ್ದ ಅನೇಕರನ್ನು ಆಯಕಟ್ಟಿನ ಜಾಗಗಳಲ್ಲಿ ಭರ್ತಿ ಮಾಡಿದನು. ಇವರಲ್ಲಿ ಸುಪ್ರೀಮ್ ಕೋರ್ಟಿನ ಮುಖ್ಯನ್ಯಾಯಾಧೀಶ ವರ್ಜೀನಿಯಾದ ಜಾನ್ ಮಾರ್ಶಲ್‌ನೂ ಒಬ್ಬ. ಆಡೆಮ್ಸ್‌ನ ಕಾಲಾವಧಿಯಲ್ಲಿ ಆದ ನೇಮಕಾತಿಗಳನ್ನು  ಅಮೆರಿಕಾದ ಆಡಳಿತದ ಇತಿಹಾಸದಲ್ಲಿ ‘‘ಮಧ್ಯರಾತ್ರಿಯ ನೇಮಕಗಳು’’(ಮಿಡ್‌ನೈಟ್ ಅಪಾಯಿಂಟ್‌ಮೆಂಟ್ಸ್) ಎಂದು ಕರೆಯುತ್ತಾರೆ.

ರಾಷ್ಟ್ರೀಯವಾದಿಗಳು (ಫೆಡರಲಿಸ್ಟರು) ಜನಮನ್ನಣೆ ಕಳೆದುಕೊಂಡ ನಂತರ ರಿಪಬ್ಲಿಕನ್ ರಾದ ಜೆಫರ್‌ಸನ್, ಜೇಮ್ಸ್ ಮ್ಯಾಪಿಸನ್ ಹಾಗೂ ಮನ್ರೋ ಸೇರಿ ಇಪ್ಪತ್ತೈದು ವರ್ಷಗಳ ಕಾಲ ರಾಜ್ಯಭಾರ ಮಾಡಿದರು. ರಾಷ್ಟ್ರದ ಹಿತಕ್ಕಿಂತ ವ್ಯಕ್ತಿಹಿತ ಮೇಲೆಂಬುದು ರಿಪಬ್ಲಿಕನ್‌ರ ವಾದವಾಗಿತ್ತು. ಹೀಗಾಗಿ ಜನಸಾಮಾನ್ಯರು ಇವರನ್ನು ಬೆಂಬಲಿಸಿದರು. ಆದರೆ ಪ್ರಜಾ ಪ್ರಭುತ್ವವಾದಿ, ತತ್ವಜ್ಞಾನಿಯಾದ ಜೆಫರ್‌ಸನ್ ಕಠಿಣವಾದ ಆಡಳಿತ ನಿರ್ವಹಿಸುವಲ್ಲಿ ಮೃದುಧೋರಣೆ ತಾಳಿದನು. ಹೀಗಾಗಿ ಈತನ ಮಂದಗಾಮಿತನ ತೀವ್ರ ಪ್ರಜಾಪ್ರಭುತ್ವ ವಾದಿಗಳಿಗೆ ಹಿಡಿಸದಾಯಿತು. ಇದೇ ಕಾಲದಲ್ಲಿ ಜೆಫರ್‌ಸನ್‌ನು ಜಾನ್ ಆಡೆಮ್ಸ್ ಹಾಗೂ ಹ್ಯಾಮಿಲ್ಟನ್ ತಂದ ಕಾನೂನುಗಳನ್ನು ರದ್ದುಗೊಳಿಸಿದನು. ಮಧ್ಯರಾತ್ರಿಯ ನೇಮಕಾತಿ ಸಂದರ್ಭದಲ್ಲಾದ ಕೆಲವು ನ್ಯಾಯಾಧೀಶರು ರಿಪಬ್ಲಿಕನ್‌ರಿಗೆ ಬೇಡವಾಗಿದ್ದರು. ಆದ್ದರಿಂದ ಸರ್ವೋಚ್ಛ ನ್ಯಾಯಾಲಯಕ್ಕೆ ಜೇಮ್ಸ್ ಮ್ಯಾಪಿಸನ್ನನು ಅಡೆಮ್ಸ್‌ನ ಕಾಲದಲ್ಲಾಗಿದ್ದ ನೇಮಕಾತಿಯ ವಿರುದ್ಧ ಮೇಲ್ಮನವಿ ಸಲ್ಲಿಸಿದನು. ಆದರೆ ತೀವ್ರರಾಷ್ಟ್ರೀಯವಾದಿ ನ್ಯಾಯಾಧೀಶನಾದ ಜಾನ್ ಮಾರ್ಶಲ್ ಮ್ಯಾಪಿಸನ್ನನ ಮನವಿಯನ್ನು ತಿರಸ್ಕರಿಸಿ ಕಾಂಗ್ರೆಸನ್ನು ನಿಶ್ಶಕ್ತಗೊಳಿಸಿದನು. ಅಲ್ಲದೇ ಸುಪ್ರೀಂ ಕೋರ್ಟಿಗೆ ಕೇಂದ್ರ ಹಾಗೂ ರಾಜ್ಯಸರಕಾರಗಳು ಮಾಡುವ ಕಾನೂನುಗಳನ್ನು ತಡೆಹಿಡಿಯುವ ಅಧಿಕಾರವಿದೆ ಎಂದು ನ್ಯಾಯ ತೀರ್ಪಿತ್ತನು. ಇಂಥ ಕ್ರಮಗಳು ಮುಂದಿನ ದಿನಗಳಲ್ಲಿ ಉದ್ಭವವಾಗಬಹುದಾದ ಅಸ್ಥಿರತೆಗೆ ಹಾಗೂ ಜಗಳಕ್ಕೆ ಪ್ರಮುಖ ಕಾರಣವಾಗಿ ಉಳಿದುಕೊಂಡವು.

ಜೆಫರ್‌ಸನ್‌ನ ಆಡಳಿತದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದ ಮನ್ರೋ ವಿಶ್ವದಲ್ಲಿದ್ದ ರಾಜಕೀಯ ಅಸ್ಥಿರತೆಯನ್ನು ಸದುಪಯೋಗಪಡಿಸಿಕೊಂಡನು. ಯುರೋಪಿನಲ್ಲಿದ್ದ ಅಮೆರಿಕಾದ ರಾಯಭಾರಿಗಳಿಂದ ಹಾಗೂ ಲಿವಿಂಗ್‌ಸ್ಟನ್‌ನ ಕುಶಾಗ್ರಮತಿಯಿಂದ ಲಾಭ ಪಡೆದು ೧೫ ಮಿಲಿಯನ್ ಡಾಲರ್‌ಗೆ ಜೆಫರಸನ್‌ನು ಲೂಸಿಯಾನವನ್ನು ಫ್ರೆಂಚರಿಂದ ಖರೀದಿಸಿದನು. ಖರೀದಿಯ ಉದ್ದೇಶವೆಂದರೆ, ಫ್ರಾನ್ಸ್, ಸ್ಪೇನ್ ಹಾಗೂ ಇಂಗ್ಲೆಂಡ್‌ನಂತಹ ಸಶಕ್ತ ರಾಷ್ಟ್ರಗಳ ಭಯದಿಂದ ಅಮೆರಿಕಾವನ್ನು ರಕ್ಷಿಸುವುದಾಗಿತ್ತು. ದಿನದಿನಕ್ಕೆ ರಿಪಬ್ಲಿಕನ್‌ರ ಶಕ್ತಿ ಹಾಗೂ ಜನಬೆಂಬಲ ವೃದ್ದಿಸಿತು. ಫೆಡರಲಿಸ್ಟರು ಚುನಾವಣೆಯಲ್ಲಿ ಸೋತು ಮತ್ಸರದಿಂದ ಕೇಂದ್ರ ಸರಕಾರವನ್ನು ತಿರಸ್ಕರಿಸಿದರು. ಇದೇ ಸಮಯಕ್ಕೆ ಉತ್ತರ ರಾಜ್ಯಗಳು ಪ್ರತ್ಯೇಕತೆ ಯನ್ನು ಘೋಷಿಸಿಕೊಳ್ಳಲು ಹವಣಿಸಿದವು. ಆದರೆ ಹ್ಯಾಮಿಲ್ಟನ್‌ನಂತಹ ಫೆಡರಲಿಸ್ಟರು ಒಕ್ಕೂಟ ಛಿದ್ರವಾಗುವುದನ್ನು ವಿರೋಧಿಸಿ ರಿಪಬ್ಲಿಕನ್‌ರಿಗೆ ಬೆಂಬಲವಾಗಿ ನಿಂತರು.  ಹ್ಯಾಮಿಲ್ಟನ್ ಮತ್ತು ಉಪಾಧ್ಯಕ್ಷ ಏರಾನ್ ಬರ್ ಒಂದೇ ಪಕ್ಷದಲ್ಲಿದ್ದರು (ಫೆಡರಲಿಸ್ಟ್) ಪರಸ್ಪರ ಬದ್ಧ ದ್ವೇಷಿಗಳಾಗಿದ್ದರು. ಅನೈತಿಕ ರಾಜಕೀಯ ಹಾಗೂ ಲೈಂಗಿಕ ಕ್ರಿಯೆಗಳಲ್ಲಿ ಬರ್‌ನು ತೊಡಗಿ ದ್ದಾನೆ ಎಂದು ಹ್ಯಾಮಿಲ್ಟನ್ ತೀವ್ರವಾಗಿ ಖಂಡಿಸಿದ. ಈ ಘಟನೆಗಳಿಂದ ಮನಸ್ತಾಪಗೊಂಡ ಉಪಾಧ್ಯಕ್ಷ ಬರ್‌ನು ಹ್ಯಾಮಿಲ್ಟನ್ನನನ್ನು ದ್ವಂದ್ವಯುದ್ಧಕ್ಕೆ ಕರೆದನು.  ದ್ವಂದಯುದ್ಧದಲ್ಲಿ (೧೮೦೪ರ ಜುಲೈ ೧೧ರಂದು) ಇಬ್ಬರು ಪರಸ್ಪರ ಪಿಸ್ತೂಲುಗಳನ್ನು ಹಿಡಿದು ಎದುರಿಸಿದರು. ಹ್ಯಾಮಿಲ್ಟ್‌ನ್‌ನಿಗೆ ಬರ್‌ನು ಗುರಿಯಿಟ್ಟು ಹೊಡೆದು ಸಾಯಿಸಿದನು. ಇಂಥ ಪರಿಣಾಮಗಳಿಂದ ಫೆಡರಲಿಸ್ಟರು ಅಮೆರಿಕಾದ ರಾಜಕೀಯ ಕಣದಿಂದ ಬಹು ವರ್ಷಗಳವರೆಗೆ ದೂರ ಸರಿಯುವಂತಾಯಿತು. ಫ್ರಾನ್ಸ್‌ನ ಕ್ರಾಂತಿಯ ಛಾಯೆ ಅಮೆರಿಕಾದ ಮೇಲೆ ಗಾಢವಾಗಿ ಪ್ರಭಾವಿಸಿತು. ಮತ್ತೆ ಚುನಾವಣೆಗಳಲ್ಲಿ ಜೆಫರ್‌ಸನ್ ಎರಡನೆಯ ಅವಧಿಗೆ ಆಯ್ಕೆ ಆದನು. ಯುರೋಪ್ ಖಂಡದಲ್ಲಿ ಅಸ್ತಿತ್ವದಲ್ಲಿದ್ದ ಕೆಲವು ರಾಜಪ್ರಭುತ್ವಗಳು ಕೊನೆಗೊಂಡವು. ಆದರೆ ಪ್ರಜಾಪ್ರಭುತ್ವದ ನೆರಳಿನಲ್ಲಿ ನಿರಂಕುಶ ಅಧಿಕಾರ ಹೆಮ್ಮರವಾಗಿ ಬೆಳೆಯಲಾರಂಭಿಸಿತು. ಸಮಸ್ಯೆಗಳೆಂಬ ಕತ್ತಲೆ ಕಳೆದು ಸೂರ್ಯ ಉದಯಿಸಿ ಬಂದಂತೆ ನೆಪೋಲಿಯನ್ ಫ್ರೆಂಚ್ ಸಾಮ್ರಾಜ್ಯವನ್ನು ಇಡೀ ಜಗತ್ತಿನಲ್ಲಿ ವಿಸ್ತರಿಸುವ ಮಹತ್ವಾಕಾಂಕ್ಷೆಯಿಂದ ಹೊರಟನು. ಇದರ ಲಾಭ ಪಡೆಯಲು ಅಮೆರಿಕಾ ಫ್ರೆಂಚ್ ಸರಕಾರದೊಡನೆ ಕೆಲವು ಒಪ್ಪಂದಗಳನ್ನು ಮಾಡಿಕೊಂಡಿತು. ಬ್ರಿಟಿಷರನ್ನು ನಿಯಂತ್ರಿಸುವ ಯೋಜನೆಯನ್ನು ಅಧ್ಯಕ್ಷ ಜೆಫರ್‌ಸನ್ ಹಾಕಿಕೊಂಡನು. ಆದರೆ ದಕ್ಷಿಣದ ರಾಜ್ಯಗಳು ಕೇಂದ್ರವನ್ನು ಧಿಕ್ಕರಿಸಿ ಇಂಗ್ಲೆಂಡ್ ಜೊತೆಗೆ ವ್ಯಾಪಾರ-ವಹಿವಾಟನ್ನು ನಿರಂತರ ಗೊಳಿಸಿಕೊಂಡವು. ಇದು ಜೆಫರ್‌ಸನ್ ಸೋಲೆಂದು ಇತಿಹಾಸದಲ್ಲಿ ದಾಖಲಾಗಿದೆ. ವಯಸ್ಸು ಹಾಗೂ ಬದಲಾದ ರಾಜಕೀಯ ಸನ್ನಿವೇಶಗಳಿಂದ ಜರ್ಜರಿತವಾದ ತತ್ವಜ್ಞಾನಿ, ರಾಜಕೀಯ ತಜ್ಞ ಹಾಗೂ ಉದಾರ ಪ್ರಜಾಪ್ರಭುತ್ವದ ಹರಿಕಾರನಾದ ಜೆಫರ್‌ಸನ್ ಅಧಿಕಾರದಿಂದ ಕೆಳಗಿಳಿದು ಜೇಮ್ಸ್ ಮ್ಯಾಪಿಸನ್‌ಗೆ ಅನುಕೂಲ ಮಾಡಿಕೊಟ್ಟನು.

ವ್ಯಾಪಾರ ಸಂಬಂಧವಾಗಿ ಅನೇಕ ಕಲಹಗಳು ರಾಜ್ಯಗಳಲ್ಲಿ ಘಟಿಸಿದವು. ಇದನ್ನು ಮನಗಂಡು ಅಸ್ತಿತ್ವದಲ್ಲಿದ್ದ ಕಾನೂನನ್ನು ಸಡಿಲಗೊಳಿಸಿ ಫ್ರೆಂಚರ ಜೊತೆಗೆ ಅಮೆರಿಕಾ ಮತ್ತೆ ವ್ಯಾಪಾರವನ್ನು ಪ್ರಾರಂಭಿಸಿತು. ಅಮೆರಿಕಾದ ಪ್ರಗತಿಯಿಂದ ಮನಸ್ತಾಪ ಬೆಳೆಸಿಕೊಂಡ ಇಂಗ್ಲೆಂಡ್ ದೇಶವು ಕೆನಡ ಹಾಗೂ ಅಮೆರಿಕಾದ ದಕ್ಷಿಣ ರಾಜ್ಯಗಳ ಮೂಲಕ ಅಶಾಂತಿಯನ್ನು ಹುಟ್ಟುಹಾಕಿತು. ಪಶ್ಚಿಮದ ರಾಜ್ಯಗಳು ಒಕ್ಕೂಟದಿಂದ ಬೇರ್ಪಡುವ ಬೆದರಿಕೆ ಹಾಕಿದವು. ಅಲ್ಲದೇ ಅಮೆರಿಕಾದ ಹಡಗುಗಳನ್ನು ಶಾಂತಸಾಗರದಲ್ಲಿ ಇಂಗ್ಲೆಂಡ್ ಪರಿಶೋಧಿಸುವ ದಬ್ಬಾಳಿಕೆಗೆ ಅಮೆರಿಕಾನ್ನರು ಮತ್ತಷ್ಟು ಸಿಟ್ಟಿಗೆದ್ದರು. ಪರಿಣಾಮವಾಗಿ ಇಂಗ್ಲೆಂಡಿನ ವಿರುದ್ಧ ಹುಮ್ಮಸ್ಸಿನಿಂದ ಅಮೆರಿಕಾನ್ನರು ಸಶಸ್ತ್ರ ದಾಳಿಗಿಳಿದರು. ಆದರೆ ಜೆಫರ್‌ಸನ್ ಕಾಲದಲ್ಲಿ ಅಮೆರಿಕಾದ ಸೈನಿಕ ಶಕ್ತಿಯು ಕುಂದಿಸಿದ್ದರಿಂದ ಅಮೆರಿಕಾ ಇಂಗ್ಲೆಂಡನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲವಾಯಿತು. ಇದರ ಪರಿಣಾಮದಿಂದ ಬ್ರಿಟಿಷ್ ಸೈನ್ಯ ಕೆಲವೇ ಗಂಟೆಗಳಲ್ಲಿ ವಾಷಿಂಗ್ಟನ್ ನಗರವನ್ನು ಪ್ರವೇಶಿಸಿ ಸುಟ್ಟು ಹಾಕಿತು. ಹೆದರಿದ ಅಧ್ಯಕ್ಷ ಮ್ಯಾಪಿಸನ್ ಯುದ್ಧಭೂಮಿಯಿಂದ ಪಲಾಯನಗೈದ. ಕೊನೆಯದಾಗಿ ಸೋಲು-ಗೆಲುವಿನ ಸಮಪಾಲನ್ನು ಅನುಭವಿಸಿದ ಎರಡು ದೇಶಗಳು ‘‘ಘೆಂಟಾ ಸಂಧಾನ’’ವನ್ನು ಮಾಡಿಕೊಂಡವು. ಪರಿಣಾಮವಾಗಿ ಎರಡು ಪಕ್ಷಗಳೂ ಎಲ್ಲವನ್ನು ಮರೆತು ಶಾಂತಿಸಂಧಾನಕ್ಕೆ ಪ್ರಾಮುಖ್ಯತೆ ನೀಡಿದವು. ಆದರೆ ಇಂಥ ಸಂದಿಗ್ಧಗಳಿಂದ ಅಮೆರಿಕಾ ಹೆಚ್ಚಿನ ಲಾಭವನ್ನೇ ಮಾಡಿಕೊಂಡಿತು. ಸ್ಪೇನ್ ವಶದಲ್ಲಿದ್ದ ಫ್ಲೋರಿಡಾ ಪ್ರಾಂತ್ಯವು ಒಕ್ಕೂಟ ಸರಕಾರವನ್ನು ಸೇರಿಕೊಂಡಿತು. ಇತಿಹಾಸದ ವಿಶ್ಲೇಷಕರು ಇದನ್ನು ‘‘ಅಮೆರಿಕಾದ ಎರಡನೆಯ ಕ್ರಾಂತಿಯೆಂದೇ’’ ಭಾವಿಸುತ್ತಾರೆ. ಮ್ಯಾಪಿಸನ್ ನಂತರ ಜೇಮ್ಸ್ ಮನ್ರೊ ಅಮೆರಿಕಾದ ಐದನೆಯ ಅಧ್ಯಕ್ಷನಾಗಿ ಆಯ್ಕೆಯಾದನು.

ಮನ್ರೋ ಆಡಳಿತ ಅಥವಾ ಸದ್ಭಾವನೆಯ ಕಾಲ

ಫೆಡರಲಿಸ್ಟರನ್ನು ಸೋಲಿಸಿ ರಿಪಬ್ಲಿಕನ್ ಪಾರ್ಟಿಯಿಂದ ಸ್ಪರ್ಧಿಸಿ ಆಯ್ಕೆ ಆಗಿ ಅಧಿಕಾರಕ್ಕೆ ಬಂದ ಅಧ್ಯಕ್ಷ ಜೇಮ್ಸ್ ಮನ್ರೊ ತನ್ನ ವಿದೇಶಾಂಗ ನೀತಿಯ ಆಡಳಿತದಿಂದ ಜಗತ್ತಿನ ರಾಜಕೀಯ ವಲಯದಲ್ಲಿ ಎಂದೂ ಮರೆಯಲಾಗದ ವ್ಯಕ್ತಿಯಾಗಿ ಉಳಿದನು. ಈತನಿಗೆ ಬೆನ್ನೆಲುಬಾಗಿ ನಿಂತು ವಿದೇಶ ವ್ಯವಹಾರಗಳ ಸೆಕ್ರೆಟರಿ ಹುದ್ದೆಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿದವನು ಜಾನ್ ಕ್ವಿನ್ಸ್ ಆಡೆಮ್ಸ್. ಇವರಿಬ್ಬರ ಎರಡು ಅವಧಿಯ ಆಡಳಿತದ ಕಾಲವನ್ನು ಅಮೆರಿಕಾದ ಇತಿಹಾಸದಲ್ಲಿ ‘‘ಸದ್ಭಾವನೆಯ ಕಾಲ’’ವೆಂದು ಕರೆಯಲಾಗಿದೆ. ಎರಡು ಅವಧಿಗೆ ಇವರಿಬ್ಬರೂ ಆಡಳಿತ ಚುಕ್ಕಾಣಿ ನಿರ್ವಹಿಸಿದರು. ಬ್ರಿಟನ್ನಿನ ಜೊತೆಗೆ ಅನೇಕ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿಕೊಂಡು ಕೆನಡ(ಬ್ರಿಟಿಷ್ ವಸಾಹತು) ಹಾಗೂ ಅಮೆರಿಕಾದ ಮಧ್ಯದಲ್ಲಿನ ವಿಶಾಲವಾದ ಗಡಿರೇಖೆಯ ಸಮಸ್ಯೆಯನ್ನು ಬಗೆಹರಿಸಲಾಯಿತು. ಆಂತರಿಕ ಸಮಸ್ಯೆಗಳಿಂದ ಜರ್ಜರಿತವಾಗುತ್ತಿದ್ದ ಫ್ಲೋರಿಡಾವನ್ನು ದುರ್ಬಲವಾದ ಸ್ಪೇನ್‌ನಿಂದ ೫೦ ಲಕ್ಷ ಡಾಲರಿಗೆ ಕೊಳ್ಳಲಾಯಿತು. ಈತನ ಆಡಳಿತಾವಧಿಯಲ್ಲಿ ಪಶ್ಚಿಮದ ಕಡೆಗೆ ಸಂಸ್ಥಾನವು ಹೆಚ್ಚು ವಿಸ್ತರಣೆಯನ್ನು ಪಡೆಯಿತು. ೧೭೯೦-೧೮೨೦ರ ಈ ಅವಧಿಯಲ್ಲಿ ಹನ್ನೊಂದು ಹೊಸ ರಾಜ್ಯಗಳು ಅಮೆರಿಕಾ ಸಂಸ್ಥಾನಗಳಿಗೆ ಸೇರಿಕೊಂಡವು. ತೀವ್ರತರದ ಭೌಗೋಳಿಕ ವಿಸ್ತರಣೆ ಹಾಗೂ ಫ್ರೆಂಚ್ ಕ್ರಾಂತಿಯಿಂದ ಐರೋಪ್ಯದಲ್ಲಿ ಉಂಟಾದ ಬದಲಾವಣೆಗಳಿಂದ ಯುರೋಪಿನ ಪ್ರಮುಖ ದೇಶಗಳು ಕೃಷಿ ಕ್ಷೇತ್ರವನ್ನೊಳಗೊಂಡಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಭಾರಿ ಹಿನ್ನಡೆಯನ್ನು ಅನುಭವಿಸಿದವು. ಆದರೆ ಎಲ್ಲ ಸಮಸ್ಯೆಗಳ ಮಧ್ಯೆಯೂ ಧೃತಿಗೆಡದೆ ಅಮೆರಿಕಾದ ಕೃಷಿಯ ಇಳುವರಿ ಹೆಚ್ಚಿನ ಮಹತ್ವವನ್ನು ಪಡೆದು ಲಾಭದಾಯಕ ಉದ್ಯೋಗವಾಗಿ ಬೆಳೆಯಿತು. ಉತ್ತರ ಹಾಗೂ ದಕ್ಷಿಣದಲ್ಲಿನ ವಲಸೆಗಾರರು ಪಶ್ಚಿಮದ ಕಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹೋಗಿ ಕೃಷಿಯನ್ನು ಲಾಭದಾಯಕಗೊಳಿಸಿದರು. ಸ್ಥಿತಿವಂತರಾದ  ವಲಸೆಗಾರರು ಶಾಲೆ, ಕಾಲೇಜು, ವಿಶ್ವವಿದ್ಯಾಲಯ ಹಾಗೂ ನ್ಯಾಯಾಲಯಗಳ ಬೆಳವಣಿಗೆಗಳ ಕಡೆಗೂ ವಿಶೇಷ ಗಮನ ಹರಿಸಿದ್ದರು. ಪಶ್ಚಿಮದಲ್ಲಿ ಸ್ಥಾಪಿತವಾದ ರಾಜ್ಯಗಳ ಮೇಲೆ ತಮ್ಮ ಪ್ರಭುತ್ವವನ್ನು ಉಳಿಸಿಕೊಳ್ಳಲು ಉತ್ತರ ಹಾಗೂ ದಕ್ಷಿಣದ ರಾಜ್ಯಗಳು ಸ್ಪರ್ಧೆಗಿಳಿದವು. ಇವುಗಳ ಮುಖ್ಯ ಸಮಸ್ಯೆ ‘‘ಗುಲಾಮಗಿರಿಯ ಅನುಸರಣೆೆ’’ ಆಗಿತ್ತು. ಉತ್ತರ ರಾಜ್ಯಗಳು ಇಂಥ ಅಮಾನವೀಯ ಕೃತ್ಯವು ವಿಸ್ತರಣೆಯಾದ ಪಶ್ಚಿಮ ರಾಜ್ಯಗಳಲ್ಲಿ ಜಾರಿಯಾಗಕೂಡದೆಂದು ಪ್ರತಿಪಾದಿಸಿದರೆ, ಇದನ್ನು ವಿರೋಧಿಸಿದ ದಕ್ಷಿಣದ ಶ್ರೀಮಂತ ರಾಜಕಾರಣಿಗಳು ಸಂಘರ್ಷಕ್ಕಿಳಿದರು. ಬಿರುಸಿನ ರಾಜಕೀಯ ಚಟುವಟಿಕೆಗಳ ನಡುವೆ ಮಿಸೌರಿ ರಾಜ್ಯದ ಪ್ರಶ್ನೆಯು ಎರಡು ಬಣಗಳಿಗೆ ಪ್ರತಿಷ್ಠೆಯಾಗಿ ನಿಂತಿತು. ಇದರಿಂದ ಅಮೆರಿಕಾದ ಸಂಸ್ಥಾನಗಳು ಮತ್ತೊಮ್ಮೆ ಛಿದ್ರವಾಗುವ ಸಂಭವಗಳು ಉದ್ಭವವಾದವು. ಇದೇ ಸಮಯಕ್ಕೆ ಅಲಾಸ್ಕಾವನ್ನು ರಷ್ಯಾದ ಸಾಮ್ರಾಜ್ಯವು ಅಮೆರಿಕಾದಿಂದ ಕಬಳಿಸುವ ಹುನ್ನಾರದಲ್ಲಿ ತೊಡಗಿತ್ತು.

ರಷ್ಯಾ ಹಾಗೂ ಜರ್ಮನಿ(ಪ್ರಷ್ಯಾ) ಸಾಮ್ರಾಜ್ಯಗಳು ತೀವ್ರತರವಾಗಿ ಹೊಂದಿದ್ದ ಅತಿಕ್ರಮಣ ಹಾಗೂ ವಿಸ್ತರಣೆಯ ಮನೋಭಾವನೆಗಳನ್ನು ಮನಗಂಡು ಅಮೆರಿಕಾದ ವಿದೇಶಾಂಗ ವ್ಯವಹಾರಗಳ ಸೆಕ್ರಟರಿ ಅಡೆಮ್ಸನು ಐರೋಪ್ಯರಿಗೆ ನಮ್ಮ ಖಂಡದಲ್ಲಿ ಯಾವುದೇ ತರಹದ ವಸಾಹತು ಸ್ಥಾಪಿಸುವಂತಹ ಅಧಿಕಾರವಿಲ್ಲವೆಂದು ಪ್ರತಿಪಾದಿಸಿದನು. ಅಲ್ಲದೇ ಲ್ಯಾಟಿನ್ ಅಮೆರಿಕಾದಲ್ಲಿ ಸಹ ತೀವ್ರತರದ ರಾಜಕೀಯ ಏರುಪೇರುಗಳಾದವು. ನೆಪೋಲಿಯನ್ ಕಾಲಾವಧಿಯಲ್ಲಿ ಸ್ಪೇನ್ ದೇಶವು ನಿಸ್ಸಹಾಯಕವಾಗಿ ಲ್ಯಾಟಿನ್ ಅಮೆರಿಕಾನ್ ಪ್ರದೇಶಗಳ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದರಲ್ಲಿ ಸುಮ್ಮನಿದ್ದರೂ ಅವನ ಅವನತಿಯ ನಂತರ ಜಾಗತಿಕ ಮಟ್ಟದಲ್ಲಿ ಮತ್ತೆ ಸ್ಪೇನ್ ತನ್ನ ಪ್ರಭುತ್ವ ಸ್ಥಾಪಿಸುವ ಹವಣಿಕೆಯಲ್ಲಿತ್ತು. ಆದರೆ ಲ್ಯಾಟಿನ್ ಅಮೆರಿಕಾದ ಜನತೆಯ ನಿರಂತರ ಪ್ರತಿರೋಧದ ಹೋರಾಟದಿಂದ ಅನಿವಾರ್ಯವಾಗಿ ಸ್ಪೇನ್ ಪ್ರಭುತ್ವವು ಅಲ್ಲಿನ ವಸಾಹತುಗಳನ್ನು ಬಿಟ್ಟು ನಿರ್ಗಮಿಸುವಂತಾಯಿತು. ಪರಿಣಾಮ ಅರ್ಜೆಂಟೈನ್, ಚಿಲಿ, ಪೆರು, ಕೊಲಂಬಿಯಾ ಹಾಗೂ ಮಧ್ಯ ಅಮೆರಿಕಾದ ಮೆಕ್ಸಿಕೊ ಪ್ರದೇಶಗಳು ೧೮೨೨ರಲ್ಲಿ ಸ್ವತಂತ್ರವಾದವು. ಈಗ ಐರೋಪ್ಯ ವಸಾಹತುಗಾರರು ಭಾಗಶಃ ಉತ್ತರ, ಮಧ್ಯ ಹಾಗೂ ದಕ್ಷಿಣ ಅಮೆರಿಕಾ ಖಂಡಗಳಿಂದಲೇ ಶಾಶ್ವತವಾಗಿ ನಿರ್ಗಮಿಸಿದಂತಾಯಿತು. ಆದರೆ ನೆಪೋಲಿಯನ್‌ನ ಮರಣಾನಂತರ ಆದ ರಾಜಕೀಯ ಸ್ಥಿತ್ಯಂತರಗಳು ಮತ್ತೆ ಯುರೋಪಿನಲ್ಲಿ ರಾಜಸತ್ತೆಯನ್ನು ಪುನರ್ ಸ್ಥಾಪಿಸಬೇಕೆಂಬ ಹವಣಿಕೆಯಲ್ಲಿದ್ದವು. ಆಸ್ಟ್ರಿಯಾ, ರಷ್ಯ, ಪ್ರಷ್ಯಾಗಳು ಫ್ರಾನ್ಸನ್ನು ಪ್ರೇರೇಪಿಸಿ ಸ್ಪೇನ್‌ನಲ್ಲಿ ರಾಜಪ್ರಭುತ್ವ ನೆಲೆಗೊಳಿಸುವ ಹುನ್ನಾರ ನಡೆಸಿದ್ದವು. ಇವೆಲ್ಲ ರಾಷ್ಟ್ರಗಳು ‘‘ಪವಿತ್ರ ಮೈತ್ರಿ’’ಯನ್ನೂ ಸ್ಥಾಪಿಸಿಕೊಂಡಿದ್ದವು. ಇಂಗ್ಲೆಂಡ್-ಅಮೆರಿಕಾದ ಬಾಂಧವ್ಯ ಚೆನ್ನಾಗಿರದಿದ್ದರೂ, ಈ ಪವಿತ್ರ ಮೈತ್ರಿ ಇಂಗ್ಲೆಂಡಿಗೆ ಅಸಹನೀಯವಾಗಿತ್ತು. ಇದನ್ನೆಲ್ಲ ಸೂಕ್ಷ್ಮವಾಗಿ ಗ್ರಹಿಸುತ್ತಿದ್ದ ಇಂಗ್ಲೆಂಡ್ ದೇಶವು ಹೊಸ ಖಂಡದಲ್ಲಿನ ರಷ್ಯದ ವಿಸ್ತರಿಸುವಿಕೆಯ ನೆಪವೊಡ್ಡಿ ಅಮೆರಿಕಾದ ಮೇಲೆ ಮತ್ತೆ ಸವಾರಿ ಮಾಡಬೇಕು ಎಂಬ ದೂರದೃಷ್ಟಿಯನ್ನು ಹೊಂದಿತ್ತು. ಇಂಥ ಎಲ್ಲ ರಾಜಕೀಯ ಏರಿಳಿತಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ವಿದೇಶಾಂಗ ಸಚಿವ ಮನ್ರೊ ಸ್ವತಂತ್ರವಾದ ನಿಲುವುಗಳನ್ನು ತೆಗೆದುಕೊಂಡನು. ಯುರೋಪಿನ ಯಾವುದೇ ರಾಷ್ಟ್ರವು ಅಮೆರಿಕಾ ಖಂಡಗಳ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುವುದನ್ನು ಸ್ನೇಹದ ವಿರುದ್ಧದ ಕ್ರಮವೆಂದು ಅಮೆರಿಕಾ ಭಾವಿಸುತ್ತದೆ. ಅಲ್ಲದೆ ಹಳೆಯ ಜಗತ್ತಿನಿಂದ (ಯುರೋಪ್) ಹೊಸ ಜಗತ್ತು(ಅಮೆರಿಕಾ ಖಂಡ) ಶಾಶ್ವತ ಸಂಬಂಧ ಕಡಿದುಕೊಳ್ಳುವುದಾಗಿದೆ ಎಂದು ಘೋಷಿಸಿದನು. ಇದನ್ನು ಪಾಲಿಸುವ ಸಲುವಾಗಿ ನಾವು ಎಲ್ಲ ದೇಶಗಳ ವೈರತ್ವ ವನ್ನು ಕಟ್ಟಿಕೊಳ್ಳಲು ಸಿದ್ಧವೆಂದು ಹೇಳಿದನು.  ಈ ನೀತಿಗಳು ರಾಜಕೀಯ ಇತಿಹಾಸದಲ್ಲಿ ‘ಮನ್ರೊ ತತ್ವ’ಗಳೆಂದೇ ಪ್ರಸಿದ್ಧವಾಗಿವೆ. ಹಲವಾರು ಮಾರ್ಪಾಡುಗಳೊಂದಿಗೆ ಮನ್ರೊ ಸಿದ್ಧಾಂತವನ್ನು ಮುಂದೆ ಬಂದ ಅಮೆರಿಕಾದ ಅಧ್ಯಕ್ಷರು ಮುಂದುವರೆಸಿಕೊಂಡು ಹೋದರು. ಇಂಥ ಕಠಿಣವಾದ ನಿರ್ಧಾರಗಳು ಅಮೆರಿಕಾವನ್ನು ಜಗತ್ತಿನ ಬಹುದೊಡ್ಡ ಸಶಕ್ತ ರಾಷ್ಟ್ರವಾಗಿ ಬೆಳೆಯಲು ಅವಕಾಶ ಮಾಡಿಕೊಟ್ಟಿತು.

ಮನ್ರೋನ ನಿವೃತ್ತಿಯ ನಂತರ ಅಮೆರಿಕಾದ ರಾಜಕೀಯದಲ್ಲಿ ಏರಿಳಿತಗಳು ಕಂಡು ಬಂದವು. ರಿಪಬ್ಲಿಕ್‌ನ ಪಕ್ಷವು ಹೋಳಾಗಿ ಡೆಮಾಕ್ರೆಟಿಕ್ ಹಾಗೂ ವಿಗ್ ಎಂಬ ಮತ್ತೆರಡು ಪಕ್ಷಗಳು ಹುಟ್ಟಿಕೊಂಡವು. ಅಲ್ಲದೇ ಒಂದೇ ಪಕ್ಷದ ಐವರು ಚುನಾವಣೆಯಲ್ಲಿ ಸ್ಪರ್ಧಿಸಿದರು. ಎಲ್ಲರಿಗಿಂತ ಹೆಚ್ಚಿನ ಜನಮನ್ನಣೆ ಗಳಿಸಿದ ಆ್ಯಂಡ್ರೂ ಜಾಕ್ಸನ್ (ಟೆನೆಸ್ಸಿಯ) ಹೆಚ್ಚಿನ ಮತಗಳನ್ನು ಪಡೆದಿದ್ದರೂ ಬೇಕಾದ ಬಹುಮತ ಇರದೇ ಇದ್ದುದರಿಂದ ಕ್ಲೇನ್‌ನ ಸಹಾಯದಿಂದ ಆಡೆಮ್ಸ್‌ನು ಮನ್ರೋ ನಂತರ ಅಧ್ಯಕ್ಷನಾಗಿ ಆಯ್ಕೆ ಆದನು.

೧೮೨೫-೨೯ರವರೆಗೆ ಜಾನ್ ಕ್ವಿನ್ಸಿ ಆಡೆಮ್ಸ್‌ನು ಅಮೆರಿಕಾದ ಆಡಳಿತದ ಚುಕ್ಕಾಣಿ ಹಿಡಿದನು. ಈತನು ವಿದೇಶ ವ್ಯವಹಾರಗಳ ಮಂತ್ರಿಯಾಗಿ ಗಳಿಸಿದ ಪ್ರಾಮುಖ್ಯತೆಯನ್ನು ಅಧ್ಯಕ್ಷನಾಗಿ ಗಳಿಸಲಿಲ್ಲ. ಭೂಹಂಚಿಕೆ ಹಾಗೂ ಒಕ್ಕೂಟ ವ್ಯವಸ್ಥೆಯನ್ನು ಉಳಿಸಿಕೊಂಡು ಹೋಗುವ ಹೊಣೆಗಾರಿಕೆ ಹೆಚ್ಚಿತು. ತನ್ನ ಮಂತ್ರಿಮಂಡಲದಲ್ಲಿ ಕ್ಲೇನ್‌ನನ್ನೂ ಸೇರಿಸಿ ಕೊಂಡನು. ಆದರೆ ಆತನ (ವಿದೇಶಿ ಸಚಿವ) ಬಗೆಗೆ ಹೆಚ್ಚಿನ ಜನರಿಗೆ ಒಳ್ಳೆಯ ಅಭಿಪ್ರಾಯ ವಿರಲಿಲ್ಲ. ರಫ್ತಾಗುವ ವಸ್ತುಗಳ ಮೇಲೆ ಸುಂಕಗಳನ್ನು ವಿಧಿಸುವ ಕ್ರಮವು ಪರೋಕ್ಷವಾಗಿ ಶ್ರೀಮಂತ ಪ್ರಭುತ್ವಕ್ಕೆ ಪೋತ್ಸಾಹಿಸಿದಂತಾಯಿತು. ಅಲ್ಲದೇ ರಿಪಬ್ಲಿಕನ್ ಪಕ್ಷದ ಒಳಜಗಳಗಳಿಂದಾಗಿ ಆಡೆಮ್ಸ್, ಡೆಮಾಕ್ರೆಟಿಕ್ ರಿಪಬ್ಲಿಕ್‌ನ್ ಪಕ್ಷದ ಅಭ್ಯರ್ಥಿ ಜಾಕ್ಸನ್ ವಿರುದ್ಧ ೧೮೨೮ರ ಮಹಾಚುನಾವಣೆಯಲ್ಲಿ ಸೋಲುವಂತಾಯಿತು.

ಜಾಕ್ಸ್‌ನ್‌ನ ಆಡಳಿತ(ಅಡುಗೆ ಮನೆ ಸಂಪುಟ)

ಪ್ರಜಾಪ್ರಭುತ್ವದ ಪ್ರಬಲ ಪ್ರತಿಪಾದಕ, ದೀನ-ದಲಿತರ ಬಗೆಗೆ ದಯಾಳುವಾದ ನೀತಿಯನ್ನೂ ಅನುಸರಿಸಿದ ಜಾಕ್ಸನ್ ಎರಡು ಅವಧಿಗೆ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ(೧೮೨೯-೧೮೩೭). ಈತನಿಗೆ ಬೆಂಟನ್ ಎಂಬ ಸೆನೆಟರ್ ಹಾಗೂ ವಿದೇಶಾಂಗ ಸಚಿವ ವಾನ್ ಬುರೆನ್ ಎಂಬ ಮೇಧಾವಿಗಳು ಆಡಳಿತದಲ್ಲಿ ಸಲಹೆಗಾರರಾಗಿದ್ದರು. ಜಾಕ್ಸನ್‌ರ ಆಪ್ತರ ಬಳಗಕ್ಕೆ ‘‘ಅಡುಗೆಮನೆ ಸಂಪುಟ’’ (ದಿ ಕಿಚನ್ ಕ್ಯಾಬಿನೆಟ್) ಎಂದೇ ಕರೆಯುತ್ತಿದ್ದರು. ತನ್ನ ಆಡಳಿತಾವಧಿಯಲ್ಲಿ ಕೃಷಿಕರು, ಕೂಲಿಕಾರರು ಹಾಗೂ ಇನ್ನಿತರ ಶ್ರಮಜೀವಿಗಳಿಗೆ ಪೂರಕವಾದ ಶಾಸನಗಳನ್ನು ಜಾರಿ ಮಾಡಿದನು. ಶ್ರೀಮಂತರ ಕಪಿಮುಷ್ಟಿಯಿಂದ ಹಣಕಾಸಿನ ಸಂಸ್ಥೆಗಳನ್ನು ಮುಕ್ತಗೊಳಿಸಿ ಸರಕಾರವೇ ನೇರವಾಗಿ ಸಾಲ ಕೊಡುವ ವ್ಯವಸ್ಥೆಯನ್ನು ಜಾರಿಗೊಳಿಸಿದನು. ಸಾರ್ವಜನಿಕ ಶಿಕ್ಷಣವನ್ನು ಪ್ರೋ ಪ್ರಜಾಪ್ರಭುತ್ವ ಬೆಂಬಲವಾದಿಗಳನ್ನು ಸರಕಾರಿ ಕೆಲಸಕ್ಕೆ ನೇಮಕಗೊಳಿಸಿ ಆಡಳಿತವನ್ನು ಚುರುಕುಗೊಳಿಸಿದನು. ವಸ್ತುಗಳ ಮೇಲಿನ ಸುಂಕದ ಹೆಚ್ಚಳದಿಂದ ಉಪಾಧ್ಯಕ್ಷ ಕಾಲಹೂನ್‌ರ ಅಧ್ಯಕ್ಷ ಜಾಕ್ಸನ್‌ನೊಂದಿಗೆ ಮನಸ್ತಾಪ ಮಾಡಿಕೊಂಡು ಬಂಡಾಯ ಎದ್ದನು. ಆದರೆ ಜಾಕ್ಸನ್‌ಗಿರುವ ಅಪಾರ ಬೆಂಬಲದಿಂದ ಹೂನ್ ತನ್ನ ಉಪಾಧ್ಯಕ್ಷ ಪದವಿಗೆ ರಾಜೀನಾಮೆ ಕೊಡಲೇಬೇಕಾಯಿತು. ಇಂಥ ಸಮಸ್ಯೆಯ ಮುಂದುವರಿಕೆಯ ಸಂಬಂಧವಾಗಿ ದಕ್ಷಿಣ ಕರೋಲಿನ ರಾಜ್ಯವು ಒಕ್ಕೂಟದಿಂದ ಪ್ರತ್ಯೇಕಗೊಳ್ಳುವ ನಿರ್ಧಾರ ಕೈಗೊಂಡಿತು. ಆದರೆ ಕಾಂಗ್ರೆಸ್ಸಿನ ಸಮ್ಮತಿ ಪಡೆಯುವ ಮೂಲಕ ಸೈನ್ಯಬಲದಿಂದ ದಕ್ಷಿಣ ಕರೋಲಿನ ಬಂಡಾಯ ಗಾರರನ್ನು ನಿಯಂತ್ರಿಸಿದನು. ನ್ಯಾಷನಲ್ ರಿಪಬ್ಲಿಕ್ ಪಕ್ಷ ತನ್ನ ಅಭ್ಯರ್ಥಿ ಹೆನ್ರೀ ಕ್ಲೇನನ್ನು ಮುಂದಿಟ್ಟುಕೊಂಡು, ಜಾಕ್ಸನ್‌ನ ವಿರುದ್ಧ ಎಷ್ಟೇ ಗಂಭೀರ ಆರೋಪಗಳನ್ನು ಮಾಡಿದರೂ, ಜಾಕ್ಸನ್ ಎರಡನೆಯ ಅವಧಿಗೆ ಅಧ್ಯಕ್ಷನಾಗಿ ಮತ್ತೆ ಆಯ್ಕೆಯಾದನು. ಶ್ರೀಸಾಮಾನ್ಯರಿಗೆ ಅನುಕೂಲವಾಗಲೆಂಬ ಒಂದೇ ದೃಷ್ಟಿಯಿಂದ ರಾಷ್ಟ್ರೀಯ ಬ್ಯಾಂಕುಗಳನ್ನು ಮುಚ್ಚಿಸಿದನು. ಇವು ಶ್ರೀಮಂತರ ಕೈಗೊಂಬೆಯಾಗಿವೆ ಹೊರತು ಯಾರ ಉದ್ಧಾರಕ್ಕೂ ಅಲ್ಲ ಎಂಬುದು ಜಾಕ್ಸನ್‌ನ ಅಭಿಪ್ರಾಯವಾಗಿತ್ತು. ಆದರೆ ಇಂಥ ಕ್ರಮವು ಅಮೆರಿಕಾ ದೇಶದ ಆರ್ಥಿಕ ದಿವಾಳಿತನಕ್ಕೆ ನಾಂದಿ ಹಾಡಿತು ಎಂಬುದು ಕೆಲವರ ಅಭಿಪ್ರಾಯವಾಗಿದೆ. ಸರಕಾರಿ ಸ್ವಾಮ್ಯದ ಹಣಕಾಸಿನ ಸಂಸ್ಥೆಗಳನ್ನು ಮುಚ್ಚಿಸುವ ಇವನ ಲೆಕ್ಕಾಚಾರ ವಿಫಲವಾಗಿ ಮತ್ತೆ ಖಾಸಗಿ ಒಡೆತನಕ್ಕೆ ರತ್ನಗಂಬಳಿ ಹಾಸಿದಂತಾಯಿತು. ಈ ಸಮಸ್ಯೆ ಮುಂದಿನ ದಿನಗಳಲ್ಲಿ ಅಧ್ಯಕ್ಷ ಲಿಂಕನ್‌ನನ್ನು ಸಹ ಕಾಡಿದವು. ಇವುಗಳ ಸಂಬಂಧವಾಗಿ ತೀವ್ರತರವಾದ ಸುಧಾರಣೆ ತರುವವರೆಗೂ ಈ ಜಟಿಲತೆ ಮುಂದುವರೆದುಕೊಂಡು ಹೋಯಿತು. ತನ್ನ ಅಧ್ಯಕ್ಷಾವಧಿಯಲ್ಲಿ ಸುಮಾರು ಐವತ್ತು ವರ್ಷಗಳಿಂದ ಬ್ರಿಟನ್ ಜೊತೆಗೆ ಸ್ಥಗಿತಗೊಂಡಿದ್ದ ವ್ಯಾಪಾರ ಸಂಬಂಧ ಗಳನ್ನು ಪುನರ್ ಸ್ಥಾಪಿಸಿದನಲ್ಲದೆ ಹಿಂದಿನ ಯುದ್ಧಗಳಲ್ಲಿ ಫ್ರಾನ್ಸ್‌ನಿಂದ ಆದ ನಷ್ಟವನ್ನು ಫ್ರಾನ್ಸ್‌ನಿಂದಲೇ ಅಮೆರಿಕಾಕ್ಕೆ ತುಂಬಿಕೊಡುವಂತೆ ಯಶಸ್ವಿಯಾದನು. ಅಮೆರಿಕಾದ ನ್ಯಾಯಾಂಗವು ಕಾರ್ಯಾಂಗಕ್ಕಿಂತಲೂ ಬಲಯುತವಾಗಿತ್ತು. ಇಂಥ ಕ್ರಮವನ್ನು ಪ್ರಶ್ನಿಸಿದ ಜಾಕ್ಸನ್‌ನು ಮಾರ್ಷಲ್‌ನ ನಿವೃತ್ತಿಯ ನಂತರ ನ್ಯಾಯಾಧೀಶರ ನೇಮಕಾತಿಯಲ್ಲಿ ಭಾರೀ ಪ್ರಮಾಣದಲ್ಲಿ ಬದಲಾವಣೆಗಳನ್ನು ತಂದನು. ಹೀಗಾಗಿ ಕರಾರು ಪತ್ರಗಳು ಹಾಗೂ ಒಪ್ಪಂದಗಳಿಗಿಂತ ಜನಹಿತದ ಧೋರಣೆಗಳು ಮುಖ್ಯವಾದವುಗಳೆಂದು ನ್ಯಾಯಾಧೀಶರು ನಿರ್ಣಯಿಸಿ ಅನೇಕ ತೀರ್ಪುಗಳನ್ನು ನೀಡಿದರು. ಇವು ಹಿಂದಿನ ಕ್ರಮಗಳಿಗೆ ವಿರುದ್ಧವಾಗಿದ್ದವು.

ದಕ್ಷಿಣ ರಾಜ್ಯಗಳ ಅಸಹಕಾರ ಹಾಗೂ ಉತ್ತರ ರಾಜ್ಯಗಳ ವ್ಯಾಪಾರಿಗಳಿಂದ ಡೆಮಾಕ್ರೆಟಿಕ್ ಪಕ್ಷದ ವಿರುದ್ಧವಾಗಿ ವಿಗ್ ಎಂಬ ಹೊಸ ಪಕ್ಷವು ಹುಟ್ಟಿಕೊಂಡಿತು. ಆದರೂ ೧೮೩೬ರಲ್ಲಿ ನಡೆದ ಮಹಾಚುನಾವಣೆಯಲ್ಲಿ ಜಾಕ್ಸನ್‌ನ ಬೆಂಬಲದಿಂದ ವ್ಯಾನ್ ಬುರೆನ್ ಅಧ್ಯಕ್ಷನಾಗಿ ಆಯ್ಕೆ ಅಗಿ ಜಾಕ್ಸನ್‌ನ ಯುಗವನ್ನು ಮುಂದುವರೆಸಿದನು. ಅಮೆರಿಕಾದ ಇತಿಹಾಸದಲ್ಲಿ ಕೆಂಪು ಗುಳ್ಳೆನರಿ(ದಿ ರೆಡ್ ಫಾಕ್ಸ್) ಎಂದೇ ಪ್ರಸಿದ್ಧನಾದ ಬುರೆನ್ ತನ್ನ ಆಡಳಿತದಲ್ಲಿಯೂ ಸಹ ಹಾದಿ ತಪ್ಪಿದ ದಾರಿ ಹೋಕನಂತಾದ. ಆರ್ಥಿಕ ವಲಯದಲ್ಲಿ ತಪ್ಪು ಕ್ರಮಗಳನ್ನು ಅನುಸರಿಸಿದ್ದರಿಂದ ಅಸಮರ್ಥನೆನಿಸಿಕೊಂಡನು. ಅಧಿಕವಾದ ನೋಟು, ನಾಣ್ಯಗಳ ಚಲಾವಣೆಯಿಂದ ಆರ್ಥಿಕ ಪರಿಸ್ಥಿತಿ ದಿಕ್ಕೆಟ್ಟಿತು. ಇದರ ಲಾಭ ಪಡೆದ ವಿಗ್ ಪಕ್ಷವು ವಿಲಿಯಂ ಹೆನ್ರಿಹ್ಯಾರಿಸನ್ ಎಂಬುವನನ್ನು ಚುನಾವಣಾ ಕಣಕ್ಕೆ ಇಳಿಸಿತು. ಬುರೆನ್‌ನ ಅಸಮರ್ಥ ಆಡಳಿತದಿಂದ ಬೇಸತ್ತ ಜನ ಹ್ಯಾರಿಸನ್‌ನನ್ನು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದರು(೧೮೪೦). ಜೊತೆಗೆ ಜಾನ್ ಟೇಲರ್ ಉಪಾಧ್ಯಕ್ಷನಾದನು. ಆದರೆ ಅಲ್ಪಾವಧಿಯ ಲ್ಲಿಯೇ ಅಧ್ಯಕ್ಷ ಹ್ಯಾರಿಸನ್‌ನ ಮರಣದಿಂದ ಉಪಾಧ್ಯಕ್ಷ ಜಾನ್ ಟೇಲರ್ ಅಧ್ಯಕ್ಷನಾಗಿ ಆಯ್ಕೆಯಾಗುವ ಸಂದರ್ಭಗಳು ಉಂಟಾದವು.

ಬದಲಾವಣೆಗಳ ಯುಗ

ಜಾಕ್ಸನ್‌ನ ಯುಗವನ್ನು ಅಮೆರಿಕಾದ ಇತಿಹಾಸದಲ್ಲಿ ‘‘ಬದಲಾವಣೆಗಳ ಯುಗ’’ವೆಂದು ಕರೆಯುತ್ತಾರೆ. ರಾಜಕೀಯ ಮತ್ತು ಆರ್ಥಿಕ ಏರಿಳಿತಗಳಿಗಿಂತ ಅಮೆರಿಕಾದ ಸಾಂಸ್ಕೃತಿಕ ಚಟವಟಿಕೆಗಳು ತೀವ್ರಗೊಂಡವು. ಅಮೆರಿಕಾದ ಬೌದ್ದಿಕವಾದವು ಹಾಗೂ ಅದನ್ನು ಬೆಂಬಲಿಸುವ ವಲಯವು ವ್ಯಕ್ತಿಗತ ಸ್ವಾತಂತ್ರ್ಯವನ್ನು ಎತ್ತಿಹಿಡಿಯಿತು. ಪರಿಣಾಮ ಅನೇಕ ಸಾಹಿತಿಗಳು, ತತ್ವಜ್ಞಾನಿಗಳು, ಪತ್ರಿಕೆಗಳು, ಮೈದಾಳಿದವು. ಸ್ತ್ರೀ ಸ್ವಾತಂತ್ರ್ಯದ ಬಗೆಗೆ ವಿಶೇಷ ಚರ್ಚೆ ಪ್ರಾರಂಭವಾಯಿತಲ್ಲದೇ ಅಮಾನವೀಯ ‘ಗುಲಾಮಿ’ ಪದ್ಧತಿಯ ಆಚರಣೆಯ ಮಾರಣಹೋಮ ಮಾಡುವ ಪೂರ್ವತಯಾರಿಯನ್ನು ಈ ಕಾಲಾವಧಿಯಲ್ಲಿ ಹುಟ್ಟಿಕೊಂಡ ನಾಯಕರು ಮಾಡಿಕೊಂಡರು. ರೈಲು ಸಂಪರ್ಕದ ವಿಸ್ತಾರ, ವಿದ್ಯುತ್, ಟೆಲಿಗ್ರಾಫ್‌ನ ಸಂಶೋಧನೆಗಳು ಅಮೆರಿಕಾವನ್ನು ಭೌಗೋಳಿಕವಾಗಿ ಕುಬ್ಜಗೊಳಿಸಿದವು. ಅದರೆ ಇವೆಲ್ಲವುಗಳ ಮಧ್ಯೆ ಭಾವನಾತ್ಮಕವಾಗಿ ಅಮೆರಿಕಾದ ಜನತೆ ಪರಸ್ಪರ ದೂರ ಸರಿಯುತ್ತಿದ್ದುದು ವಿಪರ್ಯಾಸ. ಇದು ಅಮೆರಿಕಾದ ಅಂತಃಕಲಹಕ್ಕೆ(ಸಿವಿಲ್ ವಾರ್) ನಾಂದಿ ಹಾಡಿತು.

೧೯ನೆಯ ಶತಮಾನದ ಹೊತ್ತಿಗೆ ಅಮೆರಿಕಾವು ಭೌತಿಕವಾಗಿ ವಿಸ್ತಾರವಾಗುತ್ತಿದ್ದರೂ ಭಾವನಾತ್ಮಕವಾಗಿ ಸಂಕುಚಿತಗೊಳ್ಳುತ್ತಿತ್ತು. ದಕ್ಷಿಣ-ಉತ್ತರ ರಾಜ್ಯಗಳು ಒಬ್ಬರ ಮೇಲೆ ಒಬ್ಬರು ರಾಡಿ ಎರಚುವ ಕಾರ್ಯದಲ್ಲಿ ತೊಡಗಿದ್ದವು. ತಮ್ಮ ಭೂಮಿಯಲ್ಲಿ ದುಡಿಸಿ ಕೊಳ್ಳಲು ಆಮದಿಸಿಕೊಂಡಿದ್ದಂತಹ ನೀಗ್ರೋಗಳೇ ಸಮಸ್ಯೆಯ ಕೇಂದ್ರಬಿಂದುಗಳಾದರು. ದಕ್ಷಿಣದ ರಾಜ್ಯಗಳು ಗುಲಾಮಿ ರಾಜ್ಯವನ್ನು ಬೆಂಬಲಿಸಿದರೆ ಉತ್ತರದ ರಾಜ್ಯಗಳು ಅದನ್ನು ತಿರಸ್ಕರಿಸಿದ್ದವು. ಅಲ್ಲದೇ ಉತ್ತರ-ದಕ್ಷಿಣ ರಾಜ್ಯಗಳಲ್ಲಿನ ಆರ್ಥಿಕ ತಾರತಮ್ಯವು ಸಹ ಮುಖ್ಯ ಕಾರಣೀಭೂತ ಅಂಶವಾಗಿತ್ತು. ಪ್ರಗತಿಯ ಸಕಲ ಸೌಲಭ್ಯಗಳನ್ನು ಸದುಪಯೋಗಪಡಿಸಿ ಕೊಂಡ ಉತ್ತರದ ರಾಜ್ಯಗಳು ಕೃಷಿ, ರಸ್ತೆ, ಕೈಗಾರಿಕೆ, ಜಲಸಾರಿಗೆ ಹಾಗೂ ವ್ಯಾಪಾರ ಚಟವಟಿಕೆಗಳಲ್ಲಿ ತೀವ್ರತರವಾದ ಪ್ರಗತಿ ಸಾಧಿಸಿದವು. ಆದರೆ ಇದರ ವಿರುದ್ಧವಾಗಿ ದಕ್ಷಿಣದ ರಾಜ್ಯಗಳಲ್ಲಿ ಕೃಷಿ ಉತ್ಪನ್ನಗಳು ಮಾತ್ರ ದ್ವಿಗುಣಗೊಂಡು ಉಳಿದೆಲ್ಲ ಚಟುವಟಿಕೆಯ ವಲಯಗಳು ಸ್ಥಗಿತಗೊಂಡವು. ಆಕ್ರಮಣಕಾರಿ ನೀತಿಯನ್ನು ಮುಂದುವರೆಸಿದ ಅಮೆರಿಕಾ ಪಶ್ಚಿಮದ ಕಡೆಗೆ ತನ್ನ ವಿಸ್ತರಣೆಯ ದೃಷ್ಟಿಯನ್ನು ಹರಿಸಿತು. ಸ್ಟೀಪನ್ ಆಸ್ಟಿನ್ ಹಾಗೂ ಹೌಸ್ಟನ್‌ರ ಸಹಾಯದಿಂದ ಸಾನ್ ಜಸಿತೊ ಎಂಬಲ್ಲಿ ನಡೆದ ನಿರ್ಣಾಯಕ ದಂಗೆಯಿಂದ ಟೆಕ್ಸಾಸ್ ಪ್ರದೇಶವನ್ನು ಮೆಕ್ಸಿಕೋದಿಂದ ಕಿತ್ತುಕೊಂಡರು. ಮೆಕ್ಸಿಕೋಗೆ ಬ್ರಿಟನ್ ಬೆಂಬಲವಿದ್ದರೂ ಬಲಾಢ್ಯರಾದ ಅಮೆರಿಕಾನ್ನರ ಮುಂದೆ ಮೆಕ್ಸಿಕೋದ ಆಟ ನಡೆಯಲಿಲ್ಲ. ಟೆಕ್ಸಾಸ್ ಸೇರ್ಪಡೆಯನ್ನು ದಕ್ಷಿಣದ ರಾಜ್ಯಗಳು ಬೆಂಬಲಿಸಿದರೆ ಉತ್ತರದ ರಾಜ್ಯಗಳು ವಿರೋಧಿಸಿದವು. ಕಾರಣ ಟೆಕ್ಸಾಸ್ ಗುಲಾಮಿ ರಾಜ್ಯವಾಗುವ ಎಲ್ಲ ಲಕ್ಷಣಗಳನ್ನು ಹೊಂದಿತ್ತು. ಅಮೆರಿಕಾದಲ್ಲಿ ಅನಿಶ್ಚಿತ ರಾಜಕೀಯ ಸ್ಥಿತಿಯಿದ್ದರೂ ೧೮೪೫ರಲ್ಲಿ ಟೆಕ್ಸಾಸ್ ಅಮೆರಿಕಾ ಸಂಯುಕ್ತ ಸಂಸ್ಥಾನಗಳಿಗೆ ಹೊಸದಾಗಿ ಸೇರಿಕೊಂಡಿತು. ೧೮೪೯ರಲ್ಲಿ ಒರೆಗಾನ್ ಎಂಬ ಹೊಸದಾದ ಪ್ರಾಂತವೊಂದರಿಂದ ಅಲ್ಲಿರುವ ರಾಜ್ಯಗಳ ಗಡಿಯನ್ನು ನಿರ್ಧರಿಸುವಲ್ಲಿ ಮೆಕ್ಸಿಕೊ ಹಾಗೂ ಅಮೆರಿಕಾಗಳ ಮಧ್ಯೆ ಮತ್ತೆ ಬಿರುಕು ಉಂಟಾಯಿತು. ಅಧ್ಯಕ್ಷ ಡೋಕ್‌ನ ನಿರ್ದೇಶನದಂತೆ, ಸೈನ್ಯಾಧಿಕಾರಿ ಟೇಲರ್ ಮೆಕ್ಸಿಕೋದ ಮೇಲೆ ಯುದ್ಧ ಸಾರಿದನು. ಯುದ್ಧದಲ್ಲಿ ಅಮೆರಿಕಾ ಗೆದ್ದಿತು. ಶಾಂತಿ ಸಂಧಾನದಂತೆ ೧.೫ ಕೋಟಿ ಡಾಲರ್‌ಗಳಿಗೆ ಕ್ಯಾಲಿಫೋರ್ನಿಯಾವನ್ನು ಮೆಕ್ಸಿಕೊದಿಂದ ಕೊಳ್ಳಲಾಯಿತು. ಇದೇ ಸಮಯಕ್ಕೆ ಕ್ಯಾಲಿಫೋರ್ನಿಯಾದಲ್ಲಿ ಚಿನ್ನದ ನಿಕ್ಷೇಪಗಳಿರುವುದು ಪತ್ತೆಯಾಗಿ ಇದರಿಂದ ಆಕರ್ಷಿತರಾದ ಹೆಚ್ಚಿನ ಜನ ಪಶ್ಚಿಮದ ಕಡೆಗೆ ವಲಸೆ ಹೋಗುವಂತಾಯಿತು.