ಅಮೆರಿಕಾದ ಸ್ವಾತಂತ್ರ್ಯ ಸಂಗ್ರಾಮವು ಪ್ರಪಂಚದ ಇತಿಹಾಸದಲ್ಲಿ ಮಹತ್ತರ ಸ್ಥಾನವನ್ನು ಹೊಂದಿದೆ. ಇಂಗ್ಲೆಂಡಿನಲ್ಲಿ ಹಾಗೂ ಯುರೋಪ್ ಖಂಡದ ಇತರೇ ಭಾಗಗಳಲ್ಲಿ ತಮ್ಮ ಧಾರ್ಮಿಕ ನಂಬಿಕೆಗಳು, ಪದ್ಧತಿಗಳ ಅನುಷ್ಠಾನಕ್ಕೆ ಸ್ವಾತಂತ್ರ್ಯ ಸಾಲದೆಂದು ಭಾವಿಸಿದರು. ನಂತರ ಅಲ್ಲಿಂದ ಈ ‘‘ಹೊಸ ಪ್ರಪಂಚಕ್ಕೆ’’ ಸಾಗರೋಪಾದಿ ಯಲ್ಲಿ ಆಗಮಿಸಿದ ವಲಸೆಗಾರರ ನಿರಂತರ ಸ್ವಾತಂತ್ರ್ಯ ಪ್ರೇಮವೇ ಅಮೆರಿಕಾದ ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿಯಾಯಿತು. ಇಂಗ್ಲೆಂಡ್ ತನ್ನ ಭೌಗೋಳಿಕ, ರಾಜಕೀಯ, ಆರ್ಥಿಕ ಹಾಗೂ ಆಡಳಿತಾತ್ಮಕವಾದ ಸಾರ್ವಭೌಮತ್ವವನ್ನು ಅಮೆರಿಕಾನ್ನರ ಮೇಲೆ ಹೇರಲು ಪ್ರಯತ್ನಿಸಿದಾಗ, ದೂರದ ಅಮೆರಿಕಾದಲ್ಲಿ ಈಗಾಗಲೇ ಸ್ವತಂತ್ರ ಸರ್ಕಾರ ವ್ಯವಸ್ಥೆಯಲ್ಲಿ ಅನುಭವ ಪಡೆದಿದ್ದ ವಲಸೆಗಾರರು ಮಾತೃರಾಷ್ಟ್ರ ಇಂಗ್ಲೆಂಡಿನ ಮೇಲೆ ದಂಗೆ ಎದ್ದರು. ಆ ಮೂಲಕ ತಮ್ಮ ಹೃದಯಕ್ಕೆ ಹತ್ತಿರವಾದ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಪಡೆದುಕೊಂಡು. ಅವುಗಳನ್ನು ಲಿಖಿತ ಸಂವಿಧಾನದ ರೂಪದಲ್ಲಿ ಬಲಪಡಿಸಿಕೊಂಡರು. ಅಮೆರಿಕಾದ ೧೩ ವಸಾಹತುಗಳ ಈ ಹೋರಾಟ ಹಾಗೂ ಈ ಕ್ರಾಂತಿಯ ತತ್ವಗಳು ಪ್ರಪಂಚದ ಇನ್ನಿತರ ಪ್ರಜಾಸತ್ತಾತ್ಮಕ ಹೋರಾಟಗಳಿಗೆ ಸ್ಫೂರ್ತಿಯ ಸೆಲೆಯಾಯಿತು.

ಕ್ರಿ.ಶ.೧೪೯೭ರಲ್ಲಿ ಕ್ರಿಸ್ಟೋಫರ್ ಕೊಲಂಬಸ್‌ನು ನಡೆಸಿದ ಅನ್ವೇಷಣೆಯಿಂದಾಗಿ ವೆಸ್ಟ್‌ಇಂಡೀಸ್ ದ್ವೀಪ ಸಮೂಹ ಕಂಡುಹಿಡಿಯಲ್ಪಟ್ಟವು. ಕೆಲವೇ ಸಮಯದಲ್ಲಿ ಅಮೆರಿಕಾ(ಉತ್ತರ)ವು ಶೋಧನೆಕಾರರ ಕಣ್ಣಿಗೆ ಬಿದ್ದು, ಯುರೋಪಿಯನ್ ವಲಸೆಗಾರರ ಮುಖ್ಯ ಕೇಂದ್ರವಾಗಿ ಬೆಳೆಯಲು ಪ್ರಾರಂಭವಾಯಿತು. ಇಂಗ್ಲೆಂಡಿನಲ್ಲಿ ವಿವಿಧ  ಧಾರ್ಮಿಕ, ರಾಜಕೀಯ, ವೈಯಕ್ತಿಕ ಸಾಹಸದ ಚಪಲ, ಸಂಪತ್ತಿನ ಗಳಿಕೆ ಮೊದಲಾದ ಸಂಗತಿಗಳು ಹೊಸದಾಗಿ ಆಗಮಿಸಿದ ವಲಸೆಗಾರರ ಮೇಲೆ ಪರಿಣಾಮ ಬೀರಿದವು. ಇಂದಿನ ಅಮೆರಿಕಾ ಸಂಯುಕ್ತ ಸಂಸ್ಥಾನದ ಪೂರ್ವ ತೀರದಲ್ಲಿ(ಉತ್ತರದ ನ್ಯೂ ಫೌಂಡ್‌ಲ್ಯಾಂಡಿನಿಂದ ದಕ್ಷಿಣದ ಫ್ಲೋರಿಡಾದವರೆಗೆ) ಹದಿಮೂರು ಕಾಲೋನಿಗಳನ್ನು ಸ್ಥಾಪಿಸಿ ನೆಲೆಸಿದರು. ಕ್ರಮೇಣ ಅಮೆರಿಕಾ ಸಂಯುಕ್ತ ಸಂಸ್ಥಾನ ಪಶ್ಚಿಮದತ್ತ ಸರಿಯತೊಡಗಿದರು. ಉತ್ತರ ಪ್ರದೇಶವನ್ನು ನ್ಯೂ ಇಂಗ್ಲೆಂಡ್ ಪ್ರದೇಶವೆಂದು ಕರೆಯಲಾಯಿತು. ಮಸಾಚುಸೆಟ್ಸ್ ಮತ್ತು ರೋಡ್ ದ್ವೀಪಗಳು ಇಲ್ಲಿನ ಮುಖ್ಯ ವಸಾಹತುಗಳಾಗಿದ್ದವು.

ಉತ್ತರ ಮತ್ತು ದಕ್ಷಿಣದ ಮಧ್ಯದಲ್ಲಿ ಪೆನ್‌ಸಿಲ್ವೇನಿಯಾ ಹಾಗೂ ದದುವಾರೆಗಳಿದ್ದವು. ದಕ್ಷಿಣ ಭಾಗದ ಗ್ರಾಮೀಣ ಪರಿಸರದಲ್ಲಿ ವಸಾಹತುಗಳಿದ್ದು, ವರ್ಜೀನಿಯಾ, ಮೆರಿಲ್ಯಾಂಡ್, ಉತ್ತರ ಮತ್ತು ದಕ್ಷಿಣ ಕೆರೋಲಿನಾಗಳು ಹಾಗೂ ಜಾರ್ಜಿಯಾಗಳು ಮುಖ್ಯವಾಗಿದ್ದವು. ಈ ಎಲ್ಲಾ ವಸಾಹತುಗಳು ಇಂಗ್ಲೀಷರಲ್ಲದ ಬೇರೆ ಜನಾಂಗದ ಮತ್ತು ರಾಷ್ಟ್ರದವರನ್ನೂ ಹೊಂದಿತ್ತು. ಡಚ್ಚರು, ಫ್ರೆಂಚರು, ಡೇನರು, ನಾರ್ವೇಜಿಯರನ್ನರು, ಸ್ವೀಡರು, ಸ್ಕಾಟರು, ಐರಿಷರು, ಜರ್ಮನ್ನರು, ಬೊಹೇಮಿಯನ್ನರು, ಪೋರ್ಚುಗೀಸರು ಮತ್ತು ಇಟಲಿಯನ್ನರು ಮುಂತಾದವರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದರು.

ದೂರದ ಯುರೋಪಿನಿಂದ ಬೆಂಗಾಡಿನಂತಿದ್ದ ಅಮೆರಿಕಾಕ್ಕೆ ವಿವಿಧ ಕನಸನ್ನಿಟ್ಟುಕೊಂಡು, ಜೀವದ ಹಂಗು ತೊರೆದು ವಿಶಾಲ ಅಟ್ಲಾಂಟಿಕ್ ಸಮುದ್ರವನ್ನು ದಾಟಿ ಆಗಮಿಸಿದ್ದ ವಲಸೆಗಾರರಿಗೆ ‘‘ಹೊಸ ಪ್ರಪಂಚ’’ದಲ್ಲಿ ಅಪಾರ ಕಷ್ಟನಷ್ಟಗಳೆದುರಾದವು. ತೀವ್ರ ಚಳಿ, ಆಹಾರದ ಕೊರತೆ, ಸ್ಥಳೀಯ ಬುಡಕಟ್ಟು ಇಂಡಿಯನ್ನರ ವೈರತ್ವ, ರೋಗ-ರುಜಿನಗಳು, ಯಾವುದೇ ಸಹಾಯ-ಸಹಕಾರದ ಕೊರತೆ ಮುಂತಾದವುಗಳಿಂದ ನರಳಬೇಕಾಯ್ತು. ಇದರಿಂದ ಹಲವಾರು ಜನರು ಸಾವನ್ನಪ್ಪಿದರು. ತಾವಿನ್ನು ಎಂದೂ ತಮ್ಮ ಮಾತೃಭೂಮಿ ಇಂಗ್ಲೆಂಡಿಗೆ ಅಥವಾ ಇತರ ಯುರೋಪಿಯನ್ ರಾಷ್ಟ್ರಕ್ಕೆ ಹಿಂದಿರುಗಲು ಸಾಧ್ಯವಿಲ್ಲವೆಂಬ ಕಠೋರ ಸತ್ಯ ಅವರಲ್ಲಿ ‘‘ಈಸಬೇಕು; ಇದ್ದು ಜೈಸಬೇಕು’’ ಎನ್ನುವ ಛಲವನ್ನು ಸೃಷ್ಟಿಸಿತು. ಅಮೆರಿಕಾವನ್ನೇ ತಮ್ಮ ಮಾತೃಭೂಮಿಯನ್ನಾಗಿಸಿಕೊಂಡು ಹೊಸ ಜೀವನ ಪದ್ಧತಿ, ಸಂಸ್ಕೃತಿ, ಸರ್ಕಾರ ವ್ಯವಸ್ಥೆ, ಜೀವನ ದೃಷ್ಟಿಕೋನವನ್ನು ಬೆಳೆಸಿಕೊಂಡು ಬದುಕಲು ಪ್ರಾರಂಭಿಸಿದರು.

೧೭೬೦ರ ವೇಳೆಗೆ ಜನಸಂಖ್ಯೆಯು ೧೫ ಲಕ್ಷಕ್ಕೆ ಏರಿತು. ವಲಸೆಗಾರರು ಅಥವಾ ವಸಾಹತು ನಿರ್ಮಾಪಕರು ಯಾವ ಕಾರಣಗಳಿಗೋಸ್ಕರ ಇಂಗ್ಲೆಂಡಿನ ವಿರುದ್ಧ ಕ್ರಾಂತಿಯನ್ನೆಬ್ಬಿಸಿದರು ಮತ್ತು ಕ್ರಾಂತಿಯ ವಿವಿಧ ಮಜಲುಗಳನ್ನು ಈ ಲೇಖನದಲ್ಲಿ ಪರಿಶೀಲಿಸಲಾಗಿದೆ.

ವಸಾಹತು ಸರ್ಕಾರದ ಉದಯ

ವಸಾಹತುಶಾಹಿಯ ಅಭಿವೃದ್ದಿಯ ಎಲ್ಲಾ ಹಂತಗಳಲ್ಲಿ ಕಾಣುವ ಮುಖ್ಯ ಲಕ್ಷಣವೆಂದರೆ ವಸಾಹತುಗಳ ಮೇಲೆ ಇಂಗ್ಲಿಷ್ ಸರ್ಕಾರದ ನಿಯಂತ್ರಣ ಪ್ರತಿ ಹಂತದಲ್ಲೂ ಕಡಿಮೆ ಯಾಗುತ್ತಾ ಹೋಗುವುದು. ಇಂಗ್ಲೆಂಡಿನ ರಾಜನು ನೀಡಿದ ಹಕ್ಕುಪತ್ರಗಳ ಮೂಲಕ ಅಮೆರಿಕನ್ ಕಲೋನಿಗಳು ಸೃಷ್ಟಿಯಾಗಿದ್ದರೂ ಕೂಡ ಅವುಗಳೆಂದೂ ತಾವು ಇಂಗ್ಲೆಂಡಿನ ಅಡಿಯಾಳುಗಳೆಂದು ತಿಳಿದಿರಲಿಲ್ಲ. ತಾವು ಬ್ರಿಟಿಷ್ ಕಾಮನ್‌ವೆಲ್ತ್ (ಒಕ್ಕೂಟ) ವ್ಯವಸ್ಥೆಯ ಸಮಾನ ಸದಸ್ಯರೆಂದು ತಿಳಿದಿದ್ದರು. ತಾವು ಹೊರಗಿನಿಂದ ಆಳಲ್ಪಡುತ್ತಿದ್ದೇವೆ ಎಂಬ ಕಲ್ಪನೆ ಬಹುಮಟ್ಟಿಗೆ ಮಾಯವಾಗಿ ಹೋಗಿತ್ತು. ಇಂಗ್ಲೆಂಡಿನಲ್ಲಿ ಜನಪ್ರಿಯವಾದ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ತಮ್ಮ ಸ್ಥಳೀಯ ಸಂವಿಧಾನಗಳಲ್ಲಿ ಸೇರಿಸಿಕೊಂಡಿದ್ದರು.

ನ್ಯೂ ಇಂಗ್ಲೆಂಡಿನ ವಸಾಹತುಗಳಲ್ಲಿ ಇತರ ಪ್ರದೇಶಗಳಿಗಿಂತ ಹೆಚ್ಚು ಸ್ವಾಯತ್ತತೆಯನ್ನು ಹೊಂದಿದ್ದ ಸರಕಾರಗಳಿದ್ದವು. ಮಸಾಚುಸೆಟ್ಸ್, ಕನೆಕ್ಟಿಕಟ್, ರೋಡ್ ದ್ವೀಪಗಳು ಜನರಿಂದ ಆಯ್ಕೆಯಾದ ಪ್ರತಿನಿಧಿಗಳನ್ನೊಂದಿದ ಶಾಸನ ಸಭೆಗಳನ್ನು ಹೊಂದಿದ್ದವು. ಹಾಗೂ ಜನರು ತಮಗೆ ಬೇಕಾದ ಕಾನೂನುಗಳನ್ನು ಇವುಗಳ ಮೂಲಕ ರಚಿಸಿಕೊಳ್ಳುತ್ತಿದ್ದರು.

ಇಂಗ್ಲೆಂಡ್ ಹಾಗೂ ಅಮೆರಿಕಾದ ನಡುವಣ ಇದ್ದ ವಿಸ್ತಾರವಾದ ಸಮುದ್ರ ಇಂಗ್ಲೆಂಡಿನ ಹತೋಟಿ ದುರ್ಬಲವಾಗಲು ಕಾರಣವಾಯಿತು. ಕೆಲವು ಬಾರಿ ಇಂಗ್ಲೆಂಡಿನ ಸರ್ಕಾರವು ಹತೋಟಿಯನ್ನು ಸಾಧಿಸಲು ಪ್ರಯತ್ನಿಸಿದರೂ ಅದು ವಲಸೆಗಾರರ ತೀವ್ರ ವಿರೋಧದಿಂದಾಗಿ ಸಾಧ್ಯವಾಗಲಿಲ್ಲ. ೧೯೮೮-೮೯ರಲ್ಲಿ ನಡೆದ ರಕ್ತರಹಿತ ಕ್ರಾಂತಿ ಕೂಡ ಹಲವು ಒಳ್ಳೆಯ ಪರಿಣಾಮಗಳನ್ನು ಅಮೆರಿಕನ್ನರ ಮೇಲೆ ಬೀರಿತು. ಹಕ್ಕುಗಳ ಪತ್ರ (ಬಿಲ್ ಆಫ್ ರೈಟ್ಸ್) ಹಾಗೂ ಸಹಿಷ್ಣುತಾ ಕಾಯ್ದೆ (ಟಾಲರೇಷನ್ ಆ್ಯಕ್ಟ್ – ೧೬೮೯) ಇವುಗಳು ಅಮೆರಿಕಾದಲ್ಲಿ ಕ್ರಿಶ್ಚಿಯನ್ನರ ವಿವಿಧ ಪಂಥಗಳಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿತು. ಜಾನ್‌ಲಾಕ್‌ನ ಸಿದ್ಧಾಂತಗಳು, ಅದರಲ್ಲೂ ಮುಖ್ಯವಾಗಿ ಸರ್ಕಾರವು ದೈವದತ್ತ ಅಧಿಕಾರದಿಂದ ನಡೆಯುವುದಿಲ್ಲ; ಬದಲಾಗಿ ಜನರ ನಡುವಿನ ಒಪ್ಪಂದದ ಮೇರೆಗೆ ನಡೆಯುತ್ತದೆ; ಜನರ ಸ್ವಾಭಾವಿಕ ಹಕ್ಕುಗಳನ್ನು ಉಲ್ಲಂಘಿಸುವ ಸರ್ಕಾರದ ವಿರುದ್ಧ ಜನರು ದಂಗೆ ಏಳುವ ಅಧಿಕಾರವಿದೆ ಎಂಬ ವಾದವು ಅಮೆರಿಕಾನ್ನರ ಮೇಲೆ ಅಪಾರ ಪ್ರಭಾವ ಬೀರಿತು. ಹದಿನೆಂಟನೆಯ ಶತಮಾನದ ವಸಾಹತುಗಳ ರಾಜಿಕೀಯವು ೧೭ನೆಯ ಶತಮಾನದ ಇಂಗ್ಲೆಂಡಿನ ರಾಜಕೀಯವನ್ನು ಹೋಲುತ್ತಿತ್ತು. ಹದಿನೆಂಟನೆಯ ಶತಮಾನದ ಆದಿಭಾಗದ ವೇಳೆಗೆ ವಸಾಹತುಗಳ ಶಾಸನ ಸಭೆಗಳು ಇಂಗ್ಲೆಂಡ್ ಪಾರ್ಲಿಮೆಂಟಿಗೆ ಸಾಮ್ಯತೆಯುಳ್ಳ ಎರಡು ಪ್ರಮುಖ ಅಧಿಕಾರಗಳನ್ನು ಚಲಾಯಿಸುವ ಹಕ್ಕುಗಳನ್ನು ಪಡೆದುಕೊಂಡವು. ಅವುಗಳೆಂದರೆ:

೧. ತೆರಿಗೆ ಹಾಗೂ ಖರ್ಚುಗಳ ಮೇಲೆ ಮತ ಹಾಕುವ ಹಕ್ಕು.

೨. ಶಾಸನಗಳನ್ನು ಸಭೆಗಳಲ್ಲಿ ಚರ್ಚೆಗೆ ವಿಷಯಗಳನ್ನು ಮಂಡಿಸುವ ಹಕ್ಕು.

ಪ್ರತಿನಿಧಿ ಶಾಸನ ಸಭೆಗಳು ಈ ಹಕ್ಕುಗಳನ್ನು ರಾಜನ, ಗವರ್ನರನ ಅಧಿಕಾರವನ್ನು ಮೊಟಕುಗೊಳಿಸಲು ಹಾಗೂ ತಮ್ಮ ಅಧಿಕಾರ ಹಾಗೂ ಪ್ರಭಾವವನ್ನು ವೃದ್ದಿಸಿಕೊಳ್ಳುವ ಮಸೂದೆಗಳನ್ನು ಪಾಸು ಮಾಡಲು ಉಪಯೋಗಿಸಿಕೊಂಡವು. ಆಗಾಗ್ಗೆ ರಾಜನ ಗವರ್ನರ್‌ಗಳು ಹಾಗೂ ಶಾಸನ ಸಭೆಗಳ ನಡುವಿನ ಕಲಹಗಳು, ಜನರಲ್ಲಿ ಅಮೆರಿಕಾ ಹಾಗೂ ಇಂಗ್ಲೆಂಡಿನ ಹಿತಾಸಕ್ತಿಗಳ ನಡುವಿನ ವ್ಯತ್ಯಾಸಗಳ ಬಗ್ಗೆ ಹೊಸ ಅರಿವನ್ನು ಮೂಡಿಸಲು ಅನುವು ಮಾಡಿತ್ತು. ಈ ರೀತಿಯಲ್ಲಿ ವಸಾಹತುಗಳ ಶಾಸನ ಸಭೆಗಳು ಸ್ವ-ಸರ್ಕಾರಕ್ಕಾಗಿ ತಮ್ಮ ಹಕ್ಕುಗಳನ್ನು ಸ್ಥಾಪಿಸಿದವು. ಇದರ ಪರಿಣಾಮವಾಗಿ ಕಾಲಕ್ರಮೇಣ ವಸಾಹತುಗಳ ಆಡಳಿತ ಕೇಂದ್ರವು ಲಂಡನ್ನಿನಿಂದ ಪ್ರಾಂತ್ಯಗಳ ರಾಜಧಾನಿಗಳಿಗೆ ಸ್ಥಾನಾಂತರಗೊಂಡಿತು.

ಕ್ರಾಂತಿಯತ್ತ ಅಮೆರಿಕಾ

ಯುದ್ಧ ಪ್ರಾರಂಭವಾಗುವ ಮೊದಲೇ ಕ್ರಾಂತಿಯನ್ನು ನಡೆಸಲಾಯಿತು. ಕ್ರಾಂತಿಯು ಜನರ ಹೃದಯ ಹಾಗೂ ಮನಸ್ಸಿನಲ್ಲಿತ್ತು

ಎಂದು ೧೮೧೮ರಲ್ಲಿ ಜಾನ್ ಆ್ಯಡಮ್ಸ್‌ನು ಹೇಳುತ್ತಾನೆ.

ಅಮೆರಿಕಾನ್ ಕ್ರಾಂತಿಯ ಇತಿಹಾಸವು ೧೭೭೫ರಲ್ಲಿ ಮೊದಲ ಗುಂಡು ಹಾರುವ ಎಷ್ಟೋ ಮೊದಲೇ ಆರಂಭವಾಗಿತ್ತೆಂಬುದನ್ನು ನಾವು ಅರಿತಿದ್ದೇವೆ. ವಸಾಹತುಗಳು ಆರ್ಥಿಕ ಶಕ್ತಿಯಲ್ಲಿ ಹಾಗೂ ಸಾಂಸ್ಕೃತಿಕ ಪ್ರಗತಿಯಲ್ಲಿ ಅಪಾರ ಸಾಧನೆಯನ್ನು ಈ ವೇಳೆಗಾಗಲೇ ಮಾಡಿತ್ತಲ್ಲದೆ ಅವುಗಳ ಸ್ವಸರ್ಕಾರದ ವ್ಯವಸ್ಥೆಯಲ್ಲಿ ಕೂಡ ದೀರ್ಘ ಅನುಭವವನ್ನು ಪಡೆದಿದ್ದವು.

ಹೊಸ ವಸಾಹತು ವ್ಯವಸ್ಥೆಯ ಜಾರಿ

ಫ್ರೆಂಚ್ ಹಾಗೂ ಇಂಡಿಯನ್ನರ ನಡುವಿನ ಯುದ್ಧದ ನಂತರ (೧೭೫೪-೧೭೬೩) ಬ್ರಿಟನ್ ಅಪಾರ ಶಕ್ತಿಶಾಲಿ ರಾಷ್ಟ್ರಗಳಾಗಿ ಹೊರಹೊಮ್ಮಿತ್ತು. ‘‘ಹೊಸ ಪ್ರಪಂಚ’’ದಲ್ಲಿ ಹೊಸದಾಗಿ ದೊರೆತ ಪ್ರದೇಶಗಳಲ್ಲಿ ಹೊಸ ಸಾಮ್ರಾಜ್ಯಶಾಹಿ ಆಡಳಿತ ಯೋಜನೆಯನ್ನು ಇದು ಹಮ್ಮಿಕೊಂಡಿತು. ಆದರೆ ತನ್ನ ಹೊಸ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತರಲು ಅಮೆರಿಕಾದ ಪರಿಸ್ಥಿತಿಯು ಇಂಗ್ಲೆಂಡಿಗೆ ಪೂರಕವಾಗಿರಲಿಲ್ಲ. ಸ್ವಾಯತ್ತ ಅಧಿಕಾರವಿದ್ದ ಸ್ವ-ಸರ್ಕಾರವನ್ನು ಹೊಂದಿದ್ದ ವಸಾಹತುಗಳಿಂದ ಹೊಸ ನೀತಿಗೆ ತೀವ್ರ ಪ್ರತಿರೋಧ ವ್ಯಕ್ತವಾಗಲು ಪ್ರಾರಂಭವಾಯಿತು.

ಅಮೆರಿಕಾದಲ್ಲಿ ಆಂತರಿಕ ಆಡಳಿತವನ್ನು ಸುಧಾರಿಸಿ ಬಲಪಡಿಸುವ ನಿಟ್ಟಿನಲ್ಲಿ ಇಂಗ್ಲೆಂಡ್, ಹದಿಮೂರು ವಸಾಹತುಗಳು ಪಶ್ಚಿಮದತ್ತ ಹೊರಳುವುದನ್ನು ನಿಷೇಧಿಸಿತು. ಪಶ್ಚಿಮದತ್ತ ಚಲಿಸಿದಂತೆ, ಸ್ಥಳೀಯ ಇಂಡಿಯನ್ನರೊಂದಿಗೆ ಕಾದಾಟಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿ, ಇದರಿಂದ ಖರ್ಚು-ವೆಚ್ಚಗಳು ಜಾಸ್ತಿಯಾಗುವ ಸಾಧ್ಯತೆಯಿದ್ದುದರಿಂದ, ಇಂಗ್ಲೆಂಡ್ ಸರ್ಕಾರವು, ರಾಜನ ಘೋಷಣೆಯ ಮೂಲಕ ೧೭೬೩ರಲ್ಲಿ ಅಲಘನಿಗಳು, ಪ್ರೋ ಮಿಸ್ಸಿಸಿಪ್ಪಿ ನದಿ ಹಾಗೂ ಕ್ವಿಬೆಕ್ ನಡುವಣ ಪ್ರದೇಶಗಳನ್ನು ಸ್ಥಳೀಯ ಅಮೆರಿಕಾನ್ನರಿಗೆ ಮೀಸಲಾಗಿಟ್ಟಿತು. ಈ ರಾಜಾಜ್ಞೆಯು ಅಮೆರಿಕಾನ್ನರಿಗೆ ರೋಷವನ್ನುಂಟು ಮಾಡಿತಲ್ಲದೆ ಅದನ್ನು ಉಲ್ಲಂಘಿಸುವ ಸಕಲ ಪ್ರಯತ್ನವನ್ನು ಮಾಡಲು ಪ್ರೇರೇಪಿಸಿತು.

ದೊಡ್ಡ ಸಾಮ್ರಾಜ್ಯದ ರಕ್ಷಣೆಗೆ ಅಪಾರ ಆರ್ಥಿಕ ಸಂಪತ್ತಿನ ಅಗತ್ಯವಿತ್ತು. ಇಂಗ್ಲೆಂಡಿ ನಲ್ಲಿ ದೊರೆಯುವ ತೆರಿಗೆಯು ಇದಕ್ಕೆ ಸಾಕಾಗುತ್ತಿರಲಿಲ್ಲ. ಆದ್ದರಿಂದ ಅಮೇರಿಕನ್ನರಿಂದ ಸಮರ್ಥವಾದ ರೀತಿಯಲ್ಲಿ, ಕೇಂದ್ರೀಯ ಆಡಳಿತದ ಮೂಲಕ ತೆರಿಗೆ ವಸೂಲಿ ಮಾಡುವ ನಿಟ್ಟಿನಲ್ಲಿ ಬ್ರಿಟನ್ ಕಾರ್ಯ ಪ್ರವೃತ್ತವಾಯಿತು. ಮೊದಲ ಹೆಜ್ಜೆಯಾಗಿ ೧೭೩೩ರ ಮೊಲಾಸಸ್ ಕಾಯ್ದೆಯನ್ನು ರದ್ದುಮಾಡಿ, ೧೭೬೪ರಲ್ಲಿ ಸಕ್ಕರೆ ಕಾಯ್ದೆಯನ್ನು ಜಾರಿಗೆ ತಂದಿತು. ಮೊಲಾಸಸ್ ಅಥವಾ ಕಾಕಂಬಿಯು ರಮ್ ತಯಾರಿಕೆಗೆ ಅತ್ಯವಶ್ಯಕವಾದ್ದರಿಂದ ಅದರ ಮೇಲೆ ತೆರಿಗೆಯನ್ನು ಕಡಿಮೆ ಮಾಡಿದರೆ ಅಮೆರಿಕಾಕ್ಕೆ ಅದರ ಕಳ್ಳ ಸಾಗಾಣಿಕೆಯು ನಿಂತು ತೆರಿಗೆ ಸಂಗ್ರಹವು ಹೆಚ್ಚಾಗುವುದೆಂದು ಬ್ರಿಟಿಷ್ ಸರ್ಕಾರ ಭಾವಿಸಿತು. ಆದ್ದರಿಂದ ಸಕ್ಕರೆ ಕಾಯ್ದೆಯನ್ನು ಹೆಚ್ಚು ಕಠಿಣವಾಗಿ ಜಾರಿಗೆ ತರಲು ಪ್ರಯತ್ನ ಪಟ್ಟಿತು. ಆದರೆ ಹೊಸ ತೆರಿಗೆಗಳ ಕಾನೂನುಗಳನ್ನು ಇಂಗ್ಲೆಂಡಿನ ವ್ಯಾಪಾರಿಗಳು, ಪ್ರಜಾಪ್ರತಿನಿಧಿಗಳು ಶಾಸನ ಸಭೆಗಳಲ್ಲಿ ತೀವ್ರವಾಗಿ ಪ್ರತಿಭಟಿಸಿದರು. ೧೭೬೪ರಲ್ಲಿ ಇಂಗ್ಲೆಂಡಿನ ಪಾರ್ಲಿಮೆಂಟ್ ಕರೆನ್ಸಿ ಕಾಯ್ದೆಯನ್ನು ಪಾಸು ಮಾಡಿತು; ಅಲ್ಲದೆ ಕ್ವಾಟರರಿಂಗ್ ಕಾಯ್ದೆಯನ್ನು ಪಾಸು ಮಾಡಿತು. ಈ ಕಾಯ್ದೆಗಳು ವಲಸೆಗಾರರಲ್ಲಿ ತೀವ್ರ ಅಸಮಾಧಾನವನ್ನುಂಟುಮಾಡಿತು.

ಸ್ಟ್ಯಾಂಪ್ ಕಾಯ್ದೆ

ಹೊಸ ವಸಾಹತು ವ್ಯವಸ್ಥೆಯನ್ನು ಉದ್ಘಾಟಿಸುವ ನಿಟ್ಟಿನಲ್ಲಿ ಚಲಾವಣೆಗೆ ತಂದ ಕೊನೆಯ ಕಾಯ್ದೆ ಸ್ಟ್ಯಾಂಪ್ ಕಾಯ್ದೆಯಾಗಿದ್ದು, ಇದು ಅತಿ ಹೆಚ್ಚು ಪ್ರತಿರೋಧವನ್ನು, ಸಂಘಟಿತ ಹೋರಾಟವನ್ನು ಸೃಷ್ಟಿಸಿತು. ಈ ಕಾಯ್ದೆಯ ಪ್ರಕಾರ ಅಮೆರಿಕನ್ನರು ತೆರಿಗೆ ಸ್ಟ್ಯಾಂಪ್‌ಗಳನ್ನು ಖರೀದಿಸಿ, ವರ್ತಮಾನ ಪತ್ರಿಕೆಗಳು, ಜಾಹೀರಾತುಗಳು, ಎಲ್ಲಾ ರೀತಿಯ ದಾಖಲೆಗಳು, ಪರವಾನಗಿಗಳು ಮುಂತಾದವುಗಳಿಗೆ ಅಂಟಿಸಬೇಕಾಗಿತ್ತು. ಇದ ರಿಂದ ಬರುವ ಹಣವನ್ನು ಅಮೆರಿಕಾದಲ್ಲಿ ವಸಾಹತನ್ನು ರಕ್ಷಿಸುವ ಬ್ರಿಟಿಷ್ ಸೈನಿಕರ ಯೋಗಕ್ಷೇಮವನ್ನು ನೋಡಿಕೊಳ್ಳಲು ಉಪಯೋಗಿಸಲು ನಿರ್ಧರಿಸಲಾಗಿತ್ತು.

ಅಮೆರಿಕಾದ ಉತ್ತರ-ದಕ್ಷಿಣ, ಪೂರ್ವ-ಪಶ್ಚಿಮ ಎಲ್ಲಾ ಕಡೆಗಳ ಪತ್ರಕರ್ತರು, ವಕೀಲರು, ಪುರೋಹಿತರು, ವ್ಯಾಪಾರಿಗಳು ಮತ್ತು ಉದ್ಯಮಿಗಳು ಈಗ ಸಂಘಟಿತ ಪ್ರತಿಭಟನೆಗೆ ತೊಡಗಿದರು. ಅಲ್ಲದೆ ಮಾತೃರಾಷ್ಟ್ರ ಬ್ರಿಟನ್ನಿನಿಂದ ವಸ್ತುಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದರು. ಇದರಿಂದ ೧೭೬೫ರ ವೇಳೆಗೆ ವ್ಯಾಪಾರ ವಾಣಿಜ್ಯಗಳು ಬಹಳ ಕ್ಷೀಣಿಸಿತು. ‘‘ಸ್ವಾತಂತ್ರ್ಯದ ಮಕ್ಕಳು’’(ಸನ್ಸ್ ಆಫ್ ಲಿಬರ್ಟಿ) ಎಂದು ಗುಪ್ತ ಸಂಸ್ಥೆಗಳು ಹುಟ್ಟಿಕೊಂಡು ಸ್ಟ್ಯಾಂಪ್ ಏಜಂಟರನ್ನು ಓಡಿಸಿದರಲ್ಲದೆ ಸ್ಟ್ಯಾಂಪ್‌ಗಳನ್ನು ನಾಶಪಡಿಸತೊಡಗಿದರು. ೧೭೬೫ರಲ್ಲಿ ಸ್ಟ್ಯಾಂಪ್ ಕಾಯ್ದೆ ಕಾಂಗ್ರೆಸ್ಸನ್ನು ನ್ಯೂಯಾರ್ಕ್‌ನಲ್ಲಿ ಕರೆಯಲಾಯಿತು. ಒಂಬತ್ತು ವಸಾಹತುಗಳ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿ, ಹಲವು ನಿರ್ಣಯಗಳನ್ನು ಅಂಗೀಕರಿಸಿದರು. ಅಲ್ಲದೆ, ತಮ್ಮ ಶಾಸನ ಸಭೆಗಳಲ್ಲದೆ ತೆರಿಗೆಯನ್ನು ಹೇರುವ ಹಕ್ಕು ಬೇರಾರಿಗೂ ಇಲ್ಲವೆಂದು ಸಾರಿದರು.

ಸ್ಟ್ಯಾಂಪ್ ಕಾಯ್ದೆಯು ಕಲೋನಿಗಳ ಹಕ್ಕುಗಳ ಹಾಗೂ ಸ್ವಾತಂತ್ರ್ಯಗಳನ್ನು ಹಾಳುಗೆಡಹುವ ಇಂಗ್ಲೆಂಡಿನ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತದೆ

ಎಂದು ಘೋಷಿಸಿ, ಚಳುವಳಿಯನ್ನು ಮುಂದುವರಿಸಿದರು.

ಪ್ರಾತಿನಿಧ್ಯವಿಲ್ಲದೆ ತೆರಿಗೆಯಿಲ್ಲ

ಅಮೆರಿಕಾ ಸ್ವಾತಂತ್ರ್ಯ ಕ್ರಾಂತಿಯಲ್ಲಿ ಅತೀ ಚರ್ಚಿತ ವಿಷಯವೆಂದರೆ ‘ಪ್ರಾತಿನಿಧ್ಯವಿಲ್ಲದೆ ತೆರಿಗೆ ಹೇರುವುದು ಸರಿಯೇ?’ ಎಂಬುದು. ಹೀಗಾಗಿ ಈ ಹೋರಾಟದಲ್ಲಿ ಪ್ರಾತಿನಿಧ್ಯದ ಪ್ರಶ್ನೆ ಬಹಳ ಮುಖ್ಯವಾಯಿತು. ವಸಾಹತುಗಳ ದೃಷ್ಟಿಯಲ್ಲಿ ಅವು ಬ್ರಿಟನ್ನಿನ ಹೌಸ್ ಆಫ್ ಕಾಮನ್ಸ್ ಗೆ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕಳುಹಿಸುವ ಅವಕಾಶವಿಲ್ಲದೇ ಇದ್ದರೆ, ತಮಗೆ ಪಾರ್ಲಿಮೆಂಟಿನಲ್ಲಿ ಪ್ರಾತಿನಿಧ್ಯವಿದೆ, ತಾವು ಪ್ರತಿನಿಧಿಸಲ್ಪಟ್ಟಿದ್ದೇವೆ ಎಂದು ತಿಳಿದುಕೊಳ್ಳಲು ಅಸಾಧ್ಯವಾಗಿತ್ತು. ಇದು ಬ್ರಿಟಿಷರ ‘‘ವಾಸ್ತವಿಕ ಪ್ರಾತಿನಿಧಿತ್ವ’’ದ ಕಲ್ಪನೆಗೆ ವಿರುದ್ಧವಾಗಿತ್ತು. ಬ್ರಿಟಿಷ್ ಸರ್ಕಾರದ ಅಭಿಪ್ರಾಯದಲ್ಲಿ ಪಾರ್ಲಿಮೆಂಟಿನ ಪ್ರತಿ ಸದಸ್ಯನು, ಕೇವಲ ಅವನ ರಾಷ್ಟ್ರವನ್ನಲ್ಲದೆ ಇಡೀ ಸಾಮ್ರಾಜ್ಯದ ಹಿತಾಸಕ್ತಿಗಳನ್ನು ಪ್ರತಿನಿಧಿಸುತ್ತಿದ್ದನು. ಅಂತೆಯೇ ಆ ಸದಸ್ಯನು ಕಲೋನಿಗಳ ಹಿತಾಸಕ್ತಿಗಳನ್ನು ಕೂಡ ತಾತ್ವಿಕವಾಗಿ ಪ್ರತಿನಿಧಿಸುತ್ತಿದ್ದನು. ಆದರೆ ಅಮೆರಿಕಾನ್ನರಿಗೆ ಯಾವುದೇ ಸಾಮ್ರಾಜ್ಯಶಾಹಿ ಪಾರ್ಲಿಮೆಂಟ್ ಅಸ್ತಿತ್ವದಲ್ಲಿರಲಿಲ್ಲ. ಬ್ರಿಟಿಷ್ ಪಾರ್ಲಿಮೆಂಟ್‌ನ ಅಧಿಕಾರವ್ಯಾಪ್ತಿ ಇಂಗ್ಲೆಂಡಿಗೆ ಮಾತ್ರ ಸೀಮಿತವಾಗಿತ್ತೇ ಹೊರತು ಅಮೆರಿಕಾ ‘‘ಸಾಮ್ರಾಜ್ಯ’’ಕ್ಕೆ ವಿಸ್ತರಿಸಿರಲಿಲ್ಲ. ಅಮೆರಿಕಾನ್ನರ ಪ್ರಕಾರ ಅವರ ಕಾನೂನು ಬದ್ಧ ಸಂಬಂಧಗಳು ರಾಜನೊಂದಿಗೆ ಮಾತ್ರ ಇತ್ತು; ಏಕೆಂದರೆ ಅವನು ಸಮುದ್ರದಾಚೆಗಿನ ವಸಾಹತುಗಳ ಸ್ಥಾಪನೆಗೆ ಕಾರಣನಾಗಿದ್ದನು; ಅವುಗಳ ಸರ್ಕಾರಗಳ ರಚನೆಗೆ ಕಾರಣನಾಗಿದ್ದನು; ರಾಜನು ಇಂಗ್ಲೆಂಡಿಗೆ ರಾಜನಾದಷ್ಟೇ. ಸಮಾನವಾಗಿ ವಸಾಹತುಗಳ ರಾಜನಾಗಿದ್ದನು. ಇದರಿಂದಾಗಿ ಅಮೆರಿಕಾನ್ನರ ಅಭಿಪ್ರಾಯದಲ್ಲಿ, ವಸಾಹತುಗಳಿಗೆ ಹೇಗೆ ಇಂಗ್ಲೆಂಡಿಗೆ ಸಂಬಂಧಿಸಿದಂತೆ ಕಾನೂನುಗಳನ್ನು ರಚಿಸುವ ಅಧಿಕಾರವಿಲ್ಲವೋ ಹಾಗೆಯೇ ಇಂಗ್ಲೆಂಡಿನ ಪಾರ್ಲಿಮೆಂಟ್‌ಗೆ, ವಸಾಹತುಗಳಿಗೆ ಸಂಬಂಧಿಸಿ ದಂತೆ ಕಾನೂನುಗಳನ್ನು ರಚಿಸುವ ಅಥವಾ ಪಾಸು ಮಾಡುವ ಅಧಿಕಾರವಿರಲಿಲ್ಲ.

ಆದರೆ ವಲಸೆಗಾರರ ಈ ಕ್ರಾಂತಿಕಾರಿ ವಾದವನ್ನು ಒಪ್ಪಲು ಬ್ರಿಟಿಷ್ ಪಾರ್ಲಿಮೆಂಟ್ ತಯಾರಿರಲಿಲ್ಲ. ಆದರೂ ಬ್ರಿಟಿಷ್ ವಸ್ತುಗಳ ಮೇಲಿನ ಬಹಿಷ್ಕಾರದಿಂದ ಬಳಲಿದ ಬ್ರಿಟಿಷ್ ವರ್ತಕರ ಒತ್ತಾಯಕ್ಕೆ ಮಣಿದು ೧೭೬೬ರಲ್ಲಿ ಪಾರ್ಲಿಮೆಂಟ್, ಸ್ಟ್ಯಾಂಪ್ ಕಾಯ್ದೆಯನ್ನು ರದ್ದು ಮಾಡಿತಲ್ಲದೆ ಸಕ್ಕರೆ ಕಾಯ್ದೆಯನ್ನು ತಿದ್ದುಪಡಿ ಮಾಡಿತು.

ಟೌನ್‌ಶೆಂಡ್ ಕಾಯ್ದೆಗಳು

ಅಮೆರಿಕಾನ್ ಜನರಲ್ಲಿ ಇಂಗ್ಲೆಂಡಿನ ವಿರುದ್ಧ ಅತೀವ ರೋಷವನ್ನುಂಟುಮಾಡಿದ ಟೌನ್‌ಶೆಂಡ್ ಕಾಯ್ದೆಗಳು ೧೭೬೭ರಲ್ಲಿ ಪಾಸು ಮಾಡಲ್ಪಟ್ಟವು. ಹೊಸದಾಗಿ ನೇಮಕವಾದ ಬ್ರಿಟನ್ನಿನ ಹಣಕಾಸು ಮಂತ್ರಿ ಚಾರ್ಲ್ಸ್ ಟೌನ್‌ಶೆಂಡನು, ಹೊಸ ಆರ್ಥಿಕ ಕಾರ್ಯ ಕ್ರಮವನ್ನು ರೂಪಿಸಲು ನಿರ್ದೇಶಿತನಾದಾಗ, ಬ್ರಿಟಿಷರ ಮೇಲೆ ತೆರಿಗೆಯನ್ನು ಕಡಿಮೆ ಮಾಡಿ, ಅಮೆರಿಕಾದ ಆಮದು ವ್ಯಾಪಾರದ ಮೇಲೆ ತೆರಿಗೆಯನ್ನು ಹೇರಿ ಹೆಚ್ಚು ಸಮರ್ಥವಾಗಿ ಸಂಗ್ರಹಿಸಲು ಕಾರ್ಯಕ್ರಮವನ್ನು ರೂಪಿಸಿದನು. ಅಮೆರಿಕಾದ ಕಾಲೋನಿಗಳಿಗೆ ಆಮದಾಗುತ್ತಿದ್ದ ವಸ್ತುಗಳಾದ ಕಾಗದ, ಗಾಜು, ಸೀಸ, ಟೀ ಮುಂತಾದವುಗಳ ಮೇಲೆ ತೆರಿಗೆ ಹೇರಿ ಅದನ್ನು ಕಟ್ಟುನಿಟ್ಟಾಗಿ ಸಂಗ್ರಹಿಸಲು ಆದೇಶಿಸಿದನು. ಅಮೆರಿಕಾದಲ್ಲಿ ಬ್ರಿಟಿಷ್ ಆಡಳಿತವನ್ನು ಮೇಲ್ವಿಚಾರಣೆ ಮಾಡಲು ಈ ತೆರಿಗೆಯ ಹಣವನ್ನು ಬಳಸಲು ಉದ್ದೇಶಿಸಲಾಗಿತ್ತು.

ಫಿಲಡೆಲ್ಪಿಯಾದ ವಕೀಲ ಜಾನ್ ಡಿಕಿನ್ ಸನ್‌ನು ತನ್ನ ‘‘ಲೆಟರ್ಸ್‌ಆಫ್ ಎ ಪೆನ್ ಸಿಲ್ವೇನಿಯಾ ಫಾರ್ಮರ್’’ಎಂಬ ಲೇಖನದಲ್ಲಿ ಬ್ರಿಟಿಷ್ ಪಾರ್ಲಿಮೆಂಟಿಗೆ ಆಂತರಿಕ ಅಥವಾ ಬಾಹ್ಯ ತೆರಿಗೆಯನ್ನು ಹಾಕುವ ಯಾವುದೇ ಹಕ್ಕಿಲ್ಲ ಎಂದು ವಾದಿಸಿದನು.

ಅಮೆರಿಕಾನ್ ತೀವ್ರವಾದಿಗಳು ಬ್ರಿಟಿಷ್ ವಸ್ತುಗಳ ಬಹಿಷ್ಕಾರಕ್ಕೆ ಕರೆ ನೀಡಿದರು. ಅಲ್ಲಲ್ಲಿ ಬ್ರಿಟಿಷ್ ತೆರಿಗೆ ಅಧಿಕಾರಿಗಳಿಗೂ, ವಸಾಹತುಕಾರರಿಗೂ ಸಂಘರ್ಷಗಳಾದವು. ಬೋಸ್ಟನ್ ಬಂದರಿನಲ್ಲಿ ಗೊಂದಲವಾಗಿ ಮೂವರು ಬೋಸ್ಟನ್ನರು ಕೊಲ್ಲಲ್ಪಟ್ಟರು. ಇದನ್ನು ‘‘ಬೋಸ್ಟನ್ ಕಗ್ಗೊಲೆ’’ ಎಂದು ಕರೆಯಲಾಗಿದೆ. ಈ ಘಟನೆಯನ್ನು ಅಮೆರಿಕಾನ್ನರು ಬ್ರಿಟಿಷರ ಹೃದಯ ಹೀನತೆ ಹಾಗೂ ನಿರಂಕುಶಾಧಿಕಾರದ ಪ್ರತೀಕ ಎಂದು ಬಣ್ಣಿಸಿದರು.

ಬ್ರಿಟಿಷ್ ಪಾರ್ಲಿಮೆಂಟ್ ೧೭೭೦ರಲ್ಲಿ ಟೌನ್‌ಶೆಂಡ್ ತೆರಿಗೆಗಳನ್ನು ಹಿಂದೆಗೆದು ಕೊಂಡಿತು. ಆದರೆ ‘ಇಂಗ್ಲಿಷ್ ಟೀ’ಯ ಮೇಲೆ ತೆರಿಗೆ ಮುಂದುವರಿಯಿತು. ಇದರಿಂದಾಗಿ ಅಮೆರಿಕಾನ್ನರ ಬಹಿಷ್ಕಾರವು ಮುಂದುವರಿಯಿತು.

೧೭೭೦ರಿಂದ ೧೭೭೩ರವರೆಗೆ ಸ್ವಲ್ಪಮಟ್ಟಿಗೆ ಶಾಂತಿ ನೆಲೆಸಿತು. ಆದರೂ ಕೆಲವು ತೀವ್ರವಾದಿಗಳು, ಬ್ರಿಟಿಷ್ ಪಾರ್ಲಿಮೆಂಟ್ ಅಮೆರಿಕಾನ್ನರ ವ್ಯವಹಾರದಲ್ಲಿ ಯಾವಾಗ ಬೇಕಾದರೂ ಮಧ್ಯಪ್ರವೇಶ ಮಾಡುವ ಸಾಧ್ಯತೆಗಳ ಅತೀವ ಚಿಂತೆಯನ್ನು ವ್ಯಕ್ತಪಡಿಸಿ, ಮಸಾಚುಸೆಟ್ಸ್‌ನ ಸ್ಯಾಮುವೆಲ್ ಆ್ಯಡಮ್ಸ್‌ನ ನೇತೃತ್ವದಲ್ಲಿ ಸಂಪೂರ್ಣ ಸ್ವಾತಂತ್ರ್ಯವನ್ನು ಗಳಿಸಲು ಕಾರ್ಯೋನ್ಮುಖರಾದರು. ಸ್ಯಾಮುವೆಲ್ ಅಡಾಮ್ಸನು ಜನರಲ್ಲಿ ಅವರ ಶಕ್ತಿ ಹಾಗೂ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸಿ, ಅವರನ್ನು ಸ್ವಾತಂತ್ರ್ಯಕ್ಕಾಗಿ ಕಾರ್ಯ ಪ್ರವೃತ್ತರಾಗಲು ಕರೆಯಿತ್ತನು. ಅಲ್ಲದೆ ತನ್ನ ಲೇಖನಗಳ ಮೂಲಕ, ಭಾಷಣಗಳ ಮೂಲಕ ಜನರನ್ನು ಹುರಿದುಂಬಿಸಿದನು.

೧೭೭೨ರಲ್ಲಿ ವಸಾಹತುಗಳ ಹಕ್ಕುಗಳನ್ನು ಹಾಗೂ ಸಮಸ್ಯೆಗಳನ್ನು ಚರ್ಚಿಸಲು ‘‘ಕಮಿಟಿ ಆಫ್ ಕರೆಸ್ಪಾಂಡೆನ್ಸ್’’ ರಚಿಸಲ್ಪಟ್ಟಿತು. ಈ ಸಮಿತಿಯು ನ್ಯಾಯಾಂಗವನ್ನು ಬ್ರಿಟೀಷರ ಹಿಡಿತದಿಂದ ಬಿಡಿಸಿ ತಮ್ಮ ಶಾಸನ ಸಭೆಗಳಿಗೆ ಬದ್ಧರಾಗಿಸಲು ಪ್ರಯತ್ನಿಸಿತು. ಇಂತಹ ಸಮಿತಿಗಳು ಪ್ರತಿ ಕಲೋನಿಗಳಲ್ಲಿ ಸ್ಥಾಪಿಸಲ್ಪಟ್ಟವು; ಇವೇ ಮುಂದೆ ಕ್ರಾಂತಿಯ ನೆಲೆಗಳಾದವು..

ಬೋಸ್ಟನ್ ಟೀ ಪಾರ್ಟಿ

ಸ್ಯಾಮುವೆಲ್ ಆ್ಯಡಮ್ಸ್‌ನ ನಾಯಕತ್ವದಲ್ಲಿ ಬ್ರಿಟನ್ನಿನ ವಿರುದ್ಧ ದಂಗೆ ಏಳಲು ಬೋಸ್ಟನ್ ಟೀ ಪಾರ್ಟಿಯು ತೀವ್ರವಾದಿಗಳಿಗೆ ಬಹಳ ಒಳ್ಳೆಯ ಅವಕಾಶವನ್ನು ಒದಗಿಸಿತು. ೧೭೭೦ರ ನಂತರ ಅಮೆರಿಕಾದ ಟೀಯು ಹೆಚ್ಚಾಗಿ ಕಳ್ಳ ಸಾಗಾಣಿಕೆಯಾಗಿ ಬರುತ್ತಿತ್ತು. ತೆರೆಗೆ ರಹಿತವೂ, ಕಡಿಮೆ ಬೆಲೆಯದೂ ಆಗಿದ್ದ ಈ ಟೀಯು ಅಮೆರಿಕಾನ್ನರಲ್ಲಿ ಜನಪ್ರಿಯವಾಗಿದ್ದು, ಈ ವ್ಯಾಪಾರದಲ್ಲಿ ಭಾಗವಹಿಸುತ್ತಿದ್ದ ವ್ಯಾಪಾರಿಗಳಿಗೆ ಬಹಳಷ್ಟು ಲಾಭ ಬರುತ್ತಿತ್ತು. ಈ ಮಧ್ಯೆ, ಹಣಕಾಸಿನ ಮುಗ್ಗಟ್ಟಿನಿಂದ ನರಳುತ್ತಿದ್ದ ಈಸ್ಟ್ ಇಂಡಿಯಾ ಕಂಪನಿಯನ್ನು ಉಳಿಸಲು, ಬ್ರಿಟಿಷ್ ಸರ್ಕಾರವು ಇಂಗ್ಲಿಷ್ ಟೀ ವ್ಯಾಪಾರದ ಏಕಸ್ವಾಮ್ಯತೆಯನ್ನು ಕಂಪನಿಗೆ ನೀಡಿತು. ಕಂಪನಿಯು ಟೀಯನ್ನು ಕಡಿಮೆ ದರಕ್ಕೆ ನೇರವಾಗಿ ಜನರಿಗೆ ಮಾರಾಟ ಮಾಡಿದಾಗ, ಕಳ್ಳ ಸಾಗಾಣಿಕೆ ವ್ಯಾಪಾರದಲ್ಲಿ ಪಾಲುಗೊಳ್ಳು ತ್ತಿದ್ದ ವ್ಯಾಪಾರಿಗಳಿಗೆ ಅಪಾರ ನಷ್ಟ ಉಂಟಾಗಲು ಪ್ರಾರಂಭವಾಯಿತು. ಹೀಗಾಗಿ ತಮ್ಮ ವ್ಯಾಪಾರವನ್ನು ಉಳಿಸಿಕೊಳ್ಳಲು ಹಾಗೂ ಏಕಸ್ವಾಮ್ಯತೆಯ ವ್ಯಾಪಾರವನ್ನು ಕೊನೆಗಾಣಿಸಲು ವರ್ತಕರೂ ಕೂಡ ತೀವ್ರವಾದಿಗಳೊಂದಿಗೆ ಸೇರಿಕೊಂಡರು.

ಎಲ್ಲಾ ಬಂದರುಗಳಲ್ಲಿ ‘ಇಂಗ್ಲಿಷ್ ಟೀ’ ಮೇಲೆ ಬಹಿಷ್ಕಾರವು ಮುಂದುವರಿದಂತೆ, ಬೋಸ್ಟನ್ ಬಂದರಿಗೆ ಇಂಗ್ಲಿಷ್ ಟೀ ಸರಕು ಆಗಮಿಸಿತು. ಈ ಟೀಯನ್ನು ಇಳಿಸಲು ಅಲ್ಲಿಯ ಬ್ರಿಟಿಷ್ ಗವರ್ನರ್ ಕ್ರಮ ಕೈಗೊಂಡನು. ಆದರೆ ೧೭೭೩ನೆಯ ಡಿಸೆಂಬರ್ ೧೬ರ ರಾತ್ರಿ ಕೆಲವು ಅಮೆರಿಕಾನ್ ವಲಸೆಗಾರರು ಮೊಹಾಕ್ ಇಂಡಿಯನ್ನರಂತೆ ವೇಷ ಧರಿಸಿ ಹಡಗನ್ನು ಹೊಕ್ಕು ಅಲ್ಲಿದ್ದ ಟೀಯನ್ನು ಸಮುದ್ರಕ್ಕೆ ಚೆಲ್ಲಿದರು. ಈ ಘಟನೆಗೆ ಕಾರಣರಾದವರನ್ನು ಶಿಕ್ಷಿಸದೇ ಇದ್ದರೆ ತನಗೆ ವಸಾಹತುಗಳ ಮೇಲೆ ಹತೋಟಿ ಕಳೆದು ಹೋಗಿದೆ ಎಂಬ ಭಾವನೆ ವಲಸೆಗಾರರಲ್ಲಿ ಬರಬಹುದೆಂದು ತಿಳಿದು ಬ್ರಿಟಿಷ್ ಸರಕಾರವು ಐದು ಕಾಯ್ದೆಗಳನ್ನು ಪಾಸು ಮಾಡಿತು. ಅಮೆರಿಕಾನ್ನರು ಈ ಕಾಯ್ದೆಗಳನ್ನು ‘ಸಹಿಸಲ ಸಾಧ್ಯ ಕಾಯ್ದೆಗಳು’(ಇಂಟಾಲರಬಲ್ ಆ್ಯಕ್ಟ್) ಎಂದು ಕರೆದರು. ಬೋಸ್ಟನ್ ಬಂದರನ್ನು ಮುಚ್ಚಿ, ಅದನ್ನು ಆರ್ಥಿಕವಾಗಿ ಹೊಸಕಿ ಹಾಕಲು ಪ್ರಯತ್ನಿಸಿತು. ಗವರ್ನರನ ಅಪ್ಪಣೆಯಿಲ್ಲದೆ ಸಭೆ ಸೇರುವುದನ್ನು ನಿಷೇಧಿಸಲಾಯಿತು.

ತ್ವೇಷಮಯವಾದ ಸನ್ನಿವೇಶವನ್ನು ಚರ್ಚಿಸಲು ವಸಾಹತುಗಳ ಪ್ರತಿನಿಧಿಗಳು ೧೭೭೪ನೆಯ ಸೆಪ್ಟೆಂಬರ್ ೫ರಲ್ಲಿ ಫಿಲಡೆಲ್ಫಿಯಾದಲ್ಲಿ ಭೇಟಿಯಾದರು. ಇದನ್ನು ಮೊದಲ ‘‘ಖಂಡಾಂತರ ಕಾಂಗ್ರೆಸ್’’ ಎಂದು ಕರೆಯಲಾಗಿದೆ. ಇಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. ವಲಸೆಗಾರರ ಜೀವನ, ಸ್ವಾತಂತ್ರ್ಯ ಹಾಗೂ ಸಂಪತ್ತಿಗೆ ಸಂಬಂಧಿಸಿದಂತೆ, ತೆರಿಗೆ, ಶಾಸನ ಸಭೆ ಹಾಗೂ ಆಂತರಿಕ ನೀತಿಗೆ ಸಂಬಂಧಿಸಿದಂತೆ ಠರಾವುಗಳನ್ನು ಪಾಸು ಮಾಡಲಾಯಿತು. ‘ಖಂಡಾಂತರ ಸಂಘ’ಗಳನ್ನು ರಚಿಸಿ ಇಂಗ್ಲೆಂಡಿನ ರಾಜನ ಅಧಿಕಾರದ ಸಂಕೇತಗಳನ್ನು ನಿರ್ನಾಮ ಮಾಡಲು ಪ್ರಾರಂಭಿಸಿದರು. ವೃತ್ತಿನಿರತರು, ತೋಟಗಳ ಮಾಲೀಕರು, ಶ್ರೀಮಂತರು, ವಕೀಲರು, ವ್ಯಾಪಾರಿಗಳು, ಬಡವರು ತೀವ್ರವಾದಿಗಳ ಬೆಂಬಲಕ್ಕೆ ನಿಂತರು. ಮಾತೃಭೂಮಿ ಇಂಗ್ಲೆಂಡಿನ ವಿರುದ್ಧ ದಂಗೆ ಏಳಲು ಹಿಂಜರಿಯುತ್ತಿದ್ದವರನ್ನು ಜನಪ್ರಿಯ ಚಳುವಳಿಗೆ ಸೇರಿಸಲಾಯಿತು. ವಿದ್ರೋಹಿಗಳನ್ನು ಶಿಕ್ಷಿಸಲಾಯಿತು. ಸೈನ್ಯವನ್ನು ಕಟ್ಟಿ, ಅದಕ್ಕೆ ಬೇಕಾದ ಸಂಗ್ರಹವನ್ನು ಮಾಡಲಾಯಿತು. ಇಂಗ್ಲೆಂಡಿನ ವಿರುದ್ದ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಲಾಯಿತು.

ಇಂಗ್ಲೆಂಡಿನ ರಾಜನಿಗೆ ತೀವ್ರವಾದಿಗಳೊಂದಿಗೆ ಒಪ್ಪಂದಕ್ಕೆ ಬರುವ ಅವಕಾಶವಿದ್ದರೂ ಯಾವುದೇ ರಿಯಾಯಿತಿಯನ್ನು ಕೊಡಲು ನಿರಾಕರಿಸಿದನು ‘‘ದಾಳವನ್ನು ಹಾಕಿಯಾಯಿತು. ಈಗ ವಸಾಹತುಗಳು ಒಂದೋ ಗೆಲ್ಲಬೇಕು ಇಲ್ಲಾ ಶರಣಾಗಬೇಕು’’ ಎಂದು ಘೋಷಿಸಿದನು.

ಕ್ರಾಂತಿಯ ಪ್ರಾರಂಭ

೧೭೭೫ನೆಯ ಏಪ್ರಿಲ್ ೧೯ರಂದು ಬ್ರಿಟಿಷ್ ಸೇನೆಯು ಮಸಾಚುಸೆಟ್ಸ್‌ನ ಹತ್ತಿರದ ಲೆಕ್ಸಿಂಗ್‌ಟನ್‌ಗೆ ಆಕ್ರಮಿಸಿ ಅಮೆರಿಕಾನ್ ದಂಗೆಕೋರರ ಮೇಲೆ ಗುಂಡು ಹಾರಿಸಿತು. ಕವಿ ರಾಲ್ಫ್ ವಾಲ್ಡೊ ಎಮರ್ಸನ್ ನುಡಿದಂತೆ ‘‘ಆ ಗುಂಡಿನ ಶಬ್ದ ಪ್ರಪಂಚದಾದ್ಯಂತ ಕೇಳಲ್ಪಟ್ಟಿತು.’’ ಇದರ ನಂತರ ಕನ್‌ಕೋರ್ಡ್ ಹಳ್ಳಿಯ ಬಳಿ ಸಾಗಿದ ಬ್ರಿಟಿಷ್ ಸೇನೆಯು, ಮರಳಿ ಬೋಸ್ಟನ್ ನತ್ತ ಸಾಗುತ್ತಿದ್ದಾಗ ಅಮೆರಿಕಾನ್ ಕ್ರಾಂತಿಕಾರಿಗಳು ಅವರ ಮೇಲೆ ದಾಳಿ ಮಾಡಿ ತೀವ್ರ ನಷ್ಟವನ್ನುಂಟು ಮಾಡಿದರು. ಬೋಸ್ಟನ್ ತಲುಪುವ ವೇಳೆಗೆ ಬ್ರಿಟಿಷರು ಸುಮಾರು ೨೫೦ ಜನರನ್ನು ಕಳೆದುಕೊಂಡರಲ್ಲದೆ, ತಮ್ಮ ಪ್ರತಿಷ್ಠೆಗೆ ತೀವ್ರ ಧಕ್ಕೆಯನ್ನು ತಂದುಕೊಂಡರು. ಅಮೆರಿಕಾನ್ನರು ಸುಮಾರು ೯೩ ಜನರನ್ನು ಕಳೆದುಕೊಂಡರು. ಅಮೆರಿಕಾದ ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭವಾಗಿತ್ತು.

ಇದೇ ವೇಳೆಗೆ ವಸಾಹತುಗಳ ಎರಡನೇ ‘‘ಖಂಡಾಂತರ ಕಾಂಗ್ರೆಸ್’’ ೧೭೭೫ರ ಮೇ ೧೦ರಂದು ನಡೆದು ಬ್ರಿಟಿಷರ ವಿರುದ್ಧ ಯುದ್ಧಕ್ಕೆ ಹೋಗಲು ಅದು ನಿರ್ಧರಿಸಿತು. ವರ್ಜೀನಿಯಾದ ಜಾರ್ಜ್ ವಾಷಿಂಗ್‌ಟನ್‌ನನ್ನು ಅಮೆರಿಕಾನ್ ಸೈನ್ಯದ ದಂಡನಾಯಕನಾಗಿ ನೇಮಿಸಲಾಯಿತು. ಕೆಲವು ಅಮೆರಿಕಾನ್ನರಿಗೆ ತಾವು ಇಂಗ್ಲೆಂಡಿನಿಂದ ಪ್ರತ್ಯೇಕವಾಗುವ ಬಗ್ಗೆ ಇನ್ನೂ ಸಂಶಯಗಳಿದ್ದವು. ೧೭೭೫ರ ಜುಲೈ ತಿಂಗಳಲ್ಲಿ ಜಾನ್ ಡಿಕಿನ್ ಸನ್ ನು ಆಲಿವ್ ಬ್ರ್ಯಾಂಚ್ ಪಿಟಿಷನ್‌ವೊಂದನ್ನು ಬರೆದು ವೈರತ್ವವನ್ನು ನಿಲ್ಲಿಸಲು ಕೇಳಿಕೊಂಡನು. ಅಮೆರಿಕಾನ್ನರ ಬೇಡಿಕೆಗಳಿಗೆ ಯಾವುದೇ ಬೆಲೆ ಕೊಡದ ರಾಜನು, ೧೭೭೫ನೆಯ ಆಗಸ್ಟ್ ೨೩ರಂದು ‘‘ವಸಾಹತುಗಳು ದಂಗೆ ಎದ್ದಿವೆ’’ ಎಂದು ಘೋಷಿಸಿ ಅವುಗಳನ್ನು ನಿರ್ದಾಕ್ಷಿಣ್ಯ ವಾಗಿ ಹತ್ತಿಕ್ಕಲು ಆಜ್ಞಾಪಿಸಿದನು.

ನ್ಯೂ ಇಂಗ್ಲೆಂಡಿನ ಕಾಲೋನಿಗಳು ದಂಗೆ ಎದ್ದರೂ ದಕ್ಷಿಣ ಭಾರತದ ಕಾಲೋನಿಗಳು ತನಗೆ ವಿಧೇಯರಾಗಿ ಉಳಿಯಬಹುದೆಂದು ಬ್ರಿಟನ್ ಭಾವಿಸಿತ್ತು; ಏಕೆಂದರೆ ಅದು ಆಫ್ರಿಕನ್ ಕರಿಯರನ್ನೊಳಗೊಂಡ ಗುಲಾಮಗಿರಿ ವ್ಯವಸ್ಥೆಯ ಅಗ್ರೇಸರರಾಗಿದ್ದರು. ದಕ್ಷಿಣದ ವಸಾಹತುಗಳು ಮಾತೃರಾಷ್ಟ್ರ ಬ್ರಿಟನ್ನಿನ ಮೇಲೆ ದಂಗೆ ಎದ್ದರೆ, ತಮ್ಮ ತೋಟಗಳಲ್ಲಿರುವ ಗುಲಾಮರೂ ದಂಗೆ ಏಳಬಹುದೆಂದು ತೋಟಗಳ ಮಾಲೀಕರು ಹೆದರಿದರು. ವರ್ಜೀನಿಯಾದ ಗವರ್ನರ್ ಡನ್‌ಮೋರನು, ಬ್ರಿಟಿಷರ ಪರವಾಗಿ ಹೋರಾಡುವ ಗುಲಾಮರಿಗೆ ಸ್ವಾತಂತ್ರ್ಯದ ಆಸೆಯನ್ನು ತೋರಿಸಿದನು. ಆದರೆ ಹೆಚ್ಚಿನವರು ದಂಗೆಕೋರರ ಪರವಾಗಿ ಸೇರಿಕೊಂಡರು.

ಇದೇ ವೇಳೆಗೆ ಇಂಗ್ಲೆಂಡಿನಿಂಡ ಅಮೆರಿಕಾಕ್ಕೆ ಆಗಮಿಸಿದ, ಬರಹಗಾರನೂ ರಾಜಕೀಯ ಸಿದ್ಧಾಂತವಾದಿಯೂ ಆದ ಥಾಮಸ್ ಫೈನ್‌ನು ತನ್ನ ಲೇಖನಗಳ ಮೂಲಕ ವಂಶ ಪಾರಂಪರ್ಯವಾದ ರಾಜಪ್ರಭುತ್ವವನ್ನು ತೀವ್ರವಾಗಿ ಖಂಡಿಸಿ, ಸ್ವಾವಲಂಬಿ, ಸ್ವತಂತ್ರ್ಯ ಗಣರಾಜ್ಯದ ಸ್ಥಾಪನೆಗೆ ಕರೆಯಿತ್ತನು. ಪ್ರತ್ಯೇಕ ವರದಿಗಳ ಮೇಲೆ ಈ ಅಂಶವೂ ಪ್ರಭಾವ ಬೀರಿತು. ಯುದ್ಧ ಮುಂದುವರಿದಂತೆ ಸ್ವಾತಂತ್ರ್ಯ ಘೋಷಣೆಯ ಕರಡನ್ನು ಸಿದ್ಧಪಡಿಸಲು ವರ್ಜೀನಿಯಾದ ಥಾಮಸ್ ಜಫರ್‌ಸನ್ನನ ನೇತೃತ್ವದಲ್ಲಿ ಸಮಿತಿಯ ರಚನೆಯಾಯಿತು. ಅದರಿಂದ ರಚಿತವಾದ ಕರಡು ೧೭೭೬ನೆಯ ಜುಲೈ ೪ರಂದು ಅಂಗೀಕರಿಸಲ್ಪಟ್ಟು, ಅದರಲ್ಲಿ ಹೊಸ ರಾಷ್ಟ್ರದ ಉದಯವನ್ನು ಸಾರಲಾಯಿತು; ಮಾನವ ಸ್ವಾತಂತ್ರ್ಯದ ಸಿದ್ಧಾಂತವನ್ನು ವಿಶದ ಪಡಿಸಲಾಯಿತು. ಫ್ರೆಂಚ್ ಹಾಗೂ ಇಂಗ್ಲಿಷ್ ರಾಜಕೀಯ ಸಿದ್ಧಾಂತಗಳಿಂದ ಪ್ರೇರೇಪಿತವಾದ ಘೋಷಣೆಯಲ್ಲಿ ಸರ್ಕಾರದ ಬಗೆಗಿನ ಜಾನ್‌ಲಾಕ್‌ನ ಈ ಕೆಳಕಂಡ ಸಾಮಾಜಿಕ ಒಪ್ಪಂದ ವಿಚಾರವನ್ನು ಅಳವಡಿಸಿಕೊಳ್ಳಲಾಯಿತು.

ನಾವು ಈ ಕೆಳಕಂಡ ಸತ್ಯಗಳನ್ನು ಸ್ವಸಾಕ್ಷಿಯೆಂದು ಪರಿಗಣಿಸಿದ್ದೇವೆ; ಎಲ್ಲಾ ಮನುಷ್ಯರು ಸಮಾನರಾಗಿ ಸೃಷ್ಟಿಯಾಗಿದ್ದಾರೆ; ಸೃಷ್ಟಿಕರ್ತ ಅವರಿಗೆ ಪರಭಾರೆ ಮಾಡಲಾಗದ ಕೆಲವು ಹಕ್ಕುಗಳನ್ನು ದಯಪಾಲಿಸಿ ದ್ದಾನೆ; ಅವುಗಳಲ್ಲಿ ಜೀವನ ಸ್ವಾತಂತ್ರ್ಯ ಹಾಗೂ ಸಂತೋಷವನ್ನು ಪಡೆದುಕೊಳ್ಳುವ ಹಕ್ಕುಗಳೂ ಸೇರಿವೆ; ಈ ಹಕ್ಕುಗಳನ್ನು ಜನರಿಗೆ ಒದಗಿಸಲು, ಜನರ ಒಪ್ಪಿಗೆಯ ಮೇರೆಗೆ ಸರ್ಕಾರವನ್ನು ರಚಿಸಲಾಗಿದೆ; ಯಾವುದೇ ರೀತಿಯ ಸರ್ಕಾರ ಎಂದಾದರೂ ಈ ಹಕ್ಕುಗಳಿಗೆ ವಿನಾಶಕಾರಿಯಾಗಿ ವರ್ತಿಸಿದರೆ, ಅದನ್ನು ತಿದ್ದುವ ಅಥವಾ ಅಳಿಸಿ ಹಾಕಿ, ಹೊಸ ಸರ್ಕಾರವನ್ನು ಸೃಷ್ಟಿಸುವ ಅಧಿಕಾರ ಜನರಿಗಿದೆ.

ಜೆಫರ್‌ಸನ್ನನ ಅಭಿಪ್ರಾಯದಲ್ಲಿ

ಅಮೆರಿಕಾದ ಸ್ವಾತಂತ್ರ್ಯಕ್ಕಾಗಿ ಹೋರಾಡುವುದು ಜನರ ಒಪ್ಪಿಗೆಯಾಧಾರದ ಮೇಲೆ ಸರ್ಕಾರವನ್ನು ರಚಿಸಲು ಹೋರಾಡಿದಂತೆ.

ಸೋಲುಗೆಲುವುಗಳು

ಸ್ವಾತಂತ್ರ್ಯ ಘೋಷಿಸಿದ ನಂತರ ಕೆಲವು ತಿಂಗಳುಗಳ ಕಾಲ ಅಮೆರಿಕಾನ್ನರು ಸೈನಿಕವಾಗಿ ತೀವ್ರ ಹಿನ್ನಡೆಯನ್ನು ಅನುಭವಿಸಿದರು. ಆದರೆ ಅದರ ದೃಢಚಿತ್ತತೆ, ಗುರಿಮುಟ್ಟುವ ತನಕ ಹೋರಾಟದ ಛಲ, ಕ್ರಮೇಣ ಒಳ್ಳೆಯ ಲಾಭವನ್ನು ಗಳಿಸಿಕೊಟ್ಟಿತು. ಅಮೆರಿಕಾನ್ನರು ಜಾರ್ಜ್ ವಾಷಿಂಗ್‌ಟನ್‌ನ ನೇತೃತ್ವದಲ್ಲಿ ಬ್ರಿಟಿಷರನ್ನು ದಿಟ್ಟವಾಗಿ ಎದುರಿಸಿದರು. ೧೭೭೭ರಲ್ಲಿ ಬ್ರಿಟಿಷರು ಸಾರಟೋಗದಲ್ಲಿ ಶರಣಾಗತರಾದರು. ಇದೇ ವೇಳೆ ಬೆಂಜಮಿನ್ ಫ್ರಾಂಕ್ಲಿನ್‌ನ ರಾಯಭಾರದಿಂದಾಗಿ ಫ್ರಾನ್ಸ್ ಅಮೆರಿಕಾನ್ನರಿಗೆ ಸಹಾಯ ನೀಡಲು ಮುಂದೆ ಬಂದಿತು; ಇದರಿಂದ ಯುದ್ಧವ್ಯಾಪ್ತಿ ವಿಸ್ತರಿಸಿತು. ಸ್ಪೆಯಿನ್ ಹಾಗೂ ಹಾಲೆಂಡ್‌ಗಳೂ ತಮ್ಮ ಬೆಂಬಲ ನೀಡಿದವು.

ಅಮೆರಿಕಾದ ದಕ್ಷಿಣ ಭಾಗದಲ್ಲಿ ಬೆಂಬಲ ಪಡೆಯಲು ವಿಫಲರಾದ ಬ್ರಿಟೀಷರು ೧೭೮೧ರ ಅಕ್ಟೋಬರ್‌ನಲ್ಲಿ ಅಮೆರಿಕಾನ್ನರಿಗೆ ಶರಣಾಗತರಾದರು. ಕ್ರಿ.ಶ.೧೮೭೩ರಲ್ಲಿ ಪ್ಯಾರಿಸ್ ಒಪ್ಪಂದವಾಯಿತು. ಬೆಂಜಮಿನ್ ಫ್ರಾಂಕ್ಲಿನ್, ಜಾನ್ ಆ್ಯಡಮ್ಸ್‌ನ ಮತ್ತು ಜಾನ್ ಜೇಯು ಅಮೆರಿಕಾವನ್ನು ಪ್ರತಿನಿಧಿಸುತ್ತಿದ್ದರು. ಬ್ರಿಟನ್ ಅಮೆರಿಕಾದಲ್ಲಿ ಇದುವರೆಗೆ ತನ್ನ ಆಡಳಿತದ ಹತೋಟಿಯಲ್ಲಿದ್ದ ಹದಿಮೂರು ವಸಾಹತುಗಳ ಸ್ವಾತಂತ್ರ್ಯ, ಹಕ್ಕುಗಳೂ ಹಾಗೂ ಸಾರ್ವಭೌಮತೆಯನ್ನು ಒಪ್ಪಿಕೊಂಡಿತು.

ಈಗ ಹದಿಮೂರು ವಸಾಹತುಗಳನ್ನು ಒಂದು ರಾಷ್ಟ್ರವಾಗಿ ಒಗ್ಗೂಡಿಸುವ ಬೃಹತ್ ಕಾರ್ಯ ಕ್ರಾಂತಿಯ ನಾಯಕನ ಮುಂದಿತ್ತು.

ರಾಜ್ಯಗಳ ಸಂವಿಧಾನಗಳು

‘‘ಪ್ರತಿಯೊಬ್ಬ ಮತ್ತು ಪ್ರಪಂಚದ ಪ್ರತಿಯೋರ್ವನು ಸ್ವ-ಸರ್ಕಾರದ ಹಕ್ಕನ್ನು ಹೊಂದಿರುವನು’’ ಎಂದು ಥಾಮಸ್ ಜೆಫರ್‌ಸನ್‌ನು ೧೯೭೦ರಲ್ಲಿ ನುಡಿಯುತ್ತಾನೆ.

ಕ್ರಾಂತಿಯಲ್ಲಿ ಅಮೆರಿಕಾನ್ನರ ಯಶಸ್ಸು, ಅವರಿಗೆ ತಮ್ಮ ಸ್ವಾತಂತ್ರ್ಯ ಘೋಷಣೆಯಲ್ಲಿ ವ್ಯಕ್ತಪಡಿಸಿದ ತತ್ವಗಳಿಗೆ ಕಾನೂನಿನ ರೂಪಕೊಡಲು ಅವಕಾಶ ಮಾಡಿಕೊಟ್ಟಿತು. ಹಲವಾರಸು ರಾಜ್ಯಗಳು ತಮ್ಮ ಸಂವಿಧಾನಗಳಲ್ಲಿ ತಮ್ಮ ಜನರಿಗೆ ಸಂತೋಷ ಹಾಗೂ ಸುರಕ್ಷತೆಗಳಿಗೆ ಅನುಕೂಲವಾಗುವ ಅತ್ಯುತ್ತಮ ಅಂಶಗಳನ್ನು ಸೇರಿಸಿಕೊಳ್ಳಲು ಪ್ರಾರಂಭಿಸಿತು.

೧೭೭೬ರಲ್ಲಿ ಜಾನ್ ಡಿಕಿನ್‌ಸನ್‌ನು ‘‘ಆರ್ಟಿಕಲ್ಸ್ ಆಪ್ ಕಾನ್ ಫೆಡರೇಷನ್, ಮತ್ತು ಪರ್‌ಪೆಚುವಲ್ ಯೂನಿಯನ್’’ನ್ನು ತಯಾರಿಸಿದನು. ೧೭೮೧ರಲ್ಲಿ ಹಲವು ರಾಜ್ಯಗಳು ಅವುಗಳನ್ನು ಒಪ್ಪಿಕೊಳ್ಳುವುದರೊಂದಿಗೆ ಅವುಗಳು ಜಾರಿಗೆ ಬಂದವು. ಆದರೆ ಈ ಸಂವಿಧಾನವು ನಿರ್ಮಿಸಿದ ಸರ್ಕಾರದ ಚೌಕಟ್ಟು ತುಂಬಾ ದುರ್ಬಲವಾಗಿತ್ತು.

ಸಾಂವಿಧಾನಿಕ ಸಭೆ

ಪ್ಯಾರಿಸ್ ಒಪ್ಪಂದ(೧೭೬೩) ಹಾಗೂ ಸಂವಿಧಾನ ರಚನೆಯಾದ ನಡುವಿನ ಅವಧಿಯಲ್ಲಿ ರಾಜ್ಯಗಳು ಕೇವಲ ‘‘ಮರಳಿನ ಹಗ್ಗ’’ದಿಂದ ಕಟ್ಟಲ್ಪಟ್ಟಿತು ಎಂದು ಜಾರ್ಜ್ ವಾಷಿಂಗ್‌ಟನ್ ಹೇಳುತ್ತಾನೆ.

೧೭೮೩ರಲ್ಲಿ ಫಿಲಡೆಲ್ಫಿಯಾ ಸ್ಪೇಟ್ ಹೌಸ್‌ನಲ್ಲಿ ಜಾರ್ಜ್ ವಾಷಿಂಗ್‌ಟನ್‌ನ ನೇತೃತ್ವದಲ್ಲಿ ಫೆೆಡರಲ್ ಸಮ್ಮೇಳನವು ನಡೆಯಿತು. ವಿವಿಧ ಕ್ಷೇತ್ರಗಳಲ್ಲಿ ರಾಜ್ಯಾಡಳಿತ, ಸಂವಿಧಾನಾತ್ಮಕ ಕ್ರಾಂತಿ ಇತ್ಯಾದಿಗಳಲ್ಲಿ ಪಳಗಿದ ಅನುಭವಿ ರಾಜಕೀಯ ತಜ್ಞರು, ಮುತ್ಸದ್ದಿಗಳು ಇಲ್ಲಿದ್ದರು. ಜಿ.ಮೋರಿಸ್, ಜೇಮ್ಸ್ ವಿಲ್ಸನ್, ಬೆಂಜಮಿನ್ ಫ್ರಾಂಕ್ಲಿನ್, ಜೇಮ್ ಮೆಡೆಸನ್, ರಾಫಸ್ ಕಿಂಗ್, ಎಲ್ ಬ್ರಿಜ್ ಗೆರಿ, ರೋಜರ್ ಶರ್ ಮನ್, ಅಲೆಗ್ಸಾಂಡರ್ ಹ್ಯಾಮಿಲ್ ಟನ್ ಮುಂತಾದವರಿದ್ದರು. ಥಾಮಸ್ ಜೆಫರ್ ಸನ್ ಹಾಗೂ ಜಾನ್ ಆ್ಯಡಮ್ಸ್‌ನ ಇಬ್ಬರೂ ಯುರೋಪಿನಲ್ಲಿದ್ದ ಕಾರಣ ಸಭೆಯಲ್ಲಿ ಹಾಜರಿರಲಿಲ್ಲ. ಒಟ್ಟು ೫೫ ಪ್ರತಿನಿಧಿಗಳಿದ್ದು ಅವರ ಸರಾಸರಿ ವಯಸ್ಸು ೪೨ ಆಗಿತ್ತು.

ಕೇವಲ ‘‘ಆರ್ಟಿಕಲ್ಸ್ ಆಫ್ ಕಾನ್‌ಫೆಡರೇಷನ್’’ಗೆ ತಿದ್ದುಪಡಿ ತರುವ ಕಾರ್ಯ ಸೂಚಿ ಮಾತ್ರ ಇದರ ಮುಂದಿದ್ದರೂ, ಅದನ್ನು ಕಡೆಗಣಿಸಿ ಸಂಪೂರ್ಣವಾಗಿ ಹೊಸ ಸರ್ಕಾರ ವ್ಯವಸ್ಥೆಯನ್ನು ರೂಪಿಸಲು ಈ ಪ್ರತಿನಿಧಿಗಳು ಮುಂದಾದರು.

ಸ್ಥಳೀಯ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರ ಸರ್ಕಾರ ಈ ಎರಡು ಶಕ್ತಿಗಳ ವಿಮರ್ಶೆ ನಡೆಸಿ, ರಾಷ್ಟ್ರೀಯ ಸರ್ಕಾರದ ಅಧಿಕಾರ ಹಾಗೂ ಕಾರ್ಯಗಳನ್ನು ಅತಿ ಎಚ್ಚರದಿಂದ ನಿರೂಪಿಸಿದನು. ರಾಷ್ಟ್ರೀಯ ಸರ್ಕಾರಕ್ಕೆ ನಿಜವಾದ ಅಧಿಕಾರವಿರಬೇಕು ಎಂದು ನಿರ್ಧರಿಸಿ, ಅದಕ್ಕೆ ಹಣ ಟಂಕಿಸುವ, ವ್ಯಾಪಾರ-ವಾಣಿಜ್ಯವನ್ನು ನಿಯಂತ್ರಿಸುವ, ಯುದ್ಧ ಯಾ ಶಾಂತಿಯನ್ನು ಮಾಡಿಕೊಳ್ಳುವ ಅಧಿಕಾರವನ್ನು ನೀಡಿದರು.

ಫಿಲಡೆಲ್ಫಿಯಾದಲ್ಲಿ ಸಭೆ ಸೇರಿದ್ದ ಹದಿನೆಂಟನೆ ಶತಮಾನದ ರಾಜಕೀಯತಜ್ಞರು ಮಾಂಟೆಸ್ಕ್ಯೂನ ರಾಜಕೀಯ ಶಕ್ತಿಯ ಸಮತೋಲನ ಸಿದ್ಧಾಂತ ಅಥವಾ ‘‘ಅಧಿಕಾರ ವಿಭಜನೆ ಸಿದ್ಧಾಂತ’’ದಲ್ಲಿ ನಂಬಿಕೆಯಿಟ್ಟವರಾಗಿದ್ದರು. ಈ ನಂಬಿಕೆಯು ಅವರನ್ನು ಮೂರು ಸಮಾನವಾದ, ಒಂದಕ್ಕೊಂದು ಪೂರಕವಾದ ಸರ್ಕಾರದ ವಿಭಾಗಗಳನ್ನು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ರಚಿಸಲು ಪ್ರಭಾವ ಬೀರಿತು. ಯಾವ ಅಂಗವೂ ಇನ್ನೊಂದು ಅಂಗದ ಮೇಲೆ ಸವಾರಿ ಮಾಡದಂತೆ, ಅವುಗಳ ಅಧಿಕಾರ ವ್ಯಾಪ್ತಿಯನ್ನು ನಿರ್ಧರಿಸಿದರು. ಅಲ್ಲದೆ ದೊಡ್ಡ ರಾಜ್ಯಗಳು ಸಣ್ಣ ರಾಜ್ಯಗಳ ಮೇಲೆ ಯಜಮಾನತ್ವವನ್ನು ಸಾಧಿಸುವುದನ್ನು ತಪ್ಪಿಸಲು ಸೆನೆಟ್ ಸಭೆಯನ್ನು ಸೃಷ್ಟಿಸಿ ಎಲ್ಲಾ ರಾಜ್ಯಗಳಿಗೂ ಸಮಾನ ಪ್ರಾತಿನಿಧ್ಯವನ್ನು ಒದಗಿಸಿದರು.

ಯುರೋಪಿನ ಜ್ಞಾನೋದಯ ಕಾಲದ ಕೂಸುಗಳಾಗಿದ್ದ ಸಂವಿಧಾನ ನಿರ್ಮಾಪಕರು ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಸಾರ್ವಜನಿಕ ಮೌಲ್ಯಗಳನ್ನು ಬೆಳೆಸಲು ಪ್ರಯತ್ನಿಸಿದರು.

ಬಿಲ್ ಆಫ್ ರೈಟ್ಸ್

ಪ್ರತಿನಿಧಿಗಳು ೧೭೮೭ನೆಯ ಸೆಪ್ಟೆಂಬರ್ ೧೭ರಂದು ಸಂವಿಧಾನದ ಅಂತಿಮ ಕರಡಿಗೆ ಸಹಿ ಮಾಡಿದರು. ಆದರೂ ಸಂವಿಧಾನದ ಜಾರಿಗೆ ಕೆಲವು ತೊಡಕುಗಳುಂಟಾಯಿತು. ಬಲಿಷ್ಠ ಕೇಂದ್ರ ಸರ್ಕಾರದ ನಿರ್ಮಾಣಕ್ಕೆ ಸಂಬಂಧಿಸಿದಂತೆ ಒಕ್ಕೂಟವಾದಿಗಳು(ಫೆಡರಿಲಿಸ್ಟ್) ಹಾಗೂ ಒಕ್ಕೂಟ ವಿರೊಧಿಗಳು (ಆ್ಯಂಟಿ ಫೆೆಡರಲಿಸ್ಟ್) ಎಂದು ಬಣಗಳು ಹುಟ್ಟಿಕೊಂಡವು. ಒಕ್ಕೂಟ ವಿರೋಧಿಗಳು ರಾಜ್ಯಗಳ ಸಡಿಲ ಒಕ್ಕೂಟಗಳ ಪರವಾಗಿದ್ದರು; ಅಂದರೆ ಬಲಿಷ್ಠ ಕೇಂದ್ರದ ವಿರೋಧಿಯಾಗಿದ್ದರು. ವರ್ಜೀನಿಯಾ ರಾಜ್ಯವು ಈ ಚಳುವಳಿಯ ಮುಂಚೂಣಿಯಲ್ಲಿತ್ತು.

ಸಂವಿಧಾನದಲ್ಲಿ ವೈಯಕ್ತಿಕ ಹಕ್ಕುಗಳು ಹಾಗೂ ಸ್ವಾತಂತ್ರ್ಯಗಳು ಸರಿಯಾಗಿ ಪ್ರತಿನಿಧಿಸಲ್ಪಟ್ಟಿಲ್ಲ ಎಂಬುದು ಒಕ್ಕೂಟ ವಿರೋಧಿಗಳ ವಾದವಾಗಿತ್ತು. ವರ್ಜೀನಿಯಾದ ಜಾರ್ಜ್‌ಮೇಸನ್ ಹಾಗೂ ಪ್ಯಾಟ್ರಿಕ್ ಹೆನ್ರಿಯು ವೈಯಕ್ತಿಕ ಹಕ್ಕುಗಳ ಬಗ್ಗೆ ಹೆಚ್ಚಿನ ಪ್ರಚಾರ ನಡೆಸಿದರು. ಹೀಗಾಗಿ ೧೭೮೯ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ಮೊದಲ ಸಂವಿಧಾನದ ಬಗೆಗಿನ ಕಾಂಗ್ರೆಸ್‌ನಲ್ಲಿ ವೈಯಕ್ತಿಕ ಹಕ್ಕುಗಳ ಘೋಷಣೆಯನ್ನು ಅಳವಡಿಸಿಕೊಳ್ಳುವ ಬಗ್ಗೆ ಸಂಪೂರ್ಣ ಒಮ್ಮತ ಮೂಡಿಬಂದಿತು. ಹಕ್ಕುಗಳ ಬಗ್ಗೆ ಹತ್ತು ತಿದ್ದುಪಡಿಗಳನ್ನು ತಂದು ಅವುಗಳನ್ನು ಸಂವಿಧಾನದ ಭಾಗವನ್ನಾಗಿ ಮಾಡಿದರು. ಈ ತಿದ್ದುಪಡಿಗಳನ್ನು ಒಟ್ಟಾಗಿ ಬಿಲ್ ಆಫ್ ರೈಟ್ಸ್ ಅಥವಾ ಹಕ್ಕುಗಳ ಶಾಸನ ಎಂದು ಕರೆಯಲಾಗಿದೆ. ಅಭಿವೃಕ್ತಿ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ಸಭೆ ಸೇರುವ ಸ್ವಾತಂತ್ರ್ಯ, ಪ್ರತಿಭಟಿಸುವ ಸ್ವಾತಂತ್ರ್ಯ ಹಾಗೂ ಬದಲಾವಣೆ ಕೋರುವ ಸ್ವಾತಂತ್ರ್ಯ- ಇವೇ ಮುಂತಾದವುಗಳನ್ನು ಅಳವಡಿಸಿ ಅವುಗಳಿಗೆ ಸಂಪೂರ್ಣ ರಕ್ಷಣೆಯನ್ನು ದೃಢೀಕರಿಸಲಾಯಿತು.

ಬಿಲ್ ಆಫ್ ರೈಟ್ಸನ್ನು ಸೇರಿಸಿದಂದಿನಿಂದ ಇಂದಿನವರೆಗೆ ಕೇವಲ ೧೬ ತಿದ್ದುಪಡಿಗಳನ್ನು ಮಾತ್ರ ಮಾಡಲಾಗಿದೆ. ಈ ತಿದ್ದುಪಡಿಗಳು ಒಕ್ಕೂಟ ಸರ್ಕಾರದ ಚೌಕಟ್ಟು ಹಾಗೂ ಕಾರ್ಯ ವಿಧಾನವನ್ನು ಬದಲಾಯಿಸಿದ್ದರೂ ಅವು ಬಿಲ್ ಆಫ್ ರೈಟ್ಸ್‌ನ ನಿರ್ದೇಶನವನ್ನು ಅನುಸರಿಸಿ, ವೈಯಕ್ತಿಕ ಹಕ್ಕುಗಳು ಹಾಗೂ ಸ್ವಾತಂತ್ರ್ಯಗಳನ್ನು ವಿಸ್ತರಿಸಿದವು. ಅಮೆರಿಕಾದ ಸ್ವಾತಂತ್ರ್ಯ ಕ್ರಾಂತಿಯು ಈ ರೀತಿಯಲ್ಲಿ ಹದಿಮೂರು ವಸಾಹತುಗಳಿಗೆ ಮಾತ್ರ ಸ್ವಾತಂತ್ರ್ಯ ತರಲಿಲ್ಲ; ಅವು ಅಮೆರಿಕಾನ್ನರಿಗೆ ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಹಕ್ಕುಗಳನ್ನು ನೀಡಿತು. ಅವುಗಳಿಗೆ ಎಂದೂ ತೊಂದರೆಯಾಗದಂತೆ ಸಂವಿಧಾನಾತ್ಮಕ ರಕ್ಷಣೆಯನ್ನು ನೀಡುವುದರಲ್ಲಿ ಯಶಸ್ವಿಯಾಯಿತು. ಮಾನವ ಸ್ವಾತಂತ್ರ್ಯದ ವಿಕಾಸದಲ್ಲಿ ಅಮೆರಿಕಾದ ಸ್ವಾತಂತ್ರ್ಯ ಸಂಗ್ರಾಮವು ಒಂದು ಶ್ರೇಷ್ಠ ಮೈಲಿಗಲ್ಲಾಗಿದೆ.

 

ಪರಾಮರ್ಶನ ಗ್ರಂಥಗಳು

೧. ಹೇನ್ ಡಿ.ಸಿ. ಮತ್ತು ಇತರರು, ೧೯೮೫. ದಿ ಗ್ರೇಟ್ ರಿಪಬ್ಲಿಕ್: ಎ ಹಿಸ್ಟರಿ ಆಫ್ ದಿ ಅಮೆರಿಕನ್ ಪೀಪಲ್, ಎರಡು ಸಂಪುಟಗಳು.

೨. ಡೇನಿಯಸ್ ಬೂಸ್ಟಿನನ್ ಜೆ., ೧೯೭೫. ದಿ ಅಮೆರಿಕನ್ಸ್, ಮೂರು ಸಂಪುಟಗಳು, ರ‌್ಯಾಂಡಂ ಹೌಸ್.

೩. ಗ್ಯಾರಿನ್ಯಾಶ್ ಬಿ. ಮತ್ತು ಇತರರು, ೧೯೯೦. ದಿ ಅಮೆರಿಕನ್ ಪೀಪಲ್: ಕ್ರಿಯೇಟಿಂಗ್ ಎ ನೇಷನ್ ಆ್ಯಂಡ್ ಎ ಸೊಸೈಟಿ, ಎರಡು ಸಂಪುಟಗಳು, ಹಾರ್ಪರ್ ಕಾಲಿನ್ಸ್.

೪. ರಿಚರ್ಡ್ ಹೆಚ್.ಫೆರಲ್, ೧೯೭೫. ಅಮೆರಿಕಾನ್ ಡಿಫ್ಲೋಮಸಿ: ಎ ಹಿಸ್ಟರಿ, ನ್ಯೂಯಾರ್ಕ್.

೫. ಪಾರ್ಕ್ಸ್ ಹೆಚ್.ಬಿ., ೧೯೮೬. ದಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ: ಎ ಮಿಸ್ಟರಿ, ನವದೆಹಲಿ.