ಅಂತರ್‌ಯುದ್ಧ(ಸಿವಿಲ್ ವಾರ್)

ಒಂದು ತಿಂಗಳಿಗೂ ಮುಂಚೆ ೧೯೬೧ನೆಯ ಮಾರ್ಚ್ ೪ರಂದು ಅಬ್ರಹಾಂ ಲಿಂಕನ್ ಅಧ್ಯಕ್ಷನಾಗಿ ಪ್ರಮಾಣ ವಚನ ಸ್ವೀಕರಿಸಿ ತನ್ನ ಪ್ರಾರಂಭಿಕ ಭಾಷಣದಲ್ಲಿ ಅವನು ಕಾನೂನಿಗನುಸಾರವಾಗಿ ಗುಲಾಮಗಿರಿಯ ಅನೂರ್ಜಿತವೆಂದು ಕರೆದು ಪ್ರತ್ಯೇಕತೆಯನ್ನು ಮಾನ್ಯ ಮಾಡಲು ನಿರಾಕರಿಸಿದನು. ಒಗ್ಗೂಡುವುದರ ಬಂಧಗಳನ್ನು ಉಳಿಸಬೇಕೆಂಬ ಕೋರಿಕೆಯೊಂದಿಗೆ ಅವನ ಭಾಷಣ ಮುಕ್ತಾಯವಾಗಿತ್ತು. ಆದರೆ ದಕ್ಷಿಣ ಇದಕ್ಕೆ ಕಿವಿಗೊಡಲೇಯಿಲ್ಲ- ಮಾತ್ರವಲ್ಲ, ಏಪ್ರಿಲ್ ೧೦ರಂದು ದಕ್ಷಿಣ ಕೆರೋಲಿನಾ ಬಂದರಿನ ಚಾರ್ಲ್ಸ್‌ಟನ್‌ನಲ್ಲಿಯ ಸಂಟರ್ ಕೋಟೆಯ ಮೇಲೆ ಗುಂಡಿನ ಮಳೆಗೆರೆದರು. ಉತ್ತರದವರೂ ಹಿಂಜರಿಯಲಿಲ್ಲ. ವಜಾ ಮಾಡಲಾದ ಏಳು ರಾಜ್ಯಗಳ ಜನರು ತಮ್ಮ ಅಧ್ಯಕ್ಷನಾದ ಜೆಫರ್‌ಸನ್ ಡೇವಿಸ್‌ನ ಮನವಿಗೆ ಓಗೊಟ್ಟರು. ಹೀಗೆ ಇಷ್ಟು ದೀರ್ಘಕಾಲ ನಿಷ್ಠರಾಗಿದ್ದ ಗುಲಾಮ ರಾಜ್ಯಗಳು ಏನು ಕ್ರಮ ಕೈಗೊಳ್ಳಬಹುದೆಂದು ಎರಡೂ ಪಕ್ಷಗಳು ಆತಂಕದಿಂದ ನಿರೀಕ್ಷಿಸುತ್ತಿದ್ದವು. ಏಪ್ರಿಲ್ ೧೭ರಂದು ವರ್ಜೀನಿಯಾ ಅಪಾಯಕಾರಿ ಕ್ರಮವನ್ನು ಕೈಗೆತ್ತಿಕೊಂಡಿತು. ಶೀಘ್ರದಲ್ಲಿಯೇ ಅರ್ ಕಾನ್ಸಾಸ್ ಮತ್ತು ಉತ್ತರ ಕೆರೋಲಿನಾಗಳೂ ಕೂಡ ಅದನ್ನೇ ಅನುಸರಿಸಿದವು. ಯಾವುದೇ ರಾಜ್ಯವು ವರ್ಜೀನಿಯಾದಷ್ಟು ದಿವ್ಯ ನಿರ್ಲಕ್ಷ್ಯದಿಂದ ಒಕ್ಕೂಟವನ್ನು ಬಿಡಲಿಲ್ಲ. ವರ್ಜೀನಿಯಾದೊಂದಿಗೆ ಕರ್ನಲ್ ರಾಬರ್ಟ್ ಇಲೀ ತನ್ನ ಸಂಸ್ಥಾನದ ಮೇಲಿನ ನಿಷ್ಠೆಯಿಂದಾಗಿ ಕೇಂದ್ರದ ಸೈನ್ಯದ ದಂಡನಾಯಕ ಹುದ್ದೆಯನ್ನೇ ಬಿಟ್ಟುಕೊಟ್ಟ. ವಿಶಾಲವಾದ ಒಕ್ಕೂಟ ಹಾಗೂ ಮುಕ್ತವಾದ ಉತ್ತರ ಜಮೀನಿನ ನಡುವೆ ಇದ್ದ ಗಡಿ ಸಂಸ್ಥಾನಗಳು ಅನಿರೀಕ್ಷಿತವಾಗಿ ರಾಷ್ಟ್ರೀಯತಾ ಭಾವನೆ ಯನ್ನು ಸೂಚಿಸಿ, ಕೇಂದ್ರದೊಂದಿಗಿನ ತಮ್ಮ ಸಂಬಂಧವನ್ನು ಉಳಿಸಿಕೊಂಡವು.

ಪ್ರತಿಯೊಂದು ವಿಭಾಗದ ಜನರು ಕೂಡ ಶೀಘ್ರ ವಿಜಯ ಸಾಧಿಸುವತ್ತ ಅಪಾರ ಆಶಯ ಹೊತ್ತು ಯುದ್ಧಾರಂಭ ಮಾಡಿದ್ದರಾದರೂ, ಉತ್ತರವು ಅದರ ವಾಸ್ತವಿಕ ಸಂಪನ್ಮೂಲಗಳು, ಮಾನವಶಕ್ತಿ, ಶಸ್ತ್ರಾಸ್ತ್ರಗಳ ತಯಾರಿಕೆಗೆ ವಿಪುಲ ಸೌಕರ್ಯಗಳನ್ನು ಹೊಂದಿದ್ದು, ಶಸ್ತ್ರಾಸ್ತ್ರಗಳು, ಬಟ್ಟೆಬರೆ ಮತ್ತಿತರ ಸರಬರಾಜುಗಳನ್ನು ಧಾರಾಳವಾಗಿ ಹೊಂದಿದ್ದು ಸಾಕಷ್ಟು ಉತ್ತಮ ಸ್ಥಿತಿಯಲ್ಲಿದ್ದುದು ಸ್ಪಷ್ಟವಾಗಿತ್ತು.

ಯುದ್ಧಾರಂಭದಲ್ಲಿ ಜಲಸೇನೆಯ ಬಹುಭಾಗವು ಕೇಂದ್ರದ ಹತೋಟಿಯಲ್ಲಿತ್ತು. ಆದರೆ ಅದು ಚೆಲ್ಲಾಪಿಲ್ಲಿಯಾಗಿ ನಿಶ್ಶಕ್ತವಾಗಿತ್ತು. ಜಲಸೇನೆಯ ಕಾರ್ಯದರ್ಶಿ ಜಿಡಿಯನ್ ವೆಲ್ಸ್ ಅದನ್ನು ಸಬಲಗೊಳಿಸಲು ಸೂಕ್ತ ಕ್ರಮ ಕೈಗೊಂಡನು. ಅನಂತರ ಲಿಂಕನ್ ದಕ್ಷಿಣ ಕಡಲ ತೀರಗಳನ್ನು ಮುಚ್ಚಿಬಿಡುವಂತೆ ಘೋಷಿಸಿದನು. ಮೊದಮೊದಲು ಆ ಬಗ್ಗೆ ನಿರ್ಲಕ್ಷ್ಯದಿಂದಿದ್ದರೂ, ದಕ್ಷಿಣಕ್ಕೆ ಅತ್ಯಂತ ಅಗತ್ಯವಾಗಿದ್ದ, ಯುರೋಪಿಗೆ ಹತ್ತಿಯನ್ನು ಕಳುಹಿಸುವುದು ಮತ್ತು ಶಸ್ತ್ರಾಸ್ತ್ರಗಳ ಆಮದು, ಉಡುಪು ಮತ್ತು ವೈದ್ಯಕೀಯ ಸರಬರಾಜುಗಳ ಹಡಗುಗಳಿಂದ ಸಾಗಿ ಬರುವುದನ್ನು ಕ್ರಮೇಣ ಪ್ರತಿಬಂಧಿಸ ಲಾಯಿತು. ಡೇವಿಡ್ ಫೆರಾಗಟ್ ನಡೆಸಿದ ಎರಡು ವಿಶಿಷ್ಟ ಕಾರ್ಯಾಚರಣೆಗಳಲ್ಲಿ ದಕ್ಷಿಣದ ಅತ್ಯಂತ ವಿಶಾಲನಗರವಾದ ನ್ಯೂ ಅರ್ಲಿಯನ್ಸ್ ಮತ್ತು ಒಕ್ಕೂಟಕ್ಕೆ ಸೇರಿದ್ದ ಉಕ್ಕು ತುಂಬಿದ ಹಡಗು-ಇವೆರಡಕ್ಕೂ ಮುತ್ತಿಗೆ ಹಾಕಲಾಯಿತು. ಟೆನ್ನೂಸ್ಸಿಯಲ್ಲಿನ ದೀರ್ಘ ಒಕ್ಕೂಟ ರಾಜ್ಯಗಳನ್ನು ವಶಪಡಿಸಿಕೊಳ್ಳುತ್ತ ಅವರು ಸಂಸ್ಥಾನದ ಬಹುಮಟ್ಟಿಗೆ ಎಲ್ಲ ಭಾಗವನ್ನು ಆಕ್ರಮಿಸಿಕೊಂಡರು. ಅತ್ಯಂತ ಮುಖ್ಯವಾದ ಮೆಂಫಿಸ್ ಬಂದರನ್ನು ವಶಪಡಿಸಿಕೊಳ್ಳು ವುದರೊಂದಿಗೆ ಕೇಂದ್ರವು ಒಕ್ಕೂಟದ ನಡುಮಧ್ಯ ಭಾಗದ ಕಡೆ ಮುನ್ನಡೆಯಿತು. ಶಿಲಾದ ಆಕ್ರಮಣದೊಂದಿಗೆ ಜನರಲ್ ಯೂಲಿಸಿಸ್ ಎಸ್.ಗ್ರಾಂಟನ ಮುಂದಾಳ್ತನದಲ್ಲಿ ಕೇಂದ್ರದ ಸೈನಿಕರು ದಕ್ಷಿಣದತ್ತ ಇನ್ನಷ್ಟು ಮುಂದುವರಿಯುವಲ್ಲಿ ಸಫಲರಾದರು. ಪ್ರಾರಂಭದಲ್ಲಿ ಅಡೆತಡೆಗಳನ್ನೆದುರಿಸಿದರೂ ಗ್ರಾಂಟನು ಪಶ್ಚಿಮದಲ್ಲಿ ಅತ್ಯಂತ ಬಲಿಷ್ಠವಾದ ಒಕ್ಕೂಟದ ಸೈನ್ಯವನ್ನು ಸದೆಬಡಿದು ವಿಶಾಲವಾದ ನದಿಯನ್ನು ಕೇಂದ್ರಕ್ಕೆ ಸಮರ್ಪಿಸಿದನು.

ಇತ್ತ ವರ್ಜೀನಿಯಾದಲ್ಲಿ ಕೇಂದ್ರವು ಅಪಜಯಗಳ ಸರಮಾಲೆಯನ್ನೇ ಎದುರಿಸ ಬೇಕಾಯಿತು. ಒಕ್ಕೂಟದ ರಾಜಧಾನಿಯಾದ ರಿಚ್ಮಂಡ್‌ಗೆ ಎರಡು ಅನುಕೂಲಗಳಿದ್ದವು. ರಿಚ್ಮಂಡ್ ಮತ್ತು ವಾಷಿಂಗಟನ್‌ಗಳ ನಡುವೆ ರಸ್ತೆಯನ್ನು ತಡೆಯುವ ಹಲವಾರು ಝರಿಗಳು ಹರಿಯುತ್ತಿದ್ದುದೊಂದಾದರೆ, ಇಬ್ಬರು ಬಲಿಷ್ಠ ಸೇನಾ ನಾಯಕರು ಎಂದರೆ ರಾಬರ್ಟ್ ಇ ಲೀ ಮತ್ತು ಥಾಮಸ್ ಜೆ.ಜ್ಯಾಕ್ಸನ್ ಇದ್ದರು. ಹೀಗಾಗಿ ಅದಕ್ಕೆ ಬಲವಾದ ರಕ್ಷಣೆ ದೊರೆತಿತ್ತು. ಒಕ್ಕೂಟವು ಹಿಮ್ಮೆಟ್ಟಲೇ ಬೇಕಾಯಿತು.

೧೮೬೩ರ ಜನವರಿ ೧ರಂದು, ಅಧ್ಯಕ್ಷ ಲಿಂಕನ್ ಬಂಡಾಯವೆದ್ದ ಸಂಸ್ಥಾನಗಳಲ್ಲಿದ್ದ ಗುಲಾಮರನ್ನು ಮುಕ್ತಗೊಳಿಸಿ ಉತ್ತರದ ಸಶಸ್ತ್ರ ಸೇನೆಗೆ ಸೇರಿಕೊಳ್ಳಬೇಕೆಂದು ಅವರನ್ನು ಆಹ್ವಾನಿಸುತ್ತ ವಿಮೋಚನೆಯ ಉದ್ಘೋಷಣೆಯನ್ನು ಹೊರಡಿಸಿದನು. ಹೀಗೆ ಘೋಷಿಸಿದ ಉದ್ಘೋಷಣೆಯಿಂದ ಒಕ್ಕೂಟವನ್ನು ಉಳಿಸುವ ಉದ್ದೇಶದೊಂದಿಗೆ ಗುಲಾಮಗಿರಿಯ ನಿರ್ಮೂಲನೆಯನ್ನು ಯುದ್ಧದ ಉದ್ದೇಶವೆಂದೂ ಘೋಷಿಸಿದಂತಾಯಿತು.

ಪೂರ್ವ ಭಾಗದಲ್ಲಿ ಒಕ್ಕೂಟದ ಬಲ ಕುಸಿಯುತ್ತಿದ್ದಾಗ್ಯೂ ಒಕ್ಕೂಟದ ವಿಜಯಗಳಾ ವುವೂ ನಿರ್ಣಾಯಕವಾಗಿರಲಿಲ್ಲ. ಫೆಡರಲ್ ಸರ್ಕಾರವು ಸುಮ್ಮನಿರದೆ ಹೊಸ ಸೈನಿಕಪಡೆಗಳನ್ನು ಸೇರಿಸಿ ಮತ್ತೆ ಪ್ರಯತ್ನ ಮಾಡಿತು. ೧೮೬೩ರ ಜುಲೈ ತಿಂಗಳಿನಲ್ಲಿ ಯುದ್ಧಕ್ಕೆ ಮಹತ್ವದ ತಿರುವುಂಟಾಯಿತು. ಲೀ ಉತ್ತರದ ಕಡೆ ಧಾವಿಸಿ ಪೆನ್ಸಿಲ್ವೇನಿಯಾ ಪ್ರವೇಶಿಸಿ ಇನ್ನೇನು ಸಂಸ್ಥಾನದ ರಾಜಧಾನಿಯನ್ನು ಪ್ರವೇಶಿಸುವಷ್ಟರಲ್ಲಿ ಬಲಿಷ್ಠವಾದ ಒಕ್ಕೂಟ ಸೇನೆಯಿಂದ ಪ್ರತಿಭಟಿತನಾಗಿ ಹಿಮ್ಮೆಟ್ಟಬೇಕಾಯಿತು. ಇಷ್ಟರಲ್ಲಿ ಗ್ರಾಂಟ್‌ನು ನಿಧಾನವಾದರೂ ಅದಮ್ಯದ ಮುನ್ನಡೆಯಿಂದ ೧೮೬೪ರಲ್ಲಿ ರಿಚ್ಮಂಡನ್ನು ತಲುಪಿದ್ದು ಅಂತ್ಯವನ್ನೇ ಮರೆ ಮಾಚುವಂತಾಯಿತು. ಎಲ್ಲ ದಿಕ್ಕುಗಳಿಂದಲೂ ಉತ್ತರದ ಪಡೆಗಳು ಆಕ್ರಮಣ ಮಾಡುತ್ತ ಬಂದು, ೧೮೬೫ರ ಫೆಬ್ರವರಿ ೧ರಂದು ಜನರಲ್ ಷೆರ್ಮಾನನ ಸೈನ್ಯವು ಜಾರ್ಜಿಯಾದಿಂದ ಉತ್ತರದ ಕಡೆಗೆ ಮುಂದುವರೆಯಲಾರಂಭಿಸಿತು. ಫೆಬ್ರವರಿ ೧೭ರಂದು ಒಕ್ಕೂಟವು ಕೊಲಂಬಿಯಾವನ್ನು ಬಿಡುಗಡೆ ಮಾಡಿತಲ್ಲದೆ ಯುದ್ಧವಿಲ್ಲದೆಯೇ ಚಾರ್ಲ್ಸಟನ್ ಶರಣಾಯಿತು. ಏಪ್ರಿಲ್ ೨ರಂದು ಲೀಯು ಪೀಟರ್ಸ್‌ಬರ್ಗ್ ಮತ್ತು ರಿಚ್ಮಂಡನ್ನು ಬಿಟ್ಟು ಹೋದನು. ಒಂದು ವಾರದ ತರುವಾಯ ಬೇರಾವ ಪರ್ಯಾಯವೂ ತೋರದೆ ವರ್ಜೀನಿಯಾ ಶರಣಾಗತವಾಯಿತು.

ಶರಣಾಗತಿಯ ನಿಬಂಧನೆಗಳು ಉದಾತ್ತವಾಗಿದ್ದು ಇ ಲೀ ಮತ್ತು ಅಬ್ರಹಾಂ ಲಿಂಕನ್ ಧೀರನಾಯಕರೆನಿಸಿದರು. ೧೮೬೪ರಲ್ಲಿ ಲಿಂಕನ್ ಎರಡನೇ ಬಾರಿ ಅಧ್ಯಕ್ಷ ಪದವಿಗೆ ಚುನಾಯಿತನಾದನು. ಏಪ್ರಿಲ್ ೧೩ರಂದು ವಾಷಿಂಗ್‌ಟನ್ ಲೀಯ ಶರಣಾಗತಿ ದಿನವನ್ನು ಆಚರಿಸಿತು. ಮರುದಿನವೇ ಅಧ್ಯಕ್ಷ ಲಿಂಕನ್ನನ ಹತ್ಯೆಯಾಯಿತು.

ಉತ್ತರದವರು ವಿಜೇತರಾದ ಬಳಿಕ ತಮ್ಮ ಪ್ರಮುಖ ಕಾರ್ಯನೀತಿ ವಿಷಯವಾಗಿದ್ದ ಅದೇ ತಾನೆ ಮುಕ್ತರಾದ ನೀಗ್ರೋಗಳ ಸ್ಥಿತಿಗತಿಯ ಬಗ್ಗೆ ಗಮನಹರಿಸಬೇಕಾಗಿತ್ತು. ೧೮೬೫ರ ಮಾರ್ಚ್‌ನಲ್ಲಿ ಕಾಂಗ್ರೆಸ್ ನೀಗ್ರೋ ಪೌರರ ಪೋಷಣೆ ಮಾಡಲು ಮತ್ತು ಸ್ವಯಂ ಸಹಾಯದ ಬಗ್ಗೆ ಅವರಿಗೆ ಫ್ರೀಡ್ ಮನ್ಸ್ ಮಾರ್ಗದರ್ಶನ ನೀಡಲು ಫ್ರೀಡ್ ಮನ್ಸ್ ಬ್ಯೂರೋವನ್ನು ಸ್ಥಾಪಿಸಿತು. ಆ ವರ್ಷದ ಡಿಸೆಂಬರ್‌ನಲ್ಲಿ ಗುಲಾಮಗಿರಿಯನ್ನು ರದ್ದುಮಾಡುವ ಸಲುವಾಗಿ ಸಂಯುಕ್ತ ಸಂಸ್ಥಾನಗಳ ಸಂವಿಧಾನಕ್ಕೆ ೧೩ನೇ ತಿದ್ದುಪಡಿಯನ್ನು ಅಂಗೀಕರಿಸಲಾಯಿತು.

ನೀಗ್ರೋಗಳಿಗೆ ಪೌರತ್ವದ ಸಕಲ ಸೌಲಭ್ಯಗಳನ್ನೂ ನೀಡತಕ್ಕದ್ದೆಂಬ ಅಭಿಪ್ರಾಯ ಹೊಂದಿದ್ದ ಎಲ್ಲ ಕಾಂಗ್ರೆಸ್ ಸದಸ್ಯರ ಬಗ್ಗೆ ಕ್ರಮೇಣ ಸಾರ್ವಜನಿಕ ಬೆಂಬಲ ವ್ಯಾಪಕವಾಗಿ ದೊರೆಯಲಾರಂಭಿಸಿತು. ೧೮೬೬ರ ಜುಲೈ ವೇಳೆಗೆ ಕಾಂಗ್ರೆಸ್ ನಾಗರಿಕ ಹಕ್ಕುಗಳ ಮಸೂದೆಯೊಂದನ್ನು ಹೊರಡಿಸಿ, ದಕ್ಷಿಣದ ವಿಧಾನಮಂಡಲವು ಮಾಡಬಹುದಾದ ವರ್ಣ ತಾರತಮ್ಯವನ್ನು ನಿವಾರಿಸಲು ರೂಪಿಸಲಾದ ಹೊಸದೊಂದು ಫ್ರೀಡ್ ಮನ್ಸ್ ಬ್ಯೂರೋವನ್ನು ಸ್ಥಾಪಿಸಿತು. ಇದನ್ನನುಸರಿಸಿ ಕಾಂಗ್ರೆಸ್

ಸಂಯುಕ್ತ ಸಂಸ್ಥಾನಗಳಲ್ಲಿ ಜನಿಸಿದ ಅಥವಾ ಪೌರತ್ವವನ್ನು ಪಡೆದಿರುವ ಹಾಗೂ ಅದರ ಅಧಿಕಾರ ವ್ಯಾಪ್ತಿಯಲ್ಲಿ ವಾಸ ಮಾಡುತ್ತಿರುವ ಎಲ್ಲ ವ್ಯಕ್ತಿಗಳೂ ಸಹ ಸಂಯುಕ್ತ ಸಂಸ್ಥಾನದ ಹಾಗೂ ಅವರು ವಾಸ ಮಾಡುತ್ತಿರುವ ಸಂಸ್ಥಾನಗಳ ನಾಗರಿಕರಾಗುತ್ತಾರೆ

ಎಂದು ಸೂಚಿಸುತ್ತ ಸಂವಿಧಾನಕ್ಕೆ ಹದಿನಾಲ್ಕನೆಯ ತಿದ್ದುಪಡಿಯನ್ನು ಅಂಗೀಕರಿಸಿತು.

ಟೆನೆಸ್ಸಿಯನ್ನು ಹೊರತುಪಡಿಸಿ ಉಳಿದಂತೆ ಎಲ್ಲ ದಕ್ಷಿಣ ಸಂಸ್ಥಾನಗಳು, ತಿದ್ದುಪಡಿ ಯನ್ನು ಅಂಗೀಕರಿಸಲು ನಿರಾಕರಿಸಿದವು. ಕೆಲವು ಸರ್ವಾನುಮತದ ವಿರುದ್ಧ ಮತ ನೀಡಿದವು. ತರುವಾಯ ಉತ್ತರದ ಕೆಲವು ಗುಂಪುಗಳು ದಕ್ಷಿಣದಲ್ಲಿರುವ ನೀಗ್ರೋಗಳ ಹಕ್ಕುಗಳ ಸಂರಕ್ಷಣೆಗಾಗಿ, ಮಧ್ಯಪ್ರವೇಶ ಮಾಡಿದವು. ೧೮೬೭ರ ಪುನಾರಚಿತ ಅಧಿನಿಯಮ ದಲ್ಲಿ ಕಾಂಗ್ರೆಸ್ಸು ದಕ್ಷಿಣ ಸಂಸ್ಥಾನಗಳಲ್ಲಿ ಸ್ಥಾಪಿಸಲಾಗಿದ್ದ ಸರ್ಕಾರಗಳನ್ನು ನಿರ್ಲಕ್ಷಿಸಿ, ದಕ್ಷಿಣ ಭಾಗವನ್ನು ಐದು ಜಿಲ್ಲೆಗಳಾಗಿ ವಿಭಜಿಸಿ ಅವುಗಳ ಮೇಲೆ ಮಿಲಿಟರಿ ಆಡಳಿತವನ್ನು ಹೇರಿತು. ಸಿವಿಲ್ ಸರ್ಕಾರಗಳನ್ನು ಸ್ಥಾಪಿಸಿಕೊಂಡ ಸರ್ಕಾರಗಳಿಗೆ ಕಾಯಂ ಮಿಲಿಟರಿ ಸರ್ಕಾರದಿಂದ ಹೊರಗಿರಲು ಅವಕಾಶ ನೀಡಿದ್ದು ಅವುಗಳು ನಿಷ್ಠೆಯ ಪ್ರಮಾಣವಚನ ಸ್ವೀಕರಿಸಿ ಹದಿನಾಲ್ಕನೆಯ ತಿದ್ದುಪಡಿಯನ್ನು ಅಂಗೀಕರಿಸಿದವಲ್ಲದೆ ನೀಗ್ರೋಗಳಿಗೆ ಮತಾಧಿಕಾರ ನೀಡುವ ಉಪಬಂಧವನ್ನು ಅಳವಡಿಸಿಕೊಂಡವು. ೧೮೬೮ರ ಜುಲೈನಲ್ಲಿ ಹದಿನಾಲ್ಕನೇ ತಿದ್ದುಪಡಿಯನ್ನು ಸಮರ್ಥಿಸಲಾಯಿತು. ಮರುವರ್ಷ ಇದನ್ನು ಕಾಂಗ್ರೆಸ್ ಅಂಗೀಕರಿಸಿ ೧೮೭೦ರಲ್ಲಿ ಸಂಸ್ಥಾನಗಳ ವಿಧಾನಸಭೆಗಳು ಸಮರ್ಥಿಸಿದ ಹದಿನೈದನೇ ತಿದ್ದುಪಡಿಯಲ್ಲಿ

ಸಂಯುಕ್ತ ಸಂಸ್ಥಾನದ ನಾಗರಿಕರು ಹೊಂದಿರುವ ಮತದಾನದ ಹಕ್ಕನ್ನು ಸಂಯುಕ್ತ ಸಂಸ್ಥಾನಗಳಾಗಲಿ, ಯಾವುದೇ ಸಂಸ್ಥಾನವಾಗಲಿ ಜನಾಂಗ, ವರ್ಣ ಅಥವಾ ಹಿಂದಿನ ಉದ್ಯೋಗ ಪರಿಸ್ಥಿತಿಯ ಕಾರಣದ ಮೇಲೆ ಅಲ್ಲಗಳೆಯತಕ್ಕುದಲ್ಲ

ಎಂಬುದಾಗಿ ಸೂಚಿಸಿತು.

ಪುನಾರಚಿತ ಅಧಿನಿಯಮದಡಿ ನೀಗ್ರೋಗಳು ಲೂಸಿಯಾನ, ಸೌತ್ ಕೆರೊಲಿನ ಹಾಗೂ ಮಿಸ್ಸಿಸಿಪ್ಪಿಗಳ ವಿಧಾನಸಭೆಗಳಲ್ಲಿ ಸಂಪೂರ್ಣ ನಿಯಂತ್ರಣ ಪಡೆದರು. ದಕ್ಷಿಣದ ಬಿಳಿಯರು ತಮ್ಮ ಸಂಸ್ಕೃತಿಗೆ ಭಂಗ ಬರುತ್ತಿರುವುದನ್ನು ಕಂಡು ಘಟನಾವಳಿಗಳ ದಿಕ್ಕು ಬದಲಿಸಲು ಯಾವುದೇ ಕಾನೂನುಬದ್ಧ ಮಾರ್ಗವನ್ನು ಕಾಣದೆ ಕೊನೆಗೆ ಕಾನೂನುಬಾಹಿರ ದಾರಿಯನ್ನು ಹಿಡಿದರು. ಕ್ಷಿಪ್ರದಲ್ಲೇ ಹಿಂಸೆ ಹೆಚ್ಚುಹೆಚ್ಚಾಗತೊಡಗಿತು. ೧೮೭೦ರಲ್ಲಿ ಅವ್ಯವಸ್ಥೆಯು ಹೆಚ್ಚಾಗುತ್ತಲೇ ಇದ್ದುದು ನೀಗ್ರೋಗೆ ಆತನ ಸಿವಿಲ್ ಹಕ್ಕುಗಳು ದಕ್ಕದಂತೆ ಪ್ರಯತ್ನಿಸುವವರನ್ನು ತೀವ್ರವಾಗಿ ಶಿಕ್ಷಿಸಲು ಎನ್‌ಪೋರ್ಸ್‌ಮೆಂಟ್ ಅಧಿನಿಯಮವನ್ನು ಜಾರಿಗೊಳಿಸಲು ಕಾರಣವಾಯಿತು.

೨೦ನೆಯ ಶತಮಾನ ಹಾಗೂ ಅಮೆರಿಕದ ನೀಗ್ರೋಗಳು

ವರ್ಣ ತಾರತಮ್ಯವನ್ನು ನಿವಾರಿಸಲು ೨೦ನೇ ಶತಮಾನದಲ್ಲಿ ಮಹತ್ವಪೂರ್ಣ ಯತ್ನಗಳು ನಡೆದವು. ಇದಕ್ಕೆ ಮುನ್ನ ನೀಗ್ರೋಗಳನ್ನು ಮೂರನೇ ದರ್ಜೆ ಪ್ರಜೆಗಳಂತೆ ಕಾಣಲಾಗುತ್ತಿದ್ದು ಸಂಕಷ್ಟ ನಿಂದನೆಗಳ ಜೊತೆಗೆ ಶಾಲೆ, ಕಾಲೇಜು, ಕೆಲಸದ ಸ್ಥಳ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತಾರತಮ್ಯವನ್ನು ಮಾಡಲಾಗುತ್ತಿತ್ತು. ಆದರೆ ೧೯೬೧ ರಿಂದ ೧೯೬೪ರ ನಡುವಣ ಅವಧಿಯಲ್ಲಿ ಹಲವಾರು ಬದಲಾವಣೆಗಳನ್ನು ತರಲಾಯಿತು. ಶಿಕ್ಷಣ ಕ್ಷೇತ್ರದಲ್ಲಿಯೇ ದಕ್ಷಿಣದಲ್ಲಿ ಹಿಂದೆ ಕೇವಲ ಬಿಳಿ ಜನರ ಶಾಲೆಗಳಾಗಿದ್ದ ಸುಮಾರು ೩೬೫ ಹೆಚ್ಚಿನ ಶಾಲಾ ಜಿಲ್ಲೆಗಳಲ್ಲಿ ನೀಗ್ರೋ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿ, ೧೯೫೪ರ ಸುಪ್ರೀಂ ಕೋರ್ಟಿನ ಆಜ್ಞೆ ಬಂದಾಗಿನಿಂದ ಪ್ರತ್ಯೇಕವಾಗಿರದಿದ್ದ ಶಾಲಾ ಜಿಲ್ಲೆಗಳ ಸಂಖ್ಯೆಯನ್ನು ಬಹುಮಟ್ಟಿಗೆ ದುಪ್ಪಟ್ಟುಗೊಳಿಸಲಾಯಿತು. ೧೯೬೦ರ ಫೆಬ್ರವರಿಯಲ್ಲಿ ನೀಗ್ರೋ ಮತ್ತು ಬಿಳಿಯ ಕಾಲೇಜು ವಿದ್ಯಾರ್ಥಿಗಳ ಶಾಂತಿಯುತ ಗೋಷ್ಠಿಗಳು ಪ್ರಾರಂಭವಾಗಿದ್ದು ಉಪಾಹಾರ ಗೃಹಗಳಲ್ಲಿ ಹಾಗೂ ೫೦೦ಕ್ಕೂ ಹೆಚ್ಚು ದಾಕ್ಷಿಣಾತ್ಯ ಸಮುದಾಯಗಳಲ್ಲಿದ್ದ ಪ್ರತ್ಯೇಕತೆಯನ್ನು ಹೋಗಲಾಡಿಸಿತು.

೧೯೬೧ರಲ್ಲಿ ‘‘ಫ್ರೀಡಂ ರೈಡ್ಸ್’’ (ಸ್ವಾತಂತ್ರ್ಯದ ಗೆಲುವು) ಆಂದೋಲನವು ಪ್ರಾರಂಭವಾಗಿ ಬಸ್ ಸಾರಿಗೆ ವ್ಯವಸ್ಥೆ ಮತ್ತು ಕನಿಷ್ಠ ಸೌಕರ್ಯಗಳಲ್ಲಿ ಪ್ರತ್ಯೇಕತೆಯ ವಿರುದ್ಧ ಅಹಿಂಸಾಪೂರ್ವಕ ಪ್ರತಿಭಟನೆಗಳು ನಡೆದವು. ೧೯೬೧ರ ನವೆಂಬರ್‌ನಲ್ಲಿ ಅಂತರಸಂಸ್ಥಾನ ವಾಣಿಜ್ಯ ಕಮಿಷನ್ ಎಲ್ಲ ಅಂತರಸಂಸ್ಥಾನ ಪ್ರಮಾಣಗಳಲ್ಲಿದ್ದ ಪ್ರತ್ಯೇಕತೆಯನ್ನು ರದ್ದು ಗೊಳಿಸಿತು. ಮರುವರ್ಷ ಅಮೆರಿಕ ಸಂಯುಕ್ತ ಸಂಸ್ಥಾನಗಳ ಸರ್ವೋಚ್ಚ ನ್ಯಾಯಾಲಯವು

ಯಾವುದೇ ಸಂಸ್ಥಾನವು ಅಂತರಸಂಸ್ಥಾನಿಕ ವರ್ಣ ಪ್ರತ್ಯೇಕತೆಯನ್ನು ಹಾಗೂ ಅಂತರ ಸಂಸ್ಥಾನ ಸಾಗಣೆ ಸೌಕರ್ಯಗಳನ್ನು ಅಗತ್ಯಪಡಿಸತಕ್ಕದಲ್ಲ ಎಂಬುದಾಗಿ ಈ ವಿಷಯದ ಬಗ್ಗೆ ನಾವು ಪ್ರಶ್ನಾತೀತವಾಗಿ ನಿರ್ಣಯಿಸಿದ್ದೇವೆ

ಎಂದು ಅಭಿಪ್ರಾಯ ನೀಡಿ ರದ್ದಿಯಾತಿಗೆ ಸರ್ವಾನುಮತದ ಬೆಂಬಲ ವ್ಯಕ್ತಪಡಿಸಿತು.

ಇದಕ್ಕೆ ಮೊದಲು ೧೮೫೭ರಿಂದಲೂ ಪ್ರಥಮ ನಾಗರಿಕ ಹಕ್ಕುಗಳ ಅಧಿನಿಯಮವೆಂಬ ಹೊಸ ಕಾನೂನೊಂದರ ಮೂಲಕ ಫೆಡರಲ್ ನ್ಯಾಯಾಲಯಗಳಲ್ಲಿ ಯಾವೊಬ್ಬ ವ್ಯಕ್ತಿಗೆ ಮತದಾನದ ಹಕ್ಕನ್ನು ನೀಡದಿದ್ದರೆ ಅಥವಾ ನೀಡದಂತೆ ಬೆದರಿಕೆ ಹಾಕಿದರೆ ಪ್ರತಿಬಂಧಕ ಪರಿಹಾರಗಳನ್ನು ಪಡೆಯಲು ಫೆಡರಲ್ ಸರ್ಕಾರದ ಹೆಸರಿನಲ್ಲಿಯೇ ಸಿವಿಲ್ ದಾವೆಗಳನ್ನು ಹೂಡಲು ಅದಕ್ಕೆ ಅಧಿಕಾರವನ್ನು ನೀಡಲಾಗಿತ್ತು. ಅಲ್ಲದೆ, ನಾಗರಿಕ ಹಕ್ಕುಗಳ ಬಗ್ಗೆ ಸಂಯುಕ್ತ ಸಂಸ್ಥಾನಗಳ ಆಯೋಗವೊಂದನ್ನು ರಚಿಸಿ ಅದಕ್ಕೆ ಮತದಾನದ ಹಕ್ಕನ್ನು ನಿರಾಕರಿಸಿದ ಪ್ರಸಂಗ ಕುರಿತ ದೂರುಗಳ ಬಗ್ಗೆ ತನಿಖೆ ನಡೆಸಲು, ಕಾನೂನುಬದ್ಧವಾದ ಸಮಾನ ರಕ್ಷಣೆ ನಿರಾಕರಣೆಯಾಗುವಂತಹ ಕಾನೂನು ಪರಿಸ್ಥಿತಿಗಳಿಗೆ ಸಂಬಂಧಪಡುವ ಘಟನೆಗಳನ್ನು ಅಧ್ಯಯನ ಮಾಡಲು ಮತ್ತು ಮಾಹಿತಿ ಸಂಗ್ರಹಿಸಲು ಮತ್ತು ಸಮಾನ ರಕ್ಷಣೆಗೆ ಸಂಬಂಧಿಸಿದಂತೆ ಕಾನೂನುಗಳ ಮತ್ತು ಫೆಡರಲ್ ಸರ್ಕಾರಗಳ ಕಾರ್ಯನೀತಿಗಳ ಮೌಲ್ಯನಿರ್ಣಯ ಮಾಡುವ ಅಧಿಕಾರವನ್ನು ನೀಡಲಾಗಿತ್ತು. ೧೯೬೦ರಲ್ಲಿ ಕಾಂಗ್ರೆಸ್ ಮತ್ತೊಂದು ನಾಗರಿಕ ಹಕ್ಕುಗಳ ಬಿಲ್ ಅನ್ನು ಅಂಗೀಕರಿಸಿತು. ಅದರಲ್ಲಿ ದೂರುಗಳನ್ನು ಸಲ್ಲಿಸಿದ ನಂತರ ರಿಜಿಸ್ಟ್ರಾರನು ರಾಜೀನಾಮೆ ನೀಡಿದರೆ ಸರ್ಕಾರದ ವಿರುದ್ಧ ವ್ಯವಹಾರ ನಡೆಸಲು ಅವಕಾಶ ಕಲ್ಪಿಸಲಾಗಿತ್ತು ಮತ್ತು ಯಾವುದೇ ಪ್ರಾಥಮಿಕ, ವಿಶೇಷ ಅಥವಾ ಸಾಮಾನ್ಯ ಚುನಾವಣೆ ನಡೆದ ತರುವಾಯ ೨೨ ತಿಂಗಳವರೆಗೂ ಚುನಾವಣೆ ದಾಖಲೆಗಳನ್ನು ಸಂರಕ್ಷಿಸಿಡುವುದನ್ನೂ ಕೂಡ ಅದರಲ್ಲಿ ಅಗತ್ಯಪಡಿಸಲಾಗಿತ್ತು.

‘‘ನಾಗರಿಕ ಹಕ್ಕುಗಳ ಕ್ರಾಂತಿ’’ ಎಂದು ಕರೆಯಲಾದ ಆಂದೋಲನವು ೧೯೬೩ರಲ್ಲಿ ನಾಟಕೀಯ ಅಂತಿಮ ಘಟ್ಟ ತಲುಪಿತು. ೧೯೬೦ರಲ್ಲಿ ನೀಗ್ರೋಗಳ ಮತಗಳನ್ನು ಪಡೆಯುವ ಹವಣಿಕೆಯಲ್ಲಿದ್ದ ಸೆನೆಟರ್ ಜಾನ್ ಎಫ್.ಕೆನೆಡಿಯು ತನ್ನ ಎದುರಾಳಿಯಾಗಿದ್ದ ಉಪಾಧ್ಯಕ್ಷ ರಿಚರ್ಡ್ ಎಂ.ನಿಕ್ಸನ್‌ನ ಮೇಲೆ ಸುಲಭವಾಗಿ ಮೇಲುಗೈ ಪಡೆದನು. ಚುನಾವಣಾ ಪ್ರಚಾರ ಸಮಯದಲ್ಲಿ ಕೆನೆಡಿಯು ನೀಗ್ರೋಗಳ ಉದ್ಧಾರ ಕಾರ್ಯದಲ್ಲಿ ಹೆಚ್ಚು ಪ್ರಗತಿ ತೋರಿಸದಿರುವ ಬಗ್ಗೆ ರಿಪಬ್ಲಿಕರನ್ನು ಛೀಮಾರಿ ಹಾಕಿದನು. ಮಾರ್ಟಿನ್ ಲೂಥರ್ ಕಿಂಗ್ ಅವರನ್ನು ಸೆರೆಮನೆಗೆ ಕಳುಹಿಸಿದ್ದುದಕ್ಕೆ ಸಂಬಂಧಿಸಿದಂತೆ ಅವನ ಪ್ರತಿಕ್ರಿಯೆ ಅತ್ಯಂತ ತೀಕ್ಷಣವಾಗಿತ್ತು. ಅಕ್ಟೋಬರ್ ೧೯ರಂದು ಕಿಂಗ್ ಮತ್ತಿತರ ೫೦ ಮಂದಿ ನೀಗ್ರೋಗಳು ಅಟ್ಲಾಂಟದಲ್ಲಿ ರಿಚ್ ಡಿಪಾರ್ಟ್‌ಮೆಂಟ್ ಸ್ಟೋರ್‌ನ ಮ್ಯಾಗ್ನೊಲಿಯಾ ಕೊಠಡಿಯಲ್ಲಿ ಕುಳಿತಿದ್ದಾಗ ಅವರೆಲ್ಲರನ್ನೂ ಬಂಧಿಸಲಾಗಿತ್ತು. ಉಳಿದವರನ್ನು ಬಿಡುಗಡೆ ಮಾಡಿದರೂ ಕಿಂಗ್‌ಗೆ ಮಾತ್ರ ನಾಲ್ಕು ತಿಂಗಳ ಕಠಿಣ ಜೈಲುವಾಸವನ್ನು ವಿಧಿಸಲಾಗಿತ್ತು. ಕೆನೆಡಿ ಸೋದರರ ಸಕಾಲಿಕ ಮಧ್ಯಸ್ಥಿಕೆಯಿಂದಾಗಿ ಕಿಂಗ್ ಅವರನ್ನು ಬಿಡುಗಡೆ ಮಾಡಲಾಯಿತು. ಕೆನಡಿಗೆ ನೀಗ್ರೋಗಳ ಮತ ದಕ್ಕಿತು.

೧೯೬೩ರಲ್ಲಿ, ಪ್ರತ್ಯೇಕವಾಗಿದ್ದ ದಕ್ಷಿಣದ ಒಳನಗರಗಳಾದ ಬರ್ಮಿಗ್ ಹ್ಯಾಂ, ಅಲಬಾಮಗಳಲ್ಲಿ ವ್ಯಾಪಕ ನೀಗ್ರೋ ಪ್ರದರ್ಶನಗಳು ನಡೆದ ತರುವಾಯ ಅಧ್ಯಕ್ಷ ಕೆನೆಡಿಯು ಮಾಡಿದ ದೂರದರ್ಶನ ಭಾಷಣದಲ್ಲಿ ನೀಗ್ರೋ ಅಮೆರಿಕನ್ನರಿಗೆ ಸಂಪೂರ್ಣ ಸಮಾನತೆ ನೀಡುವುದು ರಾಷ್ಟ್ರದ ನೈತಿಕ ಹೊಣೆಗಾರಿಕೆಯಾಗಿದೆ ಎಂದು ನುಡಿದನು. ಮತದಾನ, ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ತಂಗು ಸ್ಥಳಗಳಲ್ಲಿರುವ ಪಕ್ಷಪಾತ ವನ್ನು ನಿವಾರಿಸಲು ಈ ಶತಮಾನದ ಅತ್ಯಂತ ದೂರದೃಷ್ಟಿಯ ಶಾಸನವೊಂದನ್ನು ಕಾಂಗ್ರೆಸ್‌ಗೆ ಒಪ್ಪಿಸಿದನು. ಆಗಸ್ಟ್ ೨೮ರಂದು ೨೦೦,೦೦೦ಕ್ಕೂ ಹೆಚ್ಚು ಜನ ನೀಗ್ರೋ ಹಾಗೂ ಬಿಳಿಯರು ವಾಷಿಂಗ್‌ಟನ್‌ನಲ್ಲಿಯ ಲಿಂಕನ್ ಮೆಮೋರಿಯಲ್‌ಗೆ ಮೆರವಣಿಗೆಯಲ್ಲಿ ನಡೆದು ಹೋದದ್ದು ಪರಿಣಾಮಕಾರಿಯಾಗಿ ಸಮಾನ ಹಕ್ಕುಗಳ ಬೇಡಿಕೆಗೆ ರಾಷ್ಟ್ರವು ಇನ್ನಷ್ಟು ಅಗ್ರಮಾನ್ಯ ಮನ್ನಣೆ ನೀಡಬೇಕೆಂಬುದನ್ನು ಸೂಚಿಸಿತು.

ಕೆನೆಡಿ ಆಡಳಿತವು, ಸರ್ಕಾರದ ಉನ್ನತ ಹುದ್ದೆಗಳಿಗೆ ಹಲವಾರು ಪ್ರತಿಷ್ಠಿತ ನೀಗ್ರೋಗಳನ್ನು ನೇಮಕ ಮಾಡುವ ಮೂಲಕ ವರ್ಣೀಯ ಸಮಾನತೆ ತರುವಲ್ಲಿ ಇನ್ನೂ ಮುಂದಡಿಯಿಟ್ಟಿತು. ಅವರಲ್ಲಿ ಅನೇಕರು ಅಧ್ಯಕ್ಷೀಯ ಸಹಾಯಕರಿಂದ ಹಿಡಿದು ರಾಯಭಾರಿಗಳಾಗುವವರೆಗೆ ವಿವಿಧ ಪದವಿಗಳಿಗೆ ನೇಮಕಾತಿ ಹೊಂದಿದರು. ೧೯೬೪ರಲ್ಲಿ ೨೪೦.೦೦೦ ಕ್ಕಿಂತಲೂ ಹೆಚ್ಚು ನೀಗ್ರೋ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿದ್ದು, ನೀಗ್ರೋಗಳಿಗೆ ಕ್ಷಿಪ್ರದಲ್ಲಿಯೇ ಉತ್ತಮ ಉದ್ಯೋಗಗಳು ಹಾಗೂ ಸರ್ಕಾರದಲ್ಲಿ ಪ್ರಭಾವೀ ಪಾತ್ರವನ್ನು ಹೊಂದುವ ಅವಕಾಶ ಕಲ್ಪಿಸಿಕೊಡುವ ಭರವಸೆ ಮೂಡಿಸುವಂತಿತ್ತು.

ನೀಗ್ರೋಗಳು ಸಂಯುಕ್ತ ಸಂಸ್ಥಾನಗಳಲ್ಲಿದ್ದಷ್ಟು ಕಾಲವೂ ತಮ್ಮ ದೇಶದ ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಅಭಿವೃದ್ದಿಗಾಗಿ ಅತಿ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಅವರು ಸ್ವಾತಂತ್ರ್ಯ ಮತ್ತು ಗುಲಾಮಗಿರಿಯ ನಡುವಣ ಕೊನೆಗಾಣದ ಹೋರಾಟದ ಪ್ರಮುಖ ಅಂಗವಾಗಿದ್ದವರು. ದೇಶದ ಸಾಮಾಜಿಕ ವ್ಯವಸ್ಥೆಯ ಅಪರಿ ಪೂರ್ಣತೆಗೆ ಮತ್ತು ಅದರ ಮಾನವೀಯ ಸಂಬಂಧಗಳಲ್ಲಿರುವ ಅನೈತಿಕತೆಗೆ ಅವರು ಶಾಶ್ವತ ಸ್ಮಾರಕಗಳಾಗಿದ್ದರಲ್ಲವೆ? ಮುಕ್ತಿಗೆ ಮುಡುಪಾಗಿದ್ದ ರಾಷ್ಟ್ರವೊಂದು ಸ್ವಾತಂತ್ರ್ಯದ ಪ್ರಶ್ನೆಯನ್ನು ಬಗೆಹರಿಸಲು ನಡೆಸಿದ ಹೋರಾಟದಲ್ಲಿ ವಿನಾಶದ ಕಡೆ ಹೆಜ್ಜೆ ಹಾಕಿದ್ದನ್ನು ಕಂಡವರು ಅವರು. ತನ್ನ ಮನೆಯಲ್ಲಿ ಎಲ್ಲರಿಗೂ ನೀಡಬೇಕಾಗಿದ್ದ ಸ್ವಾತಂತ್ರ್ಯ ಸಮಸ್ಯೆಯನ್ನು ಸರ್ವ ಸಮಾನವಾಗಿ ಎದುರಿಸಲು ಅಸಮರ್ಥವಾಗಿದ್ದರಿಂದ ದೇಶ ದೇಶಗಳ ಸಂಸ್ಥೆಯಲ್ಲಿ ತನ್ನ ಸ್ಥಾನಮಾನಕ್ಕಾಗಿ ಅದೇ ರಾಷ್ಟ್ರವು ರಾಜಿ ಮಾಡಿಕೊಂಡದ್ದನ್ನೂ ಅವರು ಕಂಡಿದ್ದಾರೆ.

ನೀಗ್ರೋಗಳು ಪಾಶ್ಚಿಮಾತ್ಯ ಸಂಸ್ಕೃತಿ ಹಾಗೂ ನಾಗರಿಕತೆಯ ಅವಿಭಾಜ್ಯ ಅಂಗವಾಗಿ ದ್ದಾರೆ. ತಾವು ಅನುಭವಿಸಿದ ತಿರಸ್ಕಾರಗಳಿಂದ ಅವರು ಘಾಸಿಗೊಂಡಿರುವುದು ನಿಸ್ಸಂಶಯ ವಾದರೂ ಅಂಥ ಕೃತ್ಯಗಳಿಂದಲೂ ಅವರೊಂದು ಉದ್ದೇಶವನ್ನು ಹಾಗೂ ಇತರರು ಸಾಧಿಸುವಾಗ ಅತ್ಯಂತ ಕಷ್ಟಕರವಾಗಬಹುದಾದ ವಸ್ತುನಿಷ್ಠತೆಯನ್ನು ಗಳಿಸಿಕೊಂಡರು. ಆದ್ದರಿಂದ ಪ್ರಾಯಶಃ ಕೇವಲ ಅವರು ಮಾತ್ರವೇ ಪಾಶ್ಚಿಮಾತ್ಯ ನಾಗರಿಕತೆಯಲ್ಲಿ ಅಂತರ್ಗತವಾಗಿರಬಹುದಾದ ಲೋಪದೋಷಗಳನ್ನು ಹೆಚ್ಚು ಸ್ಪಷ್ಟವಾಗಿ ಎತ್ತಿ ತೋರ ಬಲ್ಲವರಾಗಿದ್ದಾರೆ.

 

ಪರಾಮರ್ಶನ ಗ್ರಂಥಗಳು

೧. ಅಪ್ಟೇಕರ್, ಹರ್ಬರ್ಟ್, ೧೯೫೧. ಎ ಡಾಕ್ಯುಮೆಂಟರಿ ಹಿಸ್ಟರಿ ಆಫ್ ದಿ ನೀಗ್ರೋ ಪೀಪಲ್ ಇನ್ ದಿ ಯು.ಎಸ್., ನ್ಯೂಯಾರ್ಕ್.

೨. ಫ್ರಾಂಕ್ಲಿನ್, ಜಾನ್ ಹೋಪ್. ೧೯೬೬. ಫ್ರಂ ಸ್ಲೇವರಿ ಟು ಫ್ರೀಡಂ: ಎ ಹಿಸ್ಟರಿ ಆಫ್ ನೀಗ್ರೋ ಅಮೆರಿಕನ್ಸ್, ಅಮೆರಿನೆಡ್, ನ್ಯೂಡೆಲ್ಲಿ.

೩. ಹೆಸ್ಕೋವಿಟ್ಸ್, ಮೆಲ್‌ವಿಲ್ ಜೆ., ೧೯೨೮. ದಿ ಅಮೆರಿಕನ್ ನೀಗ್ರೋ: ಎ ಸ್ವಡೀ ಇನ್ ರೇಷಿಯಲ್ ಕ್ರಾಸಿಂಗ್, ನ್ಯೂಯಾರ್ಕ್.

೪. ಮೆಸ್ಟರ್, ರಿಚರ್ಡ್ ಎಂ.(ಸಂ), ೧೯೭೪. ರೇಸ್ ಆ್ಯಂಡ್ ಎಥ್ನಿಸಿಟಿ ಇನ್ ಮಾಡರ್ನ್ ಅಮೆರಿಕಾ, ಡಿ.ಸಿ. ಹೀಲ್ ಅಂ ಕೋ, ಮಾಸ್.

೫. ಮಿಲ್ಲರ್, ಎಲಿಜಬೆತ್ ಡಬ್ಲ್ಯೂ, ೧೯೬೬. ದಿ ನೀಗ್ರೋ ಇನ್ ಅಮೆರಿಕಾ: ಎ ಬಿಬ್ಲಿಯಾಗ್ರಫಿ. ಕೇಂಬ್ರಿಜ್.

೬. ಹೆರಾಲ್ಡ್ ಎಂ., ೧೯೦೫. ದಿ ನೀಗ್ರೋ ಇನ್ ದಿ ಹಿಸ್ಟರಿ ಆಫ್ ದಿ ಯುನೈಟೆಡ್ ಸ್ಟೇಟ್ಸ್ ಫ್ರಂ ದಿ ಬಿಗಿನಿಂಗ್ ಆಫ್ ದಿ ಇಂಗ್ಲಿಷ್ ಸೆಟ್ಲ್‌ಮೆಂಟ್ಸ್ ಇನ್ ೧೬೦೭, ಆಸ್ಟಿನ್.

೭. ವಿಲಿಯಂಸ್ ಜಾರ್ಜ್ ಡಬ್ಲ್ಯೂ, ೧೯೮೨. ಹಿಸ್ಟರಿ ಆಫ್ ದಿ ನೀಗ್ರೋ ರೇಸ್ ಇನ್ ಅಮೆರಿಕ, ೨ ಸಂ, ನ್ಯೂಯಾರ್ಕ್.