ಒಂದು ಗುಂಪಿನ ಜನರು ಇನ್ನೊಂದು ಗುಂಪಿನ ಜನರಿಗಿಂತ ನೈತಿಕವಾಗಿ ಅಥವಾ ಬೌದ್ದಿಕವಾಗಿ ಮೇಲ್ವರ್ಗಕ್ಕೆ ಸೇರಿದವರೆಂದು ವಾದಿಸುವುದನ್ನೇ ವರ್ಣಭೇದವೆಂದು ಕರೆಯಲಾಗಿದೆ. ಈ ಬಗೆಯ ಮೇಲ್ವರ್ಗತನವು ಪರಂಪರಾಗತವಾಗಿ ಬಂದ ಜೈವಿಕ ಭಿನ್ನತೆಗಳಿಂದ ಉಂಟಾಗಿರುತ್ತದೆ. ಸರಳವಾಗಿ ಹೇಳಬಹುದಾದರೆ ಅಸಹಜ ವರ್ಣೀಯರು (ಮೈಕ್ರೊ ರೇಸ್), ಸ್ಥಳೀಯ ವರ್ಣೀಯರು (ಲೋಕಲ್ ರೇಸ್) ಅಥವಾ ಭೌಗೋಳಿಕ ರೀತ್ಯ ವರ್ಣೀಯರು (ಜಿಯೋಗ್ರಾಫಿಕಲ್ ರೇಸ್) ಎಂಬುದಾಗಿ ಒಗ್ಗೂಡಿರುವ ಜನರಲ್ಲಿರುವ ಪರಸ್ಪರ ಒಂದು ಬಗೆಯ ಅಪ್ರೀತಿ ಅಥವಾ ದ್ವೇಷವನ್ನು ಇದು ಸೂಚಿಸುತ್ತದೆ. ಈ ವರ್ಣಭೇದದ ಪರಿಣಾಮವಾಗಿ ಒಂದು ವರ್ಣದ ಜನರ ಆರ್ಥಿಕ ಅವಕಾಶಗಳನ್ನು ಕಡಿತ ಮಾಡಲು, ತಮ್ಮ ಸ್ಥಾನಮಾನಗಳನ್ನು ಸಂರಕ್ಷಿಸಲು, ಕಾನೂನಿನಡಿಯಲ್ಲಿನ ಸಮಾನ ರಕ್ಷಣೆಯನ್ನು ಅಲ್ಲಗಳೆಯಲು ಮತ್ತು ಸುಲಭ ದರಗಳಲ್ಲಿ ಕೂಲಿಗಳನ್ನು ಹೊಂದಿರಲು ಪ್ರಯತ್ನಿಸಲಾಗುತ್ತದೆ.

ಮಾನವ ಜನಾಂಗದ ಒಂದು ಭಾಗವನ್ನು ಮತ್ತೊಂಧು ಭಾಗದಿಂದ ಬೇರ್ಪಡಿಸುವುದನ್ನೇ ಗುರಿಯಾಗಿಟ್ಟುಕೊಂಡ ಹಲವಾರು ಆಧುನಿಕ ಸಿದ್ಧಾಂತಗಳಲ್ಲೆಲ್ಲ ಅದು ನೈತಿಕವಾಗಿ ಅತ್ಯಂತ ಆಕ್ಷೇಪಾರ್ಹವಾದ ಹಾಗೂ ಲವಲೇಶಮಾತ್ರದ ಆಧಾರವನ್ನೂ ಹೊಂದಿರದ ಸಿದ್ಧಾಂತವಾಗಿದೆ. ವರ್ಣಭೇದ ನೀತಿಯ ಸಿದ್ಧಾಂತವು ತೀರಾ ಸಾಮಾನ್ಯವಾಗಿ ಅಂಗೀಕೃತ ವಾಗಿರುವ ಅನೇಕ ನಾಗರಿಕ ಗುಣಮಟ್ಟಗಳ ಬಗ್ಗೆ ವಿವಾದಕ್ಕೆಡೆ ಮಾಡುವ ನೈತಿಕ ನಿರ್ಣಯಗಳನ್ನು ಕೈಗೊಳ್ಳಲು ಆಸ್ಪದವೀಯುತ್ತದೆ. ಮಾತ್ರವಲ್ಲ ಸಾಮಾನ್ಯ ಕಾರಣದ ಮೇಲೆ ಊಹಿಸಿಕೊಳ್ಳಲೂ ಸಾಧ್ಯವಿಲ್ಲದ ಅಪರಾಧಗಳುಂಟಾಗಲು ಕಾರಣ ವಾಗುತ್ತವೆಂದು ಕುಪ್ರಸಿದ್ಧವಾಗಿದೆ.

ಮಾನವೇತಿಹಾಸದ ದಾಖಲೆಗಳಲ್ಲಿ, ಸಾಮ್ರಾಜ್ಯ ಕಟ್ಟುವ ಹಾಗೂ ಒತ್ತೆಯಾಳುಗಳಿಗಾಗಿ ಅಥವಾ ಗುಲಾಮಗಿರಿಗಾಗಿ ಲೂಟಿ ಮಾಡುವ ಸಂದರ್ಭದಲ್ಲಿ ಜಾತಿಗಳ ನಡುವೆ ಘರ್ಷಣೆಯುಂಟಾಗುತ್ತಿದ್ದುದು ಸಾಮಾನ್ಯ ಸಂಗತಿ. ಸಂಯುಕ್ತ ಸಂಸ್ಥಾನಗಳಲ್ಲಿ, ಸುಲಭ ದರದ ಕೂಲಿಗಳಾಗಿ ಕರೆತರಿಸಿಕೊಂಡ ವಲಸೆಗಾರರನ್ನು ಹಿಂದಿನಿಂದಲೂ ಇದ್ದ ನಿವಾಸಿಗಳು ತಮ್ಮ ಆರ್ಥಿಕ ಶತ್ರುಗಳೆಂಬುದಾಗಿ ಮೊದಮೊದಲು ಒಲವು ತೋರಲಿಲ್ಲ. ಅನಂತರ ಬಂದ ವಲಸೆಗಾರರನ್ನು ದ್ವೇಷಿಸುತ್ತಿದ್ದರು. ಸಂಯುಕ್ತ ಸಂಸ್ಥಾನಗಳಲ್ಲಿ ಮೊಟ್ಟಮೊದಲು ಗುಲಾಮರೆಂದು ಕರೆಸಿಕೊಂಡ ಆಫ್ರಿಕನ್ನರು ಎಂಥ ಸ್ಫೂರ್ತಿ ಹಾಗೂ ಪ್ರತಿಭೆಯನ್ನು ತೋರಿದರೆಂದರೆ ಅದರಿಂದ ಗುಲಾಮರನ್ನಿಟ್ಟುಕೊಂಡಿದ್ದ ಮಾಲೀಕರು, ಗುಲಾಮಗಿರಿಯನ್ನು ಮುಂದುವರಿಸಲು ತಾತ್ವಿಕ ಸಮರ್ಥನೆ ಕೋರಿ ಅದಕ್ಕಾಗಿ ಆಫ್ರಿಕನ್ನರಿಗೆ ಕನಿಷ್ಠ ಅಕ್ಷರಜ್ಞಾನವನ್ನೂ ಸಹ ನೀಡಬಾರದೆಂದು, ಗುಲಾಮ ಶಿಕ್ಷಣದ ವಿರುದ್ಧ ಕಾನೂನುಗಳನ್ನೇ ತಂದರು.

ಅಮೆರಿಕಾ ನೆಲದಲ್ಲಿ ಆಫ್ರಿಕನ್ನರ ಗುಲಾಮಗಿರಿಯಿಂದ ಸ್ವಾತಂತ್ರ್ಯದವರೆಗಿನ ಹೋರಾಟದ ಕತೆ ಹೃದಯಸ್ಪರ್ಶಿಯಾಗಿದೆಯಾದರೂ ಈ ಪದ್ಧತಿಯ ಹಿಂದಿರುವ ಅಮಾನವೀಯತೆಯನ್ನು ಸಂಪೂರ್ಣವಾಗಿ ತಿಳಿಯಬೇಕಾದರೆ ಮೊದಲು ಯುರೋಪಿನಲ್ಲಿ ಅನಂತರ ಅಮೆರಿಕಾದಲ್ಲಿ ಗುಲಾಮಗಿರಿಯ ಬೆಳವಣಿಗೆಯನ್ನು ಗುರುತಿಸುವುದೂ ಕೂಡ ಅಷ್ಟೇ ಅಗತ್ಯವಾಗುತ್ತದೆ.

ಹಿನ್ನೆಲೆ

೧೫ ಮತ್ತು ೧೬ನೆಯ ಶತಮಾನಗಳಲ್ಲಿ ಪಶ್ಚಿಮ ಯುರೋಪಿನ ಕ್ರಿಶ್ಚಿಯನ್ನರು ಕೇವಲ ತಮ್ಮ ಜನರ ಲಕ್ಷ್ಯವನ್ನು ವ್ಯಾಪಾರದತ್ತ ತಿರುಗಿಸಿದ್ದರಲ್ಲದೆ ಅವರು ಪ್ರಪಂಚಕ್ಕೆ ಹೊಸದಾಗಿ ಏನನ್ನೂ ನೀಡಲಿಲ್ಲ. ಅವರು ತಮ್ಮ ದೃಷ್ಟಿಕೋನ ಮತ್ತು ತಂತ್ರಗಾರಿಕೆಯಲ್ಲಿ ಸಾಕಷ್ಟು ಮೂಲವಂತಿಕೆಯನ್ನು ಪ್ರದರ್ಶಿಸಿದ್ದರಾದರೂ ಶತಶತಮಾನಗಳಿಂದಲೂ ಮನುಷ್ಯನು ಅರಸುತ್ತಿದ್ದ ಒಂದು ಬಗೆಯ ಕಳಕಳಿಯನ್ನು ನಿರ್ದಿಷ್ಟ ಗುರಿಯತ್ತ ಸಾಗು ವಂತೆ ಮಾಡಿದರು. ವಾಸ್ತವವಾಗಿ ಆಫ್ರಿಕಾದ ಅತ್ಯಂತ ಪ್ರಾಚೀನ ಇತಿಹಾಸದ ಕಾಲ ದಿಂದಲೂ ಅಲ್ಲಿ ಇತರ ಖಂಡಗಳಂತೆಯೇ ಗುಲಾಮಗಿರಿಯು ವ್ಯಾಪಕವಾಗಿ ಬಳಕೆ ಯಲ್ಲಿದ್ದುದು ತಿಳಿದುಬರುತ್ತದೆ. ಈ ವ್ಯವಸ್ಥೆಯು ಹಬ್ಬಿದ ಯಾವುದೇ ಸ್ಥಳಗಳಲ್ಲಿದ್ದಂತೆ ಆಫ್ರಿಕಾದ ಗುಲಾಮಗಿರಿಯಲ್ಲಿ ಕೂಡ ಕ್ರೌರ್ಯ ಮತ್ತು ದಬ್ಬಾಳಿಕೆ ಇದ್ದುದರಲ್ಲಿ ಅನುಮಾನವೇ ಇಲ್ಲ. ಆದರೂ ಆಫ್ರಿಕಾದ ಕೆಲವೇ ಭಾಗಗಳಲ್ಲಾದರೂ ಗುಲಾಮಗಿರಿ ಯಲ್ಲಿ ವರ್ಣಭೇದವು ಆಧಾರವಾಗಿರಲಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಎಂದರೆ ಪುನರುಜ್ಜೀವನ ಹಾಗೂ ವಾಣಿಜ್ಯ ಕ್ರಾಂತಿಯಿಂದ ಹೆಚ್ಚು ಸಡಿಲಗೊಂಡ ಶಕ್ತಿಗಳು ಗುಲಾಮಗಿರಿ ಹಾಗೂ ಗುಲಾಮರ ಮಾರಾಟದಂಥ ಆಧುನಿಕ ವ್ಯವಸ್ಥೆಯನ್ನು ಹುಟ್ಟುಹಾಕಿದವು. ಪುನರುಜ್ಜೀವನವು ವ್ಯಕ್ತಿಗೆ ಹೊಸಬಗೆಯ ಸ್ವಾತಂತ್ರ್ಯವನ್ನು, ಆತನ ಆತ್ಮ ಹಾಗೂ ಶರೀರಕ್ಕೆ ಅತ್ಯಂತ ಉಪಯುಕ್ತವೆನಿಸಬಹುದಾದಂಥ ಸಾಧನಗಳನ್ನು ಪಡೆದುಕೊಳ್ಳುವ ಸ್ವಾತಂತ್ರ್ಯವನ್ನು ಒದಗಿಸಿತು. ಅದು ಎಂಥದೊಂದು ಕಾಮನೆಯ ಶೋಧವನ್ನು ಹಚ್ಚಿತೆಂದರೆ, ತತ್ಪರಿಣಾಮವಾಗಿ ದೀರ್ಘಕಾಲದಿಂದಲೂ ಸುಸ್ಥಾಪಿತವಾಗಿದ್ದ ಪದ್ಧತಿ ಹಾಗೂ ನಂಬಿಕೆಗಳು ಬುಡಮೇಲಾದವು. ಅದು ತಮ್ಮ ಸ್ವಂತ ಅನುಕೂಲಕ್ಕಾಗಿ ಎಂಥ ಸಾಧನಗಳು ಅಗತ್ಯವೋ ಅವುಗಳನ್ನು ಪಡೆಯಲು ಇತರರ ಹಕ್ಕುಗಳನ್ನು ಕೂಡ ನಾಶಪಡಿಸುವಂತಾಯಿತು. ಆಧುನಿಕ ಜಗತ್ತಿನಲ್ಲಿ ಆವಿರ್ಭವಿಸಿದ ಸ್ವಾತಂತ್ರ್ಯದ ಪರಿಕಲ್ಪನೆಯು ಅನುಮೋದನೆ ಪಡೆಯಬೇಕೆಂಬುದನ್ನು ಮೂಲೆಗೊತ್ತು ವಂಥದ್ದು. ಅದು ಇತರರ ಸ್ವಾತಂತ್ರ್ಯವನ್ನು ಮೂಲೆಗೊತ್ತುವಂಥದ್ದು, ಹತ್ತಿಕ್ಕುವಂಥದ್ದೂ ಆಗಿತ್ತು. ಅದೊಂದು ಸಾಮಾಜಿಕ ಜವಾಬ್ದಾರಿರಹಿತ ಸ್ವಾತಂತ್ರ್ಯದ ಪರಿಕಲ್ಪನೆಯಾಗಿತ್ತು.

ಸ್ವಾತಂತ್ರ್ಯದ ಈ ಹೊಸ ಪರಿಕಲ್ಪನೆಯೊಂದಿಗೆ ವಾಣಿಜ್ಯ ಕ್ರಾಂತಿಯಿಂದಾಗಿ ಯುರೋಪಿನ ಆರ್ಥಿಕ ಜೀವನಕ್ಕೆ ಹೊಸ ಚೇತನ ದೊರೆತಂತಾಯಿತು. ಊಳಿಗಮಾನ್ಯ ಪದ್ಧತಿಯ ರದ್ದು, ಪಟ್ಟಣಗಳ ಹುಟ್ಟು, ವಾಣಿಜ್ಯ ಚಟುವಟಿಕೆಗಳಲ್ಲಿ ಹೆಚ್ಚಿನ ಉತ್ಸಾಹ, ಬಂಡವಾಳ ಹೂಡಿಕೆಯ ಬಲ ಹಾಗೂ ಅಧಿಕಾರಕ್ಕೆ ದೊರೆತ ಹೊಸ ಮನ್ನಣೆ ವಾಣಿಜ್ಯ ಕ್ರಾಂತಿಗೆ ಅತ್ಯವಶ್ಯಕ ಅಂಶಗಳಾದ ಈ ಎಲ್ಲ ವಿಷಯಗಳಿಂದಾಗಿ, ಆರ್ಥಿಕ ಸರಕುಗಳೆಂದು ಕಂಡುಬರುವಂಥ ಯಾವುದೇ ವಸ್ತುಗಳನ್ನಾಗಲೀ ನಿರ್ದಾಕ್ಷಿಣ್ಯವಾಗಿ ಶೋಷಣೆ ಮಾಡುವಂಥ ಒಂದು ಬಗೆಯ ಸ್ಪರ್ಧೆಯನ್ನು ಬೆಳೆಸಿತು. ಆಧುನಿಕ ಯುರೋಪ್-ಸ್ಪೇನ್, ಫ್ರಾನ್ಸ್, ಪೋರ್ಚುಗಲ್ ಹಾಗೂ ಹೊಸ ಹಾಲೆಂಡ್‌ಗಳಂಥ ಬಲಶಾಲಿ ದೇಶಗಳ ರಾಜ್ಯಗಳು ಹುಟ್ಟಿಕೊಂಡು ರಾಜಕೀಯ ಸಾಧನ ಸೌಕರ್ಯಗಳನ್ನು ಒದಗಿಸಿತಲ್ಲದೆ, ಅವುಗಳನ್ನು ಈ ಎಲ್ಲ ಹೊಸ ಶಕ್ತಿಗಳಿಗೆ ಮಾರ್ಗತೋರಲು ಬಳಸಿಕೊಳ್ಳಲು ನೆರವಾಯಿತು. ಹೀಗೆ, ಪಶ್ಚಿಮ ಯುರೋಪ್ ರಾಜ್ಯ ಸರ್ಕಾರಗಳು ತಮ್ಮ ನಾಗರಿಕರು ಬಳಸುವ ಯಾವುದೇ ವಿಧಾನಗಳು, ಇತರ ರಾಜ್ಯಗಳ ಮೇಲೆ ರಾಜಕೀಯ ಹಾಗೂ ಆರ್ಥಿಕ ಪರಿಣಾಮ ಬೀರಬಹುದಾಗಿದ್ದಲ್ಲಿ ಅವುಗಳಿಗೆ ಪ್ರೋ ನೀಡುತ್ತಿದ್ದವು. ಪುನರುಜ್ಜೀವನದ ಹುರುಪು ಎಗ್ಗಿಲ್ಲದ ಸ್ವಾತಂತ್ರ್ಯಕ್ಕೆ ಅನುವು ಮಾಡಿಕೊಡುವುದರೊಂದಿಗೆ ಶೋಷಣೆಯ ಹೊಸ ತಂತ್ರಗಳನ್ನು ಅಳವಡಿಸಿಕೊಂಡ ವಾಣಿಜ್ಯ ಕ್ರಾಂತಿಯ ಅಭ್ಯಾಸದೊಂದಿಗೆ ಸಂಪತ್ತು ಹಾಗೂ ಅಧಿಕಾರಗಳನ್ನು ಪಡೆಯಲು ಹೊಸ ದಾರಿಗಳನ್ನು ಹುಡುಕಲು ಸಂಚು ಮಾಡು ವಂತಾಯಿತು. ಇವುಗಳ ಪೈಕಿ ಆಧುನಿಕ ಗುಲಾಮಗಿರಿಯ ವ್ಯವಸ್ಥೆಯೊಂದಿಗೆ ಗುಲಾಮರನ್ನು ಆಮದು ಮತ್ತು ರಫ್ತು ಮಾಡುವುದೂ ಸಹ ಸೇರಿತ್ತು.

ವಾಸ್ತವವಾಗಿ, ೧೪ನೆಯ ಶತಮಾನದವರೆಗೆ ಯುರೋಪಿಯನ್ನರು ತಾವಾಗಿಯೇ ಗುಲಾಮರನ್ನು ಯುರೋಪಿಗೆ ಕರೆತರುತ್ತಿರಲಿಲ್ಲ. ಅದಕ್ಕೂ ಮುಂಚೆ ಮುಸ್ಲಿಮರ ಆಳ್ವಿಕೆ ಯಲ್ಲಿ ಆಫ್ರಿಕನ್ನರು ಪಶ್ಚಿಮ ಯುರೋಪಿನ ಗುಲಾಮರ ಮಾರುಕಟ್ಟೆಯ ಮಾರ್ಗ ಹಿಡಿದಿದ್ದರು. ವಾಸ್ತವವಾಗಿ, ಸ್ಪೇನ್ ಮತ್ತು ಪೋರ್ಚುಗಲ್‌ಗಳು ಈ ವ್ಯಾಪಾರವನ್ನು ಯುರೋಪಿನಲ್ಲಿ ಪ್ರಾರಂಭಿಸಿದವು. ಯುರೋಪಿನಲ್ಲಿ ಎದ್ದ ವಿಸ್ತರಣಾವಾದದ ಭಾರಿ ಅಲೆಯಿಂದಾಗಿ, ಸ್ಪೇನಿಗಳು ಮತ್ತು ಪೋರ್ಚುಗೀಸರು ಸ್ಥಳೀಯರೊಂದಿಗೆ ಕ್ರಮಬದ್ಧ ವ್ಯಾಪಾರ ಸಂಬಂಧಗಳನ್ನು ಸ್ಥಾಪಿಸಿಕೊಳ್ಳುತ್ತ ಧರ್ಮ ಪರಿವರ್ತನೆಯ ನೆವದಲ್ಲಿ ಅವರನ್ನು ಯುರೋಪಿಗೆ ಕರೆದೊಯ್ಯುತ್ತಿದ್ದರು. ‘ಪವಿತ್ರ ಕಾರಣ’ದ(ಹೋಲಿ ಕಾಸ್) ಹಣೆಪಟ್ಟಿಯಡಿ ನೀಗ್ರೋಗಳನ್ನು ಗುಲಾಮರನ್ನಾಗಿ ಮಾಡುವ ಮೂಲಕ ತಮ್ಮ ರಾಷ್ಟ್ರ ದಲ್ಲಿದ್ದ ಕೂಲಿ ಸಮಸ್ಯೆಯನ್ನು ಪರಿಹರಿಸಿಕೊಳ್ಳುತ್ತಿದ್ದರು. ಯುರೋಪಿಗೆ ಅದೃಷ್ಟಕರವಾದ ಆದರೆ ಹೊಸ ಜಗತ್ತಿಗೆ ದುರದೃಷ್ಟಕರವಾದ ಗುಲಾಮಗಿರಿಗೆ ವಾಸ್ತವವಾಗಿ ಯುರೋಪಿನಲ್ಲಿ ಭದ್ರನೆಲೆ ದೊರೆಯಲಿಲ್ಲ. ಯುರೋಪಿನ ಹೊಸ ಆರ್ಥಿಕ ಸಂಸ್ಥೆಗಳು ಗುಲಾಮಗಿರಿಯ ವ್ಯವಸ್ಥೆಯನ್ನು ಸಾಕಷ್ಟು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರು ಕೇವಲ ಬ್ಯಾಂಕು, ಹಡಗು ಕಟ್ಟೆ, ವಾಣಿಜ್ಯ ಸಂಸ್ಥೆ ಮುಂತಾದವುಗಳಲ್ಲಿ(ಕೇವಲ ನಿಯಮಿತ ಸಂಖ್ಯೆಯ ಸೇವಕರನ್ನು) ಈ ಗುಲಾಮಗಿರಿ ವ್ಯವಸ್ಥೆಯ ಪೂರ್ಣ ಬಳಕೆ ಮಾಡಿಕೊಳ್ಳಲು ಅನುವಾಯಿತು.

ಗುಲಾಮಗಿರಿ ಮತ್ತು ಹೊಸ ಜಗತ್ತು

ಹೊಸ ಜಗತ್ತಿನಲ್ಲಿ ಯುರೋಪಿಯನ್ನರ ಹಾವಳಿಯು ಪ್ರಾರಂಭವಾಗುವುದರೊಂದಿಗೆ ನೀಗ್ರೋಗಳು ಹೊಸ ಸಂಶೋಧಕರು, ನೌಕರರು ಹಾಗೂ ಗುಲಾಮರಾಗಿ ಬಂದರು. ೧೫೦೧ರಷ್ಟು ಹಿಂದೆಯೇ ಸ್ಪೇನ್ ನೀಗ್ರೋಗಳು ಎಲ್ಲಿಯೂ ಹೋಗದಂತೆ ಪ್ರತಿಬಂಧಿಸಿ ದ್ದುದನ್ನು ಸಡಿಲಿಸಿ, ಹೊಸ ಜಗತ್ತಿನಲ್ಲಿ ಸ್ಪೇನ್‌ಗೆ ಸೇರಿದ ಪ್ರದೇಶಗಳಿಗೆ ಹೋಗಲು ನೀಗ್ರೋಗಳಿಗೆ ಅನುಮತಿ ನೀಡಲಾಯಿತು. ೧೫೨೫ರಲ್ಲಿ ಅಲ್‌ಮಾಗ್ರೊ ಮತ್ತು ವಾಲ್ಡಿವಿಯಗಳ ಯುದ್ಧಯಾತ್ರೆಯಲ್ಲಿ ನೀಗ್ರೋಗಳು ಇಂಡಿಯನ್ನರಿಂದ ತಮ್ಮ ಸ್ಪ್ಯಾನಿಷ್ ಒಡೆಯರನ್ನು ರಕ್ಷಿಸಿದ್ದರು. ಅಲ್ಲದೆ ನೀಗ್ರೋಗಳು ಹೊಸ ಜಗತ್ತಿನಲ್ಲಿ ಫ್ರೆಂಚರ ಶೋಧನೆಗೆ ಕೂಡ ಅವರಿಗೆ ನೆರವಾಗಿದ್ದರು. ಕೆನಡಿಯನ್ನರ ಯುದ್ಧಯಾತ್ರೆಗಳಲ್ಲಿ ಜೆಸ್ಯೂಟ್ ಪ್ರಚಾರಕರ ಜೊತೆಗಿದ್ದರು. ೧೭ನೆಯ ಶತಮಾನದಲ್ಲಿ ಫ್ರೆಂಚರು ಮಿಸ್ಸಿಪ್ಪಿ ಕಣಿವೆಯ ಮಹಾವಿಜಯವನ್ನು ಸಾಧಿಸಿದಾಗ, ಆ ಪ್ರದೇಶದಲ್ಲಿ ನೆಲೆಸಿದ ಮೊಟ್ಟಮೊದಲ ನಿವಾಸಿಗಳಲ್ಲಿ ನೀಗ್ರೋಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆದಾಗ್ಯೂ ಇಂಗ್ಲಿಷರು ಹೊಸ ಜಗತ್ತಿನ ಶೋಧನೆ ನಡೆಸಿದಾಗ ಅವರೊಂದಿಗೆ ಜೊತೆಗೂಡಿರಲಿಲ್ಲ. ಹೀಗೆ ಯುರೋಪಿಯನ್ ದಬ್ಬಾಳಿಕೆಗೆ ಹೊಸ ಜಗತ್ತನ್ನು ತೆರೆದಿಡುವ ಗುರಿ ಸಾಧನೆಯಲ್ಲಿ ನೀಗ್ರೋಗಳು ವ್ಯಾಪಕವಾಗಿ ಪಾಲ್ಗೊಂಡಿದ್ದುದು ವಿಪರ್ಯಾಸದ ಸಂಗತಿಯೇ ಸರಿ. ಹೊಸ ಜಗತ್ತಿನಲ್ಲಿ ಆರ್ಥಿಕ ಜೀವನ ನಾಟಕದ ತೆರೆಯನ್ನು ಸರಿಸಲು ನೀಗ್ರೋಗಳು ಸಹಾಯ ಮಾಡಿದರು. ಅಷ್ಟೇ ಅಲ್ಲ, ಗುಲಾಮಗಿರಿಯ ಜೀವಾವಧಿ ಸ್ಥಾನಕ್ಕೆ ಭದ್ರವಾಗಿ ಅಂಟಿ ಕೊಂಡು ಸಂಪನ್ಮೂಲಗಳನ್ನು ಪಡೆದುಕೊಳ್ಳುವಲ್ಲಿ ಕೂಡ ಇನ್ನೂ ಪ್ರಮುಖ ಪಾತ್ರ ವಹಿಸಲಿದ್ದರು. ಕಾಲ ಕಳೆದಂತೆ, ಅವರು ಹಳೆಯ ಜಗತ್ತಿನ ಆರ್ಥಿಕ ಜೀವನದ ಅವಿಭಾಜ್ಯ ಅಂಗವೇ ಆಗಿಹೋದರು.

ಯುರೋಪ್ ದೇಶಗಳು ಹೊಸ ಜಗತ್ತನ್ನು ಅಭಿವೃದ್ದಿಪಡಿಸುವ ಕಾರ್ಯ ಕೈಗೊಂಡಾಗ, ಮೊದಲಿಗೆ ಅಮೆರಿಕದ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಆಸಕ್ತಿ ಹೊಂದಿದ್ದರು. ಕೂಲಿಗಳು ಅಗತ್ಯವಾಗಿದ್ದು ಸುಲಭ ಬೆಲೆಗೆ ದೊರೆತಷ್ಟು ಉತ್ತಮವಾಗಿತ್ತು. ಇಂಡಿಯನ್ನರು ಕೂಡಲೇ ಲಭ್ಯವಿದ್ದುದರಿಂದ ಅವರನ್ನೇ ಬಳಸಿಕೊಳ್ಳಲಾಯಿತು. ಆದರೆ ಇಂಡಿಯನ್ನರು ಬಹುಬೇಗ ಕಾಯಿಲೆಗಳಿಗೆ ತುತ್ತಾಗುತ್ತಿದ್ದುದರಿಂದ ಹಾಗೂ ಇಂಡಿಯನ್ನರು ಸರಳ ಆರ್ಥಿಕ ಹಿನ್ನೆಲೆ ಹೊಂದಿದ್ದುದರಿಂದ ಅವರು ಪ್ಲಾಂಟೇಷನ್ ವ್ಯವಸ್ಥೆಯ ಶಿಸ್ತುಬದ್ಧ ಜೀವನಕ್ಕೆ ಹೊಂದಿಕೊಳ್ಳಲು ಸಿದ್ಧರಿರಲಿಲ್ಲ. ಹೀಗಾಗಿ ಅವರನ್ನು ತೆಗೆದುಹಾಕಲಾಯಿತು. ಕೂಲಿಗಳಿಗಾಗಿ ಮತ್ತೆ ಹುಡುಕಾಟ ಪ್ರಾರಂಭವಾಯಿತು. ೧೭ನೆಯ ಶತಮಾನದಲ್ಲಿ, ನೀಗ್ರೋಗಳು ಸಾಕಷ್ಟು ಸಂಖ್ಯೆಯಲ್ಲಿದ್ದು, ೧೫೦೧ ರಿಂದಲೂ ಹೊಸ ಜಗತ್ತಿನಲ್ಲಿದ್ದರೂ ಕೂಡ ಇಂಡಿಯನ್ನರು ಅಧ್ಯಕ್ಷರು ಹಾಗೂ ಅನರ್ಹರಾದವರೆಂದು ‘‘ಸಾಬೀತಾದ’’ ತರುವಾಯ ಯುರೋಪಿಯನ್ ಸಾಮ್ರಾಜ್ಯಶಾಹಿ ಗಳು ಮೊದಮೊದಲು, ತಮ್ಮ ಕಾರ್ಮಿಕ ಸಮಸ್ಯೆಗಳಿಗೆ ಅವರು ಪರಿಹಾರ ನೀಡಬಲ್ಲರೆಂದು ಭಾವಿಸಲಿಲ್ಲ. ನೀಗ್ರೋಗಳ ಬಗ್ಗೆ ಆಲೋಚಿಸುವುದಕ್ಕೂ ಮೊದಲು ಸ್ವತ್ತು ಕೋರಿಕೆ ಸಲ್ಲಿಸಿ ಬಂದಿದ್ದ ಯುರೋಪಿನ ಬಡವರಾದ ಬಿಳಿಯ ಜನರನ್ನು ಬಳಸಿಕೊಳ್ಳುತ್ತಿದ್ದರು. ಆದರೆ ಕಾರ್ಮಿಕರಿಗಾಗಿ ಬೇಡಿಕೆಯು ಸರಬರಾಜನ್ನೂ ಮೀರಿ ಹೆಚ್ಚುತ್ತಿದ್ದಿತು. ಕೋರಿಕೆ ಸಲ್ಲಿಸಿ ಕೆಲಸ ಮಾಡುತ್ತಿದ್ದ ಬಿಳಿ ನೌಕರರು ಕೃಷಿಗಿಂತಲೂ ಉದ್ಯಮಗಳಲ್ಲಿ ಹೆಚ್ಚು ಆಸಕ್ತಿ ವಹಿಸಬಹುದೆಂಬ ಭಯವೂ ಬೆರೆತಾಗ ಇಂಗ್ಲೀಷರು ನೀಗ್ರೋಗಳನ್ನು ಬಳಸಿಕೊಳ್ಳುವ ಯೋಚನೆ ಮಾಡಿದರು. ನೀಗ್ರೋಗಳನ್ನು ಬಳಸಿಕೊಳ್ಳುವಲ್ಲಿ ಕೆಲವೊಂದು ಪ್ರಯೋಜನಗಳೂ ಇದ್ದವು. ಒಂದು, ಅವರ ಮೈಬಣ್ಣದಿಂದಾಗಿ ಅವರನ್ನು ಸುಲಭವಾಗಿ ಹೆದರಿಸಬಹುದಾಗಿತ್ತು. ಎರಡು, ನಿರಂತರ ಕಾರ್ಮಿಕ ಸರಬರಾಜಿನ ಭರವಸೆಯೊಂದಿಗೆ ಅವರನ್ನು ನೇರವಾಗಿ ಖರೀದಿ ಮಾಡಬಹುದಾಗಿತ್ತು. ಜೊತೆಗೆ, ನೀಗ್ರೋಗಳನ್ನು ಹೆಚ್ಚು ಕಠಿಣವಾದ ಶಿಸ್ತು ಕ್ರಮಗಳನ್ನು ಬಳಸಿ ನಿಯಂತ್ರಿಸಬಹುದಾಗಿತ್ತಲ್ಲದೆ, ಪ್ಲಾಂಟೇಷನ್ನುಗಳಲ್ಲಿ ಸ್ಥಿರತೆಯನ್ನು ಕಾಯ್ದಿಡುವ ಸಲುವಾಗಿ ಅವರನ್ನು ನೈತಿಕವಾಗಿ, ಆಧ್ಯಾತ್ಮಿಕವಾಗಿ ಕೂಡ ಕೆಳಮಟ್ಟದಲ್ಲಿರಿಸ ಬಹುದಾಗಿತ್ತು. ಆನಂತರ ನೀಗ್ರೋ ಗುಲಾಮಗಿರಿಯು ಶಾಶ್ವತ ವ್ಯವಸ್ಥೆಯಾಗಿ ಹೊಸ ಜಗತ್ತಿನಲ್ಲಿ ಉದ್ಭವಿಸಿದ ಅತ್ಯಂತ ಕಠಿಣ ಸಮಸ್ಯೆಗಳಲ್ಲೊಂದಕ್ಕೆ ಪರಿಹಾರವೊದಗಿ ದಂತಾಯಿತು. ನೀಗ್ರೋಗಳ ಸರಬರಾಜಿನೊಂದಿಗೆ ಅಮೆರಿಕ ಇನ್ನೆಂದೂ ಕಾರ್ಮಿಕ ಸಮಸ್ಯೆಯಿಂದ ನರಳಬೇಕಾಗಲಿಲ್ಲ. ಇದೀಗ ಯುರೋಪಿಯನ್ ದೇಶಗಳು ಇಂಥ ಕಪ್ಪು ಬಂಗಾರವನ್ನು ಆಫ್ರಿಕದಿಂದ ತಂದುದಕ್ಕಾಗಿ ತಮ್ಮ ಮೊಟ್ಟಮೊದಲ ನಿವಾಸಿಗಳ ಕಾರ್ಯವನ್ನು ಪ್ರಶಂಸಿಸಿ ಹಮ್ಮಿನಿಂದ ಬೀಗುವಂತಾಯಿತು; ಅದು ಪ್ರಮುಖ ಆರ್ಥಿಕ ವ್ಯವಸ್ಥೆಗಳಲ್ಲಿ ಮತ್ತೊಂದು ಹೊಸ ಹೆಜ್ಜೆಯನ್ನು ಎಂದರೆ ಮಾನವ ಜೀವಿಗಳ ಸಾಗಣೆಯಲ್ಲಿ ನಿರತರಾದವರ ಅತ್ಯಮೂಲ್ಯ ಸಂಪನ್ಮೂಲವೇ ಆದ ಗುಲಾಮರ ಮಾರಾಟದಿಂದ ಪ್ರಾಯಶಃ ವಾಣಿಜ್ಯ ಕ್ರಾಂತಿಯ ಕಟ್ಟಕಡೆಯ ಪ್ರಮುಖ ಬೆಳವಣಿಗೆಗೆ ಅವಕಾಶ ಕಲ್ಪಿಸಿತೆನ್ನಬಹುದು.

೧೫೧೭ರಲ್ಲಿ ಬಿಷಪ್ ಲಾಸ್ ಕಾಸಸನು ಹೊಸ ಜಗತ್ತಿಗೆ ವಲಸೆ ಹೋಗುವ ಸ್ಪೇನ್ ಜನರು ತಲಾ ಹನ್ನೆರಡು ಜನ ನೀಗ್ರೋಗಳನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡುವ ಮೂಲಕ ಹೊಸ ಜಗತ್ತಿಗೆ ಗುಲಾಮ ವ್ಯಾಪಾರವನ್ನು ವಿಧಿವತ್ತಾಗಿ ಪ್ರಾರಂಭ ಮಾಡಿದಂತಾಯಿತು. ವೆಸ್ಟ್ ಇಂಡಿಯನ್ ಪ್ಲಾಂಟೇಷನ್ನುಗಳ ಗಾತ್ರ ಹಾಗೂ ಮಹತ್ತ್ವ ಬೆಳೆದಂತೆಲ್ಲ ಗುಲಾಮ ವ್ಯಾಪಾರವೂ ಕೂಡ ಬೃಹತ್ತಾಗಿ, ಲಾಭದಾಯಕ ಉದ್ಯಮವಾಗಿ ಬೆಳೆಯಿತಲ್ಲದೆ ಅದಾಗಿಯೇ ಸಾವಿರಾರು ಜನರನ್ನು ನಿಯೋಗಿಸುವ ಹಾಗೂ ಮಿಲಿಯಗಟ್ಟಲೆ ಡಾಲರುಗಳ ನಿವ್ವಳ ಬಂಡವಾಳ ಹೊಂದಿರುವ ಭಾರಿ ಆರ್ಥಿಕ ಉದ್ಯಮವಾಗಿಬಿಟ್ಟಿತು. ಆಫ್ರಿಕನ್ ವ್ಯಾಪಾರ ರಂಗದಲ್ಲಿ ವ್ಯವಹರಿಸಿದ ಮೊಟ್ಟಮೊದಲ ಯುರೋಪಿಯನ್ ದೇಶ ಪೋರ್ಚುಗಲ್ ಆಗಿದ್ದರೂ ಆ ಉದ್ಯಮದಿಂದ ಹೆಚ್ಚು ಲಾಭ ಗಳಿಸಿದ ಪ್ರಮುಖ ದೇಶಗಳ ಗುಂಪಿಗೆ ಅದು ಸೇರಲಿಲ್ಲ. ೧೭ ಮತ್ತು ೧೮ನೆಯ ಶತಮಾನಗಳಲ್ಲಿನ ಇಷ್ಟು ದೊಡ್ಡ ಮಾನವ ವ್ಯಾಪಾರೋದ್ಯಮವು ಭಾರಿ ಪ್ರಮಾಣದಲ್ಲಿ ಡಚ್, ಫ್ರೆಂಚ್ ಹಾಗೂ ಇಂಗ್ಲಿಷ್ ಕಂಪೆನಿಗಳ ಹಿಡಿತದಲ್ಲಿದ್ದವು. ೧೭ನೆಯ ಶತಮಾನದಲ್ಲಿ ಗುಲಾಮ ವ್ಯಾಪಾರವು ಇಂಗ್ಲಿಷರಿಗೆ ವಿಪುಲ ಲಾಭವನ್ನೇ ತಂದಿತ್ತಿತಲ್ಲದೇ ಅಕ್ಷರಶಃ ಅದರ ಮೇಲೆ ಅವರ ಏಕಸ್ವಾಮ್ಯವನ್ನೇ ಸ್ಥಾಪಿಸಿತು. ಎಲ್ಲಕ್ಕಿಂತ ಹೆಚ್ಚಾಗಿ ಸ್ಪೇನ್ ವಿಜಯ ಸಮರದಲ್ಲಿ ಫ್ರಾನ್ಸ್ ದೇಶವು ಅನುಭವಿಸಿದ ಭಾರಿ ಹೊಡೆತದಿಂದಾಗಿ ಇಂಗ್ಲೆಂಡಿಗೆ ಏಷಿಯೆನ್ ಟೊ ಎಂದರೆ ಮೂವತ್ತು ವರ್ಷಗಳಷ್ಟು ದೀರ್ಘಾವಧಿಯಲ್ಲಿ ಸ್ಪ್ಯಾನಿಷ್ ಕಾಲೋನಿಗಳಿಗೆ ಗುಲಾಮರನ್ನು ಸಾಗಿಸುವ ಸಂಪೂರ್ಣ ಹಕ್ಕು ದೊರೆಯಿತು. ವೆಸ್ಟ್‌ಇಂಡೀಸ್ ದ್ವೀಪಗಳಲ್ಲಿ ಕಾಲೋನಿಗಳನ್ನು ಹೊಂದುವುದರ ಜೊತೆಗೆ ಸಮೃದ್ಧ ಉತ್ಪಾದಕತೆಯಿಂದ ಕೈತುಂಬ ಲಾಭಾಂಶಗಳನ್ನು ನೀಡುತ್ತಿದ್ದ ಮುಖ್ಯ ದೇಶಗಳೂ ಸೇರಿ ಇಂಗ್ಲೆಂಡಿನ ವಾಣಿಜ್ಯ ವ್ಯವಹಾರವು ಇಡೀ ಪ್ರಪಂಚವನ್ನೇ ಆಳುವಷ್ಟು ವ್ಯಾಪಕವಾಯಿತು.

ಜಗತ್ತಿನಾದ್ಯಂತ ನಡೆದ ಈ ಮಾನವ ವ್ಯಾಪಾರದ ಪರಿಣಾಮಗಳನ್ನು ಲೆಕ್ಕ ಹಾಕುವುದಿರಲಿ ಇದರಿಂದ ಬಹಳಷ್ಟು ಸೊರಗಿದ್ದು ಆಫ್ರಿಕಾ ಖಂಡ. ನಾಲ್ಕು ಶತಮಾನಗಳಿಗೂ ಕಡಿಮೆ ಕಾಲಾವಧಿಯಲ್ಲಿ ಆಫ್ರಿಕಾ ಖಂಡದಿಂದ ಮಿಲಿಯನ್‌ಗಟ್ಟಲೆ ನೀಗ್ರೋಗಳು ದೇಶಾಂತರ ಹೋಗುವಂತಾಗಿದ್ದು ಇತಿಹಾಸದ ಪುಟಗಳಲ್ಲಿ ತೀವ್ರ ಪರಿಣಾಮಕಾರಿಯಾದ ಹಾಗೂ ದಾರುಣವಾದ ಸಾಮಾಜಿಕ ಕ್ರಾಂತಿಯು ನಡೆದಿರುವುದನ್ನು ದಾಖಲಿಸುತ್ತದೆ. ವ್ಯಾಪಾರಿಗಳು ಆರೋಗ್ಯಶಾಲಿಗಳಾದ, ದೃಢಕಾಯರಾದ, ತರುಣರಾದ, ದಕ್ಷರಾದ ಹಾಗೂ ಸಂಸ್ಕಾರವಂತರಾದ ಜನರಿಗಾಗಿ ಬೇಡಿಕೆಯೊಡ್ಡುತ್ತಿದ್ದರು. ಆಫ್ರಿಕಾದ ಮಾನವ ಸಂಪನ್ಮೂಲವಾದ ಯುವಜನಾಂಗವನ್ನೇ ಅಲ್ಲಿಂದ ಸಾಗಿಸಿದ್ದುದರಿಂದ ಬಲಹೀನರು ಹಾಗೂ ದಡ್ಡರು ಮಾತ್ರ ಅಲ್ಲಿ ಉಳಿದಿದ್ದರು. ೧೫ನೆಯ ಶತಮಾನದ ಪ್ರಾರಂಭದ ವೇಳೆಗೆ ಸಾಂಸ್ಕೃತಿಕವಾಗಿ ಯುರೋಪಿನಿಂದ ಸಾಕಷ್ಟು ದೂರದಲ್ಲಿಯೇ ಉಳಿದಿದ್ದ ಆಫ್ರಿಕಾ, ಉತ್ತರದ ತನ್ನ ಕ್ರಿಶ್ಚಿಯನ್ ನೆರೆಹೊರೆ ರಾಜ್ಯಗಳಿಂದ ಅತಿ ಕೀಳ್ಮಟ್ಟದ ಪ್ರಭಾವವನ್ನು ಹೊಂದಬೇಕಾಯಿತು ಹಾಗೂ ಇಂಥ ವೈರುಧ್ಯದ ಪರಿಸ್ಥಿತಿಗಳಲ್ಲಿ ಅದು ಎಷ್ಟು ಹಿಂಜರಿತಕ್ಕೊಳಗಾಯಿತೆಂದರೆ ೧೯ನೆಯ ಶತಮಾನದಲ್ಲಿ ಕಾಲಕ್ರಮದಲ್ಲಿ ಸಾಮ್ರಾಜ್ಯಶಾಹಿ ಗುಲಾಮಗಿರಿಯನ್ನೂ ಸಹ ಅದರ ಮೇಲೆ ಹೇರಲಾಯಿತು.

ವಸಾಹತುಶಾಹಿ ಉದ್ಯಮ ಹಾಗೂ ಗುಲಾಮಗಿರಿ

ಹೊಸ ಜಗತ್ತಿನ ಅಭಿವೃದ್ದಿಯಿಂದಾಗಿ ಮೊಟ್ಟಮೊದಲು ಯುರೋಪಿಯನ್ನರ ಆರ್ಥಿಕ ಜೀವನದಲ್ಲಿ ಗುಲಾಮ ವ್ಯಾಪಾರವು ಅತ್ಯಂತ ಮಹತ್ವದ ಅಂಶವಾಯಿತು. ಹೊಸ ಜಗತ್ತಿನಲ್ಲಿ ಲಾಭದಾಯಕ ಕೃಷಿ ಆರ್ಥಿಕತೆಯನ್ನು ಬೆಳೆಸಲು ತೀವ್ರ ಪ್ರಯತ್ನ ಮಾಡುವಲ್ಲಿ ವೆಸ್ಟ್ ಇಂಡೀಸ್ ಮೊದಲಿನದೆನ್ನಬಹುದು. ವೆಸ್ಟ್ ಇಂಡೀಸ್ ದ್ವೀಪಗಳ ಹೊಗೆಸೊಪ್ಪಿನ ಪ್ಲಾಂಟೇಷನ್ನುಗಳಲ್ಲಿ ಕೆಲಸ ಮಾಡಲು ಮೊದಲಿಗೆ ನೀಗ್ರೋಗಳನ್ನು ಬಳಸಿಕೊಳ್ಳಲಾಯಿತು. ೧೬೩೯ರ ವೇಳೆಗೆ ಯುರೋಪಿಯನ್ ಮಾರುಕಟ್ಟೆಗಳಲ್ಲಿ ಗಿರಾಕಿಗಳಿಲ್ಲದೆ ಸರಕುಗಳು ಎಷ್ಟು ತುಂಬಿದ್ದುವೆಂದರೆ ಬೆಲೆಯಲ್ಲಿ ತೀವ್ರ ಕುಸಿತವುಂಟಾಗಿ ವೆಸ್ಟ್ ಇಂಡಿಯನ್ ಪ್ಲಾಂಟರುಗಳಿಗೆ ಭಾರಿ ನಷ್ಟವಾಯಿತು. ಅವರಲ್ಲಿ ಕೆಲವರು ಹತ್ತಿ ಮತ್ತು ನೀಲಿ ಬೆಳೆಗಳ ಕಡೆ ಗಮನ ಹರಿಸಿದರೂ ಅವರು ನಿರೀಕ್ಷಿಸಿದಷ್ಟು ಲಾಭ ಅವೆರಡರಿಂದಲೂ ಸಿಗಲಿಲ್ಲ. ಕಬ್ಬು ಬೆಳೆಯಲು ಪ್ರಯತ್ನ ಮಾಡಬಹುದೆಂದು ಸೂಚಿಸಿದ ಡಚ್ ವ್ಯಾಪಾರಿಗಳ ಸೂಚನೆಗಳನ್ನು ಕೆಲವರು ಅನುಸರಿಸಬಯಸಿದರು. ಪೋರ್ಚುಗೀಸರು ಬ್ರೆಜಿಲ್‌ನಲ್ಲಿ ಮೂರು ತಲೆಮಾರುಗಳಿಂದಲೂ ಅನುಸರಿಸುತ್ತ ಬಂದಿದ್ದು ಅಪಾರ ಯಶಸ್ಸುಗಳಿಸಿದ್ದ ವಿಧಾನಗಳನ್ನು ನೇರವಾಗಿ ಅಧ್ಯಯನ ಮಾಡಲು ಕೆಲವರು ಬ್ರೆಜಿಲ್ ದೇಶಕ್ಕೂ ಹೋದರು. ಅದೊಂದು ಸದವಕಾಶವಾಗಿ ಕಂಡುಬಂದದ್ದರಿಂದ ಡಚ್ ಹಾಗೂ ಇಂಗ್ಲಿಷ್ ವ್ಯಾಪಾರಿಗಳಿಂದ ಬಂಡವಾಳವನ್ನು ಸಾಲ ರೂಪದಲ್ಲಿ ಪಡೆದು ವೆಸ್ಟ್ ಇಂಡಿಯಾದ ಪ್ಲಾಂಟರುಗಳು ಕಬ್ಬು ಬೆಳೆಯಲಾರಂಭಿಸಿದರು. ಅವರ ನಿರೀಕ್ಷೆಗೂ ಮೀರಿ ಅಪಾರ ಲಾಭವುಂಟಾದ್ದರಿಂದ ಕಬ್ಬು ಸಾಗುವಳಿಯನ್ನು ಇನ್ನಷ್ಟು ವಿಸ್ತರಿಸಲು ಕೂಡಲೇ ಕ್ರಮ ತೆಗೆದುಕೊಂಡರು. ಕೃಷಿ ಕಾರ್ಮಿಕರ ಸಮಸ್ಯೆ ತೀವ್ರವಾಯಿತು. ಪ್ಲಾಂಟರುಗಳು ನೀಗ್ರೋ ಗುಲಾಮರನ್ನು ಹೆಚ್ಚುಹೆಚ್ಚಾಗಿ ಬಳಸಿಕೊಳ್ಳತೊಡಗಿದರು. ಹೀಗೆ ೧೭ನೆಯ ಶತಮಾನದ ಮಧ್ಯಾವಧಿಯಲ್ಲಿ ವೆಸ್ಟ್ ಇಂಡೀಸ್ ದ್ವೀಪಗಳಿಗೆ ನೀಗ್ರೋಗಳನ್ನು ಆಮದು ಮಾಡಿಕೊಳ್ಳುವ ಅಭ್ಯಾಸ ಹೆಚ್ಚಾಯಿತು.

ವೆಸ್ಟ್ ಇಂಡೀಸ್ ಪ್ಲಾಂಟೇಷನ್‌ಗಳಲ್ಲಿ ಮಾನವೀಯತೆಯೇ ಕಂಡುಬರುತ್ತಿರಲಿಲ್ಲವೆಂಬ ಬಗ್ಗೆ ದಾಖಲೆಗಳಿವೆ. ಗುಲಾಮಗಿರಿ, ಅತ್ಯವಶ್ಯವಾಗಿ, ಸಂಪೂರ್ಣವಾಗಿ ಆರ್ಥಿಕ ವ್ಯವಸ್ಥೆಯೇ ಆಗಿದ್ದಿತು. ಗುಲಾಮರನ್ನು ಬಹುಮಟ್ಟಿಗೆ ಕಬ್ಬು ಮತ್ತಿತರ ವ್ಯಾಪಾರಿ ಬೆಳೆಗಳನ್ನು ಬೆಳೆಯುವ ಏಕೈಕ ಉದ್ದೇಶದಿಂದಲೇ ಬಳಸಿಕೊಳ್ಳಲಾಗುತ್ತಿತ್ತು. ವೆಸ್ಟ್ ಇಂಡೀಸಿನ ಗುಲಾಮಗಿರಿಯಿಂದಾದ ಅಪಾಯಗಳನ್ನು ಕಡೇಪಕ್ಷ ಕಡಿಮೆ ಮಾಡಲು ಪ್ರಯತ್ನಿಸುವಂಥ ಸಂಸ್ಥೆಗಳನ್ನು ಬೆಳೆಸಲಾಗಲಿ, ಉತ್ತೇಜಿಸಲಾಗಲಿ ಯಾವುದೇ ಪ್ರಯತ್ನವನ್ನೂ ಮಾಡಲಾಗಿರಲಿಲ್ಲ. ಇದರ ಜೊತೆಗೆ, ದ್ವೀಪಗಳಲ್ಲಿ ಇಂಥ ಅಮಾನುಷ ಕೃತ್ಯಗಳನ್ನು ನಡೆಸುತ್ತಿದ್ದವರು ಆ ದ್ವೀಪದ ಮೂಲ ನಿವಾಸಿಗಳೇ ಆಗಿರಲಿಲ್ಲ.

ಭೂಮಾಲೀಕರೇ ಇಲ್ಲದಿದ್ದ ಈ ಮುಖ್ಯ ಸಂಗತಿಯೇ ಗುಲಾಮರ ಆರೋಗ್ಯ ಹಾಗೂ ಜೀವನವನ್ನು ಹಾಳುಮಾಡುತ್ತಿದ್ದಂಥ ಅಭ್ಯಾಸಗಳು ಬೆಳೆದುಬರಲು ಅತಿಮುಖ್ಯ ಕಾರಣವಾಗಿದೆ. ಆ ಪ್ರದೇಶದಲ್ಲಿ ಅತಿ ಕಡಿಮೆ ಪ್ರಮಾಣದಲ್ಲಾದರೂ ನಾಗರಿಕತೆಯನ್ನು ತರುವ ಬಗ್ಗೆ ಮಾಡಬಹುದಾದ ಯಾವುದೇ ಆಲೋಚನೆಯೂ ಸಂಪೂರ್ಣವಾಗಿ ಮರೆಯಾಗಿತ್ತೆನ್ನಬಹುದು. ವಿದೇಶಿಯರ ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಗುಲಾಮರು ಕೇವಲ ತಮ್ಮ ಉದ್ಯೋಗದಾತರಿಗೆ ಐಶ್ವರ್ಯವನ್ನು ಸಂಪಾದಿಸಿಕೊಡುವುದಷ್ಟನ್ನೇ ಗುರಿ ಯಾಗಿ ಹೊಂದಿದ್ದ ಅನಾಸಕ್ತ ಜನರು ಬಲಿಪಶುಗಳಾಗಿದ್ದರು. ಮಾನವೀಯ ಸಂಬಂಧಗಳಿಗೆ ಎಡೆಯೇ ಇರಲಿಲ್ಲವಾದುದರ ಪರಿಣಾಮವಾಗಿ ಈ ವ್ಯವಸ್ಥೆಯ ಚರಿತ್ರೆಯಲ್ಲಿ ಗುಲಾಮರನ್ನು ಅನಾಗರಿಕವಾಗಿ ನಡೆಸಿಕೊಳ್ಳುವ ಪದ್ಧತಿಯ ಬೆಳವಣಿಗೆಯ ಬಗ್ಗೆ ಉಲ್ಲೇಖಗಳೇ ದೊರೆಯುವುದಿಲ್ಲ. ಆಫ್ರಿಕಾದಿಂದ ಕರೆತರಲಾದ ಹೊಸಬರ ಆಗಮನ ಅಥವಾ ಬಹುಸಂಖ್ಯೆಯಿಂದಾಗಿ ಗುಲಾಮರ ಮರಣಸಂಖ್ಯಾ ಪ್ರಮಾಣ ಬಹಳಷ್ಟು ಏರುವಂತಾಯಿತು. ದೀರ್ಘವಾದ ಕೆಲಸದ ಅವಧಿ ಹಾಗೂ ಆಹಾರಾಭಾವಗಳನ್ನು ಪರಿಗಣಿಸಿದಾಗ ಗುಲಾಮರು ದಂಗೆಯೇಳುವ ದಿನ ದೂರವಿರಲಿಲ್ಲವೆನಿಸಿರಬಹುದು. ಅಮಾನವೀಯ ಶಿಕ್ಷೆ ಮಾತ್ರವಲ್ಲ, ಪುರುಷ ಮತ್ತು ಮಹಿಳಾ ಕೆಲಸಗಾರರ ನಡುವೆ ಯಾವುದೇ ವ್ಯತ್ಯಾಸವಿರಲಿಲ್ಲ. ಎದುರು ಬೀಳುವುದನ್ನು ಹಾಗೂ ಓಡಿಹೋಗುವುದನ್ನು ತಡೆಯಲು ಇನ್ನೂ ಕ್ರೂರವಾದ ಶಿಕ್ಷೆ ವಿಧಿಸುತ್ತಿದ್ದರೂ ಕೂಡ ಅವೆಲ್ಲವೂ ವಿಫಲವಾಯಿತು. ಗುಲಾಮರು ಆಗಿದಾಂಗ್ಗೆ ಓಡಿಹೋಗುತ್ತಿದ್ದರು. ಮಾತ್ರವಲ್ಲ ‘ಮರಾನ್’ಗಳೆಂದು ಕರೆಸಿಕೊಳ್ಳುತ್ತಿದ್ದ ಗುಲಾಮರು ಕಳ್ಳತನ, ಗುಲಾಮರ ಮಾರಾಟ ಮಾಡುವುದು ಹಾಗೂ ಓಡಿಹೋಗಲು ‘‘ಪ್ರಚೋದಿಸುವ’’ ಮೂಲಕ ಪ್ಲಾಂಟರುಗಳಿಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದರು.

ದಕ್ಷಿಣದ ಕಾಲೋನಿಗಳಲ್ಲಿ ಕೂಲಿಗಳ ಸಮಸ್ಯೆ ಅತ್ಯಂತ ತೀವ್ರ ಸ್ವರೂಪದ್ದಾಗಿತ್ತು. ಹಾಗೂ ಈ ಕಾಲೋನಿಗಳಲ್ಲಿ ಈ ವ್ಯವಸ್ಥೆಯನ್ನು ನೆಲೆಯೂರುವಂತೆ ಮಾಡುವ ಪ್ರಕ್ರಿಯೆ ಇನ್ನಷ್ಟು ದೂರ ಹೋಗಿತ್ತು. ದಕ್ಷಿಣ ವಸಾಹತುದಾರನಿಗೆ ಮೊದಮೊದಲು ಗುಲಾಮಗಿರಿಯು ಉಲ್ಬಣಗೊಳ್ಳುತ್ತಿದ್ದ ಆರ್ಥಿಕ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಪ್ರಾರಂಭಿಸಲಾದ ಆರ್ಥಿಕ ಸನ್ನಿವೇಶವಾಗಿತ್ತು. ಭಾರತೀಯ ಹಾಗೂ ಬಿಳಿಯ ಕೂಲಿಗಳು ಅತೃಪ್ತಿಕರ ಹಾಗೂ ಅಧ್ಯಕ್ಷರಾಗಿದ್ದುದರಿಂದ ಅವರಿಗೆ ನೀಗ್ರೋ ಗುಲಾಮಗಿರಿಯನ್ನು ನೆಲೆಯೂರಿ ಸುವುದೇ ಏಕೈಕ ಪರಿಹಾರವಾಗಿತ್ತು. ವರ್ಜೀನಿಯಾದಲ್ಲಿ ಈ ಪರಿಹಾರವನ್ನು ಕಂಡುಕೊಂಡ ತರುವಾಯ ಜಾರ್ಜಿಯ ಒಂದನ್ನುಳಿದು ಉಳಿದವರು ಇದನ್ನೇ ಅನುಸರಿಸಿದರು. ಗುಲಾಮಗಿರಿ ವ್ಯವಸ್ಥೆಯನ್ನು ಸ್ಥಾಪಿಸಲು ಯುರೋಪಿಯನ್ನರು ಮಾಡಿಕೊಂಡ ಮೊದಲ ಸಮರ್ಥನೆಯೆಂದರೆ ಆತ್ಮಮೋಕ್ಷ ಕರುಣಿಸುವುದೆಂದು. ಆದರೆ ಹೊಸ ಜಗತ್ತಿನಲ್ಲಿ ಬಲವಾದ ಚರ್ಚುಗಳು ಇರಲಿಲ್ಲವಾದ್ದರಿಂದ ರಾಜ್ಯ ಸರ್ಕಾರಗಳು ಪ್ಲಾಂಟರುಗಳಿಗೆ ಕ್ರಿಶ್ಚಿಯನ್ ಧರ್ಮವು ಮುಕ್ತಿ ನೀಡುವ ಅಧಿಕಾರವನ್ನು ಹೊಂದಿಲ್ಲವೆಂಬುದಾಗಿ ಮನವೊಲಿಸಲು ಕಷ್ಟಸಾಧ್ಯವಾಗುತ್ತಿತ್ತು. ಗುಲಾಮಗಿರಿಯು ಉತ್ತಮವಾದುದ್ದಾಗಿದ್ದು ಕ್ರಿಶ್ಚಿಯನ್ ಧರ್ಮದೊಂದಿಗೆ ಬಾಂಧವ್ಯ ಕಲ್ಪಿಸುವುದರಿಂದ ಅನಾಗರಿಕರು (ಹೀದನರು) ಆತ್ಮಮೋಕ್ಷ ಪಡೆಯಲು ನೆರವಾಗುತ್ತದೆಂದು ಅವರು ಹೇಳುತ್ತಿದ್ದರು.

೧೯ನೆಯ ಶತಮಾನದಲ್ಲಿ ವಸಾಹತುದಾರರಿಗೆ ಗುಲಾಮಗಿರಿ ವ್ಯವಸ್ಥೆಗೆ ಅತ್ಯಂತ ಪ್ರಬಲವಾದ ಸಮನ್ವಯ ಸಾಧನೆಯನ್ನು ರೂಪಿಸುವ ಆಲೋಚನೆ ಬೆಳೆಯಿತು. ಆದರೆ ವಸಾಹತುದಾರರು ಹೊಸದಾಗಿ ಕಂಡುಹಿಡಿದ ಈ ಬೋಧನೋತ್ಸಾಹಕ್ಕೆ ಕೂಡ ವರ್ಣಭೇದವೇ ಆಧಾರವಾಗಿತ್ತು. ಹೀದನರು(ಅನಾಗರಿಕರು) ಕ್ರಿಶ್ಚಿಯನ್ ಧರ್ಮಕ್ಕೆ ಸೇರಿಲ್ಲವಾದ್ದರಿಂದ ಅವರನ್ನು ಗುಲಾಮರನ್ನಾಗಿ ಮಾಡುವುದು ಸಮರ್ಥನೀಯವಾದರೆ, ಇನ್ನಿತರ ಕೂಲಿಗಳು ಕ್ರಿಶ್ಚಿಯನ್ ಭೂಮಿಗಳಿಂದ ಬಂದವರಾದುದರಿಂದ ಶುದ್ದೀಕರಣದ ಲಕ್ಷ್ಯವು ನೀಗ್ರೋಗಳ ಮೇಲೆಯೇ ಕೇಂದ್ರೀಕೃತವಾಯಿತು. ಆದ್ದರಿಂದ, ನೀಗ್ರೋ ಮನುಷ್ಯ ಕಾಡುಮನುಷ್ಯನೆಂದು, ಆ ವರ್ಣೀಯರನ್ನೇ ಮಾನವರನ್ನಾಗಿಸುವ ಕಾರ‌್ಯಕ್ರಮಗಳು ಅವಶ್ಯಕತೆಯಿದ್ದು ಅದನ್ನು ಪಾಶ್ಚಿಮಾತ್ಯ ನಾಗರಿಕತೆ ಮಾತ್ರವೇ ನೀಡಬಲ್ಲುದೆಂಬ ಭಾವನೆ ಮೊಳೆಯಿತು. ಎಂದರೆ ಗುಲಾಮಗಿರಿಗೆ ನೀಗ್ರೋ ಮನುಷ್ಯನೇ ಯೋಗ್ಯ ಎಂಬ ತೀರ್ಮಾನವನ್ನು ಪ್ರಚಲಿತಗೊಳಿಸುವುದು ಕಷ್ಟಕರವಾಗಲಿಲ್ಲ. ಸ್ವಭಾವ, ಮನೋಭಾವ, ಮೈಬಣ್ಣ ಮತ್ತು ನಾಗರಿಕತೆ ಇಲ್ಲದಿರುವುದು ಇವೆಲ್ಲದರಿಂದಲೂ ನೀಗ್ರೋಗಳು ಸ್ವಾಭಾವಿಕವಾಗಿಯೇ ಗುಲಾಮಗಿರಿಗೆ ಹೇಳಿಮಾಡಿಸಿದಂಥವರು ಎಂಬುದಾಗಿ ವಸಾಹತುದಾರರು ಕಾರಣ ನೀಡಿದರು. ಅಂತರ್ಯುದ್ಧಕ್ಕೆ ಮೊದಲು ಶ್ರಮ ಹಾಗೂ ತೊಂದರೆ ಅನುಭವಿಸು ತ್ತಿದ್ದರು. ಆನಂತರ ಈ ಸಮನ್ವಯದ ಬಗ್ಗೆ ಅತಿ ಹೆಚ್ಚು ಬೆಂಬಲ ದೊರೆತರೂ ದಕ್ಷಿಣದ ವಸಾಹತುಗಳಲ್ಲಿ ಇದು ಅಸ್ತಿತ್ವಕ್ಕೆ ಬಂತು.

ಆದರೆ ಮಧ್ಯ ಭಾಗದ ವಸಾಹತುಗಳಲ್ಲಿ ಗುಲಾಮಗಿರಿಯು ಆರ್ಥಿಕ ವ್ಯವಸ್ಥೆಯಾಗಿ ಅಷ್ಟೇನೂ ಯಶಸ್ಸು ಕಾಣಲಿಲ್ಲ. ಆ ಪ್ರದೇಶದ ಜನರ ಆರ್ಥಿಕ ಜೀವನದಲ್ಲಿ ವಾಣಿಜ್ಯ ಹಾಗೂ ಔದ್ಯಮಿಕ ಲಕ್ಷಣವೇ ಪ್ರಮುಖವಾಗಿದ್ದುದರಿಂದ ಅವರು ಗುಲಾಮ ಕೂಲಿಗಳಿಗೆ ಹೆಚ್ಚು ಪ್ರಮಾಣದಲ್ಲಿ ಉದ್ಯೋಗ ನೀಡಲು ಉತ್ತೇಜನ ನೀಡಲಿಲ್ಲ. ಹಡ್ಸನ್ ಮತ್ತು ಡೆಲಾವರೆ ನದಿಗಳ ತೀರದ ಪರಿಮಿತ ಪ್ರದೇಶಗಳ ಹೊರತು ಹೆಚ್ಚು ಸಂಖ್ಯೆಯಲ್ಲಿ ಗುಲಾಮರನ್ನು ಆಹ್ವಾನಿಸುವ ತೋಟಗಳೇ ಇರಲಿಲ್ಲ. ಡಚ್ಚರು, ಸ್ವೀಡನ್ನರು ಹಾಗೂ ಜರ್ಮನ್ನರು ತಮ್ಮ ಹೊಲಗಳನ್ನು ಎಷ್ಟು ಮುತುವರ್ಜಿಯಿಂದ ಸಾಗುವಳಿ ಮಾಡುತ್ತಿದ್ದ ರೆಂದರೆ ಅದರಿಂದಾಗಿ ಗುಲಾಮರನ್ನು ಹೆಚ್ಚು ಹೆಚ್ಚಾಗಿ ಬಳಸಿಕೊಳ್ಳುವ ಪ್ರಮೇಯವೇ ಒದಗುತ್ತಿರಲಿಲ್ಲ. ಈ ಎಲ್ಲಾ ಅಂಶಗಳನ್ನೂ ಗಮನಿಸಿ ಗುಲಾಮ ವ್ಯವಸ್ಥೆಯ ಬಗ್ಗೆ ಅವರು ಸಾಕಷ್ಟು ವಿರೋಧ ಮನೋಭಾವ ಹೊಂದಿದ್ದರೆಂಬುದನ್ನು ನೈತಿಕ ಆಧಾರದ ಮೇಲೆ ನೋಡುವ ಯಾರಿಗೇ ಆಗಲಿ, ಮಧ್ಯಪ್ರದೇಶದ ವಸಾಹತುಗಳಲ್ಲಿ ಗುಲಾಮಗಿರಿ ಏಕೆ ಯಶಸ್ವಿಯಾಗಲಿಲ್ಲವೆಂಬುದು ಅರಿವಾಗದಿರದು.

೧೮ನೆಯ ಶತಮಾನದ ಮಧ್ಯಭಾಗದ ವೇಳೆಗೆ ಸಂಯುಕ್ತ ಸಂಸ್ಥಾನಗಳಲ್ಲಿ ಗುಲಾಮಗಿರಿಯು ಪ್ರವರ್ಧಮಾನಸ್ಥಿತಿಗೆ ಬರುತ್ತಿದ್ದ ಆರ್ಥಿಕ ವ್ಯವಸ್ಥೆಯ ಅವಿಭಾಜ್ಯ ಅಂಗವೇ ಆಗಿಬಿಟ್ಟಿತು. ಗುಲಾಮ ವ್ಯಾಪಾರದ ವಿರುದ್ಧ ಪ್ರತಿಭಟನೆಗಳೆದ್ದಿದ್ದವು. ಕೆಲವು ವಸಾಹತುಗಳಲ್ಲಿ ನಿಷೇಧಾತ್ಮಕ ಆಮದು ಶುಲ್ಕಗಳನ್ನು ವಿಧಿಸಲಾಗಿತ್ತು ಹಾಗೂ ಕೆಲವು ಮತೀಯ ಗುಂಪುಗಳು ವಿಶೇಷವಾಗಿ ಕ್ವೇಕರ್ಸ್ ಗುಂಪು ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನನ್ನು ದಾಸ್ಯದಲ್ಲಿರಿಸಿಕೊಳ್ಳಲು ಹೊಂದಿರುವ ಹಕ್ಕನ್ನೇ ಪ್ರಶ್ನಿಸಿದ್ದರು. ಆದರೂ, ಗುಲಾಮಗಿರಿಯ ವ್ಯವಸ್ಥೆಯ ವಿರುದ್ಧ ಮುಖಾಮುಖಿ ಹೋರಾಟ ನಡೆದಿರಲಿಲ್ಲ. ಈ ಸಾಮಾನ್ಯ ಮನೋಭಾವ ೧೭೬೩ರಲ್ಲಿ ಫ್ರೆಂಚ್ ಮತ್ತು ಇಂಡಿಯನ್ ಯುದ್ಧದ ಕೊನೆಯವರೆಗೂ ಮುಂದುವರಿದಿತ್ತು. ನ್ಯೂಜೆರ್ಸಿಯ ಕ್ವೇಕರ್ ಆಗಿದ್ದ ಜಾನ್ ವೂಲ್ಮನ್ ಮತ್ತು ಫಿಲಡೆಲ್ಫಿಯ ಹ್ಯೂನಾಟ್ ಆದ ಆಂತೊನಿ ಬೆನೆಜೆಟ್ ಅಷ್ಟು ಹೊತ್ತಿಗಾಗಲೇ ಗುಲಾಮಗಿರಿಯ ವಿರುದ್ಧ ಚಳುವಳಿಗಳನ್ನು ಮಧ್ಯ ವಸಾಹತುಗಳಲ್ಲಿ ಪ್ರಾರಂಭಿಸಿದ್ದರು. ಮತ್ತು ಬೆಂಜಮಿನ್ ಫ್ರಾಂಕ್ಲಿನ್ ಮತ್ತು ಬೆಂಜಮಿನ್ ರಷ್ ಮತ್ತಿತರರು ಗುಲಾಮರನ್ನು ಮುಕ್ತಗೊಳಿಸುವ ಕಾರ್ಯದಲ್ಲಿ ಪಾಲ್ಗೊಂಡರು. ೧೭೭೪ರಲ್ಲಿ ಲೇಖಕಿ ಅಬಿಗೇಲ್ ಆಡಮ್ಸ್ ತನ್ನ ಪತಿಗೆ

ನಾವು ಹೊಂದಿರುವ ಸ್ವಾತಂತ್ರ್ಯದ ಹಕ್ಕನ್ನೇ ತಾವೂ ಹೊಂದಿರುವಂಥ ವರಿಂದ ಪ್ರತಿದಿನವೂ ಅದನ್ನು ಕಸಿದುಕೊಳ್ಳುತ್ತ, ಸುಲಿಗೆ ಮಾಡುತ್ತ ಇರುವುದರ ವಿರುದ್ಧ ನಾವೇ ಹೋರಾಡುವುದು ಅತ್ಯಂತ ಅಸಮಾನತೆಯ ಕಾರ್ಯವೆಂಬುದಾಗಿ ನನಗೆ ತೋರುತ್ತದೆ

ಎಂದು ಬರೆದಿದ್ದಳು. ಸುಮಾರು ಇದೇ ಹೊತ್ತಿಗೆ ಥಾಮಸ್ ಜೆಫರ್‌ಸನ್ ಅವರು ಎ ಸಮ್ಮರಿ ವ್ಯೆ ಆಫ್ ದಿ ರೈಟ್ಸ್ ಆಫ್ ಬ್ರಿಟಿಶ್ ಅಮೆರಿಕಾವನ್ನು ಬರೆದಿದ್ದು, ಅದರಲ್ಲಿ ವಸಾಹತುಗಳಲ್ಲಿ ಗುಲಾಮಗಿರಿಯ ನಿರ್ಮೂಲನ ಮಾಡುವುದೇ ಅತ್ಯಂತ ಮುಖ್ಯವಾದ ಗುರಿಯಾಗಿದೆಯಾದರೂ ಅದನ್ನು ಬ್ರಿಟನ್ ತಡೆಯುತ್ತಿದೆ ಎಂದು ಹೇಳಿದ್ದರು. ೧೭೭೪ರಲ್ಲಿಯೇ ೧೭೭೫ರ ಡಿಸೆಂಬರ್ ೧ನೆಯ ದಿನಾಂಕದ ನಂತರ ಯಾವೊಬ್ಬ ಗುಲಾಮನನ್ನೂ ಆಮದು ಮಾಡಿಕೊಳ್ಳತಕ್ಕದ್ದಲ್ಲವೆಂಬುದಾಗಿ ಕಾಂಟಿನೆಂಟಲ್ ಕಾಂಗ್ರೆಸ್ ಒಂದು ಒಪ್ಪಂದವನ್ನು ಮಾಡಿಕೊಂಡಿತು. ಆದರೆ ಇವಾವುದೂ ಕೂಡ ಯಾವುದೇ ರೀತಿಯಿಂದ ಗುಲಾಮಗಿರಿ ನಿರ್ಮೂಲನೆಯ ವಿರುದ್ಧದ ಕ್ರಮಗಳಾಗದಿದ್ದರೂ ಆ ಬಗ್ಗೆ ಜನರಲ್ಲಿ ಜಾಗೃತಿಯುಂಟಾಯಿತು.

ಪ್ರಜಾರಾಜ್ಯವಾದ ಮೊದಲ ವರ್ಷಗಳಲ್ಲಿ ಗುಲಾಮರನ್ನು ಕೂಡಲೇ ಅಥವಾ ಕ್ರಮೇಣ ಬಿಡುಗಡೆ ಮಾಡುತ್ತಿರುವಾಗ ಕೆಲವು ಜನ ಧುರೀಣರು ಗುಲಾಮಗಿರಿ ಸಂಪೂರ್ಣ ಮರೆಯಾಗಬೇಕೆಂದು ಹಾರೈಸಿದರು. ೧೭೮೬ರಲ್ಲಿ ಜಾರ್ಜ್ ವಾಷಿಂಗ್‌ಟನ್‌ರು ನಿಧಾನವಾಗಿ ಆದರೆ ಖಚಿತವಾಗಿ ಹಾಗೂ ಗೋಚರಿಸದಷ್ಟು ಸೂಕ್ಷ್ಮ ಹಂತಗಳಲ್ಲಿ ಗುಲಾಮಗಿರಿಯನ್ನು ನಿಷೇಧಿಸುವ ಯೋಜನೆಯೊಂದನ್ನು ಅಳವಡಿಸಿಕೊಳ್ಳಲು ಬಯಸುವುದಾಗಿ ಬರೆದಿದ್ದನು. ಜೆಫರ್‌ಸನ್, ಮಾಡಿಸನ್, ಮನ್ರೋ ಮತ್ತಿತರ ಪ್ರಸಿದ್ಧ ದಕ್ಷಿಣ ರಾಜಕೀಯ ನಾಯಕರು ಇದೇ ಬಗೆಯ ಹೇಳಿಕೆಗಳನ್ನು ನೀಡಿದ್ದರು. ೧೮೦೮ರಷ್ಟು ಇತ್ತೀಚೆಗೆ ಗುಲಾಮ ಮಾರಾಟವನ್ನು ನಿಷೇಧಿಸಿದಾಗ ಹಲವು ಮಂದಿ ದಕ್ಷಿಣ ದೇಶೀಯರು ಗುಲಾಮಗಿರಿಯು ಕೊನೆಗೊಂಡಿತೆಂದೇ ನಂಬಿದ್ದರು.

ಈ ನಿರೀಕ್ಷೆ ಸುಳ್ಳೆಂದು ಸಾಬೀತಾಯಿತು. ಏಕೆಂದರೆ ಮುಂದಿನ ತಲೆಮಾರಿನಲ್ಲಿ ಹೊಸ ಆರ್ಥಿಕ ಅಂಶಗಳು ಗುಲಾಮಗಿರಿಯನ್ನು ೧೭೯೦ರಲ್ಲಿದ್ದುದಕ್ಕಿಂತಲೂ ಹೆಚ್ಚು ಲಾಭದಾಯಕವಾಗುವಂತೆ ಮಾಡಿದ್ದರಿಂದ ಗುಲಾಮಗಿರಿ ವ್ಯವಸ್ಥೆಯ ಮರೆಯಲ್ಲಿ ದಕ್ಷಿಣ ಭಾಗಗಳು ದೃಢವಾಗಿ ಒಂದುಗೂಡಿದವು.

ಇವುಗಳಲ್ಲೆಲ್ಲ ಪ್ರಮುಖವಾದುದೆಂದರೆ ದಕ್ಷಿಣ ಭಾಗದಲ್ಲಿ ಹತ್ತಿ ಬೆಳೆಯುವ ಭಾರಿ ಉದ್ಯಮವೊಂದು ಹುಟ್ಟಿಕೊಂಡು, ಹೊಸ ಹೊಸ ತಳಿಯ ಹತ್ತಿ ಬೆಳೆಗಳು ಹಾಗೂ ಹತ್ತಿಯಿಂದ ಕಾಳನ್ನು ಬೇರ್ಪಡಿಸಲು ಎಲಿವ್ಹಿಟ್ನಿಯು ಹತ್ತಿ ಜಿನ್ನನ್ನು ಕಂಡುಹಿಡಿದಿದ್ದರಿಂದ ಈ ಉದ್ಯಮವು ಇನ್ನಷ್ಟು ನೆಲೆಯೂರಿತು. ಅದೇ ಹೊತ್ತಿನಲ್ಲಿ ಜವಳಿ ತಯಾರಿಕೆಯನ್ನು ಭಾರೀ ಪ್ರಮಾಣದ ಉದ್ಯಮವನ್ನಾಗಿ ಮಾಡಿದ ಔದ್ಯೋಗಿಕ ಕ್ರಾಂತಿಯು ಹೊಸ ಕಚ್ಚಾ ಹತ್ತಿಗಾಗಿ ಬೇಡಿಕೆಯು ವ್ಯಾಪಕವಾಗಿ ಹೆಚ್ಚಿಸಿತು ಮತ್ತು ೧೮೧೨ರ ತರುವಾಯ ಪಶ್ಚಿಮದಲ್ಲಿ ಹೊಸ ಹೊಸ ಭೂ ಶೋಧನೆಗಳಿಂದಾಗಿ ಹತ್ತಿ ಬೇಸಾಯಕ್ಕೆ ಬೆಳೆ ಪ್ರದೇಶವು ಸಾಕಷ್ಟು ವಿಸ್ತಾರವಾಯಿತು. ಹತ್ತಿ ಸಂಸ್ಕೃತಿಯು ಸಮುದ್ರತೀರದ ರಾಜ್ಯಗಳ ಮೂಲಕ ಮಿಸ್ಸಿಪ್ಪಿ ನದಿಯ ದಕ್ಷಿಣ ದಂಡೆಗುಂಟ ತೀವ್ರವಾಗಿ ಹಾದು ಟೆಕ್ಸಾಸ್ ನಗರವನ್ನು ಸೇರಿತು.

ಕಬ್ಬಿನ ವ್ಯವಸಾಯವೂ ಕೂಡ ಗುಲಾಮಗಿರಿಯನ್ನು ಇನ್ನಷ್ಟು ಹೆಚ್ಚಿಸಿ ವ್ಯಾಪಕವಾಗುವಂತೆ ಮಾಡಿತು. ನೈರುತ್ಯ ಲೂಸಿಯಾನದ ವಿಶಾಲ ಒಣ ಪ್ರದೇಶಗಳು ಲಾಭದಾಯಕವಾದ ಕಬ್ಬು ಬೆಳೆ ವ್ಯವಸಾಯಕ್ಕೆ ಅತ್ಯನುಕೂಲವಾಗಿತ್ತು. ೧೮೩೦ರ ವೇಳೆಗೆ ಈ ರಾಜ್ಯವು ದೇಶಕ್ಕೆ ಅಗತ್ಯವಾದ ಸಕ್ಕರೆಯಲ್ಲಿ ಸುಮಾರು ಅರ್ಧಭಾಗದಷ್ಟನ್ನು ಸರಬರಾಜು ಮಾಡು ತ್ತಿತ್ತು. ಅಂತಿಮವಾಗಿ ಹೊಗೆಸೊಪ್ಪು ವ್ಯವಸಾಯವು ಪಶ್ಚಿಮದತ್ತ ಸಾಗಿ, ಜೊತೆಗೆ ಗುಲಾಮಗಿರಿಯನ್ನೂ ಕೊಂಡೊಯ್ದಿತು.

ಉತ್ತರ ಭಾಗದ ಮುಕ್ತ ಸಮಾಜ ಹಾಗೂ ದಕ್ಷಿಣ ಗುಲಾಮಗಿರಿಯ ಸಮಾಜವೆರಡೂ ಪಶ್ಚಿಮದತ್ತ ಹರಡಿದಾಗ, ಆಗತಾನೆ ಹೊಸದಾಗಿ ರಚನೆಗೊಂಡ ಹೊಸ ರಾಜ್ಯಗಳ ನಡುವೆ ಸ್ಥೂಲ ಸಮಾನತೆಯಿರುವಂತೆ ಮಾಡುವುದು ರಾಜಕೀಯವಾಗಿ ಅಗತ್ಯವೆನಿಸಿತು. ೧೮೧೮ರಲ್ಲಿ ಇಲಿನಾಯ್ಸನ್ನು ಸಂಯುಕ್ತ ರಾಜ್ಯಗಳಲ್ಲೊಂದಾಗಿ ಸೇರಿಸಿಕೊಂಡಾಗ ೧೦ ರಾಜ್ಯಗಳು ಗುಲಾಮಗಿರಿಯಿರಲು ಒಪ್ಪಿಕೊಂಡವು ಹಾಗೂ ೧೧ ಮುಕ್ತ ರಾಜ್ಯಗಳು ಅದನ್ನು ನಿಷೇಧಿಸಿದವು. ಆದರೆ ಅಲಬಾಮವನ್ನು ಗುಲಾಮ ರಾಜ್ಯವನ್ನಾಗಿ ಅಂಗೀಕರಿಸಿದ ಮೇಲೆ ಇವುಗಳ ನಡುವೆ ಸಮತೋಲನವನ್ನು ಸ್ಥಾಪಿಸಲಾಯಿತು.

ಉತ್ತರ ಭಾಗದವರು ಮಿಸ್ಸೌರಿಯ ಮುಕ್ತ ರಾಜ್ಯವಾಗಿ ಇರಬೇಕಲ್ಲದೆ ಆಶ್ರಿತವಾಗ ಬಾರದೆಂಬುದಾಗಿ ಚಳುವಳಿ ನಡೆಸಿದಾಗ, ಪ್ರತಿಭಟನೆಯ ಮಹಾಪೂರವೇ ಹರಿಯಿತು. ಸ್ವಲ್ಪ ಕಾಲ ಕಾಂಗ್ರೆಸ್ ಸ್ಥಗಿತಗೊಂಡಿತ್ತು. ಹೆನ್ಸಿಕ್ಲೇನನ ಮುಂದಾಳತ್ವದಲ್ಲಿ ರಾಜೀ ಸೂತ್ರವನ್ನು ಏರ್ಪಡಿಸಲಾಯಿತು. ಮಿಸ್ಸೌರಿಯನ್ನು ಗುಲಾಮ ರಾಜ್ಯವಾಗಿ ಸೇರಿಸಿಕೊಳ್ಳ ಲಾಯಿತು. ಆದರೆ ಅದೇ ವೇಳೆಗೆ ಮೇನ್ ಸ್ವತಂತ್ರ ರಾಜ್ಯವಾಗಿ ಉಳಿಯಿತು. ಕಾಂಗ್ರೆಸ್ ಕೂಡ ಮಿಸ್ಸೌರಿಯ ದಕ್ಷಿಣ ಸರಹದ್ದಿನ ಉತ್ತರಭಾಗದ ಲೂಸಿಯಾನವು ಖರೀದಿಸಿ ಆರ್ಜಿಸಿದ ಕ್ಷೇತ್ರದಲ್ಲಿ ಗುಲಾಮಗಿರಿಯನ್ನು ಹೊಂದಿರಬಾರದೆಂಬುದಾಗಿ ಆದೇಶ ನೀಡಿತು.