೧೯ನೆಯ ಶತಮಾನ ಮತ್ತು ಗುಲಾಮಗಿರಿ

೧೯ನೆಯ ಶತಮಾನದ ಮಧ್ಯಾವಧಿಯಲ್ಲಿ ಗುಲಾಮಗಿರಿ ರದ್ದಿಗೆ ಸಂಯುಕ್ತ ಸಂಸ್ಥಾನಗಳಷ್ಟು ಆಸಕ್ತಿ, ಮೆಚ್ಚುಗೆಗಳನ್ನು ವಿಶ್ವದಲ್ಲೇ ಬೇರಾವ ದೇಶವೂ ವ್ಯಕ್ತಪಡಿಸಲಿಲ್ಲ. ಫ್ರೆಂಚ್ ರಾಜಕೀಯ ಲೇಖಕನಾದ ಅಲೆಕ್ಸಿ ದು ಟಾರೈವಿಲ್ಲೆ ಬರೆದ ಡೆಮಾಕ್ರಸಿ ಇನ್ ಅಮೆರಿಕಾ ಪುಸ್ತಕವು ೧೮೩೫ರಲ್ಲಿ ಮೊದಲ ಬಾರಿಗೆ ಪ್ರಕಟವಾಯಿತಲ್ಲದೆ ಅದಕ್ಕೆ ಯುರೋಪಿನಾದ್ಯಂತ ವ್ಯಾಪಕ ಸ್ವಾಗತ ದೊರೆಯಿತು. ಎಲ್ಲೆಲ್ಲೂ ಪ್ರಗತಿ ಎದ್ದು ಕಾಣು ತ್ತಿದ್ದರೂ ಜನತೆ ಅಲ್ಲಿ ಉತ್ತರ-ದಕ್ಷಿಣ ಎಂಬ ಎರಡು ಅಮೆರಿಕಗಳಿರುವ ವಸ್ತುಸತ್ಯವನ್ನು ಅರಿತರು. ಉತ್ತರ ಹಾಗೂ ದಕ್ಷಿಣಗಳ ನಡವಿರುವ ಸಂಘರ್ಷಕ್ಕೆಡೆಯಾಗುವ ಹಿತಾಸಕ್ತಿಗಳು ಹೆಚ್ಚುತ್ತಿರುವುದು ಸ್ಪಷ್ಟವಾಯಿತು. ಉತ್ತರದ ವ್ಯಾಪಾರಿಗಳು ಹತ್ತಿ ಬೆಳೆಯ ಮಾರಾಟದಿಂದ ಅಧಿಕ ಲಾಭ ಪಡೆಯುತ್ತಿದ್ದ ಬಗ್ಗೆ ಅಸಮಾಧಾನ ಹೊಂದಿದ ದಕ್ಷಿಣದವರು ತಮ್ಮ ವರ್ಗ ಮಾತ್ರವೇ ಹಿಂದುಳಿದಿರುವುದಕ್ಕೆ ಉತ್ತರದವರ ಪ್ರತಿಷ್ಠೆಯ ಮನೋಭಾವವೇ ಕಾರಣವೆಂದು ದೂರಿದರು. ಇತ್ತ ಉತ್ತರದವರು ಗುಲಾಮಗಿರಿಯೇ ದಕ್ಷಿಣದವರು ತಮ್ಮ ಆರ್ಥಿಕ ವ್ಯವಸ್ಥೆಗೆ ಅವಶ್ಯವೆಂದು ಭಾವಿಸಿದ ‘‘ವಿಚಿತ್ರ ವ್ಯವಸ್ಥೆ’’ -ಆ ಪ್ರದೇಶವು ಹಿಂದುಳಿದಿರುವುದಕ್ಕೆ ಕಾರಣವೆಂಬುದಾಗಿ ಘೋಷಿಸಿದರು.

೧೮೩೦ರಷ್ಟು ಹಿಂದೆಯೇ, ಗುಲಾಮಗಿರಿಯ ಪ್ರಶ್ನೆಯ ಬಗ್ಗೆ ಒಂದು ವರ್ಗದ ಜನರು ನಿರಂತರವಾಗಿ ಕಟುವಾಗತೊಡಗಿದ್ದರು. ಉತ್ತರದಲ್ಲಿ, ಮುಕ್ತ-ಭೂಮಿ ಆಂದೋಲನದ ಮೂಲಕ ಗುಲಾಮಗಿರಿಯನ್ನು ನಿರ್ಮೂಲ ಮಾಡಬೇಕೆಂಬ ಮನೋಭಾವ ಹೆಚ್ಚು  ದೃಢವಾಗಿ ಇನ್ನೂ ಸಂಸ್ಥಾನಗಳಾಗಿ ಸಂಘಟಿತವಾಗದ ಪ್ರದೇಶಗಳಲ್ಲಿ ಗುಲಾಮಗಿರಿಯನ್ನು ವಿಸ್ತರಿಸಲು ತೀವ್ರವಾಗಿ ವಿರೋಧಿಸಲಾಯಿತು. ೧೮೫೦ರ ದಾಕ್ಷಿಣಾತ್ಮ ಗುಲಾಮಗಿರಿಯೆಂದರೆ ‘‘ತಮ್ಮ ಇಂಗ್ಲಿಷ್ ಉಚ್ಚಾರಣೆ ಅಥವಾ ತಮ್ಮ ಪ್ರಾತಿನಿಧಿಕ ಸಂಸ್ಥೆಗಳಲ್ಲದೆ ತಾವು ಇನ್ನಾವ ರೀತಿಯಲ್ಲೂ ಜವಾಬ್ದಾರರಾಗದ ಒಂದು ಸ್ಥಿತಿ’’ ಎಂದು ಅವರು ಭಾವಿಸಿದ್ದರು. ಕೆಲವೊಂದು ತೀರ ಪ್ರದೇಶಗಳಲ್ಲಿ ೧೮೫೦ರ ವೇಳೆಗೆ ಗುಲಾಮಗಿರಿಯು ೨೦೦ ವರ್ಷಗಳಿಗಿಂತಲೂ ಹಳೆಯದಾಗಿದ್ದು ಆ ಪ್ರದೇಶಗಳ ಮೂಲಕ ಆರ್ಥಿಕ ವ್ಯವಸ್ಥೆಯ ಅವಿಭಾಜ್ಯ ಅಂಗವೇ ಆಗಿತ್ತು. ೧೫ ದಕ್ಷಿಣ ಹಾಗೂ ಗಡಿ ಪ್ರದೇಶಗಳಲ್ಲಿ ನೀಗ್ರೋ ಜನ ಸಂಖ್ಯೆಯು ಸರಿ ಸುಮಾರು ಬಿಳಿ ಜನರ ಸಂಖ್ಯೆಯ ಅರ್ಧದಷ್ಟಿತ್ತು. ಆದರೆ ಉತ್ತರದಲ್ಲಿ ಗೌಣವೆನಿಸುವಷ್ಟು ಕಡಿಮೆ ಸಂಖ್ಯೆಯಲ್ಲಿತ್ತು.

೧೮೪೦ರ ಮಧ್ಯಭಾಗದ ವೇಳೆಗೆ ಗುಲಾಮಗಿರಿಯ ಸಮಸ್ಯೆಯು ಅಮೆರಿಕಾದ ರಾಜಕಾರಣದ ಮತ್ತೆಲ್ಲ ವಿಷಯಗಳನ್ನೂ ಮರೆಮಾಡಿತು. ದಕ್ಷಿಣದಲ್ಲಿ ಅಟ್ಲಾಂಟದಿಂದ ಮಿಸ್ಸಿಸಿಪ್ಪಿ ನದಿಯವರೆಗೂ ಹಾಗೂ ಅದರಾಚೆಗೆ ಕೂಡ ಹತ್ತಿ ಸಂಸ್ಕೃತಿ ಮತ್ತು ಗುಲಾಮಗಿರಿಗೆ ಪರಿಣಾಮ ಬೀರುವ ಎಲ್ಲ ಮೂಲಭೂತ ಕಾರ್ಯನೀತಿಗಳನ್ನೂ ಒಪ್ಪಿಕೊಳ್ಳುವ ಸಾಪೇಕ್ಷವಾದ ರಾಜಕೀಯ ಘಟಕವಾಗಿತ್ತು. ದಕ್ಷಿಣದ ಪ್ಲಾಂಟರುಗಳಲ್ಲಿ ಹೆಚ್ಚು ಜನರು ಗುಲಾಮಗಿರಿ ಅತ್ಯವಶ್ಯ ಹಾಗೂ ಶಾಶ್ವತವಾದುದೆಂದು ಭಾವಿಸಿದ್ದರು. ಪ್ರಾಚೀನ ಸಲಕರಣೆಗಳನ್ನೇ ಬಳಸುತ್ತಿದ್ದ ಹತ್ತಿ ಸಂಸ್ಕೃತಿ ಗುಲಾಮರ ಉದ್ಯೋಗಕ್ಕಾಗಿ ಅಳವಡಿಸುತ್ತಿದ್ದ ಏಕೈಕ ಕಾರ್ಯವಾಗಿತ್ತು. ಅದು ವರ್ಷದ ಒಂಬತ್ತು ತಿಂಗಳು ಕೆಲಸವನ್ನು ನೀಡುತ್ತಿತ್ತಲ್ಲದೆ ಅದಕ್ಕಾಗಿ ಹೆಂಗಸರು ಮತ್ತು ಮಕ್ಕಳು ಜೊತೆಗೆ ಗಂಡಸರನ್ನೂ ಬಳಸಿಕೊಳ್ಳಲು ಅನುಮತಿ ನೀಡಲಾಗುತ್ತಿತ್ತು.

ದಕ್ಷಿಣ ರಾಜಕೀಯ ಮುಖಂಡರು ಮೇಲ್ವರ್ಗದ ವೃತ್ತಿಗಳಲ್ಲಿರುವವರು ಮತ್ತು ಉತ್ತರದವರ ಅಭಿಪ್ರಾಯದ ವಿರುದ್ಧ ದನಿಯೆತ್ತುತ್ತಿದ್ದ ಬಹುಸಂಖ್ಯೆಯ ಶ್ರೀಮಂತರು, ಈಗ ಗುಲಾಮಗಿರಿಗಾಗಿ ಯಾವುದೇ ಪಶ್ಚಾತ್ತಾಪ ವ್ಯಕ್ತಪಡಿಸದೆ ಅದನ್ನು ಗೆದ್ದ ವೀರ ವಿಜಯಿಗಳಂತೆ ವರ್ತಿಸತೊಡಗಿದ್ದರು. ನೀಗ್ರೋಗಳಿಗೆ ಧಾರಾಳವಾಗಿ ಅನುಕೂಲವನ್ನೊದಗಿಸ ಬೇಕೆಂದು ತೀರ್ಮಾನಿಸಲಾಯಿತು ಹಾಗೂ ದಕ್ಷಿಣದ ಪ್ರಚಾರಕರು ಉತ್ತರದ ಕೂಲಿ ವ್ಯವಸ್ಥೆಗಿಂತ ಗುಲಾಮಗಿರಿ ವ್ಯವಸ್ಥೆಯಡಿಯ ಬಂಡವಾಳದಾರರು ಮತ್ತು ಕಾರ್ಮಿಕರ ನಡುವಣ ಸಂಬಂಧವು ಹೆಚ್ಚು ಮಾನವೀಯತೆಯಿಂದ ಕೂಡಿದೆಯೆಂದು ಹೇಳುತ್ತಿದ್ದರು.

೧೮೩೦ರ ಮೊದಲು ಪ್ಲಾಂಟೇಷನ್ ಸರ್ಕಾರದ ಹಳೆಯ ಪಿತೃಪ್ರಧಾನ ವ್ಯವಸ್ಥೆಯು ಗುಲಾಮರನ್ನು ಅವರ ಒಡೆಯನೇ ನಿರ್ವಹಣೆ ಹಾಗೂ ವೈಯಕ್ತಿಕ ಮೇಲ್ವಿಚಾರಣೆ ನೋಡಿಕೊಳ್ಳುವ ಸರಳ ವಿಧಾನಗಳ ಮೂಲಕ ಸಾಕಷ್ಟು ವೈಶಿಷ್ಟ್ಯಪೂರ್ಣವಾಗಿತ್ತು. ಆದರೆ, ೧೮೩೦ರ ತರುವಾಯ ದಕ್ಷಿಣದ ಕೆಳಭಾಗಗಳಲ್ಲಿ ಭಾರಿ ಪ್ರಮಾಣದಲ್ಲಿ ಹತ್ತಿ ಉತ್ಪಾದನೆ ಪ್ರಾರಂಭವಾಯಿತು. ಜೊತೆಗೆ, ಒಡೆಯನು ಕ್ರಮೇಣ ತನ್ನ ಗುಲಾಮರ ಮೇಲೆ ಸ್ವಯಂ ಮೇಲ್ವಿಚಾರಣೆ ನಡೆಸುವುದನ್ನು ಬಿಟ್ಟು ವೃತ್ತಿಪರ ಮೇಲ್ವಿಚಾರಕರನ್ನು ನೇಮಿಸಿಕೊಳ್ಳುತ್ತಿದ್ದು, ಅವರ ಉದ್ಯೋಗಾವಧಿಯು ಗುಲಾಮರಿಂದ ಪರಮಾವಧಿ ಕೆಲಸ ತೆಗೆಯುವಲ್ಲಿ ಅವರು ಹೊಂದಿರುವ ಸಾಮರ್ಥ್ಯವನ್ನು ಅವಲಂಬಿಸಿರುತ್ತಿತ್ತು.

ಹೆಚ್ಚು ಜನ ಪ್ಲಾಂಟರುಗಳು ತಮ್ಮ ನೀಗ್ರೋಗಳನ್ನು ದಯೆಯಿಂದ ಕಾಣುತ್ತಿದ್ದರೂ ನಿರ್ದಯೆಯಿಂದ ಕೂಡಿದ, ಕ್ರೌರ್ಯಗಳಿಂದ ಕೂಡಿದ, ವಿಶೇಷವಾಗಿ ಕೌಟುಂಬಿಕ ಬಂಧಗಳನ್ನು ಹರಿಯುವಂಥದಕ್ಕೆ ಸಂಬಂಧಪಟ್ಟ ಹಲವಾರು ನಿದರ್ಶನಗಳಿದ್ದವು. ಆದರೂ ಗುಲಾಮಗಿರಿಯ ಬಗೆಗಿನ ಅತಿ ಕಟುವಾದ ಟೀಕೆಯು ಮೇಲ್ವಿಚಾರಕರ ಅಮಾನವೀಯತೆಯ ಬಗ್ಗೆ ಆಗಿರದೆ ಪ್ರತಿಯೊಬ್ಬ ವ್ಯಕ್ತಿಯು ಸ್ವತಂತ್ರನಾಗಿರಬೇಕೆಂಬ ಮೂಲಭೂತ ಹಕ್ಕಿನ ಉಲ್ಲಂಘನೆಯ ಬಗ್ಗೆ ಇದ್ದಿತೆಂಬುದು ಗಮನಾರ್ಹ.

ದಕ್ಷಿಣದಲ್ಲಿ ಹತ್ತಿ ಸಂಸ್ಕೃತಿ ಮತ್ತು ಅದರ ಕೂಲಿ ಕ್ರಮವು ಭಾರಿ ಬಂಡವಾಳ ಹೂಡಿಕೆಗೆ ಕಾರಣವಾದವು. ೧೮೫೦ರ ವೇಳೆಗೆ ಪ್ರಪಂಚದ ೭/೮ ರಷ್ಟು ಸರಬರಾಜು ಆಗುತ್ತಿದ್ದ ಹತ್ತಿಯನ್ನು ದಕ್ಷಿಣ ಅಮೆರಿಕಾದಲ್ಲಿ ಬೆಳೆಯಲಾಗುತ್ತಿತ್ತು. ಗುಲಾಮಗಿರಿಯು ಅದರ ಜೊತೆ ಜೊತೆಗೇ ವೃದ್ದಿಯಾಯಿತು ಮತ್ತು ರಾಷ್ಟ್ರದ ರಾಜಕಾರಣದಲ್ಲಿ ದಕ್ಷಿಣದವರು ಮುಖ್ಯವಾಗಿ ರಕ್ಷಣೆಯನ್ನು ಹಾಗೂ ಹತ್ತಿ ಗುಲಾಮಗಿರಿ ವ್ಯವಸ್ಥೆಯಲ್ಲಿ ಹಿತಾಸಕ್ತಿಯನ್ನು ಹೆಚ್ಚಿಸಲು ಕೋರಿದರು. ಕೇವಲ ಹತ್ತಿಯನ್ನು ಮಾತ್ರವೇ ಸಾಗುವಳಿ ಮಾಡುವುದರಿಂದ ಜಮೀನು ವ್ಯರ್ಥವಾಗಿ ಬಹು ಶೀಘ್ರವಾಗಿ ಭೂಮಿಯೆಲ್ಲವೂ ಮುಗಿದುಹೋಗಿ, ಹೊಸದಾಗಿ ಫಲವತ್ತಾದ ಜಮೀನುಗಳು ಅವಶ್ಯವಾದವು. ಅಲ್ಲದೆ, ರಾಜಕೀಯ ಅಧಿಕಾರದ ಹಿತಾಸಕ್ತಿಯಿಂದ ಕೂಡ ಹೊಸ ಸ್ವತಂತ್ರ ರಾಜ್ಯಗಳಿಗೆ ಪ್ರತಿಯಾಗಿ ಅಗತ್ಯವಾದ ಹೆಚ್ಚಿನ ಗುಲಾಮ ರಾಜ್ಯಗಳಿಗಾಗಿ ಹೊಸ ರಾಜ್ಯಕ್ಷೇತ್ರಗಳು ಅವಶ್ಯವಾಯಿತು. ಗುಲಾಮಗಿರಿಯ ವಿರೋಧಿಗಳಾದ ಉತ್ತರದವರು ದಕ್ಷಿಣದವರ ದೃಷ್ಟಿಕೋನವನ್ನು ಗುಲಾಮಗಿರಿ ಪರವಾದ ಉತ್ಪ್ರೇಕ್ಷೆ ಎಂಬುದಾಗಿ ಭಾವಿಸಿದರು. ೧೮೩೦ರಲ್ಲಿ ಉತ್ತರ ಭಾಗದವರ ಪ್ರತಿರೋಧವು ಉಗ್ರವಾಯಿತು.

ಪ್ರಾರಂಭದ ಗುಲಾಮಗಿರಿ ವಿರೋಧಿ ಚಳುವಳಿಯು ಅಮೆರಿಕನ್ ಕ್ರಾಂತಿಯ ಪರಿಣಾಮವಾಗಿದ್ದು ಮುಂದೆ ೧೮೦೮ರಲ್ಲಿ ಕಾಂಗ್ರೆಸ್ ಆಫ್ರಿಕಾದೊಂದಿಗಿನ ಗುಲಾಮ ವ್ಯಾಪಾರವನ್ನು ನಿರ್ಮೂಲನ ಮಾಡಿದಾಗ ತನ್ನ ಅಂತಿಮ ವಿಜಯವನ್ನು ಸಾಧಿಸಿತು. ತದನಂತರ ಸಾಕಷ್ಟು ವಿರೋಧವನ್ನು ವ್ಯಕ್ತಪಡಿಸಿದ ಕ್ವೇಕರ್ಸ್ ಶಾಂತವಾದ ಹಾಗೂ ಪರಿಣಾಮ ಬೀರದ ಪ್ರತಿಭಟನೆಯನ್ನು ತೋರಿಸುತ್ತಿದ್ದರೆ ಕಾಟನ್ ಜಿನ್ ಗುಲಾಮರಪರ ಬೇಡಿಕೆಗಳನ್ನು ತೀವ್ರಗೊಳಿಸುತ್ತಿತ್ತು. ೧೮೨೦ರಲ್ಲಿ ಪ್ರತಿಭಟನೆಗೆ ಹೊಸ ಮಜಲೊಂದು ಕಂಡು ಬಂದು, ಆ ಕಾಲದ ನಿರ್ಭಯ ಪ್ರಜಾಸತ್ತಾತ್ಮಕ ಆದರ್ಶವಾದಕ್ಕೆ ಮತ್ತು ಎಲ್ಲ ವರ್ಗಗಳಿಗೂ ಸಾಮಾಜಿಕ ನ್ಯಾಯವನ್ನು ನೀಡುವ ಹೊಸ ಹಿತಾಸಕ್ತಿಯಿಂದ ಇದು ಮೂಡಿತೆನ್ನಬಹುದು.

ಅಮೆರಿಕದಲ್ಲಿ ಗುಲಾಮಗಿರಿ ನಿರ್ಮೂಲನಾ ಆಂದೋಲನವು ಇನ್ನಷ್ಟು ಉಗ್ರರೂಪ ತಾಳಿ ಕೂಡಲೇ ಗುಲಾಮಗಿರಿಯನ್ನು ತೊಡೆದು ಹಾಕುವ ಬಗ್ಗೆ ಹೋರಾಟ ಮಾಡುವ ರಾಜಿಯಾಗದ ಮಟ್ಟ ತಲುಪಿತು. ಈ ಉಗ್ರ ಹೋರಾಟಕ್ಕೆ ಮಸ್ಸಾಚುಸೆಟ್ಸನ್ ಯುವಕ ವಿಲಿಯಂ ಲಾಯ್ಡ ಗಾರ್ಸನ್ ಸೂಕ್ತ ಮುಖಂಡನಾಗಿ, ರಾಜಕೀಯ ಚಳುವಳಿಗಾರರ ಯುದ್ಧೋತ್ಸಾಹವನ್ನು ತುಂಬುವ ಜೊತೆಗೆ ಹುತಾತ್ಮನ ಧೀಮಂತಿಕೆಯನ್ನು ಒಗ್ಗೂಡಿಸಿ ಮುಂದುವರಿಸಿದನು.

ಯಾವುದನ್ನು ದೀರ್ಘಕಾಲದಿಂದಲೂ ಅಪರಿವರ್ತನೀಯವೆಂದು ಭಾವಿಸಿದ್ದರೋ ಆ ಒಂದು ವ್ಯವಸ್ಥೆಯಲ್ಲಿನ ಕೆಡುಕಿನ ಬಗ್ಗೆ ಗ್ಯಾರಿಸನ್ನನ ಕುತೂಹಲಕಾರಿ ಕ್ರಮಗಳು ಉತ್ತರದವರ ಮನವನ್ನು ತಟ್ಟಿ ಎಚ್ಚರಿಸಿದವು. ನೀಗ್ರೋ ಗುಲಾಮಗಿರಿಯಿಂದಾಗುವ ಪ್ರತಿಕೂಲ ಅಂಶಗಳನ್ನು ಸಾರ್ವಜನಿಕರ ಗಮನಕ್ಕೆ ತರುವುದು ಹಾಗೂ ಗುಲಾಮರನ್ನು ಹೊಂದಿರುವವರು ಕಟುಕರು ಮತ್ತು ಮಾನವ ಜೀವಗಳ ವ್ಯಾಪಾರಿಗಳೆಂದು ವರ್ಗೀಕರಿಸಿ ಅದನ್ನು ಎತ್ತಿಹಿಡಿಯುವುದು ಆತನ ಕಾರ್ಯವಿಧಾನವಾಗಿತ್ತು. ಅವನು ರಾಜಿ ಮಾಡಿ ಕೊಳ್ಳುವುದನ್ನಾಗಲೀ, ವಿಳಂಬ ನೀತಿಯನ್ನಾಗಲಿ ಸಹಿಸುತ್ತಿರಲಿಲ್ಲ. ಅಷ್ಟೇನೂ ಉಗ್ರ ಹೋರಾಟ ಮಾಡಬಯಸದ ಉತ್ತರದ ಜನರು ಕಾನೂನನ್ನು ಲೆಕ್ಕಿಸದ ಅವರ ಕ್ರಮಗಳಿಗೆ ಒಪ್ಪದೆ, ಸಾಮಾಜಿಕ ಸುಧಾರಣೆಯು ಕಾನೂನುಬದ್ಧವಾಗಿ, ಶಾಂತಿಯುತ ವಿಧಾನದ ಮೂಲಕ ನೆರವೇರಬೇಕೆಂದು ತೀರ್ಮಾನಿಸಿದರು.

ಗುಲಾಮ ವಿರೋಧಿ ಚಳುವಳಿಯ ಒಂದು ಹಂತದಲ್ಲಿ ಗುಲಾಮರು ಉತ್ತರದಲ್ಲಿ ಹೆಚ್ಚು ಸುರಕ್ಷಿತ ಸ್ಥಳಗಳಿಗೆ ಅಥವಾ ಕೆನಡಾದೊಳಕ್ಕೆ ಪ್ರವೇಶಿಸುವ, ಗಡಿಯಂಚಿನವರೆಗೂ ಪಲಾಯನ ಮಾಡಲು ನೆರವು ನೀಡಲಾಯಿತು. ಉತ್ತರದ ಎಲ್ಲ ಭಾಗಗಳಲ್ಲಿಯೂ ೧೮೩೦ರಲ್ಲಿ ‘‘ಸುರಂಗ ರೈಲು ಮಾರ್ಗ’’ವೆಂದು ಕರೆಯಲಾದ ರಹಸ್ಯ ಮಾರ್ಗಗಳ ವಿಸ್ತಾರ ಜಾಲವನ್ನು ವ್ಯವಸ್ಥಿತವಾಗಿ ಸ್ಥಾಪಿಸಲಾಯಿತು. ವಾಯವ್ಯ ದಿಕ್ಕಿನ ಪ್ರದೇಶದಲ್ಲಿ ಇದು ಅತ್ಯಂತ ಯಶಸ್ವಿಯಾಯಿತು. ಓಹಿಯೋ ನಗರವೊಂದರಲ್ಲಿಯೇ, ೧೮೩೦ರಿಂದ ೧೮೬೦ರ ಅವಧಿಯಲ್ಲಿ ೪೦,೦೦೦ಕ್ಕೆ ಕಡಿಮೆಯಿಲ್ಲದಷ್ಟು ಪಲಾಯನ ಮಾಡುತ್ತಿದ್ದ ಗುಲಾಮರನ್ನು ಮುಕ್ತಗೊಳಿಸಲಾಯಿತೆಂದು ಅಂದಾಜು ಮಾಡಲಾಗಿದೆ. ಸ್ಥಳೀಯ ಗುಲಾಮಗಿರಿ ವಿರುದ್ಧ ಸಂಸ್ಥೆಗಳ ಸಂಖ್ಯೆ ಎಷ್ಟು ತೀವ್ರವಾಗಿ ಏರಿದ್ದಿತೆಂದರೆ ೧೮೪೦ರಲ್ಲಿ ೨೦೦೦ ಜನರ ಸದಸ್ಯತ್ವವಿದ್ದುದು ಮುಂದೆ ಅವರ ಸಂಖ್ಯೆ ೨೦೦,೦೦೦ದಷ್ಟಾಗಿತ್ತು.

ಗುಲಾಮಗಿರಿಯನ್ನು ಅಂತಃಸಾಕ್ಷಿಯ ಪ್ರಶ್ನೆಯನ್ನಾಗಿ ಮಾಡಬೇಕೆಂದು ಸಕ್ರಿಯ ಗುಲಾಮಗಿರಿ ನಿರ್ಮೂಲನಕಾರರು ಪ್ರಯತ್ನಗಳನ್ನು ನಡೆಸುತ್ತಿದ್ದರೂ, ಉತ್ತರದ ಜನರು ಮಾತ್ರ ಒಟ್ಟಾಗಿ, ಗುಲಾಮಗಿರಿ ವಿರುದ್ಧ ಚಳುವಳಿಯಿಂದ ದೂರ ಉಳಿದಿದ್ದರು. ಆದರೂ ೧೮೪೫ರಲ್ಲಿ ಟೆಕ್ಸಾಸನ್ನು ವಶಪಡಿಸಿಕೊಂಡ ಮೇಲೆ ಮತ್ತು ಕ್ಷಿಪ್ರದಲ್ಲಿಯೇ ನಡೆದ ಮೆಕ್ಸಿಕನ್ ಯುದ್ಧದ ಪರಿಣಾಮವಾಗಿ ನೈರುತ್ಯ ಭಾಗಗಳ ಭೂ ಪ್ರದೇಶಗಳ ವಿಜಯ-ಗುಲಾಮಗಿರಿಯ ನೈತಿಕ ಪ್ರಶ್ನೆಯು ಜ್ವಲಂತ ರಾಜಕೀಯ ವಿವಾದಗ್ರಸ್ತ ವಿಷಯವಾಗಿ ಪರಿಣಮಿಸಿತು. ದಕ್ಷಿಣದ ಉಗ್ರವಾದಿಗಳು ಮೆಕ್ಸಿಕೋದಿಂದ ವಶಪಡಿಸಿ ಕೊಳ್ಳಲಾದ ಎಲ್ಲ ಭೂಮಿಗಳನ್ನೂ, ಗುಲಾಮರನ್ನು ಹೊಂದಿದ್ದ ಮಾಲೀಕರಿಗೆ ಮುಕ್ತ ವಾಗಿಡಬೇಕೆಂದು ಒತ್ತಾಯಪಡಿಸಿದರು. ಬಲಿಷ್ಠರಾದ ಉತ್ತರದ ಗುಲಾಮಗಿರಿ ವಿರೋಧಿಗಳು ಗುಲಾಮಗಿರಿಗೆ ಎಡೆಕೊಡಬಾರದೆಂದು ಎಲ್ಲ ಹೊಸ ಪ್ರದೇಶಗಳಲ್ಲೂ ತಗಾದೆ ಮಾಡಿದರು. ೧೮೪೮ರಲ್ಲಿ ಸುಮಾರು ೩೦೦,೦೦೦ ಜನರು ಮುಕ್ತ ಭೂಮಿ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಿತ್ತು. ಅದು ‘‘ಗುಲಾಮಗಿರಿಯನ್ನು ಪರಿಮಿತಿಗೊಳಿಸಲು, ಸ್ಥಳೀಯಗೊಳಿಸಲು ಹಾಗೂ ಪ್ರೋ ನೀಡದಿರಲು’’ ಅತ್ಯುತ್ತಮ ಕಾರ್ಯನೀತಿಯನ್ನು ಘೋಷಿಸಿತ್ತು.

೧೮೪೮ರ ಜನವರಿಯಲ್ಲಿ, ಕ್ಯಾಲಿಫೋರ್ನಿಯಾದಲ್ಲಿ ಚಿನ್ನವನ್ನು ಕಂಡು ಹಿಡಿದಿದ್ದರಿಂದ ೧೮೪೯ರಲ್ಲಿ ಸುಮಾರು ೮೦,೦೦೦ ವಲಸೆಗಾರರು ಕ್ಯಾಲಿಫೋರ್ನಿಯಾಗೆ ಬರುವಂತಾಯಿತು. ಏಕೆಂದರೆ ಕಾಂಗ್ರೆಸ್ ಪಕ್ಷವು ಈ ಹೊಸ ಪ್ರದೇಶದ ಸ್ಥಾನಮಾನವನ್ನು ನಿರ್ಧರಿಸುವಂತಹ ತೀವ್ರ ಪ್ರಶ್ನೆಯನ್ನು ಎದುರಿಸಬೇಕಾಗಿತ್ತು. ಸೆನೆಟರ್ ಹೆನ್ರಿ ಕ್ಲೇ ತನ್ನ ‘‘೧೮೫೦ರ ರಾಜಿ’’ಯೊಂದಿಗೆ ಕಾಲಾವಕಾಶವನ್ನು ಉಳಿಸಿದ್ದರಿಂದ ದೇಶವು ನಿರಾಳವಾಗಿರುವಂತಾಯಿತು. ಅದೇ ಪ್ರಕಾರ, ಕ್ಯಾಲಿಫೋರ್ನಿಯಾವನ್ನು ಮುಕ್ತ ಭೂಮಿ ರಚನೆಯಾದ ರಾಜ್ಯವಾಗಿ ಹಾಗೂ ಹೊಸದಾಗಿ ಸೇರ್ಪಡೆಯಾದ ಇನ್ನುಳಿದ ಪ್ರದೇಶವನ್ನು ಗುಲಾಮಗಿರಿಯ ಹೆಸರನ್ನೆತ್ತದೆಯೇ ಎರಡು ರಾಜ್ಯಗಳಾದ ಹೊಸ ಮೆಕ್ಸಿಕೋ ಮತ್ತು ಉಢಾ ಎಂಬುದಾಗಿ ವಿಭಜಿಸಲಾಯಿತು. ಹೊಸ ಮೆಕ್ಸಿಕೋದಲ್ಲಿನ ಒಂದು ಭಾಗಕ್ಕಾಗಿ ಹಕ್ಕು ಪ್ರಸ್ತಾವನೆ ಮಾಡಿದವರನ್ನು ತೃಪ್ತಿಪಡಿಸಲು ೧೦ ಮಿಲಿಯನ್ ಡಾಲರುಗಳನ್ನು ಸಂದಾಯ ಮಾಡಲಾಯಿತು. ಓಡಿ ಹೋಗುವ ಗುಲಾಮರನ್ನು ಹಿಡಿದು ತಂದು ಅವರ ಒಡೆಯರಿಗೊಪ್ಪಿಸಿ ದರಲ್ಲದೆ, ಗುಲಾಮರ ಮಾರಾಟ ಮತ್ತು ಖರೀದಿಯನ್ನು ಕೊಲಂಬಿಯಾ ಜಿಲ್ಲೆಯಲ್ಲಿ ನಿರ್ಮೂಲನ ಮಾಡಲಾಯಿತು.

ಈ ರಾಜಿಯಿಂದ ಮೂರು ವರ್ಷಗಳವರೆಗೂ ಸರಿಸುಮಾರು ಎಲ್ಲ ಭಿನ್ನಾಭಿಪ್ರಾಯ ಗಳನ್ನು ಇತ್ಯರ್ಥ ಮಾಡಿದಂತೆ ಆಗಿತ್ತು. ಆದರೆ ಒಳಗಿಂದೊಳಗೇ ಸಂಘರ್ಷ ಬೆಳೆಯು ತ್ತಿತ್ತು. ಗುಲಾಮರನ್ನು ಹಿಡಿಯುವಲ್ಲಿ ಯಾವುದೇ ರೀತಿ ಪಾಲ್ಗೊಳ್ಳದಿದ್ದ ಹಲವಾರು ಉತ್ತರದವರಿಗೆ ಹೊಸ ಪಲಾಯನವಾದಿ ಗುಲಾಮ ಕಾನೂನು ತೀವ್ರ ಆಘಾತವುಂಟು ಮಾಡಿತು. ಬದಲಿಗೆ ಅವರು ಪಲಾಯನವಾದಿ ಗುಲಾಮರಿಗೆ ತಪ್ಪಿಸಿಕೊಳ್ಳಲು ನೆರವು ನೀಡಿದರಲ್ಲದೆ ಸುರಂಗ ರೈಲು ಮಾರ್ಗವನ್ನು ಹಿಂದಿದ್ದುದಕ್ಕಿಂತಲೂ ಇನ್ನಷ್ಟು ಸುಗಮ ವಾಗಿ ಹಾಗೂ ಹೆಚ್ಚು ಧೈರ್ಯವಾಗಿ ಹಾದು ಹೋಗುವಂತೆ ಮಾಡಿದರು.

ಗುಲಾಮಗಿರಿಯ ಸಮಸ್ಯೆಯು ತಾನೇ ತಾನಾಗಿ ಪರಿಹಾರವಾಗುವುದೆಂಬುದಾಗಿ ತಿಳಿದಿದ್ದವರು ಕೇವಲ ರಾಜಕೀಯ ವ್ಯಕ್ತಿಗಳಲ್ಲಿ ಮತ್ತು ಪತ್ರಿಕಾ ಸಂಪಾದಕರಲ್ಲಿ ತಪ್ಪು ಹುಡುಕುತ್ತಿದ್ದರು. ೧೮೫೨ರಲ್ಲಿ ಪ್ರಕಟವಾದ ಹ್ಯಾರಿಯೆಟ್ ಬೀಚರ್ ಸ್ಟೋವನ ಅಂಕಲ್ ಟಾಮ್ಸ್ ಕ್ಯಾಬಿನ್ ಎಂಬ ಏಕೈಕ ಪುಸ್ತಕ ಶಾಸಕರು ಅಥವಾ ಸಂಪಾದಕರಿಗಿಂತಲೂ ಹೆಚ್ಚಿನ ಪ್ರಭಾವವನ್ನು ಬೀರಿತು. ಈ ಕಾದಂಬರಿಯಲ್ಲಿ ಗುಲಾಮಗಿರಿ ವ್ಯವಸ್ಥೆಯಲ್ಲಿ ಕ್ರೌರ್ಯವು ಅವಿಭಾಜ್ಯ ಅಂಗವಾಗಿರುವುದನ್ನು ಹಾಗೂ ಬಿಡುಗಡೆ ಹೊಂದಿದ ಗುಲಾಮರ ಸ್ಥಿತಿ ಹಾಗೂ ಗುಲಾಮ ಸಂಸ್ಥೆಗಳು ಎಷ್ಟರಮಟ್ಟಿಗೆ ಸರಿಪಡಿಸಲಾಗದಂತಹ ಮಟ್ಟವನ್ನು ತಲುಪಿತ್ತು ಎಂಬುದನ್ನು ಪರಿಣಾಮಕಾರಿಯಾಗಿ ಚಿತ್ರಿಸಲಾಗಿತ್ತು. ಉತ್ತರದಲ್ಲಿ ಯುವ ಮತದಾರರ ಸಂಖ್ಯೆ ಬೆಳೆಯುತ್ತಿದ್ದು ಆ ಜನಾಂಗಕ್ಕೆ ವ್ಯಾಪಕ ಚಳುವಳಿ ನಡೆಸಲು ಪ್ರೇರಣೆ ಯಾಯಿತು. ೧೮೫೪ರಲ್ಲಿ ಎಲ್ಲ ಪ್ರದೇಶಗಳಲ್ಲಿಯೂ ಹಳೆಯದಾಗಿದ್ದ ಗುಲಾಮಗಿರಿಯ ಸಮಸ್ಯೆಯನ್ನು ಮತ್ತೆ ಹೊರ ತಂದುದರಿಂದ ತಿಕ್ಕಾಟ ಇನ್ನಷ್ಟು ತೀವ್ರವಾಯಿತು. ಈಗ ಕನ್ಸಾಸ್ ಮತ್ತು ನೆಬ್ರಾಸ್ಕಗಳನ್ನೊಳಗೊಂಡಿರುವ ಪ್ರದೇಶವು ಅದಾಗಲೇ ಅಲ್ಲಿಗೆ ನಿವಾಸಿಗಳನ್ನು ಆಕರ್ಷಿಸಿತಲ್ಲದೆ ಭದ್ರವಾದ ಸರ್ಕಾರ ಸ್ಥಾಪನೆಗೊಂಡು ಶೀಘ್ರವಾಗಿ ಅಭಿವೃದ್ದಿಗೆ ಬರಲಾರಂಭಿಸಿತು.

ಮಿಸ್ಸೌರಿ ಒಪ್ಪಂದದ ಮೇರೆಗೆ ಈ ಪ್ರದೇಶದಲ್ಲಿ ಗುಲಾಮಗಿರಿಯು ಕೊನೆಗೊಂಡಿ ತಾದರೂ ಗುಲಾಮರನ್ನು ಹೊಂದಿದ್ದ ಭಾಗಗಳಲ್ಲಿನ ಜನರು ಕಾನ್ಸಾಸ್ ಕೂಡ ಅದರ ಪ್ರಭಾವಪೀಡಿತವಾಗಬಹುದೆಂಬ ಭೀತಿಯಿಂದ ಅದು ಮುಕ್ತ ಪ್ರದೇಶವಾಗಿರುವುದಕ್ಕೆ ಆಕ್ಷೇಪವೆತ್ತಿದರು. ದಕ್ಷಿಣದವರ ಹಾಗೂ ಕಾಂಗ್ರೆಸ್ಸಿನ ಬೆಂಬಲದೊಂದಿಗೆ ಮಿಸೌರಿಯನ್ನರು ಆ ಪ್ರದೇಶವನ್ನು ಪುನಾರಚಿಸುವ ಎಲ್ಲ ಪ್ರಯತ್ನಗಳನ್ನೂ ಮುರಿದರು. ಈ ಹಂತದಲ್ಲಿ ಇಲಿನಾಯ್ಸನ ಹಿರಿಯ ಸೆನೆಟರ್ ಆದ ಸ್ಟೀಫನ್ ಡಗ್ಲಾಸ್‌ನು ೧೮೫೦ರ ಒಪ್ಪಂದದ ಮೂಲಕ ಉಢಾ ಮತ್ತು ನ್ಯೂ ಮೆಕ್ಸಿಕೋ ಜನರು ಗುಲಾಮಗಿರಿಯ ಬಗ್ಗೆ ಸ್ವತಃ ತಾವೇ ನಿರ್ಧಾರ ಕೈಗೊಳ್ಳಲು ಸ್ವತಂತ್ರರಾಗಿರುವುದರಿಂದ ಮಿಸ್ಸೌರಿ ಒಪ್ಪಂದವು ವಜಾ ಆಗಿರುವುದೆಂದು ವಾದಿಸುತ್ತಾ ಬಿರುಗಾಳಿಯನ್ನೇ ಎಬ್ಬಿಸಿದ. ಅವನ ಯೋಜನೆಯಲ್ಲಿ ಕನ್ಸಾಸೌ ಮತ್ತು ಸೆಬ್ರಾಸ್ಕ ಇವೆರಡೂ ಪ್ರದೇಶಗಳೂ ಸೇರಿಕೊಂಡಿದ್ದು, ಅಲ್ಲಿನ ನಿವಾಸಿಗಳು ಗುಲಾಮರನ್ನು ಅಲ್ಲಿ ಕರೆತರಲು ಅನುಮತಿಸಲಾಗಿತ್ತು. ಆ ನಿವಾಸಿಗಳು ಕೇಂದ್ರವನ್ನು ಸ್ವತಂತ್ರವಾಗಿ ಅಥವಾ ಗುಲಾಮ ರಾಜ್ಯವಾಗಿ ಪ್ರವೇಶಿಸಬೇಕೆಂಬುದನ್ನು ಸ್ವತಃ ನಿರ್ಧರಿಸಬೇಕಾಗಿತ್ತು. ಉತ್ತರ ಭಾಗದ ನಿವಾಸಿಗಳು ೧೮೫೬ರಲ್ಲಿ ಡಗ್ಲಾಸನು ಅಧ್ಯಕ್ಷ ಪದವಿಯನ್ನು ಗಳಿಸುವ ಸಲುವಾಗಿ ದಕ್ಷಿಣದವರ ಮೆಚ್ಚುಗೆ ಪಡೆಯಲು  ಮಾಡುತ್ತಿದ್ದಾನೆಂದು ನಿಂದಿಸಿದರು. ಅಷ್ಟೇ ಅಲ್ಲ ಆ ಬಗ್ಗೆ ಸಾಕಷ್ಟು ಕೋಪಾವೇಶದ ವಾದವಿವಾದಗಳೂ ನಡೆದವು. ಆದರೂ ಸೆನೆಟಿನಲ್ಲಿ ಆ ಶಾಸನವನ್ನು ಅನುಮೋದಿಸ ಲಾಯಿತು. ಅದೇ ವೇಳೆಗೆ ಗುಲಾಮಗಿರಿ ವಿರೋಧಿಗಳ ನಾಯಕ ಸನ್ಮಾನ್ ಪಿ.ಜೇಸ್ ‘‘ಅವರು ಈಗ ವಿಜಯೋತ್ಸವ ಆಚರಿಸುತ್ತಿದ್ದಾರೆ. ಆದರೆ ಅವರು ಸಂಘಟಿಸಿದ ಪ್ರತಿಧ್ವನಿಗಳು ಗುಲಾಮಗಿರಿಯು ಕೊನೆಯುಸಿರೆಳೆಯುವವರೆಗೂ ನಿಲ್ಲಲಾರವು’’ ಎಂದು ಭವಿಷ್ಯ ನುಡಿದಿದ್ದನು. ಅನಂತರ ಡಗ್ಲಾಸನು ತನ್ನ ವಾದವನ್ನು ಸಮರ್ಥಿಸಿಕೊಳ್ಳಲು ಚಿಕಾಗೋಗೆ ಭೇಟಿ ನೀಡಿದಾಗ ಬಂದರಿನಲ್ಲಿದ್ದ ಹಡಗುಗಳು ಬಾವುಟಗಳನ್ನು ಅರ್ಧಮಟ್ಟ ದಲ್ಲಿ ಹಾರಿಸಿದವು. ಚರ್ಚಿನ ಗಂಟೆಗಳು ಒಂದು ಘಂಟೆಯ ಕಾಲ ಮೊಳಗುತ್ತಲೇ ಇದ್ದವು ಮತ್ತು ಸುಮಾರು ೧೦,೦೦೦ ಜನರು ಅವನ ಮಾತು ಅವನಿಗೇ ಕೇಳಿಸದಂತೆ ಕೂಗುತ್ತಿದ್ದರು. ಡಗ್ಲಾಸನ ಅವೈಜ್ಞಾನಿಕ ಕ್ರಮಕ್ಕೆ ತತ್‌ಕ್ಷಣದ ಫಲಿತಾಂಶವೂ ತಾತ್ಕಾಲಿಕವಾಗಿದ್ದಿತು. ವ್ಹಿಗ್ ಪಕ್ಷವು ಮುಳುಗಿಹೋಯಿತಲ್ಲದೆ ಅದರ ಬದಲಾಗಿ ರಿಪಬ್ಲಿಕನ್ ಪಕ್ಷದ ಉದಯವಾಗಿ ಗುಲಾಮಗಿರಿಯನ್ನು ಎಲ್ಲ ಪ್ರದೇಶಗಳಿಂದಲೂ ಬಿಟ್ಟುಬಿಡಬೇಕೆಂಬುದೇ ಅದರ ಪ್ರಪ್ರಥಮ ಬೇಡಿಕೆಯಾಗಿತ್ತು. ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದ ಜಾನ್ ಫ್ರೆಮಾಂಟನು ಚುನಾವಣೆಯಲ್ಲಿ ಸೋತರೂ ಜನಬೆಂಬಲವಿತ್ತು. ಅಬ್ರಹಾಂ ಲಿಂಕನ್ ಅಂಥವರಲ್ಲಿ ಒಬ್ಬನು.

ದಕ್ಷಿಣದ ಗುಲಾಮರ ಮಾಲೀಕರು ಹಾಗೂ ಗುಲಾಮ ವಿರೋಧಿಗಳು ಇವರಿಬ್ಬರೂ ಕಾನ್ಸಾಸ್‌ಗೆ ಬಂದುದರ ಪರಿಣಾಮವಾಗಿ ಅಲ್ಲಿ ಶಸ್ತ್ರಾಸ್ತ್ರ ಘರ್ಷಣೆ ಪ್ರಾರಂಭವಾಗಿ, ಕ್ಷಿಪ್ರದಲ್ಲಿಯೇ ಆ ಪ್ರದೇಶವು ‘‘ರಕ್ತಪಾತದ ಕಾನ್ಸಾಸ್’’ ಎಂದು ಕರೆದುಕೊಂಡಿತು. ಆಗಲೇ ನಡೆದ ಮತ್ತೊಂದು ಘಟನೆ ಮತ್ತೊಂದು ಸಿವಿಲ್ ಯುದ್ಧಕ್ಕೆ ರಾಷ್ಟ್ರವನ್ನು ಗುರಿಮಾಡಿತು. ಡ್ರೆಡ್ ಸ್ಕಾಟ್ ಎಂಬ ಮಿಸ್ಸೌರಿಯ ಗುಲಾಮನನ್ನು ೨೦ ವರ್ಷಗಳಿಗೂ ಮುಂಚೆ ಅವನ ಒಡೆಯನು ಗುಲಾಮಗಿರಿಯನ್ನು ನಿಷೇಧಿಸಲಾಗಿದ್ದ ಪ್ರದೇಶವಾದ ಇಲಿನಾಯ್ಸ ಹಾಗೂ ವೈಕಾನ್ಸಿನ್‌ಗಳಿಗೆ ಕರೆದುಕೊಂಡು ಹೋಗಿದ್ದನು. ಮತ್ತೆ ಮಿಸ್ಸೌರಿಗೆ ಹಿಂದಿರುಗಿ ಅಲ್ಲಿನ ಜೀವನದಿಂದ ಅಸಮಾಧಾನಗೊಂಡ ಸ್ಕಾಟನು, ಮುಕ್ತ ಭೂಮಿಯಲ್ಲಿ ತನ್ನ ನಿವಾಸ ಹೊಂದಬಯಸಿ ಮುಕ್ತಿಗಾಗಿ ದಾವೆ ಹೂಡಿದನು. ದಕ್ಷಿಣದವರ ಆಳ್ವಿಕೆಯಿದ್ದ ನ್ಯಾಯಾಲಯವು ಗುಲಾಮಗಿರಿಯಿರುವ ರಾಜ್ಯಕ್ಕೆ ಸ್ವತಃ ತಾನಾಗಿಯೇ ಹಿಂದಿರುಗಿರುವುದರಿಂದ ಸ್ಕಾಟನು ಸ್ವತಂತ್ರನಾಗಿರುವ ಹಕ್ಕನ್ನು ಕಳೆದುಕೊಂಡಿರುವನೆಂದು ನಿರ್ಣಯಿಸಿತಲ್ಲದೆ, ಆ ಪ್ರದೇಶದಲ್ಲಿ ಗುಲಾಮಗಿರಿಯನ್ನು ನಿಷೇಧಿಸಲು ಕಾಂಗ್ರೆಸ್ ಮಾಡುವ ಯಾವುದೇ ಪ್ರಯತ್ನವು ಅನೂರ್ಜಿತವಾಗುವುದೆಂಬುದಾಗಿ ತೀರ್ಪಿತ್ತಿತು. ಉತ್ತರದವರು ನ್ಯಾಯಾಲಯವನ್ನು ಕಟುವಾಗಿ ನಿಂದಿಸಿದರು. ದಕ್ಷಿಣದ ಡೆಮಾಕ್ರೆಟರಿಗೆ ಈ ತೀರ್ಪು ಮಹಾ ವಿಜಯವಾಯಿತು. ಏಕೆಂದರೆ ಆ ಪ್ರದೇಶದಲ್ಲಿ ಗುಲಾಮಗಿರಿಯನ್ನು ಅವರು ಸಮರ್ಥಿಸಿ ಕೊಂಡಿದ್ದಕ್ಕೆ ಅವರಿಗೆ ನ್ಯಾಯಿಕ ಸಮರ್ಥನೆಯೂ ದೊರೆತಂತಾಗಿತ್ತು.

ಅಬ್ರಹಾಂ ಲಿಂಕನ್ನನು ದೀರ್ಘಕಾಲದಿಂದಲೂ ಗುಲಾಮಗಿರಿಯನ್ನು ಒಂದು ಪಿಡುಗೆಂದೇ ಕರೆಯುತ್ತಿದ್ದನು. ೧೮೫೪ರಲ್ಲಿ ಇಲಿನಾಯ್ಸನ ಪಿಯೋರಿಯಾದಲ್ಲಿ ಮಾಡಿದ ಭಾಷಣವೊಂದರಲ್ಲಿ ಅವನು ಎಲ್ಲ ರಾಷ್ಟ್ರೀಯ ಶಾಸನಗಳನ್ನೂ ಕೂಡ, ಗುಲಾಮಗಿರಿಗೆ ನಿರ್ಬಂಧ ವಿಧಿಸಿ ಹಾಗೂ ಸಂಪೂರ್ಣವಾಗಿ ನಿರ್ಮೂಲನ ಮಾಡಬೇಕೆಂಬ ತತ್ತ್ವದ ಮೇಲೆಯೇ ರೂಪಿಸಬೇಕೆಂಬುದಾಗಿ ಘೋಷಿಸಿದ್ದರು. ಅಲ್ಲದೆ, ಪಶ್ಚಿಮ ಭಾಗಗಳಲ್ಲಿರುವ ಗುಲಾಮಗಿರಿಯ ಬಗ್ಗೆ ಕಳಕಳಿ ಹೊಂದಿರುವುದು ಕೇವಲ ಸ್ಥಳೀಯ ನಿವಾಸಿಗಷ್ಟೇ ಸೀಮಿತವಾಗಿರದೆ ಇಡೀ ಸಂಯುಕ್ತ ರಾಷ್ಟ್ರಗಳಿಗೇ ಸಂಬಂಧಿಸಿದ್ದುದಾಗಿದ್ದು, ಹಾಗಿರದಿದ್ದಲ್ಲಿ ಜನಪ್ರಿಯ ಸರ್ಕಾರದ ತತ್ತ್ವವೆಂಬುದೇ ಸುಳ್ಳಾಗುತ್ತದೆಂದು ಅವನು ವಾದಿಸಿದ್ದನು. ಈ ಭಾಷಣಕ್ಕೆ ವ್ಯಾಪಕ ಮನ್ನಣೆ ದೊರೆಯಿತು. ೧೮೫೮ರಲ್ಲಿ ಇಲಿನಾಯ್ಸ ನಿಂದ ಸಂಯುಕ್ತ ರಾಷ್ಟ್ರಗಳ ಸೆನೆಟ್‌ಗೆ ಎ ಸ್ಟೀಫನ್ ಡಗ್ಲಾಸ್ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ವಿರೋಧಿಸಿದನು. ಜೂನ್ ೧೭ ರಂದು ತನ್ನ ಮೊದಲ ಚುನಾವಣಾ ಪ್ರಚಾರ ಭಾಷಣದಲ್ಲಿ ಲಿಂಕನ್ನನು ಏಳು ವರ್ಷಗಳ ಅಮೆರಿಕದ ಇತಿಹಾಸದ ಅತಿ ಮುಖ್ಯ ಅಂಶವನ್ನು ಈ ರೀತಿ ವಿವರಿಸಿದ್ದನು.

ಒಡೆಯ ಇಬ್ಭಾಗವಾದ ಮನೆ ಉಳಿಯಲಾರದು ಈ ಸರ್ಕಾರ ಅರೆ ಗುಲಾಮಗಿರಿ ಅರೆ ಸ್ವತಂತ್ರವಾಗಿ ಬಹುಕಾಲ ಬಾಳಲಾರದೆಂದು ನಾನು ನಂಬಿದ್ದೇನೆ. ಈ ಏಕತೆಯನ್ನು ವಿಸರ್ಜಿಸುವ ಬಯಕೆ ನನಗಿಲ್ಲಮನೆ ಕುಸಿಯಬೇಕೆಂದು ನಾನು ಆಶಿಸುವುದಿಲ್ಲಆದರೆ ಅದು ಇಬ್ಭಾಗವಾಗಿ ಒಡೆಯಬಾರದೆಂದು ನಾನು ಆಶಿಸುತ್ತೇನೆ.

ಎರಡೂ ಪಕ್ಷಗಳ ನಡುವೆ ಏಳು ಸರಣಿಯ ದೀರ್ಘ ಚರ್ಚೆಗಳು ನಡೆದು ಅಂತಿಮ ವಾಗಿ ಡಗ್ಲಾಸ್ ವಿಜಯಿಯಾದರೂ ಲಿಂಕನ್ನನು ರಾಷ್ಟ್ರ ನೇತಾರನ ಸ್ಥಾನಮಾನವನ್ನು ಪಡೆದನು.

ಮತ್ತೆ ವಿಪಕ್ಷಗಳ ನಡುವಣ ಸಂಘರ್ಷ ಉಲ್ಬಣವಾಯಿತು. ಮೂರು ವರ್ಷಗಳ ಹಿಂದೆ ಕಾನ್ಸಾಸ್‌ನಲ್ಲಿ ಗುಲಾಮಗಿರಿಯ ವಿರುದ್ಧ ಭಾರಿ ಆಘಾತವನ್ನುಂಟು ಮಾಡಿದ್ದ ೧೮೫೯ರ ಅಕ್ಟೋಬರ್ ೧೬ರ ರಾತ್ರಿ, ಗುಲಾಮಗಿರಿ ವಿರೋಧಿಬಣದ ಉಗ್ರಾಭಿಮಾನಿಯಾದ ಜಾನ್ ಬ್ರೌನ್ ಕೆಲವು ಜನ ಗುಲಾಮಗಿರಿ ರದ್ದಿಯಾತಿಯ ಉಗ್ರವಾದಿಗಳ ಜೊತೆಗೂಡಿ, ಈಗ ವೆಸ್ಟ್ ವರ್ಜೀನಿಯಾ ಎಂದು ಕರೆಯಲಾಗುವ ಹಾರ್ಪರ್ ದೋಣಿಯಲ್ಲಿ ಹೋಗಿ ಫೆಡರಲ್ ಶಸ್ತ್ರಾಗಾರವನ್ನು ಮುತ್ತಿ ವಶಪಡಿಸಿಕೊಂಡನು. ಬೆಳಕು ಹರಿದ ಮೇಲೆ ಪಟ್ಟಣದ ಶಸ್ತ್ರಸಜ್ಜಿತ ಪೌರರು ಕೆಲವು ಮಿಲಿಟರಿ ಕಂಪೆನಿಗಳ ನೆರವಿನೊಂದಿಗೆ ಪ್ರತಿದಾಳಿ ನಡೆಸಿ ಬ್ರೌನ್ ಹಾಗೂ ಅವನ ಬದುಕುಳಿದ ಜನರನ್ನು ಸೆರೆಹಿಡಿದರು. ದಕ್ಷಿಣದವರಿಗೆ ತಾವು ನಿರೀಕ್ಷಿಸುತ್ತಿದ್ದ ಅತ್ಯಂತ ದುರದೃಷ್ಟದ ಗಳಿಗೆ ಆಗಲೇ ಒದಗಿಬಂದಿತೆನ್ನಿಸಿತು. ಗುಲಾಮಗಿರಿ ವಿರೋಧಿ ಗುಂಪುಗಳು ಬ್ರೌನ್‌ನನ್ನು ಉದಾತ್ತ ಧ್ಯೇಯಕ್ಕಾಗಿ ಬಲಿಯಾದ ಹುತಾತ್ಮನೆಂಬಂತೆ ಭಾವಿಸಿದವು. ಬ್ರೌನ್‌ನನ್ನು ಒಳಸಂಚು, ದ್ರೋಹ, ಕೊಲೆ ಮುಂತಾದ ಆಪಾದನೆಗಳಿಗಾಗಿ ವಿಚಾರಣೆಗೊಳಪಡಿಸಿ ೧೮೫೯ನೆಯ ಡಿಸೆಂಬರ್ ೨ರಂದು ಅವನನ್ನು ಗಲ್ಲಿಗೇರಿಸಲಾಯಿತು. ಕೊನೆಯ ತನಕವೂ ಅವನು ತಾನು ದೇವರ ಕೈಯಲ್ಲಿರುವ ಒಂದು ಉಪಕರಣ ಮಾತ್ರವೆಂದು ಭಾವಿಸಿದ್ದನು.

೧೮೬೦ರ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷವು ಅಬ್ರಹಾಂ ಲಿಂಕನ್ ನನ್ನು ಅದರ ಅಭ್ಯರ್ಥಿಯಾಗಿ ನಾಮಕರಣ ಮಾಡಿತು. ಆ ಪಕ್ಷದ ಮುಖಂಡರು ಇನ್ನೆಂದಿಗೂ ಗುಲಾಮಗಿರಿಯು ಮುಂದುವರೆಯುವುದಿಲ್ಲವೆಂದು ಘೋಷಿಸುತ್ತಿದ್ದಂತೆ ಪಕ್ಷದ ಉತ್ಸಾಹ ಉತ್ತುಂಗಕ್ಕೇರಿತು. ದಕ್ಷಿಣ ಕೆರೋಲಿನಾ ರಾಜ್ಯವು ಬಹುಕಾಲದಿಂದಲೂ ಗುಲಾಮಗಿರಿ ವಿರೋಧಿ ಬಲಗಳ ವಿರುದ್ಧವಾಗಿ ದಕ್ಷಿಣವು ಒಗ್ಗೂಡುವಂತಹ ಘಟನೆಗಾಗಿ ಕಾಯುತ್ತಿತ್ತು. ಆದ್ದರಿಂದ ಒಂದು ವೇಳೆ ಲಿಂಕನ್ನನು ಚುನಾಯಿತನಾಗಿ ಬಂದರೆ ಒಕ್ಕೂಟದಿಂದ ದಕ್ಷಿಣ ಕೆರೋಲಿನಾ ಪ್ರತ್ಯೇಕವಾಗುವ ವಿಷಯವು ಮರೆತು ಹೋದ ಅಧ್ಯಾಯವಾಗುತ್ತಿತ್ತು. ಅಲ್ಲದೆ ಚುನಾವಣೆಯ ಫಲಿತಾಂಶ ಕೂಡ ನಿಶ್ಚಿತವಾದ ಕೂಡಲೇ ವಿಶೇಷವಾಗಿ ಕರೆಯಲಾದ ದಕ್ಷಿಣ ಕೆರೋಲಿನಾ ಸಮಾವೇಶವು ‘‘ಅಮೆರಿಕಾ ಸಂಯುಕ್ತ ಸಂಸ್ಥಾನಗಳೆಂಬ ಹೆಸರಿನಡಿ ಇದ್ದ ದಕ್ಷಿಣ ಕೆರೋಲಿನ ಮತ್ತಿತರ ರಾಜ್ಯಗಳ ಒಗ್ಗೂಡಿಕೆಯನ್ನು ಈ ಮೂಲಕ ವಿಸರ್ಜಿಸಲಾಗಿದೆ’’ ಎಂಬುದಾಗಿ ಘೋಷಿಸಿತು. ಇತರ ದಕ್ಷಿಣ ಸಂಸ್ಥಾನಗಳು ಚಾಚೂ ತಪ್ಪದಂತೆ ದಕ್ಷಿಣ ಕೆರೋಲಿನಾದ ನಿದರ್ಶನವನ್ನೇ ಅನುಸರಿಸಿದವು. ೧೮೬೧ನೆಯ ಫೆಬ್ರವರಿ ೮ರಂದು ಅವರೆಲ್ಲರೂ ಸೇರಿ ಅಮೆರಿಕಾ ಒಕ್ಕೂಟ ಸಂಸ್ಥಾನಗಳನ್ನು ರಚಿಸಿದರು.