ವಲಸೆ ಹೋಗುವುದು

ಈ ಸಮಯದಲ್ಲಿ ಕರಿಯರು ದಕ್ಷಿಣದ ರಾಜ್ಯಗಳಿಂದ ಹೆಚ್ಚು ಸಂಖ್ಯೆಯಲ್ಲಿ ಉತ್ತರದ ಮತ್ತು ಪಶ್ಚಿಮದ ರಾಜ್ಯಗಳಿಗೆ ಒಳ್ಳೆಯ ಕೆಲಸ, ಶಾಲೆ ಮತ್ತು ವಾತಾವರಣವನ್ನು ಅರಸುತ್ತಾ ವಲಸೆ ಹೋದರು. ಇದು ಪ್ರಥಮ ಮಹಾಯುದ್ಧದ ಸಮಯದಲ್ಲಿ ಪ್ರಾರಂಭ ವಾಗಿ ೧೯೫೦ರ ಹೊತ್ತಿಗೆ ಗರಿಷ್ಠ ಪ್ರಮಾಣ ಮುಟ್ಟಿತು. ಇಂತಹ ವಲಸೆಯಿಂದಾಗಿ ಕರಿಯರು ಜನಸಂಖ್ಯೆಯ ಸ್ವರೂಪ ಎರಡು ರೀತಿಯಲ್ಲಿ ಬದಲಾಯಿಸಿತು. ಮೊದಲನೆಯದಾಗಿ ಇದು ಸದೃಢ ಚಳವಳಿಯಾಗಿ ದಕ್ಷಿಣದ ರಾಜ್ಯಗಳಿಂದ ಉತ್ತರದ ರಾಜ್ಯಗಳಿಗೆ ಹರಡಿತು. ಎರಡನೆಯದಾಗಿ ಕರಿಯರ ಜನಸಂಖ್ಯೆಯು ಉತ್ತರ ಮತ್ತು ದಕ್ಷಿಣದ ರಾಜ್ಯಗಳಲ್ಲಿ ಗ್ರಾಮಾಂತರ ಪ್ರದೇಶಗಳ ಬದಲು ನಗರಗಳಲ್ಲಿ ವಾಸಿಸತೊಡಗಿ ರಾಜಕೀಯ ಪ್ರಕ್ರಿಯೆಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ಉತ್ತರದ ರಾಜಕಾರಣಿಗಳು ಕರಿಯರೊಡಗೂಡಿ ಪ್ರತ್ಯೇಕತೆಯ ವಿರುದ್ಧ ಹೋರಾಡಿ ನಾಗರಿಕ ಹಕ್ಕುಗಳನ್ನು ಒದಗಿಸಲು ಮುಂದಾದರು.

ಮೊದಲನೆಯ ಮಹಾಯುದ್ಧದ ನಂತರ ಉತ್ತರದ ರಾಜ್ಯಗಳಲ್ಲಿ ಕರಿಯರು ಹಲವಾರು ಸ್ಥಳೀಯ ಚುನಾವಣೆಗಳಲ್ಲಿ ಗೆದ್ದರು. ಆಸ್ಕರ್ ಡೆಪ್ರಿಸ್ಟ್ ಉತ್ತರದ ಪ್ರಥಮ ಕರಿಯ ಅಮೆರಿಕಾದ ಕಾಂಗ್ರೆಸ್‌ನಲ್ಲಿ ೧೯೦೧ ರಿಂದ ಕಾರ್ಯ ನಿರ್ವಹಿಸಿದ್ದರು. ಕರಿಯ ಅಧಿಕಾರಿಗಳ ಸಂಖ್ಯೆ ಅಧಿಕವಾಗುವುದರ ಜೊತೆಗೆ ದಕ್ಷಿಣದ ಹೊರಗಿನ ರಾಜ್ಯಗಳ ರಾಜಕೀಯದಲ್ಲಿ ಬಿಳಿಯರ ರಾಜಕೀಯ ಹಣೆಬರಹವನ್ನು ಬದಲಾಯಿಸುವಲ್ಲಿ ಕರಿಯರು ಮುಂಚೂಣಿಯಲ್ಲಿದ್ದರು. ಓಹಿಯೋ, ಕನ್ಸಾಸ್ ಮತ್ತು ಕ್ಯಾಲಿಪೋರ್ನಿಯಾ ರಾಜ್ಯಗಳಲ್ಲಿ ಕರಿಯರು ಪ್ರತ್ಯೇಕತಾ ನೀತಿಗೆ ವಿರೋಧಿಸಿದ ಬಿಳಿಯರನ್ನು ಹೆಚ್ಚಾಗಿ ಪ್ರೋ ಚುನಾವಣೆಗಳಲ್ಲಿ ಆರಿಸುತ್ತಿದ್ದರು ಮತ್ತು ಪ್ರತ್ಯೇಕತಾ ನೀತಿಯನ್ನು ಪ್ರೋ ವರನ್ನು ಸೋಲಿಸುತ್ತಿದ್ದರು. ನಗರ ಪಟ್ಟಣಗಳಲ್ಲಿ ಕರಿಯರು ತಮ್ಮ ರಾಜಕೀಯ ಕ್ಷೇತ್ರದ ವ್ಯಾಪ್ತಿಯನ್ನು ಬದಲಾಯಿಸುವುದರ ಜೊತೆಗೆ ನಾಗರಿಕ ಹಕ್ಕುಗಳನ್ನು ಪಡೆಯುವಲ್ಲಿ ಅಗತ್ಯವಾದ ಕ್ರಮಗಳನ್ನು ಕೈಗೊಂಡು ಅವುಗಳನ್ನು ತೀವ್ರಗೊಳಿಸಿದರು.

ಇಂತಹ ವಲಸೆಯ ಪ್ರಕ್ರಿಯೆಯಿಂದಾಗಿ ಲಕ್ಷಾಂತರ ಕರಿಯರು ಪ್ರತ್ಯೇಕತಾ ನೀತಿಯಿಂದ ಮುಕ್ತವಾಗಿ ಅವಶ್ಯಕ ಸೌಲಭ್ಯಗಳಾದ ಸಾರಿಗೆ, ಸೌಕರ್ಯ, ಹೊಟೇಲು, ಸಾರ್ವಜನಿಕ ಸ್ನಾನಗೃಹ ಇವೆಲ್ಲವೂ ಕರಿಯರಿಗೆ ಮುಕ್ತವಾಗತೊಡಗಿದವು. ಆದರೂ ಉತ್ತರದ ರಾಜ್ಯ ಗಳಲ್ಲಿ ಜನಾಂಗೀಯ ಸಮಸ್ಯೆಯಿಂದ ಸಂಪೂರ್ಣವಾಗಿ ಮುಕ್ತಗೊಂಡಿರಲಿಲ್ಲ. ಅಲ್ಲಿ ಕರಿಯರು ಎಲ್ಲಾ ಸ್ಥಳಗಳಿಗೆ ಹೋಗುವಂತಿರಲಿಲ್ಲ ಹಾಗೂ ಅನೌಪಚಾರಿಕವಾಗಿ ಅವರನ್ನು ಖಾಸಗಿ ಮತ್ತು ಸರಕಾರಿ ಕೆಲಸಗಳಿಂದ ದೂರವಿಡಲಾಗುತ್ತಿತ್ತು. ಉದಾಹರಣೆಗೆ ಚಿಕಾಗೋದ ಸಮುದ್ರ ಕಿನಾರೆಯಲ್ಲಿ ಮಿಚಿಗಾನ್ ಕೊಳ ಕಾನೂನಿನ ಪ್ರಕಾರ ಕರಿಯರಿಗೆ ಪ್ರವೇಶವಿದ್ದರೂ ಸ್ಥಳೀಯ ಸಂಪ್ರದಾಯವು ಅವರನ್ನು ಬಿಡುತ್ತಿರಲಿಲ್ಲ. ಕೆಲವು ಕಾರ್ಮಿಕ ಸಂಘಗಳು ಕರಿಯರನ್ನು ಮನೆಕಟ್ಟುವ ಕೆಲಸಗಳಿಗೆ ಸೇರಿಸುತ್ತಿರಲಿಲ್ಲ. ಆದರೆ ದಕ್ಷಿಣದ ರಾಜ್ಯಗಳಿಗೆ ಹೋಲಿಸಿದರೆ ಉತ್ತರ ರಾಜ್ಯಗಳಲ್ಲಿದ್ದ ಕರಿಯರು ಪ್ರತ್ಯೇಕತಾ ನೀತಿಯಿಂದ ಹೆಚ್ಚು ತೊಂದರೆ ಗೊಳಗಾಗಿರಲಿಲ್ಲ.

ಅಮೆರಿಕಾ ರಾಜಕೀಯದಲ್ಲಿ ಬದಲಾವಣೆಗಳು

ವಲಸೆ ಪರಿಣಾಮವಾಗಿ ಕರಿಯರ ಜೀವನದಲ್ಲಿ ಗಣನೀಯ ಬದಲಾವಣೆಗಳಾದವು. ೧೯೩೦ರ ಆರ್ಥಿಕ ಮುಗ್ಗಟ್ಟು ಮತ್ತು ಹೊಸ ಹಂಚುವಿಕೆ ನೀತಿಯಿಂದಾಗಿ ಅಮೆರಿಕಾದ ರಾಜಕೀಯದಲ್ಲಿ ಬದಲಾವಣೆಗಳುಂಟಾಗಿ ಸರಕಾರದ ಕಾರ್ಯ ವೈಖರಿಯಲ್ಲಿ ಮಾರ್ಪಾಡು ಗಳುಂಟಾದವು. ಅಧ್ಯಕ್ಷ ಫ್ರಾಂಕ್ಲಿನ್ ಡೆಲಿನೊ ರೂಸ್‌ವೆಲ್ಟ್ ತಮ್ಮ ಆಡಳಿತಾವಧಿಯಲ್ಲಿ ಆರ್ಥಿಕ ಮುಗ್ಗಟ್ಟಿನಿಂದ ಬಳಲಿದ ಜನರಿಗೆ ಕೆಲಸ ಮತ್ತು ನ್ಯಾಯ ಒದಗಿಸುವುದಕ್ಕೆ ಕೆಲವು ಕ್ರಮಗಳನ್ನು ಕೈಗೊಂಡರು. ಅಂತರ್ಯುದ್ಧದ ಕಾಲದಲ್ಲಿ ಅಮೆರಿಕಾದ ಆಡಳಿತವು ರಿಪಬ್ಲಿಕನ್ ಪಕ್ಷದ ಕೈಯಲ್ಲಿದ್ದು ಸಾಮಾನ್ಯವಾಗಿ ಕರಿಯರ ಪರವಾಗಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಡೆಮೋಕ್ರಾಟಿಕ್ ಪಕ್ಷವು ದಕ್ಷಿಣದ ರಾಜ್ಯಗಳ ಹಿತಗಳನ್ನು ಕಾಪಾಡುವುದಕ್ಕೋಸ್ಕರ ಪ್ರತ್ಯೇಕತಾ ನೀತಿಯನ್ನು ಪ್ರೋ ಆದರೆ ಆರ್ಥಿಕ ಮುಗ್ಗಟ್ಟಿನ ಸಮಯದಲ್ಲಿ(೧೯೩೦) ಪಕ್ಷಗಳ ಹೊಂದಾಣಿಕೆ, ಜನಾಂಗೀಯ ಧೋರಣೆಗಳು ಬದಲಾವಣೆಗೊಳ್ಳ ತೊಡಗಿದವು. ಫ್ರಾಂಕ್ಲಿನ್ ರೂಸ್‌ವೆಲ್ಟ್‌ರು ೧೯೩೨ ಮತ್ತು ೧೯೩೬ ರಲ್ಲಿ ಗೆದ್ದ ನಂತರ ತನ್ನ ಆಡಳಿತದಲ್ಲಿ ಉತ್ತರದ ನಿರ್ಮೂಲನಾವಾದಿಗಳನ್ನು ಮತ್ತು ಕರಿಯರನ್ನು ಉನ್ನತ ಹುದ್ದೆಗಳಿಗೆ ನೇಮಿಸಿದರು. ಅವರಲ್ಲಿ ಪ್ರಮುಖರೆಂದರೆ ೧೯೩೭ರಲ್ಲಿ ವಿಲಿಯಂ ಹೇಸ್ಟಿ ಪ್ರಥಮ ಕರಿಯ ನ್ಯಾಯವಾದಿಯಾಗಿ ನೇಮಿಸಲ್ಪಟ್ಟರು. ಅಧ್ಯಕ್ಷರ ಹೆಂಡತಿ ಎಲಿನೋರ್ ರೂಸ್‌ವೆಲ್ಟ್ ಕೂಡಾ ಪ್ರತ್ಯೇಕತಾ ನೀತಿಯನ್ನು ಬಲವಾಗಿ ವಿರೋಧಿಸಲಾರಂಭಿ ಸಿದರು. ೧೯೩೯ರಲ್ಲಿ ಶ್ವೇತಭವನದಲ್ಲಿ ನೀಗ್ರೋ ಮಹಿಳೆಯ ರಾಷ್ಟ್ರೀಯ ಸಭೆಯ ಸದಸ್ಯರನ್ನು ಚಹಾ ಕೂಟಕ್ಕೆ ಆಹ್ವಾನಿಸಿದ್ದಾಗ ಕರಿಯ ಸಂಗೀತಗಾರರನ್ನು ನಿಷೇಧಿಸಿದ್ದಕ್ಕೆ ಅವರು ರಾಜೀನಾಮೆ ನೀಡಿ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿದ್ದರು. ಇದರ ಪರಿಣಾಮವಾಗಿ ರಾಷ್ಟ್ರೀಯ ಆಡಳಿತವು ಪ್ರತ್ಯೇಕತಾ ನೀತಿಯನ್ನು ಕ್ರಮೇಣವಾಗಿ ಪ್ರೋ ವಿರೋಧಿಸಲಾರಂಭಿಸಿತು.

ರೂಸ್‌ವೆಲ್ಟ್‌ರ ಹೊಸ ನೀತಿಯಿಂದಾಗಿ ಕೃಷಿ, ಸಾರ್ವಜನಿಕ ಕಾಮಗಾರಿ ಮತ್ತು ಗ್ರಾಮೀಣ ವಿದ್ಯುಚ್ಛಕ್ತಿ ಪೂರೈಕೆ ಇತ್ಯಾದಿ ದಕ್ಷಿಣದ ಕರಿಯ ಮತ್ತು ಬಿಳಿಯ ಜನತೆಗೆ ಸಮಾನವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಜೀವನವನ್ನು ಉತ್ತಮಗೊಳಿಸುವಲ್ಲಿ ಸಹಕಾರಿಯಾದವು. ೧೯೩೦ರ ದಶಕದಲ್ಲಿ ಉತ್ತರದ ರಾಜ್ಯಗಳ ಕರಿಯರು ಕ್ರಮೇಣವಾಗಿ ಡೆಮಾಕ್ರಾಟಿಕ್ ಪಕ್ಷದವರಿಗೆ ತಮ್ಮ ಮತವನ್ನು ಹಾಕಿ ಚುನಾಯಿಸಲಾರಂಭಿಸಿದರು. ಇದರ ಪರಿಣಾಮವಾಗಿ ೧೯೩೪ರಲ್ಲಿ ಆರ್ಥರ್ ಡಬ್ಲೂ ಮಿಚೆಲ್ ಡೆಮೊಕ್ರಾಟಿಕ್ ಪಕ್ಷದ ಇತಿಹಾಸದಲ್ಲಿ ಪ್ರಥಮ ಡೆಮೊಕ್ರಾಟಿಕ್ ಆಗುವುದರೊಂದಿಗೆ ರಾಜಕೀಯ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದ ಬದಲಾವಣೆಗಳುಂಟಾದವು.

ರಾಷ್ಟ್ರೀಯ ಸಂಘವು ೧೯೨೬ರಲ್ಲಿ ಅಂತಾರಾಷ್ಟ್ರೀಯ ಗುಲಾಮಗಿರಿ ಸಮ್ಮೇಳನವನ್ನು ಸಂಘಟಿಸಿದ್ದು ಅದರ ಪ್ರಮುಖ ಸಾಧನೆಯಾಗಿತ್ತು. ಈ ಸಮ್ಮೇಳನವು ಗುಲಾಮ ವ್ಯಾಪಾರವನ್ನು ಹತ್ತಿಕ್ಕುವುದರ ಜೊತೆಗೆ ಅದನ್ನು ಎಲ್ಲಾ ರೀತಿಯಲ್ಲೂ ನಿಷೇಧಿಸುವುದು ಮತ್ತು ರದ್ದುಪಡಿಸುವುದಕ್ಕೆ ಕ್ರಮ ಕೈಗೊಂಡಿತು. ೧೯೪೮ರಲ್ಲಿ ವಿಶ್ವಸಂಸ್ಥೆಯು ಮಾನವ ಹಕ್ಕುಗಳ ಘೋಷಣೆಯೊಂದಿಗೆ ಗುಲಾಮಗಿರಿಯನ್ನು ಸಂಪೂರ್ಣವಾಗಿ ರದ್ದುಪಡಿಸಿತು. ಇದರ ಪರಿಣಾಮವಾಗಿ ೧೯೫೧ರ ವಿಶ್ವಸಂಸ್ಥೆಯ ಗುಲಾಮಗಿರಿ ಸಮಿತಿಯು ತನ್ನ ವರದಿಯಲ್ಲಿ ಗುಲಾಮಗಿರಿಯ ಬಳಕೆ ಇಳಿಮುಖವಾಗಿದ್ದು ಕೆಲವು ಪ್ರಾಂತ್ಯಗಳಲ್ಲಿ ಅದರ ಲಕ್ಷಣಗಳು ಕಂಡುಬರುತ್ತವೆಯೆಂದು ವರದಿ ಮಾಡಿತು. ಈ ಸಮಿತಿಯ ಶಿಫಾರಸ್ಸಿನಿಂದಾಗಿ ೫೧ ರಾಷ್ಟ್ರಗಳ ಅಂತಾರಾಷ್ಟ್ರೀಯ ಸಮ್ಮೇಳನವನ್ನು ೧೯೫೬ರಲ್ಲಿ ಜಿನೀವಾದಲ್ಲಿ ನಡೆಸಿ ಗುಲಾಮಗಿರಿಯ ವ್ಯಾಪಾರ ಮತ್ತು ಅದಕ್ಕೆ ಸಂಬಂಧಪಟ್ಟ ಸಂಸ್ಥೆಗಳನ್ನು ಸಹ ನಿಷೇಧಿಸಲಾಯಿತು.

ಎರಡನೆಯ ಮಹಾಯುದ್ಧದ ಮುಂಚೆ ಕರಿಯರು ನಿರಂತರವಾಗಿ ಉತ್ತರದ ರಾಜ್ಯಗಳಲ್ಲಿ ಮತ್ತು ಕೆಂಟಕಿ, ಪಶ್ಚಿಮ ವರ್ಜೀನಿಯಾದಲ್ಲಿ ಬಿಳಿಯರನ್ನು ಆರಿಸಿದರು. ಇವರಿಂದ ಚುನಾಯಿತಗೊಂಡ ಬಿಳಿಯ ಪ್ರತಿನಿಧಿಗಳು ಕರಿಯರನ್ನು ಕಾಪಾಡಲು ಪ್ರತ್ಯೇಕತಾ ನೀತಿಯ ವಿರುದ್ಧ ಹೋರಾಟ ಆರಂಭಿಸಿದರು. ಕಾಂಗ್ರೆಸ್ಸಿನ ಕೆಲವು ಸದಸ್ಯರು ಬಿಳಿಯರಿಂದ ಕರಿಯರಿಗಾಗುತ್ತಿದ್ದ ಹಿಂಸೆಗಳನ್ನು ತೀವ್ರವಾಗಿ ತಡೆಗಟ್ಟಲು ಪ್ರಯತ್ನಿಸಿದಾಗ ದಕ್ಷಿಣದ ಬಿಳಿಯ ಭೂಮಾಲೀಕರಿಂದ ಪ್ರತಿರೋಧವನ್ನು ಎದುರಿಸಬೇಕಾಯಿತು.

ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆಗಳು

ನಾಗರಿಕ ಹಕ್ಕುಗಳ ಚಳವಳಿಗೆ ಎರಡನೆ ಮಹಾಯುದ್ಧವು ಮತ್ತಷ್ಟು ಉತ್ತೇಜನ ನೀಡಿತು. ನಾಜಿಗಳ ವಿರುದ್ಧ ಹೋರಾಡುವಾಗ ನಾಜಿಗಳು ಅನುಸರಿಸುತ್ತಿದ್ದ ಜನಾಂಗೀಯ ನೀತಿಯನ್ನು ಅಮೆರಿಕನ್ನರು ಕಣ್ಣಾರೆ ನೋಡಿದಾಗ ಅದನ್ನು ಅಮೆರಿಕಾದಲ್ಲಿ ನಿರ್ಮೂಲನ ಮಾಡುವ ಬಗ್ಗೆ ಪರಿಶೀಲಿಸಲು ಕಣ್ಣು ತೆರೆಸಿತು. ಜರ್ಮನಿಯಲ್ಲಿ ಆರು ಮಿಲಿಯನ್ ಯಹೂದಿಗಳನ್ನು ಜನಾಂಗೀಯ ಆಧಾರದ ಮೇಲೆ ಕೊಂದುದ್ದನ್ನು ನೋಡಿದ ಅಮೆರಿಕನ್ನರು ಇಂತಹ ನೀತಿಯು ಅಮೆರಿಕಾದ ಪ್ರಜಾಪ್ರಭುತ್ವಕ್ಕೆ ಮಾರಕವಾಗಬಹುದೆಂದು ಯೋಚಿಸ ಲಾರಂಭಿಸಿದರು. ದ್ವಿತೀಯ ಯುದ್ಧದ ಕೊನೆಯ ಸಮಯದಲ್ಲಿ ಹಲವಾರು ಕರಿಯರು ಅಮೆರಿಕಾದ ಬಿಳಿಯರೊಟ್ಟಿಗೆ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರು. ರೋಸ್‌ವೆಲ್ಟರ ಆಡಳಿತಾವಧಿಯಲ್ಲಿ ಸೈನಿಕ ನೆಲೆಗಳಲ್ಲಿ ದಕ್ಷಿಣವೂ ಸೇರಿದಂತೆ ಎಲ್ಲಾ ರೀತಿಯ ಪ್ರತ್ಯೇಕತೆ ಯನ್ನು ಬಹಿಷ್ಕರಿಸಲಾಗಿತ್ತು. ಇದರಿಂದಾಗಿ ಎರಡನೆಯ ಮಹಾಯುದ್ಧ ಅನುಭವದಿಂದಾಗಿ ಹಲವಾರು ಜನರು ಅಮೆರಿಕಾದ ಸಮಾಜದಲ್ಲಿ ಸಮಾನತೆಯನ್ನು ಸಾಧಿಸಲು ಸಾಧ್ಯವೆಂಬುದನ್ನು ಮನಗಾಣತೊಡಗಿದರು. ಯುದ್ಧದಿಂದ ಹಿಂತಿರುಗಿದ ಹಲವಾರು ಕರಿಯ ಧುರೀಣರು ತಮ್ಮ ವಿಮೋಚನೆಗಾಗಿ ಹೆಚ್ಚು ಕ್ರಮಗಳನ್ನು ಕೈಗೊಂಡರು. ಇದೇ ಸಮಯದಲ್ಲಿ ಉತ್ತರದ ರಾಜ್ಯಗಳಲ್ಲಿದ್ದ ಮಧ್ಯಮವರ್ಗದ ಮತ್ತು ಕಾರ್ಮಿಕ ವರ್ಗದ ಕರಿಯರು ಈ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಹಲವಾರು ಕರಿಯರು ಕೈಗಾರಿಕಾ ಸಂಘಗಳ ಸದಸ್ಯರಾಗಿ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು.

ದ್ವಿತೀಯ ಮಹಾಯುದ್ಧದ ನಂತರ ಅಮೆರಿಕಾವು ತನ್ನ ಅಂತಾರಾಷ್ಟ್ರೀಯ ಸಂಬಂಧಗಳ ವಿಷಯದಲ್ಲಿ ಪ್ರತ್ಯೇಕತೆಯನ್ನು ಉಳಿಸಿಕೊಳ್ಳುವುದು ಮತ್ತು ಬೆಳೆಸುವುದು ಅಡ್ಡಿಯಾಗಿ ಬಂದಿತು. ಈ ಯುದ್ಧದ ನಂತರ ಆಫ್ರಿಕಾ ಮತ್ತು ಏಷ್ಯಾ ಖಂಡದ ಹಲವಾರು ರಾಷ್ಟ್ರಗಳು ಯುರೋಪಿಯನ್ನರ ಹಿಡಿತದಿಂದ ಸ್ವತಂತ್ರವಾಗಿ ಹೊರಹೊಮ್ಮಿದವು. ಇದೇ ಸಮಯದಲ್ಲಿ ಅಸ್ತಿತ್ವಕ್ಕೆ ಬಂದ ಶೀತಲ ಯುದ್ಧದಲ್ಲಿ ಸೋವಿಯತ್ ಒಕ್ಕೂಟವನ್ನು ದೂರವಿಡಲು ಹೊಸದಾಗಿ ಅಸ್ತಿತ್ವಕ್ಕೆ ಬಂದ ರಾಷ್ಟ್ರಗಳ ಸಹಕಾರ ಅಮೆರಿಕಾಕ್ಕೆ ಅತ್ಯವಶ್ಯಕ ವಾಗಿತ್ತು. ಕಮ್ಯೂನಿಸ್ಟ್ ಸಿದ್ಧಾಂತವನ್ನು ಶಾಶ್ವತವಾಗಿ ಪ್ರತಿಭಟಿಸಲು ಅಮೆರಿಕಾದಲ್ಲಿ ಪ್ರತ್ಯೇಕತೆಯನ್ನು ನಿರ್ಮೂಲನೆ ಮಾಡುವುದು ಅತ್ಯಂತ ಅವಶ್ಯಕವಾಗಿತ್ತು.

ದ್ವಿತೀಯ ಮಹಾಯುದ್ಧದ ನಂತರ ಅಮೆರಿಕಾದಲ್ಲಿ ಪ್ರತ್ಯೇಕತೆಯನ್ನು ಸಂಪೂರ್ಣವಾಗಿ ತೊಡೆದುಹಾಕಲು ವಕೀಲರು, ಸರಕಾರಿ ನೌಕರರು ಮತ್ತು ಸಾಮಾಜಿಕ ಕಾರ್ಯಕರ್ತರು ಮುಂದೆ ಬಂದರು. ಆದರೆ ವಿಜಯ ಸಿಕ್ಕಿದ್ದು ಓರ್ವ ಬಿಳಿಯ ವರ್ತಕನಿಂದ. ೧೮೮೦ರಿಂದ ಬೇಸ್‌ಬಾಲ್ ತಂಡದಲ್ಲಿ ಕರಿಯರನ್ನು ನಿಷೇಧಿಸಲಾಗಿತ್ತು. ಅಂದಿನಿಂದ ಆಟಗಾರರು ಈ ನಿಷೇಧದ ವಿರುದ್ಧ ಹೋರಾಡಿದ ಫಲವಾಗಿ ಹಲವಾರು ಕರಿಯರು ರಾಷ್ಟ್ರದ ತಂಡಗಳಲ್ಲಿ ಆಯ್ಕೆಯಾಗುವಲ್ಲಿ ಯಶಸ್ವಿಯಾದರು.

ಪ್ರತ್ಯೇಕತಾ ನೀತಿಗೆ ರಾಜಕೀಯ ಸವಾಲುಗಳು

೧೯೬೦ರ ಸಮಯದಲ್ಲಿ ನಾಗರಿಕ ಹಕ್ಕುಗಳ ಚಳವಳಿಯ ಪ್ರದರ್ಶಕರು ದಕ್ಷಿಣ ಮತ್ತು ಉತ್ತರದ ರಾಜ್ಯಗಳಲ್ಲಿ ಪ್ರತಿಭಟಿಸಿದರು. ಪ್ರತಿಭಟನಕಾರರು ಪ್ರತ್ಯೇಕತಾ ನೀತಿಯ ವ್ಯಾಪಾರದ ವಿರುದ್ಧ ಪ್ರತಿಭಟನಾ ರ‌್ಯಾಲಿಗಳನ್ನು ಮಾಡಿ ಕರಿಯರ ಮತಗಳನ್ನು ದಾಖಲು ಮಾಡುವುದಕ್ಕೂ ಹಾಗೂ ದಕ್ಷಿಣದ ರಾಜ್ಯಗಳಲ್ಲಿ ಪ್ರತ್ಯೇಕತೆಯನ್ನು ಸಂಪೂರ್ಣ ವಾಗಿ ಅಳಿಸಿ ಹಾಕಲು ಪ್ರಯತ್ನಿಸಿದರು. ದಕ್ಷಿಣ ಕ್ರೈಸ್ತ ಮುಖಂಡರ ಸಮ್ಮೇಳನ ಮತ್ತು  ವಿದ್ಯಾರ್ಥಿ ಅಹಿಂಸಾತ್ಮಕ ಸಮನ್ವಯ ಸಮಿತಿ ಎಂಬ ಸಂಘಟನೆಗಳು ದಕ್ಷಿಣ ರಾಜ್ಯ ಗಳಾದ್ಯಂತ ಪ್ರತ್ಯೇಕತೆಯನ್ನು ನಿರ್ಮೂಲನ ಮಾಡಲು ಜನರ ಬೆಂಬಲ ಕೋರಲು ಮುಂದಾದವು. ಇಂತಹ ಸಮಯದಲ್ಲಿ ಹಲವಾರು ಪ್ರದರ್ಶನಕಾರರು ಪೊಲೀಸರಿಂದ ಪೆಟ್ಟು ತಿಂದರು ಹಾಗೂ ಲಕ್ಷಗಟ್ಟಲೆ ಕೂ ಕ್ಲಕ್ಸ್ ಕ್ಲಾನ್(ಕೆಕೆಕೆ) ಮತ್ತಿತರ ಆತಂಕವಾದಿ ಸಂಘಟನೆಗಳಿಂದ ಕೊಲ್ಲಲ್ಪಟ್ಟರು. ದಕ್ಷಿಣದ ಇಬ್ಬರು ಪ್ರಮುಖ ನಾಗರಿಕ ಹಕ್ಕುಗಳ ನಾಯಕರಾದ ಮೆಡ್ಗರ್ ಎವರ್ಸ್ ಮತ್ತು ಮಾರ್ಟಿನ್ ಲೂಥರ್ ಕಿಂಗ್(ಜೂನಿಯರ್) ಆತಂಕವಾದಿಗಳಿಂದ ಕೊಲ್ಲಲ್ಪಟ್ಟರು. ಫಿಲಡೆಲ್ಫಿಯಾ ಮತ್ತು ಮಿಸ್ಸಿಸಿಪ್ಪಿ ಪ್ರಾಂತ್ಯಗಳಲ್ಲಿ ಪೊಲೀಸರು ಸ್ಥಳೀಯ ಭಯೋತ್ಪಾದಕರ ಗುಂಪುಗಳೊಂದಿಗೆ ಶಾಮೀಲಾಗಿ ಓರ್ವ ಕರಿಯ ಮತ್ತು ಇಬ್ಬರು ಬಿಳಿಯ ನಾಗರಿಕ ಹಕ್ಕುಗಳ ಕಾರ್ಯಕರ್ತರನ್ನು ಕೊಲೆಗೈದು ಅವರ ಶವಗಳನ್ನು ಒಂದು ಜಲಾಶಯದಲ್ಲಿ ಹೂಳಲಾಯಿತು.

ನಾಗರಿಕ ಹಕ್ಕುಗಳ ಪ್ರತಿಭಟನೆಗೆ ಉತ್ತರವಾಗಿ ಕಾಂಗ್ರೆಸ್ ಕೆಲವು ಕಠಿಣ ನಾಗರಿಕ ಹಕ್ಕುಗಳ ಕಾನೂನುಗಳನ್ನು ೧೯೬೪, ೧೯೬೫ ಮತ್ತು ೧೯೬೮ರಲ್ಲಿ ಜಾರಿ ಮಾಡಿತು. ೧೯೬೪ರ ನಾಗರಿಕ ಹಕ್ಕುಗಳ ಕಾಯಿದೆಯು ಜನಾಂಗೀಯ ತಾರತಮ್ಯತೆಯನ್ನು ಸಾರ್ವಜನಿಕ ಶಿಕ್ಷಣ ಕ್ಷೇತ್ರಗಳ, ಸಾರ್ವಜನಿಕ ವಸತಿಗಳಲ್ಲಿ ಮತ್ತು ಯಜಮಾನರು ಮತ್ತು ಮತಗಳನ್ನು ದಾಖಲು ಮಾಡುವ ಅಧಿಕಾರಗಳನ್ನು ನಿಷೇಧಿಸಲಾಯಿತು. ೧೯೬೫ರ ಕಾಯಿದೆಯು ಮತದಾರನಿಗೆ ಇರಬೇಕಾದ ಶೈಕ್ಷಣಿಕ ಅರ್ಹತೆಯನ್ನು ಮತ್ತು ೧೯೬೮ರ ಕಾಯಿದೆಯು ಸರಕಾರದಿಂದ ಅನುದಾನ ಪಡೆದ ಗೃಹ ಯೋಜನೆಗಳಲ್ಲಿ ಜನಾಂಗೀಯ ತಾರತಮ್ಯತೆಯನ್ನು ನಿಷೇಧಿಸಿತು.

ಇವೆಲ್ಲವುಗಳ ಪರಿಣಾಮವಾಗಿ ೧೯೭೦ರ ಸಮಯದಲ್ಲಿ ನಾಗರಿಕ ಹಕ್ಕುಗಳ ಕಾರ್ಯಕರ್ತರ ವಿರುದ್ಧ ನಡೆಯುತ್ತಿದ್ದ ಹಿಂಸೆಗಳು ದಕ್ಷಿಣದ ರಾಜ್ಯಗಳಲ್ಲಿ ಕಡಿಮೆಯಾಗ ತೊಡಗಿದವು. ಸಾಂಪ್ರದಾಯಿಕ ಪ್ರತ್ಯೇಕತಾ ನೀತಿಯು ಸಹ ಕ್ರಮೇಣವಾಗಿ ಕಣ್ಮರೆಯಾಯಿತು. ಯಾವ ಸರಕಾರವು ಸಹ ಪ್ರತ್ಯೇಕ ಶಾಲೆಗಳನ್ನು ತೆರೆಯಲಿಲ್ಲ ಮತ್ತು ಇದ್ದ ಶಾಲೆಗಳಲ್ಲಿ ಅದನ್ನು ಮುಂದುವರಿಸಲಿಲ್ಲ. ಲಕ್ಷಾನುಗಟ್ಟಲೆ ಕರಿಯರು ಮತ ಚಲಾಯಿಸುವ ಹಕ್ಕಿನಿಂದ ವಂಚಿತರಾಗಿದ್ದವರು ಈಗ ತಮ್ಮ ಮತ ಚಲಾಯಿಸಬಹುದಿತ್ತು. ಇದರಿಂದಾಗಿ ೧೯೯೦ರ ಸಮಯದಲ್ಲಿ ಕರಿಯರು ಸಾರ್ವಜನಿಕ ಕಚೇರಿಗಳಲ್ಲಿ ಉನ್ನತ ಹುದ್ದೆ ಹಿಡಿಯುವುದರ ಜೊತೆಗೆ ಅಧಿಕ ಸಂಖ್ಯೆಯಲ್ಲಿ ನಗರಾಧ್ಯಕ್ಷರಾಗಿ, ರಾಜ್ಯಪಾಲರಾಗಿ ಮತ್ತು ರಾಜ್ಯದ ಅಧಿಕಾರಿಗಳಾಗಿ ನೇಮಕಗೊಂಡಿದ್ದರು. ಉತ್ತರದ ರಾಜ್ಯಗಳಲ್ಲಿ ಇದೇ ಪರಿಸ್ಥಿತಿ ಮುಂದುವರಿಯಿತು. ರಾಷ್ಟ್ರಮಟ್ಟದಲ್ಲಿಯೂ ಸಹ ಕರಿಯರು ಶ್ರೇಷ್ಠ ನ್ಯಾಯಾಲಯದಲ್ಲಿ ಸೆನೆಟ್‌ನಲ್ಲಿ ಮತ್ತು ಪ್ರತಿನಿಧಿ ಸಭೆಗಳಲ್ಲಿ ಅಧ್ಯಕ್ಷರ ಸಚಿವ ಸಂಪುಟದಲ್ಲಿ ಹಾಗೂ ರಾಷ್ಟ್ರೀಯ ಸೇನೆಯಲ್ಲಿಯೂ ಹೆಚ್ಚಾಗಿ ಸೇರ್ಪಡೆಯಾಗಿದ್ದುದು ಕಂಡುಬಂದಿದೆ.

ಸಮಾರೋಪ

ಗುಲಾಮಗಿರಿಯು ಪ್ರಾಚೀನ ಕಾಲದಿಂದಲೂ ಪ್ರಪಂಚದ ಎಲ್ಲಾ ನಾಗರಿಕತೆಗಳ ಸಮಾಜಗಳಲ್ಲಿ ವಿವಿಧ ರೂಪದಲ್ಲಿ ಅಸ್ತಿತ್ವದಲ್ಲಿತ್ತು. ಇದರ ಉಗಮಕ್ಕೆ ಮೂಲ ಕಾರಣ ಗಳು ಆರ್ಥಿಕ ದುರ್ಬಲತೆ, ದೈಹಿಕ ಅಸಮರ್ಥತೆ ಮತ್ತು ಜನಾಂಗೀಯ ಸ್ಥಾನಮಾನಗಳು ಪ್ರಮುಖವಾಗಿದ್ದವು. ಎಲ್ಲಿಯವರೆಗೆ ಒಬ್ಬ ವ್ಯಕ್ತಿ ಈ ಅಂಶಗಳಿಂದ ಹೊರ ಬರುವುದಕ್ಕೆ ಆಗಲಿಲ್ಲವೂ ಅಲ್ಲಿಯವರೆಗೂ ಅವನು ಒಂದಲ್ಲ ಒಂದು ರೀತಿಯ ಗುಲಾಮಗಿರಿಯನ್ನು ಅಥವಾ ದಾಸತ್ವವನ್ನು ಅನುಭವಿಸಬೇಕಾಗಿತ್ತು. ಅಮೆರಿಕಾದಲ್ಲಿ ೧೭೭೬ರ ಕ್ರಾಂತಿಯ ಮೊದಲು ಗುಲಾಮಗಿರಿಯ ಸಮಸ್ಯೆಯು ಅಷ್ಟು ತೀವ್ರತರವಾಗಿರಲಿಲ್ಲ. ಆದರೆ ೧೮೦೦ರ ನಂತರದಲ್ಲಿ ಪಶ್ಚಿಮ ದಿಕ್ಕಿನಡೆ ಹೊಸ ಪ್ರದೇಶಗಳನ್ನು ವಿಸ್ತರಿಸುವುದ ರೊಂದಿಗೆ ಅಲ್ಲಿ ಹೊಸ ನೆಲವನ್ನು ಕೃಷಿಗೆ ಯೋಗ್ಯವಾಗುವಂತೆ ಮಾಡುವುದಕ್ಕೆ ಸಾವಿರಾರು ಸೇವಕರ ಗುಲಾಮರ ಅವಶ್ಯಕತೆ ಹೆಚ್ಚಾಯಿತು. ಗುಲಾಮರ ಸಂಖ್ಯೆ ಹೆಚ್ಚಾದಂತೆ ಅವರ ಸ್ಥಾನಮಾನಗಳ ಬಗ್ಗೆಯೂ ಚಿಂತನೆಗಳು ನಡೆದವು. ಅವರ ಸಬಲೀಕರಣಕ್ಕಾಗಿ ಹಲವಾರು ಸಂಘ ಸಂಸ್ಥೆಗಳು ನೈತಿಕತೆಯ ಮತ್ತು ಧಾರ್ಮಿಕ ಹಿನ್ನೆಲೆಯಲ್ಲಿ ಹುಟ್ಟಿಕೊಂಡು ಕಾರ್ಯಾರಂಭ ಮಾಡಿದವು. ಅವರ ಸಬಲೀಕರಣವನ್ನು ಉತ್ತರದ ರಾಜ್ಯಗಳು ಎತ್ತಿ ಹಿಡಿದರೆ ದಕ್ಷಿಣದ ರಾಜ್ಯಗಳು ತೀವ್ರವಾಗಿ ವಿರೋಧಿಸಲಾರಂಭಿಸಿದವು. ಗುಲಾಮಗಿರಿಯು ಕೇವಲ ಸಾಮಾಜಿಕ ಪಿಡುಗಾಗಿರದೇ ಅದೊಂದು ಆರ್ಥಿಕ ಸಮಸ್ಯೆಯಾಗಿಯೂ ಮುಂದುವರಿಯಿತು. ಗುಲಾಮಗಿರಿಯ ಬಗ್ಗೆ ನಡೆದ ವಾದ ವಿವಾದಗಳು ಅಮೆರಿಕಾದ ರಾಜಕೀಯದ ಮೇಲೆ ಹೆಚ್ಚು ಪ್ರಭಾವ ಬೀರಿ ಕೊನೆಗೆ ಅಮೆರಿಕಾದ ಅಂತರ್ಯುದ್ಧಕ್ಕೆ  (೧೮೬೧-೧೮೬೫) ದಾರಿ ಮಾಡಿಕೊಟ್ಟು ಕೊನೆಗೆ ಅದರೊಂದಿಗೆ ಅವನತಿ ಹೊಂದಿತು. ಗುಲಾಮಗಿರಿಯನ್ನು ಕೊನೆಗಾಣಿಸಿದ ನಂತರ ಅವರ ಮುಕ್ತಿ, ಪುನರ್ವಸತಿ, ಸಾಮಾಜಿಕ ಸ್ಥಾನಮಾನಗಳಿಗೆ ಸಂಬಂಧಪಟ್ಟ ವಿಷಯಗಳು ನಂತರದ ಶತಮಾನದಲ್ಲಿ ಹೆಚ್ಚು ರಾಜಕೀಯ ಮಹತ್ವ ಪಡೆದುಕೊಂಡವು. ಕರಿಯರ ಬುದ್ದಿಜೀವಿಯಾದ ಡು ಬಾಯ್ಸ ೧೯೦೩ರಲ್ಲಿ ೨೦ನೆಯ ಶತಮಾನವು ವರ್ಣದ ವಿಷಯಕ್ಕೆ(ಕಲರ್ ಲೈನ್) ಸಂಬಂಧಿಸಿ ದಾಗಿರುತ್ತದೆಂದು ತಿಳಿಸಿದ್ದರು. ಅವರ ಅಭಿಪ್ರಾಯಗಳು ಸರಿಯಾಗಿ ಕಂಡುಬಂದಿವೆ. ೨೦ನೆಯ ಶತಮಾನದ ಕೊನೆಯಲ್ಲಿ ಶಾಸನಬದ್ದ ಪ್ರತ್ಯೇಕತಾ ನೀತಿಯು ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಕೊನೆಗೊಂಡಿತು. ಜನಾಂಗೀಯ ತಾರತಮ್ಯತೆಯು ಕಾನೂನು ಬಾಹಿರವಾಗಿತ್ತು. ವಿಶ್ವವಿದ್ಯಾಲಯಗಳಲ್ಲಿ, ವ್ಯಾಪಾರದಲ್ಲಿ, ಸೈನದಲ್ಲಿ ಮತ್ತು ಸರಕಾರದಲ್ಲಿ ಕೆಲವು ಕರಿಯರು ಬಲಿಷ್ಠರಾಗಿದ್ದಲ್ಲದೇ ಪ್ರಮುಖರೂ ಆಗಿದ್ದರು. ೧೯೮೮ರಲ್ಲಿ ಕರಿಯರ ನಾಯಕರಾದ ಜೆಸ್ಸಿ ಜಾಕ್ಸನ್ ಡೆಮೊಕ್ರಾಟಿಕ್ ಪಕ್ಷದ ಅಧ್ಯಕ್ಷ ಪದವಿಗೆ ಪ್ರಯತ್ನಿಸಿದರು. ೧೯೯೫ರಲ್ಲಿ ರಿಪಬ್ಲಿಕನ್ ಪಕ್ಷದವರು ಜನರಲ್ ಕೋಲಿನ್ ಪಾವೆಲ್‌ರನ್ನು ಅಧ್ಯಕ್ಷರನ್ನಾಗಿ ಮಾಡುವುದಕ್ಕೆ ಪ್ರಯತ್ನಿಸಿದ್ದರು. ಆದರೂ ಕರಿಯರ ಪರಿಸ್ಥಿತಿಯಲ್ಲಿ ಎಷ್ಟೇ ಬದಲಾದರೂ ಅಮೆರಿಕಾದಲ್ಲಿ ಅವರು ಬಡವರಾಗಿಯೇ ಉಳಿದಿದ್ದಾರೆ. ಇನ್ನೂ ಹಲವಾರು ಕರಿಯ ಯುವಕರಿಗೆ ಸರಿಯಾದ ಕೆಲಸ ಸಿಗದೇ ನಿರುದ್ಯೋಗಿಗಳಾಗಿದ್ದಾರೆ. ಕೊನೆಯದಾಗಿ ಪ್ರತ್ಯೇಕತಾ ನೀತಿಯು ಹಲವರ ಪ್ರಯತ್ನದಿಂದಾಗಿ ಕಾನೂನುಬಾಹಿರವಾಗಿದ್ದರೂ ಅಮೆರಿಕಾದ ಕೆಲವು ಸಾಮಾಜಿಕ ವಿಷಯಗಳಲ್ಲಿ ಇನ್ನೂ ಸಹ ಪ್ರತ್ಯೇಕತೆಯಿಂದ ಉಳಿದು ಕೊಂಡಿವೆ. ಕಾನೂನುಗಳು ಪ್ರತ್ಯೇಕತಾ ನೀತಿಯನ್ನು ಪ್ರೋ ಹಾಗೂ ಸಾರ್ವಜನಿಕ ನೀತಿಯು ಒಗ್ಗಟ್ಟಿಗಾಗಿ ಶ್ರಮಿಸಿದರೂ ೧೯೯೦ರ ದಶಕದಲ್ಲಿ ಅಮೆರಿಕಾವು ಜನಾಂಗೀಯವಾಗಿ ಧ್ರುವೀಕರಣಗೊಳ್ಳತೊಡಗಿದೆ.

 

ಪರಾಮರ್ಶನ ಗ್ರಂಥಗಳು

೧. ಅಲೆನ್ ನೆವಿನ್ಸ್ ಮತ್ತಿತರರು, ೧೯೬೭. ಎ ಪಾಕೆಟ್ ಹಿಸ್ಟರಿ ಆಫ್ ದಿ ಯುನೈಟೆಡ್ ಸ್ಟೇಟ್ಸ್, ನ್ಯೂಯಾರ್ಕ್.

೨. ಅಲೆನ್ ನೆವಿನ್ಸ್ ಮತ್ತಿತರರು, ೧೯೫೬. ಶಾರ್ಟ್ ಹಿಸ್ಟರಿ ಆಫ್ ದಿ ಯುನೈಟೆಡ್ ಸ್ಟೇಟ್ಸ್, ನ್ಯೂಯಾರ್ಕ್.

೩. ಅರ್ನಾಲ್ಡ್ ಎ.ಸಿಯೋ, ೧೮೬೫. ‘‘ಇಂಟರ್‌ಪ್ರಿಟೇಷನ್ಸ್ ಆಫ್ ಸ್ಲೇವರಿ ದಿ ಸ್ಲೇವ್ ಸ್ಟೇಟಸ್ ಇನ್ ದಿ ಅಮೆರಿಕಾಸ್,’’  ಕಂಪೇರಿಟಿವ್ ಸ್ಟಡೀಸ್ ಇನ್ ಸೊಸೈಟಿ ಆ್ಯಂಡ್ ಹಿಸ್ಟರಿ, ಪು.೨೮೯-೩೦೮.

೪. ಎಲ್ಸ್ ವಿ.ಗೋವಿಯಾ, ೧೯೬೫. ಸ್ಲೇವ್ ಸೊಸೈಟಿ ಇನ್ ದಿ ಬ್ರಿಟಿಶ್ ಲೀವಾರ್ಡ್ ಐಲಾಂಡ್ಸ್ ಅಟ್ ದಿ ಎಂಢಾಫ್ ದಿ ಎಯ್‌ಟೀನ್ತ್ ಸೆಂಚುರಿ, ನ್ಯೂ ಹೇವನ್.

೫. ಎರಿಕ್ ವಿಲಿಯಮ್ಸ್, ೧೯೪೪. ಕ್ಯಾಪಿಟಲಿಸಮ್ ಅಂಡ್ ಸ್ಲೇವರಿ, ನ್ಯೂಯಾರ್ಕ್.

೬. ಕಾರ್ಲ್ ಎನ್.ಡಗ್ಲರ್, ೧೯೮೬. ಔಟ್ ಆಫ್ ಅವರ್ ಪಾಸ್ಟ್, ದಿ ಪೋರ್ಸಸ್ ದಟ್ ಶೇಪ್ಡ್ ಮಾಡರ್ನ್ ಅಮೆರಿಕಾ, ಮರುಮುದ್ರಣ, ನವದೆಹಲಿ.

೭. ಚಾರ್ಲ್ಸ್ ಸೆಲ್ಲರ್ಸ್ ಮತ್ತಿತರರು, ೧೯೯೦. ಎ ಸಿಂತೆಸಿಸ್ ಆಫ್ ಅಮೆರಿಕನ್ ಹಿಸ್ಟರಿ, ಸಂಪುಟ ೧, ದೆಹಲಿ.

೮. ಬರ್ನ್ಸ್ ಜೆ.ಎಂ., ೧೯೮೭. ದಿ ಅಮೆರಿಕನ್ ಎಕ್ಸ್‌ಪರಿಮೆಂಟ್, ದಿ ವರ್ಕ್‌ಷಾಪ್ ಆಫ್ ಡೆಮಾಕ್ರಸಿ, ಸಂಪುಟ ೨, ಮರುಮುದ್ರಣ, ನವದೆಹಲಿ.

೯. ಬರ್ನಾರ್ಡ್ ಬೋಲಿನ್ ಮತ್ತತರರು, ೧೯೮೧. ದಿ ಗ್ರೇಟ್ ರಿಪಬ್ಲಿಕ್, ಎ ಹಿಸ್ಟರಿ ಆಫ್ ದಿ ಅಮೆರಿಕನ್ ಪೀಪಲ್, ಮರುಮುದ್ರಣ, ನವದೆಹಲಿ.

೧೦. ಬಸಿಲ್ ಡೇವಿಡ್‌ಸನ್, ೧೯೬೧. ಬ್ಲಾಕ್ ಮದರ್ : ದಿ ಇಯರ್ಸ್ ಆಫ್ ದಿ ಆಫ್ರಿಕನ್ ಸ್ಲೇವ್ ಟ್ರೇಡ್, ಬೋಸ್ಟನ್.