ಪೃಥ್ವಿಯನ್ನು ಕುರಿತ ಒಂದು ಮಿನುಗುವ ನೋಟ ಉತ್ತರ ಮತ್ತು ದಕ್ಷಿಣ ಅಮೆರಿಕಾ ಭೂಖಂಡಗಳು, ಭೂಮಂಡಲದ ಒಟ್ಟು ವಿಸ್ತ್ರೀರ್ಣದ ೧/೩ ಭಾಗದಷ್ಟು ಭೂಪ್ರದೇಶವನ್ನು ಆವರಿಸಿವೆ ಎನ್ನುವ ಅಂಶವನ್ನು ಮನವರಿಕೆ ಮಾಡಿಕೊಡುತ್ತದೆ.

ಪಶ್ಚಿಮ ಯುರೋಪಿನ ಜನ ಐದುನೂರು ವರ್ಷಗಳ ಹಿಂದೆ ತಾವು ವಾಸಿಸುತ್ತಿದ್ದ ಪ್ರದೇಶಗಳಾಚೆಗಿನ ಜಗತ್ತಿನ ಬಗ್ಗೆ ಯಾವುದೇ ಅರಿವನ್ನು ಹೊಂದಿರಲಿಲ್ಲ ಅಥವಾ ಈ ಬಗೆಗಿನ ಅವರ ತಿಳುವಳಿಕೆ ಅಸ್ಪಷ್ಟವಾಗಿತ್ತು. ಕೆಲವು ವ್ಯಕ್ತಿಗಳಿಗೆ ಮಾತ್ರ ಭೂಮಂಡಲ ಗುಂಡಾಗಿದೆಯೆಂಬ ನಂಬಿಕೆಯಿದ್ದರೂ ಭೂಮಿಯ ಇನ್ನೊಂದು ಮುಖದ ಬಗ್ಗೆ ತಿಳುವಳಿಕೆ ಯಿರಲಿಲ್ಲ. ಯುರೋಪ್ ಬಗ್ಗೆ ಗೊತ್ತಿದ್ದರೂ ಆಫ್ರಿಕಾ ಮತ್ತು ಏಷ್ಯಾಗಳ ಬಗ್ಗೆ ಗೊತ್ತಿರ ಲಿಲ್ಲ. ಮೆಡಿಟರೇನಿಯನ್ ಮಾತ್ರ ಒಂದೇ ಒಂದು ವ್ಯಾಪಾರ ಮಾರ್ಗವಾಗಿತ್ತು. ಪಶ್ಚಿಮ ದಿಕ್ಕಿನಲ್ಲಿನ ಸಮುದ್ರಗಳನ್ನು ಕುರಿತು ಅಲ್ಪಸ್ವಲ್ಪ ಅರಿವಿತ್ತು. ಐರೊಪ್ಯ ಮತ್ತು ಏಷ್ಯಾ ನಾಗರಿಕತೆಗಳೆರಡೂ ಅನ್ವೇಷಣೆ ಮತ್ತು ಶೋಧನೆಗಾಗಿ ಕಾಯುತ್ತಿದ್ದ ಹೊಸಜಗತ್ತಿನ ಬಗ್ಗೆ ಅಜ್ಞಾನದಲ್ಲಿದ್ದವು. ಕ್ರಿ.ಶ.೧೪೮೮ರವರೆಗೆ ದಕ್ಷಿಣ ಆಫ್ರಿಕಾದ ತುದಿಯನ್ನು ಯಾವ ಸಾಹಸಿಯೂ ಪ್ರದಕ್ಷಿಣೆ ಮಾಡಲಿಲ್ಲ.

ಪಶ್ಚಿಮ ಗೋಳದಲ್ಲಿ ಸರಿಸುಮಾರು ೭೫ ಡಿಗ್ರಿ ಉತ್ತರ ಲ್ಯಾಟಿಟ್ಯೂಡ್ ರೇಖೆಯಿಂದ ಕೆಳಕ್ಕೆ ೫೫ ಡಿಗ್ರಿ ದಕ್ಷಿಣ ಲ್ಯಾಟಿಟ್ಯೂಡ್ ರೇಖೆಯೊಳಕ್ಕೆ ಸೇರುವ ಎರಡು ಭೂಖಂಡಗಳನ್ನು ಅಮೆರಿಕಾ ಎನ್ನುವ ಹೆಸರಿನಿಂದ ಗುರುತಿಸಲಾಗಿದೆ. ಅಮೆರಿಕಾ ಎನ್ನುವ ಹೆಸರನ್ನು ಅಮೇರಿಗೊ ವೆಸ್ ಪುಸ್ಸಿ ಹೊಸ ಜಗತ್ತಾದ ಅಮೆರಿಕಾ ಭೂಪ್ರದೇಶಗಳನ್ನು ಅನ್ವೇಷಿಸಲು ಹೊರಟು ಉತ್ತರ ಅಮೆರಿಕಾದ ಮುಖ್ಯ ಭಾಗಗಳನ್ನು ಶೋಧಿಸಿದವನು. ಸದ್ಯದ ವರ್ತಮಾನದ ಸಂದರ್ಭದಲ್ಲಿ ಅಮೆರಿಕಾ ಮತ್ತು ಅಮೆರಿಕಾನ್ ಪದಗಳು ಯು.ಎಸ್.ಎ. ಮತ್ತು ಆ ದೇಶದ ಪ್ರಜೆ ಎನ್ನುವ ಪದಗಳಿಗೆ ಸಮಾನಾರ್ಥದಲ್ಲಿ ಬಳಕೆಯಾಗುತ್ತಿವೆ.

ಅಮೆರಿಕಾದ ಮೂಲನಿವಾಸಿಗಳು ಮೂಲತಃ ಇಂಡಿಯನ್ನರು. ಅವರು ಮಧ್ಯ ಏಷಿಯಾದಿಂದ ಬಂದವರು. ದುರದೃಷ್ಟವಶಾತ್ ಪೂರ್ವದೊಂದಿಗಿನ ಅವರ ಸಂಪರ್ಕ ಸಾವಿರಾರು ತಲೆಮಾರುಗಳಿಂದಲೇ ಕಡಿದುಹೋಗಿದೆ. ಆದರೂ ಇದರಿಂದ ಫಲವತ್ತಾದ ಒಂದು ಜನಾಂಗ ಪ್ರತ್ಯೇಕವಾಗಿ ಬೆಳವಣಿಗೆಯಾಗಿದೆ.

ಬಿಳಿಯ ಮನುಷ್ಯ ಈ ಹೊಸ ಜಗತ್ತಿನಲ್ಲಿ ಹೆಜ್ಜೆಯಿರಿಸುವ ಮೊದಲು, ಅಮೆರಿಕಾದ ಇಂಡಿಯನ್ನರು ಉತ್ತರ ಮತ್ತು ದಕ್ಷಿಣ ಅಮೆರಿಕಾದ ಎಲ್ಲ ಭಾಗಗಳಲ್ಲೂ ಹರಡಿಕೊಂಡಿದ್ದರು. ಈ ಇಂಡಿಯನ್ನರ ಪೂರ್ವಜರೇ ಇಂಕಾ, ಮಾಯಾ ಮತ್ತು ಆಜೆಟಿಕ್‌ನಲ್ಲಿ ನೆಲೆನಿಂತು ಸಂಸ್ಕೃತಿ ಮತ್ತು ನಾಗರಿಕತೆಗಳನ್ನು ಕಟ್ಟಿ ಬೆಳೆಸಿದವರು.

ಕ್ವಿನ್ ಚುವಾ ಭಾಷೆಯನ್ನಾಡುತ್ತಿದ್ದ ಪೆರುವಿನ ಬುಡಕಟ್ಟೊಂದಕ್ಕೆ ಇಂಕಾ ಸಂಸ್ಕೃತಿ ಸೇರಿತ್ತು. ಈ ಬುಡಕಟ್ಟು ದಕ್ಷಿಣ ಅಮೆರಿಕಾದ ಅಟ್ಲಾಂಟಿಕ್ ಇಳಿಜಾರಿನಲ್ಲಿರುವ ಕ್ಷೀಟೊ ಮತ್ತು ಚಿಲಿಯ ಮೌಲ್ವೆ ನದಿಯ ಮಧ್ಯದಲ್ಲಿದ್ದ ಭೂಭಾಗದ ಮೇಲೆ ಪ್ರಭುತ್ವ ಹೊಂದಿತ್ತು. ಎತ್ತರ ಭೂಪ್ರದೇಶಗಳಲ್ಲಿ ಇಂಕಾ ಜನರು ಪೊಲೆಗಾನಲ್ ಶಿಲಾ ಸಂರಚನೆ ಹಂತದ ಬೃಹತ್ ಶಿಲಾಯುಗದ ಲಕ್ಷಣಗಳನ್ನು ಹೊಂದಿದ್ದರು.

ಮಾಯಾ ಜನಸಮುದಾಯ ಬಲಿಷ್ಠವಾಗಿದ್ದು ಮೆಕ್ಸಿಕೋ ಮತ್ತು ಮಧ್ಯ ಅಮೆರಿಕಾ ಭಾಗದಲ್ಲಿದ್ದ ಅಮೆರಿಕಾ ಇಂಡಿಯನ್ನರ ಮೂಲದ ಯುಕ್ತಾನ್ ಎಂಬ ಮುಖ್ಯ ಬಣಕ್ಕೆ ಸೇರಿತ್ತು. ಮಾಯ ಮೂಲದ ಬುಡಕಟ್ಟಿನಿಂದಲೇ ಹೊಸ ಟೆಕ್ಸ್, ಜಾನ್ ಟೆಲ್ ಪಾಪಮ್, ಮಾಮೆ ಕಾಕ್‌ಚಿಕ್ವೆಲ್ ಮತ್ತು ಕ್ವಿಚೆ ಎಂಬ ಹೆಸರಿನ ಕುಲಗಳು ಕವಲೊಡೆದಿವೆ. ಇವು ಮೆಕ್ಸಿಕೋ ಪ್ರಾಂತ್ಯದ ಯುಕ್ತಾನ್, ವೆರಾ, ಕ್ರೂಜ್, ತಬಸ್ ಕೋ, ಕ್ಯಾಂಪೇಚಿ ಮತ್ತು ಚೀಪಾಸ್ ಪ್ರದೇಶಗಳಲ್ಲಿ ವಾಸಿಸುತ್ತಿದ್ದವು. ಅಲ್ಲದೆ ಗ್ವಾಟೆಮಾಲಾ ಮತ್ತು ಸಾಲ್ವಿಡಾರ್ ಗಳ ಬಹುಭಾಗದಲ್ಲೂ ಸಹ ಹರಡಿಕೊಂಡಿದ್ದವು. ಈ ಕುಲಗಳಲ್ಲಿನ ಸಂಪ್ರದಾಯಗಳು, ವಿವಿಧ ಆಚರಣೆಗಳು ಮಾಯಾ ಬುಡಕಟ್ಟಿನ ಮೂಲಸ್ಥಳ ಉತ್ತರದ ಕೊನೆಯ ತುದಿಯಿರಬೇಕು ಎನ್ನುವುದನ್ನು ಸೂಚಿಸುತ್ತವೆ. ಪ್ರಾಯಶಃ ಕ್ರಿಸ್ತಶಕೆಯ ಆರಂಭದ ಹಿಂದೆಯೇ ಮಾಯಾ ಬುಡಕಟ್ಟು ವಲಸೆ ಬರಲಾರಂಭಿಸಿ ೫ನೆಯ ಶತಮಾನಕ್ಕಿಂತ ಸ್ವಲ್ಪ ಮೊದಲೇ ಯುಕ್ತಾನ್ ಪ್ರದೇಶವನ್ನು ತಲುಪಿರಬೇಕು. ಮಾಯಾಜನ ಕಪ್ಪುವರ್ಣದ ತ್ವಚೆಯನ್ನು ಹೊಂದಿದ್ದು, ಗುಂಡನೆ ತಲೆ, ಕುಳ್ಳನೆಯ ಸದೃಢವಾದ ಶರೀರವನ್ನು ಹೊಂದಿದ್ದರು. ಉತ್ತರ ಅಮೆರಿಕಾದಲ್ಲಿನ ಬುಡಕಟ್ಟುಗಳ ಪೈಕಿ ಆಜೆಟಿಕ್ ಬುಡಕಟ್ಟು ಬಹಳ ಜನಪ್ರಿಯವಾದದ್ದು. ಇದನ್ನು ಮೆಕ್ಸಿಕಾ ಎಂತಲೂ ಕರೆಯಲಾಗುತ್ತದೆ. ಈ ಆಜೆಟಿಕ್, ನಹೋವ ಭಾಷೆಯನ್ನು ಆಡುವ ಪ್ರಸಿದ್ಧ ಯೂಟೊ-ಆಜೆಟಿಕ್ ಕುಲದ ಮೂಲಕ್ಕೆ ಸೇರಿದೆ. ಆಜೆಟಿಕ್ ಬುಡಕಟ್ಟಿನ ಪೂರ್ವಜರು ೧೪೯೨ನೆಯ ಇಸವಿಗೂ ಹಿಂದಿನ ಅನೇಕ ಶತಮಾನಗಳ ಕಾಲದಲ್ಲಿ ಬೇಟೆಗಾರರಾಗಿದ್ದರು. ತೊರುಗಾಣಿಕೆಯ ಇತಿಹಾಸದಲ್ಲಿ ಅವರು ಕಾಣಿಸಿಕೊಂಡಿದ್ದು ಮೊದಲಿಗೆ ಕ್ರಿ.ಶ.೧೧೦೦ರ ನಂತರ ಹೆಚ್ಚು ಕಡಿಮೆ ೧೩೨೫ನೆಯ ಇಸವಿಯ ವೇಳೆಗೆ ಟೊಗ್‌ಟೆಕ್‌ರ ಅವಸಾನದ ದಿನಗಳಲ್ಲಿ. ಆಜೆಟಿಕ್ ಬುಡಕಟ್ಟು ತನ್ನ ನೆಲೆಯೊಂದನ್ನು ಟೆಜ್‌ಕೊದ ಬ್ರಾಕಿಸ್ ಸರೋವರದ ಪಶ್ಚಿಮ ಅಂಚಿನ ಸಮೀಪದ ಜೌಗು ಪ್ರದೇಶದಲ್ಲಿ ಸ್ಥಾಪಿಸಿತು. ಈ ಘಟನೆಯ ಹಿಂದೆಯೇ ‘ಟ್ಲಾಟೆಲೂಲಕೊ’ ಪ್ರದೇಶದಿಂದ ಉತ್ತರಕ್ಕೆ ಒಂದು ಮೈಲಿ ದೂರದಲ್ಲಿ ಆಜೆಟಿಕ್ ಬುಡಕಟ್ಟಿನೊಂದಿಗೆ ಕರುಳ ಸಂಬಂಧ ಹೊಂದಿದ್ದ ಚಂಚಿಟಿಟಲಾನ್ ಬುಡಕಟ್ಟು ಸಹ ನೆಲೆನಿಂತಿತು. ಆಜೆಟಿಕ್ ಸಮುದಾಯದ ಬಗ್ಗೆ ದಾಖಲಿಸಿಕೊಳ್ಳಬಹುದಾದ ಒಂದು ಅಂಶವೆಂದರೆ ಅದು ಆ ಸಮುದಾಯದ ಆಕ್ರಮಣಶೀಲತೆ. ಆರಂಭದಲ್ಲಿ ಆಜೆಟಿಕರ ಆಕ್ರಮಣಗಳು ನಿಧಾನಗತಿಯಲ್ಲಿದ್ದವು. ಕ್ರಮೇಣ ಚುರುಕುಗೊಂಡು, ತೀವ್ರಗೊಂಡವು. ಆಜೆಟಿಕರು ಟೇಜಕೊ, ಚಾಲೂಲ, ಟಲಕ್ಸ್ ಕ ಇಟಿಕ ಮತ್ತು ಟಲಕ್ಸ್‌ಲದ ಹಕ್ಸೊ ಟೈಸನಿಯಾ ನಗರಗಳನ್ನು ಸುತ್ತುವರಿದರು. ಈ ಸಮಯದಲ್ಲಿ ಇನ್ನೂ ಆಜೆಟಿಕ್ ಸಮಾಜದ ಬೆಳವಣಿಗೆ ಹತ್ತಿರ ಪ್ರಾಥಮಿಕ ಅವಸ್ಥೆಯ ಹಂತದಲ್ಲಿತ್ತು. ಆದುದರಿಂದ ಆಜೆಟಿಕ್ ಪ್ರಭುತ್ವಕ್ಕೆ ಒಂದು ನಿಶ್ಚಿತವಾದ ಗಡಿರೇಖೆಯೊಳಗಿನ ಭೂಪ್ರದೇಶದ ಮೇಲೆ ಆಳ್ವಿಕೆ ನಡೆಸುವ ಬಗ್ಗೆ ಹೆಚ್ಚು ಲಕ್ಷ್ಯವಿರಲಿಲ್ಲ.

ಮತ್ತೊಂದು ಮುಖ್ಯ ಬುಡಕಟ್ಟಾದ ಅಮೆರಿಕಾ ಇಂಡಿಯನ್ನರು ಹೆಚ್ಚಾಗಿ ತಮ್ಮ ಮುಖಚಹರೆಯ ಗುಣಲಕ್ಷಣಗಳಿಂದ ಬೇರೆಯಾಗಿಯೇ ಕಾಣುತ್ತಾರೆ. ಅಟ್ಲಾಂಟಿಕ್ ತೀರದ ಇಂಡಿಯನ್ನರು ಎತ್ತರವಾದ ಹಾಗೂ ಸದೃಢ ಶರೀರವುಳ್ಳವರಾಗಿದ್ದರ ಜೊತೆಗೆ ತಾಮ್ರ ವರ್ಣದವರಾಗಿದ್ದು ಉಬ್ಬಿದ ಕೆನ್ನೆಯ ಮೂಳೆ ಮತ್ತು ಚಿಕ್ಕ ಚಿಕ್ಕ ಕಪ್ಪು ಬಣ್ಣದ ಕಣ್ಣುಗಳನ್ನು ಹೊಂದಿದ್ದರು. ಅಮೆರಿಕಾ ಇಂಡಿಯನ್ನರ ಕೂದಲು ಕಪ್ಪಾಗಿದ್ದು ನೇರವಾಗಿತ್ತು. ಗಡ್ಡದ ಕೂದಲು ತೆಳುವಾಗಿತ್ತು. ಇಂಡಿಯನ್ನರು ಅರ್ಧ ಚಂದ್ರಾಕಾರ ಅಥವಾ ವರ್ತುಲಾಕಾರದ ಮೇಲ್ಛಾವಣೆಯಿರುತ್ತಿದ್ದ ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದರು. ಈ ಗುಡಿಸಲುಗಳ ಮೇಲ್ಛಾವಣಿಯನ್ನು ಚರ್ಮದಿಂದ ಹೊದಿಸಲಾಗುತ್ತಿತ್ತು ಮತ್ತು ಒಳಭಾಗದಲ್ಲಿ ಕಂಬಗಳ ಮೇಲಿರುತ್ತಿದ್ದ ಚೌಕಟ್ಟು ಮೇಲ್ಛಾವಣಿಯನ್ನು ಹೊತ್ತಿರುತ್ತಿತ್ತು. ವಿಕ್‌ಇನಪ್ಸ್ ಎಂಬ ಗುಡಿಸಲುಗಳ ಮೇಲ್ಛಾವಣಿಯನ್ನು ಬಿದಿರು, ಹುಲ್ಲು ಮರದ ಸಣ್ಣ ಸಣ್ಣ ರೆಂಬೆ ಕೊಂಬೆಗಳಿಂದ ಹೆಣೆಯಲಾಗುತ್ತಿತ್ತು. ಕಂಬಗಳ ಮೇಲೆ ಬಿದಿರು ಮತ್ತು ಬೆತ್ತದ ಕಡ್ಡಿಗಳನ್ನು ಉಪಯೋಗಿಸಿ ಮಾಡಿದ್ದ ಮೇಲ್ಛಾವಣಿಯಿದ್ದ ಟೆಪೇಸ್ ಎನ್ನುವ ಗುಡಿಸಲುಗಳು ಸಹ ಇದ್ದವು. ಇವುಗಳೊಂದಿಗೆ ಇಂಡಿಯನ್ನರು ಎತ್ತರವಾದ ಗುಡಿಸಲುಗಳನ್ನು ಕಟ್ಟುತ್ತಿದ್ದರು. ಹುಲ್ಲು, ಮರ, ಎಲೆ, ಚರ್ಮ ಇತ್ಯಾದಿಗಳ ಬಳಕೆಯ ಜೊತೆಯಲ್ಲೇ ಇಂಡಿಯನ್ನರಿಗೆ ಇಟ್ಟಿಗೆ ಮತ್ತು ಕಲ್ಲುಗಳನ್ನು ಬಳಸುವ ಕ್ರಮ ತಿಳಿದಿತ್ತು. ಬಿಸಲಿನ ಶಾಖದಿಂದ ಒಣಗಿಸಿದ ಇಟ್ಟಿಗೆಗಳನ್ನು ಉಪಯೋಗಿಸಿಕೊಂಡು ಪುಇಬ್ಲೂ ಎನ್ನುವ ಹೆಸರಿನಿಂದ ಕರೆಯುತ್ತಿದ್ದ, ಎರಡು ಅಂತಸ್ತುಗಳ ಮನೆಯನ್ನು ಸಹ ಕಟ್ಟುತ್ತಿದ್ದರು.

ಮಹಿಳೆಯರಿಗೆ ಸ್ಕ್ವಅಮ್ಸ್ ಎನ್ನುವ ಹೆಸರಿತ್ತು. ಮಹಿಳೆಯರು ವ್ಯಾವಸಾಯಿಕ ಚಟುವಟಿಕೆಗಳಲ್ಲಿ ತೊಡಗಿರುತ್ತಿದ್ದರಲ್ಲದೆ, ಪುರುಷರು ಬೇಟೆಯಾಡಿ ತಂದ ಮಾಂಸವನ್ನು ಒಣಗಿಸಿಡುತ್ತಿದ್ದರು.

ಇಂಡಿಯನ್ನರು ನಾಯಿಗಳನ್ನು ಸಾಕುತ್ತಿದ್ದರು. ಕುದುರೆ ಮತ್ತು ಬಂದೂಕುಗಳು ಇಂಡಿಯನ್ನರ ಬಳಿ ಇರಲಿಲ್ಲ. ಇವುಗಳ ಪರಿಚಯವಾದದ್ದು ಬಿಳಿಯರು ಬಂದ ನಂತರವೇ. ತಮಹಾಕ್ ಎನ್ನುವ ಮರದ ಹಿಡಿಕೆಯುಳ್ಳ ಕಲ್ಲಿನ ಸಣ್ಣ ಕೊಡಲಿಗಳು ಇಂಡಿಯನ್ನರ ಆಯುಧವಾಗಿತ್ತು. ಬಿಲ್ಲಿನ ಹೆದೆಯನ್ನು ಬಿರುಸಾಗಿಸಲು ಅದನ್ನು ಜಿಂಕೆಯ ಸ್ನಾಯುರಜ್ಜುವಿನ ರಸದಿಂದ ಲೇಪಿಸುತ್ತಿದ್ದರು. ಗಡಸು ಕಲ್ಲುಗಳ ಮೊನೆಯುಳ್ಳ ಬಾಣಗಳಿದ್ದವು. ಸರೋವರ ಮತ್ತು ನದಿಗಳನ್ನು ದಾಟಲು ಅಮೆರಿಕಾದ ಇಂಡಿಯನ್ನರು ಚರ್ಮದಿಂದ ಮಾಡಿದ ತೋಡು ದೋಣಿಗಳನ್ನು ಬಳಸುತ್ತಿದ್ದರು. ಸುಂದರವಾದ ಮಡಿಕೆ, ಕುಡಿಕೆಗಳು ಮತ್ತು ಬುಟ್ಟಿಗಳ ಹೆಣಿಕೆ ಅಮೆರಿಕಾ ಇಂಡಿಯನ್ನರ ಕರಕುಶಲ ಕಲೆಯ ಉತ್ಪನ್ನಗಳಾಗಿದ್ದವು. ಅಮೆರಿಕಾದ ಇಂಡಿಯನ್ನರು ಕವಡೆ ಮತ್ತಿತರ ಸಣ್ಣ ಸಣ್ಣ ಜೀವಿಗಳ ಚಿಪ್ಪಿನ ಪಟ್ಟಿಕೆಗಳನ್ನು ಒಡವೆಗಳಂತೆ ಧರಿಸುತ್ತಿದ್ದರು. ವಮ್ ಪಮ್ ಎನ್ನುವ ಅಮೆರಿಕಾ ಇಂಡಿಯನ್ನರ ನಾಣ್ಯವಾಗಿತ್ತು.

ಭೂಮಿ ಖಾಸಗಿ ಒಡೆತನದಲ್ಲಿರಲಿಲ್ಲ. ಭೂಮಿಯ ಮೇಲೆ ಸಾಮೂಹಿಕ ಒಡೆತನವಿತ್ತು. ಯಾವುದೇ ವ್ಯಕ್ತಿ ಖಾಸಗಿಯಾಗಿ ಭೂಮಿಯನ್ನು ಆಸ್ತಿಯೆಂದು ಭಾವಿಸುವಂತಿರಲಿಲ್ಲ.  ಬಿಳಿಯರ ಭೂ ಒಡೆತನದ ಪರಿಕಲ್ಪನೆಯಲ್ಲಿ ಅಮೆರಿಕಾದ ಇಂಡಿಯನ್ನರಿಗೆ ನಂಬಿಕೆಯಿರಲಿಲ್ಲ ಮತ್ತು ಭೂಮಿಯನ್ನು ಮಾರುವುದನ್ನು ಮತ್ತು ಕೊಳ್ಳುವುದನ್ನು ಒಪ್ಪುತ್ತಿರಲಿಲ್ಲ.

ಒಂದು ಬುಡಕಟ್ಟಿಗೆ ಅಥವಾ ಅನೇಕ ಬುಡಕಟ್ಟುಗಳಿಗೆ ಒಬ್ಬನೇ ನಾಯಕನಿರುತ್ತಿದ್ದ. ಬಹುತೇಕ ಬುಡಕಟ್ಟುಗಳು ಸದಾ ಪರಸ್ಪರ ಕಾದಾಡುತ್ತಿದ್ದವು. ಕೆಲವು ಸಮುದಾಯಗಳು ಹಲವು ಬಾರಿ ಅಷ್ಟೇನೂ ಬಲಶಾಲಿಯಲ್ಲದ ನಾಯಕರನ್ನು ಪಡೆದಿರುತ್ತಿದ್ದುದೂ ಉಂಟು. ಮತ್ತು ಪ್ರತಿ ಬುಡಕಟ್ಟಿನಲ್ಲಿ ಅನೇಕ ಬಣಗಳಿದ್ದವು. ರಕ್ತಸಂಬಂಧದ ಬಂಧ ದಿಂದ ಬಿಗಿಯಲ್ಪಟ್ಟ ಒಂದು ಕುಟುಂಬವೇ ಒಂದು ಬಣವೆಂದು ಪರಿಗಣಿಸಲ್ಪಡುತ್ತಿತ್ತು. ಪ್ರತಿಯೊಂದು ಪ್ರದೇಶಕ್ಕೂ ಬೇರೆ ಬೇರೆ ಹೆಸರುಗಳಿದ್ದವು. ಬಹುಶಃ ಈ ಹೆಸರುಗಳು ಕೆಲವು ಪ್ರಾಣಿಗಳ ಅಥವಾ ಮರಗಿಡಗಳ ಹೆಸರಿನ ಮೂಲದಿಂದ ಬಂದಿವೆ. ಉದಾಹರಣೆಗೆ ಕರಡಿ ಬಣ. ಇನ್ನೂ ಕೆಲವು ಸಂದರ್ಭಗಳಲ್ಲಿ ಕುಲದೇವತೆಯ ಚಿಹ್ನೆಯನ್ನು ಕೆತ್ತಿರುವ ಕಂಬಗಳೇ ಆಯಾ ಬಣವನ್ನು ಸಾಂಕೇತಿಸುತ್ತಿದ್ದವು. ಈ ಕಂಬಗಳನ್ನು ಬಣದ ಮುಖ್ಯಸ್ಥ ವಾಸಿಸುತ್ತಿದ್ದ ಟೇಪೆಸ್‌ನ ಮುಂದೆ ನಿಲ್ಲಿಸಲಾಗುತ್ತಿತ್ತು. ಕಂಬಗಳಲ್ಲಿ ಕೆತ್ತಿರುವ ಚಿತ್ರಗಳಲ್ಲಿದ್ದ ಪ್ರಾಣಿಗಳು ಮತ್ತು ಮರಗಿಡಗಳೇ ಆಯಾ ಪ್ರದೇಶಗಳಲ್ಲಿ ನೆಲೆನಿಂತಿದ್ದ ಬುಡಕಟ್ಟಿನ ಹೆಸರನ್ನು ಹೇಳುತ್ತಿದ್ದವು. ಯುದ್ಧ, ಶಾಂತಿ ಅಥವಾ ಬುಡಕಟ್ಟನ್ನು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಒಯ್ಯುವ ವಿಷಯಗಳಲ್ಲಿ ಹುಟ್ಟುತ್ತಿದ್ದ ಸಮಸ್ಯೆಗಳನ್ನು ಬಗೆಹರಿಸಲು ಬಣದ ನಾಯಕರು ಮತ್ತು ಮುಖ್ಯಸ್ಥರು ಆಗಾಗ ಸಭೆ ಸೇರುತ್ತಿದ್ದರು.

ಅಮೆರಿಕಾ ಇಂಡಿಯನ್ನರು ಪ್ರಕೃತಿಗೆ ಹತ್ತಿರವಾಗಿ ಬದುಕಿದವರು ಅಥವಾ ಪ್ರಕೃತಿಯೊಡನೆ ನೆಂಟಸ್ತಿಕೆಯನ್ನು ಬೆಳೆಸಿದ್ದರು ಎನ್ನುವ ಅಂಶವನ್ನು ಸ್ಪಷ್ಟವಾಗಿ ಮನವರಿಕೆ ಮಾಡಿಕೊಡುತ್ತದೆ. ಅವರ ಆಹಾರ, ನಂಬಿಕೆ, ಮನೆ, ಬಟ್ಟೆ ಎಲ್ಲವನ್ನೂ ಪ್ರಕೃತಿಯೇ ಒದಗಿಸುತ್ತಿತ್ತು.

ಅಮೆರಿಕಾ ಇಂಡಿಯನ್ನರ ಮೇಲೆ ಯುರೋಪ್ಯ ನಾಗರಿಕತೆಯ ಪ್ರಭಾವ
ಅಮೆರಿಕಾ ಇಂಡಿಯನ್ನರು ಸ್ವಾತಂತ್ರ್ಯದಿಂದ ಸಂರಕ್ಷಣಾ ಶಿಬಿರದವರೆಗೆ

ಯುರೋಪ್ಯ ದೇಶಗಳಲ್ಲಿ ಹದಿನೈದನೇ ಶತಮಾನದ ಹೊತ್ತಿಗೆ ಒಂದು ದೊಡ್ಡ ಚಲನೆ ಕಾಣಿಸಿಕೊಂಡಿತು. ಈ ಚಲನೆ ಮುಂದಿನ ಐನೂರು ವರ್ಷಗಳ ಕಾಲದಲ್ಲಿ ಯುರೋಪ್ಯರನ್ನು ಜಗತ್ತಿನ ಮೂಲೆ ಮೂಲೆಗಳಿಗೆ ತಲುಪಿಸಿತು. ಇಂಥ ವಲಸೆಯ ಒಂದು ಹಂತ ಅಮೆರಿಕಾ ಭೂಖಂಡದಲ್ಲಿ ಶಕ್ತಿಶಾಲಿಯಾದ ಹೊಸ ಜನಾಂಗವೊಂದರ ಸೃಷ್ಟಿಗೆ ಕಾರಣವಾಯಿತು.

ಆಸಕ್ತಿದಾಯಕವಾದ ವಿಷಯವೆಂದರೆ ಬಿಳಿಯರಿಗೆ ೧೦೯೫ನೇ ಇಸವಿಯಲ್ಲಿ ನಡೆದ ಧರ್ಮಯುದ್ಧಗಳೇ ಅನೇಕ ಹೊಸ ದಾರಿಗಳನ್ನು ತೋರಿಸಿದ್ದವು. ಬಿಳಿಯರಿಗೆ ಹೊಸ ಭೂ ಪ್ರದೇಶಗಳ ಬಗ್ಗೆ ಮತ್ತು ಅಲ್ಲಿ ವಾಸಿಸುತ್ತಿದ್ದ ಜನರ ಬಗ್ಗೆ ಚೆನ್ನಾಗಿಯೇ ತಿಳಿದಿತ್ತು. ಏಕೆಂದರೆ ಹೊಸ ಪ್ರದೇಶಗಳಲ್ಲಿದ್ದ ಜನರು ಬಿಳಿಯರಿಗಿಂತ ಭಿನ್ನವಾಗಿ ಕಾಣುತ್ತಿದ್ದರು. ಧರ್ಮಯುದ್ಧಗಳ ನಂತರ ಯುರೋಪ್ ನಗರಗಳಲ್ಲಿ ಅರಬ್ ವೈದ್ಯರಿಗೆ ಬೇಡಿಕೆ ಹೆಚ್ಚಾಯಿತು. ಧರ್ಮಯುದ್ಧಗಳಿಂದ ಬಿಳಿಯರು ಸಾಂಬಾರ ಪದಾರ್ಥ ಮತ್ತು ಉತ್ತಮ ಲೋಹಗಳನ್ನು ಸಹ ಗಳಿಸಿಕೊಂಡರು. ಮೊದಲಬಾರಿಗೆ ಸಕ್ಕರೆಯ ರುಚಿಯನ್ನು ಸವಿದರು, ಗಾಳಿಯಂತ್ರಗಳನ್ನು ನೋಡಿದರು. ಯುರೋಪ್‌ನೊಡನೆ ಪ್ರಾಚ್ಯ, ಪಶ್ಚಿಮ ಏಷ್ಯಾ ಮತ್ತು ಈಜಿಪ್ಟ್‌ಗಳ ನಡುವೆ ವ್ಯಾಪಾರ ಸಂಪರ್ಕ ಬೆಳೆಯಿತು. ಈ ಸಂಪರ್ಕದ ತೆಕ್ಕೆಯೊಳಗೆ ದೂರ ಪೂರ್ವದ ದೇಶಗಳಾದ ಚೀನ, ಜಪಾನ್, ಇಂಡಿಯಾ ಮತ್ತು ಇಂಡೀಸ್ ಪ್ರದೇಶಗಳು ಸೇರಿಕೊಂಡವು.

ಪೌಲೋ ಸಹೋದರರಾದ ನಿಕೊಲೋ ಮತ್ತು ಮಾಫೆಯೋ ಅವರ ಶೋಧನೆಗಳು ಕೂಡಾ ಈ ನಿಟ್ಟಿನಲ್ಲಿ ಬಹಳ ಮುಖ್ಯವಾದವು. ಅವರು ವೆನಿಸ್ ನಗರದಿಂದ ಪೂರ್ವದ ಕಡೆಗೆ ಪ್ರಯಾಣಿಸಿದರು. ಅವರ ಪಯಣದ ಹಾದಿ ಕಪ್ಪು ಸಮುದ್ರದ ಉತ್ತರ ತೀರಪ್ರದೇಶವನ್ನೊಳಗೊಂಡು, ಪೂರ್ವ ದಿಕ್ಕಿನಲ್ಲಿ ಕ್ಯಾಸ್ ಬಿಯನ್ ಸಮುದ್ರದವರೆಗೂ ಹಬ್ಬಿತ್ತು. ಇಲ್ಲಿಂದ ಮುಂದಕ್ಕೆ ಪೌಲೋ ಸಹೋದರರು ಎಸ್.ಇ. ಬುಕಾರಕ್ಕೆ ತಲುಪಿದರು. ಪೌಲೋ ಸಹೋದರರು ಕ್ರಮಿಸಿದ ಅಂತರ ಅಲ್ಲಿಯವರೆಗೂ ಬಹುತೇಕ ಯುರೋಪ್ಯ ವ್ಯಾಪಾರಿಗಳು ಹೋಗಬಹುದಾಗಿದ್ದಷ್ಟು ದೂರದ ಮಾರ್ಗವಾಗಿತ್ತು. ಈ ಘಟನೆಯ ನಂತರ ಕಥೆಯ ರೂಪದಲ್ಲಿ ಯುರೋಪಿನಲ್ಲಿ ಹಬ್ಬಿದ ನಿಕೋಲೋ ಪೌಲೋ ಮಗನಾದ ಮಾರ್ಕೊಪೌಲೋನ ಪ್ರಯಾಣಗಳ ಅನುಭವಗಳು ಕೊಲಂಬಸ್ ಸಮುದ್ರಯಾನ ಕೈಕೊಳ್ಳಲು ಅವನನ್ನು ಉತ್ತೇಜಿಸಿದವು. ಗುಡ್‌ಹೋಪ್ ಭೂಶಿರವೆಂದು ಕರೆಯಲ್ಪಡುತ್ತಿರುವ ಆಫ್ರಿಕಾದ ದಕ್ಷಿಣ ತುದಿಯನ್ನು ೧೪೮೮ರಲ್ಲಿ ಬಾರ್ಥಲೋಮಿಯೊ ಡಿಯಾಜ್‌ನು ಸುತ್ತು ಹಾಕಿದನು. ವಾಸ್ಕೋಡಿಗಾಮನು ೧೪೯೮ರಲ್ಲಿ ಈ ಭೂಶಿರದ ಮುಖಾಂತರವೇ ಇಂಡಿಯಾ ದೇಶವನ್ನು ತಲುಪಿದನು.

ಕೊಲಂಬಸ್‌ನು ತನ್ನ ಪ್ರಯಾಣವನ್ನು ಆರಂಭಿಸುವ ಒಂದು ನೂರು ವರ್ಷಗಳ ಮೊದಲೇ ನಾರ್ವೆ ದೇಶದ ಜನರು ಐಸ್‌ಲ್ಯಾಂಡ್, ಗ್ರೀನ್‌ಲ್ಯಾಂಡ್ ಮತ್ತು ಉತ್ತರ ಅಮೆರಿಕಾದ ಭೂಖಂಡದವರೆಗೆ ಸಂಚರಿಸಿದ್ದರು. ಇವರು ನಾರ್ವೆಯಲ್ಲಲ್ಲದೆ ಡೆನ್ ಮಾರ್ಕ್, ಸ್ವೀಡನ್‌ಗಳಲ್ಲಿ ಸಹ ನೆಲೆಸಿದ್ದರು. ವೈಕಿಂಗ್ ಎನ್ನುವ ಹೆಸರಿನಿಂದಲೂ ಕರೆಯಿಸಿಕೊಳ್ಳುತ್ತಿದ್ದ ಇವರು ಸಾಹಸ ಪ್ರವೃತ್ತಿ ಮತ್ತು ಕಾದಾಟಗಳ ಪ್ರಿಯರಾಗಿದ್ದರು. ಇವರ ಸಾಹಸ, ಶೌರ್ಯಗಳ ವಿವರಗಳು ನಮಗೆ ವೀರಗಾಥೆಗಳ ರೂಪದಲ್ಲಿ ದೊರಕುತ್ತವೆ. ವಾಸ್ತವವಾಗಿ ಸೇನಾಧಿಪತಿಯಾಗಿದ್ದ ನಾರ್ವೆಯನ್ನರ ರಾಜಕುಮಾರ ಲೇಯಿಪ್ ಎರಿಕ್‌ಸನ್ ಒಂದು ಸಣ್ಣ ಗುಂಪಿನೊಂದಿಗೆ ಧೈರ್ಯವಾಗಿ ಪಶ್ಚಿಮ ದಿಕ್ಕಿನಲ್ಲಿ ಪ್ರಯಾಣಿಸಿ ಒಂದು ಭೂಪ್ರದೇಶವನ್ನು ತಲುಪಿದನು. ಈ ಭೂ ಪ್ರದೇಶವನ್ನು ಗ್ರೀನ್ ಲ್ಯಾಂಡ್ ಎಂದು ಕರೆದರು. ಪ್ರಚಂಡವಾದ ಬಿರುಗಾಳಿಯ ಹೊಡೆತಕ್ಕೆ ಸಿಕ್ಕಿದ ಅವರು ಪ್ರಾಯಶಃ ನ್ಯೂ ಪೌಂಡ್ ಲ್ಯಾಂಡ್, ಲ್ಯಾಬ್ರಡಾರ್ ಅಥವಾ ಮೆಸಾಚುಸೆಟ್ಸ್ ಎಂದು ಈಗ ಕರೆಯಲ್ಪಡುತ್ತಿರುವ ಪ್ರದೇಶಗಳಿರುವ ದಕ್ಷಿಣ ಗ್ರೀನ್‌ಲ್ಯಾಂಡ್‌ನಲ್ಲಿ ಇಳಿಯಬೇಕಾಯಿತು. ಲೇಯಿಪ್ ಎರಿಕ್‌ಸನ್ ಮತ್ತು ಅವರ ಜನರು ಚಳಿಗಾಲವನ್ನು ಅಲ್ಲೇ ಕಳೆದರು. ಅವರು ಅಲ್ಲಿ ದ್ರಾಕ್ಷಿ ಗಿಡಗಳು ಗುಂಪುಗುಂಪಾಗಿ ಬೆಳೆದಿರುವುದನ್ನು ನೋಡಿ ಆ ಪ್ರದೇಶವನ್ನು ವೈನ್‌ಲ್ಯಾಂಡ್ ಎಂದು ಕರೆದರು. ನಾರ್ವೆಯನ್ನರ ಗುಂಪು ವಸಂತ ಕಾಲದಲ್ಲಿ ಗ್ರೀನ್‌ಲ್ಯಾಂಡಿನಿಂದ ಮರಳಿತು. ಮುಂದಕ್ಕೆ ತನ್ನ ತಂದೆಯ ಮರಣದ ನಂತರ ಲೇಯಿಪ್ ಎರಿಕ್‌ಸನ್ ರಾಜನಾದನು.

ಆದರೆ ಯುರೋಪ್ಯರ ಪಶ್ಚಿಮದ ಕಡೆಗಿನ ಪಯಣ ಒಂದು ಗುರಿಯನ್ನು ಸಾಧಿಸಿದ್ದು ಕೊಲಂಬಸ್‌ನ ಯತ್ನದಿಂದಲೇ. ೧೪೯೨ನೆಯ ಇಸವಿಯ ಆಗಸ್ಟ್ ೩ನೇ ತಾರೀಖು ಅವನು ತನ್ನ ನೀನಾ, ಪಿನ್ಟ ಮತ್ತು ಸಾನ್ಟ ಎಂಬ ಹೆಸರಿನ ಮೂರು, ಮೂರು ಕೂವೆಗಳುಳ್ಳ ಹಡಗುಗಳೊಂದಿಗೆ ಪಶ್ಚಿಮದ ಕಡೆಗೆ ಹೊರಟು ೧೪೯೨ನೆಯ ಇಸವಿ ಅಕ್ಟೋಬರ್ ೧೨ನೆಯ ತಾರೀಖಿನಂದು ಬಹಾಮದ ಸಣ್ಣ ದ್ವೀಪವೊಂದರಲ್ಲಿ ಇಳಿದನು. ಈ ದ್ವೀಪವನ್ನು ಎನ್ ಸಾಲ್ವಡಾರ್ ಎಂದು ಹೆಸರಿಸಿದನು. ಮತ್ತು ಈ ದ್ವೀಪವನ್ನು ಸ್ಪೇಯಿನ್ ದೇಶದ ಆಸ್ತಿಯೆಂದು ಘೋಷಿಸಿದನು. ಒಟ್ಟಾರೆ ಕೊಲಂಬಸನು ನಾಲ್ಕು ಯಾತ್ರೆಗಳನ್ನು ಮಾಡಿದನು. ಕೊನೆಯ ಮೂರರಲ್ಲಿ ಅವನು ವೆಸ್ಟ್ ಇಂಡೀಸ್‌ನ ಅನೇಕ ದ್ವೀಪಗಳನ್ನು ಕಂಡುಹಿಡಿದನು. ಇಷ್ಟೇ ಅಲ್ಲದೆ ಮಧ್ಯ ಅಮೆರಿಕಾದ ಪೂರ್ವತೀರ ಮತ್ತು ದಕ್ಷಿಣ ಅಮೆರಿಕಾದ ಉತ್ತರ ತೀರಗಳನ್ನು ಶೋಧಿಸಿದನು. ಇಲ್ಲಿ ಸ್ಪಷ್ಟವಾಗುವ ವಿಷಯವೇನೆಂದರೆ, ವೈಕಿಂಗರು ಮತ್ತು ಕೊಲಂಬಸ್‌ನು ಅನ್ವೇಷಿಸಿದ ಜಲಮಾರ್ಗಗಳು, ಇನ್ನಿತರ ಸಾಹಸಿಗಳು ಅಮೆರಿಕಾ ಭೂಖಂಡಗಳನ್ನು ಶೋಧಿಸುವ ಮತ್ತು ಅಲ್ಲಿ ಹೊಸಜಗತ್ತನ್ನು ಸ್ಥಾಪಿಸಲು ದಾರಿ ಮಾಡಿಕೊಟ್ಟವು. ಈ ಕಾರಣಗಳಿಂದ ಕೊಲಂಬಸ್‌ನೇ ನಿಜವಾಗಿ ಅಮೆರಿಕಾವನ್ನು ಕಂಡುಹಿಡಿದವನೆಂದು ನಿರ್ದಿಷ್ಟವಾಗಿ ಹೇಳಬಹುದಾಗಿದೆ.

ಈ ಪ್ರಕಾರವಾಗಿ ಕೊಲಂಬಸ್‌ನ ಶೋಧನೆ ಯುರೋಪ್ಯ ನಾಗರೀಕತೆ ಮತ್ತು ಅಮೆರಿಕಾನ್ ಇಂಡಿಯನ್ನರ ಸಮುದಾಯಗಳ ನಡುವೆ ಸಂಪರ್ಕ ಬೆಳೆಯಲು ದಾರಿ ಮಾಡಿ ಕೊಟ್ಟಿತು. ಹೊಸಜಗತ್ತಿಗೆ ವಲಸೆಗಾರರನ್ನು ಕಳುಹಿಸಿದವರಲ್ಲಿ ಸ್ಪೇಯಿನ್ ದೇಶದವರೇ ಮೊದಲಿಗರು. ಈ ವಲಸೆಗಾರರು ಈಗಿನ ವೆಸ್ಟ್ ಇಂಡೀಸ್, ಮಧ್ಯ ಮತ್ತು ದಕ್ಷಿಣ ಅಮೆರಿಕಾ, ಮೆಕ್ಸಿಕೋ ಮತ್ತು ಅಮೆರಿಕಾ ಸಂಸ್ಥಾನದ ಕೆಲವು ಭಾಗಗಳಲ್ಲಿ ನೆಲೆನಿಂತರು. ನೂರು ವರ್ಷಗಳ ನಂತರ ಫ್ರೆಂಚರು ಈಗಿನ ಕೆನಡ, ಬೃಹತ್ ಸರೋವರದ ಪ್ರದೇಶಗಳು ಮತ್ತು ಲೌಷಿಯನ್ ಪ್ರದೇಶಗಳಲ್ಲಿ ನೆಲೆಸಿದರು. ದೂರ ಪೂರ್ವದ ಕಡೆಗೆ ಆಸಕ್ತಿಯಿದ್ದ ಡಚ್ಚರು ತಮ್ಮ ಜನಸಮುದಾಯವೊಂದನ್ನು ಈಗಿನ ನ್ಯೂಯಾರ್ಕ್‌ನಲ್ಲಿ ನೆಲೆಸಲು ಕಳಿಸಿಕೊಟ್ಟರು. ಮೊದಮೊದಲು ಇಂಗ್ಲಿಷರಿಗೆ ಈ ದಿಕ್ಕಿನಲ್ಲಿ ಆಸಕ್ತಿಯಿದ್ದರೂ, ಅವರು ಕೊಲಂಬಸ್ ಅಮೆರಿಕಾವನ್ನು ಕಂಡುಹಿಡಿದ ಒಂದು ನೂರು ವರ್ಷಗಳ ನಂತರ ಹೊಸ ಜಗತ್ತಿಗೆ ಕಾಲಿಟ್ಟರು. ಇಂಗ್ಲೀಷ್ ನೆಲೆಗಳು ಸ್ಥಾಪನೆಗೊಳ್ಳುವ ಹಿನ್ನೆಲೆಯಲ್ಲಿ ಜಾನ್ ಹಾಕಿನ್ಸ್ ಮತ್ತು ಫ್ರಾನ್ಸಿಸ್ ಡ್ರೇಕ್ ಎನ್ನುವವರ ಕೊಡುಗೆ ಬಹಳ ಮುಖ್ಯವಾದುದು. ಈ ಇಬ್ಬರನ್ನು ಕಡಲು ನಾಯಿಗಳೆಂದು ಕರೆಯಲಾಗುತ್ತಿತ್ತು.

ಡ್ರೆಕ್ ೧೫೮೮ರಲ್ಲಿ ಸ್ಪೇಯಿನ್ ಯುದ್ಧ ನೌಕೆಗಳ ಸಮೂಹವೊಂದನ್ನು ನಾಶಪಡಿಸಿದನು ಮತ್ತು ಅಮೆರಿಕಾ ಖಂಡದೊಳಗೆ ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು ಪ್ರತಿಪಾದಿಸಿ ಅದನ್ನು ಎತ್ತಿಹಿಡಿದನು. ಈ ರೀತಿಯಾಗಿ ಯುರೋಪ್ಯ ನಾಗರಿಕತೆ ಅಮೆರಿಕಾ ಇಂಡಿಯನ್ನರ ಸಂಪರ್ಕಕ್ಕೆ ಬಂದಿತು.

ಆರಂಭದಲ್ಲಿ ಇಂಡಿಯನ್ನರು ಬಿಳಿಯರನ್ನು ಸ್ವಾಗತಿಸಿದರು. ಮೊದಲು ಎರಡು ಸಂಸ್ಕೃತಿಯ ಜನರ ನಡುವೆ ಸೌಹಾರ್ದಯುತವಾದ ಸಂಬಂಧಗಳು ಇದ್ದವು. ಕ್ರಮೇಣ ಈ ಶಾಂತ ಪರಿಸ್ಥಿತಿ ಕದಡತೊಡಗಿತು. ಇಂಡಿಯನ್ನರು ವಾಸಿಸುತ್ತಿದ್ದ ಪ್ರದೇಶದೊಳಕ್ಕೆ ಬಿಳಿಯರು ನುಗ್ಗತೊಡಗಿದ್ದರ ಫಲವಾಗಿ ಎರಡು ಜನಸಮುದಾಯಗಳ ನಡುವೆ ಘರ್ಷಣೆ, ಕಾದಾಟಗಳು ಮೊದಲುಗೊಂಡವು. ಇಂಡಿಯನ್ನರಂತೂ ಭೂಮಿಯ ಸಂಬಂಧವನ್ನು ಎಂದೆಂದಿಗೂ ಶಾಶ್ವತವಾಗಿ ಕತ್ತರಿಸುವಂತ ಬಿಳಿಯರ ಪರಿಕಲ್ಪನೆಯಾದ ಭೂಮಿ ಮಾರಾಟದಂತಹ ವಿಚಾರವನ್ನು ಒಪ್ಪುತ್ತಲೇ ಇರಲಿಲ್ಲ. ಇದಕ್ಕಿಂತಲೂ ಮಿಗಿಲಾಗಿ ಇಂಡಿಯನ್ನರ ಮೇಲೆ ಬಿಳಿಯರು ನಡೆಸುತ್ತಿದ್ದ ದೌರ್ಜನ್ಯ, ದಬ್ಬಾಳಿಕೆಗಳು ಅಲ್ಲಿಯವರೆಗೆ ಎರಡು ಜನಾಂಗಗಳ ಮಧ್ಯದಲ್ಲಿದ್ದ ನಂಬಿಕೆ, ವಿಶ್ವಾಸಗಳನ್ನು ಮುರಿದವು. ಬಿಳಿಯರ ದುರ್ವರ್ತನೆಯನ್ನು ತಡೆಯಲು ಇಂಡಿಯನ್ನರು ಬಿಳಿಯರನ್ನು ಹಿಂಬಾಲಿಸಿ ಅವರ ಮೇಲೆ ಆಕ್ರಮಣ ನಡೆಸಿ, ಪೆಟ್ಟಿಗೆ ಸಿಗದೆ ಪರಾರಿಯಾಗುವಂತಹ ತಂತ್ರವನ್ನು ರೂಪಿಸಿ ಬಳಸಿದರು. ಬಿಳಿಯರ ವಿಶ್ವಾಸಘಾತುಕತನಗಳು ಪ್ರತಿದಿನದ ಸಂಗತಿಗಳಾಗಿದ್ದವು. ಉದಾಹರಣೆಗೆ ಸ್ಪ್ಯಾನಿಷ್ ಆಕ್ರಮಣಕಾರ ಹೆಸಾಡೊ ಕೊರಟೇಸ್‌ನನ್ನು ನ್ಯಾಯವಂತ ದೇವನೆಂದು ಸ್ವಾಗತಿಸಿದರೂ, ಈ ಆಕ್ರಮಣಕಾರ ಮಾಂಟೆಜುಮಾ ಎನ್ನುವ ಇಂಡಿಯನ್ನರ ನಾಯಕನನ್ನು ಸೆರೆಹಿಡಿದು ಕೊಂದನಲ್ಲದೆ ಇಡೀ ಮೆಕ್ಸಿಕೋವನ್ನು ಪೂರ್ತಿಯಾಗಿ ತನ್ನ ವಶಕ್ಕೆ ತೆಗೆದು ಕೊಂಡನು. ಫ್ರಾನ್ಸಿಸ್ಕೊ ಪಿಜ್ಜಾರೋ ಕೇವಲ ಸಂಪತ್ತಿನಾಸೆಗಾಗಿ ಇಂಕಾ ಇಂಡಿಯನ್ನರನ್ನು ಸೋಲಿಸಿದ. ಸ್ವಾತಂತ್ರ್ಯವನ್ನು ಉಳಿಸುವ ಭರವಸೆಯನ್ನು ಕೊಟ್ಟ ಪಿಜ್ಜಾರೋಗೆ ಸ್ಥಳೀಯ ನಾಯಕನೊಬ್ಬ ಒಂದು ಕೋಣೆ ತುಂಬುವಷ್ಟು ಚಿನ್ನವನ್ನು ಕೊಟ್ಟನು. ಆದರೂ ತೃಪ್ತನಾಗದ ಪಿಜ್ಜಾರೋ ತಾನು ಕೊಟ್ಟ ಮಾತನ್ನು ಮುರಿದು, ಆ ನಾಯಕನನ್ನು ಕೊಂದಿದ್ದ ಲ್ಲದೆ ಆ ಎಲ್ಲ ಸಂಪತ್ತಿನ ಜೊತೆಗೆ ಆ ಪ್ರದೇಶವನ್ನು ಸ್ಪ್ಯಾನಿಷ್ ವಸಾಹತಿನೊಂದಿಗೆ ಸೇರಿಸಿಬಿಟ್ಟನು. ಅಮೆರಿಕಾ ಸಂಸ್ಥಾನದ ಕೆಲವು ಭಾಗಗಳನ್ನು ಶೋಧಿಸಿದ ಮತ್ತೊಬ್ಬ ಸ್ಪ್ಯಾನಿಷ್ ಅನ್ವೇಷಿ ಫರ್ಡಿನಾಂಡ್ ಡಿ ಸೋಟೊ ಸಹ ಇಂಡಿಯನ್ನರೊಡನೆ ಕ್ರೂರವಾಗಿ ವರ್ತಿಸಿದ. ಇವನು ಇಂಡಿಯನ್ನರನ್ನು ಸರಪಳಿಗಳಿಂದ ಬಂಧಿಸಿ ಅವರ ಸಾಮಾನು ಸರಂಜಾಮುಗಳನ್ನು ಎಳೆದೊಯ್ಯುವಂತೆ ಮತ್ತು ಶಿಬಿರಗಳಲ್ಲಿ ಕೆಲಸ ಮಾಡುವಂತೆ ನಾನಾ ಬಗೆಯ ಹಿಂಸೆಗಳನ್ನು ಕೊಟ್ಟನು. ಇಂಥ ಅನ್ಯಾಯ, ಅಮಾನವೀಯವಾದ ಬರ್ಬರ ಕೃತ್ಯಗಳು ಇಂಡಿಯನ್ನರ ಮನಸ್ಸಿನಲ್ಲಿ ಬಿಳಿಯರ ಬಗ್ಗೆ ದ್ವೇಷದ ಬೀಜಗಳನ್ನು ಬಿತ್ತಿದವು. ಇಂಡಿಯನ್ನರಲ್ಲಿ ತಮ್ಮ ನೆಲದಿಂದ ತಾವು ಬೇರ್ಪಡುತ್ತಿದ್ದೇವೆಂಬ ಭಾವನೆ ಬೆಳೆಯತೊಡಗಿತು. ಇಂಡಿಯನ್ನರು ತಮ್ಮ ಭೂಮಿ, ಪರಂಪರೆ, ಸಂಸ್ಕೃತಿ ಮತ್ತು ಸ್ವಾತಂತ್ರ್ಯಗಳನ್ನು ಬಿಳಿಯರು ದೋಚಿಕೊಳ್ಳುತ್ತಿದ್ದಾರೆಂದು ಯೋಚಿಸತೊಡಗಿದರು. ಇಂತಹ ಸ್ಥಿತಿ-ಗತಿಗಳಲ್ಲಿ ಇಂಡಿಯನ್ನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಮಾರ್ಗಗಳನ್ನು ಹುಡುಕತೊಡಗಿದರು.

ಹೊಸಜಗತ್ತಿನ ಬಹುತೇಕ ಬಿಳಿಯ ವಲಸೆಗಾರರಿಗೆ ಉತ್ತಮವಾದ ಇಂಡಿಯನ್ನರೆಂದರೆ ಸತ್ತವನು ಮಾತ್ರ ಎಂಬ ಅಭಿಪ್ರಾಯವಿತ್ತು. ಈ ನಂಬಿಕೆ ಬಿಳಿಯರು ಇಂಡಿಯನ್ನರೊಡನೆ ದಬ್ಬಾಳಿಕೆ ನಡೆಸುವುದನ್ನು ಪ್ರೋ ಪ್ರಾಯಶಃ ಇಂಡಿಯನ್ನರ ಕ್ರೂರತೆ ಸಹ ಬಿಳಿಯರ ನಡವಳಿಕೆಗೆ ಒಂದು ಕಾರಣವಿರಬಹುದು. ಬಿಳಿಯರು ಮತ್ತು ಇಂಡಿಯನ್ನರ ನಡುವೆ ನಡೆಯುತ್ತಿದ್ದ ಪ್ರತಿಯುದ್ಧದ ತೀವ್ರತೆ ಎಷ್ಟಿತ್ತೆಂದರೆ, ಒಂದು ಪಕ್ಷ ಶಸ್ತ್ರಾಸ್ತ್ರಗಳು ಮುಗಿದು ಹೋದರೇ ಪರಸ್ಪರರು ಹಲ್ಲು ಉಗುರುಗಳನ್ನಾದರೂ ಬಳಸಿ ಹೋರಾಡುವಂತಹ ವಾಗಿದ್ದವು. ಇಂಡಿಯನ್ನರು ಕಳೆದುಕೊಂಡಿದ್ದ ತಮ್ಮ ಮನೆಮಾರುಗಳಿಗಾಗಿ ಸೆಣಸಾಡು ತ್ತಿದ್ದರು. ಬಿಳಿಯರು ತಾವು ಆಕ್ರಮಿಸಿಕೊಂಡಿದ್ದ ಭೂಮಿ ಮತ್ತು ಅಲ್ಲಿ ವಾಸಿಸುತ್ತಿದ್ದ ಜನರ ಮೇಲೆ ಒಡೆತನಕ್ಕಾಗಿ ಹೋರಾಡುತ್ತಿದ್ದರು. ೧೬೭೬ರಲ್ಲಿ ಬುಡಕಟ್ಟೊಂದರ ನಾಯಕ ಫಿಲಿಫ್ ವಲಸೆಗಾರರ ಪಶ್ಚಿಮದತ್ತದ ಚಲನೆಯನ್ನು ತಡೆಯಲು ಪ್ರಯತ್ನಿಸಿ ವಿಫಲವಾಗಿ ಕೊಲ್ಲಲ್ಪಟ್ಟನು. ೧೭೬೩ರಲ್ಲಿ ಬುಡಕಟ್ಟುಗಳ ಧಾರ್ಮಿಕ ಮುಖಂಡನೊಬ್ಬ ಬಿಳಿಯರ ವಿರುದ್ಧವಾಗಿ ಇಂಡಿಯನ್ನರೆಲ್ಲರನ್ನೂ ಒಟ್ಟಿಗೆ ಸೇರಿಸುವಲ್ಲಿ ಪ್ರಯತ್ನಿಸಿ, ಯಶಸ್ಸು ಕಾಣಲಿಲ್ಲ. ನಾಯಕ ಟೇಕುಮೆಸ್ ೧೮೧೨ರಲ್ಲಿ ಎಲ್ಲ ಇಂಡಿಯನ್ನರನ್ನು ಒಟ್ಟುಗೂಡಿಸಿ ಬಿಳಿಯರ ವಿರುದ್ದ ಒಂದು ಯುದ್ಧ ಮಾಡಬೇಕೆಂಬ ಯೋಜನೆಯಲ್ಲಿದ್ದ. ಆದರೆ ದುರದೃಷ್ಟವಶಾತ್ ಅವನ ಆಲೋಚನೆ ಕೈಗೂಡಲಿಲ್ಲ.

ಬಿಳಿಯರು ಆರಂಭದಲ್ಲಿ ಬಯಲು ಪ್ರದೇಶಗಳ ಬಗ್ಗೆ ಅಂತಹ ಆಸಕ್ತಿಯನ್ನೇನೂ ಹೊಂದಿರಲಿಲ್ಲ. ೧೮೬೦ರ ನಂತರ ಬಯಲು ಭೂಮಿಗಳನ್ನು ಆಕ್ರಮಿಸಿಕೊಳ್ಳುವ ಉತ್ಸುಕತೆ ಬಿಳಿಯರಲ್ಲಿ ಕಾಣಿಸಿಕೊಂಡಿತು. ಅವರು ಐಯೋವ, ಆರ್ಕಾನಸ್, ಪಶ್ಚಿಮ ಟೆಕ್ಸಾಸ್ ಮತ್ತು ದೊಡ್ಡ ಬಯಲು ಭಾಗಗಳೊಳಕ್ಕೆ ಪ್ರವೇಶಿಸಿದರು. ಕುದುರೆ ಸಾರೋಟು ಗಳ ರಸ್ತೆ ಮತ್ತು ರೈಲ್ವೆ ಹಳಿಗಳು ನಿರ್ಮಾಣವಾದವು. ಕಾಡೆಮ್ಮೆಯ ಮಾಂಸ ಇಂಡಿಯನ್ನರ ಪ್ರಮುಖ ಆಹಾರವಾಗಿತ್ತು. ಎಣಿಸಲು ಸಾಧ್ಯವಾಗದಷ್ಟು ಸಂಖ್ಯೆಯ ಕಾಡೆಮ್ಮೆಗಳನ್ನು ಬಿಳಿಯರು ಕೊಂದು ಬಿಸಾಕಿದರು. ಇದರಿಂದ ಇಂಡಿಯನ್ನರಿಗೆ ಆಹಾರ ಕೊರತೆ ಎದುರಾಯಿತು. ಇಂಡಿಯನ್ನರು ಆಹಾರ ಮತ್ತು ವಾಸಿಸಲು ಸ್ಥಳಗಳನ್ನು ಕಳೆದುಕೊಂಡರು. ಈ ಪ್ರಕಾರವಾಗಿ ಅಮೆರಿಕಾದ ಮಣ್ಣಿನೊಳಕ್ಕೆ ಕಾಲಿಟ್ಟ ಬಿಳಿಯರಿಂದ ಸ್ಥಳೀಯರ ಆಹಾರ, ವಸತಿ ಮತ್ತು ಭೂಮಿಗಳು ದೋಚಲ್ಪಟ್ಟವು. ಇಂಡಿಯನ್ನರ ಬಳಿ ಉಳಿದಿದ್ದು ಕೇವಲ ಚೂರು-ಪಾರು ಭೂಮಿ ಮತ್ತು ಆಹಾರ. ಆದರೆ ಅಮೆರಿಕಾ ಇಂಡಿಯನ್‌ನ ಸಾವಿಗೂ ಹೆದರದ ದೃಢಸಂಕಲ್ಪ ಮಾತ್ರ ಕದಲಲಿಲ್ಲ. ಎಂತಹ ಹಿಂಸೆಯನ್ನಾದರೂ ಸಹಿಸಬಲ್ಲವನಾಗಿದ್ದ ಇಂಡಿಯನ್, ನರಳಿದ್ದು ಮತ್ತು ಅವನು ಕೊನೆಯುಸಿರು ಬಿಡುವ ಸಮಯದಲ್ಲೂ ಇಂಡಿಯನ್ನರ ಚರಮಗೀತೆಯಂತಾಗಿದ್ದ ಸ್ವಾತಂತ್ರ್ಯಗೀತೆಯನ್ನು ಹಾಡದೆ ಪ್ರಾಣಬಿಟ್ಟ ಪ್ರಸಂಗಗಳು ಬಹು ವಿರಳ. ಮೇಲಾಗಿ ಇಂಡಿಯನ್ನರು ಗೆರಿಲ್ಲಾ ಯುದ್ಧತಂತ್ರಗಳನ್ನು ಅಳವಡಿಸಿಕೊಂಡರು. ಇಂಡಿಯನ್ನರು ತಮ್ಮ ಶತ್ರುಗಳು ಕೈಗೆ ಸಿಕ್ಕರೆ ಅವರನ್ನು ಚಿತ್ರಹಿಂಸೆಗೆ ಗುರಿಪಡಿಸುತ್ತಿದ್ದರು. ಇಲ್ಲವೆ ಕೊಲ್ಲುತ್ತಿದ್ದರು. ಅವಕಾಶ ಸಿಕ್ಕಾಗಲೆಲ್ಲಾ ಇಂಡಿಯನ್ ತನ್ನ ಶತ್ರುಗಳ ತಲೆಬುರುಡೆಯನ್ನು ವಶಪಡಿಸಿಕೊಳ್ಳುತ್ತಿದ್ದ. ಯುದ್ಧವೆಂದರೆ ಇಂಡಿಯನ್‌ನಿಗೆ ಶತ್ರುಗಳನ್ನು ನಿರ್ಮೂಲನ ಮಾಡುವುದಾಗಿತ್ತು. ಈ ಎಲ್ಲಾ ಕಾರಣಗಳಿಂದ ಬಿಳಿಯ ಸ್ಥಳೀಯರಿಂದ ಉದ್ಭವಿಸುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಮುಂದಾದ. ಈ ಪ್ರಯತ್ನದ ಫಲವಾಗಿ ೧೮೨೪ರಲ್ಲಿ ಹೊಸ ಇಲಾಖೆಯೊಂದರ ಅಡಿಯಲ್ಲಿ ಬ್ಯೂರೊ ಇಂಡಿಯನ್ ಆಪೇರ್ಸ್ ಸ್ಥಾಪನೆಯಾಯಿತು.

ಪ್ರೆಸಿಡೆಂಟ್ ಜಾಕ್‌ಸನ್ ೧೮೩೦ರ ನಂತರ ಮಿಸ್ಸಿಸಿಪಿ ನದಿಯ ಪೂರ್ವ ರಾಜ್ಯಗಳಲ್ಲಿ ಇಂಡಿಯನ್ನರನ್ನು ಮತ್ತಷ್ಟು ದೂರ ಪಶ್ಚಿಮದತ್ತ ತಳ್ಳಿದ. ಚೆರೂಕಿಸ್, ಕ್ರಿಕ್ಸ್, ಸೆಮಿನೊಲ್ಸ್, ಚೊಕ್ಟವಸ್ ಮತ್ತು ಬೆಕಾಸಾಸ್ ಬಣಗಳನ್ನು ‘ಇಂಡಿಯನ್ ಟೆಂಟೇರಿ’ ಎಂದು ಗೌರವದಿಂದ ಕರೆಯಲ್ಪಡುವ ಪ್ರದೇಶಕ್ಕೆ ಕಳುಹಿಸಲಾಯಿತು, ಇಲ್ಲವೇ ಸ್ಥಳಾಂತರಗೊಳಿಸಲಾಯಿತು. ಈ ಪ್ರದೇಶ ಈಗಿನ ಓಕ್ಲಾಹಾಮ ರಾಜ್ಯದಲ್ಲಿದೆ. ಉತ್ತರದಲ್ಲಿ ಬಹುದೂರದಲ್ಲಿದ್ದ ಬೇರೆ ಬುಡಕಟ್ಟುಗಳನ್ನು ರಾಕಿ ಪರ್ವತದ ಪೂರ್ವ ಪ್ರದೇಶಗಳಿಗೆ ಕಳುಹಿಸಲಾಯಿತು. ಇಲ್ಲಿ ಮೊದಲಿನಿಂದಲೂ ಕೆಲವು ಇಂಡಿಯನ್ ಬುಡಕಟ್ಟುಗಳು ವಾಸಿಸುತ್ತಿದ್ದವು. ಇಂಡಿಯನ್ನರ ಪ್ರಿಯ ಭಕ್ಷ್ಯವಾಗಿದ್ದ ಕಾಡೆಮ್ಮೆಗಳು ಹೇರಳವಾಗಿದ್ದವಲ್ಲದೆ, ಈ ಪ್ರದೇಶದಿಂದ ಮತ್ತೆ ಮತ್ತೆ ಇಂಡಿಯನ್ನರನ್ನು ಸ್ಥಳಾಂತರಗೊಳಿಸುವುದಿಲ್ಲವೆಂಬ ಭರವಸೆ ಸಹ ಬಿಳಿಯರಿಂದ ಸಿಕ್ಕಿತು. ಆದುದರಿಂದ ಈ ವಲಸೆಗೆ ಇಂಡಿಯನ್ನರ ಸಮ್ಮತಿ ಸಹ ಸಿಕ್ಕಿತು. ಇಂಥ ಬೆಳವಣಿಗೆ ತನ್ನಷ್ಟಕ್ಕೆ ತಾನೇ ಬಿಳಿಯರನ್ನು ಸಂರಕ್ಷಣಾ ಶಿಬಿರ ಅರ್ಥಾತ್ ಮೀಸಲು ಶಿಬಿರ ಸ್ಥಾಪನೆಯಂತಹ ಯೋಚನೆಗಳತ್ತ ಎಳೆಯಿತು. ಹೀಗೆ ಬಿಳಿಯರು ಒಂದು ಕಡೆ ಸ್ಥಳೀಯ ಬುಡಕಟ್ಟುಗಳಿಗೆ ಭೂ ಪ್ರದೇಶವನ್ನು ಹಂಚಿಕೊಟ್ಟು, ಅವರ ಚಲನೆಯನ್ನು ನಿಯಂತ್ರಿಸುವ ಯಜಮಾನರಾಗು ತ್ತಿದ್ದ, ಮತ್ತೊಂದು ಕಡೆ ಇಂಡಿಯನ್ನರು ತಮ್ಮ ನೆಲದಲ್ಲೇ ಅನಾಥರಾಗಿ, ಬಲಾತ್ಕಾರವಾಗಿ ಸಂರಕ್ಷಣಾ ಶಿಬಿರಗಳೊಳಕ್ಕೆ ತಳ್ಳಲ್ಪಟ್ಟರು. ಈ ರೀತಿಯಾಗಿ ಅಮೆರಿಕಾ ಇಂಡಿಯನ್ನರು ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಕಡೆಗಣಿಸಲ್ಪಟ್ಟರು. ಬ್ಯೂರೊ ಆಫ್ ಇಂಡಿಯನ್ ಅಫೆರ್ಸ್‌ಇಂಡಿಯನ್ನರ ಯೋಗಕ್ಷೇಮ ವನ್ನು ಅವರ ಮೇಲೆ ನಿರಂತರವಾಗಿ ನಿಗಾ ಇಡುವುದರ ಮೂಲಕ ವಿಚಾರಿಸುತ್ತಿತ್ತು.

ಇಂಡಿಯನ್ನರು ಸಂರಕ್ಷಣಾ ಶಿಬಿರದೊಳಗೆಯೇ ಇರಲು ಇಷ್ಟಪಡುತ್ತಿರಲಿಲ್ಲ. ಇದರಿಂದಾಗಿ ಘರ್ಷಣೆಗಳಾಗುತ್ತಿದ್ದವು. ಸ್ಥಳೀಯರಲ್ಲಿ ಹಲವರು ತಪ್ಪಿಸಿಕೊಂಡು ಹೋಗಿ ಬಿಳಿಯರು ವಾಸಿಸುತ್ತಿದ್ದ ನೆಲೆಗಳ ಮೇಲೆ ದಾಳಿ ಮಾಡಿ ಅವರ ಕುದುರೆ, ದನಕರುಗಳನ್ನು ಕದ್ದು ಅವುಗಳನ್ನು ಕೊಲ್ಲುತ್ತಿದ್ದರು.

ಇಂತಹ ಘರ್ಷಣೆಗಳು ಒಂದು ದಂಗೆಯ ರೂಪತಾಳಿದ್ದು ಸಿಯೋಕ್ ಇಂಡಿಯನ್ನರ ಪ್ರಕರಣದಲ್ಲಿ. ಇದೊಂದು ಪ್ರಮುಖ ಘಟನೆಯಾಗಿದೆ. ಟಕೋಟದಲ್ಲಿದ್ದ ಸಿಯೋಕ್ ಇಂಡಿಯನ್ನರು ಬಿಳಿಯರು ಎಸಗಿದ ವಿಶ್ವಾಸ ಘಾತುಕತನವನ್ನು ಸಹಿಸದೆ ಯುದ್ಧ ಹೂಡಿದರು. ಸಿಯೋಕ್ ಇಂಡಿಯನ್ನರನ್ನು ಒತ್ತಾಯದಿಂದ ಕಪ್ಪು ಪರ್ವತಗಳ ನಾಡಿನಲ್ಲಿ ನೆಲೆಯಿರಿಸಿ, ಅವರ ಆಂತರಿಕ ವಿಷಯಗಳಲ್ಲಿ ತಾವು ಯಾವುದೇ ಕಾರಣದಿಂದ ಮಧ್ಯ ಪ್ರವೇಶಿಸುವುದಿಲ್ಲವೆಂಬ ಭರವಸೆಯನ್ನು ಬಿಳಿಯರು ಕೊಟ್ಟಿದ್ದರು. ಆದರೆ ಬಿಳಿಯರ ದೃಷ್ಟಿಯಲ್ಲಿ ಆಶ್ವಾಸನೆ, ಭರವಸೆಗಳ ಅರ್ಥವೆಂದರೆ, ಅವುಗಳನ್ನು ಮುರಿಯುವುದು ಮತ್ತು ಅತಿಕ್ರಮಿಸುವುದಾಗಿತ್ತು. ಬೇಟೆ ಆ ಪ್ರದೇಶದಲ್ಲಿ ಇಂಡಿಯನ್ನರ ಅಚ್ಚುಮೆಚ್ಚಿನ ಕ್ರೀಡೆಯಾಗಿತ್ತು. ಈ ವಿಷಯದಲ್ಲಿ ಮಧ್ಯೆ ಪ್ರವೇಶಿಸಿದ ಬಿಳಿಯರ ವಿರುದ್ಧ ಒಂದು ಪ್ರತಿಭಟನೆಯೆಂಬಂತೆ ಇಂಡಿಯನ್ನರು ಯುದ್ಧಕ್ಕೆ ನಿಂತರು. ಈ ಯುದ್ಧದಲ್ಲಿ ಬಿಳಿಯರ ಪೈಕಿ ಜನರಲ್ ಕಸ್ಟರ್ ಸೇರಿದಂತೆ ೨೬೦ ಸೈನಿಕರು ಸತ್ತರು. ಆದರೂ ಇಂಡಿಯನ್ನರು ತಮ್ಮ ಮನೆ ಮಠಗಳಿಂದಲೇ ಕಿತ್ತೆಸೆಯಲ್ಪಟ್ಟರು.

ಒಂದು ಕಾಲದಲ್ಲಿ ಉತ್ತರ ಅಮೆರಿಕಾ ೧,೨೫೦,೦೦೦ ಇಂಡಿಯನ್ನರನ್ನು ತನ್ನ ಒಡಲಲ್ಲಿರಿಸಿಕೊಂಡಿತೆಂದು ನಂಬಲರ್ಹವಾದ ಅಂಕಿ ಅಂಶಗಳು ಹೇಳುತ್ತವೆ. ೧೯೧೭ನೆಯ ಇಸವಿಯ ಹೊತ್ತಿಗೆ ಈ ಸಂಖ್ಯೆ ೩,೮೦,೦೦೦ಕ್ಕೆ ಇಳಿಯಿತು. ಈ ಅವನತಿಗೆ ಸಿತಾಳೆಸಿಡುಬು, ಇನ್ನಿತರ ಸಾಂಕ್ರಾಮಿಕ ರೋಗಗಳು, ಹಸಿವು, ಹೊಂದಿಕೊಳ್ಳಲಾರದ ಪರಿಸರ, ಸಂತಾನೋತ್ಪತ್ತಿಯಲ್ಲಿ ಇಳಿತ, ಕೊನೆಯದಾದರೂ ನಿರ್ಲಕ್ಷಿಸಲಾಗದ ಯುದ್ಧದ ಪರಿಣಾಮ ಕಾರಣವಾಗಿವೆ. ಕ್ಯಾಲಿಫೋರ್ನಿಯಾದಲ್ಲಿ ಒಮ್ಮೆ ೨೫೦,೦೦೦ದಷ್ಟಿದ್ದ ಇಂಡಿಯನ್ನರ ಸಂಖ್ಯೆ ಬಿಳಿಯ ಗಣಿಮಾಲೀಕರು ಮತ್ತು ಆರಂಭದ ವಲಸೆಗಾರರು ಎಸಗಿದ ಕ್ರೌರ್ಯ ಮತ್ತು ಸಾರಾಸಗಟು ಸಾಮೂಹಿಕ ಹತ್ಯೆಗಳಿಂದ ಕೇವಲ ೨೦,೦೦೦ ಇಳಿಯಿತು. ಇಂಡಿಯನ್ ಸಮುದಾಯಗಳ ಮೇಲೆ ಯುರೋಪ್ಯ ನಾಗರಿಕತೆಯ ಪ್ರಭಾವ ಅವುಗಳನ್ನು ಧ್ವಂಸ ಮಾಡುವುದಂತಹುದಾಗಿತ್ತು. ಅಮೆರಿಕಾನ್ ಇಂಡಿಯನ್ನರಲ್ಲಿ ಪ್ಲೇಗ್ ರೋಗವನ್ನು ಪ್ರತಿರೋಧಿಸುವ ಶಕ್ತಿಯಿರಲಿಲ್ಲ. ಆದುದರಿಂದ ಪ್ಲೇಗಿಗೆ ಮತ್ತು ಬಿಳಿಯರು ಪರಿಚಯಿಸಿದ ಮದ್ಯಕ್ಕೆ ಎಣಿಕೆ ಸಿಗದಷ್ಟು ಸಂಖ್ಯೆಯ ಇಂಡಿಯನ್ನರು ಬಲಿಯಾದರು.

ಪ್ರಾಯಶ್ಚಿತ್ತತೆಯ ಫಲವೆನ್ನುವಂತೆ ಸ್ಥಾಪನೆಗೊಂಡ ಸಂರಕ್ಷಣಾ ಶಿಬಿರಗಳು ವಾಸ್ತವವಾಗಿ ಬಿಳಿಯರಲ್ಲಿ ಆತ್ಮಾವಲೋಕನದ ಅಗತ್ಯತೆಯನ್ನು ಮನಗಾಣಿಸಿದವು. ಅವನು ಕಟ್ಟಿದ್ದ ಬೇಲಿಯನ್ನು ಅವನೇ ಕಿತ್ತುಹಾಕಲಾರಂಭಿಸಿದ. ಒಂದು ಒಡಂಬಡಿಕೆಯು ಸಂರಕ್ಷಣಾ ಶಿಬಿರವನ್ನು ಗುತ್ತಿಗೆಯ ಭೂಮಿಯೆಂದು ಪ್ರತ್ಯೇಕಿಸಿ ಇರಿಸುತ್ತದೆ. ಅದನ್ನು ಸ್ಥಳೀಯರು ಉಪಯೋಗಿಸಬಹುದು ಮತ್ತು ಇದಕ್ಕೆ ಪ್ರತಿಯಾಗಿ ಸ್ಥಳೀಯರು ಬಿಳಿಯರ ನೆಲೆಗಳಿಗಾಗಿ ಬೇರೆ ಭೂಮಿಗಳನ್ನು ಬಿಟ್ಟಕೊಡಬೇಕೆಂದು ಆದೇಶಿಸುತ್ತದೆ. ಈ ಭೂಮಿಗಳನ್ನು ಬಿಳಿಯರು ತಾವಾಗಿಯೇ ಬಿಟ್ಟುಕೊಡುವವರೆಗೆ ಸ್ಥಳೀಯರು ಅವುಗಳನ್ನು ಆಕ್ರಮಿಸಿ ಕೊಳ್ಳುವಂತಿಲ್ಲ. ಆದರೆ ಬಿಳಿಯರ ಆಲೋಚನೆಯಾದ ಸಂರಕ್ಷಣಾ ಭೂಮಿಯ ಕ್ರಮ ಋಣವನ್ನು ತೀರಿಸುವಂತದ್ದಾಗಿದೆ. ಪ್ರಾರಂಭದಲ್ಲಿ ಆಹಾರ, ಉಪಕರಣಗಳು, ಬೀಜ, ಬಟ್ಟೆಗಳನ್ನು ಶಿಬಿರಗಳಿಗೆ ಕೊಡಲಾಗುತ್ತಿತ್ತು. ಆದರೆ ಈಗ ಶಿಬಿರಗಳಿಗೆ ರಸ್ತೆ, ರೈಲ್ವೆ, ಶಾಲೆ, ವೈದ್ಯರು, ಆಸ್ಪತ್ರೆ, ತೋಟಗಾರಿಕೆ ತಜ್ಞರ ಸೇವೆ ಮತ್ತು ಸಮಾಜಸೇವಕ ಸೇವೆ ಗಳನ್ನು ಒದಗಿಸಿ ಸ್ಥಳೀಯರನ್ನು ನಾಗರಿಕರನ್ನಾಗಿಸಲು ಪ್ರಯತ್ನಗಳು ಸಾಗುತ್ತಿವೆ. ಒಬ್ಬೊಬ್ಬ ಪ್ರತಿನಿಧಿಗಳ ಮೇಲ್ವಿಚಾರಣೆಯಲ್ಲಿರುವ ಆಡಳಿತ ಘಟಕಗಳು ತಮ್ಮ ಸಿಬ್ಬಂದಿಗಳೊಂದಿಗೆ ಸ್ಥಳೀಯರು ವಿವಿಧ ಉದ್ಯೋಗಗಳಿಗೆ ಅಗತ್ಯವಿರುವ ಅರ್ಹತೆಗಳನ್ನು ಗಳಿಸಿಕೊಳ್ಳಲು ನೆರವಾಗುತ್ತಿವೆ. ಸ್ಥಳೀಯರು ಎಷ್ಟು ಬೇಗ ಅರ್ಹತೆಗಳನ್ನು ಗಳಿಸಿ ಕೊಳ್ಳುತ್ತಾರೋ ಅಷ್ಟೇ ಬೇಗ ಅವರಿಗೆ ಉದ್ಯೋಗಗಳನ್ನು ಕೊಡಲಾಗುತ್ತಿದೆ. ಶಿಬಿರ ಗಳಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವರ ವಿದ್ಯೆಯನ್ನು ಮುಂದುವರೆಸಲು ಸಾಲದ ರೂಪದಲ್ಲಿ ಹಣವನ್ನು ಸಹ ಕೊಡಲಾಗುತ್ತಿದೆ. ಈ ಕ್ರಮ ಬಹಳಮಟ್ಟಿಗೆ ಯಶಸ್ವಿಯಾಗಿದೆ. ಮೊದಮೊದಲು ಇಂಡಿಯನ್ನರು ಶಾಲೆಗಳನ್ನು ಒಪ್ಪುತ್ತಿರಲಿಲ್ಲ. ಆದರೆ ಅಂಕಿ ಅಂಶಗಳು ೧೯೫೩ನೆಯ ಇಸವಿಯ ವೇಳೆಗೆ ೨೩,೦೦೦ ಜನ ಇಂಡಿಯನ್ನರು ಶಾಲೆಗಳನ್ನು ಪ್ರವೇಶಿ ಸಿದ್ದರು. ಸಂರಕ್ಷಣಾ ಶಿಬಿರಗಳ ಪ್ರಕಾರ ೧೯೫೦ನೆಯ ಇಸವಿಯ ವೇಳೆಗೆ ೪೦,೦೦೦ ಸ್ಥಳೀಯರು ವಾಸಿಸುತ್ತಿದ್ದರು. ಇತ್ತೀಚಿನ ಕಾನೂನು ಸ್ಥಳೀಯರು ತಮ್ಮ ಭೂಮಿಗಳನ್ನು ಸ್ಥಳೀಯರಿಗೆ ಮಾತ್ರ ಮಾರುವಂತಹ ಹಕ್ಕನ್ನು ದೊರಕಿಸಿಕೊಟ್ಟಿದೆ. ಆದರೆ ಬಿಳಿಯರಿಗೆ ಮಾರುವಂತಿಲ್ಲ. ಹೀಗೆ ಕಾಯಿದೆ ಸ್ಥಳೀಯರಿಗೊಂದು ಶಾಶ್ವತವಾದ ನೆಲೆಯ ಭರವಸೆಯನ್ನು ದೊರಕಿಸಿಕೊಟ್ಟಿದೆ.

ಆಸಕ್ತಿದಾಯಕವಾದ ವಿಷಯವೆಂದರೆ ಸಂರಕ್ಷಣಾ ಶಿಬಿರಗಳ ಭೂಪ್ರದೇಶಗಳಲ್ಲಿ ಎಣ್ಣೆ ಬಾವಿಗಳು ಪತ್ತೆಯಾಗಿದ್ದು ಸ್ಥಳೀಯರನ್ನು ಸಿರಿವಂತರನ್ನಾಗಿಸಿವೆ. ಸರ್ಕಾರ ಬಿಳಿಯರು ಮತ್ತೆ ಒಳನುಗ್ಗದಂತೆ ಸ್ಥಳೀಯರನ್ನು ರಕ್ಷಿಸುತ್ತದೆ. ಮತ್ತು ಶಾಲೆಗಳನ್ನು ತೆರೆದು ಸ್ಥಳೀಯರನ್ನು ವಿದ್ಯಾವಂತರನ್ನಾಗಿ ಮಾಡುತ್ತದೆ. ೧೯೨೪ನೆಯ ಕಾಂಗ್ರೆಸ್ ನಿರ್ಣಯವೊಂದನ್ನು ಸ್ವೀಕರಿಸಿ ಇಂಡಿಯನ್ನರು ಹುಟ್ಟಿನಿಂದಲೇ ಅಮೆರಿಕಾ ಪ್ರಜೆಗಳೆಂದು ಘೋಷಿಸಿದೆ. ಈ ಇಂಡಿಯನ್ನರು ಅಮೆರಿಕಾ ಪೌರತ್ವರಾಗಿದ್ದು ಮತದಾನ ಮಾಡಲು ಅರ್ಹರಾಗಿದ್ದಾರೆ. ಸಾಮಾಜಿಕ ಭದ್ರತಾ ನಿಧಿಯ ರಕ್ಷಣೆಯನ್ನು ಪಡೆಯುತ್ತಿದ್ದಾರೆ ಮತ್ತು ಪೊಲೀಸ್, ಸೈನ್ಯ ಇನ್ನಿತರ ಶಸ್ತ್ರಾಸ್ತ್ರ ಪಡೆಗಳಿಗೂ ನೇಮಕಗೊಳ್ಳುತ್ತಿದ್ದಾರೆ.

ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಇತ್ತೀಚಿನ ‘‘ಇಂಡಿಯನ್ ರಿ ಆರ್ಗನೈಜೇಷನ್ ಆ್ಯಕ್ಟ್’’ನ ಪ್ರಕಾರ ಯಾವುದೇ ಬುಡಕಟ್ಟು ಅಥವಾ ಯಾವುದೇ ಬುಡಕಟ್ಟಿನ ಒಂದು ಭಾಗವು ಬಿಳಿಯರ ಹಳ್ಳಿಗಳಿಗೆ ಪ್ರವೇಶವನ್ನು ಪಡೆಯಬಹುದು. ಹಾಗೆಯೇ ಅಲ್ಲಿನ ಸ್ಥಳೀಯ ಆಡಳಿತ ಹಾಗೂ ಅಭಿವೃದ್ದಿ ಕೆಲಸಗಳನ್ನು ನಿರ್ದೇಶಿಸಿರುವ ಸ್ಥಳೀಯ ಸಂಸ್ಥೆಗಳಿಗೆ ಪದಾಧಿಕಾರಿಗಳನ್ನು ಚುನಾಯಿಸುವ ಅರ್ಹತೆಯನ್ನು ಅವರು ಹೊಂದಿದ್ದಾರೆ. ಸಣ್ಣ ಪುಟ್ಟ ಅಪರಾಧಗಳನ್ನು ವಿಚಾರಿಸಲು ಸಂರಕ್ಷಣಾ ಶಿಬಿರಗಳು ‘ಇಂಡಿಯನ್’ ರೀತಿಯ ನ್ಯಾಯಾಲಯಗಳನ್ನು ಹೊಂದಿವೆ. ಫೆಡರಲ್ ನ್ಯಾಯಾಲಯಗಳು ದೊಡ್ಡ ದೊಡ್ಡ ಅಪರಾಧಗಳನ್ನು ವಿಚಾರಣೆಗೆ ತೆಗೆದುಕೊಳ್ಳುತ್ತ ನಂತರದ ದಿನಗಳಲ್ಲಿ ಎಲ್ಲಾ ಬುಡಕಟ್ಟುಗಳನ್ನು ಒಂದೆಡೆ ಸೇರಿಸಿ ಅವುಗಳ ಸಮಸ್ಯೆಗಳನ್ನು ಚರ್ಚಿಸಲು ಅಲ್ಲಿನ ಇಂಡಿಯನ್ನರು ಒಂದು ಕಾಂಗ್ರೆಸ್ಸನ್ನು ಸ್ಥಾಪಿಸಿದರು. ಈ ಕಾಂಗ್ರೆಸ್ ಪ್ರತಿ ವರ್ಷವೂ ಸಭೆ ಸೇರಿ ನ್ಯಾಯಾಲಯದ ಕಾನೂನುಗಳಿಗೆ ತಿದ್ದುಪಡಿಗಳನ್ನು ಸೂಚಿಸುತ್ತಿತ್ತು ಹಾಗೂ ಅದರೊಂದಿಗೆ ಕೆಲವು ಸಲಹೆಗಳನ್ನೂ ನೀಡುತ್ತಿತ್ತು. ಮಿಷನರಿಗಳು ಸಂರಕ್ಷಣಾ ಶಿಬಿರ ಗಳಲ್ಲಿ ಬಹಳ ಪ್ರಭಾವಶಾಲಿಗಳಾಗಿದ್ದರು. ಈ ಕಾರಣಕ್ಕಾಗಿಯೇ ಅವರು ಸ್ಥಳೀಯರನ್ನು ಮತಾಂತರಗೊಳಿಸಿದರು. ಇಷ್ಟೆಲ್ಲಾ ಆದರೂ, ಆಗೊಮ್ಮೆ ಈಗೊಮ್ಮೆ ಇಂಡಿಯನ್ನರು ತಮ್ಮ ಹಳೆಯ ಪದ್ಧತಿ ಪರಂಪರೆಗಳನ್ನು ಅನುಸರಿಸುತ್ತಿದ್ದರು. ಪ್ರಾಚೀನ ನೃತ್ಯಗಳನ್ನು ಹಾಗೂ ಹಾಡುಗಳನ್ನು ಅವರು ಜ್ಞಾಪಿಸಿಕೊಳ್ಳುವ ಮೂಲಕ ಒಂದು ರೀತಿಯ ಸಂತೃಪ್ತಿ ಯನ್ನು ಹೊಂದಿದ್ದರು.

ಕೆನಡಾಕ್ಕೆ ಸಂಬಂಧಿಸಿದಂತೆ ಪರಿಸ್ಥಿತಿಗಳು ಸ್ವಲ್ಪ ಭಿನ್ನವಾಗಿಯೇ ಇವೆ. ಅಲ್ಲಿ ಸಂರಕ್ಷಣೆಯ ಸಂದರ್ಭದಲ್ಲಿ ಇಂಡಿಯನ್ನರು ಮತದಾನ ಮಾಡುವಂತೆ ಇರಲಿಲ್ಲ. ನಾಗರಿಕತೆ ಮತ್ತು ವಲಸೆ ಇಲಾಖೆಯು ಇಂತಹ ವಿಚಾರಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿತ್ತು. ಯಾವುದೇ ಇಂಡಿಯನ್ನರಿಗೆ ಪೌರತ್ವವನ್ನು ಕೊಡಬೇಕೆಂದು ಈ ಇಲಾಖೆ ಶಿಫಾರಸ್ಸು ಮಾಡಿದರೆ ಅಂಥವರಿಗೆ ಕೆನಡಾದ ಉಳಿದ ಪೌರರಿಗೆ ಇರುವಂತೆ ಪೌರತ್ವವನ್ನು ನೀಡಲಾಗುತ್ತಿತ್ತು.

ಅನೇಕ ಇಂಡಿಯನ್ನರಿಗೆ ಸ್ವಂತ ಕಾಲಿನ ಮೇಲೆ ನಿಲ್ಲಲು ಇಂಡಿಯನ್ ಕಲ್ಯಾಣ ವಿಭಾಗವು ಹಣಕಾಸಿನ ಸೌಲಭ್ಯಗಳನ್ನು ನೀಡುತ್ತಿತ್ತು. ಈ ಸ್ಥಳೀಯ ಇಂಡಿಯನ್ನರಲ್ಲಿ ಹೆಚ್ಚಿನವರು ಬೇಟೆಗಾರರಾಗಿದ್ದರು ಮತ್ತು ಬೇಟೆಯಿಂದ ಬಂದಂತಹ ಉತ್ಪನ್ನಗಳನ್ನು ಮಾರುತ್ತಿದ್ದರು. ಇವರಿಗೆ ಸರ್ಕಾರವು ಬೇಟೆಗೆ ಬೇಕಾದಂತಹ ಆಯುಧಗಳನ್ನು ನೀಡು ತ್ತಿತ್ತು. ಕೆಲವೊಮ್ಮೆ ವಿಶೇಷ ತಳಿಯ ಕಾಡುಪ್ರಾಣಿಗಳನ್ನು ಪಶುಪಾಲನೆಯ ಹಿನ್ನೆಲೆಯಲ್ಲಿ ಸರ್ಕಾರವು ನೀಡುತ್ತಿತ್ತು. ಕೃಷಿ, ಪಶುಸಂಗೋಪನೆ, ಮೀನುಗಾರಿಕೆ, ಮರದ ವ್ಯಾಪಾರಗಳಂತ ಕೆಲಸಗಳನ್ನು ಕೈಗೊಳ್ಳಲು ಸ್ಥಳೀಯರಿಗೆ ಸಹಾಯವನ್ನು ನೀಡುತ್ತಿತ್ತು. ಈ ರೀತಿಯ ಸಹಾಯವನ್ನು ಮಾಡುವುದರ ಜೊತೆಗೆ ಹಾಗೂ ಅಲ್ಲಿನ ಸ್ಥಳೀಯ ಇಂಡಿಯನ್ನರ ಕೊಡುಗೆಯನ್ನು ಪರಿಗಣಿಸುವುದರೊಂದಿಗೆ ‘ದೊಡ್ಡಣ್ಣ’ನ ಪಾತ್ರವನ್ನು ಅಲ್ಲಿನ ಬಿಳಿಯರು ವಹಿಸಿರುವುದು ಕಂಡುಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸ್ಥಳೀಯ ಇಂಡಿಯನ್ನರು ತಮ್ಮ ಪ್ರತಿಭೆಯನ್ನು ಅನೇಕ ಸಾರಿ ಪ್ರದರ್ಶಿಸಿರುವುದುಂಟು. ಉದಾಹರಣೆಗೆ ‘ಚೆರೊಕಿ ಆಲ್ಫಬೆಟ್’ ಅನ್ನು ಕಂಡುಹಿಡಿದ ಸೆಕ್ವೋಹ ಇದರಲ್ಲಿ ಪ್ರಮುಖನು. ಈ ಹಿನ್ನೆಲೆಯಲ್ಲಿ ಹೊರಬಂದ ಪತ್ರಿಕೆಯನ್ನು ಸರ್ಕಾರವು ಬೆಳ್ಳಿ ಪದಕವನ್ನು ನೀಡಿ ಗೌರವಿಸಿದ್ದನ್ನು ಗಮನಿಸಬಹುದು.

ಒಟ್ಟಿನಲ್ಲಿ ಹೇಳುವುದಾದರೆ ಸ್ಥಳೀಯ ಇಂಡಿಯನ್ನರು ಒಂದಾನೊಂದು ಕಾಲದಲ್ಲಿ ಪ್ರಕೃತಿಯ ಭಾಗವಾಗಿದ್ದು ಇತ್ತೀಚಿನ ಯುರೋಪಿಯನ್ ನಾಗರಿಕತೆಯ ಪ್ರಭಾವದಿಂದಾಗಿ ಗುಡಿಸಲಿನಿಂದ ಅಚ್ಚುಕಟ್ಟಾಗಿ ಉಡುಪನ್ನು ಧರಿಸಿದ ‘ಇಂಡಿಯನ್ ಸರ್ವಿಸ್’ನ ಪದಾಧಿಕಾರಿಯಾಗುವವರೆಗೆ ತನ್ನ ಸ್ಥಾನವನ್ನು ಬದಲಿಸಿಕೊಂಡಿದ್ದನ್ನು ನಾವು ಕಾಣಬಹುದು. ಪ್ರಸ್ತುತ ದಿನಗಳಲ್ಲಿ ಅನೇಕ ಅಮೆರಿಕಾನ್ ಇಂಡಿಯನ್ನರು ನಗರ, ಹಳ್ಳಿ ಮತ್ತು ಫಾರ್ಮ್ ಗಳಲ್ಲಿ ನೆಲಸಿದ್ದಾರೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಸ್ಥಳೀಯ ಇಂಡಿಯನ್ನರು ತಮ್ಮ ಹಳೆಯ ಪದ್ಧತಿಗಳನ್ನು ಸಂರಕ್ಷಣಾ ಶಿಬಿರಗಳಲ್ಲಿ ಬಿಟ್ಟಿದ್ದಾರೆ. ಗಂಡು, ಹೆಣ್ಣು ಮಕ್ಕಳೆನ್ನದೆ ಸ್ಥಳೀಯ ಇಂಡಿಯನ್ನರ ಮಕ್ಕಳು ಶಾಲಾ-ಕಾಲೇಜುಗಳಿಗೆ ಹೋಗಲಾರಂಭಿಸಿ ದ್ದಾರೆ. ಈ ಮೂಲಕ ಅವರು ನಾಗರಿಕತೆಯೆಡೆಗೆ ಮುನ್ನಡೆದಿದ್ದಾರೆ. ಇಲ್ಲಿ ಗಮನಿಸಬಹುದಾದ ಮುಖ್ಯ ವಿಷಯವೇನೆಂದರೆ ಸಂರಕ್ಷಣಾ ಶಿಬಿರದಲ್ಲಿ ಸ್ಥಳೀಯರ ಜನಸಂಖ್ಯೆಯ ಪ್ರಮಾಣ ಹೆಚ್ಚುತ್ತಿರುವುದು ಒಂದು ಕಡೆಯಾದರೆ, ಇನ್ನೊಂದು ಕಡೆಯಲ್ಲಿ ಅವರ ದಿನನಿತ್ಯದ ಬದುಕಿನಲ್ಲಿ ಪ್ರಗತಿಯನ್ನು ಕಾಣಬಹುದಾಗಿದೆ. ಅವರ ‘‘ಸಾಂಸ್ಕೃತಿಕ ಸಂಘರ್ಷ’’ದಲ್ಲಿ ಅವರು ತಮ್ಮ ಪದ್ಧತಿ ಸಂಪ್ರದಾಯಗಳಿಂದ ದೂರವಾಗಿರುವುದನ್ನು ಗಮನಿಸಬಹುದು.

 

ಪರಾಮರ್ಶನ ಗ್ರಂಥಗಳು

೧. ಥಾಮಸ್ ಸೋವೆಲ್, ೧೯೯೧. ಎತ್ನಿಕ್ ಅಮೆರಿಕಾ: ಎ ಹಿಸ್ಟರಿ, ನವದೆಹಲಿ.

೨. ವಾನ್‌ವುಡ್ ವರ್ಡ್(ಸಂ). ೧೯೭೮. ಎ ಕಂಪೇರಿಟಿವ್ ಅಪ್ರೋ ಟು ಅಮೆರಿಕನ್ ಹಿಸ್ಟರಿ, ವಾಷಿಂಗ್‌ಟನ್ ಡಿ.ಸಿ.

೩. ಪಾರ್ಕ್ ಹೆಚ್.ಬಿ., ೧೯೮೬. ದಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಎ ಹಿಸ್ಟರಿ, ನವದೆಹಲಿ.

೪. ಲೂಥರ್ ಎನ್.ಲಕ್ಡಟ್ಕೆ(ಸಂ), ೧೯೮೮. ಮೇಕಿಂಗ್ ಅಮೆರಿಕಾ, ನವದೆಹಲಿ.

೫. ಜುದ್ದ್ ಬರ್ಬಾರ, ೧೯೬೯. ಎ ನ್ಯೂ ಹಿಸ್ಟರಿ ಆಫ್ ದಿ ಯುನೈಟೆಡ್ ಸ್ಟೇಟ್ಸ್ ಆನ್ ಎನ್‌ಕ್ವೈರಿ ಅಪ್ರೋ ನ್ಯೂಯಾರ್ಕ್.