ಹೆಸರು: ಮಧುಲತಾ
ಊರು: ಕೆ.ಆರ್.ಎಸ್.

ಪ್ರಶ್ನೆ: ನನಗೆ ೨೧ ವರ್ಷ. ನಾನು ಪದವಿ ವ್ಯಾಸಂಗ ಮಾಡುತ್ತಿದ್ದೇನೆ. ನನಗೆ ಆಗಾಗ ಗಂಟಲು ನೋವು ಬರುತ್ತಿರುತ್ತದೆ. ಡಾಕ್ಟರ್ ಹತ್ತಿರ ತೋರಿಸಿ ಚಿಕಿತ್ಸೆ ತೆಗೆದುಕೊಂಡಿದ್ದೇನೆ. ಅವರು ಅಯೋಡಿನ್ ಕೊರತೆಯಿಂದ ರೀತಿ ಆಗುತ್ತದೆ ಎಂದು ಹೇಳಿದರು. ಹಾಗಾದರೆ ಅಯೋಡಿನ್ ಎಂದರೇನು? ಅದು ಹೇಗೆ ಸಿಗುತ್ತದೆ? ಅಯೋಡಿನ್ ಇಲ್ಲದಿದ್ದರೆ ಏನಾಗುತ್ತದೆ? ಅದಕ್ಕೆ ನಾವು ಏನು ಮಾಡಿದರೆ ಅಯೋಡಿನ್ ಕೊರತೆ ನೀಗಿಸಬಹುದು? ಎಲ್ಲಾ ಪ್ರಶ್ನೆಗಳಿಗೆ ಇದೇ ವಾರದಲ್ಲಿ ಉತ್ತರಿಸುತ್ತೀರೆಂದು ನಂಬಿರುತ್ತೇನೆ.

ಉತ್ತರ: ಅಯೋಡಿನ್ ಒಂದು ರಾಸಾಯನಿಕ ವಸ್ತು. ಇದು ಆಮ್ಲಜನಕ, ಹೈಡ್ರೋಜನ್ ಮತ್ತು ಕಬ್ಬಿಣಾಂಶದ ಹಾಗೆ ಇದೂ ಒಂದು. ಇದು ಬೇರೆ ಬೇರೆ ರೂಪಗಳಲ್ಲಿ ಸಿಗುತ್ತದೆ. ಅವುಗಳೆಂದರೆ ಅಯೋಡೈಡ್(I) ಅಯೊಡೆಡ್(I3) ಮತ್ತು ಎಲಿಮೆಂಟಿಲ್ ಅಯೋಡಿನ್ (I2) ಇದು ಸಮುದ್ರದ ನೀರಿನಲ್ಲಿ ಹೆಚ್ಚಾಗಿ ಸಿಗುತ್ತದೆ. ಸಹಜವಾಗಿ ಹರಿಯುವ ನೀರಿನಲ್ಲಿ ಈ ಅಂಶವಿರುವುದಿಲ್ಲ. ಅಯೋಡಿನ್ ಕೊರತೆಯು ಹೆಚ್ಚಾಗಿ ಬೆಟ್ಟ ಗುಡ್ಡ ಗಾಡು ಪ್ರದೇಶದಲ್ಲಿಯೇ ಕಂಡುಬರುವುದು.

ಅಯೋಡಿನ್ ಜೀವಕೋಶಗಳ ಕಾರ್ಯ ಚಟುವಟಿಕೆಗೆ ಮುಖ್ಯವಾದದ್ದು, ಜೀವಕೋಶಗಳು ಆಹಾರವನ್ನು ಶಕ್ತಿರೂಪವಾಗಿ ಪರಿವರ್ತಿಸುವಲ್ಲಿ ಅಯೋಡಿನ್ ಬಹು ಮುಖ್ಯ ಕಾರ್ಯ ನಿರ್ವಹಿಸುತ್ತದೆ. ಜೀವಕೋಶಗಳ ಥೈರಾಯಿಡ್ ಗ್ರಂಥಿಯ ಸಕ್ರಿಯ ಕಾರ್ಯ ನಿರ್ವಹಿಸುವಿಕೆಗೆ ಮತ್ತು ಅವುಗಳಿಂದ ಉತ್ಪತ್ತಿಯಾಗುವ ಹಾರ್ಮೋನ್‌ಗಳಿಗೆ ಹೆಚ್ಚಿನ ಅವಶ್ಯಕತೆ ಇರುತ್ತದೆ.

ಭ್ರೋಣಾವಸ್ಥೆ ಮತ್ತು ಬೆಳೆಯುವ ಶಿಶುಗಳಿಗೆ ಅಯೋಡಿನ್ ಅಂಶ ಅತ್ಯಂತ ಅವಶ್ಯಕ. ಈ ಹಂತದಲ್ಲಿ ಅಯೋಡಿನ್ ಕೊರತೆಯುಂಟಾದರೆ ಹುಟ್ಟುವ ಮಕ್ಕಳಲ್ಲಿ ಬುದ್ಧಿಮಾಂದ್ಯತೆ, ನರಮಂಡಲದ ದೌರ್ಬಲ್ಯ, ಮಾನಸಿಕ ದುರ್ಬಲತೆಗೆ ಒಳಗಾಗಬಹುದು ಮತ್ತು ಬೆಳವಣಿಗೆ ಕುಂಠಿತವಾಗಬಹುದು.

ಸಾಮಾನ್ಯವಾಗಿ ಪುರುಷರಿಗಿಂತ ಮಹಿಳೆಯರೇ ಅಯೋಡಿನ್ ಕೊರತೆಗೆ ಒಳಗಾಗುವುದು ಹೆಚ್ಚು. ಅದರಲ್ಲೂ ಗರ್ಭಿಣಿ ಮತ್ತು ಯುವತಿಯರಲ್ಲಿ ಅಯೋಡಿನ್ ಕೊರತೆ ಕಂಡುಬರುತ್ತದೆ. ಇದರಿಂದ ಬಂಜೆತನ, ಅಕಾಲಿಕ ಪ್ರಸವ ಮತ್ತು ಭ್ರೂಣದ ಬೆಳವಣಿಗೆಯಲ್ಲಿ ಕುಂಠಿತ ಮುಂತಾದ ತೊಂದರೆಗಳು ಕಂಡುಬರುತ್ತವೆ. ಅಯೋಡಿನ್ ಕೊರತೆಯಿಂದ ಹಲವಾರು ಖಾಯಿಲೆಗಳು ಉಂಟಾಗುತ್ತವೆ.

ಅಯೋಡಿನ್ ಕೊರತೆಯಿಂದ ಹಲವಾರು ಖಾಯಿಲೆಗಳು ಕಂಡುಬರುತ್ತವೆ ಅವುಗಳಲ್ಲಿ ಮುಖ್ಯವಾಗಿ

ಗಳಗಂಟ (ಗಾಯಿಟರ್ Goiter): ಅಯೋಡಿನ್ ಕೊರತೆಯಿಂದ ಬಳಲುತ್ತಿರುವ ವ್ಯಕ್ತಿಗಳಲ್ಲಿ ಹೆಚ್ಚಾಗಿ ಗಳಹಂಠ ರೋಗವು ಕಂಡುಬರುತ್ತದೆ. ಥೈರಾಯಿಡ್ ಹಾರ್ಮೋನ್‌ಗಳ ಉತ್ಪತ್ತಿಯಲ್ಲಿ ವ್ಯತ್ಯಾಸ ಉಂಟಾಗುವುದರಿಂದ ಗಳಗಂಠ ಬರುತ್ತದೆ. ಇದರಿಂದ ಧ್ವನಿಯಲ್ಲಿ, ಶ್ವಾಸಕೋಶದ ತೊಂದರೆ ಉಸಿರಾಟದ ತೊಂದರೆ, ಕೆಮ್ಮು ಮುಂತಾದ ಸವಸ್ಯೆಗಳು ಕಂಡುಬರುತ್ತದೆ.

ಹೈಪೋಥೈರಾಯಿಡಿಸಮ್ (Hypothyroidism): ಅಯೋಡಿನ್ ಕೊರತೆ ಇರುವ ವ್ಯಕ್ತಿಗಳಲ್ಲಿ ಹೈಪೋಥೈರಾಯಿಡಿಸಮ್ ಖಾಯಿಲೆಯು ಉಂಟಾಗಬಹುದು. ಇದರಿಂದ ಸುಸ್ತಾಗುವಿಕೆ, ತೂಕ ಹೆಚ್ಚಳ, ಶೀತ, ಚರ್ಮದ ಒಣಗುವಿಕೆ, ಮಲಬದ್ಧತೆ, ಕಣ್ಣಿನ ತೊಂದರೆ, ಖಿನ್ನತೆ ಇತ್ಯಾದಿ.

ಕ್ರಿಟಿನಿಸಮ್ (Cretinism): ಅಯೋಡಿನ್ ಕೊರತೆಯಿಂದ ತೀವ್ರವಾಗಿ ಉಂಟಾಗವ ಪರಿಣಾವಗಳಲ್ಲಿ ಕ್ರಿಟಿನಿಸಮ್ ತೊಂದರೆಯೂ ಒಂದು. ಈ ತೊಂದರೆಯಿಂದ ನರಗಳ ದೌರ್ಬಲ್ಯ ಮತ್ತು ಮೈಯಲ್ಲಿ ನೀರು ತುಂಬವಿಕೆ ಸಮಸ್ಯೆ ಉಂಟಾಗುತ್ತದೆ.

ಬುದ್ಧಿ ಮಾಂದ್ಯತೆ: ಅಯೋಡಿನ್ ಕೊರತೆಯಿಂದ ಭ್ರೂಣ ಬೆಳೆವಣಿಗೆಗೆ ಮತ್ತು ಮಕ್ಕಳಲ್ಲಿ ನರಗಳ ದೌರ್ಬಲ್ಯತೆ ಉಂಟಾಗುವ ಸಂಭವವಿರುತ್ತದೆ.

ಅಯೋಡಿನ್ ಕೊರತೆಯನ್ನು ನೀಗಿಸಲು ಈ ಕೆಳಕಂಡ ಕೆಲವು ಕ್ರಮಗಳನ್ನು ಅನುಸರಿಸಬಹುದು. ಅವುಗಳೆಂದರೆ,

೧. ಪ್ರತಿದಿನ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸಬೇಕು.

೨. ಅಯೋಡಿನ್ ಅಂಶವಿರುವ ಉಪ್ಪು ಮತ್ತು ಆಹಾರ ಸೇವನೆ ಮಾಡಬೇಕು. ಇದನ್ನು ಅನುಸರಿಸುವುದರಿಂದ ಅಯೋಡಿನ್ ಕೊರತೆ ನೀಗಿಸಬಹುದು.