ಗುಜರಾತಿನ ಪುಟ್ಟ ಹಳ್ಳಿ ಕಫನ್ ರಾನ್. ಇಡೀ ಊರಿನಲ್ಲಿ ನಡೆಸುವ ಏಕೈಕ ಕೃಷಿ ಉಪ್ಪು. ಅಗಾರಿಯಾ ಬುಡಕಟ್ಟಿನ ಅಲ್ಲಿನ ಜನರಿಗೆ ಇದು ಅನಿವಾರ್ಯ. ಕಾರಣ; ಅಲ್ಲಿನ ನೆಲ, ಜಲ, ವಾತಾವರಣ, ಪರಿಸರ ಎಲ್ಲವೂ ಉಪ್ಪುಮಯ. ಅಲ್ಲಿಯ ನೀರನ್ನು ಕುಡಿಯಲೇ ಸಾಧ್ಯವಿಲ್ಲ. ಯಾವುದೇ ತರಕಾರಿಯೂ ಬೆಳೆಯದು. ದಿನವಿಡೀ ಉಪ್ಪಿನ ತಯಾರಿಕೆ. ಸಿಹಿನೀರಿಗಾಗಿ ಹುಡುಕಾಟ, ಪರದಾಟ. ಇವರ ತಿಂಗಳ ಗಳಿಕೆ 1,500 ರೂಪಾಯಿಗಳು ಮಾತ್ರ. ಅದರಲ್ಲಿ 500 ರೂಪಾಯಿಗಳು ಕುಡಿಯುವ ನೀರಿಗೆ ಖರ್ಚು!

ಈ ಊರಿನ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಕಾಯಿಲೆ ಇದೆ. ಕ್ಷಯ, ಕುರುಡುತನ, ಜತೆಗೆ ವ್ಯಾಪಕ ಚರ್ಮರೋಗ, ಮಧ್ಯ ವಯಸ್ಸು ಮೀರಿ ಬದುಕಿದವರು ಒಬ್ಬರೂ ಇಲ್ಲ. ಈಗ ಅಲ್ಲಿನ ಉಪ್ಪು ತಯಾರಿಕೆಗೂ ಕುತ್ತು ಬಂದಿದೆ. ಅಯೋಡಿನ್-ರಹಿತ ಉಪ್ಪಿಗೆ ಸರ್ಕಾರ ಮಾನ್ಯತೆ ನೀಡುತ್ತಿಲ್ಲ. ಉಪ್ಪಿನಲ್ಲಿ ಅಯೋಡಿನ್ ಇರಲೇಬೇಕೆಂದು ಕಡ್ಡಾಯ ಮಾಡಿದೆ.

ಅಯೋಡಿನ್ ಕಡ್ಡಾಯ ಮಾಡಿದ್ದೇಕೆ?

ಅದು ಇಸವಿ 1950ರ ಆಸುಪಾಸು. ಪಶ್ಚಿಮ ಬಂಗಾಳದಲ್ಲಿ ಗಳಗಂಡ ರೋಗ ಕಾಣಿಸಿತು. ಇದು ಥೈರಾಯ್ಡ್ ಗ್ರಂಥಿಗಳಿಗೆ ಸೂಕ್ತ ಪ್ರಮಾಣದಲ್ಲಿ ಅಯೋಡಿನ್ ದೊರಕದಿದ್ದಾಗ ಕಾಣಿಸಿಕೊಳ್ಳುವ ಸಮಸ್ಯೆ ಅದು. ಗಂಟಲೂತ, ಗಂಟಲಿನ ಮೇಲೆ ಮಚ್ಚೆಗಳು, ನೋವು, ಕೊನೆಯಲ್ಲಿ ಥೈರಾಯ್ಡ್ ಗ್ರಂಥಿಯ ವೈಫಲ್ಯ ರೋಗದ ಲಕ್ಷಣ ಮತ್ತು ಪರಿಣಾಮ. ಇದು ಜಮ್ಮು- ಕಾಶ್ಮೀರ, ಅಸ್ಸಾಂ, ಮೇಘಾಲಯ, ಹಿಮಾಚಲ ಪ್ರದೇಶಗಳಲ್ಲಿಯೂ ದಾಖಲಾಯಿತು. ಇಸವಿ 1980ರಲ್ಲಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸಮೀಕ್ಷೆ ನಡೆಯಿತು. ಉತ್ತರಭಾರತದಲ್ಲಿ ಸುಮಾರು 2,500 ಚದರ ಕಿ.ಮೀ. ಪ್ರದೇಶ, ಕೇರಳ, ಆಂಧ್ರ, ಕರ್ನಾಟಕ, ತಮಿಳುನಾಡು, ಗೋವಾ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ದಿಲ್ಲಿ ಹಾಗೂ ಪಶ್ಚಿಮಬಂಗಾಳಗಳಲ್ಲಿಯೂ ಅಲ್ಲಲ್ಲಿ ಅಯೋಡಿನ್ ಕೊರತೆ ಇದೆ ಎಂದು ದಾಖಲಾಯಿತು.

ಪರಿಣಾಮ ಉಪ್ಪಿನ ತಯಾರಿಕಾ ತಾಂತ್ರಿಕತೆ ಕುರಿತ ಅಧ್ಯಯನ ಸಮಿತಿ ರಚನೆಯಾಯಿತು. ಅಯೋಡಿನ್ ಕೊರತೆಯಿಂದಾಗಿ ಉಂಟಾಗುವ ಗಳಗಂಡ ರೋಗ ಮತ್ತು ಮಾನಸಿಕ ಅಸ್ವಸ್ಥತೆ ಕುರಿತು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ವಿವರಿಸಿದರು. ಸಮಿತಿಯಲ್ಲಿ ಗಂಭೀರ ಸಮಾಲೋಚನೆ ನಡೆಯಿತು. ಉಪ್ಪು ಪ್ರತಿಯೊಬ್ಬರ ದಿನಬಳಕೆಯ ವಸ್ತು. ಅಯೋಡಿನ್ ಅನ್ನು ಸುಲಭವಾಗಿ ಉಪ್ಪಿನ ಮೂಲಕ ದೇಹಕ್ಕೆ ಸೇರಿಸಬಹುದೆಂಬ ತೀರ್ಮಾನ ಕೈಗೊಂಡಿತು. ಇಸವಿ 1990ರ ವೇಳೆಗೆ ಇದನ್ನು ದೇಶದಾದ್ಯಂತ ಎಲ್ಲರಿಗೂ ಅನ್ವಯಿಸಬೇಕು. ಅಯೋಡಿನ್-ಯುಕ್ತ ಉಪ್ಪಿನ ಬಳಕೆ ಎಲ್ಲೆಲ್ಲೂ ಕಡ್ಡಾಯ ಮಾಡುವ ಕಾನೂನು ರೂಪಿಸಬೇಕೆಂದು ತೀರ್ಮಾನಿಸಲಾಯಿತು.

ಸರ್ಕಾರ ಇದನ್ನೊಪ್ಪಿಗೊಂಡು ಇಸವಿ 1992ರಲ್ಲಿ ಅಯೋಡಿನ್-ಗೋಸ್ಕರ 21 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿತು. ಭಾರತ ದೇಶದ ಪ್ರಜೆಗಳೆಲ್ಲರೂ ಅಯೋಡಿನ್-ಯುಕ್ತ ಉಪ್ಪನ್ನು ಮಾತ್ರ ಬಳಸಬೇಕೆಂದು ಕಡ್ಡಾಯ ಕಾನೂನು ಮಾಡಿತು.

ಇದು ಬೇಕಾಗಿತ್ತಾ?

ಕೇಂದ್ರ ಸರ್ಕಾರದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಸಮೀಕ್ಷೆಯಂತೆ ಅಯೋಡಿನ್ ಕೊರತೆ ಕಾರಣದಿಂದ ಭಾರತದಲ್ಲಿ ಕಾಯಿಲೆಪೀಡಿತರ ಸಂಖ್ಯೆ 30 ಲಕ್ಷ. 100 ಕೋಟಿ ಜನಸಂಖ್ಯೆಗೆ ಹೋಲಿಸಿದರೆ ಇದು ಅತ್ಯಲ್ಪ. ಗಳಗಂಡ ರೋಗವು ಅಯೋಡಿನ್ ಕೊರತೆಯಿಂದ ಮಾತ್ರ ಉಂಟಾಗುವ ಕಾಯಿಲೆಯಲ್ಲ. ಇದರ ರೋಗಾಣುಗಳು ಕ್ಯಾಬೇಜ್, ಸಾಸಿವೆ, ಸೋಯಾಬೀನ್, ಕಡ್ಲೆಕಾಯಿಗಳಲ್ಲೂ ಇರುವುದು ಕಂಡುಬಂದಿದೆ.

ಡಿಡಿಟಿ, ಡಿಡಿಡಿ, ಡೆಟ್ರಾಸೈಕ್ಲಿನ್ (ಆಂಟಿ ಬಯಾಟಿಕ್) ಮುಂತಾದ ರಾಸಾಯನಿಕಗಳಲ್ಲಿ ಗಳಗಂಡಕ್ಕೆ ಕಾರಣವಾಗುವ ರೋಗಾಣುಗಳು ಇರುವುದು ಪತ್ತೆಯಾಗಿದೆ. ಈ ರಾಸಾಯನಿಕಗಳ ಬಳಕೆ ಹೆಚ್ಚಿದ ಮೇಲೆ ಗಳಗಂಡ ರೋಗ ಹೆಚ್ಚಾಗಿರುವುದನ್ನು ಸರ್ಕಾರಿ ಇಲಾಖೆಗಳೇ ದಾಖಲಿಸಿವೆ.

ಇಷ್ಟಾಗಿಯೂ ಒಬ್ಬ ವ್ಯಕ್ತಿಗೆ ದಿನನಿತ್ಯ 100ರಿಂದ 150 ಮೈಕ್ರೋ ಗ್ರಾಂ ಅಂದರೆ ಒಂದು ಗ್ರಾಂನ ದಶಲಕ್ಷದ ಒಂದು ಭಾಗದಷ್ಟು ಅಯೋಡಿನ್ ಸಿಕ್ಕರೆ ಸಾಕು. ವ್ಯಕ್ತಿಯೊಬ್ಬ ಜೀವಮಾನದಲ್ಲಿ ಹೆಚ್ಚೆಂದರೆ ಅರ್ಧ ಟೀ ಚಮಚದಷ್ಟು ಅಯೋಡಿನ್ ಸೇವಿಸಿದರೆ ಸಾಕು. ಆದರೆ ಅಯೋಡಿನ್ ಪ್ರತಿದಿನವೂ ಅವಶ್ಯ ಬೇಕು.

ನಮಗೆ ಸಾಕಾಗುವಷ್ಟು ಅಯೋಡಿನ್ ನಾವು ಸೇವಿಸುವ ಆಹಾರವಾದ ಅನ್ನ, ರೊಟ್ಟಿ, ತರಕಾರಿಗಳ ಮೂಲಕವೇ ದೊರಕುತ್ತದೆ. ಪೌಷ್ಟಿಕ ಆಹಾರ ಸೇವಿಸುವವರಿಗೆ ಕೊರತೆಯಾಗುವುದಿಲ್ಲ. ಮಣ್ಣು ಹಾಗೂ ನೀರಿನಲ್ಲಿ ಸಹಜವಾಗಿ ಅಯೋಡಿನ್ ಇದೆ. ಅತಿಯಾದ ಮಳೆಯಿಂದ ಮಣ್ಣು ಕೊಚ್ಚಿ ಹೋಗುವ ಪ್ರದೇಶಗಳಲ್ಲಿ ಅಯೋಡಿನ್ ಕೊರತೆ ಕಾಣಿಸಿಕೊಳ್ಳಬಹುದು.

ಇದನ್ನೆಲ್ಲಾ ಪರಿಗಣನೆಗೆ ತೆಗೆದುಕೊಂಡಾಗ, ನಮ್ಮ ದೇಶದಲ್ಲಿ ಅಯೋಡಿನ್ ಕೊರತೆಗಿಂತ ಪೌಷ್ಟಿಕ ಆಹಾರದ ಕೊರತೆ ಪ್ರಮುಖವಾದುದು. ಅಪೌಷ್ಟಿಕತೆಯಿಂದ ನರಳುತ್ತಿರುವವರ ಸಂಖ್ಯೆ 30 ಕೋಟಿ! ಇದರ ನಿವಾರಣೆ ಪ್ರಮುಖವಾಗಬೇಕಲ್ಲವೇ?

ಅಯೋಡಿನ್ ಉಪ್ಪಿನ ತಯಾರಿಕೆ ಇಂದು 3,000 ಕೋಟಿ ರೂಪಾಯಿಗಳ ವ್ಯವಹಾರ ಹೊಂದಿದೆ. ಬಹುರಾಷ್ಟ್ರೀಯ ಕಂಪೆನಿಗಳ ಅಬ್ಬರದ ಪ್ರಚಾರ, ಕಳೆದ 30 ವರ್ಷಗಳಿಂದ ನಡೆಯುತ್ತಾ ಬಂದಿರುವ ‘ಅಯೋಡಿನ್ ಲಾಬಿ’, ಸರ್ಕಾರದ ಮೇಲಿನ ಒತ್ತಡ, ಇದರ ಹಿಂದಿರುವ ಲಾಭಗಳನ್ನು ಯಾರು ಬೇಕಾದರೂ ಊಹಿಸಬಹುದು. ಅಯೋಡಿನ್ ಅನ್ನು ಉಪ್ಪಿಗೆ ಬೆರೆಸುವ ಸಹಾಯಧನ ಈಗ 100 ಕೋಟಿ ರೂಪಾಯಿ ದಾಟಿದೆ. ಇಲ್ಲಿ ನಡೆಯುವ ಭ್ರಷ್ಟಾಚಾರವನ್ನು ಯಾರೂ ಅಂದಾಜು ಮಾಡಲು ಸಾಧ್ಯವಿಲ್ಲ.

ಅಯೋಡಿನ್ ಅಂಶ ಇರುವ ಖನಿಜ ನಮ್ಮ ನೆಲದಲ್ಲಿ ಸಿಗುವುದಿಲ್ಲ. ಜಪಾನ್ ಅಥವಾ ಇಟಲಿಯಿಂದ ತರಿಸಿಕೊಳ್ಳಬೇಕು. ಕಳೆದ 15 ವರ್ಷಗಳಿಂದ ಪ್ರತಿವರ್ಷವೂ ಇದರ ಬೆಲೆಯನ್ನು ಈ ಎರಡು ದೇಶಗಳು ಏರಿಸುತ್ತಲೇ ಇವೆ. ಅಷ್ಟೇ ಅಲ್ಲ, ಅಯೋಡಿನ್ ಏಜೆಂಟರನ್ನೂ ನಮ್ಮ ದೇಶದೊಳಗೆ ಕೂರಿಸಿಬಿಟ್ಟಿವೆ.

ಹೀಗೆ 15 ವರ್ಷಗಳ ಕಾಲ ಅಯೋಡಿನ್ ಉಪ್ಪಿನ ವಿರೋಧಗಳ ನಡುವೆಯೂ ಭಾರತ ಸರ್ಕಾರ 2005ರ ಆಗಸ್ಟ್ 15ರಂದು ಅಯೋಡಿನ್-ರಹಿತ ಉಪ್ಪಿನ ಮಾರಾಟವನ್ನು ನಿಷೇಧಿಸಿತು. ಅಯೋಡಿನ್-ರಹಿತ ಉಪ್ಪಿನ ಮಾರಾಟ, ತಯಾರಿಕೆ ಎಲ್ಲವೂ ಅಪರಾಧವೆಂದು, ಅದಕ್ಕೆ ನಿರ್ದಿಷ್ಟ ಶಿಕ್ಷೆಯನ್ನೂ ಸಹ ಗೊತ್ತುಮಾಡಿತು. ಒಂದು ವೇಳೆ ಯಾರಾದರೂ ಅಯೋಡಿನ್ ಇಲ್ಲದ ಉಪ್ಪನ್ನು ತಯಾರಿಸಿದರೆ ಅಥವಾ ಮಾರಿದರೆ ಕಾನೂನು ಪ್ರಕಾರ ಒಂದು ಸಾವಿರ ರೂಪಾಯಿ ದಂಡ ಅಥವಾ ಆರು ತಿಂಗಳು ಜೈಲು ಶಿಕ್ಷೆ ಕಡ್ಡಾಯ!

ಗಳಗಂಡ ಅಷ್ಟೆಲ್ಲಾ ಅನಾಹುತಕಾರಿಯೇ?

ಥೈರಾಯ್ಡ್ ಗ್ರಂಥಿ ನಮ್ಮ ಕತ್ತಿನಲ್ಲಿದೆ. ಇದು ಥೈರಾಕ್ಸಿನ್ ಹಾಗೂ ಟ್ರೇ ಅಯಡೋ ಥೈರೋನಿನ್ ಎನ್ನುವ ಹಾರ್ಮೋನು(ಗ್ರಂಥಿ ರಸ)ಗಳನ್ನು ಸ್ರವಿಸುತ್ತದೆ. ಇವುಗಳು ಜೀವಕೋಶಗಳ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತವೆ. ಆ ಮೂಲಕ ದೇಹದ ಹಾಗೂ ಬುದ್ಧಿಯ ಬೆಳವಣಿಗೆಗೆ ಸಹಾಯಕ. ಈ ಹಾರ್ಮೋನುಗಳ ಸ್ರವಿಸುವಿಕೆಗೆ ಪ್ರತಿದಿನ 60 ಮೈಕ್ರೋ ಗ್ರಾಂ ಅಯೋಡಿನ್ ಅವಶ್ಯ. ಗ್ರಂಥಿಯು ರಕ್ತನಾಳಗಳ ಮೂಲಕ ಇದನ್ನು ಹೀರಿಕೊಳ್ಳುತ್ತದೆ.

ಇಷ್ಟು ಅಯೋಡಿನ್ ಸಹ ಸಿಗದಿದ್ದಾಗ ಗ್ರಂಥಿಯಲ್ಲಿ ಹಾರ್ಮೋನುಗಳ ತಯಾರಿಕೆಗೆ ತೊಂದರೆ ಉಂಟಾಗುತ್ತದೆ. ಹಾರ್ಮೋನಿನಿಂದ ನಿಯಂತ್ರಣದಲ್ಲಿದ್ದ ಕೆಲವು ಜೀವಕೋಶಗಳು ಅಯೋಡಿನ್ಗಾಗಿ ಪರದಾಟ ನಡೆಸಿ ಹೆಚ್ಚುತ್ತಾ ಹೋಗುತ್ತವೆ. ಗ್ರಂಥಿಯೊಳಗೆ ಕೇವಲ ಜೀವಕೋಶಗಳು ತುಂಬಿ ಗ್ರಂಥಿ ಊದತೊಡಗುತ್ತದೆ. ಕತ್ತು ಬಾತುಕೊಳ್ಳುತ್ತದೆ. ಥೈರಾಯ್ಡ್ ಗ್ರಂಥಿ ಸ್ರವಿಸುವ ಹಾರ್ಮೋನುಗಳ ಕೊರತೆಯಿಂದ ಗರ್ಭಸ್ರಾವದಿಂದ ಹಿಡಿದು ಮೆಳ್ಳೆಗಣ್ಣು, ಕಿವುಡು, ದಪ್ಪಚರ್ಮ ಹೀಗೆ ಬರಬಹುದಾದ ಸುಮಾರು 20 ರೋಗಗಳ ಪಟ್ಟಿಯನ್ನು ಆರೋಗ್ಯ ಇಲಾಖೆ ಪ್ರಕಟಿಸಿದೆ. ಇದರಲ್ಲಿ ಗಳಗಂಡವೂ ಸೇರಿದೆ.

ಪೌಷ್ಟಿಕ ಆಹಾರ ಸೇವನೆ, ಸಮುದ್ರದ ಆಹಾರಸೇವನೆ, ಅಯೋಡಿನ್ ಬೆರತ ಆಹಾರ ಸೇವನೆ ಇದಕ್ಕೆ ಪರಿಹಾರ.

ದಾರಿ ಯಾವುದು?

ಅಯೋಡಿನ್ ಕೊರತೆ ಬಡವರಿಗೆ ಮಾತ್ರ. ಅಪೌಷ್ಟಿಕ ಆಹಾರ, ಹೊಟ್ಟೆಗೇ ಇಲ್ಲದ ಸ್ಥಿತಿಯಲ್ಲಿರುವ ಬಿಹಾರ, ಒರಿಸ್ಸಾ, ಪೂರ್ವಾಂಚಲದ ಕೆಲವು ಪ್ರದೇಶಗಳ ಅಧ್ಯಯನದಿಂದ ಇದು ಸಿದ್ಧವಾಗಿದೆ.

ಸರ್ಕಾರ ದೇಶದ ಎಲ್ಲಾ ಪ್ರಜೆಗಳಿಗೂ ಮದ್ದು ನೀಡುವ ಬದಲು ಅಯೋಡಿನ್ ಕೊರತೆ ಇರುವವರಿಗೆ ಮಾತ್ರ ನೀಡಿದರೆ ಸಾಕಿತ್ತು. ಅಂತಹ ಪ್ರದೇಶದ ಜನರಿಗೆ ಸೂಕ್ತ ಶಿಕ್ಷಣ, ತಿಳಿವಳಿಕೆ ಹಾಗೂ ಮುಖ್ಯವಾಗಿ ಪೌಷ್ಟಿಕ ಆಹಾರ ನೀಡುವ ಕೆಲಸ ಮಾಡಬೇಕು.

ಕರಾವಳಿಯವರಿಗೆ, ಪೌಷ್ಟಿಕ ಆಹಾರ ಸೇವಿಸುವವರಿಗೆ ಅಯೋಡಿನ್ ಅವಶ್ಯಕತೆಯೇ ಇಲ್ಲ. ಅಯೋಡಿನ್ ಅತಿಯಾದರೆ ಬರುವ ಕಾಯಿಲೆಗಳಿಗೆ ಆರಂಭದಲ್ಲಿ ವಿವರಿಸಿದ ಕಫನರಾನ್ ಹಳ್ಳಿಯ ಸ್ಥಿತಿಯೇ ಉದಾಹರಣೆ.

ಸಹಜವಾದ ಆಹಾರದಲ್ಲಿ, ಅಯೋಡಿನ್ ಇದೆ ಎನ್ನಲಾದ ಆಹಾರದಲ್ಲಿ, ವಸ್ತುಗಳಲ್ಲಿಯೂ ಎಷ್ಟು ಪ್ರಮಾಣದ ಅಯೋಡಿನ್ ಇದೆ ಎನ್ನುವುದು ಸಹ ನಿಖರವಾಗಿ ಹೇಳಲಾಗದು. ಅಯೋಡಿನ್ ಉಪ್ಪಿಗಿಂತಲೂ ಮುಖ್ಯವಾದುದು, ಪೌಷ್ಟಿಕ ಆಹಾರ ನೀಡಬೇಕಾದ ಕೆಲಸ.

ಉಪ್ಪಿಗೆ ಅಯೋಡಿನ್ ಸೇರಿಸುವುದು ಹೇಗೆ?

ಉಪ್ಪಿನಲ್ಲಿ ಅಯೋಡಿನ್ ಇದೆಯೋ ಇಲ್ಲವೋ ತಿಳಿಯಲು ಒಂದು ಸಣ್ಣ ಪರೀಕ್ಷೆ ಮಾಡಿ. ಅಕ್ಕಿ ಅಥವಾ ಜೋಳದ ಗಂಜಿಗೆ ಅಯೋಡಿನ್-ಯುಕ್ತ ಉಪ್ಪನ್ನು ಬೆರೆಸಿ. ಗಂಜಿಯು ನೇರಳೆ ಬಣ್ಣಕ್ಕೆ ತಿರುಗಿದರೆ ಅಯೋಡಿನ್ ಇದೆ ಎಂದು ತಿಳಿಯಿರಿ. ಅಯೋಡಿನ್ ಎಂದರೆ ಗ್ರೀಕ್ ಭಾಷೆಯಲ್ಲಿ ನೇರಳೆ ಎಂದರ್ಥ.

ಮರಳುಗಾಡು ರಾಜಸ್ಥಾನಕ್ಕೆ ಉಪ್ಪನ್ನು ನೀಡುತ್ತದೆ. ಅಲ್ಲಿರುವ ಆಳದ ಗಣಿಯಿಂದ ಉಪ್ಪನ್ನು ಮೇಲೆ ತರುತ್ತಾರೆ. ಅದನ್ನು ಪಟ್ಟಿಯ ಮೇಲೆ ರಾಶಿ- ರಾಶಿಯಾಗಿ ಸುರಿಯುತ್ತಾರೆ. ಪಟ್ಟಿ ಮುಂದೆ ಸಾಗಿ ಚೀಲಗಳಿಗೆ ಉಪ್ಪನ್ನು ಭರ್ತಿ ಮಾಡುತ್ತದೆ. ಉಪ್ಪಿನ ರಾಶಿ ಪಟ್ಟಿಯ ಮೇಲೆ ಸಾಗುತ್ತಿರುವಾಗ ಇದರ ಮೇಲೆ ಅಯೋಡಿನ್ ಸುರಿಯುತ್ತಾರೆ. ಇದು ನಿರಂತರವಾಗಿ ನಡೆಯಬೇಕಾದ ಪ್ರಕ್ರಿಯೆ.

ಗುಜರಾತಿನಲ್ಲಿ ಸಿಗುವುದು ಸಮುದ್ರದ ಉಪ್ಪು. ಇದನ್ನು ದೊಡ್ಡ- ದೊಡ್ಡ ತೊಟ್ಟಿಗಳಲ್ಲಿ ಸಂಗ್ರಹಿಸುತ್ತಾರೆ. ತೇವಾಂಶ ಕಳೆದುಕೊಂಡ ಉಪ್ಪಿಗೆ ನುಣುಪು ಕಣಗಳಾಗುವಂತೆ ಸಿಲಿಕಾನ್ ಡೈ ಆಕ್ಸೈಡ್ ಬೆರೆಸುತ್ತಾರೆ. ಆಮೇಲೆ ಅಯೋಡಿನ್ ಬೆರೆಸುವಿಕೆ ನಡೆಯುತ್ತದೆ.

ಉಪ್ಪಿಗೆ ಅಯೋಡಿನ್ ಸೇರಿಸುವಿಕೆ ಗುಜರಾತಿನಲ್ಲಾಗಲೀ, ರಾಜಸ್ಥಾನದಲ್ಲಾಗಲೀ, ಯಾವುದೇ ಘಟಕಗಳಲ್ಲಾಗಲೀ ಅದೊಂದು ಕಾಟಾಚಾರದ ಕೆಲಸ. ಇದು ಮಾನವ ಕೆಲಸವಾದ ಕಾರಣ ನಿಖರತೆಯ ಪ್ರಮಾಣ ಕೇವಲ ಶೇಕಡಾ 30ರಷ್ಟು ಮಾತ್ರ.

ಉಪ್ಪು ಪಟ್ಟಿಯಲ್ಲಿ ಹೋಗುವಾಗ, ಟೀ ಕುಡಿಯಲೋ, ಬೆವರು ಒರೆಸಿಕೊಳ್ಳಲೋ, ಇನ್ನೇನೋ ಕಾರಣಗಳಿಗೆ ಕೆಲಸಗಾರ ನಿಂತಾಗ ಅಯೋಡಿನ್ ಬೆರೆಸದ ಉಪ್ಪಿನರಾಶಿ ಪಟ್ಟಿಯಲ್ಲಿ ಮುಂದೆ ಸರಿದು ಪ್ಯಾಕ್ ಆಗಿರುತ್ತದೆ. ಅವಸರದಲ್ಲಿ ಅಗತ್ಯಕ್ಕಿಂತ ಹೆಚ್ಚು ಅಯೋಡಿನ್ ಬೆರೆಸುವಿಕೆಯೂ ನಡೆಯುತ್ತದೆ. ಅದೇ ರೀತಿ ತೊಟ್ಟಿಗಳಲ್ಲಿ ಬೆರೆಸುವಾಗಲೂ ನಿಖರತೆ ಇಲ್ಲ.

ಅಯೋಡಿನ್ ಖನಿಜವು ನೇರವಾಗಿ ಸಿಗುವುದಿಲ್ಲ. ಇದು ಮಿಶ್ರ ಖನಿಜವಾಗಿರುತ್ತದೆ. ಅಯೋಡಿನ್-ಯುಕ್ತ ಉಪ್ಪು ತಯಾರಿಸಲು ಪೊಟ್ಯಾಷಿಯಂ ಅಯೋಡೈಡನ್ನು ಬಳಕೆ ಮಾಡಬೇಕು. ಇದು ದುರ್ಲಭ, ದುಬಾರಿ. ಅದಕ್ಕಾಗಿ ಸುಲಭದ ದಾರಿ ಪೊಟ್ಯಾಷಿಯಂ ಅಯೋಡೈಟ್ ಬಳಕೆ. ಆದರೆ ಇದೊಂದು ವಿಷ ರಾಸಾಯನಿಕ. ಇದರ ಬಳಕೆಯಿಂದ ಕ್ಷಯ, ಹೊಟ್ಟೆನೋವು, ಚರ್ಮರೋಗಗಳು ಬರುವ ಸಾಧ್ಯತೆ ಇದೆ. ಗಳಗಂಡ ಸಹ ಬರಬಹುದು.

ಪೊಟ್ಯಾಷಿಯಂ ಅಯೋಡೈಡ್- ಅಯೋಡೈಟ್ ಎರಡೂ ಗಾಳಿಯಲ್ಲಿ ತಮ್ಮ ಸತ್ವ ಕಳೆದುಕೊಂಡು ಆವಿಯಾಗಿ ಹಾರಿಹೋಗುತ್ತವೆ. ಹೀಗಾಗಿ ಬೆರೆಸುವಿಕೆ, ಮಿಶ್ರಣ, ತುಂಬುವುದು, ಪ್ಯಾಕಿಂಗ್ ಹೀಗೆ ಯಾವ ಹಂತದಲ್ಲಿಯೂ ಅಯೋಡಿನ್ ಬೆರೆತ ಉಪ್ಪನ್ನು ಗಾಳಿಯಲ್ಲಿ ಬಿಡಬಾರದು. ಆದರೂ ತಯಾರಿಸಿದ ಉಪ್ಪಿನಲ್ಲಿ ಮೂರು ತಿಂಗಳಿಗೆ ಅರ್ಧದಷ್ಟು ಅಯೋಡಿನ್ ಮಾಯವಾಗಿರುತ್ತದೆ. ಆರು ತಿಂಗಳಿಗೆ ಮುಕ್ಕಾಲು ಮಾಯ. ಒಂಭತ್ತು ತಿಂಗಳಿಗೆ ಉಪ್ಪಿನಲ್ಲಿ ಅಯೋಡಿನ್ ಅಂಶವೇ ಇರುವುದಿಲ್ಲ. ಕೆಲವು ಕಂಪೆನಿಗಳು ಎಷ್ಟೆಲ್ಲಾ ಮುತುವರ್ಜಿ ವಹಿಸಿ ರಾಸಾಯನಿಕ ಉಪ್ಪು ತಯಾರಿಸಿ ಅಯೋಡಿನ್ ಬೆರೆಸುತ್ತಾರೆ? ಎಷ್ಟೆಲ್ಲಾ ರಕ್ಷಣೆಯೊಂದಿಗೆ ತುಂಬಿದ ಚೀಲವು ಸಗಟು ವ್ಯಾಪಾರಿಗಳ ಕೈ ಸೇರಿ ಸಣ್ಣ ಸಣ್ಣ ಪ್ಯಾಕ್ ಆಗುವಾಗ ಅಯೋಡಿನ್ ಅಂಶ ಹಾರಿಹೋಗಿರುತ್ತದೆ?

ಒಂದು ಕಿ.ಗ್ರಾಂ ಉಪ್ಪಿಗೆ 20 ಮಿಲಿಗ್ರಾಂ ಪೊಟ್ಯಾಷಿಯಂ ಅಯೋಡೈಟ್ ಮಿಶ್ರಣ ಮಾಡಬೇಕೆನ್ನುವುದು ನಿಯಮ. ಇದೂ ಸಹ ಗಾಳಿಯಲ್ಲಿ ಹಾರಿಹೋಗಿದೆ!

ವಿದೇಶಗಳಲ್ಲಿ ಹೇಗೆ?

ಮುಂದುವರಿದ ದೇಶಗಳಲ್ಲಿ ಅಯೋಡಿನ್-ಯುಕ್ತ ಉಪ್ಪು ಸೇವನೆ ಕಡ್ಡಾಯವಲ್ಲ. ಮಾರುಕಟ್ಟೆಯಲ್ಲಿ ಎರಡೂ ರೀತಿಯ ಉಪ್ಪು ಸಿಗುತ್ತದೆ. ಆಯ್ಕೆ ಗ್ರಾಹಕರದು. ಪೊಟ್ಯಾಷಿಯಂ ಅಯೋಡೈಟ್ ಬೆರೆಸುವಿಕೆಯನ್ನು ಯುರೋಪ್ ಹಾಗೂ ಅಮೆರಿಕದಲ್ಲಿ ನಿಷೇಧಿಸಲಾಗಿದೆ. ಪೊಟ್ಯಾಷಿಯಂ ಅಯೋಡೈಡ್ ಬೆರೆಸುವುದು ಮಾನ್ಯ. ಆದರೆ ಅದರ ಪ್ರಮಾಣ, ಎಕ್ಸ್ಪೈಯರಿ ದಿನಾಂಕ ಬರೆಯುವುದು ಕಡ್ಡಾಯ.

ಅಯೋಡಿನ್ ಕೊರತೆಯು ಹೆಚ್ಚಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಅದಕ್ಕೆ ನ್ಯೂಜಿಲೆಂಡ್ ಕಂಡುಕೊಂಡಿರುವ ಉಪಾಯ ಅಯೋಡಿನ್ ಎಣ್ಣೆಯ ಚುಚ್ಚುಮದ್ದು ನೀಡುವಿಕೆ. ಈ ಚುಚ್ಚುಮದ್ದು ಮೂರರಿಂದ ಐದು ವರ್ಷಗಳವರೆಗೆ ಅಯೋಡಿನ್ ಕೊರತೆಯಾಗದಂತೆ ನೋಡಿಕೊಳ್ಳುತ್ತದೆ. ಮಕ್ಕಳು ದೊಡ್ಡವರಾದಂತೆ ತರಕಾರಿ, ಪೌಷ್ಟಿಕ ಆಹಾರ ಸೇವನೆಯಿಂದ ಅಯೋಡಿನ್ ಕೊರತೆ ನಿವಾರಣೆಯಾಗುತ್ತದೆ.

ದಕ್ಷಿಣ ಆಫ್ರಿಕಾದ ಕೆಲವು ರಾಜ್ಯಗಳಲ್ಲಿ ಅಯೋಡಿನ್ ಕೊರತೆ ನಿವಾರಣೆಗೆ ಮಾತ್ರೆಗಳ ಬಳಕೆ ಇದೆ. ಕೇವಲ 15 ಪೈಸೆಗೆ ಒಂದು ಮಾತ್ರೆ. ನಿತ್ಯ ಸೇವನೆ ಅಗತ್ಯ.

ಪರಂಪರೆಯ ನಾಶ?

ಉಪ್ಪಿನ ಗಣಿಗಾರಿಕೆ ಅಥವಾ ಸಮುದ್ರದಿಂದ ಉಪ್ಪು ತಯಾರಿಸುವಿಕೆ ಎರಡೂ ಅತ್ಯಂತ ಕಡಿಮೆ ಖರ್ಚಿನ ಉದ್ಯಮ. ಒಂದು ಕಿ.ಗ್ರಾಂ ಉಪ್ಪಿಗೆ ತಗಲುವ ಬೆಲೆ ಸುಮಾರು 50 ಪೈಸೆ ಮಾತ್ರ.

ಅಟ್ಟುಪ್ಪು, ಕಲ್ಲುಪ್ಪು, ಕಾರುಪ್ಪು, ಚವುಳುಪ್ಪು, ಪೆಟ್ಲುಪ್ಪು, ಸೌರ ಉಪ್ಪು, ಬಿಳಿಗಾರ, ಸೈಂಧವ ಲವಣ ಹೀಗೆ ಅನೇಕ ರೀತಿಯ ಉಪ್ಪುಗಳಿವೆ. ಕೆಲವು ಔಷಧಿಗಳಿಗೆ, ಕೆಲವು ಖನಿಜಾಂಶ  ಕೊರತೆಗೆ ಬಹಳ ಉಪಯುಕ್ತ. ಸೌರ ಉಪ್ಪಿನಲ್ಲಿ ಕ್ಯಾಲ್ಸಿಯಂ ಹಾಗೂ ಮೆಗ್ನೀಷಿಯಮ್-ಗಳೂ ಇವೆ.

ಉಪ್ಪನ್ನು ಅಯೋಡಿನ್-ಯುಕ್ತ ಬಿಳಿಯಾಗಿಸುವ ಕಾರಣ ಉಪ್ಪಿನಲ್ಲಿರುವ ಇತರ ಖನಿಜಾಂಶಗಳನ್ನೆಲ್ಲಾ ಬೇರ್ಪಡಿಸಲಾಗುತ್ತದೆ. ಸಮುದ್ರದ ಉಪ್ಪಿನಲ್ಲಿರುವ ಹತ್ತಕ್ಕೂ ಹೆಚ್ಚು ಖನಿಜಾಂಶಗಳು ನಾಶವಾಗುವುದರಿಂದ ದೇಹಕ್ಕೆ ಅಯೋಡಿನ್ ಉಪ್ಪಿನಿಂದ ಆಗುವ ಲಾಭಕ್ಕಿಂತ ಹತ್ತುಪಟ್ಟು ಅಧಿಕ ನಷ್ಟವಾಗುತ್ತದೆ.

ಅಯೋಡಿನ್ ಬೇಡವೇ ಬೇಡ

ಉಪ್ಪಿಗೆ ಅಯೋಡಿನ್ ಸೇರಿಸಲೇಬಾರದು ಎನ್ನುವ ನೂರಕ್ಕೂ ಹೆಚ್ಚು ಸಂಸ್ಥೆಗಳು ದೇಶದಾದ್ಯಂತ ಹೋರಾಡುತ್ತಿವೆ. ಅಯೋಡಿನ್ ಬೆರೆಸಿದ ಉಪ್ಪನ್ನೇ ತಿನ್ನಬೇಕೆಂದು ಕಡ್ಡಾಯ ಮಾಡುವುದು ನಮ್ಮ ಮೂಲಭೂತ ಹಕ್ಕನ್ನೇ ಕಸಿದುಕೊಂಡಂತೆ ಎಂದು ಮುಂಬೈನ ಪೋಷಕಾಂಶ ತಜ್ಞ ಅಶೋಕ್ ಜೈಸಿಂಘಾನಿಯಾ ಸುಪ್ರೀಂ ಕೋರ್ಟಿನಲ್ಲಿ ದಾವೇ ಹೂಡಿದ್ದಾರೆ. ನಮ್ಮ ಸಹಜ ಆಹಾರದಲ್ಲೇ ಸಾಕಷ್ಟು ಅಯೋಡಿನ್ ಇದೆ. ಮತ್ತೆ ಮತ್ತೆ ಅಯೋಡಿನ್ ಸೇವನೆಯಿಂದ ಬೇರೆ ರೀತಿಯ ಕಾಯಿಲೆಗಳು ಬರಬಹುದು. ಅದರಲ್ಲಿ ಮುಖ್ಯವಾದದು ಹೈಪರ್ ಥೈರಾಯ್ಡಿಸಮ್. ಉಳಿದಂತೆ ಅತಿಸಾರ, ಸಂಧಿವಾತ, ಉಸಿರಾಟದ ಸಮಸ್ಯೆ. ಮೂತ್ರಕೋಶದ ಕಲ್ಲು. ಅಶೋಕ್ ಜೈಸಿಂಘಾನಿಯಾ ಇಂಥ ಮೂವತ್ತು ಕಾಯಿಲೆಗಳ ಪಟ್ಟಿಯನ್ನೇ ಕೊಡುತ್ತಾರೆ.

ಅಯೋಡಿನ್ ದೇಹಕ್ಕೆ ಹೆಚ್ಚಾದರೆ ಮೂತ್ರದ ಮೂಲಕ ಹೊರಹೋಗುತ್ತದೆ ಎಂದು ಉಡಾಫೆ ಮಾಡುವವರೂ ಇದ್ದಾರೆ. ಆದರೆ ಖುದ್ದಾಗಿ ಐಎಂಎ ದೃಢಪಡಿಸಿದ್ದೇನೆಂದರೆ, ಹೀಗೆ ಮೂತ್ರದ ಮೂಲಕ ಅಯೋಡಿನ್ ನಿರಂತರ ಹೋಗುತ್ತಿದ್ದರೆ ಮೂತ್ರಕೋಶ ದುರ್ಬಲವಾಗುತ್ತದೆ. ಅದನ್ನು ಸರಿಪಡಿಸಲು ವಿದೇಶಿ ಕಂಪೆನಿಗಳ ಔಷಧಗಳೇ ಬೇಕು.

ನಮ್ಮ ದೇಶದಲ್ಲಿ ಉಪ್ಪಿಗೆ ಸೇರಿಸುತ್ತಿರುವ ಪೊಟ್ಯಾಷಿಯಂ ಅಯೋಡೈಟ್ ಅತ್ಯಂತ ವಿಷಯುಕ್ತ ರಾಸಾಯನಿಕವೆಂದು ಕೇಂದ್ರ ಪರಿಸರ ಸಂರಕ್ಷಣಾ ಇಲಾಖೆ ಸರ್ಕಾರಕ್ಕೆ ತಿಳಿಸಿದೆ.  ದೇಹಕ್ಕೆ ಅಯೋಡಿನ್ ಬೇಕು, ಅಯೋಡೈಟ್ ಅಲ್ಲ. ಹೀಗಾಗಿ ಈಗ ತಯಾರಾಗುತ್ತಿರುವ ಉಪ್ಪಿನಿಂದ ದೇಹಕ್ಕೆ ವಿಷ ಸೇರುತ್ತದೆ ಎಂದೂ ತಿಳಿಸಿದೆ.

ನಮ್ಮ ದೇಹ ಏನನ್ನೇ ಹೀರಿಕೊಳ್ಳುವುದಾದರೂ ಅದು ಸಾವಯವ ದ್ರವರೂಪಿಯಾಗಿರಬೇಕು. ಸಸ್ಯಮೂಲವೋ, ಪ್ರಾಣಿಮೂಲವೋ ಆಗಿರಬೇಕು. ನೇರವಾಗಿ ಖನಿಜರೂಪದಲ್ಲಿ ನೀಡುವುದರಿಂದ ಅಪಾಯ ಹೆಚ್ಚು. ಹೆಚ್ಚಿನಬಾರಿ ನಿರರ್ಥಕ. ಕಬ್ಬಿಣದ ಕೊರತೆಯಿದ್ದವರು ಕಬ್ಬಿಣದ ಪುಡಿ ತಿಂದಂತೆ! ಅದರಲ್ಲೂ ರಾಸಾಯನಿಕಗಳ ರೂಪದಲ್ಲಿರುವ ಖನಿಜಗಳ ಸೇವನೆ ಇನ್ನಷ್ಟು ಅಪಾಯಕಾರಿ.

ಉಪ್ಪಿಗೆ ಸೇರಿಸಿದ ಅಯೋಡಿನ್ ಅನ್ನು ತರಕಾರಿಯೊಂದಿಗೆ ಬೇಯಿಸಿದಾಗ, ಹಿಟ್ಟಿಗೆ ಹಾಕಿ ಕರಿದರೆ ಹೀಗೆ ಏನೆಲ್ಲಾ ಮಾಡುವುದರಿಂದಲೂ ಆವಿಯಾಗಿ ಹಾರಿಹೋಗುತ್ತದೆ. ಒಂದೊಮ್ಮೆ ಹೀಗೆಲ್ಲಾ ನಾಶವಾಗದಂತೆ ಕಂಪೆನಿಗಳು ಜಾಸ್ತಿ ಪ್ರಮಾಣದ ಅಯೋಡಿನ್ ಸೇರ್ಪಡೆ ಮಾಡಿದರೆ ಅದರಿಂದಾಗುವ ಅನಾಹುತಗಳ ರೀತಿಯೇ ಬೇರೆ.

ದೇಶದ ಎಲ್ಲರೂ ಕಡ್ಡಾಯವಾಗಿ ಅಯೋಡಿನ್ ತಿನ್ನಬೇಕೆಂಬುದು ವೈಜ್ಞಾನಿಕ ಅಲ್ಲ. ಹಾಗೇ ಅಯೋಡಿನ್-ರಹಿತ ಉಪ್ಪು ಮಾರಲೇಬಾರದೆನ್ನುವುದೂ ಸರಿಯಲ್ಲ. ಅತ್ಯಂತ ಮುಂದುವರಿದ ಜಪಾನಿನಲ್ಲಿ ಅಯೋಡಿನ್ ಹೆಚ್ಚಳದಿಂದ ಉಂಟಾಗುವ ಕಾಯಿಲೆಗಳನ್ನು ನಿವಾರಿಸಲು ಇನ್ನೂ ಆಗಿಲ್ಲ.

ಪೌಷ್ಟಿಕ ಆಹಾರ ಸೇವಿಸುವವರು ದಿನನಿತ್ಯ ಕನಿಷ್ಠ 21 ಗ್ರಾಂ ಉಪ್ಪನ್ನು ಹೊಂದುತ್ತಾರೆ. ಸಮುದ್ರದ ಆಹಾರ ಸೇವಿಸುವವರು 100 ಗ್ರಾಂವರೆಗೂ ಉಪ್ಪನ್ನು ಹೊಂದುತ್ತಾರೆ. ಹೀಗೆ ದಿನಕ್ಕೆ 100ರಿಂದ 400 ಮೈಕ್ರೋ ಗ್ರಾಂವರೆಗೆ ಅಯೋಡಿನ್ ದೊರೆಯುತ್ತದೆ. ಇವರಿಗೂ ಅಯೋಡಿನ್ ಉಪ್ಪು ಕಡ್ಡಾಯ ಸರಿಯೇ?

ನಮಗ್ಯಾವ ಉಪ್ಪು ಬೇಕೆನ್ನುವ ತೀರ್ಮಾನ ನಮ್ಮದೇ. ಕಾರಣ ನಮ್ಮದು ಪ್ರಜಾಪ್ರಭುತ್ವ ದೇಶ. ಅವೈಜ್ಞಾನಿಕವಾದ ಈ ಕಾನೂನಿನ ವಿರುದ್ಧ ಹೋರಾಡುವ ಹಕ್ಕು ಇದೆ. ಕಾನೂನು ಭಂಗ ಮಾಡುವ ಹಕ್ಕಿದೆ. ಅಯೋಡಿನ್ ಉಪ್ಪನ್ನು ತಿರಸ್ಕರಿಸುವ ದಾರಿಯೂ ಇದೆ. ದೇಸೀ ಉಪ್ಪು ಬೇಕೆಂದು ಚಳವಳಿಯನ್ನೂ ಮಾಡಬಹುದು. ಹೋರಾಡಲು ನ್ಯಾಯಾಲಯವೊಂದೇ ಅಲ್ಲ, ಗ್ರಾಹಕರ ವೇದಿಕೆಗಳೂ ಇವೆ.

ಅದೆಲ್ಲಕ್ಕಿಂತಲೂ ಹೆಚ್ಚಾಗಿ, ಮುಂದಿನ ಸಾರಿ ಅಂಗಡಿಗೆ ಹೋದಾಗ ಯಾವ ಉಪ್ಪು ಕೊಳ್ಳಬೇಕೆಂದು ಒಮ್ಮೆ ಯೋಚಿಸಿ, ನಿರ್ಧರಿಸಿ.

ಉಪ್ಪು… ಪರೀಕ್ಷೆ

ಇಂದು ಪ್ಯಾಕೆಟ್ ಉಪ್ಪಿನ ಬಳಕೆ ವಿಪರೀತ. ನಗರ ಪ್ರದೇಶದ ಗ್ರಾಹಕರಂತೂ ಬ್ರಾಂಡೆಡ್ ಉಪ್ಪು ಪ್ಯಾಕೆಟ್ ಹಿಂದೆ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ನವದೆಹಲಿಯ ಕನ್ಸೂಮರ್ ವಾಯ್ಸ್ ಸಂಘಟನೆ 2009-2010ರಲ್ಲಿ ಮಾರುಕಟ್ಟೆಯಲ್ಲಿರುವ ಉಪ್ಪುಗಳ ಪರೀಕ್ಷೆ ನಡೆಸಿತು.

ಇಸವಿ 1973ರಲ್ಲಿ ಬಿ.ಐ.ಎಸ್. ಉಪ್ಪಿನ ಜೊತೆ ಅಯೋಡಿನ್ ಬೆರೆಸುವ ಮಾನದಂಡವನ್ನು ಸೂಚಿಸಿತು. ಆ ಪ್ರಕಾರ ಗ್ರಾಹಕನ ಮಟ್ಟದಲ್ಲಿ 15 ಪಿಪಿಎಮ್. ಇರಬೇಕೆಂದು ಸೂಚಿಸಿತು.  ಹೀಗೆ ಸಫೋಲಾದಲ್ಲಿ ಶೇಕಡಾ 52.85, ಟಾಟಾ ಸಾಲ್ಟ್- ನಲ್ಲಿ ಶೇಕಡಾ 39.36 ಹಾಗೂ ಗುಡ್ ಹೆಲ್ತ್-ನಲ್ಲಿ ಶೇಕಡಾ 39.03 ಅಯೋಡಿನ್ ಇದೆ.

ಸ್ಥಳೀಯ ತಯಾರಿಕೆಯಾದ ಸೀಮಾದಲ್ಲಿ ಬರೀ ಶೇಕಡಾ 1.05 ಅಯೋಡಿನ್ ಇದ್ದರೆ, ತಾಜಾದಲ್ಲಿ ಅಯೋಡಿನ್ನಿನ ಲವಲೇಶವೂ ಇಲ್ಲ.

ನಿಜಕ್ಕೂ ಉಪ್ಪಿನ ಗುಣಮಟ್ಟ ನಿರ್ಧಾರವಾಗುವುದು ಸೋಡಿಯಂ ಕ್ಲೋರೈಡ್ನಿಂದಾಗಿ, ಸಫೋಲಾದಲ್ಲಿ ಶೇಕಡಾ 94.8 ಸೋಡಿಯಂ ಕ್ಲೋರೈಡ್ ಇದ್ದರೆ, ತಾಜಾ ಹಾಗೂ ಸೀಮಾದಲ್ಲಿ ಅನುಕ್ರಮವಾಗಿ ಶೇಕಡಾ 3.38 ಮತ್ತು 9.06ರಷ್ಟಿದೆ. ಗುಣಮಟ್ಟದ ನಿಯಮದಂತೆ ಶೇಕಡಾ 96ರಷ್ಟು ಸೋಡಿಯಂ ಕ್ಲೋರೈಡ್ ಇರಲೇಬೇಕಿತ್ತು!

ಉಪ್ಪು ಥಂಡಿಯನ್ನು ಎಳೆದುಕೊಳ್ಳುತ್ತದೆ. ಹಾಗೆಂದು 12 ತಿಂಗಳ ಅವಧಿಯಲ್ಲಿ ಉಪ್ಪು ಶೇಕಡಾ 6ಕ್ಕಿಂತ ಹೆಚ್ಚಿನ ತೇವ ಹೀರಿಕೊಳ್ಳಬಾರದು. ಸ್ಥಳೀಯ ತಯಾರಿಕೆ ಸೀಮಾದ ಹೊರತಾಗಿ ‘ವಾಯ್ಸ್’ ಪರೀಕ್ಷಿಸಿದ ಉಳಿದ 12 ಬ್ರಾಂಡ್ಗಳು ಈ ಮಾನದಂಡದಲ್ಲಿ ಉತ್ತೀರ್ಣವಾಗಿದ್ದವು. ತೂಕ ಮತ್ತು ಅಳತೆ ಕಾಯ್ದೆ 1977ರ ಅನ್ವಯ ಒಂದು ಕಿಲೋಗ್ರಾಂ ಉಪ್ಪಿನ ಪ್ಯಾಕಿನಲ್ಲಿ ಶೇಕಡಾ 1.5ರ ವ್ಯತ್ಯಯಕ್ಕೆ ರಿಯಾಯ್ತಿ ಇದೆ. ‘ವಾಯ್ಸ್’ ಪರೀಕ್ಷೆ ಪ್ರಕಾರ ತಾಜಾ ಸಾಲ್ಟ್ ನ ಪ್ಯಾಕ್ ಒಂದು ಕಿಲೋಗ್ರಾಂ ಬದಲು 947 ಗ್ರಾಂ ಮಾತ್ರ!

ತೂಕದ ವಿಚಾರದಲ್ಲಿ ನಿರ್ಮಾ ಶುದ್ಧ, ಶಕ್ತಿಭೋಗ್, ಆಶೀರ್ವಾದ, ಕ್ಯಾಚ್, ಕ್ಯಾಪ್ಟನ್ ಕುಕ್, ಗುಡ್ ಹೆಲ್ತ್, ಸೂರ್ಯ, ಸಫೋಲಾಗಳದ್ದು ಮೋಸ ಇಲ್ಲ. ಇದೇ ಮಾತನ್ನು ಟೋಟಾ, ಟಾಟಾ ಸಾಲ್ಟ್, ಮನುಶುದ್ಧ, ಸೀಮಾ ಬಗ್ಗೆ ಹೇಳಲಾಗದು. ಬೆಲೆ ಬಗ್ಗೆ ನೋಡಿದರೆ ಎಲ್ಲವೂ 8- 9 ರೂಪಾಯಿ ಮಾತ್ರ. ಪೋರ್ಟಿಫೈಡ್ ಎನ್ನುವ ಘೋಷಣೆಯ ಸಫೋಲಾ, ವಿಶಿಷ್ಟ ಕಂಟೈನರಲ್ಲಿ, ಪೌಚ್ಗೆ ಕಿಲೋಗ್ರಾಂಗೆ 16 ರೂಪಾಯಿ ದರ. ‘ವಾಯ್ಸ್’ ಪ್ರಯೋಗಾಲಯದಿಂದ ಹೊರಬಿದ್ದ ಮಾಹಿತಿಯಂತೆ ಇವುಗಳಲ್ಲಿ ವಿಶೇಷವೇನಿಲ್ಲ!

ಪ್ರತಿಷ್ಠಿತ ಹೆಸರಿನ ಟಾಟಾ ಸಾಲ್ಟ್ಕಿನ ಪ್ಯಾಕಿಂಗ್ ಅನುಕರಿಸಿ ಗ್ರಾಹಕರನ್ನು ಯಾಮಾರಿಸುವುದೇ ತಾಜಾ ಸಾಲ್ಟ್ ಸ್ಥಳೀಯ ಉಪ್ಪಿನ ತಯಾರಕರ ತಂತ್ರವಿರುವಂತಿದೆ. ಟಾಟಾ-ಎರಡನೇ ‘ಟಿ’ ಬದಲು ಇಲ್ಲಿ ‘ಜೆ’ ಇದೆ!

ಹಾಗೆಂದು ಸಾರಾಸಗಟಾಗಿ ಸ್ಥಳೀಯ ತಯಾರಿಕೆಗಳನ್ನು ತಳ್ಳಿಹಾಕುವಂತಿಲ್ಲ. ಒಟ್ಟಾರೆ ಪರೀಕ್ಷೆಯಲ್ಲಿ ಬ್ರಾಂಡ್ಗಳಾದ ನಿರ್ಮಾಶುದ್ಧ ಹಾಗೂ ಶಕ್ತಿಭೋಗ್ ಮೊದಲಿನೆರಡು ಸ್ಥಾನ ಪಡೆದಿವೆ.  ಮೂರನೇ ಸ್ಥಾನದಲ್ಲಿ ಸ್ಥಳೀಯ ತಯಾರಿಕೆ ಟೋಟಾ ಇದೆ. ಇದು ಆಶೀರ್ವಾದ, ಕ್ಯಾಪ್ಟನ್ ಕುಕ್, ಸಫೋಲಾಗಳನ್ನು ಹಿಂದಿಕ್ಕಿದೆ. ಬೆಲೆಯಲ್ಲೂ ಕಡಿಮೆ. ಉಳಿದವಕ್ಕೆಲ್ಲ 8-9 ರೂಪಾಯಿ. ಇದಕ್ಕೆ ಕೇವಲ ಐದೂವರೆ ರೂಪಾಯಿ!

ಆಶೀರ್ವಾದ, ಟಾಟಾ, ಕ್ಯಾಚ್, ಕ್ಯಾಪ್ಟನ್ ಕುಕ್, ಗುಡ್ ಹೆಲ್ತ್, ಸೂರ್ಯ, ಶುದ್ಧ, ಸಫೋಲಾ, ಸೀಮಾ, ತಾಜಾಗಳು ಅನುಕ್ರಮವಾಗಿ ನಾಲ್ಕರಿಂದ 13 ರೂಪಾಯಿವರೆಗಿವೆ.

ಲಾಭ ಯಾರಿಗೆ?

ಇಸವಿ 2005ರ ನವೆಂಬರಿನಲ್ಲಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಅಯೋಡಿನ್ ಬೆರೆಸದ ಉಪ್ಪುಗಳ ಮಾರಾಟ, ಸೇವನೆಯನ್ನು ನಿಷೇಧಿಸಿತು. ಉಪ್ಪು ತಯಾರಕ ದೊಡ್ಡ ಕಂಪೆನಿಗಳ ‘ಆರೋಗ್ಯ’ ಸುಧಾರಿಸಿತು!

ತಯಾರಕರು 50 ಪೈಸೆಗೆ ಕಿಲೋಗ್ರಾಂನಂತೆ ಕಚ್ಚಾ ಉಪ್ಪನ್ನು ಖರೀದಿಸುತ್ತಾರೆ. ಅದಕ್ಕೆ ಕೆ-103-ಪೊಟ್ಯಾಷಿಯಂ ಅಯೋಡೇಟ್ ಎಂಬ ರಾಸಾಯನಿಕ ಬೆರೆಸಿ ಅಯೋಡೈಸ್ಡ್ ಮಾಡುತ್ತಾರೆ. ಪೊಟ್ಯಾಷಿಯಂ ಅಯೋಡೇಟ್ ಬೆಲೆ ಕಿಲೋಗ್ರಾಂಗೆ 10 ಪೈಸೆ! ಈ ಉಪ್ಪಿನ ಮಾರಾಟ ಬೆಲೆ 8-9 ರೂಪಾಯಿ. ಈ ಉದ್ಯಮದ ವಾರ್ಷಿಕ ಲಾಭ 1,200 ಕೋಟಿಗೂ ಹೆಚ್ಚು!

ಉಪ್ಪಿನ ಸತ್ಯಾಗ್ರಹ

ಇಸವಿ 1859ರಲ್ಲಿ ಬ್ರಿಟಿಷರು ಉಪ್ಪು ಕಾಯ್ದೆ ರಚಿಸಿ, ಇಸವಿ 1929ರಿಂದ ಸ್ಥಳೀಯ ಉಪ್ಪು ತಯಾರಿಕೆಯನ್ನು ನಿಷೇಧಿಸಿದರು. ಗಾಂಧೀಜಿ, ಮಾರ್ಚ್ 12ರಿಂದ ಏಪ್ರಿಲ್ 6ರರವರೆಗೆ ದಂಡಿಯಾತ್ರೆ ನಡೆಸಿ ಸರ್ಕಾರವನ್ನು ಧಿಕ್ಕರಿಸಿ ‘ಉಪ್ಪಿನ ಸತ್ಯಾಗ್ರಹ’ವನ್ನು ಯಶಸ್ವಿಗೊಳಿಸಿದರು.