ಶರಣ ಸಂತ ಸೂಫಿ ಪಂಥಗಳಂತೆ ಅವಧೂತ ಪರಂಪರೆಯೊಂದು ಕರ್ನಾಟಕದಲ್ಲಿ ಬೆಳೆದು ಬಂದಿದೆ. ಅವಧೂತ ಎಂದರೆ ಸಂಸಾರ ಬಂಧನದಿಂದ ದೂರವಾಗಿ ಆತ್ಮನಲ್ಲಿಯೇ ವಿಹರಿಸುವವನು, ವರ್ಣಾಶ್ರಮಗಳನ್ನು ಮೀರಿದವನು, ಗುರುವಿನ ಮೂಲಕ ಸದ್ಗತಿಯನ್ನು ಹೊಂದುವವನು ಎಂಬಿತ್ಯಾದಿ ಅರ್ಥಗಳಿವೆ. ಈ ಪರಂಪರೆಗೆ ಸಾವಿರ ವರ್ಷಗಳ ಇತಿಹಾಸವಿದ್ದರೂ, ಸಾಹಿತ್ಯದ ಮೂಲಕ ಅದು ಹೆಚ್ಚು ಜನಪ್ರಿಯಗೊಂಡದ್ದು ೧೭ ಮತ್ತು ೧೮ನೆಯ ಶತಮಾನಗಳಲ್ಲಿ, ಮಹಲಿಂಗರಂಗ (೧೬೭೫), ನಿರಂಜನಾವಧೂತ (೧೭೦೦), ಚಿದಾನಂದಾವಧೂತ (೧೭೨೫), ಅವಧೂತ ಶಿವಯೋಗಿ (೧೭೫೦), ನಿರಂಜನಾರ್ಯ (೧೭೫೦), ನಿತ್ಯಾನಂದಾವಧೂತ (೧೮೦೦), ಪೂರ್ಣಾನಂದ ಅವಧೂತ ಶಿವಯೋಗಿ – ಇನ್ನೂ ಮೊದಲಾದವರು ತಮ್ಮ ಆಳವಾದ ಚಿಂತನೆ, ತರ್ಕಬದ್ಧವಾದ ಸಿದ್ಧಾಂತಳಿಂದ ಆಧ್ಯಾತ್ಮ, ವೇದಾಂತ ವಿಷಯಗಳನ್ನೊಳಗೊಂಡ ವಿಶಿಷ್ಟ ಕೃತಿಗಳನ್ನು ರಚಿಸಿದ್ದಾರೆ. ಆ ಮೂಲಕ ಸಮಾಜದಲ್ಲಿ ಜನಜಾಗೃತಿಯನ್ನುಂಟು ಮಾಡುವಲ್ಲಿ ಇವರ ಪಾತ್ರ ಗಮನಾರ್ಹವಾಗಿದೆ.

ಚಿದಾನಂದಾವಧೂತರು ಅವಧೂತ ಪರಂಪರೆಯಲ್ಲಿಯೇ ಅತ್ಯಂತ ಪ್ರಮುಖರೆನಿಸುತ್ತಾರೆ. ಜ್ಞಾನಸಿಂಧು, ದೇವಿ ಮಹಾತ್ಮೆ, ಕಥಾಸಾಗರ, ಚಿದಾನಂದ ಲಹರಿ, ಚಿದಾನಂದ ರಗಳೆ, ತತ್ವ ಚಿಂತಾಮಣಿ ಹೀಗೆ ಹತ್ತಾರು ವೈವಿಧ್ಯಮಯವಾದ ಕೃತಿಗಳು ಇವರಿಂದ ರಚನೆಗೊಂಡಿವೆ. ಅವಧೂತ ಸಾಹಿತ್ಯದ ಸಮೃದ್ಧಿಗೆ ಕಾರಣರಾದ ಚಿದಾನಂದಾವಧೂತರನ್ನು “ಕವಿಗಳಲ್ಲಿ ಅವಧೂತರೆಂದೂ ಅವಧೂತರಲ್ಲಿ ಕವಿಗಳೆಂದೂ” ಕರೆಯಬಹುದು. ಅಷ್ಟರ ಮಟ್ಟಿಗೆ ಇವರ ಕೃತಿಗಳು ಸಂಖ್ಯೆ ಮತ್ತು ಸತ್ವದಿಂದ ಅಧಿಕ ಪ್ರಮಾಣದಲ್ಲಿವೆ. ಒಟ್ಟು ಈತನ ಜೀವನ, ವ್ಯಕ್ತಿ ವೈಶಿಷ್ಟ್ಯ ಹಾಗೂ ಸಾಧನೆಗಳನ್ನು ತಿಳಿಸಿಕೊಡುವ ಒಂದು ದೇಶೀ ಕಾವ್ಯವಾಗಿದೆ, ಅಯ್ಯಪ್ಪ ಕವಿಯ ಚಿದಾನಂದಾವಧೂತ ಚಾರಿತ್ರ.

[1]

ಕವಿಯ ಇತಿವೃತ್ತ

ಚಿದಾನಂದಾವಧೂತ ಚಾರಿತ್ರದ ಕರ್ತೃ ಅಯ್ಯಪ್ಪ. ಈತ ತನ್ನ ವೈಯಕ್ತಿಕ ವಿವರಗಳನ್ನು ಕೆಲವೇ ಮಾತುಗಳಲ್ಲಿ ಹೇಳಿರುವನು.

            ಹಿರಿಯಹಟ್ಟಿ ಕುಲಕರಣಿ ರುಗ್ವೇದಿ ಅತ್ರಿಋಷಿಯ
ರಿರುವ ಶಾಂಡಲ್ಯಗೋತ್ರದ
ಪರಮ ತಿಳವಿ ಕುಳ್ಳ ಪೊಂಪಣ್ಣನುದರದಲ್ಲಿ
ಉದ್ಭವಿಸಿದಯ್ಯಪ್ಪನು ||
  (೧ – ೧೧)

ಒಂದೇ ಪದ್ಯದಲ್ಲಿ ತನ್ನ ಇತಿವೃತ್ತವನ್ನು ಹೇಳಿ ಮುಗಿಸುತ್ತಾನೆ ಕವಿ. ಕರ್ನಾಟಕಾಂಧ್ರ (ಬಳ್ಳಾರಿ ಜಿಲ್ಲಾ ಶಿರಗುಪ್ಪ ತಾಲ್ಲೂಕು) ಗಡಿಭಾಗದ ಆದವಾನಿ ಸಮೀಪವಿರುವ ಹಿರಿಯಹಟ್ಟಿ ಕವಿಯ ಊರು. ಕುಲಕರ್ಣಿ ಪೊಂಪಣ್ಣ ಈತನ ತಂದೆ. ಸಾಧು ಸರ್ವರ ತನಯ (೭ – ೧), ಸುಸ್ಸೀಲ (೩ – ೧೦೮), ತರಳ ಅಯ್ಯಪ್ಪ (೪ – ೨) ಎಂದು ಕವಿ ತನ್ನನ್ನು ಕರೆದುಕೊಂಡಿದ್ದನ್ನು ಬಿಟ್ಟರೆ ಮತ್ತಾವುದೇ ವಿಷಯವನ್ನು ಹೇಳಿಲ್ಲ.

ಗುಣಹೀನರಾದವರಿಗೆ, ಗುರುಪಾದ ದೂರರಿಗೆ, ಪತ್ನಿಯನ್ನು ಬಡಿಯುವವನಿಗೆ, ಕೊಟ್ಟ ಗಂಟು ನುಂಗುವವರಿಗೆ, ಸತಿಗೆ ಆಜ್ಞೆ ಮಾಡುವವನಿಗೆ, ಸರ್ವರನ್ನು ಬೊಗಳುತಿಹ ಚ್ಯೂತನಿಗೆ, ಜುಟ್ಟು ಜನಿವಾರ ಘಳಿಗೆ ಘಳಿಗೆಗೊಮ್ಮೆ ಹರಿದುಕೊಂಬುವವನಿಗೆ ಸತ್ಯ ಚರಿತೆಯಾದ ಚಿದಾನಂದಾವಧೂತ ಚಾರಿತ್ರವ ಹೇಳಲಾಗದು ಎಂದು ಹೇಳುವಲ್ಲಿ ಕವಿಯ ನಿಷ್ಠುರ ಸ್ವಭಾವವನ್ನು ಅರಿತುಕೊಳ್ಳಬಹುದು.

ಕೃತಿ ಸ್ವರೂಪ

೭ ಸಂಧಿ, ೯೭೨ ಸಾಂಗತ್ಯ ಪದ್ಯಗಳನ್ನೊಳಗೊಂಡ ದೀರ್ಘಕಾವ್ಯವಾಗಿದ್ದು, ಅವುಗಳ ವಿವರ ಇಂತಿದೆ:

ಸಂಧಿ ವಿಷಯ ಪದಸಂಖ್ಯೆ
ಬಾಲ್ಯ ವಿವರ ೧೪೫
ಕ್ಷೇತ್ರ ಸಂಚಾರ ೧೩೬
ಸದ್ಗುರು ಕಟಾಕ್ಷ ೧೦೯
ಹಠಯೋಗ ೦೭೪
ರಾಜಯೋಗ ೧೧೨
ಕಾಶಿಯಾತ್ರೆ ೧೮೦
ಅವಧೂತ ಚಾರಿತ್ರ ೨೧೫

ಹೀಗೆ ಏಳು ಸಂಧಿಗಳಲ್ಲಿ ಚಿದಾನಂದಾವಧೂತರ ಜೀವನ ಪಥವನ್ನು ಸವಿವರವಾಗಿ ಕವಿ ನಿರೂಪಿಸಿದ್ದಾನೆ. ಪ್ರತಿ ಸಂಧಿಯ ಆರಂಭದಲ್ಲಿ ರಾಗ-ತಾಳಗಳ ನಿರ್ದೇಶನವಿದ್ದು, ತಮ್ಮಿಚ್ಛೆ ರಾಗ, ರೂಪಕ ತಾಳಗಳನ್ನು ಮಾತ್ರ ಎಲ್ಲ ಸಂಧಿಗಳಿಗೂ ಬಳಸಲಾಗಿದೆ. ನಂತರದಲ್ಲಿ –

            ಕೇಳಿಜನ ಸರ್ವವೆಲ್ಲ ಚಿದಾನಂದ ಅವಧೂತ
ಲೋಲರಾಜಯೋಗಿ ಚರಿತವಾ ||

ಎಂಬ ಪಲ್ಲವಿ ಬರುತ್ತದೆ. ಇದು ಪ್ರತಿಸಂಧಿಯ ಆರಂಭದಲ್ಲಿಯೂ ಪುನರಾವರ್ತನೆಗೊಳ್ಳುತ್ತದೆ. ಸಂಧಿಗಳ ಕೊನೆಯಲ್ಲಿ “ಇತಿಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ ಶ್ರೀ ಚಿದಾನಂದಾವಧೂತ ಸದ್ಗುರುವರ್ಯ ಚರಣ ಪದ್ಮದ್ವಿರೇಭ ಅಯ್ಯಪ್ಪ ವಿರಚಿತ ಚಿದಾನಂದ ಅವಧೂತ ಚಾರಿತ್ರದಲ್ಲಿ…..” ಎಂದು ಕವಿ ಹೇಳಿಕೊಂಡಿದ್ದಾನೆ. ಪ್ರತಿ ಪದ್ಯವೂ ನಾಲ್ಕು ಪಾದಗಳನ್ನೊಳಗೊಂಡಿದೆ. ಎರಡು ಮತ್ತು ನಾಲ್ಕನೆಯ ಪಾದಗಳ ಕೊನೆಯಲ್ಲಿ “ಕೇಳಿ ಜನ” ಎಂಬುದು ಪುನರಾವರ್ತನೆಯಾಗುತ್ತದೆ. ಸಂಧಿಗಳ ಕೊನೆಗೆ ಅಂಬಾದೇವಿ ಶಾಂಭವಿ ಕುರಿತ ಸ್ತುತಿ ರೂಪವಾದ ಮಂಗಳಾರತಿ ಪದಗಳಿವೆ.

ಕಥಾಸಾರ

ಅವಧೂತನಾಗಿ ಹುಟ್ಟಿ ಅವಧೂತನಾಗಿ ಬೆಳೆದು ಅವಧೂತನಾಗಿಯೇ ಮರಣವನ್ನಪಿದ ಚಿದಾನಂದಾವಧೂತರನ್ನು ಕುರಿತು ಹುಟ್ಟಿರುವ ಏಕೈಕೆ ಕೃತಿಯಿದು. ಕವಿ ಅಯ್ಯಪ್ಪನು ಚಿದಾನಂದಾವಧೂತರ ಶಿಷ್ಯ ಬಳಗದಲ್ಲಿದ್ದವನು. ಈ ಕಾರಣವಾಗಿ ಈ ಚರಿತ್ರೆಗೊಂದು ಪರಿಪೂರ್ಣತೆ ಪ್ರಾಪ್ತವಾಗಿದೆ. ಏಳು ಹಂತಗಳಲ್ಲಿ ನಿರೂಪಗೊಂಡ ಈತನ ಜೀವನ ಚರಿತ್ರೆ ಹೀಗಿದೆ:

ಸಂಧಿ : ೧ ಬಾಲ್ಯ ವಿವರ

ಆದವಾನಿ ಸಮೀಪವಿರುವ ಹಿರಿಯ ಹರಿವಾಣ ಗ್ರಾಮದಲ್ಲಿ ಲಕ್ಷ್ಮಿಪತಿ ಮತ್ತು ಅನ್ನಮ್ಮ ದಂಪತಿಗಳಿದ್ದರು. ಶ್ರೀ ನರಸಿಂಹನ ಪರಮಭಕ್ತನಾದ ಇವರಿಗೆ ಗಂಡು ಮಗುವು ಜನಿಸಿತು. ಆತನ ಹೆಸರು ಝಂಕಪ್ಪ. ತಂದೆ – ತಾಯಿಗಳ ಪ್ರೀತಿ ವಾತ್ಸಲ್ಯದಿಂದ ಬೆಳೆದ ಈತ ನಾಲ್ಕೇ ವರ್ಷಗಳಲ್ಲಿ ವೇದ, ಉಪನಿಷತ್ತು, ಮಂತ್ರಗಳನ್ನು ಅಣ್ಣ ನರಸಪ್ಪನಿಂದ ಕಲಿತುಕೊಂಡನು.ಮುಂದೆ ಕೆಲವು ತಿಂಗಳುಗಳ ತರುವಾಯ ಲಕ್ಷ್ಮಿ ಪತಿಯ ಅಣ್ಣ ತಮ್ಮಂದಿರು ಆಸ್ತಿಯನ್ನು  ಪಾಲುಮಾಡಿಕೊಂಡು ಪ್ರತ್ಯೇಕವಾಗಿ ವಾಸಮಾಡಹತ್ತಿದರು. ಇದರಿಂದ ತೊಂದರೆಗೊಳಗಾದ ಲಕ್ಷ್ಮಿಪತಿ  ತನ್ನ ಹೆಂಡತಿ ಮಕ್ಕಳೊಂದಿಗೆ ಉಪಜೀವನಕ್ಕಾಗಿ ಗಂಗಾವತಿ ಸಮೀಪದ ಹೆಬ್ಬಾಳ ಗ್ರಾಮಕ್ಕೆ ಬಂದು ನೆಲೆಸುತ್ತಾರೆ.

ತಂದೆ ತಾಯಿಗಳು ತೀರಿಕೊಂಡ ನಂತರ ಗಂಗಾವತಿಯ ಪದಕಿ ಪಾರುಪತ್ಯಗಾರ ಮನೆತನದ ನಾಗಪ್ಪನ ಮಗಳಾದ ಪಂಪಕ್ಕನ ಆಶ್ರಯದಲ್ಲಿ ಝಂಕಪ್ಪ ಬೆಳೆಯತೊಡಗುತ್ತಾನೆ. ಒಂದು ದಿನ ತುಂಗಭದ್ರಾ ನದಿಗೆ ಸ್ನಾನಕ್ಕೆಂದು ಹೋದಾಗ ಶ್ರೀದೇವಿಯು  ಪಂಪಕ್ಕನ ರೂಪದಲ್ಲಿ ಬಂದು “ನೀನು ಇನ್ನು ಹೆಚ್ಚು ವೇಳೆಗಳೆಯದೆ ಅಯೋಧ್ಯೆಯಲ್ಲಿರುವ ಮಹಾಜ್ಞಾನಿ ಸದ್ಗುರು ಕೊಂಡಪ್ಪನಿಂದ ಮುಕ್ತಿಯನ್ನು ಪಡೆ” ಎಂದು ಉಪದೇಶವಿತ್ತಳು. ಆಕೆಯ ಅಜ್ಞಾನುಸಾರ ಝಂಕಪ್ಪನು ಅಯೋಧ್ಯೆಗೆ ಬಂದನು. ಗುರು ಕೊಂಡಪ್ಪನು “ನೀನು ಸುದೈವದ ಮೇಲೆ ಜ್ಞಾನೋದಯದ ಅವಲಂಬನವಿದೆ. ಧರ್ಮವು ಜೀವನದಲ್ಲಿ ಬರೆಯದೆ ಜೀವನವು ಸುಂದರವಾಗುವಂತಿಲ್ಲ” ಎಂದು ಬೋಧಿಸಿದನು. ಸದ್ಗುರುವಿನ ಅಪೇಕ್ಷೆಯಂತೆ ಝಂಕಪ್ಪನು ನಯ- ವಿನಯ, ಭಯ – ಭಕ್ತಿ, ಶ್ರದ್ಧೆ – ನಿಷ್ಠೆಗಳಿಂದ ಗುರು ಸೇವೆಯಲ್ಲಿ ಕಾರ್ಯತತ್ಪರನಾದನು.

ಸಂಧಿ : ೨ ಕ್ಷೇತ್ರ ಸಂಚಾರ

ಝಂಕಪ್ಪನ ಗುರುಸೇವಾ ಮನೋಭಾವದ ಕಾರ್ಯವೈಖರಿಯನ್ನು ಗಮನಿಸಿದ  ಕೊಂಡಪ್ಪನು ಈತನನ್ನು ‘ಚಿದಾನಂದ’ನೆಂದು ಕರೆದನು. ಗುರುವಿನ ಮಾತಿನಂತೆ ಎಲ್ಲ ಭಕ್ತಾದಿಗಳು ಅದೇ ಹೆಸರಿನಿಂದ ಕರೆಯಹತ್ತಿದರು. ಒಂದು ದಿನ “ಮಗೂ. ಚಿದಾನಂದ, ಇನ್ನು ಮೇಲೆ ನೀನು ಕೇವಲ ನನ್ನ ಹತ್ತಿರವಿದ್ದುಕೊಂಡು ಕಾಲಹರಣ ಮಾಡುವುದಕ್ಕಿಂತ ಪುಣ್ಯಕ್ಷೇತ್ರಗಳಿಗೆ ಹೋಗಿ ಬಾ” ಎಂದು ಗುರು ಆದೇಶವಿತ್ತನು. ಅದರನ್ವಯ ಚಿದಾನಂದರು ಅಯೋಧ್ಯೆಯಿಂದ ಕ್ಷೇತ್ರ ಸಂಚಾರವನ್ನು ಕೈಗೊಂಡರು.

ಅಲಂಪುರಿಯ ಜೋಗಳಾಂಬ, ಶ್ರೀಶೈಲ ಪರ್ವತದ ಮಲ್ಲಿಕಾರ್ಜುನ, ಅಹೋಬಲದ ನಾರಸಿಂಹ, ವೇಮುಲವಾಡದ ರಾಜೇಶ್ವರಿ, ರಾಚೋಟಿಯ ವೀರಭದ್ರೇಶ್ವರ, ತಿರುಪತಿಯ ವೆಂಕಟೇಶ್ವರ, ಕಂಚಿಯ ಕಾಮಾಕ್ಷಿ, ಮಧುರೆ ಮೀನಾಕ್ಷಿ, ತಿರುಚನಾಪಳ್ಳಿಯ ರಂಗನಾಯಕ, ಉಡಪಿಯ ಶ್ರೀ ಕೃಷ್ಣ, ಕೋಟೇಶ್ವರ, ಗೋಕರ್ಣ, ಕೊಲ್ಲಾಪುರದ ಮಹಾಲಕ್ಷ್ಮಿ, ಮೈಲಾರ, ಕಾಶಿ, ಹರಿದ್ವಾರ, ಕೇದಾರ, ಶೃಂಗೇರಿ ಶಾರದೆ ಹೀಗೆ ಹತ್ತು ಹಲವು ತೀರ್ಥಕ್ಷೇತ್ರ, ಪುಣ್ಯಕ್ಷೇತ್ರಗಳಿಗೆ ದರ್ಶನವಿತ್ತು ಪಂಪಾಕ್ಷೇತ್ರಕ್ಕೆ ಬರುತ್ತಾರೆ. ಸರ್ವಕ್ಷೇತ್ರಗಳ ದರ್ಶನ ಮಹಿಮೆಗಳನ್ನು ಸವಿಸ್ತಾರವಾಗಿ ಗುರು ಕೊಂಡಪ್ಪನಿಗೆ ಚಿದಾನಂದರು ವಿವರಿಸಿ ಹೇಳುತ್ತಾರೆ.

ಸಂಧಿ : ೩ ಸದ್ಗುರು ಕಟಾಕ್ಷ 

ಪಂಪಾಕ್ಷೇತ್ರದಿಂದ ಗುರುವಿನೊಂದಿಗೆ ಆಯೋಧ್ಯ ನಗರಕ್ಕೆ ಬಂದಾಗ ಭಕ್ತಾದಿಗಳೆಲ್ಲ ಇವರನ್ನು ಗೌರವಪೂರ್ವಕವಾಗಿ ಸ್ವಾಗತಿಸಿದರು. ಸುಕ್ಷೇತ್ರಗಳ ಮಹಿಮೆ, ಅಲ್ಲಿ ನಡೆದ ಆಶ್ಚರ್ಯಕರ ಘಟನೆಗಳನ್ನು ಸಮಾಧಾನದಿಂದ ಭಕ್ತಾದಿಗಳಿಗೆಲ್ಲ ತಿಳಿ ಹೇಳುವರು. ಎಲ್ಲ ಕ್ಷೇತ್ರಗಳಿಗಿಂತ ವಾಲುಗೊಂಡದ ಕ್ಷೇತ್ರವು ಅತ್ಯಂತ ಆಕರ್ಷಕವಾಗಿತ್ತು. ಅಲ್ಲಿರುವ ವೀರಮ್ಮ ಎಂಬ ಗುರುಭಕ್ತಳ ಅಚಲವಾದ ಶ್ರದ್ಧೆ, ಸದಾಚಾರಗಳು ಆ ಕ್ಷೇತ್ರದ ಕುರುಹುಗಳಂತಿದ್ದವು. ವೀರಮ್ಮನಂತೆ ಚಿದಾನಂದರು ಶ್ರೀ ಗುರುವಿನಲ್ಲಿ ವಿಶ್ವಾಸವಿಟ್ಟು, ಅಯೋಧ್ಯೆಯ ವಿರೂಪಾಕ್ಷೇಶ್ವರನ ದೇವಸ್ಥಾನದಲ್ಲಿ ಭಜನೆ, ಕೀರ್ತನೆ, ಶಾಸ್ತ್ರಗಳನ್ನು ಹೇಳುತ್ತಿದ್ದರು.

ಪುಟ್ಟಪ್ಪನೆಂಬ ವೈಶ್ಯನಿಂದ ಸಾಲ ಪಡೆದ ಘಟನೆ, ಕನಕಗಿರಿ ಪ್ರಾಂತದ ದಂಡನಾಯಕ ಜೋಗಿಯ ಅಯೋಧ್ಯಾ ನಗರದ ಮುತ್ತಿಗೆ, ಪಂಪಾಕ್ಷೇತ್ರದಲ್ಲಿ ಘಟಸರ್ಪದ ಮಹಿಮೆ, ಅಭ್ಯಂಗ ಸ್ನಾನಕ್ಕೆ ಬೇಕಾದ ತುಪ್ಪದ ಹುಡುಕಾಟ, ಅಂಜನಾದ್ರಿಯಲ್ಲಿ ಹೆಬ್ಬುಲಿಯ ಭೇಟಿ, ಸದ್ಗುರುವಿನ ಹಿತೋಪದೇಶ ಮುಂತಾದ ಸನ್ನಿವೇಶಗಳು ಚಿದಾನಂದರ ಶ್ರದ್ಧೆ, ನಿಷ್ಠೆ, ಅಚಲವಾದ ಭಕ್ತಿಯನ್ನು ಪರೀಕ್ಷಿಸುವಂತಿವೆ.

ಸಂಧಿ : ೪ ಹಠಯೋಗ

ಅಯೋಧ್ಯೆ ಗ್ರಾಮದ ನದಿ ದಂಡೆಯಲ್ಲಿರುವ ಅಶ್ವತ್ಥ ವೃಕ್ಷದ ಕಟ್ಟೆಯು ಯೋಗಾಭ್ಯಾಸಕ್ಕೆ ತುಂಬ ಪ್ರಶಸ್ತವಾದ ಸ್ಥಳ. ಅಲ್ಲಿ ಚಿದಾನಂದರು ಹಠಯೋಗದಲ್ಲಿ ನಿರತರಾದರು. ಪ್ರಾಣಾಯಾಮ ಮಾಡುವಾಗ ಪೂರಕ, ಕುಂಭಕ, ರೇಚಕಗಳ ವಿಧಾನದಲ್ಲಿ ಮನಸ್ಸು ಮತ್ತು ಪ್ರಾಣವಾಯುಗಳನ್ನು ತಡೆದು ನಿಲ್ಲಿಸಿ, ಆಧಾರ ಚಕ್ರದವರೆಗೆ ಶ್ವಾಸವನ್ನೇರಿಸಿ ತಾನು ಬ್ರಹ್ಮಸ್ವರೂಪಿಯಾಗಿ ‘ಹ’ ಎಂಬ ಸೂರ್ಯಸ್ವರ ಹಾಗೂ ‘ಠ’ ಎಂಬ ಚಂದ್ರಸ್ವರಗಳಿಂದ ಯೋಗ ಸಾಧನೆಯನ್ನು ಮಾಡುವುದೇ ಹಠಯೋಗ. ಈ ಯೋಗವು ಭ್ರಷ್ಠಾಚಾರಿಗಳಿಗೆ, ಅಜ್ಞಾನಿಗಳಿಗೆ, ನೀಚರಿಗೆ, ತಲೆತಿರುಕರಿಗೆ, ಗುರುದ್ರೋಹಿಗಳಿಗೆ, ನಾಸ್ತಿಕರಿಗೆ ಹರಗುರು ನಿಂದಕರಿಗೆ ಪ್ರಾಪ್ತವಾಗುವುದಿಲ್ಲ. ಕೇವಲ ಒಂದೇ ವರ್ಷದಲ್ಲಿ ಹಠಯೋಗವನ್ನು ಸಾಧಿಸಿ, ಗುರುವಿನ ಪ್ರೀತಿಗೆ ಪಾತ್ರರಾಗುತ್ತಾರೆ ಚಿದಾನಂದರು.

ಸಂಧಿ : ೫ ರಾಜಯೋಗ

ರಾಜಯೋಗವೆಂದರೆ ಯೋಗ ಸಾಧಕನು ಎದುರಿಗೆ ಒಂದು ಕಪ್ಪು ಅಥವಾ ಕಪ್ಪು ಮಿಶ್ರಿತ ನೀಲಿ ಬಣ್ಣದ ಶೂನ್ಯವನ್ನಿಟ್ಟುಕೊಂಡು ಅದರಲ್ಲಿ ತನ್ನ ದೃಷ್ಟಿಯನ್ನು ನಿಲ್ಲಿಸಿ, ಹೃದಯ ಮಧ್ಯದಲ್ಲಿ ಇಷ್ಟದೇವತೆಯ ಸ್ಮರಣೆಯನ್ನು ಮಾಡಿ ಒಳ್ಳೆಯ ದೃಢ ವಿಶ್ವಾಸದಿಂದ ಸಾಗಿಸಿದರೆ, ಕಾಲಾವಕಾಶದಲ್ಲಿ ಆ ಚಿಚ್ಛಕ್ತಿಯ ಕೃಪೆಯಿಂದ ಮುಮುಕ್ಷುವಿನ ಮನಸ್ಸು ನಿರ್ಮಲವಾಗಿ ಯೋಗಸಾಧನೆಯಲ್ಲಿ ವಿಜಯಹೊಂದಿ ಮೋಕ್ಷ ಪ್ರಾಪ್ತಿಯಾಗುವುದು. ಇಂಥ ರಾಜಯೋಗವನ್ನು ಹಠಯೋಗದ ನಂತರವೇ ಸಾಧಿಸಬೇಕು. ಈ ಸಾಧನೆಗಾಗಿಯೇ ಚಿದಾನಂದರು ಕಂಪ್ಲಿ ಗ್ರಾಮದ ಹೊರವಲಯದ ಕಾಲುವೆ ದಂಡೆಯ ಮೇಲಿನ ರೇವಣ್ಣನ ಕಟ್ಟೆಯ ಮೇಲಿನ ಶ್ರೀ ಶಂಭು ಮಹಾದೇವನ ದೇವಾಲಯವನ್ನು ಆರಿಸಿಕೊಳ್ಳುತ್ತಾರೆ.

ರಾಜಯೋಗವನ್ನು ಸಾಧಿಸಿ ಮರಳಿ ಗುರುವಿನ ಬಳಿ ಬಂದಾಗ, ಗುರುಗಳೂ ಸೇರಿದಂತೆ ಮನೆಯವರೆಲ್ಲ ಚಿದಾನಂದರಿಗೆ ಮದುವೆ ಮಾಡಬೇಕೆಂದು ಯೋಚಿಸುತ್ತಾರೆ. ಆದರೆ ಅವರು ಮದುವೆಯಾಗಲು ಒಪ್ಪುವುದಿಲ್ಲ. ತುಂಬ ಒತ್ತಾಯ ಮಾಡಿದಾಗ ಗುರುವಿನ ಮುಂದೆಯೇ ಎಲ್ಲರಿಗೂ “ಭಕ್ತಿಯೇ ತಾಯಿ, ಜ್ಞಾನವೇ ತಂದೆ, ಸತ್ಯವೇ ಸತಿ, ಬುದ್ಧಿಯೇ ಅಣ್ಣ, ಶಾಂತಿಯೇ ಮಗಳು” ಎಂದು ತಿಳಿ ಹೇಳುತ್ತಾರೆ. ಆದರೂ ಮದುವೆ ಮಾಡುತ್ತೇವೆಂದು ಮತ್ತೆ ಹಠ ಹಿಡಿದಾಗ ಊರನ್ನೇ ಬಿಟ್ಟು ಹೊರಟು ಕಾಶಿಯತ್ತ ಹೋಗುತ್ತಾರೆ.

ಸಂಧಿ : ೬ ಕಾಶಿಯಾತ್ರೆ

ಚಿದಾನಂದರು ಬಳಗಾನೂರು, ಕೂಡ್ಲೂರು, ಶಿವಪೇಟೆ, ಯದುಲಾಪುರ, ಚಾಂದಪಟ್ಟಣ, ಮಡಲಾ ಮಾರ್ಗವಾಗಿ ಕಾಶಿಯತ್ತ ಪ್ರಯಾಣ ಬೆಳೆಸಿದರು. ಪ್ರತಿಯೊಂದು ಊರಿನಲ್ಲಿ ಭಕ್ತಾದಿಗಳಿಂದ ಸತ್ಕಾರಗೊಂಡು, ಉಪದೇಶಗೈಯುತ್ತ ಜನಜಾಗೃತಿಯನ್ನು ಮಾಡುವುದನ್ನು ಕವಿ ಅತ್ಯಂತ ಮನಮೋಹಕವಾಗಿ ಚಿತ್ರಿಸಿದ್ದಾನೆ. ಯಾವ ಕರ್ಮವು ಬ್ರಹ್ಮಸ್ವರೂಪವನ್ನು ವ್ಯಕ್ತ ಮಾಡುವುದೋ ಅದೇ ಸತ್ಕರ್ಮ. ಈ ಪ್ರಪಂಚವನ್ನೇ ಬ್ರಹ್ಮರೂಪವನ್ನಾಗಿ ಮಾಡುವ ಕರ್ಮವು ಎಂದು ಉಪದೇಶಿಸುತ್ತ ಕಾಶಿಗೆ ಬಂದು ಅಲ್ಲಿಯ ವಿಶ್ವೇಶ್ವರ ತೀರ್ಥ ಗುರುಗಳ ಆಶೀರ್ವಾದ ಪಡೆದರು.

ಸಂಧಿ : ೭ ಚಿದಾನಂದ ಅವಧೂತರ ಚರಿತ್ರೆ

ಕಾಶಿ ಕ್ಷೇತ್ರದಿಂದ ಮರಳಿ ನೇರವಾಗಿ ಕಂಪಲಿ ಗ್ರಾಮಕ್ಕೆ ಬಂದ ಇವರನ್ನು ಭಕ್ತಾದಿಗಳು “ಚಿದಾನಂದರು ಅವಧೂತರಾಗಿ, ಸಿದ್ಧಪುರಷರಾಗಿ ಬಂದಿರುವರು. ನಮ್ಮನ್ನು ಸ್ಮರಿಸಿಕೊಂಡು ಬಂದುದನ್ನು ನೋಡಿದರೆ ನಾವೇ ಧನ್ಯರು” ಎನ್ನುತ್ತಾ ಹೃದಯಂಗಮವಾಗಿ ಭಕ್ತಿ-ಭಾವಗಳಿಂದ ಅವರನ್ನು ಬರಮಾಡಿಕೊಂಡರು. ಕೆಲವೇ ದಿನಗಳಲ್ಲಿ ಜ್ಞಾನಸಿಂಧು ಎಂಬ ಆಧ್ಯಾತ್ಮ ಕೃತಿಯನ್ನು ಭಕ್ತಾದಿಗಳ ಅಪೇಕ್ಷೆಯ ಮೇರೆಗೆ ರಚಿಸಿದರು. ನಂತರ ಕಂಪಲಿಯಿಂದ ಉಳಿಯೂರಿನ ಹೊಳೆಯ ದಂಡೆಯ ಮೇಲಿರುವ ಅರಳಿಯ ಗಿಡದ ಕಟ್ಟೆಯ ಮೇಲೆ ಕುಳಿತುಕೊಂಡು ಯೋಗಾಭ್ಯಾಸದಲ್ಲಿ ನಿರತರಾದರು.

ಉಳಿಯನೂರಿನಿಂದ ನೇರವಾಗಿ ಸಿದ್ಧಗಿರಿಗೆ ಬಂದ ಚಿದಾನಂದಾವಧೂತರು ಅಂಬಾದೇವಿಯ ಸನ್ನಿಧಿಯಲ್ಲಿ ದೇವಿ ಮಹಾತ್ಮೆ, ಚಿದಾನಂದ ಲಹರಿ, ಬಗಳಾಂಬ ಶತಕ, ಆಧ್ಯಾತ್ಮ ಶತಕ, ಕಥಾಸಾಗರ ಮುಂತಾದ ವೇದಾಂತ ವಿಷಯಗಳನ್ನೊಳಗೊಂಡ ಕೃತಿಗಳನ್ನು ರಚಿಸಿದರು. ಮುಂದೆ ಬಗಳ ಚಕ್ರದಲ್ಲಿ ಐಕ್ಯವಾದರು. ಇದನ್ನು ಓದಿದವರಿಗೆ, ಕೇಳಿದವರಿಗೆ ಮಂಗಳಮಯವು. ಇದು ಚಿದಾನಂದವಧೂತ ಚಾರಿತ್ರದ ಸ್ಥೂಲವಾದ ಕಥಾಸಾರ.

ಕೃತಿ ವಿಶೇಷತೆ

. ಚಿದಾನಂದಾವಧೂತರ ಜೀವನ, ಸಾಧನೆಗಳನ್ನು ವಿವರವಾಗಿ ತಿಳಿಸಿಕೊಡುವ ಏಕೈಕ ಕೃತಿ ಇದಾಗಿದೆ.

. ಚಿದಾನಂದಾವಧೂತರು ಕಂಪ್ಲಿಯ ಮಠದೊಳಗೆ ಮೌಖಿಕವಾಗಿ ಹೇಳುತ್ತಿದ್ದ ನೂರಾರು ಕೀರ್ತನೆಗಳು, ಜ್ಞಾನಸಿಂಧು ಮೊದಲಾದ ಕೃತಿಗಳನ್ನು ಪದಕಿ ತಿರುಕಪ್ಪ ಎಂಬ ಹತ್ತು ವರ್ಷದ ಬಾಲಕ ಬರೆದುಕೊಳ್ಳುತ್ತಿದ್ದ ಸಂಗತಿಯನ್ನು ಕೃತಿ ಹೇಳುತ್ತದೆ.

. ಐತಿಹಾಸಿಕವಾಗಿಯೂ ಈ ಕೃತಿ ಕೆಲವು ಸಂಗತಿಗಳತ್ತ ಗಮನವನ್ನು ಸೆಳೆಯುತ್ತದೆ. ಉದಾ : ಆನೆಗೊಂದಿ ಸುಬೇದಾರ ಅಣ್ಣಪ್ಪ, ಕಾರಭಾರಿ ಪೊಂಪಕ್ಕ, ಕನಕಗಿರಿಯ ಜೋಗಿ, ಪ್ರಧಾನಿ ವೆಂಕಟಾಜಿ, ಅರಸು ಸುಬ್ಬ ಇತ್ಯಾದಿ.

. ಚಿದಾನಂದಾವಧೂತರು ತಮ್ಮ ಜೀವಿತದ ಬಹುಭಾಗವನ್ನು ಕಳೆದದ್ದು ಅಯೋಧ್ಯೆ ಗ್ರಾಮದಲ್ಲಿ, ಆರ್. ನರಸಿಂಹಾಚಾರರು “ಅಯೋಧ್ಯೆ ಆವ ಊರಿಗೆ ಅನ್ವಯಿಸುತ್ತದೆಯೋ ತಿಳಿಯಲಿಲ್ಲ. ಶೃಂಗೇರಿ ಎಂದೂ ಕೆಲವರು ಊಹಿಸುತ್ತಾರೆ”[2] ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಗ್ರಾಮ ಕಂಪ್ಲಿ-ಗಂಗಾವತಿ ರಸ್ತೆಯಲ್ಲಿ ಬರುವ ಚಿಕ್ಕಜಂತಕಲ್‌ ಊರಿನಿಂದ ನಾಲ್ಕು ಕಿ. ಮೀಗಳ ಅಂತರದಲ್ಲಿ ತುಂಗಭಧ್ರ ನದಿ ದಂಡೆಯ ಮೇಲಿದೆ. ಇದಕ್ಕೆ ಚಿದಾನಂದಾವಧೂತ ಚಾರಿತ್ರದಲ್ಲಿ ಸ್ಪಷ್ಟವಾದ ಉಲ್ಲೇಖಗಳಿವೆ. ಇದರಲ್ಲಿ ಬರುವ ಹೆಬ್ಬಾಳು ಅಯೋಧ್ಯೆ, ಆನೆಗೊಂದಿ, ಕಂಪ್ಲಿ, ಕನಕಗಿರಿ ಮುಂತಾದ ಗ್ರಾಮಗಳು ಗಂಗಾವತಿ ಸುತ್ತಮುತ್ತ ಬರುವುದರಿಂದ ಗಂಗಾವತಿ ಸಮೀಪವಿರುವ ಅಯೋಧ್ಯೆ ಚಿದಾನಂದಾವಧೂತರ ಗ್ರಾಮವೊಂದು ಸ್ಪಷ್ಟವಾಗುತ್ತದೆ.

ಕಾವ್ಯೋಕ್ತ ಉಲ್ಲೇಖಗಳನ್ನು ಅನುಸರಿಸಿ ನಾನು ಈ ಪ್ರದೇಶದಲ್ಲಿ ಕ್ಷೇತ್ರಕಾರ್ಯ ಕೈಕೊಂಡಾಗ ಚಿದಾನಂದಾವಧೂತರ ಆಶ್ರಮ, ಯೋಗಾಸನಕ್ಕೆ ಕುಳಿತುಕೊಳ್ಳುತ್ತಿದ್ದ ಅಶ್ವತ್ಥ ಕಟ್ಟೆಯ ಬಗೆಗಿನ ಕುರುಹುಗಳು, ಅಯೋಧ್ಯಾ ಗ್ರಾಮದ ಸಮೀಪದ ನದಿದಂಡೆಯ ಮೇಲೆ ಕಂಡುಬಂದವು. ಚಿದಾನಂದಾವಧೂತ ಚಾರಿತ್ರದಲ್ಲಿ ಬರುವ ಉಲ್ಲೇಖಕ್ಕೂ ಇಲ್ಲಿರುವ ಸ್ಥಳಕ್ಕೂ ಸಾಮ್ಯತೆ ಕಂಡುಬರುತ್ತದೆ. ಈ ಕಾರಣವಾಗಿ ಚಿದಾನಂದಾವಧೂತರ ಅಯೋಧ್ಯೆ ಶೃಂಗೇರಿಯಲ್ಲ, ಗಂಗಾವತಿ ಸಮೀಪವಿರುವ ಅಯೋಧ್ಯೆ ಗ್ರಾಮ. ಇದಲ್ಲದೆ ಇವರು ಶಾಸ್ತ್ರ, ಪುರಾಣ, ಪ್ರವಚನ, ಕೀರ್ತನೆಗಳನ್ನು ಹೇಳುತ್ತಿದ್ದ ವಿರೂಪಾಕ್ಷೇಶ್ವರ ದೇವಸ್ಥಾನ ಅಯೋಧ್ಯೆಯಲ್ಲಿ ಇದೆ. ಚಿದಾನಂದಾವಧೂತರ ಬಗೆಗೆ ಈ ಭಾಗದ ಜನರು ತುಂಬ ಭಕ್ತಿ-ಗೌರವದಿಂದಿರುವುದನ್ನೂ ನಾನು ಗಮನಿಸಿದ್ದೇನೆ. ಪ್ರತಿವರ್ಷವೂ ನದಿ ದಂಡೆಯಲ್ಲಿರುವ ಅಶ್ವತ್ಥಕಟ್ಟೆಯ ಬಳಿ ಸುತ್ತಮುತ್ತಲಿನ ಊರಿನ ಜನರೆಲ್ಲ ಸೇರಿ ಜಾತ್ರೆಯನ್ನು ನೆರವೇರಿಸುತ್ತಾರೆ.

. ಗಂಗಾವತಿ ಸಮೀಪವಿರುವ ಕನಕಗಿರಿಯಲ್ಲಿ ಈತನ ಹೆಸರಿನ ಚಿಕ್ಕ ದೇವಾಯಲವಿದೆ. ಅದರ ಮುಂಭಾಗದಲ್ಲಿ “ಶ್ರೀ ಜಗದ್ಗುರು ಚಿದಾನಂದ ಅವಧೂತರು” ಎಂದು ಬರೆಯಲಾಗಿದೆ. ಇಲ್ಲಿಯೇ ಚಿದಾನಂದಾವಧೂತರು ಸಮಾಧಿ ಹೊಂದಿದರೆಂಬುದು ಅಲ್ಲಿಯ ಜನರ ಅಭಿಪ್ರಾಯವಾಗಿದೆ. ಅಲ್ಲದೇ ಈ ದೇವಾಲಯದ ಸಮೀಪ ಒಂದು ಹಳೆಯದಾದ ಮನೆಯಿದೆ. ಅಲ್ಲಿ ಶ್ರೀ ದೇವಿಪುರಾಣದ ಪ್ರವಚನವನ್ನು ಪಠನ ಮಾಡುವ ಸಾಧುಗಳೊಬ್ಬರಿದ್ದಾರೆ. ಈ ಎಲ್ಲ ಅಂಶಗಳನ್ನು ಗಮನಿಸಿದಾಗ ಗಂಗಾವತಿ ಪ್ರದೇಶದಲ್ಲಿ ಚಿದಾನಂದಾವಧೂತರ ಪ್ರಭಾವ-ಪ್ರಸಿದ್ಧಿ ಈಗಲೂ ಸಾಕಷ್ಟಿದೆ.[3]­[4]

. ಕಾವ್ಯದ ಛಂದಸ್ಸಿನ ಬಗೆಗೆ ಕವಿ ಏನನ್ನೂ ಹೇಳದೆ ಹೋದರೂ, ಇದು ಸಾಂಗತ್ಯದಲ್ಲಿದೆ.

            ಏಳು ಮಕ್ಕಳಾ ತಾಯಿ ಭೂತವಲ್ಲ ಪಿಶಾಚಿಯಲ್ಲ
ಲೋಲರಾಜ ರಾಜೇಶ್ವರಿ ಕೇಳಿ ಜನ
ಬಾಲಕರು ಸಪ್ತಮಾತೃಕೆಗಳು ಆರಿಗೆಯು
ಹೇಳುವೆನು ಅವರ ನಾಮವ ಕೇಳಿ ಜನ

. ಕಾವ್ಯ ರಚನೆಯಾದ ಬಗೆಗೆ ಎಲ್ಲಿಯೂ ಉಲ್ಲೇಖವಿಲ್ಲ. ಬಹುಶಃ ಚಿದಾನಂದಾವಧೂತರ ಶಿಷ್ಯ ಪರಂಪರೆಯಲ್ಲಿ ಬರುವ ಅಯ್ಯಪ್ಪ ಕವಿಯು ೧೮ನೆಯ ಶತಮಾನದ ಕೊನೆ ಅಥವಾ ೧೯ನೇಯ ಶತಮಾನದ ಆದಿಭಾಗದಲ್ಲಿ ಈ ಕಾವ್ಯವನ್ನು ರಚಿಸಿರಬಹುದು.

ಹಸ್ತಪ್ರತಿ ವಿವರ

ಪ್ರಸ್ತುತ ಕೃತಿಯನ್ನು ಎರಡು ಹಸ್ತಪ್ರತಿಗಳ ಸಹಾಯದಿಂದ ಪರಿಷ್ಕರಿಸಲಾಗಿದೆ. ಇದು ಮೌಖಿಕ ಕಾವ್ಯವಾಗಿದ್ದರಿಂದ ಪಠ್ಯದಲ್ಲಿ ದೇಶೀಯ ಗುಣ ಸಹಜವಾಗಿ ಮೈದಾಳಿದೆ.

. ಹಂಪಿಯ ಗಾಯತ್ರಿ ಪೀಠದ ಪ್ರತಿ

೮ ೧/೨”x೬ ೧/೨” ಆಕಾರದ ಆಧುನಿಕ ಕಾಗದ ರೂಪದ ಹಸ್ತಪ್ರತಿ. ಅಕ್ಷರಗಳು ದುಂಡಾಗಿದ್ದು, ಕೃತಿ ಸಮಗ್ರವಾಗಿದೆ.

ಆದಿ : ಓಂ ತತ್ಸತ್‌ ಬ್ರಹ್ಮಣೇ ನಮಃ || ಶಕೆ ೧೯೮೨ ಶಾಲ್ವರಿ ನಾಮ ಸಂವತ್ಸರ ಶ್ರಾವಣ ಬ||೫ ಗುರವುವಾಸರೆ ಶ್ರೀ ಗುರುಮತ್ಪರಮಹಂಸ ಪರಿವ್ರಾಜಕಾಚಾರ್ಯ ಶ್ರೀ ಚಿದಾನಂದಾವಧೂತ ರಾಜಯೋಗಿಗಳು ಇವರ ಚಾರಿತ್ರ ಬರೆಯುವುದಕ್ಕೆ ಪ್ರಾರಂಭ ಮಾಡಿದ್ದು || ಶ್ರೀರಸ್ತು ಸಿದ್ಧಿರಸ್ತು ಶುಭಮಸ್ತು ಕಲ್ಯಾಣಮಸ್ತು ಆಯುರಾರೋಗ್ಯ ಐಶ್ವರ್ಯಮಸ್ತು ಸತಿಪುತ್ರ ಪೌತ್ರಾದಿ ಸಕಲ ಸಂಪದ ವೃದ್ಧಿರಸ್ತು || ಬಾಲಲೀಲಾ ಬರೆಯುವುದಕ್ಕೆ ಆರಂಭ ||

ಅಂತ್ಯ : ಶಕೆ ೧೮೮೨ ಶಾರ್ವರಿನಾಮ ಸಂವತ್ಸರ ಆಶ್ವಿನ ಶು||೧೦ ವಿಜಯದಶಮಿ ಭಾರ್ಗವಾರ ಸಮಾಪ್ತವಾದುದು. ಇದನ್ನು ಬರೆದವರು ಸರಸ್ವತಿಬಾಯಿ ತಂದೆ ಸಣ್ಣವೀರಪ್ಪ ಕುದುರಿಮೋತಿಯಿವರು. ಇದನ್ನು ಓದುವವರು ಇದರಲ್ಲಿ ಏನಾದರೂ ಹಸ್ತದೋಷಗಳಿದ್ದರೆ ತಮ್ಮ ಪುತ್ರಿ ಎಂದು ಭಾವಿಸಿ ತಿದ್ದಿಕೊಂಡು ಓದಬೇಕೆಂದು ಭಿನ್ನಹಗಳು || ಸಮಸ್ತ ಗುರವರ್ಯರ ಸಾಧುಸತ್ಪುರಷರ ಸದಭಕ್ತರ ಪಾದಕಮಲಂಗಳಿಗೆ ನನ್ನ ಅನೇಕ ದೀರ್ಘದಂಡ ನಮಸ್ಕಾರಗಳು || ಶ್ರೀ ಗುರು ಚಿದಾನಂದ ಅವಧೂತನ ಕೃಪೆಯಿಂದ ಗ್ರಂಥವು ಸಮಾಪ್ತವಾದುದು ||

ಈಗ ಈ ಪ್ರತಿಯು ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಭಂಡಾರದಲ್ಲಿದೆ. ಕ್ರಮಾಂಕ ೨೩೩.

ಮೇಲಿನ ಪುಷ್ಟಿಕೆಗಳಿಂದ ತಿಳಿದು ಬರುವುದೇನೆಂದರೆ ಈಗಿನ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕಿನ ಕುದುರಿಮೋತಿ ಗ್ರಾಮದ ಸಣ್ಣವೀರಪ್ಪನವರ ಮಗಳಾದ ಸರಸ್ವತಿ ಬಾಯಿ ೧೯೬೦ರಲ್ಲಿ ಚಿದಾನಂದಾವಧೂತ ಚಾರಿತ್ರವನ್ನು ಲಿಪ್ಯಂತರಗೈದಿದ್ದಾಳೆ. ಕೇವಲ ೪೨ ವರ್ಷಗಳ ಹಿಂದೆ ಮಹಿಳೆಯೊಬ್ಬಳಿಂದ ಸಿದ್ಧಗೊಂಡಿರುವುದೊಂದು ಈ ಹಸ್ತಪ್ರತಿಯ ವಿಶೇಷವಾಗಿದೆ.

. ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ತಲೆಕಟ್ಟು ಗ್ರಾಮದ ಅಂಕಲಿಮಠದ ವೀರಭದ್ರಸ್ವಾಮಿಗಳವರ ಪ್ರತಿ

೬”x೮” ಆಕಾರದ ಕಾಗದ ಪ್ರತಿಯಿದ್ದು, ಅಕ್ಷರಗಳು ಸಾಧಾರಣವಾಗಿವೆ. ಕೇವಲ ೯ ಪುಟಗಳಿದ್ದು, ಕೃತಿ ಅಸಮಗ್ರವಾಗಿದೆ.

ಆದಿ : ಶ್ರೀ ಚಿದಾನಂದ ಸದ್ಗುರುವೇ ನಮಃ | ಚಿದಾನಂದ ಅವಧೂತ ಚರಿತೆ ಬರೆಯುವುದಕ್ಕೆ ಶುಭಮಸ್ತು | ಶುಭಮಸ್ತು | ಕೇಳಿ ಜನ ಸರ್ವವೆಲ್ಲ ಚಿದಾನಂದ ಅವಧೂತ ಬಾಲಯೋಗಿ ರಾಜಯೋಗಿ ಚರಿತವಾ || ಪಲ್ಲವಿ ||

ಅಂತ್ಯ : ಆತ ಬೆಳೆದು ಸಿದ್ದರೊಳು ಖ್ಯಾತನಾಗಿ ಬ್ಯಾರೆಯಾಶ್ರಮಾತಗೇಯು ಕಪಿಲ ಮಾಡಿರೇ ಕೇಳಿ ಜನಾ ದಾತನಾಗಿ ಸರ್ವ ತಪದಿ ಮಾತನೆನಿಸಿಕೊಳುತ ಮುನಿಜನಾತಿಶಯದೊಳಿರ್ದ ಹರುಷದೀ ಕೇಳಿ ಜನ || ೧೨೩ ||

ಈ ಪ್ರತಿಯು ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಭಂಡಾರದಲ್ಲಿದೆ. ಕ್ರಮಾಂಕ ೪೫೭.೧.

 

[1] ಎನ್‌ ಜಿ. ಜಾಜಿಗೌಡರಅವರುಈಕಾವ್ಯದಕಥಾಸಾರವನ್ನು೧೯೬೭ರಲ್ಲಿಪ್ರಕಟಿಸಿದ್ದಾರೆ. ನೋಡಿ : ಸತ್ಪುರುಷಶ್ರೀಚಿದಾನಂದಾವಧೂತರಆಧ್ಯಾತ್ಮಚರಿತ್ರೆ, ಎಂ. ಎಸ್‌. ಶಾಬಾದಿಮಠಬುಕ್‌ ಡಿಪೋ, ಸ್ಟೇಷನ್‌ ರಸ್ತೆ, ಗದಗ

[2] ಆರ್. ನರಸಿಂಹಾಚಾರ್, ಕರ್ನಾಟಕಕವಿಚರಿತೆಸಂ. ೩, ಪು. ೭೫

[3] ????

[4] ಅಯೋಧ್ಯೆಗ್ರಾಮದರೈತಶ್ರೀಸುಣಗಾರವಿರುಪಣ್ಣಹಾಗೂನಮ್ಮವಿಭಾಗದಸಂಶೋಧನವಿದ್ಯಾರ್ಥಿಶ್ರೀಪವನ್‌ಕುಮಾರ್ಅವರುನಾನುಕ್ಷೇತ್ರಕಾರ್ಯಕೈಗೊಂಡಸಂದರ್ಭದಲ್ಲಿನನ್ನೊಂದಿಗಿದ್ದುತುಂಬಉಪಯುಕ್ತವಾದಮಾಹಿತಿಗಳನ್ನುನೀಡಿಸಹಕರಿಸಿದ್ದಾರೆಇವರೀರ್ವರಿಗೆನಾನುಕೃತಜ್ಞನಾಗಿದ್ದೇನೆ.