ರೂಪಕ ತಾಳ ರಾಗ ತಮ್ಮಿಚ್ಛೆ

ಕೇಳಿಜನ ಸರ್ವವೆಲ್ಲ ಚಿದಾನಂದ ಅವಧೂತ
ಲೋಲ ರಾಜಯೋಗಿ ಚರಿತವಾ        ಪಲ್ಲವಿ

ಗುರುಚಿದಾನಂದ ಅವಧೂತ ಮಾಡ್ದ ಹಠದಯೋಗ
ಹರುಷದಿಂದ ಕೇಳಿ ಜನಗಳು ಶಾಂ
ತರಿಗೆ ಶಮರಿಗೆಯು ಸರ್ವಭೂತ ದಯರಿಗೆಯು
ಭ್ರಾಂತುಯೆಲ್ಲ ಕಳದರಿಂಗೆಯು       

ಸರಿಗೆ ತೆಗೆದವೋಲು ಸಾಧಿಸುವ ಲಕ್ಷಣೇಳ್ವೆನೆಂದು
ತರಳ ಅಯ್ಯಪ್ಪ ನುಡಿದನು
ತಂತು ಮಾಯ ಕಡಿದರಿಗೆ ಚಿದಾನಂದ ಅವಧೂತ
ಸಂತ ಚಾರಿತ್ರ ಹೇಳ್ವದು    

ಗುಣವು ಹೀನರಾದರಿಗೆ ಗುರುಪಾದ ದೂರರಿಗೆ
ತೃಣವು ಮಾಡಿ ನುಡಿವರವರಿಗೆ
ತನವು ಮನವು ಮಂಚಕರಿಗೆ ಚಿದಾನಂದ ಅವಧೂತ
ವೆನಿಪ ಚರಿತ ಹೇಳಲಾಗದು

ಬುದ್ಧಿಯಿಂದ ಕೇಳುವರು ಗೋಡೆಕಂಭಕಾನಬ್ಯಾಡಿ
ನಿದ್ದಿಯರಡಲಿಹುದು ಆತರೆ
ಸಿದ್ದವಾಗಿ ಗೋಡೆಕಂಭ ತಮ್ಮಂತೆ ಮಾಡ್ವದೆಂದು
ಶುದ್ದವೇದಾಂತ ನುಡಿವದು           

ಯೋಗಮಾರ್ಗವನ್ನೆ ಹೇಳ್ವೆ ಯೋಗಿಯಾಹನೆಂಬವರು
ಈಗ ಕೆಳಿ ಏಕಚಿತ್ತದಿ
ಸಾಗರವು ಗುರುವು ಶಿಷ್ಯನಾಥ ಹೃಹದಿ ಆತ್ಮಸುಖದಿ
ತೂಗುತಲಿ ತಾವು ಇಹರು   

ತಿಂಗಳಿದ್ದ ಯೋಧ್ಯಕೆಯು ಸಂಗತೀತ ಬರಲಿಕ್ಕೆ
ಸಂಗಡಲೆ ಸ್ಥಳವು ಕೆಳಲು
ಇಂಗಿತದ ಯೋಗಾಭ್ಯಾಸಕಶ್ವತ್ಥದ ಕಟ್ಟೆಯದು
ಮಂಗಾಳಾಗಿಹದುಯೆಂದನು            ೦೬

ಬ್ಯಾಗದಲಿ ನದಿತಟಾಕದ ಆಶ್ವತ್ಥ ಕಟ್ಟೆಯದು
ಆಗ ಸಮಾರಾಧನೆಯನು
ಆಗ ಮಾಡಿಸಿಯೆ ಒಂದು ಕೊಟ್ಟಿಗೆಯ ಕಟ್ಟಿಸಿದ
ಜಾಗ ನಿನಗೆಯೆಂದಿಟ್ಟನು   

ಪರಬ್ರಹ್ಮ ಮುಟ್ಟಲಿಕ್ಕೆ ಮಾರ್ಗವೆರಡುಯಿರುತಿಹವು
ಇರುವಿವೀ ಹಂಗವೆನುತಲಿ
ಚರಣದಿಂದ ನಡೆದು ಹೋಗಿ ಗಿಡದ ಕೊನೆಯ ಹಣ್ಣು ತಿನಲಿ
ಕರಿಪಿಪೀಲ ಮಾರ್ಗ ಹಠವದು         

ಸುಗಮವರಿಹಂಗಮಾರ್ಗವಿಲ್ಲಿಂದಲ್ಲಿ ಹಣ್ಣಿಗೆಯು
ನೆಗವುದದು ರಾಜವೆನಿಪುದು
ವಗುಮಿಗೆಯಲಿ ಹಠದಮಾರ್ಗವೀಗ ಹೇಳುವೆನು ಮುಂದೆ
ತೆಗೆದು ಹೇಳ್ವೆ ರಾಜಯೋಗವ         

ಬ್ರಹ್ಮರ ಹುಡುಗರಿಗೆ ಮೊದಲಿಗೆಯು ಹಠದಯೋಗ
ಸಮ್ಮತವಾಗಿ ಋಷಿಗಳ್ಹೇಳ್ವರು
ನಿಮ್ಮ ಮನಕೆ  ಹಠವುಯೇನೆಂದರೆಯು ತಿಳಿಯ ಹೇಳ್ವೆ
ಬ್ರಹ್ಮ ರೂಪು ಆಗ್ವ ಯೋಗವು         ೧೦

ಹಠವುಯೆನೆ ಹಕಾರ ಸ್ವರವು ಸೂರ್ಯನದು ಠಕಾರ ಸ್ವರವು
ಚಟುಳರಿಯು ಚಂದ್ರಸ್ವರವದು
ಪಟುತರದಿ ಎರಡರಿಂದ ಮಾಡುತಿರುತಿಹಯೋಗ
ಹಠವುಯೆಂದು ಕರೆಸಿಕೊಂಬದು         ೧೧

ವಾಯುಧಾರಣಿಯು ಈಗ ಮೊದಲು ಮಾಡಿಸಿದನು ಗುರು
ರಾಯವಜ್ರ ಆಸನಿರಿಸಿಯೆ
ಕಾಯಶಿರ ಕೊರಳುಗಳು ಸಮನೆಯಾಗಿ ನೆಟ್ಟಗೆಯು
ಆಯತದಿ [1]ಕೂಡ್ರಿಸಿದನು[2]   ೧೨

ನಾಸಿಕಾಗ್ರ ದೃಷ್ಟಿಯಿಡಿಸಿ ಭ್ರೂಮಧ್ಯ ಗುರಿಯನಿಟ್ಟು
ಸೂಸದೆಡಬಲಕೆ ನಯನವು
ನಾಶರಹಿತನಾಗಿ ತೇಜೋರಾಶಿಯನ್ನ ಕಾಣೋಯೆನುತ
ಆ ಸ್ವಯಂಪ್ರಭನು ಹರಿಸಿದ೧೩

ರೇಚಕದ ಪೂರಕದ ಕುಂಭಕದ ವಿವರವನು
ಸೂಚಿಸಿದನು ಬ್ರಾಹ್ಮರೀಗಲೀ
ವಾಚಿಸುವ ಮಂತ್ರದಿಂದ ಪ್ರಾಣಾಯಾಮ ಮೂಗಹಿಡಿದು
ನೀ ಚದುರನಾಗು ಎಂದನು   ೧೪

ಪೂರಕೆಂದಡೆಯು ವಾಯು ಏರಿಸುವುದು ಕುಂಭಕೆನೆ
ಮಾರುತನನು ಮೇಲೆ ನಿಲಿಪದು
ಭೂರಿಜನರು ಕೇಳಿರೀಗ ರೇಚಕೆನಲು ಇಳಿಸುವುದು
ಮೂರಗತ್ಯ ಯೋಗಕೆಂದನು೧೫

ಒಂದು ಪ್ರಾಣಾಯಮ ಮೂಗಬಲದ ಸ್ವರದಿಯೇರಿ ಮರು
ತೊಂದು  ಪ್ರಾಣಾಯಮ ಮ್ಯಾಲೆಯು
ಅಂದು ನಿಲ್ಲಿಸಿಯೆ ಏರಿ ಇಳಿಯದಿರಲು ಅದಕೆ ಈಗ
ಅಂದು ಕುಂಭಕೆನಿಸುತಿಹುದು            ೧೬

ಏರಿದ ವಾಯು ಎಡದ ಮೂಗಿನ ಸ್ವರದಲಿಂದ
ಜಾರಿಸಲು ರೇಚಕೆಂಬುದು
ಮೂರರಿಂದ ಒಂದೊಂದು ಪ್ರಾಣಾಯಮ ಹೆಚ್ಚಿಸುತ
ಸೂರೆಗೊಳ್ಳೊ ಮುಕ್ತಿಯೆಂದನು       ೧೭

ಒಂದು ಪ್ರಾಣಾಯಮವಭ್ಯಾಸವಾಗೆ ಎರಡನೇದು
ಅಂದು ಆಗೆ ಮೂರು ಆ ಥರಹ
ದಿಂದ ನಾಲ್ಕು ಐದು ಈ ಪರಿಯಲಿಂದ ಹನ್ನೆರಡ
ಕಂದು ಸುಖವು ತೋರುತಿಹದು         ೧೮

ಹನ್ನೆರಡು ಪ್ರಾಣಾಯಾಮ ಸಾಧಿಸುವ ಅವ ಕನಿಷ್ಟ
ನಿನ್ನುಯಿಪ್ಪತ್ತ್ನಾಲ್ಕವು
ಮುನ್ನ ಸಾಧಿಸುವನು ಮಧ್ಯಮಿನ್ನು ಮೂವತ್ತಾರ
ಲಿನ್ನಿಹನೆ ಉತ್ತಮವೆಂದನು೧೯

ಮೂವತ್ತಾರು ಪೂರಕೇರಿಸಿಯೆ ಕುಂಭಕವ
ಮೂವತ್ತಾರು ನಿಲ್ಲಿಸಿಯೆ
ಈ ವಿಧದಿ ಮಾಡಲಿಕ್ಕೆ ಯೋಗವೀಗ ಹರವು ಅಹುದು
ದೇವನೆ ಆತನೆನಿಪನು          ೨೦

ಒಂದು ಪ್ರಾಣಾಯಾಮ ಇದರಿಂದ ಹೆಚ್ಚನೇರಿಸಲಿ
ಕಂದು ಬ್ರಹ್ಮರಂಧ್ರ ಒಡೆವುದು
ಇಂದು ಪರಾಮರಿಕೆ ಏರಿಪುದದರೊಳಗೆ ಎನುತ ಗುರು
ತಂದೆ ಮಾಡಲಾಜ್ಞೆ ಇತ್ತನು  ೨೧

ಸಾಧನೆನಿಪ ಚತುಷ್ಟಯವ ಸಾಧನವ ಸದ್ಗುರು
ಪಾದ ಹೊಂದದ ಮುನ್ನವೆ
ಸಾಧಿಸಿದ್ದ ಅಷ್ಟಾಂಗ ಯೋಗವನ್ನು ದಿನಂಪ್ರತಿಲಿ
ಸಾಧನಾಗಿಯಿಷ್ಟು ಸೇವೆಯಲಿ          ೨೨

ಏರಿಸಿಳಿಸಿದನು ಸಮನಾಗಿ ಪ್ರಾಣಾಯಾಮವನ್ನು
ಮೀರಿ ಹಿಡಿದ ಸಮದಿ ಕುಂಭಕ
ದಾರಿಹತ್ತಿದನು ಯೋಗ ಮಾರ್ಗವನ್ನು ದಿನಂಪ್ರತಿಲಿ
ಸೂರ್ಯನ ಕಳೆಯ ಚೆಲ್ಲುತ೨೩

ಗುರುವರನ ದ್ವಾರಕೆಯು ಇರುವರೀಗ ಐದುಮಂದಿ
ಕರಿಮುಖನು ಬ್ರಹ್ಮ ವಿಷ್ಣುವು
ತರುವಯದಿ ರುದ್ರ ಈಶ್ವರನು ಎನಿಪ ಹೆಸರಿನವರು ಈಗ
ಇರುವರವರು ದ್ವಾಪಪಾಲರು         ೨೪

ಆಡರಿದನು ವಾಯುಕುದುರೆ ಇಡಾಪಿಂಗಳೆಂಬ ಪಾ
ವಡವ ಮೆಟ್ಟಿ ಪ್ರಕೃತಿಯೆಂಬರ
ಕೆಡದುಳಿದು ನಿಟಿಲ ನೋಡುತಡಿಗಡಿಗೆ ಕಳೆಯ ಕಾಣು
ತೊಡನೆ ಸೋಹಂ ಮಂತ್ರ ಜಪಿಸುತ    ೨೫

ನಡೆದನೀಗ ಆಧಾರಚಕ್ರಕೆಯು ನಾಲ್ಕು ದಳದ
ಸಡಗರದ ಕಮಲಕರ್ತನ
ಬಿಡದೆ ವಿಘ್ನೇಶನೆಂಬ ಕಡೆಯ ದ್ವಾರಪಾಲಕನ
ಮೃಡನೆಯಾಗಿ ಭೆಟ್ಟಿಕೊಂಡನು        ೨೬

ಬಿಟ್ಟು ನಡೆದ ಮುಂದಕೆಯು ಹುಟ್ಟಿಯೆಳಿವ ಕಳೆಯ ಕಾಣು
ತಿಟ್ಟೆನಿಸಿ ಆಧಾರಚಕ್ರದಿ
ಮುಟ್ಟಿ ಪ್ರಣವನಾದವದು ಬಿಟ್ಟುದಿಲ್ಲ ಯೋಗಿ ಬೆನ್ನ
ಸ್ಪಷ್ಟ ಸಂಗೀತ ಪಾಡುತ    ೨೭

ಹೋಗುತಿರಲು ಚಕ್ರಮಾರ್ಗವಾಗಳುದರಿದವು ಶುಕ್ರ
ಕೂಗಲೆಡಬಲದಿ ನಾದವು
ತೂಗುವಾನಂದದಿಂದ ಥಳಥಳಿಸೆ ಲಿಂಗಸ್ಥಾನ
ಕಾಗ ಹೋದ ಗುರುಪುತ್ರರು೨೮

ಸ್ವಾಧಿಸ್ಠಾನ ಚಕ್ರಕಮಲಕೆಯು ಆರುದಳವು ಇಹವು
ಅಧಿಷ್ಠಾನ ಬ್ರಹ್ಮ ದೈವತಾ
ಓದುತಲಿ ಸೋಹಂ ಬೀಜವಾತನ ಭೆಟ್ಟಿಕೊಂಡು
ಹಾದಿಹಿಡಿದ ಮತೆ ಮುಂದಕೆ            ೨೯

ಕಳೆಯು ನಾನ ಬೆಳಗುತಿರೆ ಕಣ್ಗೆ ಕೋರೈಸುತಿರೆ
ಝಳಝಳೆಂದು ನಾನ ಚಿತ್ರದಿ
ಒಳಯಕೆಯು ಹೊಕ್ಕು ನಡೆದ ಓಂಕಾರ ಕೂಗುತಿರಲು
ಬಳಿಕ ಮಣಿಪೂರ ಚಕ್ರಕೆ      ೩೦

ನಾಭಿಸ್ಥಾನದ ಕಮಲ ಹತ್ತು ದಳವು ಅಧಿಪತಿಯು
ಶೋಭಿಸುವನು ವಿಷ್ಣುವೆಂಬನು
ಕಾಂಬಣಾಗಿ ಮುಂದಕೆಯು ಕಾಲಿಕ್ಕೆ ದೀಪ್ತಿ ತೋರ್ಪು
ದಾ ಬಗೆಯನೇನ ಹೇಳಲಿ     ೩೧

ಅಡರೆ ನಭಕೆ ವಾಯು ಆಶ್ವ ಎಡಬಲವ ನೋಡದಲೆ
ನಡೆಯೆ ಭ್ರೂಮಧ್ಯ ನೋಡುತ
ಖಿಡಿಖಿಡಿಯು ಉಗುಳುತಿಹ ಮಾರ್ಗಹತ್ತಿ ನಡೆಯೆ ಮುಂದೆ
ತಡೆಯಿತಹನಾಹತ ಚಕ್ರವು   ೩೨

ಹೃದಯಸ್ಥಾನವ ಕಮಲವದಕೆ ಹನ್ನೆರಡು ದಳವು
ಅದಕೆ ಅಧಿಪತಿಯು ರುದ್ರನು
ಒದವಿ ಭೇಟ್ಟಿಯನೆಕೊಂಡು ಮಾರ್ಗಪಾಲಿಸಿರಿಯೆಂದು
ಅಧಟ ನಡೆದ ಮತ್ತೆ ಮುಂದಕೆ          ೩೩

ಅನಹತಾದ ಚಕ್ರದಲ್ಲಿ ನಾದಗಳು ವಾಸ್ದವಿಹವು
ಛಿಣಿಯು ಪ್ರಥಮ ಛಿಣಿಛಿಣಿರಡುದು
ಝಣತುಕಾರವದುವೆ ಮೂರು ತಾಳನಾಲ್ಕು ಐದನೆಯದು
ಮೃಣುಮೃಣು ಮೃದಂಗ ವಾದ್ಯವು  ೩೪

ಆರನೆಯದು ವೀಣೆಯದು ಭೋರೆನಿಪ ಶಂಖಯೇಳು
ಚಾರು ಘಂಟೆಸ್ವರವುಯಂಟದು
ಭೇರಿನಾದ ಒಂಭತ್ತು ಘೋರಮೇಘನಾದ ಹತ್ತು
ವೀರಯೋಗಿಯದುರುಗೊಂಡವು       ೩೫

ರುದ್ರಸೇವೆಯೊಳಗೆ ಇಹೆವು ಯೋಗಿಸೇವೆಯಮಗೆಯೆಲ್ಲಿ
ಇದ್ದುದೆಂದು ಸಕಲ ದಶವಿಧ
ಭದ್ರಮಂಗಳದ ವಾದ್ಯ ಬೆನ್ನ ಹತ್ತಿದವು ಆಗ
ಸಮುದ್ರ ಮೇರೆದಪ್ಪಿದಂದದಿ           ೩೬

ಸರ್ವನಾದ ಎಡಬಲದಿ ಸುಸ್ವರದಿ ಕೂಗುತಿರಲು
ಏರುತ್ತಿತ್ತು ವಾಯು ತುರಗವು
ಹಾರುತ್ತಿತ್ತು ತೇಜಸ್ಸಿನುಡಸಾವು ಮಾರ್ಗವದು
ತೋರುತ್ತಿತ್ತು ಝಗಝಗೆನುತಲಿ      ೩೭

ಕೋಟಿಚಂದ್ರ ಜ್ಯೋತಿಗಳು ಪಾಟಿಯಾಗಿ ತೋರುತಿಹವು
ಸಾಟಿಗಾಣೆನಾನಂದಕೆ
ವಾಟವಾಗಿ ನಡಿಯೆ ಆಟನಿಂತಿತಲ್ಲೆ ಚಕ್ರ
ನಾಟಿಯಿತ್ತು ಕಂಠಸ್ಥಾನದಿ  ೩೮

ವಿಶುದ್ದಿ ಕಮಲಕೆಯು ಷೋಡಶದ ದಳವು ಇಹವು
ವಾಸವೀಹನಲ್ಲಿ ಅಧಿಪತಿ
ದೋಷಹರನು ಈಶ್ವರನುದಾವಾಗಲಲ್ಲಿ ಇಹನು
ಭಾಸಮಾನ ತೇಜದಿಂದಲಿ    ೩೯

ಶಿಷ್ಟ ವಿಶುದ್ಧಿ ಹೊಕ್ಕು ಈಶ್ವರನ ಭೆಟ್ಟಿಕೊಂಡು
ಅಷ್ಟನಾದಗಳನೆ ಕೂಡಿಯೆ
ದಿಟ್ಟ ನಡೆದ ಮುಂದಕೆಯು ಎಡಬಲದಿ ಕೂಗೆ ವಾದ್ಯ
ಕಟ್ಟಳಿಲ್ಲದ ಸುಖದಲಿ      ೪೦

ಹಾರುತಿಹವು ನಾನ ಕಳೆಯು ತೋರುತಿಹವು ನಾನ ಬೆಳಗು
ಬೀರುತಿಹವು ನಾದವೆಡಬಲ
ಏರುತಿರ್ದ ಮೂರು ತಾನು ತೇರುಬಿಟ್ಟ ತೆರನಂತೆ
ತೋರುತಿರ್ದ ಭ್ರೂಮಧ್ಯಕೆ  ೪೧

ಧಿಮಿಧಿಮಿಯು ಧಿಂಧಿಮಿಯು ಧಂಧಣಾಧಮಾಧಮಾ
ಘಮುಘಮುಂ ಝೇಂಝೇಂಯೆನುತಲಿ
ನಮೃಣು ನಮೃಣು ಛೇಛೇವೊ ಭುಂಭುಂಭು ಸ್ವರವ ಕೇಳು
ತಮಳಯೋಗಿ ನಡೆದ ಮಾರ್ಗವ        ೪೨

ಜೋಡು ನಾಗಸ್ವರದ ಇಂಪು ಪಾಡಾಗಿ ಕೇಳುತಲಿ
ಆಡೆ ನಾಲಗೆಯು ಸಾಲದು
ಬಿಡುವು ಬಿಡುವು ತೇಜದ ಫೌಜಫೌಜ ಕಾಣುತಲಿ
ರೂಢಿಗೊಡೆಯ ನಡೆದನಾಗಳು         ೪೩

ಮುಂದಕ್ಹೋಗೆ ಮಾರ್ಗವಿಲ್ಲ ಪಶ್ಚಿಮದ ದ್ವಾರವದು
ಅಂದು ಹಿಂಭಾಗ ಇಹುದು
ಎಂದುಕೊಳ್ಳುತಿಹರು ಅದಕೆ ಕಳ್ಳನಾಕುಣಿಕಿಯೆಂದು
ಸಂದ ಹಿಡದೆ ಸೂಷುಮ್ಮಕೆ  ೪೪

ಕತ್ತಲೆಯು ಮುಚ್ಚೋದಲ್ಲಿ ಕಳೆಯು ಎಲ್ಲ ಅಡಗೋದಲ್ಲಿ
ಯತ್ತಲಡಗಿದವು ವಾದ್ಯವು
ಕತ್ತಿಯನ್ನೇ ಹಿಡಿದು ಬಹಳ ಶಕ್ತಿಕಾವಲಿಹರಲ್ಲಿ
ಮತ್ತೆ ಸೂಷುಮ್ನ ದ್ವಾರಕ೪೫

ಸರ್ವಸಂಕಟವು ಅಲ್ಲಿ ಸರ್ವವಿಘ್ನಗಳು ಅಲ್ಲಿ
ಸರ್ವ ವಿಘಾತಗಳು ಅಲ್ಲಿಯು
ಸರ್ವಸದ್ಗುರುವ ಕರ್ಣದಿಂದ ಗೆಲಲಿಬೇಕು ಇದನು
ಗರ್ವದಿಂದ ಮಾಡಿಕೆಡುವನು            ೪೬

ವಾಯು ಭರವು ಬಹಳವಾಗೆ ಕಣ್ಣುವುಬುಕಿ ಹೋಗುತಿಹವು
ಹಾಯುವದು ಲಿಂಗವೀರ್ಯವು
ಕಾಯದೊಳು ಹೊಟ್ಟಿಯೊಳು ಗೋಣಿನೊಳು ವಡವುಗುರು ಉ
ಪಾಯಬೇಕು ಸಾಧ್ಯಕೆಂದನು            ೪೭

ಮಾರುತನ ತ್ರಾಣವರಿಯದೆಳಿಯಲಿಕ್ಕೆ ತನ್ನಪ್ರಾಣ
ಜಾರುವದು ವಾಯು ಲಘವಿರೆ
ಏರದದು ಮುಂದಕೆಯು ಗುರುವರನ ದಯದಿ ತನಗೆ
ತೋರಿಕೊಡಲು ಸಿದ್ಧಿಯಹುದು       ೪೮

ಮೆಲ್ಲಗಿಳಿಸೊ ವ್ಯಾಳ್ಯದಲ್ಲಿ ವಾಯು ಉಬ್ಬಸದಲಿ ಬಿಡೆ
ಕೊಳ್ಳುವದು ಬದಲು ನಾಡಿಗೆ
ಇಲ್ಲದ್ಹುಚ್ಚು ಸೇರುವದು ತಿರುಗೆ ತಿರುಗದೂ ಪ್ರಾಣ
ಅಲ್ಲಿ ಹೋಹನವನೆಯೆಂದನು         ೪೯

ಅದುವೆ ಕಾರಣವು ಗುರುವ ತನುಮನೊಪ್ಪಿ ಸೇವಿಗೆಯು
ಅದುಇದೇನೆಂದು ತೋರದೆ
ಚುದರು ಮಾಡಿಕ್ಕುಯನಲು ದೇಹಕಡಿದುಯಿಕ್ಕವಗೆ
ಇದುವೆ ದೊರಕುವದು ಎಂದನು        ೫೦

ಭಾಂಡಗೆಯು ಬಾಹಿರನಿಗೆ ಕುಂಡೆಬೆಳೆಸಿ ಗುರುಗೆ ವೆಚ್ಚ
ಕೊಂಡದರೊಳು ತಾನು ಈಗಲಿ
ಕಂಡಷ್ಟು ಎಬ್ಬಿಸುವ ರಂಡೆರಲ್ಲಿ ವಾಸಯರೆ
ಮುಂಡಗೀಯೋಗ ಸಲ್ಲದು            ೫೧

ರಾಯ ಗುರುಕರುಣದಿಂದ ವಾಯುಭಾರದ ಬಹಳದಿಂದ
ಬಾಯ ತೆರಿವದು ಸೂಷಮ್ನವು
ಹಾಯುವದು ವಾಯು ಪಶ್ಚಿಮದ್ವಾರದೊಳು ಹೊಗಲು
ಮಾಯವಾದವು ನಾದವು    ೫೨

ಅರವುಮರವು ಅಡಗಿದವು ಮನವು ವಾಯು ಏಕವಾಯ್ತು
ತರಣಿ ಸಾಹಸ ತೇಜದಿ
ಕರಗಿದ ರಸವುಯೆನಲು ಸೂಷುಮ್ನನಾಳದೊಳು
ಉರಿಯಖಂಡ ಮೇಲಿರ್ದುದು           ೫೩

ಮುದ ದಿಹೊಕ್ಕು ಹೋಗಲಿಕ್ಕೆ ಎದುರಿಗೆಯು ತೋರುತ್ತಿತ್ತು
ಒದವಿ ದ್ವಿದಳದ ಸಿಂಹಾಸನ
ಅದಕೆ ಅಗ್ನೇಯ ನಾಮ ಅದು ತ್ರಿಕೋಣಬಿಂದು ಸ್ನಾನ
ಅದುವೆ ಭ್ರೂಮಧ್ಯವೆನಿಪುದು          ೫೪

ಅಲ್ಲಿ ಸೋಹಂ ಬೀಜ ಅದಕೆ ಸದಾಶಿವನು ಕತಿರ್ತೃ
ಅಲ್ಲಿ ಸೂರ್ಯಕೋಟಿ ತೇಜಸ್ಸು
ಅಲ್ಲಿ ಸದರನೇರ್ದನೀತ ಆನಂದರೂಪನಾಗಿ
ಸಲ್ಲಲಿತ ಗುರು ಕರುಣದಿ   ೫೫

ಆ ಸದರ ಬಿಟ್ಟು ನಡಿಯೆ ಮೇಲಕೆಯು ಅದಕೆ ಅಧಿಕ
ಸಾಸಿರ ದಳದ ಪದ್ಮವು
ಭಾಸಿಸುತ್ತಲಿತ್ತು ದಳದಳಕೆ ಅಮೃತವದು ತುಂಬಿ
ಆಸುಕಮಲ ಅಧೋಮುಖವಿಹ        ೫೬

ಅದಕೆ ನಾನಾ ವರ್ಣಗಳು ಅದಕೆ ನಾನಾ ಶಕ್ತಿಗಳು
ಸದರನೇರಿ ಅಲ್ಲಿಯಿಹನು
ಸುಧೆಯರೂಪ ಪರಮಹಂಸನಿಹನು ನಡುಹಣಿಯ ಮಧ್ಯ
ವಿಧುವು ಸೂರ್ಯಾರೇಸು ಕಾಂತಿಯ   ೫೭

ಹತ್ತಿದನು ಆ ಸದರ ನಿತ್ಯಾತ್ಮನಾದ ಯೋಗಿ
ಯತ್ತ ಯತ್ತ ಬೆಳಗು ಚೆಲ್ಲುತ
ಅತ್ತ ಬಿಟ್ಟು ಆ ಸದರ ಮತ್ತೆ ಅಡರೆ ಮೇಲಕೆಯು
ಇತ್ತು ತೂರ್ಯವೆಂಬ ಸದರವು          ೫೮

ಬ್ರಹ್ಮರಂಧ್ರ ಸ್ಥಾನವದು ಬಗಳೆದೈವತಿಹಳು ಅಲ್ಲಿ
ಬ್ರಹ್ಮವೆ ಬಗಳ ದೈವತಾ
ಸಮ್ಮತಿದು ರಾಜಯೋಗಯೆಂದೆನಿಪುದು ಸೇರ್ದನವನು
ಬ್ರಹ್ಮವೆಂದು ಕರೆಸಿಕೊಳುವನು         ೫೯

ಏರಿದನು ತೂರ್ಯ ಸದರ ಯೋಗಿ ಸಾಕ್ಷಿ ವಸ್ತುವಾಗಿ
ತೋರುತಲಿ ಅರುವು ಮಾತ್ರದಿ
ಹಾರಿ ಭವವು ಜನನ ಮರಣ ತೂರಿದುರ್ಗುಣವು ನಿರ್ವಿ
ಕಾರಿಯಾಗಿಯಿರುತಲಿಹನು  ೬೦

ಆರುಚಕ್ರ ಮೇರೆಯಾಗಿ ಕೂಗುವ ನಾದ ದೃಶ್ಯ
ಮೂರು ಸಹಸ್ರಾರು ತೂರ್ಯವು
ತೋರುವ ಶಿಂಸುಮಾರ ಪರಿಯಂತ ಕೂಗೊ ನಾದ
ಚಾರುವೋಂಕಾರವೆನಿಪುದು  ೬೧

ಪ್ರಾಣಕೆಯು ನಾದವೆನಿಪು ಮನಸುಖಿಪುದೆ ಬಿಂದುಯೆನಿಪು
ಮಿನಗೆ ತೇಜ ಕಳೆಯುಯೆನಿಪುದು
ಜನಗಳರಿಯರಿದಕೆ ನಾದಬಂದು ಕಳೆಯುಯೆನಿಸುವುದು
ಎನೆ ಓದಿತ್ತು ವೇದಾಂತ ವಾಕ್ಯವು      ೬೨

ಪೂರ ಕಾವು ಮೂವತ್ತಾರು ಪ್ರಾಣಾಯಾಮ ಕುಂಭಕವು
ಬ್ಯಾರೆ ಮೂವತ್ತು ಆರವು
ತೋರಿಯೆಪ್ಪತ್ತೆರಡು ಪ್ರಾಣಯಾಮ ಮಾಡಿದ್ಹಿಂದೆ
ತೀರುವುದು ವಾಯುಧಾರಣ            ೬೩

ನೆತ್ತಿಗೇರಿಯಿಹ ವಾಯು ಮತ್ತೆ ಇಳಿವುದೆಂತೆನೆ ಸೂ
ಷುಪ್ತಿ ತನಗೆ ತಾನೆ ಇಳೊದೊಲು
ಸತ್ಯವಾಗಿ ಇಳಿವುದಿಷ್ಟೊತ್ತುಯೆನಲು ಲೆಲ್ಲವಿಲ್ಲ
ಮುಕ್ತರರಿದಿಹರುಯಿದನನು೬೪

ಸಿದ್ಧಿಗಳು ಕಾಯ್ದು ಇಹವು ಎದುರಿಗೆಯು ಕೈಯಮುಗಿದು
ಬುದ್ಧಿ ಏನು ಆಜ್ಞೆಯಿತ್ತರಿ
ಸಿದ್ಧವಿಹೆವು ಆವುದಕ್ಕೆಯೆಂದೆನಲು ಕಂಡು ಮೋರೆ
ಕ್ಷುದ್ರರಿವರುಯೆಂದು ತಿರಹುವ         ೬೫

ಸಿದ್ಧಿ ಆವವೆಂದೆನಲು ಅಣಿಮ ಮಹಿಮ ಗರಿಮಲಘಿಮ
ಸಿದ್ಧಿ ಪ್ರಾಪ್ತಿ ಪ್ರಾಕಾಮ್ಯವು
ಸಿದ್ಧಿ ಈಶತ್ವವಶಿತ್ವವೆಂಬುವವು ಇವು
ಸಿದ್ಧಿ ಅಷ್ಟಮೆನಿಸಿಕೊಂಬವು            ೬೬

ಅಣಿಮವೆಂದಡೆಯು ಅಣುವೆಯಾಗಿ ಜಗವು ತಿರುಗುವುದು
ಮನಕೆ ಅರಿಯೆ ಮಹಿಮೆ ಮಹಿಮದು
ಜನವರಿಯರೀಗರಿಮಯನಲು ಗಿರಿಗಧಿಕ ಭಾರವಿಹುದು
ಘನಸಮುದ್ರ ಹಾರಲಘಿಮದು         ೬೭

ಮತ್ತೆ ಪ್ರಾಪ್ತಿಯೆಂದಡೆಯು ಏನ ನೆನೆಯ ಪ್ರಾಪ್ತಿಯು
ಇತ್ತಿಹುದು ಪ್ರಾಕಾಮ್ಯವು
ಇತ್ತ ಕೇಳಿ ಈಶತ್ವವೆನಲು ರಾಜ ತಾನಹುದು
ಮತ್ತೆ ವಶ ಎನಲು ವಶವದು            ೬೮

ಇಂತು ಅಷ್ಟಮಹಾಸಿದ್ಧಿಯೋಗಿ ಕಾದುಕೊಂಡಿಹವು
ಇಂತಿದಕ್ಕೆ ದ್ರಿಷ್ಟಿ ಮಾಡ್ದಡೆ
ಅಂತು ಯೋಗ ಸುಕೃತವೆಲ್ಲ ಸುಟ್ಟೋಹದು ಕೆಡುತಲಿಹನು
ಸಂತರಿಗೆ ಯೋಗ್ಯವಲ್ಲವು  ೬೯

ವಹಿಸಿ ಸಿದ್ಧಿ ದಿವಿಜರುಗಳು ಮಹಪದನ ಪಡೆದರೀಗ
ದಹಿಸುವರು ಋಷಿಯು ಮುನಿದೊಡೆ
ಸಹಸಲೆಕ್ಕವಿಲ್ಲದಿಹುದು ತಡಹಿದರೆ ಸುಟ್ಟೋಹದು
ಬಹುವಿಘಾತ ತಪಕೆ ತಾನದು            ೭೦

ಯುಕ್ತ [ಆ] ಹಾರ ಯುಕ್ತ ನಿದ್ರೆ ಯುಕ್ತ ವ್ಯವಹಾರಗಳಿಂದ
ಯುಕ್ತನಾಗಿ ಇಂತು ಮಾಡಲು
ಶಕ್ತನೆನಿಸಿ ಯೋಗದಲ್ಲಿ ಇರಲು ಜನವು ನೋಡಿ ನಿತ್ಯ
ಮುಕ್ತನಹುದುಯೆಂದು ಹೊಗಳ್ವರು೭೧

ಇಂತಯೋಧ್ಯ ನದಿತಟಾಕದಶ್ವತ ಕಟ್ಟೆಯಲ್ಲಿ
ಭ್ರಾಂತಿಯಿಟ್ಟು ಹಠಯೋಗವ
ಅಂತು ಒಂದು ವರುಷಕೆಯು ಮುಗಿಯೆ ಚಿದಾನಂದ ಕಂಡು
ಸಂತೋಷವನ್ನೆ ಬಟ್ಟನಾಗಳು          ೭೨

ಹಠದಯೋಗವನ್ನೇ ಹೇಳ್ದ ಅಭ್ಯಾಸ ಪೂರಕದಿ
ಪಟು ಪರಾಕ್ರಮದಿ ರಾಜವ
ನಿಟಿಲ ನಯನನಾದ ಹಿಹಂಗ ಮುಂದೆ ಹೇಳ್ವೆನೆಂದು
ಚಟುಳ ಅಯ್ಯಪ್ಪ ನುಡಿದನು          ೭೩

ಮಂಗಳವು ಕೇಳಿದರಿಗೆ ಮಂಗಳವು ಹೇಳಿದರಿಗೆ
ಮಂಗಳವು ಸ್ತ್ರೀಯ ದೇಶಕೆ
ಮಂಗಳವು ಚಿದಾನಂದ ಅವಧೂತ ಚಾರಿತ್ರ
ಮಂಗಳಕೆ ಮಂಗಳೆಂದನು     ೭೪

ಇತಿ ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ
ಶ್ರೀ ಚಿದಾನಂದ ಅವಧೂತ
ಸದ್ಗುರುವರ್ಯ ಚರಣಕಮಲ ಭೃಂಗ
ಅಯ್ಯಪ್ಪ ವಿರಚಿತ ಚಿದಾನಂದ ಸದ್ಗುರು ಅವಧೂತ ಚಾರಿತ್ರದಲ್ಲಿ
ಹಠಯೋಗ ಸಮಾಪ್ತಂ
ಅಂತು ಸಂಧಿ ೪ಕ್ಕೆ ಪದ ೪೬೪ಕ್ಕಂ ಮಂಗಲಮಹಾಶ್ರೀ ಶ್ರೀ ಶ್ರೀ

 

[1] ಕುಡುರಿಸಿದನು

[2] ಕುಡುರಿಸಿದನು