ರೂಪಕ ತಾಳ ರಾಗ ತಮ್ಮಿಚ್ಛೆ

ಕೇಳಿಜನ ಸರ್ವವೆಲ್ಲ ಚಿದಾನಂದ ಅವಧೂತ
ಲೋಲ ರಾಜಯೋಗಿ ಚರಿತವಾ        ಪಲ್ಲವಿ

ಜನರು ಕೇಳಿ ಚಿದಾನಂದ ಅವಧೂತ ಚರಿತದಲ್ಲಿ
ಘನವೆನಿಪ ರಾಜಯೋಗವು
ಸುನಾಯಾಸದಿಂದ ವಿಹಂಗ ಹೇಳ್ವೆನೆಂದು ಸಾಧು
ತನಯ ಅಯ್ಯಪ್ಪ ನುಡಿದನು          

ಭೂತದಯವು ಉಳ್ಳನಿಗೆ ಭಕ್ತಿ ಬಹಳ ವೀಹನಿಗೆ
ಮಾತು ಮೋಕ್ಷಾಪೇಕ್ಷೆಯಾಡ್ವಗೆ
ಪ್ರೀತಿಯಾದ ಆತ್ಮನಿಗೆ ಚಿದಾನಂದ ಅವಧೂತ
ಪೂತ ತತ್ವವನ್ನೆ ಹೇಳ್ವದು

ಬುತ್ತಿಗಳ್ಳನಿಗೆ ಅನ್ನಕೆಯ ಗುರುತ ಮಾಡ್ವನಿಗೆ
ಪತ್ನಿಯನ್ನೆ ಬಡಿಹುತಿಗೆ
ತೊತ್ತ ಕೊಡಿಕೊಂಡಿಹನಿಗೆ ಚಿದಾನಂದ ಅವಧೂತ
ಸತ್ಯ ಚರಿತ ಹೇಳಲಾಗದು  

ನಿಲ್ಲಿಸಿನ್ನು ಹಠದಯೋಗ ವಿಹಂಗ ಪಥವು
ಆದ ಸಲ್ಲಲಿತ ರಾಜಯೋಗವ
ಮೆಲ್ಲಗಭ್ಯಾಸವನೆ ಮಾಡು ಹೇಳಿಯಿಹ ತೆರದಲ್ಲಿ
ನಿಲ್ಲಿಸು ದೃಷ್ಟವೆಂದು ಗುರವರ     

ಇಲ್ಲೆ ಅಶ್ವತ್ಥಕಟ್ಟೆ ನದಿತಟಾಕ ಸಾಧನಕ್ಕೆ
ಒಳ್ಳದಿಹುದು ಇದುವೆ ಎಂಬೆನೆ
ಗುಲ್ಲು ಬಹಳ ಹರುಗೋಲ ಹಾಕೊ ಜಾಗ ಬಿಡಲಿಬೇಕು
ಒಳ್ಳೆ ಸ್ಥಳವೆಂದುಯೆಂದನು           

ಕಂಪಲಿಯ ಪೇಟೆಯಲ್ಲಿ ರೇವಣ್ಣನು ಕಟ್ಟೆಯದು
ಪೆಂಪಿರಲು ಅದರ ಕೆಳಗೆಯು
ತಂಪುಗಾವಲಿಯ ದಡದಿ ಶಂಭುದೇವರ ಗುಡಿಯು ಬಲು
ಸೊಂಪು ಏಕಾಂತವೆಂದನು   

ಗುರುವರನ ಆಜ್ಞೆಯಿಂದ ಹೋದನಲ್ಲಿಗೆಯು ತಾನು
ಬರಸಿ ಕಾಮಾಟದವರನು
ಸರಿದು ಬಿದ್ದುದನು ಕಟ್ಟಿಸಿಯೆ ಕಲ್ಲುಗುಡಿಗೆ ಕದವ
ಯಿರಸಿ ಮಂಗಳವ ಮಾಡಿದ

ಒಳ್ಳೆ ದಿವಸದಲ್ಲಿ ಬ್ರಹ್ಮಸಂತರ್ಪಣೆಯನು ಮಾಡಿ
ಅಲ್ಲಿ ದರ್ಭಾಸನವ ಹಾಕಿದ
ಸಲ್ಲಲಿತ ಸದ್ಗುರುವ ನೆನೆದು ಸ್ವಸ್ತಿಕಾಸನಿಟ್ಟು
ನಿಲ್ಲಿಸಿದನು ದೃಷ್ಟಿ ತನ್ನಲಿ           

ಗೋಡಿಗೆಯು ದೃಷ್ಟಿಯಿಟ್ಟು ಪಕ್ಷಿ ಹಾರಿದ ತೆರದಿ
ನೋಡಿದನು ತನ್ನ ಕಡಿಗೆಯು
ಆಡಲೇನು ಬಹಿರ ಮರೆತು ಅಂಗದಲ್ಲಿ ಆ ಪರಿಯ
ಮಾಡಿದನು ಬ್ರಹ್ಮಕೆ ಗುರಿ  

ಅತ್ತ ನೋಡೆ ದೃಷ್ಟಿ ತನ್ನತ್ತ ಕಡಿಗೆ ನೋಡೆ ದೇಹ
ಮತ್ತೆ ಬಯಲಾಗಿ ತೋರ್ಪದು
ಎತ್ತಲಡಗಿದವು ಮನವು ಬುದ್ಧಿಯಿಂದ್ರಿಗಳ ಹೆಸರ
ಎತ್ತಲಿಕೆ ಇಲ್ಲದ್ಹೋದವು  ೧೦

ದೃಷ್ಟಿ ಕುಳಿತ ಜಾಗವದು ಹೃದಯವೀಗಲೆನಿಸುವುದು
ದೃಷ್ಟಿ ಕುಳಿತ ಸ್ಥಳದಲ್ಲಿಯೆ
ದೃಷ್ಟಿಯಿಟ್ಟು ಚದಲಗೊಡದೆ ದೃಷ್ಟಿ ನಿಲ್ಲಿಸಲ್ಕೆ ಅದು
ಶಿಷ್ಟ ವಿಹಂಗ ಪಥವದು     ೧೧

ಕೊಡವನಿಡಲು ಅರೆಯ ಮ್ಯಾಲೆ ಅಲ್ಲಾಡುವಳುರುಳುವುದು
ಇಡಲು ಸ್ಥಳವ ಮಾಡ್ವದು
ಬಿಡದೆ ನಿತ್ಯ ಬಯಲಿನಲ್ಲಿ ನೋಡ್ವ ದೃಷ್ಟಿ ಕುಳಿತ ಸ್ಥಳವ
ಅಡಿಗಡಿಗೆ ಬಿಡದಲಿಹುದು   ೧೨

ಲಕ್ಷ್ಯ ಕುಳಿತ ಜಾಗದಲ್ಲಿ ನೀಲ ವರ್ಣ ತೋರುವುದು
ಲಕ್ಷಿಸಲು ಶುನ್ಯೋಲಿಹದು
ಲಕ್ಷಿಸಲು ಸೊನ್ನೆ ಮಧ್ಯ ಮಿಂಚಿನಂತೆ ಆಜ್ಞೆಯ
ಸಾಕ್ಷಿಪೀತ ಭಾಸ ಹೊಳೆವುದು           ೧೩

ನೆಲ್ಲಿನ ಮುಳ್ಳುಮೊನೆಯ ಪೂತ್ರ ಕಪ್ಪು ಸೊನ್ನೆ ಮಧ್ಯ
ಜ್ವಾಲದಿಂದ ಸೂಕ್ಷ್ಮವಾಗಿಯೆ
ಎಲ್ಲಿ ತೋರುವುದು ಎನಲು ಶಿಖಾಮಧ್ಯ ವಾಸವಾಗಿ
ಸೊಲ್ಲಿಪದು ಆತ್ಮನೆನಿಸುತ೧೪

ಅದೇ ಬ್ರಹ್ಮ ಅದೇ ಶಿವನು ಅದೇ ಹರಿಯೆ ಅದೇ ಇಂದ್ರ
ಅದೇ ಈ ಚರಾಚರವೆಲ್ಲವು
ಅದೇ ಅಣುವು ಅದೇ ಮಹತ್ತು ಅದೇ ಜೀವ ಅದುವೇ ಈಶ
ಅದೇ ವೇದ ಅದೇ ಮಂತ್ರವು            ೧೫

ಅದೇ ಧೋರಿಯು ಅದೇ ರಂಕ ಅದೇ ಶುನಿಯು ಅದೇ ಶ್ವಪಚ
ಅದೇ ಪಂಡಿತ ಅಪಂಡಿತ
ಅದೇ ಕರ್ತೃ ಅದೇ ಭೋಕ್ತೃ ಅದೇ ಮೂರ್ಖ ಅದೇ ಮೂಢ
ಅದೇ ಜ್ಞಾನಿ ಅಜ್ಞಾನಿಯು     ೧೬

ಪುರುಷನದು ಸ್ತ್ರೀಯು ಅದು ಸತಿಯು ಅದು ಸುತನು ಅದು
ನೆರದ ಬಂಧು ಪಶುವು ತಾನದು
ಅರಿವು ಅದು ಮರವು ಅದು ಅಂತೆನರಿತೆಯೆಂಬುದದು
ಇರುವದದು ಬ್ಯಾರೆಯಾಗಿಯೆ          ೧೭

ಬದುಕೋದದು ಸಾವೋದದು ಹುಟ್ಟವದದು ಬೆಳೆವುದದು
ಮದುವೆ ಮುಂಜೆಯೆನಿಸುವದದು
ಅದುವೆ ನರಕ ತಿರಗೋದದು ಅದುವೆ ಸ್ವರ್ಗ ಸೇರುವಂದು
ಅದುವೆ ತನ್ನ ನಿಜವ ಹೊಂದಿಯೆ       ೧೮

ಅದುವೆ ಭೂತ ಅದುವೆ ತತ್ವ ಅದುವೆ ಜ್ಞಾತೃ ಅದುವೆ ಹಮ್ಮು
ಅದುವೆ ಬುದ್ದಿ ಅದುವೆ ಚಿತ್ತವು
ಅದುವೆ ಮನವು ಅದು ಅನಂತ ದೇಹಧರಿಸಿ ಬಿಟ್ಟುವಂದು
ಅದುವೆ ಪ್ರಕೃತಿ ಪುರಷನೆನಿಪುದು       ೧೯

ಅದುವೆ ವಿದ್ಯ ವಿದ್ಯಮಾಯಿ ಅದುವೆ ಮೂಲ ಪ್ರಕೃತಿಯೆನಿ
ಪುದದುವೆ ಮಹಾದಹಂಕಾರವು
ಅದುವೆ ಪ್ರಣವ ಪಂಚಶಕ್ತಿ ಅದುವೆ ಶುದ್ಧಸಾತ್ವಿಕ
ಅದುವೆ ತೂರ್ಯಾತೀತವೆನಿಪುದು      ೨೦

ಅದುವೆ ಜೀವಬದ್ಧನಾಗಿ ಅದೇ ಗುರು ಮುಖದಿ ತಿಳಿದು
ಅದೇ ನತ್ಯ ಮುಕ್ತನಾಗ್ವದು
ಅದೇ ನಿರ್ವಕಲ್ಪ ನಿರ್ಗುಣದೇ ನಿಶ್ಚಲವು ನಿಜವು
ಅದೇ ಸ್ವರಾಟು ವಿರಾಟವು  ೨೧

ಇಂತು ಬ್ರಹ್ಮಕೆಯು ಗುರಿಯನಂತು ಇಟ್ಟು ದಿವರಾತ್ರಿ
ಚಿಂತಿಸುತ ಸೋಹಂ ಮಂತ್ರವ
ನಿಂತ ಅಲ್ಲಿ ಕುಳಿತ ಅಲ್ಲಿ ಮಲಗಿದಲ್ಲಿ ಕಂಟಕನ
ಟ್ಟಂತೆ ಇರಬೇಕು ದೃಷ್ಟಿಯು          ೨೨

ಶಾಖಾಗ್ರದ ಚಂದ್ರನನ್ನು ಗುರುತನಿಟ್ಟು ಕಂಡೊ
ಲಕೇವಲನಾಗಿ ಬ್ರಹ್ಮದಿ
ತಾಕದಲೆ ವಿಷಯಕೆಯು ಭ್ರಾಂತು ಮೋಹಗಳು ಹುಟ್ಟ
ದೇಕ ಚಿತ್ತನಾಗಿ ನೋಡ್ವದು            ೨೩

ಏತರೊಳಗಿದ್ದಡೆಯು ಜಾರೆ ಚಿತ್ತ ಪರಪುರಷನಲ್ಲಿ
ಪ್ರೀತಿಯಿಟ್ಟಿದ್ದ ತೆರದಲಿ
ಮಾತನಾಡೆ ಉಣ್ಣುತಿರೆ ವಾತಪಿತ್ತ ಶೈತ್ಯವಿರೆ
ಆ ತೆರದಿ ದೃಷ್ಟಯಿಹುದು  ೨೪

ಏನನ್ನ ವಿಷಯಗಳ ಹಚ್ಚಿಕೊಂಡು ಬುದ್ಧಿಯದು
ತಾನೆ ಅಲ್ಲಿ ಚದಲದಿದ್ದೊಲು
ಖೂನವಿಟ್ಟು ಕಪ್ಪು ಸೊನ್ನೆ ಮಧ್ಯವನ್ನೆ ನೋಡುತಲಿ
ತಾನೆಯಿರೆ ವಸ್ತು ತೋರ್ವದು          ೨೫

ಗುರಿಯು ಕರಗಿದರೆ ಮತ್ತೆ ಗುರಿಯ ಸ್ಥಳವ ಹಿಡಿಯಬೇಕು
ಗುರಿಯು ಮತ್ತೆ ಅಸಗುತಿದ್ದೊಡೆ
ಕಿರಿಯಗಣ್ಣಿನಿಂದ ತುಬಾಕಿ ಮಜರೆ ಹಿಡಿದ ತೆರದಿ
ಇರಲು ಗಿರಿಯು ನಿಲ್ಲುತಿಹುದು       ೨೬

ಕದಲಗೊಡದೆ ಚದಲಗೊಡದೆ ಕಡಿಗೆ ದೃಷ್ಟಿ
ಹರಿಯಗೊಡದೆ ಅದೇ ಸ್ಥಳದಿ
ಗುರಿಯನಿಡಲಿಕೆ ಮೊದಲ ತೆರದಿ ನಿಲ್ಲುವದು ವಿಧ ವಿಧದ
ಬೆಳಗುಚೆಲ್ಲುತದೇ ವಿಹಂಗನೆನಿಪುದು೨೭

ಹರನು ಈಗ ತ್ರಿಪುರಕೆಯು ಗುರಿಯು ಹಿಡಿದ ಆ ತೆರದಿ
ಇರಲಿಬೇಕು ಅಂತರ್ಯದಲ್ಲಿಯು
ಪರಿಪರಿಯು ಬೆಳಗ ತೋರೆ ಪದರ ಮಾಡಿ ಮತ್ತೆ ಗುರಿಯು
ನಿರಿಸೆ ಪರವಸ್ತು ತೋರ್ವದು            ೨೮

ಸುಂದರದ ಸ್ತ್ರೀಯಳಲ್ಲಿ ದೃಷ್ಟಿನಿಂದ ಆ ತೆರದಿ
ಹೊಂದಿ ಲಕ್ಷದಲ್ಲಿ ದೃಷ್ಟಿಯು
ಛಂದಛಂದದ ಕಳೆಯು ಚಲ್ಲುತುದ್ದಿನೋಲು ತೋರೆ
ಅಂದು ಅಲ್ಲಿ ದೃಷ್ಟಿಯಿಡುವುದು    ೨೯

ಅನುಮಿಷರಿಗೆ ಕಣ್ಣುರೆಪ್ಪೆಯಿಲ್ಲದಿರೆ ನೆಟ್ಟಾಲಿಲಿ
ಅನುಮಿಷರು ನೋಡ್ದ ತೆರದಲಿ
ಇನಿತು ಮಿಸಗದಲೆ ಕಣ್ಣುಗೊಂಬೆ ಗುಡ್ಡೆ ತಿರುಗದಲೆ
ದಿನವಿರಲು ವಸ್ತು ತೋರ್ವದು         ೩೦

ಅರಸಾನರೆಂದು ಕೇಳ್ವೆ ಅರಸನದಕೊನಡುವೆ ಅಹನೆ
ಅರಸ ಕೀರಿಟವಿಟ್ಟಿಹನೆನೆ ಅರಸನಹುದು ಎಂದ
ತೆರದಿ ಕಳೆಯ ಮಧ್ಯ ಹೊಳೆಹೊಳೆವ
ಗುರಿಯು ಅದೇ ಪರಮಾತ್ಮನೂ       ೩೧

ಮಟ್ಟಮುರಿಕೆ ಗಿಡಕೆವೈದ್ಯ ಅಡವಿಹುಡುಕೆ ಕಂಡವರು
ಮುಟ್ಟಮುರಿಕೆ ಅಕೋ ಎಂದೆನೇ
ದಷ್ಟಿಸಿಯೆ ಅಹುದುಯೆಂದು ಕಂಡತೆರದಿ ತೇಜಮಧ್ಯ
ಸ್ಪಷ್ಟ ತೋರ್ವ ಗುರಿಯೆ ಬ್ರಹ್ಮವೂ೩೨

ಧರುಣಿಯಲ್ಲಿ ದ್ರವ್ಯವಿರಲು ಅಂಗೈಗೆ ಅಂಜನ್ಹಾಕಿ
ಇರುವ ಧನವ ಸಧ್ಯ ಕಂಡೆಲೂ
ಕಿರಣ ಕಿರಣ ಉಕ್ಕುತಿರಲು ನಡುಮಧ್ಯ ಸೊನ್ನೆಯೊಳು
ಸ್ವರಣವರಣವದುವೆ ಬ್ರಹ್ಮವು        ೩೩

ಭಾನುಮಂಡಲವ ನೋಡೆ ಕಿರಣ ಕಣ್ಣು ಕುಕ್ಕುವವು
ತಾನು ಬಿಡದೆ ನೋಡೆ ತೋರ್ವನು
ಹಾನಿಯಾಗಗೊಡದೆ ಗುರಿಯು ಕಳೆಯು ಮಧ್ಯ ನೋಡೆ
ತಾನು ಅಡಗಿ ಬ್ರಹ್ಮ ತೋರ್ವದೂ     ೩೪

ತನ್ನ ಮುಖವು ತನಗೆ ಕಾಣದಿರೆ ಕನ್ನಡೆಯ ನೋಡಿ
ಇನ್ನು ಕಂಡ ತೈರದಿ ಬುದ್ದೀಲಿ
ತನ್ನೊಳಿಹ ಆತ್ಮ ಕಾಣ ಬಾರದಿರಲು ಲಕ್ಷವಿಟ್ಟು
ಹೊನ್ನಿನಂತಿಹನ ಕಾಣ್ವದೂ            ೩೫

ಚಿಮ್ಮಟಿಗೆಲಿ ಮುಳ್ಳನೀಗ ಅಮರಿಸಿಯೆ ಹಿಡಿದ ಅಂತೆ
ಇನ್ನು ನೀಲ ಸೊನ್ನೆ ಮಧ್ಯದಿ
ರನ್ನದಂತೆ ಅಣುವಿನೋಲ್‌ ಇಹ ಪರಬ್ರಹ್ಮವನ್ನು
ಇನ್ನು ಹಿಡಿಯಬೇಕು ಲಕ್ಷ್ಯದಿ           ೩೬

ರತ್ನ ಅರಿವೆ ಗಂಡಿನೊಳು ಕಟ್ಟಿಯಿರಲು ಬಿಚ್ಚಿ ನೋಡೆ
ರತ್ನವನ್ನೆ ಕಂಡ ತೆರದಲೀ
ಬಿತ್ತುತಿರಲು ಕಳೆಯು ನೀಲಸೊನ್ನೆ ನಡುಮಧ್ಯ ಬ್ರಹ್ಮ
ಮತ್ತೆ ಮಿಂಚಿನಂತೆ ತೋರ್ವದೂ        ೩೭

ತನ್ನ ಕಡಿಗೆ ಲಕ್ಷವಿಟ್ಟು ಬಯಲಲಂಗುಷ್ಟಮೂತ್ರ
ಇನ್ನು ತೋರೆ ನೀಲಸೊನ್ನೆಯಾ
ಇನ್ನು ದಿನ ಪ್ರತೀಲಿ ಸವದು ಹುಣಿಸೆ ಕಾಳಷ್ಟು ಆಗು
ತಿನ್ನು ತೊಗರಿಯಷ್ಟು ಉಳಿವುದೂ   ೩೮

ಗುರಿಯು ಉದ್ದಿನ ಮಾತ್ರ ನೀಲಸೊನ್ನೆ ದಿನಂಪ್ರತೀಲಿ
ಕರಗಿ ಶಾವೆ ಕಾಳ ಮಾತ್ರದಿ
ಇರುವ ಶಾವೆಕಾಳು ಸವದು ನೆಲ್ಲುಮುಳ್ಳು ಮೊನೆಯ ಮಾತ್ರ
ಇರುವದಗ್ನಿಯಂತೆ ಬ್ರಹ್ಮವೂ          ೩೯

ಇದುವೆ ಖೇಚರಿಯ ಮುದ್ರೆ ಇದುವೆ ದಹರಾಕಾಶ ಲಕ್ಷ
ಇದುವೆ ಅಂತರ್ಯ ಲಕ್ಷವು
ವಿಧವಿಧದ ನಾಮದಲ್ಲಿ ರಾಜಯೋಗ ಕರೆಸುವುದು
ಇದುವೆ ವಿಹಂಗ ಮಾರ್ಗವು  ೪೦

ಕಣ್ಣುತೆರೆಯೆ ಕಣ್ಣು ಮುಚ್ಚೆ ಗುರಿಯು ಅಲ್ಲೆ ಇರಲಿಬೇಕು
ತನ್ನ ಬ್ರಹ್ಮವೆಂದು ಮರಿಯದೇ
ಇನ್ನು ಏನ ಕಂಡುದೆಲ್ಲ ಇತರವಿಲ್ಲ ನಾನು ಎನಲು
ಉನ್ನತದ ಸಮಾಧಿಯೆನಿಪದು          ೪೧

ತಾನೆ ಬ್ರಹ್ಮ ತಾನೆ ಪರಮ ತಾನೆ ಸಾಕ್ಷಿ ತಾನೆ ಕರ್ತೃ
ಯೆನುತ ತನ್ನ ತಾನೆ ಮರೆತೆಯೂ
ಈ ನುಡಿಯ ಅಂದುಕೊಳುವನಾವನವನೆ ತಾನುಯಂದೆ
ತಾನೆ ಇರಲು ಅದು ಸಮಾಧಿಯೂ     ೪೨

ಹರಳಹೆಂಚು ಯೆಲವು ಪಚ್ಚೆ ಮರವು ಗಿಡವು ಬಳ್ಳಿ ತ್ರಿಣವು
ನರರು ಸ್ತ್ರೀಯು ಗೋವು ಶುನಿಗಳೂ
ಹರಿಯು ಹರನು ಹಂಸವಾಹ ತಾನೆಯೆಂದು ತನವು ಮನವು
ಪರವಶಿರೇ ಅದು ಸಮಾಧಿಯೂ       ೪೩

ಗಡಿಗೆವಟ್ಟಿ ಕಂಬಾರನಿರಲು ಉರಿಯು ಗಡಿಗೆಗಳ
ಒಡಲ ತುಂಬಿ ಹೊರಗೆಯಿದ್ದೊಲು
ಅಡಕಲಾದ ಜಾಂಡದೊಳಗೆ ಹೊರಗೆವಳಗೆ ತುಂಬಿಸಾನೆ
ಕಡುವೆಳಾಗುಯೆನೆ ಸಮಾಧಿಯೂ      ೪೪

ಛಿದ್ರಘಟದಿ ದೀವಿಗೆಯು ವಳಹೊರಗೆ ಬೆಳಗಿದೊಲು
ಛಿದ್ರತನುವಿನೊಳಗೆ ಹೊರಗೆಯೂ
ಶುದ್ಧವಾಗಿ ಬೆಳಗು ಸಂವಿತ್ತು ನಿಜವುತಾನೆ
ಸ್ವಸಿದ್ಧವು ಎನೆ ಸಮಾಧಿಯೂ         ೪೫

ಬಟ್ಟನಿಟ್ಟಂತೆ ಹೃದಯ ಪೆಟ್ಟಿಗಯೊಳು ಗುರಿಯ ನಡುವೆ
ದೃಷ್ಟಿ ನೆಲೆಗೊಳಲು ತೇಜವೂ
ಕಟ್ಟಳಿಲ್ಲದಲೆ ಹುಟ್ಟೆ ಕಂಡುಮನವು ಸುಖಬಡಲು
ಸ್ಪಷ್ಟ ಗುಣಸಮಾಧಿಯೆನಿಪುದೂ     ೪೬

ವಿಮಲ ನೀಲಸೊನ್ನತೆ ಮಧ್ಯ ಖಿಡಿಯನೀಗ ನೋಡುತಿರಲು
ಅಮಮ ಅಲ್ಲೆವುಕ್ಕುವಾ ಕಳೆ
ಭ್ರಮಣಿನಾನ ಹರಿದು ಮನವು ಸುಖಬಡುತಿರಲು ಸವ್ಯಕಲ್ಪ
ಮಿಮಲ ಸಮಾಧಿಯೆನಿಪುದು           ೪೭

ಬಗೆಬಗೆಯ ಬೆಳಕು ತೋರೆ ಗುರಿಯು ಕುಳಿತಿದ್ದ ಸ್ಥಳದಿ
ಝಗಾಝಗಾಯೆನ್ನುತಾ
ಸೊಗಸಿನೊಳು ಮಗ್ನನಾಗಿ ಮನವು ಇರುತಿರಲಿಕದು
ಸಗುಣ ಸಮಾಧಿಯು ಎನಿಪುದೂ       ೪೮

ಚಂದ್ರಜ್ಯೊತಿ ಬಿರುಸುಬಾಣ ಸಂದು ಇಲ್ಲದಲೆ ಗುರಿಯ
ಲಂದು ತೋರಿ ಬಯಲಾಗಲೂ
ನಿಂದು ನೋಡಿ ಮನವು ಸುಖಬಟ್ಟು ಹಾಯಿಹಾಯಿರಾ
ಲಂದು ಸಗುಣ ಸಮಾಧಿಯೆನಿಪುದು   ೪೯

ನಿರ್ವಿಕಲ್ಪ ಸಮಾಧೆನಲು ಗಾಳಿ ಕಳೆದ ದೀಪದಂತೆ
ಸರ್ವ ಮರೆತು ತಾನೆಯಾಗಿಯೇ
ಇರುವ ನಾದಬಿಂದು ಕಳಾ ಮರೆತು ಅರಿವಿಗರಿವೆಯಿರಲು
ನಿರ್ವಿಕಲ್ಪ ಸಮಾಧಿಯೆನಿಪುದೂ        ೫೦

ಥೆರೆಯೂ ನೊರೆಯು ಅಡಗಿದಾ ಶರಧಿಯಾ ತೈರನಂತೆ
ಪರಿಪರಿಯ ಆಭರಣವೂ
ಕರಗಿ ಸ್ವರ್ಣವಂದಾದಂತೆ ಇರುವ ವೃತ್ತಿಯಡಗಿ ಬ್ರಹ್ಮ
ವಿರಲು ನಿರ್ವಿಕಲ್ಪವೆನಿಪುದೂ           ೫೧

ಯದುರನಳಿದು ಬಾಹ್ಯವಳಿದು ಏನೇನು ಯಚ್ಚರಳಿದು
ಸುಧೆಯ ಸ್ವರೂಪವಾಗಿಯೇ
ತುದಿಯ ಗುರಿಯನೀಗ ಅಳಿದು ತುದಿಯ ಗುರಿಯೆ ತಾನೆ ಆಗಿ
ನಿಧಿಯೊಲಿರಲು ನಿರ್ವಿಕಲ್ಪವೂ         ೫೨

ನಿರ್ವಿಕಲ್ಪವೆಂದಡೆಯು ಕಲ್ಪವೆಣೆಲ್ಲ ಅಡಗಿ ಹಾದು
ತೋರ್ವ ಅನುಭವವನೆಲ್ಲವಾ
ಸರ್ವವೆಲ್ಲವನೆ ಕಳೆದು ಸಂತೋಷಾಗಿ ಸುಖವು ಮನಕೆ
ಬೀರ್ವದದು ನಿರ್ವಿಕಲ್ಪವೂ೫೩

ಸಮಾಧಿಯು ಎಂದಡೆಯು ಸರ್ವಜಾತಿಯು ಸಮನು
ಸಮವು ಊಚನೀಚವೆಂಬದೂ
ಸಮನೆ ಆಗಿ ಧೊರೆಯುರಂಕವಂದೆ ಬ್ರಹ್ಮವೆಂದು ಕಾಣೆ
ಸಮಾಧಿಯುಯೆಂದೆನಿಪುದೂ           ೫೪

ಅನ್ನವೀಗ ಅಕ್ಕಿ ಅಹದೆ ಬೆಣ್ಣೆ ಈಗ ಮೊಸರು ಅಹದೆ
ಹಣ್ಣುಯಳಿಯ ಕಾಯಿ ಅಹದೇ
ಪೂರ್ಣಬ್ರಹ್ಮವಾದಾತ ಮತ್ತೆ ಜೀವ ಆಹನೆಂತು
ಉನ್ನತಾದ ಬ್ರಹ್ಮವೀಹನೂ            ೫೫

ಕರ್ಪುರವು ವುರಿಯ ಕೂಡಿ ವುರಿಯು ಆಗೆ ಕರ್ಪುರೆಲ್ಲಿ
ಉಪ್ಪು ಈಗ ನೀರು ಕೂಡಿಯೇ
ಇಪ್ಪನಿಲ್ಲದಲೇ ನೀರು ಆದ ತೆರದಿ ಬ್ರಹ್ಮವಾ
ದಪ್ಪ ಮತ್ತೆ ಜೀವನಹನೇ   ೫೬

ಜನನ ಮರಣಗಳುಹುರಿದು ದುರ್ಗುಣಂಗಳೆಲ್ಲ ತರಿದು
ನೆನಹು ಪ್ರಪಂಚ ಅಡಗಿಯೇ
ಕನಸು ಜಾಗ್ರ ಸುಷುಪ್ತಿಯಡಗಿ ಶುದ್ಧಬ್ರಹ್ಮವಾಗಿ
ದಿನಪನಾಗಿ ಬೆಳಗುತಿಹನು   ೫೭

ನೀರುನೀರ ಕೂಡ್ದ ಅಂತೆ ಕ್ಷೀರಕ್ಷೀರ ಕೂಡ್ದ ಅಂತೆ
ಪಾರಪಾರ ಕೂಡ್ದ ಅಂದದೀ
ಚಾರುಸಕ್ಕರಿಯೊಳಗೆ ಸಕ್ಕರಿಯು ಕೂಡ್ದ ಅಂತೆ
ಪಾರಮಾತ್ಮನಲ್ಲಿ ಬೆರತನೂ           ೫೮

ಇಂತು ಪರಿಯಲಿಂದ ಶಂಭುದೇವರ ಗುಡಿಯೊಳಗೆ
ಅಂತು ನಿರ್ವಿಕಲ್ಪಯೋಗವ
ಸಂತಸದಿ ಬಿಡದೆ ಮೂರು ವರುಷ ಮಾಡಿದನು ಗುರು
ಸಂತನ ಕರುಣದಿಂದಲೀ       ೫೯

ಯೋಗವೀ ಪರಿಯಲಿಂತು ಮಾಡಲಿಕೆ ಗುಡಿಯ ಬಳಿಯ
ಲಾಗಲಿತ್ತು ವಟದವೃಕ್ಷವು
ಆಗ ಬೀಳೆ ಅದರೊಳೊಂದು ಹೆಬ್ಬಾವು ಸೇರಿಯಿತ್ತು
ಹೋಗಿ ಸೇರಿದುದು ಗುಡಿಯನೂ      ೬೦

ಚಿನುಮಯನು ಈ ಪರಿಯ ನಿರ್ವಕಲ್ಪವಿರಲು ಸರ್ಪ
ತನುವಿಗೆಯು ಸುತ್ತಿಹುದು
ಜನವು ಕಂಡು ಬೆರಗು ಆಗಿ ನೋಡ ಹೋಗೆ ಬಿಟ್ಟ್ಹೋಹದು
ದಿನವು ಈ ಪರಿಯಲಿಂದಲೀ೬೧

ಸುತ್ತಿ ಮೈಗೆ ಸರ್ಪವೀಗ ನೆತ್ತಿಮ್ಯಾಲೆ ಹೆಡೆಯನೆತ್ತಿ
ಮತ್ತೆ ಆಡಿಕೊಳುತಲಿರಲಿಕೆ
ನಿತ್ಯ ಆನಂದದಲ್ಲಿ ಮೈಮರೆತು ವಾಯು ಅಡಗಿ
ಸತ್ಯ ಬ್ರಹ್ಮವಾಗಿಹನೂ      ೬೨

ಆನಂದನೆಂಬ ಅಮ್ಮ ಕಟ್ಟೆ ಗೋವಿಂದನಕ್ಕ
ತಾನು ಸೇವೆ ಮಾಡುತಿಹಳು
ತಾನು ತರುವಳು ನಿತ್ಯ ಹಾಲು ಸರ್ಪವನ್ನೆ ಕಂಡು
ಮೌನದಿಂದಯಿಟ್ಟು ಹೋಹಳೂ      ೬೩

ಎಚ್ಚರಾಗೆ ತನುವ ಮ್ಯಾಲೆ ಬಿಚ್ಚಿ ಹೋಹದು ಸರ್ಪ
ಇಚ್ಚೆಯಾಗೆ ಹಾಲು ಕುಡಿವನು
ಮುಚ್ಚಲಿಕ್ಕೆ ಸಮಾಧಿಯು ಎಚ್ಚರವು ತಪ್ಪೆಹಾಲು
ಸ್ವಚ್ಚವಾಗಿ ಹಾವು ಕುಡಿವದೂ        ೬೪

ಬಲು ಜನವು ನೆರಿಯಲಿಕ್ಕೆ ಕೆಲಸವಿದು ಅಲ್ಲವೆಂದು
ಚಿಲುಕವಿಡುವ ಬಾಗಿಲಿಕ್ಕೆಯೇ
ಒಳಗೆಯಿಹ ನಾಲ್ಕುಯೆಂಟು ದಿವಸ ಕದವ ತೆರಿಯದಲೆ
ಬಲು ಸಮಾಧಿಯಿಳಿಯದಾಗಳೂ      ೬೫

ಕುಳಿತರೆಯು ಕುಳಿತುಯಿಹ ಮಲಗಿದರೆ ಮಲಗಿಯಿಹ
ಬಳಿಕ ಆವ ಮಗ್ಗುಲಿದ್ದರೆ
ಹಲವು ದಿವಸ ಹತ್ತು ಹದಿನೈದು ಆಗೆ ಹಾಗೆಯಿಹ
ಇಳಿಯದಲೆ ಮಹಾಸಮಾಧಿಯಾ       ೬೬

ಈ ಪರಿಯ ಸಮಾಧಿಯಲಿ ಕದವನಿಟ್ಟು ಎರಡು ಮಾಸ
ರೂಪದೋರದಲೆ ಇರಲಿಕೇ
ಓಪಲಾರದಲೆ ಭಯದಿ ಏನೋ ಎಂದು ಭಕ್ತರೆಲ್ಲ
ತಾಪಕೊಳಗು ಆದರೆಲ್ಲರೂ            ೬೭

ಕದವ ತೆರಿಯೆ ಬಾರದಿರಲು ಚಿದಾನಂದ ಗುರು ಆನೆಗೊಂದಿ
ಗೊದವಿ ಹೋಗಿರಲು ಅಲ್ಲಿಗೇ
ಸದುಭಕುತ ವೈಶ್ಯ ತಿಮ್ಮಣ್ಣನೆಂಬುವನು ಗುರುವ
ಪಾದಕೆಯು ನಮಿಸಿ ಹೇಳ್ದನೂ         ೬೮

ಗುರುವೆ ಕೇಳು ನಿಮ್ಮ ಶಿಷ್ಯ ಎರಡು ತಿಂಗಳಾಯ್ತು ಕದವ
ತೆರಿಯದಲೆ ಚಿಲುಕವಿಕ್ಕಿಯೇ
ಇರುತಲಿಹ ಒಳಗೆ ಆಹಾರವಿಲ ಮಂದಣ
ತೆರನೇನೆಂದು ಬಿನ್ನೈಸಿದಾ   ೬೯

ಎದ್ದನಾಗ ಚಿದಾನಂದ ಸದ್ಗುರುವು ವಾಕ್ಯ ಕೇಳ
ಲೆದ್ದ ಸಂಗಡಲೆ ಜೀನವಾ
ಬಂದಿಡಿಯೇ ಏರಿ ಹೊರಟ ಶಿದ್ಧನಾಗಿ ಉಣ್ಣದಲೆ
ಮಧ್ಯ ಬಿಸಲಿನೊಳಗೆ ಬಂದನೂ        ೭೦

ಕಷ್ಟವನ್ನೆ ಬಟ್ಟು ಜನವು ಪರಿಪರಿಯ ಮಾತನಾಡು
ತೆಷ್ಟು ಹೊತ್ತಿಗೆಯು ಗುರುಗಳೂ
ಬಿಟ್ಟು ಬರುವರಾನೆಗೊಂದಿ ಎನುತಿರಲು ಕುದರಿಯನು
ಅಟ್ಟಿಸುತ ಬಂದು ಇಳಿದನೂ           ೭೧

ಬಂದು ಬಾಗಿಲಿಗೆ ನಿಂದು ಕರೆದು ಬಾರಯ್ಯ ನಾನು
ಬಂದಿಹೆನು ಚಿದಾನಂದನೂ
ಎಂದೆನಲು ಕೇಳದಿರೆ ಇಂದು ಕಿತ್ತಬೇಕು ಕದವ
ನೆಂದು ಬಡ್ಡರನ್ನೆ ಕರಸಿದಾ೭೨

ಕಿತ್ತಿದರು ಕದವನೀಗ ಮತ್ತೆ ಗಡಾರಿಯ ಹಾಕಿ
ತೆತ್ತಿಸಿದ್ದ ಚಿಲುಕ ಮುರಿದರು
ಕತ್ತಲ್ಹೋಗಿ ಬೆಳಕು ಆಗಿ ಸರ್ಪಭೂಷಣನಂತೆ ಕುಳಿತು
ಮತ್ತೆ ಇದ್ದ ಹಾವು ಸುತ್ತಿಯೇ          ೭೩

ಹರಹರಾಯೆಂದರಾಗ ನೆರೆದ ಪ್ರಜೆಯು ಕೈಯ ಮುಗಿದು
ಪರಮನು ಈತನೆನುತಲೀ
ನೆರಳ ತೆಗೆಯಿರೆಂದೆನುತ ನೋಡಲಿಕ್ಕೆ ಸರ್ಪ ತಾನು
ತೆರಳದದು ಜಲ ಹರಿಯಲೀ೭೪

ಗುಡಿಯ ಹೊಕ್ಕು ಗುರುರಾಯ ತಡಹೀ ನೋಡೆ ಅಂಗವದು
ಕಡು ಬೆಟ್ಟಗೆಯು ಇರಲಿಕೆ
ಒಡನೆ ಸಂತೋಷವು ಆಗೆ ಉಸುರೆನೆಲ್ಲಿ ಕಾಣದಲೆ
ಅಡಿಗಡಿಗೆ ನೋಡುತಿರ್ದನು೭೫