ರೂಪಕ ತಾಳ ರಾಗ ತನ್ನಿಚ್ಛೆ

ಕೇಳಿಜನ ಸರ್ವವೆಲ್ಲ ಚಿದಾನಂದ ಅವಧೂತ
ಲೋಲ ರಾಜಯೋಗಿ ಚರಿತವಾ        ಪಲ್ಲವಿ

ಕೇಳಿಜನ ಚಿದಾನಂದ ಅವಧೂತ ಚರಿತದಲ್ಲಿ
ಹೇಳ್ವೆ ಕಾಶಿಯಾತ್ರೆ ಮಹಿಮೆಯಾ
ಬಾಳಬ್ರಹ್ಮಜ್ಞಾನಿಗಳ ಚರಣವನ್ನೆ ಹೃದಯದಲ್ಲಿ
ತಾಳಿ ಅಯ್ಯಪ್ಪ ನುಡಿದನೂ           

ಆತ್ಮ ಅಂಜನೀಕರಿಗೆ ಆಧ್ಯಾತ್ಮ ಚಿಂತಕರಿಗೆ
ಯಾತಕೆಯು ಇಚ್ಚೆ ಮಾಡದಾ
ಭೂತಬ್ರಹ್ಮಾಂಡ ಪಿಂಡಾಂಡದಲ್ಲಿ ಅಳಿದರೀಗೆ
ಸಾತಿಶಯದೀ ಇದನು ಹೇಳ್ವದೂ     

ಕೊಟ್ಟ ಗಂಟು ನುಂಗುವರಿಗೆ ಕೊಟ್ಟುದಿಲ್ಲವೆಂಬರಿಗೆ
ಸಿಟ್ಟು ಮಾಡಿ ಹೆಂಡತಿಯೊಳು
ಜುಟ್ಟುಜನಿವಾರ ಘಳಿಘಳಿಗೆ ಹರುಕೊಂಬನೀಗೆ
ಶಿಷ್ಟತತ್ವ ಹೇಳಲಾಗದು   

ಬಳಗನೂರಿಲಿಂದ ಮುಂದಕೆಯು ನಡೆದನಾಗ ಯೋಗಿ
ಕಲ್ಲುಮುಳ್ಳುಗಳು ಕಾಲ್ಗೆ ತಗಲಲೂ
ಬಳಲಿಕೆಯು ಗಣಿಸದಲೆ ಬ್ರಹ್ಮವಾಗಿ ಮಾರ್ಗದವನು
ಬಲು ಮಹಾತ್ಮ ಹೋಗುತಿರ್ದನೂ  

ಹಸಿವಿಗೆಯು ಅಡವಿತೊಪ್ಪಲನೆ ತಿಂಬ ನೀರ ಕುಡಿವ
ಉಸುಕಿನ ಮ್ಯಾಲೆ ಮಲಗುವಾ
ಬಿಸಿಲು ಮಳಿಯು ಛಳಿಯು ಗಾಳಿ ಎನ್ನದಲೆ ಉತ್ತರದ
ದೆಶಿಗೆ ನಡೆದು ಹೋಗುತಿರ್ದನೂ      

ನೋಡದಲೆ ಮಾರ್ಗವನ್ನು ಗುಣಮೆಟ್ಟ ಕಲ್ಲದಾಟಿ
ಕೋಡೂರಿಗೆಯು ಹೋಗಿಯೆ
ಪಾಡಾಗಿ ಗೋರಿ ಗುಮ್ಮಟದ ಕಟ್ಟಿಯು ಸುಡು
ಗಾಡೊಳಿರಲು ಕುಳಿತನಲ್ಲಿಯೂ      

ಅಂದಿಗೆಯು ಎಂಟು ದಿವಸ ಅನ್ನಹಾಲು ಇಲ್ಲದಲೆ
ಬಂದಿರಲು ಅಲ್ಲಿಗೊಬ್ಬಳು
ಮಂದಿಗಳ ಎಮ್ಮಿಯನ್ನು ಕಾಯಲಿಕ್ಕೆ ಬಂದು ಕಂಡ
ಳಂದು ಕುಳಿತ ಮಹಾಮಹಿಮನ       

ತಾನೆ ಬಂದು ಸನಿಯಕೆಯು ಏರನಿಳಿಯ ನೋಡಿದಳು
ಏನನ್ನ ಬಿಡುಸುವೆಯಾ ಏನೆ
ಜ್ಞಾನಿಯಂದನಾಕಿಗೆಯು ಬಿಡಿಸುವೆನು ಅಹುದುಯೆನಲು
ಏನ ಬಿಡಿಪೆಯಾಯೆಂದಳೂ 

ಹೆಂಡತಿಗೆ ಗಂಡ ನಾನು ಗಂಡನಿಗೆ ಹೆಂಡತಿಯನು
ಖಂಡಿತದಿ ಬಿಡಿಸುವೇನೆನೆ
ದಿಂಡುಗೆಡದು ಎನ್ನ ಒಡಿಯ ಊರೊಳಗೆ ಚಿಕ್ಕುಚಿನಗು
ಗಂಡಹೆಂಡರಿಹರುಯೆಂದಳು           

ಬಿಡುಸಬೇಡ ಗಂಡಹೆಂಡರುಗಳ ಊರ ಹೋಗಲಿಬ್ಯಾಡ
ಹಡದಿಹನು ನಾನು ನಾಲ್ವರ
ತೊಡರ ಮಾಡಿಹೆನು ಮೂವ್ವರಿಗೆ ಇಂದು ನಾಳಿನೊಳಗೆ
ತೊಡಿಪೆ ಕುಪ್ಪಸೊಬ್ಬಗೆಂದಳೂ       ೧೦

ಹಾಲ ತಂದು ನಿನಗೆ ಕುಡಿಪೆ ಊರೊಳಗೆ ಬರಲಿಬ್ಯಾಡ
ಕಾಲು ಬಿದ್ದೆ ನಾನುಯೆಂಬೆನೆ
ಕೇಳಿ ಹೋಗಿಕೊಂಡು ಬಾಯನ್ನಲೀಕೆ ಹೋದಳಾಗ
ಬಾಲೆ ತಿರಗಿತಿರಗಿ ನೋಡುತ            ೧೧

ಹಾಲತಂಬಿಗೆಯೊಳು ಬಗ್ಗಿಸಿಯೇಕೊಳಲು ಮನೆಯೊಳಾಕೆ
ಕೇಳಿದರು ಆರಿಗೊಯ್ವನೆ
ಮೂಳಮುಂಡೆ ಮಕ್ಕಳಿರಾ ಗಂಡಹೆಂಡರನು ಬಿಡಿಪ
ಕಾಳು ಜೋಗಿಗೊಯ್ವನೆಂದಳೂ       ೧೨

ಹುಚ್ಚರಂಡೆ ಮಗಳೆ ನಾವು ಬಿಡದೆ ಆತ ಬಿಡಸುವನೆ
ಆಶ್ಚರಿದುಯಂದು ವಾರ್ತೆಯೂ
ಬಿಚ್ಚಿದುದೂ ಊರು ಅಗಲ ಹೆಣ್ಣು ಗಂಡು ಸರ್ವರೆಲ್ಲ
ಕೊಚ್ಚಿಬಂತು ನೋಡಲಿಕ್ಕೆಯು        ೧೩

ಆರಬರಲಿ ಬ್ಯಾಡ ರಂಡೆ ಮಕ್ಕಳಿರಾ ಬಿಡಿಪ ಕರೆಯ
ದೂರವಿರಯೆಂದು ನಿಲ್ಲಿಸೆ
ಭಾರಿಭಾರಿ ಗುಂಪುಗಳು ದಟ್ಟಡಿಯಲಿ ನೋಡುತಿರೆ
ನಾರಿ ಹಾಲಕೊಂಡು ಬಂದಳು           ೧೪

ಕೆಡದು ಪಾರಕೆಯು ಹಲ ಇತ್ತಳಾಗ ಕುಡಿಯು ಎಂದು
ಕುಡಿದನೀಗ ಆರಿಶಾರಿಸಿ
ಒಡಲೊಳಗೆಚ್ಚೆತ ನಾವು ಹುಟ್ಟಿದುದು ಕಾಲ್ಗೆಕೈಗೆ
ಹಿಡಿಯು ಎಂದು ಇತ್ತ ತಂಬಿಗೆ          ೧೫

ಬಿಡಿಸುವನು ಗಂಡಹೆಂಡಿರನು ಈಗ ಆತನೆಂದು
ಕಡುಜನವು ಬೆರಳಿನಿಂದಲೀ
ಒಡನೆ ತೋರೆ ತೋರಬ್ಯಾಡಿ ಬಿಡಿಪ ತೋರಿದವರನೆಂದು
ನುಡಿವುತಿತ್ತು ಸರ್ವಜನಗಳೂ           ೧೬

ಮಾಡಬ್ಯಾಡಿ ಬಾಯ ಮಾಡಿದವರ ಬಿಡಿಸುವನು ಇತ್ತ
ನೋಡತಾನೆ ಆಕೋ ಎನುತಿರೆ
ಮೂಳಮುಂಡೆ ನುಡಿದಳಾಗ ನಡುಗುವೆನು ಕುಡುರಬ್ಯಾಡಿ
ಕೇಡು ನೀನುಯಿದ್ದರೆಂದಳೂ           ೧೭

ಇಂದು ಇರುವೆ ನಾನೀಗ ಎಂದನಲು ಅಡ್ಡಬಿದ್ದು
ತಂದೆ ನಡಿಯೊ ನಂಬಿಗೆನಗೆಯೂ
ಎಂದಿಗಾಗದಿಕೊಹಾದಿ ಸದಾಶಿವನ ಪ್ಯಾಟಿಗೆಯು
ಮಂದಿ ಹೋಗುತದೆಯಂದಳೂ         ೧೮

ಏನು ಮಾಡೆ ಕುಡುರಗೊಡದಲಿರಲು ಆಕೆಯೂ ಈಗ
ತಾನು ಎದ್ದು ನಡೆದ ಮುಂದಕೆ
ತಾನೆ ಬ್ರಹ್ಮವಾಗಿ ಹೆಜ್ಜೆಯನು ಮುಂದಕಿಕ್ಕುತಲಿ
ತಾನೆ ಹೋಗುತಿರ್ದ ಪಥವನೂ         ೧೯

ಮುಂದೆ ನೋಡಿ ನಡೆದ ಮಾರ್ಗ ಎಡಬಲವ ನೋಡದಲೆ
ಅಂದು ಸದಾಶಿವನ ಪ್ಯಾಟಿಯೂ
ಹೊಂದಿಯಿತ್ತು ಸುಡುಗಾಡಿನೊಳಗೆ ಬೇವಿನವೃಕ್ಷ
ವಂದು ಕಟ್ಟಿಯಿರಲು ಕುಳಿತನು        ೨೦

ಬಂದರಲ್ಲಿಗೆಯೂ ಶೌಚಕಂತ ಕೋಮಟಿಗರು
ಅಂದು ಅವರು ಗುರುಪುತ್ರರು
ಮುಂದೆ ನೋಡಿದರು ಮನೋಹರದ ರೂಪ ಬದಿಗೆ ಬಂದು
ಇಂದು ಆರು ನೀವುಯಂದರೂ          ೨೧

ಎನಲಿಕೇಯು ಅಂದ ಯೋಗಿ ನೀವಾದಾತಾ ಜಗವಾದಾತಾ
ಮನಕೆ ಬುದ್ಧಿಗತ್ತತ್ತನೂ
ಅನಿತರೊಳು ತುಂಬಿಹಾತ ನಾನುಯೆನಲು ಕೇಳಿ ಕೆಲವ
ರನಿತು ಹೋದರೀಗ ಮನಿಗೆಯೂ      ೨೨

ಕಾದುಕೊಂಡಿದ್ದರಲ್ಲಿ ಉಳಿದರೀಗಯತ್ತಲನ್ನ
ಹೋದನೆಂದು ಮಾತನಾಡುತಾ
ವೇದಶಿರದ ಅನುಭವಾದ ನುಡಿಯನಾಡುತಲಿ ಬ್ರಹ್ಮ
ವಾದವಂದೆ ವಸ್ತುವೆನುಸುವಾ          ೨೩

ನೂರಾಯೇಳು ವೈಶ್ಯ ಮನಿಯು ಅದರೊಳಗಾಧ್ಯಾತ್ಮಮು
ನ್ನೂರು ಮನಿಯು ಆ ಪ್ಯಾಟಿಲೀ
ವೀರಬ್ರಹ್ಮ ವಿದ್ಯದಲ್ಲಿ ನಾಗಪ್ಪನಾಜ್ಞೆಯನು
ಮೀರುದ್ಯೆಲ್ಲರಿರುತಲೀಹರೂ         ೨೪

ಮೂವತ್ತು ಮೃದಂಗ ಯಂಭತ್ತು ಜೋಡುತಾಳು
ಆವಾಗಲು ತತ್ವಕೀರ್ತನಾ
ದೇವಬ್ರಾಹ್ಮರಂತೆಯಿಹರು ಶಾಸ್ತ್ರಪುರಾಣಂಗಳಿಂದ ಆ
ಗ ಉತ್ತರಿತ್ತನವರಿಗೇ         ೨೫

ಬಂದರಾಗ ಸ್ನಾನ ಮಾಡಿ ಧೋತ್ರಕಚ್ಚೆಗಳನೆ ಕಟ್ಟಿ
ಧಿಂಧಿಮಿಧಿಮಿಯು ಎನ್ನುತ
ಸಂದಲೀಯು ಬಹಳ ಹತ್ತೆಂಟು ಮೃದಂಗ ತಾಳ
ಅಂದು ಐವತ್ತು ಜೋಡವು  ೨೬

ಸುತ್ತಿದರೂ ಮೂರು ಪ್ರದಕ್ಷಣೆಯ ಕೀರ್ತನಿಂದ
ಮತ್ತೆ ಅಡ್ಡಬಿದ್ದರೆದರೂ
ಹತ್ತಿಸಿದರು ತಾಳ ಮೃದಂಗದರಂಜಕವ
ಯತ್ತಯತ್ತ ಪ್ರಜೆಯೂ ತುಂಬಿತೂ    ೨೭

ಬಂದು ಪಾದ ಹಿಡಿದು ವೈಶ್ಯ ನಾಗಪ್ಪನೆಂಬಾತ
ಇಂದು ಎಮ್ಮ ಪುಣ್ಯ ಬಹಳವೂ
ಬಂದರೀಗ ಅವಯವಾವ ಧರಿಸಿಯಮ್ಮ ರಕ್ಷಿಸಲು
ಎಂದು ಪಾದದ ಮ್ಯಾಲೆ ಬಿದ್ದನು     ೨೮

ಬರಲಿಬೇಕು ಪ್ಯಾಟಿಗೆಯು ಇರುವರೆಲ್ಲ ನಿನ್ನವರು
ಚರಣ ಹಿಡಿದಿಹೆನು ಕೃಪೆಯನೂ
ನಿರುಪಮನೆ ನಿರ್ಗುಣನೆ ಎಮ್ಮ ಬಯಕೆಯನೆ ಸಲಿಸಿ
ಪೊರೆಯಿರೆಂದು ಮತ್ತೆ ಎರಗಿದಾ        ೨೯

ಒಳಿತುಯಂದು ಉತ್ತರೀಯೆ ಬ್ರಹ್ಮರಥವನೇರಿಸಿದರು
ಬಳಿಕ ತಾಳ ಮೃದಂಗದೀ
ಕೊಳಲು ತಪ್ಪಟೆಯು ಇಲ್ಲದಲೆ ಭಜಂತ್ರಿ
ಯೊಳಗೆ ಪ್ಯಾಟಿಯೊಳಗೆ ತಂದರೂ     ೩೦

ನಾಗಪ್ಪನಾ ಮನಿಗೆ ಒಯ್ದು ಪಾದಪ್ರಕ್ಷಾಲನ
ವಾಗ ಮಾಡಿ ಚರಣತೀರ್ಥವಾ
ಆಗ ತೆಗೆದು ಮಂಗಳಾರ್ತಿ ಮಾಡಿ ತೀರ್ಥವೆಲ್ಲಾರಿ
ಗಾಗಳಿತ್ತು ಕಥೆಯ ನಡೆಸುತಾ           ೩೧

ಬಳಿಕ ನಾಗಪ್ಪ ತಾನು ಚರಣ ಹಿಡಿದು ಇಂದಿನ ದಿನ
ಕೊಳಲಿಬೇಕು ಭಿಕ್ಷವೆನ್ನದಾ
ನಲುವಿನಿಂದ ಎಮ್ಮ ಪರಮ ಹಂಸ ಮಠದಿ ಸ್ವಯಂಪಾಕ
ಚೆಲುವಿನಿಂದ ಮಾಡ್ದರಾಗಳೂ         ೩೨

ಇದ್ದವೀಗ ಮಠದ ಕಂಬ ಸಾಲಿಸಾಲಿಗ್ಹದಿನಾರು
ಇದ್ದುದೊಳಗೆ ಆವ ಪರಿಯಲೀ
ಸಿದ್ಧವಾಗಿ ಸ್ವಯಂಪಾಕ ಮನೆಯ ಕೊಟ್ಟುಡೆಡಬಲದಿ
ಶುದ್ಧ ಬಹಳ ಅಂಗಳಿದ್ದುದೂ         ೩೩

ಅದರ ಬದಿಗೆ ಮತ್ತೆ ಒಂದು ಬ್ರಹ್ಮಭೋಜನಕೆ ಶಾಲೆ
ವದವಿ ಕಟ್ಟಿ ಅದಕೆ ಇದಕೆಯೂ
ವಿಧವಿಧದ ಬಾಗಿಲಗಳು ತಿರಿಗಿ ಆಡೆ ದಾರಿಮಾಡಿ
ಕದವ ಹಾಕೊ ಬಾಗಿಲೊಂದೆಯೂ      ೩೪

ಮಠದ ಮಧ್ಯದಲ್ಲಿ ಪೂಜೆ ಮಂಟಪವು ವಿಚಿತ್ರ
ಚಟುಳಯುಕ್ತಿಲಿಂದ ಈಹುದೂ
ಪಟುತರಾದ ಸ್ವರ್ಣ ಹರಡಿ ಸ್ವರ್ಣಲೋವೆ ಸ್ವರ್ಣಕಳಶ
ಘುಟಿತರದಿ ಬೆಳಗುತೀಹದೂ           ೩೫

ಗೋಡೆ ನಾಲ್ಕು ದಿಕ್ಕಿಗೆಯು ಚಿತ್ರ ಚಿತ್ರದಾ ಮೂರ್ತಿ
ನೋಡೆ ಕಣ್ಣು ಸಾಲದವೊಲು
ಮಾಡಿಯಿರಲು ತಾಳಮೃದಂಗದಿಂದ ಬಂದರಾಗ
ಆಡಲೇನ ಮಠಕೆ ಒಯ್ಯಲು೩೬

ಹತ್ತಿಸಿದರು ಬ್ರಹ್ಮರಥವನು ಮತ್ತೆ ಕುಣಿದಾಡುತಲಿ
ಯತ್ತಯತ್ತ ಪ್ರಜೆಯು ಮುಚ್ಚಿಯೇ
ಶಿಸ್ತಿಶಿಸ್ತಿನಾರತಿಯ ಹಾದಿಹಾದಿಗೆಯು ಬೆಳ
ಗುತ್ತ ನಿವಾಳಿಗಳಿಂದಲೀ      ೩೭

ಅನುವು ಆದ ಚೌಕಿನಡು ಅಂಗಳೊದೊಳಗೆ ಹಾಕಿ
ಮನಿಮನಿಗೆ ಒಂದು ಹರವಿಯಾ
ತನತನಗೆ ಬಿಸಿನೀರ ಕೊಡನ ಮುನ್ನೂರ ತರಿಸಿ
ಘನದ ಕೊಪ್ಪರಿಗೆಗೆ ಹೊಯ್ದರೂ     ೩೮

ಮತ್ತೆ ನಾಗಪ್ಪನೀಗ ತುಪ್ಪ ತಂದು ನೆತ್ತಿಗ್ಹಾಕೆ
ಮುತ್ತಿತಾಗ ಸರ್ವರೆಲ್ಲರೂ
ಒತ್ತಿ ಹಿಡಿದನವನ ಸೆರಗ ಅವನ ಸೆರಗ ಮತ್ತೊಬ್ಬ
ನೆತ್ತಯತ್ತ ಈ ವಿಧದಲೀ     ೩೯

ಒಬ್ಬಗೇಯು ಕೈಯ ದೊರಕಿತೊಬ್ಬಗೇಯು ಕಾಲ ದೊರಕಿ
ತೊಬ್ಬರೀಗೆ ಮೈಯ ನೆತ್ತಿಯೂ
ಒಬ್ಬರೀಗೆ ನಡುವು ಬೆನ್ನುವಬ್ಬರೊಬ್ಬರಾ ಸೆರಗ
ವಬ್ಬರ್ಹಡಿದು ಎರೆದರಾಗಳೂ         ೪೦

ಕಾಡ ಆಕಳಿನ ಕೊಂಬಿನಿಂದ ಬ್ರಾಹ್ಮಣರು ಈಗ
ಆಡಲೇನ ಅಭಿಷೇಕವಾ
ಕೂಡಿ ಗುಂಪು ನೂರು ಮಂದಿ ಹನ್ನೊಂದು ರುದ್ರಗಳ
ಮಾಡಿದರು ಮಹಂನ್ಯಾಸದೀ           ೪೧

ಶೀಗೆಕಾಯಿ ಹಚ್ಚಿದಾರು ಸರಿಯು ಬಂದವರೆಲ್ಲ
ಆಗ ನೂರು ತಂಬಿಗಾದವೂ
ಮ್ಯಾಗೆ ಮೈಯನೊರಸಿದಾರು ಮಂಗಳಸ್ನಾನವಾಗೆ
ತೇಗಿನ ಪಾದುಕೆಯನಿಟ್ಟರೂ            ೪೨

ಸ್ನಾನ ಮಾಡ್ದ ನೀರಿನೊಳಗೆ ನಾನಾ ಭಕ್ತಜನವು ಈಗ
ತಾನು ಹೊರಳುತ್ತಿತ್ತು ಶಿಶು ಸಹಾ
ಪಾನ ಮಾಡುವರುಯಷ್ಟೊ ಹೂಜೆ ತುಂಬುವರುಯಷ್ಟೊ
ಏನು ಹೇಳಲೇನ ಭಕ್ತಿಯೂ  ೪೩

ಒಬ್ಬರಿಗೆ ಗುರುವು ಆತ ಒಬ್ಬನೆಂದು ತಿಳಿದ ಆತ
ಸರ್ಬಜನಕೆ ಆತನೇ ಗುರೂ
ಧಬ್ಬಧಬ್ಬ ಹೊರಳಿದರು ಭೂತಪೇತಯಿಹರೆಲ್ಲ
ಹಬ್ಬವಿದು ಘನವುಯಂದರೂ          ೪೫

ಎಡಬಲದಿ ಕೈಯಹಿಡಿದು ನಡಸಿಕೊಂಡು ಬಂದರಾಗ
ಸಡಗರದ ದಿವ್ಯ ಚೌಕಿಲೀ
ಕುಡರಿಸಿಯೇ ವೇದೋಕ್ತ ಪರಮಹಂಸತಂತಿನಂತೆ
ನುಡಿದು ಪೂಜಿಸಿದರೆಲ್ಲರೂ            ೪೬

ಒಂದು ರುದ್ರ ಚರಣತೀರ್ಥವದರ ಮ್ಯಾಲೆ ಪೀತವಸ್ತ್ರ
ಅಂದು ಉಡಿಸಿಯೇ ನಾನಾಭರಣವಾ
ಸಂದಿಸಂದಿಗೇಯುಯಿಟ್ಟು ಎಲ್ಲರೀಗ ತಿಲಾಕ್ಷತಿಯ
ನಂದು ಏರಿಸಲಿಕೆ ಆದರೂ    ೪೭

ಹೆಣ್ಣು ಗಂಡು ಮುನ್ನೂರು ಮನಿಯವರು ಇದರ ಹೊರತು
ತನ್ನತನ್ನ ಕಡಿಯರೆಂಬರು
ಇನ್ನು ಉಳಿದ ನಾನೂರು ಮನಿಯವರು ತಿಲಾಕ್ಷತಿಯ
ನನ್ನೆ ಏರಿಸುತಲಿರ್ದರೂ      ೪೮

ಒಬ್ಬರೊಬ್ಬರೀಗ ಮುಕ್ಕು ಆದರದುವೆ ಕೂಡಿಯಲ್ಲ
ಒಬ್ಬರಿಬ್ಬರೀಗ ಹೊರುವರೇ
ಉಬ್ಬಿದವು ತಿಲಾಕ್ಷತಿಯು ಕಂಠದತನಕೆ ಈಗ
ದೊಬ್ಬುತಿರ್ದರಾಗ ಕಡಿಗೆಯೂ        ೪೯

ಬಿಲ್ವಿಪತ್ರೆ ಏರಿಸಿದರು ಸರ್ವರಿಗ ಐದು ದಳದ
ಎಲ್ಲ ತೆಗತೆಗೆದು ಸುತ್ತಲೂ
ಒಳ್ಳೆ ಕಂಬಳಿಯ ಮೊಟ್ಟೆ ಏಸು ಆದವೊ ತಿಳಿರಿ
ಎಲ್ಲೆ ಪೂಜೆ ವಿಪರೀತವೂ   ೫೦

ಊರದೇವತೆಯ ನೋಡಹೋದ ತ್ಯೆರದಿ ಹಳ್ಳಿಪಳ್ಳಿ
ದಾರಿಯವರು ಸಹಿತ ನೋಡಲೀ
ಭಾರಿ ಭಾರಿ ಗುಂಪು ಎಲ್ಲೆಲ್ಲಿ ಜನವು ನೋಡುತ್ತಿತ್ತು
ಮೂರುಲೋಕ ಕರ್ತನಾದನಾ           ೫೧

ಗೋಡಗೆಯು ಊದಿನಕಡ್ಡಿಗಳು ನಾಲ್ಕು ಕಡೆಯಾ
ಸೂಡು ಸೂಡು ಹಚ್ಚಿಯಿಹರು
ಗಾಢಕಸ್ತೂರಿಯ ಗಾಳಿ ಪಾಡಿಗೆಯು ಹಚ್ಚಿದಾರು
ಕೂಡೆತುಂಬಿಯಿತ್ತು ಪರಿಮಳಾ         ೫೨

ಹಾಡುತ್ತಿತ್ತು ಕುಣಿವುತ್ತಿತ್ತು ವೇದಗಳವೋದುತ್ತಿತ್ತು
ನೋಡಲಿಕ್ಕೆ ಗುರುವ ಬಿರಿದನೂ
ಈಡುಯಿಲ್ಲ ನಿನಗೆ ಅನಂತ ಬ್ರಹ್ಮರಿಗೆ ಕರ್ತ
ಗೂಢನೆಂದು ಹೋಗುಳುತಿರ್ದರೂ     ೫೨

ಹತ್ತು ಹನ್ನೆರಡು ಮೃದಂಗ ತಾಳ ಭಜಂತ್ರಿ
ಮತ್ತೆ ಶಂಖಗಳು ಕೂಗಲೂ
ಎತ್ತಲೋ ಆಗಿ ದೇಹ ಬ್ರಹ್ಮ ಆನಂದವಾಗಿ
ಸುತ್ತಿಯಿತ್ತು ಸರ್ವಜನಗಳೂ            ೫೩

ಪುಷ್ಟ ಸರಗಳನು ಈಗ ಹಾಕಿದರು ಮ್ಯಾಲೆ ಮ್ಯಾಲೆ
ಅಪ್ಪ ಗುರುವಿನ ಕಂಠಕೇ
ಗಪ್ಪನೇಯು ಮುಚ್ಚಿಕೊಂಬ ಪರಿಮಳವ ಚಲ್ಲಿದರು
ಒಪ್ಪೊ ಧೂಪಾರ್ತಿ ಮಾಢರೂ         ೫೪

ಏಕಾರ್ತಿ ಮಾಡಿದರು ಬಹಳ ಆನಂದದಿಂದ
ಸ್ವೀಕರಕ್ಕೆ ಹಾಲನಿಟ್ಟರು
ತಾಕಿಸಿದರು ನಾರಿಕೇಳ ಐಯ್ವತ್ತು ಅರುವತ್ತು
ಲೋಕಕರ್ತಗೆಡೆಯ ಮಾಡ್ದರೂ        ೫೫

ಬಾಳೆಹಣ್ಣು ಸಕ್ಕರೆಯ ಖರ್ಜೂರ ಮುಂದೆಯಿಟ್ಟು
ಮ್ಯಾಲೆ ತಾಂಬೂಲ ದಕ್ಷಣಿ ಬ
ಹಳ ಮಂಗಳಾರತಿಗಳ ಎತ್ತಿದರು ಹೆಣ್ಣುಗಂಡು
ಪಾಲಿಗೊಂದೊಂದು ಆಗಿಯೇ           ೫೬

ಸ್ತ್ರೀ ಗುಂಪು ಒಂದು ಕಡೆಯು ಪುರುಷ ಗುಂಪು ಒಂದು ಕಡೆಯು
ಆಗ ಶೋಭಾನ ಪಾಡುತಾ
ಮ್ಯಾಗಮ್ಯಾಗ ಮಂಗಳಾರ್ತಿ ಪದಗಳನ್ನೆ ಅಂದಾಗ
ಸಾಗರ ಬಿದ್ದರೆಲ್ಲರೂ       ೫೭

ಸುತ್ತ ಪ್ರದಕ್ಷಣೆಯ ಮಾಡುತಲಿ ಮಂತ್ರಪುಷ್ಪ
ಮತ್ತೆ ಏರಿಸಿ ವಿಸರ್ಜನಾ
ಕರ್ತೃವಿಪ್ರರೂ ಮುಗಿಸೆ ಬಿಲ್ವಪತ್ರಿ ಪ್ರಸಾದಕ್ಕೆ
ಇತ್ತುಯಿಲ್ಲೊಯೆಂಬೊಲಾಯಿತು    ೫೮

ತೀರ್ಥಪೂಜೆಯನ್ನು ಮುಗಿಸಿ ತೀರ್ಥವನ್ನೆ ಕೊಂಡರಾಗ
ಮತ್ತೆ ಎಬ್ಬಿಸಿಯೆ ಪರಮನಾ
ಅತ್ತನಾ ಪಟ್ಟಸಾಲಿ ಬ್ರಹ್ಮಭೋಜನಾಗೊ ಅಲ್ಲಿ
ವಿಸ್ತರದ ಆಸನಿಟ್ಟರೂ       ೫೯

ಬ್ರಹ್ಮರು ಎಡಬಲದಿ ಕುಳಿತು ಬ್ರಹ್ಮಭೋಜನಗೆ
ಸುಮ್ಮನೆ ನೂರಾರು ಎಣಿಕಿಲೀ
ಒಮ್ಮನಾಗಿ ದಕ್ಷಿಣೆಯ ತಾಂಬೂಲಗಳನೇ ಇತ್ತು
ಬ್ರಾಹ್ಮರನ್ನೆ ಕಳುಹಿಸಿಕೊಟ್ಟರು       ೬೦

ಇತ್ತ ಕುಳಿತರು ಮಂಟಪದ ಸುತ್ತ ಮಠದ ತುಂಬ
ಎತ್ತೆಯತ್ತ ವೈಶ್ಯಬಳಗವು
ಹತ್ತಿದವರು ಹೊಂದಿದವರು ದೀಡು ಸಾವಿರವು ಉಂಡು
ಮತ್ತೆ ಉಂಡ ಕೈಯ ತೊಳೆದರು;೦೬೧

ಉಚ್ಚಿಷ್ಟವನ್ನೆ ಬಳಿದು ಹಾಸಿದರು ಜಮಖಾನ
ಸ್ವಚ್ಚವಾಗಿ ವೀಳ್ಯಕೊಂಡರು
ಅಚ್ಚುತನುಯೆಂಬ ವೈಶ್ಯನನ್ನೆ ಪಾದಕೆಯು ಕೆಡಹಿ
ಸ್ವಚ್ಛ ನಾಳೆ ಭಿಕ್ಷವೆಂದನೂ  ೬೨

ಈ ವಿಧದಿ ಭಿಕ್ಷವನ್ನೆ ತಾವು ಮಾಡಿಸುವರು ರಾತ್ರಿ
ಝಾವ ನಾಲ್ಕು ತತ್ವ ಚರ್ಚೆಲೀ
ಕೇವಲದ ಮಂಚ ಹಾಕಿ ತಾಳ ಮೃದಂಗದಿಂದ
ತಾವು ಸುತ್ತಲಿರುತಲಿಹರೂ೬೩

ಮಾಡೆ ಭಿಕ್ಷಕೆಯು ಗತಿಯು ಇಲ್ಲದವನು ವೈಶ್ಯ ಸಭೆಗೆ
ಕೂಡಿಯಲ್ಲಯನ್ನ ಸಾರ್ಥಕ
ಮಾಡಿರೆಂದು ಅಡ್ಡಬೀಳೆ ಒಳಿತುಯೆಂದು ತಾವು ಪಟ್ಟಿ
ಮಾಡಿ ಭಿಕ್ಷವನ್ನೆ ಮುಗಿಪರೂ          ೬೪

ಬಂದ ಗಿರಾಕಿಯು ಕೈಯ ಮೀರಿ ಹೋಗ್ವ ಕಕ್ಕುಲತಿ
ಇಂದನಿಲ್ಲೆ ತಪ್ಪುದಂಡಕೇ
ಗಂಧವನ್ನೆ ತೇಯಿಸುವರು ಅವನ ರಟ್ಟೆ ಬೀಳುವಂತೆ
ಬಂಧುರದ ಕಟ್ಟು ಅವರದೂ           ೬೫

ಗಾಳಿಯನ್ನೆ ಹಾಕುತಿಹರು ಪಾದಮೈಯ ಹಿಸುಕುತಿಹರು
ಹೇಳುವರು ತತ್ವ  ತಾವೆಯು
ಕೇಳಿಕೊಳುತಿಹರು ತಮಗೆ ಸಂಶಯವು ಇದ್ದುದೆಲ್ಲ
ಬಹಳ ಬ್ರಹ್ಮ ಜ್ಞಾನರವರೆಯೂ        ೬೬

ಈ ವಿಧದಿ ನಾಲ್ವತ್ತು ದಿವಸ ಒಂದೆ ಪರಿಯು ಪೂಜೆಯಾಗೆ
ಕೇವಲೊಯ್ಕುಂಠಯಿಳಿದೊಲ್ಪೂ
ಸೇವೆ ಮಾಡಿದಂತಿಹರು ಕಾದು ಕೊಂಡಿರಲುಯೆಮಗೆ
ಆವ ಪರಿಯು ಚರವುಯೆಂದನೂ       ೬೭

ಮೂತ್ರಹೊರಕಡಿಯ ನೆವದಿ ಚೆರವ ಹೇಳ್ಳೆನೆನಲು ಇ
ಪ್ಪತ್ತು ಮೂವತ್ತು ಜನಗಳು
ಯತ್ತ ಹೋಗಲಿಕ್ಕೆ ಬಾರದಾಗಿ ಸದ್ಗುರುರಾಯ
ಮತ್ತೆ ಚಿಂತಿಸುತಲಿರ್ದನೂ   ೬೮

ಹೋಗ್ವೆವೆಂದು ಕೇಳಿದರೆ ಹೋಗಗೊಡದೆ ಸರ್ವಭಿಕ್ಷ
ವಾದ ತರುವಾಯ ದೇವರು
ಹೋದೆನೆನಲುಬಹುದೆ ಭಿಕ್ಷಯಂಭತ್ತು ವಿರುವವೆಂದು
ಪಾದ ಹಿಡಿದ ನಾಗಪ್ಪನೂ  ೬೯

ಎಂದಡೇನು ಗತಿಯೆಂದು ಗುರುರಾಯನೊಂದು ದಿವಸ
ಅಂದು ಸಣ್ಣ ಮಳಿಯು ಬರುತಿರೆ
ಇಂದು ಇದೇ ವ್ಯಾಳ್ಯವೆಂದು ಶೌಚಕಂತ ನಡುರಾತೆ
ಲಂದು ಏಳೆ ಎದ್ದರೆಲ್ಲರೂ೭೦

ನಡೆದರೀಗ ಕರೆದುಕೊಂಡು ಹತ್ತೆಂಟು ಮಂದಿಗಳು
ಒಡನೆ ಚಾರುಚೋಪೆಗ್ಹೋಗಲು
ನುಡಿದನಾಗ ಗುರುರಾಯ ಹನಿಯು ಬಹಳ ತಂಬಿಗೆಯ
ನಿಡಿರಿ ಗೋಡೆಮ್ಯಾಲೆಯೆಂದನೂ       ೭೧

ನೋಡುತಲಿ ತಂಬಿಗೆಯ ಮರೆಯಲಿರಿಯೆಂದುಪಾಯ
ಮಾಡಿ ಕೂಡ್ರಿಸಿಯೆ ಅವರನೂ
ಗೋಡೆ ಮರಿಯಲಿಂದ ಹೋಗಿ ಊರ ಬಾಗಿಲ ದಿಡ್ಡಿ
ಪಾಡಾಗಿರೆ ತೂರ್ದ ಹೊರಿಯಕೇ       ೭೨

ಹೋದ ನರಸಿಂಹ ಪ್ಯಾಟಿಗೆಯು ರಾತ್ರಿ ಕಾಲದಲ್ಲಿ
ಆದಿತೆರಡು ಗಾವುದಲ್ಲಿಗೇ
ಕಾದುಕೊಂಡಿದ್ದ ತಂಬಿಗೆಯ ಕೊಮಟಿಗರು ಹೊತ್ತು
ಆದುದೂ ಬಹಳವೆಂದರೂ  ೭೩

ಎಂದೆನುತ ವೈಶ್ಯರುಗಳು ಸಮಾಧಿಯಲಿ ಅಹನೊಯೆಂದು
ಅಂದು ಅಂಜುತಳಕುತಾಗಲೂ
ಬಂದು ನೋಡೆ ಇಲ್ಲದಿರೆ ಹೋದನೆಂದು ಚಿಂತಿಸುತ
ಲಂದು ಹುಡುಕಿದರು ಮನೆಗಳ          ೭೪

ನಿಮ್ಮ ಮನೆಗೆ ಬಂದಿಹನೆ ಎಮ್ಮ ವಂಚಿಸಿಯೆ ಹೋದ
ನಮ್ಮಗೆಯು ಆತದಕ್ಕೊನೇ
ಬ್ರಹ್ಮವೇ ಅಲ್ಲದಲೇ ಇನ್ನೊಂದು ಅಲ್ಲವೆಂದು
ಸಮ್ಮತಾದರೀಗ ತಮ್ಮೊಳು೭೫