ಕೇಳಿದರು ಸದ್ಗುರುವ ಇಲ್ಲಿಯಿದ್ದಿರ್ಯಾಕೆಯನಲು
ಹೇಳಿದನು ಸರ್ವವಿವರವ
ಮೂಳತೊತ್ತಿನಾ ಮಗನೆ ಮಹಿಮರಿಂಥರಿರುವರೆಂದು ಬ
ಹಳ ಮಿಡಿಕಿದರು ಸರ್ವರು   ೧೫೧

ಮೂರು ದಿವಸ ನಿಂತರಲ್ಲಿ ಪರಿಷೆ ಮುಂದೆ ಕೇಳಿಗೊಡದೆ
ವಾರದ ಮ್ಯಾಲೆ ಕೂಡ್ರಿಸಿ
ಆರು ಮಜಲು ಪೋಷಣಿಂದ ಸೇವೆ ಮಾಡುತಲಿ ಹೋಗೆ
ಸ್ವಾರೆ ಬಿಟ್ಟು ಪಥವ ನಡೆದನು        ೧೫೨

ಮಜಲು ಮಜಲಿನಲ್ಲಿ ಜನರು ನಾಲ್ಕು ಮೂರು ರೂಪಾಯಿಟ್ಟು
ಭಜಿಸುವರು ತಿಳಿದರೀಗಲು
ತೆಜಿಸಿದಾ ನರ್ಮನದಿಯ ಮಂಡಲದಿ ಆತ್ಮ ಜ್ಞಾನ
ಶೃಜಿಸುತೈದು ದಿನವು ಇದ್ದನು        ೧೫೩

ಪರಿಷೆ ನಡೆಯಿತು ಮುಂದೆ ಬಲಹರಿಯನೀಗ ದಾಟಿ
ವರಣ ವರಣ ಮಜಲ ನಡೆದೆಯೂ
ತರಿಸಿದನು ಜೋಹರಪುರದ ಘಾಟಿ ಯಮುನ ನದಿಯ
ಗುರುರಾಯ ಪರವಶದಲಿ    ೧೫೪

ಆಗ ನಡೆಯಿತು ಪರಿಷೆ ಜಾಂಗೀರ ಬದಿಯಲ್ಲಿಯೆ
ಭಾಗಿರಥಿಯನಲ್ಲಿ ಕಂಡೆಯೂ
ಯೋಗಿರಾಜ ಸ್ನಾನ ಮಾಡಿ ಹೊರಟನೀಗ ಪ್ರಯಾಗಕ್ಕೆ
ಹೋಗಿ ತ್ರಿವೇಣಿಯಲಿ ಮುಳುಗಿದಾ   ೧೫೫

ದಾಟಿದನು ಭಾಗಿರಥಿಯ ಝಾಶಿಘಾಟಿನಾ ಮುಂದೆ
ಕೂಟ ಪರಿಷೆ ಜನಂಗಳಿಂದಲೀ
ನೀಟಾದ ಶಿದ್ಧಿಸ್ಥಾನ ಘಾಟಗಳನು ಕಂಡು ಮುಂದೆ
ದಾಟಿ ಸೇರ್ದ ಕಾಸಿಪಟ್ಟಣ  ೧೫೬

ಮಣಿಕರಣಿ ಮೊದಲು ಆಗಿ ಸರ್ವತೀರ್ಥ ಸ್ನಾನ ಮಾಡ್ದ
ಗುಣರಹಿತ ಆನಂದದಿಂದಲಿ
ಮನಿಯ ಮ್ಯಾಲೆ ಮನಿಯು ನಾಲ್ಕು ಐದು ಬಹಳ ನೋಡಿದನು
ಘನದ ಬಾಜಾರ ನೋಡಿದ   ೧೫೭

ಸರ್ವ ಘಾಟಗಳನೆ ನೋಡ್ದ ಸರ್ವ ತೀರ್ಥಗಳನೆ ನೋಡ್ಡ
ಸರ್ವ ದೇವಸ್ಥಾನ ಮಾಡ್ಡನು
ಸರ್ವ ದೇಶದೇಶದವರ ಸರ್ವಮಾತು ಸರ್ವ ನಡೆಯ
ಸರ್ವ ವರ್ಣದವರ ನೋಡ್ಡನು         ೧೫೮

ಒಂಟಿಯಿತ್ತು ವಜ್ರಕಡಗವಿಟ್ಟು ಮುತ್ತಿನಾ ಸರವ
ಕಂಠಕಿಟ್ಟು ಪಚ್ಚದುಂಗುರ
ಎಂಟು ಬೆರಳಿಗಿಟ್ಟು ಹೇಮ ಮಂಜಾಲ ಸುತ್ತಿ ನೀಲ
ಕಂಠನಂತಿಹರ ಕಂಡನು        ೧೫೯

ಮುತ್ತನೀಲ ಉದ್ದನಿಟ್ಟು ಮುತ್ತು ಪಟ್ಟಿ ಬಾಜು ಬಂದು
ಮುತ್ತಿನಾ ಚೌರಿರಾಗಟೀ
ಮುತ್ತಿನಾ ದಂಡೆಯಿಹ ಮುತ್ತಿನಾ ಗೊಂಡೆಯಿಂತು
ಮುತ್ತೈದಿಯರನ್ನೆ ಕಂಡನು ೧೬೦

ಮುತ್ತಿನೊಡ್ಡ್ಯಾಣ ಮುತ್ತಿನಾ ಗೋತ್ರ ಬೈತಲೆಯ
ಮುತ್ತು ಸೀರೆ ಮುತ್ತು ಕುಪ್ಪಸಾ
ಮುತಿನಾ ಸರಗಳಿಂದ ಚಿತ್ತಜನ ಆನೆಯಂತೆ
ಮತ್ತೆ ಚರಿಸುವವರ ಕಂಡನು            ೧೬೧

ಮಡಿಯನುಟ್ಟು ಶಾವಿಗೆಯ ಪರಡಿಪಾಯಸಂಗಳಿಂದ
ಹೆಡಿಗೆ ಹೆಡಿಗೆಯಿಟ್ಟು ಈಹದಾ
ಅಡಿಗೆ ಮಾಡಿ ವರಹದೂಟ ಹತ್ತು ವರಹದೂಟದವರ
ಶಡಕು ಬಹಳಿಹರ ಕಂಡನು   ೧೬೨

ಹೇರುಹೇರು ಲಾವಂಗ ಹೇರು ಹೇರು ಜಾಜಿಕಾಯಿ
ಹೇರುಹೇರು ಪತ್ರಯೊಟ್ಟಿಯೆ
ಹೇರುಹೇರು ಕಸ್ತೂರಿಯ ಹೇರುಹೇರು ಪರಿಮಳವ
ಹೇರುಹೇರು ಇರವ ಕಂಡನು            ೧೬೩

ಆನೆಕುದುರೆಗಳು ಎಷ್ಟೊ ಹೋಗವವು ಬರುತಿಹವು
ಜ್ಞಾನಿಗಳು ಎಷ್ಟೊಯಿಹರು
ನಾನಾ ಸನ್ಯಾಸಿ ಪರಮಹಂಸ ಅವಧೂತರನ್ನು
ತಾನು ಬಹಳಿತಾಗಿ ಕಂಡನು  ೧೬೪

ಘೋಡಮುಖಿಯಂಬವನ ತಂದಿದ್ದ ಕಿಲ್ಲೆದಾರ
ಆಡೆವಂದು ಲಕ್ಷ ಮೋಹರಾ
ಕೂಡೆಕೊಟ್ಟು ಆರಮನೆಯ ಅಂಗಳದಿ ಕಲ್ಲಕಂಭಕೆ
ಪಾಡಾಗಿ ನಿಲ್ಲಿಸಿದನವ       ೧೬೫

ಕುದುರೆ ಮೋರೆ ಅವನದೀಗ ಕುದುರೆ ಕಿವಿಯು ಕುದುರೆ ರೋಮ
ಅದುಭುತವು ಕಾಲುಕೈಗಳು
ವದನವಿಸ್ತಾರ ಹಲ್ಲು ಕವಡಿಯಂತೆ ಸೂಡು ಮೀಸೆ
ಮದನಮುಖನು ಹೆಬ್ಬುಲೆಂತಿಹಾ     ೧೬೬

ನಿಲುವು ನೋಡೆ ಮನುಜನಿರವು ಬಲವು ನೋಡೆ ಈಡು ಇಲ್ಲ
ಕೊಲವೆನೆನಲು ನಿಲ್ವರಿಲ್ಲವು
ಚಲುವು ನೋಡೆ ಕರಚಲುವ ಭಯದ ರೂಪು ನರರು ಸಿಲುಕೆ
ಎಲುವು ಸಹಿತ ತೊಂಬನವನೆಯೂ     ೧೬೭

ಕಲ್ಲ ಕಂಭಕೆಯ ಕಬ್ಬಿಣದ ಸರಿಗೆಯನ್ನ ಹಾಕಿ
ಒಳ್ಳೆ ಸರಪಳಿಯ ತಂದೆಯೂ
ಬಲ್ಲಿದನ ಕೊರಳಿಗ್ಹಚ್ಚಿ ಕಲ್ಲಕಂಭಕೆಯು ಕಟ್ಟಿ
ಕಲ್ಲಡೋಣಿ ಮಾಡ್ದ ನೀರಿಗೆ           ೧೬೮

ಕೂತುಕೊಳ್ಳಲು ಮಾಡಿಸಿದನು ಲೇಪು ಮಂಚವನ್ನೆ ಹಾಕಿ
ಮೃತ್ಯುವಂತಿಹನು ಹೊಟ್ಟಿಗೆ
ನಿತ್ಯ ಮಣವು ಕಡಲಿ ಒಡಿದು ಸಕ್ಕರೆರಡು ತುಪ್ಪ ಧಡೆಯು
ಮತ್ತೆರಡು ಧಡೆಯು ಅದಕೆಯೂ      ೧೬೯

ಸೇರು ಜಾಜಿಕಾಯಿ ಪತ್ರಿ ಸೇರು ಲವಂಗವು ಸೇರು
ಕಾರಮೆಣಸು ಸೇರು ಹಾಕಿಯೇ
ಪೂರ ಕಲಸಿ ಬಿದರ ಹೆಡಿಗೆ ತುಂಬಿ ಅವನ ಮುಂದಕೆಯು
ದೂರ ಕಾಷ್ಟದಿಂದದೊಬ್ಬರು          ೧೭೦

ಕುಡಿಯೆ ನೀರ ದಬ್ಬುವರು ಕಡ್ಲಿಯನು ತಿಂದ ಹಿಂದೆ
ಕರಿಕರೀನೆ ತಿಂಬನೆಲ್ಲವ
ಹಿರಿಯ ಕೊಡದಿ ಐದು ಕೊಡನ ನೀರ ಕಲ್ಲಡೋಣಿಗೆಯು
ಎರೆವರು ದೂರದಿಂದಲೀ     ೧೭೧

ಮೋರೆ ಹೆಟ್ಟಿ ತಿನ್ನುವನು ಎರಡು ಕೈಲಿ ಬಳಿದುಕೊಂಡು
ನೀರ ಕುಡಿವ ಮೋರೆ ಮುಳಗಿಸೀ
ಬೇರೆಲೇವಡಿಯು ಬತ್ತಾಸು ಜಿಲಿಬಿಲಿಯು ಬೆಂಡು
ಘೋರನಾ ಮುಂದೆಯಿಡುವರು        ೧೭೨

ಸುತ್ತಿಕೊಳುವ ಮುಂಡಾಸ ಆಮ್ಯಾಲೆ ಅಂಗಿ ತೊಡುವ
ಮತ್ತೆ ಅರುವತ್ತು ತಃಕ್ತಿನಾ
ಕುತಿನಿಹಿಜಾರ ತೊಡುವ ಕಿವಿಗೆ ಸಾವಿರೊರಹ ಬೆಲಿಯು
ಮುತ್ತಿನೊಂಟಿಯ ಇಡುವನು           ೧೭೩

ಬಲ್ಲಿದನು ತಿನುವ ಎಲಿಯ ಸೂಡಿನೊಳಗೆ ಅಡಿಕೆ ಕಾಚು
ಒಳ್ಳೆ ಸುಣ್ಣ ಲವಂಗವ
ಸುಳ್ಳಿಮುಂಡೆಗಂಡಗಿಪ್ಪತ್ತು ವಗಿಯಲಿಕೆ ಅವ
ಎಲ್ಲ ಸೂಡುಗಳ ತಿನುವನು            ೧೭೪

ಘೋಡೆಮುಖಿಯು ಅಹನೆ ಎಂದು ಆಡೆ ಕಾಶಿಯೊಳಗೆ ಅವನ
ನೋಡಬೇಕುಯಂತಿಹನೆನುತಲೀ
ರೂಢಿಗೊಡಿಯ ಹೋಗೆ ಬಾಗಿಲವರು ರೂಪಾಯಿ ಕೊಟ್ಟು
ನೋಡುಯೆನಲು ಅಂದ ಗುರುವರಾ   ೧೭೫

ನಾವು ಫಕೀರರು ಇಹೆವು ನೀವು ಅಪ್ಪಣಿಯೆ ನೋಡ್ವೆ
ವಾವುಯೆನಲು ಹೋಗುಯೆಂದರು
ಕಾವಲಿಯವರಿಗೆ ಬಾಹದು ತಲಿಗೆ ಒಂದು ರೂಪಾಯಿದಂತೆ
ಸಾವಿರವು ನಿತ್ಯವಾಹದು     ೧೭೬

ಹೋಗಲು ನೋಡುವರ ಕೂಡ ರಾಕ್ಷಸಂತೆಯಿದ್ದನವನು
ಬಗಲು ಬದಿಯು ಅದ್ಭುತಾಗಿಯೇ
ಮೊಗವು ಕುದುರೆ ಬಟ್ಟಮೋರೆ ಬಟ್ಟಕಿವಿಯು ಕಣ್ಣುಗಳು
ಉಗುಳುತಿದ್ದವಾಗ ಕೆಂಪನು            ೧೭೭

ನೋಡಿದನು ಮುಂಡಾಸ ಡೌರ ಅವನ ತೋಳುತೊಡಿಯ
ಸೂಡು ಮೀಸೆಯೇರಿದುಬ್ಬು
ಗಾಢನಿರಲು ಗುರುರಾಯ ಇಂಥ ರೂಪಿಲಿಹನುಯನುತ
ಕೂಡೆ ಹೊರಟ ಜನರ ಸಂಗಡ           ೧೭೮

ಪಾವನನು ಮಾಡ್ದ ಕಾಶಿಯಾತ್ರೆಯನ್ನು ಹೇಳಿದೆನು
ಕೇವಲಾವಧೂತ ಚರಿತವಾ
ಓವಿ ಹೇಳ್ವೆ ಮುಂದೆ ಇಲ್ಲಿ ಗಾರು ಸಂಧಿ ಮುಗಿಯಿತೆಂದು
ತೀವಿ ಐಯ್ಯಪ್ಪ ನುಡಿದನು ೧೭೯

ಮಂಗಳವು ಕೇಳಿದರಿಗೆ ಮಂಗಳವು ಹೇಳಿದರಿಗೆ
ಮಂಗಳವು ಸ್ತ್ರೀಯ ದೇಶಕೆ
ಮಂಗಳವು ಚಿದಾನಂದ ಅವಧೂತ ಚಾರಿತ್ರ
ಮಂಗಳಕೆ ಮಂಗಳೆಂದನು     ೧೮೦

ಇತಿ ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ
ಶ್ರೀ ಚಿದಾನಂದ ಅವಧೂತ
ಸದ್ಗುರುವರ್ಯ ಚರಣಕಮಲ ಭೃಂಗ
ಅಯ್ಯಪ್ಪ ವಿರಚಿತ ಚಿದಾನಂದ ಸದ್ಗುರು ಅವಧೂತ ಚಾರಿತ್ರದಲ್ಲಿ
ಕಾಶಿಯಾತ್ರೆ ಸಮಾಪ್ತಂ
ಅಂತು ಸಂಧಿ ೬ಕ್ಕೆ ಪದ ೭೫೬ಕ್ಕಂ ಮಂಗಲಮಹಾಶ್ರೀ ಶ್ರೀ ಶ್ರೀ