ಕಂಡು ಬೆಳಗೊ ಅಲ್ಲಿ ಪೈಣಗಳಲಿ ಗೌತುಮಾನಕ
ಮಂಡಲಿರಳಿ ನದಿಯು ಆಗಿಹ
ಚಂಡಗೋದಾವರಿಯ ದಾಟಿ ಏದಲಾಪುರದ ಮಧ್ಯ
ಮಂಡಿಸಿದನು ತಿಪ್ಪೆಯಲ್ಲಿಯೂ      ೭೬

ತಿಂಗಳೀಗ ಮಲಗಿಯಿದ್ದ ಇಪ್ಪೆಮ್ಯಾಲೆ ಕಣ್ಣುಮುಚ್ಚಿ
ಅಂಗವೆಲ್ಲ ಕಸವು ಮುಚ್ಚಿಯೇ
ಸಂಗಾತೀತನಾಗಿ ಆಹಾರವಳಿದು ಯೋಗನಿದ್ರೆ
ಅಂಗನೆಯ ಸುಖದೊಳಿರ್ದನೂ          ೭೭

ಜನರು ನಿತ್ಯ ನೋಡುವರು ಸನ್ನಿಪಾತ ಮುಚ್ಚಿ ಅದೇ
ಘನ ಚೆಲುವಯಿಹನು ಈತನೂ
ತನುವಿಗೆಯು ಬರಲಿಬಾರದಂತ ಕೆಟ್ಟರೋಗವೆಂದು
ದಿನದಿನದಿ ಮುತ್ತಿಯಿಹರೂ೭೮

ಸನ್ನಿಪಾತ ಬಹಳವಿದೆ ಎಂದು ಬಳ್ಳೊಳ್ಳಿ ಕುಟ್ಟಿ
ಇನ್ನು ನಡುನೆತ್ತಿ ಮ್ಯಾಲೆಯು
ಚೆನ್ನಾಗಿಟ್ಟು ತಾಮ್ರ ತಂಬಿಗೆಯಲಿಂದ ಸುಟ್ಟರೆಯು
ಮುನ್ನ ಇಳಿಯದಾಗ ರೋಗವು         ೭೯

ಕದಿರಿಲಿಂದ ಸುಟ್ಟರೀಗ ಸಂದುಸಂದುಗಳನೆಲ್ಲ
ವಿಧವಿಧದ ವೈದ್ಯ ಮಾಡ್ಡರು
ಚದಲದಿರಲು ರೋಗವದು ಹನುಮಂತರಾಯನೆಂಬ
ಆಧಟದೊರಿಗೆ ಹೋಗಿ ಹೇಳ್ದರು      ೮೦

ಅರಸ ಕೇಳು ಒಬ್ಬ ಪರದೇಶಿಯೀಗ ತಿಂಗಳಾಯ್ತು
ಇರುವ ತಿಪ್ಪೆ ಮ್ಯಾಲೆ ರೋಗದೀ
ಕರಚಲುವ ಕುಲದಲಾರು ಅವಬ್ಯಾನೋ ಕಣ್ಣು ಮುಚ್ಚಿ
ಒರಗಿಹನು ಆಹಾರಿಲ್ಲದೇ  ೮೧

ಮುಟ್ಟಿಕೊಂಡು ಆತನನ್ನು ಸುಟ್ಟೆವೀಗ ನೆತ್ತಿ ತಿಳಿ
ದಷ್ಟು ಮಾಡಿದೆವು ಪ್ರಾಣವು
ಬಿಟ್ಟುದಿಲ್ಲ ಎರಡುತಾಸು ಮೂರುತಾಸು ಆಗೆ ಮತ್ತೆ
ಅಟ್ಟಿಸುತಲದೆ ವಾಯುವೆಂದರು       ೮೨

ಎಂದಡೆಯು ಸುಬ್ರಣ್ಯನೆಂಬ ವೈದ್ಯನನ್ನು
ಅಂದು ಕಳುಹಲಾಗ ದೇಹವ
ಬಂದು ಮುಟ್ಟಿ ನೋಡಲಿಕ್ಕೆ ಬೆಚ್ಚಗೆಯು ದೇಹವಿರ
ಲಂದು ನಾಡಿಹಿಡಿದು ನೋಡ್ಡನು      ೮೩

ಮರುತ ಸಚಾರವಿಲ್ಲ ನಾಡಿಯೊಂದು ಆಡೋಣಿಲ್ಲ
ಇರುವದಾವ ರೋಗವೆನುತಿರೆ
ಚರಿಸಿಯಾಡೆ ವಾಯು ತಾನೆ ಭರದಿ ನಾಡಿ ನೋಡಿ ವೈದ್ಯ
ಇರುವದಿದು ಸಮಾಧಿಯೆಂದನು        ೮೪

ರೋಗವಲ್ಲ ಭೂತವಲ್ಲ ಏನು ಅಲ್ಲ ಸಮಾಧಿ
ಯೋಗಿ ಈತ ಪೂರ್ಣ ಸ್ಥಿತಿಯಿದು
ಆಗ ಹೋಗಿ ಹೇಳಲಿಕ್ಕೆ ಹನ್ಉಮಂತರಾಯನೀಗ
ಬ್ಯಾಗ ಪಾಲಕಿಯ ತರಿಸಿಯೇ            ೮೫

ಅರಸು ರಾಜಯೋಗಿಯಿಹನು ಊರೆಲ್ಲ ಜ್ಞಾನಿಗಳು
ದೊರಿಯು ಈಗ ಬಂದು ತಾನೆಯು
ಕರವ ಹಾಕಿ ಎತ್ತಿ ಕುಡರಿಸಲಿಕೆ ಎಚ್ಚರಿಲ್ಲದಿರೇ
ನರವಾಹನದಲಿ ಒಯ್ದರು  ೮೬

ಪಾಲಕಿಯ ರಾಜಗೃಹದಿ ಇಳುಹಿ ವಾಯು ಆಲಿಸಲಿಕೆ
ಮ್ಯಾಲೆ ಆಡಿತು ಶ್ವಾಸವು
ಮೂಲ ಗುರುವೆ ಚಿತ್ತವಿಡು ಎಂದು ಆಗ ಕೂಗಿ ತಾನು
ಕಾಲಿಗೆರಗಿದನು ಸುಖಿಸುತ   ೮೭

ಕೂಗುತಿರಲು ಕಿವಿಯೊಳಗೆ ಆಗ ಕಣ್ಣನೀಗ ತೆರಿಯೆ
ಸಾಗರೋತ್ತುಮಾನ ನೋಡಿಯೇ
ಬ್ಯಾಗ ಗೋಕ್ಷೀರವನ್ನು ಬೆಳ್ಳಿಬಟ್ಟಲೊಳು ಹಾಕಿ
ಆಗ ಕುಡಿಸೆ ಬಾಗಿ ತೆಗೆಯದು            ೮೮

ಸಡಲಿಸಿದರು ಎರಡು ಸೌಟನಿಟ್ಟಾಗ ಮೆಲುಕನೀಗ
ಕುಡಿಸಿದರು ಹಾಲು ಮೆಲ್ಲಗೇ
ನುಡಿಸಿದನು ಗುರುವೆ ಎಲ್ಲಿಂದ ಬಿಜೆಯ ಮಾಡ್ದಿರೆತ್ತ
ನಡಿವಿರೀಗ ಎಂದು ಎರಗಿದಾ            ೮೯

ಮೆಲ್ಲಗೆಯು ನುಡಿದ ಪರಮನೆಲ್ಲಿಂದ ಬಂದಿರೆಂದು
ಎಲ್ಲಕೆಯು ಮೂಲವಾವುದು
ಅಲ್ಲಿಂದ ಬಂದೆವೀಗ ಹೋಗ್ವದೀಗಲ್ಲಿಗೆಂದು
ಸ್ಟಲ್ಲಿಸಿತ್ತು ಸುಮ್ಮನಾದನು           ೯೦

ನಿಮ್ಮ ಹೆಸರೆನೆಂದು ಕೇಳೆ ಎಲ್ಲ ಹೆಸರುಯನ್ನ ಹೆಸರು
ನಿಮ್ಮ ಆಶ್ರಮೇನುಯನ್ನಲೂ
ಬ್ರಹ್ಮಾದ್ಯರು ಯಂಬರಿಗೆ ನಿಲುಕದೀಹ ಆಶ್ರಮವು
ಎಮ್ಮ ಕೇಳ್ದರೇನನೆಂಬೆವು   ೯೧

ಎಂದಡೆಯು ಬ್ರಾಹ್ಮಣೀತ ವೇದಾಂತ ಅನುಭವಿಯು
ಸಂದೇಹಯಿಲ್ಲ ರಾಜಯೋಗಿಯು
ಮುಂದೆ ಬ್ರಹ್ಮನಿಷ್ಠಿಲಿಹನು ಸದಾ ನಿರ್ವಿಕಲ್ಪವಿಹನು
ಬಂದ ರಕ್ಷಿಸಲಿಕೆಯೆಂದನು    ೯೨

ಕಟ್ಟಿಸಿದ ಮಠವ ಮುನ್ನೂರು ಡೊಂದಿರಗಣುದ್ದ
ಕೊಟ್ಟಿಗೆಗೆ ಹಂಚನೀಗಳೂ
ಮುಟ್ಟಿ ಹೊದ್ದಿಸಿಯೆ ಯೋಗ ಮಂಟಪವ ಒಳಗೆ ಮಾಡಿ
ಇಟ್ಟ ಗುರುವ ಸಂಭ್ರಮದಲೀ          ೯೩

ತುಂಬ ಡೇರೆ ಹೊಯ್ಸಿದನು ಮಠದ ಸಮೀಪದಲ್ಲಿಯೆ
ಇಂಬು ಮಾಡ್ದ ತಾನೆ ಅಲ್ಲಿಯು
ತುಂಬಿದವು ಕುದುರೆ ಆನೆ ವಾವು ಜಂಗಾಳ ಹಚ್ಚಿ
ಇಂಬು ಇಲ್ಲದಾಯ್ತು ಸುತ್ತಲೂ      ೯೪

ಆಧ್ಯಾತ್ಮವ ಪಾಡಲಿಕ್ಕೆ ತಾಳಮೃದಂಗಗಳ ಸಹಿತ
ಬುದ್ಧಿವಂತರನ್ನೆ ಇಟ್ಟನು
ಶುದ್ದಾಗಿಹೆ ರಾತ್ರಿ ಮೂರು ಝಾವವಾಗಿ ಸಂಗೀತರ
ಶಿದ್ಧ ಮಾಡ್ದ ಪಾಡಲಿಕ್ಕೆಯು         ೯೫

ಉದಯದಲ್ಲಿ ನಾಮ ಸೇವೆ ತಾನು ಈಗ ಮಾಡಿಕೊಂಡು
ಸದಾ ಬಾಹ ನಿತ್ಯ ತಪ್ಪದೆ
ಸುಧೆಯ ರೂಪ ಅನುಭವವ ವಿಧವಿಧವಾಗಿ ಕೇಳುವನು
ಸದಮಲ ಬ್ರಹ್ಮವೀಹನು    ೯೬

ವೆಂಕಟಾಜಿಯಂಬವನು ಪ್ರಧಾನಿಯು ಆತಗೆಯು
ಕೊಂಕುಯಿಲ್ಲದಾ ಭಕ್ತನು
ಅಂಕೆ ಮಾಡ್ದನಾತನಲ್ಲಿ ನಿತ್ಯ ಕಾಲ ಭಿಕ್ಷಕೆಯು
ತಾಂ ಕರೆದುಕೊಂಡು ಹೋಹನು        ೯೭

ಪಾಲಕಿಯಲಿಂದವೈದು ಭೀಕ್ಷುವಾಗೊತನಕಲಿರ್ದು
ಕಾಲ ನಡೆಯಲಿಂದ ತಾನೆಯು
ಮೂಲೋಕ ಕರ್ತನನ್ನು ತಂದು ಮಠದೊಳಿಟ್ಟು ಆ
ಮ್ಯಾಲೆ ಭೋಜನವ ಮಾಡ್ವನು       ೯೮

ಕೇವಲಾದ ಜಂತ್ರದಲ್ಲಿ ಆವುಗೆಯನೆ ಮಾಡಿಸಿದಾ
ದೇವತಾಮ್ರತೊಜ್ರ ಮುತ್ತು ಹರಳಿಲೀ
ಓವಿ ಕುಂದನಿಟ್ಟು ತಾವು ಮೆಟ್ಟೊದೆಂದು ಮುಂದೆಯಿಟ್ಟು
ಸೇವೆಗಿಟ್ಟನೀಗ ನಾಲ್ವರಾ   ೯೯

ನಾನ ಮ್ಯಾಳ ನಾನ ಪಾತ್ರ ಪೈಲವಾನ ಡೊಂಬರುಗಳ
ಏನು ಹೇಳ್ವೆ ಮಾಸಾಳರ
ಖೂನವಾದ ಹಬ್ಬ ಸೇರು ಬೊಗರಿಕಾರರು ಮಠಕೆ
ತಾವು ಎದುರಾಗಿ ಆಡ್ವರು  

ನಿತ್ಯ ಸಲಾಮಾಗುತಿರಲು ಮಠಕೆ ಈಗ ತಾನಲ್ಲಿ
ಮತ್ತೆ ವಂದಿನದಿ ಕೇಳ್ವನು
ಸತ್ಕರ್ಮ ವಿವರವೆಂತು ನಾನು ಸಂಸಾರಿಯು ಗುರುವೆ
ಬಿತ್ತಬೇಕು ಬೋಧೆಯೆಂದನು           ೧೦೧

ಸಂಸಾರದೊಳಗೆಯಿದ್ದು ಸಂಸರ್ಹತ್ತದಂತೆ ಪರಮ
ಹಂಸನೇ ಆಹ ವಿವರವ
ಶಿಂಶುಮಾರವನೆ ಹೊಂದೊ ವಿವರನೆ ಅರುಹು ಪರಮ
ಹಂಸನೆಂದು ಪಾದಕೆರಗಿದ    ೧೦೨

ಕೇಳು ಮಗನೆ ಸತ್ಕರ್ಮ ವಿವರವನ್ನು ನಾನೀಗ
ಹೇಳುವೆನು ನೀಡಿ ಕೊಟ್ಟೊಲು
ಕಾಳವಿದ್ಯ ಸಂಸಾರವಿದನು ಬ್ರಹ್ಮವನ್ನೆ ಮಾಡೆ
ಲೋಲ ಸತ್ಕರ್ಮವೆನಿಪುದು೧೦೩

ನೀಲಸೊನ್ನೆ ಮಧ್ಯವೀಹ ಸ್ವರ್ಣ ಕಿಡಿಯೆ ಪ್ರಾಪಂಚ
ಲೋಲ ಸತಿಸುತದಿ ಸ್ವರೂಪವ
ತಾಳಿಹುದು ಎಂದು ಸರ್ವ ಬ್ರಹ್ಮಮಾಡಿ ವ್ಯವಹರಿಸೆ
ಲೋಲ ಸತ್ಕರ್ಮವೆನಿಪುದು೧೦೪

ಸ್ನಾನವನ್ನು ಶೌಚವನ್ನು ಬ್ರಹ್ಮ ಯಜ್ಞಗಳ ಸಂಧ್ಯಾನ
ವನು ತರ್ಪಣೆಂಬವ
ತಾನೆ ಬ್ರಹ್ಮವಾಗಿ ಬ್ರಹ್ಮರ್ಪಣೆಂದು ಮಾಡುತಿಹುದೆ
ತಾನೆ ಸತ್ಕರ್ಮವೆನಿಪುದು     ೧೦೫

ಎಲ್ಲ ಆದವನು ಈಗ ಸತಿಸುತರು ಆಗಿಯಿಹರು
ಇಲ್ಲ ಅವನ ಬಿಟ್ಟು ಹೊರತೆಯೂ
ನಲ್ಲೆಯರಿಗೆ ಸುತರಿಗೆಯು ಬ್ರಹ್ಮವನ್ನೆ ಮಾಡಲದು
ಒಳ್ಳೆ ಸತ್ಕರ್ಮವೆನಿಪುದು    ೧೦೬

ವೃತವ ಮಾಡಿ ಶ್ರಾದ್ಧ ಮಾಡಿ ಸಂತರ್ಪಣೆಗಳನು ಮಾಡಿ
ಕ್ರತುವ ಮಾಡಿ ವಾಜಿಪೇಯವ
ಮತಿಯಲಿಂದ ಬ್ರಹ್ಮಾರ್ಪಣೆಂದು ಮಾಡುತಿಹ ಕರ್ಮ
ಅತಿಶಯದ ಸತ್ಕರ್ಮವೆನಿಪುದು        ೧೦೭

ದ್ರವ್ಯದಾನ ವಿದ್ಯದಾನ ಗೋದಾನ ಗೃಹದಾನ
ಈವ ಅನ್ನದಾನ ವಸ್ತ್ರವು
ಭೂಮಿದಾನ ಕನ್ಯಾದಾನ ಬ್ರಹ್ಮಾರ್ಪಣೆಂದು ಮಾಡೆ
ಓವಿ ಸತ್ಕರ್ಮವೆನಿಪುದು     ೧೦೮

ದೇವತಾರ್ಚನೆಯ ಮಂತ್ರ ನ್ಯಾಸ ಸ್ತೋತ್ರಯಣಿಕೆ ಜಪವು
ಪಾವನಾದ ಪುನಶ್ಚರಣೆಯು
ಈವರೆಲ್ಲ ಬ್ರಹ್ಮವೆಂದು ಬ್ರಹ್ಮವಾಗಿ ಮಾಡಲದು
ತಾವು ಸತ್ಕರ್ಮವೆನಿಪುದು    ೧೦೯

ಅವನ ಕೈಯಂತ ತೊಳೆದು ಅವನ ಕಾಲಂತ ತೊಳೆದು
ಅವನ ಬಾಯಂತ ತೊಳೆದುಯೂ
ಅವಗೆ ಉಣ್ಣೆಂದು ಉಣೆಸೆ ಅವನೆಯಾಗಿ ಇರಲಿಕೆಯು
ಆವುದದು ಸತ್ಕರ್ಮವೆನಿಪುದು          ೧೧೦

ಶಿಶುವು ಸಾಯೆ ಕಳ್ಳನೊಯ್ಯೆ ಮನೆಯು ಸುಡೆ ದವಸ ಕೊಳಿಯೆ
ಪಶುವು ಹೋಗೆ ಸಾಲ ಕೊಡದಿರೆ
ಶಶಿಯಧರನು ಆಗಿ ಬ್ರಹ್ಮಾರ್ಪಣೆಯುಯನ್ನಲಿಕ್ಕೆ
ಅಸಮ ಸತ್ಕರ್ಮವೆನಿಪದು  ೧೧೧

ಹಲ್ಲಿನೊಳಗೆ ನಾಲಗಿರ್ದು ಹಲ್ಲಕೈಯ ಕೆಲಸ ಕೊಟ್ಟು
ಎಲ್ಲ ರುಚಿಯು ತಾನು ಕೊಂಡೊಲು
ಎಲ್ಲ ಸಂಸಾರದಿ ತಾನು ಇದ್ದು ಇಲ್ಲದಿರಲು ಅದು
ಉಳ್ಳ ಸತ್ಕರ್ಮವೆನಿಪುದು   ೧೧೨

ಗಜುಗು ಬೂದಿಯೊಳಗೆ ಹೊರಳೆ ಗಜುಗು ನಿರ್ಮಳಿದ್ದಂತೆ
ಗಿಜಗರೀವ ಸಂಸಾರದೀ
ರಜನಿ ಕಳೆದು ಆತ್ಮನಾಗಿ ಸಾಕ್ಷಿಯಾಗಿ ವರ್ತಿಸಲಿಕೆ
ರುಜವು ಸತ್ಕರ್ಮವೆನಿಪುದು೧೧೩

ಜಾರಿಯ ಚಿತ್ತದಂತೆ ಕಳ್ಳ ನಿದ್ರೆ ಮಾಡಿದಂತೆ
ನಾರಿಪುತ್ರ ನೆಂಟರೊಳಗೆಯು
ಸೇರಿ ಸಂಸಾರವ ಮಾಡಿ ಸಾಕ್ಷಿಯಾಗಿ ತಾನುಯಿಹದೆ
ಚಾರು ಸತ್ಕರ್ಮವೆನಿಪುದು   ೧೧೪

ಹುಟ್ಟು ಬಲ್ಲದೇನೋ ರುಚಿಯು ಶಾಖಗಳಲಿ ಬಳಸ ಮಾತ್ರ
ಹುಟ್ಟಿನಂತೆ ರಾಜಯೋಗಿಯೂ
ಎಷ್ಟು ಪ್ರಪಂಚದೊಳು ಇದ್ದರೇನು ಬ್ರಹ್ಮವಾಗಿ
ದಿಟ್ಟ ಸತ್ಕರ್ಮವೆನಿಪುದು   ೧೧೫

ತುಪ್ಪಸೇರು ಎರಡನೀಗ ನಾಲಿಗೆಯು ಉಣತಿಹುದು
ಇಪ್ಪಣಿಲ್ಲ ಹೆಡಸು ಆಪರೀ
ಒಪ್ಪಿ ಸಂಸಾರದಿ ಯೋಗಿ ಇದ್ದಡೇನು ಬ್ರಹ್ಮವಾಗಿ
ಅಪ್ಪ ಸತ್ಕರ್ಮವೆನಿಪುದು   ೧೧೬

ಸ್ಫಟಿಕದೊಳು ಬಣ್ಣ ಹೊಳಿಯೆ ಸ್ಫಟಿಕಕೇನು ಹತ್ತಿಯಿಹದೆ
ಸಠೆಯು ಸಂಸಾರದಿ ಯೋಗಿಯೂ
ಘಟಿತರದಿ ಕೂಡಿಯಿರಲು ಆತ್ಮನಿಹ ತಾನುಯಿದು
ದಿಟವು ಸತ್ಕರ್ಮವೆನಿಪುದು  ೧೧೭

ಕನ್ನಡಿಯೊಳು ಮೋರೆಯಿಹುದು ಮೋರೆ ಕನ್ನಡಿಯೊಳಿಹುದೆ
ಇನ್ನಾ ಪರಿಯು ಪ್ರಪಂಚದೀ
ಹೊನ್ನು ಮಣ್ಣಿಲಿದ್ದಡೇನು ಹೊರೆಗೆಯಿಹ ಯೋಗಿಯುದೂ
ಚೆನ್ನ ಸತ್ಕರ್ಮವೆನಿಪುದು    ೧೧೮

ತಾವರೆಯ ಪರ್ನಕೆಯು ಉದಕ ಹತ್ತದಿದ್ದಂತೆ
ಈವ ಜಲದಿ ರವಿಯು ಇದ್ದೊಲು
ಆವ ವಿಷಯಂಗಳೋಯಿದ್ದಡೇನು ಬ್ರಹ್ಮವಿಹನು
ದೇವ ಸತ್ಕರ್ಮವೆನಿಪುದು    ೧೧೯

ವಾಯು ಗಂಧವನ್ನು ಕೂಡೆ ವಾಯುಗಾಯಿತೇ ಸಂಗ
ನ್ಯಾಯ ಮಾಡೆ ಆ ಪರಿಯೊಲು
ಮಾಯ ಸಂಸಾರದೊಳು ಯೋಗಿ ಇದ್ದಡೇನು ಹೊರಗೆಯಿದು
ಶ್ರೇಯ ಸತ್ಕರ್ಮವೆನಿಪುದು  ೧೨೦

ಪುಷ್ಪದೊಳು ಪರಿಮಳಿದ್ದು ಪುಷ್ಪಕಂಟದಾ ಪರಿಯು
ಒಪ್ಪಿ ಸಂಸಾರದಿ ಮುಳುಗಿಹ
ಅಪ್ಪ ಯೋಗಿಶಪ್ಪ ಕಪ್ಪುವದೆ ಭ್ರಾಂತಿಯಿದು ಚೆಲುವಾ
ಗಿಪ್ಪ ಸತ್ಕರ್ಮವೆನಿಪುದು    ೧೨೧

ಲೋಲ ಆತ್ಮತನುವಿಲಿದ್ದು ತನುವಿಗೆಯು ಅಂಟಿದಲೆ
ಮೇಳಾಗಿ ತನುವಿನೊಳಿದ್ದೊಲು
ಖೂಳ ಸಂಸಾರದಿ ಯೋಗಿ ಮುಟ್ಟಿ ಮುಟ್ಟದಾವೊಲಿರೇ
ಹೇಳೆ  ಸತ್ಕರ್ಮವೆನಿಪುದು   ೧೨೨

ಬಯಲು ಕೊಡದೊಳಿರುತಿಹದು ಬಯಲಿಗೇನು ಕೊಡದ ಸಂಗ
ಸ್ವಯವು ತಾನೆ ಆದ ಯೋಗಿಯೂ
ಭಯವು ಏನು ಸಂಸಾರದಿದ್ದಡೇನು ಅಂಟದಿಹ
ಸ್ವಯವು ಸತ್ಕರ್ಮವೆನಿಪುದು           ೧೨೩

ವೇಷಧಾರಿಯೆಂಬವನು ವೇಷದಂತೆ ಓಡಿ ಆಡೆ
ವೇಷವೇನು ಹತ್ತಿತವನಿಗೆ
ಮೋಸ ಸಂಸಾರವನೀಗ ನಾಶರಹಿತನಾಗಿ ಮಾಡ
ಲೀಸು ಸತ್ಕರ್ಮವೆನಿಪುದು   ೧೨೪

ಸೂಳಿಗೇರಿಯಲಿ ಗರತಿ ಆಲಯವ ಕಟ್ಟಲೇನು
ಸೂಳೆತನವು ಬಹದೆ ಆಕಿಗೆ
ಕೋಳು ಹೋಗಿ ಸಂಸಾರದಿ ಇದ್ದಡೇಯು ಬ್ರಹ್ಮವಿಹನು
ಹೇಳೆ ಸತ್ಕರ್ಮವೆನಿಪುದು    ೧೨೫

ಏನು ಮಾಡೆ ಬ್ರಹ್ಮವಾಗಿ ಮಾಡೊದೆಲ್ಲ ಬ್ರಹ್ಮವಾಗಿ
ತಾನೆ ತನ್ನ ವಿನಹವಿಲದೇ
ಭಾನುವಂತೆ ಬೆಳಗುತಲಿ ನಿರ್ಲೇಪವಿರುತಿಹದೆ
ತಾನೆ ಸತ್ಕರ್ಮವೆನಿಪುದು     ೧೨೬

ತಾನಾದ ನೀಲ ಸೊನ್ನೆ ಮಧ್ಯದಲ್ಲಿ ಗುರುತನಿಟ್ಟು
ಏನ ಮಾಡ್ಡಡೇನು ಯೋಗಿಯೂ
ಏನು ಹೊಂದದವಗೆ ತನು ಭ್ರಾಂತಿಯು ಮನದ ಭ್ರಾಂತಿ
ನೀನು ಕೇಳ್ದಿಯಾಯಂದ ಗುರುವರಾ  ೧೨೭

ಅಪ್ಪ ಕೇಳು ಸಂಸಾರವ ಈ ಪ್ರಕಾರದಲ್ಲಿ ಮಾಡೆ
ತಪ್ಪದು ಜೀವಮುಕ್ತಿಯಾ
ಮುಪ್ಪು ಇಲ್ಲ ನಿನಗೆ ನೀನೆ ಬ್ರಹ್ಮವಿದ್ಧಿ ಈ ಮಾತು
ತಪ್ಪದು ಸುಖಿಯಿರೆಂದನು  ೧೨೮

ಎನ್ನಭಿಷ್ಟವಾಯ್ತು ಗುರುವೆ ಮುಕ್ತನಾದೆ ಈ ಪರಿಯಲಿ
ಇನ್ನು ಬೋಧಿಸಿದವರ ಕಾಣೆನು
ಎನ್ನುತಲಿ ಪಾದಕೆರಗೆ ಹನುಮಂತರಾಯನ ಶಿರ
ವನ್ನೆ ಎತ್ತಿದನು ಗುರುವರಾ೧೨೯

ಹೋಗುವೆನು ಕಾಶಿಗೆಯು ಮಠದೊಳೀ ಪಾದುಕಿಟ್ಟು
ಈಗ ಪೂಜಿಸುವದು ನಿತ್ಯದೀ
ಭೋಗವೇನು ಆಹದಲ್ಲ ಆತ್ಮಗೊಪ್ಪಿಸಿಯೆ ನೀ
ನೀಗಲಿರು ಸುಖಿಯಂದನೂ  ೧೩೦

ಶೀತರಾಮನೆಂಬವನ ಸೇವೆಗೆಯು ಜತಿಯ ಮಾಡಿ
ಆತನಾ ಕೈಲೆ ಸಾಸಿರ
ಜಾತರುಪಾಯವಿತು ಹಸಿ ಪಾತ್ರೆ ಜತಿಯ ಮಾಡಿ
ಆತಗೆಯು ಬುದ್ಧಿಗೊಟ್ಟನು           ೧೩೧

ಸ್ವಾಮಿಗಳ ಕಾಶಿಗೆಯು ಕರೆದುವೈದು ತಿರುಗಿ ತರಲು
ನಾ ಮತ್ತೆ ಈವೆ ನಿನಗೆಯೂ
ಕಾಮಿಶಿಯೆ ಬೇಡ್ಡುದಾನು ಎಂದು ನೂರು ವರಹದಾ
ಶಾಮಶಕಲಾತಿತ್ತ ಗುರವಿಗೇ೧೩೨

ಹುಲಿಯ ಚರ್ಮ ಗುರವಿಗಿತ್ತು ಪಾಲಕಿಯನೇರಿಸಿಯೆ
ಕಲಿತು ಚಾಂದ ಪರಿಯಂತರಾ
ಕೊಳಲು ತಪ್ಪಟೆಯು ಭೇರಿ ಕರ್ನಿಯಲೆ ತಾನು ಬಂದ
ಬಲು ಫೌಜಿಲಿಂದ ಸೇವಿಲೀ  ೧೩೩

ಚಾಂದಕರಸು ಆತ ಯಂಭತ್ತು ನಾಲ್ಕು ಲಕ್ಷ ವರಹ
ಒಂದು ರಾಜ್ಯ ಅದಕೆ ಈಹದು
ತಂದುಯಿಳಿಸಿದನು ಅರಮನಿಯೊಳು ಸದ್ಗುರುವ
ನಂದು ಸೇವೆ ಬಹಳ ಮಾಡ್ಡನು        ೧೩೪

ಮರು ದಿವಸ ಗುರುವರನ ತೆರಳಿಸಿಯೆ ಕೊಂಡು ಹೋಗಿ
ಎರಡು ಗಾವುದವು ಕಳುಹಿದಾ
ತಿರುಗಿದಪ್ಪಣೆಯಕೊಂಡು ಚಾಂದಪಟ್ಟಣವ ಸೇರ್ದ
ಸ್ಮರಣೆ ಮಾಡುತೆಡೆಬಿಡದಲೇ          ೧೩೫

ನಡೆದನಾಗ ಗುರುರಾಯ ನಾಗಪಟ್ಟಣವ ದಾಂಟಿ
ಶಡಕಿಲಿಹ ರಾಮಕ್ಷೇತ್ರಕೆ
ತೊಡರಿತಲಿ ಪರಿಷಿಗೊಂಡ ಹೋಗೆ ಗ್ರಾಮಗ್ರಾಮದವರು
ಕಡುಸೇವೆ ಮಾಡ್ಡರಾತಗೆ    ೧೩೬

ಶೀತರಾಮನೆಂಬ ಶಿಷ್ಯಜಟಾಧಾರಿಗಳ ಸಂಗ
ಕಾತಬಿದ್ದ ಗುರುವ ಬಿಟ್ಟೆಯಾ
ಮಾತನಾಡಿಸನು ಗುರುವ ಆರು ಮುಂದೆ ಇಟ್ಟುದಾನು
ತಾ ತೆಗೆದುಕೊಂಡು ಹೋಗ್ವನು        ೧೩೭

ಕಡು ಭಕುತರೀಗ ಮುಂದೆ ಇಟ್ಟುದೆಲ್ಲ ಅವರಿಗೊಯ್ದು
ಗುಡುಗುಡಿಯು ಭಂಗಿ ಗಾಂಜಿಗೇ
ಒಡಲಿಗೆಯು ಕಣಕತುಪ್ಪ ಸಕ್ಕರೆಯು ತಿಂದು ಗುರು
ಕಡಿಗೆ ನೋಡದಿರುತಲೀಹನು           ೧೩೮

ರಾತ್ರಿಕಾಲ ಮಂಜುಸುರಿಯೆ ಕಟ್ಟಿಗೆಯ ಕಾವಡಿಗಳ
ಮತ್ತೆ ಎರಡು ಮೂರು ಕೊಂಡೆಯೂ
ಹೊತ್ತುನಿಕ್ಕಿ ಬೆಳತನಕ ಉರಿಯ ಕಾಸಿಕೊಳುತಿಹರು
ಇತ್ತ ನೋಡರು ಗುರುವಿನಾ ಕಡೆ        ೧೩೯

ನಿತ್ಯ ಎರಡು ಮೂರು ವರಹ ಖರ್ಚು ಮಾಡ್ವನವರಿಗೆಯು
ಮಿಥ್ಯ ಹಾಳುಹರಟೆ ಬಡಿವರು
ಹಸ್ತ ಗುರುಯೆಂಬ ಮಾತು ಎಳ್ಳೆನಿತು ಅವನಿಗಿಲ್ಲ
ವಸ್ತಿವಸ್ತಿಯಿಂತಾದವು        ೧೪೦

ಸಂಗಡಲೆ ಬಾರದವರ ಸಂಗಡಿರಲು ಪರಿಷೆಯವರು
ಮಂಗಯೇನು ಬುದ್ಧಿ ಗುರುಗಳ
ಸಂಗತಿಯ ಬಿಟ್ಟು ದುಸ್ಸಂಗದಲ್ಲಿಯಿರುವೆ ನಿನಗೆ
ಇಂಗಿತಹುದು ನರಕೆವೆಂದರು            ೧೪೧

ಗುರುವ ಬಿಟ್ಟು ಅವರ ಸಂಗತೀಲಿ ಮುಂದಾಕ್ಯಾಕೆ ಹೋಗೈ
ಮರಳನೇ ಎಂದು ಎನ್ನಲು
ಅರಿಯಿರೇನ ಬಲ್ಲರೀಗ ಪರವಶದಿ ಆತ ಬಾಹ
ಥರವೆ ನನಗೆ ಸಂಗತೆಂದನು   ೧೪೨

ಒಲಿದು ಆಡುತಲಿ ಒಂದೊಂದು ಹೆಜ್ಜೆಯಿಕಲಿಕೆ
ಬಳಿಕ ನಡೆದು ಎನಗೆ ಬ್ಯಾನಿಯು
ತಳಿಯಿತು ಅದು ನಿಮಿತ್ಯ ಮುಂದೆ ಹೋಗುತಿಹನು ನಾನು
ತಿಳಿಯದು ನಿಮಗೆಯಂದನು೧೪೩

ಮುಂದಕೆಯು ಗುರುವ ಬಿಟ್ಟೆ ಹಿಂದೆ ನಿಲ್ವ ಅವರ ಕೂಡ
ಹಿಂದಕೆಯು ನಿಲ್ವರೆ ಎನೆ
ಇಂದರಿಯಿರಿ ಗಾಳಿಪಟದೊಲಂದು ಪರವಶದಿ ಹೋಹ
ಬಂದಿಹುದು ಮರಣವೆಂದನು           ೧೪೪

ಹಸಿವಿಗೆಯು ಕೊಡು ಎಲವೊ ನೀರು ಕುಡಿಯಲೇ ನನ್ನ
ಬಿಸಿಲು ಮಾರ್ಗ ನಡಿವರೂಯನೇ
ಹಸಿವು ಉಂಟೆ ಅವರಿಗೆಯು ನಮಗೆ ನಿಮಗೆ ಹಸುತೃಷೆಯು
ಹುಸಿಯು ನೀರಡಿಕೆಯೆಂದನು           ೧೪೫

ಎಂದರಾಗ ಮಾತು ಕೇಳಿ ನೀಚನಿವನು ಇವರಿಗೆಯು
ಇಂದು ಎಲ್ಲಿ ದೊರೆತನೆನುತ
ಮಂದಿಗಳು ಕೆರೆವಿನಟ್ಟಿಲಿಂದ ಬಡಿವುತಿರ
ಲಂದು ಅವನು ಮಾತ ಕೇಳನು          ೧೪೬

ಬಿಸಿಲ ದಾಹ ನಡುವೆ ಕಷ್ಟ ಹಸಿವಿಲಿಂದ ಕೊಟ್ಟ ನೀರ
ನೊಸೆದು ಕುಡಿಯೆ ದೇಹಕಂಟಿಯೇ
ಸಸಿನೆ ತಗುಲಿದವು ಜ್ವರವು ಜ್ವರದಿ ನಡೆದನೇಳು ದಿವಸ
ಅಸಮಯೋಗಿ ಆಹಾರಿಲ್ಲದೇ          ೧೪೭

ಬಚ್ಚಯ್ಯಯಂಬೊ ಗ್ರಾಮ ಕೆರಿಯ ಮ್ಯಾಲೆ ಮಲಗಿದನು
ನಿಚ್ಚಸಮಾಧಿಯಲಿಂದಲೀ
ನುಚ್ಚುಕಾನುಶ ಕಾಲಾತಿ ದ್ರವ್ಯ ಕೊಂಡು ಜಟಾಧಾರ
ರಿಚ್ಛೆ ಮಾಡಿ ಚೆರವ ಹೇಳ್ದನು         ೧೪೮

ಪರಿಷೆ ಮುಂದಕೆಯು ಹೋಯ್ತು ಅರಿಯದಾದರಾತನನ್ನು
ಇರಲು ಮೂರು ದಿನಕೆ ಮತ್ತೆಯು
ನೆರೆಯಿತು ಪರಿಷೆ ಮತ್ತೆಬಂದು ಕಂಡರೆಲ್ಲರಾಗ
ಬರಿಯ ಮೈಯಲಿಹ ಮಹಾತ್ಮನಾ    ೧೪೯

ಮಲಗಿ ಇರ್ದ ಇಹಪರವನೆರಡು ಮರೆತು ಸಮಾಧಿಯಲಿ
ನೆಲನ ಹಾಸಿಕೆಯಲಿಂದಲೀ
ತಳಿದು ಇಂತುಯಿರಲು ಎಚ್ಚರಿಸಿ ಹಾಲನೀಗ ತಂದು
ಬಳಿಕ ಕುಡಿಸಿದರು ಆಗಳು    ೧೫೦