ರೂಪಕ ತಾಳ ರಾಗ ತನ್ನಿಚ್ಛೆ

ಕೇಳಿಜನ ಸರ್ವವೆಲ್ಲ ಚಿದಾನಂದ ಅವಧೂತ
ಲೋಲ ರಾಜಯೋಗಿ ಚರಿತವಾ        ಪಲ್ಲವಿ

ಜನರು ಕೇಳಿ ಚಿದಾನಂದ ಅವಧೂತ ಚರಿತದಲ್ಲಿ
ಚಿನುಮಯ ಅವಧೂತನ
ಸನುಮತಾಗಿ ಹೇಳ್ವೆನೆಂದು ಸಾಧುವಾದ ಸರ್ವರಾ
ತನಯ ಅಯ್ಯಪ್ಪ ನುಡಿದನು          

ಮುಕ್ತಿಯನ್ನೆ ಬಯಸುವರಿಗೆ ಭಕ್ತಿಭಾವವುಳ್ಳರಿಗೆ
ತೆಕ್ತ ಪ್ರಪಂಚ ಮಾಡ್ದಗೆ
ಶುಕ್ತಿರಜತ ನ್ಯಾಯದಂತೆ ಬ್ರಹ್ಮ ಸತ್ಯವೆಂದರಿಗೆ
ಯುಕ್ತಿಯಿಂದ ಹೇಳ್ವದಿದನು          

ಸತಿಗೆ ಆಜ್ಞೆಮಾಡ್ವನಿಗೆ ಸದ್ಗತಿಯ ಶಾರದನಿಗೆ
ಹಿತವ ಹೇಳೆ ಕತಿಯ ಮಾಡ್ವಗೆ
ಸತತ ದುಸ್ಸಂಗನಿಗೆ ಸರ್ವರನ್ನೆ ಬೊಗಳುತಿಹಗೆ
ಚ್ಯುತಗೆ ಹೇಳಬಾರದಿದನನು           

ಘೋಡಮುಖಿಯ ಮನುಜನನ್ನು ನೋಡಿ ಕಾಶಿ ಪಟ್ಣದೂಚ
ಆಡಲೈದು ಹರುದಾರಿಯು
ಪಾಡಾಗಿ ಗಾವುದಗಲವನ್ನೆ ಸುತ್ತಿ ಮೂರು ಬ್ಯಾರೆ
ಮಾಡ್ದನದಕೆ ಸಾಷ್ಟಾಂಗವ

ಕಾಶಿಮಹಿಮೆ ಏನು ಎನಲು ಆವ ಜೀವಿಯಾದೊಡೆಯು
ನಾಶ ಕಾಲ ಕಿವಿಯು ಬಲಗಿವಿ
ಈಶನಾನುಗ್ರಹಕೆ ಮೇಲು ಮಾಡಿ ಬೀಳುತಿಹವು
ವಾಸವಾಗರವರು ಮರ್ತ್ಯದೀ          

ತಾರಕೋಪದೇಶ ಶಿವನು ಕಿವಿಯೊಳಗೆ ಮಾಡಲಿಕ್ಕೆ
ಸೇರುವರು ಕೈಲಾಸವ
ತೀರಿ ಆಯುಷ್ಯವನು ಸಾಯೆ ಶಿವನ ಸಂಗಡ್ಹೋಗುವರು
ಬಾರೆ ಮತ್ತೆ ಬರುತಲಿಹರು 

ಈ ಪರಿಯು ಎಂದೆಂದಿಗೆಯು ಶಿವನ ಬಳಿಯಲಿಹರು
ಹೋಪರಲ್ಲ ಜನ್ಮಕವರೆಯೂ
ಪಾಪಹರರು ಸಿದ್ಧವೆಂದು ರಾಶಿಹೊನ್ನ ಕಟ್ಟಿಸುಖಾ
ಓಪರಾಗಿ ಸುಖದಲೀಹರು  

ಸರ್ವಕಾಲ ಕಾಶಿಲಿದ್ದು ಹೊರಗೆ ಈಗ ಸತ್ತಡೆಯು
ಬರುವದೆಂತು ಮುಕ್ತಿ ಅವರಿಗೆ
ಮರಣ ಪ್ರಾಧಾನದಲ್ಲಿ ಆವ ಪಾಪ ಮಾಡ್ದಡೆಯು
ವರೆವ ವೇದವಾಕ್ಯ ಸಿದ್ಧವು

ಕಾಶಿ ಸಭೆಗೆ ಅರಸು ಆದ ಸರ್ವೇಶ್ವರತೀರ್ಥ
ರಾಶಿಘನದ ಸನ್ಯಾಸಿಯೂ
ವಾಸವೀಹನಲ್ಲಿ ಸನ್ಯಾಸಿಸಭೆ ಗೃಹಸ್ಥಸಭೆಗೆ
ತಾನು ಶ್ರೇಷ್ಟ ವಿದ್ವತ್ವದಿ  

ಪಾದಕೆ ನಮಿಸಿ ಅವರಿಗಂದ ಅವಧೂತ ಆಶ್ರಮೀಯರಿ
ಇದುವೆ ಎನಗೆ ಸುಖವನೀವುದು
ಮದುವೆ ಮಾಡುತಿದ್ದರೆನಗೆ ಕೊಟ್ಟಡಿಯೊಳಗೆ ಹಾಕಿ
ಅದನು ಗೆದ್ದೆತಂಗಿಲಿಂದಲೀ೧೦

ನೋಡಿದರು ಅವರು ಈತನನುಭವವ ತಿಳಿದು ಯೋಗ್ಯ
ಮಾಡ್ವದಕ್ಕೆ ಎಂದು ನಾಲ್ಕನೆ
ರೂಢವಾದ ಸನ್ಯಾಸ ಕೊಟ್ಟು ದಂಡಕಮಂಡಲ
ಮಾಡಿಸಿ ಸ್ನಾನ ಗಂಗೆಯೊಳಗೆಯು     ೧೧

ಇಷ್ಟ ಚಿದಾನಂದ ಅವಧೂತ ರಾಜಯೋಗಿಯಂದು
ಸ್ಪಷ್ಟ ಹೆಸರವೊಪ್ಪೊದೆನುತಲಿ
ಇಟ್ಟುಕೊಂಡು ತಿಂಗಳೆರಡು ಹೋಗು ಗುರಸ್ಥಳಕೆ ಎಂದು
ಕೊಟ್ಟ ಅಪ್ಪಣೆಯ ಆತನು೧೨

ಅರಸು ತೀರ್ಥರಾಗವು ಸುಬ್ಬನೆಂಬವನಿಗೆ ಹೇಳಿದರು ಹೋಗು
ತಿರಲು ತನ್ನ ರಾಜ್ಯಕೆ
ಪರಮ ರಾಜಯೋಗಿ ಚಿದಾನಂದ ಅವಧೂತರಿವರ
ಪರಾಮರಿಕೆ ನಿನ್ನದೆಂದರು   ೧೩

ಅತ್ತಣಿತ್ತಣವರುಯಿತ್ತರು ಶತಮಾನ ಶುಭ್ರ
ಹೊತ್ತು ಹಸಿಬೆಯೊಳಗೆ ಪಾತ್ರೆಯು
ಹೊತ್ತುಕೋಯಂದು ಹೊರಿಸಿ ಸಾಗಿಸಲಿಕ್ಕೆ ಯೋಗಿರಾಜ
ಮತ್ತೆ ಬಂದ ಪ್ರಯಾಗಕೆ      ೧೪

ವರಪ್ರಯಾಗದಲ್ಲಿ ಮೂರುದಿವಸವಿರ್ದು ಹೊರಟನಾಗ
ಪರಮಯಮುನತಟದಲಿರುತಿಹ
ಶಿರಯುವುಳ್ಳ ಜೋಹರಪುರಕೆ ನದಿಯ ಧಡದಿ ಮರವಿಯಿರಲು
ಗುರುವರನು ಬಂದನಲ್ಲಿಗೆ  ೧೫

ಸುಬ್ಬನೆಂಬನಿಗೆ ಆರು ಪಕ್ಕ ಸೇರು ಆಹಾರವು
ಒಬ್ಬಗೊಪ್ಪತ್ತಿನೂಟವು
ಇಬ್ಬರಿಗೆ ಮತ್ತಿಷ್ಟು ಹಾಕಿ ಅಡಿಗೆ ಮಾಡಿವುಣ್ಣಲು
ಗುಬ್ಬಿಗೊಂದು ಅಗಳು ಉಳಿಯದು   ೧೬

ಅಂದು ಸುಬ್ಬನೀಗಳೆಂದ ಹೋಳಿಗೆಯನು ತಿಂದೆನೆಂದು
ಇಂದು ದಿನವು ಬಹಳ ಆಯ್ತೆನೇ
ಎಂದು ಗುರುವು ಮಾಡುಯಮಗೊಂದು ಬಾಹದುಯೆನಲು
ತಂದನೀಗ ಸೋಪಸ್ಕಾರವ   ೧೭

ಮೂರು ಪಕ್ಕ ಸೇರು ಕಣಕ ಮೂರಪಕ್ಕ ಸೇರು ಅಕ್ಕಿ
ಮೂರು ಪಕ್ಕ ಸೇರು ಬ್ಯಾಳಿಯು
ಮೂರು ಪಕ್ಕ ಸೇರು ತುಪ್ಪ ಮೂರು ಪಕ್ಕ ಸೇರು ಹಾಲು
ಮೂರು ಪಕ್ಕ ಸೇರು ಮೊಸರನು        ೧೮

ಹುಳಿಯು ಹಣ್ಣು ಐದು ಸೇರು ಮೆಣಸು ತಾನೆರಡು ಸೇರು
ತಿಳಿಯೆ ಬದನೆ ಮೆಂತೆಪಲ್ಲೆಯೂ
ಬಳಿಕ ತಕ್ಕಡೆರಡು ಕೊಷ್ಮಾಂಡ ಅಡಿಗೆ ಮಾಡಲು
ಲಲನೆ ಒಬ್ಬ ವಿಧವೆ ಬಂದಳು           ೧೯

ಗುರುವೆ ಅನ್ನ ದೊರಕದಲೆ ಇರುವೆನು ಉಪಾಸವನು
ಎರಡು ದಿನವು ಆಯ್ತು ಎಂದಳು
ಇರೂವುಂಬೆ ಅಂತೆ ಅವನು ಉಂಡ ಮ್ಯಾಲೆವುಂಬೆಯೆನಲು
ತರುಳೆ ಸಂತೋಷವಾದಳು   ೨೦

ಅಡಿಗೆ ಮಾಡಿ ಆಸನ್ಹಾಕಿ ಎಡಿಯ ಬಡಿಸಿ ತಕ್ಕಷ್ಟು
ಕುಡರು ಬನ್ನಿ ಬಡಿಸಿಹೆನೆನೆ
ನುಡಿದನಾಕಿಗೆಯು ಅವನು ಉಂಡ ಹಿಂದೆ ಉಣ್ಣುಯೆನುತ
ಒಡಂಬಡಿಸಿ ಕುಳಿತ ಗುರವರಾ           ೨೧

ಉಂಡು ಕೈಯ ತೊಳೆದುಕೊಳ್ಳೆ ಎಡಿಯ ಮಾಡಿಕೊಂಡನೆಲ್ಲ
ಸಂಡಿಗ್ಹುಳಿ ಮೊದಲು ಆಗಿಯೆ
ಮುಂಡೆಗಂಡ ನೀರ ಹೊಯ್ದ ಒಂದರೊಳು ಉಳಿಸದಲೆ
ಭಾಂಡೆಗಳ ಬರಿದ ಮಾಡ್ದನು           ೨೨

ತುಪ್ಪವೆಲ್ಲ ಬಡಿಸಕೊಂಡ ಹಾಲನೀಗ ಇಟ್ಟುಕೊಂಡ
ಒಪ್ಪಿತಾಗಿ ಮೊಸರನೆಲ್ಲವ
ದೊಪ್ಪೆಯೊಳಗೆ ತುಂಬಿಕೊಂಡ ಚಿತ್ತಾಯ ತಿರಿಬಿ ಬಾಯ
ಚಪ್ಪರಿಸಿ ಮೊದಲು ಮಾಡ್ದನು        ೨೩

ಹೆಣ್ಣು ಮಗಳಿಗಾಸೆ ಕೊಟ್ಟೆ ಏನು ಉಳಿದದೇ ಎನಲು
ಮುನ್ನ ಎನಗೆ ಹೇಳದ್ಹೋದಿರಿ
ಇನ್ನು ಎಲ್ಲದೆಯ ಎಲ್ಲ ಬಡಿಸಿಕೊಂಡು ಉಂಡೆನೀಗ
ಎನ್ನುತುಬ್ಬಸದಲೆದ್ದನು   ೨೪

ಒಡಿಯನೀಗ ಬೆರಗು ಆಗಿ ಚರವ ಹೇಳಮ್ಮ ನೀನು
ಪಡದುಯಿಲ್ಲ ಅನ್ನವೆನುತಲಿ
ಕಡುಭಕುತಲಿಂದ ಒಬ್ಬರಿಟ್ಟಿದ್ದರುಪಾಯವ
ಹಿಡಿಯು ಎಂದು ಕೈಗೆಯಿತ್ತನು         ೨೫

ಎಲ್ಲ ಉಂಡೆಯೇನು ಉಳಿಯದಂತೆ ಪಾತ್ರೆ ತೊಳೆದನು
ಅಲ್ಲೆ ಮಲಗಿದರು ನದಿತಟಾ
ಮೆಲ್ಲಗ್ಹೊರಟಾರು ಮುಂದೆ ಯಮುನ ನದಿಯನೇ ಬಿಟ್ಟು
ಗೊಲ್ಲರ್ಹಟ್ಟಿಯಲ್ಲಿ ಇಳಿದರು       ೨೬

ಧಡಿಯ ಕಡಲಿಯನು ಕೊಂಡ ಧಡಿಯ ಬತ್ತಾಸು ಮ್ಯಾಲೆ
ಧಡೆಯ ಮಿಠಾಯಿ ಲೇವಡೆ
ಧಡಿಯನಂತು ನಾಲ್ಕು ಈಗ ಉಡಿಯಲೀಗ ಕಟ್ಟಿಕೊಂಡು
ನಡೆವುತಲಿ ಮುಕ್ಕುವನವ    ೨೭

ಅಡಿಗಡಿಗೆ ಮುಕ್ಕುತಲಿ ಒಡನೊಡನೆ ಅಪಾನವ
ಸಡಲಿಸುತ ಹಿಂದಕಾಗಿಯು
ಬಿಡದೆ ಒಂದು ದಿವಸ ಕೂಡಿ ಬಂದುದಿಲ್ಲ ಅವನ ಕೂಡ
ದೃಢದ ಸೇವೆ ಇಂತು ಆದುದು          ೨೮

ಅವನ ತಳ್ಳಿಯನ್ನೆ ಬಿಟ್ಟು ಗುರುರಾಯ ತಾನೀಗ
ಶಿವನೆಯಾಗಿ ತನ್ನ ಮರತನು
ಖವಖವಿಸೆ ಆತ್ಮ ತೇಜದೊಳಗೆ ಮುಳುಗಿ ಚಿದಾನಂದ
ಅವಧೂತ ನಿಂತುಯಿರ್ದನು೨೯

ಗುರುವರನು ಮೈಯ ಮರಿಯೆ ಚರವ ಹೇಳ್ದನವನು ಈಗ
ಇರುವದೆಲ್ಲ ತಾನು ಸವುರಿಸಿ
ಬರಿಯ ಮೈಯಲಿಂದ ಅವಧೂತ ರಾಜ ಆವಲೋಕ
ಪರವುಯಿಲ್ಲದಲೆಯಿರ್ದನು            ೩೦

ಕುಳಿತನೆಂಬ ಎಚ್ಚರಿಲ್ಲ ನಿಂತೆನೆಂಬ ಎಚ್ಚರಿಲ್ಲ
ತಿಳಿಯೆ ನಡೆವೆನೆಂಬ ಎಚ್ಚರ
ಸುಳಹುಯಿಲ್ಲ ಕಾಡುವೂರು ಹಾದಿಯಂಬ ಎಚ್ಚರವು
ಕೊಳದೆ ಸಮಾಧಿಯಲಿರ್ದನು           ೩೧

ಮನವು ಅಡಗಿ ಚಿತ್ತವಡಗಿ ಉಶ್ವಾಸ ನಿಶ್ವಾನ ಅಡಗಿ
ದಿನವು ರಾತ್ರಿಯಂಬುದಡಗಿಯೆ
ತನುವುಯೆಂಬುದೆಚ್ಚರಡಗಿ ಒಳಗೆ ಹೊರಗೆಯೆಂಬುದಡಗಿ
ಚಿನುಮಯನು ಹೋಗುತಿರ್ದನು       ೩೨

ಸುದ್ದಿ ತನ್ನದನೆ ಅರಿಯ ಸುದ್ದಿ ಇತರದೇನು ಅರಿಯ
ಇದ್ದರೆಯು ಮೆಲುವ ಇಲ್ದಿರೆ
ಇದ್ದರಿರುವ ನಾಲ್ಕು ಎಂಟುಪಾಸ ನಿದ್ರೆ ನೀರಡಿಕೆ
ಸಿದ್ಧವಾಗಿ ಕಳೆದು ಈಹನು  ೩೩

ಎದ್ದರೆಯು ಎದ್ದಿಹನು ದಿನವು ಮೂರಾರನಲ್ಲಿ
ಬಿದ್ದರೆಯು ಬಿದ್ದು ಈಹನು
ಎದ್ದು ನಿಂತರಲ್ಲಿ ಇರುವ ಎರಡು ದಿವಸವಾದರೆಯು
ಶುದ್ಧ ಅವಧೂತನೀಗಲು   ೩೪

ಊರುಯೆಂಬ ಹಾದಿ ಅರಿಯ ಅಡವಿ ಮಾರ್ಗವೆಂಬುದರಿಯ
ಆರು ಮಾತಾಡಿಪದು ಅರಿಯನು
ಧೀರ ಚಿದಾನಂದ ಅವಧೂತ ರಾಜಯೋಗಿ ಇಂತು
ತೋರುತಿಹ ದೇಶದೇಶಕೆ     ೩೫

ಅಡವಿಯಲ್ಲಿ ಮರೆದು ಹೋಗೆ ಅಡವಿ ತೊಪ್ಪನಲೆ ತಿಂಬ
ನಡುಗುತ ಛಳಿಮಳಿಗೆ ತಾನೆಯು
ಹುಡಿಯು ಅನ್ನ ಏನು ಅನ್ನ ಮಲಗಿಕೊಂಬಾನು ಲೋಕ
ತೊಡರ ಕಳೆದನಾಗ ಯೋಗಿಯೂ      ೩೬

ದೃಕ್ಕು ದೃಸ್ಯವೆಲ್ಲ ನಿಂತು ಕೂಗುತಿಹನಾದ ನಿಂತು
ಉಕ್ಕೊ ಕಳೆಗಳೇನು ತೋರದೇ
ದೃಕ್ಕಿಗೆಯು ದೃಕ್ಕಾಗಿ ನಿರ್ವಿಕಲ್ಪ ಸಮಾಧಿಯು
ಮುಕ್ಕುರಿಕಿ ಇರ್ದ ಮರದೆಯೂ         ೩೭

ನೆಲನ ಹಾಸಿಕೆಯು ಆಯ್ತು ಹಾಸಿಕಿಲ್ಲದಲೆ ಹೊದಿಯೆ
ಬಲು ನಭವೆ ಹೊದಿಕೆ ಆಯಿತು
ಕಲ್ಲು ಮುಳ್ಳುಗಳು ಮೈಗೆ ಒತ್ತೊ ಎಚ್ಚರಿಲ್ಲದ
ಖಂಡ ಥಳಥಳದೊಳಿರುತಲಿಹನು      ೩೮

ತೋಳು ತೆಲಿಗಿಂಬಿಲಿಂದ ವಾಯು ಬೀಸಣಿಕೆಯಿಂದ ಬ
ಹಳ ಯೋಗನಿದ್ರೆಯಿಂದಲಿ
ಮೂಲೋಕ ಕರ್ತನೀಗ ಹಾಯಿಯಾಗಿ ನಿಜಸುಖದ
ಆಲಯದಲಿರುತಲಿರ್ದನು    ೩೯

ಶೂನ್ಯವಾದ ಸಿಂಹಾಸನವಾಳುತಿರ್ದ ರಾಜಯೋಗಿ
ಇನ್ನು ಹೇಳ್ವೆ ಆಳೊ ವಿವರವ
ತನ್ನಗೆದುರಿಯಿಲ್ಲದೇಕ ಛತ್ರದಾನಂದ ರಾಜ್ಯ
ಮಾನ್ಯ ಆಳುತಿರ್ದ ಮಲಗಿಯೆ          ೪೦

ಕಣ್ಣಿಗೆಯು ಕಾಣಿಸದ ದಿವ್ಯ ಪಟ್ಟಣದಲ್ಲಿ
ಉನ್ಮನೆಂಬೊ ರಾಜಗೃಹದಲಿ
ಭಿನ್ನಭಿನ್ನ ಚಿತ್ಕಳೆಯ ಮೌಕ್ತಿಕಾಭರಣದಲ್ಲಿ
ಚಿನ್ಮಾತ್ರ ರೂಪವಿಹನು      ೪೧

ಶಮದ ಮಾವು ಸಾವಧಾನ ಶಾಂತರೂಳಿಗದಲ್ಲಿ
ವಿಮಲ ಮುಕ್ತಾಂಗ ಸಂಗದಿ
ಬ್ರಹ್ಮ ಪೀಠವಾದ ಬಹಳ ಬ್ರಹ್ಮಜ್ಞಾನ ಭಾಗ್ಯದಲ್ಲಿ
ದ್ಯುಮಣಿಯೊಲು ಇರುತಲಿಹನು      ೪೨

ಅರವಿಗರುವು ಅಂದಣಿಂದ ಹಾಯಾದ ಛತ್ರಿಯಿಂದ
ಮೊರೆವ ನಾದನಗಾರಿಯಿಂದಲಿ
ವಿರತಿ ಚತುರ್ಬಲಗಳಿಂದ ವಿವೇಕದ ಮಂತ್ರಿಯಿಂದ
ಅರಸಿಗರಸೆಯಿರುತಲಿಹನು  ೪೩

ನಾನ ಪ್ರಕೃತಿಯರ ಗೆಲಿದು ಈಹ ಮಹಾಮದದಲಿಂದ
ತನಗೆ ತಾನಾದ ಪರಿಯಲಿ
ನೀನೆ ಬ್ರಹ್ಮವೆಂದು ಬೋಧಿಸುವ ಕಾರಭಾರಿಯಿಂದ
ಚಿನುಮಯನೆ ತಾನೆ ಇರುತಿಹ           ೪೪

ರಾಜತೇಜಮಾನದಿಂದ ಸೋಹಮ್‌ ಮಂತ್ರ ಶಿಖಾಲಿಂದ
ಸೋಜಿಗದ ಕೀರ್ತಿಯಿಂದಲಿ
ರಾಜಿಸುವ ಬ್ರಹ್ಮಾದ್ಯರಿಂದ ಭಜಿಸಿಕೊಳುವ ಆನಂದ
ರಾಜ್ಯವನ್ನೆ ಆಳುತಿರ್ದನು   ೪೫

ಆನಂದ ರಾಜ್ಯವನು ತೂರ್ಯತೀತ ಸದರನೇರಿ
ಸ್ವಾನಂದನಾಗಿಯಿರುತಲೀ
ಏನೇನು ಅರುಹು ಕುರುಹುಯಿಲ್ಲದಲೆ ಚಿದಾನಂದ
ತಾನಾದ ಅವಧೂತನಿರ್ದನು೪೬

ಎಚ್ಚರೊಮ್ಮೆ ಆಗಿಯಿರುವ ಎಚ್ಚರೊಮ್ಮೆಯು ಮರೆವ
ಸ್ವಚ್ಛ ಬ್ರಹ್ಮನಿರುವನಲ್ಲಿಯು
ಮುಚ್ಚಿಹನು ಕಣ್ಣು ಒಮ್ಮೆ ಕಣ್ಣು ತೆರದಿಹನು ಒಮ್ಮೆ
ಸಚ್ಚಿದಾನಂದಮೂರ್ತಿಯು೪೭

ವಾಸನೆಯು ಏನಿಲ್ಲ ಬಾಹ್ಯದಲ್ಲಿ ಗುರುವರನ
ವಾಸನೆಯು ನೋಡ್ವೆನೆಂಬದು
ಈಸು ಅಲ್ಲದಲೆ ನಿರ್ವಸನಿಹ ಆವಕಾಲ
ದೇಶಿಕೋತ್ತುಮನು ಸಹಜದೀ          ೪೮

ಮರೆದು ಯೋಗಿ ಮಲಗಿರಲು ಬಗಳಾಂಬ ತಾನುಯದಿಯ
ಸೆರಗಿಲಿಂದ ಬೀಸುತಿಹಳು
ಅರಮರೇನು ದೇಹ ಪೋಷಣಕೆ ಎನ್ನೆ ಕೂಡಿಹುದು
ಇರುಳು ಹಗಲು ಕಾದು ಈಹಳು        ೪೯

ಎಲ್ಲಿ ಸಿಕ್ಕದಿರೆ ಅನ್ನತಾನೆ ತಂದು ಮುಂದಿಡುವಳು
ಇಲ್ಲದಲ್ಲಿ ಪ್ರಜೆಯ ನೆರವೊಳು
ಎಲ್ಲೆಲ್ಲಿ ಹಿಂಡುಹಿಂಡು ಜನವು ಮುತ್ತಿ ಇರುತಿಹದು
ಎಲ್ಲ ಪರಾಮರಿಕೆ ಅಂಬಗೆ  ೫೦

ಮಂಗಳಾದ ಸ್ನಾನದಲ್ಲಿ ಇಹನು ಈಗ ತಾನೊಮ್ಮೆ
ಅಂಗಹುಡಿಯು ಮುಸುಕಿ ಕೆಲದಿನಾ
ಇಂಗಿತಾದಲಿರುವನೊಮ್ಮೆ ಅಂಗಕೇಯ ವಸ್ತ್ರವುಟ್ಟು
ಸಂಗಹರನುಯಿಹನು ಕೆಲದಿನಾ         ೫೧

ಉತ್ತಮದ ಅನ್ನಭಕ್ಷ ಹಳಸಿನಾರುವನ್ನವಂದೆ
ಹೊತ್ತು ಕೆನೆಯು ಆದರೊಂದೆಯು
ಮತ್ತೆ ಮಂಚಲೇಪು ತಿಪ್ಪೆ ಸರ್ವವು ಸಮನೆಯಾಗಿ
ನಿತ್ಯಾತ್ಮ ಈಪರಿರ್ದನು      ೫೨

ಬಾಲನಂತೆ ಇರುತಲಿಹ ಉನ್ಮತ್ತನಂತೆ ಇರುವ
ಹೇಳೆ ಪಿಶಾಚಂತೆಯಿಹನು
ಮ್ಯಾಲೆ ಮೂಕ ಅಂಧ ಬಧಿರನಂತೆ ಅರವಸ್ಥೆಲಿಹ
ಲೀಲೆಯಿಂದ ಈಹ ಗುರುವರ           ೫೩

ಈ ವಿಧದಿ ದೇಶ ತಿರುಗೆ ದನವ ಕಾಯ್ವ ಹುಡುಗರೀಗ
ತಾವು ಮುತ್ತಿ ಕೇಳ್ದರಾತನ
ಆವ ನೀನು ಕುಲವು ಏನು ಹೀಗ್ಯಾಕೆ ಇರುವೆ ನಿಮ್ಮ
ಭಾವನೆಯ ನುಡಿಯುಯಂದರು        ೫೪

ನುಡಿಯದಿರಲು ಕೋಲಿಲಿಂದ ಬಡಿದು ಮ್ಯಾಲೆ ಮಣ್ಣ ಹೊಯ್ದು
ಒಡಲಿಗೆಯು ಸೆಗಣಿ ಹಚ್ಚಿಯೆ
ಕುಡಿಕೆಯಲಿ ಕಣ್ಣುವಳಗೆ ಹುಡಿಯ ಹೊಯ್ದು ಉಚ್ಚಿಯನು
ಬಿಡುತಲಿಹರು ದೇಹ ಮ್ಯಾಲೆಯು    ೫೫

ಪ್ರಪಂಚ ಕೇಡು ಎಂದು ಎಲ್ಲ ತೆಜಿಸಿದಾತಗೆಯು
ಈ ಪಾಪ ನೋಡು ಬಂದುದಾ
ಆ ಪಿನಾಕಿ ಆದರೇನು ಪ್ರಾರಬ್ದ ಬಿಡಲರಿದು
ಓಪನಾಗಿ ಸಾಕ್ಷಿಯಿರ್ದನು    ೫೬

ಪರರ ದುಃಖವನು ಈಗ ಪರರು ತಾವು ನೋಡ್ದ
ಅಂತೆ ಹೆರೆಯ ಬಿಟ್ಟಿ ಸರ್ಪ ಹೆರೆಯನು
ಹೆರಿಯ ಗಾಳಿಯಿಂದ ಪರಸ್ಪರವು ನೋಡ್ದ ಅಂತೆ
ಇರುವ ಯೋಗಿ ಸಾಕ್ಷಿ ದೇಹಕೆ           ೫೭

ಹೆಣವ ಬಿಟ್ಟು ಹೋಗಿ ಜೀವ ಗಗನದಿಂದ ತಿರುಗಿ ನೋಡೆ
ಹೆಣದ ಸುಖದುಃಖವಹದೇ
ಅನಿತು ಆದ ಪರಿಯು ಶರೀರ ದುಃಖ ಪ್ರಾರಬ್ಧವೆಂದು
ತನುಮನಕೆ ಸಾಕ್ಷಿಯಿದ್ದನು  ೫೮

ತಿಳಿದ ಪುಣ್ಯಾತ್ಮರುಗಳು ಕೆಲರು ಬಡಿದು ಬಾಲಕರ
ಜಲವ ಹೊಯ್ದು ಮಲವು ಸಗಣಿಯ
ತೊಳೆದು ಮಡಿಯ ನುಡಿಸಿ ಪೂಜಿಸಿದರು ದಿವ್ಯಪೀಠದಲ್ಲಿ
ಹಲವು ವೇದಮಂತ್ರವೋದುತಾ        ೫೯

ಚರಣತೀರ್ಥ ಮಾಡಿದರು ನಾರಾಯಣ ಪನ್ನದಿಂದ
ಪುರಷಸೂಕ್ತನಮಕಚಮಕದೀ
ಒರಸಿ ಅಭಿವಸ್ತ್ರದಿಂದ ಓಂಯೆಂಬ ಘಂಟೆಯಿಂದ
ಪರಮಭಕ್ತನಾನ ಜನಗಳು   ೬೦

ಒಡವಿಯನೆ ಇಟ್ಟು ಪುಷ್ಪವೇರಿಸಿಯೆ ಧೂಪಾರ್ತಿ
ವಡನೆ ಏಕಾರ್ತಿ ಮಾಡುತ
ಸಡಗರದಿ ನಾರಿಕೇಳ ಕ್ಷೀರ ನೈವೇದ್ಯವಿಟ್ಟು
ಬಡಿವುತಲಿ ನಾನಾ ವಾದ್ಯವ೬೧

ಮಾಡುವರು ನಾನಾ ಜಿನಸಿನ ಮಂಗಳಾರತಿಯನು
ಪಾಡುತಲಿ ಬಹಳ ಪದಗಳ
ಕೂಡಿ ಹೆಂಣುಗಂಡು ಪ್ರದಕ್ಷಣೆಯನನ್ನೆ ತಿರುಗಿ
ನೀಡುವರು ಸಾಷ್ಟಾಂಗವ   ೬೨

ತೀರ್ಥ ಕೊಂಡರಾಗ ಹಿರಿಕಿರಿಯರುಗಳು ಭಕ್ತಿಯಲಿ
ಪಾತ್ರಪವಾಡದಿಂದಲಿ
ಕರ್ತು ಸದ್ಗುರುವರನ ಸೇವೆ ಅತಿ ದುರ್ಲಭೆಂದು
ಸಾರ್ಥಕದಿವೆನುತಲಿರ್ದರು   ೬೩

ಎಡಿಯ ಬಡಿಸು ಮುಂದಯಿಟ್ಟು ಒಡಿಯ ಈಗ ಉಣ್ಣೆನೆನಲು
ಕಡುಸಮಾಧಿಯಿಂದಲಿರಲಿಕೆ
ಬಿಡದೆ ತತ್ತು ಮಾಡಿ ಬಾಯಿಳಿಕ್ಕಿ ನುಂಗೆನುತಿಹರು
ಕುಡಿಸುವರು ನೀರು ತಾವೆಯಾ         ೬೪

ಪಟ್ಟೆಮಂಚದಿ ಮಲಗಿಸಿಯೆ ಗಾಳಿಯನೆ ಬೀಸುತಲಿ
ಶಿಷ್ಟ ಅನುಭವದ ಕೀರ್ತನ
ದಟ್ಟವಾದ ತಾಳಮೃದಂಗದಿಂದ ಗುರುವ ಸೇವೆ
ಮುಟ್ಟಿ ಮಾಡುತಿಹರು ಯೋಗ್ಯರು  ೬೫

ಹರಿಯ ಪೂಜೆ ಮಾಡ್ದುದಾನು ಹರಿಯ ಕಷ್ಟ ಬಡಿಸಿದನು
ಹರಿಯುಯೆಲ್ಲಿ ಇಹನುಯೆಂಬುದ
ಪರವಶದಿ ದೃಷ್ಟಿಬ್ರಹ್ಮದಲ್ಲಿ ನಿಂತು ತಿರುಗದಲೆ
ಚರಿಸುತಿರ್ದ ಅವಧೂತನು   ೬೬

ಮೂಕನೆಂದೆನುವರು ಕೆಲರು ಜಡನುಬಧಿರ ಅಂಥ
ಕೆಲರು ಮರುಳನೀಗಯಂಬರು
ಕೆಲರು ಭಿಕ್ಷುಕನುಯಂದು ಕೆಲರು ಅಪಭ್ರಂಶಿಯೆಂದು
ಬಲು ಜನವು ನುಡಿವುತಿಹುದು          ೬೭

ಈತ ಬ್ರಾಹ್ಮಣನುಯೆಂದು ಈತ ಕ್ಷತ್ರಿಯನುಯೆಂದು
ಈತ ವೈಶ್ಯನಿಹನುಯನ್ನುತ
ಈತ ಪಾಂಚಾಳ ಶೂದ್ರನೆಂದು ಹೆಸರ ಇಡಲಾರದೆ
ಜಾತಿಲಾವನೋಯೆಂಬರು   ೬೮

ಧೂತ ಅವಧೂತದಲ್ಲಿ ಭಿಕ್ಷ ಅಜಾತ ಮಾಡಬೇಕು
ಖ್ಯಾತವಿದು ವೇದಾಂತದಿ
ಪೂತ ಬ್ರಹ್ಮ ಜಾತಿಯಲ್ಲಿ ದಶವೀಧ ಬ್ರಾಹ್ಮರುಂಟು
ಈತ ಮಾಡ್ವನೈಲ್ಲ ಜಾತಿಲೀ          ೬೯

ಆವ ಪರಿಯು ದಶವಿಧೆನಲು ಅವನು ಈಗ ಹೇಳುತೀನಿ
ಕೇವಲವು ಜ್ಞಾನಿಯಾದವ
ಆವ ಜಾತಿಲುಂಡರೇನು ಆತಗೇನು ದೋಷವಿಲ್ಲ
ಆವ ಜಾತಿಲುಣಲುವುತ್ತಮ೭೦

ಸರ್ವ ರೂಪು ಆದಾತಗೆ ಸರ್ವಕುಲವು ಆದಾತಗೆ
ಸರ್ವನಾಮ ಆದಾತಗೆಯು
ಸರ್ವ ಆಚಾರದಾತಗೆ ಎಲ್ಲಿ ಉಂಡರೇನು ಬ್ರಹ್ಮ
ಗಿರ್ವ ಜಾತಿ ದಶವಿಧೇಳ್ವನು೭೧

ಬ್ರಾಹ್ಮರೊಳು ಬ್ರಾಹ್ಮಣನು ಬ್ರಾಹ್ಮಣನು ಕ್ಷತ್ರಿಯನು
ಬ್ರಾಹ್ಮಣನು ವೈಶ್ಯನೆಂಬನು
ಬ್ರಾಹ್ಮಣನು ಶೂದ್ರಬ್ರಾಹ್ಮಣ ಬಿಡಲನೆಂದನಿಪ
ಬ್ರಾಹ್ಮಣ ಕುರಬನೆಂಬುವ   ೭೨

ಬ್ರಾಹ್ಮಣ ವ್ಯಾಧನೀಗ ಬ್ರಾಹ್ಮಣ ವೇಶಿಕಟುಕ
ಬ್ರಾಹ್ಮಣನು ಮತ್ತೆ ಅರಿಯಲು
ಬ್ರಾಹ್ಮಣನು ಚಾಂಡಾಲ ಇಂತು ದಶವಿಧವು ಆದ
ಬ್ರಾಹ್ಮಣರಲ್ಲಿ ಭಿಕ್ಷ ಮಾಡ್ವನು      ೭೩

ನೀಲಸೊನ್ನೆ ಮಧ್ಯವಿಹ ನಿಗಿನಿಗಿ ಮಿಂಚಿನಲ್ಲಿ
ಆಲಿನಟ್ಟು ಅದೇ ಆಗಿಯೇ
ಮ್ಯಾಲೆ ಮನಕೆ ಬುದ್ಧಿಗೆಯು ಸಾಕ್ಷಿಯಾಗಿಯಿಹನಾತ
ಹೇಳೆ ಬ್ರಾಹ್ಮರೊಳು ಬ್ರಾಹ್ಮಣ       ೭೪

ಶಾಸ್ತ್ರವೋದ್ವ ವೇದವೋದ್ವ ದೇವಬ್ರಾಹ್ಮರಲ್ಲಿ ಭಕ್ತಿ
ಶಸ್ತ್ರವಿದ್ಯಗಳನೆ ಕಲಿವನು
ಅಸ್ತ್ರವಿಡಿದು ರಣವ ಜಯಿಪ ಹೇಳೆ ಇವನು ಬ್ರಾಹ್ಮಣ
ಕ್ಷತ್ರಿಯನು ಎಂದು ಎನಿಪನು೭೫